ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ ಹೊಸೆದು ಹಾಕುವ ಹೆಂಡತಿಯಿದ್ದಳು. ಪಕ್ಕದ ಪ್ರೈಮರಿ ಸಾಲೆಗೆ ಹೋಗುವ ಮಗನಿದ್ದ. ಮನೆಯ ಪಕ್ಕದಲ್ಲೇ ಎಂಥ ಅರೆಗಾಲದಲ್ಲೂ ನೀರಿರುವ ಸರಕಾರಿ ಬಾವಿಯಿತ್ತು. ಇನ್ನು ಮನೆಯಲ್ಲಿ ಕೀಟಲೆ ಕೊಡುವ ತಂದೆ ತಾಯಿ ಅತ್ತೆ ಮಾವ ಚಿಕ್ಕಪ್ಪ ದೊಡ್ಡಪ್ಪ ಇಂಥ ಯಾವ ಮಂದಿಯೂ ಇರಲಿಲ್ಲ. ಹೆಂಡತಿ ಕೂಡ ಅವನ ತರಲೆಗೆ ಬರುತ್ತಿರಲಿಲ್ಲ. ಆದರೆ ಸದಾಶಿವನಿಗೆ ಇಷ್ಟು ಸ್ವಾತಂತ್ರ್ಯ ಕೂಡ ಸಾಲದಾಯಿತು.
ಬೇಕಾದರೆ ಅವನು ಹುಲ್ಲಿನ ಛಾವಣಿಯ ಮನೆಗೆ ಮಂಗಳೂರು ಹೆಂಚು ಹೊದೆಸಬಹುದಿತ್ತು. ಹತ್ತು ಚೀಲ ಸಿಮೆಂಟು ತಂದು ನೆಲಕ್ಕೆ ಕೆಂಪು ಸಾರಣೆ ಮಾಡಿಸಿಕೊಳ್ಳಬಹುದಿತ್ತು. ಹಿತ್ತಿಲಲ್ಲೇ ಸ್ವಂತದ್ದೊಂದು ಬಾವಿ ತೆಗೆಸಿದರೆ ಧಾರಾಳ ನೀರು ದೊರಕುತ್ತಿತ್ತು. ಒಂದು ನೂರು ತೆಂಗಿನ ಸಸಿ ನೆಡಿಸಿ, ಬಾವಿಗೆ ಪಂಪ್ ಹಾಕಿಸಿ ಇದೇ ಹಿತ್ತಿಲಿನಿಂದ ಚಿನ್ನ ತೆಗೆಯಬಹುದಿತ್ತು. ಕನಿಷ್ಟ ಕೂಲಿ ಕೆಲಸ ಮಾಡಿದರೂ ದಿನಕ್ಕೆ ಹದಿನೈದು ಇಪ್ಪತ್ತು ರೂಪಾಯಿ ಸಂಪಾದನೆಯಾಗಬಹುದಿತ್ತು.
ಯಾಕೆ, ಇಂಥ ವಿಚಾರಗಳೊಂದೂ ಸದಾಶಿವನಿಗೆ ಹೊಳೆದಿರಲಿಲ್ಲವೆ? ಖಂಡಿತವಾಗಿ ಹೊಳೆದಿದ್ದುವು. ಈ ವಿಚಾರಗಳೆಲ್ಲ ಅವನವೇ. ಹೋಟೆಲಿನಲ್ಲಿ ಕುಳಿತು ಬೀಡಿ ಸೇದುತ್ತ ಅವನು ತನ್ನ ವಿಚಾರಗಳನ್ನು ಹೀಗೆ ಹರಿಯಬಿಡುತ್ತಿದ್ದ. ಕೆಲವೊಮ್ಮೆ ಅಲ್ಲಿ ಸೇರಿದವರಿಗೆ ತನ್ನ ಯೋಜನೆಗಳನ್ನು ಅವರ ಮನ ಮುಟ್ಟುವಂತೆ ವಿವರಿಸಿ ಅವರ ಮೆಚ್ಚುಗೆ ಗಳಿಸುತ್ತಿದ್ದ. ಮಳೆಗಾಲದಲ್ಲಿ ಬೇಸಿಗೆಯ ಹಾಗೂ ಬೇಸಿಗೆಯಲ್ಲಿ ಮಳೆಗಾಲದ ಯೋಜನೆಗಳು ಸಿದ್ಧವಾಗುತ್ತಿದ್ದುವು. “ನೋಡಿ, ಈ ಮಳೆಗಾಲದಲ್ಲಿ ಮೆಣಸು, ಬೆಂಡಿ, ಸೌತೆ ಹಾಗೂ ತೊಂಡೆ ಹಾಕಬೇಕೆಂದಿದ್ದೇನೆ. ಎಂಥಾ ನಟ್ಟಿ ಮಾಡುತ್ತೇನೆ ನೋಡುತ್ತಿರಿ. ಕುಂಬಳೆ, ಕಾಸರಗೋಡು ಪೇಟೆಗಳಿಗೆ ನನ್ನ ಹಿತ್ತಿಲಿಂದಲೇ ತರಕಾರಿ ಪೂರೈಕ ಇನ್ನು ಮುಂದೆ.” ಎನ್ನುತ್ತಿದ್ದ.
“ಹಾಗಿದ್ದರೆ ನಾವು ಯಾರೂ ಮಾಡುವುದಿಲ್ಲ” ಎನ್ನುತ್ತಿದ್ದರು, ಕೆಲವರು. ಸದಾಶಿವ ಅಂಥ ಮಾತುಗಳನ್ನೆಲ್ಲ ಕಿವಿ ಮೇಲೆ ಹಾಕಿಕೊಳ್ಳುತ್ತಿರಲಿಲ್ಲ. ಯೋಜನೆ ಆದರ ತೀವ್ರತೆಯಲ್ಲಿ ಭಸ್ಮವಾಗುವ ತನಕ ಅವನದರ ಕುರಿತು ಚಿಂತಿಸುತ್ತಿದ್ದ. ಮುಖ್ಯವಾದ ಸಂಗತಿಯೆಂದರೆ ಯಾವ ವಿಚಾರದಲ್ಲೂ ಅವನಿಗೆ ದೀರ್ಘಾವಧಿ ಆಸಕ್ತಿ ಉಳಿಯುತ್ತಿರಲಿಲ್ಲ. ಯಾವುದಾದರೊಂದು ವಿಚಾರ ಹೊಳೆದರೂ ಅದರ ಬೆನ್ನ ಹಿಂದೆ ಅದನ್ನು ತಿಂದುಬಿಡುವಂಥ ಇನ್ನೊಂದು ವಿಚಾರ ಧಾವಿಸಿ ಬರುತ್ತಿತ್ತು. ಇದೆಲ್ಲದರ ಪರಿಣಾಮವಾಗಿ ಮನೆಯ ಸ್ಥಿತಿ ಚಿಂತಾಜನಕವಾಗಿ ಆಗಾಗ ಜಗಳಗಳು ಏಳುತ್ತಿದ್ದುವು.
ಒಂದು ದಿನ ಸದಾಶಿವ ಸೆಟ್ಟರ ಅಂಗಡಿಯನ್ನು ಪ್ರವೇಶಿಸಿದ. ಸವೆದು ಕೊರಕಲಾದ ಬೆಂಚಿನಲ್ಲಿ ಕುಳಿತ. “ಏನು ಬೇಕು?” ಎಂದರು ಸೆಟ್ಟರು ತಿಂಡಿಯ ಕಪಾಟು ತೆರೆದು. ಸೆಟ್ಟರ ಅಂಗಡಿಯಲ್ಲಿ ಚಕ್ಕುಲಿ, ಕಡಲೆ, ಅವಲಕ್ಕಿ ಬಿಟ್ಟರೆ ಇನ್ನೇನೂ ಸಿಗುತ್ತಿರಲಿಲ್ಲ. ಆದ್ದರಿಂದ ಕೆಲವರು ’ಯಾರು ಹಿತವರು ನಿನಗೆ ಈ ಮೂವರೊಳಗೆ’ ಎಂದು ಇದನ್ನು ಗೇಲಿ ಮಾಡುತ್ತಿದ್ದರು.
“ಚಕ್ಕುಲಿ” ಎಂದ ಸದಾಶಿವ.
ಸೆಟ್ಟರು ಚಕ್ಕುಲಿ ತಂದು ಅವನ ಮುಂದಿಟ್ಟರು.
“ಚಹಾವೋ ಕಾಫ಼ಿಯೋ?”
“ಚಹಾ” ಎಂದ ಸದಾಶಿವ. ಈ ಪ್ರಶ್ನೋತ್ತರಗಳು ಕಳೆದ ಹಲವಾರು ವರ್ಷಗಳಿಂದ ಏನೇನೋ ಬದಲಾಗದೆ ನಡೆದು ಬಂದುವು. ಸೆಟ್ಟರು ಚಹಾ ತಯಾರಿಸಿ ಎರಡು ಲೋಟಗಳಿಂದ ಅದನ್ನು ಹೊಡೆಯತೊಡಗಿದರು. ಒಮ್ಮೆ ಒಂದು ಲೋಟ ಮೇಲೆ ಹೋಗುತ್ತಿತ್ತು. ಇನ್ನೊಮ್ಮೆ ಅದು ಕೆಳಗೆ ಬರುತ್ತಿತ್ತು. ಸದಾಶಿವ ಇದನ್ನು ನೋಡಲಾರ. ಪುನರಾವರ್ತನೆಯಾಗುವ ಯಾವುದೇ ಕೆಲಸ ಅವನಿಗೆ ತಲೆತಿರುಕ ತರುತ್ತಿತ್ತು. ಮನೆಯಲ್ಲಿ ಹೆಂಡತಿ ಬೀಡಿ ಹೊಸೆಯುತ್ತಿದ್ದುದನ್ನು ಕೂಡ ಅವನು ಸಹಿಸಲಾರ. ಈ ದಿನ ಬೇಡಬೇಡವೆಂದರೂ ಅವನ ಕಣ್ಣುಗಳು ಸೆಟ್ಟರ ಕಡೆ ತಿರುಗಿದುವು. ಲೋಟಗಳು ಕೆಳಗೆ ಮೇಲಾಗುವುದನ್ನು ನೋಡಿದುವು.
ಸೆಟ್ಟರು ತಂದಿಟ್ಟ ಚಹಾದ ಗ್ಲಾಸನ್ನೆತ್ತಿ ಅವರ ಮುಖಕ್ಕೆ ಚೆಲ್ಲಿದ. ಅವರ ತೆರೆದ ಬಾಯಿಯೊಳಕ್ಕೆ ಚಕ್ಕುಲಿಯನ್ನು ತುರುಕಿದ. ನಂತರ ಸದಾಶಿವ ತಿಂಡಿಯ ತಟ್ಟೆಗಳನ್ನು ಸುದರ್ಶನ ಚಕ್ರಗಳಂತೆ ಹೋಟೆಲಿನಿಂದ ಹೊರಗೆ ಹಾರಿಸಿದ. ಗಾಜಿನ ಗ್ಲಾಸುಗಳು ಬೀದಿಯಲ್ಲಿ ಟಳ್ಳನೆ ಒಡೆದುವು. ಬೆಂಚುಗಳನ್ನು ನೆಲಕ್ಕೆ ಅಪ್ಪಳಿಸಿ ಮುರಿದದ್ದಾಯಿತು. ಅಲ್ಲಿಂದ ಹೊರ ಬಿದ್ದವನು ಪಕ್ಕದ ಗೊಡಂಗಡಿಗೆ ಬಂದು ತನ್ನ ವಿಧ್ವಂಸಕ ಕಾರ್ಯವನ್ನು ಮುಂದುವರಿಸಲು ತೊಡಗಿದ. ಗೊಡಂಗಡಿಯವನು ಹೊರಕ್ಕೆ ಹಾರಿ ಜನರನ್ನು ಕೂಗಿದ.
ಜನ ಬಂದು ನೋಡಿದಾಗ ಹೋಟೆಲಿನ ಸೆಟ್ಟರು ನೆಲಕ್ಕೊರಗಿದ್ದರು, ಸದಾಶಿವ ಗೂಡಂಗಡಿಯನ್ನು ಪ್ಲಾಟ್ಫ಼ಾರ್ಮು ಮಾಡಿಕೊಂಡು ಭಾಷಣ ಕೊಡುವವನಂತೆ ಆರಚುತ್ತಿದ್ದ. ನಾಲ್ಕು ಮಂದಿ ಸೇರಿ ಅವನನ್ನು ಹಿಡಿದರು. ಎಂದೂ ಹೀಗೆ ಮಾಡದಿದ್ದ ಸದಾಶಿವ ಒಮ್ಮೆಲೆ ಹೀಗೇಕೆ ಮಾಡಿದ ಎಂಬುದೇ ಸಮಸ್ಯೆಯಾಗಿತ್ತು. ಸದಾಶಿವನಿಗೆ ತಲೆ ಬಿಸಿಯಾಗಿದೆ ಎಂದಾಗಿತ್ತು ಜನಾಭಿಪ್ರಾಯ. ಅವನು ಹೋಟೆಲು ಮತ್ತು ಗೊಡಂಗಡಿಗೆ ಮಾಡಿದ ಹಾನಿ ನೋಡಿದರೆ ಅವನನ್ನು ಪೋಲೀಸಿಗೆ ಕೊಟ್ಟು ಕೇಸು ಹಾಕಿಸಬೇಕಿತ್ತು. ಆದರೆ ಸೆಟ್ಟರೇ ಇದು ಬೇಡವೆಂದು ಹೇಳಿದರು. ಪೋಲೀಸರಿಂದ ನ್ಯಾಯ ದೊರಕೀತು ಎಂಬ ಕುರಿತು ಅವರಿಗೆ ಏನೇನೋ ಭರವಸೆಯಿರಲಿಲ್ಲ. ಅದಕ್ಕಿಂತ ಸದಾಶಿವನ ಹಿತ್ತಿಲ ಗೇರು ಬೆಳೆಯನ್ನು ಮುಂದಿನ ಬೇಸಿಗೆಯಲ್ಲಿ ಇಸಿದು ಕೊಂಡರಾಯಿತು ಎಂಬ ಮಾತನ್ನು ಹೇಳಿದರು.
ಸದಾಶಿವನ ಬಿಸಿಯಿಳಿಸಲು ಅವನನ್ನು ಬೀದಿ ಬದಿಯ ವಿದ್ಯುತ್ತು ಕಂಬಕ್ಕೆ ಕಟ್ಟಿ ಹಾಕಿದರು. ಅಲ್ಲಿ ಸುಡುಬಿಸಿಲಿಗೆ ಅವನ ತಲೆ ಇನ್ನಷ್ಟು ಬಿಸಿಯಾಯಿತು.
೦ ೦ ೦
ಸದಾಶಿವನಿಗೆ ಹುಚ್ಚಾಗಿ ಕೆಲವು ತಿಂಗಳುಗಳೇ ಸಂದಿವೆ. ಈ ಸದಾಶಿವ ಹೋಗಿ ಸದ್ದು ಆಗಿದ್ದಾನೆ. ಜನರಿಗೆ ಕುರಿತಾದ ಆರಂಭದ ಭಯ ಮಾಯವಾಗಿ ಅದು ಸಲಿಗೆಗೆ ಎಡೆ ಕೊಟ್ಟಿದೆ.
ಸದ್ದುವಿನಲ್ಲಿ ಅನೇಕ ತರದ ಮಾರ್ಪಾಟುಗಳಾಗಿದ್ದವು. ಮೊದಲು ವಾರಕ್ಕೊಮ್ಮೆ ಗಡ್ಡ ಮಾಡಿಸಿಕೊಳ್ಳುತ್ತಿದ್ದವನಿಗೆ ಈಗ ಹೇರಳವಾಗಿ ಗಡ್ಡ ಬೆಳೆದಿತ್ತು. ಪೊದೆಯಂಥ ತಲೆಗೂದಲು ಕೂಡ, ಪಂಚೆ ಶರ್ಟನ್ನು ತ್ಯಜಿಸಿ ಮಗನ ಚಡ್ಡಿಗಳನ್ನು ಹಾಕಿಕೊಂಡು ಬರಿ ಮೈಯಲ್ಲಿ ಓಡಾಡುತ್ತಿದ್ದ. ಕೆಲವೊಮ್ಮೆ ದರ್ಜಿಯಂಗಡಿಯ ಮುಂದೆ ಎಸೆದಿದ್ದ ಬಟ್ಟೆ ತುಂಡುಗಳನ್ನು ಮಾಲೆ ಮಾಡಿ ಅದನ್ನು ಕೊರಳಿಗೆ ಹಾಕಿಕೊಳ್ಳುತ್ತಿದ್ದ. ಇನ್ನು ಕೆಲವೊಮ್ಮೆ ಅದನ್ನೇ ತಲೆಗೆ ಸುತ್ತಿಕೊಳ್ಳುತ್ತಿದ್ದ. ಪುನರಾವರ್ತನೆಯನ್ನು ಎಂದಿಗೂ ಸಹಿಸದ ಸದ್ದುವಿಗೆ ಹುಚ್ಚಿನಲ್ಲಿ ಕೂಡ ಮಾಡಿದ್ದೇ ಮಾಡುವುದು ಇಷ್ಟವಿರಲಿಲ್ಲ. ಆದ್ದರಿಂದ ಹುಚ್ಚು ಅವನ ಸೃಜನಶೀಲತೆಗೆ ಒಂದು ಪಂಥಾಹ್ವಾನವಾಗಿ ಹುಚ್ಚಿನ ವಿವಿಧ ರೂಪಗಳ ಅನ್ವೇಷಣೆಯಲ್ಲಿ ಅವನು ತೊಡಗುವುದು ಅಗತ್ಯವಾಯಿತು.
ಸದ್ದು ಹೆಚ್ಚೇನೂ ಓದಿದ ಮನುಷ್ಯನಲ್ಲ. ಮೂರನೆ ಕ್ಲಾಸಿನಲ್ಲಿ ಓದು ನಿಲ್ಲಿಸಿದ್ದ. ಆದ್ದರಿಂದ ಅವನಿಗೆ ಸಾಕ್ರೆಟೀಸನ ಕುರಿತು ಗೊತ್ತಿರಲಿಲ್ಲ. ಗೊತ್ತಿರುತ್ತಿದ್ದರೆ ಆ ನೆಲೆಗೆ ಏರಲು ಯತ್ನಿಸುತ್ತಿದ್ದನೋ ಏನೋ, ಹುಚ್ಚಿನ ಆರಂಭದ ಅಂಥ ಮಹತ್ವದ ಮಾತುಗಳನ್ನು ಅವನು ಹೇಳುತ್ತಿದ್ದ. ಅವನ ಸುತ್ತ ಜನವೂ ಸೇರುತ್ತಿತ್ತು. ಊರ ಬಸ್ ನಿಲ್ದಾಣ ಸದ್ದುವಿನ ಠಾಣ್ಯವಾಗಿತ್ತು. ಪಂಚಾಯತಿನವರು ಜನರು ನೆರಳಿನಲ್ಲಿ ಬಸ್ಸಿಗೆ ಕಾಯುವುದಕ್ಕೆ ಎಂದು ಕಟ್ಟಿಸಿದ ಕಾಂಕ್ರೀಟಿನ ರಚನೆ ಅದು. ಬೇರೆ ಗತಿಯಿಲ್ಲದಿದ್ದರೆ ಮಾತ್ರ ಜನ ಅಲ್ಲಿ ಹೋಗುತ್ತಿದ್ದದು. ಅಷ್ಟು ಹಾಳು ಬಿದ್ದಿತ್ತು. ಸದ್ದು ಈ ಸ್ಥಳದಿಂದ ಭಾಷಣ ಬಿಗಿಯುತ್ತಿದ್ದ. ಜನ ಅವನ ಉಪದೇಶ ಕೇಳುವುದಕ್ಕೆ ನೆರೆಯುತ್ತಿದ್ದುದಲ್ಲ, ಈ ವಿಚಿತ್ರ ನೋಡುವುದಕ್ಕೆ. ಎಲ್ಲರಿಗೂ ಪರಿಚಯದ ವ್ಯಕ್ತಿ ಯೊಬ್ಬನಿಗೆ ತಟ್ಟನೆ ಹುಚ್ಚು ಹಿಡಿದರೆ ನೋಡಲು ಕುತೂಹಲ ಯಾರಿಗಿರುವುದಲ್ಲ?
ನಂತರ ಅವನು ಭಾಷಣ ನಿಲ್ಲಿಸಿ ಮೌನವನ್ನು ತಳೆದ. ಯಾರೇನು ಮಾತಾಡಿಸಿದರೂ ಮಾತಾಡದೆ ಇರುತ್ತಿದ್ದ. ಕೆಲವೊಮ್ಮೆ ಊರಿಗೆ ಅಪರಿಚಿತರಾದ ಮಂದಿ ದಾರಿ ಕೇಳುತ್ತಿದ್ದರು. ಆದಕ್ಕೂ ಸದ್ದುವಿನದು ಮೌನವೇ ಉತ್ತರ. ಅವನಾಗಿ ಯಾರನ್ನೂ ಏನೂ ಕೇಳುತ್ತಿರಲಿಲ್ಲ. ಅಂಗಡಿ ಮುಂದೆ ಹೋಗಿ ಬೀಡಿ ಸೇದಬೇಕೆಂದಾದರೆ ಬೀಡಿಕಟ್ಟನ್ನೇ ನೋಡುತ್ತ ನಿಂತು ಬಿಡುತ್ತಿದ್ದ. ಅಂಗಡಿಯವ ಆಗ ಒಂದು ಬೀಡಿಯನ್ನೋ ಮನಸ್ಸಾದರೆ ಇಡಿಯ ಬೀಡಿ ಕಟ್ಟನ್ನೋ ಅವನ ಕೈಗೆ ಹಾಕುತ್ತಿದ್ದ. ಸದ್ದು ಹಸಿವಾದಾಗ ಹೋಟೆಲಿಗೆ ಹೋಗಿ ಕುಳಿತು ಬಿಡುತ್ತಿದ್ದ. ಅವರಾಗಿಯೆ ಕೊಟ್ಟುದನ್ನು ತಿಂದು ಅಲ್ಲಿಂದ ತೆರಳುವುದು ಅವನ ಕ್ರಮ. ಸೆಟ್ಟರೂ ಕೂಡ ಅವನನ್ನು ತುಸು ಉದಾರವಾಗಿಯೇ ನಡೆಸಿಕೊಳ್ಳುತ್ತಿದ್ದರು.
ಸದ್ದು ಯಾವ ರೀತಿಯ ಪೂರ್ಣ ಸ್ವಾತಂತ್ರ್ಯವನ್ನು ಹಂಬಲಿಸಿದ್ದನೋ ಅದೀಗ ಅವನಿಗೆ ಸಿಕ್ಕಿದಂತೆ ಅನಿಸಿತು. ಅದೊಂದು ರೀತಿಯ ಮುಕ್ತಿ. ಆಕಾಶದಲ್ಲಿ ಹಾರುವ ಹಕ್ಕಿಗಳಂತೆ, ಆಕಾಶದಲ್ಲಿ ಮಾರ್ಗಗಳಿಲ್ಲ; ಆದ್ದರಿಂದ ಮಾರ್ಗದ ನಿಯಮಗಳೂ ಇಲ್ಲ. ಆದರೆ ಮನುಷ್ಯನ ಮನಸ್ಸು ಎಂದೂ ಸುಮ್ಮನಿರುವುದಿಲ್ಲವಲ್ಲ. ಅದೂ ಸದ್ದುವಿನಂಥ ಸೃಜನಶೀಲ ಮನಸ್ಸು ಏನನ್ನೂ ಮಾಡದೆ ಇರುತ್ತದೆಂದರೆ ಹೇಗೆ? ವಾಸ್ತವಕ್ಕೆ ಹಾಗಿರಲಿಲ್ಲ. ಮನಸ್ಸು ಚುರುಕಾಗಿಯೆ ಕೆಲಸ ಮಾಡುತ್ತಿತ್ತು. ಈ ದೇಶದ ಉನ್ನತಿ ಹೇಗೆ? ಈ ಊರಿಗೆ ಏನೇನು ಬೇಕು? ಇಲ್ಲಿ ಪಾಪಿಗಳು ಯಾರು? ಮಹಾಪಾಪಿಗಳು ಯಾರು? ಎಂದು ಮುಂತಾದ ಹಲವು ಹತ್ತು ಸಂಗತಿಗಳ ಬಗ್ಗೆ ಅವನು ನಿರರ್ಗಳವಾಗಿ ಮಾತಾಡುತ್ತಿದ್ದು, ಮೌನ ಧರಿಸಿದ ಮೇಲೆ ತನ್ನ ವಿಚಾರಗಳನ್ನು ಚಿತ್ರದ ಮೂಲಕ ಬಿಡಿಸುತ್ತಿದ್ದ. ಅಂಗಡಿ ಗೋಡೆಗಳ ಮೇಲೆ, ಸಾಲೆ ಗೋಡೆಗಳ ಮೇಲೆ, ಮಾರ್ಗಗಳಲ್ಲಿ, ಎಲ್ಲೆಂದರಲ್ಲಿ ಅವನು ಬರೆದ ಮಸಿಯ ಚಿತ್ರಗಳು ರಾರಾಜಿಸತೊಡಗಿದುವು.
ಹೀಗಿರಲು ಎಲ್ಲಿಂದಲೋ ಒಬ್ಬ ಹೊಸ ಹುಚ್ಚನ ಆಗಮನವಾಯಿತು. ಅವನು ಸುಮಾರಿಗೆ ಸದ್ದು ವಿನಷ್ಟೇ ವಯಸ್ಸಿನವನಿದ್ದ. ಒಡಲಿನ ಗಾತ್ರವೂ ಸರಿಸುಮಾರು ಹಾಗೆಯೇ. ಆದರೆ ಅವನ ಹುಚ್ಚಿನ ರೀತಿಗಳು ಮಾತ್ರ ಬೇರೆ ಇದ್ದುವು. ಆತ ತೀರ ವಾಚಾಳಿಯೂ ಅಲ್ಲ; ತೀರ ಮೌನಿಯೂ ಅಲ್ಲ. ಆದರೆ ಯಾವಾಗ ಮೌನವಾಗುತ್ತಾನೆ, ಯಾವಾಗ ಮಾತು ಆರಂಭಿಸುತ್ತಾನೆ ಎಂದು ಹೇಳುವುದು ಅಸಾಧ್ಯವಾಗಿತ್ತು. ಒಮ್ಮೊಮ್ಮೆ ಗಡ್ಡ ಮಾಡಿಕೊಂಡು ಪರಿಷ್ಕೃತನಂತೆ ಇರುತ್ತಿದ್ದ; ಒಮ್ಮೊಮ್ಮೆ ಭಿಕಾರಿ ಯಂತೆ ತಿರುಗುತ್ತಿದ್ದ. ಆದರೆ ಪ್ರತಿನಿತ್ಯ ಅವನು ಮಾರ್ಗದ ಮಧ್ಯೆ ನಿಲ್ಲುವ ಕಾರ್ಯಕ್ರಮವೊಂದು ತಪ್ಪುತ್ತಿರಲಿಲ್ಲ. ಬಸ್ಸು ಲಾರಿಗಳು ಹರಿಹಾಯುವ ಹೆದ್ದಾರಿ ಅದು. ಈತ ನಡುಮಾರ್ಗದಲ್ಲಿ ಒಂಟಿಗಾಲಿನಲ್ಲಿ ಕೈ ಮುಗಿದು ನಿಲ್ಲುತ್ತಿದ್ದ. ಹೀಗೆ ತುಂಬಾ ಹೊತ್ತು ನಿಂತಿದ್ದು ಆಯಾಸವಾದಾಗ ಕಾಲು ಬದಲಿಸಿ ನಿಲ್ಲುತ್ತಿದ್ದ. ನೋಡುವವರಿಗೆ ಇದು ಅದ್ಭುತವಾಗಿತ್ತು, ಮೊದಮೊದಲು ವಾಹನ ಚಾಲಕರು ಅವನನ್ನು ಬೆದರಿಸಲು ವಾಹನವನ್ನು ಅವನ ಹತ್ತಿರ ತಂದು ನೋಡಿದರು; ಆದರೆ ಹುಚ್ಚ ಮಾತ್ರ ಜಗ್ಗಲಿಲ್ಲ. ಅವನಿಗೆ ಜೀವದ ಮೇಲೆ ಆಸೆ ಯಿದ್ದಂತೆ ತೋರಲಿಲ್ಲ. ಚಾಲಕರು ಅವನನ್ನು ಬಿಟ್ಟೇ ವಾಹನ ತೆಗೆದುಕೊಂಡು ಹೋಗುವುದು ಅನಿವಾರ್ಯವಾಯಿತು. ಹಾಗೆ ಹೋದಾಗ ಬಸ್ಸಿನೊಳಗಿನ ಪ್ರಯಾಣಿಕರು ಹೊರಕ್ಕೆ ತಲೆಹಾಕಿ ಹೇ ಹೇ ಎಂದು ಹುಚ್ಚನ ಗೇಲಿ ಮಾಡುತ್ತಿದ್ದರು. ಅವನು ಮಾತ್ರ ಅತ್ತಿತ್ತ ಕದಲದೆ ತಪ್ಪಸಿಗೆ ನಿಂತ ಮುನಿಯಂತೆ ನಿಂತೇ ಇರುತ್ತಿದ್ದ.
ಈ ಹೊಸಬನ ಅವತಾರದಿಂದ ತೀರ ದಿಗಿಲಾದವನೆಂದರೆ ಸದ್ದು. ಈತ ತನ್ನನ್ನು ಅಣಕಿಸುತ್ತಿರುವಂತೆ ಅವನಿಗೆ ತೋರಿತು. ತನಗೆಂದೂ ಹೊಳೆಯದಿದ್ದ ಹುಚ್ಚಿನ ರೀತಿಗಳು ಇವನಿಗೆ ಸಹಜವಾಗಿ ಎಂಬಂತೆ ಕರಗತವಾಗಿದ್ದುವು. ಜನರೀಗ ಇವನನ್ನೇ ತಾಜಾ ಹುಚ್ಚನೆಂದೂ ತನ್ನನ್ನು ಈತನ ಅಣಕವೆಂದೂ ತಿಳಿಯುವಂತಾಗಿತ್ತು. ಅಲ್ಲದೆ ಸದ್ದು ಮೊದಲಿನಿಂದಲೂ ತನ್ನದನ್ನಾಗಿ ಮಾಡಿಕೊಂಡಿದ್ದ ಬಸ್ಸು ನಿಲ್ದಾಣವನ್ನೇ ಹೊಸಬ ಕಾರ್ಯಕ್ಷೇತ್ರವನ್ನಾಗಿ ಆರಿಸಿದ್ದ.
ಇಬ್ಬರು ಪರಸ್ಪರ ಎಷ್ಟೊ ಬಾರಿ ಎದುರಾದರೂ ಒಬ್ಬೊಬ್ಬರ ಮೋರೆ ನೋಡದೆ ಇರುತ್ತಿದ್ದರು. ಸದ್ದುವಂತೂ ಹೊಸ ಹುಚ್ಚನ ಬಳಿಯಿಂದ ಆದಷ್ಟು ದೂರವೇ ಇದ್ದು ಬಿಡುತ್ತಿದ್ದ. ಆತ ಒಂದು ಬದಿಗೆ ಹೋದರೆ ಈತ ಇನ್ನೊಂದು ಬದಿಗೆ ಹೋಗುತ್ತಿದ್ದ. ಆತ ಹೋಟೆಲಿಗೆ ಹೋದರೆ ಈತ ಬೀಡಿಯಿಂಗಡಿಗೂ ಆತ ಬೀಡಿಯಂಗಡಿಗೆ ಹೋದರೆ ಈತ ಹೋಟೆಲಿಗೂ ಹೋಗುತ್ತಿದ್ದ. ಆದರೆ ಮಧ್ಯಾಹ್ನ ಹನ್ನೊಂದರಿಂದ ಎರಡು ಎರಡೂವರೆಯತನಕ ಜರುಗುತ್ತಿದ್ದ ಆ ಒಂಟಿಗಾಲಿನ ವಿದ್ಯಮಾನ- ಅದನ್ನು ಸಹಿಸುವುದಾದರೊ ಹೇಗೆ?
೦ ೦ ೦
ಕೊನೆಗೊಂದು ದಿನ ಇದೆಲ್ಲವನ್ನು ಇತ್ಯರ್ಥಗೊಳಿಸಲೇಬೇಕು ಅಂದುಕೊಂಡು ಸದ್ದು ಹೊಸಬನನ್ನು ಹುಡುಕಿಕೊಂಡು ಹೋದ. ಹೊಸಬ ಅಂಗಡಿಯೊಂದರ ಮುಂದೆ ಕಂಬಳಿ ಹೊದ್ದು ಮಲಗಿದ್ದ. ಸದ್ದು ಏಯ್ ಏಯ್ ಎಂದು ಕೂಗಿದ. ಆತ ಅದಕ್ಕೆ ಇನ್ನೊಂದು ಬದಿಗೆ ಹೊರಳಿ ಮಲಗಿದ. ಸದ್ದು ಇನ್ನಷ್ಟು ಜೋರಾಗಿ ಕೂಗಲು ಸುರುಮಾಡಿದಾಗ ಅವನು ದಿಗ್ಗನ ಎದ್ದು ಕುಳಿತ. ಅವನು ಹಾಗೆ ಎದ್ದ ಭರಕ್ಕೆ ಸದ್ದುವಿಗೆ ತುಸು ಭಯವಾಯಿತು. ಅದನ್ನು ತೋರಿಸಿಕೊಳ್ಳದೆ, “ಏನು, ಇಷ್ಟು ಹೊತ್ತಿಗೆಲ್ಲಾ ನಿದ್ದೆಯೆ? ” ಎಂದು ಗುರುತಿನ ಧಾಟಿಯಲ್ಲಿ ಸುರು ಮಾಡಿದ. ಅದಕ್ಕೆ ಹೊಸಬ ಏನೂ ಹೇಳದೆ ಕುಳಿತ. “ಬಹುಶಃ ಆ ಒಂಟಿ ಕಾಲಿನ ಕಸರತ್ತಿನಿಂದ ನಿನಗೆ ಸುಸ್ತಾಗಿರಬಹುದು,” ಎಂದ ಸದ್ದು. ಅದಕ್ಕೂ ಅವನು ಮಾತಾಡಲಿಲ್ಲ.
“ನನಗೊಬ್ಬನ ಪರಿಚಯವಿದೆ. ನಾನು ಹೇಳಿದರೆ ಅವನು ನಿನ್ನ ಒಂದು ಕಾಲನ್ನು ಮುರಿದುಕೊಡುತ್ತಾನೆ. ನೀನು ಖಾಯಮ್ಮಾಗಿ ಒಂಟಿಗಾಲನಾಗುತ್ತಿ. ಮತ್ತೆ ಒಂದು ಕಾಲು ಮಡಚುವ ಪ್ರಯಾಸ ಇಲ್ಲ.”
ಕತ್ತಲಲ್ಲಿ ಹೊಸಬನ ಮೋರೆ ಚೆನ್ನಾಗಿ ಕಾಣಿಸುತ್ತಿರಲಿಲ್ಲ. ಕಾಣಿಸುತ್ತಿದ್ದುದು ಕೆಂಪಗೆ ಉರಿಯುತ್ತಿದ್ದ ಎರಡು ಕಣ್ಣುಗಳು ಮಾತ್ರ.
“ಏನು ನಿನ್ನ ಹೆಸರು?” ಎಂದ ಸದ್ದು.
“ಹುಚ್ಚ” ಎಂದ ಆತ. ಕೆಟ್ಟ ಗರಗಸದಂಥ ಕಂಠ.
“ಹುಚ್ಚನಿರಬಹುದು. ಆದರೆ ಹುಚ್ಚರಿಗೂ ಒಂದು ಹೆಸರಿರುತ್ತದಲ್ಲ?”
“ನನ್ನ ಹೆಸರು ಹುಚ್ಚ.”
“ನಾನೂ ಹುಚ್ಚನೇ. ನನ್ನ ಹೆಸರು ಸದ್ದು – ಸದಾಶಿವ. ಹಾಗೆ ನಿನಗೂ ಒಂದು ಹೆಸರಿರಲೇ ಬೇಕು.”
ಹೊಸಬ ಪುನಃ ಮೌನ ತಳೆದ. ಮಾರ್ಗದಲ್ಲೊಂದು ಲಾರಿ ಹಾದುಹೋಗಿ ಒಂದು ಕ್ಷಣ ಇಬ್ಬರ ಮೇಲೂ ಬೆಳಕು ಹಾಯ್ದಿತು. ಸದ್ದು ಕೊನೆ ಮಾತು ಹೇಳುವವನಂತೆ ಹೇಳಿದೆ-
“ನೋಡು, ಇದು ಸಣ್ಣ ಊರು. ಇಲ್ಲಿ ಇಬ್ಬರು ಹುಚ್ಚರಿಗೆ ಎಡೆಯಿಲ್ಲ.”
“ನೀನು ಹುಚ್ಚನೆಂದು ಯಾರು ಹೇಳಿದರು? ನೀನು ಹುಚ್ಚನಲ್ಲ. ಹುಚ್ಚನ ಅಣಕ” ಸದ್ದು ನಿರೀಕ್ಷಿಸದಷ್ಟು ತಟ್ಟನೆ ಬಂತು ಉತ್ತರ.
“ಅದು ಹೇಗೆ?” ಸಾವರಿಸಿಕೊಂಡು ಕೇಳಿದ ಸದ್ದು.
“ಹೇಗೆಂದರೆ ನಿನಗೊಂದು ಹೆಸರಿದೆ. ಮನೆಯಿದೆ. ಹೆಂಡತಿ ಮಕ್ಕಳಿದ್ದಾರೆ. ರಾತ್ರಿ ಮಲಗಲು ಮನೆಗೆ ಹೋಗುತ್ತಿ. ಹೆಂಡತಿಯ ಕೈಯಡುಗೆ ಉಣ್ಣುತ್ತಿ. ಯಾವುದನ್ನೂ ಬಿಟ್ಟಿಲ್ಲ ನೀನು. ಅಸೂಯೆ ಕೂಡ. ಇಲ್ಲದಿದ್ದರೆ ನನ್ನನ್ನು ಕಂಡರೆ ನಿನಗೇಕೆ ಇಷ್ಟು ಕಿರಿಕಿರಿ?”
ಕೆಲವೊಂದು ನಿಮಿಷಗಳು ತುಂಬಾ ದಿವ್ಯವಾಗಿರುತ್ತವೆ. ಅವು ಅಂಥ ನಿಮಿಷಗಳಾಗಿದ್ದುವು. ಸದ್ದು ಮಾತಿಲ್ಲದೆ ಎದ್ದು ನಡೆದ. ನಂತರ ಐದಾರು ತಿಂಗಳ ಕಾಲ ಆತ ಎಲ್ಲಿಗೆ ಹೋದನೆಂದು ಯಾರಿಗೂ ತಿಳಿಯಲಿಲ್ಲ. ಮರಳಿ ಬಂದಾಗ ಅವನಿಗೆ ಹುಚ್ಚು ಇಳಿದಿತ್ತು. ಎಲ್ಲರಂತೆ ಇದ್ದ. ಈ ಮಧ್ಯೆ ಒಂದು ದಿನ ಹೊಸ ಹುಚ್ಚನೂ ಕೂಡ ಎಲ್ಲೋ ಹೊರಟುಹೋದ – ಅವನ ಮನೆಗಿದ್ದರೂ ಇರಬಹುದು. ನಂತರ ಕೆಲವು ಕಾಲ ಊರಲ್ಲಿ ಹುಚ್ಚರ ಹಾವಳಿಯಿರಲಿಲ್ಲ.
*****