ಈ ಗಂಡಾ ಆ ಗಂಡಾ ಜೋಡು ಪುಂಡರ ಕೂಡಿ
ಹುಚಮುಂಡಿ ಮೆಣಸಿಂಡಿ ಚಟ್ನಿಯಾದೆ
ಈ ಬಂಡಾ ಆ ಮಂಡಾ ಜೋಡು ಕೋಣರ ಕೂಡಿ
ನೆಗ್ಗೀದ ತಾಬಂಡಿ ತೂತು ಆದೆ
ಸೀರಿಯೊಬ್ಬನು ಸೆಳೆದ ಚರ್ಮವೊಬ್ಬನು ಹರಿದ
ಲಟಪಟ ಯಲುಬೆಲ್ಲ ಲಡ್ಡು ಆತ
ಗಟ್ಟಿಮುಟ್ಟಿನ ಹೇಂತಿ ಚಿಪ್ಪಾದೆ ಚಿಬ್ಲಾದೆ
ಡಾಳಿಂಬ್ರ ರಸಬಣ್ಣ ಇದ್ಲಿಯಾತ
ಕೆಂಗೋದಿ ಹೋಳೀಗಿ ಗುಂಡಾನ ನನಗಲ್ಲ
ಹಳಸೀದ ತಂಬೂಳಿ ಸಾರು ಆತ
ಪೆಂಡಿಪಿಂಡಿಯ ತುರುಬ ಕಸಬರಗಿ ಸಿಂಬ್ಯಾತ
ಕೈಕಾಲು ಬಡದಂಟು ಸೀಬು ಆತ
ಕರಿಗಡಬು ಬೆಡಗೀನ ನನಕಯ್ಯಿ ನನಮಯ್ಯಿ
ಗುಳಿಬಿದ್ದ ಗಾರೀಗಿ ತೂತು ಆತ
ಕರದಂಟು ನನಗದ್ದ ಹೆಗ್ಗಣದ ಗುದ್ದಾತ
ಕಲಸಕ್ರಿ ನನಮೂಗು ಸಿಂಬ್ಳಸೋರ್ತ
ಒಬ್ಬ ಗಂಡನು ಹುಂಬಾ ಇನ್ನೊಬ್ಬ ಮಾಶುಂಬಾ
ಒಳಗೊಬ್ಬ ಹೊರಗೊಬ್ಬ ಜಗ್ಗತಾರ
ಶಿವಯೋಗಿ ಆ ಗಂಡ ಪೂಜೇರಿ ಈ ಗಂಡ
ಒಳಕಲ್ಲು ಗುಣಕಲ್ಲು ಮಾಡತಾರ
*****