ಕತ್ತಲು!
ಶಬರಿ ಕಾಯುತ್ತಿದ್ದಾಳೆ!
ಅದೊಂದು ಹಟ್ಟಿ ಸುಮಾರು ಮೂವತ್ತಕ್ಕೂ ಹೆಚ್ಚು ಗುಡಿಸಲುಗಳು ಇರಬಹುದು. ಬುಡಕಟ್ಟಿನ ಜನ ವಾಸಮಾಡುವ ಈ ಹಟ್ಟಿ ಮೂಲ ಊರಿಗೆ ಸಮೀಪದಲ್ಲೇ ಇದೆ. ಆದರೆ ಆಚಾರ ವಿಚಾರಗಳಲ್ಲಿ ತನ್ನದೇ ರೂಪ ಪಡಕೊಂಡು ಲಾಗಾಯ್ತಿಂದ ಅನುಸರಿಸ್ಕೊಂಡು ಬರ್‍ತಾ ಇದೆ. ಈ ಆಚಾರ-ಆಚರಣೆಗಳ ವಕ್ತಾರನಂತೆ ಪೂಜಾರಪ್ಪ ಇದಾನೆ. ಆತನ ಮತು ಅಂದ್ರೆ ಅದೇ ವೇದ-ವಿಚಾರ ಎಲ್ಲಾ ಅನ್ನಬಹುದು. ಪೂಜಾರಪ್ಪನನ್ನ ಬಿಟ್ಟರೆ ತಿಮ್ಮರಾಯಿ ಮಾತಿಗೆ ಇಲ್ಲಿ ಮನ್ನಣೆ; ಗೌರವ. ಈ ತಿಮ್ಮರಾಯಿ ಹಟ್ಟೀಗೆಲ್ಲ ಹಿರಿಯ. ನಿಯತ್ತಿನ ನಡವಳಿಕೆ. ತುಟಿ ಮೀರದ ಮಾತು. ಬುಡಕಟ್ಟಿನ ಬದುಕೇ ತುಂಬಿಕೊಂಡಂಥ ಮನುಷ್ಯ. ಈತನ ಮಗಳೇ ಶಬರಿ. ಹುಟ್ಟಿದ ಕೂಡಲೇ ತಾಯೀನ ಕಳಕೂಂಡು ತಂದೆ ತಿಮ್ಮರಾಯಿ ಹೇಳ್ದಂತ ಕೇಳ್ಳೂಂಡು ಬೆಳೆದ ಕೂಸು; ಈಗ ಯುವತಿ. ಶಬರಿ ಅನ್ನೊ ಹಸರು ರೂಢೀಲಿ ಬಂದದ್ದು. ಅದೂ ಅಪ್ಪನ ಬಾಯಿಂದ. ಶಬರಿ ರಾಮನ ಆಗಮನಕ್ಕೆ ಅಂತ ಕಾದ ಕತೇನ ಯಾವಾಗ್ಲೂ ಹೇಳ್ತಿದ್ದ ತಿಮ್ಮರಾಯಿ- ‘ಯಾರೂ ಆತ್ರ ಬೀಳ್‌ಬಾರ್‍ದು’- ಅಂತ ಒತ್ತಾಯ ಮಾಡ್ತಿದ್ದ ‘ನೀತಿ, ಇಟ್ಕಂಡು ಕಾಯ್ತಾ ಇದ್ರೆ ಒಳ್ಳೇದು ಆಗೇ ಆಗುತ್ತೆ’ ಅನ್ನೋದು ತಿಮ್ಮರಾಯಿಯ ನಂಬಿಕೆ. ಇದನ್ನೇ ತನ್ನ ಮಗಳಿಗೂ ಹೇಳ್ತಾ ಬಂದ. ತನಗೆ ತುಂಬಾ ಇಷ್ಟವಾದ ಶಬರಿ ಹಸರಿನಿಂದ್ಲೇ ಮಗಳನ್ನ ಕರೆದ.
ಆದರೆ ಅದೇ ತಿಮರಾಯಿ ಇವತ್ತು ಇಲ್ಲ!
ಆತನನ್ನು ಮಣ್ಣುಮಾಡಿ ಬಂದು ಹಟ್ಟಿಗೆ ಹಟ್ಟಿಯೇ ಕತಲಲ್ಲಿ ಕೂತಿದೆ. ಈ ಕತ್ತಲಲ್ಲಿ-ಶಬರಿಯ ಕಣ್ಣಂಚಿನಲ್ಲಿ ಉಕ್ಕೋ ದುಃಖ ಬೇರೆಯವರಿಗೆ ಕಾಣಿಸದೆ ಇದ್ರೂ ಮನಸಿಗೆ ಮಾತ್ರ ತಟ್ಟಿದೆ. “ಅತ್ರೆ ಸತ್ತೋರ್ ಎದ್ ಬರಲ್ಲ ಶಬರಿ. ನಿಮಪ್ಪಾನೇ ಯೇಳ್ತಾ ಇರ್‍ಲಿಲ್ವ ಒಳ್ಳೇ ದಿನಕ್ಕೆ ಕಾಯ್ಬೇಕು ಅಂಬ್ತ. ಶಬರೀನೇ ಕಾಯ್ದಿದ್ರೆ ಇನ್ ಯಾರ್ ಕಾಯ್ತಾರೆ ಯೇಳು”-ಎಂದು ಪೂಜಾರಪ್ಪ ಹೇಳಿ ಎದ್ದ ಮೇಲೆ ಎಲ್ಲರೂ ತಂತಮ್ಮ ಗುಡಿಸಲು ಸೇರಿಕೊಂಡರು. ಕದಲದೆ ಕೂತವರೆಂದರೆ ಶಬರಿ ಹೊಟ್ಟೆಯೊಳಗಿನ ಮಗು ಮತ್ತು ಮಾತುಬರದ ಮೂಗ- ಹುಚ್ಚೀರ. ಹೂಟ್ಟಿಯೊಳಗಿನ ಮಗು ಮಾತಾಡೊಲ್ಲ. ಹುಚ್ಚೀರನಿಗೆ ಮಾತು ಬರೊಲ್ಲ; ಶಬರಿಯ ಮೂಕವೇದನೆಗೆ ಸಾಕ್ಷಿ-ಸಂಕೇತಗಳೇನೊ ಅನ್ನೊ ಹಾಗೆ ಇವರಿಬ್ಬರೂ ಆಕೆಗೆ ಹತ್ತಿರವಿದ್ದರು. ಶಬರಿಯ ಕಣ್ಣಲ್ಲಿ ನೀರು. ಹುಚ್ಚೀರನ ಒದ್ದೆ ಮನಸಲ್ಲಿ ಮಾತಾಗಿ ಹೊರ ಹೂಮ್ಮಲಾಗದೆ ಸುಳಿಯಾದ ಸಂಕಟ. ದಿಕ್ಕೆಟ್ಟ ಶಬರಿಯ ನೋಟ.
ಕತ್ತಲನ್ನು ಸೀಳಿ ಮಿಂಚ್ಚೊಂದು ಸುಳಿಯಿತು.
ಫಳಾರನೆ ಬಂದ ಬೆಳಕು ಹಾಗೇ ಮಾಯವಾಯ್ತು.
ಕೂತಿದ್ದ ಶಬರಿ ಎದ್ದಳು. ಹಟ್ಟಿಯ ಆ ಕಡಗೆ ಹೋಗಿ ನಿಂತು ದಿಟ್ಟಿಸಿದಳು. ದೂರಕ್ಕೆ ಕಣ್ಣರಳಿಸಿ ನೋಡಿದಳು.
ಇಲ್ಲ…… ಯಾರೂ ಕಾಣುತ್ತಿಲ್ಲ. ಯಾರೂ ಬರುತ್ತಿಲ್ಲ.
ಹೀಗೆ ಎಷ್ಟೋ ದಿನ ಕಾದಿದ್ದಳು. ತನ್ನ ಸೂರ್ಯ ಬರುತ್ತಾನೆಂದು ಹಂಬಲಿಸಿದ್ದಳು. ಚಡಪಡಿಸಿದ್ದಳು. ಆಗ ತಿಮ್ಮರಾಯಿ ಹೇಳಿದ್ದ-“ಸೂರ್ಯಪ್ಪ ಬಂದೇ ಬತ್ತಾನೆ ಕಣವ್ವ. ಒಸಿ ಕಾಯ್ಬೇಕು, ಆಟೇ; ಅವ್ನ್ ಬಂದೇ ಬತ್ತಾನೆ.”
ಶಬರಿಗೆ ನೆನಪು ಒತ್ತರಿಸಿತು. ಸೂರ್ಯ ಹೇಳಿದ್ದ-“ಗಂಡು ಮಗು ಹುಟ್ಟಿದ್ರೆ ತೇಜ ಅಂತ ಹಸರಿಡೋಣ ಅಥವಾ ಉದಯ ಅಂತ ಇಡೋಣ.”
“ಇಂತ ಯೆಸ್ರುನ್ನ ನಾವ್ ಕೇಳೇ ಇಲ್ಲ. ಯೆಸ್ರ್ ಕರ್‍ಯಾಕೆ ನಾಲ್ಗೆ ತಿರುಗ್‌ಬೇಕಲ್ಲ ನಮ್ ಜನ್ರಿಗೆ”- ಎಂದಿದ್ದಳು ಶಬರಿ.
“ನಾಲ್ಗೆ ತಿರ್‍ಗಲ್ಲ ಅಂತ ಹಾಗೇ ಇದ್ರೆ ಹೊಸದಾಗಿ ಮಾತೇ ಆಡೋಕಾಗೊಲ್ಲ. ಕರೀತಾ ಕರೀತಾ ತಾನಾಗೇ ಅಭ್ಯಾಸ ಆಗುತ್ತೆ. ಇವೆರಡರಲ್ಲಿ ಯಾವ್ದಾದ್ರು ಒಂದ್ ಹೆಸ್ರು ಇಟ್ರಾಯ್ತು?- ಸೂರ್ಯ ಹೇಳಿದ್ದ.
“ತೇಜ ಅಂಬಾದೆ ಚಂದಾಗೈತೆ, ಅಂಗಂದ್ರೆ ಏನು?”
“ಫಳ ಫಳ ಅಂತ ಹೂಳೆಯುತ್ತಲ್ಲ ಅದು-ತೇಜ. ಅದು ಸೂರ್ಯನ್ ಬೆಳಕು ಇದ್ದಂತೆ…”
ಸೂರ್ಯ ವಿವರಿಸುತ್ತಿದ್ದಾಗಲೇ ಶಬರಿ ಹೇಳಿಬಿಟ್ಟಳು-
“ಅಂಗಾರೆ ಅದೇ ಇರ್‍ಲಿ, ಸೂರ್ಯಂಗೂ ಅದ್ಕೂ ವೊಂದಾಣ್ಕೆ ಐತೆ ಅಂದ್ ಮ್ಯಾಲೆ ತೇಜ ಅಂಬಾದೇ ಇರ್‍ಲಿ.”
ಸೂರ್ಯ ನಕ್ಕು ನುಡಿದಿದ್ದ-
“ಅದೇನೊ ಸರಿ, ಗಂಡು ಮಗೂನೆ ಹುಟ್‌ಬೇಕಲ್ಲ?”
ಮದುವೆಯಿಲ್ಲದೆ ನಡೆದ ಮಾತುಕತೆ. ಆನಂತರ… ಅದು ಬೇರೆಯೇ ಕತೆ. ಈಗ ಸೂರ್ಯ ಇಲ್ಲ. ಹೋದವನು ಬಂದಿಲ್ಲ. ಬಂದೇ ಬರುತ್ತಾನೆಂಬ ಅಸೆ ಬತ್ತಿಲ್ಲ. ತಿಮ್ಮರಾಯಿ ಪ್ರಕಾರ ಕಾಯಬೇಕು. ಆದರೆ ಶಬರಿ ಪ್ರಶ್ನೆ- ‘ಕಾಯ್ತಾನೇ ಎಷ್ಟು ದಿನ ಇರೋದು?’ ಶ್ರೀರಾಮ ಬಂದ. ಶಬರಜ್ಜೀಗೆ ಸಂಶೋಸ ಆಯ್ತು. ಅವ್ದೊ ಇಲ್ವೊ?’- ಇದು ತಿಮ್ಮರಾಯಿ ಪ್ರಶ್ನೆ. ‘ಅಂದ್ರೆ ನಾನೂ ಮುದುಕಿ ಆಗಬೇಕು ಅನ್ನು?’- ಶಬರಿಯ ಮರುಪ್ರಶ್ನೆ. ‘ಅಂಗಲ್ಲ ಕಣವ್ವ. ಒಳ್ಳೇದ್ ಯಾವಾಗ್ಲೂ ತಡವಾಗೇ ಬರಾದು. ಆ ರಾಮ ಎಂಗಿದ್ನೊ ಏನ್ಕತ್ಯೊ ನಮ್ಗೇನ್ ಗೊತ್ತ? ಶಬರಿ ನಮ್ ತರಾ ಬಾಳ್ವೆ ಮಾಡ್ದೋಳು. ಅವ್ಳ್ ಆಸೇನೂ ಒಂದಲ್ಲ ಒಂದ್ ದಿನ ಈಡೇರ್‍ತಲ್ವ? ಈಡೇರ್‍ಲೇಬೇಕು. ನಂಗ್ ತಿಳ್ಯಾದ್ ಈಟೇ ಕಣವ್ವ’- ಹೀಗೆ ತಿಮ್ಮರಾಯಿ ತನ್ನ ದರ್ಶನಾನ ತನ್ನದೇ ದಾಟೀಲಿ ಹೇಳಿದ್ದ.
ಶಬರಿಯ ನಿಟ್ಟುಸಿರೇ ನೋಟವಾಗಿತ್ತು
ಹಟ್ಟಿಯ ಹೂರಬಂದು ಕಾಯ್ತಾ ಇತ್ತು.
“ಆ ರಾಮ ಬಂದಾಗ ಆ ಶಬರೀಗೆ ಸಂತೋಷ ಆಯ್ತು. ಈ ಸೂರ್ಯ ಬಂದ್ರೆ ನಂಗೂ ಸಂತೋಷ ಆಗ್ತೈತೆ. ಬಾಳ್ಬೇವ್ಸ ಬಾಳ್ಳೇವ್ಗೆ ಬೆಳಕು ಬರ್‍ತೈತ. ಬೆಳಕು ಬರ್‍ಲಿ ಅಂಬ್ತ ಕತ್ತಲಾಗ್ ಕಾಯಾದೇ ನಮ್ಮ ಬಾಳ್ಳೇವ?”
-ಹೀಗೆ ಶಬರಿ ಒಳಗೇ ಉರೀತಾ ಕಾದಿದ್ದಳು.
ಸೂರ್ಯ ಬರಲಲ್ಲ.
ಆತ ಬರುವವರಿಗೆ ತಿಮ್ಮರಾಯಿ ಬದುಕಲಿಲ್ಲ.
ಸೂರ್ಯ ಬರ್‍ತಾನೆ ಅಂತ ಭರವಸೆಯ ಮಾತಾಡ್ತ. ಮಗಳ ಸಂಕಟಾನ ತನ್ನೊಳಗೆ ತಂದ್ಕೊಂಡು ಸೂರಗಿದ; ಸುಟ್ಟು ಕರಕಲಾದ.
ಕಡಗೆ ಸತ್ತೇ ಹೋದ.
………………………
ಕತಲಲ್ಲಿ ನಿಂತು ಶಬರಿ ನೋಡ್ತಾನೆ ಇದ್ದಳು.
ತತ್ತರಿಸಿ ಕೂತಿದ್ದ ಹುಚ್ಚೀರ ಹತ್ತಿರ ಬಂದ.
ಗುಡುಗು ಮಿಂಚುಗಳು ಒಟ್ಟಿಗೆ ಬಂದು ಅಪ್ಪಳಿಸಿದವು. ಹೆದರಿದ ಹುಚ್ಚೀರ ಶಬರಿ ಕಡೆ ನೋಡಿ ಒಳಗೆ ಹೋಗಲು ಸನ್ನೆ ಮಾಡಿದ.
ಆಕೆ ಹೋಗಲಿಲ್ಲ.
ಇನ್ನೇನು ಮಳೆ ಬರಬಹುದು ಅನ್ನೊ ವಾತಾವರಣದಲ್ಲಿ ಗಾಳಿ ಬೀಸೋಕೆ ಶುರುವಾಯ್ತು ಗುಡಿಸಲುಗಳು ತರತರ ಅಂದವು. ಮರದ ಎಲೆಗಳು ಬಂದು ಮುಖಕ್ಕೆ ಬಡಿದವು. ನಡುವೆ ನುಗ್ಗಿದ ಮಿಂಚಿನ ಬೆಳಕಲ್ಲಿ ಶಬರಿ ದೂರಕ್ಕೆ ದಿಟ್ಟಿಸಿದಳು. ಅಪ್ಪ ಸಾಯುವಾಗ್ಲೂ ‘ಸೂರ್ಯ ಬತ್ತಾನೆ ಕಣವ್ವ, ನಿನ್ ಮಗಾ ಹುಟ್ಟಿದ್ ಮ್ಯಾಕೆ ಸೂರ್ಯಪ್ಪನ್ ತರಾ ಚಂದಾಗ್ ಬೆಳುಸ್ಬೇಕು. ನನ್ ಮೊಮ್ಮಗ ನಮ್ಮ ಹಟ್ಟೀಗೆ ದೀಪ ಆಗ್‌ಬೇಕು, ದ್ಯಾವ್ರ್ ಆಗ್ಬೇಕು.’ ಎಂದು ಒಂದೇ ಉಸಿರಲ್ಲಿ ಹೇಳಿದ್ದ. ಅಪ್ಪನ ದೇವರ ಕಲ್ಪನೆ ಕಂಡು ಶಬರಿಗೆ ಅಚ್ಚರಿಯಾಗಿತ್ತು. ‘ದ್ಯಾವ್ರು ನಮ್ತಾವ್ಲೆ ಇರ್ತಾನೆ ಕಣವ್ವ. ಯಾರೊ ಒಬ್ರು ದ್ಯಾವ್ರ್ ತರಾ ಬಿಳೀತಾರೆ.’ ಎಂದೆಲ್ಲಾ ಮಾತಾಡುತ್ತಿದ್ದ ತಿಮ್ಮರಾಯೀನೆ ಒಂದು ಒಗಟಾಗಿ ಕಾಡಿಸಿದ್ದುಂಟು. ಆದ್ರೆ ಆತನ ಮಾತಿಗೆ ಎದುರಾಡೋಕೆ ಶಬರೀಲಿ ಬೇರೆ ವಿಚಾರಾನೇ ಇರ್‍ಲಿಲ್ಲ. ಒಳಗೆಲ್ಲ ಸೂರ್ಯ ತುಂಬಿಕೂಂಡಿದ್ದ. ಹೂರಗೆ ಕತ್ತಲು ಕಾಡುಸ್ಕಾ ಇತ್ತು.
ಈಗಲೂ ಅಷ್ಟೆ. ಕತ್ತಲಲ್ಲಿ ಸೂರ್ಯನ ಹುಡುಕಾಟ.
ಸೂರ್ಯನ ಸೂಚನೆ ಕಾಣಲೇ ಇಲ್ಲ.
ಆಗ ಚಂದ್ರ ದೊಪ್ಪನೆ ನೆನಪಲ್ಲಿ ನುಗ್ಗಿದ.
ಮೋಡದಲ್ಲೊಂದು ಗುಡುಗು.
ಯಾರು ಈ ಚಂದ್ರ?
ಶಬರಿ ಬೆಚ್ಚಿದಳು.
* * *
ಚಂದ್ರ ತೇಲಿ ಬಂದ.
ಆದರೆ ಕೆಂಪಾಗಿದ್ದ.
ತೊಟ್ಟಿಕ್ಕುವ ಬೆಳದಿಂಗಳು.
ಅದು ನೆನಪಿನ ನೆತ್ತರು!
ಶಬರಿ ಕತ್ತಲಲ್ಲಿ ತತ್ತರಿಸಿದಳು.
ಹುಚ್ಚೀರ ಒಳಗೆ ಹೋಗಿ ಮಲಗುವಂತೆ ಸನ್ನೆ ಮಾಡಿದ.
ಈಕೆ ನೀನೇ ಹೋಗಿ ಮಲಗು ಎಂಬಂತೆ ಸನ್ನೆಯಲ್ಲಿ ಸೂಚಿಸಿದಳು.
ಆತ ಒಪಲಿಲ್ಲ.
ಶಬರಿ ಅಸಹಾಯಕಳಾದಳು- ಎಂದಿನಂತೆ.
ಗಾಳಿ ಬೀಸತೂಡಗಿತು.
ಜೊತೆಗೆ ಬರಲೊ ಬೇಡವೊ ಎಂಬಂತೆ ಚಿಮ್ಮಿದ ಹನಿಗಳು.
ನೆತ್ತರುಕ್ಕಿ ನೆನಪನ್ನು ನೆಕ್ಕಿದ ಅನುಭವ;
ಕತ್ತಲಲ್ಲಿ ಕೆಂಡದುಂಡೆಯಾಗಿ ಬಂದ ಚಂದ್ರ.
* * *
ಚಂದ್ರ ಹತ್ತಿರದಲ್ಲೇ ಇದ್ದ ಇನ್ನೊಂದು ಹಟ್ಟಿಗೆ ಸರಿದವನು. ತಿಮ್ಮರಾಯಿಗೆ ನೇಂಟನಾದ್ದರಿಂದ ಆಗಾಗ್ಗೆ ಬರ್‍ತಾ ಇದ್ದ. ಶಬರಿಗಿಂತ ನಾಲ್ಕೈದು ವರ್ಷ ದೂಡ್ಡೋನು; ನೆಂಟರವನು. ಮುಂದೆ ಅಳಿಯ ಆದ್ರೂ ಆಗಬಹುದು- ಅಂತ ತಿಮ್ಮರಾಯಿ ಆಸೆ ಇಟ್ಕೊಂಡಿದ್ದ. ಚಂದ್ರ ಬಂದ ಅಂದ್ರೆ ಶಬರೀಗೆ ಅದು ಮಾಡು ಇದು ಮಾಡು ಅಂತ ಹೇಳ್ತಾ ಇದ್ದ. ನೋಡೋಕೆ ಚಂದವಾಗಿದ್ದ ಚಂದ್ರ ಶಬರೀಗೂ ಹಿಡಿಸಿದ್ದ. ಆದ್ರೆ ಮದುವೆ ಪ್ರಸ್ತಾಪ ಬರೋಕೆ ಮುಂಚೆ ಆತ ಮಂಗಮಾಯವಾದ. ಹದಿನೈದು ದಿನಕ್ಕೊಂದ್ಸಾರಿನಾದ್ರು ಬರ್‍ತಾ ಇದ್ದ ಚಂದ್ರ ಇತ್ತೀಚೆಗೆ ಬರದೆ ಬರೀ ಅಮಾವಾಸ್ಯೆ ಆವರಿಸ್ಕೊಂಡಂತಾಗಿತ್ತು. ಕೇಳೋನೊ ಬೇಡವೂ ಅಂತ ಹಿಂಜರೀತಾನೆ ಶಬರಿ ಕೇಳಿದ್ದಳು.
“ಯಪ್ಪೊ, ಚಂದ್ರ ಮಾಮ ಯಾಕ್ ಬತ್ತಾ ಇಲ್ಲ?”
“ಯಾವನಿಗ್ಗೊತ್ತಮ್ಮ? ಅದೆಲ್‌ವೋದ್ನೊ ಏನ್ ಕತ್ಯೊ”- ತಿಮ್ಮರಾಯಿ ತಿರಸ್ಕಾರದಿಂದ ಹೇಳಿದ.
“ಯಾಕಪ್ಪ, ನೀನೇನಾರ ಅವ್ನ್ ಜತ್ಯಾಗ್ ಜಗಳ ಆಡಿದ್ಯಾ?”
– ಶಬರಿ ಕೇಳಿಯೇಬಿಟಳು.
“ನಾನ್ಯಾಕಮ್ಮ ಜಗಳ ಆಡ್ಲಿ, ಅವ್ನೇ ಊರ್ ಇರೇರತ್ರ ಏನೇನೊ ಜಗಳ ಆಡಿದ್ನಂತಮ್ಮ. ನಾವ್ ಬಡವರು-ಬುಡಕಟ್ನೋರು-ಊರ್ ಇರೇರ್ ಇರೋದ ಕಟ್ಕಂಡ್ ಬಾಳ್ಳೇವ್ ಮಾಡಾಕಾಯ್ತದ?”
“ಅಂಗಂಬ್ತ ನಮ್ ಬುಡಕ್ ಬಿಸಿನೀರಾಕಿದ್ರೂ ಸುಮ್ಕೆ ಇರಾಕಾಯ್ತದ?”
– ಶಬರಿ ಥಟ್ಟನೆ ಕೇಳಿದಳು.
ತಿಮ್ಮರಾಯಿ ಬೆಚ್ಚಿ ನೋಡಿದ.
ಅದು ಚುಚ್ಚಿದಂತೆ ಕಾಣಿಸಿತು.
ಶಬರಿ ಸರ್ರನೆ ಅಲ್ಲಿಂದ ಹೋದಳು.
ಆವೋತ್ತಿನಿಂದ ಶಬರಿಯು ತಾನಾಗೇ ಚಂದ್ರನ ಪ್ರಸ್ತಾಪ ಮಾಡಲಿಲ್ಲ. ಆಕೆಯ ಮಾತಿಗಾಗಿ ತಿಮ್ಮರಾಯಿ ಕಾದ-ಶಬರಿಯಂತೆ,
ಆದರೆ ಆಕೆ ಏನೂ ಆಗಿಲ್ಲವೆಂಬಂತೆ ಇದ್ದಳು.
ಹೀಗಿರುವಾಗ ಚಂದ್ರ ಬಂದೇಬಿಟ್ಟ-ಬೆಳದಿಂಗಳ ಸಮೇತ.
ಎದುರು ಚಂದ್ರ-ಶಬರಿಯಲ್ಲಿ ಬಳದಿಂಗಳು.
ಓಡಿಹೋಗಿ ತಿಮ್ಮರಾಯಿಗೆ ಹೇಳಿದಳು.
ತಿಮರಾಯಿ ಬಂದವನೇ “ಏನಪ್ಪ ಎಲ್ಡಕ್ಸರ ಕಲ್ತಿವ್ನಿ ಅಂಬ್ತ ಊರ್ ಇರೇರ್‌ನೆಲ್ಲ ಎದ್ರಾಕ್ಕಂಡ್ರೆ ಆಯ್ತದ?” ಎಂದು ಕೇಳಿಬಿಟ್ಟ.
ಶಬರಿಗೆ ಕಸಿವಿಸಿಯಾಯ್ತು. “ಅದೆಲ್ಲ ಆಮ್ಯಾಕ್ ಮಾತಾಡಿರಾಗಾಕಿಲ್ವ?” ಎಂದಳು.
ತಿಮ್ಮರಾಯಿಗೆ ತಾನು ಹಾಗೆ ಕೇಳಿದ್ದು ತಪ್ಪೆಂದು ತಿಳುವಳಿಕೆ ಬಂದು- “ವೋಗ್ಲಿ ಬಿಡಪ್ಪ ಈಟ್ ದಿನ ನಿನ್ ಮಕ ನೋಡ್ದೆ, ಮಾತ್ ಕೇಳ್ದೆ ಬ್ಯಾಸ್ರ ಆಗಿತ್ತು ಅಂಗಂದೆ” ಎಂದು ಶಬರಿಯ ಮುಖ ನೋಡಿದ.
ಶಬರಿ ಚಂದ್ರನ ಕಡೆ ನೋಡಿದಳು.
“ಅದ್ರಾಗ್ ತಪ್ಪೇನೈತೆ ಮಾವ? ನಿನ್ನಂತೋರ್ ಕೇಳ್‌ಬೇಕು. ನನ್ನಂತೋರ್ ಯೇಳ್‌ಬೇಕು. ಲಾಗಾಯ್ತಿಂದ ನಡಬಗ್ಗಿಸ್ಕಂಡ್ ಬಂದಿದ್ದೀವಿ ಅಂಬ್ತ ನೆಲಮಟ್ಟ ತುಳ್ಯಾಕ್ ಬಂದ್ರೆ, ಎದ್ದು ಎದೆ ಸಟಸ್ಕೊಂಡು ನಿಂತ್ಕಬೇಕು. ಇಲ್ದಿದ್ರೆ ನಿಂತ್ ನೆಲಾನೆ ನಮ್ಮನ್ನ ನುಂಗ್ ಹಾಕ್ ಬಿಡ್ತೈತೆ.”
ಎಂದು ಚಂದ್ರ ತನ್ನ ದೃಷ್ಟಿ-ಧೋರಣಗೆ ಮಾತುಕೊಟ್ಟು ಹೆಮ್ಮೆಯಿಂದ ಶಬರಿ ಕಡೆ ನೋಡಿದ.
ಆಕೆ “ಏನಾರ ತಿಂಬಾಕ್ ಮಾಡ್ಲೊ ಬರೀ ಮಾತ್ನಾಗೇ ವೋಟ್ಟೆ ತುಂಬಿಸ್ಕಂಬ್ತೀರೂ?” ಎಂದು ಕೇಳಿದಳು.
“ಮಾತ್ನಲ್ಲೆ ಹೂಟ್ಟೆ ತುಂಬೋದಾಗಿದ್ರೆ ನಮ್‌ದೇಶ ಪ್ರಪಂಚದಲ್ಲೇ ಶ್ರೀಮಂತವಾಗ್ತಿತ್ತು” ಎಂದು ಚಂದ್ರ ನಕ್ಕ.
“ಯೇ ಅದೆಲ್ಲ ನಂಗೊತ್ತಾಗಕಿಲ್ಲ. ರೊಟ್ಟಿ ಮಾಡ್ಕಂಡ್ ಬತ್ತೀನಿ. ನೀವ್ ಅಲ್ಲೀಗಂಟ ಮಾತಾಡ್ತಾ ಇರ್ರಿ” ಎಂದು ಶಬರಿ ಒಳಹೋಗಿ ರೊಟ್ಟಿಗೆ ಹಿಟ್ಟು ಕಲೆಸತೂಡಗಿದಳು. ಆದರೂ ಚಂದ್ರನ ಮಾತು ಕಿವಿ ಮೇಲೆ ಬೀಳ್ತಾ ಇತ್ತು.
“ನಾನ್ ಇಷ್ಟು ದಿನ ಬರ್‍ಲಿಲ್ಲ ಅಂತ ನಿಂಗ್ ಬೇಜಾರ ಮಾಮ?”
“ನಂಗ್ ಬ್ಯಾಸರ ಆದ್ರೆ ನಿಂಗೇನ್ ನೋವಾಯ್ತದ?”
“ಯೇ ಯಾಕಿಂಗಂಬ್ತೀಯ! ನಾನು ಅಂಗೆಲ್ಲ ಸದರ ಮಾಡಾನಲ್ಲ.”
“ಅದು ಗೊತ್ತು ಕಣ್ಲ. ಯೇಳ್ದೆ ಕೇಳ್ದೆ ಇಂಗ್ ಮಂಗ್‌ಮಾಯ ಆದ್ರೆ ಎಂಗೆ ಅಂಬ್ತ ನಿಮ್ ಹಟ್ಟೀಗ್ ಬಂದ್ ಕೇಳಿದ್ರೆ, ನಿಮ್ಮಮ್ಮ ಇವ್ನ್ ಯಾವಾಗ್ಲು ಇಂಗೇ ಕಣಣ್ಣೋ, ಅಂಗ್ ಬತ್ತಾನೆ, ಇಂಗ್ ವೋಯ್ತಾನೆ ಅಂಬ್ತ ಕಣ್ಣಾಗ್ ಸಂಕಟ ತುಂಬ್ಕಂಡ್ ಮಾತಾಡಿದ್ಲು.”
“ನೋಡು ಮಾಮ, ನಂಗೆ ಬೇಕಾದಷ್ಟು ಕೆಲ್ಸ ಐತೆ. ಅಲ್ಲಲ್ಲೆ ಗೆಣಕಾರ್ರು ಬೇರೆ ಅವ್ರೆ. ಆಗಾಗ್ಗೆ ಅವ್ರ್ ಹತ್ರ ಹೋಗ್ಬೇಕು. ಮಾತಾಡ್ಬೇಕು. ಕೆಲ್ಸ ಮಾಡ್ಬೇಕು.”
“ಅದೇನಪ್ಪ ಕಡ್ದು ಕಟ್ಟೆ ಆಕಾ ಅಂತ ಕೆಲ್ಸ?”
“ಅದೆಲ್ಲ ಆಮೇಲ್ ಯಾವಾಗಾರ ಹೇಳ್ತೀನಿ. ನಮ್ಮ ಲೀಡರ್ ಒಬ್ಬ ಗೆಳೆಯ ಅವ್ನೆ-ಸೂರ್ಯ ಅಂತ. ಅವ್ನನ್ನೇ ಒಂದ್ಸಾರಿ ಕರ್‍ಕಂಡ್ ಬತ್ತೀನಿ ಬಿಡು.”
ತಿಮ್ಮರಾಯಿ ಸುಮ್ಮನಾದ. ಸ್ವಲ್ಪ ಹೂತ್ತಿನ ನಂತರ ಚಂದ್ರ ತಾನೇ ಮಾತಿಗೆ ಎಳೆದ. ತಿಮ್ಮರಾಯಿ ಸುತ್ತಿ ಬಳಸಿ ಮದುವೆ ವಿಷಯ ಎತ್ತಿದ. ಚಂದ್ರ ಮುಚ್ಚಿಟ್ಟುಕೂಳ್ಳಲಾಗದೆ “ನನ್ ಮನಸ್ನಾಗೂ ಅದೇ ಇತ್ತು ಕಣ್ ಮಾಮ” ಎಂದ.
ಶಬರಿಯ ರೂಟ್ಟಿಗಳು ಹದಗೂಂಡು ಕೂತವು. ಆದರೆ ಈ ಮಾತು ಕೇಳಿಸಿಕೊಂಡ ಮೇಲೆ ಎಂದಿಲ್ಲದ ನಾಚಿಕ ಬಂತು. ಇದ್ಯಾಕೆ ಹೀಗೆ? ಮಾತಿಗೆ ದಕ್ಕುವಂತಿರಲಿಲ್ಲ. ಮೆಲ್ಲಗೆ ಎದ್ದು ಹಿಂದಿನಿಂದ ಹೋಗಿ ತನ್ನ ಗೆಳತಿ ಗೌರೀನ ಕರಕೊಂಡು ಬಂದಳು. ಆಕೆಯ ಕೈಲಿ ರೊಟ್ಟಿ ಕಳಿಸಿದಳು. ಚಂದ್ರ ರೇಗಿಸಿದ- “ಯಾಕೆ? ಇವತ್ತೇನ್ ವಿಶೇಷ? ಗೌರಿ ಕೈಲಿ ರೊಟ್ಟಿ ಕಳ್ಪಿದ್ದೀಯ?”
ಶಬರಿ ಒಳಗೇ ನಕ್ಕಳು. ತಿಮ್ಮರಾಯಿ ಕೂಗಿ ಹೇಳಿದ- “ನೀನೂ ಬಾರವ್ವ”- ಅಂತ. ಗೌರಿ ಅರ್ಥಮಾಡಿಕೂಂಡಳು. ತಾನೇ ಓಳಹೋಗಿ ಶಬರೀನ ಕರಕೊಂಡು ಬಂದಳು. ಚಂದ್ರ ಹೇಳಿದ- “ಒಟ್ಟಿಗೆ ಕುಂತ್ಕಂಡು ರೊಟ್ಟಿ ತಿನ್ನಾಣ. ಒಟ್ಟಿಗೆ ಇರಾದ್ರಾಗ್ ಇರೊ ಸಂತೋಷ ಒಂಟಿ ಇರಾದ್ರಾಗ್ ಇರಲ್ಲ.”
* * *
ನೆನಪು:
ಇಲ್ಲಿ ಗಾಳಿ ರೊಯ್ಯನೆ ಬೀಸಿತು.
ಒಂದರಡು ಎಲೆಗಳು ಮುಖಕ್ಕೆ ಬಡಿದವು.
‘ಒಟ್ಟಿಗೆ ಇರಾದ್ರಾಗಿರೊ ಸಂತೋಸ ಒಂಟಿ ಇರಾದ್ರಾಗಿರಲ್ಲ.’
-ಎಂಥ ಮಾತು!
ಗುಡುಗು ಮಿಂಚುಗಳೊಂದಾಗಿ ನೆಲ ನಡುಗಿದಂತಾಯ್ತು.
ಕತ್ತಲೆ ಬಿಳಕಿನಾಟದಲ್ಲಿ ಭಯ ಬಿರಿದು ಹುಚ್ಚೀರ ಮುಚ್ಚಿಕೊಂಡ. ಆಹಾ! ಆಕಾಶವೇ, ಸೂರ್ಯ ಚಂದ್ರರಿಬ್ಬರನ್ನೂ ಇಟ್ಟುಕೂಂಡು, ನಲದ ಮಕ್ಕಳ ಜೊತ ಅದೆಂಥ ಆಟ ನಿನ್ನದು- ಎಂದೆಲ್ಲ ಕೇಳಬೀಕೆನ್ನಿಸಿತು ಶಬರಿಗೆ.
ಸದ್ದು ಗದ್ದಲವೆಲ್ಲ ಸಂತನಂತಾಗಿ ಮೋಡದಂಚಿನಲ್ಲಿ ಚಂದ್ರ ಕಾಣಸಿದ. ಇನ್ನೇನು ಹೂರಬಂದ ಅನ್ನೊ ಆಸೆಗೆ ಅಪ್ಪಳಿಸುವಂತ ಕಾರ್ಮೋಡವೊಂದು ಬೆಳದಿಂಗಳಿಗೆ ಬೀಗ ಹಾಕಿತು.
ಆದರೆ ಶಬರಿಯ ನಿನಪಿಗೆ ಬೀಗ ಹಾಕಲು ನಿಸರ್ಗಕ್ಕೆ ಸಾಧ್ಯವಾಗಲಿಲ್ಲ.
*****