ಸಾವು

ಸಾವು

ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ ಇದು ನಿಜವಾಗಿಯೂ ನನ್ನೆದೆಯ ಭಯಾನಕತೆಯೇ, ಇಲ್ಲ…. ನಿಸರ್ಗದ ನಿಜವಾದ ಮುಖವೋ…? ನನ್ನ ಅಸ್ತಿತ್ವವೇನೋ ಕ್ಷುಲ್ಲಕವಾದುದು. ಇಡೀ ಕಾನನವೇ ಅದುರುವಂತಹ ಈ ಗರ್ಜನೆ ಸಿಂಹದ್ದು ಮಾತ್ರವಾಗಿರಲು ಸಾಧ್ಯ ಅಥವ ಹುಲಿಯದೇ?… ಹಿಂಬದಿಯಲ್ಲಿ ಆಗುತ್ತಿರುವ ಸದ್ದು…. ಆಹ್… ಸೊಂಡಲೆತ್ತಿರುವ ಕಾಡಾನೆ… ಅಥವಾ ಪಳಗಿದ ಆನೆಯೇ…. ಇನ್ನು ಕ್ರಿಮಿ, ಕೀಟ, ಜೀರುಂಡೆಗಳು ಲೆಕ್ಕಕ್ಕೇ ಇಲ್ಲ. ‘ಈಸಬೇಕು; ಇದ್ದು ಜಯಿಸಬೇಕು’ ಇದು ಕೇವಲ ನಾಣ್ಣುಡಿಯಲ್ಲ. ನಾನು ನಿಜವಾಗಿಯೂ ನನ್ನ ಮುಂದಿರುವ ಮಂಡಿಯುದ್ದ ಝರಿಯ ನೀರಿನಲ್ಲಿ ಕ್ರಮಿಸಿ ಆಚೆ ದಡ ಸೇರಲೇಬೇಕು. ನಾನು ಸೀರೆಯನ್ನು ನೆರಿಗೆಗಳನ್ನು ಮಡಚಿ, ಮಂಡಿಯ ಮೇಲಕ್ಕೆ ಹಿಡಿದು ನೀರಿನೊಳಗಡೆ ಕಾಲಿಟ್ಟೆನೋ ಇಲ್ಲವೋ….. ನಾನು ನಿರೀಕ್ಷಿಸದೆ ಇದ್ದ ಸೆಳೆತ….. ಓ…. ನಾನು ಕೊಚ್ಚಿ ಹೋಗುತ್ತಿದ್ದೇನೆ… ಇಲ್ಲ…. ನಾನು ನೀರಿನ ಆ ಸೆಳೆತದಲ್ಲೂ ಪ್ರವಾಹದಲ್ಲೂ… ಆ ನೀರಿನ ಮೇಲೆ ಹಗುರವಾಗಿ ನಡೆದು ಹೋಗುತ್ತಿದ್ದೇನೆ…. ನನ್ನ ಗುರಿ ಅಲ್ಲಿದೆ… ಅದೋ ದೂರ ಬೆಟ್ಟ ಕಾಣುತ್ತಿದೆಯಲ್ಲಾ ಅದರ ತುದಿಯಲ್ಲಿ ತೇಜಃಪುಂಜನಾದ ದಂಡ ಕಮಂಡಲಧಾರಿ ಋಷಿಯ ಬಳಿ ನಾನು ಸಾರಲೇಬೇಕು. ದೂರಗಳು ನಿಮಿಷಗಳಲ್ಲಿ ಸಮೀಪವಾದವು. ಜೂಮ್ ಹಾಕಿದಂತೆ, ಮೈಲಿಗಟ್ಟಲೆ, ದೂರದ ಋಷಿಯ ಮುಖ ನನಗೆ ಸಮೀಪವಾಯಿತು. ನಾನು ನೀರಿನ ಮೇಲೆ ನಡೆಯುತ್ತಲೇ ಇದ್ದೆ……. ಜೀವ ಕೈಯಲ್ಲಿ ಹಿಡಿದು ಅನ್ನುತ್ತಾರಲ್ಲಾ ಹಾಗೆ. ಋಷಿಯ ಪ್ರಶಾಂತ ಕಣ್ಣುಗಳು ಹೇಳಿದವು, “ಹೆದರಬೇಡ ಮಗಳೇ…. ಬಾ…” ಮುಂದೆಲ್ಲಾ ಸುಗಮವಾದ ಹಾದಿ ಇದೆ…. ನನಗೆ ಒಮ್ಮೆಲೆ ವಿದ್ಯುತ್‌ ಸಂಚಾರವಾದಂತಾಯಿತು. ನಾನು…. ಈ ಕಣ್ಣುಗಳನ್ನು ಗುರುತಿಸುತ್ತೇನೆ. ಇವು ನನ್ನ ಆಪ್ತ ಕಣ್ಣುಗಳು. ನನ್ನ ಸ್ವಂತ ಕಣ್ಣುಗಳು, ಆ ಜಡೆಗಟ್ಟಿದ ಕೂದಲು, ಗಡ್ಡ ಮೀಸೆಗಳ ನಡುವೆಯೂ ನಾನೂ ಗುರುತಿಸಬಲ್ಲೇ…. ಅವು…. ನನ್ನ ಕಳೆದು ಹೋದ ಕಣ್ಣುಗಳು…. ಅವು ನಿಮ್ಮ ಕಣ್ಣುಗಳು…. ಅಯ್ಯೋ….! ….ಆಹ್! ….. ಅಬ್ಬಾ…… ಅಬ್ಬಾಜಿ…… ಅಬ್ಬಾಜಾನ್…..

ಬಹುಶಃ ಜೋರಾಗಿಯೇ ಕಿರುಚಿರಬೇಕು ನಾನು.

‘ಏನಾಯಿತು… ಸಬಾ….. ಸಬಾ… ಕಣ್ಣು ಬಿಡಿ… ಏಳಿ…. ಎದ್ದೇಳಿ….! ನನ್ನ ಇಡೀ ಅಸ್ತಿತ್ವವನ್ನು ಅಲುಗಾಡಿಸಿದ ನಿಜಾಮ್‌ನತ್ತ ನಿಧಾನವಾಗಿ ಕಣ್ತೆರೆದೆ…. ಕಣ್ತೆರೆದೆ ಮತ್ತು ನನ್ನವಾಗಿದ್ದ ಆ ಕಣ್ಣುಗಳನ್ನು ಕಳೆದುಕೊಂಡೆ…. ನಿಜಾಮ್ ನನ್ನನ್ನು ಮತ್ತೆ ಮಲಗಿಸಿ ಮಂಚದಿಂದ ಇಳಿದರು. ಕೈಯಲ್ಲಿ ಒಂದು ಲೋಟ ನೀರಿನೊಂದಿಗೆ ಹಾಜರಾಗಿ… ನನ್ನ ತುಟಿಗೆ ಲೋಟವನ್ನು ಹಿಡಿದರು. ತಣ್ಣನೆಯ ನೀರು… ಮುಳ್ಳುಗಳೆದಿದ್ದ ಗಂಟಲೊಳಗೆ ಇಳಿಯಲು ನಿರಾಕರಿಸುತ್ತಿತ್ತು.

ಒಂದು ಗುಟುಕು ನೀರು ಕೂಡ ಇಳಿಯಲಿಲ್ಲ. ನನ್ನನ್ನು ನಿಧಾನವಾಗಿ ಮಲಗಿಸಿ ಹಣೆಯ ಮೇಲಿದ್ದ ಬೆವರನ್ನು ಒರೆಸಿ. ಸ್ವಲ್ಪ ಬೇಸರದಿಂದಲೇ ಕೇಳಿದರು, “ಏನಾಯ್ತು…?”

….ನಾನು ಕೂಡ ಕಳೆದ ಹತ್ತು ವರ್ಷಗಳಿಂದ ಇದನ್ನೇ ಕೇಳುತ್ತಿದ್ದೇನೆ…. ಏನಾಯ್ತು?…. ಇದು ಏನಾಗಿ ಹೋಯಿತು…? ಎಲ್ಲಾ ಹೆಂಗಸರೂ ಬಯಸುವಂತೆ ಕೈ ತುಂಬಾ ದುಡಿಯುವ ಗಂಡ, ಗಂಡನ ಮನೆಯಲ್ಲಿ ಸಂತೃಪ್ತರಾಗಿ ಬದುಕುತ್ತಿರುವ ಹೆಣ್ಣುಮಕ್ಕಳು, ಆಳೆತ್ತರ ಇರುವ ಮಗ ನಾಹಿದ್ ಎಲ್ಲಾ ಇದ್ದು… ಶೂನ್ಯತೆ ನನ್ನನ್ನು ಆವರಿಸಿದ್ದು ಎಂದಿನಿಂದ? ಹಿಂದೊಮ್ಮೆ ನಿಜಾಮ್ ಕಹಿಯಾಗಿ, ಸರ್ಪವು ವಿಷ ಕಕ್ಕುವಂತೆ ಕಕ್ಕುತ್ತಾ ಹೇಳಿದ್ದರು. “ಸಬಾ…. ನಿಮ್ಮ ತಂಗಿಯರು ನಿಮಗಿಂತಾ ವಯಸ್ಸಿನಲ್ಲಿ ಎಷ್ಟೋ ಚಿಕ್ಕವರು. ಅವರೆಲ್ಲಾ ನಿಮ್ಮ ತಂದೆಯ ಸಾವನ್ನು ಎದುರಿಸಿದಷ್ಟು ಸಹಜವಾಗಿ, ತಾಳ್ಮೆಯಿಂದ ಗಂಭೀರವಾಗಿ ನೀವು ಎದುರಿಸಲಿಲ್ಲ, ನಿಮ್ಮ ಈ ಹುಚ್ಚಿನಿಂದ ನಮ್ಮ ಬದುಕುಗಳು ಏರುಪೇರಾಗಿವೆ…..”

“ಹ್ಹ… ಅಲ್ಲೇ ಇರೋದು… ನಿಜವಾದ ಅಂಶ ….ನಾನು ನಿಜಾಮ್‌ಗೆ ಉತ್ತರಿಸಲಿಲ್ಲ. ಏನನ್ನು ಉತ್ತರಿಸಲಿಲ್ಲ. ಅವರ ಮಾತು ಕೂಡ ಸರಿಯಾದದ್ದೆ ಉಳಿದವರಿಗೆ ಯಾರಿಗೂ ಆಬ್ಬಾನ ಆಗಲಿಕೆ ಅಷ್ಟೊಂದು ಬಾಧಿಸಲಿಲ್ಲ ಎನ್ನುವುದರ ಆಧಾರದ ಮೇಲೆ ನನ್ನೆದೆಯ ಆಳದ ಇಡೀ ಪ್ರಪಂಚವನ್ನು ಗಾಡಾಂಧಕಾರವನ್ನು ಹೊಡೆದೋಡಿಸಲು ಸಾಧ್ಯವೇ?

ನನಗೆ ಜನ್ಮ ಕೊಟ್ಟ ತಂದೆ… ಆಕ್ಷರ ಕಲಿಸಿದ ಗುರು.. ಬಾಲ್ಯಕಾಲದ ಸ್ನೇಹಿತ…. ಹದಿಹರೆಯದಲ್ಲಿ ಮಾರ್ಗದರ್ಶಕ, ವೈವಾಹಿಕ ಬದುಕಿನ ಸುಖವನ್ನು ಕಂಡು ಸಂತೋಷಿಸಿದವ, ಕೋಟಲೆಗಳಿಂದ ತಲ್ಲಣಿಸಿದಾಗ ಸದಾ ನನ್ನೆದುರು ಬಂದ ಅಭಯ ಹಸ್ತ… ನನ್ನ ಸ್ವಂತ ಉಸಿರು, ಭಾವ, ಎಲ್ಲಾ ಆಗಿದ್ದ ನನ್ನ ತಂದೆ… ಈಗ ನನಗೆ ಏನೂ ಅಲ್ಲ ಎಂದು ತಿಳಿದು ನಿರುಮ್ಮಳವಾಗಿ ಇರುವುದಾದರೂ ಹೇಗೆ…..

ಹೇ… ಅದೆಲ್ಲಾ ಇರಲಿ, ನನ್ನ ತಂದೆ…. ನಿಜವಾಗಿಯೂ ನಮಾಜ್ ಮಾಡುತ್ತಿದ್ದ… ಈ ವ್ಯಕ್ತಿ ಗೊಂಡಾರಣ್ಯದ ನಡುವಿನ ದಂಡ ಕಮಂಡೇಲಧಾರಿ ಯಷಿಯಾಗಿದ್ದಾದರೂ ಹೇಗೆ? ಜೀವನವಿಡೀ ಯಾವುದೇ ಜಾತಿ-ಭೇದವಿಲ್ಲದೆ ಹಲವರ ಕಷ್ಟಗಳಿಗೆ, ಹಲವರ ಬಳಿಗೆ ಬೇಕಾಗಿದ್ದ ನನ್ನ ತಂದೆ ಸಾಯುವಾಗ ಉದ್ದರಿಸಿದ್ದು ಕುರ್ ಆನ್‍ನ ಶ್ಲೋಕವನ್ನೇ. ಹಾಗಿದ್ದರೆ ಯಾವುದು ಸತ್ಯ ಯಾವ ನಂಬಿಕೆ ಸತ್ಯ?…. ಯಾವ ನಂಬಿಕೆ ಸರಿ?… ಅವರು ಹೇಳುತ್ತಿದ್ದರು, ಎಲ್ಲಾ ಕಾಲದಲ್ಲೂ, ಎಲ್ಲ ದೇಶಗಳಲ್ಲೂ, ಎಲ್ಲಾ ಜನಾಂಗದಲ್ಲೂ ದೇವರು ಪ್ರವಾದಿಗಳನ್ನು ಕಳುಹಿಸಿದ್ದಾನೆ, ಮನುಷ್ಯರೆದುರು ಸತ್ಯದ ದೀವಟಿಕೆಯನ್ನು ಹಿಡಿಯಲು ಸತ್ಯ ಯಾರೊಬ್ಬರ ಸ್ವತ್ತು ಅಲ್ಲ. ಮಾನವ ಜನಾಂಗ ಸೃಷ್ಟಿಯಾದಾಗಿನಿಂದ ಒಂದು ಲಕ್ಷ ಎಂಭತ್ತು ಸಾವಿರ ಪ್ರವಾದಿಗಳನ್ನು ಈ ಪ್ರಪಂಚಕ್ಕೆ ಕಳಿಸಿದ್ದೇನೆ ಎಂಬ ಉಲ್ಲೇಖವಿದೆ. ಕುರ್ ಆನ್‌ನ ಎಲ್ಲಾ ಪುಟಗಳನ್ನೂ ಅವಲೋಕಿಸಿದರೆ ಹಲವು ನೂರು ಪ್ರವಾದಿಗಳ ಹೆಸರು ನಮಗೆ ಕಂಡು ಬರುತ್ತದೆ. ಇನ್ನುಳಿದ ಸಹಸ್ರಸಹಸ್ರ ಪ್ರವಾದಿಗಳು ಯಾರು? ಎಲ್ಲಾ ಜನಾಂಗಗಳ ಪ್ರವಾದಿಗಳೂ ಎಲ್ಲರಿಗೂ ಮಾನ್ಯರೇ? ಹಾಗಾದಲ್ಲಿ…. ಈ ರಕ್ತಪಾತಗಳೇಕೆ? … ಈ ದ್ವೇಷಗಳೇಕೆ…… ಸತ್ಯದ ಸ್ವರೂಪವನ್ನು ಒಪ್ಪಿಕೊಳ್ಳಲು ನಮಗೆ ಅಹಂಕಾರಗಳೇಕೆ?… ಸತ್ಯವನ್ನು ನಾವು ಯಾಕೆ ನಿರಾಕರಿಸ್ತೀವಿ? ನಮ್ಮ ಸ್ವಾರ್ಥಗಳಿಗೂ, ನಮ್ಮ ಲಾಭಕ್ಕೋ ನಮ್ಮ ಅಹಂನ ತೃಪ್ತಿಗೋ…..?

ನಾನು ನಿಧಾನವಾಗಿ ಮಂಚದಿಂದ ಇಳಿದೆ, ಹಜಾರಕ್ಕೆ ಬಂದೆ. ಮುಂಭಾಗದ ಕಿಟಕಿಯನ್ನು ತೆರೆದೆ. ಬೆಳಗಿನ ಜಾವ ನಾಲಕ್ಕು ಗಂಟೆ. ಸ್ವಲ್ಪವೇ ಕಚಗುಳಿ ಇಟ್ಟಂತೆ, ಸ್ವಲ್ಪ ಮೈಜುಮ್ಮೆನಿಸುವಂತೆ, ತಂಗಾಳಿ ಮೆಲುವಾಗಿ ಅಡಿ ಇಟ್ಟಿತು. ಈ ಹಾದಿ.. ಈ ನನ್ನ ಮುಂದಿರುವ ನೇರವಾದ ಡಾಂಬರು ರಸ್ತೆಯ ಮೇಲಿನಿಂದ ನೂರಾರು ಜನರು ಹೆಗಲು ಕೊಡುತ್ತಾ ನನ್ನ ತಂದೆಯನ್ನು ನನ್ನಿಂದ ಅಗಲಿಸಿ, ಜನರು ಹೊತ್ತೊಯ್ದಿದ್ದು, ಮಲ್ಲಿಗೆ ಹೂವಿನ ಕರ್ಪೂರದ, ಆಬೀರ್‌ನ ಸುಗಂಧದ ನಡುವೆ.

…ನಾನು ಪಕ್ಕಕ್ಕೆ ಸರಿದ ಕುರ್ಚಿಯ ಮೇಲೆ ಕುಳಿತೆ. ಬಳಲಿಕೆ ಎನಿಸಿತು. ಆ ದಿನದಿಂದ ನನಗೆ ಬಳಲಿಕೆಯೇ… ಒಂದಲ್ಲ ಒಂದು ಕಾಯಿಲೆಯೇ…. ನಿಜಾಮ್‌ಗೆ ಬೇಸರ ಬರುವಷ್ಟು ಕಾಯಿಲೆಗಳು, ಡಾಕ್ಟರಂತೂ ಏನನ್ನೂ ಕಂಡುಹಿಡಿಯದೆ, ನನ್ನ ರೋಗಕ್ಕೆ ಯಾವುದೇ ಹೆಸರನ್ನಿಡದೆ, ಔಷಧೋಪಚಾರವನ್ನಂತೂ ನೀಡುತ್ತಲೇ, ಆತ್ಯಂತ ನಿರ್‍ದಾಕ್ಷಿಣ್ಯವಾಗಿ, “ಏನೂ ಕಾಯಿಲೆ ಇಲ್ಲ….. ಮಂಟಲ್‌ ವರಿ ಇದೆ.. ನೀವೇ ಅದರಿಂದ ಹೊರಗೆ ಬರಬೇಕು” ಎಂದು ಕೈಚಲ್ಲಿದ್ದರು.

…ಯಾವುದಾದರೂ ಹೊರಗೆ ಬರಬೇಕು? ಆಬ್ಬಾಜಾನ್ ಈ ಗಳಿಗೆಯಲ್ಲಿ ನೀವು ನನಗೆ ಯಾವ ಮಾರ್ಗದರ್ಶನ ನೀಡುತ್ತಿದ್ದಿರಿ…? ಅದೇ…. ಆ ದಿನ ನಾವಿಬ್ಬರೂ ಕೂಡಿಯೇ ಆಸ್ಪತ್ರೆಗೆ ಹೋಗಿದ್ದೆವು. ಸಲಾಮ್ ಭಾಯಿಗೆ ಕಾಲಿನ ಮೂಳೆ ಮುರಿದಿತ್ತಲ್ಲ…. ಆಗ…. ಹಾಗೆಯೇ ಬರುತ್ತಿರುವಾಗ ಒಬ್ಬ ಎಳೆಯ ಹುಡುಗಿ ಅಂದರೆ ಸುಮಾರು ಹದಿನಾರು ವರ್ಷ ಇರಬಹುದು… ಅವಳನ್ನು ನೋಡಿದೆವು. ಅವಳಿಗೆ ಮೂತ್ರಪಿಂಡಗಳ ಕಾಯಿಲೆ ಇತ್ತು. ಎಲ್ಲಾ ಆಸ್ಪತ್ರೆಗಳಿಂದಲೂ ನಕಾರಾತ್ಮಕ ಉತ್ತರ ಸಿಕ್ಕಿದ ಮೇಲೆ ಕೊನೆಯದಾಗಿ, ಅವಳ ಸಾವನ್ನು ಎದುರುನೋಡಲು ಅವಳ ಕುಟುಂಬದವರು ಈ ಆಸ್ಪತ್ರೆಯಲ್ಲಿ ಅವಳೊಡನಿದ್ದರು. ಅವಳು ತುಂಬಾ ಹಿಂಸೆಯಲ್ಲಿದ್ದಳು. ಮಲಗಿಸಿದರೆ, ಏಳಿಸಿ ಎನ್ನುತ್ತಿದ್ದಳು, ಏಳಿಸಿದರೆ…. ಮಲಗಿಸಿ ಎನ್ನುತ್ತಿದ್ದಳು. ಅವಳ ತಾಯಿಯ ಸ್ಥಿತಿಯಂತೂ ವರ್ಣಿಸಲು ಸಾಧ್ಯವೇ ಇಲ್ಲ. ಜೀವಂತವಾಗಿ ಅವಳ ಕರುಳಿಗೆ ಬೆಂಕಿ ಇಟ್ಟಂತಾಗಿತ್ತು. ನನಗೂ ಕಣ್ಣೀರು ತಡೆಯಲಾಗಲಿಲ್ಲ. ಅಲ್ಲೇ ಮಂಚದ ಬಳಿಯಲ್ಲೇ ಹುಡುಗನೊಬ್ಬ ನಿಂತಿದ್ದ. ಅವನೂ ತುಂಬಾ ದುಃಖಿತನಾಗಿದ್ದ. ಹುಡುಗಿ ಮಲಗಿದ್ದಲ್ಲಿಂದ ಕೈಚಾಚಿದಳು. ಅವಳ ತಾಯಿ ಕೈ ಹಿಡಿದಾಗ, ರಮೇಶ ಎಂದೇನೋ ತೊದಲಿದಳು. ಬಹುಶಃ ಆ ಹುಡುಗನ ಹೆಸರಿರಬೇಕು. ಅವನು ಹತ್ತಿರ ಬಂದ. ಅವಳು ಕೈ ಹಿಡಿದಳು. “ಕೊನೆಗೂ….ನಿಮ್ಮಿಬ್ಬರ ಮದುವೆಯಾಗಲಿಲ್ಲವಲ್ಲೋ…” ಎಂದಳು. ಅವಳ ಕಣ್ಣುಗಳು ಇನ್ನಷ್ಟು ಗಾಢವಾದವು. ನನ್ನ ಕಣ್ಣುಗಳು ತುಂಬಿ ಹರಿದು ಹೋದವು. ನನಗೆ ಅಲ್ಲಿ ನಿಲ್ಲಲಾಗಲಿಲ್ಲ. ಆಸ್ಪತ್ರೆಯ ಹೊರಗಡೆ ವಿಶಾಲವಾದ ಮರದಡಿಯಲ್ಲಿದ್ದ ಕಲ್ಲು ಬೆಂಚಿನ ಮೇಲೆ ನಾವಿಬ್ಬರೂ ಕುಳಿತೆವು. ನಾನಿನ್ನೂ ಕಣ್ಣೀರು ಒರೆಸಿಕೊಳ್ಳುತ್ತಿದ್ದೆ. ಆಪ್ರಯತ್ನವಾಗಿ ಹೇಳಿದೆ “ಹೀಗಾಗಬಾರದಿತ್ತು.”

“ನಾವು ಬಯಕೆಗಳಿಗೆ ತಕ್ಕಂತೆ ಬದುಕುವುದು ಸುಲಭ. ಆದರೆ, ಜೀವನ ನಮ್ಮ ಆಳತೆಗೆ ತಕ್ಕಂತೆ ಕತ್ತರಿಸಿ ಹೊಲಿಯುವ ಬಟ್ಟೆಯಲ್ಲ. ಸಬಾ… ನೀನು ಅರ್ಥ ಮಾಡಿಕೋ ಬೇಕು ಮಗಳೇ…. ಬದುಕಿನ ಸುಖಗಳನ್ನು ನಾವು ಅನುಭವಿಸುವಂತೆ ದುಃಖಗಳನ್ನೇಕೆ ಅನುಭವಿಸುವುದಿಲ್ಲ? ಸಿಹಿಯನ್ನು ತಿಂದು ಸಂತೋಷ ಪಡುವರು ಕಹಿ ಒಂಚೂರು ನಾಲಿಗೆಗೆ ತಾಕಿದ ಕೂಡಲೇ ಸಿಂಡರಿಸುವುದೇಕೆ? ಅದನ್ನು ನಿರಾಕರಿಸುವುದೇಕೆ? ಅದನ್ನು ಅನುಭವಿಸಲೇಬೇಕಾದ ಅನಿವಾರ್ಯತೆ ಒಂದಡೆ… ಆದರೆ ನಿರಾಕರಣೆ ಇನ್ನೊಂದಡೆ…. ಇದರಿಂದ ಹೆಚ್ಚು ಒತ್ತಡ ಮತ್ತು ಹೆಚ್ಚು ದುಃಖ…”

“ಹಾಗೆಂದರೆ ಏನು ಅಬ್ಬಾ ಜಾನ್?” ಆ ಹುಡುಗಿಯ ಸಂಕಟ ನನ್ನಲ್ಲಿ ರಚ್ಚು ಮೂಡಿಸಿತ್ತು.. “ಅವಳು ಅಷ್ಟೊಂದು ಸಂಕಟದಲ್ಲಿ ಸಾಯುತ್ತಿರುವುದು ಸಂತೋಷವಾಗಿ ನಗುನಗುತ್ತಾ ಸಾಯಬೇಕೆ? ಅವಳ ತಾಯಿ ಸಿಹಿ ಹಂಚಬೇಕೆ?… ನಿಮ್ಮ ಮಾತೇ ನನಗರ್ಥವಾಗುವುದಿಲ್ಲ” ಎಂದೆ. ಅವರು ಮುಗುಳು ನಕ್ಕರು. ಸಬಾ… ಬದುಕು ಅಗಾಧವಾದುದು. ನಿರಂತರವಾದುದು, ನಮ್ಮ ಪಾತ್ರ ನಿರ್ವಹಿಸುವುದಷ್ಟಕ್ಕೆ ಮಾತ್ರ ನಾವು ಸೀಮಿತರು. ಹಾಗಿದ್ದರೆ…. ಯೋಚನೆ ಮಾಡು… ಸಾವು ಬದುಕಿನ ಅಂತ್ಯವೋ ಅಥವಾ ಆರಂಭವೋ.

ನನಗೆ ತಬ್ಬಿಬ್ಬಾಯಿತು.

“ಸಾವು ಬದುಕಿನ ಅಂತ್ಯ”

“ಹಾಗಾದರ… ಎಲ್ಲಾ ಧರ್ಮಗಳೂ ಒಂದಲ್ಲ ಒಂದರ್ಥದಲ್ಲಿ ಪ್ರತಿ ಪಾದಿಸುವ ಮೋಕ್ಷ ಅಥವಾ ಮುಕ್ತಿಯ ಆರಂಭ ಯಾವುದು…?”

“ಸಾವು…” ಎಂದೆ ನನಗರಿವಿಲ್ಲದಂತೆ.

ಅಥವಾ…ಹೀಗೇ ಯೋಚಿಸೋಣ, ಧರ್ಮಗಳಲ್ಲಿ ನಂಬಿಕೆ ಇಲ್ಲದವರಿಗೆ ಸಾವೆಂದರೆ ಏನು?

“ಬದುಕಿನ ಕೊನೆ” ಅದು ಯಾಕೋ ಜಟಿಲವಾಯಿತು.

ಅವರು ತುಸುವೇ ನಕ್ಕರು. “ನೋಡು ಮಗಳೇ…..ಸಾವು ಬದುಕಿನ ಆರಂಭವೋ…. ಅಂತ್ಯವೋ… ಇದೊಂದು ಜಿಜ್ಞಾಸೆ. ಅದರ ಧಾರ್ಮಿಕತೆಯ ಬಗ್ಗೆ ನಾನು ಚರ್ಚಿಸುವುದಿಲ್ಲ, ಆದರೆ… ಸಾವು ಎನ್ನುವುದು ನಾವುಗಳೆಲ್ಲಾ ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯ ವಾಸ್ತವತೆಯಲ್ಲವೇ?”

“ಹೌದು…..”

“ಹಾಗಿದ್ದರೆ….ಸಾವನ್ನು ಎದುರಿಸಬೇಕು ಎಂಬ ಭೀತಿ ನಮಗೆ ಯಾಕೆ….?

“ಅಂದರೆ…ಸಾವನ್ನು ಬರಮಾಡಿಕೊಳ್ಳಬೇಕು ಎಂಬುದು ನಿಮ್ಮ ಅಭಿಪ್ರಾಯವೇ?

“ಇಲ್ಲ ಸಾವನ್ನು ಅಪೇಕ್ಷಿಸಬಾರದು. ಆದರೆ ಸಾವು ಶತಃಸಿದ್ಧ. ಒಂದಲ್ಲ ಒಂದು ದಿನ ನಾವು ಅದರೊಡನೆ ಮುಖಾಮುಖಿಯಾಗುತ್ತೇವೆ. ಸಾವನ್ನು ಎದುರಿಸಬೇಕು ಎಂಬುದು ನಮಗೆ ಬದುಕಿನಲ್ಲಿ ಸಿಗುವ ಪ್ರಿಪರೇಷನ್. ನಾವು ಎದುರಿಸಬೇಕು ಎಂಬರ್ಥದಲ್ಲಿ ಸಿದ್ದವಾಗುವುದು ಯುದ್ದದಲ್ಲಿ; ಶತ್ರುಗಳೊಡನೆ ಸಾವು ನಮಗೆ ಸ್ನೇಹಿತನೂ ಅಲ್ಲ, ಶತ್ರುವೂ ಅಲ್ಲ, ಅಂತ್ಯವೂ ಅಲ್ಲ, ಆರಂಭವೂ ಅಲ್ಲ. ಅದು ಕೂಡ ಬದುಕಿನಂತೆ ಒಂದು ಪ್ರಕ್ರಿಯೆ. ಅದನ್ನು ನಾವು ಎದುರಿಸಲು ಸಿದ್ಧತೆ ಮಾಡಿಕೊಳ್ಳಬೇಕಾದ್ದಿಲ್ಲ. ಬದಲಿಗೆ ಅದನ್ನು ಅನುಭವಿಸಬೇಕು.”

ಸುತ್ತಲಿನ ವಾತಾವರಣದ ನೀರವತೆಯೊಂದಿಗೆ ನಾನೂ ಸ್ಥಬ್ಧಳಾದೆ. ಇದೀಗ…. ಈ ಕ್ಷಣದಲ್ಲಿ ಸಾವು ಬಂದರೆ… ನಾನು ಎದುರಿಸುವುದಾದರೂ…. ಆಥವಾ ಅನುಭವಿಸುವುದಾದರೂ… ಹೇಗೆ? ಬಹುಶಃ ನನ್ನ ಆಲೋಚನೆಗಳನ್ನು ಅರ್ಥಮಾಡಿಕೊಂಡವರಂತೆ, ಅಬ್ಬಾಜಾನ್ ಹೇಳಿದರು.

“ಮಗಳೇ… ‘ಮಹಾತ್ಮರ ಗುಟ್ಟು ಮರಣದಲ್ಲಿ ನೋಡು,’ ಎಂಬ ಮಾತನ್ನು ಕೇಳಿದೀಯಲ್ಲ. ಬದುಕಿನ ಅನುಭವಗಳಿಗೆ ತೆರೆದುಕೊಂಡಂತೆ, ಸಾವಿನ ಅನುಭವಗಳಿಗೂ ತೆರೆದುಕೊಳ್ಳುವ ಮನಸ್ಥಿತಿ ಸುಲಭವಾಗಿ ಬರುವುದಿಲ್ಲ. ಬದುಕನ್ನು ನೋಡುವ ನಿನ್ನ ಮನೋಭಾವ ಸಾವಿಗೆ ಭೂಮಿಕೆಯನ್ನು ನೀಡುತ್ತದೆ. ಬದುಕಿನಲ್ಲಿ ನೀನು ಅನೇಕ ಆವರಣಗಳೊಳಗೆ, ಮುಸುಕಿನೊಳಗೆ ನಿನ್ನನ್ನು ಮರೆಮಾಡಿಕೊಳ್ಳಬಲ್ಲೆ, ಸಾವು ನಿನ್ನ ನೈಜತೆಯನ್ನು, ನಿನ್ನ ಮನಃಸ್ಥಿತಿಗಳನ್ನು ಅನಾವರಣಗೊಳಿಸುವ ಪ್ರಕ್ರಿಯ…..”

ಅಷ್ಟರಲ್ಲೇ ವಾರ್ಡಿನಿಂದ ಎದೆಕರುಗಿಸುವಂತಹ ಸಾಮೂಹಿಕ ರೋದನ ಕೇಳಿ ಬಂದಿತು. ವಾಪಸ್ಸು ಹೋಗಿ ಆ ಹುಡುಗಿಯನ್ನು ನೋಡುವ ಮನಸ್ಸಾಗಲಿಲ್ಲ. ಮೆಲ್ಲನೆ ನಾವಿಬ್ಬರೂ ಮನೆಯ ಕಡೆ ಹೆಜ್ಜೆ ಹಾಕಿದೆವು.

….ಕುರ್ಚಿಯಲ್ಲಿ ಕುಳಿತಂತೆ ಬಹುಶಃ ನಾನು ಕಣ್ಣು ಮುಚ್ಚಿಕೊಂಡಿರಬೇಕು. ನಿಜಾಮ್ ಬಂದು ಹಾಲಿನ ಲೈಟು ಹಾಕಿದಾಗ ನಾನು ಕಣ್ತೆರೆದೆ. “ಈಗಾಗಲೇ…. ಟೈಮಾಗಿದೆಯಲ್ಲಾ….. ಇನ್ನೇನು ಅರ್ಧಗಂಟೇಲಿ.. ಬೆಂಗಳೂರಿಗೆ ಬಸ್ಸು ಹೊರಡುತ್ತೆ….. ಹೊರಡೋದಿಲ್ವ..? ಎಂದರು. ನಾನು ಹಾಗೆಯೇ ಕುಳಿತಿದ್ದನ್ನು ನೋಡಿ, “ಯಾಕ ಹುಷಾರಿಲ್ವ..?” ಎಂದು ಹತ್ತಿರ ಬಂದರು. ನಾನು ಇತ್ತೀಚೆಗೆ ನನ್ನ ಕಾಯಿಲೆಯ ಬಗ್ಗೆ ಮಾತೇ ಆಡುವುದಿಲ್ಲ. ಬೇರೆಯವರಿಗೂ ಆ ಬಗ್ಗೆ ಮಾತನಾಡಲು ಆಸ್ಪದವೇ ಕೊಡುವುದಿಲ್ಲ. ನಿಜಾಮ್ ನನ್ನ ಸಮೀಪ ಬರುವ ಮೊದಲೇ ನಾನು ಬಚ್ಚಲುಮನೆಯಲ್ಲಿದ್ದೆ.

ನಾಹಿದ್ ಆಟೋ ತಂದು ನಿಲ್ಲಿಸಿದ. ಇಷ್ಟು ಬೆಳಿಗ್ಗೆಯೇ ಯಾವ ಆಟೋದವನು ಸಿಕ್ಕಿದನೋ… ಆಟೋದಲ್ಲಿ ಕಾಲಿಡುವ ಮೊದಲು ಯಾಕೋ ಒಮ್ಮೆ ಹಿಂದಿರುಗಿ ನೋಡಿದೆ. ಕಾಂಪೌಂಡು, ಅದರೊಳಗೆ ಎಲ್ಲೆಲ್ಲೂ ಕಾಣುತ್ತಿದ್ದ ಹೂವಿನ ಗಿಡಗಳು, ಅದರ ನಂತರ ತಲೆ‌ಎತ್ತಿ ನಿಂತ ಇಟ್ಟಿಗೆ ಬಣ್ಣದ “ಬಟ್ಟಡಿಕೆ”ಯಂತಹ ಒಪ್ಪವಾದ ಮನೆ, ಯಾಕೋ ಗಂಟಲುಬ್ಬಿ ಬಂದಿತು. ಹಾಗೆಯೇ ಕಣ್ಣು ಹಾಯಿಸಿದೆ. ಮುಂಭಾಗದ ಕಾಂಪೌಂಡಿನ ಗೇಟಿನ ಬಳಿ, ರಾತ್ರೆಯುಡುಗೆಯಲ್ಲಿ ನಿಂತಿದ್ದ ನಿಜಾಮ್, ನನ್ನ ದೀರ್ಘ ದೃಷ್ಟಿಯನ್ನು ಅವರು ಗಮನಿಸಿರಬಹುದು. ಗೇಟನ್ನು ತೆರೆದು, ಆಟೋ ಬಳಿ ಬಂದು, ಬಹುಮೆಲ್ಲಗೆ “ಆರೋಗ್ಯದ ಕಡೆ ಜೋಪಾನ” ಎಂದು ಹೇಳಿ ಆಟೋ ಹತ್ತಿಸಿದರು. ಬಸ್ ಸಿದ್ಧವಾಗಿತ್ತು. ನಾಹಿದ್ ನನ್ನನ್ನು ಕಿಟಕಿಯ ಬಳಿ ಕೂರಿಸಿ, ಗಾಜನ್ನೆಳೆದು, ನಾನು ಹೊದ್ದಿದ್ದ ಶಾಲನ್ನು ಇನ್ನಷ್ಟು ಸುತ್ತಿ ಪಕ್ಕದಲ್ಲಿ ಕುಳಿತ. ಡೀಜಲ್ ವಾಸನೆಗಿರಬಹುದು…. ಹೊಟ್ಟೆ ತೊಳಿಸಿದಂತಾಗಿ ಒಮ್ಮೆಲೆ ಬಾಯಲ್ಲಿ ನೀರುಕ್ಕಿತು. ಗಾಜನ್ನು ಸರಿಸಲು ಪ್ರಯತ್ನ ಪಟ್ಟೆ, ಯಾಕೋ ಗಾಜು ಒಂಚೂರು ಅಲುಗಾಡಲಿಲ್ಲ. ನನ್ನ ಪರದಾಟ ನೋಡಿ, ನಾಹಿದ್ ಕಿಟಕಿಯ ಗಾಜು ಸರಿಸಿದ. ಬಾಯಲ್ಲಿದ್ದ ನೀರೆಲ್ಲಾ ಉಗುಳಿದ ಮೇಲೆ ಸಮಾಧಾನವೆನಿಸಿತು. ತಲೆಯನ್ನು ಹಿಂದಕ್ಕೆ ಆನಿಸಿ, ಕಣ್ಮುಚ್ಚಲು ಪ್ರಯತ್ನಿಸಿದೆ. ಬಸ್ಸು ನಾಗಾಲೋಟದಿಂದ ಓಡುತಿತ್ತು.

….ಬದುಕಿನ ಈ ವೇಗದಲ್ಲಿ ಯಾರಿಗೆ ಪುರುಸೊತ್ತಿದೆ. ….ಅನಿವಾರ್‍ಯ. ವಾಸ್ತವತೆಯ ಪ್ರತಿಕ್ಷಣವನ್ನೂ ಅನುಭವಿಸಲು? “ಸಾವು ನಮ್ಮ ಸಂಪೂರ್ಣ ಶರಣಾಗತಿಯನ್ನು ನಿರೀಕ್ಷಿಸುತ್ತದೆ. ನಿನ್ನಲ್ಲಿ ಕಿಂಚಿತ್ತಾದರೂ ‘ರೆಸಿಸ್ಟೆನ್ಸ್’ ಇದ್ದಲ್ಲಿ, ವಿರೋಧಾಭಾಸ ಉಂಟಾಗುತ್ತದೆ. ಈ ಜಗ್ಗಾಟದಲ್ಲಿ ಸಾವಿನ ದರ್ಶನ ನಮಗಾಗುವುದಿಲ್ಲ. ಇದು ಯಾವಾಗ ಸಾಧ್ಯವೆಂದರೆ ಬದುಕಿನ ಎಲ್ಲಾ ಮಜಲುಗಳನ್ನು ಪ್ರಜ್ಞಾಪೂರ್ವಕವಾಗಿ ಅನುಭವಿಸಿದ್ದರೆ ಮಾತ್ರ ಸಾಧ್ಯ….”

ನಾನು ಪಕ್ಕನೆ ನಕ್ಕುಬಿಟ್ಟಿದ್ದ. “ಅಬ್ಬಾ… ನಿಮ್ಮ ಮಾತು ತುಂಬಾ ವಿಚಿತ್ರ, ಚಾಕೋಲೇಟನ್ನು ನಾನು ಚಪ್ಪರಿಸುವಂತೆ, ಗಿಳಿಮೂತಿ ಮಾವಿನಕಾಯಿಯ ಹುಳಿಯನ್ನು ಸವಿಯುವಂತ, ರೇಷ್ಮೆ ಸೀರೆಯ ನುಣುಪಾದ ಅನುಭವವನ್ನು ಹೆಗಲಿಗೇರಿಸುವಂತ…. ಇನ್ನು ಯಾವುದರಂತೆ….. ನಾವು ಸಾವನ್ನು ಅನುಭವಿಸಬೇಕು….?

“ಸಬಾ…. ಈ ಬದುಕಿನಲ್ಲಿ ನಾವು ಯಾವುದನ್ನೂ ಅನುಭವಿಸಿತ್ತಿದ್ದೇವೆ? ಬೆಳಿಗ್ಗೆ ಏನು ತಿಂಡಿ ತಿಂದೆವು ಎಂಬುದು ನಮಗೆ ನೆನಪಿರುವುದಿಲ್ಲ. ಟಿ.ವಿ ನೋಡುತ್ತಲೋ ರೇಡಿಯೋ ಕೇಳುತ್ತಲೋ, ಆ ದಿನದ ಕೆಲಸದ ಬಗ್ಗೆಯೋ ಯೋಚನೆ ಮಾಡುತ್ತಾ ಹೊಟ್ಟೆ ತುಂಬಿಸಿಕೊಂಡಿರುತ್ತೇವೆ. ಆ ತಿಂಡಿಯನ್ನು ಮುಟ್ಟಿದ ಸ್ಪರ್ಶದ ಅನುಭವವಾಗಲೀ ಅದರ ಕಂಪನ್ನ ಸವಿದದ್ದಾಗಲೀ ಅದರ ರುಚಿಯ ಬಗ್ಗೆಯಾಗಲೀ ನಾವು ಅತ್ಯಂತ ಅಪ್ರಜ್ಞಾ ಪೂರ್ವಕವಾದ ಪ್ರಯತ್ನವನ್ನು ಮಾಡಿರುತ್ತೇವೆ. ಆ ಹೊತ್ತಿಗೆ, ಆ ಗಳಿಗೆಯಲ್ಲಿ, ಆ ವಿಷಯದಲ್ಲಿ ನಾವು ಮಗ್ನರಾಗದೆ ಮತ್ತಲ್ಲೋ ಹಾರಿ ಹೋಗಿರುತ್ತೇವೆ. ದೇಹದ ಮನಸ್ಸಿನ ಭಾವದ ಸಂಪರ್ಕ ತಪ್ಪಿಹೋಗಿರುತ್ತದೆ. ಈ ಎಲ್ಲಾ ಸಂಪರ್ಕದೊಡನೆ, ನಮ್ಮೆಲ್ಲಾ ಭಾವ-ಬುದ್ದಿಯೊಡನೆ ಸಾವಿನ ಪ್ರಕ್ರಿಯೆಯೊಡನೆ ಮಿಳಿತವಾಗುವುದಷ್ಟೇ ನಮ್ಮ ಕೆಲಸ”.

ನಾನು ಮತ್ತೊಮ್ಮೆ ನಗುತ್ತಾ ತಲೆಯಾಡಿಸಿದೆ. “ನನಗೆ ಇನ್ನೂ ಗೊತ್ತಾಗಲಿಲ್ಲ….ಬಿಡಿ….”

…ಮತ್ತೊಮ್ಮೆ ಬಾಯಲ್ಲಿ ನೀರು ಉಕ್ಕಿ ಬಂದಿತು. ಹೊಟ್ಟೆಯ ಆಳದಲ್ಲಿ ಬಗಿಯಲಾರಂಭಿಸಿತು. ಇಷ್ಟೊಂದು ನೀರು ನನ್ನ ಹೊಟ್ಟೆಯೊಳಗಿಂದ ಉಕ್ಕಲು ಹೇಗೆ ಸಾಧ್ಯ?… ನಾನು ಹೂಳಯೇ… ನದಿಯೇ… ಚಿಲುಮೆಯೇ…. ಮುಖಕ್ಕೆ ರಾಚುತ್ತಿದ್ದ ಗಾಳಿಯನ್ನು ನೋಡಿ, ನಾಹಿದ್ ಕಿಟಕಿಯನ್ನು ಮುಚ್ಚಿದ ಎಂದೆನಿಸುತ್ತದೆ. ಮೈಯೆಲ್ಲಾ ಬೆವರಿದಂತಾಗಿ, ಕಿವಿಯ ಹಿಂಬದಿಯಿಂದ ಬೆವರು ಹರಿಯಲಾರಂಭಿಸಿತು. ಶಾಲು ತಂತಾನೇ ಕಳಗೆ ಬಿದ್ದಿತ್ತು. ನಾನು ನಾಹಿದ್‌ನ ಹೆಗಲಿನತ್ತ ವಾಲಿದೆ. ಅವನು ತನ್ನ ಕರವಸ್ತ್ರದಿಂದ ನನ್ನ ಹಣೆಯ ಬೆವರನ್ನು ಒರೆಯಿಸುತ್ತಿದ್ದ.

…ಈ ಮಾತು ನಿನಗೇ ಹೆಚ್ಚು ಅರ್ಥವಾಗಬೇಕು ಮಗಳೇ… ನೋಡು ನಿನಗೆ ಹೆರಿಗೆ ನೋವು ಬರುತ್ತದೆ. ನೋವಿನ ಆ ವಿಸೃತವಾದ ಅಲೆಗಳಿಂದ ನೀನು ತಪ್ಪಿಸಿ ಕೊಳ್ಳುವುದಿಲ್ಲ. ನೋವು ಬಾರದೆ ಇರಲಿ ಎಂದು ಬಯಸುವುದಿಲ್ಲ. ಹೌದೋ…. ಅಲ್ಲವೋ…. ನೋವು ಬರಲಿ…. ಆಳವಾದ ನೋವು ಬರಲಿ ಎಂದು ಬಯಸುತ್ತೀಯ. ಏಕೆಂದರೆ….. ಪ್ರತಿಯೊಂದು ನೋವಿನ ಆಳ ವಿಸ್ತಾರಗಳಲ್ಲೂ ನಿನ್ನ ಮಗುವಿನ ಜನನದ ನಿರೀಕ್ಷೆ ನಿನಗಿರುತ್ತದೆ. ಈ ನೋವಿನ ಪ್ರಕ್ರಿಯೆಯನ್ನು ನೀನು ವಿರೋಧಿಸುವುದಿಲ್ಲ. ಬದಲಿಗೆ…. ಆ ಪ್ರಕ್ರಿಯೆಯಲ್ಲಿ ನಿನ್ನ ದೇಹ, ಬುದ್ಧಿ, ಭಾವದೊಂದಿಗೆ ಒಂದಾಗುತ್ತೀಯಾ. ನೋವಿನ ಪ್ರತಿಯೊಂದು ಕ್ಷಣವನ್ನು ನೀನು ಅನುಭವಿಸುತ್ತೀಯ. ಮಗುವಿನ ಜನ್ಮವಾದ ಕೂಡಲೇ ನಿನ್ನ ನೋವುಗಳು ಮಾಯವಾಗುತ್ತದೆ…

ಆದರೆ ಈ ನೋವುಗಳು ದೇಹದ ಅಂಗುಲ ಅಂಗುಲಕ್ಕೂ ವ್ಯಾಪಿಸಿರುವ ರಕ್ತದ ಪ್ರತಿಹನಿಯಲ್ಲಿ ತುಂಬಿ ಪ್ರತಿಯೊಂದು ಮಿಡಿತದೊಂದಿಗೂ ಇಡೀ ದೇಹವನ್ನೇ ವ್ಯಾಪಿಸುತ್ತಿರುವ ನೋವುಗಳು ಮಣ ಮಣ ಭಾರವಾಗುವ ಅವಯವಗಳು ಈ ನೋವುಗಳಿಂದ ನನಗೆ ಬಿಡುಗಡೆಯ ಇಲ್ಲವೇ?

…ತಲೆ ಬುರುಡೆಯೊಳಗೆ “ಜುಂ” ಎಂದು ಚಳಿ ಆರಂಭವಾಯಿತು. ಹಣೆಯ ಎರಡೂ ಬದಿಯಲ್ಲಿ ಸಿಡಿಯಲಾರಂಭಿಸಿತು. ಇದನ್ನು ಹೇಗೆ ನಿಗ್ರಹಿಸಲಿ?… ಹೇಗೆ ಅನುಭವಿಸಲಿ… ಬೆವರಿನಲ್ಲಿ ಸ್ನಾನ ಮಾಡಿದಂತಾಗಿ ಕೂದಲು ತೊಪ್ಪೆಯಾಗಿ ಅಂಟಿಕೊಂಡಿತು. ನೆತ್ತಿಯ ಬುಡದಿಂದ ತಣ್ಣನೆಯ ಬೆವರು ಬೆನ್ನಿನಗುಂಟ ಹರಿಯತೊಡಗಿತ್ತು. ಆ ಹೊತ್ತಿನಲ್ಲಿ ಅರಿವಾಯಿತು. ನಾಲಿಗೆಯ ದ್ರವ ಆರಿಹೋಗಿ ನಾಲಿಗೆ ದಪ್ಪನಾಯಿತು. ಇದೇನಾಗಿತ್ತು ನನಗೆ? ಬಹುಶಃ ಆಬ್ಬ ಹೇಳಿದಂತೆ ನನ್ನ ಸಾವು ಬಂದಿದೆ. ನನ್ನೆದುರಿಗೆ ನಿಂತಿದೆ. ತನ್ನ ಬಾಹುಗಳಲ್ಲಿ ನನ್ನನ್ನು ಎದೆಗವಚಿಕೊಳ್ಳಲಿದೆ. ನಾನು ಇದನ್ನು ಅರಿಯುವ ಸ್ಥಿತಿಯಲ್ಲಿದ್ದೇನೆಯೇ? ಅದರೊಡನೆ ಲೀನವಾಗುವಂತಹ ತಾಧ್ಯಾತ್ಮತೆ ನನ್ನಲ್ಲಿ ಮೂಡಿದೆಯೇ?

…ನಾಹಿದ್ ಮಡಿಲಲ್ಲಿದ್ದ ತನ್ನ ಪುಟ್ಟ ಕೈಗಳನ್ನು ಮಡಿಚಿ ಹಿಡಿದಿದ್ದ. ಏನಿದೆ ಆ ಪುಟ್ಟ ಅಂಗೈಗಳನ್ನು ನನ್ನಂತಹ ತಾಯಂದಿರ ಇಡೀ ಪ್ರಪಂಚವೇ ಮಕ್ಕಳ ಪುಟ್ಟ ಕೈಗಳಲ್ಲಿ ಅಡಗಿರುತ್ತದೆ. ನಾಹಿದ್ ಹುಟ್ಟುವಾಗಲೂ ನಾನು ಹೋರಾಡಿ ಬಸವಳಿದಿದ್ದೆ. ಇಡೀ ರಾತ್ರಿ ಆಬ್ಬ ಲೇಬರ್ ವಾರ್ಡ ಹೊರಗಡೆ ನಿಂತೇ ಕಳೆದಿದ್ದರು. ಏಕೆಂದರೆ ನನ್ನ ಪ್ರತಿಯೊಂದು ಕೂಗಿಗೂ ಕಿರಿಚಾಟಕ್ಕೂ ಆರ್ತತೆಗೂ ಅವರು ಉತ್ತರ ನೀಡುತ್ತಿದ್ದರು. ಹೊರಗಿನಿಂದಲೇ ಧೈರ್ಯ ತುಂಬುತ್ತಿದ್ದರು. ನಾಹಿದ್ ಹುಟ್ಟಿದ ಆ ಕ್ಷಣದಲ್ಲಿ ನಾನು ಪ್ರಜ್ಞಾಹೀನಳಾಗಿದ್ದೆ. ಮತ್ತೆ ಅವನನ್ನು ಕಂಡಿದ್ದು ಭರವಸೆಯನ್ನು ಮೂಡಿಸುತ್ತಿದ್ದ ಆಬ್ಬಾನ ಸಧೃಡ ಮತ್ತು ಮಮತೆಯ ಬಾಹುಗಳಲ್ಲಿ. ಆಬ್ಬಾ …ನಿಮ್ಮಿಂದಲೇ ನಾನು ಕಲಿತದ್ದು “ಮಮತೆ ಹಣ್ಣಿನ ಗುತ್ತಿಗೆಯಲ್ಲ ಎಂಬುದು”

ನನ್ನ ಎಲ್ಲಾ ಆತಂಕದ ಗಳಿಗೆಯಲ್ಲಿ ನಾನು ಧೈರ್ಯದಿಂದ ಮುಂದಡಿ ಇಡುತ್ತಿದ್ದುದೇ ನಿಮ್ಮ ಅಭಯ ಹಸ್ತದ ದೆಸೆಯಿಂದ. ಒಬ್ಬ ತಂದೆ ಇಷ್ಟೊಂದು ಪ್ರೀತಿ ಕೊಡಬಲ್ಲ ನೆನಪಾಗಿ ಕಾಡಿಸಬಲ್ಲ. ಹೀಗೊಂದು ಹೃದಯವನ್ನು ಆವರಿಸಬಲ್ಲ ದೂರವಾಗಿ ಮನಸ್ಸನ್ನು ಕ್ಷೋಭೆಗೊಳಪಡಿಸಲು ಸಾಧ್ಯ ಎಂಬುದು ಇವತ್ತು ನನ್ನ ಅರಿವಿಗೆ ಬಂದಿದ್ದು. ನಾನೂ ಕೂಡ ಎಷ್ಟೋ ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಮುಂದೊಂದು ದಿನ ಎಲ್ಲೋ ಭೇಟಿಯಾದಾಗ ಗೆಲುವಿನ ಮುಗುಳು ನಗೆಯೊಡನೆ ನಿಮ್ಮನ್ನು ಕಣ್ತುಂಬಾ ಕಾಣ ಬೇಕೆಂದು….. ಆದರೆ ಇವತ್ತಿನ ನನ್ನ ಆಸೆ ನಿಮ್ಮ ಹೆಗಲೇರಬೇಕೆಂಬುದೇ ಬಿಸಿಲಿನಿಂದ ಬಂದಾಗ ನಿಮ್ಮೆದೆಯಲ್ಲಿ ಅವಿತುಕೊಂಡು ಬೆವರಿನ ವಾಸನೆಯ ಆ ಹಳೆಯ ಲೋಕವನ್ನು ಕಾಣಬೇಕೆಂದು. ನನ್ನ ಎಲ್ಲಾ ನೆನಪುಗಳ ಮಾಸಿಹುದು. ನಿಮ್ಮ ವಿನಃ ನನಗೇನು ಕಾಣುತ್ತಿಲ್ಲ. ನಾನು ಎಲ್ಲೋ ಲೀನವಾಗುತ್ತಿದ್ದೇನೆ…. ಬಹುಶಃ ನಿಮ್ಮೊಂದಿಗೆ ನಿಮ್ಮನ್ನು ಕಾಣಲು ಹೋಗುತ್ತಿರಬಹುದು.

….ನನ್ನ ಕೈ ಕಾಲುಗಳು ಜಡವಾಗಿ ಬಿಟ್ಟಿವೆ. ನಾನು ಪ್ರಯಾಣ ಮಾಡುತ್ತಿರುವುದಂತೂ ನಿಜ. ಆದರೆ ಖಂಡಿತವಾಗಿಯೂ ಬಸ್ಸಿನಲ್ಲಲ್ಲ. ಬಿಳಿಯ ಧೂಮಗಳ ನಡುವಿನ ಅಲೆ ಅಲೆಯ ಮೋಡಗಳ ನಡುವೆ ನಿಮ್ಮ ಕೈ ಹಿಡಿದು ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಾ ನಡೆಯುತ್ತಿದ್ದೇನೆ. ನಾನು ಎಂದಿನಿಂದಲೂ ಹೀಗೆಯೇ ಇದ್ದೇನೆ. ನೀವೂ ನನ್ನನ್ನು ನಡೆಯಿಸುತ್ತಲೇ ಇದ್ದೀರಿ. ಇದೊಂದು ಸತ್ಯ. ಉಳಿದುದು ಯಾವುದೂ ನನ್ನ ನೆನಪಿನಲಿಲ್ಲ……. ಏಕಾ‌ಏಕಿ ಉಂಟಾದ ಎದೆಯ ನೋವಿನಿಂದ ನನ್ನ ಇಡೀ ಅಸ್ತಿತ್ವವೇ ಅದುರತೊಡಗಿತು. ಗಾಳಿ ಅಲಭ್ಯವಾಗಿದೆಯೇ? ನನ್ನದೆ ಸಿಡಿಯಲು ಬಾಂಬ್ ಇಟ್ಟವರಾರು? ನೋವನ್ನು ವ್ಯಕ್ತಗೊಳಿಸಲು ಸಾವಿರ ನಾಲಿಗೆಯಿಂದ ಚೀರಬೇಕಾದಿತೇನೋ. ಆದರೆ ಇರುವ ಒಂದು ನಾಲಿಗೆಯೂ ಪಸೆಯನ್ನು ಕಳೆದುಕೊಂಡು ಜಡವಾಗಿ ಬಿಟ್ಟಿದೆ. ಎದೆಯ ನೋವಿನ ಅಲೆಯನ್ನು ಹಿಡಿಯುವ ವ್ಯರ್ಥ ಪ್ರಯತ್ನ ಮಾಡಲು ಯಾವೊಂದು ಕೈಕೂಡ ಮೇಲೇಳುತ್ತಿಲ್ಲ…… ಅಬ್ಬಾ, ಇದು ಸಾವೇ, ಇದು ಅತ್ಯವೇ, ಆರಂಭವೇ, ನಾನಿದನ್ನು ಹೇಗೆ ಅನುಭವಿಸಲಿ ತಡೆಯುವ ಯಾವುದೇ ಪ್ರಯತ್ನ ನನ್ನಿಂದ ಸಾಧ್ಯವಿಲ್ಲ.

ನಿಧಾನವಾಗಿ ಎಲ್ಲ ನೋವುಗಳು ಮಾಯವಾದವು ಕಣ್ಣೆದುರು ಬೆಳಕು ಮಾಯವಾಗಿ ಕಪ್ಪು ತೆರೆಯೊಂದು ಕಣ್ಣುಗಳನ್ನು ಆವರಿಸಿ ನೆಲ-ಆಕಾಶ ಅಕ್ಕಪಕ್ಕ ಎಲ್ಲವೂ ಸರಿದು ಹೋಗಿ ಕ್ರಮೇಣ ಜಾರುತ್ತಾ ಹೋದೆ. ಅಂತಹ ಗಳಿಗೆಯಲ್ಲೂ ಒಂದೇ ಸಂತೃಪ್ತಿ. ನನ್ನದೆನ್ನಬಹುದಾದ ಬೆರಳುಗಳಲ್ಲಿ ಹೆಣೆದುಕೊಂಡಿರುವ ಬೆರಳುಗಳು ನಾನು ಬಯಸುತ್ತಿದ್ದ, ಅಪೇಕ್ಷಿಸುತ್ತಿದ್ದ ಚಿರಪರಿಚಿತವಾದ ನಿಮ್ಮ ಹಸ್ತ ನನ್ನ ತಲೆ ಸವರುತ್ತಿತ್ತು.

ಅಪ್ರಯತ್ನವಾಗಿ ಅಸ್ಪಷ್ಟವಾಗಿ ನನಗೇ ಕೇಳಿಸದಂತೆ ತೊದಲಿದೆ. “ಆಬ್ಬಾ, ಬಂದೆ ನಿಮ್ಮೊಡನೆ ನಾನೂ ಕೂಡ” ಕರೆದಿರಿ “ಬಾ ಮಗಳೆ ನನ್ನ ಜೊತೆ…. ಕಣ್ಣು ಬಿಡು; ನನ್ನ ಬೆರಳು ಹಿಡಿದುಕೋ… ಹೆಜ್ಜೆ ಇಡು ನನ್ನ ಜೊತೆಗೆ… ಸಂತೋಷಾತಿರೇಕದಲ್ಲಿ ನಾನು ಮಿಂದು ಹೋದೆ, ನಿಮ್ಮೊಡನೆ ಇರುವುದಕ್ಕಿಂತ ಹೆಚ್ಚಿನ ಭಾಗ್ಯ ನನಗೆ ಇನ್ಯಾವುದಿದೆ… ಇನ್ನೆಲ್ಲೂ ಸಿಗದಿದ್ದ ನಿಮ್ಮ ಕಣ್ಣುಗಳ ಆತ್ಮೀಯತೆಗೆ; ಅಸಂಖ್ಯ ನಕ್ಷತ್ರಗಳ ಬೆಳಕಿನ ನಿಮ್ಮ ನೋಟದ ತಂಪಿಗೆ ನಾನು ಕಣ್ತೆರೆದಿದ್ದೇನೆ. ನಿಮ್ಮ ಮೋರೆಯ ಪ್ರಜ್ವಲಿತ ಕಾಂತಿಗೆ ನಾನು ಕಣ್ತೆರೆದು…….”

ನಿಧಾನವಾಗಿ ತೆರೆದ ಕಣ್ಣುಗಳಿಗೆ ಮೊದಲೇನೂ ಕಾಣಲಿಲ್ಲ. ಕ್ರಮೇಣ ಅನುಭವಕ್ಕೆ ಬಂದದ್ದು ನನ್ನ ತಣ್ಣನೆಯ ಕೈಗಳನ್ನು ಬಿರುಸಾಗಿ ಉಜ್ಜುತ್ತಿದ್ದ ನನ್ನ ತಲೆಯನ್ನು ತನ್ನೆದೆಗೆ ಒತ್ತಿಕೊಳ್ಳುತ್ತಿದ್ದ ಬಿಕ್ಕುತ್ತಾ ನಡುನಡುವೆಯೆ “ಅಮ್ಮೀ…… ಅಮ್ಮೀ…… ಅಮ್ಮೀ……” ಎಂದು ಆಕ್ರಂದನಗೈಯುತ್ತಿದ್ದ ನಾಹಿದ್… ನನ್ನ ಸೀರೆ, ಶಾಲು, ಎಲ್ಲವೂ ವಾಂತಿಯಿಂದ ಮಲಿನವಾಗಿದ್ದವು. ನಾಹಿದ್ ಇದ್ಯಾವುದನ್ನೂ ಲೆಕ್ಕಿಸದೆ ನಾನು ಕಣ್ಣು ಬಿಟ್ಟು ನೋಡಿದೊಡನೆಯೇ ನನ್ನ ಮಡಿಲಿಗೆ ಬಿದ್ದು ಬಿಕ್ಕಲಾರಂಭಿಸಿದ. ಅಂತಹ ಸ್ಥಿತಿಯಲ್ಲೂ ನನ್ನೆದೆಯ ಮಮತೆ ಪುಟಿಯಿತು. ನನ್ನ ಅಶಕ್ತ ಕೈಗಳನ್ನು ನಾಹಿದ್ ತಲೆಯ ಮೇಲಿಟ್ಟೆ.

ಸುತ್ತಲೂ ಸೇರಿದ್ದ, ಬಸ್ಸಿನ ಸೀಟುಗಳ ಮೇಲೇರಿದ್ದವರ ಸಹಾನುಭೂತಿ, ಕರುಣೆ, ಕಾತರ, ನಿರೀಕ್ಷೆ ಪ್ರಶ್ನೆಗಳಿಂದ ಕೂಡಿದ ನೋಟಗಳ ಸಹ ಪ್ರಯಾಣಿಕರು ಮೆಲ್ಲನೆ ಚದುರಿ ತಮ್ಮ ತಮ್ಮ ಸೀಟುಗಳಿಗೆ ಹಿಂದಿರುಗುತ್ತಿದ್ದರು. ಕಂಡಕ್ಟರ್ ಶಿಳ್ಳೆಯೂದುವುದನ್ನೂ ಚಾಲಕ ಕಾಯಲಿಲ್ಲ. ಬಸ್ಸು ನಿಧಾನವಾಗಿ ಚಲಿಸಲಾರಂಭಿಸಿತು. ನಾಹಿದ್ ನನ್ನ ಮಡಿಲಲ್ಲಿ ಬಿಕ್ಕುತ್ತಲೇ ಇದ್ದ.

ಆಬ್ಬಾ, ನಾಹಿದ್‌ನನ್ನು ಸಧ್ಯಕ್ಕೆ ಅನಾಥನನ್ನಾಗಿ ಮಾಡಲಾರೆ. ನನ್ನಂತ ಪ್ರತಿಗಳಿಗೆಯಲ್ಲೂ ಅವನನ್ನು ಸಾಯಗೊಳಿಸಲಾರೆ. ನನಗೆ ನಿಮ್ಮ ಅವಶ್ಯಕತೆಗಿಂತ ಅವನಿಗೆ ನನ್ನ ಅಗತ್ಯ ಹೆಚ್ಚಿದೆ………. ಖುದಾ ಹಾಫೀಜ್.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಾಳ್ಮೆ
Next post ಆಯಸ್ಸು

ಸಣ್ಣ ಕತೆ

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…