ರಣಹದ್ದುಗಳು

ರಣಹದ್ದುಗಳು

ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ ಯಾರಿಗಾದರೂ ಮೇಲ್ನೋಟಕ್ಕೆ ಅನ್ನಿಸುವಂತಿದ್ದಳು. ಗರ್ಭಿಣಿಯನ್ನು ಪರೀಕ್ಷಿಸುವ ತನ್ನನ್ನೇ ರೆಪ್ಪೆ ಬಡಿಯದೆ ನೋಡುತ್ತಾನಿಂತ ಆ ಹೆಂಗಸಿನ ಅತ್ತೆ ಮತ್ತು ಗಂಡನನ್ನು ಅಳೆಯುವಂತೆ ನೋಡಿದ ಡಾಕ್ಟರಮ್ಮ ಕೊಳಕು ಜನ ಅಂತ ಮೂಗು ಮುರಿದಳು. ‘ಹೆರಿಗೆ ಕಷ್ಟವಾಗಬಹುದು’ ಎಂದಾಕೆ ಆವರಿಬ್ಬರ ಮೋರೆಯನ್ನು ದಿಟ್ಟಿಸಿದಳು. ಅವರ ಮುಖದಲ್ಲಿನ ರಕ್ತ ಥಟ್ಟನೆ ಹಿಂಗಿ ಹೋಗಿದ್ದನ್ನೂ ಗಮನಿಸಿದಳು. ಸಣ್ಣಗೆ ನಕ್ಕಳು.

“ಹೇಗಾದ್ರು ಆಗ್ಲಿ ಒಂದು ಬಾಟಲ್ ಬ್ಲೆಡ್ ರೆಡಿ ಮಾಡ್ಕೊಳ್ಳಿ” ಅಂದಳು.

“ಅದ್ಯಾಕೆ ಅಮ್ಯಾರೆ?” ಗರ್ಭಿಣಿಯ ಗಂಡ ರಂಗಯ್ಯ ಗಾಬರಿಯಾದ.

“ಹೇಳಿದಷ್ಟು ಮಾಡಯ್ಯ” ಗದರಿದಳು ಡಾ||ಸರಳಾ, ಅವನು ಬೆಪ್ಪಾದ. “ಈಕೆಯ ಬ್ಲೆಡ್ ಗ್ರೂಪ್ ಏನಂತ ಟೆಸ್ಟ್ ಮಾಡಿ ಈತನಿಗೆ ಹೇಳಿ ಸಿಸ್ಟರ್” ನರ್ಸ್‍ಳತ್ತ ತಿರುಗಿ ಆಜ್ಞಾಪಿಸಿದ ಸರಳಾ, ಬೇರೆ ಪೇಷಂಟ್ ಗಳತ್ತ ಹೊರಟಾಗ ರಂಗಯ್ಯ ದೀನನಾಗಿ ಹಿಂದೆಯೇ ಹೋದ.

“ಡಾಕ್ಟರಮ್ಮಾರೆ, ಹೆರಿಗೆ ಕಷ್ಟೇನು ಆಗಾಕಿಲ್ಲ ಅಂದಿದ್ದರು, ತಮಗಿಂತ್ಲೂ ಮುಂಚೆ ನೋಡಿದ ನರಸಮ್ಮಾರು” ಅಂದ. “ಡಾಕ್ಟರ್ ಅವಳಲ್ಲ ಕಣಯ್ಯ… ನಾನು” ದುರುಗುಟ್ಟಿ ಮುಂದೆ ನಡೆದಳು ಸರಳಾ. ಅವನು ತನ್ನನ್ನು ಹಿಂಬಾಲಿಸಿಕೊಂಡು ಬರುತ್ತಾನೆಂದು ಕೊಂಡಿದ್ದ ಅವಳ ಊಹೆ ಸುಳ್ಳಾಯಿತು. ಜನ ಮೊದಲಿನಂತಲ್ಲ, ಡಾಕ್ಟರ್ ಎಂದರೆ ದೇವರೆಂದು ತಿಳಿದಿದ್ದ ಕಾಲ ಒಂದಿತ್ತು. ಈಗಿನವರಿಗೆ ಡಾಕ್ಟರ್ ಮೇಲೆ ನಂಬಿಕೆಯೇ ಇಲ್ಲ ಎಂದು ಕಸಿವಿಸಿಗೊಳ್ಳುತ್ತಲೆ ಬಾಣಂತಿ, ಮಕ್ಕಳನ್ನು ಪರೀಕ್ಷಿಸುತ್ತಾ ಮುಂದೆ ಸಾಗಿದಳು. “ಮತ್ತೊಂದು ಹೆರಿಗೆ ಕೇಸ್ ಬಂದಿದೆ ಮೇಡಮ್” ಆಕೆಯ ಬಳಿ ಬಂದ ನರ್ಸ ಒಬ್ಬಳು ವರದಿ ಒಪ್ಪಿಸಿದಳು. “ಪಾರ್ಟಿ ಹೇಗೆ?” ಸರಳಾಳ ಬೋಳಿಸಿಕೊಂಡ ಹುಬ್ಬು ಮೇಲೇರಿದವು. “ಅಯ್ಯೋ ಸರ್ಕಾರಿ ಆಸ್ಪತ್ರೆಗೆ ಬರೋರೆ’ಲ್ಲ ಮಿಡ್ಲ್ ಕ್ಲಾಸ್‍ಗಳು ಮೇಡಮ್” ನರ್ಸ್ ನಕ್ಕಳು.

“ಸೆಂಟಿಮೆಂಟ್ಸ್ ಅವರಿಗೇ ಜಾಸ್ತಿ ಸಿಸ್ಟರ್. ಸಾಲ ಮಾಡಿಯಾದ್ರು ದುಡ್ಡು ತರ್ತಾರೆ” ಪುಸಕ್ಕನೆ ನಗುತ್ತ ಹಿಂತಿರುಗಿ ಬಂದಳು.

ಪೇಷಂಟ್ಸ್ ನ ಕಡೆಯವರು ಕೈ ಕೈ ಮುಗಿದರು. ಪೇಟೆ ಜನದಂತೆ ಕಂಡರು. ಆ ಗರ್ಭಿಣಿ ಹೆಂಗಸು ಅಗತ್ಯಕ್ಕಿಂತ ಹೆಚ್ಚಾಗಿಯೇ ಚೀರಾಡುತ್ತಿದ್ದಾಳೆನಿಸಿತು. ಆಯಾಗಳಿಗೆ ಒಳಗೆ ಕರೆದೊಯ್ಯುವಂತೆ ಸನ್ನೆ ಮಾಡಿದಳು. ಆತಂಕಗೊಳ್ಳದೆ ನಿಧಾನವಾಗಿ ಗರ್ಭಣಿಯ ಪಲ್ಸು ಬಿ.ಪಿ. ಪರೀಕ್ಷಿಸಿದಳು. ಸೀರೆ ಸರಿಸಿ ಪರೀಕ್ಷೆ ನಡೆಸಿದಳು. ಮಗುವಿನ ಹೆಡ್ ಸರಿಯಾಗಿ ಪಿಕ್ಸು ಆಗಿತ್ತು. ಸ್ಕೋಪ್ ಇಟ್ಟು ಎದೆ ಬಡಿತ ಪರೀಕ್ಷಿಸಿದಳು. ಎಲ್ಲವೂ ನಾರ್ಮಲ್ ಇದ್ದರೂ ಆತಂಕದ ಮುಖ ಹೊತ್ತು ದಡಬಡಿಸಿ ಹೊರಬಂದಳು ಡಾ||ಸರಳಾ.

“ಈಕೆ ಕಡೆಯೋರು ಯಾರ್ರಿ?” ಚಡಪಡಿಸಿದಳು.

“ನಾನು ಮೇಡಮ್… ಈಕೆ ಹಸ್ಬೆಂಡು” ಎಂದನಾತ.

“ಹೆರಿಗೆ ಶ್ಯಾನೆ ಕಷ್ಟವಾಗುತ್ತೆ ಕಣ್ರೀ. ಯಾಕ್ರಿ ಇಷ್ಟು ಲೇಟಾಗಿ ಕರ್‍ಕೊಂಡು ಬಂದ್ರಿ? ನೆತ್ತಿ ನೀರು ಬೇರೆ ಹೋಗಿದೆ. ಮೊದ್ಲೆ ಕರ್‍ಕೊಂಡು ಬರ್ಬೇಕು ಅನ್ನೋ ಕಾಮನ್ ಸೆನ್ಸ್ ಬೇಡವೇನ್ರಿ ನಿಮ್ಗೆ?”

ಡಾಕ್ಟರಮ್ಮನೇ ಹೆದರಿ ತತ್ತರಿಸಿ ಹೋಗುವಾಗ ಗರ್ಭಿಣಿ ಹೆಂಗಸಿನ ಕಡೆಯವರು ಆರೆ ಜೀವವಾದರು. “ಈಗ ಏನ್ ಮಾಡೋದು ಡಾಕ್ಟ್ರೇ?” ಆತ ಕಂಗಾಲಾದ.

“ಮಾದೋದಿನ್ನೇನು, ಹೆರಿಗೆ ಲೇಟ್ ಆಯ್ತು ಸಿಜೇರಿಯನ್ ಮಾಡಬೇಕಾಗುತ್ತೆ… ಇಲ್ಲದಿದ್ದರೆ – ತಾಯಿ ಮಗು ಇಬ್ಬರಿಗೂ ಅಪಾಯ”.

“ಏನಾದ್ರೂ ಮಾಡಿ ನನ್ನ ಹೆಂಡ್ತಿ-ಮಗು ಎರಡು ಜೀವಾನೂ ಉಳಿಸಿ ಕೊಡಿ ಡಾಕ್ಟರ್” ಆತ ಕೈ ಕೈ ಮುಗಿದ. ಡಾಕ್ಟರಮ್ಮ ತುಟಿ ಬಿಚ್ಚಲಿಲ್ಲ.

“ನಿಮ್ಮ ಫೀಜು ಬೇಕಾದ್ರೆ ತಗೊಳ್ಳಿ ಮೇಡಮ್” ಎಂದ ಮೆಲ್ಲಗೆ.

“ಮೇಡಮ್ ಫೀಜು ಮೂರು ಸಾವಿರ ಕಣ್ರಿ” ನರ್ಸ್ ಉಸುರಿದಳು.

“ಜಾಸ್ತಿ ಆಯ್ತಲ್ಲ. ಸ್ವಲ್ಪ ಕಡಿಮೆ ಮಾಡ್ಕೊಳ್ಳಿ” ಆತ ದೀನನಾದ, ಸರಳಾ ಅವನನ್ನೇ ನುಂಗುವಂತೆ ನೋಡಿದಳು. “ಅಲ್ರೀ ನರ್ಸಿಂಗ್ ಹೋಮ್ಗೆ ಆಡ್ಮಿಟ್ ಮಾಡಿದ್ರೆ ಎಂಟರಿಂದ ಹತ್ತು ಸಾವಿರ ಬಿಲ್ ಕಟ್ತೀರಾ… ನಾವು ಮೂರು ಸಾವಿರ ಕೇಳಿದ್ರೆ ಜಾಸ್ತಿ ಆಗಿಬಿಡುತ್ತಲ್ಲಾ?” ವ್ಯಂಗ್ಯವಾಗಿ ಪ್ರಶ್ನಿಸಿದಳು ಡಾ||ಸರಳಾ. ಆತನ ಜತೆಗೆ ಬಂದಿದ್ದ ದಪ್ಪನೆಯ ಹೆಂಗಸು ಆತನನ್ನು ದೂರ ಕೆರೆದೊಯ್ದು ಕೈಸನ್ನೆ ಬಾಯಿಸನ್ನೆ ಮಾಡಿದ ಮೇಲೆ ಆತ ಹಲ್ಲು ಗಿಂಜುತ್ತ ಬಂದು “ಆಯ್ತು ಮೇಡಮ್” ಅಂದು ಗೋಣು ಆಡಿಸಿದ. ಹಣ ಸಂಧಾಯವಾದ ಮೇಲೆ ತಿಳಿಯಾಗಿ ನಕ್ಕ ಡಾಕ್ಟರ್ ಸರಳಾ, “ಡೋಂಟ್ ವರಿ… ಸಿಜೇರಿಯನ್ ದೊಡ್ಡ ಆಪರೇಷನ್ ಏನಲ್ಲ. ಭಯ ಪಡೋ ಅಂತದ್ದೇನಿಲ್ಲ ವಿ ವಿಲ್ ಟೀಕ್ ಕೇರ್” ಎಂದು ವಾರ್ಡನತ್ತ ಹೆಜ್ಜೆ ಹಾಕುತ್ತಲೇ ನರ್ಸ್‍ಗಳು, ಆಯಾಗಳು ಆತನನು ಮುತ್ತಿಕೊಂಡರು ಬೆಲ್ಲಕ್ಕೆ ಮುತ್ತುವ ನೊಣದಂತೆ. ಇದನ್ನೆಲ್ಲಾ ಕಕ್ಕಾಬಿಕ್ಕಿಯಾಗಿ ನೋಡುತ್ತಾ ನಿಂತಿದ್ದ ಬಡಪಾಯಿ ರಂಗಯ್ಯ. ಸರಳಾಳೀಗ ಹೊರ ರೋಗಿಗಳನ್ನು ನೋಡಲು ಓ.ಪಿ.ಡಿ.ಗೆ ಬಂದು ಕೂತಳು. ಸಿಜೇರಿಯನ್ ಮಾಡಬೇಕೆಂದು ನಿರ್ಧರಿಸಿದ ಮೇಲೆ ಹೆವಿ ಪೇನ್ ಬರೋವರ್ಗೂ ಕಾಯುವ ಅಗತ್ಯವಿಲ್ಲವಾದರೂ ಅದೆಲ್ಲಾ ಪ್ರೊಪೆಷನಲ್ ಸೀಕ್ರೆಟ್ ಅಂತ ಮನದಲ್ಲೇ ನಕ್ಕಳು. ತರಾವರಿ ರೋಗಿಗಳನ್ನು ಯಾಂತ್ರಿಕವಾಗಿ ಪರೀಕ್ಷಿಸ ಹತ್ತಿದ್ದಳು. ಆಕೆಗೆ ಮೊದಲಿನಂತೆ ವೃತ್ತಿಯಲ್ಲಿ ಆಸಕ್ತಿಯೇ ಉಳಿದಿಲ್ಲ. ಅದಕ್ಕೆ ಕಾರಣವೂ ಇದ್ದೀತು.

ಕಳೆದ ವಾರವಷ್ಟೇ ಸರ್ಕಾರಿ ಆಸ್ಪತ್ರೆಯ ಮೇಲೆ ಲೋಕಾಯುಕ್ತರ ದಾಳಿ ನಡೆದಿತ್ತು. ಡಾಕ್ಟರ್ ಸರಳಾ ಗರ್ಭಕೋಶದ ಅಪರೇಷನ್ಗೆ ಮೂರು ಸಾವಿರ ತೆಗೆದುಕೊಂಡಿದ್ದನ್ನು ಆಪರೇಷನ್ ಮಾಡಿಸಿಕೊಂಡ ಹೆಂಗಸೊಬ್ಬಳು ಲೋಕಾಯುಕ್ತರ ಎದುರು ಬಾಯಿ ಬಿಟ್ಟಿದ್ದಳು ಆಥವಾ ಬಾಯಿ ಬಿಡಿಸಿದ್ದರು. ಸರಳಾಳನ್ನು ಕರೆಸಿ ಆಧಿಕಾರಿಗಳು ವಿಚಾರಿಸಿದಾಗ ಅವಳೇನೂ ಸುಲಭವಾಗಿ ಒಪ್ಪಿಕೊಂಡಿರಲಿಲ್ಲ. ನಾನು ಈಕೆಯಿಂದ ಒಂದು ಪೈಸೇನೂ ಮುಟ್ಟಿಲ್ಲವೆಂದೇ ಮಂಜುನಾಥಸ್ಥಾಮಿ ಮೇಲೆ ಆಣೆ ಮಾಡಿದ್ದಳು.

“ಅಲ್ರೀ.. ಇಲ್ಲಿ ಇಬ್ಬರು ಲೇಡಿ ಡಾಕ್ಟರ್ ಅವರಲ್ಲ ಈಕೆ ನಿಮ್ಮ ಹೆಸರನ್ನೇ ಯಾಕೆ ಹೇಳ್ತಿದಾಳೆ?” ಒರಟಾಗಿ ಗದರಿದ ಲೋಕಾಯುಕ್ತರ ಹೆಡ್ “ಮೊದಲು ಹಣ ವಾಪಸ್ ಮಾಡಿ. ಇಲ್ಲದಿದ್ದರೆ ಸರ್ಕಾರಕ್ಕೆ ರಿಪೋರ್ಟ ಮಾಡ್ತೀನಿ ಗೊತ್ತಾ… ಡಿಸ್ಮಿಸ್ ಆದ್ರೂ ಆಗಬಹುದು. ಬಿ ಕೇರ್ ಫುಲ್” ಹೆದರಿಸಿದ್ದರು. ಸರಳಾ ತಬ್ಬಿಬ್ಬುಗೊಂಡಿದ್ದಳು. ಎದುರಿನಲ್ಲಿಯೇ ಜಿಲ್ಲಾ ಸರ್ಜನ್, ತನ್ನ ಸಹೋದ್ಯೋಗಿ ವೈದ್ಯರು, ನರ್ಸ್ ಗಳು, ಸಾಲದ್ದಕ್ಕೆ ನೆರೆದಿದ್ದ ಲೋಕಲ್ ಮಂದಿಯ ಎದುರು ಎಂಥ ಅವಮಾನ. ಒಳಗೇ ಕುದಿದಳು. ಎಲ್ಲಾ ಲಂಚಕೋರರೇ. ಗ್ರಹಚಾರಕ್ಕೆ ಸಿಕ್ಕಿಬಿದ್ದವಳು ನಾನು. ವಾದ ಮಾಡಿದರೆ ಕೆಲಸಕ್ಕೆ ಸಂಚಕಾರವಾದೀತೆಂಬ ಅಳಕು, ಬೆವರುತ್ತಲೇ ವ್ಯಾನಿಟಿ ಬಯಾಗ್ನಿಂದ ಮೂರು ಸಾವಿರ ತೆಗೆದಿದ್ದಳು. “ಆಯಮ್ಮನಿಗೆ ನೀವೇ ಕೊಡ್ರಿ” ಅಧಿಕಾರಿ ಅಪ್ಪಣಿಸಿದ. ಯಾವನೋ ಒಬ್ಬ ಆಗಲೇ ಫೋಟೋ ತೆಗೆದ. ವಿಡಿಯೋ ಮಾಡುವವರ ಖುಷಿ ಬೇರೆ.

“ನಾಚಿಕೆಯಾಗೋದಿಲ್ವೇನ್ರಿ… ಇಷ್ಟು ಹಣ ವ್ಯಾನಿಟಿ ಬ್ಯಾಗ್‌ನಲ್ಲಿ ಯಾಕ್ರಿ, ಇಟ್ಕೋತೀರಾ ನೀವು? ಎಲ್ಲಾ ವಸೂಲಿ ಹಣ ತಾನೆ? ಯು ಸ್ಟುಪಿಡ್, ಎಂಜಲು ಕಾಸು ತಿಂದೇ ಬದುಕಬೇಕಾ… ಸರಕಾರ ಕೊಡ್ತಿರೋ ಸಂಬಳ ಸಾಕಾಗೋದಿಲ್ವೇನ್ರಿ ನಿಮ್ಗೆ? ಹಾಂ?” ಇನ್ನೊಬ್ಬ ಅಧಿಕಾರಿ ತರಾಟೆ ತಗೆದುಕೊಂಡಿದ್ದ.

ಮಾರನೆಯ ದಿನ ಪತ್ರಿಕೆಗಳಲ್ಲಿ ಅವಳ ಫೋಟೋ ಸಮೇತ ವರದಿ ಬಂದಾಗ ಖಿನ್ನಳಾಗಿದ್ದಳು. ಸ್ನೇಹಿತರು ಮಕ್ಕಳು, ಸಂಬಂಧಿಗಳ ರುದ್ರ ನೋಟಕ್ಕೆ ಉತ್ತರಿಸಲು ತಡಕಾಡುವಂತಾಗಿತ್ತು. “ನಾನೇನು ಅಷ್ಟೊಂದು ಹಣ ತಗೊಂಡಿರಲಿಲ್ಲ ಕಣ್ರಿ. ಒಂದು ಸಾವಿರ ತಗೊಂಡಿದ್ದೆ. ಆದರೆ ಆ ಥರ್ಡ ಕ್ಲಾಸ್ ಹೆಂಗಸು ಮೂರು ಸಾವಿರ ಅಂದುಬಿಟ್ಲು” ಅಂದಿದ್ದಳು. “ಆದರೂ ನೀವು ಕೊಡಬಾರದಿತ್ತು ಬಿಡಿ. ತೊಗೊಂಡಿಲ್ಲ ಅಂತ ದಬಾಯಿಸಬೇಕಿತ್ತು ಹೀಗಾದ್ರೆ ಡಾಕ್ಟರ್ ಡ್ಯೂಟಿ ಮಾಡಿದಹಾಗೆ” ಸಹೋದ್ಯೋಗಿ ವೈದ್ಯರದ್ದು ವ್ಯಂಗ್ಯವೋ ಅನುಕಂಪವೋ ಹಿಗ್ಗೋ ಎಂಬ ಎದೆಗುದಿಯಲ್ಲಿ ಮುಖ ಸಣ್ಣಗೆ ಮಾಡಿಕೊಂಡಿದ್ದಳು. ವಾರದ ಹಿಂದೆ ಬುಗಿಲೆದ್ದ ಈ ಕಿಚ್ಚು ಅವಳ ಎದೆಯಲ್ಲಿ ಧಗ ಧಗಿಸುತ್ತಲೇ ಇದ್ದಿತು. ಲಕ್ಷಾಂತರ ಖರ್ಚು ಮಾಡಿ ಪೇಮೆಂಟ್ ಸೀಟಲ್ಲಿ ಓದಿದ್ದು ಮತ್ತೆ ಕೆಲಸಕ್ಕಾಗಿ ಲಕ್ಷಾಂತರ ಲಂಚ ಕೈ ಬಿಟ್ಟಿದ್ದು ಎಲ್ಲಾ ನೆನಪಾದಾಗ ತಾವಾದರೂ ಬಿಟ್ಟಿ ದುಡಿಯಲು ಹೇಗೆ ಸಾಧ್ಯ? ತಾನು ಒಳಗೇ ಸಮರ್ಥಸಿಕೊಂಡಿದ್ದಳು.

ಲೋಕಾಯುಕ್ತರು ಬಂದು ಹೋದ ಮೇಲೆ ಅವಳ ಮನಸ್ಸೇ ಡೋಲಾಯ ಮಾನವಾಗಿತ್ತು. ತನಗಿರುವ ಕೆಪಾಸಿಟಿಗೆ, ಎಫಿಶಿಯೆನ್ಸಿಗೆ ಧಾರಾಳವಾಗಿ ಒಂದು ಅಚ್ಚುಕಟ್ಟಾದ ನರ್ಸಿಂಗ್ ಹೋಮ್ ತೆರೆದು ಲಕ್ಷಗಟ್ಟಲೆ ಸಂಪಾದಿಸಬಹುದಿತ್ತು. ತಾನೊಬ್ಬ ಸರ್ಜನ್ ಅನ್ನು ಮದುವೆಯಾಗದೆ ಇನ್ಸ್ಪೆಕ್ಟರ್ ಒಬ್ಬನನ್ನು ವರಿಸಿದ್ದು ಎಷ್ಟೊಂದು ತಪ್ಪಾಯಿತಲ್ಲ ಎಂದಾಕೆ ಇತ್ತೀಚೆಗೆ ವ್ಯಥೆ ಪಡದ ದಿನವಿರಲಿಲ್ಲ. ತಾನೊಬ್ಬ ಸರ್ಜನ್ ಆನ್ನು ಮದುವೆಯಾಗಿದ್ದರೆ ಇಬ್ಬರೂ ಸೇರಿ ನರ್ಸಿಂಗ್ ಹೋಂ ನಡೆಸಬಹುದಿತ್ತು ಎಂದು ನಿಟ್ಟುಸಿರು ಬಿಡದ ಕ್ಷಣವಿರಲಿಲ್ಲ. ಲೋಕಾಯುಕ್ತರು ಬಂದು ಹೋದ ಮೇಲೆ ಆಸ್ಪತ್ರೆಗೆ ಬರುವ ರೋಗಿಗಳು ವೈದ್ಯರನ್ನು ಪ್ರಶ್ನಿಸುವಂತಾದದ್ದು ಕಂಡು ಅವಳ ಮೈ ಉರಿದಿತ್ತು. ಜಿಲ್ಲಾ ಸರ್ಜನ್ ಬೇರೆ ಮೆಮೋ ಕೊಟ್ಟಿದ್ದ. ಮುಂದೆ ಇಂಥ ವರ್ತನೆ ಕಂಡುಬಂದಲ್ಲಿ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುತ್ತಾನಂತೆ, ಈಡಿಯಟ್. ಪ್ರತೀ ಕೇಸ್ಗೆ ಇಂತಿಷ್ಟು ಕಮಿಷನ್ ಪಡೆಯುವ ಬಕಾಸುರನಿಗೂ ಬಾಯಿ ಬಂದಿತ್ತು. ಅವಳು ರೇಗಿ ಅವನ ಮೋರೆಯ ಮೇಲೆ ಮೆವೋ ಬಿಸಾಕಿದ್ದಳು. ಆತ ಕೂಲ್ ಆಗಿದ್ದ. “ಇಷ್ಟಕ್ಕೆಲ್ಲಾ ಕೋಪ ಮಾಡ್ಕೊಂಡ್ರೆ ಹೇಗೆ ಟೇಕ್ ಇಟ್ ಈಸಿ… ನೋಡಿ, ಅಸ್ ಎ ಹೆಡ್ ಆಫ್ ದಿ ಡಿಪಾರ್ಟಮೆಂಟ್ ನಾನು ಫಾರ್ಮಾಲಿಟೀಸ್ಗಾದ್ರೂವೆ ಮೆಮೋ ಕೊಡಬೇಕಾಗುತ್ತೆ” ಎಂದು ಚೂಯಿಂಗಮ್ ಅಗಿದಿದ್ದ. ಅಷ್ಟಕ್ಕೇ ಬಿಡದೆ ಉಪದೇಶಕ್ಕೆ ನಿಲ್ಲುವಷ್ಟು ಕಸುವೂ ತೋರಿದ್ದ.

“ನೋಡಿ, ಇವತ್ತು ಸರಕಾರಿ ನೌಕರಿ ಮಾಡೋದು ಮೊದಲಿನಷ್ಟು ಈಸಿ ಅಲ್ಲ… ಯೂ ನೋ ಕಾನೂನಿನ ಕೈಗಳು ಬಹಳ ಉದ್ದ ಇವೆ ಡಾಕ್ಟ್ರೆ. ಪೇಷಂಟ್ ಅವರಾಗಿ ಕೊಟ್ರೆ ತಗೊಳ್ಳಿ, ಡಿಮ್ಯಾಂಡ್ ಮಾಡ್ಬೇಡಿ”.

ಎಲ್ಲಾ ನಾಯಿಗಳಿಗೂ ಬಾಯಿ ಬಂದು ಬಿಟ್ಟವೆ ಅಂದುಕೊಂಡಳಾದರೂ ಸರಳಾ ಸುಮ್ಮನಿರಲಿಲ್ಲ. “ನೋಡಿ ಸಾರ್, ಕಾನೂನು ಕೈಗಳು ಬಹಳ ಉದ್ದವಿದೆ ಅಗಲ ಇದೆ ಅಂತ ನನಗೆ ಉಪದೇಶ ಮಾಡ್ಬೇಡಿ. ಮನಿ ಅಂಡ್ ಇನ್ ಪ್ಲೂಯೆನ್ಸ್ ಮುಂದೆ ನಿಮ್ಮ ಕಾನೂನು ನಾಯಿ ತರ ಬಾಲ ಅಲ್ಲಾಡಿಸುತ್ತೆ ಗೊತ್ತಾ? ಇದೇ ಆಸ್ತತ್ರೆಯಲ್ಲಿ ಆರ್ಥೋಪಡಿಕ್ ಸರ್ಜನ್ ಒಬ್ಬರು ವಿಜಿಲೆನ್ಸ್ ಟ್ರಾಪ್ ನಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ನಾಳೆನೋ ನಾಡಿದ್ದೋ ಸಸ್ಪೆನ್‍ಶನ್ ಆರ್ಡರ್ ಬರುತ್ತೆ ಅಂತ ಕಾದಿದ್ದೇ ಕಾದಿದ್ದು. ಎಲ್ಲಿ ಬಂತು ಆರ್ಡರ್? ದಿನವೂ ಡ್ಯೂಟಿಗೆ ಬರ್ತಾ ಇದಾರೆ. ಟ್ರಾಪ್ ಆಗಿ ಎರಡು ವರ್ಷವೇ ಅಗೋಯ್ತು. ಇದು ನಿಮ್ಮ ವಿಜಿಲೆನ್ಸ್…. ಆ ಡಾಕ್ಟರ್ ಕಡೆಯೋನು ಯಾವನೋ ಒಬ್ಬ ಮಂತ್ರಿಯಂತೆ ಗೊತ್ತಾ?” ನಕ್ಕು ಬಿಟ್ಟಿದ್ದಳು ಸರಳಾ. ಜಿಲ್ಲಾ ಸರ್ಜನರ ಮೋರೆಯೂ ಬಾಯಲ್ಲಿದ್ದ ಚೂಯಿಂಗ್ ಗಮ್ನಂತೆಯೇ ರಸಹೀನವಾಗಿತ್ತು. ವಿನಾಕರಣ ಎಲ್ಲರ ಮುಂದೆ ಹರಿಹಾಯ್ದಿದ್ದಳು. “ಇದನ್ನೆಲ್ಲ ಈಸಿಯಾಗಿ ತಗೋಬೇಕು ಡಾರ್ಲಿಂಗ್” ಎಂದು ಎಸ್.ಐ. ಗಂಡ ನಕ್ಕಾಗಲೂ ಅಷ್ಟೇ ರೇಗಿದ್ದಳು. ಅವನೂ ಒಂದಿಷ್ಟು ತಲೆ ಹರಟೆಯ. “ನೀವು ಡಾಕ್ಟರ್ಸ ಇದ್ದೀರಲ್ಲ ‘ಲೈಸನ್ಸಡ್ ಕಿಲ್ಲರ್‍ಸ್’ ಅಂತ ತಮಾಷೆ ಮಾಡಿದ್ದ. ಲಾಕಾಪ್ ಡೆತ್ ಕೇಸ್ನಲ್ಲಿ ಸಿಕ್ಕಿಬಿದ್ದು ಹಣ ಸುರಿದು ಪಾರಾದ ಈವಯ್ಯನೂ ತನಗೆ ಉಪದೇಶ ಹೇಳುವಷ್ಟು ಕೊಬ್ಬಿದ್ದಾನೆ. ಅವಳಿಗಂತೂ ದೇಶದ ವ್ಯವಸ್ಥೆ ಬಗೆಗ್ಗೆಯೇ ಅಸಮಾಧಾನ, ಅಸಹನೆ ಅನುಮಾನ, ಆಕ್ರೋಶ. ಕೋಟಿಗಟ್ಟಲೆ ಲೂಟಿ ಮಾಡುವ ಖಾದಿಗಳನ್ನು ಬಿಟ್ಟು ಹೀಗೆ ಆಸ್ಪತ್ರೆಯವರ ಹಿಂದೆ ಬಿದ್ದಿರುವ ಲೋಕಾಯುಕ್ತದವರನ್ನು ಸುಟ್ಟು ಬಿಡುವಷ್ಟು ಸಿಟ್ಟು ತನಗೆ ಮೂರನೆಯ ಕಣ್ಣಿಲ್ಲವೆಂಬ ತಹತಹ.
* * *

“ಮೇಡಮ್, ಸಿಜೇರಿಯನ್ನ ಎಲ್ಲ ರೆಡಿಮಾಡಿದೆ… ಬರ್ತಿರಾ?” ಆಯಾ ಕರೆದಳು. ಒ.ಪಿ.ಡಿ.ಯನ್ನು ಡಾ||ಕೋಮಲಾಗೆ ಒಪ್ಪಿಸಿ ಎದ್ದು ಬಂದ ಸರಳಾ ಪೇಷಂಟನ್ನು ಪರೀಕ್ಷಿಸಿದಳು. ಇನ್ನೊಂದು ಅರ್ಧ-ಗಂಟೆಯಲ್ಲಿ ಹೆರಿಗೆ ಆಗುವ ಸಂಭವ ಇದೆ ಅನ್ನಿಸಿತು. ಗಡಬಡಿಸಿ ಕೈಗೆ ಗ್ಲೌಸ್ ಧರಿಸಿ ಸಿದ್ದಳಾದಳು. ಗರ್ಭಿಣಿಯ ಗಂಡ ಕೈ ಜೋಡಿಸಿದ.

“ಡೋಂಟ್ ವರಿ ಮಿಸ್ಟರ್, ನಾನು ಬರೆದು ಕೊಟ್ಟ ಡ್ರಗ್ಸ್ ಎಲ್ಲಾ ತಂದು ಕೊಟ್ಟಿದ್ದೀರಾ?” ಸರಳಾ ಪ್ರಶ್ನಿಸಿದಳು.

“ಎವರಿಥಿಂಗ್ ಈಸ್ ರೆಡಿ ಮೇಡಮ್” ಅಂದಳು ನರ್ಸ್. ಎರಡು ಕೇಸ್ಗೆ ಆಗುವಷ್ಟು ಹೆಚ್ಚೇ ಡ್ರಗ್ಸ್ ಬರೆದುಕೊಟ್ಟಿದ್ದಳು ಸರಳಾ.

“ಅಮ್ಮಾವರೆ, ನನ್ನೆ ಹೆಂಡ್ರ ಹರಿಗೆ ಯಾವಾಗಾದೀತ್ರೀ?” ಮೈಯೆಲ್ಲಾ ಮುದುಡಿಕೊಂಡು ನಡು ಬಾಗಿಸಿ ಕೇಳಿದ ರಂಗಯ್ಯ. “ಹೆರಿಗೆ ಕಷ್ಟ ಅಂತ ಆಗ್ಲೆ ಹೇಳಿದೆನಲ್ಲಯ್ಯ” ಥಟ್ಟನೆ ರೇಗಿದವಳೆ ಸರಳಾ ಒ.ಟಿ. ಸೇರಿಕೊಂಡಳು.

“ನೀವು ಯಾವ ಡಿಪಾರ್ಟ್ಮೆಂಟಿನಲ್ಲಿ ಕೆಲಸ ಮಾಡ್ತಿದೀರಾ?” ರಂಗಯ್ಯನನ್ನು ಆ ಪೇಟೆಯವ ಕೇಳಿದ. ತನ್ನ ಹೆಂಡತಿಯನ್ನು ಒ.ಟಿ.ಗೆ ಶಿಫ್ಟ್ ಮಾಡಿದ್ದರಿಂದಾಗಿ ಆತ ನಿರಾಳವಾಗಿದ್ದ. “ನಾನು ಅಂಚೆ ಪೇದೆ ಸ್ವಾಮಿ… ತಾವು?” ರಂಗಯ್ಯ ಕೇಳಿದ. “ಪಿ.ಡಬ್ಲ್ಯು.ಡಿ ಇಲಾಖೆಯಲ್ಲಿ ಮೇನೇಜರ್” ಆತ ಬೀಗಿದ್ದ ಅವನ ಕೈ ಬೆರಳುಗಳಲ್ಲಿನ ಉಂಗುರಗಳು ಕತ್ತಿನಲ್ಲಿನ ದಪ್ಪ ಚಿನ್ನದ ಸರ ಮಿನುಗಿದವು. ಶ್ರೀಮಂತ ವ್ಯಾಪಾರಿ ಇದ್ದಾನು ಅಂದುಕೊಂಡಿದ್ದ ರಂಗಯ್ಯನಿಗೆ ಆತ ಸರಕಾರಿ ನೌಕರ ಎಂದೊಡನ ಅಚ್ಚರಿಯಾಗಿತ್ತು. ಚೆನ್ನಾಗಿ ಕಮಾಯಿಸ್ತಿದ್ದಾನೆ ಎಂದು ನಿಡುಸೂಯ್ದ.

“ನಿಮ್ದು ಹೆರಿಗೆ ಕೇಸಾ?”

“ಹೌದ್ಸಾಮಿ. ಹೆರಿಗೆ ಕಷ್ಟ ಅಂದರು. ಸಿಜೇರಿಯನ್ ಆಗಬೇಕಂತೆ. ನಾನೆಲ್ಲಿಂದ ಮೂರು ಸಾವಿರ ತರ್‍ಲಿ ಸ್ವಾಮಿ” ಅಲವತ್ತುಕೊಂಡ ರಂಗಯ್ಯ.

“ಜೀವಕ್ಕಿಂತ ಹಣ ಹೆಚ್ಚೇನಯ್ಯ?” ಪೀ.ಡಬ್ಲ್ಯು,ಡಿ. ಮೇನೇಜರ್ ಜಬರಿಸಿದ.

“ಈ ಮಾತನ್ನು ತಾವು ಆ ಡಾಕ್ಟರಮ್ಮಂಗೆ ಹೇಳಿದ್ರೆ ಚೆಂದಾಗಿತ್ತು ಸ್ವಾಮಿ” ರಂಗಯ್ಯ ಗದ್ಗಿತನಾದ. ‘ಉಸ್’ ಅಂತ ಮೇನೇಜರ್ ಬೆಂಚಿನ ಮೇಲೆ ಕೂತ.

‘ದುಡ್ಡು ಹೊಂಚೋಕೆ ಆಗಾಕಿಲ್ವೇನೋ ರಂಗ’ ರಂಗಯ್ಯನ ತಾಯಿ ಹಪಹಪಿಕೆ.

“ಇನ್ನೂರಾ ಮುನ್ನೂರಾ… ನನ್ಮಕ್ಕೆ ಮೂರು ಸಾವಿರ ಯಾರ್ ಕೊತ್ತಾರೇಳವ್ವ” ಹನಿಗಣ್ಣಾದ “ಚೊಚ್ಚಲ ಹೆರಿಗೆ ಬಲು ಕಷ್ಟ ಕಣ್ಲಾ. ಸಿವ್ನೆ ಕಾಪಾಡ್ಬೇಕು. ಮುದುಕಿ ಕಣ್ಣೊರೆಸಿಕೊಂಡಿತು.

ಒಳಗಿನಿಂದ ರಂಗಯ್ಯನ ಹೆಂಡತಿಯ ಚೀರಾಟ ಚೋರಾಗಿಯೇ ಕೇಳಿ ಬರಲಾರಂಭಿಸಿದಾಗ ಕೆಂಡ ತುಳಿದವನಂತೆ ಎದ್ದು ನಿಂತನು ರಂಗಯ್ಯ. “ಯಾಕಂಗೆ ಚೀರಾಡ್ತಿಯೆ ಬಿಲಾಲಿ… ಗಂಡನ ಮಗ್ಗಲಾಗಿ ಮಕ್ಕಾ ಬೇಕಾರೆ ಚೆಂದಾಗಿತ್ತ… ಒಸಿ ತಡ್ಕೋ” ಆಯಾ ಒಬ್ಬಳು ಗದರಿಸುತ್ತಿದ್ದುದು ಕೇಳಿತು. “ಆಸ್ತತ್ರೆ ಹಾರಿ ಹೋಗೋಂಗೆ ಕೂಕೊತಾವ್ಳೆ. ಸೀಮೆಗಿಲ್ಲದ ಬಸಿರಾ ನಿಂದು, ಸರಿಯಾಗಿ ನೋವು ಕೊಡೆ… ಕಾಲು ಮಡಚ್ಕೋ” ನರ್ಸ್ ಒಬ್ಬಳು ರೇಗಾಡುತ್ತಿದ್ದಳು. ಡಾಕ್ಟರ್ ಸರಳಾ ಈಚೆ ಬಂದಾಗ ಪೀ.ಡಬ್ಲ್ಯು.ಡಿ. ಮೇನೇಜರ್ ಓ.ಟಿ. ಬಾಗಿಲಿಗೇ ಹೋದ. ‘ಕಂಗ್ರಾಟ್ಸ್ ಕಣ್ರೀ… ಗಂಡು ಮಗು’ ನಕ್ಕಳು “ತಾಯಿ-ಮಗು ಇಬ್ಬರೂ ಚೆನ್ನಾಗಿದ್ದಾರೆ. ಹತ್ತು ನಿಮಿಷ ತಾಳಿ. ವಾರ್ಡಗೆ ಶಿಫ್ಟ್ ಮಾಡ್ತಾರೆ, ನೋಡಿರಂತೆ” ಅಂದ ಸರಳಾ, ತನ್ನತ್ತ ಓಡೋಡಿ ಬಂದ ರಂಗಯ್ಯನತ್ತ ತಿರುಗಿ ಕೂಡ ನೋಡದೆ ಹೊರಟು ಹೋದಳು. ರಂಗಯ್ಯನಿಗೀಗ ಏನು ಮಾಡಬೇಕೋ ತೋಚದು. ತಲೆಯ ಮೇಲೆ ಕೈ ಹೊತ್ತು ಕೂತ.

“ಮಗು ತೋರ್ಸಿ ಸ್ವಲ್ಪ”, ಮೇನೇಜರ್, ಅವನ ಅಕ್ಕ ಕಾತರದಿಂದ ಬಾಗಿಲಲ್ಲಿ ನಿಂತ ಆಯಾಗಳನ್ನು ಬೇಡಿಕೊಳ್ಳುತ್ತಿದ್ದರು.

“ಸುಮ್ನೆ ತೋರಿಸ್ತೀವಾ… ಅದೂ ಗಂಡು ಮಗು! ತೆಗಿರೀ ಸಾ ಇನ್ನೂರು” ಆಯಾಗಳ ನಗೆ- ಆತ ನೋಟುಗಳನ್ನು ಎಣಿಸಿದ. ನರ್ಸಗಳೂ ಹಲ್ಲು ಗಿಂಜಿದರು. ಅವರ ಕೈಗಳಿಗೂ ನೋಟುಗಳು ಬಿದ್ದವು. ಆಮೇಲೆ ಎಲ್ಲಾ ಸುಸೂತ್ರವಾಗಿ ನಡೆಯಿತು. ನಗುನಗುತ್ತಲೇ ಮೇನೇಜರ್‍ನ ಹೆಂಡತಿಯನ್ನು ಎಲ್ಲಾ ಸೇರಿ ಕಾಳಜಿಯಿಂದ ವಾರ್ಡ‍ಗೆ ಶಿಫ್ಟ್ ಮಾಡಿದ್ದನ್ನು ನೋಡಿದ ರಂಗಯ್ಯನಿಗೆ ವಿಸ್ಮಯ. ಆಸ್ಪತ್ರೆಯವರಿಗೆ ನಗಲೂ ಬರುತ್ತದೆ! ರಂಗಯ್ಯನ ಹೆಂಡತಿ ಚೀರಾಟ ಆಗಾಗ ಕೇಳಿಬರುವಾಗ ಅವನ ಹೊಟ್ಟೆಯಲ್ಲೆಲ್ಲ ವಿಚಿತ್ರ ಸಂಕಟ. ಡಾಕ್ಟರ್ ಸರಳಾ ಪುನಃ ಬಂದು ಮೇನೇಜರ್ ಹೆಂಡತಿಯ ಪಲ್ಸ ಕಣ್ಣು ನಾಲಗೆ ಪರೀಕ್ಷಿಸಿದಳು. ಕೈ ಜೋಡಿಸಿದ. “ಅಮ್ಮಾರೆ, ನಮ್ಮೋಳ್ದು ಯಾವಾಗ ಆದೀತ್ರಮ್ಮ ಹೆರ್‍ಗೆ?” ಹೆದರುತ್ತಲೇ ಪ್ರಶ್ನಿಸಿದ.

“ದುಡ್ಡು ತಂದೇನಯ್ಯಾ?” ತಿರಸ್ಕಾರದಿಂದ ನೋಡಿದಳು ಡಾಕ್ಟರಮ್ಮ.
“ಎಲ್ಲಿಂದ ತರ್ಲಮ್ಮ. ಅಂಚೆ ಪೇದೆ ನಾನು…” ಬಡಬಡಿಸಿದ.

“ಬ್ಲಡ್ ಒಂದು ಬಾಟ್ಲಿ ಬೇಕು ಅಂದಿದ್ನಲ್ಲ ಅದನ್ನಾದ್ರೂ ತಂದ್ಯಾ? ನಾನ್ ಸೆನ್ಸ್.. ಸಿಜೇರಿಯನ್ ಮಾಡಿಸಿದ್ರೆ ಇಷ್ಟು ಹೊತ್ತಿಗಾಗ್ಲೆ ಆರಾಮಾಗಿರ್ತಿದ್ದಳಲ್ಲಯ್ಯ. ತಾಯಿ ಮಗು ಇಬ್ಬರ ಜೀವಕ್ಕೂ ಅಪಾಯ ಅಂತ ಹೇಳಿದ್ರೂ ಎಂತ ಉದಾಸೀನವಯ್ಯಾ ನಿಂದು ಹೋಗು, ಒಂದು ಬಾಟಲ್ ಬ್ಲಡ್ ನಾದ್ರೂ ತಂದು ಕೊಡು” ಬೇಸರಿಸಿದಳು ಡಾಕ್ಟರಮ್ಮ. ರಂಗಯ್ಯ ರಕ್ತನಿಧಿ ಕೇಂದ್ರದತ್ತ ಓಡಿದ. ಅಲ್ಲಿ ನಾಲ್ಕು ನೂರು ಫೀಜು ಕಟ್ಟಬೇಕೆಂದರು “ನಂದೆ ರಕ್ತ ಕೊಟ್ಟು ದುಡ್ಡು ಭ್ಯಾರೆ ಕೊಡಬೇಕಾ ಸಾ?” ಅಂತ ಹೌಹಾರಿದ ರಂಗಯ್ಯ. “ಬ್ಲಡ್ ಟೆಸ್ಟ್ ಗೆ ಸರಕಾರ ಫಿಕ್ಸ್ ಮಾಡಿದ ರೇಟ್ ಕಣಯ್ಯ ಇದು… ನಂದು ಬೇರೆ” ಅಲ್ಲಿನ ಡಾಕ್ಟರ್ ಗದರಿಕೊಂಡ. ಸರಕಾರಿ ಆಸ್ಪತ್ರೆನಾಗೆ ಫೀಜು ಬೇರೆ! ಮಾಮೂಲಿ ಬೇರೆನಾ ಸಿವ್ನೆ! ಮನದಲ್ಲಿಯೇ ವಿಲಿವಿಲಿ ಒದ್ದಾಡಿದ. ಜೇಬಿನಲ್ಲಿದ್ದಬದ್ದ ನೋಟನ್ನೆಲ್ಲಾ ಜೋಡಿಸಿ ಕೊಟ್ಟ. ಅವನಿಂದ ರಕ್ತ ಪಡೆದ ಡಾಕ್ಟರ್, ರಕ್ತವನ್ನು ನಾನಾ ರೀತಿ ಟೆಸ್ಟ್ ಮಾಡಿದ ಅನಂತರ ಸೀಲ್ಡ್ ಬ್ಯಾಗ್ ಅವನ ಕೈಗಿತ್ತ. ಓಡಿ ಬಂದ ರಂಗಯ್ಯ ನರ್ಸಮ್ಮಗಳ ಕೈಗೆ ರಕ್ತ ಒಪ್ಪಿಸಿದ. “ಡಾಕ್ಟರಮ್ಮಾರ್‍ಗೆ ನೀವಾರ ಒಸಿ ಹೇಳ್ರಮ್ಮ” ಅಂತ ಗೋಗರೆದ. “ಸಂಜೆ ಆತು ಕಾಫೀಗಾರ ದುಡ್ಡು ಕೊಡಯ್ಯ” ದಡೂತಿ ಆಯಾ ಗಂಟು ಬಿದ್ದಳು. ಹಿಂದೆಯೇ ಇನ್ನಿಬ್ಬರು ಬಂದರು.

“ದೋಸೆಗೂ ಕಾಸು ಕೊಡು. ಸಾಯಂಕಾಲ ಟಿಫನ್ ಮಾಡದಿದ್ದರೆ ಕೈ ಕಾಲೆ ಆಡಾಕಿಲ್ಲ” ನರ್ಸ್ ರಾಗ ತೆಗೆದಳು. ತಾಯಿ ಕೊಡು ಎಂಬಂತೆ ಸನ್ನೆ ಮಾಡಿದಳು. ಚಡ್ಡಿ ಜೇಬಿಗೆ ಕೈ ಹಾಕಿ, ತಡಕಾಡಿ ತೆಗೆದು ಸಮರ್ಪಿಸಿದ. ಡಾಕ್ಟರ್ ಸರಳಾ ಟಪಟಪನೆ ಸ್ಲಿಪರ್ ಬಡಿಯುತ್ತಾ ಬಂದಳು. ರಂಗಯ್ಯ ಗಕ್ಕನೆ ಎದ್ದು ನಿಂತು ಕೈ ಜೋಡಿಸಿದ. “ಇದು ಓಸಿ ಗಿರಾಕಿ ಮೇಡಮ್” ಎಂದು ನಕ್ಕರು ನರ್ಸ್ ಗಳು. ಲೇಬರ್ ರೂಮ್ನ ಒಳಹೋದಾಗ ಇವನಿಗೆಷ್ಟೋ ಹಾಯೆನಿಸಿತು. ದೋಸೆ, ಕಾಫೀಗಳೂ ಬಂದವು. ಎಲ್ಲರೂ ನಗುತ್ತ ಕೆನೆಯುತ್ತ ಟಿಫನ್ ಮುಗಿಸಿದರು. “ಇನ್ನು ಅರ್ಧಗಂಟೆನಾಗೆ ನಿನ್ನ ಹೆಂಡ್ರ ಹೆರಿಗೆ ಆಯ್ತದೆ ಕಣಯ್ಯ” ಎಂದು ಡಾಕ್ಟರಮ್ಮನಂತೆ ಪೋಜ್ ಕೊಟ್ಟ ಆಯಾ ಡರ್ರನೆ ತೇಗಿದಳು. ಲೇಬರ್ ರೂಮ್ ನ ಬಾಗಿಲುಗಳು ಮುಚ್ಚಿಕೊಂಡವು. ಕೆಂಪು ದೀಪ ಹತ್ತಿಕೊಂಡಿತು. ಅರ್ಧಗಂಟೆ ಕೇಳದಿರಬೇಕು. ಕೂತು ಕೂತು ಸಾಕಾಗಿ ಕೂತಲ್ಲೆ ನಿದ್ದೆಗೆ ಜಾರಿದ್ದ ರಂಗಯ್ಯ ಅಳುವ ಮಗುವಿನ ಸದ್ದು ಕೇಳುತ್ತಲೇ ದಡಬಡಿಸಿ ಎದ್ದ. ತಾಯಿಯ ಮೋರೆ ಊರಗಲವಾಗಿತ್ತು. ಹೊರಬಂದ ಆಯಾಗೆ ಕೇಳಿದ – “ಎಂತ ಮಗುನ್ರವ್ವ?”

“ಗಂಡು ಕಣಯ್ಯ, ಫಾರ್ ಸೆಪ್ಸ್ ಹಾಕಿ ಕೂಸನ್ನ ತೆಗಿಬೇಕಾತು, ಹೆರಿಗೆ ಸಖತ್ ಕಷ್ಟವಾತು.” ಆಕೆ ಏನೇನೋ ಹೇಳುತ್ತಿದ್ದಳು. ಇವನಿಗೆ ಅರ್ಥವಾಗಲಿಲ್ಲ.
“ಒಟ್ನಾಗೆ ಕೂಸು, ಬಾಣಂತಿ ಜೀವಕ್ಕೇನು ಬಾಧಕ ಇಲ್ಲ ತಾನೆ” ರಂಗಯ್ಯನ ಆತಂಕ.
“ಮಗು ತೋರಿಸ್ರವ್ವಾರೆ’ ರಂಗಯ್ಯನ ತಾಯಿ ಅಂಗಲಾಚಿ ಬೇಡಿದಳು.
“ಪುಗಸಟ್ಟೆ ತೋರಿಸ್ತಿವಾ… ಇನ್ನೂರು ತೆಗಿ” ಅಂದಳು ಆಯಾ.
“ಯಾಕ್ರವ್ವಾ?” ಉಗುಳು ನುಂಗಿದಳು ರಂಗಯ್ಯನ ತಾಯಿ.
“ಗಂಡು ಮಗುವಾದ್ರೆ ಇನ್ನೂರು, ಹೆಣ್ಣಾದ್ರೆ ನೂರು ಮಡಗಬೇಕು.”
“ನಂತಾವ ನೂರೇ ಇರಾದು” ಮುದುಕಿ ಎಲೆ, ಅಡ್ಕೆ ಸಂಚಿಯಿಂದ ತೆಗೆಯಿತು. ನುಂಗಿ ಬಿಡುವವಳಂತೆ ನೋಡಿದ ಆಯಾ “ಭಿಕನಾಸಿಗುಳಾ” ಎಂದು ಅದನ್ನೇ ಕಿತ್ತುಕೊಂಡು ಹೋದಳು. ತಾಯಿ, ಮಗ ಮುಖ ಮುಖ ನೋಡಿಕೊಂಡರು.

ಪೋಲಿಸ್ ಜೀಪ್ ಒಂದು ಬಂತು, ಪೇದೆಯೊಬ್ಬ ಒಳ ಬಂದ “ಡಾಕ್ಟರಮ್ಮ ಇದಾರಾ?” ಕೇಳಿದ. ಆಷ್ಟರಲ್ಲಿ ಡಾ||ಸರಳಾ ಟವೆಲ್ನಿಂದ ಕೈ ಒರೆಸಿಕೊಳ್ಳುತ್ತ ಈಚೆ ಬಂದಳು.

ತಾಯಿ-ಮಗ ಭಯ ಭಕ್ತಿಯಿಂದ ಕೈ ಮುಗಿದರು. ಆಕೆಗೆ ಅವರತ್ತ ನೋಡಲೂ ವ್ಯವಧಾನವಿಲ್ಲ. ಪೋಲಿಸ್ ಪೇದೆ ಸೆಲ್ಯೂಟ್ ಹೊಡೆದ. ಹೋಗೋಣ ಅಂದಿದ್ದರಂತಲ್ಲಮ್ಮ. ಸಾಹೇಬರು ಜೀಪ್ ಕಳಿಸಿದಾರೆ” ವಿನಂತಿಸಿಕೊಂಡ, “ಆವರು ಯಾಕಯ್ಯ ಬರಲಿಲ್ಲ?” ಸಿಡುಕಿದಳು ಸರಳಾ.

“ಸಾಹೇಬ್ರು ಥೇಟ್ರತಾವೇ ಬರ್ತಾರಂತ್ರಮ್ಮ” ಅಂದ.

“ನರ್ಸ್” ಎಂದು ಕೂಗಿದಳು ಡಾ||ಸರಳಾ. ನರ್ಸ್ ಓಡಿಬಂದಳು.

“ಸಿಸ್ಟರ್, ಆ ಹೆಂಗಸಿಗೆ ಸೆತ್ತೆ (ಪ್ಲಾಸೆಂಟಾ) ಇನ್ನೂ ಬಿದ್ದಿಲ್ಲ ಆರ್ಟರಿ ಫಾರ್ ಸೆಪ್ಸ್ ಹಾಕಿದೀನಿ… ಬಿ ಕೇರ್ಪುಲ್’ ಅಂದ ಸರಳಾ ಹೊರಟಳು.

“ನಂದೂ ಡ್ಯೂಟಿ ಆಯ್ತು ಮೇಡಮ್” ನರ್ಸ್ ಗೂ ಹೋಗುವ ಆತುರ. ತನ್ನ ರಿಲೀವರ್ ಗಂಟೆಗಟ್ಟಳೆ ಬರುವುದು ಬೇರೆ, ತಡಮಾಡುತ್ತಾಳೆಂಬ ಕೆಟ್ಟ ಕೋಪ ಬೇರೆ. ಡಾಕ್ಟರಮ್ಮ ‘ಸರಿಸರಿ’ ಎನ್ನುತ್ತ ಜೀಪ್ ಹತ್ತಿ ಹೊರಟೇ ಹೋದಳು. ನರ್ಸ್ ಕೂಡ ಬದಿಯ ಕೋಣೆಗೆ ಹೋಗಿ ತನ್ನ ಬಿಳಿ ಸೀರೆ ಬದಲಿಗೆ ಬುಟ್ಟಿಯಲ್ಲಿ ತಂದಿದ್ದ ಕಲರ್ ಸೀರೆ ಸುತ್ತಿಕೊಂಡು ಈಚೆ ಬಂದಳು.

“ನಾವು ತಾಯಿ ಮಗೀ ನಾ ನೋಡ್ಬೋದಾ” ತಾಯಿ, ಮಗಾ ಇಬ್ಬರೂ ಬೇಡಿಕೊಂಡರು.

“ವಾರ್ಡ್ ಗೆ ತರ್ತಾರೆ, ತಾಳಯ್ಯ” ಆಕೆಯ ಚಡಪಡಿಕೆ. ರಿಲೀವರ್ ಬಂದಳು. ಅವಳು ಬರುತ್ತಲೆ ಅವಳಿಗಾಗಿ ಕಾದು ಬೇಸತ್ತಿದ್ದ ನರ್ಸ್ ಸರಸರನೆ ಹೂರಹೋಗಿ ಸ್ಕೂಟಿ ಏರಿ ಹಾರಿಹೋದಳು. ಆಗ ತಾನೆ ಬಂದ ನರ್ಸ್ ರಂಗಯ್ಯನ ಹೆಂಡತಿಯನ್ನು ವಾರ್ಡ್‍ಗೆ ಶಿಫ್ಟು ಮಾಡಿಸಿದಳು. ಕೆಂಪಗಿನ ದುಂಡು ದುಂಡನೆಯ ಮಗು ನೋಡಿ ತಾಯಿ, ಮಗನಿಗೆ ಹಿಗ್ಗೋ ಹಿಗ್ಗು ಬಳಲಿದಂತೆ ಕಂಡ ಹೆಂಡತಿಯ ತಲೆ ನೇವರಿಸಿದ ರಂಗಯ್ಯ ಕೇಳಿದ- “ನಂಜಿ ಚೆಂದಾಗಿದ್ದೀಯಾ?” ಹೂಂಗುಟ್ಟಿದಳು ನಂಜಿ. “ಮಗೀನಾ ಕೈನಾಗೆ ಏನಾ ರಾ ಇಕ್ಕೋ” ಅಂದಳು ತಾಯಿ. ಬೇಬು ತಡಕಾಡಿದ. ನಿಟ್ಟಸಿರುಬಿಟ್ಟ. “ನೀನ್ ಮನೇಗೆ ಹೋಗು ಮಗಾ, ಮನೆಯಾಗೆ ತಂಗಿ ಒಬ್ಬಳೇ ಅವ್ಳೆ… ಆಗ್ಲೆ ರಾತ್ರಿ ಆತು. ಇವಳ್ನ ನಾನು ನೋಡ್ಕೊಂತಿನಿ” ಎಂದ ತಾಯಿ ರಂಗಯ್ಯನನ್ನು ಮನೆಗೆ ಸಾಗ ಹಾಕಿದಳು. ಮಗು ಕಿರಿಕಿರಿ ಮಾಡುವಾಗ ನರ್ಸ್ ಬಂದು ಮಗುವಿನ ಬಾಯಿಗೆ ಚಮಚದಲ್ಲಿ ಏನೋ ಹಾಕಿ ಹೋದಳು. ನಂಜಿ ಜೋರಾಗಿ ನರಳುತ್ತಾ ಇದ್ದಳು. ನರಳಿಕೆ ಹೆಚ್ಚಾಗುತ್ತಾ ಹೋದಾಗ ಹೆದರಿದ ಮುದುಕಿ ನರ್ಸ್ ಬಳಿ ಓಡಿತು. “ಯಾಕೋ ನರಳ್ತಾ ಅವ್ಳೆ ಬಂದು ನೋಡಿ ತಾಯಿ” ಎಂದು ಅಲವತ್ತುಕೊಂಡಿತು. “ನರಳ್ದೆ ಹೆರಿಗೆ ಆದೋಳೇನ್ ನಗ್ತಾಳಾ… ಹೋಗ್ಹೋಗು” ಗಂಟುಮೋರೆಯ ಕರಿ ನರ್ಸ್ ಗುಡುಗಿದಳು.

ರಾತ್ರಿಯೆಲ್ಲಾ ನಂಜಿ ನರಳಾಟ ನಿಲ್ಲಲಿಲ್ಲ ಮುದುಕಿಗೆ ನಿದ್ದೆ ಹತ್ತಲಿಲ್ಲ ಹಸಿವು ಬೇರೆ ನೆನಪಿಗೆ ಬಂತು. “ಬೆಳಿಗ್ಗೆಯಿಂದ ಇದೇ ಆಗೋಯ್ತು” ನಿಡುಸುಯ್ದಿತು ಮುದುಕಿ. ನಂಜಿಯ ಮುಖವೆಲ್ಲಾ ಬಿಳಿಚಿಕೊಂಡಿದೆ. ಮುಲುಕಲೂ ಪ್ರಯಾಸಪಡುತ್ತಿದ್ದಾಳೆ. ಮುದುಕಿಗೆ ಮತ್ತೆ ನರ್ಸ್ ನ ಕರೆಯುವ ಧೈರ್ಯವಾಗಲಿಲ್ಲ. ದೇವರಿಗೆ ಹರಕೆ ಕಟ್ಟಿಕೊಂಡಳು. ರಸಹೀರಿದ್ದಕಬ್ಬಿನ ಸಿಪ್ಪೆಯಂತಾಗಿದ್ದ ನಂಜಿ ಮೋರೆ ನೋಡುತ್ತಾ ಕಣ್ಣೀರ್ಗೆರೆಯುತ್ತಾ ಮಂಚಕ್ಕೆ ಒರಗಿ ಕುಳಿತ ಆಕೆಗೆ ಅದ್ಯಾವಾಗಲೋ ನಿದ್ದೆ ಕವಿದಿತ್ತು. ಬೆಳಗ್ಗಿನ ಜಾವದ ಚಳಿಗೆ ಗಡಬಡಿಸಿ ಕೂತ ಮುದುಕಿ ನಂಜಿಯತ್ತ ನೋಡಿದಳು. ನರಳಾಟವಿಲ್ಲ, ಮನೆಸ್ಸಿಗೆ ಸಮಾಧಾನವೆನಿಸಿತು. ‘ದೇವರು ನಮ್ಮಪ್ಪ ದೊಡ್ಡೋನವ್ನೆ’ ಎನ್ನುತ್ತ ಎದ್ದು ಅಕ್ಕರಾಸ್ತೆಯಿಂದ ನಂಜಿಯ ತಲೆ ನೇವರಿಸಿದಳು. ಅನುಮಾನದಿಂದ ಹಣೆ ಮುಟ್ಟಿದಳು. ತಣ್ಣಗಿತ್ತು ಕೈ-ಮೈ ಮುಟ್ಟಿದಳು, ಮಂಜು ಮುಟ್ಟಿದಂತಾಯಿತು. ‘ನಂಜಿ-ಎಯ್ ನಂಜಿ’ ಕೂಗಿದರೂ ಮಾತಿಲ್ಲ ಕತೆಯಿಲ್ಲ ನರ್ಸಮ್ಮನ ಕೋಣೆಗೆ ಓಡಿತು ಮುದುಕಿ. ಆಕಳಿಸುತ್ತಾ ನಿಧಾನವಾಗಿ ಬಂದ ನರ್ಸಮ್ಮ ಪರೀಕ್ಷಿಸಿದಳು. “ಏನಾಗೇತ್ರವ್ವ…? ಮಾತೇ ಆಡುವಲ್ಲು” ಮುದುಕಿ ಬುಳುಬುಳು ಅತ್ತಳು- “ಏನಾಗಿಲ್ಲ ಸುಮ್ಗಿರು. ಜಬರಿದ ನರ್ಸ್ ಸುರಸುರನೆ ಬಂದು ಡಾಕ್ಟರಮ್ಮನ ಮನೆಗೆ ಫೋನ್ ಮಾಡಿದಳು. ಅರ್ಧಗಂಟೆ ಕಾದ ಮೇಲೆ ಕಾರು ಬಂತು. ಒಳಬಂದ ಡಾ||ಸರಳಾ ಕ್ಷಣ ನಿಂತು ನೋಡಿದಳು. ನಂಜಿಗೆ ಹೊದಿಸಿದ್ದ ಕೆಂಪು ರಗ್ ಎತ್ತಲು ಮುಟ್ಟಿದಳು. ಹಸಿಹಸಿ ಕೆಂಪು ಕೈಗೆ ಹತ್ತಿತು. “ಬ್ಲೀಡಿಂಗ್ ಆಗಿದೆ, ನೋಡ್ಕೋಬಾರ್ದೇ ಸಿಸ್ಟರ್” ಎಂದು ಗೊಣಗುತ್ತಾ ರಗ್ ಎತ್ತಿ ನೋಡಿದಳು. ಹೆಪ್ಪುಗಟ್ಟಿ ನಿಂತ ರಕ್ತ ಕಣ್ಣಿಗೆ ರಾಚಿತು. ಬೆಚ್ಚಿ ಬಿದ್ದಳು. ತಾನು ಆರ್ಟರಿ ಫಾರ್ ಸೆಪ್ಸ್ ಹಾಕಿ ಹೋದದ್ದು ನೆನಪಾಯಿತು. ಆರ್ಟರಿ ಫಾರ್ ಸೆಪ್ಸ್ ಕಾಣಲಿಲ್ಲ. ರಕ್ತದ ಬಾಟಲ್ ಫ್ರಿಜ್ ನಲ್ಲೇ ಇತ್ತು. “ಸಿಸ್ಟರ್ ಈಕೆ ಸತ್ತೆ ಬಿದ್ದಿತೆ?”, “ಏನೋ ಮೇಡಮ್, ನರ್ಸ್ ವಿಮಲಾ ನಂಗೇನು ಹೇಳ್ಳಿಲ್ಲ. ನಾನು ವಾರ್ಡ್ ಗೆ ಶಿಫ್ಟ್ ಮಾಡಿಸ್ದೆ ನೀವು ಕೇಸ್ ಶೀಟ್ನಲ್ಲಿ ಬರೆದಂತೆ ಟ್ರೀಟ್ ಮೆಂಟ್ ಫಾಲೋ ಮಾಡಿದೀನಿ… ಆದರೆ ಈಕೆ…”

“ಆದರೇನು ಷಿ ಈಸ್ ಡೆಡ್” ಅಂದ ಡಾಕ್ಟರ್ ಸರಳಾ ಬಂದಂತೆಯೇ ಕಾರಿನಲ್ಲಿ ಹೊರಟು ಹೋದಳು. ಮುದುಕಿಗೆ ಅವರ ಮಾತೊಂದು ಆರ್ಥವಾಗಲಿಲ್ಲ “ಏನಾತ್ರವ್ವ ನನ್ ಮಗೀಗೆ. ಡಾಕ್ಟರಮ್ಮ ಏನೂ ಹೇಳ್ದಂಗೆ ಹೊಂಟು ಹೋದ್ರೆ” ಮುದುಕಿ ತೊದಲ್ನುಡಿಯಿತು. “ಈಕೆ ತೀರಿಕೊಂಡವ್ಳೆ” ನರ್ಸ್ ಹೇಳಿ ಅಂತರ್ಧಾನಳಾದಳು. ಮುದುಕಿ ಬಾಯಿಬಾಯಿ ಬಡ್ಕೊಂಡು ಅಳಲು ಶುರುಮಾಡಿದಾಗ ನಿದ್ರಾಭಂಗವಾದ್ದರಿಂದ ಕೆರಳಿ ಕೆಂಡವಾದ ಆಯಾಗಳು ಎದ್ದು ಬಂದರು. “ಮುಚ್ಚೆ ಬಾಯಿ ಮುದ್ಕಿ… ಎಲ್ಲಾರು ಒಂದಿನ್ ಹೋಗೋದೆಯಾ” ಅಂತ ಸಿಡಿಮಿಡಿಗೊಂಡರು. “ಅತ್ತು ಕರ್‍ದು ರಂಪ ಮಾಡಿದ್ರೆ ಆಚೆ ಕಳಿಸ್ತೀನಿ” ನರ್ಸ್ ಕೂಡ ಗದರಿದಳು. ಆಗಲೆ ಕಾಫೀ ಪ್ಲಾಸ್ಕ್ ಹಿಡಿದು ಬಂದ ರಂಗಯ್ಯ ಸನ್ನಿವೇಶವನ್ನು ನೋಡಿ ಕಕ್ಕಾಬಿಕ್ಕಿಯಾದ. ಪ್ಲಾಸ್ಕ್ ನೆಲಕ್ಕೆ ಬಿತ್ತು. ಅವನನ್ನು ಆಳಲೂ ಬಿಡದೆ ಹೊರ ತಳ್ಳಿದರು ಆಯಾಗಳು. “ಬೇಗ ಬಾಡಿ ತಗೊಂಡೋಗು. ಇಲ್ಲದಿದ್ರೆ ಡೆಡ್ ಹೌಸ್ಗೆ ಹಾಕಿಬಿಡ್ತೀವಿ ಅಷ್ಟೆಯಾ” ಎಂದು ಎಚ್ಚರಿಸಿದರು. ಆಟೋದವನೊಬ್ಬನನ್ನು ಹೇಗೋ ಒಪ್ಪಿಸಿ ಕರೆತಂದ ರಂಗಯ್ಯ. ಸ್ಟೆಚರ್ ಮೇಲೆ ತಂದು ಆಟೋದಲ್ಲಿ ಮಲಗಿಸಿದ ವಾರ್ಡ್ ಬಾಯ್ ಗಳು ತಲೆ ಕೆರೆಯುತ್ತಾ “ಕಾಫೀಗೇನಾದ್ರೂ ಕೊಡ್ರಿ” ಅಂತ ಕೈಯೊಡ್ಡಿದರು.
* * *

ಡಾಕ್ಟರ್ ಸರಳಾ ಸ್ನಾನ ಮುಗಿಸಿ, ದೇವರಿಗೆ ದೀಪ ಹಚ್ಚಿಸಿ ಖಾಲಿ ವ್ಯಾನಿಟಿ ಬ್ಯಾಗ್ ಹೆಗಲಿಗೇರಿಸಿ ಕಾರಿನಲ್ಲಿ ಬಂದಿಳಿದಳು. ಅಲ್ಲಿಗೆ ಓಡಿ ಬಂದ ಆಯಿಲ್ ಮಿಲ್ ಚಂದ್ರಯ್ಯ “ನನ್ನ ಮಗಳಿಗೆ ಲೇಬರ್ ಪೇಯಿನ್ ಕಮೆನ್ಸ್ ಆಗ್ಯದೆ ಡಾಕ್ಟ್ರೆ ಅಂತ ಹೋಯ್ದಾಡಿದ. ಪ್ರತೀ ತಿಂಗಳು ತನ್ನ ಬಳಿಯೇ ಚೆಕ್‌ಅಪ್ಗೆ ಬರುವ, ಕೇಳಿದಷ್ಟು ಹಣ ಪೀಕುವ ಚಂದ್ರಯ್ಯನ ಮಗಳೆಂದರೆ ಸರಳಾಗೂ ಅಕ್ಕರೆ. “ನಥಿಂಗ್ ಟು ವರಿ… ನಾನ್ ಇದೀನಿ ಬನ್ನಿ ಸಾರ್” ಅಂದಳು. “ಮೇಡಮ್ ತಮ್ಮ ಫೀಜು?” ಚಂದ್ರಯ್ಯ ಸಂಕೋಚದಿಂದಲೇ ಜೀಬಿಗೆ ಕೈ ಹಾಕಿದ. “ಅಯ್ಯೋ, ಕೊಡುವಿರಂತೆ ಬನ್ನಿ, ಮೊದ್ಲು ಕೇಸು, ಆಮೇಲೆ ಕಾಸು” ದಾಳಿಂಬೆ ಬಿರಿದಂತೆ ನಕ್ಕಳು ಡಾಕ್ಟರಮ್ಮ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅನಾಥ ಮಗು
Next post ಉಷೆಯೆನ್ನ ಬಾಳ ನಗೆ

ಸಣ್ಣ ಕತೆ

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…