ಮೇರಿ ಅಂತ್ವಾನೆತ್‌ಳ ಪ್ಯಾಶನ್

ಮೇರಿ ಅಂತ್ವಾನೆತ್‌ಳ ಪ್ಯಾಶನ್

ಸಂವೇದನಾಶೀಲನೂ ವಿಚಾರವಂತನೂ ಓದಿ ದಂಗಾಗುವ ಜೀವನಚರಿತ್ರೆ ಒಂದಿದೆ: ಇಡೀ ಮನುಷ್ಯ ಕುಲದ ಬಗ್ಗೆಯೇ ಅಧೀರನನ್ನಾಗಿಸುವ, ಜತೆಗೇ ಎಂಥ ಸಂಕಟದಲ್ಲೂ ಮನುಷ್ಯ ತನ್ನನ್ನು ತಾನು ಕಾಪಾಡಿಕೊಳ್ಳಲಾಗದಿದ್ದರೂ ತನ್ನ ಗೌರವವನ್ನು ಕಾಪಾಡಿಕೊಳ್ಳಬಹುದು ಎಂಬುದರ ಬಗ್ಗೆ ಭರವಸೆಯನ್ನೂ ಮೂಡಿಸುವ ಈ ವಿಶಿಷ್ಪ ಕೃತಿಯ ರಚಯಿತ ಇಪ್ಪತ್ತನೆಯ ಶತಮಾನದ ಬಹುಮುಖ್ಯ ಆಸ್ಟ್ರಿಯನ್ ಲೇಖಕರಲ್ಲಿ ಒಬ್ಬನಾದ ಸ್ಪೆಫಾನ್ ಸ್ವೈಕ್ (Stefan Zweig). ತನ್ನದೇ ದೇಶದ ಹದಿನೆಂಟನೆಯ ಶತಮಾನದ ರಾಜಕುಮಾರಿ ‘ಮೇರಿ ಅಂತ್ವಾನೆತ್’ Marie Antoinette ಕುರಿತಾದ ಜೀವನ ಚರಿತ್ರೆ ಇದು. ಪ್ಯಾರಿಸಿನ ಬಡಜನರು ರೊಟ್ಟಗಾಗಿ ಕಾತರಿಸುತ್ತಿದ್ದಾಗ, ‘ಬ್ರೆಡ್ ಸಿಗದಿದ್ದರೆ ಏನಾಯಿತು, ಕೇಕ್ ತಿನ್ನಬಹುದಲ್ಲ?’ ಎಂಬ ಅಮಾನವೀಯ ಉತ್ತರವನ್ನು ನೀಡಿದಳೆಂದು ಹೇಳಲಾಗುವ ಈ “ಕುಖ್ಯಾತ” ರಾಣಿಯ ಕುರಿತು ಕೇಳದಿದ್ದವರು ಅಪರೂಪವೇ ಸರಿ. ಆದರೆ ಅವಳನ್ನು ನಿಜಕ್ಕೂ ತಿಳಿದುಕೊಳ್ಳೆಬೇಕೆಂದಿರುವವರು ಓದಲೇಬೇಕಾದ ಕೃತಿ ಇದು. ಆಕೆ ನಿಜಕ್ಕೂ ಹಾಗಂದಳೇ, ಅಥವಾ ಆಕೆಯ ವಿರೋಧಿಗಳು ಹಬ್ಬಿಸಿದ್ದ ಸಾವಿರಾರು ಕಟ್ಟುಕತೆಗಳಲ್ಲಿ ಇದೂ ಒಂದಾಗಿದ್ದಿತೇ ಎಂದು ಯಾರೂ ವಿಚಾರಿಸುವುದಿಲ್ಲ. ಸಾವಿರ ಸುಳ್ಳುಗಳನ್ನು ಹೇಳಿದರೆ ಒಂದಾದರೂ ಅಂಟುತ್ತದೆ, ಒಂದು ಅಂಟಿದ ಮೇಲೆ ಉಳಿದೆಲ್ಲವೂ ಅರಿಟಿಕೊಳ್ಳುತ್ತವೆ ಎಂಬ ಗೆಬೆಲ್ಸ್‌ನ ನೀತಿಯ ಸಾದೃಶ್ಯವನ್ನು ನಾವು ಸದ್ಯೋಜಗತ್ತಿನಲ್ಲಿ ಕಂಡಿದ್ದೇವೆ. ಮೇರಿಯ ಜೀವನದಲ್ಲೂ ಇದು ಧಾರಾಳವಾಗಿ ನಡೆಯಿತು. ಕ್ರಾಂತಿಕಾರಿಗಳು ರಾಜಮನೆತನದವರ ಬಗ್ಗೆ ಜನರ ರೊಚ್ಚು ಕೆರಳಿಸಲೆಂದು ಬೇಕೆಂದೇ ಎರಡು ದಿನಗಳ ಕಾಲ ಪ್ಯಾರಿಸ್ ನಗರಕ್ಕೆ ಬ್ರೆಡ್ ಸಿಗದಂತೆ ಸಾಗಾಣಿಕೆಯನ್ನು ತಡೆದಿರಬಹುದು ಎಂದು ಊಹಿಸುವುದೂ ನಮಗಿಂದು ಕಷ್ಟವಾಗುತ್ತದೆ! ಯಾಕೆಂದರೆ ಫ್ರೆಂಚ್ ಕ್ರಾಂತಿಯನ್ನು ನಾವು ಯಥಾವತ್ತಾಗಿ ಸ್ವೀಕರಿಸಿಕೊಂಡಿದ್ದೇವೆ. ಸ್ಟೆಫಾನ್ ಸ್ವೈಕ್ ಎಷ್ಟು ಉತ್ತಮವಾದ ಲೇಖಕನೆಂದರೆ ಆತ ಎಲ್ಲೂ ಪಕ್ಷ ಹಿಡಿದು ಮಾತಾಡುವುದಿಲ್ಲ; ಒಬ್ಬ ಜೀವನಚರಿತ್ರಕಾರನ ವಸ್ತುನಿಷ್ಠತೆಯನ್ನು ಆತ ಆರಂಭದಿಂದ ಕೊನೆಯ ತನಕ ತೋರಿಸುತ್ತಾನೆ. ಹದಿನೆಂಟನೆಯ ಶತಮಾನದ ಕೊನೆಯಲ್ಲಿ ನಡೆದು ಇಡೀ ಜಾಗತಿಕ ಚರಿತ್ರೆಯನ್ನೇ ಬದಲಾಯಿಸಿದ ಫ್ರೆಂಚ್ ಮಹಾಕ್ರಾಂತಿಯ ಬಗ್ಗೆ ಅವನಿಗೆ ಜನಪರವಾದ ಕಳಕಳಿಯಿದೆ; ಆದರೆ ಅದೇ ರೀತಿ, ಅದಕ್ಕೆ ಬಲಿಯಾದ ಅಮಾಯಕರ ಬಗ್ಗೆ ಮಾನವೀಯ ಅನುಕಂಪವೂ ಇದೆ. ಹಾಗೆ ಬಲಿಯಾದವರಲ್ಲಿ ಮತ್ತು ಕ್ರಾಂತಿಗೆ ಪರೋಕ್ಷವಾಗಿ ಕಾರಣರೂ ಆದವರಲ್ಲಿ ಅರಸ ಹದಿನಾರನೆಯ ಲೂಯಿ ಹಾಗೂ ಆತನ ರಾಣಿ ಮೇರಿ ಅಂತ್ವಾನೆತ್ ಪ್ರಮುಖರು- ಅದರಲ್ಲೂ ಈ ರಾಣಿಯ ಕತೆ ಅತ್ಯಂತ ದಾರುಣವಾದುದು.

ಚರಿತ್ರೆ ಹೇಗೆ ಯಾರನ್ನು ಬಲಿತೆಗೆದುಕೊಂಡು ಮುಂದರಿಯುತ್ತದೆ ಎನ್ನುವುದು ರೋಚಕವಾದ ಸಂಗತಿ. ಚರಿತ್ರೆಯ ಸೈದ್ಧಾಂತಿಕರಾದ ಹೆಗೆಲ್ ಅಥವಾ ಮಾರ್ಕ್ಸ್‌ರನ್ನು ಕೇಳಿದರೆ ಇದರಲ್ಲಿ ರೋಚಕವಾದದ್ದೇನೂ ಇಲ್ಲ; ಚರಿತ್ರೆಯ ಚೈತನ್ಯವೇ ಅಂಥದು. ಅದು ವ್ಯಕ್ತಿಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ, ಯಾರಿಗೋಸ್ಕರವೂ ಕಣ್ಣೀರಿಡುವುದಿಲ್ಲ; ಬದಲಿಗೆ ಎಲ್ಲರನ್ಕೂ ಉಪಯೋಗಿಸಿಕೊಂಡು ಮುಂದುವರಿಯುತ್ತದೆ; ಚರಿತ್ರೆಯ ಈ ಅದಮ್ಯ ಚಲನೆಯನ್ನು ಯಾರಿಂದಲೂ ತಡೆಯುವುದೂ ಸಾಧ್ಯವಿಲ್ಲ. ಈ ರೀತಿ ಚರಿತ್ರೆ ಉಪಯೋಗಿಸಿಕೊಂಡವರಲ್ಲಿ ಲೂಯಿ ಮತ್ತು ಅಂತ್ವಾನೆತ್ ಇಬ್ಬರು ಎಂದು ನಾವು ತಿಳಿದುಕೊಂಡರೆ ಸಾಕು. ವಿಧಿವಾದವನ್ನು ಬದಿಗೊತ್ತಿ ಮುಂದೆ ಬಂದ ಈ ವೈಚಾರಿಕವಾದವೂ ಅದರಷ್ಟೇ ಆಶ್ಚರ್ಯಕರ ವಿಷಯ. ಆದರೆ ಒಬ್ಬ ಲೇಖಕನಾದ ಸ್ಟೆಫಾನ್ ಸ್ವೈಕಿಗಾಗಲಿ ನಮಗಾಗಲಿ ಅಷ್ಟೊಂದು ನಿಷ್ಠುರವಾಗಿರುವುದು ಸಾಧ್ಯವಾಗಲಾರದು. ಆದ್ದರಿಂದ ಫ್ರೆಂಚ್ ಕ್ರಾಂತಿಯನ್ನು ಸ್ವಾಗತಿಸುತ್ತಲೇ ನಾವು ಅಷ್ಟೊಂದು ಹಿಂಸೆ, ಕ್ರೌರ್ಯ, ಮತ್ತು ಬರ್ಬರತೆಯ ಅಗತ್ಯವಿತ್ತೇ ಎಂದು ಕೂಡಾ ಕೇಳಬೇಕಾಗುತ್ತದೆ. ಆದರೆ ಯಾರು ಈ ಮೇರೀ ಅಂತ್ವಾನೆತ್? ಏನವಳ ಹಿನ್ನೆಲೆ?

ಇವಳು ಮತ್ತೆ ಯಾರೂ ಅಲ್ಲ, ಆಸ್ಟ್ರಿಯಾದ ಪ್ರಸಿದ್ಧ ಮಹಾರಾಣಿ ಮರಿಯಾ ಥೆರೆಸಾಳ ಕೊನೆಯ ಸಂತಾನ. ಥೆರೆಸಾಳಿಗೆ ಮೇರಿ ಎಷ್ಟು ಮುದ್ದಿನ ಮಗಳಾಗಿದ್ದಳೆಂದರೆ ಒಂದು ರೀತಿಯಲ್ಲಿ ಮಗಳ ಭಾವೀ ದುರಂತವನ್ನು ತನಗರಿವಿಲ್ಲದೆಯೇ ಭಾಗಶಃ ರೂಪಿಸಿದವಳೇ ಈ ತಾಯಿ ಎಂದರೂ ಸರಿಯೇ. ಸದಾ ಚಟುವಟಿಕೆಯಲ್ಲಿದ್ದ ಈ ನೀಲಿಗಣ್ಣಿನ ಬಂಗಾರದ ಕೂದಲಿನ ಚೆಲುವೆ ಕುವರಿಗೆ ಹತ್ತು ಹನ್ನೆರಡು ವರ್ಷಗಳ ತನಕವೂ ಜರ್ಮನ್ ಆಗಲಿ ಫ್ರೆಂಚ್ ಆಗಲಿ ಓದಲು ಬರೆಯಲು ಸರಿಯಾಗಿ ಬರುತ್ತಿರಲಿಲ್ಲ; ಪಾಠ ಪ್ರವಚನಗಳಲ್ಲೂ ಆಕೆಗೆ ಆಸಕ್ತಿಯಿರಲಿಲ್ಲ. ಮೇರಿ ಸುಖಜೀವಿಯಾಗಿಯೇ ಬೆಳೆದಳು. ಅದು ಫ್ರಾನ್ಸಿನ ಬೂರ್ಬನ್ ರಾಜಮನೆತನಕ್ಕೂ ಆಸ್ಟ್ರಿಯಾದ ಹ್ಯಾಪ್ಸ್‌ಬರ್‍ಗ್ ಮನೆತನಕ್ಕೂ ಹಗೆಯಿದ್ದ ಕಾಲ; ಹಲವು ವರ್ಷಗಳಿಂದ ಅಲ್ಲಲ್ಲಿ ಹೋರಾಟ ನಡೆಸಿ ಎರಡೂ ರಾಜವಂಶಗಳೂ ಸೊರಗಿಹೋಗಿದ್ದವು. ಹದಿನೈದು ವಯಸ್ಸಿನ ಮೇರಿ ಅಂತ್ವಾನೆತ್ ತನಗಿಂತ ಒಂದು ವರ್ಷ ದೊಡ್ಡವನಾದ ಫ್ರಾನ್ಸಿನ ರಾಜಕುಮಾರ, ಭವಿಷ್ಯದ ಅರಸ ಹದಿನಾರನೆಯ ಲೂಯಿಯ ಕೈಹಿಡಿದದ್ದು ಇದನ್ನು ಸರಿಪಡಿಸಲೆಂದೇ ಎರಡೂ ರಾಜಮನೆತನಗಳೂ ಸಂಯೋಜಿಸಿದ ರಾಜಕೀಯ ವಿವಾಹದ ಕಾರಣ. ಹೀಗೆ ಮೇರಿ ಆರಂಭದಿಂದಲೇ ರಾಜಕೀಯದ ಆಟದಲ್ಲಿ ಒಂದು ದಾಳವಾಗಿಬಿಟ್ಟಳು.

ದೈಹಿಕವಾಗಿ ಮತ್ತು ಮಾನಸಿಕವಾಗಿ ದುರ್ಬಲನಾಗಿದ್ದ ಲೂಯಿಗೂ ಈ ಮಿಡುಕಲಾಡಿ ರಾಜಕುಮಾರಿಗೂ ಯಾವುದೇ ತರದ ಹೊಂದಾಣಿಕೆಯಿರಲಿಲ್ಲ. ವಾಸ್ತವದಲ್ಲಿ ಲೂಯಿಗೆ ಶಸ್ತ್ರಕ್ರಿಯೆಯಿಂದ ಮಾತ್ರವೇ ಸರಿಪಡಿಸಬಲ್ಲಂಥ ನಪುಂಸಕತ್ತವೂ ಅಂಟಿಕೊಂಡಿತ್ತು. ಮದುವೆಯಾಗಿ ಸುಮಾರು ಏಳುವರ್ಷಗಳ ಕಾಲ ಇಬ್ಬರಿಗೂ ದೈಹಿಕ ಸಂಪರ್ಕವೇ ಏರ್ಪಡಲಿಲ್ಲ. ದೇಶ ವಿದೇಶಗಳಲ್ಲಿ ಜನ ಮಾತಾಡಿಕೊಳ್ಳಲು ಸುರುವಾಗಿ, ಮರಿಯಾ ಥೆರೆಸಾ ಕೂಡಾ ಒತ್ತಡ ಹಾಕಿದ ಮೇಲೆಯೇ ಲೂಯಿ ಶಸ್ತ್ರಕ್ರಿಯೆಗೆ ಧ್ಯೆರ್ಯ ತೋರಿದ್ದು; ನಂತರವಷ್ಟೇ ಈ ದಂಪತಿಗಳಿಗೆ ಮಕ್ಕಳಾದ್ದು. ಆದರೆ ಈ ಮಧ್ಯೆ ಇನ್ನೆಂದೂ ಬದಲಾಗದ ರೀತಿಯಲ್ಲಿ ಮೇರಿ ಅಂತ್ವಾನೆತ್‌ಳ ವ್ಯಕ್ತಿತ್ವ ಲೂಯಿಯ ಹೊರತಾಗಿ ರೂಪುಗೊಂಡು ಆಗಿತ್ತು. ದಾಂಪತ್ಯ ಸಂಪರ್ಕವಿಲ್ಲದ ಒಬ್ಬ ಪತಿ ತನ್ನ ಹೆಂಡತಿ ಕೇಳಿದ್ದನ್ನೆಲ್ಲ ಕೊಟ್ಟುಬಿಡುತ್ತಾನೆ, ಹಾಗೂ ಅವಳ ತಂಟೆಗೇ ಹೋಗದೆ ಅವಳನ್ನು ಅವಳಷ್ಟಕ್ಕೇ ಬಿಟ್ಟುಬಿಡುತ್ತಾನೆ. ಮೇರಿಯ ದಾಂಪತ್ಯ ಸುರುವಾದ್ದು ಇದೇ ರೀತಿ; ಸದಾ ಲವಲವಿಕೆಯಿಂದ ತುಂಬಿರುತ್ತಿದ್ದ ತರುಣಿ ಮೇರಿ ತನ್ನ ಸುಖವನ್ನು ಇತರ ಮಾರ್ಗಗಳಲ್ಲಿ ಕಂಡುಕೊಳ್ಳಲು ಬದ್ದಳಾದಳು: ನಾಟಕ, ನೃತ್ಯ, ಕುದುರೆ ಜೂಜು, ಇಸ್ಪೀಟು, ಮದ್ಯಪಾನ, ಭೋಜನ ಕೂಟ, ಮೇಜವಾನಿ, ವಸ್ತ್ರಾಲಂಕಾರ, ಚಿನ್ನಾಭರಣ ಹೀಗೆ ಅವಳ ಸುಖಲೋಲುಪತೆ ಹಾಗೂ ಅದಕ್ಕೆ ಅಗತ್ಯವಾದ ದುಂದುಗಾರಿಕೆ ಮೊದಲಾಯಿತು. ತನ್ನ ವಿಲಾಸಜೀವನಕ್ಕೆಂದೇ ಆಕೆ ಅರಮನೆಯ ಹತ್ತಿರವೇ ಪುಟ್ಟದಾದ ಕೃತಕ ಗ್ರಾಮವೊಂದನ್ನೂ ಕಟ್ಪಸಿಕೊಂಡಳು! ಇದೆಲ್ಲದಕ್ಕೂ ರಾಜಬೊಕ್ಕಸದಿಂದಲೇ ಹಣವನ್ನೂ ದೋಚಿದಳು. ಕ್ರಮೇಣ ದಾಂಪತ್ಯಜೀವನ ಸುಧಾರಿಸಿದರೂ, ಮೇರಿಗೆ ತನ್ನ ಜೀವನ ಶೈಲಿಯಿಂದ ಹೊರಬರಲು ಆಗಲಿಲ್ಲ. ಈ ಮಧ್ಯೆ ಮರಿಯಾ ಮಗಳಿಗೆ ತಿಳಿಹೇಳಿ ಬರೆದ ಪತ್ರಗಳಿಗೆ ಲೆಕ್ಕವೇ ಇಲ್ಲ.

ದೇವಾಲಯದ ಸುತ್ತ ಪಾಪಿಗಳು ತುಂಬಿರುವಂತೆ, ಆಸ್ಥಾನದ ಸುತ್ತ ಸ್ವಾರ್ಥಿಗಳು ಮತ್ತು ವಂಚಕರು ತುಂಬಿರುತ್ತಾರೆ. ಮೇರಿಗೂ ಇಂಥ ‘ಮಿತ್ರ ವರ್‍ಗ’ ಬೆಳೆಯುತ್ತ ಹೋಯಿತು. ಅರಸನಿಗೆ ಶಿಫಾರಸು ಮಾಡಿ ಅವರಿಗೆ ಬೇಕುಬೇಕಾದ ಕೆಲಸಗಳನ್ನು ಕೊಡಿಸಿದಳು. ಇದರಿಂದ ಅರಮನೆಯಲ್ಲಿ ಆದರ ಪಡೆಯುತ್ತಿದ್ದ ಇಡೀ ಶ್ರೀಮಂತ ವರ್‍ಗ ಅವಳಿಗೆ ವಿರುದ್ಧವಾಯಿತು. ಆ ಮೇಲೆ ಇದೇ ರೀತಿ ಒಂದೊಂದು ಕಾರಣಕ್ಕಾಗಿ ಒಂದೊಂದು ವರ್ಗ ಅವಳ ವಿರುದ್ಧ ತಿರುಗಿಬಿತ್ತು. ಅಶಕ್ತನಾದ ಅರಸ, ಸುಖಲೋಲುಪಳಾದ ರಾಣಿ-ಒಂದು ದೇಶ ಅರಾಜಕವಾಗುವುದಕ್ಕೆ ಇನ್ನೇನು ಬೇಕು? ಈ ಕಾಲಘಟ್ಟದಲ್ಲಿ ಫ್ರಾನ್ಸ್ ತನ್ನ ವಿದೇಶೀ ವಸಾಹತುಗಳನ್ನು ಕಳೆದುಕೊಳ್ಳಲು ಸುರುಮಾಡಿತು; ಅದರ ಪದೇಶಗಳನ್ನು ಇಂಗ್ಲೆಂಡ್ ಆಕ್ರಮಿಸತೊಡಗಿತು. ದೇಶದ ಮಿಲಿಟರಿ ಬಲ ದುರ್ಬಲವಾಗುತ್ತ ಸಾಗಿದರೆ, ಹಣಕಾಸಿನ ಸ್ಥಿತಿ ಶೋಚನೀಯವಾಗುತ್ತ ಬಂತು. ಪಾಳೇಗಾರಿಕೆ ಪ್ರಭುತ್ವ ಹೇರಿದ ಬಡತನದಿಂದ ಕಂಗಾಲಾಗಿದ್ದ ಜನ ಕಾರಣವೊಂದನ್ನು ಹುಡುಕುತ್ತಿದ್ದರು; ಹಾಗೂ ಅವರಿಗೀಗ ಅದು ಈ ‘ವಿದೇಶೀ’ ಮಹಿಳೆಯ ರೂಪದಲ್ಲಿ ದೊರಕಿದಂತಾಯಿತು. ಇಡೀ ಫ್ರಾನ್ಸ್ ಕ್ರಾಂತಿಗಾಗಿ ಸಜ್ಜಾಗತೊಡಗಿತು. ಪ್ಯಾರಿಸ್ ಇದರ ಕೇಂದ್ರವಾಗಿತ್ತು.

ಆ ಕಾಲದಲ್ಲಿ ಪ್ಯಾರಿಸ್ ಪೀತಪತ್ರಿಕೆಗಳಿಂದ ತುಂಬಿತುಳುಕುತ್ತಿತ್ತು; ಒಬ್ಬೊಬ್ಬ ‘ಕ್ರಾಂತಿಕಾರಿ’ಗೂ ಒಂದೊಂದು ಪತ್ರಿಕೆಯಿತ್ತು. ಕೆಲವರಿಗೆ ಪತ್ರಿಕೆಯೆನ್ನುವುದು ತಮ್ಮ ಪಾಪಗಳನ್ನು ಮುಚ್ಚಿಡುವುದಕ್ಕೆ, ಇತರರನ್ನು ಬೆದರಿಸುವುದಕ್ಕೆ ಇರುವ ಮಾರ್ಗಗಳಾಗಿದ್ದುವು. ಇವುಗಳ ಹೊರತಾಗಿ ಆಗಿಂದಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಕರಪತ್ರಗಳು, ಭಿತ್ತಿಪತ್ರಗಳು, ಲಾವಣಿಗಳು ಮುಂತಾದವುಗಳಿಗೆ ಲೆಕ್ಕವಿರಲಿಲ್ಲ. ಇವೆಲ್ಲವೂ ಕ್ರಾಂತಿಯ ಪರ ಹಾಗೂ ರಾಜಮನೆತನದ ವಿರುದ್ಧ ಪ್ರಚಾರದಲ್ಲಿ ತೊಡಗಿದ್ದರೆ ಸರಿ; ಆದರೆ ವಾಸ್ತವದಲ್ಲಿ ಅವು ಕಟ್ಟುಕತೆಗಳನ್ನೂ ಸುಳ್ಳು ಸುದ್ದಿಗಳನ್ನೂ ಹರಡುವ ಮಾಧ್ಯಮಗಳಾದುವು. ರೋಚಕ ಸುದ್ದಿ ಯಾರಿಗೆ ಬೇಡ? ಅದೂ ವಿರೋಧಿಯ ಕುರಿತಾಗಿ. ಈ ಪತ್ರಿಕೆಗಳೂ ಬರಹಗಳೂ ರಾಣಿಯ ಕುರಿತಾಗಿ ಎಷ್ಟೊಂದು ಕೆಳಮಟ್ಟಕ್ಕೆ ಇಳಿದುವೆಂದರೆ ಆಕೆಯ ತಥಾಕಥಿತ ಲೈಂಗಿಕ ಜೀವನದ ಕತೆಗಳನ್ನು ಬಿತ್ತರಿಸುವುದು ಒಂದು ದಂಧೆಯಾಯಿತು. ಈ ಕತೆಗಳ ಪ್ರಕಾರ ಮೇರಿ ಒಬ್ಬ ಗಂಡು ಭೇದವಿಲ್ಲದೆ ಎಲ್ಲರನ್ನೂ ಹಾಳುಗೆಡಹುವ ಪೈಶಾಚಿಕ ಪ್ರವೃತ್ತಿಯವಳಿದ್ದಳು. ಕೊನೆಗೆ ತನ್ನ ಎಂಟು ವರ್ಷದ ಮಗನೊಂದಿಗೇ ಅವಳು ಅನೈತಿಕ ಸಂಬಂಧ ಇರಿಸಿಕೊಂಡಿದ್ದಳು ಎಂದು ಆಪಾದಿಸುವುದಕ್ಕೂ ಕೆಲವರು ಹಿಂಜರಿಯಲಿಲ್ಲ! ಅವಳ ಆಸ್ಟ್ರಿಯನ್ ಮೂಲವೂ ಅವಳಿಗೆ ಮುಳುವಾಯಿತು. ಈ ಹೆಣ್ಣು ವಿದೇಶೀ ಸಹಾಯದೊಂದಿಗೆ ಫ್ರಾನ್ಸ್‌ನ ವಿರುದ್ಧ ಯುದ್ಧ ಹೂಡುವ ದೇಶದ್ರೋಹಿ ಎನ್ನುವುದು ಅವಳ ಮೇಲಿನ ಬಹು ದೊಡ್ಡ ಆಪಾದನೆಯಾಯಿತು. ಮೇರಿಯ ದುರದೃಷ್ಟವೆಂದರೆ, ಇಂಥ ಕತೆಗಳನ್ನು ಜನ ನಂಬಲು ತಯಾರಾದದ್ದು.

ಆದರೆ ಜನತೆಯನ್ನು ದೂರಿಯೂ ಪ್ರಯೋಜನವಿಲ್ಲ. ಯಾಕೆಂದರೆ ಮೇರಿ ಮದುವೆಯಾಗಿ ಬಂದ ಹೊಸದರಲ್ಲಿ ಇದೇ ಜನತೆ ಅವಳನ್ನು ಎಷ್ಟೊಂದು ಅದ್ದೂರಿಯಾಗಿ ಸ್ವಾಗತಿಸಿತ್ತೆಂದರೆ, ಮೇರಿ ಜನರ ಈ ಪ್ರೀತಿ ತನ್ನ ಮನ ತಟ್ಟಿದ ಬಗ್ಗೆ ತಾಯಿಗೆ ಬರೆದು ತಿಳಿಸಿದ್ದಳು. ಆದರೆ ಮೇರಿ ಆ ದಿಕ್ಕಿನಲ್ಲಿ ನಡೆಯಲಿಲ್ಲ; ನಡೆಯುತ್ತಿದ್ದರೆ ಫ್ರಾನ್ಸಿನ ಚರಿತ್ರೆಯೇ ಬೇರಾಗುತ್ತಿತ್ತು. ತಾನೊಬ್ಬ ರಾಣಿಯೆನ್ನುವುದನ್ನು ಅವಳು ಮರೆತುಬಿಟ್ಟಳು. ತಾನೊಬ್ದಳು ಹೆಣ್ಣು, ತನ್ನ ಖಾಸಗಿ ಜೀವನವನ್ನು ಬೇಕಾದಂತೆ ಜೀವಿಸಲು ತಾನು ಸ್ವತಂತ್ರಳು ಎಂದು ಅವಳು ತಿಳಿದುಕೊಂಡಿದ್ದಳು. ಈ ಮಂಪರಿನಿಂದ ಅವಳು ಎಚ್ಚೆತ್ತಾಗ ಬಹಳ ತಡವಾಗಿತ್ತು.

ಕ್ರಾಂತಿಯ ಬಗ್ಗೆ ಸ್ವೈಕ್ ಒಂದು ಮಾತು ಹೇಳುತ್ತಾನೆ: ಕ್ರಾಂತಿ ಉರುಳುವ ಬಂಡೆಯ ಹಾಗೆ; ಅದನ್ನು ತಡೆಯುವವರು ಯಾರೂ ಇಲ್ಲ. ಉಗ್ರಗಾಮಿಗಳೂ ಹಾಗೇ; ಅವರು ಪರಸ್ಪರ ಪೈಪೋಟಿಯಲ್ಲಿ ತೊಡಗಿರುತ್ತಾರೆ, ಹೆಚ್ಚು ಹೆಚ್ಚು ಉಗ್ರಗಾಮಿಗಳಾಗುವುದಕ್ಕೆ. ಆದ್ದರಿಂದಲೇ ಫ್ರೆಂಚ್ ಪ್ರತಿನಿಧಿ ಸಭೆ ಅರಸುತನವನ್ನು ವಜಾಮಾಡಿದರೂ, ಉಗ್ರಗಾಮಿಗಳು ಅಷ್ಟಕ್ಕೆ ತೃಪ್ತರಾಗದೆ ರಾಜನ ತಲೆ ಕಡಿದರು. ನಂತರ ರಾಣಿಯನ್ನೂ ಗಿಲ್ಲಟಿನ್‌ಗೆ ಬಲಿಕೊಟ್ಟರು. ಮೇರಿಯ ಕುರಿತಾದ ವಿಚಾರಣೆ ಕೇವಲ ಒಂದು ಅಣಕವಾಗಿತ್ತು. ಅವಳ ತಲೆದಂಡ ವಿಚಾರಣೆಗೆ ಮುನ್ನವೇ ನಿಶ್ಚಯವಾದ ವಿಷಯ. ಮೇರಿಗೂ ಅದು ಗೊತ್ತಿತ್ತು. ಕ್ರಾಂತಿಕಾರಿಗಳು ಮೊದಲು ಅವಳನ್ನು ತನ್ನ ಮಕ್ಕಳಿಂದ ಪ್ರತ್ಯೇಕಿಸಿದರು. ನಂತರ ಮಗನ ಬಾಯಿಯಿಂದ ಲೈಂಗಿಕ ಕಿರುಕುಳದ ಆಪಾದನೆಯನ್ನು ಮಾಡಿಸಿದರು. ಪ್ರತಿಯೊಂದು ಆಪಾದನೆಗೂ ಅವಳು ತಕ್ಕುದಾದ ಉತ್ತರ ನೀಡಿದಳು. ಆದರೂ ಅವಳನ್ನು ದೇಶದ್ರೋಹಿಯೆಂದು ಘೋಷಿಸಿ ಮರಣದಂಡನೆ ನೀಡಲಾಯಿತು.

ಇಡೀ ವಿಚಾರಣೆಯಲ್ಲಿ ಮೇರಿ ನಡೆದುಕೊಂಡ ರೀತಿಯನ್ನು ಸ್ವೈಕ್ ಶ್ಲಾಘಿಸುತ್ತಾನೆ. ಅವಳು ಯಾರನ್ನೂ ಬಯ್ಯಲಿಲ್ಲ, ದೂರಲಿಲ್ಲ, ಬುದ್ಧಿಸ್ಥಿಮಿತ ಕಳೆದುಕೊಳ್ಳಲಿಲ್ಲ. ಮಾತ್ರವಲ್ಲ, ಸಾಯುವ ಕೆಲವೇ ಗಂಟೆಗಳ ಮೊದಲು ಬರೆದ ಪತ್ರವೊಂದರಲ್ಲಿ ತನಗೆ ಯಾರ ಮೇಲೂ ಹಗೆಯಿಲ್ಲ ಎನ್ನುತ್ತಾಳೆ, ಹಾಗೂ ತಮ್ಮ ಮಗ ಯಾರ ವಿರುದ್ಧವೂ ಪ್ರತೀಕಾರ ಎಸಗಬಾರದು ಎಂದು ಲೂಯಿ ಸಾಯುವ ಕಾಲದಲ್ಲಿ ಹೇಳಿದ ಮಾತನ್ನು ನೆನಪಿಸುತ್ತಾಳೆ. ಈ ಇಡೀ ಸಂದರ್ಭದಲ್ಲಿ ಇನ್ನೇನನ್ನೂ ರಕ್ಷಿಸುವುದಕ್ಕಿಲ್ಲ, ಗೌರವವೊಂದನ್ನಲ್ಲದೆ ಎಂಬ ರೀತಿಯಲ್ಲಿ ಅವಳು ನಡೆದುಕೊಂಡಳು ಎನ್ನುತ್ತಾನೆ ಸ್ವೈಕ್. ಇಂದು ನಮ್ಮ ಮುಂದಿರುವುದು ಫ್ರೆಂಚ್ ಕ್ರಾಂತಿಕಾರಿಗಳು ಚಿತ್ರಿಸಿದ ಆಕೆಯ ಪೀತಚಿತ್ರ. ಆದರೆ ಈ ಕ್ರಾಂತಿಕಾರಿಗಳು ಅವಳನ್ನು ನಡೆಸಿಕೊಂಡ ಬಗೆ ಯಾವ ರೀತಿಯದು? ನಿಜ, ಮೇರಿ ಸರಕಾರದ ಬೊಕ್ಕಸವನ್ನು ಸುಲಿಗೆ ಮಾಡಿದಳು, ವಿದೇಶೀ ರಾಜರನ್ನು ಫ್ರಾನ್ಸಿನ ವಿರುದ್ಧ ಎತ್ತಿಕಟ್ಟಿದಳು; ಇದಕ್ಕೆ ಅವಳಿಗೆ ಮರಣದಂಡನೆಯನ್ನು ನೀಡಿದ್ದು ಸರಿ ಎನ್ನೋಣ. ಆದರೆ ವೈಯಕ್ತಿಕವಾಗಿ ಅವಳ ಚಾರಿತ್ರ್ಯ ವಧೆ ಮಾಡುವ ಅಗತ್ಯವಿತ್ತೇ? ಕೊನೆಗಾಲದಲ್ಲಿ ಅವಳು ಅನುಭವಿಸಿದ ಯಾತನೆಯ (ಪ್ಯಾಶನ್) ಕುರಿತು ಓದಿದರೆ ಮನುಕುಲದ ಬಗ್ಗೆಯೇ ಅಸಹ್ಯವೆನಿಸುತ್ತದೆ. ಅಥವಾ ಫ್ರೆಂಚ್ ಮಹಾಕ್ರಾಂತಿಯ ಮುಂದೆ ಇದೆಲ್ಲ ಏನೂ ಅಲ್ಲ ಎನ್ನೊಣೂವೇ?
*****

One thought on “0

  1. ಅದೆಷ್ಟೇ ಕ್ರೂರ ಶಿಕ್ಷೆ ಸರಿ ಆದರೆ ಚಾರಿತ್ತಿಕ ವಧೆ ?
    ತಿರುಮಲೇಶರ ಕೈಯಿಂದ ಮೂಡಿಬಂದ, ಫ್ರೆಂಚ ಇತಿಹಾಸದ ಈ ಪುಟ ದಾರುಣವೂ ಹೌದು.ಅಂತಃಕರಣದ ವ್ಯಕ್ತಿಚಿತ್ರವೂ ಹೌದು.
    ಬಹು ಹಿಂದೆ ಓದಿದ್ದೆ ಮರು ಓದಿಗೆ ಅವಕಾಶ ದೊರಕಿತು..
    ಚಿಲುಮೆಗೆ ಅಭಿನಂದನೆಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೮೩
Next post ಎರಡು ಹಾರ್ಟ್ ಅಟ್ಯಾಕ್‌ಗಳು

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…