ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲುಗಳನ್ನು ಅಲ್ಲಾಡಿಸುತ್ತಾ ಸಿದ್ದವ್ವ ಹೊಲದ ಬದುವಿನ ತುಂಬ ಹರಿದಾಡಿದಳು. ಆಗ ಅವಳಿಗೆ ಎಲ್ಲಾ ದೃಶ್ಯಗಳು ನೆನಪಿಗೆ ಬಂದವು. ತಾನು ಸಣ್ಣ ಹುಡುಗಿ ಇದ್ದಾಗ ಅಪ್ಪ ಅವ್ವನ ಜೊತೆ ಹೊಲದ ಮಧ್ಯದಲ್ಲಿ ಕುಳಿತು ಊಟ ಮಾಡಿದ ಪರಿ, ಹಕ್ಕರಿಕಿ ಪುಂಡೀಪಲ್ಯ ಅವ್ವನ ಜೊತೆಗೆ ಹರಿದಿದ್ದು, ತತ್ರಾಣಿಯ ತಣ್ಣಗಿನ ನೀರು ಕುಡಿದಿದ್ದು, ರಾಶಿ ಮಾಡುವಾಗ ಕರದಂಟು ಹಚ್ಚಿದ ಚುರುಮುರಿ ಹಾಳೆಯಲ್ಲಿ ಹಾಕಿ ಚಪ್ಪರಿಸಿದ್ದು, ನಿನ್ನೆ ಮೊನ್ನೆಯೇ ನಡೆದಂತೆ ಅವಳಿಗೆ ಅನಿಸತೊಡಗಿತ್ತು. ಎಂಬತ್ತು ವರ್‍ಷಗಳು ಇಷ್ಟು ಬೇಗನೆ ದಾಟಿ ಹೋದವೇ ಈಗಲೂ ಈ ಹೊಲದ ಒಡತಿ ನಾನು. ಯಾರ ಏನ ಕಾಯಿದೆ ಹಚ್ಚಿದರೂ ನನ್ನ ಕನಸುಗಳು ಅರಳಿದ ಈ ಹೊಲವನ್ನು ನಾನು ಜೀವಂತ ಇರುವವರೆಗೆ ಯಾರಿಗೂ ಬಿಟ್ಟಕೊಡುವುದಿಲ್ಲ ಅಂತ ಸಿದ್ದವ್ವ ಮನದಲ್ಲಿ ಒಂದು ನೂರು ಸರ್‍ತಿ ಅಂದುಕೊಂಡಳು. ಸನಿದ್ರುಗೆ ಅವಳು ಈ ಹೊಲಕ್ಕೆ ಬಂದಿರಲಿಲ್ಲ. ಯಾವಾಗ ತಮ್ಮಂದಿರು ಚಟಿಗೆ ಮುಳ್ಳು ಆಡಿಸಿದರೊ ಎಂಬತ್ತೈದರು ಮುದುಕಿ ಮನಸ್ಸಿನಾಗ ಹಟ ಹುಟ್ಟಿಕೊಂಡಿತು. ಅವಳು ಇಂದು ಮುದ್ದಾಂ ಈ ಹೊಲದೊಳಗೆ ಕಾಲಿರಿಸಿದಳು.
ಸಿದ್ದವ್ವ ಒಬ್ಬಳೇ ಮಗಳು, ಅವಳಪ್ಪ ಚಕ್ಕಡಿಯ ಮೇಲಿಂದ ಬಿದ್ದು ಸತ್ತ. ಎಂಟರ ಬಾಲೆಯನ್ನು ಅವರವ್ವ ಪಕ್ಕದ ಸೂಳಿಕೇರಿಗೆ ಸಂಬಂಧಿಕರ ಬಳಗದಲ್ಲಿ ಮದುವೆ ಮಾಡಿಕೊಟ್ಟಿದ್ದರು. ಇದ್ದ ಹತ್ತು ಕೂರಿಗೆ ಹೊಲವನ್ನು ಸಿದ್ದವ್ವ ಕಾಕಾನ ಮಕ್ಕಳು ಲಾವಣೆ ಮಾಡಿಕೊಡುತ್ತಿದ್ದರು. ಬೇವೂರಿನಲ್ಲಿ ಇವರುಗಳ ಹೊಲದ ಹವಣೆ, ಬೆಳೆ ಎಲ್ಲರ ಕಣ್ಣು ಕುಕ್ಕುತ್ತಿತ್ತು. ಅಣ್ಣ ತಮ್ಮಂದಿರ ಮನೆಗಳು ಬೇರೆ ಬೇರೆ ಆದರೂ ಹೊಲಮನಿ ವ್ಯವಹಾರ ಒಂದೇ ಆಗಿತ್ತು. ಮದುವೆಗೆ ಮುಂಚೆ ಸಿದ್ದವ್ವ ಅಪ್ಪಸತ್ತ ನಂತರ ಅವಳವ್ವನೊಂದಿಗೆ ಹೊಲಕ್ಕೆ ಹೋಗುತ್ತಿದ್ದಳು. ಹೆಸರು ಉದ್ದಿ ಬಿಡಿಸುತ್ತ ಅವಳವ್ವ ಹೇಳುತ್ತಿದ್ದಳು. ಈ ಹತ್ತು ಕೂರಿಗೆ ಹೊಲ ಇದ್ದ ಮನಿ ನಿಮ್ಮಪ್ಪನ ಪಾಲಿನದು. ನಾ ಸಾಯ್ತಿನಿ. ನೀ ಮಾತ್ರ ಎಂದೂ ಈ ಹೊಲಮನಿಯ ಹಕ್ಕು ಯಾರಿಗೂ ಬಿಟ್ಟ ಕೊಡಬೇಡ. ಗಂಡನ ಮನಿ ಆಸ್ತಿ ಇಷ್ಟು ಇದ್ರೂ ಮಕ್ಕಳಿಗೆ ತವರು ಮನಿದು ಅಂತ ಒಂದುಚೂರು ಇದ್ರ ಎಷ್ಟೋ ಧೈರ್‍ಯ ಅಂತ ಹೇಳುತ್ತಿದ್ದಳು. ಸಣ್ಣ ಬಾಲೆ ಸಿದ್ದವ್ವ ಬರೀ ಹೂಂ ಗುಡುತ್ತಿದ್ದಳು. ಕೊಟ್ಟ ಮನಿ ಆಸ್ತಿ ಅಷ್ಟೊಂದು ಇರಲಿಲ್ಲ. ಎಂಟರ ಬಾಲೆ ನಡೆಯಲು ಗಂಡನ ಮನೆಗೆ ಹೋದರೆ ಮನೆಯಲ್ಲಿನ ಎಮ್ಮೆ ಕರುಗಳನ್ನು ಹೊಲಕ್ಕೆ ಮೇಯಿಸಲು ಹೊಡೆದುಕೊಂಡು ಹೋಗಿ ಸಂಜೀವನಿಗೆ ಹೊಲದ ಬದುವಿನಲ್ಲಿ ಸುಳಿದಾಡುವುದೇ ಪುಟ್ಟ ಹುಡುಗಿಯ ಕೆಲಸವಾಗಿತ್ತು. ಹುಡುಗಿ ಇನ್ನೂ ಮೈ ನೆರೆಯುತ್ತಿರಲಿಲ್ಲ. ಗಂಡ ದುರುಗುಟ್ಟಿ ನೋಡುತ್ತಿದ್ದ. ಅತ್ತರ ಅರ್‍ಧಮರ್‍ಧ ಉಳಿದ ಊಟ ಕೊಡುತ್ತಿದ್ದಳು. ಸಿದ್ದವ್ವನಿಗೆ ತಾನು ತಾಯಿ ಮನೆಯಲ್ಲಿ ಬೇಕಬೇಕಾದದ್ದು ತಿಂದ ನೆನಪಾಗುತ್ತಿತ್ತು. ಬರೀ ಬೆಳೆಯುವುದು, ದನಗಳ, ಎಮ್ಮೆಗಳ ಮೇಯಿಸಿಕೊಂಡು ಬರುವುದು ಇಷ್ಟೇ ಅತ್ತೆ ಆದವಳು ಎಂಟರ ಬಾಲೆಗೆ ಕೆಲಸ ಹೇರಿದ್ದಳು. ಹೊಟ್ಟೆ ತುಂಬ ಕೂಳು ಸಿಗದಿದ್ದರೂ ಸಿದ್ದವ್ವ ಎಮ್ಮೆಗಳೊಂದಿಗೆ ಬಯಲಲ್ಲಿ ತಿರುಗಾಡುತ್ತ ಗಾಳಿಗೆ ಮುಖ ಒಡ್ಡುತ್ತಿದ್ದಳು. ಹೊಲದ ಬದುವಿನಲ್ಲಿ ಹೊಲದಲ್ಲಿ ಸಿಗುತ್ತಿದ್ದ ಹಣ್ಣು ಕಾಯಿ, ಬುಡ್ಡಿಗಳನ್ನೂ ತಿಂದು ಒಳಗೊಳಗೆ ದಪ್ಪವಾಗುತ್ತ ಹೋದಳು. ಅತ್ತೆಗೆ ಹುಡುಗಿ ಅರೆಕೂಳು ಹಾಕಿದರೂ ಮನೆಗಳ ಎಮ್ಮೆಗಳ ಹಾಗೆ ದಷ್ಟಪುಷ್ಟ ಆಗಿದ್ದು ಕಂಡು ಆಶ್ಚರ್‍ಯಪಡುತ್ತಿದ್ದಳು. ಸಿದ್ದವಳಿಗೆ ಎಮ್ಮೆಗಳ ಮೇಲೆ, ದನಕರುಗಳು ಮೇಲೆ ಅಪಾರ ಪ್ರೀತಿ. ಹಸಿರದ್ದಲ್ಲಿಗೆ ಅವುಗಳನ್ನೂ ಹೊಡೆದುಕೊಂಡು ಹೋಗಿ ಅವಳು ಹೊಟ್ಟೆತುಂಬ ಮೇಯಿಸುತ್ತಿದ್ದಳು. ಸಿದ್ದವನಿಗೆ ಬಯಲು ಗಾಳಿ ಮೈತುಂಬ ಕಸುವನ್ನು ಹೆಚ್ಚಿಸಿತು. ಎಂಬತ್ತೈದು ವರ್‍ಷಗಳ ಹಿಂದೆ ಹೆಣ್ಣು ಮಕ್ಕಳನ್ನು ಶಾಲೆಗೆ ಕಳಿಸುವ ಪ್ರಮೇಯವೇ ಇರಲಿಲ್ಲ. ದೂರ ದೂರಲೊಂದು ಕನ್ನಡ ಶಾಲೆ, ಬ್ರಿಟೀಷರ ಆಳ್ವಿಕೆ, ಆದರೆ ಸಿದ್ದವ್ವ ಬುದ್ಧಿಯಲ್ಲಿ ಬಹಳ ಚುರುಕಾಗಿದ್ದಳು. ಅದೇಗೋ ಅವಳು ಅಡವಿ ಕಾಡು ಹೊಲದ ಬದುವಿನಲ್ಲಿ ಸಿಗುವ ಔಷಧೀಯ ಸಸ್ಯಗಳನ್ನು ಕಾಲಿನ ಹುಣ್ಣು, ಗಾಯಗಳನ್ನು ಮಾಯಿಸುವ ಸಸ್ಯಗಳನ್ನು ಕಂಡುಹಿಡಿದಿದ್ದಳು. ಅವಳ ಮುಗ್ಧತೆ ಅವಳು ಜನರಿಗೆ ಮಾಡುವ ಪುಗಸಟ್ಟೆ ಔಷಧಿ ಉಪಚಾರ, ಆ ಊರಿಗೆ ಬಂದ ಬಾಲೆ ಸೊಸೆಯನ್ನು ಜನ ಹೊಗಳಿಯೇ ಹೊಗಳಿದರು. ಗಂಡ ಅತ್ತೆ ಸಿದ್ದವ್ವನ ಕೈಗುಣವನ್ನು ಆರ್‍ಥಿಕ ಗಂಟಾಗಿ ಪರಿವರ್‍ತಿಸಿಕೊಳ್ಳಲು ಒತ್ತಾಯಿಸ ತೊಡಗಿದರು. ಆದರೆ ಸಿದ್ದವ್ವ ಅತ್ತೆ-ಗಂಡನಿಗೆ ತಿಳಿಯದಂತೆ ಗಾಯಗೊಂಡವರಿಗೆ, ಹುಣ್ಣು ಆದವರಿಗೆ ಎಮ್ಮೆ ಮೇಯಿಸಿಕೊಂಡು ಮನೆಗೆ ಬರುವಾಗ ಕೊಟ್ಟು ಬರುತ್ತಿದ್ದಳು. ಅವಳು ಎಲ್ಲರ ದೃಷ್ಟಿಯಲ್ಲಿ ಕರುಣಾಮಯಿ, ಒಳ್ಳೆಯ ಹುಡುಗಿ ಎನಿಸಿಕೊಂಡಳು. ಅತ್ತೆಗೆ ಹೆಚ್ಚು ಮಾತನಾಡದ ಹೇಳಿದ ಕೆಲಸಗಳನ್ನು ತಪ್ಪದೇ ಮಾಡುವ, ಜನರ ಮೆಚ್ಚುಗೆ ಗಳಿಸಿದ ಸೊಸೆಯನ್ನು ಅಕ್ಕರೆಯಿಂದ ನೋಡಿಕೊಂಡು ಬರ ಬರುತ್ತ ಹೊಟ್ಟೆ ತುಂಬ ಊಟಕೊಡಹತ್ತಿದಳೂ. ಸಿದ್ದವ್ವ ಹನ್ನೆರಡು ವರ್‍ಷಕ್ಕೆ ದಷ್ಟಪುಷ್ಟವಾಗಿ ಮೈನೆರೆದಳು, ಸೋಬಾನೆ ಮಾಡಿದರು. ಗಂಡ ಸಿದ್ದವ್ವಳನ್ನು ಪ್ರೀತಿಯಿಂದ ನೋಡತೊಡಗಿದ. ಅವಳವ್ವ ಹೊಲದ ಅಕ್ಕಡಿ ಕಾಳುಗಳನ್ನು ಫಸಲು ಬಂದಾಗಲೊಮ್ಮೆ ಚೀಲದಲ್ಲಿ ತುಂಬಿಕೊಂಡು ಮಗಳ ಮನೆಗೆ ಬರುತ್ತಿದ್ದಳು. ಒಂದು ವರ್‍ಷಕ್ಕೆ ಸಾಲುವಷ್ಟು ತೊಗರಿ, ಅಲಸಂದೆ, ಸೇಂಗಾ, ಹೆಸರು. ಯಾವಾಗ ಸಿದ್ದವ್ವಳ ತಾಯಿ ಮಗಳಿಗೆ ಹೇರಿಕೊಂಡು ಬರುತ್ತಿದ್ದಳೋ, ಬೀಗರಿಗೆ ಅನಿಸತೊಡಗಿತು, ಸಿದ್ದವ್ವ ವೈನಾಗಿ ಹಿಂಡುವ ಎಮ್ಮೆ ಎಂದು. ಅತ್ತೆ ಕಾಯಿಸಿದ ತುಪ್ಪ ಸಿದ್ದವ್ವಳಿಗೆ ಊಟಕ್ಕೆ ನೀಡಹತ್ತಿದಳು. ಹದಿನಾರರ ಬಾಲೆಗೆ ಇಪ್ಪತ್ತೈದರ ಅನುಭವ ಬಂತು. ಅವಳು ಚೊಚ್ಚಲ ಗರ್‍ಭಿಣಿಯಾದಳು. ಅತೀ ಹಿರಿಹಿರಿ ಹಿಗ್ಗಿದಳು. ವಂಶ ಮುಂದುವರಿತೆಂದು ಖುಷಿಯಾದಳು. ಸಿದ್ದವ್ವನಿಗೆ ಊಟ ಉಪಚಾರ ಹೆಚ್ಚಾಯಿತು. ಅವಳು ತೊನೆತೂಗುವ ದಪ್ಪ ಜೋಳದ ತೆನೆಯಾದಳು. ಬಸಿರಾದರೂ ಸಿದ್ದವ್ವ ಬಯಲು ತಿರುಗುವುದು ತಪ್ಪಿಸಲಿಲ್ಲ. ಮೊದಲೇ ಐದು ಮುಕ್ಕಾಲು ಅಡಿ ಎತ್ತರದ ಹೆಣ್ಣು ಮಗಳು ತುಂಬಿದ ಹೊಟ್ಟೆ ಹದಾ ಹರೆಯ, ಅವಳ ಪ್ರೀತಿಯ ನಡತೆ ಇಡೀ ಸೂಳಿಕೇರಿ ಜನ ಪಾಳಿಯ ಮೇಲೆ ಹುಡುಗಿ ಸಿದ್ದವ್ವನಿಗೆ ಕುಬುಸ ಮಾಡಿದರು. ಪ್ರೀತಿ ಗಂಡನನ್ನು ಸಿದ್ದವ್ವ ಬಿಡಲಾರದೇ ಒದ್ದಾಡುತ್ತ ಹಡೆಯಲು ತವರು ಮನೆಗೆ ಹೋದಳು. ಮೊದಲನೆಯ ಮಗು ಗಂಡುಮಗು. ಸಿದ್ದವ್ವಳ ಅವ್ವ ತುಪ್ಪದಲ್ಲಿ ಮಗಳ ಕೈತೊಳೆದಳು. ಸಿದ್ದವ್ವ ಮೈ ತುಂಬಿ ದೊಡ್ಡ ಹೆಂಗಸಂತೆ ಆದಳು. ಗಂಡು ಮಗ ಹಡೆದೆನೆಂದು ಬೀಗಿದಳು.
ಋತುಗಳು, ಮಾಸಗಳು ಬದಲಾದವು. ಮಳೆಗಾಲ, ಬೇಸಿಗೆ ಕಾಲ, ಚಳಿಗಾಲ ಬಂದು ಹೋದವು. ಹೊಲಗಳು ಎರಡೆರಡು ಪೀಕುಗಳನ್ನು ಹೊರಚೆಲ್ಲಿದವು, ಸೂರ್ಯ ಪೂರ್ವದಿಂದ ಪಶ್ಚಿಮಕ್ಕೆ ದಿನಾಲು ತಿರುಗುತ್ತಿದ್ದ. ಅಮವಾಸ್ಯೆಗಳೂ, ಹುಣ್ಣಿಮೆಗಳು ಹಬ್ಬ ಹರಿದಿನಗಳು ಬಂದು ಹೋದವು. ಅನುಭವದ ಬುತ್ತಿಯ ಗಂಟು ದೊಡ್ಡದಾಗುತ್ತ ಬಂತು. ಊರಲ್ಲಿ ಜನರು ಚಲನೆಯ ಗತಿಯ ಬದುಕಿಗೆ ಹೋರಾಡುತ್ತಿದ್ದರು. ಆಕಾಶದಲ್ಲಿ ಹಕ್ಕಿಗಳ ಹಿಂಡು ಹಾರಿ ಹೋದವು. ಬಿಳಿ ಮೋಡಗಳು ತೇಲಾಡಿದವು. ಗಿರಿಮರದ ಎಲೆಗಳು ಉದುರಿ ಮತ್ತೆ ಹಸಿರಾಗಿ ಚಿಗುರಿದವು. ಆನಂದ ಬಣ್ಣದ ಓಕುಳಿ ಆಡಿದರು. ಜೋಕಾಲಿ ಜೀಕಿದರು. ಸಿದ್ದವ್ವನ ಮಗ ಪೂರ್‍ಣಚಂದ್ರನಾದ. ಅಂಬೆಗಾಲಿಕ್ಕಿ ಮೆಲ್ಲಗೆ ಎದ್ದು ಹೋಗಲು ಹವಣಿಸಿದ. ಹಾಲುಹಲ್ಲುಗಳು ಮಗುವಿಗೆ ಮೂಡಿದವು. ಮಗನಿಗೆ ಚಂದ್ರಶೇಖರ ಅಂತ ಹೆಸರಿಟ್ಟಳು. ಮನೆಯಲ್ಲಿ ಅವಳತ್ತೆ ಮೊಮ್ಮಗನನ್ನು ಎತ್ತಿಕೊಂಡು ಹೊರಗೆ ಬಂಕದಲ್ಲಿ ಆರಾಮವಾಗಿ ಕೂಡಹತ್ತಿದಳೂ. ಅತ್ತೀ ಹಿರೀತನ ಸಿದ್ದವ್ವನ ಕೈಗೆ ಬಂತು. ಅಡುಗೆ ಮನೆ, ಹೊಲಕ್ಕೆ ಬುತ್ತಿ, ಆಳುಕಾಳು, ದನ ಎಮ್ಮೆ ಕರುಗಳು ಎಲ್ಲದರ ಜವಾಬ್ದಾರಿ ಸಿದ್ದವ್ವನ ಹೆಗಲಿಗೇರಿದವು. ದನ, ಆಕಳು, ಎಮ್ಮೆ ಮೇಯಿಸಲು ಒಂದು ಆಳನ್ನು ಮಾಡಲಾಯ್ತು. ಸಿದ್ದವ್ವ ಹಗುರಾದಳು. ಮತ್ತೆ ಮೂರು ವರ್ಷಗಳು ಗತಿಸಿದ ನಂತರ ಹಿರೇಮಗ ಮೂರು ವರ್ಷದವನಾದಾಗ ಸಿದ್ದವ್ವ ಮತ್ತೆ ಬಸಿರಾದಳು. ಈಗ ಆಕೆಗೆ ಇಪ್ಪತ್ತೊಂದು ವರ್ಷ. ಆ ಸಲ ಆಷಾಡದಲ್ಲಿ ಸುರಿದ ಭಾರಿ ಮಳೆಗೆ ಸಿದ್ದವ್ವ ಗಂಡ ಹೊಲಕ್ಕೆ ಹೋದವ ಚಳಿಜ್ವರ ಬಂದಾವ ಅಂತ ಹದಿನೈದು ದಿವಸ ಗಪ್ಪುಗಡದ ಹಾಸಿಗೆ ಹಿಡಿದು ಬಿಟ್ಟ, ಬಸುರಿ ಸಿದ್ದವ್ವ ಅತ್ತೀ ಹೇಳಿದ ಎಲ್ಲಾ ಗಾಂವಟಿ ಔಷಧಿಯನ್ನು ಕುಡಿಸಿದಳು. ಅದಕ್ಕೂ ಜ್ವರ ಬಗ್ಗದಿದ್ದಾಗ ಸಮೀಪದ ಪಾಟಗೇರಿಯ ಸರ್‍ಕಾರಿ ಆಸ್ಪತ್ರೆಗೆ ಸೇರಿಸಲಾಯ್ತು. ತುಂಬಾ ಬಳಲಿದ್ದ ಸಿದ್ದವ್ವಳ ಗಂಡ ಮಲೇರಿಯಾದಿಂದ ಬಳಲುತ್ತಿದ್ದ ಎಂದು ಡಾಕ್ಟರು ನೀಡಿದ ಚಿಕಿತ್ಸೆ ಫಲಕಾರಿಯಾಗದೇ ವಾರಒಪ್ಪತ್ತಿನಲ್ಲಿ ಇಹಲೋಕ ತ್ಯಜಿಸಿದ. ಬನೆರು ಸಿದ್ದವ್ವ ಅವಳತ್ತಿ ಇಬ್ಬರೇ ಹೊಲಮನಿ, ಹೈನು ಕೆಲಸ ಅಂತ ಹೈರಾಣದರು. ಗಂಡನನ್ನು ಹೀಗೆ ಸಣ್ಣ ವಯಸ್ಸಿನಲ್ಲಿಕಳೆದುಕೊಂಡುದಕ್ಕೆ ಸಿದ್ದವ್ವಳ ಅವ್ವ ಗೋಳಾಡಿದಳು. ಮತ್ತೆ ಮಗಳಿಗೆ ಧೈರ್‍ಯ ತುಂಬಿದಳು. ಹತ್ತು ಕೂರಿಗೆ ಹೊಲ ಐತಿ ಅದರ ಒಡತಿ ನೀನು. ಮಕ್ಕಳನ್ನು ಹಡೆದು ಪಕ್ಕಡ್ಯಾಗ ಇಟ್ಟು ಜ್ವಾಪಾನ ಮಾಡು. ಇದೂ ಒಂದು ಗಂಡು ಹುಟ್ಟಿತೆಂದರೆ ನಿನ್ನ ನಸೀಬ ಮುಂದೆ ಏನೈತಿ ಮಗಳೇ ಧೈರ್‍ಯ ಕಳಕೊಳ್ಳಬೇಡ ಮಗಳೇ ಅಂತ ಸಿದ್ದವ್ವನ ಎರಡನೇಯ ಹೆರಿಗೆ ಆಗುವವರಿಗೆ ಮಗಳ ಜೊತೆಗೆ ಅವಳ ಗಂಡನ ಮನೆಯಲ್ಲಿ ಇದ್ದಳು. ಸಿದ್ದವ್ವನ ಅತ್ತಿಗೆ ಕಳ್ಳಗೂಡಿ ಇಬ್ಬರ ಜೊತೆ ಮತ್ತೊಬ್ಬಾಕಿ ಇದ್ದರೆ ಮತ್ತಷ್ಟು ಧೈರ್‍ಯ ಎಂದುಕೊಂಡಳು. ಮತ್ತು ಕೂರಗಿ ಜಮೀನ ಕಂಡ ಸಿದ್ದವ್ವಳಿಗೆ ಗಂಡನ ನಾಲ್ಕೆಕರೆ ಜಮೀನು ಸಂಬಾಳಿಸುವುದು ಏನೂ ದೊಡ್ಡ ವಿಷಯವಲ್ಲ ಅನಿಸಿತು.
ತಿಂಗಳುಗಳು ಉರುಳಿದವು, ಗಂಡ ಗತಿಸಿ ಆರು ತಿಂಗಳಿಗೆ ಸಿದ್ದವ್ವ ಮತ್ತೊಂದು ಗಂಡು ಮಗುವಿನ ತಾಯಿ ಆದಳು. ಅವಳವ್ವ ಇವರೊಟ್ಟಿಗೇ ಇರಹತ್ತಿದಳು. ಮೈದುನನ ಮಕ್ಕಳು ಹೊಲವನ್ನು ಬಿತ್ತಿ ಬೆಳೆಯುತ್ತಿದ್ದರು. ಆಗಾಗ ದೇಕರಕಿ ಮಾಡಲು ಸಿದ್ದವ್ವಳ ಅವ್ವ ಊರಿಗೆ ಹೋಗಿ ಬರುತ್ತಿದ್ದಳು. ಗಂಡ ಸತ್ತ ದುಃಖದಿಂದ ಸಿದ್ದವ್ವ ತನ್ನನ್ನು ಪಾರು ಮಾಡಿಕೊಳ್ಳಲು ಕೆಲಸದಲ್ಲಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಳು. ಮನೆಯ ಕೆಲಸ ದಂದಕ್ಕಿ ಕೆಲಸ ಅವಳವ್ವ ಮಾಡಿದರೆ ಅತ್ತೀ ದನ, ಎಮ್ಮೆ ಹೊಡೆದುಕೊಂಡು ಹೋಗಿ ಹೊಲದ ಕೆಲಸ ಸಂಬಾಳಿಸುತ್ತಿದ್ದಳು. ಮಕ್ಕಳ ಚೂರು ದೊಡ್ಡವಾದ ಹಾಗೆ ಸಿದ್ದವ್ವ ಮತ್ತೆರಡು ಎಮ್ಮಿ ಕಟ್ಟಿದಳು. ಹಾಲಿನ ಉತ್ಪಾದನೆ ಕೈ ಹಿಡಿಯಿತು. ಅತ್ತಿ ಮುಪ್ಪಾದರೂ ಹೊಲಕ್ಕೆ ದನಕರುಗಳನ್ನು ಹೊಡೆದುಕೊಂಡು ಹೋಗುವುದನ್ನು ನಿಲ್ಲಿಸಲಿಲ್ಲ. ಮಕ್ಕಳು ಕನ್ನಡ ಶಾಲೆಗೆ ಕಳುಹಿಸತೊಡಗಿದಳು. ಹೈನುಗಾರಿಕೆ ಹೆಚ್ಚಿಸುತ್ತ, ತನ್ನ ಒಳ ಆದಾಯವನ್ನು ಹೆಚ್ಚಿಸಿಕೊಂಡಳು. ಆ ಪಟ್ಟಣದ ಓಣಿ, ಅವರು ಪ್ರತಿಷ್ಠಿತ ಕಾಲೋನಿಯಲ್ಲಿ ಒಂದು ಮನೆ ಖರೀದಿಸಿದ್ದರು. ಅವರಿಗೆ ಸೂಳಿಕೇರಿ ಅವರು ಅಂತ ಹೇಳುತ್ತಿದ್ದರು. ಮನೆಯ ಮಗ ಟ್ರೇಜರಿ ಆಫಿಸರ್ ಆಗಿದ್ದ. ಅವನ ತಾಯಿ ಸಿದ್ದವ್ವ ಇಲಕಲ್ ರೇಷ್ಮೆ ಸೀರೆ ಕಣ ತೊಟ್ಟಕೊಂಡು ಇಡೀ ಓಣಿಯಲ್ಲಿ ಅಡ್ಡಾಡುತ್ತಿದ್ದಳು. ಅವಳೀಗ ಎಂಬತ್ತೈದು, ಎತ್ತರ ನೀಟಾದ ಬೆನ್ನಿನ ಕೊರಳಲ್ಲಿ ಗುಂಡು, ಬೋರಮಾಳ, ಎಳೆಸರಗಳನ್ನು ಖಾಯಂ ಹಾಕಿಕೊಂಡು ಬೆಳಿಗ್ಗೆ ತಿಂಡಿ ಆದ ಮೇಲೆ ಅವಳು ಆ ಕಾಲೋನಿಯ ಎರಡು ಮೂರು ಕ್ರಾಸ್‌ಗಳಲ್ಲಿ ವಾಕಿಂಗ್ ಮಾಡುತ್ತಿದ್ದಳು. ಕೆಲವರು ಅವಳನ್ನು ಮಾತನಾಡಿಸುತ್ತಿದ್ದರು. ಮತ್ತೆ ಕೆಲವರು ಹಳ್ಳಿಯ ಮುದುಕಿಯೊಂದಿಗೆ ಏನು ಮಾತುಕತೆ ಎಂಬಂತೆ ಮಾರಿ ತಿರುಗಿಸುತ್ತಿದ್ದರು. ಸಿದ್ದವ್ವ ಒಂಬತ್ತು ಗಂಟೆಯಿಂದ ಹತ್ತು ಗಂಟೆಯವರೆಗೆ ಓಣಿಗಳನ್ನು ಸುತ್ತು ಹಾಕುತ್ತಿದ್ದಳು. ಅವಳಾಗಿ ಎಂದೂ ಯಾರ ಮನೆಯ ಬಾಗಿಲಿಗೆ ಹೋಗುತ್ತಿರಲಿಲ್ಲ. ಅಕ್ಕತಂಗಿರಿದ್ದ ಆ ಒಂಟಿ ಮನೆಗೆ ಸಿದ್ದವ್ವ ಪ್ರೀತಿಯಿಂದ ಕಾಲಿರಿಸುತ್ತಿದ್ದಳು. ಸಣ್ಣ ಮೇಡಮ್ ಕೆಲಸಕ್ಕೆ ಹೋಗಿ ಆಯ್ತಾ ಅಂತ ಅಕ್ಕನಲ್ಲಿ ಮಾತಿಗೆ ಶುರುವಿಟ್ಟಕೊಂಡಳೆಂದರೆ ಆಯ್ತು ಹನ್ನೊಂದುವರೆಯವರೆಗೆ ಒಂದೇ ಸಮನೇ ತನ್ನ ಬದುಕಿನ ಇತಿಹಾಸದ ಪುಟಗಳನ್ನು ತೆರೆದಿಡುತ್ತಿದ್ದಳು. ಮೊದಮೊದಲು ಅಕ್ಕನಿಗೆ ಅವಳು ಏನು ಹೇಳುತ್ತಾಳೆ ಎಂದು ಅವಳ ಬೊಚ್ಚುಬಾಯಿಯ ಮಾತುಗಳಿಂದ ತಿಳಿಯುತ್ತಿರಲಿಲ್ಲ. ಅಕ್ಕ ಬರೀ ಹೂಂ ಗುಡುತ್ತಿದ್ದಳು. ಅಡಿಗೆ ಮಾಡ ಹೋಗಿ ನೀವು ಬಿಸಿಬಿಸಿ, ಊಟಾ ಮಾಡುವವರು ಅಂತ ಕರಾವಕ್ಕಾಗಿ ಅದೇ ವೇಳೆಗೆ ಇಳಿದು ಹೋಗುತ್ತಿದ್ದಳು.
ಅಕ್ಕ ಸರ್‍ವದಾಳಿಗೆ ತಂಗೀ ನೌಕರಿಗೆ ಹೋದ ಮೇಲೆ ಇಡೀ ದಿವಸ ಒಂಟಿಯಾಗಿ ಕಳೆಯಬೇಕಿತ್ತು. ಹವ್ಯಾಸಗಳಿದ್ದವು. ಆದರೂ ಓಣಿಯಲ್ಲಿ ಎಲ್ಲಾ ಪ್ರತಿಷ್ಠಿತ ಮಂದಿ ಬಾಗಿಲು ಮುಚ್ಚಿ ಒಳಗೊಳಗೆ ರಾಜಕೀಯ ಮಾಡುತ್ತಿದ್ದರು. ಸರ್‍ವದಾ ಓದು ಬರಹದಲ್ಲಿ ತನ್ನನ್ನು ತೊಡಗಿಕೊಂಡಿರುತ್ತಿದ್ದಳು. ಸೂಳಿಕೇರಿ ಅಮ್ಮ ಅವಳ ಬಿಗುವಾದ ಒಂಟಿತನಕ್ಕೆ ದಿನದ ಹತ್ತರಿಂದ ಹನ್ನೊಂದು ಒಂದು ಗಂಟೆ ಮಾತುಕತೆ ಒಂದು ಪ್ರೀತಿಯ ಒಳತೋಟಿಯನ್ನೇ ನಿರ್‍ಮಿಸಿ ಬಿಟ್ಟಿದ್ದಳು. ಅಮ್ಮ ಹೇಳುವ ಸುದ್ದಿಗಳನ್ನು ಅವಳು ಮನಸ್ಸಿಟ್ಟು ಕೇಳತೊಡಗಿದಳು. ಅವಳಿಗೆ ಅಮ್ಮನ ಬದುಕು ಬಹಳ ರೋಚಕದಿಂದ ಕೂಡಿದೆ ಅನಿಸಿತು. ಅವಳಿಗೆ ಸೂಳಿಕೇರಿ, ಅಮ್ಮ ಒಂದು ದೈತ್ಯ ಪ್ರತಿಭೆಯಾಗಿ ಗೋಚರಿಸಿದಳು. ಅವಳ ಬಾಳ ಪುಟಗಳು ಹೋರಾಟದಿಂದ, ಆತ್ಮಭಿಮಾನದಿಂದ, ಸ್ವಯಂ ಶಕ್ತಿಯಿಂದ ಕೂಡಿದೆ ಅನಿಸತೊಡಗಿತು. ಅಮ್ಮನೊಂದಿಗೆ ಮಾತನಾಡುತ್ತ ಅವಳು ಬಿಸಿ ಚಹಾ ಹೀರುತ್ತಿದ್ದರೂ, ಅಮ್ಮ ಮಾತ್ರ ಕುಡಿಯುತ್ತಿರಲಿಲ್ಲ. “ನಿಮಗೆ ಗೊತ್ತ ಐತಿ ಏನು. ಸಜ್ಜೀ ಬರ ಬಂದು ಎಷ್ಟು ವರ್‍ಷ ಆತು. ಮಾತ್ರ ವರ್‍ಷ ನಾನು ಹುಟ್ಟಿನಿ. ಎಂಟರಾಗ ಲಗ್ನ ಆತು, ಆಮೇಲೆ ಸೂಳಿಕೇರಿಗೆ ಬಂದೆ” ಅಲ್ಲಾ ಅಮ್ಮ ಸಜ್ಜೀ ಬರದಾಗ ನಾ ಎಲ್ಲಿ ಹುಟ್ಟೀನಿ, ನಾ ಹ್ಯಾಂಗೆ ಹೇಳಲಿ ನಿನ್ನ ಆಯುಷ್ಯನ. ಆದರೆ ಬಹಳ ದೊಡ್ಡ ಬರ ದೇಶದಾಗ ಬಂದಿತ್ತು ಅಂತ ಹಿರಿಯರು ಹೇಳುವುದನ್ನು ಕೇಳಿನಿ. ಸಜ್ಜೀ ಬರ ಅಂದ್ರ ಏನು” ಆ ವರ್‍ಷ ಒಣಬೆಳಿ ಸಜ್ಜೀ ಕೂಡಾ ಬೆಳೆದಿರಲಿಲ್ಲ. ಬಹಳ ಹೋರಾಟ ಆಗಿತ್ತಂತ. ಎಲ್ಲೂ ಕುಡಿಯಲು ನೀರು, ಉಣ್ಣಲು ಕಾಳಿ ಕಡಿ ಸಿಗತ ಇರಲಿಲ್ಲ ಅಂತ. ನಮ್ಮ ತೌರಮನ್ಯಾಗ ಹಗ್ಯಾಕ ಹಾಕಿದ್ರ ಕಾಳನ್ನು ಹೀಂಗಾಗಿ ಎರಡು ವರ್‍ಷ ಊಟಕ್ಕೇನು ಬರ ಬರಲಿಲ್ಲ. ಆ ವರ್‍ಷ ನಾನು ಹುಟ್ಟಿದ್ದೆ. ನಮ್ಮವ್ವ ಬಹಳ ತ್ರಾಸ್ ತಗೋಂಡು ನನ್ನ ಜ್ಞಾಪಾನ ಮಾಡ್ಯಾಳ” ಅಮ್ಮನ ಮಾತು ಸಾಗಿದಾಗ ಸರ್ವದಾ ಆಗಿನ ಕಾಲದ ಸಾಮಾಜಿಕ ಸ್ಥಿತಿಗತಿಯ ಬಗ್ಗೆ ಚಿಂತಿಸುತ್ತಿದ್ದಳು. “ಈಗಿನವರೆಗೆ ಏನು ಗೊತ್ತು ಮಣ್ಣಮಸಿ. ಹೊಟ್ಟಿಗಿಲ್ಲದ ಆ ಬರದಾಗ ಎರಿಮಣ್ಣ ತಿಂದು ಬದುಕಿದವರು ನಮ್ಮೂರಾಗ ಇನ್ನೂ ಅದಾರ” ಅಮ್ಮ ಬದುಕಿನ ಹೋರಾಟದ ಬಗ್ಗೆ ಹೇಳಿದರೆ ಸರ್ವದಾ ಮಣ್ಣು ತಿಂದು ಬದುಕಿದವರ ಬಗ್ಗೆ ಆಶ್ಚರ್‍ಯಪಡುತ್ತಿದ್ದಳು. “ನಮ್ಮದು ಎರೀ ಭೂಮಿ, ಕಪ್ಪ ಮಣ್ಣ, ನಾ ಚೊಚ್ಚಲ ಬಸರಿದ್ದಾಗ ಜಗ್ಗ ಹೆಂಟಿ ತಿನ್ನುತ್ತಿದ್ದೆ. ಅದರ ಸವಿ ಏನ ಹೇಳಲವ್ವಾ” ಸುಳಿಕೇರಿ ಅಮ್ಮ ತನ್ನ ಮೊದಲ ಬಸುರಿಗೆ ಬಗ್ಗೆ ಬಣ್ಣದ ರೀಲಿನ ಚಲನ ಚಿತ್ರವನ್ನೇ ಅವಳ ಕಣ್ಣಿದುರು ಇಡುತ್ತಿದ್ದಳು. ಸ್ವಾತಂತ್ರ್ಯ ಪೂರ್‍ವ ಭಾರತದ ಜನಜೀವನ ಕೆಂಪು ಮೂತಿಯ ಬ್ರಿಟೀಷ್ ಆಫಿಸರ್‌ಗಳು ಕುದುರೆ ಮುಖಾಂತರ ತಮ್ಮೂರು ದಾಟಿ ಹೋದದ್ದನ್ನು ಸೂಲೇಕೇರಿ ಅಮ್ಮ ಮೈಯ ಕೂದಲು ನೆಟ್ಟಗಾಗುವಂತೆ ವರ್‍ಣಿಸುತ್ತಿದ್ದಳು. ತಮ್ಮ ಹಳ್ಳಿಯ ಎಲ್ಲಾ ಹೆಣ್ಣು ಮಕ್ಕಳು ಚಳುವಳಿಗೆ ದೇಣಿಗೆ ನೀಡಿ ಚಳುವಳಿಯಲ್ಲಿ ಭಾಗವಹಿಸಿ ತನ್ನ ವಾಲೀಕಾರ ಗಂಡನ ಹಿರೇತನದಲ್ಲಿ ಬಾಗಲಕೋಟೆಗೆ ಹೋಗಿ ಆ ಊರಿನ ಕಲೆಕ್ಟರನನ್ನು ಭೇಟಿಯಾಗಿ ಸ್ವಾತಂತ್ರ್ಯ ಚಳುವಳಿಯ ಘೋಷಣೆ ಕೂಗಿದ್ದು, ಒಂದು ರಾತ್ರಿ ಜೈಲಿನಲ್ಲಿದ್ದು, ಎಲ್ಲರಿಗೂ ಮೊಲೆ ಹಾಲು ಕುಡಿಯುವ ಮಕ್ಕಳಿದ್ದ ಕಾರಣ ಹೊರಬಂದದ್ದು ಮತ್ತೆ ಇಡೀ ಊರು ಒಂದಾಗಿ ಕರಕೊಡದೇ ಇದ್ದದ್ದು, ರೇಡಿಯೋದಲ್ಲಿ ಗಾಂಧಿಜೀ ಭಾಷಣ ಕೇಳಿದ್ದು ಅವರ ಭಾಷೆ ತಿಳಿಯದಿದ್ದರೂ ಬೋಲೋ ಭಾರತ ಮಾತಾಕಿ ಜೈ ಅಂತಾ ಊರೆಲ್ಲಾ ತಿರುಗಾಡಿದ್ದು ಅಮ್ಮ ಬಹಳ ಅಭಿಮಾನದಿಂದ ಕೆಚ್ಚಿನಿಂದ ಸರ್‍ವದಾಳ ಮುಂದೆ ಹೇಳುತ್ತಿದ್ದಳು. “ನಮ್ಮದೇನು ದೊಡ್ಡ ಹೋರಾಟ ಅಲ್ಲ. ನಾವೇನು ಜೀವಾ ಕೊಡಲಿಲ್ಲ, ಆದ್ರ ಅಭಿಮಾನದಿಂದ ಬಾಯಿ ಜೋರು ಮಾಡಿರುತ್ತಿದ್ದೆವು. ಬ್ರಿಟೀಷರ ಸಲುವಾಗಿ ಊರಾಗ ಎಲ್ಲಾರ ಮನಸ ಒಂದಾಗಿತ್ತು. ಊರು ಒಗ್ಗಟ್ಟಾಗಿತ್ತು” ಅಮ್ಮ ಹೇಳುತ್ತ ಹೋದ ಹಾಗೆ ಸರ್‍ವದಾ ರೋಮಾಂಚನಗೊಳ್ಳುತ್ತಿದ್ದಳು. ಸೂಳಿಕೇರಿ ಸಿದ್ದವ್ವಮ್ಮ ತನ್ನ ಗತಗಾಲದ ಬದುಕಿನ ಪುಟಗಳನ್ನು ದಿನಾಲು ಮುಂಜಾನೆ ಸರ್ವದಾಳ ಮುಂದೆ ತಿರುವಿ ಹಾಕುತ್ತಿದ್ದಳು. ಮಗ ಆಫೀಸಿಗೆ ಹೋದಮ್ಯಾಲೆ ಅಮ್ಮ ಓಣಿಗುಂಟ ಬೆಳಗಿನ ತನ್ನ ಜಳಕ ತಿಂಡಿ ಮುಗಿಸಿ ಒಂದು ಸುತ್ತಹಾಕಿ ಒಬ್ಬಳೇ ಇರುತ್ತಿದ್ದ. ಸರ್‍ವದಾಳ ಮನೆಯ ಗೇಟನ್ನು ತೆರೆಯುತ್ತ ಮೇಡವ್ವ ಮೇಡವ್ವ ಅನ್ನುತ್ತ ಅಂಗಳಕ್ಕೆ ಕಾಲು ಇಡುತ್ತಿದ್ದಳು. ತನ್ನ ಮುಂಜಾನೆಯ ಕೆಲಸ ಮುಗಿಸಿದ ಸರ್‍ವದಾ ಪೇಪರ ಓದುತ್ತಿದ್ದ ಹೊತ್ತಿಗೆ ಸರಿಯಾದ ಸಿದ್ದವ್ವಮ್ಮ ಅವಳೆದುರು ಪ್ರತ್ಯಕ್ಷವಾಗುತ್ತಿದ್ದಳು. ಎಂಬತ್ತೈದರ ಸಿದ್ದವ್ವಳಿಗೆ ಈ ದಿನದ ಸುದ್ದಿ ಏನು ಬಂದೈತಿ ಎಂಬ ಮಾಹಿತಿಯನ್ನು ಸರ್‍ವದಾ ಒಪ್ಪಿಸಲೇ ಬೇಕಾಗಿತ್ತು. ಅವಳು ಹೆಚ್ಚಾಗಿ ರಾಜಕೀಯ ಸುದ್ದಿಗಳನ್ನು ಕೇಳುತ್ತಿದ್ದಳು. ಸರ್‍ವದಾ ಜೋರು ಸ್ವರದಲ್ಲಿ ಆ ದಿನದ ಪ್ರಮುಖ ಸುದ್ದಿಗಳನ್ನು ಹೇಳಿದಾಗ, ಅವಳು ಮೆತ್ತಗಿನ ಸ್ವರದಲ್ಲಿ ಈ ಸುದ್ದಿಗಳನ್ನು ನಿನ್ನೆ ರಾತ್ರಿಯೇ ನೋಡಿದೆ ಅನ್ನುತ್ತಾಳೆ. ಅವಳು ಪ್ಯಾಟಿ ಹುಡುಗೀರ ಹಳ್ಳಿ ಲೈಫು ತಪ್ಪದೇ ನೋಡುತ್ತಿದ್ದಳು. ಪ್ಯಾಂಟ್ ಹಾಕ್ಕೊಂಡು ಹುಡುಗಿಯರಿಗೆ ಹಿಂಡೀ ಅಲೆಯೋದು, ಎಮ್ಮಿ ಹಿಂಡೋದು ಹ್ಯಾಂಗೆ ಬರ್‍ತೈತಿ ಅಂತ ವಾದ ಮಾಡುತ್ತಿದ್ದಳು. ರೂಢಿಯಿಂದ ಬಂದ ಕೆಲಸ ಮಾಡಿದ್ರೆ ಚೆಂದ ಇಲ್ಲದಿದ್ದರೆ ನಗೆಪಾಟೀಲ ಆಗ್ತದ ಅಂತ ಹೇಳುತ್ತಿದ್ದಳು. ಪ್ರತಿ ದಿನದ ಧಾರವಾಹಿಯ ಚಿತ್ರಣ ಸರ್‍ವದಾಳ ಮುಂದೆ ಮರು ಪ್ರಸಾರ ಆಗುತ್ತಿತ್ತು. ಅಮ್ಮನ ವ್ಯಂಗ್ಯಭರಿತ ಕಾಮೆಂಟ್ಸ್ ಕೇಳಿ ಸರ್‍ವದಾ ಬಿದ್ದು ಬಿದ್ದು ನಗುತ್ತಿದ್ದಳು. ಸೂಲಿಕೇರಿ ಸಿದ್ದವ್ವಮ್ಮ ಬೊಚ್ಚು ಬಾಯಲ್ಲಿ ಮನತುಂಬಿ ನಗುತ್ತಿದ್ದಳು. ಸರ್ವದಾಳಿಗೆ ಅಮ್ಮನ ಬರುವಿಕೆ, ಇರುವಿಕೆ ಒಂಥರಾ ಮನೋರಂಜನೆ ಮತ್ತು ಹಿತವನ್ನು ಏಕಕಾಲಕ್ಕೆ ಹುಟ್ಟು ಹಾಕುತ್ತಿದ್ದವು.
ಒಮ್ಮೊಮ್ಮೆ ಸರ್ವದಾ ನೆಗಡಿ, ಕೆಮ್ಮು, ಮೈಕೈ ನೋವು ಅಂತ ಮಲಗಿದ್ದರೆ ಅಮ್ಮ ಬಂದು ಮೈ ಕೈಕಾಲುಗಳ ಮೇಲೆ ಬೇಡ ಬೇಡವೆಂದರೂ ಕೈಯಾಡಿಸುತ್ತಿತ್ತು. ಮೈ ಕೆಂಡ ಆಗದು ಒಂದೀಟು ಸುಂಟಿ ಕಾಡೆ ಮಾಡಿಕೊಂಡು ಕುಡಿ ನಾ ಮನಾಗ ಕಾಯಿಸಿಕೊಂಡು ಬರಲೇನು ಅಂತ ಮುಗಿ ಬೀಳುತ್ತಿತ್ತು. “ಬರೀ ತೋಲಮೈ ಹಿಂಡಿದ ಅರಿವಿಯಾಂಗ ಅದೀರ. ಒಂದಿಟೂ ಕಸು ಇಲ್ಲ, ಬರೀ ಅನ್ನ ತಿಂತೀರಿ. ಖಸು ಎಲ್ಲಿಂದ ಬರಬೇಕು. ಒಕ್ಕಲಿಗ ಮಂದೀ ಹ್ಯಾಂಗ್ಹ ಜಡಿತಾ ಜಡಿದು ಊಟ ಮಾಡಬೇಕು. ಬೆಳ್ಳುಳ್ಳಿ ಹಿಂಡೀ ದಿನಾ ಊಟದಾಗ ಬಳಸಬೇಕು ಅದಕ ವಾತ, ಪಿತ್ತ, ಕಫ ಕಡಿಮೆ ಆಗದ. ನಿಮ್ಮ ಮಂದೀ ಅದನ್ನು ತಿನ್ನೋದಿಲ್ಲ ಹೀಂಗ ಮೂರು ಮೂರು ದಿವಸಕ್ಕೆ ಹಾಸಿಗೀ ಹಿಡಿತೀರಿ. ಹುರಳಿ ಸಂಕಟಿ ಕಾಯಿಸಿಕೊಂಡು ಕುಡಿ, ಮೈಕೈ ಬ್ಯಾನಿ ಇದ್ದರ ಕೇಳು” ಅಮ್ಮ ಪ್ರೀತಿಯಿಂದ ಹೇಳುತ್ತ ಮೈ ಕೈ ತಿಕ್ಕುತ್ತಿತ್ತು. ಸರ್ವದಾಳಿಗೆ ಅಳು ಬರುತ್ತಿತ್ತು. ಸಿದ್ದವ್ವಮ್ಮನ ಬಸಿರು ಬಾಣಂತನ ಸುದ್ದಿಕೇಳಿ ಸರ್ವದಾಳಿಗೆ ತಾನೂ ಬಸಿರು ಬಾಣಂತಿನ ಅಂತ ಮಾಡಿಸಿಕೊಳ್ಳಲಿಲ್ಲವಲ್ಲ ಅಂತ ಅನಿಸುತ್ತಿತ್ತು. ಸಿದ್ದವ್ವಮ್ಮ ಹೇಳುತ್ತಿತ್ತು. ‘ಮೆಂಡವ್ವ ನನ್ನ ಬಾಣಂತನ ಎರಡೂ ಬಾಳಿಹಣ್ಣು ಸುಲೀದಾಂಗ್ಲ ಸರಳ ಆಗಿಹೋಯ್ತು. ಎರಡನೇ ಬಾಣಂತನದಲ್ಲಿ ಗಂಡ ಹೋಗಿದ್ದ. ನಮ್ಮ ಅವ್ವ ಮತ್ತು ಅತ್ತಿ ಬಹಳ ಧೈರ್‍ಯ ತುಂಬಿದರು. ಗಂಡಸರ ಇಲ್ಲದ ಮನಿ ನಾವು ಮೂರು ಜನ ಹೆಣ್ಣುಮಕ್ಕಳು, ಎರಡ ಎಳೇ ಸೌತಿಕಾಯಿಯಂತಹ ಮಕ್ಕಳು, ಹೊಲ ಮನಿ ಬಾಣಂತನ ಅಂತ ನಮ್ಮವ್ವ ಅತ್ತಿ ಬಹಳ ದುಡಿದರು. ಒಳಗೆ ಮಗನ ಕಳಕೊಂಡು ದುಃಖ ಇದ್ದರೂ ನಮ್ಮತ್ತಿ ಸೊಸೆ ಎರಡ ಗಂಡ ಮೊಮ್ಮಕ್ಕಳನ ಹಡೆದಾಳಂತ ಬಹಳ ಜ್ವಾಪಾನ ಮಾಡಿದಳು. ಕರಿದಂಡಿಯಿಂದ ನೀರ ಹೊತ್ತ ತಂದು ಹಾಕಿ, ಬಚ್ಚಲ ಬಾಯಿ ಅರಿವ್ಯಾಗ ಮುಚ್ಚಿ, ಬಚ್ಚಲ ತುಂಬ ಹಂಗ ಸುಡುಸುಡು ಹೊಯ್ದಾಡುವ ನೀರು ಎಣ್ಣೆ ಹಚ್ಚಿ ಸುರಿಯುತ್ತಿದ್ದಳು. ನೀರ ಮೊಣಕಾಲನ್ನು ಸುಡುತ್ತಿದ್ದರೂ ನಮ್ಮತ್ತಿ ಕೇಳುತ್ತಿರಲಿಲ್ಲ. ಬಾಣಂತಿ ನಂಜ ಕರಗಬೇಕು ಅಂತ ಹಂಗ ನೀರು ಸುರದು ಸುರುವಾಕಿ. ಸಂಗಟೀ ಕೂಡಾ ಬಿಸಿ ಬಿಸಿ ಕೊಬ್ಬರಿ ಖಾರ ತಿನ್ನಿಸಿ ಹೊರಸಿನ ಮೇಲೆ ಬರೀ ಒಂದು ಪಡಕಿ ಸುತ್ತಿ, ಅದರ ಬುಡದಾಗ ನಿಗಿ ನಿಗಿ ಕೆಂಡದ ಕುಪ್ಪಡಗಿ ಇಡುವಾಕಿ, ಒಮ್ಮೊಮ್ಮೆ ಜಳ ಹೆಚ್ಚಾಗಿ ಸಿಕ್ಕಪಟ್ಟೆ ಬೆವರು ಬಂದು ಎಲ್ಲರ ಓಡಿಹೋಗಲೇನು ಅನಿಸುತ್ತಿತ್ತು. ಕೂಸಿನ ಮೊದಲೇ ಎರೆದು ಮಲಗಿಸುತ್ತಿದ್ದರು. ಸುಡು ನೀರು, ಸುಡು ಕುಪ್ಪಡಿಗಿಯ ಶಾಖಕ್ಕೆ ದಣಿವಾಗಿ ಗಡದ್ದು ನಿದ್ದಿ ಬರೋದು. ಈಗೆಲ್ಲಿ ಐತಿ ಕುಪ್ಪಡಗಿ ಬಿಸಿನೀರು, ಎರಡು ಷಚರಗಿ ನೀರ ಗ್ಯಾಸ ಮ್ಯಾಲ ಕಾಸಿ ಜಳಕ ಮಾಡತಾವ. ಎಂತಹ ಕಾಲ ಬಂತವ್ವ, ಹಂಡೀ ನೀರ ಜಗಳಕಾನ ಗೊತ್ತಿಲ್ಲ ಇಂದಿನ ಮಕ್ಕಳೀಗ ಎಲ್ಲಾ ಪುಸಿಪುಸಿ, ಪಿಸಿ ಪಿಸಿ ಬಾಣಂತನದ ಊಟ ನೋಡಬೇಕ್ರಿ ನೀವು. ಗೋಧಿ, ಬೆಲ್ಲ ಹಾಕಿದ ಸಜ್ಜಕಕ್ಕೆ ಬಕ್ಕಳ ಒಂದು ಗಿಂಡೀ ತುಪ್ಪ ಸುರಿದು ಊಟಕ್ಕೆ ಹಾಕುತ್ತಿದ್ದರು. ಬಟ್ಟಲ ತುಂಬ ಕುಟ್ಟಿದ ಕಡಬ ತಿನ್ನಸುತ್ತಿದ್ದರು. ಚರಿಗಿ ಗಟ್ಟಲೇ ಹಾಲು ಕುಡಿಸುತ್ತಿದ್ದರು. ನಾಲ್ಕು ಹೊತ್ತ ಬಿಸಿ ಊಟ, ಎದೆ ತುಂಬಿ ಹಾಲು, ನನಗಂತೂ ಹಾಲು ತುಂಬಿ ಎದೀ ಬಿಗಿದು ಹಿಂಡಿ ಹಿಂಡಿ ಚೆಲ್ಲುತ್ತಿದ್ದೆ. ಸಣ್ಣ ಕೂಡ ಎಷ್ಟಮತ ಹಾಲು ಕುಡಿತದ.
ಮಲಗಿದ್ದಲ್ಲೇ ಹಾಲು ಸುರಿದ ಕೌದಿ ತೋಯುತ್ತಿತ್ತು. ನನ್ನ ಇಬ್ಬರೂ ಮಕ್ಕಳ ಆರು ವರ್‍ಷದವರೆಗೆ ನಿಂತ ಹಾಲು ಕುಡಿಯುತ್ತಿದ್ದರು. ಶಾಲೆಯಿಂದ ಬಂದ ಕೂಡಲೇ ಎದಿಗೆ ಬಾಯಿ ಹಾಕುತ್ತಿದ್ದವು. ಬೀಸುಕಲ್ಲ ಒಂದು ಸರತಿ ತಿರುಗಿಸಿದರೆ ಜಿಮಿ ಎಂದು ಎದೆಯಾಗಿನ ಹಾಲು ಪಸರುತ್ತಿತ್ತು. ಅಪ್ಪಿ ಹಾಲು ನನ್ನ ಗಂಡ ಮಕ್ಕಳ ಕುಡಿದಾವರೀ ‘ಸರ್ವದಾ ಅಮ್ಮನ ಈಗಿನ ಬಚ್ಚಗಿನ ಬಾಡಿದ ಮೊಲೆಯನ್ನು ಅವಳ ಕುಬಸದ ಬಾಯಿಂದ ಕಂಡು ನಗುತ್ತಿದ್ದಳು.
ಗಂಡನ ಕಳೆದುಕೊಂಡ ಸಿದ್ದವ್ವಮ್ಮ ಬದುಕಿನಲ್ಲಿ ಎಂದೂ ಧೃತಿಗೆಡಲಿಲ್ಲ. ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸುತ್ತಿದ್ದಳು. ಹೊಲ-ಮನಿ, ಹೈನು, ದನಕರು ಅಂತ ಬದುಕ ತುಂಬಾ ಓಡಾಡಿಯೇ ಓಡಾಡಿದಳು. ಮೊದಲು ಜನರಿಗೆ ಮರಗುವ ಮನ ಅವಳದು. ಹೈನುಗಾರಿಕೆ ಅವಳ ಕೈ ಹಿಡಿಯಿತು. ಹುಡುಗರು ಸ್ವಲ್ಪ ದೊಡ್ಡವರಾದ ಮೇಲೆ ಅವರವ್ವ ಹತ್ತೂ ಕೂರಿಗೆ ಹೊಲವನ್ನು ತಾನು ಜೀವಂತ ಇದ್ದಾಗಲೇ ಸಿದ್ದವ್ವನ ಹೆಸರಿಗೆ ಮಾಡಿದ್ದಳು. ತನ್ನ ಗಂಡನ ಮನೆಯ ಜವಾಬ್ದಾರಿಯಲ್ಲಿ ಸಿದ್ದವ್ವ ಅವಳವ್ವ ಸತ್ತ ವರ್‍ಷ ಕಾಕಾನ ಮಕ್ಕಳಿಗೆ ಅಂದರೆ ತಮ್ಮಂದಿರಿಗೆ ಹತ್ತೂ ಕೂರಿಗೆ ನಾಲ್ವತ್ತ ಎಕರಿ ಹೊಲ ಪಾಲಿನಾಂಗ ಲಾವಣಿ ಹಾಕಿದ್ದಳು. ಅವ್ವ ಸತ್ತ ಮರು ವರ್ಷ ಇದ್ದೊಬ್ಬ ಅತ್ತಿಯೂ ಚಳಿಜ್ವರ ಬಂದು ತೀರಿಕೊಂಡಿತು. ಸಿದ್ದವ್ವಳಿಗೆ ಹತ್ತಿಪ್ಪತ್ತು ವರ್ಷ ತಮ್ಮಂದಿರು ತಪ್ಪದೇ ಪಾಲು ಕೊಡುತ್ತಿದ್ದರು. ಸಿದ್ದವ್ವ ವ್ಯಾಪಾರದಲ್ಲಿ ಜಾಣೆ. ತಮ್ಮಂದಿರು ಕೊಟ್ಟ ಪಾಲು ತಾನು ಬರೀ ಹೈನು ಮಾರಿದ ಹಣ ಗಂಡ ವಾಲೀಕಾರನಾಗಿದ್ದ. ಅವನ ಪೋಟಗಿ ಎಲ್ಲಾ ಹಣವನ್ನು ಸೇರಿಸುತ್ತ ಹೋದಳು.
ಸಿದ್ದವ್ವಮ್ಮ ಸೂಳಿಕೇರಿಯಲ್ಲಿ ಹೊಲಮನಿಯಲ್ಲಿ ದುಡಿಯುತ್ತ ಎಕರೆ, ಎರಡೆಕರೆ, ನಾಲ್ಕೆಕರೆ ಅ೦ತಾ ಎಂಟು ಕೂರಿಗೆ ಜಮೀನಿನ ಖರೀದಿ ಮಾಡಿದಳು. ಅರ್‍ಧ ಭಾಗದಲ್ಲಿ ಹಣದ ಬೆಳೆ ಬೆಳೆಯುತ್ತಿದ್ದಳು. ಹೆಸುರು, ಸೇಂಗಾ, ಜ್ವಾಳ, ಸುರೇಪಾನ ಒಂದೇ ಎರಡೇ ಅವಳು ಬೆಳೆಯನ್ನು ತೆಗೆಯುತ್ತ ಹೋದಳು. ಕೈಯಾಗ ರೊಕ್ಕ ಕೂಡಿದಾಗ ಹೊಲ ಖರೀದಿ ಮಾಡುತ್ತ ಹೋದಳು. ಅವ್ವ ತನಗೆ ಕೊಟ್ಟ ಹೊಲಕ್ಕಿಂತ ಹೆಚ್ಚಿಗೆ ಹೊಲಮನಿ ಮಾಡಿದಳು. ಸ್ವಾತಂತ್ರ ಸಿಕ್ಕು ಹೊಸಗಾಳಿ ಬೀಸತೊಡಗಿತು. ಆಗ ಬದುಕು ಬಹಳ ಸರಳವಾಗಿತ್ತು. ಹಿರೇಮಗ ಮ್ಯಾಟ್ರಿಕ್‌ತನಕ ಓದಿ ಅವ್ವನಿಗೆ ತ್ರಾಸ್ ಆಗದ ಅಂತ ಕಮತ್ತಕ್ಕ ನಿಂತ. ಸಿದ್ದವ್ವಳಿಗೆ ರೆಕ್ಕೆಬಲ ಬಂದ ಹಾಗೆ ಆಯ್ತು. ಹರೆಯದ ಮಗ ಹೊಲದಲ್ಲಿ ಕೂರಗಿ ಹಿಡಿದು ಉಳುವಾಗ ಸಿದ್ದವ್ವ ತನ್ನ ನಡುಗೆಯನ್ನು ನೆನಪಿಸಿಕೊಳ್ಳುತ್ತ ಅಕ್ಕಡೀ ಕಾಳುಗಳನ್ನು ಬಿತ್ತುತ್ತ ಹೊಲದ ಗಾಳಿಗೆ ಮುಖ ಒಡ್ಡುತ್ತಿದ್ದಳು. ಮಕ್ಕಳು ಹುಣ್ಣಿಮೆಯ ಚಂದಿರನಂತೆ ಬೆಳೆದರು. ಸಣ್ಣ ಮಗನನ್ನು ಸಿದ್ದವ್ವ ದೊಡ್ಡ ಸಾಹೇಬ ಮಾಡಬೇಕಂತ ಬಾಗಲಕೋಟೆಯಲ್ಲಿ ಕಾಲೇಜಿಗೆ ಸೇರಿಸಿದ್ದಳು. ಮನೆಯಿಂದ ದಿನಾ ಬುತ್ತಿ ಕಟ್ಟಿಕೊಂಡು ಮಗ ಕಾಲೇಜಿಗೆ ಹೋಗಿ ಡಿಗ್ರಿ ಓದಿದ್ದು ಬಹಳ ಹೆಮ್ಮೆಯ ವಿಷಯವಾಗಿತ್ತು. ಎಲ್ಲರ ಮುಂದೆ ನನ್ನ ಮಗ ದೊಡ್ಡ ಸಾಹೇಬ ಆಗ್ತಾನ ಅಂತ ಹೇಳಿಕೊಳ್ಳುತ್ತಿದ್ದರು. ಸರ್ವದಾಳ ಮುಂದೆ ಹೇಳುತ್ತಿದ್ದಳು. “ಆಗ ನಾನು ತ್ರಾಸ ಪಟ್ಟದಕ್ಕೆ ಮಗ ಸಾಹೇಬ ಆಗ್ಯಾನ ಈಗ ಕುಂತ ಉಣ್ಣಕಾಹತ್ತೀನ್ರಿ. ಸರ್ವದಾಳಿಗೆ ಸಿದ್ದವ್ವನ್ನು ಒಂದು ದಿವಸ ಬರದಿದ್ದರೆ ಏನೋ ದೊಡ್ಡದು ಕಳೆದುಕೊಂಡಂತೆ ಭಾಸವಾಗುತ್ತಿತ್ತು. ಎಂಬತ್ತೈದರಲ್ಲೂ ಎಂತಹ ಜೀವನ ಉಲ್ಲಾಸ, ಟಿ.ವಿ.ಯಲ್ಲಿ ಬಂದ ಪ್ಯಾಟಿ ಹುಡುಗೀರ ಬಗ್ಗೆ ಹೇಳುವಾಗಲೆಲ್ಲೂ ಅಮ್ಮ ತನ್ನ ಬೊಚ್ಚುಬಾಯಿ ತೆರೆದು ಖೋಖಾಸಿ ನಗುತ್ತಿತ್ತು. ಅವಳ ಕಣ್ಣುಗಳ ನಿಚ್ಚಳವಾದವು. ತೆರದ ಮನಸ್ಸಿನ ಸಿದ್ದವ್ವ ಮಾತಿಗಿಟ್ಟುಕೊಂಡರೆ ತಾನು ಬದುಕಿ ಬಾಳಿದ ಜೀವನದ ಪಥದ ಚಿತ್ರವನ್ನು ತೆರೆದಿಡುತ್ತಿದ್ದಳು. ಹೈನುಗಾರಿಕೆ ಮಾಡಿ ಬಂಗಾರ ತಗೊಂಡುದಸ್ಟು ಮತ್ತು ಹೊಲಗಳನ್ನು ಖರೀದಿಸಿದ್ದು, ಬರೀ ಕೈ ದುಡಿಕೆ ಮೇಲೆ, ಮಗನ ಸಾಹೇಬ ಮಾಡಿದ್ದು, ಒಂದೇ ಎರಡೇ. ದಿನಾಲೂ ಸರ್ವದಾಳ ಮುಂದೆ ಪುನರಾವರ್ತಿಗೊಳ್ಳುತ್ತಿದ್ದವು. ಖರಾವಕ್ಕಾಗಿ ಒಂದೇ ಒಂದು ಗಂಟೆ ಅವಳ ಮನೆಗೆ ಬರುತ್ತಿದ್ದಳು. ಚಹಾ ಕುಡಿ ಅಂತಾ ಸರ್ವದಾ ಹೇಳಿದರೆ ಒಮ್ಮೆ ಕುಡಿಯೋದು, ಎರಡಸಲ ಕುಡಿದರೆ ಪಿತ್ತ ಆಗುತ್ತದೆ ಅಂತ ನಯವಾಗಿ ನಿರಾಕರಿಸುತ್ತಿದ್ದಳು. ಮೊದಮೊದಲು ಸರ್ವದಾಳಿಗೆ ಅಮ್ಮ ಬೊಚ್ಚುಬಾಯಿ ಮಾತಗಳು ತಿಳಿಯುತ್ತಿರಲಿಲ್ಲ. ಅವಳ ಬದುಕಿನ ನಾದವು ಇವಳ ಎದೆಯೊಳಗೆ ಇಳಿಯತೊಡಗಿತು. ಯಾವ ಮಾತುಗಳು ಸರ್ವದಾಳಿಗೆ ಬೇಸರ ಹುಟ್ಟಿಸುತ್ತಿರಲಿಲ್ಲ. ಮೌನದ ಗೋಡೆಗಳು ಅವರ ಮಾತುಗಳಿಗೆ ಸಾಕ್ಷಿ ಆಗಿರುತ್ತಿದ್ದವು. ದಿನಾಲೂ ಮಾತನಾಡುತ್ತ ಸಿದ್ದವ್ವ ಸರ್ವದಾಳ ಮನಸ್ಸಿನಲ್ಲಿ ಒಂದು ಒಳನೋಟಿಯನ್ನೇ ನಿಮಿಸಿ ಬಿಟ್ಟಿದ್ದವು. ಸಿದ್ದವ್ವ ತವರುಮನೆ ಕಡೆ ಇದ್ದ ಆಸ್ತಿಗಾಗಿ ಮತ್ತು ಮಕ್ಕಳ ಒಳತಿಗಾಗಿ, ಲಾವಣಿ ಮಾಡುವ ಕಾಕಾನ ಮಕ್ಕಳ ಎರಡು ಹೆಣ್ಣು ಮಕ್ಕಳನ್ನು ತನ್ನ ಇಬ್ಬರೂ ಮಕ್ಕಳಿಗೆ ತಂದು ಮದುವೆ ಮಾಡಿಸಿಬಿಟ್ಟಿದ್ದಳು. ಎಲ್ಲಾ ಆಸ್ತಿ ಬಳಗ ಒಳಗೊಳಗೆ ಆಗಿ ಎಲ್ಲಾ ಮಕ್ಕಳಿಗೆ ಅನುಕೂಲವಾಗುತ್ತದೆ ಎಂಬುದು ಅವಳ ಆಶೆ. ತನ್ನ ತಮ್ಮಂದಿರ ಹೆಣ್ಣು ಮಕ್ಕಳನ್ನು ಮನೆ ಸೊಸೆಯಂದಿರಾಗಿ ತಮದಾಗ ಸಿದ್ದವ್ವ ನೆಮ್ಮದಿಯಾಗಿಯೇ ಇದ್ದಳು. ಅವರು ಮಕ್ಕಳು, ಮರಿ, ಮನೆ ಕೆಲಸ ಮಾಡುತ್ತ ಬಂದರೆ ಸಿದ್ದವ್ವ ಮುಂಜು ಮುಂಜಾನೆ ಎದ್ದು ಬುತ್ತಿ ಕಟ್ಟಿಕೊಂಡು ಹೊಲಕ್ಕೆ ಹೋಗಿಬಿಡುತ್ತಿದ್ದಳು. ಸಂಜೀವರೆಗೆ ಆಳುಕಾಳಿನೊಂದಿಗೆ ಕೆಲಸ ಮಾಡುತ್ತ ಮಾತ ಕಟಿಯುತ್ತ ಸಿದ್ದವ್ವ ಬಯಲುಗಾಳಿ ಹೀರುತ್ತಿದ್ದಳು. ಮನೆಗೆ ಬಂದರೆ ಮೊಮ್ಮಕ್ಕಳೊಡನೆ ಬಂಕದಲಿ ಕುಳಿತು ಅವರನ್ನು ಆಟ ಆಡಿಸುತ್ತಿದ್ದಳು. ತಮ್ಮನ ಮಕ್ಕಳಾದ ಸೊಸೆಯಂದಿರು ಹೈನುಗಾರಿಕೆಯನ್ನು ತಾವೇ ಮಾಡುತ್ತಿದ್ದರು. ಸಿದ್ದವ್ವ ತನ್ನ ಸ್ವಂತ ದುಡಿಮೆಯಿಂದ ಮಾಡಿದ ಬಂಗಾರ ಸಾಕಾಷ್ಟು ಇತ್ತು. ಸಿದ್ದಪ್ಪ ಹೊಲದಿಂದ ಬಂದ ಕೂಡಲೇ ಬಲಿ ಮೇಲೆ ಹಂಚು ಇಟ್ಟು ಬಿಸಿ ಬಿಸಿ ಹೊಟ್ಟೆ ಉಬ್ಬಿದ ರೊಟ್ಟಿ ಮಾಡಿ, ಹಾಲು ಕೆನಿ ಮೊಸರು ಹಾಕಿ ಊಟಕ್ಕೆ ನೀಡುತ್ತಿದ್ದರು. ಸಿದ್ದವ್ವ ಹೊಲದಲ್ಲಿ ದುಡಿದರೂ ಸ್ವಲ್ಪವೂ ಹೈರಾಣ ಆಗುತ್ತಿರಲಿಲ್ಲ. ಗಿಂಡಿ ಗಟ್ಟಲೇ ತುಪ್ಪ, ಸೇರುಗಟ್ಟಲೇ ಹಾಲು ಕುಡಿದ ಅವಳು ಗಟ್ಟಿಮುಟ್ಟಾಗಿದ್ದಳು. ಬದುಕು ನಿಂತ ನೀರಲ್ಲ. ಹರಿಯುವ ತನ್ನ ಪಾಳಿ ಬದಲಿಸುವ ನದಿಯಂತೆ ಅದು ಬದಲಾಗುತ್ತ ಹೋಗುತ್ತದೆ. ಇಡೀ ಜೀವಮಾನ ದುಡಿಕೆ ಗಳಿಸುವುದು, ಹೊಲ ಖರೀದಿಸುವುದು, ಒಂಟಿಯಾಗಿ ನಡೆದ ಸಿದ್ದವ್ವ ಈಗ ಎಂಬತ್ತೈದರ ವಯಸ್ಸಿನಲ್ಲಿ ಮಾನಸಿಕ ಸಂಕಟಕ್ಕೆ ಒಳಗಾಗಿದ್ದಾಳೆ. ತನ್ನದೇನೋ ಅಮೂಲ್ಯವಾದದ್ದು ಕಳೆದುಕೊಂಡಂತೆ ಸರ್‍ವದಾಳ ಮುಂದೆ ಒಂದು ದಿವಸ ಬಹಳ ಚಡಪಡಿಸಿದಳು. ಸರ್ವದಾ ಎಷ್ಟೇ ಸಮಾಧಾನ ಮಾಡಿದರೂ ಸಿದ್ದವ್ವಮ್ಮನ ಚಡಪಡಿಕೆ ನಿಲ್ಲಲಿಲ್ಲ. ಅವಳು ಬದುಕಿನಲ್ಲಿ ಎಲ್ಲರನ್ನೂ ನಂಬಿದ್ದಳು, ಪ್ರೀತಿಸುತ್ತಿದ್ದಳು ಎಂದೂ ಯಾವ ಆಸ್ತಿಯ ಮೇಲೂ ಹಕ್ಕು ಚಲಾಯಿಸಿರಲಿಲ್ಲ. ಒಬ್ಬರ ಕಷ್ಟ-ಸುಖ ಅರಿತುಕೊಂಡೇ ಜೀವನ ಮಾಡಿದ್ದಳು. ತಾನು ಉಳಿಸಿದ ಸಾವಿರಾರು ರೂಪಾಯಿಗಳನ್ನು ತಮ್ಮಂದಿರಿಗೆ, ಗಂಡು ಮಕ್ಕಳಿಗೆ ಆಪತ್ತಿನಲ್ಲಿ ಸಹಾಯ ಮಾಡಿದ್ದಳು. ಅವಳಿಂದ ಇಸಿದುಕೊಂಡ ರೊಕ್ಕ ಹತ್ತಿಪ್ಪತ್ತು ವರ್ಷವಾದರೂ ಯಾರೂ ಹಿಂತಿರುಗಿಸಿರಲಿಲ್ಲ. ತಮ್ಮಂದಿರು ಅವಳ ಹಣದಿಂದಲೇ ಹೆಚ್ಚು ಹೆಚ್ಚು ಹೊಲಗಳನ್ನು ಖರೀದಿಸಿದ್ದರು. ಅವಳ ನಡಿಗೆ ಸಾಮಾನ್ಯ ನಡಿಗೆಯಾಗಿರಲಿಲ್ಲ. ಅವಳ ಗಂಡನಿಂದ ಬಂದ ಪೆನ್‌ಶ್ಯನ್ ಹಣವನ್ನು ಹಾಗೇಯೇ ಇರಿಸಿದ್ದಳು. ಅದು ಮಗ ಸಾಹೇಬ ಆಗುವವರೆಗೆ ಒಂದು ದೊಡ್ಡ ಇಡಿಗಂಟಾಗಿತ್ತು. ಮಗ ಮತ್ತೆ ಶಹರದಲ್ಲಿ ಮನೆ ಖರೀದಿಸಿದ. ಸಿದ್ದವ್ವ ಈಗ ಪಟ್ಟಣದಲ್ಲಿ ಇದ್ದರೂ ಆಗಾಗ ಸೂಳಿಕೇರಿಗೆ ಹೋಗಿ ತಾನು ಮಾಡಿದ ಹೊಲದಲ್ಲಿ ಕಮತ ಮಾಡುವ ಮಗನೊಂದಿಗೆ ಪ್ರೀತಿಯಿಂದ ತಿರುಗಾಡಿ ಬರುತ್ತಿದ್ದಳು.
ಬದಲಾಗುವ ವಾತಾವರಣಕ್ಕೆ ಮಕ್ಕಳು ಬದಲಾಗತೊಡಗಿದರು. ದೊಡ್ಡವ ತಮ್ಮಗ ನೌಕರಿ ಐತಿ, ನೀನು ತೆಗೆ ಅಂತ ಹತ್ತಿಬಿದ್ದ. ಸಿದ್ದವ್ವ ಕೂಡಿ ಇದ್ದರ ಬಹಳ ಚೆಂದ ಅಂತ ವಾದಿಸಿದಳು. ಮೊಮ್ಮಕ್ಕಳು ದೊಡ್ಡವರಾದ್ರು ಮದುವಿ ಮುಂಜವಿ ಆಗಬೇಕು. ನೀ ಹ್ಯಾಂಗರ ಮಾಡಿ ಜೀವಂತ ಇರುವಾಗಲೇ ಪಾಲು ಮಾಡಿಕೊಡು. ನಾನೂ ಕೈಯಾಗ ನಾಲ್ಕು ಮಾಡಕೋತಿನಿ. ಅಂವ ಕಾರಿನಾಗ ಅಡ್ಡಾಡಕ ಹತ್ಯಾನ, ಕಂತಗಿನ ರೊಕ್ಕ ತಗೊಂಡು ಕಂಡ ಕಡಲ್ಲಿ ಸೈಟ ಹಿಡಿದಾನ. ನಿನ್ನ ತೌವರುಮನಿ ಆಸ್ತಿ ಎಷ್ಟ ದಿನಾ ಅಂತ ನಿಮ್ಮ ತಮ್ಮಗೋಳು ಉಣ್ಣೋದು. ನಾನೂ ಮಕ್ಕಳೊಂದಿಗೆ, ಬಾಳೇ ಸಾಗಬೇಕಲ್ಲ, ನಿಂಗೂ ವಯಸ್ಸಾಯಿತಲ್ಲ. ಮುಂದೆ ಯಾರ ಮನಸ ಹ್ಯಾಂಗೋ ಏನೋ, ಮಗಳ ಲಗ್ನ ಬಂದಳಾಲ್ಲಿ ನಿನ್ನ ತಮ್ಮನ ಮಕ್ಕಳೀಗ ಬೀಗತನ ಮಾಡಿಸು ಪಾಳು ಮಾಡಿಕೊಂಡು ಅಂತ ದುಂಬಾಲು ಬಿದ್ದ. ಸಿದ್ದವ್ವನಿಗೆ ಹೀರೇಮಗ ಹೇಳಿದ್ದು ಖರೇಖರೇ ಅನಿಸತೊಡಗಿತು. ಅವಳು ತನ್ನ ಪಾಲಿನ ತೌರುಮನೆಯ ಹೊಲಗಳನ್ನು ಲಾವಣೆಯಿಂದ ಬಿಡಿಸಿಕೊಳ್ಳಬೇಕೆಂದು ಒಂದು ದಿನಾ ಸೀದಾ ತವರುಮನೆಗೆ ಹೋದಳು. ಸಿದ್ದವ್ವನಿಗೆ ತನ್ನ ತಾಯಿಯ ಮನೆಯ ಕರಿಕಂಬಗಳು ಬಾಚಿ ತಬ್ಬಿಕೊಂಡಂತೆ ಅನಿಸಿತು. ಒಬ್ಬ ಅವ್ವನ ಮನೆಯಲ್ಲಿದ್ದ ಇನ್ನೊಬ್ಬ ಬೇರೆ ತಮ್ಮ ಮನೆಯಲ್ಲಿದ್ದ. ಇಬ್ಬರೂ ಕಾಕಾನ ಮಕ್ಕಳು ಹೆಣ್ಣು ಬೀಗರಾದರು. ಸಿದ್ದವ್ವ ಬಂಕದ ಮೇಲೆ ಒಟ್ಟಿದ ಕಾಳುಕಡಿ ಚೀಲಗಳನ್ನು ನೋಡಿದಳು. ಮನೆ ಒಳಗಿನ ಪಡಸಾಲೆಯಲ್ಲೂ ಚೀಲದ ನಿಟ್ಟೆ ತುಂಬಿತ್ತು. ಮಧ್ಯಾನ್ಹ ಊಟ ಆದ ಮೇಲೆ ಇನ್ನೊಬ್ಬ ತಮ್ಮನನ್ನು ಕರೆ ಕಳುಹಿಸಿದಳು. ಅಂವ ತಡಮಾಡಿ ಬಂದ, ಸಿದ್ದವ್ವ ನೇರ ವಿಷಯಕ್ಕೆ ಬಂದಳು “ನೋಡ್ರಿ ತಮ್ಮಗಳು, ನೀವಿಬ್ಬರೂ ನನ್ನ ಹಿಸೆ ಹೊಲವನ್ನು ಈ ನಾಲವತ್ತ ವರ್ಷ ಲಾವಣಿ ಉಂಡರಿ, ಈಗ ನನ್ನ ಮಕ್ಕಳು ದೊಡ್ಡವರಾಗ್ಯಾರ ಇಬ್ಬರೂ ಹಿಸೆ ಬ್ಯಾರಾ ಆಗಬೇಕೆಂದರಾ. ಅದಕ್ಕೆ ನನ್ನ ಹೊಲ ನನಗೆ ಬಿಟ್ಟುಕೊಡ್ರಿ, ಈ ಸಲದ ಬೆಳೆ ಹರಕೊಳ್ಳರಿ. ಇನ್ನಮುಂದ ಬೀಜ ಬಿತ್ತಬ್ಯಾಡರಿ. ತಮ್ಮಂದಿರ ಹಾಂ ಅನ್ನಲಿಲ್ಲ ಹೂಂ ಅನ್ನಲಿಲ್ಲ. ನಿನ್ನ ಗಂಡ ಮಕ್ಕಳ ಹೆಣ್ಣು ಮಕ್ಕಳನ್ನು ನಮ್ಮ ಮಕ್ಕಳಿಗೆ ಲಗ್ನಾ ಮಾಡಿಸು ಹೊಲ ಅವರ ಉಣ್ಣುತ್ತಾರಲ್ಲ. ಅಂದರು. ಸಿದ್ದವ್ವಳಿಗೆ ಇವರೇನೋ ಒಳಗಿನೊಳಗೆ ಬೇಡರೆ ವಿಚಾರ ಮಾಡಾಕ ಹತ್ತಾರ ಅನಿಸಿತು. ಊರ ಪಂಚಾಯತಿಯಲ್ಲಿ ಹೋಗಿ ವಿಚಾರಿಸಿದಳು. ಅವಳ ಇಡೀ ಹೊಲ ತಮ್ಮನ್ನ ಮಕ್ಕಳ ಹೆಸರಿಗೆ ವರ್ಗಾವಣೆ ಮಾಡಿದ್ದ ತಿಳಿದು ಬಂತು. ಭೂಮಾಪನ ಕಾಯಿದೆ ಹಚ್ಚಿ ತಮ್ಮಂದಿರು ಹತ್ತು ಕೂರಿಗೆ ಅಂದ್ರೆ ಸುಮಾರು ನಾಲವತ್ತ ಎಕರೆ ಹೊಲ ತಮ್ಮದಾಗಿಸಿಕೊಂಡಿದ್ದರು. ಇದಕ್ಕೆ ಸಿದ್ದವ್ವ ಸೊಸೆಯಂದಿರು ತಮ್ಮ ಅಪ್ಪಗೊಳಗೆ ಕುಮ್ಮಕ್ಕು ಕೊಟ್ಟಿದ್ದರು. ನಿಮ್ಮ ಮಕ್ಕಳೇನು ಓದಿಲ್ಲ ನನ್ನ ಮೊಮ್ಮಕ್ಕಳು ಬಹಳಷ್ಟು ಓದ್ಯಾರ. ಯಾವ ಕಾರಣಕ್ಕೂ ನಾನು ನಿಮ್ಮ ಮನಿಗೆ ಮದುವೆ ಮಾಡಿಕೊಡುವುದಿಲ್ಲ. ಅದಹ್ಯಾಂಗ ನನ್ನ ಸಹೀ ಇಲ್ಲದೇ ನನ್ನ ಹೊಲದ ಮಾಲೀಕರಾಗ್ತಿರೋ. ನಾನು ಒಂದು ಕೈ ನೋಡೇ ಬಿಡ್ತೀನಿ. ಸಿದ್ದವ್ವ ಚೀರಾಡಿ ಹಾರಾಡಿ ಮನೆಗೆ ಬಂದು ಸೊಸೆಗೆ ವಟವಟ ಹಚ್ಚಿದಳು. “ನನ್ನ ಮಗ ಸಾಹೇಬ ಅದಾನ ಅದ್ಯಾಂಗ ನಿಮ್ಮ ಅಪ್ಪ ಮೋಸಮಾಡಿ ನನ್ನ ಹೊಲನ ತನ್ನ ಮಕ್ಕಳ ಹೆಸರಿಗೆ ಹಚ್ಚಿಕೊಂಡಾನ, ನೀ ಹ್ಯಾಂಗ ಓದಿದ ಮಗಳನ್ನು ತಮ್ಮಗ ಕೊಡ್ತೀನಿ ನಾನು ನೋಡೇಬಿಡ್ತೀನಿ” ಸಿದ್ದವ್ವ ಸೊಸೆಯೊಂದಿಗೆ ಜಗಳ ತೆಗೆದುಕೊಂಡಳು.
ಸರ್ವದಾಳ ಮನೆಗೆ ಬಂದ ಸಿದ್ದವ್ವ ಈ ದಿನ ನನ್ನ ಹೊಲದ ಮಾಲೀಕತ್ವದ ಬಗ್ಗೆ ತಹಸೀಲದಾರರಿಗೆ ಈ ದಿನ ಅರ್ಜಿ ಸಲ್ಲಿಸುತ್ತೇನೆ. ಕೋರ್ಟು ಮೆಟ್ಟಿಲು ಹತ್ತುತ್ತೀನಿ. ನನ್ನ ಹಕ್ಕು ಯಾರ ಹ್ಯಾಂಗ ತಗೋತಾರೆ ನೋಡಿಯೇ ಬಿಡ್ತೀನಿ ಅಂತ ಹೇಳಿ ಹೋದವಳು ಮತ್ತೆ ಮರಳಿ ಬರಲೇ ಇಲ್ಲ. ಹೊಲದ ಧ್ಯಾನದಲ್ಲಿ ಉಪವಾಸ ಕೈಗೊಂಡು ನಿತ್ರಾಣವಾಗಿ ಎಲ್ಲರಿಗೂ ವಿಷಯ ಹೇಳಿ ಹೋದವಳು ಹಿಂದಿರುಗಲಿಲ್ಲ.
*****


















