ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ ಕರ್ಫ್ಯೂ ತೆಗೆದವರೆ. ಆದ್ರೂವೆ ಎಲ್ಲೆಡೆ ಸದ್ದಡಗೈತೆ. ಯಾರ ಮನೆಬಾಗಿಲುಗಳಿಗೂ ತೆರೆದುಕೊಂಬೋ ತಾಕತ್ತೇ ಸತ್ತೋಗ್ಯದೆ. ಕಿಟಕಿದಾಗೆ ನೋಡ್ಲಿಕ್ಕೂ ಭಯ ಅಂದಮ್ಯಾಗೆ ಬೀದಿಗಿಳಿಯೋರು ಯಾರು? ಖಾರ ಕದಡಿದ ಮನಸ್ಸುಗಳು ಇರಿಯೋಕೆಂದೇ ಸಜ್ಜಾದೋವು ಉರಿ ಇಕ್ಕಕ್ಕೆಂದೇ ಹೊಂಟೋವು ಸಿಕ್ಕಿದೋರ್ದ ಜಾನ್ ನಿಕಾಲ್ ಮಾಡಿ ತಮ್ದೂ ಜಾನ್ ಕಳ್ಕೋಬೋಕಂತ್ಲೆ ಹುಟ್ಟಿದ ಅಬ್ಬೇಪಾರಿಗಳಷ್ಟೇ ಬೀದಿಗಿಳಿಯೋ ಹರ್ಕತ್ ಇದ್ದಿತು. ಬೆಳೆಗ್ಗೆ ಹೋದ ಸಲೀಮನೂ ಮನೆಗೆ ಬಂದಿಲ್ಲ ಎದೆ ಒಂದೇ ಸಮ್ನೆ ಹೊಡ್ಕೋತದೆ ಏನ್ ಗದ್ದಲ ಮಾಡ್ಕೊಂಡವನೋ ಆಲ್ಲಾಹುವೇ ಬಲ್ಲ. ನಾನು ಫಾತೀಮಾ ಏಟು ತಡೆದ್ರೂ ಕೇಳದಂಗೆ ಕೈ ನಾಗೆ ಹತಾರ ಹಿಡ್ಕೊಂಡೇ ಹೊಂಟ. ಎಲ್ಲಿದ್ದರೂ ಶಕೀಲನ್ನ ಹುಡುಕಿ ಕರ್ಕಂಬರ್ತೀವ್ನಿ ಅಂತ ಅಂಗಾರಾಗೇ ಹೊಂಟೋದ. ಕಾಲೇಜಿಗೆ ಹೋದ ಶಕೀಲ ಈವತ್ತು ಸಂಜೆಯಾದ್ರೂ ಮನೆ ಸೇರಿಲ್ಲ ಕರ್ಫ್ಯೂ ಜಾರಿಯಾಗೋ ಮುಂಚಿತ್ವಾಗಿ ಮನೆ ಸೇರೋಕೇನಾಗೈತೆ ಈ ಚೋಕ್ರಿಗೆ ಧಾಡಿ. ನಿನ್ನೆ ರಾತ್ರಿ ಎಲ್ಲಾ ಎಲ್ಲಿ ಕಳದ್ಳೋ? ಕಳ್ದೆಹೋದ್ಳೋ? ಕೆಲವು ಮಂದಿನಾ ಪೋಲಿಸ್ರೇ ಗೂಂಡಾಗಳಿಂದ ಪಾರು ಮಾಡಿ ಟೇಸನ್ನಾಗೆ ಇಟ್ಕಂಡವರೆ ಅಂಬೋ ಖಬರ್ರೂ ಐತೆ. ಹತ್ತಿಪ್ಪತ್ತು ಮಂದಿ ನಮ್ಮೋರ್ನ ಇರಿದು ಸಾಯಿಸೋರಂತೆ. ಆಸ್ಪತ್ರೆದಾಗೂ ಗಾಯವಾದೋರ್ನ ಹಾಕವರಂತೆ ಮಸೀದಿ ಕೆಡವಿ ಬೆಂಕಿ ಇಟ್ಟವರಂತೆ. ಬೆಳಗಿನ ವೇಪರ್ನಾಗೆ ಸಾರಾಸಗಟು ಬೂರಿ ಖಬರಗುಳೇ. ಕೈಕಾಲ್ನಾಗೆ ಉಸಿರೇ ಇಲ್ಲದಂಗೆ ಆಗೈತೆ.
ಹಿಂಗೆಲ್ಲಾ ಯಾಕಾತು? ದೇಸಂಬೋ ದೇಸವೇ ಹತ್ಕೊಂಡು ಉರಿಯೋದ್ನ ಟಿ.ವಿ. ನಾಗೂ ತೋರಿಸ್ತಾ ಅವರೆ ನೋಡ್ಲಿಕ್ಕೆ ಅಂಜ್ಕಿ ಆಗ್ತದೆ. ಟಿ.ವಿ. ಆಫ್ ಮಾಡೋಕೂ ಮನ್ಸು ಬಿಲ್ಕುಲ್ ಒಪ್ಪಂಗಿಲ್ಲ ಎದೆ ಒಳಗೆಲ್ಲಾ ಕಾದ ಹೆಂಚಿನ ಮ್ಯಾಗೆ ಬಿದ್ದ ನೀರಿನಂಗೆ ತಣಪುಣ. ನಿನ್ನೆ ರಾತ್ರಿ ಅಡಿಗೆ ಮಾಡಿದರೂ ಯಾರ ಗಂಟಲಾಗೂ ಅನ್ನ ಇಳಿಲಿಲ್ಲ ಇಡೀ ರಾತ್ ಬಾಹರ್ ಅಗ್ದಿ ಗದ್ದಲ. ಯಾರೋ ಆಲ್ಲಾಹೋ ಆಕ್ಬರ್ ಅಂತ ದಡಬಡ ಓಡಿಹೋದ ಸದ್ದು. ಎಲ್ಲಿಂದಲೋ ಹರಹರ ಮಾದೇಶ ಅಂಬೋ ಅವಾಜ್ ಕೇಳೋವಾಗ ಹೊಟ್ಟೆನಾಗೆ ಕೈ ಆಡಿಸಿ ಬೋಟಿ ತೆಗಿತಾ ಅವರೇನೋ ಅಂಬೋವಷ್ಟು ಸಂಕಟ. ಫೋಲಿಸ್ ಬೂಟುಗಳು ಎದೆಯಾಗೆ ಹೆಜ್ಜೆಇಟ್ಟಂಗೆ ಆಗ್ತಾ ಐತೆ. ಪೋಲಿಸರ ವ್ಯಾನುಗಳು. “ವಂಯ್ ವಂಯ್” ಶಬ್ಬ ಕಿವಿನಾಗೆ ಗರಮ್ ತೇಲ್ ಸುರ್ದಂಗ್ ಆಗೇತೆ. ಮನೆ ಮುಂದೆಲ್ಲಾ ಒಂದೇತಾವ ಕವ್ಕೊಂಡು ಕುಂತೀವಿ. ಟಿ.ವಿ. ಅಂಬೋ ಪೆಟ್ಗೆ ಬಿಟ್ಟರೆ ಎಲ್ಲರ ನಾಲಿಗೇನೂ ಬಿದ್ದು ಹೋಗ್ಯದೆ. ಮುಖದಾಗೂ ಸಾವಿನ ಕಳೆ. ದಬ್ಬನೆ ಶಬ್ಬಕ್ಕೆ ಎದೆ ಝಲ್ ಅಂತದೆ. ಬೆಚ್ಚಿಬೀಳುವ ಮಕ್ಕಳು ತಬ್ಕೋತಾವೆ. ಯಾರೋ ಕಲ್ಲು ಬೀಸ್ತಾ ಆವರೆ. ಬಾಗಿಲು ಎಲ್ಲಿ ಮುರಿದು ಬೀಳುವುದೋ ಎಂಬ ದಿಗಿಲಾಗಿ ಕಣ್ಣು ಗುಡ್ಡೆಗಳು ಈಚೆ ಬಂದಗಾದ್ವು..
ಡೆಲ್ಲಿ ನೋಡಿದವರಿಲ್ಲ ಮಸೀದಿ ಕಂಡೋರಿಲ್ಲ ರಾಮನ್ನ ದೇವರು ಅಂತ ಹೇಳೋ ಮಂದಿ ಅತಂದು ಹೆಸರು ಹೇಳ್ತಾ ತಲವಾರ್ ಎತ್ತುತ್ತವರೆ! ನಮ್ಮೋರು ಅಲ್ಲಾಹು ಹೆಸರಿನಾಗೆ ಹತ್ಯಕ್ಕೆ ನಿಲ್ತವರೆ ಕಡೆಗೆ ಎಲ್ಲರದು ಜೀವನ ಖರಾಬ್ ಆಗೋಯ್ತಿದೆ. ಬದುಕಿರೋದು ಬದುಕೋಕಲ್ವಾ? ಸಾಯಸೋದು ಬದುಕೆನಾಗೆ ಸಂತೋಷ ಕೊಡ್ತದಾ? ಹಿಂಸೆ ಮಾಡಿ ಅಂತ ಖುರಾನ್ದಾಗೆ ಹೇಳೈತಾ? ನಮ್ಮೋರೆ ದೇಸ ಆಳಿದ ಕಾಲ ಒಂದಿತ್ತು ದರ್ಬಾರು ಮಾಡೋರೆ ತಪ್ಪೂ ಮಾಡೋರೆ ಯಾರೋ ಯಾವಾಗ್ಲೋ ಮಾಡಿದ ತಪ್ಪಿಗೆ ನಮಗ್ಯಾಕೆ ಸಿಕ್ಸೆ?
ಇಂಗ್ಲಿಷ್ ಮಂದಿ ದೇಶಾನೆಲ್ಲಾ ಆಕ್ರಮಣ್ ಮಾಡಿಕೊಂಡಿ ಹಿಂದುಗುಳ್ನು ನಮ್ಮನ್ನು ಗುಲಾಮರಂಗೆ ಕಂಡಾಗ ದೇಸಕ್ಕೆ ಆಜಾದಿ ತಂದ್ಕೊಡೋ ಹರಕಥ್ ಬಿದ್ದಾಗ ನಾವೂ ಹಿಂದುಗಳ ಜೊತೆ ಸೇರ್ಕೊಂಡು ಹೋರಾಟ ಮಾಡೀವಿ. ಇದು ನಮ್ಮ ದೇಸ ಅಂಬೋ ಮೊಹಬತ್ ಇಲ್ಲದಿದ್ದರೆ ನಾವ್ಯಾಕೆ ಇಂಗ್ಲೀಷರ ಸಾಮ್ನೆ ಲಡಾಯಿಗಿಳಿತಿದ್ವಿ? ಟಿಪ್ಪೂಸುಲ್ತಾನ ಕಡಿಮೆ ಕಿಮ್ಮತ್ತಿನ ಮನುಷ್ಯಾನಾ? ದೇಸಕ್ಕಾಗಿ ತನ್ನ ಮಕ್ಕಳನ್ನೇ ಒತ್ತೆ ಇಟ್ಟ ತನ್ನ ಪ್ರಾಣವೂ ಕೊಟ್ಟ ದೇಸ ಬಿಟ್ಟು ಅಂಗ್ರೇಜಿಗುಳ್ನ ಓಡ್ಸಿ ಅಂತ ಗಾಂಧೀಮಾತ್ಮ ಹುಕುಂ ಮಾಡಿದಾಗ ಅದು ಅಲ್ಲಾಂದೇ ಹುಕುಂ ಅನ್ಕೊಂಡು ನಮ್ಮೋರು ಚಳುವಳಿ ಮಾಡಿದರು. ಪೋಸ್ಟ್ ಆಫೀಸ್ನ ಸುಟ್ಟೆ ಅಂತ ನನ್ನ ಹಿಡ್ದು ಆಗ ಜೈಲಿನಾಗೆ ಹಾಕಿದ್ದರು ಇದ್ದು ಬಂದೆ. ಹಂಗಂತ ಸರ್ಕಾರ ಕೊಡೋ ಪೆನ್ಷನ್ ತೆಗೊಂಬೋವಷ್ಟು ಬುದ್ದಿ ನನಗೆಲ್ಲಿತ್ತು. ಬುದ್ದಿ ಬೆಳೆದ ಮ್ಯಾಗೂ ದೇಸಕ್ಕಾಗಿ ಲಡಾಯಿ ಮಾಡಿನ್ನೆಲ್ಲಾ ಕೂಲಿ ಯಾಕೆ ಅಂತ್ಲೆ ಸುಮ್‌ಗಾದೆ ಯಾರ ಮಾತಿಗೂ ಕಿವಿಗೊಡಲಿಲ್ಲ ಸೈಕಲ್ ಶಾಪ್ ಇಟ್ಕೊಂಡೆ. ಹೆಂಗೋ ಬದುಕು ನಡೀತು. ಪಾಕಿಸ್ತಾನಕ್ಕೆ ನಾವೂ ಹೋಗಬಹುದಿತ್ತು ಲೆಕಿನ್ ನಮ್ಗೆ ಈ ದೇಸ ಎಂದೂ ಪರಾಯಿ ಅನ್ನಿಸಲೇ ಇಲ್ಲ. ಇಲ್ಲೇ ಕಸುಬು ಕಂಡ್ಕೊಂಡು ಸ್ವಂತ ಮನೆ ಅನ್ಕೊಂಡ್ವು. ಈವತ್ತು ರಾಜಕೀಯದ ಮಂದಿ ನಮ್ಮ ಮಧ್ಯದಾಗೆ ಕಿಚ್ಚು ಹೊತ್ಸಿ ಖುಷಿ ಪಡ್ತಾ ಅವರೆ. ಬಾಬರ್ ಮಂದಿರ ಕೆಡವ್ದ ಮಸೀದಿ ಕಟ್ಟಿದನಂತೆ ಇವರು ಮಸೀದಿ ಕಡೆವಿದರು… ಬಸ್, ಅಲ್ಲಿಗೇ ಮುಗಿದಿದ್ದರೆ ಪಸಂದ್ ಇತ್ತು ಮುಸಲ್ಮಾನ್ ಮಂದಿ ಸಮಾಧಿ ಮ್ಯಾಗೆ ಗುಡಿಕಟ್ಟಿದರೆ ಇಜ್ಜತ್‌ವಾಲ ರಾಮ್‌ಗೆ ಅಪಮಾನ ಮಾಡಿದಂಗಲ್ವ. ಯಾಕೀ ಮಾರ ಮಾರಿ? ಈ ಮಾತ್ನ ಯಾರಿಗೆ ಕೇಳಿದರೆ ಜವಾಬು ಕೊಟ್ಟಾರು? ಮುದಿ ವಯಸ್ಸಿನಾಗೆ ಏನೇನ್ ಈ ಕಣ್ಣಿನಾಗೆ ಕಾಣಬೇಕೋ ಅಂತ ಎದೆ ಬಡ್ಕಂತದೆ. ಹಿಂದು ಲೋಗ್ ಜೊತೆ ಆಣ್ಣತಮ್ಮಂದಿರಂಗೆ ಬದುಕೋದನ್ನ ನಾನು, ಮಾವಾ ಕಾಕ ಅಂತ ನಾವು ಕರೆದ್ರೆ ಆವರೂ ಭಯ್ಯಾ ಚಿಚ್ಯಾ, ಸಾಬು ಆಂತ ಮೊಹಬತ್ ತೋರಿಸೋ ಕಾಲ ಎಲ್ಲೋತು! ಒಂದೇ ಕೇರಿನಾಗೆ ಆಕ್ಕ ಪಕ್ಕದ್ದು, ಮನೆಯಾಗೆ ಇದ್ದೋರು ಗುಮಾನಿ ಮ್ಯಾಗೆ ನೋಡಂಗೆ ಆಗೋಗ್ಯದೆ.
ಕರ್ಫ್ಯೂ ಮತ್ತೆ ಜಾರಿ ಮಾಡೋ ಸಮಯ ಹತ್ತಿರ ಬಂದ್ರೂ ಶಕೀಲ ಬರ್ಲಿಲ್ಲ, ಸಲೀಮನೂ ಪತ್ತೆಯಿಲ್ಲ. ಆಜ್ ಕ್ಯಾ ಹೋ ರಹಾ ಹೈ ಭಗವಾನ್ ಅಳು ಒತ್ತರಿಸಿ ಬರ್ತದೆ. ಸೈಕಲ್ ಶಾಪ್ ಇಟ್ಕೊಂಡು ಬೇಪಾರ್ ಮಾಡ್ಕೊಂಡು ದಿಲ್ ಆಗಿದ್ದೆ ಆಗ ಊರ್ನಾಗೆ ನಂದೊಂದೇ ಸೈಕಲ್ ಶಾಪು. ಈಗ ಮಸ್ತ್ ಅದೆ. ಸಾಬು ಖಾನ ಹೋಗಯಾ? ಅಂತ ಬಾಜು ಮನೆ ಈರಣ್ಣ ಕೇಳಿದರೆ ‘ಆಯ್ತು ಆಣ್ಣ’ ಅನ್ನೋವಾಗ ಆದೆಂತದೋ ಭರೋಸಾ. ಈಗ ಈರಣ್ಣ ಮುಖ ಕೊಟ್ಟು ಮಾತ್ನೆ ಆಡಿಸ್ದಂಗೆ ಆಗೋತು. ಹಿಂದೆ ದಿನ್ಗಳು ಹಿಂಗಿರಲಿಲ್ಲ. ಮೆಹನತ್ ಮಾಡಿ ಹಿಮ್ಮತ್ತಿನಿಂದ ಬದುಕಿದೋನು. ನಂದು ಮಾತ್ಗೆ ಕಿಮ್ಮತ್ ಕೊಡೋರು, ಮೂರು ಗಂಡು ಹುಡುಗರೇ ಆದ್ವು. ಅಮೇಲೆ ಎಲ್ಡು ಹೆಣ್ಣು ಹುಡ್ಗೀರು ಆದ್ವು. ಅದೆಂಗೆ ಬೆಳ್ದು ದೊಡ್ಡೊವಾದ್ವೋ ಅಲ್ಲಾನೆ ಬಲ್ಲ ನನ್ನಂಗೆ ಹುಡುಗ್ರಿಗೆ ವಿದ್ಯೆ ಹತ್ತಲಿಲ್ಲ ಒಬ್ಬ ಆಟೊ ಓಡಿಸ್ತಾ ಆವ್ನೆ ಅವಂದು ಶಾದಿ ಮಾಡ್ದೆ ಇನ್ನೊಬ್ಬ ಸೈಕಲ್ ಶಾಪ್ ನೋಡ್ಕಂತವ್ನೆ. ಸಣ್ಣೋನೇ ಸಲೀಮ ವರ್ಕ್ ಶಾಪಿಗೆ ಹಾಕ್ದೆ ಒಂದು ಹುಡ್ಗಿದು ಶಾದೀನೂ ಮಾಡ್ದೆ ತಲಾಕೂ ಆತು. ಆಕೀಗ ಮನೆಯಾಗೆ ಅವಳೆ. ಅದ್ಕೆ ಶಕೀಲಂಗೆ ಚೆಂದಾಗಿ ಓದ್ಸಿ ನೋಕ್ರಿ ಕೊಡಿಸಿದ ಮ್ಯಾಲೆ ಶಾಧಿ ಮಾಡೋ ಇರಾದೆ ಐತಿ. ಮನೆನಾಗೆ ಯಾರೂ ಬೇಕಾರ್ ಕುಂತು ಕೂಳು ತಿನ್ನೋಂಗಿಲ್ಲ ಸಬ್ ದುಡಿತಾರೆ ಮನೆನಾಗೆ ಬೇಬಿ, ಬಡೇ ಬೇಟಿ ಜೀನತ್ ಸೇರ್ಕೊಂಡು ಬೀಡಿ ಕಟ್ತಾರೆ. ಬಿಲ್ಕುಲ್ ಖುಷಿ ಇತ್ತು ಮನೆನಾಗೆ. ಆದ್ರೆ ಈಗೇನಾತು? ನಿನ್ನೆ ನಮ್ದು ಸಲೀಮ ಓಡಿಸ್ತಿದ್ದ ಆಟೋನ ಹಿಡ್ದು ಸುಟ್ಟು ಹಾಕವರೆ. ಅವನೆಂಗೋ ಆ ಮಂದಿಯಿಂದ ಬಚಾವಾಗಿ ಮನೀಗ್ ಬಂದ ಆದರೆ ಆವನ್ಗೆ ರೋಸ ಬಂದೈತೆ. ಸಾಯೋದಾದ್ರೆ ಹತ್ತು ಮಂದಿನಾರ ಖತಲ್ ಮಾಡಿ ಸಾಯ್ತೀನಿ ಅಂದ. ಇವನೂ ರಾಕ್ಷಸ ಆದ್ನಲ್ಲ ಅಂತ ನನಗೀಗ ಬಾಳ ಪರೆಶಾನ್ ಆಗೈದೆ. ಸಲೀಮ ಎಲ್ಲೋದ? ತಕಲೀಫ್, ತಂದಿಟ್ಟು ತಮಾಷಾ ನೋಡ್ತಾ ಅವ್ನೆ ಭಗವಾನ್ ಆವಂದು ಮರ್ಜಿ ಏನಿದ್ದಿತು! ಮಕ್ಕಳು ಮರಿ ಹೆಂಗಸರು ಸಾಯ್ತಾ ಇದ್ದರೆ ಏನ್ ಮಾಡ್ತಾ ಅವ್ನೆ? ಈಶ್ವರು ಅಲ್ಲಾ ಯಾರ್ಗೂ ಹೃದಯನೆ ಇಲ್ಲ ಅನ್ನಿಸುತ್ತೆ. ಏನೇನೋ ಯೋಚ್ನೆ ಮಾಡಿ ಮಾಡಿ ಗಂಟಲು ಒಣಗಿ ತರಗೆಲೆ ಹಂಗೆ ಆಗೇತೆ ಮನೆಯಾಗೆ ನೀರು ಐತೆ ಅಂಬೋದೂ ಗ್ಯಾರಂಟಿ ಇಲ್ವೆ ಅಲ್ಲಾ… ಮೊನ್ನೆ ಮಸೀದಿನಾಗೆ ಹಿಂಸೆಗೆ ಹಿಂಸೆನೇ ಜವಾಬಲ್ಲ ಅಂತ ನಮ್ಮೋರ ಮುಂದೆ ಹಾತ್ ಜೋಡ್ಸಿ ಬೇಡ್ಕೊಂಡೆ, ಅವಾಗೇನೋ “ಆಯ್ತು ಕಾಕ” ಅಂತ ತಲಿ ಆಡಿಸ್ದೋರೆಲ್ಲಾ ತಲಿ ಒಡಿತಾ ಅವರೆ. ತೆಲಿನೂ ಕಳ್ಕೊಂತಾ ಆವರೆ. ಗೋಧ್ರಾ ರೈಲ್ವೆ ಬೋಗಿನ ಮುಸಲ್ಮಾನ್ ಮಂದಿ ಸುಟ್ಟರಂತೆ. ಆ ಸೈತಾನ್ಗುಳ್ಳ ಸುಟ್ಟು ಹಾಕ್ಲಿ. ಅದು ನ್ಯಾಯ. ಮುಸ್ಲಿಂದಾಗೆ ಭಯೋತ್ಪಾದಕರು ಅವರೆ. ಇಲ್ಲ ಆನ್ನಾಕೆ ಬರಂಗಿಲ್ಲ ಹಂಗಂತ ಮುಸಲ್ಮಾನ್ ಲೋಗ್ ಎಲ್ಲಾ ಭಯೋತ್ಪಾದಕರು ಆಗಿರಲ್ಲ ಅಂಬೋ ಸಚ್ಚಿ ಬಾತ್ ಯಾಕೆ ಮಂದಿಗೆ ಅರ್ಥವಾಗ್ತಾ ಇಲ್ಲ. ತಿನ್ನೋ ಕೂಳಿಗೆ ಪರದಾಡೋ ನಮ್ಗೆ ಬಾಂಬು ಗನ್ನು ಖರೀದಿ ಮಾಡೋ ತಾಕತ್ ಐತಾ? ಮಸೀದಿನಾಗೆ ಇಟ್ಕೊಂಡಿದಾರೆ ಅದ್ನ ಯಾರು ನೋಡವರೆ? ಇಂತ ತುಪಾನಿ ಮಾತುಗಳೆಲ್ಲಾ ಮನಸ್ಸಿಗೆ ಕಾಂಟೆ ಹಂಗೆ ಚುಚ್ಚಿ ಘಾಸಿ ಮಾಡ್ತಾ ಅವೆ. ಯಾರೆ ಅನುಮಾನದಾಗೆ ನೋಡ್ಲಿ ಏನೇ ಅಪಮಾನ ಮಾಡ್ಲಿ ನಮ್ದು ಹುಟ್ಟು ಸಾವು ಇದೇ ಮಿಟ್ಟಿನಾಗೆ ಅಂತ ಭಗವಾನ್ದು ಆಖೈರು ತೀರ್ಮಾನ ಎಂದೋ ಆಗೋಗ್ಯದೆ. ಪಾಕಿಸ್ತಾನಿ ಲೋಗ್ ತಮ್ಮ ದೋಸ್ತು ಅಂತ ಹೇಳ್ಕೊಂಬೋ ಪಕ್ಕದ ಮನೆಯೋರಂಗಿದ್ದ ಆಫ್‌ಘಾನಿಸ್ಥಾನದೋರ್ನ ಮುಗಿಸೋಕೆ ಅಮೇರಿಕಾದೋರ್ಗೆ ಕುಮ್ಮಕ್ಕು ಕೊಟ್ಟು ಮನಿಯಾಗೆ ಇಟ್ಕೊಂಡು ಲಡಾಯಿ ಮಾಡಿಸ್ತಾ ಅವರೆ. ಇಂಥೋರ್ಗೆ ಭಾರತದಾಗಿರೋ ಮುಸಲ್ಮಾನರ ಮ್ಯಾಗೆ ಯಾವ ಪ್ರೀತಿ ಇರ್ತದೆ? ಅವರ್ದು ದೃಷ್ಟಿನಾಗೆ ನಾವು ಕಾಫೀರ್ ಲೋಗ್ ಹಂಗಾರೆ ನಮ್ಮನ್ನಕಾಯೋರು ಯಾರು ಭಗವಾನ್? ಬಿಟ್ಟುಹೋಗೋಕೆ ಇದೇನ್ ಬಾಡಿಗೆ ಮನೆಯಾ? ಪಾಕಿಸ್ತಾನ್‌ದಾಗೆ ಹಬ್ಬ ಮಾಡ್ತೀವಿ. ಪಾಕಿಸ್ತಾನದೋರು ಕ್ರಿಕೆಟ್‌ನಾಗೆ ಗೆದ್ದರೆ ಪಟಾಕಿ ಹೊಡಿತೇವೆ, ಇದೆಂತ ಹೈಲು ಬುದ್ಧಿ ನಮ್ದೂವೆ! ಸಾವಿರಾರು ಜನ್ರ ಪ್ರಾಣ ತೆಗೆಯೋದ್ನ ‘ಜಿಹಾದ್’ ಅಂಬೋರ್ಗೂ ಸಾವಿರಾರು ಮಂದಿ ಸಮಾಧಿ ಮ್ಯಾಗೆ ರಾಮನ ಗುಡಿಯ ಕಟ್ಕೋಕೆ ಹೊಂಟೋರ್ಗೂ ಅಂಥ ಪರಕೇನು ಕಾಣ್ತಿಲ್ಲ ನನ್ಗೆ.
ಕಾರಣವಿದ್ದೇನೂ ಪ್ರೀತಿಸ್ಬೋದು. ಕಾರಣವಿಲ್ದೆ ದ್ವೇಷ ಮಾಡಿದರೆ ಭಗವಾನ್ ಮೆಚ್ಚಾಕಿಲ್ಲ ತಲೆ ಸಿಡಿತಾ ಅದೆ. ಶಕೀಲ ಇನ್ನೂ ಬರ್ಲಿಲ್ಲ ಮನೆಯಾಗೆ ನೋಡಿದ್ರೆ ಬರಿ ಹೆಂಗಸರೆ ಅವರೆ. ಮುದ್ಕನ್ನ ಒಬ್ಬನ್ನೇ ಬಿಟ್ಟು ಸಲೀಮನೂ ಎಲ್ಲೋ ಹೊಂಟೋಗವ್ನೆ. ಇನ್ನು ಇಬ್ಬರು ಮಕ್ಕಳು ಪಕ್ಕದ ಹಳ್ಳಿನಾಗಿರೋ ಜಮೀಂತಾವ ಹೋದೋರು ಇನ್ನೂ ಬಂದಿಲ್ಲ ಬರೋಕೆ ಬಸ್ಸೆಲ್ಲಿ ಓಡಾತ್ತ ಅವೆ. ಯಾರಾದ್ರೂ ಮನೆಯಾಗೆ ನುಗ್ಗಿದರೆ ಅಲ್ಲಾನೆ ಗತಿ. ಇಬ್ರಾಹೀಂನ ಇಂಥ ದಿಕ್ಕು ಕಾಣದ ಆಲೋಚನೆಗಳಿಗೆ ಬೆದರಿಕೆಗೆ, ಇರಿಯುವ ಪ್ರಶ್ನೆಗಳಿಗೆ ಉತ್ತರಗಳೇ ದೊರಕುತ್ತಿಲ್ಲ. ಹಂಡೆಯಲ್ಲಿ ಬಿದ್ದ ಇಲಿಯ ಪಾಡು ಮತ್ತದೇ ವೇದನೆ ಶಕೀಲಾ ಇನ್ನೂ ಬಂದಿಲ್ಲ… ಬಂದಳಾ?
ಇಬ್ರಾಹಿಂ ಅಂದುಕೊಂಡಂಗೆ ಶಕೀಲ ಅಂತಹ ತೊಂದರೆಲ್ಲೇನು ಸಿಕ್ಕಿರಲಿಲ್ಲ. ಕರ್ಫ್ಯೂ ಗದ್ದಲ ಪೋಲಿಸರ ಗೋಲಿಬಾರ್ ಗಳಿಗೆ ಅಂಜಿ ಓಡುವವರ ಜೊತೆ ದಿಕ್ಕೆಟ್ಟು ಓಡಿದ ಅವಳು ಯಾವುದೋ ಒಂದು ಮನೆ ಬಾಗಿಲು ಬಡಿದಿದ್ದಳು. ಹೆಣ್ಣೆಂಬ ಕನಿಕರದಿಂದ ಮನೆಯವರು ಬಾಗಿಲು ತೆರೆದು ಒಳಗೆ ಸೇರಿಸಿದ್ದರೂ ಬುರ್ಕಾ ಧರಿಸಿದ್ದ ಅವಳನ್ನು ಕಂಡು ನಂತರ ಕಸಿವಿಸಿಗೊಂಡಿದ್ದರು. ಶಕೀಲಳದೂ ಅದೇ ಪರಿಸ್ಥಿತಿ. ಶ್ರೀರಾಮ ಪಟ್ಟಾಭೀಷೇಕದ ದೊಡ್ಡ ಪಟ ನೋಡಿಯೇ ತಲೆ ಸುತ್ತು ಬಂದು ಬಿದ್ದು ಬಿಟ್ಟಿದ್ದಳು. ಹಾದೀಲಿ ಹೋಗೋ ಮಾರಿನಾ ಮನೇಗೇ ಹೊಗಿಸಿಕೊಂಡಂತಾಯಿತಲ್ಲ ಎಂಬ ಎದೆಗುದಿ ಮನೆಯ ಸಮಸ್ತರನ್ನು ಕಾಡದಿರಲಿಲ್ಲ ಇದ್ದುದರಲ್ಲಿ ಮನೆಯ ಯಜಮಾನ ಕೃಷ್ಣನ್ ದೃತಿಗೆಡಲಿಲ್ಲ. “ಈ ಹುಡ್ಗಿ ಮೋರೆ ಮೇಲೆ ಒಂದಿಷ್ಟು ನೀರು ತಂದು ಚಿಮುಕಿಸು ದೇವಕಿ” ಎಂದರು. ನೀರಿನ ಪ್ರೋಕ್ಷಣೆಯ ನಂತರ ಸ್ಮೃತಿಗಿಳಿದ ಶಕೀಲಳ ಕಣ್ಣುಗಳಲ್ಲಿ ಭಯದ ಕೊಳವನ್ನೇ ಕಂಡಾಗ, ಕೃಷ್ಣನ್ ಅವಳಲ್ಲಿ ಧೈರ್ಯ ತುಂಬುವಂತೆ ಮೆದುವಾಗಿ ನಕ್ಕರು. ಮನೆಯಲ್ಲಿ ಹೆಣ್ಣುಮಕ್ಕಳು ಇದ್ದುದನ್ನು ಕಂಡು ಅವಳನ್ನಾವರಿಸಿದ್ದ ಭಯ ಕೊಂಚ ಕಡೆಮಯಾಗಿತ್ತು. ಹೊರಗಡೆ ಗದ್ದಲ ಗಲಿಬಿಲಿ ಪೋಲಿಸರ ಬೂಟು ಕಾಲುಗಳ ಸದ್ದು ಎಲ್ಲೋ ಬಂದೂಕು ಸಿಡಿಸಿದ ಶಬ್ದ. ಶಕೀಲ ಗುಬ್ಬಚ್ಚಿಯಂತೆ ಮುದುಡುಕೊಂಡಿದ್ದಳು. ತನ್ನನ್ನೇ ನೋಡುತ್ತಿರುವ ಎರಡು ಕಣ್ಣುಗಳನ್ನೂ ಅವಳು ಗಮನಿಸಿದ್ದಳು. ತನಗಿಂತ ಆತ ಐದಾರು ವರ್ಷವಾದರೂ ದೊಡ್ಡವನು. ಆತನ ಕಣ್ಣುಗಳಲ್ಲಿಂದ ಅದೆಂತದೂ ವಾಸನೆ ಹೊರಬರುತ್ತಿತ್ತು. ಟಿ.ವಿ.ನಲ್ಲಿ ಪ್ರಸಾರವಾಗುವ ಧಾರಾವಾಹಿಯನ್ನು ಯಾರೂ ನೋಡುತ್ತಿರಲಿಲ್ಲವಾದರೂ ಆರಿಸುವ, ಆರಿಸಿದ ನಂತರ ಆವರಿಸುವ ಮೌನವನ್ನು ಎದುರಿಸುವ ಶಕ್ತಿ ಹುದುಗಿಹೋಗಿತು. ‘ಭಯಪಡಬೇಡಮ್ಮ… ನಿನಗಿಲ್ಲಿ ಎಂತ ತೊಂದರೆನೂ ಇಲ್ಲ.. ಕರ್ಫ್ಯೂ ತೆಗೆದ ಮೇಲೆ ಹೋಗುವಿಯಂತೆ ರಿಲ್ಯಾಕ್ಸ್ ಮಾಡು’ ಅಂದರು ಕೃಷ್ಣನ್. ಮಧ್ಯೆ ನೀನು ಯಾರ ಪೈಕಿ? ಎಂದೂ ವಿಚಾರಿಸಿಕೊಂಡಳು ಕ್ಟಷ್ಣನ್ನ ಹೆಂಡತಿ ದೇವಕಿ. ‘ಇಬ್ರಾಹಿಂ ಅನ್ನೋರು… ಸೈಕಲ್ ಶಾಪ್ ಇಟ್ಟವರೆ… ಅವರ ಮಗಳು’ ತೊದಲಿದ್ದಳು ಶಕೀಲ.
‘ನೀವೇನೇ ಅನ್ನಿ ಇವಳನ್ನು ಮೊದಲು ಇಲ್ಲಿಂದ ಸಾಗು ಹಾಕೋದು ಕ್ಷೇಮಾರಿ. ಇಲ್ಲದ ಉಸಾಬರಿ ನಮಗೆಂತಕ್ಕೆ’ ದೇವಕಿಯ ಸಿಡಿಮಿಡಿ. ಕೃಷ್ಣನ್ ಆಗಲೂ ನಕ್ಕರು. ‘ಇದು ಉಸಾಬರಿ ಅಲ್ಲ ಕಣೆ ಉಸ್ತುವಾರಿ, ಜವಾಬ್ಧಾರಿ ನೋಡು ದೇವ್ಕಿ ಒಂದು ದೇಶ ಹಾಳಾದ್ರೆ ಸರಿ ಪಡಿಸ್ಬೋದು, ಹಣ್ಣಿನ ಶೀಲ ಹಾಳಾದ್ರೆ ಆ ಶ್ರೀರಾಮಚಂದ್ರನಿಂದಲೂ ಸರಿಪಡಿಸೋಕೆ ಅಸಾಧ್ಯ’ ಮೆದುವಾಗಿ ಗದರಿಕೊಂಡರು. ರಾತ್ರಿಯಾಯಿತು, ಶಕೀಲಾಗೆ ಊಟ ಮಾಡಲು ಸಂಕೋಚ ಅನ್ನುವುದಕ್ಕಿಂತ ಹಸಿವು ಅನ್ನೋದೇ ಸತ್ತುಹೋಗಿತ್ತು. ಬಲವಂತಕ್ಕೆ ಒಂದು ಮುಷ್ಟಿ ತಿಂದಳು. ತನ್ನ ತಟ್ಟೆ ತಾನೇ ತೊಳೆದು ತೆಗೆದಿಟ್ಟಳು. ಮನೆಯವರು ಅದರ ಮೇಲೆ ಮತ್ತಷ್ಟು ನೀರು ಸುರಿದು ಮಡಿಮಾಡಿಕೊಂಡರು. ಎಲ್ಲರೂ ಹಾಲ್‌ನಲ್ಲಿ ಜೀವ ಬಿಗಿ ಹಿಡಿದು ಅಡ್ಡದಾಗ ಮೂಲೆ ಹಿಡಿದು ಚಾಪೆ ಮೇಲೆ ತಾನೂ ಮುದುಡಿ ನಿದ್ರೆ ಬಾರದೆ ರಾತ್ರಿಯನ್ನು ನರಳುತ್ತಲೇ ಗುಟುಕರಿಸಿದಳು. ಅಲ್ಲಿ ತನ್ನ ಮನೆಯವರ ಗತಿ ಏನಾಗಿದೆಯೋ? ಅದೆಷ್ಟೂ ಗಾಬರಿಗೊಂಡವರೋ ಎಂಬ ಕಲ್ಪನಾ ಬಂದೊಡನೆ ಹೊಟ್ಟೆಯಲ್ಲೆಲ್ಲಾ ಉರಿ ಉರಿ. ನಿದ್ದೆ ಹತ್ತಲೇ ಇಲ್ಲ ಆಕೆ ನಿದ್ದೆ ಮಾಡದಿದ್ದರೂ ಬೆಳಗಾಯಿತಲ್ಲ.
ಮನೆಯವರು ಎಷ್ಟು ಹೇಳಿದರೂ ಶಕೀಲ ಸ್ನಾನದ ಮನೆಗೆ ಹೋಗಲಿಲ್ಲ ಹಿತ್ತಲಲ್ಲೇ ಮೋರೆ ತೊಳೆದು ಬಂದು ಮತ್ತದೇ ಮೂಲೆ ಹಿಡಿದಳು. ಹೊರಗೆಲ್ಲೆಡೆ ಸ್ಮಶಾನ ಮೌನ. ಮನೆಯಲ್ಲೂ ಅಷ್ಟೇ ಉಸಿರಾಡುವುದೂ ಕೇಳುತ್ತಿತ್ತು. ಉಸಿರುಗಳ ಬಿಸಿ ಮನೆಯನ್ನೆಲ್ಲಾ ಆವರಿಸಿಕೊಂಡಿತ್ತು. ಯಾರ ಮುಖದಲ್ಲೂ ಗೆಲುವಿಲ್ಲ. ರಾತ್ರಿಯೆಲ್ಲಾ ಕೃಷ್ಣನ್ ಮಗ ರಾಮು ಕಾಂಪೌಂಡಿನಲ್ಲಿ ನಿಲ್ಲಿಸಿದ್ದ ಅಟೋದಲ್ಲಿ ಮಲಗಿದ್ದ. ತಂದೆ ಎಷ್ಟು ಬೇಡಿದರೂ ಅವನು ಕೇಳದೇ ಗಲಭೆಗೆ ಹೆದರದೆ ಹೊರಗೆ ಮಲಗಿದ್ದನ್ನವಳು ಗಮನಿಸಿದ್ದಳು. ಸಾಲ ಮಾಡಿ ತಗೊಂಡಿರೋ ಆಟೋನಾ ಯಾವನಾದ್ರು ಸಾಬಿ ಸುಟ್ಟುಬಿಟ್ಟರೆ ಏನ್ ಗತಿ ಅಪ್ಪಾ ಎಂಬುದವನ ಸಂಕಟ. ‘ನಿನ್ನ ಜೀವಕ್ಕಿಂತ ಹೆಚ್ಚಲ್ಲ… ಬಾ ಒಳ್ಗೆ ಹೆತ್ತವರ ಅಳಲು. ಆತ ಸುತ್ರಾಂ ಒಪ್ಪಲಿಲ್ಲ ಹೊರಗಡೆ ಅದರಲ್ಲೇ ಮಲಗಿದ್ದ. ತನ್ನ ಭಯ್ಯನ ಆಟೋ ಏನಾಯಿತೋ. ವಿಲಿವಿಲಿ ಗುಟ್ಟುವ ಶಕೀಲಳಿಗೆ ತಿಂಡಿ ರುಚಿಸಲಿಲ್ಲ. ‘ಹೊಟ್ಟೆ ತುಂಬಾ ತಿನ್ನಮ್ಮ… ಕಾಫಿ ಮಾಡೋಣವೆಂದರೆ ಹಾಲಿನ ಲಾರಿನೇ ಪತ್ತೆ ಇಲ್ಲ’ ಆಗೀಗ ಮೌನವನ್ನು ಮುರಿಯುತ್ತಿದ್ದವರು ಕೃಷ್ಣನ್ ಒಬ್ಬರೆ. ಯಾವಾಗ ಬೇಕಾದರು ಅನಾಹುತವಾಗಬಹುದೆಂಬ ಅಳುಕು ಹಳ್ಳ ತೋಡಿತು. ಮನೆಯವರ ಒತ್ತಾಯಕ್ಕೆ ಮಧ್ಯಾನಕ್ಕೆ ಉಂಡ ಶಾಸ್ತ್ರಮಾಡಿದಳು. ಕರ್ಫ್ಯೂ ತೆಗೆದರೆ ಸಾಕು ಓಡಿಹೋದೇನೆಂಬಷ್ಟು ಕಾತರ. ಪ್ರತಿಬಾರಿ ಉಗುಳು ನುಂಗಲೂ ಸಂಕೋಚ, ಕತ್ತಲ್ಲಿ ಹುದುಗಿದ್ದ ತಲೆ ಎತ್ತಲೂ ಅಂಜಿಕೆ. ಏನೂ ಆಗದಿರಲೆಂದು ಮನದಲ್ಲೇ ‘ಧುವಾ’ ಮಾಡಿದಳು. ತನ್ನನ್ನೇ ನೋಡುವ ಎರಡು ಕಣ್ಣುಗಳ ಬಗ್ಗೆ ಅಂತಹ ಸ್ಥಿತಿಯಲ್ಲೂ ಅವಳು ನಿಗಾ ತಪ್ಪಲಿಲ್ಲ ಹೊರಗಡೆ ರಣಬಿಸಿಲು ಬೇರೆ. ಇಲ್ಲಿ ಎಲ್ಲರ ಮೋರೆಯಲ್ಲೂ ಬೆವರು ಆಥವಾ ಭಯದಿಂದ ಬಂದ ಪಸೀನಾನೋ. ತಳಮಳವೇ ಆಕಾರಗೊಂಡವರಂತೆ ಮನೆಮಂದಿ ಕಾಣುವಾಗ ಶಕೀಲಾಗೆ ಒಂದಿಷ್ಟು ಕೋಪ. ಇವರೇ ಹಿಂಗೆ ಹೆದುರುವಾಗ ನಮ್ಮ ಗತಿ ಹೆಂಗಾಗಬೇಡ, ನಿಡುಸುಯ್ದಳು. ಕುಳಿತಲ್ಲೇ ಅವಳನ್ನು ನಿದ್ದೆ ಕಾಡುತಿತ್ತು. ಒಂದೆರಡು ಸಲ ತೂಗಡಿಸಿದಳು ಕೂಡ. ಹಸಿವು ನಿದ್ರೆ ಇವೆರಡಕ್ಕೆ ನಾಚಿಕೆಯೆಂಬುದೇ ಇಲ್ಲ. ಮನೆಯಲ್ಲಿ ಶವ ಬಿದ್ದಿದ್ದರೂ ಸಮಯಕ್ಕೆ ಸರಿಯಾಗಿ ನೆನಪು ಮಾಡುತ್ತವೆ-ತಾವಿನ್ನೂ ಬದುಕಿದ್ದೇವೆಂದು.
ಹೊರಗಿನ ಶಬ್ದಕ್ಕೆ ಗಕ್ಕನೆ ಎಚ್ಚರಗೊಂಡಳು ಶಕೀಲ ಒಂದು ಗಂಟೆ ಕಾಲ ಕರ್ಫ್ಯೂ ತೆಗೆದಿರುವುದಾಗಿ ಫೋಲಿಸ್ ವ್ಯಾನ್ಗಳು ಸಾರುತ್ತಿವೆ. ಪುಳಕಗೊಂಡಳು ದಡಬಡಿಸಿ ಎದ್ದಳು. ಹೋದ ಜೀವ ಒಂದಷ್ಟು ಖುಷಿ ‘ಸಾರ್ ನಾನು ಮನೆಗೆ ಹೋಗ್ತೇನೆ’ ಬಡಬಡಿಕೆ ಆತುರ ಯಾಕಮ್ಮ? ಮನೆ ಇಲ್ಲಿಂದ ದೂರವಾಗುತ್ತೆ?’ ವಿಚಾರಿಸಿಕೊಂಡರು.
‘ಇಲ್ಲಿಂದ ಎರಡು ಕಿಲೋಮೀಟರ್ ಆಷ್ಟೇ ಬರ್ತೀನಿ ಸಾ… ನಿಮ್ಮಿಂದ ಬಹುತ್ ಉಪ್ಕಾರ ಆಯ್ತು ನಾನ್ ಎಂದ್ಗೂ ಈ ಮನೇನ ಮರೆಯಾಕಿಲ್ಲ’ ಬಾಗಿಲ ಬಳಿ ಓಡಿದಳು. ರಾಮು ಬಾಗಿಲಿಗೆ ಅಡ್ಡ ನಿಂತಿದ್ದ. ಹೊರಗೆ ಹೋಗಲು ಬಿಡುವುದಿಲ್ಲವೆಂಬ ಹಠ ಮುಖದಲ್ಲಿದ್ದರೆ ತನ್ನನ್ನೇ ಹೀರುತ್ತಿದ್ದ ವಾಸನೆಯನ್ನು ಆ ಕಣ್ಣುಗಳಲ್ಲಿ ಕಂಡಳು, ಶಕೀಲ. ಅಧೀರಳಾದಳು. ದೀನಳಾಗಿ ಕೃಷ್ಣನ್ ಕಡೆ ನೋಡಿದಳು. ಅವಳ ಉದ್ದೇಗ ಹಿರಿಯ ಜೀವದ ಕರಳನ್ನು ಮೀಟಿತು. ‘ಹೋಗ್ಲಿ ಬಿಡೋ… ಬೇಗ ಮನೆ ಸೇರ್ಕೊಳ್ಳಿ’ ಅಂದರು.
‘ಒಬ್ಬಳೇ ಹೋಗೋದು ಒಳ್ಳೆದಲ್ಲಪ್ಪ. ನಾನ್ ಹೋಗಿ ಬಿಟ್ಟು ಬರ್ತೀನಿ’ ರಾಮು ಅಂದ. ಸರಿ ಅನ್ನಿಸಿತು. ಇಲ್ಲೆಲ್ಲಾ ಹಿಂದೂಗಳೇ ಅಧಿಕ. ರೋಷತಪ್ತರಾಗಿದ್ದಾರೆ. ಈ ಬುರ್ಕಾ ಹುಡುಗಿ ಉಳಿದಳಾ ಎಂದಾಲೋಚಿಸಿದ ಮನೆ ಮರುಗಿತು. ತನ್ನ ಆತಂಕವನ್ನು ಕೃಷ್ಣನ್ ಮನೆಯವರೂಂದಿಗೆ ಹಂಚಿಕೊಂಡರು, ಶಕೀಲಳನ್ನೀಗ ಭಯಮುತ್ತಿಟ್ಟಿತು. ‘ಚಿಂತಿಸಬೇಡ ಮಗು, ನಿನ್ನನ್ನ ನಿನ್ನ ಮನೆಗೆ ಸೇರಿಸೋ ಜವಾಬ್ದಾರಿ ನಂದು’ ಅಂದ ಕೃಷ್ಣನ್ ಹೆಂಡತಿಯತ್ತ ತಿರುಗಿ ಕೆಲವು ಸೂಚನೆಗಳನ್ನು ಕೊಟ್ಟರು. ಹೆದರಿ ತತ್ತರಿಸುತ್ತಿದ್ದ ಶಕೀಲಳನ್ನು ತನ್ನ ಕೋಣೆಯೊಳಗೆ ಕರೆದುಕೊಂಡು ಹೋದಳು, ದೇವಕಿ. ಹೊತ್ತಿನಂತರ ಈಚೆ ಬಂದ ಶಕೀಲಳನ್ನು ಕಂಡಾಗ ದಂಗು ಬಡಿದು ನಿಂತವನು ರಾಮು. ಕಚ್ಚೆಹಾಕಿ ಉಟ್ಟ ಸೀರೆ, ಎರಡು ಜಡೆ ಬದಲು ಕಟ್ಟಿದ ತುರುಬು, ಕಾಸಿನಗಲ ಕುಂಕುಮ, ಕೊರಳಲ್ಲಿ ಕಾಸಿನ ಸರ, ಬೆಳ್ಳಿ ಸೊಂಟ ಪಟ್ಟಿ ಕೈ ತುಂಬಾ ಬಳೆ, ದೇವಕಿಯೇ ಲಟಿಗೆ ತೆಗೆದಳು. ಕನ್ನಡಿಯಲ್ಲಿ ನೋಡಿದ ಶಕೀಲಳಿಗೋ ಅದೊಂದು ಬಗೆಯ ಭಯಮಿಶ್ರಿತಲಜ್ಜೆ ಯಾರು ಸಾಬರ ಹುಡುಗಿ ಅಂದಾರು? ಎಂಬ ಸಮಾಧಾನ ಬೇರೆ. ಮನುಷ್ಯ ಏನೇ ತನ್ನ ಭಾಷೆ ವೇಷ ಭೂಷಣ ಆಚಾರ ವಿಚಾರ, ಸತ್ ಸಂಪ್ರದಾಯಗಳಿಂದ ತಾನು ಇತರರಿಗಿಂತ ಮೇಲು ಎಂದುಕೊಂಡರೂ ಬತ್ತಲೆಯಾದಾಗ ಎಲ್ಲಾ ಒಂದೇ, ಕನಿಷ್ಠ ಬಟ್ಟೆ ಬದಲಿಸಿದರೂ ಗೊತಾಗದಷ್ಟು ದುರ್ಬಲವಾದ ಜಾತಿಮತಗಳಿಗಾಗಿ ಕಗ್ಗೊಲೆಗಳಾಗಬೇಕೆ ಎನ್ನಿಸಿ ಅವಳ ದುಃಖ ಉಮ್ಮಳಿಸಿತು. ಕೈ ಜೋಡಿಸಿ ವಂದಿಸಿದಳು. ರಾಮು ಅವಳನ್ನು ತಾನೇ ಆಟೋದಲ್ಲಿ ಕರೆದೊಯ್ಯುವನೆಂದಾಗ ಮನೆಯವರಲ್ಲಿ ಒಮ್ಮತ ಮೂಡಲಿಲ್ಲ. ‘ಎಚ್ಚರ ಕಣೋ’ ಹುಡುಗಿ ಮನೆ ತಲುಪಿಸಿ ಬೇಗ ಬಂದ್ ಬಿಡು ಎರಡರಡು ಸಲ ಎಚ್ಚರಿಸಿದರು. ಬಾಗಿಲವರೆಗೂ ಬಂದರು. ತನ್ನ ಚೂಡಿದಾರ್ ಬೂರ್ಕಾವನ್ನು ಸುತ್ತಿಕೈಯಲ್ಲಿ ಹಿಡಿದುಕೊಂಡೇ ಕುಳಿತ ಶಕೀಲ ಹನಿಗಣ್ಣಾಗಿ ಕೈ ಆಡಿಸಿದಳು, ಕೃಷ್ಣನ್ ಕಣ್ಣು ಒದ್ದೆಯಾದಾಗ ಅವರಿಗೇ ಅಚ್ಚರಿ. ಆಚೆಗೆ ಮರೆಯಾಗುವವರೆಗೂ ನಿಂತು ನೋಡಿದರು. ಅಕ್ಕಪಕ್ಕದ ಮನೆಯವರು ಇವರನ್ನೇ ಹುಳಿಹುಳಿ ನೋಡಿದರು.
ಆಟೋ ವೇಗವಾಗಿ ಓಡುತ್ತಿತ್ತು-ಮನದಲ್ಲಿ ಕವಿದಿದ್ದ ಆತಂಕದ ಜೊತೆ. ಅಲ್ಲಲ್ಲಿ ಒಂದಷ್ಟು ಜನ ಗುಂಪು ಗುಂಪಾಗಿ ನಿಂತಿದ್ದರು- ಒಂದೆರಡು ಅಂಗಡಿಗಳು ತೆರೆದಿದ್ದವು. ತರಕಾರಿ ಗಾಡಿಗಳೂ ಕಂಡವು. ಆದರೆ ಕೊಳ್ಳುವ ಜನರದ್ದೇ ಬರ. ಬೀದಿಗೆ ಇಳಿವ ತ್ರಾಣವೇ ಹೆಂಗಸರಲ್ಲಿ ಮಕ್ಕಳಲ್ಲಿ ಕುಸಿದಿತ್ತು. ಅಲ್ಲಲ್ಲಿ ಬಂದೂಕುದಾರಿ ಪೋಲಿಸರ ಅಟ್ಟಹಾಸ ಗದರಿಕೆ. ರಸ್ತೆ ತುಂಬಾ ಕಲ್ಲು ಗಾಜುಪುಡಿ ಹೆಪ್ಪುಗಟ್ಟಿ ಕಪ್ಪಾದ ರಕ್ತಧಾರೆ ಸುಡುತ್ತಿರುವ ಟೈರುಗಳು. ಆಕಾರ ಕಳೆದುಕೊಂಡು ಬೆಂಕಿಬಿದ್ದು ಸುಟ್ಟು ಭಸ್ಮವಾಗಿ ಹೊಗೆಕಾರುತ್ತಿದ್ದ ಅಂಗಡಿ ಮುಂಗಟ್ಟುಗಳು. ಬೀದಿ ಬದಲಾದಂತೆಲ್ಲಾ ರಕ್ತ ಮಾಂಸದ ಚೆಲ್ಲಾಟ ಮೂಗಿಗೆ ಅಡರಿದ ವಾಸನೆ. ಶಕೀಲಳ ಎದೆ ಕಂಪಿಸುತ್ತಿತ್ತು ರಾಮು ಮಾತ್ರ ಆವಳು ಹೇಳಿದಂತೆಲ್ಲಾ ತಿರುವು ತೆಗೆದುಕೊಳ್ಳುತ್ತಾ ಕಡಿವಾಣ ಹಾಕಿದ ಕುದುರೆಯಂತೆ ಆಟೋ ಒಡಿಸುತ್ತಿದ್ದ. ಬರುವಾಗ ಶಕೀಲಳೊಂದಿಗೆ ಮಾತನಾಡೋಣವೆಂಬಾಸೆ ಅವನಲ್ಲಿ ಕುಸಿದಿತ್ತು. ಮಾತುಗಳೇ ತುಟಿಯಿಂದೀಚೆಗೆ ಬಾರದಷ್ಟು ಕಂಗಾಲು. ‘ಮೆಲ್ಲಗೆ ಓಡಿಸಲೇ…’ ಪೇದೆಗಳಿಬ್ಬರು ಚೀರಿಕೊಂಡಾಗ ಹೆದರುತ್ತಲೇ ವೇಗ ಕುಗ್ಗಿಸಿದ.
ಮೂಲೆಯಲ್ಲಿ ಒಂದೆಡೆ ಸಲೀಮ ಅವನ ದೋಸ್ತುಗಳು ನಿಂತಿದ್ದರು. ಹೊಂಚಿನಿಂತಿದ್ದವರ ಕಣ್ಣಿಗೆ ಆಟೋ ಬಿತ್ತು ಆಟೋದ ಮೇಲೆ ಜೈ ಶ್ರೀರಾಮ್ ಅಂತ ಸ್ಟಿಕರ್ ಇದೆ. ಒಳಗೆ ಹೆಂಗಸು ಬೇರೆ. ‘ಇಸ್ಕಿ ಮಾಕಿ ಪಕಡ್ರೆ…. ಆಗ್ ಲಗಾರೆ ಆಟೋಕೋ’ ರೋಷದಿಂದ ಒಮ್ಮೆಲೆ ಚೀರಿಕೊಂಡ ಸಲೀಮ. ಕ್ಷಣಾರ್ಧದಲ್ಲೇ ಗುಂಪು ಅಡ್ಡಗಟ್ಟಿತು. ಆಟೋ ಮೇಲೆ ಒಳಗೆ ಪೆಟ್ರೋಲ್ ಎರೆಚಲಾಯಿತು. ‘ಪ್ಲೀಸ್ ಬಿಡಿ ನಮ್ಮನ್ನು… ಬಿಟ್ಟುಬಿಡಿ’ ರಾಮು ಬೇಡಿದ. ಅವನ ಮೇಲೆಯೇ ಪೆಟ್ರೋಲ್ ಎರಚಿದರು ಯಾರೋ ಕಡ್ಡಿಗೀರಿ ಎಸೆದರು. ದಗ್ಗನೆ ಬೆಂಕಿ ಹತ್ತಿಕೊಂಡಿತು. ‘ಭಯ್ಯಾ’ ಎಂಬ ಶಕೀಲಳ ಕೂಗು ಕಿರಾತರ ಅಟ್ಟಹಾಸ ಕೇಕೆಗಳಲ್ಲಿ ಹೂತುಹೋಯಿತು. ಉರಿವ ಎರಡು ದೇಹಗಳು ದಿಕ್ಕೆಟ್ಟು ಓಡಿದವು ಬಿದ್ದು ಹೊರಳಾಡಿದವು- ಆಕ್ರಂದನ ಮುಗಿಲಿಗೇರಿತು. ಪೋಲಿಸ್ ಜೀಪು ಸರ್ರನೆ ಬಂದಿತು. ಗುಂವು ಕೂಡಿದವರನ್ನು ಬೆನ್ನಟ್ಟಿ ಓಡಿತು. ಮತ್ತೆ ಜನ ಮುತ್ತಿದರು ದಹಿಸುವ ಎರಡು ದೇಹಗಳು ಒಂದೆಡ ಕಂಡವು ಆಟೋ ಹೊತ್ತಿ ಉರಿಯುತ್ತಲಿದೆ. ನೆರೆದವರು ಅವುಡು ಗಚ್ಚಿದರು. ಹೃದಯಗಳು ಹೊತ್ತಿ ಉರಿದವು.
***
ಶಕೀಲ ಇನ್ನೂ ಬರಲೇ ಇಲ್ಲ ‘ಕರ್ಫ್ಯೂ ಫಿರ್ ಆರ್ಡರು ಆತಲ್ಲೇ ಫಾತಿಮಾ?… ಕಹಾಂ ಮರ್ ಗಯಿ ಎ ಬಚ್ಚಿ’ ಇಬ್ರಾಹಿಂ ದುಗುಡ ಹೆಚ್ಚಿ ಅಳಲಾರಂಭಿಸಿದ. ಅದುವರೆಗೂ ಮೌನವಾಗಿದ್ದ ಮನೆ ದುಃಖದ ಕಟ್ಟಿ ಒಡೆಯಿತು ಬಿಕ್ಕಿಬಿಕ್ಕಿ ಅತ್ತರು. ಯಾಕೀ ಜಿದ್ದು? ಇಬ್ರಾಹಿಂನ ಮನೆ ಗೊಂದಲದ ಗೂಡಾಯಿತು. ‘ರಾಮಮಂದಿರ ಯಾಕೆ ಬೇಕು… ಕಟ್ಟೋದ್ ಬ್ಯಾಡ ಆ ಜಾಗ ಅಂಗೆ ಇರ್‍ಲಿ ಆಸ್ಪತ್ರೆ ಕಟ್ಟಿ’ ಅಂತಾರೆ ಹಿಂದೂ ಜನ್ದಾಗೆ ಇರೋ ಬುದ್ದಿಜೀವಿಗಳು ಸಾಹಿತಿಗಳು ಮಠಾಧಿಪತಿಗಳು. ಎಲ್ಲೋ ಕೆಲವು ಮತಾಂದರು ಮಂದಿರ ಬೇಕು ಅಂತಾರೆ. ಹಂಗೇನೆ ನಮ್ದು ಜನ್ದಾಗೂ ರಾಜಕಾರಣಿಗಳು, ಸಾಹಿತಿಗಳು ಬುದ್ದಿಮಾನ್‍ಗಳಲ್ಲಿ ಇಮಾಮರು ಮುಲ್ಲಾಗಳು ಮೌಲಿ ಖಾಜಿ ಎಲ್ಲಾ ಅವರೆ. ಯಾಕೆ ಏನೂ ಹೇಳ್ದೆ ಸುಮ್ಮನೆ ಇದಾರೆ? ನಮ್ಮೋರು ಕೂಡಿ, ಹೇಳ್ಕೆ ಕೂಡ್ಲಿ ಮಂದಿರಾನೂ ಬ್ಯಾಡ, ಆ ಜಾಗ ಹಂಗೆ ಇರ್‍ಲಿ ಅಂತ? ಈ ಜಗಳ ಕೊಲೆ ಸುಲಿಗೆ ಎಲ್ಲಾ ನಿಂತೋತದಲ್ಲ ನಮ್ದು ಮಂದಿ ಧಿಮಾಗ್ಸೆ ನಹಿ ಬಡಾದಿಲ್ಸೆ ಯೋಚ್ನೆ ಮಾಡಬೇಕು.
ನಾಳೆ ಮಸೀದಿನಾಗೆ ನಂದು ದಿಲ್ ಕಿ ಬಾತ್ ಮುಲ್ಲಾರ್ತವ ಪ್ರಸ್ತಾಪ್ ಮಾಡ್ತೀವ್ನಿ ನೀವು ಪೇಪರ್ಗೆ ಒಂದು ಹೇಳ್ಕೆ ಕೊಡಿ ಡೆಲ್ಲಿ ಇಮಾಮ್ಗೆ ಪತ್ರ ಬರೀರಿ ಅಂತ ಗಂಟು ಬೀಳ್ತೀನಿ ಖುದಾಕೆ ಕಸಂ ಸಾಕು ಸಾಕು ಈ ಮಸಲತ್ತು ಖೂನಿಕರಾಬಿ. ಈ ಆಲೋಚನೆಯಿಂದಾಗಿ ಮನ ಹಗುರಾಯಿತು. ಇಬ್ರಾಹಿಂ ನಿಟ್ಟುಸಿರೊಂದನ್ನು ಹೊರ ಚೆಲ್ಲಿದ. ಇದ್ದಕ್ಕಿದ್ದಂತೆ ದಬದಬನೆ ಬಾಗಿಲು ಬಡಿವ ಶಬ್ದಕ್ಕೆ ಎದೆ ನಡುಗಿತು. ಏನು ನಡೆಯುತ್ತದೆಯೋ ಎಂಬುದನ್ನರಿಯುವ ಮೊದಲೇ ಹಳೆ ಬಾಗಿಲು ಧಡಾರನೆ ಮುರಿದು ಬಿತ್ತು.
*****