ಜಡವಾದ ಕವಿತೆಗಳನ್ನು ಬರೆದ ಕವಿಗಳು ಸಾಹಿತ್ಯ ಚರಿತ್ರೆಯಲ್ಲಿ ದಾಖಲಾಗಬಹುದು. ಹದವಾದ ಸಾಲುಗಳನ್ನು ಬರೆಯುತ್ತಲೇ ಶಾಶ್ವತವಾದ ಜಾಗವನ್ನು ಹಿಡಿದು ಕುಳಿತ ಕವಿಗಳೂ ಸಾಹಿತ್ಯ ಚರಿತ್ರೆಯಲ್ಲಿ ಸಿಗಬಹುದು. ಸಾಹಿತ್ಯ ಚರಿತ್ರೆ ಅನೇಕ ಸಾರಿ ತನ್ನ ಅಳತೆಗೋಲುಗಳಿಂದ ಅಳೆಯುವ ಕಾವ್ಯದ ಆಚೆಗಿನ ಸಾಧ್ಯತೆಗಳನ್ನು ಹುಡುಕಾಡುವಾಗ ಪೇಜಾವರರಂತಹ ಕವಿ ಕಂಡಾರು, ಪೇಜಾವರರು ಬದುಕಿದ್ದ ತನಕವೂ ಅವರ ಕಾವ್ಯವನ್ನು ನವೋದಯ ನವ್ಯ ಎಂದು ಹಣೆಪಟ್ಟಿ ಕಟ್ಟಲು ಕಾತುರರಾದ ಸಮಕಾಲೀನ ವಿಮರ್ಶಕರ ಪಡೆ ಅವರ ಕಾವ್ಯದ ಉಲ್ಲಾಸ, ಉತ್ಸಾಹಗಳನ್ನಾಗಲೀ ಆಳದ ವಿಷಾದವನ್ನಾಗಲೀ ಅರಿಯೆತೆಂದು ಹೇಳಲಾಗದು.
ಪೇಜಾವರ ಸದಾಶಿವರಾಯರು ಬರೆದಿದ್ದು ಸುಮಾರು ಐವತ್ತೆರಡು ಕವಿತೆಗಳನ್ನು ಮಾತ್ರ, ಅದರಲ್ಲಿ ನೆನಪಿನಲ್ಲಿ ಉಳಿಯುವಂತಹ ‘ವರುಣ’, ‘ನಾಟ್ಯೋತ್ಸವ’ದಂತಹ ಕವಿತೆಗಳನ್ನು ಕೊಟ್ಟ ಕೀರ್ತಿ ಅವರದು. ಯಾವುದೇ ಕವಿಯ ನಾಲ್ಕು ಶಕ್ತಿಯುತ ಸಾಲುಗಳು ಅವನನ್ನು ಚಿರಸ್ಥಾಯಿಯಾಗಿಸಬಲ್ಲವು. ಹಾಗೆ ಹೇಳುವುದಾದರೆ ಪೇಜಾವರರು ಯಶಸ್ವೀ ಕವಿ. ಅವರ ಕಾವ್ಯದಲ್ಲಿ ನೆನಪಿನಲ್ಲಿ ಉಳಿಯುವ ನಾಲ್ಕಾರು ಸಾಲುಗಳು, ಹಲವಾರು ಲಯಗಳು ಇದ್ದು ಸಣ್ಣ ವಯಸ್ಸಿನ ಈ ಕವಿಗೆ ಶ್ವಾಶತವಾದ ಸ್ಥಾನ ಕೊಟ್ಟಿವೆ. ಪೇಜಾವರ ಸದಾಶಿವರಾಯರು ಸಣ್ಣ ಪ್ರಾಯದಲ್ಲಿ ತೀರಿಕೊಂಡರೂ ತಮಗೆ ಸಿಕ್ಕ ಅಲ್ಪಾವಧಿಯಲ್ಲಿ ಕವಿತೆಗೊಂದು ನಾವೀನ್ಯತೆ ಬೇಕಿದೆ ಎಂದು ಕಂಡುಕೊಂಡಿದ್ದು ಹೊಸ ಕವಿಯ ಸಂವೇದನೆಯನ್ನು ಎತ್ತಿ ಹಿಡಿಯುವಂತಿದೆ. ನಿಜವಾದ ಕವಿತೆ ಓದುಗರನ್ನು ಚಕಿತಗೊಳಿಸಬೇಕು. ಇಲ್ಲದಿದ್ದರೆ ಅದು ಯಾವ ಕಾಲದಲ್ಲಿ ಹುಟ್ಟಿದರೂ ಪರಿಣಾಮಕಾರಿಯಾಗದಿರಬಹುದು. ಈ ಸತ್ಯವನ್ನು ಅರಿತಂತಿದ್ದ ಸದಾಶಿವರಾಯರು ತಮ್ಮ ಯೌವನದ ಸಮಯದಲ್ಲಿ ತೀವ್ರ ವ್ಯಾಮೋಹದಿಂದ ಕವಿತೆ ಕಟ್ಟಲು ಯತ್ನಿಸಿದ್ದು ಈ ಕವಿಯ ಕಾವ್ಯಕ್ಕೆ ಒಂದು ಬೆಲೆಯನ್ನು ತಂದುಕೊಡುವಂತಿದೆ.
ಪೇಜಾವರ ಸದಾಶಿವರಾಯರು ಇಂದು ಸಹ ಪ್ರಸ್ತುತರಾಗುವುದು ತಮ್ಮ ನಾವೀನ್ಯತೆಯ ಕಾರಣದಿಂದ, ಕಾವ್ಯ ಎಂದರೆ ಚಡಪಡಿಕೆ, ವಿಷಾದಾಭಿವ್ಯಕ್ತಿಗೆ ಇರುವ ಹೊರಬಾಗಿಲು ಎಂದು ಭಾವಿಸಿದ ಕವಿ ತಾನು ಬದುಕಿದ ಕಾಲದಲ್ಲಿಯೂ ಆನಂತರವೂ ಕಾವ್ಯದ ಈ ಸಾಧ್ಯತೆಗಳಿಗಾಗಿಯೇ ಪ್ರಸ್ತುತರಾಗುತ್ತಾರೆ. ಅಲ್ಲದೆ ಈ ಕವಿಯ ನಿಲುವು ಮುಂದೆ ಬಂದ ಅಡಿಗರ ನಿಲುವಿನಂತೆಯೇ ಅನ್ಯರೊದೆದುದನು ಬರೆಯಲಾರೆ ಎಂಬ ಹಠವನ್ನು ಅದಾಗಲೇ ಮೈಗೂಡಿಸಿಕೊಂಡಿತ್ತು. ಹಾಗೆಂದೇ ಭಾಷೆ ಮತ್ತು ವಸ್ತುಗಳಲ್ಲಿ ತಮ್ಮದೇ ಆದ ಹೊಸತನವನ್ನು ಕಂಡುಕೊಳ್ಳಲು ಯತ್ನಿಸಿರುವುದು ಅವರ ಕೆಲವು ಕವಿತೆಗಳಲ್ಲಾದರೂ ಕಾಣುತ್ತದೆ. ಈ ಬಗೆಯ ಸ್ವಪ್ರಜ್ಞೆ ಹಾಗು ಹೊಸ ಹಾದಿಯ ಶೋಧ ಒಬ್ಬ ಕವಿಗೆ ಇರಬಹುದಾದ ಮೌಲ್ಯಪ್ರಜ್ಞೆಯ ಅರಿವು ಎಂದು ತಿಳಿಯಬೇಕಾಗುತ್ತದೆ. ಈ ಕಾರಣಕ್ಕೇ ಪೇಜಾವರರ ಕಾವ್ಯಕ್ಕೆ ಮೌಲ್ಯವಿದೆ.
ಒಂದು ಶತಮಾನ ಕಳೆದ ನಂತರ ಪೇಜಾವರರ ಕಾವ್ಯವನ್ನು ಓದುವಾಗ ಅವರ ಕಾವ್ಯ ಒಂದು ಸಿತ್ಯಂತರದ ಸಂದಿಗ್ಧವನ್ನು ಮಿಡಿದಂತೆ ತೋರುತ್ತದೆ. ಅದು ನವೋದಯ ಅಥವಾ ನವ್ಯದ ಸಂವೇದನೆಯ ಪಲ್ಲಟವಿರಬಹುದು ಅಥವಾ ಸಂರಚನಾತ್ಮಕವಾಗಿ ಕವಿ ತೊಡಗಿಸಿಕೊಂಡ ಕೆಲವು ಪಲ್ಲಟಗಳಿರಬಹುದು. ಸದಾಶಿವರಾಯರ ಕಾವ್ಯವು ಒಂದು ಅಮೂರ್ತವಾದೊಂದು ಅಂಶವನ್ನು ಉಳಿಸಿಕೊಳ್ಳುತ್ತಾ ಚರಿತ್ರೆಯ ಪಲ್ಲಟಗಳನ್ನು ಹಾದು ಹೋಗುತ್ತದೆ. ಇದರ ಜೊತೆಗೆ ಸದಾಶಿವರಾಯರು ಅನಿವಾಸಿ ಬರೆಹಗಾರರಾಗಿ ಉಳಿದ ಸಂದರ್ಭವು ಅವರ ಕಾವ್ಯದ ಸಾಧ್ಯತೆಗಳನ್ನು ಬೇರೊಂದು ರೀತಿಯಲ್ಲಿ ಅವಲೋಕಿಸುವ ಅವಕಾಶವನ್ನು ತೆರೆದಿಡುತ್ತದೆ.
ಪೇಜಾವರ ಸದಾಶಿವರಾಯರ ಜೀವಿತಾವಧಿ ಅಲ್ಪಾವಧಿಯದು. ಅದರಲ್ಲಿ ಅವರು ತೊಡಗಿಕೊಂಡ ಕಾವೋದ್ಯೋಗ್ಯದ ಅವಧಿ ಇನ್ನೂ ಅತ್ಯಲ್ಪ. ಈ ಸಣ್ಣ ಅವಧಿಯಲ್ಲೇ ಅವರು ಕಟ್ಟಿದ ಕಾವ್ಯ ವಿಶೇಷತೆಯಿಂದ ಕೂಡಿದೆ. ಚಾರಿತ್ರಿಕವಾಗಿ ಹೊಸಗನ್ನಡದ ಅರುಣೋದಯದ ಕಾಲದಲ್ಲಿ ಕಾವ್ಯದ ನುಡಿಗಟ್ಟಿನ ಅರಿವು ಆಗ ತಾನೇ ಮೂಡುತ್ತಿದ್ದು ಹೊಸಗನ್ನಡವು ಹಳಗನ್ನಡದ ಚಹರೆಗಳಿಂದ ಬಿಡಿಸಿಕೊಂಡು ಸಂರಚನೆ ಮತ್ತು ವಸ್ತುಗಳಲ್ಲಿ ನಾವೀನ್ಯತೆಯನ್ನು ಸಾಧಿಸುವತ್ತ ನಡೆದಿತ್ತು. ಅಂತಹ ಸಮಯದಲ್ಲಿ ಬರೆಯಲಾರಂಭಿಸಿದ ಕವಿ ಪೇಜಾವರ ಸದಾಶಿವರಾಯರು ತಮ್ಮ ಕಾಲದ ಸ್ಪಂದನಗಳನ್ನು ಅನುಸರಿಸುತ್ತಲೇ ಹೊಸದನ್ನು ಬರೆಯುವ ತವಕ ಹೊಂದಿದ್ದರು. ಅವರ ಪ್ರಯೋಗಶೀಲ ಮನಸ್ಸು ಅವರ ಕಾವ್ಯದಲ್ಲಿ ಮೂಡಿದೆ. ಪೇಜಾವರರು ತಮ್ಮ ಸಮಕಾಲೀನರಿಗಿಂತ ಭಿನ್ನವಾದ ದಾರಿಯಲ್ಲಿ ನಡೆದುದಕ್ಕೆ ಅವರ ಕಾವ್ಯದಲ್ಲಿಯೇ ಸೂಚನೆಗಳಿವೆ ಎಂದರೆ ತಪ್ಪಾಗಲಾರದು. ಹೊಸಗನ್ನಡದ ಪದ್ಯರಚನೆಯ ಆರಂಭಿಕ ತೊಡರುಗಳನ್ನು ಅನುಭವಿಸುತ್ತಲೇ ಏನನ್ನಾದರೂ ಹೊಸದನ್ನು ಸಾಧಿಸಬೇಕೆನ್ನುವ ಯುವಕವಿ `ನಾಟ್ಯತ್ಸವ’ದಂತಹ ಕವಿತೆಯನ್ನು ಬರೆದು ನವ್ಯತೆಗೆ ಒಂದು ಮುನ್ನುಡಿ ಹಾಕಿಕೊಟ್ಟರು.
(ಅ)
ಪೇಜಾವರರ ಕಾವ್ಯ ನವೋದಯ ಹಾಗು ನವ್ಯದ ಸಂವೇದನೆಗಳನ್ನು ಒಟ್ಟಾಗಿಯೇ ಪ್ರದರ್ಶಿಸಿದ ಕಾವ್ಯವಾದ್ದರಿಂದ ಅದನ್ನು ಚಾರಿತ್ರಿಕವಾಗಿ ಎಲ್ಲಿ ಇಡಬೇಕೆಂಬುದೇ ಅನೇಕರ ಸಮಸ್ಯೆ. ವಾಸ್ತವವಾಗಿ ಒಬ್ಬ ಕವಿಯನ್ನು ಯಾವುದಾದರೂ ಕಾಲಘಟ್ಟದ ಸಂವೇದನೆಗೆ ಸೀಮಿತಗೊಳಿಸುವುದು ಅಸಾಧುವಾದುದು. ಆದರೆ ಯುಗಧರ್ಮದ ಕಾರಣದಿಂದ ಉಂಟಾಗುವ ಸಂವೇದನಾತ್ಮಕ ಬದಲಾವಣೆಗಳು ಚಾರಿತ್ರಿಕವಾದ ಕ್ರಮದಲ್ಲಿ ಹೊರಹೊಮ್ಮಲು ಸಾಧ್ಯವಿದೆ ಎಂಬ ಮೂಲಗ್ರಹಿಕೆಯಿಂದ ಹೊರಟರೆ ಕೆಲವು ಪ್ರಯೋಜನಗಳಿವೆ. ನವೋದಯದ ಆರಂಭದ ಹಂತದಲ್ಲಿ ಹಳಗನ್ನಡದ ಲಯ, ಲಾಸ್ಯಗಳನ್ನು ಉಳಿಸಿಕೊಂಡೇ ಹೊಸತನವನ್ನು ಸ್ವಾಗತಿಸಿತು. ಕಾವ್ಯದ ವಸ್ತು, ವಿನ್ಯಾಸಗಳ ಬಗೆಗೆ ಬಹುವಾದ ಚರ್ಚೆ, ಪ್ರತಿಚರ್ಚೆಗಳು ನಡೆಯುತ್ತಿದ್ದುದನ್ನು ಅಂದಿನ ಕವಿಗಳ ಉಲ್ಲೇಖಗಳಲ್ಲಿ, ಪತ್ರಿಕಾ ಬರೆವಣಿಗೆಗಳಲ್ಲಿ ಕಾಣಬಹುದು. ಅವುಗಳಲ್ಲಿ ಮುಖ್ಯವಾಗಿ ಗೋವಿಂದ ಪೈಗಳು ಆದಿಪ್ರಾಸವನ್ನು ಬಿಟ್ಟುಕೊಟ್ಟ ಉದಾಹರಣೆ ಆ ಕಾಲದ ಒಂದು ಅಪೂರ್ವವಾದ ಸಂದರ್ಭವಾಗಿತ್ತು. ಈ ಉಲ್ಲಂಘನೆಗಾಗಿ ತಮ್ಮ ಗುರುಗಳಾದ ಪಂಜೆಯವರನ್ನೂ ಎದುರು ಹಾಕಿಕೊಂಡು ದಿಟ್ಟತನ ತೋರಿಸಿದ ಖ್ಯಾತಿ ಪೈಗಳದು. ಪೈಗಳ ಆದಿಪ್ರಾಸ ತ್ಯಾಜ್ಯದ ವಿಷಯವು ಹೊಸಗನ್ನಡ ಕವಿತೆಯ ಸಂರಚನೆಯ ದೃಷ್ಟಿಯಿಂದ ಕ್ರಾಂತಿಕಾರಕ ಹೆಜ್ಜೆ ಎಂದೇ ಭಾವಿಸಲಾಗಿದೆ. ೧೯೩೦ರ ಹೊತ್ತಿಗೆ ಕನ್ನಡ ನವೋದಯ ಕಾವ್ಯವು ಒಂದು ನಿರ್ಣಾಯಕ ಹಂತವನ್ನು ಮುಟ್ಟಿತ್ತು. ಅಂದರೆ ಹೊಸ ಸಂವೇದನೆಯ ಹುಟ್ಟು ಕನ್ನಡದ ಕಾವ್ಯದಲ್ಲಿ ಕಾಣುವಂತಿತ್ತು. ಈ ಸಂಗತಿಯನ್ನು ಸ್ವತಃ ಪೇಜಾವರರೇ ಹೊಸ ತಲೆಮಾರಿನ ಕಾವ್ಯದ ಬಗ್ಗೆ ಹೀಗೆ ಬರೆದರು: “ಹಿಂದಿನ ಜೀವನಕ್ಕೂ ಇಂದಿನ ಜೀವನಕ್ಕೂ ಇರುವ ಭೇದವನ್ನು ನೋಡಿ ಇಂದಿನ ಜೀವನದ ಧರ್ಮಕ್ಕೊಪ್ಪುವ ಪಥದಲ್ಲಿ ಮುಂದುವರೆಯಲು ಇಂದಿನ ಕವಿಗಳು ಯತ್ನಿಸುತ್ತಿದ್ದಾರೆ. ಛಂದಸ್ಸನ್ನು ಹೊಸ ರೂಪಕ್ಕೆ ಮಾರ್ಪಡಿಸಿಕೊಂಡು ನವಜೀವನದ ಸುಖದುಃಖಗಳನ್ನು ಯಥಾರ್ಥವಾಗಿ ಬಣ್ಣಿಸಲು ಹವಣಿಸುತ್ತಲಿದ್ದಾರೆ. ಹೊಸ ವಿಚಾರವನ್ನುಂಟು ಮಾಡಲು ಸನ್ನದ್ಧರಾಗಿದ್ದಾರೆ” (ಪೇಜಾವರರು ಸಂಪಾದಿತ ಕವನ ಸಂಗ್ರಹಕ್ಕೆ ಬರೆದ ಮುನ್ನುಡಿ).
ನವೋದಯದಲ್ಲಿದ್ದ ಧಾರವಾಡ, ಮೈಸೂರು ಮತ್ತು ಮಂಗಳೂರು ಕೇಂದ್ರಗಳು ಮೇಲ್ನೋಟಕ್ಕೆ ಒಂದೇ ಎಂಬಂತೆ ತೋರುತ್ತಿದ್ದರೂ ಅವುಗಳ ಸಂವೇದನೆಗಳು ಪ್ರಾದೇಶಿಕ ವಿಶಿಷ್ಟತೆಗಳನ್ನೂ ಅನನ್ಯ ಸಂವೇದನೆಗಳನ್ನೂ ಒಳಗೊಂಡಿದ್ದವು. ರಾಷ್ಟ್ರೀಯತೆ ಮತ್ತು ನಾಡಿನ ಒಕ್ಕೂಟದ ಚಿಂತನೆಗಳು, ವಿಶ್ವಮಾನವ ಪ್ರಜ್ಞೆ ಇತ್ಯಾದಿ ಸಾಮಾನ್ಯ ಅಂಶಗಳ ಹೊರತಾಗಿ ಇವನ್ನು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ಮಂಗಳೂರು ಸೀಮೆಯಿಂದ ಬರೆಯುತ್ತಿದ್ದ ಕವಿಗಳಲ್ಲಿ ಮುಳಿಯ ತಿಮ್ಮಪ್ಪಯ್ಯ, ಎಂ.ಎನ್.ಕಾಮತ್, ಕಡೆಂಗೋಡ್ಲು ಶಂಕರಭಟ್ಟರು, ಸೇಡಿಯಾಪು ಕೃಷ್ಣಭಟ್ಟ, ಪಾಂಡೇಶ್ವರ ಗಣಪತಿರಾವ್ ಮುಂತಾದವರು ಪೈಗಳನ್ನು ಅನುಸರಿಸಿ ಬರೆಯುತ್ತಿದ್ದರು. ಇದೇ ಕಾವ್ಯ ಮಾದರಿಯಲ್ಲಿ ಪೇಜಾವರರೂ ಗುರುತಿಸಿಕೊಂಡರು. ಪೈಗಳ ಮಾದರಿಯಲ್ಲಿ ಬರೆಯುತ್ತಿದ್ದರು ಎಂದ ಮಾತ್ರಕ್ಕೆ ಅವರನ್ನು ಅನುಸರಿಸುವುದು ಕಷ್ಟವೇ ಇತ್ತು. ಏಕೆಂದರೆ ಪಂಜೆ ಅಥವಾ ಪೈಗಳ ಕಾವ್ಯ ಮಾದರಿಯು ಇನ್ನೂ ಹೊಸ ತಲೆಮಾರಿಗೆ ಒಗ್ಗುವಂತದ್ದಾಗಿರಲಿಲ್ಲ. ಅವರ ದಾರಿ ಕ್ಲಿಷ್ಟವಾದುದಾಗಿತ್ತು. ಪೈಗಳನ್ನು ಮಾದರಿಯನ್ನಾಗಿ ನೋಡಿದ ಗುಂಪಿನಲ್ಲಿಯೇ ಸೇಡಿಯಾಪು ಹಾಗು ಕಡೆಂಗೋಡ್ಲು ಕಥನ ಕವನಗಳ ರಚನೆಯಲ್ಲಿ ಒಂದು ಮಾದರಿ ನಿರ್ಮಾಣ ಮಾಡತೊಡಗಿದ್ದರು. ಪೈ ಅಥವಾ ಸೇಡಿಯಾಪು, ಕಡೆಂಗೋಡ್ಲು ಅವರ ಕಾವ್ಯ ಮಾರ್ಗಗಳಿಗಿಂತ ಭಿನ್ನವಾದ ಕಾವ್ಯದಾರಿಯನ್ನು ಕಂಡುಕೊಳ್ಳಬೇಕು ಎಂಬುದು ಪೇಜಾವರರ ಹಂಬಲವಾಗಿರುವಂತೆ ತೋರುತ್ತದೆ. ಹೀಗೆಂದ ಮಾತ್ರಕ್ಕೆ ಹೊಸ ದಾರಿಯನ್ನು ಪೇಜಾವರರು ನಿರ್ಮಿಸಿಕೊಟ್ಟರು ಎಂದಲ್ಲ. ಪರಂಪರೆಯನ್ನು ಧಿಕ್ಕರಿಸಿ, ಅಡಿಗರೆಂದಂತೆ, ‘ನಡೆದು ಬಂದ ದಾರಿಯ ಕಡೆಗೆ ತಿರುಗಿ ಕಣ್ಣು ಹೊರಳಿಸಬೇಡ’ ಎನ್ನುವ ರೀತಿಯ ಹೊಸತನದ ನಿಜವ್ರತವನ್ನು ತೊಟ್ಟು ಮುನ್ನಡೆಯುವಂತಹ ಮಹತ್ವದ ಛಾತಿಯು ಪೇಜಾವರರಲ್ಲಿ ಕಾಣುವುದಿಲ್ಲ. ಆದರೆ ತಮ್ಮತನದ ಹುಡುಕಾಟಗಳನ್ನು ಅವರು ಎಂದಿಗೂ ಬಿಡಲಿಲ್ಲ. ಇದರಿಂದ ಅವರ ಛಾಪು ಮೂಡಿತು. ಒಂದು ಹಂತದಲ್ಲಿ ಪೇಜಾವರರು ತಮ್ಮ ಸಮಕಾಲೀನ ಕವಿಗಳಿಗಿಂತ ಭಿನ್ನವಾದ ಕಾವ್ಯ ಮಾರ್ಗ ಬೇಕೆಂದು ಬಯಸಿದ್ದು ಅವರ ಹೊಸ ಸಂವೇದನೆಗೆ ಕಾರಣವಾಯಿತು ಎನ್ನಬಹುದು. ಹಾಗೆ ನೋಡಿದರೆ ಪೇಜಾವರರ ಕಾವ್ಯ ಸಂವೇದನೆ ಮತ್ತು ಸಂರಚನೆಗಳೆರಡಲ್ಲಿಯೂ ಅನೇಕ ದಾಟುಗಳಿವೆ. ಅವರ ಈ ದಾಟುಗಳು ಒಬ್ಬ ಯುಗ ನಿರ್ಮಾತೃವಿನ ಮಟ್ಟಕ್ಕೆ ಅಲ್ಲದಿದ್ದರೂ ಸೂಕ್ಷ್ಮಾವಲೋಕನಕ್ಕೆ ದಕ್ಕುವಂತಿವೆ. ಕನ್ನಡದಲ್ಲಿ ನವ್ಯ ಸಂವೇದನೆಯು ಹದಗೊಳ್ಳುತ್ತಿರುವ ಸಂದರ್ಭದಲ್ಲಿ ಪೇಜಾವರರಿಗೆ ತಮ್ಮ ಕಾವ್ಯದ ದಾಟುಗಳನ್ನು ಸಮಕಾಲೀನ ಪ್ರಪಂಚ ಅಷ್ಟಾಗಿ ಗಮನಿಸಿಲ್ಲ ಎಂಬ ವಿಷಾದವಿದೆ. ಗೋಕಾಕರಿಗೆ ಬರೆದ ಪತ್ರವೊಂದರಲ್ಲಿ ಅವರು ತುಂಬಾ ನೋವಿನಿಂದ ಈ ಸಂಗತಿಯನ್ನು ಪ್ರಸ್ತಾಪಿಸಿದ್ದಾರೆ. ಕನ್ನಡದ ಮನಸ್ಸು ಇನ್ನೂ ನವ್ಯಕಾವ್ಯದ ರೀತಿಗೆ ತೆರೆದುಕೊಂಡಿರಲಿಲ್ಲವೋ ಏನೊ. ಆದರೆ ಪೇಜಾವರರಿಗೆ ಮಾತ್ರ ತಾವು ಸಮಕಾಲೀನರಿಗಿಂತ ಭಿನ್ನವಾಗಿ ಬರೆಯುತ್ತಿರುವ ಕವಿ ಎಂದು ಬಲವಾದ ನಂಬಿಕೆಯಿತ್ತು.
ಪೇಜಾವರರ ಕಾವ್ಯ ನವೋದಯವೇ? ನವ್ಯವೇ? ಎಂಬ ಬಗ್ಗೆ ಕನ್ನಡದಲ್ಲಿ ಚರ್ಚೆಯಾಗಿದೆ. ೧೯೭೧ ರಲ್ಲಿ ‘ಅಕ್ಷರ ಹೊಸ ಕಾವ್ಯ’ ಸಂಪಾದಿಸಿದ ಲಂಕೇಶರು ಪೇಜಾವರರನ್ನು ಸಮಕಾಲೀನ ಕವಿಗಳ ಜೊತೆ ಜಾಗ ನೀಡುತ್ತಾರೆ. ವಿ.ಕೃ.ಗೋಕಾಕರು ಪೇಜಾವರರ ಕವಿತೆಗಳಲ್ಲಿ ನವ್ಯ ಭಾವವಿರುವುದನ್ನು ಅದಾಗಲೇ ಗುರುತಿಸಿರುತ್ತಾರೆ. ೧೯೫೦ರ ಹೊತ್ತಿಗೆ ಗೋಕಾಕರು ನವ್ಯತೆಯ ಆಗಮನವನ್ನು ಘೋಷಿಸಿದಾಗ ‘ಸ್ವಚ್ಛಂದ ಬಂಧ ನವ್ಯಕಾವ್ಯದ ಪ್ರಮುಖ ಲಕ್ಷಣ’ ಎಂದಿರುವುದನ್ನು ಗಮನಿಸಿದರೆ ಪೇಜಾವರ ಎಂಬ ಕವಿ ಸಂವೇದನೆಯಲ್ಲಿ ಹೊಸತನವನ್ನು ತುಂಬಿಕೊಳ್ಳುವ ಯತ್ನದಲ್ಲಿದ್ದಂತೆ ತೋರುತ್ತದೆಯಾಗಿ ಕವಿತೆಯ ರಚನೆಯ ದೃಷ್ಟಿಯಿಂದ ಹಳೆಯ ಲಯಗಳನ್ನೂ ಗೇಯ ಮಾದರಿಗಳನ್ನೂ ಬಿಟ್ಟುಕೊಟ್ಟಿಲ್ಲ. ಅಂದರೆ ಕವಿತೆಯ ರಚನೆಯ ದೃಷ್ಟಿಯಿಂದ ಒಂದು ಹೊರಳನ್ನು ಸೂಚಿಸುವ ಸಂರಚನಾತ್ಮಕ ದಾಟು ಅವರಲ್ಲಿ ಸಾಧ್ಯವಾಗಲಿಲ್ಲ. ಪೇಜಾವರರ ಕಾವ್ಯ ನವೋದಯ ಹಾಗು ನವ್ಯದ ಸಲ್ಲಕ್ಷಣಗಳನ್ಯಾವುದನ್ನೂ ಬಿಡದೆ ತಮಗೆ ಬೇಕಾದ ಹದಕ್ಕೆ ಬಳಸಿಕೊಂಡಿರುವುದನ್ನು ಗಮನಿಸಬಹುದು. ಆದರೆ ಗೋಕಾಕರು ತಮ್ಮ ನವ್ಯತೆಯ ಮೇಲಿನ ಮುಂದುವರೆದ ಚರ್ಚೆಯಲ್ಲಿ ನವ್ಯಕಾವ್ಯದ ಮನೋಧರ್ಮವು ಮಾನವತಾವಾದ ಎಂದು ಹೇಳಿದ ಅಂಶವನ್ನು ಅವಲೋಕಿಸಬೇಕಿದೆ. ಮಾನವತಾ ಧರ್ಮವು ಮಾನವ ಕೇಂದ್ರವಾದ ಆಲೋಚನಾಮೂಲವಾದುದು(ರಾಶನಲ್ ಟೆಂಪರೆಂಟ್). ಅಲ್ಲದೆ ಸೆಕ್ಯುಲರ್ ಆದ ಚಿಂತನಾಕ್ರಮವನ್ನು ಬಯಸುವಂತದ್ದು. ನವ್ಯಕಾವ್ಯ ಇದಕ್ಕೆ ತಕ್ಕಂತೆ ರಾಶನಲ್ ಮೋಟಿವ್ ಹೊಂದಿ ಆ ಚೈತನ್ಯದಲ್ಲಿ ಮೈದುಂಬಿಕೊಳ್ಳುವುದನ್ನು ಕನ್ನಡದ ಸಂದರ್ಭದಲ್ಲಿ ಕಾಣಬಹುದು. ಪೇಜಾವರರ ಮನೋಧರ್ಮ ನವ್ಯ ಎಂದೆನಿಸಲು ಅವರು ವಿದೇಶದಲ್ಲಿ ನೆಲೆಸಿದ್ದುದು ಒಂದು ಕಾರಣವಿರಬಹುದು(ಈ ಕಾರಣದಿಂದಲೇ ನಾಟ್ಯೋತ್ಸವದಂತಹ ಕವಿತೆ ಕನ್ನಡದಲ್ಲಿಯೇ ವಿಶೇಷವಾದ ವಿದೇಶಿತನದ ಗಂಧವನ್ನು ಹೊಂದಿದ ಕವಿತೆಯಾಗಿ ಉಳಿದಿದೆ). ಅಲ್ಲದೆ ಅವರ ಕನ್ನಡ ನವೋದಯವನ್ನು ಪ್ರವೇಶಿಸಿದ್ದು ಹೊರಗಿನ ಪ್ರಜ್ಞೆಯಿಂದಲೇ, ಮೂಲತಃ ತುಳುಭಾಷಿಕರಾದ ಪೇಜಾವರ ಕನ್ನಡವನ್ನು ಬಳಕೆಯ ಭಾಷೆಯಾಗಿ ಪ್ರವೇಶಿಸಬೇಕಾದರೂ ಒಂದು ದೂರ ಇದ್ದೇ ಇತ್ತಷ್ಟೆ. ಇದರಿಂದ ಪೇಜಾವರರಿಗೆ ವಿಶಿಷ್ಟವಾದ ಕಾವ್ಯವಸ್ತು ಅವರ ಕಾವ್ಯದಲ್ಲಿ ಕಾಣುತ್ತದೆ.
ಪೇಜಾವರರ ಕಾವ್ಯ ವಸ್ತು ವಿಷಯದಿಂದಷ್ಟೇ ಅಲ್ಲದೇ ಭಾಷೆ ಹಾಗೂ ಸಂರಚನೆಯ ದೃಷ್ಟಿಯಿಂದಲೂ ಒಂದು ಪಲ್ಲಟವನ್ನು ಕ್ರಮಿಸಿದೆ. ಗಿರಡ್ಡಿಯವರು ಗುರುತಿಸುವಂತೆ ದಕ್ಷಿಣ ಕನ್ನಡದ ನವೋದಯ ಕವಿಗಳಿಗೆ ‘ಕನ್ನಡ ಆಡುಭಾಷೆಯಾಗಿ ಲಭ್ಯವಿರಲಿಲ್ಲ. ಅದು ಶಾಲೆಯಲ್ಲಿ ಪುಸ್ತಕಗಳ ಓದಿನ ಮೂಲಕವೇ ದೊರಕಿಸಿಕೊಂಡಿದ್ದ ಲಿಖಿತ ಕನ್ನಡವಾಗಿತ್ತು. ದಕ್ಷಿಣ ಕನ್ನಡಿಗರ ಆಡು ಭಾಷೆ ತುಳು ಮತ್ತು ಕೊಂಕಣಿ ಮನೆಮಾತಾದ ಕಾರಣ ಇದು ಸಹಜವೇ. ತುಳುಭಾಷೆಯ ಸಾಂಗತ್ಯವುಳ್ಳ ಪೇಜಾರರಿಗೆ ಕನ್ನಡವು ವ್ಯವಹಾರಕ್ಕೆ ಮಿಕ್ಕ ಭಾವ ಭಾಷೆಯಾಗಿ ಸಲ್ಲುವ ಅವಕಾಶಗಳು ಕಡಿಮೆಯಾಗಿದ್ದವು. ಈ ಕವಿ ಹೀಗಾಗಿ ತಮ್ಮ ತುಳುಮಣ್ಣಿನ ವಾಸನೆಯನ್ನು ಕನ್ನಡ ಭಾಷೆಗೆ ಭಾಷಾಂತರಿಸಿಕೊಳ್ಳುತ್ತಾರೆ. ಪೇಜಾವರರ ಕಾವ್ಯ ಮೈದುಂಬುವುದು ಅವರು ತುಳುನಾಡಿನ, ಹಿರಿಮೆಯನ್ನು, ಅದರ ಪ್ರಾದೇಶಿಕ ವೈಶಿಷ್ಟ್ಯತೆಯನ್ನು ತೆರೆದು ನೋಡಿದಾಗ. ಉದಾಹರಣೆಗೆ ‘ಆಟಿಯ ಹುಣ್ಣಿಮೆ’ಯಂತಹ ಕವಿತೆ ಬಹು ಸುಂದರವಾಗಿ ತುಳುನಾಡಿನ ಆಷಾಢ ಮಾಸವನ್ನು ಬಣ್ಣಿಸುತ್ತದೆ. ಕುವೆಂಪು ಸಾಹಿತ್ಯದಲ್ಲಿ ಬರುವ ಪ್ರಕೃತಿ ಸೌಂದರ್ಯದ ಕಾಣ್ಕೆ ಪೇಜಾವರರಲ್ಲೂ ಸಹಜವಾಗಿಯೇ ಬರುತ್ತದೆ. ಕವಿಯನ್ನು ತನ್ನ ಪ್ರಾದೇಶಿಕ ಕುರುಹುವಾಗಿ ಮೆರೆಸುವ ಹಾಡೂ ಸಹ ಅವರ ಭಾಷಾಂತರ ಪ್ರಕ್ರಿಯೆಯೇ ಎನ್ನಿಸುತ್ತದೆ. ತುಳುನಾಡಿನ ಸಂಸ್ಕೃತಿ ವೈಭವಗಳನ್ನೆಲ್ಲ ಮುಖ್ಯವಾಹಿನಿ ಎನ್ನಿಸಿಕೊಳ್ಳುವ ಕನ್ನಡ ಸಂಸ್ಕೃತಿಯ ಜೊತೆಗೆ, ಅಂದರೆ ಕುಮಾರವ್ಯಾಸನು ಹಾಡಿದನೆಂದರೆ ಎಂಬಲ್ಲಿ ‘ಕಬ್ಬಿಗ ಲಕ್ಕಣ ಹಾಡಿದನೆಂದರೆ, ಕಣ್ಣಲಿ ಕುಣಿವುದು ತುಳುನಾಡು’; ‘ಇದು ತುಳುನಾಡಿನ ಹಂಪೆ ಈಗಿದು ಕೊಳೆಕೊಂಪೆ’ ಎಂದು ವಿಜಯನಗರದ ಸಂಕೇತ ಮಾತ್ರವನ್ನು ಕನ್ನಡ ಸಂಸ್ಕೃತಿಗೆ ಸೇರಿಸಿಕೊಳ್ಳುವಂತೆ ಬಾರ್ಕೂರು ಹಾಳು ಬಿದ್ದಿರುವುದಕ್ಕೆ ಸಮನಾಗಿ ಕಲ್ಪಿಸುತ್ತಾರೆ. ಹೀಗೆ ನಿರಂತರವಾಗಿ ಕವಿ ತನ್ನ ಭಾವಲೋಕದಲ್ಲಿ ಬೆಳೆದ ಪ್ರಾದೇಶಿಕತೆಯು ತನ್ನ ಭಾಷೆಯಲ್ಲಿ ಚೆನ್ನಾಗಿ ಕಲ್ಪಿಸಿಕೊಂಡು, ಅನಂತರ ಅದನ್ನು ಮುಖ್ಯಭಾಷೆಗೆ ಒಲಿಸುತ್ತಿರುವಂತೆ ತೋರುತ್ತದೆ. ಮೌಖಿಕತೆಯೇ ಪ್ರಧಾನ ಲಕ್ಷಣವಾದ ತುಳು ಭಾಷೆಯನ್ನು ಲಿಖಿತ ಭಾಷೆಗೆ (ಕನ್ನಡಕ್ಕೆ) ಭಾಷಾಂತರಿಸಿಕೊಳ್ಳಬೇಕಾದುದುರಲ್ಲಿ ಪೇಜಾರರಿಗೆ ಯಾವ ಹಿಂಜರಿಕೆಯೂ ಇಲ್ಲ. ಅದು ಕನ್ನಡವೆಂಬ ಮುಖ್ಯಭಾಷೆ ಮಾಧ್ಯಮವಾಗಿಸಿಕೊಂಡು ತುಳುವಿನ ಲಯ, ಮೌಖಿಕ, ಅನೌಪಚಾರಿಕ ಹಾಡು, ಹಬ್ಬಗಳನ್ನು ಹೊಗಿಸಿ, ಮಾಡಬೇಕಾದ ಪ್ರಯೋಗ, ಒಂದು ಕರ್ತವ್ಯದಂತೆಯೇ ಹೊರತು ಕನ್ನಡ ಭಾಷೆಯ ಜೊತೆಗೆ ಮುಖ್ಯ ಅಮುಖ್ಯ ಸ್ಥಾನಗಳ ಅನುಸಂಧಾನ ಮಾರ್ಗದಂತಲ್ಲ ಎನ್ನಿಸುತ್ತದೆ.
ಕನ್ನಡ ಭಾಷೆ ಪೇಜಾರರ ಒಮ್ಮೊಮ್ಮೆ ಉತ್ಸಾಹದ ಲಯದಲ್ಲಿ ಅತಿ ಸುಮಧುರವಾಗಿ ತೋರಿದರೆ ಇನ್ನೊಮ್ಮೆ, ಕೃತಕ ಕನ್ನಡದ ವೇಷದಲ್ಲಿ ಇಣುಕುವುದು. ಈ ತೊಯ್ದಾಟಗಳಿಗೆ ಪೇಜಾವರರು ಕಲ್ಪಿಸಿಕೊಂಡಿದ್ದ ಪ್ರಯೋಗಾತ್ಮಕ ರೀತಿಯೇ ಕಾರಣ ಎಂದು ತೋರುತ್ತದೆ. ಇಷ್ಟಾದರೂ ಕಾವ್ಯದ ಭಾಷೆ ನವ್ಯದ ಶೈಲಿಯದಲ್ಲಿ ಅದು, ಆಗಿನ್ನೂ ಕಣ್ಣು ಬಿಡುತ್ತಿದ್ದ ಹೊಸಗನ್ನಡ ಕಾವ್ಯದ ಲಯಗಾರಿಕೆ, ಸೊಗಸಿನ ಆಸ್ವಾದನಾ ಶೈಲಿಯಲ್ಲಿಯೇ ಸಾಗುತ್ತದೆ. ಮುಖ್ಯವಾಗಿ ಹೊಸಗನ್ನಡದ ಕಾವ್ಯದ ಚರ್ಚೆಯಲ್ಲಿ ಎತ್ತಿಕೊಳ್ಳುತ್ತಿದ್ದುದು ಲಯ ಮತ್ತು ಛಂದಸ್ಸಿನ ನಿಯಮಗಳ ಔಚಿತ್ಯಾಚಿತ್ಯತೆಗಳನ್ನು ಕುರಿತು ಎಂದು ಈಗಾಗಲೇ ಚರ್ಚಿಸಿದೆ. ಹೊಸಗನ್ನಡ ಕಾಲದ ಕವಿಗಳು ಛಂದಸ್ಸು/ಮಟ್ಟುಗಳ ವಿಷಯದಲ್ಲಿ ಅನೇಕ ಪ್ರಯೋಗಗಳನ್ನು ಮಾಡುತ್ತಾ ಹೊಸಗನ್ನಡದ ನಡುವೆ ಅನುಸಂಧಾನ ನಡೆಸುತ್ತಿದ್ದರು. ಅಚ್ಚು ಕನ್ನಡದ ಲಯಕ್ಕೆ ಹೊಂದಿಕೆಯಾಗುವಂತಹ ಏಳೆ, ರಗಳೆ, ಷಟ್ಪದಿಗಳನ್ನು ತಮ್ಮ ಅನುಕೂಲಕ್ಕೆ, ತಕ್ಕಂತೆ ಮುರಿದು ಹೊಸ ಗಣಗಳ ಗುಂಪುಗಳನ್ನು ಸೃಷ್ಟಿಸಿಕೊಳ್ಳುತ್ತಿದ್ದುದನ್ನು ಗಮನಿಸಬಹುದು. ಈ ಹಂತದಲ್ಲಿ ಭೋಗ, ಶರ, ಕುಸುಮಗಳಂತಹ ಕಿರು ಷಟ್ಟದಿಗಳನ್ನು ಕನ್ನಡದ ಮಟ್ಟುಗಳಾಗಿಸಿ ಪ್ರಯೋಗಿಸಿದ ಪ್ರಯೋಗವು ಗಮನಾರ್ಹವಾಗಿದೆ. ಹರಿಹರ ಬಳಸಿದ ಉತ್ಸಾಹ ರಗಳೆಗೆ ಹತ್ತಿರವಿರುವ ಭೋಗ ಷಟ್ಟದಿಯ ಲಯವನ್ನು ಕನ್ನಡಕ್ಕೆ ಕರೆದುಕೊಂಡರು ಹೊಸ ಕವಿಗಳು. ಸಾಮಾನ್ಯವಾಗಿ ಈ ಮೂರು ಮಾತ್ರೆಯ ಲಯವು ಜನಸಾಮಾನ್ಯರಿಗೆ ಒಪ್ಪುವ ಲಯವೆಂದೂ ಜನಪ್ರಿಯವಾಗಿ ಇದನ್ನು ಉತ್ಸಾಹಲಯವೆಂದೂ ಹೇಳಲಾಗುತ್ತದೆ. ಹೊಸಯುಗದಲ್ಲಿ ಕವಿತೆ ಬರೆಯಲಾರಂಭಿಸಿದ ಪೇಜಾವರರು ತಮ್ಮ ಕವಿತೆಯ ಮೂಲ ಲಯವಾಗಿ ಉತ್ಸಾಹಲಯವನ್ನು ಬಳಸುತ್ತಾರೆ. ಈ ಬಳಕೆಯಿಂದ ಪೇಜಾವರರ ಕಾವ್ಯಕ್ಕೆ ಅನುಪಮವಾದ ಓಘ ಸಿಗುತ್ತದೆ. ಮೂರರ ಲಯ ಮೆಲುಕು ಹಾಕುವುದಾದರೆ ಈ ಕೆಳಗಿನ ಸಾಲುಗಳನ್ನು ನೋಡಬಹುದು.
ಇಂದು ಸಂಧ್ಯೆ ಎನ್ನ ಕೊಠಡಿ/ಗುಪ್ತ ಸಂಕಟಗಳ ದುರ್ಗ(ವರುಣ)
ಸಾವ ನೋವ ಮೌನದಿಂದ/ಸಹಿಸಬಲ್ಲ ಸಹನ ಶೂರ(ಹಂಬಲದ ಹಾಡು)
ಮೂರರ ಲಯವಲ್ಲದಿದ್ದರೆ ನಾಲ್ಕು ಮಾತ್ರೆಯನ್ನು ಬಳಸಿ ಕವಿತೆಯ ಓಘವನ್ನು ಹೆಚ್ಚಿಸಿಕೊಂಡ ಕವಿ ಪೇಜಾವರ, ಆದರೆ ಒಂದು ತೊಡಕು ಎಂದರೆ ಅವರು ಬಳಸುವ ಕಾವ್ಯದ ಲಯಕ್ಕೂ ಅವರ ಕಾವ್ಯಹೊಮ್ಮಿಸುವ ವಿಷಾದಕ್ಕು ತಾಳೆಯಾಗುತ್ತಿಲ್ಲ. ಈ ಕವಿ ಬಳಸುವು ಪುಟಿಯುವ ಉತ್ಸಾಹಲಯ ಮತ್ತು ವಸ್ತು ಇಜ್ಜೋಡಿನಂತಾಗಿ ಬಿಡುತ್ತದೆ. ಕಾವ್ಯದ ಹದವರಿತು ಸಾಗುವ ದಾರಿಯಲ್ಲಿ ಅನೇಕ ಪ್ರಯೋಗಗಳನ್ನು ಕೈಗೊಂಡ ಕವಿಯ ಕಾವ್ಯದಲ್ಲಿ ಈ ಬಗೆಯ ಎಡರು ತೊಡರುಗಳು ಸಾಮಾನ್ಯ ಎಂದು ಭಾವಿಸಬಹುದಾಗಿದೆ.
(ಆ)
ನಾಟ್ಯೋತ್ಸವ ಕವಿತೆಯ ಉಲ್ಲಾಸ ಹಾಗು ಎಪಿಕ್ಯೂರಿಯನ್ ಮನೋಧರ್ಮಗಳು ಆ ಕಾಲದ ಕನ್ನಡ ಸಂವೇದನೆಗೆ ಹೊಸದಾಗಿತ್ತು. ಆದರೆ ಪೇಜಾವರರ ಕೀರ್ತಿ ಪ್ರಶಂಸೆಗಳು ಅವರ ನ್ಯಾಟ್ಯೋತ್ಸವ ಕವಿತೆಗೆ ಸೀಮಿತವಾಗಿ ಅವರನ್ನು ನಾಟ್ಯೋತ್ಸವದ ಹಿನ್ನೆಲೆಯಲ್ಲಿಯೇ ಗುರುತಿಸುವ ಸಾಹಿತ್ಯ ಚರಿತ್ರೆಯ ಕ್ರಮದಿಂದ ಪೇಜಾವರರ ಕಾವ್ಯದ ಇತರೆ ಆಯಾಮಗಳನ್ನು ಮರೆಮಾಚಿದಂತೆ. ಅವರನ್ನು ಎಪಿಕ್ಯೂರಿಯನ್ ಮನೋಭಾವದ ಕವಿ ಎಂದು ಲೇಬಲ್ಲು ಹಚ್ಚಿ ನೋಡಲಾಗದು. ಏಕೆಂದರೆ ಅವರ ಕಾವ್ಯವು ಒಂದೇ ಮನೋಧರ್ಮವನ್ನು ಹೊಂದಿದ ಪ್ರವೃತ್ತಿಯದಲ್ಲ. ತಮ್ಮ ಕಾವ್ಯದ ಆರಂಭದಲ್ಲಿ ಪೇಜಾವರರು ಸ್ವಾತಂತ್ರ್ಯ ಗೀತೆಗಳನ್ನೂ ಪ್ರಕೃತಿಗೀತೆಗಳನ್ನೂ ಬರೆದಿದ್ದಾರೆ. ಅವರ ‘ವರುಣ’ ಕಾವ್ಯ ಸಂಗ್ರಹದಲ್ಲಿ ಪ್ರಧಾನವಾಗಿ ಕಾಣುವ ತುಡಿತ ಸಾವಿನದು. ಸಾವಿನ ಸಂಚಾರಿ ಭಾವಗಳಾದ ವಿಷಾದ, ದುಃಖ, ನೋವುಗಳು ಅವರ ಕಾವ್ಯದ ನೆಲೆಯನ್ನು ರೂಪಿಸಿ ಅವರ ಕಾವ್ಯಕ್ಕೆ ರುದ್ರ ಕಲ್ಪನೆಯನ್ನು ತಂದುಕೊಟ್ಟಿವೆ.
ಯಾಕಾಗಿ ಈ ಸಣ್ಣ ವಯಸ್ಸಿನ ಕವಿ ಸಾವಿನ ಬಗ್ಗೆ ಚಿಂತಿತರಾಗಿದ್ದಾರೆ? ಎಂಬ ಪ್ರಶ್ನೆ ಹುಟ್ಟುವುದು ಸಹಜ. ರಂಶ್ರೀ ಅವರು ಪೇಜಾವರರ ಕಾವ್ಯವನ್ನು ಕುರಿತು ಅವರು ಎಳವೆಯಲ್ಲೇ ಬರುವ ಸಾವನ್ನು ಕುರಿತು ಚಿಂತಿಸಿದ್ದಾರೆ ಎನ್ನುತ್ತಾರೆ. ಈ ಕವಿಯ ಕಾವ್ಯದಲ್ಲಿ ಬರುವ ಸಾವಿನ ಪದ್ಯಗಳಿಗೆ ಒಂದು ರೀತಿಯ ಆತ್ಮಚರಿತ್ರಾತ್ಮಕ ಚಹರೆ ಇದೆ. ತಮ್ಮ ಮೂವತ್ತಾರನೆಯ ವಯಸ್ಸಿನಲ್ಲಿ ತೀರಿಕೊಂಡ ಸದಾಶಿವರಾಯರು ಸಾವಿನ ಬಗ್ಗೆ ಹೀಗೆ ಯೋಚಿಸುವುದು ಕೂಡ ಸಹಜವೆನ್ನುವಂತಾಗಿದೆ. ಪೇಜಾವರರ ‘ಬೇಡ’ ಕವನವಂತೂ ಅವರ ಬಗೆಗೆ ಅವರೇ ಹೇಳಿಕೊಂಡಂತಿದೆ. ಅಲ್ಲಿನ ಕೆಲವು ಸಾಲುಗಳನ್ನು ಉಲ್ಲೇಖಿಸುವುದಾದರೆ;
ಬೇರೆ ಲೋಕದ ಬೇಡ ಬಿಲ್ಲ ಬಗ್ಗಿಸಿ ನಿಂತು
ಎನ್ನೆಡೆಗೆ ಗುರಿಯಿಟ್ಟು ನಗುವೆಯೇಕೋ?
ಎಣ್ಣೆ ಆರುವ ಮೊದಲು ಜ್ಯೋತಿ ನಂದುವ ಮುಂಚೆ
ಈ ಹಣತೆಯನ್ನೊಡೆವ ಸಾಹಸವದೇಕೋ?
ಬಾಳೆಂಬ ರಸವೀಣೆ ನುಡಿಸಿಲ್ಲ ನನ್ನಾಣೆ
ವರುಷವಿಪ್ಪತ್ತೊಂದು; ಏಗೈವೆನಯ್ಯ?
ಜ್ಞಾನಗಳಿಸುವ ಬಯಕೆ ಬಾಳಬೇಕೆಂಬಾಸೆ
ಮುಗಿಲ ಗೋಪುರದಂತೆ ಮಾಯವೇನಯ್ಯ?
ಹೀಗೆ ಸಾಗುವ ಕವನವು ಧ್ವನಿಸುವ ರೀತಿಯು ಕೀಟ್ಸನ ‘ವೆನ್ ಐ ಹ್ಯಾವ್ ಫಿಯರ್ಸ್’ ಕವನವನ್ನು ಹೋಲುತ್ತದೆ. ಸಾವಿನ ಶಂಕೆ ಹಾಗು ಸಾವಿನಿಂದ ಒಂಟಿಯಾಗುವ ಅನೂಹ್ಯ ಭಯವು ಪೇಜಾವರರ ಈ ಕವಿತೆಯಲ್ಲಿ ಕಾಣುತ್ತದೆ. ರಮ್ಯತೆಯಿಂದ ಕೂಡಿ ಬದುಕಿನ ವಾಸ್ತವಗಳತ್ತ ತಿರುಗುವ ಧಾಟಿ ಇಲ್ಲಿ ಚೆನ್ನಾಗಿಯೇ ವ್ಯಕ್ತವಾಗುತ್ತದೆ. ಇದೇ ರೀತಿ ‘ಮುರಿದ ಮುರಲಿ’ ಕವಿತೆಯು ಸಹ ಆತ್ಮಾರ್ಥಕವಾದ ಧಾಟಿಯಲ್ಲಿಯೇ ನಿರೂಪಿತವಾಗಿದ್ದು ಸಾವನ್ನು ಉದ್ದೇಶಿಸಿ ಹೇಳಿದಂತಿದೆ.
ಜೀವನವು ಪುಡಿ ಮಾಡಿದೊಡಲಿನಾ ಪಾಡು ಬಿರುಕೆದ್ದ ಕೊಳಲಿನಂತೆ.
ಮುರಿದ ಮುರಲಿಯು ನಾನು. ಎನ್ನೊಡಲ ನೀನು ಕೌಶಲದಿ
ಮುರಿದೆಯಂತೆ!
ಈ ಸಾಲುಗಳಲ್ಲಿ ವ್ಯಕ್ತವಾಗುವ ಋಣಾತ್ಮಕವಾದ ಅನುಭವದ ವಿಷಾದವನ್ನು ಗಟ್ಟಿಗೊಳಿಸುತ್ತದೆ. ಈ ಬಗೆಯ ವಿಷಾದ ನೋವುಗಳು ಪೇಜಾವರರ ಕಾವ್ಯದಲ್ಲಿ ಇಣುಕುವುದನ್ನು ಗಮನಿಸಿದರೆ ಅವರ ಕಾವ್ಯದ ಮೂಲ ಸೆಲೆ ದುಃಖದ ನೆಲೆಯದು ಎನ್ನಿಸುವಂತಿದೆ. ಮೂಲತಃ “ನವೋದಯ ಸಾಹಿತ್ಯದಲ್ಲಿ ದಟ್ಟ ನಿರಾಸೆ, ಸಿನಿಸಿಸಂ ಎಲ್ಲಿಯೂ ಕಾಣುವುದಿಲ್ಲ. ಬಾಳು ಸ್ವೀಕಾರಾರ್ಹವೇ ಎಂಬ ಪ್ರಶ್ನೆಗೆ ಈ ಸಾಹಿತ್ಯದಲ್ಲೆಲ್ಲ ಸಿಕ್ಕುವುದು ಒಂದೇ ಉತ್ತರ “ಹೌದು” ಎಂಬ ಎಲ್.ಎಸ್. ಶೇಷಗಿರಿರಾವ್ ಅವರ ಅಭಿಪ್ರಾಯ(ಎಲ್.ಎಸ್.ಶೇಷಗಿರಿರಾವ್ ಸಮಗ್ರ: ಪು.೪೬) ಪೇಜಾವರರಂತಹ ಕವಿಗೆ ಅನ್ವಯಿಸಬಹುದೇ ಎಂಬ ಪ್ರಶ್ನೆ ಹುಟ್ಟುತ್ತದೆ. ಏಕೆಂದರೆ ಪೇಜಾವರರ ಕಾವ್ಯದ ಆಶಯವು ಭರವಸೆಯನ್ನು ಬಿಟ್ಟುಕೊಡುವುದಿಲ್ಲವಾದರೂ ಮೂಲತಃ ಅವರ ಕಾವ್ಯದ ಕಸುವು ಇರುವುದು ವಿಷಾದ ಮತ್ತು ಸಾವಿನ ಅಗಾಧ ಶಕ್ತಿಯ ಮುಂದೆ ಉಂಟಾಗುವ ಅಸಹಾಯಕ ಭಾವದಲ್ಲಿ. ನವೋದಯದ ಒಟ್ಟಾರೆ ಗುಣಗಳಲ್ಲಿ ಪೇಜಾವರರ ಕಾವ್ಯವನ್ನು ಹಿಡಿಯಲು ಹೋದರೆ ಉಂಟಾಗುವ ತೊಡಕು ಇದು. ಪೇಜಾವರರು ಇಂತಲ್ಲಿ ನವೋದಯಕ್ಕಿಂತ ನವ್ಯಕ್ಕೇ ಹೆಚ್ಚು ಹತ್ತಿರವಿದ್ದಾರೆ ಎನ್ನಿಸುತ್ತದೆ. ನವ್ಯದ ಮಾನವತಾ ಕೇಂದ್ರ ದೃಷ್ಟಿ ಹಾಗು ಅಸ್ತಿತ್ವವಾದೀ ನೆಲೆಗಟ್ಟನ್ನು ಈ ಕವಿ ಈ ಮೊದಲಲ್ಲೇ ನಿರೀಕ್ಷಿಸಿದ್ದರೇ ಎನ್ನುವಂತೆ ಅವರ ಕಾವ್ಯದ ಧ್ವನಿಯಿದೆ.
ಪೇಜಾವರರ ಕಾವ್ಯದಲ್ಲಿ ಸಾವು ಮತ್ತು ಬದುಕಿನ ಮೂಲ ಆಶಯಗಳು ಪುನರಾವರ್ತಿತವಾಗುತ್ತವೆ. ಸಾವು ಅವರಿಗೆ ಒಂದು ಪ್ರಾಗ್ರೂಪದಂತೆ. ಸಾವು ಮತ್ತು ಬದುಕುಗಳು ಆದಿಮ ಪ್ರತಿಮೆಗಳಾಗಿ ಮನುಷ್ಯಕುಲದಲ್ಲಿ ಉಳಿದಿರುವುದನ್ನು ಅವರ ಕಾವ್ಯ ಗ್ರಹಿಸಲೆತ್ನಿಸುತ್ತದೆ. ಇದರಿಂದ ಅವರ ಕಾವ್ಯ ಒಂದು ಆದಿಭೌತಿಕವಾದ ಆಯಾಮವನ್ನು ಅರಸಿದಂತಾಗಿದೆ. ಪೇಜಾವರರು ಈ ಸಾಧ್ಯತೆಯನ್ನು ಕಡೆಂಗೋಡ್ಲು ಶಂಕರಭಟ್ಟರಂತೆ ಕಥನ ಕವನಗಳ ಅಚ್ಚಿನಲ್ಲಿ ಇಡಲು ಹೋಗಿಲ್ಲ. ‘ಮಾದ್ರಿಯ ಚಿತೆ’ಯಂತಹ ಕಥನ ಕವನಗಳಲ್ಲಿ ಸಾವಿನ ದುರಂತವು ಕಥನದ ಮೂಲಕ ಹರಿಯುವಾಗ ಪಡೆದುಕೊಳ್ಳುವ ಆಯಾಮವು ಸ್ವಕೀಯತೆಯಲ್ಲಿ ಅರಸುವ ಕ್ರಮಕ್ಕಿಂತ ಭಿನ್ನವಾಗುತ್ತದೆ. ಕಥನ ಕವನದ ವಸ್ತು ನಿಷ್ಠತೆಯು ಅನುಭವವನ್ನು ಸಾರರೂಪದಲ್ಲಿ ಇಡುತ್ತದೆ. ಭಾವಗೀತೆಯ ಲಯದಲ್ಲಿ ಬರೆಯುವ ಪೇಜಾವರರ ಕವನದಲ್ಲಿ ಅದು ವ್ಯಕ್ತಿನಿಷ್ಠ ಅನುಭವದ ಪಾತಳಿಯಲ್ಲಿಯೇ ಬಿಚ್ಚಿಕೊಳ್ಳಬೇಕಾಗುತ್ತದೆ. ಅವರು ಈ ಸ್ವಕೀಯತೆಯನ್ನು ನಿರಾಕರಿಸಿಯೂ ಇಲ್ಲ. ಆದರೆ ಅವರ ನಿರೂಪಣೆಯು ಸಾವನ್ನು ಸಾರ್ವತ್ರೀಕರಣಗೊಳಿಸುವತ್ತ ತಿರುಗಿದೆ. ಅವರ ಸಫಲ ಕವನಗಳಲ್ಲಿ ಒಂದಾದ ‘ಮಾಯಕದ ಮಸಣ’ ಕವಿತೆಯು ಎತ್ತಿಕೊಳ್ಳುತ್ತಲೇ ನರನ ಜೀವಿತವನ್ನು ಸಾವು ಮುಟ್ಟುವ ಪರಿಯನ್ನು ಬಣ್ಣಿಸತೊಡಗುತ್ತದೆ. ಜೀವಗಳೆಂಬ ನದಿಗಳು ಮಸಣದ ಶರಧಿಯನ್ನು ಹೊಗುವುವು ಎಂಬ ಅಭಿಪ್ರಾಯದೊಡನೆ ಆರಂಭವಾಗುವ ಕವಿತೆ ಸಾರ್ವತ್ರಿಕಗೊಳ್ಳುವುದು ಹೀಗೆ:
ಬುವಿಯ ಮಾರ್ಗದಿ ನರನ ಜೀವಿತ
ನಿಲ್ಲಲಾಗದ ಓಟವು
ಓಡುತೋಡುತ ಮತ್ತೆ ಮಸಣದಿ
ಅಂತ್ಯವಾಗುವ ಆಟವು!
ಹೀಗೆ ಸಾಗುತ್ತಾ ಕವಿತೆಯು ಬದುಕಿನ ಚೆಲುವು ಹಾಗು ಸಡಗರಗಳು ಕ್ರಮೇಣ ಸಾವಿನ ಸ್ಪರ್ಶದಲ್ಲಿ ಹೇಗೆ ನಶ್ವರದ ಅರಿವನ್ನು ತಂದುಕೊಡುತ್ತವೆ ಎಂದು ಬಣ್ಣಿಸುತ್ತದೆ. ಆದರೆ ಕವಿ ಇಲ್ಲಿ ನರಕ ಎನ್ನುವುದು ಮನುಷ್ಯನ ಸ್ವಯಂಕೃತ ಸ್ಥಿತಿ ಎಂಬುದನ್ನು ಸೂಚ್ಯವಾಗಿ ಹೇಳುತ್ತಾರೆ. ಈ ಕವಿತೆಯ ಕೊನೆಯಲ್ಲಿ ಬರುವ ರೂಪಕವು ಕವಿತೆಯನ್ನು ಇನ್ನಷ್ಟು ಸಾಂದ್ರವಾಗಿಸುತ್ತದೆ.
ಬೇನೆ ಬೇಗುದಿ ಜಿನಸು ಕೊಳ್ಳಲು
ಸಾವಿನಂಗಡಿ ಸುಲಭವು!
ಕೊಂಡ ಜಿನಸನು ಹಿಂದೆ ದೂಡಲು
ಕೊಳ್ಳುವವರಾರಿಲ್ಲವು!
ಈ ಅಂಗಡಿ ವ್ಯಾಪಾರದ ರೂಪಕವು ಪುರಂದರದಾಸರ ಶೈಲಿಯನ್ನು ನೆನಪಿಸುವಂತಿದೆ. ಈ ಸಾಲುಗಳಲ್ಲಿ ಪೇಜಾವರರ ಹೊಸತನದ ಹೊಳಹನ್ನು ಕಾಣಬಹುದು.
ಸಾವಿನ ಬಗೆಗಿನ ಸಾರ್ವತ್ರಿಕತೆಯು ‘ಜವರಾಯ’ ಕವಿತೆಯಲ್ಲಿ ಮೂರ್ತೀಕರಿಸಿದೆ. ಸಾವು ವ್ಯಕ್ತಿಯಾಗಿ ಸಂಬೋಧಿಸಲ್ಪಡುವ ಈ ಕವಿತೆಯು ಸಹ ಸಾವಿನ ನಿಗೂಢತೆಯನ್ನು ವಿವರಿಸುತ್ತದೆ. ಇದರಂತೆ ‘ಜನನ-ಮರಣ’, ‘ಬಾಳು’, ‘ಸಾವು’ ಪದ್ಯಗಳು ಸಾವು ಬದುಕುಗಳನ್ನೇ ಗುರಿಯಾಗಿರಿಸಿಕೊಂಡು ಬರೆದ ಪದ್ಯಗಳು. ಇಲ್ಲಿ ಪುನಾವರ್ತಿತವಾಗುವುದು ಸಾವು ಬದುಕುಗಳ ಆದಿಮವಾದ ಕಲ್ಪನೆಗಳು. ಸೃಷ್ಟಿ ನಿಯಮವನ್ನೇ ಬೆದಕುವಂತಹ ಪ್ರಶ್ನೆಗಳು ಇಲ್ಲಿ ಹುಟ್ಟುವುದು ಆದಿಮವಾದ ಅಂಶವನ್ನೇ ತೋರುತ್ತದೆ.
ಈ ಮೇಲೆ ಉದಾಹರಿಸಿದ ಸಾವನ್ನೆ ನೇರ ಅಭಿಮುಖವಾಗಿಸಿ ಬರೆದ ಪದ್ಯಗಳಲ್ಲಿ ಇರುವ ಕೊರತೆ ಎಂದರೆ ಅಲ್ಲಿ ಜೀವನದ ಸತ್ಯ ದರ್ಶನದ ಕಡೆ ಹೆಚ್ಚು ಗಮನ ಹರಿದಿದ್ದು ಕಾವ್ಯಾತ್ಮಕತೆಯು ಕುಸಿದಿರುವುದು. ಸಾರ್ವತ್ರಿಕವಾದ ಅನುಭವವನ್ನು ವಿಶೇಷವೆಂದು ಹೇಳುವಾಗ ರೂಪಕಾತ್ಮಕವಾದ ಪ್ರತಿಭೆಯನ್ನು ಕವಿತೆಯ ಓದುಗ ನಿರೀಕ್ಷಿಸುತ್ತಿರುತ್ತಾನೆ. ಇಲ್ಲಿ ಪೇಜಾವರರ ಮೇಲಿನ ನಿರೀಕ್ಷೆ ಹೆಚ್ಚಾಗುತ್ತದೆ.
ಪೇಜಾವರರ ಕಾವ್ಯದ ಇನ್ನೊಂದು ಮಗ್ಗಲನ್ನು ಗಮನಿಸುವುದಾದರೆ ಅವರ ಕವಿತೆಗಳಲ್ಲಿ ಸಾವು ಬದುಕಿನ ಸಂಗತಿಗಳನ್ನೇ ಗಾಢವಾಗಿ ಹೇಳುವ ಸಫಲ ಯತ್ನಗಳಿವೆ. ಅವರ ‘ವರುಣ’ ಕವಿತೆ ಹೀಗೆ ಸೂಕ್ಷ್ಮವೂ ಕಾವ್ಯಾತ್ಮಕವೂ ಆದ ಪದ್ಯವಾಗಿದೆ. ಪೇಜಾವರರ ಈ ಪದ್ಯದಲ್ಲಿ ರುದ್ರ ಮನೋಹರವಾದ ಮಳೆಗಾಲದ ಚಿತ್ರಣವಿದೆ. ಒಂದೆಡೆ ಉಲ್ಲಾಸ ಇನ್ನೊಂದೆಡೆ ಲಯದ ರುದ್ರ ಭೀಷಣತೆ ತರುವ ನೋವು ಮತ್ತು ವಿಷಾದಗಳು ಮಿಳಿತಗೊಂಡ ಸಂಕೀರ್ಣ ಕವಿತೆ ಇದು. ಇಲ್ಲಿ ಮೆರೆಯುವ ಕಾವ್ಯದ ಲಯವು ಆತ್ಮದ ದರ್ಶನವನ್ನು ಕಾಣಿಸುವಂತಿದೆ. ಇಲ್ಲಿ ನೀರು ಬದುಕಿನ ಸಂಕೇತವಾಗಿ ಬರುವುದು ಸೂಚ್ಯವಾಗಿಯೇ ವ್ಯಕ್ತವಾಗುತ್ತದೆ. ‘ಚಿತೆಯಲುರಿಯುವೆನ್ನ /ಆತ್ಮವನ್ನು ತಣಿಸಲೆಂದೊ/ …. ಯಾವ ಧ್ವನಿಯ ಗುಪ್ತಕರೆಗೆ/ವಿಧಿಯ ಸೂಚನೆಯಿದೊ ಎಂದೊ’ ಎನ್ನುವ ಸಾಲುಗಳಲ್ಲಿ ಪೇಜಾವರರ ಕಾವ್ಯದ ಶಕ್ತಿ ಹೊರಹೊಮ್ಮಿದೆ. ಈ ಅನೂಹ್ಯತೆ, ನಿಗೂಢತೆಗಳು ಕವಿಯನ್ನು ಹೆಚ್ಚು ಕಲಕಿವೆ. ಅವರ ಆಳವಾದ ವಿಷಾದವು ಹುಟ್ಟುವುದು ಸಹ ಈ ನಿಗೂಢತೆಯ ವ್ಯಾಪಕತೆಯನ್ನು ಅರಿಯಲಾರದ ಅವ್ಯಕ್ತ ಭಯದಲ್ಲಿ. ವಿಶ್ವವ್ಯಾಪಿಯಾಗಿ ಒದಗಿ ಬರುವ ಜೀವನದ ದರ್ಶನವು ಅದರ ಅಗಾಧತೆಯಿಂದಲೇ ಮೂಡಿಸುವ ಬೆರಗು, ಭಯ ಇತ್ಯಾದಿಗಳು ಅವರ ಕವಿತೆಗಳಲ್ಲಿ ಸಾಂದ್ರವಾಗುತ್ತಾ ಬರುವುದನ್ನು ಕಾಣಬಹುದು. ‘ವರುಣ’ ಕವಿತೆಯಲ್ಲಿ ಬರುವ ನರಕದ ಚಿತ್ರಣಗಳನ್ನು ಗಮನಿಸಬಹುದು. ಕವಿತೆ ಕಟ್ಟಿಕೊಡುವ ಕಪ್ಪಿನ ಆವರಣ, ಅದರಲ್ಲಿ ಬೃಹದ್ ಹಾವಿನ(ವಾಸುಕಿ) ಮಿಳಿತ ಕತ್ತಲೆಯ ನಿಗೂಢತೆಯನ್ನು ಸಾವಿನೊಂದಿಗೆ ಬೆಸೆಯುತ್ತಲಿದೆ. ಸಾವು ಎನ್ನುವುದು ಅಂತ್ಯವಲ್ಲ. ಅದು ಒಂದು ಸ್ಥಿತಿ ಎಂಬ ಭಾವ ಇಂತಹ ಕವಿತೆಯಲ್ಲಿ ಕಾಣುತ್ತದೆ. ಇಡೀ ಕವಿತೆಯಲ್ಲಿ ಕತ್ತಲು, ಪ್ರಳಯ ಸ್ವರೂಪಿಯಾದ ಮಳೆಯ ಚಿತ್ರಣವು ಬರುವುದು ಕೂಡ ಆದಿಮ ಸಂಕೇತಗಳ ಅಭಿವ್ಯಕ್ತಿಯೇ ಆಗಿದೆ.
ಪೇಜಾವರರ ಕಾವ್ಯದಲ್ಲಿ ಬಲವಾಗಿ ಕಾಡುವ ಕಡಲು ಆದಿಮ ಪ್ರತಿಮೆಗಳನ್ನು ಅರಿಯುವ ಇನ್ನೊಂದು ಪ್ರತಿಮೆಯಾಗುತ್ತದೆ. ಸಾಧಾರಣವಾಗಿ ಪ್ರಕೃತಿ ಎನ್ನುವುದು ದಕ್ಷಿಣ ಕನ್ನಡದ ಬರಹಗಾರರಲ್ಲಿ ವಾಸ್ತವ ಮತ್ತು ಮೀರಲಾರದ ಆದಿಮ ಅನುಭವ. ಇದನ್ನು ಪದ್ಯದ ಹರಹಿನಲ್ಲಿ ವಿಸ್ತರಿಸಿಕೊಳ್ಳುವ ಪ್ರಕ್ರಿಯೆಯು ಪೇಜಾವರರಂತಹ ಕವಿಗಳಲ್ಲಿ ಕಾಣುತ್ತದೆ.
ಕೆಲವು ಉತ್ತಮ ಪ್ರಕೃತಿ ಗೀತೆಗಳನ್ನು ಬರೆದ ಪೇಜಾವರರು ತಮ್ಮ ಸಾವು ಬದುಕಿನ ಗ್ರಹಿಕೆಯನ್ನು ಪ್ರಕೃತಿಯ ವಾಸ್ತವದ ರೂಪಕದಲ್ಲಿ ಹಿಡಿಯಲು ಯತ್ನಿಸಿದ್ದಾರೆ. ಕಡಲು ಅವರ ಕವಿತೆಯಲ್ಲಿ ಪುನಾರವರ್ತನೆಯಾಗಿ ಬರುವ ಪ್ರತಿಮೆ. ಅವರು ಬದುಕು ಸಾವುಗಳನ್ನು ಕಲ್ಪಿಸುವುದಾದರೂ ಕಡಲಿನ ಸಂಕೇತದಲ್ಲಿ, ಏಕೆಂದರೆ ಕಡಲು ಒಂದು ಕಡೆಯಿಂದ ನಿಗೂಢವಾದ ಸಂಕೇತವಾದರೆ ಇನ್ನೊಂದೆಡೆಯಿಂದ ಮನುಷ್ಯನನ್ನು ಆಹ್ವಾನಿಸುವ ಸವಾಲಿನ ವಾಸ್ತವ. ಈ ಎರಡೂ ಅಂಶಗಳು ಪೇಜಾವರರ ಕಾವ್ಯದಲ್ಲಿ ಕಾಣುತ್ತವೆ.
ಪೇಜಾವರರ ಕಾವ್ಯದಲ್ಲಿ ವೈವಿಧ್ಯವಿದೆ; ವೈರುಧ್ಯವೂ ಇದೆ. ಉಲ್ಲಾಸ ಉತ್ಸಾಹಗಳ ಧಾತುವುಳ್ಳ ಕವಿತೆಗಳು ಒಂದು ಕಡೆಯಿದ್ದರೆ ಇನ್ನೊಂದೆಡೆ ವಿಷಾದದ ಸಾವಿನ ತಾತ್ವಿಕ ಚಿಂತನೆಗಳಿವೆ. ಇವನ್ನು ಅವರು ಒಗ್ಗೂಡಿಸಿಕೊಳ್ಳುವ ರೀತಿ ಸಮಸ್ಯಾತ್ಮಕವಾಗುತ್ತದೆ. ಸಂರಚನೆಯ ದೃಷ್ಟಿಯಿಂದಲೂ ೩-೩ ರ ಉತ್ಸಾಹ ಲಯದಲ್ಲಿ ಬರೆಯುವ ಪೇಜಾವರರ ಕಾವ್ಯ ಲಯವು ವಿಷಾದ ಲಯಕ್ಕೆ ಒಗ್ಗುವಂತದ್ದಲ್ಲ. ಅದು ಉತ್ಸಾಹಕ್ಕೇ ಒಪ್ಪುವಂತದ್ದು. ಆದರೆ ಪುಟ್ಟ ಪುಟ್ಟ ಪದರಚನೆಯಲ್ಲಿ ವಿಷಾದಕ್ಕೂ ಒಗ್ಗಿಸುವ ಪ್ರಯೋಗವನ್ನಂತೂ ಪೇಜಾವರರು ಮಾಡುತ್ತಾರೆ. ಹೀಗೆಂದೇ ಅವರ ಕಾವ್ಯ ಜನಸಾಮಾನ್ಯರ ಬಳಕೆಗೆ ಹತ್ತಿರವಿದೆ. ಹೀಗೆ ಉತ್ಸಾಹ ಮತ್ತು ವಿಷಾದಗಳ ‘ಕಟ್ಟಾ ಮಿಟ್ಟಾ’ ರುಚಿ ಇರುವುದು ಬಹುಶಃ ಪೇಜಾವರರಲ್ಲಿಯೇ ಎನ್ನಿಸುತ್ತದೆ. ಈ ಕಲಬೆರಕೆಯಲ್ಲಿಯೇ ಅವರ ವಿಶಿಷ್ಟತೆಯು ಕಾಣುವಂತದ್ದು.
ನವೋದಯದ ಕಾಲದಲ್ಲಿ ನವ್ಯದ ಸಂವೇದನೆಯನ್ನು ಇಟ್ಟುಕೊಂಡು ಬರೆದ ಪೇಜಾವರರು ಮನುಷ್ಯನ ಅಸ್ತಿತ್ವವನ್ನು ಕುರಿತು ಚಿಂತಿಸಿದಂತವರು. ಮಾನವಕೇಂದ್ರಿತವಾದ ನೆಲೆಯಲ್ಲಿ ನಿಂತು ಪ್ರಕೃತಿಯ ಅಗಾಧವಾದ ಸೊಬಗಿನ ಜೊತೆ ಅಡಕಗೊಂಡ ರುದ್ರ ಲಾಸ್ಯದ ಪರಿಯನ್ನು ಅರಿಯುವ ಯತ್ನದಲ್ಲಿ ನಿಂತವರು. ಹಾಗೆಂದೇ ಅವರ ಕಾವ್ಯ ಮುಂದೆ ಬರುವ ಗಂಗಾಧರ ಚಿತ್ತಾಲರ ಕಾವ್ಯವನ್ನು ನಿರೀಕ್ಷಿಸಿದಂತೆ ತೋರುತ್ತದೆ. ‘ಮನುಕುಲದ ಹಾಡು’, ‘ಕಾಮಸೂತ್ರ’ ಗಳಂತಹ ಕವಿತೆಗಳು ಗಂಗಾಧರ ಚಿತ್ತಾಲರಲ್ಲಿ ಮನುಷ್ಯ ಕುಲದ ಆದಿಮ ಅನುಭವದ ಶೋಧವನ್ನು ಮಾಡಿದಂತೆ ಪೇಜಾವರರು ಸಾವಿನ ಬದುಕಿನ ಬಗೆಗೆ ಆದಿಮವಾದ ಸಾರ್ವತ್ರಿಕತೆಯನ್ನು ಬೆಳೆಸುವತ್ತ ಗಮನ ಹರಿಸುತ್ತಾರೆ. ಈ ಸಾರ್ವತ್ರೀಕರಣವನ್ನು ಅವರು ಸಾಧಿಸುವುದು ಭಾವಗೀತೆಯ ಚೌಕಟ್ಟಿನಲ್ಲಿಯೇ ಚಿಂತನಾಪರತೆಯನ್ನು ತರುವುದರ ಮೂಲಕ. ಚಿತ್ತಾಲರ ನುಡಿಗಟ್ಟು ಅವರ ಭಾಷೆಗಳು ಚಿಂತನಾಧಾಟಿಗೆ ಅನುಕೂಲಕರವಾಗಿಯೇ ಇದ್ದರೆ ಪೇಜಾವರರಲ್ಲಿ ಅದು ರಮ್ಯವಾಗಿ ಬಿಡುವ ಸಂಭವ ಇದೆ. ಆದುದರಿಂದ ಪೂರ್ಣಪ್ರಮಾಣದಲ್ಲಿ ಈ ಕವಿಯ ಪ್ರಯೋಗಗಳು ಸಫಲವಾಗುತ್ತದೆಯೋ ಎಂಬ ಬಗ್ಗೆ ಅನುಮಾನಗಳಿವೆ. ಆದರೆ ಈ ದಿಸೆಯಲ್ಲಿ ಅರಳುತ್ತಿದ್ದ ಕವಿ ಪ್ರತಿಭೆಯ ಅರಿವು ಮಾತ್ರ ತಾಜಾ ಎನ್ನಿಸುತ್ತದೆ.
(ಇ)
ಪೇಜಾರರ ಕಾವ್ಯದಲ್ಲಿ ಕನ್ನಡ ಕಾವ್ಯ ಮುಂದೆ ನಿರೀಕ್ಷಿಸಿದ ವಲಸೆಯ ಪ್ರಜ್ಞೆಯೊಂದು ಮೊಳೆತಿದೆ. ಅದು ಎರಡು ತೆರನಾಗಿದೆ. ಒಂದು ಈಗಾಗಲೇ ಗುರುತಿಸಿದಂತೆ ತುಳುಭಾಷೆ ಸಂಸ್ಕೃತಿಯ ಒಳಗು ಮತ್ತು ದೇಶಭಾಷೆಯಾದ ಕನ್ನಡಕ್ಕೆ ಬರುವ ಪ್ರವೃತ್ತಿ; ಇನ್ನೊಂದು, ಅವರ ಸ್ವಂತ ಜೀವನವು ವಲಸೆಯಲ್ಲಿ ಕಳೆದಿದ್ದರ ಪರಿಣಾಮವಾಗಿ ಸಹಜವಾಗಿ ಉಂಟಾದ ವಲಸಿಗ ಭಾವ. ಈ ಎರಡು ತೆರನಾದ ವಲಸಿಗ ಭಾವವು ಅವರ ಕಾವ್ಯದ ಕಟ್ಟಿನಲ್ಲಿ ಹೊಕ್ಕಿದೆ. ಈ ಕಾರಣದಿಂದಲೇ ಪೇಜಾವರರ ಕಾವ್ಯದಲ್ಲಿ ಅವರ ಸಮಕಾಲೀನರಲ್ಲಿ ಕಾಣದ ನಾವೀನ್ಯತೆಯ ಎಳೆ ಕಾಣುತ್ತದೆ.
ಪೇಜಾವರರ ಸ್ವಂತ ಜೀವನವು ವಲಸೆಯದೇ. ಕಲಿತ ಪೇಜಾವರರ ನಂತರ ತಮ್ಮ ಉನ್ನತಸ್ಥಾನಕ್ಕಾಗಿ ಹವಣಿಸಿ ಹೋಗಿದ್ದು ಇಟಲಿಗೆ. ಹೀಗೆ ದೇಶ ಬಿಟ್ಟು ಹೋಗುವ ಪೂರ್ವದ ಪ್ರವೃತ್ತಿಗಳಲ್ಲಿ ಪ್ರಧಾನವಾದುದು. ಕನ್ನಡದಿಂದ ಹೊರಗೆ ಹೋದ ಮೊದಲ ಬರಹಗಾರ ವಲಸಿಗರ ಯಾದಿಯಲ್ಲಿ ಪೇಜಾವರರು ಬರುತ್ತಾರೆ. ಹೊರಗಿನಿಂದ ನಿಂತು ತಮ್ಮ ಪ್ರದೇಶ, ಭಾಷೆಗಳನ್ನು ನೋಡುವವರಿಗೆ ಎರಡು ರೀತಿಯ ವಾಂಛೆಗಳಿರುತ್ತವೆ. ಒಂದು ತಮ್ಮ ಸ್ವಸ್ಥಳ, ಸಂಸ್ಕೃತಿಗಳ ಮೇಲಿನ ತೀವ್ರತಮವಾದ ಮೋಹ, ಇನ್ನೊಂದು ಸ್ವಾಭಾವಿಕವಾದ ದೂರದಿಂದ ಉಂಟಾಗುವ ತೀವ್ರ ವಿಮರ್ಶಾತ್ಮಕ ಪ್ರಜ್ಞೆ. ಬರಹಗಾರರ ಹೊರಗಿನ ಅರಿವು, ಅನುಭವಗಳನ್ನು ಸ್ಥಳೀಯ ಅನುಭವಗಳೊಂದಿಗೆ ಮಾಡಿಕೊಳ್ಳುವ ಕುಶಲತೆಯನ್ನು ಸಾಧಿಸಿಕೊಳ್ಳಲು ಅವಕಾಶವಿದೆ. ಪೇಜಾರರಿಗೆ ಸ್ವ-ವಿಮರ್ಶೆಯ ಪ್ರವೃತ್ತಿಗಿಂತಲೂ ಅಭಿಮಾನದ ವಾಂಛೆಯೇ ಹೆಚ್ಚಾಗಿದೆ. ದೇಶ-ಪ್ರದೇಶಗಳ ಅಭಿಮಾನವು ಅವರಲ್ಲಿ ದೂರದೇಶಿಗನ ಸಹಜಾಭಿಮಾನವನ್ನು ತಂದುಕೊಟ್ಟಿದೆ. ಆದರೆ ಪೇಜಾವರರ ಈ ದಾಟು ಅನನ್ಯತೆಯನ್ನು ಸಾಧಿಸುವುದರಲ್ಲಿ ಸೋಲುತ್ತದೆ. ಏಕೆಂದರೆ ನವೋದಯ ಕಾವ್ಯದ ದೇಶಾಭಿಮಾನ ರಾಷ್ಟ್ರೀಯತೆಯನ್ನು ಪರಿಭಾಷೆಯನ್ನೇ ಪೇಜಾವರರು ಉಪಯೋಗಿಸುವುದರಿಂದ ಡಯಾಸ್ಪೋರಿಕ್ ಆಗಿ ಮಿಂಚಬಹುದುದಾದ ಅವಕಾಶ ಅವರ ಕಾವ್ಯಕ್ಕೆ ಸಹಜವಾಗಿಯೇ ಕಡಿಮೆಯಾಗಿದೆ. ಡಯಾಸ್ಪೋರಿಕ್ ಆದ ಅಂಶವು ಹೆಚ್ಚಾಗಿ ಮಿಂಚಿದ್ದು ಅವರ ‘ನ್ಯಾಟ್ಯೋತ್ಸವ’ ಕವಿತೆಯಲ್ಲಿಯೇ. ನಾಟ್ಯದ ಆಹ್ವಾನವು ಇನ್ನೊಂದು ಸಂಸ್ಕೃತಿಯನ್ನು ಆವಾಹಿಸುವ ಬಗೆ ನೋಡಿ:
ತೇಲಿ ಬರುವ ಜಾಸ್ ಗಾನ/ನಮ್ಮ ಕುಣಿತಕ್ಕಲ್ಲವೇನ!
ವೆನೇತ್ಸಿಯದ ಕಡೆದ ಗಾಜು/ಸಾರ್ದೇನಿಯಾದ ಸುರೆಯ ಮೋಜು/ಮುತ್ತಿರುವರೆ ಕತ್ತಲು
ಹೀಗೆ ಸಾಗುವ ಕವಿತೆ ಕನ್ನಡದ ನೆಲವನ್ನಂತು ಬಿಟ್ಟು ಹಾರಿದೆ. ನೇರವಾಗಿ ಸ್ಥಳದ ದಾಟುಗಳಲ್ಲದೆ ‘ವರುಣ’ದಂತಹ ಕವಿತೆಗಳಲ್ಲಿ ‘ಮಹಾಶ್ವಾನ ಚರ್ಬರ’ನನ್ನು ತರುವ ಮೂಲಕ ಅವರ ಡಯಾಸ್ಪೋರಿಕ್ ಪ್ರಜ್ಞೆ ಕೆಲಸ ಮಾಡುತ್ತದೆ. ಹೀಗೆ ಅನೇಕ ಮೀಟು ದಾಟುಗಳಿರುವ ಪೇಜಾವರರ ಕಾವ್ಯವನ್ನು ಇನ್ನಷ್ಟು ಹೊಸ ದೃಷ್ಟಿಯಿಂದ ನೋಡುವ ಅಗತ್ಯವಂತೂ ಇದೆ.
(ಈ)
ಪೇಜಾವರ ಕಾವ್ಯ ಬುದ್ಧಿ ಭಾವಗಳ ವಿದ್ಯುದಾಲಿಂಗನವನ್ನು ಒಪ್ಪಿಕೊಂಡಂತಿದೆ. ಏಕೆಂದರೆ ಅವರದು ಚಿಂತನಾಪರವಾದ ಕಾವ್ಯವೂ ಅಲ್ಲ ಭಾವುಕತೆಯೇ ಪ್ರಧಾನವಾದ ಕಾವ್ಯವೂ ಅಲ್ಲ. ಈ ಎರಡರ ಮಧ್ಯೆ ಸಮತೋಲನ ಸಾಧಿಸುವ ಕೆಲವು ಪ್ರಖರ ವೈಚಾರಿಕತೆಯ ಶೋಧಗುಣದ ಕಾವ್ಯ ರಚನೆಯನ್ನು ಪೇಜಾವರರ ಕಾವ್ಯದ ಸಂದರ್ಭದಲ್ಲಿ ನಿರೀಕ್ಷಿಸಲಾಗದು. ಪ್ರತಿಮಾತ್ಮಕ ಕಾವ್ಯದ ಜಾಡಿನಲ್ಲಿ ಸಾಗದ ಪೇಜಾವರರು ರೂಪಕಗಳನ್ನಾಗಲೀ, ಲಂಬಿತ ಪ್ರತಿಮೆಗಳಾಗಲೀ ಸುದೀರ್ಘವಾದ ಪರಿಣಾಮಗಳ ಕಡೆ ಕೈಚಾಚಿ ನಿಲ್ಲುವುದಿಲ್ಲ. ಪೇಜಾವರರದು ನೇರವಾದ ‘ಅಭಿವ್ಯಕ್ತಿ’; ಅವರದು ಜೀವನದ ಅಖಂಡತೆಯನ್ನು ಅಮೂರ್ತನೆಯನ್ನು ಒಟ್ಟಾಗಿ ಧೇನಿಸುವ ಕಡೆ ಗಮನ, ಅವರ ಕಾವ್ಯವು ತಾವು ಕಂಡ ಅನುಭವವನ್ನು ಅರಿವೆಂದು ಕಾವ್ಯದ ಮೂಲಕ ಒಂದು ತಿಳಿವಳಿಕೆ ಕೊಡುವತ್ತ ವಾಲಿ, ಕಾವ್ಯವನ್ನೂ ತತ್ವಚಿಂತನೆಯ ಮಾರ್ಗಕ್ಕೆ ಒಗ್ಗಿಸುತ್ತದೆ. ಇಂತಲ್ಲಿ ಕವಿ ಪೇಜಾವರರಿಗೆ ಕಾಡುವ ಮೋಟಿವ್‌ಗಳೆಂದರೆ ಸಾವು ಮತ್ತು ಪ್ರಕೃತಿ. ಸಾವನ್ನು ಕುರಿತು ಈಗಾಗಲೇ ಚರ್ಚಿಸಿದೆ. ಪ್ರಕೃತಿಯ ಬಗೆಗೆ ಅತೀವವಾಗಿ ತೆರೆದುಕೊಳ್ಳುವ ಮನಃಸ್ಥಿತಿಯನ್ನು ಅವರು ವ್ಯಕ್ತ ಪಡಿಸುತ್ತಾರೆ. ಕಡಲ ತೀರದ ಬರಹಗಾರರಾದ ಪೇಜಾವರರಿಗೆ ತಮ್ಮ ಸಹ ಬರಹಗಾರರಂತೆ ಪ್ರಕೃತಿ ಒಂದು ವಾಸ್ತವ. ಸಾಮಾಜಿಕ ವಾಸ್ತವಕ್ಕೂ ಮೊದಲು ಎದುರಿಸಬೇಕಾದ ಸವಾಲು. ಆದುದರಿಂದಲೇ ಗಾಳಿ, ಕಡಲುಗಳು ಅವರಲ್ಲಿ ಪುನರಪಿ ಬರುತ್ತವೆ. ಪೇಜಾವರರ ‘ವರುಣ’ ಕವಿತೆಯು ಪ್ರಕೃತಿಯ ಬಗೆಗಿನ ತೀವ್ರ ವ್ಯಾಮೋಹ ಮತ್ತು ಅದರ ಭೀಷಣ ಸ್ವರೂಪಗಳನ್ನೆಲ್ಲ ಒಟ್ಟುಗೂಡಿಸಿಕೊಳ್ಳುತ್ತದೆ. ಅದು ಪ್ರಕೃತಿಯ ಬಗೆಗಿನ ಮೆಚ್ಚಗೆಯನ್ನು ಮಾತ್ರವುಳ್ಳ ಸರಳ ಕವನವಾಗದೆ ಕೇಡನ್ನು ಅದರ ಸಾರ್ವತ್ರಿಕ ಸ್ವರೂಪದೊಂದಿಗೆ ಸೂಚಿಸುವ ಸಂಕೀರ್ಣ ಕವನವಾಗುತ್ತದೆ. ಪ್ರಕೃತಿಯಲ್ಲಿ ನಿಷ್ಕಾರಣವಾಗಿ ಇರಬಹುದಾದ ಕೇಡಿನ ಭೀಷಣ ಸ್ವರೂಪ ಮತ್ತೆ ಅವರಲ್ಲಿ ಪ್ರಾಗ್ರೂಪದ ಚಿಂತನೆಯತ್ತಲೇ ಒಯ್ಯುತ್ತದೆ. ಒಂದರ್ಥದಲ್ಲಿ ಸಾವು ಮತ್ತು ಪ್ರಕೃತಿ ಎರಡೂ ಕವಿಗೆ ಆದಿಮವಾದವು; ಆದುದರಿಂದಲೇ ಅನೂಹ್ಯವಾದವು.
ಬರೆದ ಹಿಡಿಯಷ್ಟು ಕವಿತೆಗಳಲ್ಲಿ ಏನನ್ನೋ ಸಾಧಿಸುವ ಹಂಬಲ ಅಭಿವ್ಯಕ್ತಿಸಿದ ಪೇಜಾವರ ಸದಾಶಿವರಾಯರು ಅಲ್ಪಾಯುವಾಗಿ ನಿರಾಸೆ ಮೂಡಿಸುತ್ತಾರೆ. ಈ ಕವಿಯನ್ನು ಅವರು ಪೂರೈಸದ ನೂರರ ವಯಸ್ಸಿನಲ್ಲಿ ನೆನೆಯುವುದು ಅವರಿಗೆ ಸಲ್ಲಿಸಬಹುದಾದ ಕಿಂಚಿತ್ ಗೌರವ ಎಂದು ಭಾವಿಸುವೆ.
*****