ಭಾರತ ಸಿಂಧುರಶ್ಮಿಯ ‘ಪರಮ ಸಿದ್ಧಿ’

ಭಾರತ ಸಿಂಧುರಶ್ಮಿಯ ‘ಪರಮ ಸಿದ್ಧಿ’

ಚಿತ್ರ: ಓಬರ್‍ಹೋಲ್ಸಟರ್‍ ವೆನಿತ

ವಿನಾಯಕ ಕೃಷ್ಣ ಗೋಕಾಕರ ಎರಡು ಬೃಹತ್ ಕೃತಿಗಳು ೧೯೫೬ರಲ್ಲಿ ಧಾರವಾಡದ ಮನೋಹರ ಗ್ರಂಥಮಾಲೆಯಿಂದ ಪ್ರಕಟವಾದ ‘ಸಮರಸವೇ ಜೀವನ’ ಎಂಬ ೧೨೩೯ ಪುಟಗಳ ಕಾದಂಬರಿ ಮತ್ತು ೧೯೮೨ರಲ್ಲಿ ಬೆಂಗಳೂರಿನ ಐ.ಬಿ.ಎಚ್. ಸಂಸ್ಥೆಯಿಂದ ಎರಡು ಸಂಪುಟಗಳಲ್ಲಿ ಪ್ರಕಟವಾದ ‘ಭಾರತ ಸಿಂಧುರಶ್ಮಿ’ ಎಂಬ ೧೨೭೬ ಪುಟಗಳ ಕಾವ್ಯ. ಇವೆರಡೂ ಆಧುನಿಕ ಕನ್ನಡದ ಅಭಿಜಾತ ಕೃತಿಗಳು (classics) ಎಂಬುದಾಗಿ ಪಸಿದ್ಧವಾಗಿವೆ. ಕ್ಲಾಸಿಕ್ ಎಂದರೆ ಪ್ರಸಿದ್ಧವಾಗಿದ್ದು, ಯಾರೂ ಓದದ ಕೃತಿ ಎಂಬ ಒಂದು ಪಡಿನುಡಿಯಿದೆ! ಇತರ ಅಭಿಜಾತ ಕೃತಿಗಳ ವಿಷಯ ಹೇಗೋ ಏನೋ, ಗೋಕಾಕರ ಈ ಎರಡೂ ಅಭಿಜಾತ ಕೃತಿಗಳಿಗೂ ಇದು ಒಪ್ಪುವ ಮಾತೇ ಆಗಿರುವುದು ದುರದೃಷ್ಟವೆಂದೇ ಹೇಳಬೇಕು. ನಾನೇ ಇವನ್ನು ಇಡಿಯಾಗಿ ಓದಿದುದಿಲ್ಲ ಎಂಬ ಮಾತನ್ನು ಆರಂಭದಲ್ಲೇ ಹೇಳಿಕೊಳ್ಳುವೆ. ಆದರೂ ಆಗಾಗ ಇವುಗಳ ಕೆಲವು ಭಾಗಗಳ ಮೇಲಾದರೂ ನಾನು ಕಣ್ಣೋಡಿಸಿದ್ದಿದೆ. ಈಗ ಈ ಲೇಖನ ಬರೆಯುವ ಮುನ್ನವೂ ಹಾಗೇ ಮಾಡಿದ್ದೇನೆ. ಇಂಥ ಬೃಹತ್ತಾದ ಕೃತಿಗಳನ್ನು ಓದುವ ಆಸಕ್ತಿಯಾಗಲಿ. ಕಾಲಾವಕಾಶವಾಗಲಿ ಈಗ ಹೆಚ್ಚಿನ ಮಂದಿಗೆ ಇಲ್ಲ ಎನ್ನುವುದು ಒಂದು ಕಾರಣವಾದರೆ, ಹೊಸ ಕೃತಿಗಳು ಪ್ರಕಟವಾಗುತ್ತ ಇವನ್ನು ಬದಿಗೆ ತಳ್ಳುತ್ತಿರುವುದು ಇನ್ನೊಂದು ಕಾರಣ. ಗೋಕಾಕರ ಈ ಕೃತಿಗಳು ಪ್ರಕಟವಾದ ಕಾಲದಲ್ಲಿ ಅವುಗಳ ಕುರಿತು ಅಲ್ಲಲ್ಲಿ ಚರ್ಚೆಗಳು ನಡೆದದ್ದಿದೆ; ಎಂದರೆ ಆಗಿನ ಕಾಲದ ಜನ ಇವನ್ನು ಓದಿದ್ದರು ಎಂದೇ ಅರ್ಥವಾಗುತ್ತದೆ. ಆದರೆ ಆ ನಂತರದ ಪೀಳಿಗೆಯವರಲ್ಲಿ ಇವನ್ನು ಓದಿದವರು ಬೆರಳೆಣೆಕೆಗೂ ಸಿಗಲಾರರು. ಈ ಕಾದಂಬರಿ ಮತ್ತು ಕಾವ್ಯದ ಬೃಹತ್ತೇ ಬಹುಶಃ ಇವುಗಳ ಈ ಅಪಜ್ಞೆಗೂ ಕಾರಣವಾಗಿರಬಹುದೇ- ಡೈನಸಾರಸ್ ಮೃಗಗಳ ಅಂತರ್ಧಾನಕ್ಕೆ ಅವುಗಳ ಗಾತ್ರವೇ ಕಾರಣ ಎನ್ನುವ ಹಾಗೆ? ನಮ್ಮದು ಕಿರುಕುಳದ ಯುಗ; ಒಂದರ್ಧ ಗಂಟೆ ಓದುವುದಕ್ಕೆಂದು ಯಾರ ರಗಳೆಯೂ ಇಲ್ಲದೆ ಕೂತುಕೊಳ್ಳುವುದೇ ಅಸಾಧ್ಯ. ಆದ್ದರಿಂದಲೇ ಇಂದು ಗಜಿಬಿಜಿ ಆಹಾರದಂಥ ಪತ್ರಿಕಾ ಸಾಹಿತ್ಯವೊಂದನ್ನೇ ನಾವು ಸೇವಿಸುವುದು.

‘ಭಾರತ ಸಿಂಧುರಶ್ಮಿ’ ಪ್ರಕಟವಾದ ಹೊಸದರಲ್ಲಿ ಅದರ ನಾಲ್ಕನೇ ಸಂಧಿಯಲ್ಲಿ ಬರುವ ಯಮೀ-ಯಮರ ಸಂಭಾಷಣೆ (ಯಮೀ-ಯಮರ ಅಗ್ನಿದಿವ್ಯ) ಸಾಕಷ್ಟು ಚರ್ಚೆಗೆ ಒಳಪಟ್ಟಿತ್ತು. ಇಷ್ಟಕ್ಕೆ ಇಡೀ ಕಾವ್ಯದ ಕುರಿತಾದ ಆಸಕ್ತಿ ಸೀಮಿತವಾದ್ದನ್ನು ಕಂಡರೆ, ‘ಭಾರತ ಸಿಂಧುರಶ್ಮಿ’ಯ ಮುಖ್ಯ ವಿಷಯವೇ ಇದರಲ್ಲಿ ಅಡಕವಾಗಿದೆ ಎಂಬ ಭ್ರಮೆ ಬರಲೂ ಸಾಕು. ಆದರೆ ಗೋಕಾಕರ ಕಾವ್ಯ ಹಲವು ಕತೆಗಳನ್ನು, ಅನುಭವಗಳನ್ನು, ಸೀಮೆಗಳನ್ನು, ತತ್ವಗಳನ್ನು ಓಳಗೊಂಡಿರುವಂಥದು. ಇದೆಲ್ಲ ನಂತರದ ದಿನಗಳಲ್ಲಿ ಚರ್ಚೆಗೆ ಬರಲೇ ಇಲ್ಲ; ಬಂದರೂ ಅದು ಈ ಕಾವ್ಯದ ಗಾತ್ರಕ್ಕೆ ಕಿರಿದು. ಇದಕ್ಕೆ ಮುಖ್ಯ ಕಾರಣವೆಂದರೆ, ಈ ಕಾವ್ಯದ ಕಾಠಿಣ್ಯತೆ. ಅಲಂಕಾರ ಶಾಸ್ತ್ರದ ಪರಿಭಾಷೆಯಲ್ಲಿ ಹೇಳುವುದಾದರೆ, ಗೋಕಾಕರದು ನಾರಿಕೇಳಪಾಕ. ಇಲ್ಲಿ ಬರುವ ಪಾತ್ರಗಳು, ಪ್ರಸಂಗಗಳು, ಪ್ರದೇಶಗಳ ಹೆಸರುಗಳು ಸಾಮಾನ್ಯರ ಓದಿನ ಅನುಭವವಲಯಕ್ಕೆ ಸೇರಿದುವಲ್ಲ. ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’ ಕೂಡಾ ಕಬ್ಬಿಣದ ಕಡಲೆಯೇ. ಆದರೆ ಕುವೆಂಪು ತೆಗೆದುಕೊಂಡ ರಾಮಾಯಣದ ಕತೆಗೆ ಒಂದು ಜನಪದ ಸ್ತರ ಈಗಾಗಲೇ ಇರುವುದರಿಂದಲೂ ಹಾಗೂ ಈಗಾಗಲೇ ಹಲವಾರು ರಾಮಾಯಣ ಕತೆಗಳು ಪ್ರಚಲಿತವಿರುವ ಕಾರಣವೂ, ಕತೆಯ ಎಳೆಯನ್ನು ಹಿಡಿದುಕೊಂಡು ನಾವು ಮುಂದರಿಯಬಹುದು. ಆದರೆ ಗೋಕಾಕರು ತೆಗೆದುಕೊಂಡ ವಸ್ತುವೇ ಬೇರೆ: ಋಗ್ದೇದಪೂರ್ವ ಅಥವಾ ಅದಕ್ಕೆ ಸಮಾನಾಂತರವಾದ ಕಾಲದ ಕತೆ ಅದು. ಇದನ್ನೊಂದು ಕತೆ ಎನ್ನುವುದಕ್ಕಿಂತ ಒಂದು ಕಥಾಗುಚ್ಛ ಎನ್ನಬಹುದು. ಇದಕ್ಕೆ ಜನಪದದ ಸ್ತರವಿಲ್ಲ; ಇಂಥ ವಸ್ತುವೊಂದು ಇದುವರೆಗೆ ಕಾವ್ಯರೂಪಕ್ಕೆ ಬಂದುದೂ ಇಲ್ಲ. ಈ ಕಾರಣಕ್ಕೋ ಏನೋ, ಕುವೆಂಪು ಶೈಲಿ ಕಾವ್ಯಮಾರ್ಗಕ್ಕೆ ಸೇರಿದುದಾದರೆ, ಗೋಕಾಕರದು ಇತಿಹಾಸಮಾರ್ಗಕ್ಕೆ ಸೇರಿದುದು. ವಾಲ್ಮೀಕಿಯ ರಾಮಾಯಣವನ್ನೂ ವ್ಯಾಸ ಮಹಾಭಾರತವನ್ನೂ ಹೋಲಿಸಿ ನೋಡಿದರೆ ನಮಗೀ ವ್ಯತ್ಯಾಸದ ಮೂಲರೂಪ ಗೊತ್ತಾಗುತ್ತದೆ: ವಾಲ್ಮೀಕಿಗೆ ಕಥನದಲ್ಲಿ ಕಲೆ ಮುಖ್ಯವಾಗುತ್ತದೆ; ವ್ಯಾಸರಿಗೆ ಇತಿಹಾಸ ಮುಖ್ಯವಾಗುತ್ತದೆ. ಆದ್ದರಿಂದಲೇ ವಾಲ್ಮೀಕಿಯಲ್ಲಿ ಕಾಣುವಂಥ ಕಾವ್ಯಾಲಂಕಾರಗಳು ವ್ಯಾಸರಲ್ಲಿಲ್ಲ. ಕುವೆಂಪು ಮತ್ತು ಗೋಕಾಕರ ನಡುವೆ ಇಂಥದೊಂದು ವ್ಯತ್ಯಾಸವಿರುವಂತೆ ತೋರುತ್ತದೆ. ‘ಶ್ರೀ ರಾಮಾಯಣ ದರ್ಶನಂ’ ಓದು ಅಲ್ಲಲ್ಲಿ ನಿಧಾನವಾದರೆ ಅದಕ್ಕೆ ಪ್ರಮುಖವಾಗಿ ಕಾವ್ಯಾಲಂಕಾರಗಳು ಕಾರಣವಾದರೆ, ‘ಭಾರತ ಸಿಂಧುರಶ್ಮಿ’ಯಲ್ಲಿ ವಸ್ತುವಿವರಗಳ ‘ಅನನ್ಯತೆ’ ಅಥವಾ ಅಪರಿಚಿತತೆ ಇದಕ್ಕೆ ಕಾರಣವಾಗುತ್ತದೆ.

ವಿಶ್ವಾಮಿತ್ರ ‘ಭಾರತ ಸಿಂಧುರಶ್ಮಿ’ಯ ಮುಖ್ಯ ಪಾತ್ರ. ಈತನ ಹೆಸರು ಮತ್ತು ಪರಿಚಯ ನಮಗೆ ಸ್ವಲ್ಪ ಮಟ್ಟಿಗೇನೋ ಇರಬಹುದಾದರೂ, ಅವನಿಗೆ ‘ವಿಶ್ವರಥ’ ಎಂಬುದು ಮೊದಲ ಹೆಸರಾಗಿತ್ತು ಎನ್ನುವುದು ಎಷ್ಟು ಮಂದಿಗೆ ಗೊತ್ತಿದೆ?

ಶರ್ಯಣಾವತ್ಗಿರಿಶ್ರೇಣಿಯನು ಗುರಿಯಿಟ್ಟು
ತುರ್ವಶರ ರಾಜ್ಯದಿರಿದೀಚೆ ಭೂಸಂಚಾರ
ಮುಂಬರಿಯುತಾನವರ ರಾಜ್ಯದೊಳು ಹಾಯ್ದಿರಲು
ಮುನ್ನಡೆದ ವಿಶ್ವರಥನವರಿವರ ಕಥೆ ಕೇಳಿ.
ಮರುದ್-ವೃಧಾ ಅಸಿಕ್ನೀನದಿಗಳೊಂದಾಗುತ್ತ
ವಿತಸ್ತೆಯ ಕೂಡುತೊಲಿಯುವುವಲ್ಲಿ ಸಿಂಧುವಿಗೆ,
ಆನವರಿದ್ದರಾ ನೆಲದ ಪೂರ್ವಭಾಗದಿ ನೆಲಸಿ
ಅಸಿಕ್ನಿಯ ಚಂದ್ರಭಾಗ ತೀರದ ಮೇಲೆ.

ಬೆನಗಲ್ ರಾಮರಾವ್ ಮತ್ತು ಪಾನ್ಯಂ ಸುಂದರಶಾಸ್ತ್ರಿಯವರು ಸಂಪಾದಿಸಿದ ‘ಪುರಾಣನಾಮಚೂಡಾಮಣಿ’ ನಿಮ್ಮ ಬಳಿಯಿದ್ದು ನೀವು ‘ವಿಶ್ವಾಮಿತ್ರ’ ಎಂಬ ಪದವನ್ನು ನೋಡಿದರೆ, ಅದರಲ್ಲಿ ವಿಶ್ವಾಮಿತ್ರನ ಪೂರ್ವಾಶ್ರಮದಲ್ಲಿ ರಾಜನಾಗಿದ್ದಾಗಿನ ಹೆಸರು ವಿಶ್ವರಥ ಎಂದು ಗೊತ್ತಾಗುತ್ತದೆ. ಆದರೆ ಶರ್ಯಣಾವತ್ ಎಂದರೆ ಎಲ್ಲೆಂದು ಗೊತ್ತಾಗುವುದಿಲ್ಲ. ಅದರೆ ಓದುಗರು ಕಾವ್ಯದ ಮುಂದಿನ ಪ್ಯಾರಾ ಓದುವ ಧೈರ್ಯ ಮಾಡಿದರೆ, ಅದರಲ್ಲಿ ಈ ಶರ್ಯಣಾವತ್ ಎನ್ನುವುದು ಕಾಶ್ಮೀರವೆಂದು ಗೊತ್ತಾಗುತ್ತದೆ; ವೇದಕಾಲದಲ್ಲಿ ಅಲ್ಲಿದ್ದ ಸಮುದ್ರಕ್ಕೆ ಆ ಹೆಸರು. ಅದು ಬತ್ತಿ ಹೋಗಿ ಕೆಲವೇ ಕೊಳಗಳು ಮಾತ್ರ ಹೇಗೆ ಉಳಿದುವು ಎನ್ನುವ ವಿವರಗಳೂ ಇದೇ ಪ್ಯಾರಾದಲ್ಲಿ ನಮಗೆ ಸಿಗುತ್ತವೆ.

ಆದರೆ ಕಾವ್ಯಾರಂಭದಲ್ಲೇ ಬರುವ ತುರ್ವಶರು ಯಾರು? ಇದಕ್ಕೆ ನಾವು ಯಯಾತಿಯ ಕತೆಯನ್ನು ಅವಲಂಬಿಸಬೇಕಾಗುತ್ತದೆ. ತುರ್ವಸು ಯಯಾತಿಗೆ ದೇವಯಾನಿಯಲ್ಲಿ ಹುಟ್ಟಿದ ಇಬ್ಬರು ಮಗಂದಿರಲ್ಲಿ ಕಿರಿಯವನು. ಯಯಾತಿ ಶಾಪಮುಖೇನ ತನಗೊದಗಿದ ಅಕಾಲ ವೃದ್ಧಾಪ್ಯವನ್ನು ತನ್ನ ಯೌವನದೊಂದಿಗೆ ವಿನಿಮಯ ಮಾಡಿಕೊಳ್ಳಲು ಮೊದಲು ಈ ಮಗನಲ್ಲಿ ಕೇಳಿದಾಗ ಆತ ಒಲ್ಲೆನೆನ್ನುತ್ತಾನೆ. ಆದ್ದರಿಂದ ತುರ್ವಸು ರಾಜ್ಯಾಧಿಕಾರಕ್ಕೆ ಅನರ್ಹನಾಗಿ, ಹೊರನಾಡಿಗೆ ಹೋಗಿ ಅಲ್ಲಿನ ಆಡಳಿತ ನೋಡಿಕೊಂಡು ತೃಪ್ತನಾಗಬೇಕಾಗುತ್ತದೆ. ತುರ್ವಶರು ಎಂದರೆ ತುರ್ವಸುವಿನ ವಂಶಜರು. ಮಾಗಿ ಮುಗಿಯುವ ಮುನ್ನ ಕಾಶ್ಮೀರವನ್ನು ಸೇರುವುದು ವಿಶ್ಚಾಮಿತ್ರನ ಗುರಿ; ಆದರೆ ದಾರಿಯಲ್ಲಿ ಆತ ‘ಅವರಿವರ’ ಕತೆಗಳನ್ನೂ ಕೇಳುತ್ತಿರುತ್ತಾನೆ.

ಈ ಪ್ರಯಾಣದಲ್ಲಿ ಆತ ಒಬ್ಬನೆಯೂ ಅಲ್ಲ, ಹಿಂಬಾಲಕರೂ ಇದ್ದಾರೆ ಎನ್ನುವುದು ನಮಗೆ ಆಮೇಲೆ ಗೊತ್ತಾಗುತ್ತದೆ. ನಾವು ನಮ್ಮನ್ನು ಶರ್ಯಣಾವತ್‌ನ ಬೋಗುಣಿಯಲ್ಲಿ ನಿಲ್ಲಿಸಿಕೊಂಡರೆ, ‘ತುರ್ವಶರ ರಾಜ್ಯದಿಂದೀಚೆ’ ಎಂಬ ಪದಗುಚ್ಛ ವಿಶ್ವಾಮಿತ್ರನ ಪ್ರಯಾಣ ಪೂರ್ವೋತ್ತರವಾಗಿ ಸಾಗುತ್ತಿದೆ ಎನ್ನುವುದನ್ನು ಸೂಚಿಸುತ್ತದೆ. ‘ತುರ್ವಶರ ರಾಜ್ಯದಿಂದೀಚೆ ಭೂಸಂಚಾರ ಮುಂಬರಿಯುತಾನವರ ರಾಜ್ಯದೊಳು ಹಾಯ್ದಿರಲು’- ಇಲ್ಲಿ ಮತ್ತೆ ಸ್ವಲ್ಪ ಎಡವಟ್ಟಾಗುತ್ತದೆ; ‘ಮುಂಬರಿಯುತಾನವರ’ ಎಂಬ ಪದಗುಚ್ಛದೊಳಗಣ ‘ಆನವರ’ ಪದವನ್ನು ಹೇಗೆ ಅರ್ಥಮಾಡಿಕೊಳ್ಳಬೇಕು? ಮುಂಬರಿಯುವುದು ಭೂಸಂಚಾರ. ಆದರೆ ಆನವರ ಎಂದರೇನು? ಆನು ಎಂಬುದನ್ನು ಸರ್ವನಾಮವಾಗಿ ತೆಗೆದುಕೊಳ್ಳಲು ನಾವು ಧಾವಿಸುತ್ತೇವೆ; ಆದರೆ ಮುಂದಿನ ವಾಕ್ಯಭಾಗದ ವ್ಯಾಕರಣ ಅದಕ್ಕೆ ಅಡ್ಡಿ ಬರುತ್ತದೆ. ಆದ್ದರಿಂದ ಇಲ್ಲಿ ತುರ್ವಶರಂತೆಯೇ ‘ಆನವರು’ ಎಂಬ ಪಂಗಡವನ್ನು ಕಲ್ಪಿಸಿಕೊಳ್ಳಬೇಕಾಗುತ್ತದೆ. ನಮ್ಮ ಕಲ್ಪನೆ ಸರಿ; ಯಾಕೆಂದರೆ, ಎರಡು ಸಾಲುಗಳ ಮುಂದೆ ಆನವರು ಎಂಬ ಪದವೇ ಬರುತ್ತದೆ. ಆದರೆ ಯಾರು ಈ ಆನವರು? ಯಯಾತಿಗೆ ಶರ್ಮಿಷ್ಠೆಯಲ್ಲಿ ಹುಟ್ಟಿದ ಮೂವರು ಗಂಡುಮಕ್ಕಳಲ್ಲಿ ಹಿರಿಯವನು ಅನು, ಹಾಗೂ ಅನುವಿನ ವಂಶಜರೇ ಆನವರು. (ಯದುಕುಲದವರು ಯಾದವರು ಎಂಬಂತೆ ಅನುಕುಲದವರು ಆನವರು.) ಅನು ಕೂಡಾ ತಂದೆಯಿಂದ ಜರೆಯನ್ನು ಸ್ವೀಕರಿಸಲು ಒಪ್ಪದಿರುವುದರಿಂದ, ಮುಖ್ಯ ರಾಜ್ಯಕ್ಕೆ ಅನರ್ಹನಾಗಿ ಹೊರ ಹೋಗಬೇಕಾಗುತ್ತದೆ. ಅವನು ಸ್ಥಾಪಿಸಿದ ರಾಜ್ಯ ತನ್ನ ಅಣ್ಣನಾದ ತುರ್ವಸುವಿನ ಪ್ರಾಂತದ ಪೂರ್ವಕ್ಕೆ ಇರುವುದಾಗಿ ಇಲ್ಲಿನ ತಾತ್ಪರ್ಯ- ಯಯಾತಿಯ ಹಂಚಿಕೆಯ ಈ ರಾಜಕೀಯವನ್ನು ಪ್ರಸಿದ್ಧ ಫ್ರೆಂಚ್ ವಿದ್ವಾಂಸ ಜಾರ್ಜ್ ದುಮೆಝಿಲ್ ತನ್ನ The Destiny of a King ಎಂಬ ಪುಸ್ತಕದಲ್ಲಿ ವಿವರವಾಗಿ ಚರ್ಚಿಸಿದ್ದಾನೆ.

ಈ ರೀತಿ ನಾವು ಗೋಕಾಕರು ಸಾಲುಸಾಲಿಗೆ ನಿಲ್ಲಿಸಿದ ಸಾಲಭಂಜಿಕೆಗಳನ್ನು ಹಾದುಕೊಂಡೇ ಕ್ರಮಿಸಬೇಕಾಗುತ್ತದೆ. ಪುಸ್ತಕದಲ್ಲಿ ಕೆಲವು ಟಿಪ್ತಣಿಗಳು, ಹಿನ್ನೆಲೆ ಗ್ರಂಥಗಳದೊಂದು ಕಿರುಪಟ್ಟಿ ಹಾಗೂ ಒಂದು ಭೂಪಟ ನಮ್ಮ ಸಹಾಯಕ್ಕೆ ಇದ್ದರೂ, ಇಂಥ ಬೃಹತ್‌ಕಾವ್ಯಕ್ಕೆ ಇವು ಏನೇನೂ ಸಾಲವು. ಸುಲಭದ ಓದಿನ ಆರಾಮಕ್ಕೆ ಈ ಕಾವ್ಯ ಒಳಗಾಗುವುದಿಲ್ಲ. ಇದನ್ನು ಬರೆಯುವುದಕ್ಕೆ ಕವಿಗೆ ಏಳು ವರ್ಷಗಳು ತಗುಲಿದವೆಂದು ಗೊತ್ತಾಗುತ್ತದೆ. ಈ ಮಟ್ಟದ ಇಂಥ ಸುದೀರ್ಘ ಕಾವ್ಯದ ರಚನೆಗೆ ಏಳು ವರ್ಷಗಳು ಏನೇನೂ ಅಲ್ಲವೆಂದೇ ಹೇಳಬೇಕು. ಆದರೆ ಬರೆಯುವ ಮೊದಲಿನ ಅಧ್ಯಯನವಂತೂ ಇಡೀ ಜೀವನವ್ಯಾಪ್ತಿಯದು. ಅದು ವರ್ಷಗಳ ಲೆಕ್ಕಕ್ಕೆ ಸಿಗುವುದೂ ಅಲ್ಲ. ಇದನ್ನೆಲ್ಲ ನೋಡಿದರೆ, ‘ಭಾರತ ಸಿಂಧುರಶ್ಮಿ’ಯನ್ನು ಓದಿ ಅರ್ಥ ಮಾಡಲು ಪಡಬೇಕಾದ ಶ್ರಮ ಎಷ್ಪಿರಬೇಕೆಂದು ನಾವು ಊಹಿಸಿಯೇ ಹತಾಶರಾಗುತ್ತೇವೆ!

ಆದರೆ ಇಡೀ ಕಾವ್ಯ ಇಷ್ಟೊಂದು ಕಠಿಣವಾಗಿದೆ ಎನ್ನುವಂತೆಯೂ ಇಲ್ಲ. ಹೆಚ್ಚಿನ ಪರಿಶ್ರಮವಿಲ್ಲದೆ ಅರ್ಥವಾಗುವ ಹಲವಾರು ಭಾಗಗಳಿವೆ. ಉದಾಹರಣೆಗೆ, ಇದೇ ಆರಂಭದ ಸಂಧಿಯಲ್ಲೇ ಕೆಲವು ಸಾಲುಗಳ ನಂತರದ ಭಾಗ:

ಪರಿವಾರದಲ್ಲನೇಕರನು ಪರ್ವತದಡಿಗೆ
ಬಿಟ್ಟು, ಮುಂಭಾಗದಲ್ಲಿರುವ ಚಕ್ರದ ಜೋಡಿ
ಕಿರಿದಿರುವ ಅನಸಗಳನೇರಿ ಜೊತೆಯವರೊಡನೆ
ಅಶ್ವರಥ ತುಳಿದ ಕಾನನದ ನಿಡುದಾರಿಗಳ,
ಏರಿಳಿವು ಇಳಿವೇರು ಏರೇರು ಇಳಿವಿಳಿವು,
ಜಿನುಗು ದಾರದ ತೆರದಿ ಕಣಿವೆಯ ದಾರಿ ಮಣಿಮಣಿದು, –
ಬೆಟ್ಟಗಳಿಗುಡಿದಾರ, ಗಿರಿಗಳಿಗೆ ಕಾಂಚಿ, ದೈ-
ತ್ಯಾಕಾರ ಪರ್ವತಾವಳಿಗೆ ಸೂಕ್ಷ್ಮತಮ
ಮೇಖಲೆಯು ಬಿದ್ದಿತ್ತು ನಿಬಿಡಕಾನನದಲ್ಲಿ.

ಇದು ವಿಶ್ವರಥನು ತನ್ನ ಹೆಚ್ಚಿನ ಹಿಂಬಾಲಕರನ್ನೂ ಪರ್ವತದ ಬುಡದಲ್ಲೇ ಬಿಟ್ಟು, ಇನ್ನುಳಿದ ಕೆಲವರೊಂದಿಗೆ ಬೆಟ್ಟವೇರುವ ಚಿತ್ರ-ಕಡಿದಾದ ಏರಿಳಿವಿನ ನಿಡುದಾರಿ; ಚಕ್ರದ ಜೋಡಿ ಚಿಕ್ಕದಾಗಿರುವ ಕುದುರೆಗಾಡಿಯ ಮೇಲೆ ಕುಳಿತು. ಸಾಗುತ್ತಾರೆ. ಅನಸ್ ಸಂಸ್ಕೃತ ಪದ, ಬಂಡಿ ಎಂದು ಅರ್ಥ; ಅಶ್ವರಥ ಎಂಬ ಪದ ಅನಸ್‌ನೊಂದಿಗೆ ಅನುಪ್ರಾಸ ಒದಗಿಸುತ್ತದೆ. ಈ ಪಯಣಿಗರು ಸಾಗುವುದು ಓಂದು ಕಣಿವೆ ದಾರಿ; ಸಣ್ಣದೊಂದು ನೀರಿನ ಪ್ರವಾಹ ಅಲ್ಲಿ ‘ಜಿನುಗು ದಾರದ ತೆರದಿ’ ಮಣಿಮಣಿದು ಸಾಗುತ್ತಿದೆ. ಈ ಬೆಟ್ಟ, ಗಿರಿ, ಪರ್ವತಾವಳಿಯ ಮೈಗೆ ಉಡಿದಾರ, ಕಾಂಚಿ, ಮೇಖಲೆಯ ತರ ಅದು ಬಿದ್ದುಕೊಂಡಿದೆ. ಬೆಟ್ಟ, ಗಿರಿ, ಪರ್ವತದ ಅರ್ಥ ಒಂದೇ ಆಗಿರುವಂತೆಯೇ, ಉಡಿದಾರ, ಕಾಂಚಿ, ಮೇಖಲೆ ಎಂಬ ಈ ಮೂರೂ ಪದಗಳ ಅರ್ಥ ಕೂಡಾ ಹೆಚ್ಚೂ ಕಡಿಮೆ ಒಂದೇ-ಸೊಂಟಕ್ಕೆ (ಹೆಚ್ಚಾಗಿ ಹೆಂಗಸರು) ಸುತ್ತುವ ಅಲಂಕಾರವಸ್ತ್ರ ಅಥವಾ ಆಭರಣ-ಆದರೆ ಇವು ಕ್ರಮಾಗತವಾಗಿ ಹೆಚ್ಚೆಚ್ಚು ಗಾಂಭೀರ್ಯವುಳ್ಳ ಪದಗಳು ಕೂಡಾ.

ಇಂಥದೊಂದು ಕಾವ್ಯದ ಪ್ರತಿಯೊಂದು ಪದವನ್ನೂ, ಸಂದರ್ಭವನ್ನೂ ಅರ್ಥಮಾಡಿಕೊಂಡೇ ಮುಂದೆ ಸಾಗುತ್ತೇನೆ ಎನ್ನುವುದು ಬಹುಶಃ ಸಾಧ್ಯವಲ್ಲದ ಮಾತು. ಯಾಕೆಂದರೆ, ಎಷ್ಟು ಯತ್ನಿಸಿದರೂ ನಮ್ಮ ಅಳತೆಗೆ ನಿಲುಕದ್ದು ಏನಾದರೂ ಇದ್ದೇ ಇರುತ್ತದೆ. ಆದ್ದರಿಂದ ಈ ಮಹಾಕಾವ್ಯವನ್ನು ಸಾಮಾನ್ಯ ಓದುಗರಿಗೆ ರುಚಿಸುವಂತೆ ಮಾಡುವ ಕೆಲಸ ಆಗಬೇಕಾಗಿದೆ. ಇದು ವಿದ್ವಾಂಸರಿಂದ ಮಾತ್ರವೇ ಆಗಬಲ್ಲ ಕೆಲಸ. ಆದರೆ ಎಲ್ಲರೂ ಇದನ್ನು ಓದಿದರೇ ಇದು ಸಾರ್ಥಕವಾಯಿತು ಎಂದು ತಿಳಿಯುವುದೂ ಸರಿಯಲ್ಲ. ಸ್ವತಃ ಗೋಕಾಕರೇ ಇಂಥ ಅಪೇಕ್ಷೆಯನ್ನು ಇಟ್ಟುಕೊಂಡವರಲ್ಲ ಎನ್ನುವುದು ಪೀಠಿಕಾಸಂಧಿಯಲ್ಲಿನ ಅವರ ಮಾತುಗಳಿಂದ ಗೊತ್ತಾಗುತ್ತದೆ. ‘ಒಂದು ಭಾಷೆಯು ಸಹಜಸಂಕ್ರಮಣಸ್ಥಿತಿಯೊಳಿರೆ, ಒರೆದ ಕೃತಿಗಿಹುದದರ ಕಾಲಾಂತರದ ಚ್ಯುತಿಯು’ ಎಂಬ ಅರಿವು ಕವಿಗೆ ಇದೆ.

ಏನಿರಬಹುದಿಂದು ಪಂಪನ ಓದುಗರ ಸಂಖ್ಯೆ?
ಆದರಾ ಕೃತಿಯಲಿ ಸೂರೆಗೊಂಡಿಹ ಕಾಣ್ಕೆ – ಕನಸುಗಳು,
ಬೆನ್ನುಡಿಯ ಮುನ್ನಡೆಯು, ಅವರಿವರ ಮುಖದಲ್ಲಿ
ಗುಣಗುಣಿಸಿ ಹಬ್ಬುವವು ಹವೆಯಂತೆ ನೂರೆಡೆಗೆ!

ಒಬ್ಬೊಬ್ಬ ಸಹೃದಯನ ಹೃದಯದಲ್ಲಿ ಪುನರ್ಜನಿಸಿ ಕವಿಯ ಅನುಭವವೆ ಲೋಕಾನುಭವ ಆಗುವುದು; ಈ ರೀತಿ ಸ್ವಾನುಭೂತಿಯು ಸರ್ವಾನುಭೂತಿಯಾಗಿರಲು. ‘ಪರಮ ಸಿದ್ಧಿ ಅಧುವೆ’ ಎನ್ನುವುದು ಕವಿದೃಷ್ಟಿ.

ಟಿಪ್ಪಣಿ: ಒಬ್ಬರು ಓದುಗರು ಗೋಕಾಕರ ಕಾವ್ಯದ ಕುರಿತಾದ ಈ ನನ್ನ ಲೇಖನಕ್ಕೆ ಸ್ವಲ್ಪ ಖಾರವಾಗಿಯೇ ಪ್ರತಿಕ್ರಿಯಿಸಿದ್ದರು; ಅವರ ವಾದವೆಂದರೆ ‘ಭಾರತ ಸಿಂಧುರಶ್ಮಿಯಲ್ಲಿ ಸ್ತ್ರೀಯರಿಗೆ ಅವಹೇಳನಕಾರಿಯಾದ ಭಾಗಗಳಿವೆ ಎಂಬುದು. ಇದಕ್ಕೆ ಬೆಂಬಲವಾಗಿ ಅವರು ಅಶ್ವಮೇಧ ಯಾಗದ ಸಂದರ್ಭವನ್ನು ಉದಾಹರಿಸಿದ್ದರು. ಈ ಓದುಗರ ಅಭಿಪ್ರಾಯ ಚರ್ಚೆಗೆ ಯೋಗ್ಯವಾದುದು. ಪುರಾಣ ವಿಷಯಗಳನ್ನು ಕಾವ್ಯಕ್ಕೆ ಅಳವಡಿಸಿಕೊಳ್ಳುವುದು ಹೇಗೆ, ಇಂದಿನ ಹೊಸ ಸಂವೇದನೆಯಲ್ಲಿ ಹಿಂದಣ ಕತೆಗಳನ್ನು ಅರ್ಥಮಾಡುವುದೆಂತು. ಮೊದಲಾದ ಸಮಸ್ಯೆಗಳಿವೆ. ಆದರೆ ನನ್ನ ಓದು ಪಠ್ಯವನ್ನು ಅರ್ಥಮಾಡುವ ಪ್ರಾಥಮಿಕ ಹಂತಕ್ಕೆ ಸಂಬಂಧಿಸಿದ್ದಲ್ಲದೆ ಹೆಚ್ಚಿನ ಮಟ್ಟದ ವಿಮರ್ಶೆಯ ಪ್ರಯತ್ನವಲ್ಲ. ನನಗೆ ಪತ್ರ ಬರೆದ ಓದುಗರಾದರೆ ವಿದ್ವಾಂಸರಾಗಿದ್ದು ಕಾವ್ಯವನ್ನು ಓದಿ ತಮ್ಮ ಅಭಿಪ್ರಾಯ ತಾವಾಗಿಯೇ ರೂಪಿಸಬಲ್ಲವರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿನ್ನೆ – ಇಂದು – ನಾಳೆ
Next post ಹೆಂಡತಿ

ಸಣ್ಣ ಕತೆ

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…