ಕಪ್ಪು ಕೆಂಪು ಕಳಗಳಲ್ಲಿ
ಒಳ್ಳೇ ಕುಳ ಸಿಕ್ಕಿದರೆ
ರಂಗಿಯ ಹೊಡೆತ ನೋಡಬೇಕು
ಅವಳ ಹಿಡಿತ ನೋಡಬೇಕು
ಅವಳ ಆಟ ನೋಡಬೇಕು
ಅವಳ ಬೇಟ ನೋಡಬೇಕು
ಅವಳ ಕುದುರೆ ಲಗೀ ಲಗೀ
ಮಡಿಲು ನಿಗೀ ನಿಗೀ
ಮೊದಲ ಸುತ್ತಿನಲೆ ಹಾಕ್ತಾಳೆ ಚೆಕ್
ಹುಡುಗಿ ಚಿಕ್ ಚಿಕ್
ಇವಳ ಕುದುರೆ ತೊಡೆಗಳೆಡೆಗೆ
ಎಂಥ ಮಂತ್ರಿಯೂ ಬೀಳಬೇಕು
ಇವಳ ಕೋಟೆಯ ಸುತ್ತಿನೊಳಗೆ
ಎಂಥ ರಾಜನೂ ಮಲಗಬೇಕು
ಎದುರು ಬದಿರು ಕುಳಿತರೆ
ರಾತ್ರಿ ಸರಿದರೂ ಸೋಲೋದಿಲ್ಲ ರಂಗಿ
ಕುಸಿಯೋದಿಲ್ಲ ಈ ಅನಂಗರಂಗಿ
ಏಳೆಂಟು ಮಂದಿಯನೂ ಒಂದೆ ಪೆಟ್ಟಿಗೆ
ಸೋಲಿಸಬಲ್ಲ ಭಂಗಿ
ಕೆಂಫು ತಾಂಬೂಲದ ತುಟಿಗಳನ್ನು
ಸಣ್ಣ ಮಾಡಿ ಕರೀತಾಳೆ
ಬನ್ನಿ ಸೋಮಿ ಒಂದೇ ಆಟ
ನೋಟವೇ ಸಾಕು ಮದಿರೆ
ಅಂಥ ಚದುರೆ
ಇದೆಲ್ಲ ಹಳೆಮಾತು
ಈಗ ರಂಗಿಯ ಚದುರಂಗದ
ಕೋಟೆ ಕೊತ್ತಲಗಳಲ್ಲಿ
ಒಣ ಹುಲ್ಲು ಬಿದಿರು ಭಾವಿ
ಆದರೇನಾಯಿತು?
ಹೊಸ ಕೋಟೆಗಳಿವೆ
ಎಳೆ ಕುದುರೆಗಳಿವೆ
ಏರುವವರಿಗೆ ಎನು ಕೊರತೆ?
ಬೀಳುವವರಿಗೂ ಇಲ್ಲ
ಚದುರಂಗವೇ ಎಲ್ಲ –
ಭಗವಂತನ ಆಟ
ಭಗವತಿಯದ್ದೂ ಕೂಡ.
*****