ಅಧ್ಯಾಯ ೧
ನಾಗೂರು ! ನಾಗೂರು ! ಎಂದು ಕಂಡಕ್ಟರ್ ಒದರಿದಾಗ, ಬಿಸಿಲಿನ ಝಳಕ್ಕೆ ನಿದ್ದೆತೂಗುತ್ತ ಕುಳಿತಿದ್ದ ಅರವಿಂದನಿಗೆ ಒಮ್ಮೆಲೆ ಎಚ್ಚರವಾಯಿತು. ಗಡಿಬಿಡಿಯಿಂದ ಎದ್ದು ಜನರ ಎಡೆಯಲ್ಲಿ ದಾರಿ ಮಾಡಿಕೊಂಡು ಬಸ್ಸಿನಿಂದ ಹೊರಕ್ಕೆ ಧುಮುಕಿದ. ಧೂಳೆಬ್ಬಿಸುತ್ತ ಬಸ್ಸು ಮುಂದೆ ಹೋಯಿತು. ಅರವಿಂದ ವಾಚು ನೋಡಿದ. ಒಂದು ಗಂಟೆ. ಬಿಸಿಲು ರಣಗುಟ್ಟುತ್ತಿತ್ತು. ಸುಮಾರು ಮೂರು ಗಂಟೆಯ ಹೊತ್ತು ಬಸ್ಸು ಪ್ರಯಾಣ ಮಾಡಿ ಸುಸ್ತಾಗಿತ್ತು. ಪಕ್ಕಾ ಹಳ್ಳಿ ಬಸ್ಸು, ಅದು ದಾರಿಯಲ್ಲಿ ಒಬ್ಬರನ್ನೂ ಬಿಡದೆ ಎತ್ತಿಕೊಂಡಿತ್ತು. ಜನರಿಗಿಂತಲೂ ಅವರ ಗಂಟುಮೂಟೆಗಳೇ ಹೆಚ್ಚು.
ನಾಗೂರು ಹೈಸ್ಕೂಲಿನ ಮ್ಯಾನೇಜರರನ್ನು ಅವನು ನೋಡಬೇಕಿತ್ತು; ಸಮಾಜಿಕ ವಿಷಯಗಳನ್ನು ಕಲಿಸಲು ಅಧ್ಯಾಪಕರು ಬೇಕು ಎಂಬ ಜಾಹೀರಾತನ್ನು ನೋಡಿ ತನ್ನ ಅದೃಷ್ಟವನ್ನು ಪರೀಕ್ಷಿಸಲೆಂದು ಬಂದಿದ್ದ. ಕೆಲಸ ಹುಡುಕುತ್ತ ಗೊತ್ತುಗುರಿಯಿಲ್ಲದೆ ಅಲೆಯುವುದು ಇದೇನೂ ಮೊದಲ ಸಲವಲ್ಲ. ಕಳೆದ ಎರಡು ತಿಂಗಳುಗಳಿಂದ ಇದೇ ಕೆಲಸ. ಮೈಸೂರಲ್ಲಿ ಎಂ. ಎ. ಮುಗಿಸಿ ಊರಿಗೆ ಮರಳಿದಾಗ ಎಲ್ಲಾದರೂ ಕಾಲೇಜಿನಲ್ಲಿ ಲೆಕ್ಚ್ರರ್ ಕೆಲಸ ದೊರಕಬಹುದೆಂಬ ಆಸೆ ಇಟ್ಟುಕೊಂಡಿದ್ದ. ಇತಿಹಾಸ ಅವನ ಮೆಚ್ಚಿನ ವಿಷಯ. ಅದನ್ನು ಸಾಕಷ್ಟು ಆಳವಾಗಿ ಅಭ್ಯಾಸಮಾಡಿದ್ದ. ಇತಿಹಾಸದ ಕಾಲೇಜು ಉಪನ್ಯಾಸಗಳು ಹೇಗಿರಬೇಕು ಎಂಬುದರ ಬಗ್ಗೆ ಸ್ವಂತ ಅಭಿಪ್ರಾಯಗಳನ್ನೂ ರೂಪಿಸಿಕೊಂಡಿದ್ದ. ಕೆಲಸ ಹುಡುಕುತ್ತ ಅನೇಕ ಕಾಲೇಜುಗಳನ್ನು ಹೊಕ್ಕು ಹೊರಟ. ಅವನ ಉತ್ಸಾಹವನ್ನು ಯಾರೂ ಅರ್ಥಮಾಡಿಕೊಳ್ಳಲಿಲ್ಲ. ಕೊನೆಗೆ ಗಮನ ಹರಿದುದು ಹೈಸ್ಕೂಲುಗಳತ್ತ.
ಬಸ್‌ಸ್ಟಾಪ್ ಪಕ್ಕದಲ್ಲಿರುವ ಹೋಟೆಲಿಗೆ ಹೋಗಿ ಸ್ವಲ್ಪ ಕಾಫಿ ತಿಂಡಿ ಹೊಟ್ಟೆಗೆ ಹಾಕಿಕೊಂಡ ನಂತರ ಹೈಸ್ಕೂಲ್ ಮ್ಯಾನೇಜರರ ಮನೆದಾರಿ ವಿಚಾರಿಸಿದ.
ಹೋಟೆಲಿನ ಯಜಮಾನ ಹೆಬ್ಬಾರರು ಹೊಸಬನನ್ನು ನೋಡಿದರು. “ಶಾಮರಾಯರ ಮನೆಯೆ? ಅಲ್ಲೇನು ಕೆಲಸ?”
“ಶಾಲೆಯಲ್ಲೊಂದು ವೇಕೆನ್ಸಿಯಿದೆಯೆಂದು ಓದಿದೆ.”
“ಮಾಸ್ತರರೆ ನೀವು?”
“ಕೆಲಸ ಸಿಕ್ಕಿದರೆ.”
ಹೆಬ್ಬಾರರು ನಸುನಕ್ಕರು. ಅವರಿಗೆ ಈ ತರುಣ ಹಿಡಿಸಿದ. “ಯಾವ ಊರಾಯಿತು?” ಎಂದು ಕೇಳಿದರು.
“ಬಂಟ್ವಾಳದ ಪಕ್ಕ.”
“ಮಾಸ್ತರರ ಹೆಸರು?”
ಅರವಿಂದ ಹೆಸರು ಹೇಳಿದ.
“ಇಲ್ಲಿ ಎಲ್ಲಿರುತ್ತಿರಿ?”
“ಮೊದಲು ಕೆಲಸ ಸಿಗಲಿ.”
“ಸಿಗುತ್ತದೆ.” ಎಂದರು ಹೆಬ್ಬಾರರು ಯಾವುದೋ ವಿಶ್ವಾಸದಿಂದ.
ನಾಗೂರು ಪಂಚಾಯಿತಿನ ಚೇರ್ಮೆನರೂ ಆಗಿದ್ದ ಶಾಮರಾಯರು ತಮ್ಮ ಮನತನಕ ರಸ್ತೆ ಕಡಿಸಿ ಇಕ್ಕೆಲಗಳಲ್ಲಿ ಸಾಲುಮರಗಳನ್ನು ನಡೆಸಿದ್ದರು. ದಾರಿ ತಪ್ಪುವಂತೆಯೇ ಇರಲಿಲ್ಲ.
ಅರವಿಂದ ಮನೆ ತಲುಪಿದಾಗ ಶಾಮರಾಯರು ಆಗತಾನೆ ಊಟ ಮುಗಿಸಿ ಯಾರೋ ಊರ ಗಣ್ಯರೊಂದಿಗೆ ಮಾತಾಡುತ್ತ ಚಾವಡಿಯಲ್ಲಿ ಕುಳಿತಿದ್ದರು. ಬಿಸಿಲಿಗೆ ಬಂದ ಪರವೂರ ತರುಣನನ್ನು ಕಂಡು ಆದರದಿಂದ ಬರಮಾಡಿ, “ಬಾಯಾರಿಕೆಗೇನು ಬೇಕು?” ಎಂದು ವಿಚಾರಿಸಿದರು.
“ಏನೂ ಬೇಡ” ಎಂದ ಅರವಿಂದ.
ತಾನು ಬಂದ ಉದ್ದೇಶ ತಿಳಿಸಿದ.
“ಊಟವಾಗಿದೆಯೇ?”
“ಕಾಫಿ ತಿಂಡಿ ಆಗಿದೆ.”
“ಊಟ ಮಾಡಿ!”
“ಬೇಡ,”
ಶಾಮರಾಯರು ಬಿಡದೆ ಎಳನೀರು ಅವಲಕ್ಕಿ ಬಾಳೆಹಣ್ಣು ತರಿಸಿಕೊಟ್ಟರು. ಅರವಿಂದ ಒತ್ತಾಯಕ್ಕೆ ಸ್ವೀಕರಿಸಬೇಕಾಯಿತು.
“ಮಧ್ಯಾಹ್ನದ ಹೊತ್ತಿಗೆ ಮನೆಗೆ ಬಂದವರನ್ನು ನಾನು ಹಾಗೆಯೇ ಮಾತಾಡಿಸುವುದಿಲ್ಲ. ಅದೂ ನೀವು ತುಂಬಾ ದೂರದಿಂದ ನಮ್ಮ ಹಳ್ಳಿಗೆ ಬಂದಿದ್ದೀರಿ.” ಎಂದರು ಶಾಮರಾಯರು.
ಅರವಿಂದನ ಉಪಾಹಾರವಾದ ಮೇಲೆ ರಾಯರು ಮಾತಿಗೆ ತೊಡಗಿದರು “ಇತಿಹಾಸದಲ್ಲಿ ಎಂ. ಎ. ಮಾಡಿಕೊಂಡಿದ್ದೀರಿ ಎಂದ ಮೇಲೆ ಲೆಕ್ಚರರ್ ಕೆಲಸಕ್ಕೆ ಯತ್ನಿಸಲಿಲ್ಲವೇ?” ಎಂದು ಕೇಳಿದರು.
“ಯತ್ನಿಸಿದೆ. ಸಿಗಲಿಲ್ಲ”
“ಅಧ್ಯಾಪಕ ತರಬೇತು ಆಗಿದೆಯೆ?”
“ಇಲ್ಲ.”
“ಮಧ್ಯೆ ಎಲ್ಲಾದರೂ ಕಾಲೇಜಿನಲ್ಲಿ ಕೆಲಸ ಸಿಕ್ಕಿದರೆ?”
“ಬಿಟ್ಟು ಹೋಗುತ್ತೇನೆ.”
ಶಾಮರಾಯರು ನಕ್ಕರು. ಅವನ ಪ್ರಾಮಾಣಿಕ ಉತ್ತರದಿಂದ ಅವರಿಗೆ ಖುಷಿಯಾಗಿತ್ತು. “ನಾನು ನಿಮ್ಮನ್ನು ದೂರಲಾರೆ.” ಎಂದರು ನಂತರ ತಮ್ಮ ಶಾಲೆಯ ಬಗ್ಗೆ ಹೇಳಿದರು. ಐದು ವರ್ಷಗಳ ಕೆಳಗೆ ಈ ಊರಲ್ಲಿದ್ದುದು ಬರೇ ಎಲಿಮೆಂಟರಿ ಶಾಲೆ ಮಾತ್ರ. ಕೆಲವು ಮೈಲುಗಳ ಸುತ್ತಳತೆಯಲ್ಲೆಲ್ಲ ಹೈಸ್ಕೂಲು ಇರಲಿಲ್ಲ. ಮಕ್ಕಳು ಹೆಚ್ಚು ಓದಬೇಕಾದರೆ ಐದಾರು ಮೈಲಿ ದೂರ ನಡೆದು ಹೋಗಬೇಕಾದ ಸ್ಥಿತಿ. ಆದ್ದರಿಂದ ಊರ ಮಕ್ಕಳು ಎಲಿಮೆಂಟರಿ ದಾಟಿ ಮುಂದೆ ಓದುವುದೇ ಅಪರೂಪವಾಗಿತ್ತು. ಇದೇ ಕೆಲಸವೆಂದು ಪ್ರಯತ್ನಿಸಿ ಈಗ ಹೈಸ್ಕೂಲು ಮಾಡಿದ್ದಾಗಿದೆ. ಈ ವರ್ಷ ಮೊದಲ ಬ್ಯಾಚಿನ ಹುಡುಗರು ಸ್ಕೂಲ್ ಫೈನಲ್ ಪರೀಕ್ಷೆ ಬರೆಯುವವರಿದ್ದಾರೆ. ಊರಿಗೆ ಶಾಲೆಯನ್ನು ಕೊಟ್ಟರಾಯಿತೆ? ಶಾಲೆಗೆ ಅಧ್ಯಾಪಕರನ್ನೂ ಕೊಡಬೇಕು.
“ನಮ್ಮ ಊರು ನೋಡಿದಿರಲ್ಲ? ಹೇಳಿ ಕೇಳಿ ಇದೊಂದು ಕಾಡುಕೊಂಪೆ ಹಗಲಲ್ಲಿ ನೊಣ, ರಾತ್ರಿಯಲ್ಲಿ ಸೊಳ್ಳೆ ಕಡಿಯುವ ಪ್ರದೇಶ ಸುತ್ತುಮುತ್ತಲಿನ ಹಳ್ಳಿಗಳಿಗೆ ವಿದ್ಯುತ್ತು ಬಂದಿದ್ದರೂ ಇಲ್ಲಿಗೆ ಅದು ತಲುಪಿಲ್ಲ. ಪೇಟೆಗೆ ಸಾಕಷ್ಟು ನೀರಿನ ಸೌಕರ್ಯವೂ ಇಲ್ಲ. ಆಸ್ಪತ್ರೆಯಿಲ್ಲ. ಹೇಳಿಕೊಳ್ಳುವಂಥ ಡಾಕ್ಟರರಿಲ್ಲ. ಪೇಟೆ ಪಟ್ಟಣಗಳಲ್ಲಿ ಬೆಳೆದ ಜನ ಇಲ್ಲಿ ಬಂದು ನೆಲಸುತ್ತಾರೆಯೇ? ಒಂದು ನಾಟಕವೇ ಸಿನೆಮವೇ ! ಇಲ್ಲಿ ಯಾವ ಮನರಂಜನೆಯೂ ಇಲ್ಲ. ಸ್ವತಃ ನನ್ನ ಮಕ್ಕಳೇ ಇಲ್ಲಿ ಬಂದು ನೆಲಸಲು ಒಪ್ಪುವುದಿಲ್ಲ. ರಜಾದಲ್ಲಿ ಈ ಕಡೆ ಬಂದರೆ ಬರುವ ಮೊದಲೇ ಹೊರಡುವ ಆತುರ ತೋರಿಸುತ್ತಾರೆ. ನೀವೂ ಪಟ್ಟಣದಲ್ಲಿ ಓದಿದವರಾದ್ದರಿಂದ ಹೇಳುತ್ತಿದ್ದೇನೆ, ನಿಮ್ಮನ್ನು ನಿರುತ್ಸಾಹಗೊಳಿಸಬೇಕೆಂಬ ಉದ್ದೇಶದಿಂದಲ್ಲ. ನಂತರ ನಿಮಗೆ ನಿರಾಸೆಯಾಗಬಾರದೆಂದು.”
ನಿರುತ್ಸಾಹಗೊಳಿಸುವ ಪ್ರಶ್ನೆಯೇ ಇರಲಿಲ್ಲ. ತಾನೊಬ್ಬ ಹೈಸ್ಕೂಲ ಅಧ್ಯಾಪಕನಾಗುತ್ತೇನೆಂದು ಅವನು ಕನಸಲ್ಲೂ ಅಂದುಕೊಂಡಿರಲಿಲ್ಲ. ಹಣ ಕೊಡುವ ತಾಕತ್ತು ಇರುತ್ತಿದ್ದರೆ ಸುಲಭದಲ್ಲಿ ಲೆಕ್ಚರರ್ ಕೆಲಸ ಸಿಗುತ್ತಿತ್ತು. ಎಂ. ಎ. ತನಕ ಅಣ್ಣ ಓದಿಸಿದ್ದ. ಅಣ್ಣನಿಗೆ ಅವನದೇ ಕುಟುಂಬವಿತ್ತು, ಸಮಸ್ಯೆಗಳಿದ್ದುವು. ಆರೋಗ್ಯವಿಲ್ಲದ ತಾಯಿಯನ್ನೂ ಅವನು ನೋಡಿಕೊಳ್ಳುತ್ತಿದ್ದ. ಮತ್ತೆ, ಮತ್ತೆ, ಅವನನ್ನು ಆಶ್ರಯಿಸುವುದು ಸರಿಯಿರಲಿಲ್ಲ. ಆದ್ದರಿಂದ ಕೆಲಸ ಏನಾದರೊಂದು ಕೆಲಸ-ಕೂಡಲೇ ಬೇಕಾಗಿತ್ತು.
“ಹಳ್ಳಿಯ ಬದುಕು ನನಗೆ ಹೊಸತಲ್ಲ” ಎಂದ ಅರವಿಂದ.
ಶಾಮರಾಯರು ತಲೆದೂಗಿದರು. ಮುಂದಿನ ವಿಷಯ ಎತ್ತಿಕೊಂಡರು. ಶಾಲೆಗೆ ಇನ್ನೂ ಸರಕಾರದ ಸಹಾಯಧನ ಸಿಗಲು ಸುರುವಾಗಿಲ್ಲ. ಹೊಸ ಕಟ್ಟಡಗಳನ್ನು ಹಾಕಿಸಬೇಕು. ಫರ್ನಿಚರು, ಆಟದ ಬಯಲು-ಹೀಗೆ ಎಲ್ಲಾ ಆಗಬೇಕು, ಆದ್ದರಿಂದ ಸ್ವಲ್ಪ ಕಡಿಮೆ ಸಂಬಳದಲ್ಲಿ ಕೆಲಸ ಮಾಡಬೇಕಾಗುತ್ತದೆ. ತಿಂಗಳಿಗೆ ಮುನ್ನೂರು ರೂಪಾಯಿಗೆ ಟ್ರೇನಿಂಗ್ ಆದ ಅಧ್ಯಾಪಕರು ಕೂಡ ಕೆಲಸಕ್ಕೆ ಸೇರಿದ್ದಾರೆ. ಈ ಏರ್ಪಾಟು ಸರಕಾರದ ಸಹಾಯಧನ ಸಿಗುವ ತನಕ ಮಾತ್ರ. ಒಮ್ಮೆ ಅದು ಸಿಗಲು ಸುರುವಾದರೆ ಎಲ್ಲರಿಗೂ ಸರಕಾರೀ ಸಕೇಲಿನಲ್ಲಿ ಸಂಬಳ ದೊರೆಯುತ್ತದೆ-ಎಂದರು.
ಅರವಿಂದ ಯೋಚನೆಗೊಳಗಾದ. ಕೇವಲ ಮುನ್ನೂರು ರೂಪಾಯಿಗೆ ಇಂಥ ಕೊಂಪೆಯಲ್ಲಿ ಕೆಲಸಮಾಡಬೇಕೆ? ಇದಕ್ಕೊಸ್ಕರ ನಾನು ಇತಿಹಾಸ ಓದಿದೆನೆ? ಅವನ ಅನುಮಾನಗಳನ್ನು ಮುಖದಲ್ಲೇ ಓದಿದ ಶಾಮಾರಾಯರು, “ಸಾವಿರ ಐದು ಸಾವಿರ ಡೊನೇಶನ್ ತೆತ್ತು ಕೆಲಸ ಕೇಳಿಕೊಂಡು ಬರುತ್ತಿದ್ದಾರೆ. ನಿಮಗೇ ತಿಳಿದಿರುವಂತೆ, ಕೆಲಸವೆ ಸಿಗುತ್ತಿಲ್ಲ ಎಲ್ಲೂ-ಪೇಟೆಯಲ್ಲೂ ಹಳ್ಳಿಯಲ್ಲೂ. ಹಾಗೆಂದು ನಾನು ಈ ಪರಿಸ್ಥಿತಿಯ ದುರುಪಯೋಗ ಮಾಡಲಾರೆ. ನನಗೆ ಒಳ್ಳೆ ಪ್ರತಿಭಾವಂತ ಅಧ್ಯಾಪಕರು ಬೇಕು. ಶಾಲೆಗೆ ಹಣ ಹೇಗಾದರೂ ಬರುತ್ತದೆ. ಸಂಬಳ ಕಡಿಮೆಯಾಯಿತೆಂದು ಹಿಂದೇಟು ಹಾಕಬೇಡಿ. ನೀವು ಇನ್ನೂ ತರುಣರು. ಇಲ್ಲಿಗೇ ಎಲ್ಲವೂ ಮುಗಿದುಹೋಗುವುದಿಲ್ಲ. ಸ್ವಲ್ಪ ಸಮಯ ಇಲ್ಲಿ ಇರಿ, ಯಾರಿಗೆ ಗೊತ್ತು ಕೆಲವೇ ವರ್ಷಗಳಲ್ಲಿ ಇಲ್ಲಿ ಕಾಲೇಜು ಬಂದರೂ ಬರಬಹುದು…. ಇಳಿದುಕೊಳ್ಳುವುದಕ್ಕೆ ರೂಮು ಕೊಡುತ್ತೇನೆ. ಅದಕ್ಕೆ ನೀವೇನೂ ಬಾಡಿಗೆ ಕೊಡಬೇಕಾಗಿಲ್ಲ” ಎಂದರು.
ಇವರ ಸಂಭಾಷಣೆಯನ್ನು ಕೇಳುತ್ತ ಕುಳಿತ ಗಣ್ಯರೊಬ್ಬರು ಆರವಿಂದನಿಗೆ ಯಾಕೆ ಅವನು ಈ ಕೆಲಸ ಒಪ್ಪಿಕೊಳ್ಳಬೇಕು ಎಂಬ ಬಗ್ಗೆ ತಿಳಿಹೇಳಲು ಮುಂದಾದರು, ನಾಗೂರು ಬೆಳೆಯುವ ಊರು. ಇಲ್ಲಿ ಅಧ್ಯಾಪಕನಾಗಿದ್ದುಕೊಂಡು ನಾಲ್ಕೇಕರೆ ಜಮೀನು, ಮನೆ ಊರ್ಜಿತಗೊಳಿಸುವುದೇನೂ ಕಷ್ಟವಲ್ಲ. ಹೀಗೆ ಮಾಡಿ ಕೊಂಡವರಿದ್ದಾರೆ. ಇಲ್ಲಿನ ಮಣ್ಣು ಫಲವತ್ತಾದುದು, ಅಡಿಕೆ, ತೆಂಗು, ಭತ್ತ, ಕಬ್ಬು ಬೆಳೆಗಳಿಗೆ ಹೇಳಿದ ನೆಲ, ನಾಗೂರು ಪೇಟೆಯೂ ಬೆಳೆಯುತ್ತಿದೆ.
“ಐವತ್ತು ರೂಪಾಯಿ ಹೆಚ್ಚಿಗೆ ಕೊಡಿ,” ಎಂದ ಅರವಿಂದ. ಶಾಮರಾಯರು ಒಂದು ನಿರ್ಧಾರಕ್ಕೆ ಬಂದವರಂತೆ, “ಯಾವಾಗ ಬಂದು ಸೇರಿಕೊಳ್ಳುತ್ತೀರಿ?” ಎಂದು ಕೇಳಿದರು.
“ನಾಳೆಯೇ.”
ರಾಯರು ತುಸು ಯೋಚಿಸಿ, “ನಾಳೆ ಒಳ್ಳೇ ದಿನ. ಹಾಗೇ ಮಾಡಿ ದಾಖಲೆ ಪತ್ರಗಳನ್ನೆಲ್ಲ ನಂತರ ಮಾಡಿಕೊಂಡರಾಯಿತು. ನಾಡಿದ್ದು ಶಾಲೆಯೂ ರಿ-ಓಪನ್ ಆಗುತ್ತದೆ,” ಎಂದರು.
“ರೂಮಿನ ಬಗ್ಗೆ ಹೇಳಿದಿರಿ.”
“ಪೋಸ್ಟಾಫೀಸಿನ ಪಕ್ಕದಲ್ಲೊಂದು ರೂಮಿದೆ. ಬಚ್ಚಲು, ನೀರಿನ ಅನು ಕೂಲತೆಗಳಿವೆ. ಬಂದು ಹೆಬ್ಬಾರರಿಂದ ಕೀ ಇಸಿದುಕೊಳ್ಳಿ. ಬಸ್‌ಸ್ಟಾಂಡ್ ಪಕ್ಕದಲ್ಲೇ ಹೆಬ್ಬಾರರ ಹೋಟೆಲಿದೆ. ಅವರಿಗೆ ನಾನು ಹೇಳಿರುತ್ತೇನೆ.”
ನಂತರ ಅವನನ್ನು ತಮ್ಮ ಜೀಪಿನಲ್ಲಿ ಬಸ್‌ಸ್ಟ್ಯಾಂಡ್ ತನಕ ಕರೆತಂದು ಬಿಟ್ಟು ಹೋದರು.
*****
ಅಧ್ಯಾಯ ೨
ಮೈಸೂರಲ್ಲಿ ಎಂ. ಎ. ಗೆ ಓದುತ್ತಿದ್ದಾಗ ಅರವಿಂದ ಮುಂದೆ ರಿಸರ್ಚು ಮಾಡಬೇಕು ಎಂದು ಕನಸು ಕಾಣುತ್ತಿದ್ದ. ಆದ್ದರಿಂದಲೆ ಇತರರು ಕ್ಯಾಂಪಸ್ಸಿನ ಹುಲ್ಲಿನ ಮೇಲೆಯೋ ಕ್ಯಾಂಟೀನಿನ ಟೇಬಲಿನ ಸುತ್ತಲೂ ಗುಂಪು ಗುಂಪಾಗಿ ಕುಳಿತು ಹರಟೆ ಹೊಡೆಯುತ್ತಿರಬೇಕಾದರೆ ಅವನು ಮಾತ್ರ ಹೆಗೆಲ್, ಕಾಡ್‌ವೆಲ್, ಕಾಲಿಂಗ್‌ವುಡ್ ಮೊದಲಾದವರ ವಿಚಾರಗಳ ಬಗ್ಗೆ ಚಿಂತಿಸುತ್ತಿದ್ದ. ಆದ್ದರಿಂದಲೋ ಏನೋ ಸುಲಭವಾಗಿ ದೊರಕಬಹುದಾಗಿದ್ದ ಫಸ್ಟ್ ಕ್ಲಾಸ್ ತಪ್ಪಿ ಸೆಕೆಂಡ್‌ಕ್ಲಾಸಿನಲ್ಲಿ ತೃಪ್ತಿಪಡಬೇಕಾಯಿತು. ಯಾವಾಗಲೂ ಇಸವಿ ತಾರೀಖುಗಳನ್ನೂ ಅರಸುಮನೆತನಗಳ ವಂಶಾವಳಿಯನ್ನೂ ಉರುಹೊಡೆಯುತ್ತಿದ್ದ ಜೋಷಿಗೆ ಪ್ರೊಫೆಸರರು ಫಸ್ಟ್ ಕ್ಲಾಸ್ ಕೊಡಿಸಿದರು. ಜೋಷಿ ಈಗ ಅಲ್ಲೇ ರಿಸರ್ಚಿಗೂ ಸೇರಿಕೊಂಡಿದ್ದ. ಅರವಿಂದ ತನಗೊಂದು ರಿಸರ್ಚ್ ಫೆಲೊಶಿಪ್ ಕೊಡಿಸಿ ಎಂದು ಕೇಳಿಕೊಂಡು ಪ್ರೊಫೆಸರರ ಹಿಂದೆ ಒಂದುವಾರ ನಡೆದ, ಉಪಯೋಗವಾಗಲಿಲ್ಲ.
ಈಗಲೂ ಅವನು ಹತಾಶನಾಗಲಿಲ್ಲ. ಒಂದೆರಡು ವರ್ಷ ದುಡಿದು ಸ್ವಲ್ಪ ಹಣ ಉಳಿಸಿ ನಂತರ ಹೋದರಾಯಿತು ಎಂದುಕೊಂಡಿದ್ದ. ಅದಕ್ಕೆ ನಾಗೂರು ಅನುಕೂಲವಾದ ಪರಿಸರ ಅನಿಸಿತು. ಸಂಬಳ ಸ್ವಲ್ಪ ಕಡಿಮೆಯಾದರೂ ಫ್ರೀ ರೂಮು ; ಹಳ್ಳಿಯಾದುದರಿಂದ ಹೆಚ್ಚು ಖರ್ಚೂ ಇರಲಾರದು. ಏಕಾಂತದಲ್ಲಿ, ತನ್ನ ಓದನ್ನು ಮುಂದರಿಸಬಹುದು.
ಮರುದಿನವೇ ಲಗ್ಗೇಜಿನೊಂದಿಗೆ ಬಂದಿಳಿದ ಅರವಿಂದನನ್ನು ಕಂಡು ಹೆಬ್ಬಾರರು ಪ್ರಸನ್ನರಾದರು. ಕೆಲಸ ಸಿಗುತ್ತದೆ ಎಂದು ನಾನು ಹೇಳಿರಲಿಲ್ಲವೇ ಎಂಬಂತೆ ಮುಗುಳ್ನಕ್ಕರು. ಅವನ ರೂಮಿಗೆ ಲಗ್ಗೇಜು ಸಾಗಿಸಲು ಒಬ್ಬ ಹುಡುಗನಿಗೆ ಹೇಳಿ ಬೀಗದ ಕೈಯನ್ನು ಅರವಿಂದನಿಗೆ ಕೊಟ್ಟರು. ಶಾಮರಾಯರು ಅವರ ಮಾತನ್ನು ಉಳಿಸಿಕೊಂಡಿದ್ದರು.
ಒಬ್ಬನಿಗೆ ಸಾಕಷ್ಟು ವಿಶಾಲವಾದ ರೂಮು. ಹಿಂದುಗಡೆ ಬಚ್ಚಲು, ಬಾವಿ ಇದ್ದುವು. ರೂಮಿನಲ್ಲಿ ಒಂದು ಪುಟ್ಟ ಮೇಜು, ಕುರ್ಚಿ, ಜೋಡಿಸಿದ ಎರಡು ಬೆಂಚುಗಳು, ನೀರೆತ್ತುವುದಕ್ಕೆ ಒಂದು ಹೊಸ ಅಲ್ಯುಮಿನಿಯಂ ಕೊಡ, ಒಂದು ಸಿಮೆಂಟಿನ ತೊಟ್ಟಿ ಬಚ್ಚಲಿನಲ್ಲಿ ಹಾಕಿಸಿದ್ದರು. ಮೇಜಿನ ಮೇಲೆ ಒಂದು ಸೀಮೆ ಎಣ್ಣೆ ಲ್ಯಾಂಪು, ಮೂಲೆಯಲ್ಲಿ ಸೀಮೆ ಎಣ್ಣೆ ಬಾಟಲಿ, ಈ ಎಲ್ಲ ಏರ್ಪಾಟು ಕಂಡು ಅರವಿಂದನಿಗೆ ಖುಷಿಯಾಯಿತು. ತಾನು ತಂದ ಸಾಮಾನುಗಳನ್ನು ರೂಮಿನಲ್ಲಿ ಹೊಂದಿಸಿಟ್ಟ, ಪುಸ್ತಕಗಳೇ ಹೆಚ್ಚು, ಎಲ್ಲಿಂದಲೋ ಕೊಂಡ ಹಳೆ, ಹೊಸ ಪುಸ್ತಕಗಳು-ಸೆಕೆಂಡ್ ಹ್ಯಾಂಡ್ ಅಂಗಡಿಗಳಿಂದ, ಬೀದಿ ಬದಿಯಿಂದ, ಪುಸ್ತಕ ಬೇಡವಾದ ಜನರಿಂದ, ಪುಸ್ತಕ ಪ್ರದರ್ಶನಗಳಿಂದ. ಕೈಯಲ್ಲಿ ಕಾಸಿದ್ದರೆ ಅದು ಪುಸ್ತಕಕ್ಕೆ ಖರ್ಚಾಗುತ್ತಿತ್ತು.
ಪಕ್ಕದಲ್ಲೇ ಇತ್ತು ಪೋಸ್ಟಾಫೀಸು. ತಮ್ಮ ಕೆಲಸ ಮುಗಿಸಿಕೊಂಡ ಪೋಸ್ಟ್ ಮಾಸ್ಟರ್ ಅರವಿಂದನ ಕೋಣೆಗೆ ಇಣಿಕಿ ನೋಡಿದರು.
“ಹೊಸ ಮೇಸ್ಟ್ರು ನೀವೆಯೇ?”
“ಹೌದು.” ಅರವಿಂದ ತನ್ನ ಹೆಸರು ಹೇಳಿದ.
“ಬಹಳ ಸಂತೋಷ, ಶಾಮರಾಯರು ಹೇಳಿದ್ದರು ನಿಮ್ಮ ಬಗ್ಗೆ.”
ಪೋಸ್ಟ್ ಮಾಸ್ಟರರು ತಮ್ಮ ಪರಿಚಯ ಹೇಳಿಕೊಂಡರು. ಅವರ ಹೆಸರು ಗೋಪಾಲಕೃಷ್ಣ ಪೈ, ಇಲ್ಲಿ ಪೋಸ್ಟಾಫೀಸು ತೆರೆದಾಗಿಂದಲೂ ಕೆಲಸ ಮಾಡುತ್ತಿದ್ದಾರೆ. ಪೇಟೆಯಲ್ಲಿ ಅವರದೊಂದು ಜನರಲ್ ಸ್ಟೋರ್ಸ್ ಇತ್ತು. ಅದೇ ಮುಖ್ಯ ಕಸುಬು, ಪುರುಸೊತ್ತಿನಲ್ಲಿ ಆ ಕಡೆ ಬನ್ನಿ ಎಂದು ಹೇಳಿ ಹೋದರು.
ಅರವಿಂದ ಸಂಜೆ ಪೈಯ ಸ್ಟೋರ್ಸ್‌ಗೆ ಹೋಗಿ ತನಗೆ ಬೇಕಾದ ಅಗತ್ಯದ ವಸ್ತುಗಳನ್ನು ಕೊಂಡ, ಕಾಫಿ ಊಟ ಹೆಬ್ಬಾರರ ಹೋಟೆಲಿನಲ್ಲಿ ನಡೆಯಿತು.
ಮರುದಿನ ಬೆಳಿಗ್ಗೆ ಶಾಲೆಗೆ ಹೋದ.
ಹೆಡ್ ಮಾಸ್ತರ್ ವಾಮನ ಕಮ್ತಿ ಅವನನ್ನು ಸಂದೇಹದಿಂದಲೇ ಅವಲೊಕಿಸಿದರು. ಈ ತರುಣ ಇಲ್ಲಿ ಹೆಚ್ಚು ಕಾಲ ಇರುತ್ತಾನೆ ಎಂದು ಅವರಿಗೆ ಅನಿಸಲಿಲ್ಲ. ಬೇರೆ ಕೆಲಸ ಸಿಗುವ ತನಕ ಇದೊಂದು ತಂಗುದಾಣ.
“ಹಿಂದೆ ಎಲ್ಲಾದರೂ ಕಲಿಸಿದ ಅನುಭವ ಇದೆಯೆ?”
“ಇಲ್ಲ.”
“ಇದೇ ಹೊಸತು?”
“ಹೌದು.”
“ಟ್ರೇನಿಂಗ್?”
“ಆಗಿಲ್ಲ.”
“ಏನು ಸಬ್ಜೆಕ್ಟು?”
“ಹಿಸ್ಟರಿ.”
ಅರವಿಂದನ ಪ್ರತಿಯೊಂದು ಉತ್ತರಕ್ಕೂ ಅವರು ಮೂಗುಮುರಿಯುತ್ತಿದ್ದರು. ಇದೇನು ಮತ್ತೊಂದು ಇಂಟರ್ವ್ಯೂ ಎಂದುಕೊಂಡ ಅರವಿಂದ. ಕೊನೆಗೆ ಹೆಡ್‌ಮಾಸ್ತರರು ಸಾಕಷ್ಟು ಪ್ರಶ್ನೆಗಳನ್ನು ಕೇಳಿದ ತೃಪ್ತಿಯಿಂದ, “ಒಂದು ಅಪ್ಲಿಕೇಶನ್ ಹಾಕಿ, ರೆಕಾರ್ಡಿಗೆ ಬೇಕಾಗುತ್ತದೆ ಅದು. ಅಪಾಯಿಂಟ್ಮೆಂಟ್ ಆರ್ಡರ್ ನಂತರ ಸಿಗುತ್ತದೆ. ಹೇಗಿದ್ದರೂ ನಾಳೆಯಿಂದ ಪಾಠಗಳು ಸುರುವಾಗುವುದು. ಈ ದಿನ ಬರೇ ಹಾಜರಿ ತೆಗೆಯೋದು, ಕ್ಲರ್ಕಿನಲ್ಲಿ ಕೇಳಿ ನಿಮ್ಮ ಟೈಮ್ ಟೇಬಲ್ಕು ಪಠ್ಯ ಪುಸ್ತಕಗಳನ್ನು ತೆಗೆದುಕೊಳ್ಳಿ” ಎಂದರು.
ಕ್ಲರ್ಕ್ ಬರುವ ಸಮಯ ಕಾದು ಟೈಮ್ ಟೇಬಲನ್ನೂ, ಪಠ್ಯ ಪುಸ್ತಕಗಳನ್ನೂ ಪಡೆದುಕೊಂಡು ಸ್ಟಾಫ್ ರೂಮಿಗೆ ಬಂದು ಕುಳಿತ. ಹೊರಗೆ ಮಕ್ಕಳ ಸದ್ದು ಗದ್ದಲ. ಒಬ್ಬೊಬ್ಬರೇ ಅಧ್ಯಾಪಕರು ಬರತೊಡಗಿದರು. ಕೆಲವರು ಹೊಸಬನನ್ನು ಕಂಡು ಮಾತಾಡಿಸಿದರು. ಇನ್ನು ಕೆಲವರು ಕಾಣದಂತೆ ಇದ್ದರು. ಕ್ಲಾಸ್ ಟೀಚರುಗಳು ಹೋಗಿ ಮಕ್ಕಳ ಹಾಜರಿ ತೆಗೆದು ರಿ-ಓಪನಿಂಗ್ ದಿನದ ಶಾಸ್ತ್ರ ಮುಗಿಸಿದರು.
ಅರವಿಂದ ಮರುದಿನದ ತನ್ನ ಪಾಠಗಳ ಕುರಿತು ಯೋಚಿಸುತ್ತ ಕುಳಿತಿದ್ದ. ಬಹಳ ಇಕ್ಕಟ್ಟಾದ ಕೋಣೆ ಅದು. ಶಾಲೆಯಲ್ಲಿ ಸಾಕಷ್ಟು ಸ್ಥಳಾವಕಾಶ ಇರಲಿಲ್ಲ. ಮರದ ಹಲಗೆ ಹಾಕಿ ಸ್ಟಾಫ್‌ರೂಮು ನಿರ್ಮಿಸಿದ್ದರು. ಒಬ್ಬರು ಕುಳಿತರೆ ಇನ್ನೊಬ್ಬರು ಕುಳಿತುಕೊಳ್ಳುವಂತಿರಲಿಲ್ಲ. ತಾನು ಯಾರದೋ ಕುರ್ಚಿಯನ್ನು ಆಕ್ರಮಿಸಿಕೊಂಡಿರಬೇಕು ಎಂದುಕೊಡ ಅರವಿಂದ. ಭೂಗೋಳದ ಪುಸ್ತಕ ತೆರೆದು ಆಫ್ರಿಕದ ಬಗ್ಗೆ ಓದತೊಡಗಿದ. ಹತ್ತಿರ ಕುಳಿತವರೊಬ್ಬರು ಕೆಮ್ಮಿ ಅವನ ಗಮನ ಸೆಳೆಯುವುದರಲ್ಲಿ ಯಶಸ್ವಿಯಾದರು.
“ಹಿಸ್ಟರಿ ಎಂ. ಎ. ಮಾಡಿದ್ದೀರಂತೆ?”
“ಹೌದು.”
“ಫಸ್ಟ್‌ಕ್ಲಾಸೇ?”
“ಅಲ್ಲ.”
“ಸೆಕೆಂಡೆ?”
“ಹೌದು.”
“ಇಲ್ಲೇಕೆ ಬಂದಿರಿ?”
“ಏಕೆಂದರೆ?”
“ಕಾಲೇಜಿನಲ್ಲಿ ಕೆಲಸ ಸಿಗುತ್ತಿತ್ತಲ್ಲ.”
“ಸಿಗಲಿಲ್ಲ.”
“ಸಿಗಬಹುದು.”
ಸ್ವಲ್ಪ ತಡೆದು ಅವರು ಮತ್ತೆ ಕೇಳಿದರು :
“ಹಿಸ್ಟರಿ ಎಂ. ಎ. ಸುಲಭವ?”
“ಅಂದರೆ?”
“ನಾನೊಂದು ಎಂ. ಎ. ಮಾಡಬೇಕೆಂದಿದ್ದೇನೆ.”
“ಹೌದೆ?”
“ಹಿಸ್ಟರಿ ಸುಲಭವಾದರೆ ಅದರಲ್ಲೇ ಮಾಡೋಣಾಂತ…ನಿಮ್ಮ ಬಳಿ ಪುಸ್ತಕಗಳಿವೆಯೆ?”
“ಕೆಲವು.”
“ನಾನೊಮ್ಮೆ ನೋಡಬಹುದೆ?”
“ನೋಡಿ.”
“ನಿಮ್ಮ ಜತೆಯಲ್ಲಿ ಬರುತ್ತೇನೆ. ಇಲ್ಲಿ ಕುಳಿತೇನು ಮಾಡುವುದು?” ಎಂದು ಅರವಿಂದನನ್ನು ಎಬ್ಬಿಸಿ ಹೊರಡಿಸಿದರು ಅವರು. ತಮ್ಮ ಸೈಕಲನ್ನು ತಳ್ಳಿಕೊಂಡು ಹೊರಟರು. ಹೆಸರು ವೆಂಕಟರಮಣ ಮೂರ್ತಿ, ಪಕ್ಕದ ಹಳ್ಳಿಯಲ್ಲಿ ಮನೆ ಜಮೀನು ಇದೆ, ಕಲಿಸೋದು ಹಿಂದಿ ಎಂದು ಮುಂತಾಗಿ ತಮ್ಮ ಪರಿಚಯ ಮಾಡಿಕೊಟ್ಟರು. ನಾಗೂರಿನಲ್ಲಿ ಎಂದಾದರೊಂದು ದಿನ ಕಾಲೇಜು ಬರುತ್ತದೆ. ಅಷ್ಟರಲ್ಲಿ ಒಂದು ಎಂ. ಎ. ಮಾಡಿಕೊಂಡರೆ ಅನುಕೂಲವಲ್ಲವೇ ಎಂದು ಅವರ ಯೋಚನೆ. ಯಾವುದಾದರೊಂದು ಯೂನಿವರ್ಸಿಟಿಯಲ್ಲಿ ಖಾಸಗಿಯಾಗಿ ಪರೀಕ್ಷೆಗೆ ಕುಳಿತುಕೊಳ್ಳಬೇಕೆಂದಿದ್ದರು. ಅವರ ಇಷ್ಟರ ತನಕದ ವಿದ್ಯಾಭ್ಯಾಸವೂ ಖಾಸಗಿಯಾಗಿಯೇ ಆಗಿತ್ತು.
ರೂಮಿಗೆ ಬಂದ ವೆಂಕಟರಮಣ ಮೂರ್ತಿ ಪುಸ್ತಕಗಳನ್ನೆಲ್ಲ ತಿರುವಿ ಹಾಕಿ ತಮಗೆ ಬೇಕಾದ ಐದಾರು ಪುಸ್ತಕಗಳನ್ನು ತೆಗೆದಿರಿಸಿದರು.
“ನಿಮ್ಮಲ್ಲಿ ನೋಟ್ಸ್ ಇಲ್ಲವೆ?” ಎಂದು ಕೇಳಿದರು.
“ನೋಟ್ಸ್?”
“ಎಂ. ಎ. ಓದುವಾಗ ನೀವು ನೋಟ್ಸ್ ಬರೆದಿರಬೇಕಲ್ಲವೆ?”
“ಇಲ್ಲ.”
ವೆಂಕಟರಮಣ ಮೂರ್ತಿ ಆಶ್ಚರ್ಯ ಸೂಚಿಸಿದರು.
“ಇವಿಷ್ಟು ಪುಸ್ತಕಗಳನ್ನು ಈಗ ತೆಗೆದುಕೊಂಡು ಹೋಗುತ್ತೇನೆ” ಎಂದು ಪುಸ್ತಕಗಳೊಂದಿಗೆ ಎದ್ದರು. ರೂಮಿನಲ್ಲಿ ಕಣ್ಣಾಡಿಸಿ ಚೆನ್ನಾಗಿದೆಯೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
“ರೂಮು ಫ್ರಿಯಂತೆ ಹೌದೆ?”
“ಹೌದು.”
“ಎಷ್ಟು ಸಂಬಳ ಫಿಕ್ಸ್ ಮಾಡಿದ್ದಾರೆ?”
ಹೇಳಿದ.
“ಅಷ್ಟು ಸಂಬಳಕ್ಕೆ ನೀವು ಇಷ್ಟು ದೂರ ಬರಬೇಕಾಗಿತ್ತೆ? ಮೊನಾ ಮಿಸ್ತ್ರಿ ಕಳೆದ ವರ್ಷ ಸೇರಿದ್ದು, ಅವಳಿಗೆಷ್ಟು ಕೊಡುತ್ತಾರೆಗೊತ್ತೆ?”
“ಮೋನಾ ಮಿಸ್ತ್ರಿ ಯಾರು?”
“ಇಂಗ್ಲಿಷ್ ಕಲಿಸುತ್ತಾಳೆ. ಐನೂರು ರೂಪಾಯಿ ಸಂಬಳ.”
ಪುಸ್ತಕಗಳನ್ನು ಸೈಕಲಿನ ಕ್ಯಾರಿಯರಿನಲ್ಲಿ ಹಾಕಿಕೊಂಡು ವೆಂಕಟರಮಣ ಮೂರ್ತಿ ಹೊರಟು ಹೋದರು. ಅರವಿಂದ ಅವರು ಕೇಳಿದ ಮಾತನ್ನು ಮೆಲುಕು ಹಾಕುತ್ತ ಕುಳಿತ. ಮುನ್ನೂರಕ್ಕಿಂತ ಹೆಚ್ಚು ಸಂಬಳ ಯಾರಿಗೂ ಕೊಡುತ್ತಿಲ್ಲ ಎಂದಿದ್ದರು ಶಾಮರಾಯರು, ಸಂಬಳದ ಬಗ್ಗೆ ಅವರೊಂದಿಗೆ ಚೌಕಾಶಿ ಮಾಡುವುದಕ್ಕೆ ದಾಕ್ಷಿಣ್ಯ ಅಡ್ಡ ಬಂದಿತ್ತು. ಐವತ್ತು ರೂಪಾಯಿ ಹೆಚ್ಚು ಮಾಡಿ ಎನ್ನುವುದಕ್ಕೆ ಹಿಂದೆ ಮುಂದೆ ನೋಡಿದ್ದ. ಆದರೆ ವೆಂಕಟರಮಣ ಮೂರ್ತಿಯ ಮಾತನ್ನು, ನಂಬುವುದಾದರೆ ರಾಯರು ತನಗೆ ಮೋಸಮಾಡಿದ್ದರು. ಮೂರ್ತಿಯ ಮಾತನ್ನು ನಂಬದಿರುವುದಕ್ಕೆ ಯಾವ ಕಾರಣವೂ ಕಂಡುಬರಲಿಲ್ಲ. ಐನೂರು ರೂಪಾಯಿ ಸಂಬಳ ಪಡೆಯುವ ಈ ಮೋನಾ ಮಿಸ್ತ್ರಿ ಯಾರಿರಬಹುದು ಅಂದುಕೊಂಡ.
*****