ಅಹಮ್ ಬ್ರಹ್ಮಾಸ್ಮಿ

ಅಹಮ್ ಬ್ರಹ್ಮಾಸ್ಮಿ

ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ ನನಗೆ ಗೊಂದಲ ಉಂಟಾಯಿತು. ಅವನು ನನ್ನನ್ನು ನೋಡಿದ ದೃಷ್ಟಿಯು ಈ ಸಂಶಯಕ್ಕೆ ಎಡೆಮಾಡಿಕೊಟ್ಟಿತು. ಅವನ ನೋಟದಲ್ಲಿ ಒಂದು ಪರಿಚಯದ ಸೆಳೆತವಿತ್ತು. ಈ ಸೆಳೆತವು ಕುತೂಹಲಕ್ಕೆ ಎಡೆಮಾಡಿ ವಿಷಯವನ್ನು ಮನಃ ಪಟಲದಲ್ಲಿ ಕ್ಷಣ ಮಾತ್ರ ಆಕರ್ಷಕವಾಗಿ ಉಳಿಯುವಂತೆ ಮಾಡಿತು. ಕುತೂಹಲ ಇರುವಲ್ಲಿ ಆಕರ್ಷಣೆ ಇರುವುದು ಸಹಜವೇ. ಆದರೆ ಯಾವುದೇ ವಿಷಯವನ್ನು ಅನಗತ್ಯವಾಗಿ ದೀರ್ಘಕಾಲ ಹೊತ್ತು ನಡೆಯುವ ಜಾಯಮಾನ ನನ್ನದಲ್ಲ. ಅಗತ್ಯಕ್ಕಿಂತ ಹೆಚ್ಚು ತಲೆಕೆಡಿಸಿಕೊಳ್ಳುವ ಪರಿಪಾಠವೂ ನನ್ನಲ್ಲಿ ಇಲ್ಲವಾದುದರಿಂದ ಈ ಘಟನೆಯನ್ನು ಅಂದೇ ಮರೆತಿದ್ದೆ.

ಮೇಲಿನ ಮಹತ್ವವಲ್ಲದ ವಿಷಯವನ್ನು ಮತ್ತೊಮ್ಮೆ ಮರು ನೆನಪು ಮಾಡಿಕೊಳ್ಳುವಂತಹ ಒಂದು ಸಂದಿಗ್ಧ ಪರಿಸ್ಥಿತಿ ನನಗೆ ಪುನಃ ಎದುರಾದುದು ನಾನು ಸರಕಾರಿ ಆಸ್ಪತ್ರೆಯ ಜನರಲ್ ವಾರ್ಡಿನಲ್ಲಿ ರೋಗಿಗಳ ಯೋಗಕ್ಷೇಮವನ್ನು ವಿಚಾರಿಸುತ್ತಿರುವಾಗ. ಮನಸ್ಸಿನಲ್ಲಿ ಬೇಸರ, ನೋವು ಉಂಟಾದಾಗಲೆಲ್ಲಾ ನಾನು ಆಸ್ಪತ್ರೆಗೆ ಭೇಟಿ ನೀಡಿ ಪರಿಚಿತರಲ್ಲದ ರೋಗಿಗಳ ಯೋಗಕ್ಷೇಮ ವಿಚಾರಿಸಿ ಹಣ್ಣು ಹಂಪಲು ನೀಡುವ ಪರಿಪಾಠವನ್ನು ಬೆಳೆಸಿಕೊಂಡಿದ್ದೆ. ಇದರಿಂದ ನನಗೆ ಒಂದು ರೀತಿಯ ತೃಪ್ತಿ ಹಾಗೂ ಅವ್ಯಕ್ತ ಸಂತೋಷ ಉಂಟಾಗುತ್ತಿತ್ತು. ಬದುಕಿನಲ್ಲಿ ಸುಲಭವಾಗಿ ತಳ್ಳಿ ಹಾಕಲಾಗದಂಥ ತೀರ್ಪನ್ನು ಕೊಡುವವರು ಇಬ್ಬರೇ. ಲೋಕ ಹಾಗೂ ಕಾಲ. ಈ ಇಬ್ಬರ ಹೊಡೆತಕ್ಕೆ ತತ್ತರಿಸಿದ ಬಡವರಿಗೆ ನಾನು ಕೊಡುವ ಎರಡು ಸಾಂತ್ವನದ ಮಾತುಗಳು ಅವರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲವಾದರೂ ಮರು ಬದುಕು ಬೇಕೆಂಬ ಆಶೆಯನ್ನು ಮತ್ತೆ ಖಂಡಿತ ಚಿಗುರಿಸಬಹುದು. ಈ ಕೆಲಸವನ್ನು ಆಗೊಮ್ಮೆ ಈಗೊಮ್ಮೆ ನಾನು ಮಾಡುತ್ತಿದ್ದೆ. ಇಂತಹ ಸಣ್ಣ ಸಣ್ಣ ಸಂತೋಷದ ಕೆಲಸಗಳಿಂದಲೇ ಜೀವನ ಸಹ್ಯವೆನಿಸುತ್ತದೆ. ಜನರಲ್ ವಾರ್ಡಿನ ಕೊನೆಯ ರೋಗಿಗೆ ಎರಡು ಸಾಂತ್ವನದ ಮಾತು ಹೇಳಿ ನಾನು ಹೊರ ಬಂದಾಗ ಅವನು ಎರಡನೇ ಭಾರಿ ನನ್ನ ಕಣ್ಣಿಗೆ ಬಿದ್ದ. ‘ವಿಚಾರಣೆ’ ಎಂದು ಬೋರ್ಡು ಇಟ್ಟ ಮೇಜಿನ ಮೂಲೆಯ ಗೋಡೆಗೆ ಆತುಕೊಂಡು ಅವನು ನಿಂತು ಕೊಂಡಿದ್ದ. ಈ ಭಾರಿ ಅವನ ಮುಖದಲ್ಲಿ ಸಣ್ಣಗೆ ನಗು ಕಂಡಿತು. ಆ ನಗುವಿನಲ್ಲಿ ಒಂದು ಆತ್ಮೀಯತೆಯನ್ನು ಅವನು ತೇಲಿ ಬಿಟ್ಟಿದ್ದ. ಆದರೆ ನನಗದು ಇಷ್ಟವಾಗಲಿಲ್ಲ. ನಾನು ನಮ್ಮಿಬ್ಬರ ದೃಷ್ಟಿ ಒಂದಾದಾಗಲೂ ನಗುವ ಪ್ರಯತ್ನ ಮಾಡಲಿಲ್ಲ. ಪರಿಚಿತರಲ್ಲದ ವ್ಯಕ್ತಿಗಳೊಂದಿಗೆ ಅನಗತ್ಯವಾಗಿ ನಕ್ಕು ಉದಾರತೆಯ ಸೋಗು ಹಾಕುವ ಪದ್ಧತಿ ನನ್ನಲ್ಲಿಲ್ಲ. ಆದುದರಿಂದಲೋ ಏನೋ ನಾನು ಸಮಾಜದಲ್ಲಿ ಒಬ್ಬ ವಿಭಿನ್ನ ವ್ಯಕ್ತಿಯಾಗಿ ರೂಪುಗೊಂಡಿದ್ದೆ. ನಾನು ಮತ್ತೊಮ್ಮೆ ಹಿಂತಿರುಗಿ ಅವನನ್ನು ನೋಡುವ ಪ್ರಯತ್ನ ಮಾಡಲಿಲ್ಲ. ಯಾಕೆಂದರೆ ಅಂತಹ ಒಂದು ಅಸಂಸ್ಕೃತಿಯ ಪದ್ದತಿಯನ್ನು ನಾನು ಬೆಳೆಸಿಕೊಂಡಿಲ್ಲ. ಅಹಂಕಾರಿಗಳ ಬಗ್ಗೆ ಉದಾಸೀನ ತಾಳುವುದು ಸೂಕ್ತ ಎಂಬ ತತ್ವವನ್ನು ಬಲವಾಗಿ ನಂಬಿಕೊಂಡವನು ನಾನು. ಆದುದರಿಂದ ಆ ವಿಷಯದ ಬಗ್ಗೆ ನಾನು ಹೆಚ್ಚಿನ ಆಲೋಚನೆಗೆ ಇಂಬು ಕೊಡಲಿಲ್ಲ.

ಅದೇಕೋ ಅಂದು ರಾತ್ರಿ ಹಾಸಿಗೆಯಲ್ಲಿ ಮಲಗಿಕೊಂಡು ದಿವಂಗತ ಎ.ಯನ್. ಮೂರ್ತಿರಾಯರ ‘ದೇವರು’ ಪುಸ್ತಕವನ್ನು ಓದುತ್ತಿದ್ದೆ. ಅವನ ಮುಖ ಅನಿರೀಕ್ಷಿತವಾಗಿ ನನ್ನ ಮನಃಪಟಲದಲ್ಲಿ ಪುನಃ ಹಾದು ಹೋಯಿತು. ಅವನು ಮತ್ತೊಮ್ಮೆ ನನ್ನ ಎದುರು ನಿಂತ ಹಾಗಾಗಿ ನಾನು ಲಘುವಾಗಿ ಕಂಪಿಸಿದೆ. ಯಾಕೆ ಹೀಗಾಗುತ್ತದೆ ಎಂದು ನನಗೆ ನಾನೇ ಪ್ರಶ್ನೆಯನ್ನು ಹಾಕಿಕೊಂಡು ಉತ್ತರಕ್ಕಾಗಿ ತಡಕಾಡಿದೆ. ಅವನು ನಕ್ಕಾಗ ಬಹುಶಃ ನಾನು ಕೂಡಾ ನಕ್ಕಿದ್ದರೆ ಈ ರೀತಿಯ ತುಮುಲ ಉಂಟಾಗುತ್ತಿರಲಿಲ್ಲವೋ ಏನೋ! ನಾನು ನಗಬೇಕಿತ್ತು. ಆಗ ಅವನು ನನ್ನ ನಗೆಗೆ ಯಾವ ರೀತಿ ಪ್ರತಿಕ್ರಿಯಿಸುತ್ತಾನೆ ಎಂದು ಗೊತ್ತಾಗುತ್ತಿತ್ತು. ಅದರಲ್ಲಿ ನಾನು ಕಳಕೊಳ್ಳುವುದು ಏನಿತ್ತು? ಬಹುಶಃ ನನ್ನ ಅಹಂ ಅಡ್ಡ ಬಂತು ಅಂತ ಕಾಣುತ್ತದೆ. ಆದರೆ ಅವನಿಗೆ ನನ್ನ ಪರಿಚಯ ಇರುತ್ತಿದ್ದರೆ ಅವನೇ ನೇರವಾಗಿ ಬಂದು ನನ್ನೊಂದಿಗೆ ಸ್ವಪರಿಚಯ ಮಾಡಿಸಿಕೊಳ್ಳಬಹುದಿತ್ತಲ್ಲಾ? ಇದರಲ್ಲಿ ಅವನ ಸ್ವಾಭಿಮಾನಕ್ಕೆ ಭಂಗ ಬರುವ ವಿಷಯ ಏನಿತ್ತು? ಅವನು ಕೂಡಾ ನನ್ನ ತರಹದ ಸ್ವಭಾವದವನೇ ಇರಬೇಕು. ಈ ರೀತಿಯ ನಾನಾ ತರಹದ ಆಲೋಚನೆಗಳು ನನ್ನ ತಲೆಯಲ್ಲಿ ಹಾದು ಹೋಗಿ ನನಗೆ ನಿದ್ರಾಭಂಗವಾಗಿ ನಾನು ಎದ್ದು ಕುಳಿತೆ. ಕೆಲವು ವಿಷಯಗಳನ್ನು ನಾವು ಬಹಳ ಆಳವಾಗಿ ತರ್ಕಕ್ಕೆ ತೆಗೆದುಕೊಂಡರೆ ಅದರಲ್ಲಿ ಅನಾಹುತವೇ ಜಾಸ್ತಿಯಾಗುತ್ತದೆ. ಹಾಗಾಗಲು ಬಿಡಬಾರದು ಎಂದು ಗಟ್ಟಿ ಮನಸ್ಸು ಮಾಡಿ ನಾನು ಬಲವಂತದಿಂದ ನಿದ್ರೆಗೆ ಶರಣಾಗಲು ಯತ್ನಿಸಿದೆ.

ಇದಾಗಿ ಎಷ್ಟೋ ತಿಂಗಳುಗಳು ಕಳೆದು ಹೋದುವು. ನನ್ನ ಸಾಹಿತ್ಯದ ಅಭಿಮಾನಿಯೊಬ್ಬರು ಕಳುಹಿಸಿದ ಒಂದು ಆಮಂತ್ರಣ ಪತ್ರ ನನ್ನ ಗಮನವನ್ನು ವಿಶೇಷವಾಗಿ ಸೆಳೆಯಿತು. “ಜಾತಿಮುಕ್ತ ಸಮಾಜದ ಬಗ್ಗೆ ಒಂದು ಸೆಮಿನಾರ್ ಇದೆ. ಇದೊಂದು ಹೊಸ ಪ್ರಯೋಗ, ಖಂಡಿತ ಬನ್ನಿ ಎಂದಿದ್ದರು. ತುಂಬಾ ಕ್ಲಿಷ್ಟಕರ ವಿಷಯದ ಬಗ್ಗೆ ತರ್ಕ ವಿತರ್ಕ ನಡೆಯುವ ಸಾಧ್ಯತೆಯಿರುವುದರಿಂದ ನಾನು ಕೂಡಾ ಆ ಸೆಮಿನಾರ್‌ನಲ್ಲಿ ಮುತವರ್ಜಿಯಿಂದ ಭಾಗವಹಿಸಿದೆ. ತುಂಬಾ ಮಂದಿ ಸಮಾನ ಮನಸ್ಕರು ಸೇರಿದ ಸಭೆಯಲ್ಲಿ ನಾನು ಗಣ್ಯವ್ಯಕ್ತಿಗಳ ಮೊದಲ ಸಾಲಿನಲ್ಲಿ ಕುಳಿತಿದ್ದೆ. ನನ್ನ ಗಮನ ಸ್ಟೇಜಿನ ಪಕ್ಕದಲ್ಲಿ ನಿಂತ ವ್ಯಕ್ತಿಯತ್ತ ಹರಿಯಿತು. ನನಗೆ ಆಶ್ಚರ್ಯವಾಯಿತು. ನಾನು ಈ ಮೊದಲು ಎರಡು ಬಾರಿ ಕಂಡ ವ್ಯಕ್ತಿಯೇ ಅವನಾಗಿದ್ದ. ಫೋಟೊಗ್ರಾಫರ್‌ನೊಬ್ಬನ ಪಕ್ಕದಲ್ಲಿ ಸ್ಟೇಜಿನ ಹತ್ತಿರದ ಕಂಬಕ್ಕೆ ಆತುಕೊಂಡು ಅವನು ನಿಂತಿದ್ದು, ತದೇಕ ಚಿತ್ತದಿಂದ ನನ್ನನ್ನೇ ನೋಡುತ್ತಿರುವುದು ನನ್ನ ಗಮನಕ್ಕೆ ಬಂತು. ಈ ಭಾರಿ ನಾನು ವಿಚಲಿತನಾಗಲಿಲ್ಲ. ವೈರಿಯನ್ನು ಕಾಣುವಂತೆ ಅವನನ್ನೇ ದೃಷ್ಟಿಸಿ ನೋಡಿದೆ. ಆದರೆ ಅವನ ಮುಖಚರ್ಯೆಯಲ್ಲಿ ಯಾವುದೇ ಬದಲಾವಣೆ ನನಗೆ ಕಾಣಲಿಲ್ಲ. ನನ್ನ ಉದ್ವೇಗ ಕಂಡು ಅವನು ಗಲಿಬಿಲಿಗೊಳ್ಳಲಿಲ್ಲ. ಬದಲಾಗಿ ಅವನು ನಕ್ಕ. ಎಂದಿನ ಮುಗುಳ್ನಗು, ಸೌಮ್ಯ ನಗು. ಈ ಸಾರಿ ಮುಖದ ಬಿಗುವನ್ನು ಸ್ವಲ್ಪ ಸಡಿಲಗೊಳಿಸಿ ವಿಶಾಲವಾಗಿ ನಕ್ಕ. ಪ್ರಸನ್ನ ನಗು, ನನ್ನಿಂದ ಸಹಿಸಲಾಗಲಿಲ್ಲ. ಎದ್ದು ಅವನ ಕಪಾಳಕ್ಕೆ ಭಾರಿಸುವ ಎಂದು ನನಗನಿಸಿದರೂ ಸಭೆಯ ಘನತೆಗೆ, ಮರ್ಯಾದೆಗೆ ನನ್ನಿಂದ ಅಚಾತುರ್ಯ ಆಗಬಾರದೆಂದು ನೆನೆಸಿ ನನ್ನ ಮುಖವನ್ನು ಬೇರೆ ಕಡೆ ತಿರುಗಿಸಿದೆ. ಆದರೂ ಅವನನ್ನು ನಾನು ಕದ್ದು ಕದ್ದು ನೋಡದೆ ಇರಲಾಗಲಿಲ್ಲ. ನಾನು ನೋಡಿದಾಗಲೆಲ್ಲಾ ಅವನು ನನ್ನನ್ನೇ ದೃಷ್ಟಿಸಿ ನೋಡುತ್ತಿದ್ದ. ಸಭೆ ನಡೆಯುತ್ತಿದ್ದರೂ ಅದು ನನಗೆ ಸಂಬಂಧಿಸಿದ ವಿಷಯವಲ್ಲವೆಂಬ ರೀತಿಯಲ್ಲಿ ಅವನು ವರ್ತಿಸುತ್ತಿದ್ದ. ಸಭೆಯಲ್ಲಿ ಏನು ತರ್ಕ ನಡೆಯುತ್ತಿದೆ ಎಂದು ಗ್ರಹಿಸಲು ನನ್ನಿಂದ ಕಷ್ಟವಾಗ ತೊಡಗಿತು. ನನ್ನ ಆಲೋಚನೆ ಬೇರೆ ಕಡೆ ತಿರುಗಿತು. ಈ ವ್ಯಕ್ತಿ ಸರಕಾರದ ಗುಪ್ತಚರ ವಿಭಾಗದವನಿರಬಹುದೇ? ಎಂಬ ಸಂಶಯ ಸ್ವಲ್ಪಮಟ್ಟಿಗೆ ನನ್ನನ್ನು ಕಾಡ ತೊಡಗಿತು. ಯಾರಾದರೂ ನನ್ನ ಬಗ್ಗೆ ತಪ್ಪು ಮಾಹಿತಿಯನ್ನು ಅವನಿಗೆ ನೀಡಿರಬಹುದೇ? ಅದಕ್ಕಾಗಿ ಅವನು ತನ್ನ ಚಲನ-ವಲನದ ಮೇಲೆ ಕಣ್ಣಿಟ್ಟಿರಬಹುದು ಎಂದೆಲ್ಲಾ ಎನಿಸತೊಡಗಿ ನಾನು ನಿಧಾನವಾಗಿ ಬೆವರತೊಡಗಿದೆ. ಬಂಧಿಖಾನೆಯ ಕಬ್ಬಿಣದ ಸರಳಿನ ಹಿಂಬದಿಯ ಕಪ್ಪು ಕೋಣೆಯ ಕಲ್ಪನೆ ಮನದಲ್ಲಿ ಸೃಷ್ಟಿಯಾಗಿ ನನ್ನ ಇಡೀ ಶರೀರ ನಡುಗ ತೊಡಗಿತು. ಹಣೆಯಲ್ಲಿ ಮೂಡಿದ ಬೆವರ ಹನಿಯನ್ನು ನನ್ನ ಎಡಗೈಯಿಂದ ಒರಸಿಕೊಂಡು ನಾನು ಎದ್ದು ನಿಂತೆ. ಇನ್ನೇನು! ಸಭೆಯಿಂದ ಹೊರ ನಡೆಯಲು ನಿರ್ಧಾರ ಮಾಡಿ ಎರಡು ಹೆಜ್ಜೆ ನಡೆದು ಸಭ್ಯತೆಯ ಗಡಿ ದಾಟಿ ನಾನು ತಿರುಗಿ ನೋಡಿದೆ. ಅವನು ನನ್ನನ್ನೇ ಎವೆಯಿಕ್ಕದೆ ನೋಡಿ ನಗುತ್ತಿದ್ದ. ನಾನು ಮನೆಯ ದಾರಿ ಹಿಡಿದೆ. ಅಂದಿನಿಂದ ಹಾಸಿಗೆ ನನ್ನ ಖಾಯಂ ಮಿತ್ರನಾದ.

ನಾನು ಹಾಸಿಗೆ ಬಿಟ್ಟು ಏಳಲಾರದ ಪರಿಸ್ಥಿತಿಗೆ ಅವನು ನನ್ನನ್ನು ನೂಕಿ ಬಿಟ್ಟ. ನನ್ನ ಆಲೋಚನೆ, ಕಲ್ಪನೆ, ಧ್ಯೇಯ, ಸಿದ್ಧಾಂತಗಳಿಗೆ ತಿಲಾಂಜಲಿ ನೀಡಿ ಬಹಳ ದಿನಗಳಾಗಿದ್ದವು. ಬಡರೋಗಿಗಳ ಒಡನಾಟ ಇಲ್ಲದೆ ನಾನೇ ಒಬ್ಬ ರೋಗಿಯಾಗಿಬಿಟ್ಟೆ. ತಲೆ ತುಂಬಾ ಅವನದೇ ಯೋಚನೆ. ಭಯ! ಒಂದು ಅವ್ಯಕ್ತ ಭಯ. ವಾತಾವರಣದ ತುಂಬೆಲ್ಲಾ ಹರಡಿದ ಗಾಳಿ ತಟಸ್ಥವಾಗಿ ನಿಂತ ಅನುಭವ ಪ್ರಕೃತಿ ಎಲ್ಲಾ ಸುಟ್ಟು ಕರಕಲಾದ ಹಾಗೇ, ಎಲ್ಲೆಲ್ಲೂ ಕತ್ತಲೆ. ಗಾಢ ಅಂಧಕಾರ. ಹಗಲು ರಾತ್ರಿಯ ವ್ಯತ್ಯಾಸ ತಿಳಿಯದ ಸ್ಥಿತಿಗೆ ಅವನು ನನ್ನನ್ನು ಮುಟ್ಟಿಸಿಬಿಟ್ಟ. ನನ್ನ ವಿವೇಚನೆಯ ಶಕ್ತಿಗೆ ಮಂಕು ಕವಿದು ನಾನು ಆದಷ್ಟು ಮೌನಿಯಾದೆ. ಭಯದಿಂದ ಮಲಗಿಕೊಂಡು ಕೊಂಚ ಕೊಂಚವಾಗಿ ಸಾಯ ತೊಡಗಿದೆ. ಮನೆಯ ಕಿಟಕಿಯಿಂದ ನನ್ನ ಕಣ್ಣುಗಳು ಹೊರಗೆ ದೃಷ್ಟಿಸ ತೊಡಗಿದವು. ಮನೆಯ ವಿಶಾಲವಾದ ಕಾಂಪೌಂಡು ನಾನಿಲ್ಲದೆ ಅನಾಥವಾಗಿ ಬಿದ್ದಿತ್ತು. ಹಸಿರು ಜಮಾಖಾನ ಹಾಸಿದಂತೆ ಕಾಣುವ ಲಾನ್ಸ್ ಅಂಗಳವು ನೀರಿನ ಕೊರತೆಯಿಂದ ಹಳದಿ ಬಣ್ಣಕ್ಕೆ ತಿರುಗಿತ್ತು. ಹೂಗಿಡಗಳು ಒಣಗಿ ಸೊರಗಿ ಹೋಗಿದ್ದುವು. ಕುಳಿತುಕೊಳ್ಳಲು ನಿರ್ಮಿಸಿದ ಕಲ್ಲು ಬೆಂಚುಗಳ ಮೇಲೆ ಪಾಚಿ ತುಂಬಿಕೊಂಡಿದ್ದುವು. ತೋಟದ ಸುತ್ತಲೂ ಪಾಪಾಸುಕಳ್ಳಿಗಳು ಬೆಳೆದಿದ್ದುವು. ನಾನು ದಿನಾಲೂ ಕುಳಿತುಕೊಳ್ಳುವ ನನ್ನ ಪ್ರೀತಿಯ ಉಯ್ಯಾಲೆಯತ್ತ ದೃಷ್ಟಿ ಹಾಯಿಸಿದೆ. ನನಗೆ ಆಶ್ಚರ್ಯವೂ ದಿಗಿಲೂ ಏಕಕಾಲದಲ್ಲಿ ಉಂಟಾಯಿತು. ಅವನು ನನ್ನ ಉಯ್ಯಾಲೆಯಲ್ಲಿ ಕುಳಿತು ತೂಗುತ್ತಿದ್ದ. ಬಹಳ ಸಮಯದಿಂದಲೂ ಅವನು ನನ್ನ ಮಲಗುವ ಕೋಣೆಯತ್ತ ದೃಷ್ಟಿಸಿ ನೋಡುತ್ತಿದ್ದ ಎಂದು ತಿಳಿಯಲು ನನಗೆ ತಡವಾಗಲಿಲ್ಲ. ನನ್ನ ಅನುಮತಿಯಿಲ್ಲದೆ ನನ್ನ ಅಂಗಳಕ್ಕೆ ಪ್ರವೇಶಿಸಿ ನನ್ನ ಉಯ್ಯಾಲೆಯಲ್ಲಿ ತೂಗುತ್ತಾ, ನನ್ನತ್ತಲೇ ಗುರಿ ಇಟ್ಟುಕೊಂಡಿದ್ದ. ಆದರೆ ಕೋಣೆಯಲ್ಲಿ ಮಲಗಿ ಕೊಂಡಿರುವುದರಿಂದ ನಾನು ಅವನಿಗೆ ನೇರವಾಗಿ ಕಾಣುವ ಸಾಧ್ಯತೆಯಿಲ್ಲ. ಅವನ ಮೊಂಡು ಧೈರ್ಯದಿಂದ ನಾನೊಮ್ಮೆ ವಿಚಲಿತನಾದೆ. ಅವನ ಆಟ ನನ್ನ ಅಂಗಳದವರೆಗೂ ಬಂತಲ್ಲ ಎಂದು ಗಾಬರಿಗೊಂಡು ನಾನು ಜೋರಾಗಿ ಕೂಗಲು ಬಾಯಿ ತೆರೆದೆ. ಆದರೆ ನನ್ನ ಬಾಯಿಯಿಂದ ಶಬ್ದಗಳೇ ಹೊರಡಲಿಲ್ಲ. ನನ್ನ ನಾಲಗೆಯ ಪಸೆ ಆರಿತು. ಕೈ ಎತ್ತಿ ಕಿಟಕಿಯ ಸರಳಿಗೆ ಬಡಿಯೋಣವೆಂದು ನಾನು ಕೈ ಎತ್ತಲು ಹೋದರೆ ನನ್ನ ಎರಡೂ ಕೈಗಳು ನಿಸ್ತೇಜವಾಗಿದ್ದುವು. ಕಣ್ಣುಗಳು ಮಾತ್ರ
ಚಾಲನೆಯಲ್ಲಿದ್ದು ಮನಸ್ಸು ಎಲ್ಲಾ ವಿಷಯವನ್ನು ಗ್ರಹಿಸುತ್ತಿದ್ದವು. ಬರೇ ದೃಷ್ಟಿಯಿಂದ ಮಾತ್ರ ನಾನು ಅವನನ್ನು ಕೊಲ್ಲಬಲ್ಲವನಾಗಿದ್ದು ಬಾಕಿ ಏನೂ ಮಾಡಲು ನನ್ನಿಂದ ಸಾಧ್ಯವಾಗುತ್ತಿರಲಿಲ್ಲ. ಒಂದು ಅತ್ಯಂತ ಕ್ರೂರ ದೃಷ್ಟಿಯನ್ನು ಅವನತ್ತ ಬೀರಿದೆ. ಅದು ಅವನ ಮೇಲೆ ಯಾವುದೇ ಪರಿಣಾಮವನ್ನು ಬೀಳಿಸಲು ಸಾಧ್ಯವಿಲ್ಲ. ಯಾಕೆಂದರೆ ಅವನು ನನ್ನ ದೃಷ್ಟಿಯ ಮಿತಿಗಿಂತ ದೂರ ಇದ್ದ. ಅವನು ಮತ್ತೆ ನಗುತ್ತಿದ್ದ. ಅವನ ಮೊದಲ ಭೇಟಿಯ ಸಮಯದಲ್ಲಿನ ನಗುವಿನಂತೆ ಈ ನಗುವಿನಲ್ಲೂ ಒಂದು ಆತ್ಮೀಯ ಸೆಳೆತವನ್ನು ಕಂಡೆ. ಆದರೆ ನನ್ನನ್ನು ಈ ದುರವಸ್ಥೆಗೆ ನೂಕಿದ ಅವನ ಮೇಲೆ ನನಗೆ ದ್ವೇಷವಿತ್ತು, ಹಗೆಯಿತ್ತು, ವೈರತ್ವವಿತ್ತು. ಅವನ ನಗುವಿನೊಂದಿಗೆ ರಾಜಿಯಾಗಲು ನನ್ನ ಮನಸ್ಸು ಸುತಾರಾಂ ಒಪ್ಪಲಿಲ್ಲ. ನನ್ನ ವೈರಿಯ ಮುಖವನ್ನು ಮತ್ತೆ ನೋಡಲು ಇಷ್ಟವಿಲ್ಲದೆ ನಾನು ಹಲ್ಲು ಕಚ್ಚಿಕೊಂಡು ಅಸಹಾಯಕನಾಗಿ ಕಣ್ಣು ಮುಚ್ಚಿದೆ.

ಎಚ್ಚರವಾದಾಗ ಅವನು ನನ್ನ ಕಾಲುಗಳಿಗೆ ತಾಗುವಷ್ಟು ಸಮೀಪ ನಿಂತಿದ್ದ. ಅದೇ ನಗುವಿನೊಂದಿಗೆ, ಈಗ ನಾನು ರೆಪ್ಪೆ ಮುಚ್ಚದೆ ಅವನನ್ನೇ ದೃಷ್ಟಿಸ ತೊಡಗಿದೆ. ನಾನು ದುರ್ಬಲನಾಗಿದ್ದೇನೆ ಎಂದು ಯಾವಾಗಲೋ ನನಗೆ ಗೊತ್ತಾಗಿತ್ತು. ಆದುದರಿಂದ ಮುಂದೆ ಬರುವ ಎಲ್ಲಾ ಸನ್ನಿವೇಶಗಳನ್ನು ಎದುರಿಸಲು ನಾನು ಮಾನಸಿಕವಾಗಿ ತಯಾರಾಗಿದ್ದೆ. ಅವನು ಮೊದಲ ಬಾರಿ ಮಾತಾಡಿದ. “ನಾನು ನಿನಗೆ ತುಂಬಾ ತ್ರಾಸ ಕೊಟ್ಟೆ. ಅದಕ್ಕಾಗಿ ಕ್ಷಮೆಯಿರಲಿ. ಆದರೆ ತಿಳಿದುಕೋ. ನಿನ್ನ ನಶ್ವರ ದೇಹಕ್ಕೆ ಮಾತ್ರ ನಾನು ಆಘಾತ ಮಾಡಿದ್ದೇನೆ. ನಿನ್ನ ಆತ್ಮಕ್ಕಲ್ಲ. ಆತ್ಮಕ್ಕೆ ಹುಟ್ಟಿಲ್ಲ, ಸಾವಿಲ್ಲ. ಅದು ಜನ್ಮರಹಿತವಾದದ್ದು, ನಿತ್ಯವಾದದ್ದು ಮತ್ತು ಸದಾ ಅಮರವಾದದ್ದು. ಈ ದೇಹ ನನ್ನದು ಎಂದು ಯೋಚಿಸುವುದರಿಂದ ನಮಗೆ ಹುಟ್ಟು ಸಾವುಗಳಿವೆ ಎಂದು ಭಾವಿಸುತ್ತೇವೆ. ಇದು ಮಾಯೆ. ಈ ಮಾಯೆಯಿಂದ ನೀನು ಹೊರ ಬರಬೇಕು. ನಾನು ಈ ದೇಹವಲ್ಲ, ನಾನು ಜೀವಾತ್ಮ. ಪರಬ್ರಹ್ಮನ ವಿಭಿನ್ನಾಂಶ ಎಂಬ ಅರಿವು ನಿನಗಾದಾಗ ನೀನು ಬ್ರಹ್ಮ ಸಾಕ್ಷಾತ್ಕಾರ ಪಡೆಯುತ್ತಿಯಾ.”

ಅವನ ಪ್ರತೀ ಒಂದು ಮಾತುಗಳು ನನ್ನಲ್ಲಿ ಹೊಸ ಚೈತನ್ಯವನ್ನು ಉಂಟು ಮಾಡಿತು. ಗಂಟಿಕ್ಕಿದ ನನ್ನ ಮುಖ ಅರಳ ತೊಡಗಿತು. ನಾನು ಸಂತೋಷದಿಂದ ಪುಳಕಿತನಾದೆ. ನನ್ನಲ್ಲಿ ಅಡಗಿದ ಜೀವ ಭಯ ಮಾಯವಾಗಿ ನಾನು ನಿರ್ಲಿಪ್ತನಾದೆ. ನಾನು ಅವನ ನಗುವಿನೊಂದಿಗೆ ಭಾಗಿಯಾದೆ. ನನ್ನ ನೋವುಗಳು ಮಾಯವಾಗಿ ನಾನು ನನ್ನದಲ್ಲದ ಈ ನಶ್ಚರ ದೇಹದಿಂದ ಹೊರ ಬರಲು ತವಕಿಸಿದೆ. ಅವನು ಮಾತು ಮುಂದುವರಿಸಿದ.

“ಆತ್ಮದ ಅಸ್ತಿತ್ವವೇ ಸಜೀವ ಮತ್ತು ನಿರ್ಜಿವ ದೇಹಗಳ ನಡುವಣ ವ್ಯತ್ಯಾಸವನ್ನು ತೋರಿಸುತ್ತದೆ. ದೇಹದಿಂದ ಆತ್ಮವು ನಿರ್ಗಮಿಸುತ್ತಿದ್ದಂತೆಯೇ ದೇಹವು ಸಾಯುತ್ತದೆ. ದೇಹಕ್ಕೆ ಬೆಲೆಯಿಲ್ಲ. ಅದು ನಿನ್ನದಲ್ಲ. ಆದರೆ ಆತ್ಮವು ಅಮೂಲ್ಯ, ಆತ್ಮವು ದೇಹಾಂತರವನ್ನು ಹೊಂದುತ್ತದೆ. ನಶ್ವರ ದೇಹದಿಂದ ನೀನು ಹೊರಗೆ ಬಾ, ನನ್ನೊಡನೆ ಲೀನವಾಗು.”

ಅವನು ನನ್ನನ್ನು ಕರೆಯುತ್ತಲೇ ಇದ್ದ. ನನ್ನ ದೇಹದಲ್ಲಿ ಏನೋ ಶಕ್ತಿ ಸಂಚಲನವಾದಂತಾಯಿತು. ನನ್ನ ದೇಹ ಸ್ಪಂದಿಸ ತೊಡಗಿತು. ನನ್ನ ಅಂಗಾಂಗಗಳು ಅಲುಗಾಡ ತೊಡಗಿತು. ನನ್ನ ಎರಡೂ ಕೈಗಳಲ್ಲಿ ಬಲ ಬಂದಂತಾಗಿ ನಾನು ನಿಧಾನವಾಗಿ ಕೈಗಳನ್ನು ಅವನ ಕಡೆ ಚಾಚಿದೆ. ನಿಂತು ಹೋಗಿದ್ದ ನನ್ನ ಮಾತಿಗೆ ಚಾಲನೆ ದೊರಕಿತು. ನಾನಂದೆ “ಗೆಳೆಯಾ, ನನಗೆ ಈ ಬದುಕು ಸಾಕಾಗಿದೆ. ಈ ದೇಹದ ವ್ಯಾಮೋಹವನ್ನು ಬಿಟ್ಟು ಬಿಟ್ಟೆ. ಈ ನಶ್ವರ ದೇಹದಿಂದ ನಾನು ಹೊರಬರಬೇಕಾಗಿದೆ. ನೀನು ನನ್ನನ್ನು ಸ್ವೀಕರಿಸುವ ಮೊದಲು ದಯವಿಟ್ಟು ಹೇಳು ಗೆಳೆಯಾ, ನೀನು ಯಾರು?”

ಅವನು ನನ್ನ ಸನಿಹಕ್ಕೆ ಬಂದ. ಅವನು ಹತ್ತಿರ ಬಂದಂತೆ ನಾನು ಉಲ್ಲಸಿತನಾದೆ. ಅವನ ಪ್ರಥಮ ಸ್ಪರ್ಶಕ್ಕಾಗಿ ನನ್ನ ದೇಹ ತಡಕಾಡುತ್ತಿತ್ತು. ಅವನ ಆತ್ಮೀಯ ನಗುವಿನೊಂದಿಗೆ ನಾನು ಸೇರಿಕೊಂಡು ನಗ ತೊಡಗಿದೆ. ಅವನಂದ “ಗೆಳೆಯಾ, ನಾನು ಸಾವು, ಬದುಕೆಲ್ಲವೂ ನಾನು ಕೊಟ್ಟ ಸಾಲ. ತಿಳಿದುಕೋ, ಸಾವಿಲ್ಲದ ಬದುಕಿಲ್ಲ. ಈ ನಶ್ವರ ದೇಹದ ವ್ಯಾಮೋಹದಿಂದ ನೀನೀಗ ಹೊರಗೆ ಬಂದಿದ್ದೀ. ಬಾ ನನ್ನನ್ನು ಸೇರು.”

ಅವನು ಬಾಗಿ ನನ್ನನ್ನು ಅಪ್ಪಿಕೊಂಡ. ಅವನ ಸ್ಪರ್ಶವಾಗುತ್ತಲೇ ನಾನು ಅವನಲ್ಲಿ ನಿಧಾನವಾಗಿ ಲೀನವಾಗ ತೊಡಗಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಟಿ.ವಿ.
Next post ಸುಂದರ ಮನಸುಗಳು

ಸಣ್ಣ ಕತೆ

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…