ನ್ಯೂಯಾರ್ಕಿನಿಂದ ವಿಮಾನದಲ್ಲಿ
ಬೊಂಬಾಯಿಗೆ ಬಂದು,
ರೈಲಿನಲ್ಲಿ ನಗರಕ್ಕೆ
ಬಸ್ಸಿನಲ್ಲಿ ಪಟ್ಟಣಕ್ಕೆ
ಸೈಕಲ್ ರಿಕ್ಷಾದಲ್ಲಿ ಮನೆ ತಲುಪಿ,
ಮರದ ಬಾಗಿಲ ಮೇಲೆ
ಸರಪಳಿ ಬಡಿಯುತ್ತಾ ನಿಂತಾಗ
ದಿಢೀರನೆ ಎರಡೂ ಬಾಗಿಲು
ತಗೆದು ಪ್ರತ್ಯಕ್ಷಳಾದಳು
ಕೂಡಲೇ ನನಗಾಯಿತು
ಮೊದಲ ಹಾರ್ಟ್ ಅಟ್ಯಾಕ್!
ಸುಂದರವಾಗಿ ಬಾಬ್ ಮಾಡಿದ,
ಸನ್‍ಸಿಲ್ಕ್ ಶಾಂಪೂ ಹಾಕಿ ತೊಳೆದ
ಕೇಶರಾಶಿಯ ಚೆಲುವೆ
ಬ್ಯೂಟಿ ಪಾರ್ಲರನಲ್ಲಿ
ತೀಡಿದ ಹುಬ್ಬು, ಸುಂದರ ಹಣೆಗೆ
ಸಣ್ಣದಾಗಿಟ್ಟ ಸ್ಟಿಕರ್ ಕುಂಕುಮ
ಹಸಿರು, ತೋಳಿಲ್ಲದ ನೈಟಿಯಲ್ಲಿ
ಮಿಂಚಿದ ಬಳ್ಳಿ – ಶಕುಂತಲೆಯೋ,
ದಮಯಂತಿಯೋ, ರತಿಯೋ,
ರಂಭೆಯೋ, ಮೇನಕೆಯೋ, ಊರ್ವಶಿಯೋ,
ಅಪ್ಪರೆಯೋ, ಹೇಮ ಮಾಲಿನಿಯೋ,
ಪದ್ಮಿನಿಯೋ, ಪಮೇಲಳೋ,
ಸಿಂಡ್ರೆಲಾಳೋ.. ಯಾವ ಕವಿಯ
ಶೃಂಗಾರ ಕಲ್ಪನೆಯೋ
ಕೇರಳದಲ್ಲಿ,
ಗುಜರಾತಿನಲ್ಲಿ,
ಕೊಡಗಿನಲ್ಲಿ,
ಕಾಶ್ಮೀರದಲ್ಲಿ,
ಪ್ಯಾರಿಸ್ಸಿನಲ್ಲಿ-ಎಲ್ಲೂ ಸಿಗದ
ಕಿತ್ತಲೆ ಹಣ್ಣೋ, ಅಲ್ಲ,
ಬೃಹತ್ ಮುಸಂಬಿಯೋ,
ಆಹಾ ಏನೀ ದೈವ ಶಿಲ್ಪ!
ಮೆಚ್ಚಿದೆ ನಿನ್ನ ಬೃಹತ್ ಸೌಂದರ್ಯ
ಕಲಾ ಪ್ರೌಢಿಮೆಗೆ ಓ ದೇವ!
ಓ ಮಾವ ಮಚ್ಚಿದೆ ನಿನ್ನೀ
ಸುಂದರ ಸುಮಧುರ ಸೃಷ್ಟಿಗೆ.
ಕೃಷ್ಣನ ವಿಶ್ವರೂಪ ಕಂಡು
ಹೃದಯ ತುಂಬಿ ಹಾಡಿದೆ ಅಂದು
ಪಶ್ಯಾಮಿ ದೇವ ತವ ದೇವ ದೇಹೇ ಎಂದು
ಈಗ, ಪಶ್ಯಾಮಿ ದೇವೀ ತವ ದಿವ್ಯ ದೇಹೇ
ಸರ್‍ವಾನಿ ಬ್ಯೂಟೀನಿ ಎಂದು!
ಇಡೀ ದೇಹ, ಮುಡಿಯಿಂದ ಅಡಿಯವರೆಗೆ
ಸೌಂದರ್ಯದ ಸಾಕಾರ ರೂಪ
ಅಡಗಿಸಿರುವ ನೈಟಿಯೇ
ಕೋಟಿ ಜನ್ಮಗಳ ಪುಣ್ಯಶಾಲಿ, ಕ್ರೂರಿ
ಎಂದು ಶಪಿಸುತ್ತಾನೋಡಿದಾಗ
ನೈಟಿಯ ತುದಿಯಲ್ಲಿಲ್ಲ ಪೆಟ್ಟಿಕೋಟಿನ ಫ್ರಿಲ್ಲು!
ಅದರರ್ಥ ಹೊಳೆದು, ಮೈ ಬಿಸಿಯಾಗಿ
ರೋಮಾಂಚನಗೊಂಡು, ಮೈಯ
ರಕ್ತವೆಲ್ಲಾ ಮುಖಕ್ಕೆ ತುಂಬಿ
ಸ್ವತಃ ಸಾಕ್ಷಾತ್ ಪರಮಾತ್ಮ
ಎದ್ದು ನಿಂತು ಸೆಲ್ಯೂಟ್ ಹೊಡೆದಾಗ-
“ಏನೇ ಹಾಗೆ ಕಣ್ಣು ಬಾಯಿ ಬಿಟ್ಟು
ನೋಡ್ತಿದೀಯ, ನಮ್ಮ ಪಾರ್ಥ ಕಣೇ,
ನಿನ್ನತ್ತೆಯ ಮಗ” ಎಂದ ಸದ್ದಿಗೆ
ಬಂದೆವಿಬ್ಬರೂ ನಿಜ ವಾಸ್ತವಕ್ಕೆ.
ನಮ್ಮೀ ಪ್ರೇಮಾರಾಧನೆಯ
ಶಿವ ಪೂಜೆಯಲ್ಲಿ ಕರಡಿ ಬಿಟ್ಟ
ಈ ಮುದುಕಿ ಯಾರೆಂದು
ಕಣ್ತೆರೆದು ನೋಡಿದರೆ
ಮತ್ತೊಮ್ಮೆ ಹಾರ್ಟ್ ಅಟ್ಯಾಕ್!
ಮೊದಲನೆಯದಕ್ಕಿಂತ ಹತ್ತು ಪಟ್ಟು
ನೂರು ಪಟ್ಟು, ಸಾವಿರ ಪಟ್ಟು
ಸಿವಿಯರ್ರಾದ, ಮ್ಯಾಸಿವ್ ಹಾರ್ಟ್ ಅಟ್ಯಾಕ್!
ಹತ್ತು ವರ್ಷಗಳ ಹಿಂದೆ, ನಾನಂದು
ಆಮರಿಕೆಗೆ ಹೊರಟು ನಿಂತಾಗ
ನನ್ನ ಹರಸಿ, ಕಳಿಸಿಕೊಡಲು
ಮುಂಬಯಿ ವಿಮಾನ ನಿಲ್ದಾಣಕ್ಕೆ
ಬಂದಿದ್ದ ನನ್ನಜ್ಜಿ, ನನ್ನ ಅಮ್ಮನ
ಅಮ್ಮ – ಅಪಾರ ಸುಂದರಿ.
ಆ ಇಳಿ ವಯಸ್ಸಿನಲ್ಲಿಯೂ
ದಟ್ಟವಾದ ಕಪ್ಪು ನೀಳ ಜಡೆ.
ಹಸಿರು ರೇಶಿಮೆಯ ಸೀರೆಯುಟ್ಟು
ಮುಡಿ ತುಂಬ ಮಲ್ಲಿಗೆ ಮುಡಿದು
ಕಿವಿಗೆ ವಜದ ಬೆಂಡೋಲೆ
ಮೂಗಿಗೆ ವಜ್ರದ ಮೂಗುತಿ
ಹಣೆಗೆ ಕಾಸಗಲ ಕುಂಕುಮವಿಟ್ಟ
ನನ್ನಜ್ಜೆ- ತುಂಬು ಮುತ್ತೈದೆ.
ಬಿಚೋಲೆ ಗೌರಮ್ಮ ಸಾಕ್ಷಾತ್ ಮಹಾಲಕ್ಷ್ಮಿ.
ಈ ಹತ್ತು ವರ್ಷಗಳಲ್ಲಿ
ತಾತ ಸತ್ತು – ಅಜ್ಜಿ ವಿಧವೆ.
ಬಳೆ ಮೂಗುತಿ ಎಲ್ಲ ಕಿತ್ತೆಸೆದು,
ತಲೆ ಬೋಳಿಸಿ, ಕೆಂಪು ಸೀರೆಯುಟ್ಟ
ನನ್ನಜ್ಜಿ ತಗ್ಗಿ ಬಗ್ಗಿ ಕುಗ್ಗಿ ಕುಗ್ಗಿ
ಕುಬ್ಜಳಾಗಿ… ಓ ದೇವರೇ
ಈ ದೃಶ್ಯವೆಂಥ – ಹೃದಯ ವಿದ್ರಾವಕ.
ಇಪ್ಪತ್ತೊಂದನೆಯ ಶತಮಾನದತ್ತ
ಶರವೇಗದಲ್ಲಿ ಓಡುತ್ತಿರುವ ಈ
ಅಲ್ಟ್ರಾ ಮಾಡರ್ನ್ ಯುಗದಲ್ಲೂ
ಇದೆಂತಹ ಅಮಾನುಷ ಪದ್ಧತಿ!
ಈ ಕ್ರೂರ, ನೀಚ ಕಂದಾಚಾರಕ್ಕೆ ಧಿಕ್ಕಾರ!
ದುಃಖ ಕಟ್ಟೆಯೊಡೆದು
ಅಜ್ಜಿಯ ಕಾಲ ಮೇಲೆ ಬಿದ್ದು
ಗೋಳಾಡಿದಾಗ… ಅಜ್ಜಿಯ ಸಾಂತ್ವನ.
ಮಹಾಮಾತೆಯ ಮಾತೃ ಪ್ರೇಮಧಾರೆ.
ನೀಲಿ ಪ್ರಿಂಟೆಡ್ ರೇಷ್ಮೆ ಸೀರೆಯಲ್ಲಿ
ಮನಮೋಹಕ ಮಲ್ಲಿಗೆ ಪರಿಮಳದಲ್ಲಿ
ಓಡೋಡಿ ಬಂದಳೆನ್ನ ಸ್ವೀಟ್‌ಗರ್ಲ್!
ಕೈಯಲ್ಲಿ ಆರತಿ ತಟ್ಟೆ-
ಆರತಿ ಎತ್ತುವ ಅಮೃತ ಘಳಿಗೆಯಲ್ಲಿ
ಕಣ್ಣು ಕಣ್ಣು ಕಲೆತಾಗ
ಹೃದಯಗಳು ಒಂದನೊಂದು
ಕದಿಯಲು ಮುನ್ನುಗ್ಗಿದಾಗ
ದೇವತೆಗಳು ಹೂಮಳೆರೆದಾಗ
ಸ್ವರ್ಗ ಮೂರು ಗೇಣೂ ಇಲ್ಲ
ಬರಿ ಒಂದು ಮಿಲಿ ಮೀಟರ್
ಅಂದರೆ ಆಲ್ಮೋಸ್ಟ್ ಸ್ವರ್ಗ!
*****
೧೭-೦೪-೧೯೮೯