ಗಿಣಿಯ ಸಾಕ್ಷಿ

ಗಿಣಿಯ ಸಾಕ್ಷಿ

ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು.

ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ ಭುಜದ ಮೇಲೆ ಸದಾ ಸಂತಸದಿಂದ ಹರಟುತ್ತಿದ್ದ ಗಿಣಿ ಅವಳ ಎದೆಯ ಮೇಲೆ ಕುಳಿತು ಕೀರಲು ಧ್ವನಿಯಲ್ಲಿ ರೋದನಗೈಯುತ್ತಿರುವುದು ಎಲ್ಲರ ಕರುಳನ್ನು ಕಲುಕುತಿತ್ತು.

ಗೌರಿಗೆ ಮದುವೆಯಾಗಿ ಕೇವಲ ಒಂದು ವರ್ಷವಾಗಿತ್ತು. ಅವಳ ಗಂಡ ಆಟೋ ಚಾಲಕನಾಗಿದ್ದು ಕೆಲವು ದುಶ್ಚಟಗಳಿಗೆ ಶರಣಾಗಿದ್ದ. ಮನೆಯಲ್ಲಿ ಗಯ್ಯಾಳಿ ಅತ್ತೆ, ದುರಾಶೆಯ ಮಾವ ಅವಳ ಬಾಳಿಗೆ ಎಲ್ಲವೂ ಅಸಹನೀಯವಾಗಿದ್ದವು.

ದಿನ ಬೆಳಗಾದರೆ ಮನೆ ರಣರಂಗವಾಗುತ್ತಿತ್ತು. ಜಗಳ ಕದನದ ಆಕ್ರೋಶದಲ್ಲಿ ಗೌರಿಯ ಹೋರಾಟ ಅಸಹಾಯಕವಾಗುತಿತ್ತು.

“ನಿಮ್ಮ ಅಪ್ಪ ವರದಕ್ಷಿಣೆ ಕೊಡದೆ ನಿನ್ನ ದರಿದ್ರ ಗೌರಿಯಾಗಿ ನಮ್ಮ ಮನೆಗೆ ಕಳಿಸಿದ. ನೀನು ನಮ್ಮ ಮನೆ, ಮನಗಳನ್ನು ತುಂಬಲಿಲ್ಲ. ನೀನು ಮನೆ ಹೊಸಿಲೊಳಗೆ ಕಾಲಿಟ್ಟ ದಿನದಿಂದ ನಮಗೆ ದರಿದ್ರ ಲಕ್ಷ್ಮಿ ಮಾತ್ರ ಒಲಿದಿದ್ದಾಳೆ. ಹೋಗೆ! ನಿಮ್ಮಪ್ಪನ ಹತ್ತಿರ ವರದಕ್ಷಿಣೆ ತೆಗೆದುಕೊಂಡು ಬಾ” ಎಂದು ಕೂದಲೆಳೆದು ತಳ್ಳಿ ಮೂದಲಿಸುತ್ತಿದ್ದರು.

ಮಾವ ಅದಕ್ಕೆ ತಮಟೆ ಬಾರಿಸುತ್ತಿದ್ದ, ಗಂಡ ಅವರ ಮಾತಿಗೆ ಕುಣಿದು ವರದಕ್ಷಿಣೆ ತರದಿದ್ದರೆ ನೀನು ನನ್ನ ಹೆಂಡತಿ ಅಲ್ಲ ಅನ್ನುತಿದ್ದ. ಅವಳು ತವರುಮನೆಯಿಂದ ಬರುವಾಗ ಅವಳ ಜೊತೆ ಬಂದಿದ್ದ ಅವಳ ಬಾಲ್ಯದ ಪ್ರೀತಿಯ ಆಸ್ತಿ ಎಂದರೆ ಅವಳು ಸಾಕಿಕೊಂಡ ಗಿಣಿ. ಅದು ಸದಾ ಅವಳ ಜೊತೆಯಲ್ಲಿರುತ್ತಿತ್ತು ಅವಳು ಅದಕ್ಕೆ ಮಾತನಾಡುವುದನ್ನು ಕಲಿಸಿದ್ದಳು. ತನ್ನ ದುಃಖವನ್ನು ಅದಕ್ಕೆ ಹೇಳಿಕೊಳ್ಳುತಿದ್ದಳು. ಅದು ಎಷ್ಟೋ ಬಾರಿ ಅವಳ ಭಾವನೆಗಳಿಗೆ ಸ್ಪಂದಿಸುತ್ತಿತ್ತು. ಆಪ್ತ ಗೆಳತಿಯಂತೆ ಗಿಣಿ ಅವಳಿಗೆ ಸಹಾನುಭೂತಿ ತೋರಿಸುತ್ತಿತ್ತು. ಗೌರಿಯ ಗಯ್ಯಾಳಿ ಆತ್ತೆ ಗೌರಿಯ ಮೇಲೆ ಬೈಗಳನ್ನು ಸುರಿಸಿ ಕೈ ಮಾಡಲು ಬಂದಾಗ ಗಿಣಿ ಹಾರಿ ಹೋಗಿ ಅವಳ ಮುಖವನ್ನು ಪರಚಿ ದೂರ ಓಡಿಹೋಗುವಂತೆ ಮಾಡುತ್ತಿತ್ತು.

ಕತ್ತು ಹಿಸುಕುವ ದ್ವೇಷ ಅವಳಿಗೆ ತನ್ನ ಮೇಲೆ ಇದೆ ಎಂದು ಅರಿತು ಅದು ಹಾರಿ ಅವಳ ಕೈಗೆ ಸಿಕ್ಕದಂತೆ ನುಸುಳಿಕೊಳ್ಳುತ್ತಿತ್ತು.

ಗೌರಿ ಗಿಣಿಗೆ ‘ಸ್ನೇಹಲತಾ’ ಎಂದು ಹೆಸರಿಟ್ಟು ಕರಿಯುತ್ತಿದ್ದಳು. ಅದರ ಸ್ನೇಹ, ಸಹವಾಸ ಅವಳ ದುಸ್ತರ ಜೀವನಕ್ಕೆ ಸ್ನೇಹಸಿಂಚನ ಗೈಯುತಿತ್ತು.

“ಸ್ನೇಹ! ನನಗೆ ಜೀವನ ಭಾರವಾಗಿದೆ ನಾನು ಮನೆಯವರ ಕಿರುಕುಳ ಸಹಿಸಲಾರೆ” ಎಂದು ಗೋಳಿಡುತ್ತಿದ್ದಳು.

“ಅಕ್ಕಾ! ಅಳಬೇಡ, ಅಳಬೇಡ” ಎಂದು ಹೇಳಿ ಸಂತೈಸುತಿತ್ತು. ಮನುಷ್ಯರ ಹೃದಯಗಳು ಕಲ್ಲಾದಾಗ ಗಿಣಿಯ ಪ್ರೀತಿ ಸೌಜನ್ಯ ಸ್ನೇಹ ಎಷ್ಟೋ ಮೇಲು ಅನಿಸಿದ್ದುಂಟು. ಅದು ಅವಳ ಮನದ ಅಳಲನ್ನು ಅರಿತು ಸತತ ಸ್ಪಂದಿಸುತಿತ್ತು.

ಅವಳು ಹದಿನೈದು ವರುಷದ ಹುಡುಗಿಯಾಗಿದ್ದಾಗ ಅವಳ ಅಪ್ಪ ಅವಳಿಗೆ ಗಿಣಿಯನ್ನು ತಂದು ಕೊಟ್ಟಿದ್ದರು. ಗೌರಿಯ ತಂದೆಗೆ ಸಣ್ಣದೊಂದು ಮಾವಿನ ತೋಪಿತ್ತು. ಮಾವಿನ ಹಣ್ಣಿನ ಬೆಳೆ ಚೆನ್ನಾಗಿ ಆದಾಗ ಸಂಸಾರಕ್ಕೆ ಸ್ವಲ್ಪ ಆದಾಯ ಸಿಗುತ್ತಿತ್ತು. ಕೆಲವೊಮ್ಮೆ ಕಳೆ ಸಾಧಾರಣವಾಗಿದ್ದು ಅವರಿಗೆ ಕಷ್ಟ ನಷ್ಟಗಳು ಆಗುತ್ತಿದ್ದವು. ಒಬ್ಬಳೇ ಮಗಳಾದ ಗೌರಿಯನ್ನು ಅವರ ಮತ್ತು ಅವರ ಪತ್ನಿ ಬಹಳ ಪ್ರೀತಿಯಿಂದಲೇ ಬೆಳೆಸಿದ್ದರು. ಅವಳಿಗೆ ಗೆಳೆತಿಯರು ಯಾರೂ ಇಲ್ಲವೆಂದು ಅವಳಿಗೆ ಜೊತೆಯಾಗಿದ್ದು ಸಂತಸ ನೀಡಲು ಗಿಣಿಯನ್ನು ತಂದು ಇಟ್ಟಿದ್ದರು.

“ಅಪ್ಪಾಗಿಣಿಯನ್ನು ಎಲ್ಲಿಂದ ತಂದೆ?” ಎಂದು ಆಶ್ಚರ್ಯ ಸಂತಸದಿಂದ ಗೌರಿ ಕೇಳಿದ್ದಳು.

“ಅಮ್ಮಾ! ಮಗಳೆ, ನಾನು ಅದನ್ನು ಬಲವಂತವಾಗಿ ಹಿಡಿದು ತಂದಿಲ್ಲ. ಅದು ಕಾಲಿಗೆ ಪೆಟ್ಟು ಮಾಡಿಕೊಂಡು ಮೇಲೆ ಮಾವಿನ ಮರಕ್ಕೆ ಹಾರಲಾರದೆ ಕೆಳಗೆ ಕುಂಟುತ್ತಾ ಓಡಾಡುತಿತ್ತು. ಅದರ ಕಾಲಿಗೆ ಔಷಧಿ ಪಥ್ಯ ಮಾಡಿ ಸರಿಮಾಡೋಣ ಅಂತ ತಂದಿರುವೆ” ಎಂದಿದ್ದರು.

ದಿನವೂ ಅದರ ಕಾಲಿನ ಆರೈಕೆ ಮಾಡಿದ ಗೌರಿಗೆ ಗಿಣಿ ‘ಸ್ನೇಹಲತೆ’ಯಾಗಿ ಹಬ್ಬಿಕೊಂಡಳು ಅವಳ ಒಲವಿಗೆ. ಅವಳ ಮನೆಗೆ, ಸಂಸಾರದ ಪರಿಸರಲ್ಲಿ ಒಂದು ಮಗುವಂತೆ ಬೆಳೆದು ಗೌರಿಗೆ ಗೆಳತಿಯಾಗಿತ್ತು. ಅವಳು ಕೊಡುತ್ತಿದ್ದ ಟೊಮೇಟೋ, ಸೌತೇಕಾಯಿ, ಚೇಪೆಹಣ್ಣು, ಭತ್ತ, ಜೋಳ ಎಲ್ಲ ಅದಕ್ಕೆ ಬಹಳ ಪ್ರಿಯವಾಗುತಿತ್ತು. ಗೌರಿಯ ಒಲವಿನ ಬಂಗಾರ ಪಂಜರ ಬಿಟ್ಟು ಗಿಣಿ ಎಲ್ಲಿಗೂ ಹಾರಿಹೋಗಲಿಲ್ಲ. ಗೌರಿ ಮದುವೆಯಾಗಿ ಅತ್ತೆ ಮನೆಗೆ ಹೋಗುವಾಗ ಅವಳನ್ನೇ ಹಿಂಬಾಲಿಸಿತ್ತು ಅವಳ ನೆರಳಿನಂತಿದ್ದ ಗಿಣಿ.

ಮನೆಗೆ ಬಂದ ಹೊಸದರಲ್ಲಿ ಗೌರಿಯನ್ನು ಗಿಣಿಯನ್ನು ಆಧರಿಸಿದ ಅತ್ತೆ, ಮಾವ, ಗಂಡ ಬರುಬರುತ್ತಾ ಕಟುಕರಂತಾಗತೊಡಗಿದರು. ಅವರಿಗೆ ವರದಕ್ಷಿಣೆ ಭೂತ ಬೆನ್ನಟ್ಟಿತ್ತು. ಗೌರಿಯ ಜೀವ ಹಿಂಡಿಯಾದರೂ ವರದಕ್ಷಿಣೆ ಪಡೆಯುವ ಗುರಿ ಅವರದಾಗಿತ್ತು. ತನ್ನ ತಂದೆಯ ಬಡತನದಲ್ಲಿ ವರದಕ್ಷಿಣೆ ಕೊಡುವ ಸಾಧ್ಯತೆ ಇರಲಿಲ್ಲವೆಂದು ಗೌರಿಗೆ ಚೆನ್ನಾಗಿ ಗೊತ್ತಿತ್ತು. ಅವಳು ಅಸಾಹಯಕಳಾಗಿದ್ದಳು. ಒಂದು ಕಡೆ ಅತ್ತೆ ಮಾವಂದಿರ ತೊಂದರೆ. ಇನ್ನೊಂದು ಕಡೆ ಗಂಡನ ಕಿರುಕುಳ. ಅವಳ ಬಾಳಿಗೆ ಯಾವ ನೇರ ದಾರಿಯೂ ಕಾಣಲಿಲ್ಲ.

“ನಾನು ರಾತ್ರಿ ಹನ್ನೆರಡರವರೆಗೂ ದುಡಿದು ಬರುತ್ತೇನೆ. ಧಣಿಗೆ, ಆಟೋ ಬಾಡಿಗೆಗೆ ಮತ್ತು ಅವನ ಸಿಂಹದ ಪಾಲನ್ನು ಕೊಟ್ಟ ಮೇಲೆ ನಮ್ಮ ಸಂಸಾರಕ್ಕೆ ಉಳಿಯುವುದಾದರೂ ಏನು ಎಂಬುದರ ಪರಿವೆ ಕೂಡ ನಿನಗೆ ಇಲ್ಲ. ನೀನು ವರದಕ್ಷಿಣೆ ತಂದರೆ ನಮ್ಮದೇ ಆಟೋ ಕೊಂಡುಕೊಳ್ಳಬಹುದಲ್ಲವೇ? ನಾ ದುಡಿದು ಸುಸ್ತಾಗಿ ಬರುವ ಹೊತ್ತಿಗೆ ನೀ ಬಿದ್ದುಕೊಂಡಿದ್ದಿಯಾ? ಏಳು” ಅಂತ ಗೌರಿಯನ್ನು ದಬಾಯಿಸಿ ದಬ್ಬಾಳಿಕೆ ಮಾಡುತ್ತಿದ್ದ.

ಬಲಿಪಶುವಂತೆ ಗೌರಿ ಎಲ್ಲವನ್ನೂ ಸಹಿಸಿಕೊಂಡು ಹಗಲು ರಾತ್ರಿಗಳನ್ನು ನೂಕುತ್ತಿದ್ದಳು. ಇವಳ ದುಃಖದ ಹಾದಿಯಲ್ಲಿ ಜೊತೆಯಾಗಿರುತ್ತಿದ್ದ ಒಂದು ಜೀವ ಎಂದರೆ ಅವಳ ಗಿಣಿ ಅವಳ ವೇದನೆಗೆ ಮಿಡಿಯುತ್ತಿತ್ತು.

ಅಂದು ಅತ್ತೆ ಮಾವ ಜಮೀನು ನೋಡಿಕೊಂಡು ಬರಲು ಹಳ್ಳಿಗೆ ಹೋಗಿದ್ದರು. ಅಂದು ಮನೆಯಲ್ಲಿದ್ದವರು ಗೌರಿ ಮತ್ತು ಅವಳ ಗಂಡ ಹಾಗೂ ಗೌರಿಯ ಗಿಣಿ.

ಬೆಳಗಿನ ಝಾವ ನೆರೆಹೊರೆಯವರಿಗೆ ಕೇಳಿಸಿದ್ದು ಗಿಣಿಯ ಗೋಳಿನ ಕಿರಿಚಾಟ.

“ಗೌರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳಂತೆ.”
“ಅಲ್ಲಿ ನೋಡಿ ಅವಳ ಗಿಣಿ ಹೇಗೆ ಗೋಳಿಡುತ್ತಾ ಇದೆ.”
“ಅವಳ ಗಂಡ ನೋಡು ಹೇಗೆ ಸುಮ್ಮನೆ ನಿಂತಿದ್ದಾನೆ.”
“ಅಯ್ಯೋ! ಅವನೇ ನಮಗೆ ಹೇಳಿದ್ದು. ಅವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ” ಅಂತ ಇನ್ನೊಬ್ಬರು, ಮತ್ತೊಬ್ಬರು, ಸೇರಿದ ಜನ ಒಬ್ಬೊಬ್ಬರು ಒಂದು ಒಂದೊಂದು ರೀತಿಯಲ್ಲಿ ಹೇಳುತ್ತಿದ್ದರು.

“ಅತ್ತೆ-ಮಾವ ಹಳ್ಳಿಗೆ ಹೋಗಿದಾರಂತೆ. ಮತ್ತೆ ಗೌರಿ ಯಾಕೆ ಆತ್ಮಹತ್ಯೆ ಮಾಡಿಕೊಂಡಳು?” ಅಂತ ಒಬ್ಬರು ತರ್ಕಿಸಲು,

ಅಷ್ಟರಲ್ಲಿ ವಿಚಾರಣೆಗೆಂದು ಅಲ್ಲಿ ಪೊಲೀಸರು ಬಂದರು. ಮಾತನಾಡಲು ಬರುತ್ತಿದ್ದ ಗಿಣಿಯನ್ನು ನೋಡಿ ಅವರಿಗೆ ಆಶ್ಚರ್ಯವಾಯಿತು. “ಅವನೇ ಕೊಂದ ಪಾಪ ಗೌರಿ ಅಕ್ಕ” ಅಂತ ಪದೇ ಪದೇ ಗಿಣಿ ಹೇಳುತಿತ್ತು.

“ಯಾರು? ತೋರಿಸು ಗಿಣಿ” ಅಂತ ಪೊಲೀಸು ಕೇಳಿದಾಗ ಗಿಣಿ ಹೋಗಿ ಗೌರಿ ಗಂಡನ ಭುಜದ ಮೇಲೆ ಕುಳಿತು “ಇವನೇ ಇವನೇ, ಪಾಪ ಗೌರಿ ಅಕ್ಕ” ಅನ್ನುತ್ತಿತ್ತು.

“ಅಯ್ಯೋ! ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತ ಗಂಡ ಹೇಳ್ತಾನೆ, ಗಿಣಿ ನೋಡಿದರೆ ಅವನೇ ಕೊಂದ ಅಂತ ಹೇಳುತ್ತೆ” ಅಂತ ಅಲ್ಲಿದ್ದ ಜನರಿಗೆ ಪೊಲೀಸರಿಗೆ ಅತ್ಯಾಶ್ಚರ್ಯವಾಯಿತು.

ಅಂದು ರಾತ್ರಿ ಗಂಡ ಹೆಂಡತಿಗೆ ನಡೆದ ವರದಕ್ಷಿಣೆ ವಸೂಲಿಯ ಸಮರದಲ್ಲಿ ಮಾರಾಮಾರಿ ಯುದ್ಧ ನಡೆದಿತ್ತು. ಗೌರಿ ಗಂಡನ ನಿಲುವನ್ನು ಪ್ರತಿಭಟಿಸಿದ್ದಳು. ಗಂಡನನ್ನು ವಿರೋಧಿಸಿ ಗೌರಿ ತಂದೆ ತಾಯಿಯನ್ನು ಬೆಂಬಲಿಸಿದಾಗ ಅವನ ಕೋಪ ನೆತ್ತಿಗೇರಿ ಅವನು ಕಟುಕನಾಗಿ ಅವಳ ಕತ್ತು ಗಟ್ಟಿಯಾಗಿ ಹಿಚುಕಿದ್ದ. ಅವಳು ಕಿರುಚಲು ಆಗದೆ ಉಸುರು ಕಟ್ಟಿ ಪ್ರಾಣ ಬಿಟ್ಟಿದ್ದಳು. ಗಿಣಿ ಅವಳನ್ನು ರಕ್ಷಿಸಲು ಮಾಡಿದ ಪ್ರಯತ್ನವೆಲ್ಲಾ ವ್ಯರ್ಥವಾಗಿತ್ತು. ಗೌರಿ ಸತ್ತು ಬಿದ್ದೊಡನೆ ಅವಳ ಗಂಡ ಭಯಗ್ರಸ್ತನಾಗಿ ಮನೆಯಿಂದ ಹೊರಗೆ ಹೋಗಿ ಬಿಟ್ಟಿದ್ದ. ರಾತ್ರಿ ಎಲ್ಲಾ ಗಿಣಿ ಅವಳ ಎದೆಯ ಮೇಲೆ ಕುಳಿತು ಅತ್ತು ಗೋಳಿಡುತಿತ್ತು. ಅವಳಿಗೆ ಹೊದಿಕೆ ಎಳೆದು ಹೊದಿಸಿತ್ತು ಅವಳ ಕೂದಲನ್ನು ನೇವರಿಸಿತ್ತು ಅವಳ ಕೆನ್ನೆಗೆ ಮುದ್ದು ಕೊಡುತ್ತಿತ್ತು. “ಅಕ್ಕಾ! ಅಕ್ಕಾ! ಗೌರಿ ಅಕ್ಕಾ!” ಎಂದು ರಾತ್ರಿ ಎಲ್ಲಾ ಸತತವಾಗಿ ಜಪಮಾಡಿತ್ತು. ಅವಳ ಪ್ರೀತಿಯ ಒಲವಿನ ಎದೆಯಿಂದ ಅತ್ತ ಇತ್ತ ಕದಲದೇ ಕುಳಿತಿತ್ತು. ‘ಅವಳು ಕಣ್ಣು ತೆರೆಯುತ್ತಾಳಾ? ಅವಳು ‘ಸ್ನೇಹಾ’ ಎಂದು ಕರೆಯುತ್ತಾಳಾ? ಅವಳು ಎದ್ದು ತನ್ನ ಕೈಯಲ್ಲಿ ನೇವರಿಸುತ್ತಾಳಾ?’ ಎಂದು ಪರಿತಪಿಸಿ ಒದ್ದಾಡುತ್ತಿತ್ತು. ಪೊಲೀಸರು ಗಿಣಿಯ ಸಾಕ್ಷಿ ಬರೆದುಕೊಳ್ಳಲು ಹಿಂಜರಿದರು.

“ಗಿಣಿ ಜೊತಿಷ್ಯ ಜನ ನಂಬುತ್ತಾರೆ. ಗಿಣಿ ಹೇಳೋದನ್ನ ಪೊಲೀಸರು ನಂಬೋದು ತಾನೇ” ಎಂದು ಹೇಳಿ ಚರ್ಚಿಸುತ್ತಿದ್ದರು ಕೆಲವರು.

“ಅಲ್ಲಾರಿ! ನಾಯಿ ವಾಸನೆ ಮೂಲಕ ಯಾರು ಕೊಲೆ ಮಾಡಿದ್ದು ಅಂತ ಹೇಳಲು ಸಹಾಯ ಮಾಡಿದಾಗ ಅದನ್ನು ಪೋಲಿಸರು ಗಣನೆಗೆ ತೆಗೆದುಕೊಳ್ಳುತ್ತಾರೆ. ಆದರೆ ಗೌರಿಯ ಆಪ್ತ ಗೆಳತಿಯಾಗಿದ್ದ ಗಿಣಿ ಹೇಳಿದ್ದು ನೂರಕ್ಕೆ ನೂರು ನಿಜ ಅಂತ ತಿಳಿಯೋದು ತಾನೆ” ಅಂತ ಇನ್ನೊಬ್ಬರು ಹೇಳುತ್ತಿದ್ದರು.

“ಪ್ರಾಣಿಗಳು ತಮ್ಮ ಬುದ್ದಿವಂತಿಕೆಯಿಂದ ಮನುಷ್ಯನಿಗೆ ಸಹಾಯ ಮಾಡಿದರೂ ಅದರಲ್ಲಿ ಎಷ್ಟು ವೈಜ್ಞಾನಿಕತೆ ಇದೆ ಎಂದು ಶಂಕಿಸುವುದೇ ಕಷ್ಟ?” ಅಂತ ಮತ್ತೊಬ್ಬ ಹೇಳುತ್ತಿದ್ದ.

“ಅಯ್ಯೋ! ಸುಮ್ನಿರಪ್ಪ, ಮನುಷ್ಯರೇ ಸುಳ್ಳು ಹೇಳ್ತಾರೆ, ಮುಚ್ಚಿಡುತ್ತಾರೆ. ಯಾವುದು ಸುಳ್ಳು, ಯಾವುದು ಅಪ್ಪಟ ನಿಜ ಅಂತ ತಿಳಿಯೋದು” ಅಂತ ಇನ್ನೊಬ್ಬ ವಾದಿಸುತ್ತಿದ್ದ.

ಗೌರಿಯ ಗಂಡನೇ ಕೊಲೆಗಡುಕ ಎಂದು ಪದೇ ಪದೇ ಕಿರಿಚಿ ಗಿಣಿ ಹೇಳುವ ಮಾತಿನ ಸಾಕ್ಷಿಯನ್ನು ಒಪ್ಪಬಹುದೇ?

ಅದರ ಆಧಾರದ ಮೇಲೆ ಅವನನ್ನು ಬಂಧಿಸಿ ನ್ಯಾಯಾಲಯಕ್ಕೆ ಕರೆದೊಯ್ದರೆ ಗಿಣಿ ನ್ಯಾಯಾಲಯದಲ್ಲಿ ಮತ್ತೆ ಅದೇ ಸಾಕ್ಷಿ ದೃಢೀಕರಿಸಬಲ್ಲುದೇ? ಇದನ್ನು ನ್ಯಾಯಾಲಯ ಸ್ವೀಕರಿಸೀತೇ? ಗೌರಿಯ ಆತ್ಮಕ್ಕೆ ಶಾಂತಿ ಸಿಗುವವರೆಗೂ ಗಿಣಿ ಮಾತ್ರ ಸುಮ್ಮನಿರಲಾರದೆಂದು ಜನ ಆಡಿಕೊಳ್ಳುತ್ತಿದ್ದರು.

ಗೌರಿಯ ಬಾಳು ಅಂತ್ಯವಾದ ಎಂಟು ದಿನಕ್ಕೆ ಮತ್ತೊಂದು ಪ್ರಾಣಪಕ್ಷಿ ಹಾರಿಹೋಯಿತು. ಅದು ಅವಳ ಗೆಳತಿ ಗಿಣಿಯದಲ್ಲದೆ ಮತ್ಯಾರದಾದರು ಇರಲು ಸಾಧ್ಯವೇ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೇವರು
Next post ಮಿಲನ

ಸಣ್ಣ ಕತೆ

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…