ದಾರಿಯುದ್ದಕ್ಕೂ ಭರವಸೆಯ
ಕೋಲಹಿಡಿದು ಹೊರಟೆ
ಕನಸಿನಾ ಅರಮನೆ ಹುಡುಕಿ,
ಚಮಣಿಯಿಂದುರಿದಾ ಕಿರು
ಕಿಡಿಯೊಂದು ಕೇಕೆ ಹಾಕಿ:
ಮೆರೆಯುವುದೆಂಬ ಭ್ರಮೆ ಇರಲೇ ಇಲ್ಲ.
ಬಾಳ ಹಾದಿಯು ಹಾಗೆ ಸವೆಯುತಿದೆ
ಸುಮ್ಮನೆ,
ಆತ್ಮಜ್ಯೋತಿಯ ಬತ್ತಿ ಕರಗುತಿದೆ ಮೆಲ್ಲನೆ,
ಗೂಡಿನೊಳಗಿಂದ ಹಕ್ಕಿ ಇಣುಕುತಿದೆ ಚಾಚಿ
ಹಾರಿಹೋಗಲು ಮನಕೆ ಇಬ್ಬಗೆಯ ನೀತಿ:
ಸ್ವರ್ಗದಾ ಸನ್ನಿಧಿಗೋ, ನರಕದಾ ಸಂಧಿಗೋ
ಮೆಲಕು ಹಾಕುವ ನಡಿಗೆ ಶಾಶ್ವತದ ಕಡೆಗೆ
ನಕ್ಷತ್ರಗಳ ಹಾಡಿಯಲಿ
ನೇರ ನೆಗೆತದ ಬಯಕೆ
ಬೀದಿ ದೀಪದ ಆಸೆ ಬಿಟ್ಟ ಹಾತೆ
ಉರಿಯ ಉಯ್ಯಾಲೆ ಸುಡುಪಂಜು
ಬೆಂದರೂ ಬಯಕೆ
ಚಿತ್ತ ಚಾಂಚಲ್ಯ ಶೃಂಗಾರ ಸುಖಕೆ
ಕೊಂಡ ಹಾಯುತ್ತ ಕಾಲುಗಳ
ಹಳಹಳಿಕೆ
ನಸುಗೆಂಪು ಮಿದುತನ ಮರಳಿ ಪಾದಕ್ಕೆ
ನಶ್ವರವು ಬದುಕು
ಮತ್ತೆ ಶಾಶ್ವತದ ಬಯಕೆ,
ಕೂಲಿಗೂ ಕುಲೀನಗೂ
ಒಂದೇ ಉಯಿಲ ಹೊದಿಕೆ.
*****