ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು ವಿವರಿಸಿ ಹೇಳುತ್ತಿದ್ದರು.
ಅದು ಭಾರತದಲ್ಲಿ ಅಂಚೆ ಇಲಾಖೆಯಲ್ಲಿ ನೌಕರಿ ಮಾಡುತ್ತಿದ್ದ ರಂಗುವಿನ ಬಾಳಲ್ಲಿ ಥೇಟ್ ಹಾಗೇ ನಡೆದದ್ದು ಎಂಬುದು ಅವನ ಪ್ರೇಯಸಿ ಸಾವಿತ್ರಿಗೆ ಮಾತ್ರ ಗೊತ್ತಿತ್ತು. ಅವರು ಮುಸಿಮುಸಿ ನಗುತ್ತಾ ತಮ್ಮ ನೆನಪಿನ ಓಣಿಯಲ್ಲಿ ಸಾಗಿಬಿಟ್ಟರು.
ಸಾವಿತ್ರಿ ಆಗಿನ್ನು ಹದಿನೇಳು ಪ್ರಾಯದ ಸುಂದರ ಸ್ವೀಟ್ ಹುಡುಗಿ. ಅವಳಿಗೆ ರಂಗುವಿನಿಂದ ಕಾಲೇಜಿಗೆ ಪ್ರೇಮ ಪತ್ರಗಳು ದಿನವೂ ಬರುತ್ತಿದ್ದವು. ರಂಗು ಸಾವಿತ್ರಿಯ ಮನೆ ಎದುರುಗಡೆ ಇದ್ದ ಇಪ್ಪತ್ನಾಲ್ಕು ವರುಷದ ಕಾರಕೂನ. ಅವನಿಗೆ ಸಾವಿತ್ರಿಯ ಸೌಂದರ್ಯ ನೋಡಿ ಮೊದಲ ನೋಟದಲ್ಲೇ ಪ್ರೇಮ ಅಂಕುರಿಸಿತ್ತು.
ಮುಂಜಾನೆ ಎದ್ದೊಡನೆ ಕಿಡಿಕಿ ತೆರೆಯುವ ನೆಪದಲ್ಲಿ ಅವರಿಬ್ಬರ ಕಣ್ಣುಗಳು ಸೇರುತ್ತಿದ್ದವು. ಮುಗುಳುನಗೆ ವಿನಿಮಯವಾಗುತ್ತಿತ್ತು. ಸಾವಿತ್ರಿ ಕಾಲೇಜಿಗೆ ಹೋಗುವಾಗ ರಂಗು ಕಚೇರಿಗೆ ಹೋಗುತ್ತಿದ್ದ. ಇಬ್ಬರೂ ಒಂದೇ ಬಸ್‌ಸ್ಟಾಪಿನಲ್ಲಿ ಬಸ್ಸಿಗಾಗಿ ಕಾಯುತ್ತಿದ್ದರು. ಅವರು ತಮ್ಮ ಅಂತರಂಗದ ಎಷ್ಟೋ ಮಾತುಗಳನ್ನು ಪ್ರೇಮಾಲಾಪಗಳನ್ನು ಹಂಚಿಕೊಂಡು ಒಂದೇ ಬಸ್ಸಿನಲ್ಲಿ ಹೋಗುತ್ತಿದ್ದರು. ಸಾವಿತ್ರಿ ಮಹಾರಾಣೀಸ್ ಕಾಲೇಜಿನ ಬಳಿ ಇಳಿಯುತ್ತಿದ್ದಳು. ರಂಗು ವಿಧಾನ ಸೌಧದ ಮುಂದೆ ಇರುವ ಅಂಚೆ ಕಚೇರಿ ಬಳಿ ಇಳಿಯುತ್ತಿದ್ದ. ಹೀಗೆ ದಿನವೂ ಅವರ ಭೇಟಿ, ಪ್ರಣಯ, ಪ್ರೇಮಸಲ್ಲಾಪ ನಡೆಯುತ್ತಿತ್ತು. ಹೀಗೆ ಮೂರು ನಾಲ್ಕು ವರ್ಷ ಕಳೆಯಿತು. ನಿರಂತರವಾಗಿ ಹರಿಯುತ್ತಿದ್ದ ಪ್ರೇಮಕ್ಕೆ ಸಾವಿತ್ರಿಯ ದರ್ಶನವಿಲ್ಲದೆ ಬ್ರೇಕ್ ಬಿದ್ದಿತು.
ರಂಗು ತನ್ನ ಶೋಧನೆ ಬಿಡಲಿಲ್ಲ. ಅಕ್ಕಪಕ್ಕದ ಮನೆಯವರ ಸುದ್ಧಿವಾರ್ತಾ ಪ್ರಸಾರಗಳಿಂದ ಸಾವಿತ್ರಿ ತಂದೆಗೆ ಮೈಸೂರಿಗೆ ವರ್ಗಾವಣೆಯಾಗಿದೆ ಎಂದು ತಿಳಿದುಕೊಂಡ ಅವನ ಮನಸ್ಸಿಗೆ, ಸಾವಿತ್ರಿ ಹೇಳದೇ ಹೋದುದು ಬಹಳ ಘಾಸಿಯಾಯಿತು. ಏನೋ ಅನಿವಾರ್ಯ ಸಂದರ್ಭಕ್ಕೆ ಸಿಕ್ಕಿ ಅವಳು ಸಂಧಿಸದೇ ಹೋಗಿರಬೇಕೆಂದು, ಮನಸ್ಸಿಗೆ ಸಮಾಧಾನ ತಂದುಕೊಂಡ. ಅವನು ವಿರಹ ವೇದನೆಯಿಂದ ದೇವದಾಸ್‌ನಂತೆ ತಪಿಸುತ್ತಿರುವಾಗ ಒಮ್ಮೆ ಆಶ್ಚರ್ಯ, ಸಂತಸ ತಂದ ಸಾವಿತ್ರಿ ಪತ್ರ ಅವನ ಕಚೇರಿಯ ವಿಳಾಸಕ್ಕೆ ಬಂತು. ರಂಗುವಿನ ಪತ್ರ ಓದುವ ಕಾತುರ ಒಂದು ಕಡೆ ಇದ್ದರೂ ಫೈಲುಗಳನ್ನು ಹಿಡಿದು ಬಂದ ನೌಕರನಿಗೆ ಉತ್ತರ ಹೇಳಿ ಕಳಿಸಿ ತನ್ನ ಮುಂದಿದ್ದ ಫೈಲುಗಳನ್ನು ಬೆಟ್ಟದಂತೆ ಸೇರಿಸಿ ಅಡ್ಡ ಇಟ್ಟುಕೊಂಡು ಗುಪ್ತವಾಗಿ ತನ್ನ ಪ್ರೇಯಸಿಯ ಪ್ರೇಮಪತ್ರ ಓದಿಕೊಂಡ. ಅದು ಕನಸೋ ನನಸೋ ಎಂದು ಮತ್ತೆ ಓದಲಾರಂಭಿಸಿದ.
ರಂಗು! ನೀ ನನ್ನ ಬಾಳಿನ ಕಾಮನ ಬಿಲ್ಲಿನ ರಂಗು!
ನಿನ್ನ ನೋಡದೆ ಮೈಸೂರಿಗೆ ಬರಬೇಕಾಯಿತು. ತಂದೆಯ ವರ್ಗಾವಣೆ ಆಗಿ ನಾವು ಇಲ್ಲಿಗೆ ಸ್ಥಳಾಂತರವಾಗಿದ್ದೇವೆ. ನಾನು ಇಲ್ಲಿ ಸರ್ಕಾರಿ ಗ್ರಂಥಾಲಯದಲ್ಲಿ ಕೆಲಸ ಮಾಡುತ್ತಿರುವೆ. ನನ್ನ ವಿಳಾಸ ಕೊಟ್ಟಿರುವೆ. ನೀನು ಪತ್ರಬರಿ. ನಾ ನಿನ್ನ ಮರೆಯಲಾರೆ.
ಇತಿ,
ಎಂದೂ ನಿನ್ನ ಪ್ರೇಯಸಿ
ಸಾವಿತ್ರಿ
ಪತ್ರ ಓದಿಕೊಂಡು ರಂಗುವಿಗೆ ಸಂತಸ ಭರಿಸಲಾರದಾಯಿತು. ವಿಳಾಸ ಸಿಕ್ಕಿದ್ದೇ ತಡ ಪ್ರೇಮ ಪ್ರವಾಹ ಪತ್ರ ರೂಪವಾಗಿ ದಿನವೂ ಹರಿಯತೊಡಗಿತು. ರಂಗು ದೀಕ್ಷೆ ತೊಟ್ಟವನಂತೆ ದಿನಾ ಒಂದು ಪತ್ರ ಬರೆದು ಅಂಚೆಗೆ ಹಾಕುತ್ತಿದ್ದ. ಸತತವಾಗಿ ಎರಡು ವರ್ಷದವರೆಗೂ, ಆ ಕಡೆ ಅಂಚೆಯವನು ಸಾವಿತ್ರಿಗೆ ದಿನವೂ ಪತ್ರವನ್ನು ತಪ್ಪದೆ ತಲುಪಿಸುತ್ತಿದ್ದ.
ಆದರೆ ದಿನ ಕಳೆದಂತೆ ಪ್ರೇಯಸಿಯ ಪತ್ರ ವಿರಳವಾಗುತ್ತಾ ಬಂತು. ಒಂದು ದಿನ ಪೂರ್ತಿ ನಿಂತೇಹೋಯಿತು. ಪ್ರಿಯಕರ ರಂಗು ಕಂಗಾಲಾದ. ಮತ್ತೆ ಇವಳಿಗೆ ಏನಾಯಿತು? ಏಕೆ ಪತ್ರ ಬರೆಯುತ್ತಿಲ್ಲ ಎಂದು ನಾನಾ ವಿಧವಾಗಿ ಯೋಚಿಸಿದ. ಅವನ ಹೃದಯ ಮರಳುಗಾಡಿನಂತೆ ಆಯಿತು. ಸಾವಿತ್ರಿಯ ಮೇಲೆ ತನ್ನ ಹೃದಯದ ಭಾವನೆಗಳನ್ನೆಲ್ಲಾ ಬಿಚ್ಚಿಟ್ಟು ಪ್ರೇಮ ಭಿಕ್ಷೆ ಬೇಡುತ್ತಿದ್ದ. ಅವಳು ಪತ್ರ ನಿಲ್ಲಿಸಿದ್ದಕ್ಕೆ ಒಂದು ಸುಳುಹು ಕೂಡ ಸಿಕ್ಕಲಿಲ್ಲ. ಕಚೇರಿಯಲ್ಲಿ ಮನಸ್ಸಿಟ್ಟು ಕೆಲಸ ಮಾಡುವುದು ಕಷ್ಟವಾಯಿತು. ಕೊನೆಗೆ ಮೈಸೂರಿಗೆ ಹೋಗಿಯೇ ಬಂದುಬಿಡುವೆ ಎಂದು ನಿರ್ಧರಿಸಿ ರೈಲು ಹತ್ತಿ ಹೋದ.
ಗ್ರಂಥಾಲಯಕ್ಕೆ ಬಂದು ಸಾವಿತ್ರಿಯನ್ನು ಸಂಧಿಸಿದಾಗ ಅವನಿಗೆ ಬರಸಿಡಿಲು ಬಡಿದಂತಾಯಿತು. ಅವಳು ಕರಮಣೀಸರ, ಮಾಂಗಲ್ಯ ಧರಿಸಿ ಮೈಸೂರು ಮಲ್ಲಿಗೆ ಮುಡಿದು ನಗುನಗುತ್ತಾ ಕೆಲಸ ಮಾಡುತ್ತಿದ್ದಳು. ಪ್ರೀತಿಯ ಸೌಧ ಉರುಳಿ ಹೃದಯ ಒಡೆದು ಚೂರಾಗಿ ರಂಗುವಿನ ಮುಖ ಕಪ್ಪಿಟ್ಟಿತು. ಅವನಿಗೆ ಕೋಪತಾಪ ದುಃಖದುಮ್ಮಳ ಉಕ್ಕಿಬಂತು.
“ನನಗೇಕೆ ಮೋಸ ಮಾಡಿದೆ?” ಎಂದು ಪ್ರಶ್ನಿಸಿದ.
“ನಾನು ಏನು ಮೋಸ ಮಾಡಿದೆ?” ಎಂದಳು ಸಾವಿತ್ರಿ.
“ನನ್ನ ಪ್ರೀತಿಸಿ ಬೇರೆಯವರನ್ನು ಮದುವೆ ಯಾಕೆ ಆಗಿರುವೆ?” ಅಂದ.
“ಇದಕ್ಕೆ ಒಂದು ಕಾರಣವಿದೆ” ಎಂದಳು.
‘ಅದೇನು ಕಾರಣ’ ತಿಳಿಯಬಹುದೇ ಎಂದ ಬೆಂಕಿಯಂತೆ ದಹಿಸುತ್ತಿದ್ದ ಹೃದಯದಾಳದಿಂದ.
“ಕೋಪ ಮಾಡಿಕೊಳ್ಳಬೇಡ ರಂಗು. ನಾನು ಬೆಂಗಳೂರು ಬಿಟ್ಟು ಬಂದ ಮೇಲೆ ನೀನು ನನ್ನ ಮನಸ್ಸಿನಲ್ಲಿ ಮಸುಕಾಗುತ್ತಾ ಬಂದೆ. ನೀನು ಪತ್ರ ಬರೆದು ಅಂಚೆ ಪೆಟ್ಟಿಗೆಗೆ ಹಾಕುತಿದ್ದೆ. ಆದರೆ ಆ ಪತ್ರವನ್ನು ಮಳೆ ಇರಲಿ, ಬಿಸಿಲಿರಲಿ, ಅಂಚೆಯವ ನಿತ್ಯ ನಾನು ಮನೆ ತಲುಪುದರೊಳಗೆ ನನ್ನ ಕೈ ಸೇರಿಸುತ್ತಿದ್ದ. ಅವನಿಗೆ ಬೇಸರವಿರುತ್ತಿರಲಿಲ್ಲ. ಬದಲಾಗಿ ಹಸನ್ಮುಖನಾಗಿ ತನ್ನ ಕಾರ್ಯ ನಿರ್ವಹಿಸುತ್ತಿದ್ದ. ಒಂದು ದಿನವೂ ಅವನು ಟೀಕಿಸಿದ್ದಾಗಲಿ, ಮೂಗು ತೂರಿಸಿ ವಿಷಯವೇನೆಂದು ಕೇಳಿದ್ದಾಗಲಿ ಇಲ್ಲ. ಅವನ ನಿಷ್ಠೆ ನನಗೆ ಬಹಳ ಮೆಚ್ಚುಗೆಯಾಯಿತು. ಅವನು ಗ್ರಾಹಕರನ್ನು ದೇವರೆಂದು ನಂಬಿದ್ದ. ಅವನ ಸದ್ಗುಣ ನನ್ನ ಸೆರೆ ಹಿಡಿಯಿತು. ಅವನ ಮುಗ್ಧ ಮುಖದಲ್ಲಿ ಎಂದೂ ನಗು ಮಾಸುತ್ತಿರಲಿಲ್ಲ. ಹೀಗೆ ನಿನ್ನ ಪತ್ರಕ್ಕಿಂತ, ನಿನ್ನ ಪತ್ರ ತಂದ ವ್ಯಕ್ತಿಯೇ ನನಗೆ ಪ್ರಿಯವಾದ. ನಾನು ನಿನ್ನ ಪತ್ರಗಳನ್ನು ಒಡೆಯದೇ ಇದ್ದ ಪತ್ರಗಳೆಲ್ಲಾ ನನ್ನ ಮೇಜಿನ ಡ್ರಯರ್‍ನಲ್ಲಿವೆ. ಬೇಕಾದರೆ ವಾಪಸ್ಸು ತೆಗೆದುಕೋ” ಎಂದಳು.
“ಏನು ಹಾಗಾದರೆ ನನ್ನ ಪತ್ರ ತಂದು ಕೊಡುತ್ತಿದ್ದ ಅಂಚೆಯವನನ್ನು ಮೆಚ್ಚಿ ಮದುವೆಯಾದೆಯಾ?” ಎಂದ. “ಅಹುದು; ಅದೊಂದು ಸುಂದರ ಸಂಜೆ, ಅವನು ಪತ್ರ ಕೈಗಿಟ್ಟಕ್ಷಣ ನನ್ನ ಅಂತರಾಳದಿಂದ ಅವನನ್ನು ಕೇಳಿಯೇಬಿಟ್ಟೆ “ನನ್ನ ಮದುವೆ ಆಗ್ತೀಯಾ?” ಎಂದು.
ಅವನೂ ಅಷ್ಟೇ ಪ್ರೇಮಾವೇಶದಿಂದ “ಎಸ್, ಬೈ ಆಲ್ ಮೀನ್ಸ್” ಎಂದ. ನಂತರ ನಮ್ಮ ಮದುವೆಗೆ ಅಪ್ಪ ಅಮ್ಮನ ಒಪ್ಪಿಗೆಯೂ ಸಿಕ್ಕಿ ಜರುಗಿತು. ಹೀಗೆ ನಿನ್ನನ್ನು ಮತ್ತು ನಿನ್ನ ಪತ್ರದ ಸಂಪರ್ಕ ತಪ್ಪಿಗೋಗಿದ್ದು ಹೀಗೆ. ವೆರಿ ವೆರಿಸಾರಿ” ಎಂದಳು ಸ್ಥಿತಪ್ರಜ್ಞಳಂತೆ. ರಂಗುವಿನ ಮುಖ ಬಿಳಿಚಿಕೊಂಡಿತು. ತನ್ನ ಪ್ರೇಮ ಪತ್ರವನ್ನು ನಿಷ್ಠೆಯಿಂದ ತಲುಪಿಸಿದ ಅಂಚೆಯವ ತನ್ನ ಪಾಲಿಗೆ ಅನಿಷ್ಟವಾಗಿದ್ದ ರಂಗುವಿನ ಪ್ರೇಮ ಹತಾಶೆ ಅಲ್ಲಿಗೆ ಬಿಟ್ಟುಬಿಡಿ, ನಮ್ಮ ನಿಷ್ಠೆಯ ಅಂಚೆ ಇಲಾಖೆಗೆ, ಅಲ್ಲಿ ಕೆಲಸ ಮಾಡುವ ನೌಕರರಿಗೆ ದೊಡ್ಡ ಹರ್ಷೋದ್ಗಾರ ಮಾಡಿ ಚಪ್ಪಾಳೆ ತಟ್ಟಿ – ಎಂದು ಫರ್ನಾಂಡಿಸ್‌ರು ಭಾಷಣ ಮುಗಿಸಿದಾಗ ಅಂಚೆಯವ ಮತ್ತು ಸಾವಿತ್ರಿ ಒಳಗೊಳಗೇ ಅದು ತಮ್ಮದೇ ಕಥೆ ಎಂದು ನಗುತ್ತಿದ್ದರು.
*****