ಹುಲ್ಲ ಪ್ರೀತಿಸದವ ಹೊಲವ ಪ್ರೀತಿಸುವನೆ
ಹುಲ್ಲ ಪ್ರೀತಿಸಲು ಕಲಿ ಮೊದಲು

ಶಿಲೆಯ ಪ್ರೀತಿಸದವ ಶಿಲ್ಪ ಪ್ರೀತಿಸುವನೆ
ಶಿಲೆಯ ಪ್ರೀತಿಸಲು ಕಲಿ ಮೊದಲು

ಗುಡ್ಡವ ಪ್ರೀತಿಸದವ ಬೆಟ್ಟವ ಪ್ರೀತಿಸುವನೆ
ಗುಡ್ಡವ ಪ್ರೀತಿಸಲು ಕಲಿ ಮೊದಲು

ಹನಿಯ ಪ್ರೀತಿಸದವ ಹೊಳೆಯ ಪ್ರೀತಿಸುವನೆ
ಹನಿಯ ಪ್ರೀತಿಸಲು ಕಲಿ ಮೊದಲು

ಮರವ ಪ್ರೀತಿಸದವ ಕಾನನವ ಪ್ರೀತಿಸುವನೆ
ಮರವ ಪ್ರೀತಿಸಲು ಕಲಿ ಮೊದಲು

ಮಾತೆಯ ಪ್ರೀತಿಸದವ ದೇಶವ ಪ್ರೀತಿಸುವನೆ
ಮಾತೆಯ ಪ್ರೀತಿಸಲು ಕಲಿ ಮೊದಲು

ಜನರ ಪ್ರೀತಿಸದವ ಚೆನ್ನ ಮಲ್ಲಿಕಾರ್‍ಜುನನ ಪ್ರೀತಿಸುವನೆ
ಜನರ ಪ್ರೀತಿಸಲು ಕಲಿ ಮೊದಲು

ಚೆನ್ನ ಮಲ್ಲಿಕಾರ್‍ಜುನ ತಾನವನೇ ಪ್ರೀತಿಸುವ
ನೀನವನ ಪ್ರೀತಿಸುವ ಮುನ್ನ
*****