ಪ್ರಜ್ಞಾಪೂರ್ವಕತೆ ಕಳಚಿಕೊಂಡ ಕತೆಗಳು

ಪ್ರಜ್ಞಾಪೂರ್ವಕತೆ ಕಳಚಿಕೊಂಡ ಕತೆಗಳು

ಬಾಳಾಸಾಹೇಬ ಲೋಕಾಪುರರು ತಮ್ಮ ‘ಬಿಸಿಲುಪುರ’ ಮತ್ತು ‘ಉಧೋ ಉಧೋ’ ಎಂಬ ಒಳ್ಳೆಯ ಕಾದಂಬರಿಗಳಿಂದ ಕನ್ನಡದ ವಾಚಕರಿಗೆ ಕಥನಕಾರರೆಂದು ಪರಿಚಿತರು. ಅವರ ಕತೆಗಳಿಗೆ ಹೊಸದಾಗಿ ಮುನ್ನುಡಿಯ ಅಗತ್ಯವೇನೂ ಇಲ್ಲ. ಅವರ ಹೊಸ ಸಂಕಲನಕ್ಕೆ ಮುನ್ನುಡಿ ಬರೆಸುತ್ತಿರುವುದಕ್ಕೆ ನಾನು ಊಹಿಸುವಂತೆ ಇತ್ತೀಚೆಗಷ್ಟೆ ಕರ್ನಾಟಕ ಸಾಹಿತ್ಯ ಅಕಾಡೆಮಿಗೆ ಸದಸ್ಯರಾಗಿ ಜನಸಂಪರ್ಕ ಹಾಗು ಸಾರ್ವಜನಿಕ ಭಾಗವಹಿಸುವಿಕೆಯ ಅತಿಒತ್ತಡದಲ್ಲಿ ತಮ್ಮೊಳಗಿನ ಕತೆಗಾರ ಎಲ್ಲಿ ನಲುಗಿಹೋಗಿದ್ದಾನೊ ಎನ್ನುವ ಅವರ ಅನುಮಾನ, ಆತಂಕಗಳೇ ಇದ್ದೀತು. ನನ್ನನ್ನು ಮುನ್ನುಡಿ ಬರೆಯುವುದಕ್ಕೆ ಕೇಳುವುದರ ಹಿಂದೆ ಅವರ ಕಿರಿಯ ತಲೆಮಾರಿನ ಬಗೆಗಿನ ನಿರೀಕ್ಷೆ ಹಾಗು ಪ್ರೀತಿ ವಿಶ್ವಾಸಗಳೇ ಕಾರಣ ಎಂದು ಊಹಿಸಬಲ್ಲೆ. ಬಾಳಾಸಾಹೇಬರಂತಹ ಹುಟ್ಟಾ ಕತೆಗಾರರ ಕತೆಗಳಿಗೆ ಮುನ್ನುಡಿ ಬರೆಯುವುದು ನನಗೆ ಸಂತೋಷ ಹಾಗು ಹೆಮ್ಮೆಯ ಸಂಗತಿ ಎಂದು ಭಾವಿಸುತ್ತೇನೆ.

ಬಾಳಾಸಾಹೇಬರಂತಹ ಕತೆಗಾರರು ಹುಟ್ಟಾ ಕತೆಗಾರರಾದರೂ ಇಂದು ಎದುರಿಸಬೇಕಾದ ಸವಾಲುಗಳು ಅನೇಕ ಎನ್ನಿಸುತ್ತದೆ. ಏಕೆಂದರೆ ಹೊಸ ಶತಮಾನದ ಹೊತ್ತಿನಲ್ಲಿ ಬರೆಯುವವರಿಗೆ ಇರುವ ಆತಂಕಗಳು ಏನು ಬರೆದರೂ ಅದು ಕ್ಷಣಭಂಗುರತೆಗೆ ಒಳಗಾಗಿ ಸವಕಲಾಗಿ ಬಿಡುವ ಪರಿಗೆ ಒಬ್ಬ ಸೃಜನಶೀಲ ಲೇಖಕ/ಕಿ ಇಂದು ಬಹುವಾಗಿ ಆತಂಕಗೊಳ್ಳುವ ಸ್ಥಿತಿ ಉಂಟಾಗಿದೆ. ಇದು ಕಲೆ, ಸಾಹಿತ್ಯಕ್ಕೆ ಮಾತ್ರ ಮೀಸಲಾಗಿಲ್ಲ. ಒಟ್ಟಾರೆ ಬದುಕಿನ ಜೀವನಕ್ರಮಗಳೇ ಸರಕ್ಕನೆ ಪಥ ಬದಲಿಸಿ ಹೇಗೆಂದರೆ ಹಾಗೆ ಹೊರಳುವ ದಾರಿ ಹಿಡಿದಿವೆ. ಹೀಗಿರುವಾಗ ಜಾಗತೀಕರಣೋತ್ತರ ಸಂದರ್ಭಗಳ ಪರಿವೆಯಲ್ಲಿ ಯಾವ ಬಗೆಯಲ್ಲಿ ಕತೆ ಕಟ್ಟಬೇಕು ಎನ್ನುವ ಸೃಜನಶೀಲ ಒತ್ತಡಗಳು ಕತೆಗಾರರನ್ನು ಕಾಡಿದರೆ ಮತ್ತೊಂದೆಡೆ ತೀವ್ರವಾದ ಸಾಮಾಜಿಕ ಬದ್ಧತೆಯ ನಿರೀಕ್ಷೆಗಳನ್ನು ನಿಭಾಯಿಸುವ ಚಡಪಡಿಕೆಯಿದೆ. ಬಾಳಾಸಾಹೇಬರು ಪಳಗಿದ ಕತೆಗಾರರಾಗಿ ಈ ಎಲ್ಲಾ ಆತಂಕಗಳನ್ನು ಹಾದು ಬಂದವರು. ಕತೆಗಾರಿಕೆಯ ಕಲೆ ಮತ್ತು ಪೊಲಿಟಿಕಲ್ ಆದ ದೃಷ್ಟಿಕೋನಗಳನ್ನು ತಂತಿನಡಿಗೆಯಂತೆ ಕಷ್ಟಪಟ್ಟು ನಡೆಯುವುದಕ್ಕಿಂತ ಕೊಂಡಗಳನ್ನು ಹಾಯುವಂತೆ ಧೈರ್ಯವಾಗಿ ಮುನ್ನೆಗೆಯೋಣ ಎನ್ನುವ ಮನೋಭಾವದವರು. ಹೀಗಾಗಿ, ನಿರ್ಭಿಡೆಯಿಂದ ತಮಗೆ ಕಂಡುಂಡ ಅನುಭವಗಳನ್ನು ತಾವು ಬದುಕಿ ಬಾಳಿದ ಪರಿಸರದಲ್ಲಿಟ್ಟು ಚಿತ್ರಿಸುವುದು ಅವರಿಗೆ ಸಾಧ್ಯವಾಗಿದೆ. ಇದನ್ನೆಲ್ಲ ಪ್ರಜ್ಞಾಪೂರ್ವಕವಾಗಿ ಬರೆಯುವುದು ಒಬ್ಬ ಸೃಜನಶೀಲ ಲೇಖಕನ ಮಾದರಿಯಲ್ಲ ಎನ್ನುವುದನ್ನು ಅರಿತಂತೆ ಅವರು ಬರೆಯುವುದು ಮೆಚ್ಚುಗೆಯ ಅಂಶ ಎಂತಲೇ ಅನ್ನಿಸುತ್ತಿದೆ. ಈ ಹೊತ್ತಲ್ಲಿ ಪ್ರಜ್ಞಾಪೂರ್ವಕತೆ, ತಾತ್ವಿಕತೆಯ ತೇಲಲೀಯದ ಮುಳಗಲೀಯದ ಬೆಂಡುಗಳನ್ನು ಒತ್ತಟ್ಟಿಗೆ ಸರಿಸಿ ಇತ್ತೀಚೆಗೆ ಬರೆದ ಕತೆಗಳನ್ನು ಅವರು ಸಂಕಲಿಸಿದ್ದಾರೆ. ಆದುದರಿಂದಲೇ ಅವರು ಇತ್ತ ಇತ್ತೀಚಿನ ಕತೆಗಳನ್ನು ಓದುವಾಗ ನನಗೆ ಯಾವುದೇ ಬಗೆಯ ಒತ್ತಡಗಳಿಲ್ಲದೆ ಕೆಲವು ಒಳ್ಳೆಯ ಕತೆಗಳನ್ನು ಓದಿದ ಅನುಭವವಾಯಿತು.

ಈ ಸಣ್ಣಕತೆಗಳ ಕಟ್ಟಿನಲ್ಲಿ ಪುಟ್ಟ ಪುಟ್ಟ ಕತೆಗಳೇ ಹೆಚ್ಚಾಗಿ ಇದ್ದು ಚಿಕ್ಕ ಚೊಕ್ಕನಾಗಿವೆ. ಇರುವ ಎರಡು ದೊಡ್ಡ ಕತೆಗಳು ಕತೆಗಾರಿಕೆಯ ನೀಟ್‌ನೆಸ್ ಅನ್ನು ಹೊಂದಿವೆ. ಇಲ್ಲಿ ಅನೇಕ ಬಗೆಯ ಕತೆಗಳಿದ್ದು ಅವುಗಳಲ್ಲಿ ಸಾಮಾಜಿಕ ಸ್ತರದಿಂದ ಹಿಡಿದು ವೈಯಕ್ತಿಕವಾಗಿ ಮಿನುಗುವ ಅನುಭವಗಳು ಕಾಣುತ್ತವೆ. ಆಳದಲ್ಲಿ ಉಳಿವ ವಿಷಾದವನ್ನು ಕಹಿಯಾಗಿಸದೆ ಜೀವನ್ಮುಖಿಯಾಗಿ ನಿಲ್ಲುವ ಮಾನವೀಯತೆಗೆ ಇಲ್ಲಿ ಪ್ರಾಧಾನ್ಯತೆ, ಸಣ್ಣಕತೆಯೊಂದರ ಸಾರ್ಥಕತೆಯಾದರೂ ಅದೇ ಅಲ್ಲವೆ? ಅಷ್ಟರ ಮಟ್ಟಿಗೆ ಇಲ್ಲಿನ ಕತೆಗಳು ಸಾಫಲ್ಯವನ್ನು ಪಡೆದಿವೆ.

ಈ ಸಂಕಲನದ ಕತೆಗಳಲ್ಲಿ ಗಮನ ಸೆಳೆಯುವುದು ‘ಸ್ಥಾವರ ಮತ್ತು ಜಂಗಮ’ ಕತೆ. ಈ ಕತೆ ತುಂಬ ಮೆಟಫಿಸಿಕಲ್ ಆಗಿ ಸಾಗುತ್ತದೆ ಎನ್ನುವ ಕಾರಣಕ್ಕೆ ನನಗೆ ಹೆಚ್ಚು ಸೇರಿತೊ ಏನೊ. ಈ ಕತೆಯ ಲಯ ಸಾಧಾರಣದಿಂದ ಅಸಾಧಾರಣದೆಡೆಗೆ ಕರೆದೊಯ್ಯುತ್ತದೆ. ಲಿಂಗ(ಸ್ಥಾವರ) ಮತ್ತು ಜಂಗಮ ಎನ್ನುವ ವಚನಕಾರರ ಪರಿಕಲ್ಪನೆಯನ್ನು ಬದುಕಿಗೆ ಅನ್ವಯಿಸಿ ನೋಡುವ ಕ್ರಮ ಇಲಿ ಸಹಜವಾಗಿ ಬರುತ್ತದೆ. ಊರೊಳಗಿನ ಮಂದಿ ಲಿಂಗವನ್ನು ಕಾಣುವುದಕ್ಕೂ ಮೂವರು ಯಾತ್ರಿಕರು ಊರಲ್ಲಿ ಹೊಕ್ಕು ಲಿಂಗವನ್ನು ಅರ್ಥೈಸುವ ಪರಿಗೂ ಸಾಕಷ್ಟು ಅಂತರವಿದೆ. ಜನಮುಗ್ಧತೆಯ ಒಳಗೆ ಅಡಗಿರುವ ಜಂಗಮಶಕ್ತಿ ಬದುಕಿನ ಚಾಲಕ ಶಕ್ತಿಯೇ ಹೊರತು ಬೇರೇನಿಲ್ಲ. ಊರೊಳಗಲ್ಲಿ ವಚನಕಾರರ ಕಾಲದ ಸೋವಿದೇವ ಕಟ್ಟಿಸಿದ ಗುಡಿ ನೋಡಿ ಕತೆಗಾರ ವಚನ ಚಳವಳಿಯು ಯಾವ ಜಂಗಮವನ್ನು ಕುರಿತು ಹೇಳಿತೊ ಅದು ಗುಡಿ ಕಟ್ಟುವುದರೊಂದಿಗೆ ಸುಳ್ಳಾಯಿತು ಎಂದರೆ, ಅದಕ್ಕೆ ಗೆಳೆಯ ವಿಜಯಕುಮಾರರು ಸೋವಿದೇವ ಕಟ್ಟಿದ ಗುಡಿಯ ಅವಸ್ಥೆಯೇ ಸ್ಥಾವರದ ನಶ್ವರತೆಯನ್ನು ಹೇಳುತ್ತಿವೆ. ವಚನಗಳು ಹೇಳಿದ್ದು ನಿಜವೇ ಆಯಿತಲ್ಲ ಎನ್ನುತ್ತಾರೆ. ಭಾವುಕ ಕವಿ ವೆಂಕಟಗಿರಿಗೆ ಪ್ರಕೃತಿಯೊಳಗೆ ಒಡಮೂಡಿದ ಬೆಟ್ಟವೇ ಲಿಂಗಾಕಾರವಾಗಿ ಮೆರೆಯುತ್ತದೆ. ಅಲ್ಲಮಪ್ರಭು ಹೇಳುವ, “ಲಿಂಗ ಸ್ಥೂಲವೋ ಸೂಕ್ಷ್ಮವೋ ಬಲ್ಲೆಡೆ ನೀವು ಹೇಳಿರೇ! ಲಿಂಗ ಪ್ರಾಣವೋ ಪ್ರಾಣ ಲಿಂಗವೋ ಬಲ್ಲೆಡೆ ನೀವು ಹೇಳಿರೇ’ ಎನ್ನುವ ವಚನ ಇಲ್ಲಿ ನೆನಪಾಗುತ್ತದೆ. ಕತೆ ಕೊನೆಗೆ ಅಂತ್ಯವಾಗುವುದು ಲಿಂಗ ಧರಿಸುವಿಕೆಯ ನಿಜವಾದ ಅರಿವಿನೊಂದಿಗೆ. ನರಮನುಷ್ಯನಾದ ಮುರುಗಯ್ಯನಂತವರು ಎದೆ ಮೇಲೆ ಲಿಂಗ ಹಾಕಿಕೊಳ್ಳುವುದಕ್ಕಾಗಿ ಒದ್ದಾಡುತ್ತಾ ಅನ್ನದ ಮಾರ್ಗವನ್ನು ಕಂಡುಕೊಂಡಿದ್ದಾರೆ. ಅವನನ್ನು ಸಮಾಧಾನಿಸಿದ ವಿಜಯಕುಮಾರರಿಗೆ ಲಿಂಗದ ಸ್ಥೂಲವಲ್ಲ, ಸೂಕ್ಷ್ಮ, ಈ ಎಲ್ಲದರ ಒಟ್ಟು ದರ್ಶನವನ್ನು ಕಾಣಿಸುವುರಲ್ಲೇ ಈ ಕತೆಯ ಸಾಫಲ್ಯ ಅಡಗಿದೆ. ಕತೆ ಸಹಜವಾಗಿ ಸಾಗುತ್ತದೆ.

ಈ ಸಂಕಲನದ ಕತೆಗಳಲ್ಲೇ ಮನಮಿಡಿಯುವಂತಹ ಕತೆ ಎಂದರೆ ‘ದೈವ ಬಲಂತು ದೇವಾ’. ಮನುಷ್ಯತ್ವದ ಸಿಕ್ಕುಗಳೆಲ್ಲಾ ಕಳೆದು ಮಾನವೀಯತೆಯ ನಿಕಷದಲ್ಲಿ ಒರೆಯಾಗುವ ಕತೆ ಇದು. ಮುದುಕ ಜಿನದತ್ತರ ಸಾವು ದಲಿತಕೇರಿಯ ಉಳ್ಳಾಲಮ್ಮನ ಮನೆ ಮುಂದೆ ಹೋಗಿ ಪ್ರಾಣಬಿಡುವುದು. ಆ ಹೆಣಕ್ಕೆ ಉಳ್ಳಾಲಮ್ಮನ ಕೇರಿಯವರು ತಮ್ಮ ಪದ್ಧತಿಯಂತೆ ಸಂಸ್ಕಾರ ಮಾಡುವುದು ಈ ಎಲ್ಲಾ ಕ್ರಿಯೆಗಳೂ ಜಿನದತ್ತರ ಮಗ ಅಕಲಂಕನ ಬೇರೆ ಜಾತಿಯ ಹೆಂಡತಿಯನ್ನು ಮನಸ್ಸು ತೆರೆದು ಒಳಗೆ ಬಿಟ್ಟುಕೊಳ್ಳುವುದಕ್ಕೆ ಪ್ರೇರಕವಾಗುತ್ತವೆ. ಈ ಕತೆ ಇನ್ನೊಂದಿಷ್ಟು ಗಾಢವಾಗಬಹುದಿತ್ತೇನೋ, ತರಾತುರಿಯಲ್ಲಿ ಮುಗಿದಂತೆ ತೋರುತ್ತದೆ.

‘ಏಕ ಬೇಟಾ ಆಯಾ ಹಾಜಿ..’ ಕತೆಯು ತನ್ನ ಊರನ್ನು ಬಿಟ್ಟು ಮುಂಬಯಿಗೆ ಬರುವ ಪ್ರಕಾಶನೆಂಬ ಹುಡುಗ ತಮ್ಮೂರಿನವಳೇ ಆದ ರೇಣುಕಾ ಎಂಬ ವೇಶ್ಯಾವಾಟಿಕೆಯ ಹೆಂಗಸಿನ ಕೈಲಿ ಸಿಕ್ಕು ಬೀಳುವ ಕತೆ ಪುನಾ ಮಾನವೀಯತೆಯ ಎಳೆಯನ್ನಿಟ್ಟುಕೊಂಡೇ ನೇಯ್ದ ಕತೆ. ದಂಧೆಯಲ್ಲಿ ನಿರತಳಾದ ರೇಣುಕಾಳಂತಹ ಹೆಂಗಸಿಗೂ ಸಂಬಂಧಗಳು ದೊಡ್ಡದೆನಿಸುತ್ತವೆ. ಅವಳೂ ಸೇರಿದಂತೆ ಅವಳ ವೃತ್ತಿ ಬಾಂಧವರು ಅದನ್ನು ಗೌರವಿಸುತ್ತಾರೆ. ಪ್ರಕಾಶನ ಮುಗ್ಧತೆಯು ಅವನಿಗೆ ಕೊಡುವ ಸೌಖ್ಯವನ್ನು ಕತೆ ಎತ್ತಿ ಹಿಡಿಯುತ್ತದೆ.

‘ಚಿಂವ್ ಚಿಂವ್ ಕೇಳುವುದಿಲ್ಲ’ ಕತೆಯು ಪುಟ್ಟದಾದರೂ ಮನುಷ್ಯ ಸಂಬಂಧಗಳ ಅನೂಹ್ಯ ಬಂಧಗಳನ್ನು ಒತ್ತಿ ಹೇಳುತ್ತದೆ. ಊರೊಗಳಗೆ ಮನುಷ್ಯರಿದ್ದಾರೆ ಎನ್ನುವ ಮುದುಕಿಯ ಆತ್ಮವಿಶ್ವಾಸ ಜೀವನ ಸಾಗಲಿಕ್ಕೆ ಬೇಕಾದ ಅಂಶವಾಗಿದೆ.

ಈ ಮೇಲೆ ಉದಾಹರಿಸಿದ ಕತೆಗಳು ಒಂದು ಮಾದರಿಯವು. ಈ ಸಂಕಲನದಲ್ಲಿ ಬೇರೆ ಬಗೆಯ ಪ್ರಯತ್ನಗಳೂ ಇವೆ. ಆ ಕತೆಗಳನ್ನು ಗಂಡು ಹೆಣ್ಣಿನ ಸಂಬಂಧದ ಸಂಕೀರ್ಣತೆಯನ್ನು ಸಾದರ ಪಡಿಸುವ ಅಂತಹ ಕತೆಗಳೆಂದು ಕರೆಯಬಹುದು. ‘ಜಂಬು ನೇರಳೆಯ ಮರ’ ಎನ್ನುವುದು ಗಂಡಿನ ಫ್ಯೂಡಲ್ ಮನಃಸ್ಥಿತಿಯನ್ನು ಸಾದರ ಪಡಿಸಿದರೆ ‘ಒಂದು ಜಾಮೂನು ಪುರಾಣ’ ಹಾಗು ‘ಡ್ರಿಜ್ಗ್ಯಾಂವ್‌’ ತರದ ಕತೆಗಳು ಆಧುನಿಕ ಸಂದರ್ಭದಲ್ಲಿನ ಗಂಡು ಹೆಣ್ಣುಗಳ ಸಂಬಂಧದಲ್ಲಿ ಇರುವ ಫ್ಯೂಡಲ್ ಮನೋವೃತ್ತಿಗಳನ್ನು ಎತ್ತಿ ತೋರುವಂತವು. ‘ಜಂಬು ನೇರಳೆ ಮರ’ ಕತೆಯಲ್ಲಿನ ಗಂಡಸು ಒಂದು ಫ್ಯೂಡಲ್ ಮಾದರಿಯವನು. ತೋಟಕ್ಕೆ ಬಂದ ಗೋದೆವ್ವಳನ್ನು ಬಳಸಿಕೊಂಡ ಮಲ್ಲಪ್ಪ ಅವಳನ್ನು ಅಷ್ಟೇನೂ ಹಚ್ಚಿಕೊಳ್ಳುವುದಿಲ್ಲ. ಆದರೆ ಅವಳ ಜೊತೆ ಮರೆಪ್ಪ ಇದ್ದ ಎನ್ನುವ ಸಂಗತಿ ಅವನಿಗೆ ಲೈಂಗಿಕ ಒಡೆತನದ ಯಜಮಾನಿಕೆಯನ್ನು ನೆನಪಿಸಿಕೊಡುತ್ತದೆ. ಗೋದೆವ್ವನಿಗೆ ಆಸರೆಯಾಗಿದ್ದ ಜಂಬೂನೇರಳೆ ಮರವನ್ನು ಕಡಿಸಿ ಹಾಕುವ ಕ್ರೌರ್ಯವನ್ನು ತೋರುವುದರೊಂದಿಗೆ ಮಲ್ಲಪ್ಪ ಗಂಡಸಿನ ಆದಿಮ ರೂಪವಾಗಿ ಹೊರಹೊಮ್ಮುತ್ತಾನೆ. ಅವನ ವರ್ತನೆಯ ಬಗೆಗೆ ಯಾವ ಅಪರಾಧೀಭಾವವೂ ವಿದ್ಯಾವಂತನಾದ ಅವನಲ್ಲಿ ಕಾಣುವುದಿಲ್ಲ. ತಾನು ಕೂಡಿದ ಹೆಂಗಸು ತನ್ನ ಆಸ್ತಿ ಎನ್ನುವಂತೆ ವರ್ತಿಸುವ ಅವನ ಮನೋಭಾವ ಕೊನೆಯವರೆಗೂ ಮಾಯವಾಗುವುದಿಲ್ಲ. ಗೋದೆವ್ವ ಮರೆಪ್ಪನ ಜೊತೆ ಸುಖವಾಗಿದ್ದ ಸಂಗತಿ ಕೊನೆಗಾದರೂ ಅವನನ್ನು ನೋಯಿಸದೆ ಬಿಡುವುದಿಲ್ಲ. ಈ ತೆರನಾದ ಸಂಕೀರ್ಣತೆಯನ್ನು ಕಾಣಿಸುವ ಕತೆಗಾರರು ‘ಒಂದು ಜಾಮೂನು ಪುರಾಣ’ದಂತಹ ಕತೆಗಳಲ್ಲಿ ಪೊಲಿಟಕಲೀ ಕರೆಕ್ಟ್ ಆದ ಸೂತ್ರ ಬಳಸುತ್ತಾರೆ. ಮದುವೆಯ ಒಳಗಿನ ಪೊಳ್ಳುತನ, ಧನದಾಹಿಯಾದ ಗಂಡನನ್ನು ಸಾಯಿಸುವ ಮೂಲಕ ಕತೆಗೊಂದು ತಾರ್ಕಿಕ ಅಂತ್ಯ ಕೊಟ್ಟಿದ್ದಾರೆ. ಆದರೆ ಇಲ್ಲಿನ ನೀಟ್‌ನೆಸ್‌ ಹೊರತಾಗಿಯೂ ಕತೆ ಸಾಧರಣವಾಗುವುದು ಪ್ರಾಯಶಃ ವಸ್ತುವಿನ ತಾರ್ಕಿಕ ಅಂತ್ಯದಿಂದಲೇ ಎನ್ನಿಸುತ್ತದೆ. ಈ ರೀತಿಯ ಕತೆಗಳು ಮನಮುಟ್ಟುತ್ತವೆ, ನಿಜ, ಆದರೆ ಹೆಣ್ಣಿನ ಶೋಷಣೆಯ ಬಗ್ಗೆ ಬರೆಯುವುದು ಕ್ಲೀಷೆಯಾಗುತ್ತಿರುವ ದಿನಗಳಲ್ಲಿ ಅದನ್ನು ಹೇಗೆ ಅಭಿವ್ಯಕ್ತಿಸಬೇಕೆನ್ನುವುದೇ ಒಂದು ಸಮಸ್ಯೆ. ನಾನು ಗಮನಿಸಿದಂತೆ ಈ ಸಂಕಲನದ ಕತೆಗಳಲ್ಲಿ ಉದ್ದೇಶಪೂರ್ವಕತೆ ಇಲ್ಲ. ಆದರೂ ಕತೆಗಳ ಒಟ್ಟು ದೃಷ್ಟಿಕೋನವು ವರ್ತಮಾನದ ಹೆಣ್ಣಿನ ಸಂಕಟಗಳನ್ನು ಕೇಳಿಸುವುದಕ್ಕೆ ಬೇರೆ ಕಾರ್ಯತಂತ್ರ ಹುಡುಕಬೇಕಿತ್ತು ಎನ್ನಿಸುತ್ತದೆ. ಇದಕ್ಕೆ ‘ಡ್ರಿಜ್‌ಗ್ಯಾಂವ್’ ಕತೆಯಲ್ಲಿ ಬರುವ ಅರೆಭ್ರಾಮಕ ಮನಸ್ಥಿತಿಯನ್ನು ಸೃಷ್ಟಿಸುವ ಹೆಣ್ಣಿನ ವರ್ತನೆ ಸ್ತ್ರೀ ಸ್ವಾತಂತ್ರ್ಯಕ್ಕೆ ಪ್ರತೀಕವೇ ಎಂದು ನೋಡಿದರೆ ಸಮಾಧಾನಕರ ಉತ್ತರ ದೊರೆಯುವುದಿಲ್ಲ. ಬಾಳಾಸಾಹೇಬರನ್ನೂ ಸೇರಿದಂತೆ ಇಂದಿನ ಬರಹಗಾರರಿಗೆ ನಿರ್ದಿಷ್ಟ ಸ್ತ್ರೀವಾದೀ ಮಾದರಿಗಳನ್ನು ಬಿಟ್ಟುಕೊಟ್ಟು ಬರೆಯಲಿಕ್ಕೆ ಸಾಧ್ಯವಿಲ್ಲವೇ? ಎನ್ನುವ ಪ್ರಶ್ನೆ ಹಾಗೆಯೇ ಉಳಿಯುತ್ತದೆ. ಸ್ತ್ರೀವಾದದ ತಾತ್ವಿಕತೆಯ ಕೊಂಡಗಳನ್ನು ಹೇಗೆ ಹಾಯಬೇಕು ಎನ್ನುವುದು ಇನ್ನಷ್ಟೆ ಕಂಡುಕೊಳ್ಳಬೇಕಾದ ಸಂಗತಿ.

ಈ ಸಂಕಲನದಲ್ಲಿ ‘ಗಂಗಾಮಾಯಿ’ ಎನ್ನುವ ಕತೆಯಿದೆ. ಆಧುನಿಕತೆಯು ಹಳ್ಳಿಯ ಜೀವನವನ್ನು ಪ್ರವೇಶ ಮಾಡಿದಂತೆಲ್ಲಾ ಕೇಡು ತಾಂಡವವಾಡುವುದನ್ನು ಹೇಳುವ ಕತೆ. ಇಡೀ ಕನ್ನಡ ಕತೆಗಳ ಇತಿಹಾಸದಲ್ಲಿ ಹೀಗೆ ಆಧುನಿಕತೆಯನ್ನು ಕೇಡಿನಂತೆ ಪರಿಭಾವಿಸಿದ ಕತೆಗಾರರ ಸಂಖ್ಯೆಯೇ ಹೆಚ್ಚಿದೆ. ಬಾಳಾಸಾಹೇಬರ ಈ ಕತೆ ಆಧುನಿಕತೆಯನ್ನು ಕೇಡಾಗಿ ನೋಡುವ ಜೊತೆಗೆ ಕಲುಷಿತಳಾದ ಗಂಗೆಯ ರೂಪಕವನ್ನು ಬೆಳೆಸುತ್ತದೆ (ಕಂಬಾರರ ಗಂಗಾಮಾಯಿ ಕವಿತೆಯೂ ಕೊಳೆತನೀರಿನ ಗಂಗೆಯ ರೂಪಕವನ್ನು ಬಳಸಿಕೊಂಡಿದೆ ಎನ್ನುವುದಿಲ್ಲಿ ತಟ್ಟನೆ ನೆನಪಾಗುತ್ತಿದೆ). ಗಂಗೆಯ ಆಸುಪಾಸಿನಲ್ಲಿ ಜೀವನ ಕಟ್ಟಿಕೊಂಡವರಿಗೆ ಅದರ ಬಗೆಗಿನ ಅವಿನಾ ಎನ್ನಿಸುವ ಸಂಬಂಧವಿರುತ್ತದೆ. ಅದನ್ನು ಅವರು ಬದುಕುತ್ತಾರೆ; ನಾವು ಅದನ್ನು ರೂಪಕವಾಗಿ ಗ್ರಹಿಸುತ್ತೇವೆ. ಕಲುಷಿತಗೊಳ್ಳುವ ಬದುಕು ಒಂದು ಸಾಮಾಜಿಕವಾದ ಒಳತೋಟಿಯಾಗಿ ವ್ಯಕ್ತಿಯ ಭಾವಕೋಶವನ್ನು ಛಿದ್ರಗೊಳಿಸುವಂತದ್ದು. ಇದನ್ನು ಕತೆ ಸರಿಯಾಗಿಯೇ ನಿರ್ವಹಿಸಿದೆ. ಸಿದ್ಧವೀರಪ್ಪನಂತಹ ಅನೇಕರ ಭಾವುಕ ನೆನಹುಗಳು ಸಮುದಾಯದ ಆಳದಲ್ಲಿ ಉಳಿಯಬಹುದಾದ ವಿಷಾದವಷ್ಟೆ?

ಇಷ್ಟಾಗಿಯೂ ಬಾಳಾಸಾಹೇಬರಿಗೆ ವರ್ತಮಾನದ ಸಂಕಟಗಳನ್ನು ಕತೆಯಾಗಿಸಬೇಕೆನ್ನುವ ವಾಂಛೆಗಿಂತ ಹೆಚ್ಚಾಗಿ ಕಳೆದ ಮಾನವೀಯತೆಗಳ ನೂಲುಗಳನ್ನು ಹಿಡಿದು ಹೆಣೆಯುವುದು ಈ ಸಂಕಲನದ ಸಂದರ್ಭದಲ್ಲಿ ಮುಖ್ಯವಾಗಿದೆ. ಅದನ್ನು ಅವರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಕೂಡ. ಆಧುನಿಕತೆ ಅಥವಾ ಆಧುನಿಕೋತ್ತರತೆ ತಂದ ಕ್ರೌರ್ಯವು ಹೆಣ್ಣಿನ ಮೇಲಿನ ಆಕ್ರಮಣಗಳನ್ನು ಸ್ಥಿರಗೊಳಿಸಿದೆ; ಹಳ್ಳಿಯ ಬದುಕುಗಳನ್ನು ಘಾಸಿಗೊಳಿಸಿದೆ. ಆದರೆ ಅವುಗಳನ್ನೇ ಧ್ಯಾನಿಸುವ ಗೀಳನ್ನು ಬದಿಗಿಟ್ಟು ಅಲ್ಲಿಯೇ ಇರಬಹುದಾದ ಮಾನವೀಯ ಮಿಡಿತಗಳನ್ನು ಗುರುತಿಸಿಕೊಳ್ಳುವುದು ಈ ಸಂದರ್ಭದಲ್ಲಿ ಅವರಿಗೆ ಮುಖ್ಯವಾಗಿದೆ.

ಬಾಳಾಸಾಹೇಬರ ಈ ಸಂಕಲನವು ಅವರ ಕಥೆ ಹೇಳುವ ಧಾಟಿ ಬದಲಾಗಿದೆ ಎನ್ನುವುದನ್ನು ಹೇಳುತ್ತಿದೆ. ಈ ಹಿಂದಿನ ದಟ್ಟ ಪ್ರಾದೇಶಿಕತೆಯ ವಾಸನೆ ಸೂಸುವ ಮಣ್ಣಿನಿಂದ ಎದ್ದುಬಂದ ಕಥಾಪಾತ್ರಗಳು ಸ್ವಲ್ಪ ಕಡಿಮೆಯಾದಂತಿವೆ. ಫ್ಯೂಡಲ್ ವ್ಯವಸ್ಥೆಯ ಪಳೆಯುಳಿಕೆಗಳನ್ನು ಕರಗಿಸಿ ಹೊಸಗಾಲದ ಪಾಕಕ್ಕೆ ಒಗ್ಗಿಸುವ ಅಂಶ ಕಾಣುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಕಥೆ ಹೇಳುವುದಕ್ಕೆ ಯಾವುದೇ ತ್ರಾಸು ತೆಗೆದುಕೊಳ್ಳದೇ ನಿರಾಯಾಸವಾಗಿ ಹೇಳುವುದನ್ನು ಅವರು ರೂಢಿಸಿಕೊಂಡಿದ್ದಾರೆ. ಇವು ಅವರ ಕಥಾವಸ್ತು ಮತ್ತು ಶೈಲಿಗಳಲ್ಲಿ ಕಾಣುವ ಪಲ್ಲಟ. ಈ ಬದಲಾವಣೆಗಳು ಮುಂದಿನ ಹೊರಳಿಗೆ ಸೂಚನೆಯಾಗಿವೆ.

ನಮ್ಮ ಕಾಲದ ಮುಖ್ಯ ಕಥನಕಾರರಾದ ಬಾಳಾಸಾಹೇಬರ ಈ ಬೆಳವಣಿಗೆ ಹೊರಳುಗಳು ಕುತೂಹಲಕಾರಿ. ಏಕೆಂದರೆ ಈ ಹಿಂದೆ ಎತ್ತಿದ ಜಾಗತೀಕರಣದ ಕಾಲದ ಸಮಸ್ಯೆಗೆ ಉತ್ತರ ಎಂಬಂತೆ ಅವು ಕಾಣುತ್ತಿದೆ. ಎಲ್ಲವೂ ಫಾಸ್ಟ್ ಎನ್ನುವ ಜಾಗತೀಕರಣಕ್ಕೆ ಏನೇನೂ ಉತ್ತರವಿಲ್ಲ ಎಂದು ಹತಾಶೆ, ಆತಂಕಗಳು ಬಾಧಿಸುವುದನ್ನೇ ಮುಂದು ಮಾಡುವ ಪ್ರವೃತ್ತಿ ಬಿಟ್ಟು ತಮ್ಮ ಪಾಡಿಗೆ ಕಥೆ ಹೇಳಬಹುದಾದ ಕ್ರಮವನ್ನು ರೂಢಿಸಿಕೊಳ್ಳುವುದು ಸ್ವಾಗತಾರ್ಹ ಎನ್ನಿಸುತ್ತದೆ. ವೇಗಕ್ಕೆ ಪ್ರತಿಯಾಗಿ ನಿಧಾನಗತಿಯನ್ನು ರೂಪಿಸುವುದಕ್ಕಿಂತ ವೇಗದೊಳಗೇ ಇರುವ ನಿಧಾನವು ಕಷಾಯಗುಣ ಎಂಬುದನ್ನು ಅರಿತ ಎಲ್ಲ ಪ್ರಯತ್ನಗಳೂ ಸಕಾರಾತ್ಮಕವಾದವೇ.

ಬಹುಕಾಲದ ನಂತರ ಮತ್ತೆ ಕತೆಗೆ ಮರಳಿರುವ ಬಾಳಾಸಾಹೇಬ ಲೋಕಾಪುರರಿಗೆ ಮುನ್ನುಡಿಯ ರೂಪದಲ್ಲಿ ಒಂದಿಷ್ಟು ಮಾತುಗಳನ್ನು ಬರೆಯಲು ಅವಕಾಶವಾಗಿದೆ. ಆ ಅವಕಾಶ ಕಲ್ಪಿಸಿದ್ದಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳುತ್ತೇನೆ. ಅವರ ಹೊಸ ಸಂಕಲನಕ್ಕೆ ಅಭಿನಂದನೆಯನ್ನು ಸಲ್ಲಿಸುತ್ತೇನೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚೆಂದ
Next post ಮಿಲನ

ಸಣ್ಣ ಕತೆ

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…