ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ ಮತ್ತು ಹುಡುಗಿಯರ ಒಡನಾಟ ಅತಿ ಪ್ರಿಯವಾಗಿದ್ದವು. ಎಂಟನೆಯ ತರಗತಿಯಲ್ಲಿ ಓದುತ್ತಿದ್ದ ಅವನಿಗೆ ವಿದ್ಯೆಯಲ್ಲಿ ಅಷ್ಟೇನು ಅಗಾಧ ಆಸಕ್ತಿ ಇರಲಿಲ್ಲ. ಅವನ ತಂದೆ ಸ್ಮಿತ್, ಮರಕೆಲಸ ಮಾಡುವ ಬಡಗಿಯಾಗಿದ್ದ. ಸ್ಮಿತ್ ಕೂಡ ಅಷ್ಟು ಓದು ಬರಹ ಮುಂದುವರಿಸಿರಲಿಲ್ಲ. ಫ್ರಾಂಕನ ತಾಯಿ ಮೇರಿ ಕ್ರೈಸ್ತ ದೇವಾಲಯದ ಧರ್ಮ ಸಂಬಂಧ ಗಾಯನದಲ್ಲಿ ತೊಡಗಿ ಸಂಪ್ರದಾಯಸ್ಥ ಗೃಹಿಣಿಯಾಗಿದ್ದಳು. ಮೇರಿ, ಸ್ಮಿತ್ ಇಬ್ಬರದೂ ಬಹಳ ಸರಳ ವ್ಯಕ್ತಿತ್ವ, ಆಡಂಬರವಿಲ್ಲದ ಅವರ ಜೀವನವನ್ನು ತುಂಬಿದವ ಅವನ ಮಗ ಫ್ರಾಂಕ್‌ಗೆ ಬಾಲ್ಯದಿಂದಲೂ ಯಾವ ಕೊರತೆಯಿಲ್ಲದೇ ಬೆಳೆಸಿದ್ದರು. ಮೇರಿ, ಸ್ಮಿತ್ ರ ಅನ್ನೋನ್ಯ ಜೀವನ ಬಾಳಿಗೊಂದು ಹಿರಿಮೆ ಕೊಟ್ಟಿತು.
ಸ್ಮಿತ್ ರಜೆಯ ದಿನಗಳಲ್ಲಿ ಹೆಂಡತಿ ಮಗನೊಂದಿಗೆ ಪ್ರೇಕ್ಷಣೀಯ ಸ್ಥಳಗಳಿಗೆ ಹೋಗುತ್ತಿದ್ದ. ಹೆಂಡತಿಯ ಸಂಗೀತ ಕಲೆಯ ಅಭಿವ್ಯಕ್ತಿಗೆ ಮ್ಯೂಸಿಯಂಗಳಿಗೆ, ಪ್ರದರ್ಶನಗಳಿಗೆ ಕರೆದೊಯ್ಯುತ್ತಿದ್ದ. ಫ್ರಾಂಕ್ ಕೂಡ ಅಮ್ಮನ ಸಂಗೀತಪ್ರಿಯತೆ, ರಸಿಕ ಮನೋಭಾವ ಬೆಳೆಸಿಕೊಂಡಿದ್ದ. ಅವನಿಗೆ ಗಿಟಾರ್ ವಾದನದಲ್ಲಿ ಅತೀವ ಆಸಕ್ತಿ ಇದ್ದು ಬ್ರೇಕ್ ಡಾನ್ಸ್ ಮುಂತಾದುವನ್ನು ಮಾಡುತ್ತಿದ್ದ. ಹೆಂಗಳೆಯರ ಸಹವಾಸ ಬಯಿಸುತ್ತಿದ್ದ ಫ್ರಾಂಕನಿಗೆ ಬಲು ಮೃದು ಹೃದಯ. ಅವನಿಗೆ ಅನಿಟಾ ಎಂಬ ಹದಿಮೂರು ವರ್ಷ ವಯಸ್ಸಿನ ಹುಡುಗಿಯ ಸ್ನೇಹವಾಯಿತು. ಅನಿಟಾ ಕೂಡ ಫ್ರಾಂಕ್ ಓದುತ್ತಿದ್ದ ಶಾಲೆಯಲ್ಲಿ ಏಳನೆಯ ತರಗತಿ ಓದುತ್ತಿದ್ದಳು. ಅವಳಿಗೂ ಕಾಲ್ಚಂಡಿನ ಶಲೆಯ ಆಟದ ಸ್ಪರ್ಧೆಗಳನ್ನು ನೋಡುವ ಹುಚ್ಚು. ಅವಳು ಗೆಳತಿಯರೊಡಗೂಡಿ ಫ್ರಾಂಕ್ ಆಡುವಾಗ ಹರ್ಷೋದ್ಧಾರ ಮಾಡಲು ಹೋಗುತ್ತಿದ್ದಳು. ಒಮ್ಮೆ ಸ್ಪರ್ಧೆ ಗೆದ್ದು ಫ್ರಾಂಕ್ ’ಹೀರೋ’ ಆಗಿ ಬರುವಾಗ ಅವನನ್ನು ಸಂಧಿಸಿ ಮಾತನಾಡಿಸಿ ಅಭಿನಂದಿಸಿದ್ದಳು. ಹಾಗೆ ಅವರ ಗೆಳೆತನ ಆರಂಭವಾಗಿ ಬೆಳೆಯತೊಡಗಿತು.
“ನಾವು ನಾಳೆ ಮಧ್ಯಾಹ್ನ ಲಂಚಿಗೆ ಪೀಡ್ಜಾ ಹಟ್‌ಗೆ ಹೋಗೋಣ” ಎಂದ ಫ್ರಾಂಕ್.
ಅನಿಟಾಗೆ ಅವನ ಜೊತೆಯಲ್ಲಿ ಹೋಗುವುದಕ್ಕೆ ಏನೂ ಸಂಕೋಚವಿರಲಿಲ್ಲ. ಒಡನೆ ಒಪ್ಪಿಕೊಂಡು “ಧನ್ಯವಾದಗಳು. ಬರುತ್ತೇನೆ” ಎಂದಳು.
“ನೀನು ನಾಳೆ ನಿನ್ನ ಬೆಸ್ಟ್ ಡ್ರೆಸ್‌ನಲ್ಲಿ ಬರುತ್ತೀಯ?”
“ಪಿಂಕ್ ಬಣ್ಣ ಇಲ್ಲ ನೀಲಿ ಬಣ್ಣದ ಡ್ರೆಸ್ ಧರಿಸಲೇ?” ಎಂದಳು ಅನಿಟಾ.
“ನೀನು ಪಿಂಕ್ ಬಣ್ಣದಲ್ಲಿ ಬಲು ಸುಂದರವಾಗಿ ಕಾಣುತ್ತಿ, ನಿನ್ನ ಹೊಳಪಿನ ಕಣ್ಣು ಅದರಲ್ಲಿ ಇನ್ನಷ್ಟು ಕಾಂತಿಯುತವಾಗಿರುತ್ತದೆ. ನಿನ್ನ “ಬ್ಲಾಂಡ್” ಕೂದಲು ಕೂಡ ಎತ್ತಿ ಬೋನಿ ಕಟ್ಟಬೇಡ ಹಾಗೇ ಬಿಟ್ಟು ಬಾ ನಿನ್ನ ಭುಜದ ಮೇಲೆ ಹಾರಾಡುತ್ತಿದ್ದರೆ, ಅದು ಬಲು ಚೆನ್ನ” ಅಂದ ಫ್ರಾಂಕ್.
“ಹಾಗೇ ಆಗಲಿ ಫ್ರಾಂಕ್. ಈಗ ಹೊರಡೋಣವೇ?” ಎಂದು ಅನಿಟಾ ಅಂದಾಗ ಫ್ರಾಂಕ್ ಬಾಚಿ ತಬ್ಬಿ ಅವಳಿಗೆ ಬೀಳ್ಕೊಡಿಗೆಯ ಮುತ್ತನಿಟ್ಟ. ಅದು ಅವರಿಬ್ಬರಿಗೆ ಪರಿಚಯವಾದ ಮೇಲಿನ ಮೊದಲ ಸಂದರ್ಶನದ ಮೊದಲ ಮುತ್ತು, ಅನಿಟಾಳ ಕೆನ್ನೆಯಲ್ಲಿ ಗುಲಾಬಿ ಮೂಡಿ ಮುಖವರಳಿ ಫ್ರಾಂಕನನ್ನು ಹೃದಯದಲ್ಲಿಟ್ಟು ಆರಾಧಿಸಿತು. ಅಂದು ರಾತ್ರಿ ಅನಿಟಾ ಕನಸಿನಲ್ಲಿ ಫ್ರಾಂಕಿನ ಅಪ್ಪುಗೆಯಲ್ಲಿ ಕಳೆದಳು. ಫ್ರಾಂಕಿಗೂ ಅನಿಟಾ ಅವನ ಹೃದಯವನ್ನು ಆವರಿಸಿ ನಿದ್ರೆ ಕೆಡಿಸಿದಳು. ಕಿಶೋರ ಹೃದಯದ ಪ್ರೀತಿ ಅಂಕುರಿಸಿ ಅವರ ಮೈಮರೆಸ್ಮಿತ್ತು.
ಮಾರನೆಯ ದಿನ ಶಾಲೆಗೆ ಬಂದ ಮೇಲೆ ಅವರಿಗೆ ಡೇಟಿಂಗ್ದೇ ಚಿಂತೆ, ಶಾಲೆಯ ಪಾಠ ಪ್ರವಚನದಲ್ಲಿ ಯಾವ ಆಸಕ್ತಿಯೂ ಇರಲಿಲ್ಲ. ಲಂಚ್ ಟೈಮು ಬಂದೊಡನೆ ಇಬ್ಬರೂ ಒಂದೇ ಬೈಕಿನ ಮೇಲೆ ಪೀಡ್ಜಾ ಹಟ್‌ಗೆ ಹೊರಟರು. ಅನಿಟಾಳನ್ನು ಮುಂದೆ ಕೂಡಿಸಿಕೊಂಡು ಪೆಡಲ್ ತುಳಿಯುತ್ತಿದ್ದ ಫ್ರಾಂಕಿನ ತುಟಿಗಳಿಗೆ ಅನಿಟಾಳ ಹಾರುವ ಬಂಗಾರದ ಕೂದಲು ಮುತ್ತಿಡುತಿತ್ತು ಅವಳ ಕಿವಿಯು ಹತ್ತಿರಕ್ಕೆ ಬೈಕು ತುಳಿಯುತ್ತ ಬಾಗಿ ಬಾಗಿ ಅವಳಿಗೇನೋ ಪ್ರೀತಿಯ ಮಾತುಗಳನ್ನಾಡಿ ಪಿಸುಗುಟ್ಟುತ್ತಿದ್ದ. ಅನಿಟಾ ಉದ್ರೇಕಿತಳಾಗಿ ಕಿಸಿ ಕಿಸಿ ನಗುತ್ತಿದ್ದಳು. ಪೀಡ್ಜಾ ಹಟ್‌ನಲ್ಲಿ ಒಂದು ಮೂಲೆಗೆ ಎರಡು ಪ್ರೇಮ ಪಕ್ಷಿಗಳಂತೆ ಕುಳಿತು ಒಂದೇ ಪ್ಲೇಟಿನಲ್ಲಿ ಪೀಡ್ಜಾ ಮೆಲ್ಲುತ್ತಾ ತಮ್ಮ ಹೃದಯವನ್ನು ತುಂಬಿಕೊಂಡರು.
ಅವರಿಗೆ ಸಮಯದ ಪರಿವೆಯೇ ಇರಲಿಲ್ಲ ಅವರ ಬಾಲಿಶ ಜಗತ್ತಿನ ಮುಗ್ಧ ಮಾತುಗಳ ಸಿಗ್ಧ ಸ್ನೇಹದಲ್ಲಿ ಎಲ್ಲವೂ ತಿಳಿಯಾಗಿ ತೆಳುವಾಗಿ ತೆರೆದುಕೊಂಡಿತ್ತು ಅವರ ಮನದಾಳ.
ಗೆಳೆಯ ಪೀಟರ್ ಬಂದು “ಶಾಲೆಗೆ ಚಕ್ಕರಾ ?” ಎಂದು ಕೇಳಿದಾಗ ಎಚ್ಚೆತ್ತು ಇಬ್ಬರೂ ಶಾಲೆಗೆ ಬೈಕಿನಲ್ಲಿ ದೌಡಾಯಿಸಿದರು.
ಡಿಸೆಂಬರ್ ತಿಂಗಳು ಬರುವ ಮುಂಚೆ ಕ್ರಿಸ್‌ಮಸ್‌ಗೆ ಎಲ್ಲಾ ಸಿದ್ಧತೆಗಳು ಫ್ರಾಂಕ್ ಮತ್ತು ಅನಿಟಾಳ ಕುಟುಂಬದಲ್ಲಿ ನಡೆದಿತ್ತು. ಫ್ರಾಂಕ್ ತಂದೆ ತಾಯಿ ಕೂಡ ಫ್ರಾಂಕ್‌ನ ಗೆಳತಿ ಅನಿಟಾಳ ಬಗ್ಗೆ ಮೃದುಮನಸ್ಕರಾಗಿದ್ದರು. ಬರ್ಮಿಂಗ್ ಹ್ಯಾಮ್‌ನಲ್ಲಿದ್ದ ದೊಡ್ಡ ಸಿಟಿ ಸೆಂಟರ್‌ಗೆ ಫ್ರಾಂಕ್ ಮತ್ತು ಅನಿಟಾ ಹೊರಟರು. ಸೋಲಿಹಲ್‌ನ ವಿಡ್ನಿಮಾನರ’ನಲ್ಲಿ ರೈಲನ್ನು ಹಿಡಿದರು. ಇಬ್ಬರೂ ರೈಲಿನಲ್ಲಿ ಕುಳಿತು ಅರ್ಧ ತಾಸು ಮಾತನಾಡಿಕೊಂಡು ತಮ್ಮದೇ ಆದ ಜಗತ್ತಿನಲ್ಲಿದ್ದರು. ರೈಲಿನಲ್ಲಿ ಬಂದ ಕಾಫಿ ಸ್ನಾಕ್ಸ್ ಪರಿವೆ ಕೂಡ ಅವರಿಗಾಗಲಿಲ್ಲ. ಬರ್ಮಿಂಗ್ ಹ್ಯಾಮ್ ಸಿಟಿ ಸೆಂಟರ್ ಬಂದಾಗ ಹೆಗಲ ಮೇಲೆ ಕೈ ಹಾಕಿಕೊಂಡು ಇಬ್ಬರೂ ಷಾಪಿಂಗ್ ಹೊರಟರು. ಫ್ರಾಂಕ್, ಅನಿಟ ಇಬ್ಬರೂ ತಮ್ಮ ತಮ್ಮ ಪಾಕೆಟ್ ಮನಿಯನ್ನು ಪರಸ್ಪರ ಕ್ರಿಸ್‌ಮಸ್ ಪ್ರೆಸೆಂಟ್ಸ್ ಕೊಳ್ಳಲು ತಂದಿದ್ದರು. ಆತ್ಮೀಯರಿಗೆ, ತಂದೆ ತಾಯಿಗೆ ಮತ್ತು ಪ್ರಿಯಕರನಿಗೆ ಅನಿಟಾ ಪ್ರೆಸೆಂಟ್ಸ್ ನ್ನು ಕೊಂಡಳು. ಫ್ರಾಂಕ್‌ಗೆ ಕೊಡುವ ಪ್ರೆಸೆಂಟನ್ನು ಅವನಿಗೆ ತೋರಿಸದೆ ಸರಪ್ರೈಸ್ ಮಾಡಬೇಕೆಂದಿದ್ದಳು. ಫ್ರಾಂಕ್ ಮಾತ್ರ ಅವಳಿಗೆ ಯಾವುದು ಪ್ರಿಯವೆಂದು ತಿಳಿದುಕೊಂಡು ಕೊಂಡುಕೊಂಡ.
ಇಬ್ಬರೂ ಟಾಫಿಗಳನ್ನು , ಚಾಕಲೇಟಗಳನ್ನು ಮಕ್ಕಳಂತೆ ಚಪ್ಪರಿಸುತ್ತಾ ಷಾಪಿಂಗ್ ಬ್ಯಾಗನ್ನು ಹಿಡಿದುಕೊಂಡು ಮತ್ತೆ ರೈಲು ಹತ್ತಿ ಮನೆ ಸೇರಿದರು.
ಅನಿಟಾಳ ಮನೆಯಲ್ಲಿ ಕ್ರಿಸ್‌ಮಸ್ ಮರವನ್ನು ಇಟ್ಟು ಬಲು ಅದ್ದೂರಿಯಿಂದ ಅಲಂಕಾರಮಾಡಿ ಅದಕ್ಕೆ ಅನೇಕ ಕಾಣಿಕೆಗಳನ್ನು ತೂಗು ಹಾಕಿದರು, ವಿದ್ಯುತ್ ಕಲರ್ ಬಲ್ಬಗಳಿಂದ ಮನೆಯ ಎಲ್ಲಾ ಭಾಗ ಅಲಂಕರಿಸಿದರು. ಶಾಲೆಯ ಅನೇಕ ಸಹಪಾಠಿಗಳು, ಗೆಳೆಯ ಗೆಳತಿಯರು ಬಂದಿದ್ದರು.
ಅನಿಟಾಳ ಕೇಂದ್ರ ಬಿಂದು ಫ್ರಾಂಕ್ ಆಗಿದ್ದ. ಕ್ರಿಸ್‌ಮಸ್‌ಗೆ ಮಾಡಿದ ಹಲವಾರು – ಸಿಹಿ ಖಾದ್ಯಗಳು, ಕೇಕ್ ಗಳು, ಚಾಕಲೇಟ್ ಬೊನನ್ ಜಾಗಳು, ಪಾನೀಯಗಳು ಹಲವಾರು ಇದ್ದವು. ಅಂದು ಅವರಿಬ್ಬರೂ “ಚೀರ್‍ಸ್” ಹೇಳಿ ರೆಡ್ ವೈನ್‌ನನ್ನು ಸವೆದಿದ್ದರು. ಫ್ರಾಂಕ್ ಅನಿಟಾಳಿಗೆ ಎದೆಯ ಮೇಲೆ ಧರಿಸುವ ಹರಳಿನ ಬೀಚ್‌ನ್ನು ಕಾಣಿಕೆಯಾಗಿ ಕೊಟ್ಟಿದ್ದ ಅವನ ಪ್ರೀತಿಯ ಅಮಲಿನಲ್ಲಿ ಕಳೆದ ಸಮಯವೇ ತಿಳಿಯಲಿಲ್ಲ. ಬೀಳ್ಕೊಡುವಾಗ ಅನಿಟಾ ಫ್ರಾಂಕ್‌ನ ಕೈಗಟ್ಟಿಯಾಗಿ ಹಿಡಿದು ತಬ್ಬಿಕೊಂಡು ಗುಡ್‌ನೈಟ್ ಹೇಳಿದಳು. ಫ್ರಾಂಕ್ ಮತ್ತೆ ಅವಳಿಗೆ ಮುತ್ತಿಕ್ಕಿ ಗುಡ್ನೈಟ್ ಹೇಳಿ ಹೊರಟ.
ಅನಿಟಾಳು ಹತ್ತನೆಯ ತರಗತಿಗೆ ಬರುವ ಹೊತ್ತಿಗೆ ಫ್ರಾಂಕ್ ಐರ್‌ಲೆಂಡಿನ ಡಾಕ್‌ನಲ್ಲಿ ಹಡಗು ಕಟ್ಟುವ ಕೆಲಸಕ್ಕೆ ಸೇರಿದ್ದ, ಅವರದು ಈಗ ದೂರವಾಣಿ ಇ-ಮೇಯಿಲ್ ಮೂಲಕ ಅವರ ಪರಸ್ಪರ ಸಂಪರ್ಕ ನಡೆಯುತಿತ್ತು. ಹೀಗೆ ಎರಡು ವರ್ಷಗಳು ಸಂದಾಗಲೂ ಅವರ ಪ್ರೀತಿಯಲ್ಲಿ ವ್ಯತ್ಯಾಸವಾಗಲಿಲ್ಲ. ದೇಹಗಳು ದೂರವಾದಾಗಲೂ ಹೃದಯಗಳು ಹತ್ತಿರವಾಗಿದ್ದವು. ಕಿರಿಯ ತನದಲ್ಲಿ ಅಂಕುರಿಸಿದ್ದ ಅವರ ಪ್ರೀತಿ ಈಗ ಬಲಗೊಂಡು ಇಬ್ಬರೂ ಒಬ್ಬೊರನ್ನೊಬ್ಬರು ಅರಿತು ಮದುವೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದರು.
ಕ್ರಿಸ್‌ಮಸ್ ರಜೆಗೆಂದು ಬಂದ ಫ್ರಾಂಕ್ ಅನಿಟಾಳನ್ನು ಮದುವೆಯಾಗಿ ಐರ್‌ಲೆಂಡಿಗೆ ಕರೆದೊಯ್ದ. ಇಂಗ್ಲೆಂಡಿನಲ್ಲಿ ಮಧುಚಂದ್ರ ಮುಗಿಸಿ ಬಂದ ಫ್ರಾಂಕ್, ಅನಿಟಾ ಈಗ ತಮ್ಮ ತಮ್ಮ ಕೃತಿಗಳಲ್ಲಿ ಸೆಟಲ್ ಆಗಿದ್ದರು. ಅನಿಟಾ ಚಿಕ್ಕ ಮಕ್ಕಳಿಗೆ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಳು. ಫ್ರಾಂಕ್ ಈಗ ನಾವಿಕನಾಗಿ ಹಡಗಿನಲ್ಲಿ ದೇಶ ದೇಶಗಳನ್ನು ಸುತ್ತಿ
ಬರುತ್ತಿದ್. ಅವರ ಸಂಸಾರ ಈಗ ಬೆಳದು ಜಾನ್ ಮತ್ತು ಟೋನಿ ಹುಟ್ಟಿದ್ದರು. ಹಲವಾರು ತಿಂಗಳು ಫ್ರಾಂಕ್ ಊರಿನಲ್ಲಿ ಇರುತ್ತಿರಲಿಲ್ಲ. ಇಬ್ಬರು ಮಕ್ಕಳನ್ನು ಇಟ್ಟು ಕೊಂಡು ಎಲ್ಲವನ್ನೂ ಒಬ್ಬಳೇ ನಿಭಾಯಿಸುತ್ತಿದ್ದ ಅನಿಟಾಳಿಗೆ ಒಮ್ಮೊಮ್ಮೆ ಫ್ರಾಂಕಿನ ಮೇಲೆ ಅತೀವ ಕೋಪ ಬರುತಿತ್ತು. ಸಂಸಾರದ ಜವಾಬ್ದಾರಿಯನ್ನು ಹಂಚಿಕೊಳ್ಳದೇ ದೂರ ದೇಶಗಳಿಗೆ ಹೋಗುವ ಫ್ರಾಂಕ್‌ನ ಬಗ್ಗೆ ಜಿಗುಪ್ಸೆ ಆದುದೂ ಉಂಟು. ತಮ್ಮ ಸಂಸಾರ ಒಂಟಿಗಾಲಿಯ ಮೇಲೆ ಇನ್ನು ಸಾಗದು ಅನಿಸಿದಾಗ ಅವಳ ಹೃದಯ ಸಹೃದಯಿ ರಸಿಕನನ್ನ ಅರಸಿದ್ದು ಉಂಟು. ತನ್ನ ಶಾಲೆಯಲ್ಲಿ ಸಹದ್ಯೋಗಿಯಾಗಿದ್ದ ಮಿಸ್ಟರ್ ಸ್ಟೀವನ್‌ಸನ್ ಇವಳಿಗೆ ಬಲು ಮೆಚ್ಚಿಗೆಯಾಗಿ ಹತ್ತಿರದ ಗೆಳೆಯನಾಗಿದ್ದ. ಅನಿಟಾ ಮನಸ್ಸು ಒಮ್ಮೊಮ್ಮೆ ವಿಚಲಿತವಾಗುತ್ತಿತ್ತು. ಫ್ರಾಂಕ್ ಜೊತೆಯ ದಾಂಪತ್ಯಕ್ಕೆ ವಿದಾಯ ಹೇಳುವ ಸಮಯ ಬಂದಿದೆಯೇ ಎಂದು ಚಿಂತಿಸಿದ್ದು ಉಂಟು. ಫ್ರಾಂಕ್ ಆಗಾಗ ಅನಿತಾಳನ್ನು ಭೇಟಿ ಮಾಡಲು ಬಂದಾಗ ಗೆಳತಿ ಮೇರಿಯೊಂದಿಗೆ ಬರುತ್ತಿದ್ದ. ಅವಳು ಅವನಿಗಿಂತ ಅರ್ಧ ವಯಸ್ಸಿನಲ್ಲಿ ಚಿಕ್ಕವಳಾಗಿದ್ದಳು. ಅವರ ಪರಸ್ಪರ ಆತ್ಮೀಯತೆ ಇವಳಿಗೆ ಅಸೂಯೆ ಹುಟ್ಟಿಸುತಿತ್ತು. ಫ್ರಾಂಕ್, ಅನಿಟಳ ನಡುವೆ ಒಂದು ಬಗೆಯ ಮೋಡದ ತೆರೆ ಕವಿದಿತ್ತು. ಮುರಿದುಬೀಳುವ ಸೇತುವೆಯಂತೆ ಅವರ ಹೃದಯಗಳು ಅಧೀರವಾಗುತಿದ್ದವು. ತಮ್ಮ ಕನಸಿನ ಗಾಳಿಪಟ ಛಿದ್ರಪದ್ರವಾಗುವ ಆತಂಕವೂ ಇಬ್ಬರಿಗೂ ಬೆಳೆಯುತ್ತಾ ಬಂದಿತ್ತು. ಇಬ್ಬರೂ ಒಂಟಿಜೀವಿಗಳಾಗಿ ದೂರ ದೂರ ಇದ್ದು ತಮ್ಮ ತಮ್ಮ ಗೆಳೆಯ, ಗೆಳತಿಯರಲ್ಲಿ ಆತ್ಮೀಯತೆ ಕಾಣುತ್ತಿದ್ದರು. ಪರಸ್ಪರರಿಗೆ ಸಹಾನುಭೂತಿ, ಸಹಕಾರ, ಸ್ನೇಹ ಪ್ರೀತಿ ಅವರ ಬಾಳಿನಲ್ಲಿ ಬತ್ತುವುದೇನೋ ಅನ್ನಿಸುತಿತ್ತು. ಅವರ ಪ್ರೀತಿಯ ಅಮೃತದ ಬಟ್ಟಲು ಬತ್ತದಂತೆ ಕಾಪಾಡಬೇಕಿತ್ತು. ಅವರ ಆತಂಕಗಳು, ಅಸೂಯೆಗಳು, ಏಕಾಕಿತನ, ಸಂದರ್ಭ ಸನ್ನಿವೇಶದಿಂದ ಅವರ ನಡುವೆ ಏರ್‍ಪಟ್ಟ ವಿರಹ ಭಾವಗಳು ಮತ್ತೆ ಮತ್ತೆ ಹೃದಯದ ಪ್ರೀತಿಯು ಚಿಲುಮೆಯಲ್ಲಿ ಚೈತನ್ಯ ಪಡೆಯುತ್ತಿದ್ದವು. ಸಣ್ಣ ಪುಟ್ಟ ಜಗಳ, ಕದನ, ವಾದ ವಿವಾದ, ಬಿರುಕು, ತೊಡಕುಗಳು ಅವರ ಸಂಸಾರದ ರಥದ ಮುನ್ನಡೆಗೆ ಅಡ್ಡಿ ತರುವಂತೆ ಅನಿಸಿದಾಗ, ಅನಿಟಾ, ಫ್ರಾಂಕ್‌ನ ಬಳಿ ಅದರ ಬಗ್ಗೆ ಪ್ರಸ್ತಾಪ ಮಾಡಿದ್ದಳು.
“ನಿನಗೆ ಮೇರಿಯ ಬಗ್ಗೆ ಇರುವ ಭಾವನೆ ಏನು ? ಅದು ನನ್ನ ಮನಸ್ಸನ್ನು ಕಾಡುತ್ತಿದೆ. ನಿನಗೆ ನನ್ನಲ್ಲಿ ಆಸಕ್ತಿ ಕುಂದಿದೆಯೇ? ನಾವು ಹೀಗೆ ದೂರ ಇದ್ದು ದೂರವಾಗಿ ಬಿಡುವುದೇ ?” ಎಂದು ಕಂಬನಿಗರೆದಿದ್ದಳು.
“ಸ್ಟೀವನ್ಸನ್ ನಿನಗೆ ಆತ್ಮೀಯ ಗೆಳೆಯನಾಗಿಲ್ಲವೇ? ನನಗೆ ಅದರ ಬಗ್ಗೆ ಯಾವ ಸಂಶಯ ಅಸೂಯೆ ಇಲ್ಲ. ನಮ್ಮ ನಡುವೆ ಇವರು ಅಡ್ಡಗೋಡೆಯಾಗಿ ಎಂದಿಗೂ ಬರಲಾರರು. ನಾವು ಇಬ್ಬರೂ ಒಂಟಿತನವನ್ನು ಸಹಿಸಲಾರದೆ ಗೆಳೆಯ, ಗೆಳತಿಯನ್ನು ಬಯಸಿದ್ದೇವೆ ಅಷ್ಟೇ, ನಿನ್ನ ಕೋಮಲ ಹೃದಯದ ಕಲ್ಪನೆಯಲ್ಲಿ ನನ್ನ ಕಟುಕನನ್ನಾಗಿ ಮಾಡಬೇಡ, ನಾನು ಯಾವಾಗಲೂ ನಿನಗಾಗಿ, ನೀನು ಹಾಗೇ ನನಗಾಗಿ, ನಮ್ಮ ವೃತ್ತಿ ನಮ್ಮನ್ನು ದೂರ ಇರಿಸಿದೆ. ಇನ್ನು ಸ್ವಲ್ಪ ದಿನ ಅಷ್ಟೇ, ನಂತರ ನಾನು ಇಲ್ಲಿಗೇ ಬಂದು ಬಿಡುತ್ತೇನೆ” ಎಂದು ಆಶ್ವಾಸನೆನಿತ್ತ ಫ್ರಾಂಕ್. ಫ್ರಾಂಕ್‌ನ ಆಶ್ವಾಸನೆಯ ಬಿಸು ಅಪ್ಪುಗೆಯಲ್ಲಿ ಅವರ ಬಾಂಧವ್ಯ ಮತ್ತಷ್ಟು ಬಿಗಿಯಾಗಿ ಹೆಣೆದುಕೊಂಡು ಪುಟಕ್ಕಿಟ್ಟ ಚಿನ್ನವಾಯಿತು. ಹೀಗೆ ಹತ್ತು ಹಲವು ಒಡಕು ತೊಡಕುಗಳು ಅವರ ಬಾಳಿನಲ್ಲಿ ಬಾರದೇ ಇರಲಿಲ್ಲ. ಎಲ್ಲದಕ್ಕೂ ಅವರಲ್ಲಿ ಪರಸ್ಪರ ಅರ್ಥೈಸುವ ವಿನಿಮಯವಿತ್ತು. ಸೇತುವೆಗಳು ಮುರಿಯದಂತೆ ಜೋಡಿಸುವ ಕಲೆ, ಸಕಾರಾತ್ಮಕ ಚಿಂತನೆ ಅವರ ಬುದ್ದಿಯದಾಗಿತ್ತು. ಪ್ರೀತಿಯ ದೋಣಿಯಲ್ಲಿ ತೇಲುವ ಅವರ ಹೃದಯ ದೂರಗಳನ್ನು ಮೆಟ್ಟುವ ದಾರಿಗಳನ್ನು ಕಂಡುಕೊಂಡಿತು.
ಇವರ ಬೆಳೆದ ಮಕ್ಕಳು ಜಾನ್ ಮತ್ತು ಟೋನಿ ಮದುವೆಯಾಗಿ ಅವರು ಕಾರಡಿಫ್, ವಾರಿಂಗಟನ್‌ನಲ್ಲಿರುತ್ತ ತಮ್ಮ ಸಂಸಾರದಲ್ಲಿ ತೊಡಗಿದ್ದರು. ಅನಿಟಾ ತನ್ನ ಶಿಕ್ಷಕ ವೃತ್ತಿ ತೊರೆದು ಫ್ರಾಂಕ್ ಅನ್ನು ಸೇರಿ ಸಾಕಷ್ಟು ವರ್ಷಗಳು ಸಂದಿದ್ದವು. ಅವರು ಈಗ ಬಾಳಿನ ಎಪ್ಪತ್ತೆಂಟು ವಸಂತಗಳನ್ನು ಪೂರೈಸಿದ್ದರು. ಈಗಲೂ ಗೂಡಿನ ಹಕ್ಕಿಗಳಂತೆ ಒಬ್ಬರಿಗೆ, ಇನ್ನೊಬ್ಬರು ಊರುಗೋಲಾಗಿ ತಮ್ಮ ಎಪ್ಪತ್ತೆಂಟನೆಯ ಮದುವೆಯ ಆನಿವರ್ಸರಿ ಮಾಡುವ ಸಂಭ್ರಮದಲ್ಲಿದ್ದರು. ಈಗ ಅನಿಟಾಳಿಗೆ ತೊಂಭತ್ತೇಳು ವರ್ಷ, ಫ್ರಾಂಕ್‌ಗೆ ತೊಂಭತ್ತೆಂಟು. ಅವರು ಬ್ರಿಟನ್‌ನಲ್ಲಿ “ಲಾಂಗೆಸ್ಟ್ ಮ್ಯಾರೀಡ್ ಲಿವಿಂಗ್ ಕಪಲ್” ಎಂದೆನಿಸಿಕೊಂಡು ತಮ್ಮ ಎಪ್ಪತ್ತೆಂಟರ ಮದುವೆಯ ಆನಿವರ್ಸರಿ ಉತ್ಸವವನ್ನು ಸಂತಸದಿಂದ ಆಚರಿಸಿದ್ದರು.
ಬ್ರಿಟನ್‌ನಲ್ಲೂ ಭಾರತದಂತೆ ದಂಪತಿಗಳು ವಿಚ್ಛೇದನದ ಸೋಂಕಿಲ್ಲದೆ ದಾಂಪತ್ಯದ ಬಿಗಿ ಭದ್ರತೆಯನ್ನು ಕಾಪಾಡಿಕೊಂಡು ಜೀವನ ಸಾಗಿಸಿ ಮಾದರಿಯಾದ ಫ್ರಾಂಕ್, ಅನಿಟಾ ಮೊನ್ನೆ ಲಂಡನ್ ವೃತ್ತಪತ್ರಿಕೆಯ ವರದಿಯಲ್ಲಿ ನಾಯಕ ನಾಯಕಿಯರಾಗಿ ಶತಮಾನವನ್ನು ಕಳೆಯುವ ಆಶಯವನ್ನು ವ್ಯಕ್ತಪಡಿಸಿದ್ದರು. “ನಿಮ್ಮ ಸುಧೀರ್ಘ ಸಂತಸದ ದಾಂಪತ್ಯದ ಗುಟ್ಟೇನು?” ಎಂದು ಪತ್ರಕರ್ತರು ಕೇಳಿದಾಗ ಜಗತ್ತಿನ ದಂಪತಿಗಳಿಗೆ ಇದು ನಮ್ಮ ಸಂದೇಶ- “ಪರಸ್ಪರ ಪ್ರೀತಿ, ಸ್ನೇಹ ವಿನಿಮಯ, ಅದೇ ಬತ್ತದ ಹರ್ಷದ ಹೊನಲು” ಎಂದಿದ್ದರು.