ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ.
ಅವನು ಅವಳ ತೊಡೆ ಏರಿದ ಕೈಸವರಿದ ಮತ್ತೆ ಭುಜವನ್ನು ಅಲುಗಾಡಿಸಿ ಕೆನ್ನೆ ಸವರಿದ.
ಇದೆಲ್ಲಾ ಬಹಿರಂಗವಾಗಿ ಎಲ್ಲರೆದುರು ಪಬ್ಲಿಕ್ ಆಗೇ ನಡೆಯುತಿತ್ತು ದಿನವು. ಇವರ ಪ್ರೇಮಕ್ಕೆ ಮಾತಿಲ್ಲವಾದರೇನು? ಅಲ್ಲಿ ಇತ್ತು ಸಾನಿಧ್ಯ ಸ್ಪರ್ಶ ಹರ್ಷ.
ಗಾಳಿಯಲ್ಲಿ ಹಾರುತ್ತಿದ್ದ ಹುಡುಗಿಯ ಕೂದಲನ್ನು ನೇವರಿಸಿ ಮುತ್ತಿಟ್ಟಾಗ ಅಲ್ಲಿ ನಿಂತು ನೋಡುತ್ತಿದ್ದ ಜನರು ಗೊಳ್ಳೆಂದು ನಗುತ್ತಿದ್ದರು.
ಅವನು ಮನುಷ್ಯನೆಂದು ತಿಳಿದು “ನಾಚಿಕೆ ಎಂಬುದಿಲ್ಲ ಈಗಿನ ಜನರಿಗೆ” ಎಂದು ಕೊಂಡಿರಾ?
ಅವನು ಗಿಡದ ರೆಂಬೆಯಿಂದ ಹಾರಿ ಬಂದ ಕಪಿ, ಮಾನವನಂತೆ ವರ್ತಿಸುತ್ತಿದ್ದ ಅವನಲ್ಲಿ ಕಪಿ ಬುದ್ಧಿಗಿಂತ ಮಾನವರಿಗರಬೇಕಾದ ಸೌಮ್ಯತೆ, ಸ್ನೇಹಪರತೆ, ಪ್ರೀತಿ ಎದ್ದುಕಾಣುತಿತ್ತು.
ಈ ಮನ್ಮಥ ಹನುಮಂತನಿಗೆ ಹುಡುಗಿಯರೆಂದರೆ ಬಲು ಪ್ರಿಯ. ಓಡಿ ಹೋಗಿ ಅವರ ಕಾಲು ಗೆಜ್ಜೆ ಮುಟ್ಟುತ್ತಿದ್ದ. ಮರದ ಹೂವು ಹಣ್ಣು ಕಿತ್ತು ಪ್ರೇಮ ಕಾಣಿಕೆ ಕೊಡುತ್ತಿದ್ದ. ಹುಡುಗಿಯರನ್ನು ರಮಿಸಿ ಪ್ರೇಮಿಸುತ್ತಿದ್ದ. ಅಲ್ಲಿ ಹಾದು ಹೋಗುತ್ತಿದ್ದ ಕಾಲೇಜು ಕನ್ಯೆಯರಿಗೆ ಹನುಮಂತನ ಒಡನಾಟದಲ್ಲಿ ಹೆದರಿಕೆ ಹೋಗಿ ಸಂತಸ ಸಿಗುತಿತ್ತು.
ಹನುಮಂತನಿಗೆ ಒಲಿದ ಕಾಲೇಜು ಕನ್ಯೆಯರನ್ನು ನೋಡಿ ಹಾದು ಹೋಗುವ ಕಾಲೇಜು ಹುಡುಗರು ಅಸೂಯೆಪಡುತ್ತಿದ್ದರು. ತಾವು ವಿಸಿಲ್ ಹೊಡೆದು ಹುಡುಗಿಯರ ಗಮನ ಸೆಳೆದರೆ “ಗುರ್” ಎನ್ನುತ್ತಿದ್ದ ಹುಡುಗಿಯರು ಹನುಮಂತನ ಸಂಗದಲ್ಲಿ ಸರಸವಾಡುವುದನ್ನು ನೋಡಿ ಕೋತಿಗಿದೆಂತಹ ಭಾಗ್ಯ! ಎಂದು ಹಲುಬುತ್ತಿದ್ದರು.
“ಲೋ! ಇದು ಕಲಿಯುಗದ ಹನುಮಂತ, ಹೆಣ್ಣು ಹುಡುಗಿಯರ ಸಂಗದಲ್ಲಿ ನಲಿದಾಡ್ತಾ ಇದೆ. ಅದೇ ತ್ರೇತಾಯುಗದ ಹನುಮಂತ ಬ್ರಹ್ಮಚರ್ಯ ಪಾಲನೆ ಮಾಡಿ ಸೀತಾ ಮಾತೆಯಂತಹ ಸಾದ್ವಿ ಮಾನ ಪ್ರಾಣ ರಕ್ಷಣೆ ಮಾಡುತ್ತಿದ್ದ ಅಲ್ವೇನೋ ರಮೇಶ” ಎಂದು ಅಲ್ಲಿ ನಿಂತ ಹುಡುಗರು ತಮ್ಮ ತಮ್ಮಲ್ಲಿ ಮಾತನಾಡುತ್ತಿದ್ದರು.
ಹನುಮಂತನಗರದ ಶ್ರೀನಗರದ ಪೈಪ್ ಲೈನ್ ರಸ್ತೆಯ ಅರಳಿ ಮರದ ಮೇಲೆ ಈ ಹನುಮಂತನ ರಾಜ್ಯಭಾರದ ಪ್ರೇಮ ಸಾಮ್ರಾಜ್ಯ ಸ್ಥಾಪಿತವಾಗಿತ್ತು. ಇದರ ರಾಜ್ಯ ಭಾರದಲ್ಲಿ ಸಖತ್ ಚಾಲು ಹುಡುಗರು, ಕಿಲಾಡಿಗಳು, ಪುರುಷರು ಹತ್ತಿರ ಬಂದರೆ ಅವರನ್ನು ದೂರದಿಂದಲೆ, ಗುರ್ ಗುರ್ ಎಂದು ಹೊಡೆದೋಡಿಸುತಿದ್ದ. ಆದರೆ ಈ ಹೆಂಗಸರು, ಹುಡುಗಿಯರು, ಅಜ್ಜಿಗಳು, ಮಕ್ಕಳೆಂದರೆ ಬಲು ಪ್ರೀತಿಯಿಂದ ವರ್ತಿಸುತ್ತಿದ್ದ.
ಅರಳೀಕಟ್ಟೆ ಸಮೀಪದ ಅಂಗಡಿ ಮಾಲೀಕರಿಗೆ ಈ ಹನುಮಂತನ ಕುಲ ಗೋತ್ರ ತಿಳಿಯದಿದ್ದರು, ಅವನ ಚಲನವಲನ, ಅವನ ಮನುಷ್ಯ ವರ್ತನೆ, ಅವನು ಪುರುಷರಿಂದ ದೂರವಿರುವ ಸ್ವಭಾವ ಎಲ್ಲರಿಗೂ ಹೇಳುತ್ತಿದ್ದ. ಅಂಗಡಿಗೆ ಬಂದವರು ಕೋತಿಯ ಕಥೆ ಕೇಳುತ್ತಾ ನಿಂತುಬಿಡುತ್ತಿದ್ದರು.
ಅರಳೀ ಕಟ್ಟೆಗೆ ಬರುವ ಅಜ್ಜಿಯರಿಗಂತೂ ಈ ಹನುಮ ಪಂಚ ಪ್ರಾಣನಾಗಿದ್ದ “ಇವನೇ ನಮ್ಮ ಮುಖ್ಯಪ್ರಾಣ” ಅಂತ ಕೈಮುಗಿದು ದಿನವೂ ಅವನಿಗೆ ಬಾಳೆ ಹಣ್ಣು, ಕಡಲೆಕಾಯಿ ತಂದು ಕೊಡುತ್ತಿದ್ದರು. ಅಜ್ಜಿಯರ ಮಡಿಲಲ್ಲಿ ಗಂಟೆಗಟ್ಟಲೆ ಕುಳಿತಿರುತ್ತಿದ್ದ ಹನುಮಂತರಾಯನಿಗೆ ಅಜ್ಜಿಯರು ಪುರಂದರದಾಸರ ಪದ ಹೇಳಿ ನಲಿಸುತ್ತಿದ್ದರು. ಕೆಲ ಅಜ್ಜಿಯರಂತೂ “ಆಂಜನೇಯ ಅವತಾರ ನೀನೇ ವಾಯುಪುತ್ರ ಹನುಮಾನ ನೀನೆ” ಎಂದು ಕೋತಿಯ ಗುಣಗಾನ ಮಾಡುತ್ತಿದ್ದರು, ಮಡಿಲಲ್ಲಿ ಕೂರಿಸಿಕೊಂಡು, ಹಾಡು, ಕಥೆ ಹೊಗಳಿಕೆ ಕೇಳಿಸಿ ಕೆಲವೊಮ್ಮೆ ಹನುಮಂತ ತೂಕಡಿಸುತ್ತಿದುದೂ ಉಂಟು.
ಅತ್ತ ಇತ್ತ ಸುಂದರ ಹುಡುಗಿ ಸುಳಿದಳೆಂದರೆ ಹನುಮಂತ ಕಣ್ಣು ಬಿಟ್ಟು ಹುಡುಗಿಯನ್ನು ಹಿಂಬಾಲಿಸುತ್ತಿದ್ದ, ಕೆಲ ಹುಡುಗಿಯರು ಹೆದರಿ ಹೌಹಾರಿ ಓಡಿ ಹೋದಾಗ ವಿರಹಿಯಂತೆ, ಪ್ರೀತಿಯಿಂದ ವಂಚಿತನಾಗಿ ನಿರಾಶೆಯಿಂದ ರೆಂಬೆ ಏರುತ್ತಿದ್ದ. ಹದಿನೈದು, ಇಪ್ಪತ್ತು ದಿನಗಳಿಂದಲೂ ಎಲ್ಲರ ಆಕರ್ಷಣೆಗೆ ಪಾತ್ರವಾಗಿದ್ದ ಈ ಹನುಮಂತ ಬಲು ಸೋಜಿಗವನ್ನುಂಟು ಮಾಡಿದ್ದ. ಎಲ್ಲರಿಗೂ ಅವನ ವರ್ತನೆ ಸ್ವಭಾವದ ಬಗ್ಗೆ ಅಚ್ಚರಿಯಾಗುತ್ತಿತ್ತು.
ಎಲ್ಲರೂ ಗುಂಪು ಸೇರಿ ಹನುಮನ ಚೆಲ್ಲಾಟ, ಹುಡುಗಾಟ, ಪ್ರೀತಿ ಪ್ರೇಮಗಳ ಆಟವನ್ನು ವೀಕ್ಷಿಸುತ್ತಿದ್ದಾಗ ಎಲ್ಲರನ್ನು ತಳ್ಳಿಕೊಂಡು ಒಬ್ಬಾಕೆ ಕೋತಿಯ ಹತ್ತಿರ ಹೋಗಿ ಅದನ್ನು ಎದೆಗವಚಿಕೊಂಡಳು. ಇಬ್ಬರೂ ಒಬ್ಬರನ್ನೊಬ್ಬರು ತಬ್ಬಿಕೊಂಡು ಮುದ್ದಾಡಿದರು.
“ಏನಮ್ಮ, ಕೋತಿನ ಏಕೆ ಹಾಗೆ ಮುದ್ದಾಡುತ್ತಿದ್ದೆ?” ಅಂತ ಅಲ್ಲಿ ನೋಡುತ್ತಿದ್ದ ಅಜ್ಜಿ ಕೇಳಿದಳು.
ದೊಂಬರಾಟ ಆಡುವ ಆ ತರುಣಿ “ಅಜ್ಜಿ, ಇದು ನನ್ನ ದೊಂಬರಾಟದ ಕೋತಿ. ಇದನ್ನು ನಾವು ಪುಟ್ಟ ಮಗು ಇದ್ದಾಗಿನಿಂದ ಸಾಕಿಕೊಂಡು ಆಟ ಆಡಿಸಿ ನಮ್ಮ ಜೀವನ ಕಳೆಯುತ್ತಿದ್ದೆವು” ಅಂದಳು.
“ಮತ್ತೆ ಇದು ಹದಿನೈದು, ಇಪ್ಪತ್ತು ದಿನದಿಂದ ಇಲ್ಲೇ ಇದೆಯಲ್ಲ” ಎಂದರೆ ಅಜ್ಜಿ.
“ಅಜ್ಜಿ! ಅದು ದಾರಿ ತಪ್ಪಿ, ನಮ್ಮಿಂದ ದೂರ ಆಗಿಬಿಡ್ತು. ಅದು ಎಲ್ಲಿ ಹೋಯಿತು ಅಂತ ಗೊತ್ತಾಗಿರಲಿಲ್ಲ, ನಾವು ಹುಡುಕಿ ಸಾಕಾಗಿದ್ದೆವು” ಅಂದಳು.
“ನಮ್ಮ ಹೊಟ್ಟೆ ಹಸಿವು ನಿವಾರಿಸಲು ಈ ಕೋತಿ ನಮ್ಮ ಸಂಸಾರದ ದೊಡ್ಡ ಮಗನಿಂತಿದ್ದಾನೆ. ಅವನು ಇಲ್ಲದೆ ನಾವು ಬಹಳ ಪಾಡು ಪಟ್ಟೆವು” ಅಂದಳು ದೊಂಬರಾಟದ ತರುಣಿ.
ಕೋತಿಯನ್ನು ಮಗುವಿನಂತೆ ಸೊಂಟದಲ್ಲಿಟ್ಟುಕೊಂಡು ನಗುತ್ತಾ ಹೋಗುವಾಗ ತಾಯಿಗೆ ಕಳೆದುಹೋದ ಮಗು ಸಿಕ್ಕಂತೆ, ವಿರಹಿ ಪ್ರಿಯತಮೆಗೆ ಪ್ರಿಯಕರ ದೊರಕಿದ ಧನ್ಯತೆಯ ಭಾವ ಉಲ್ಲಾಸ ಉತ್ಸಾಹ ಅವಳಲ್ಲಿ ಎದ್ದು ತೋರುತಿತ್ತು.
ಕೋತಿ ತೊರೆದು ಹೋದ ಅರಳಿ ಮರದಲ್ಲಿ ಇಂದು ಒಂದು ರೀತಿಯ ಶೂನ್ಯವಾವರಿಸಿದಂತೆ ಹಾದು ಹೋಗುವ ಜನಗಳಿಗೆ ಅನಿಸುತಿತ್ತು.
*****