ಅವನ ಹೆಸರಲ್ಲಿ

ಅವನ ಹೆಸರಲ್ಲಿ

ಚಿತ್ರ: ಸಮೇರ್‍ ಚಿಡಿಯಾಕ್

ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ ಸಹ ಉದ್ಯೋಗಿಗಳಿಂದ ವಿದಾಯ ಪಡೆದು ಭಾರವಾದ ಹೃದಯದಿಂದ ಮನೆ ಸೇರಿದ್ದೆ. ಇವತ್ತು ಒಂದು ರೀತಿಯ ಸತ್ತ ಅನುಭವವಾಗುತ್ತಿದೆ. ಬೆಳಿಗ್ಗೆ ಎದ್ದು ಏನು ಮಾಡುವುದು? ಎಲ್ಲಿಗೆ ಹೋಗುವುದು? ಸಮಯವನ್ನು ಹೇಗೆ ಕಳೆಯುವುದು? ಈ ಒಂದು ಆಲೋಚನೆಯಲ್ಲಿರುವಾಗ, ಮನೆಯ ಫೋನಿನ ರಿಂಗ್ ಕೇಳಿ ನಿಜ ಸ್ಥಿತಿಗೆ ಇಳಿದೆ.

ನನ್ನ ದೊಡ್ಡಣ್ಣ ಫೋನ್ ಮಾಡಿದ್ದ. ಕೆಲವು ತಿಂಗಳ ಹಿಂದೆ ಅವನನ್ನು ಭೇಟಿಯಾದಾಗ ನಿವೃತ್ತಿ ನಂತರ ಸಮಯ ಕಳೆಯಲು ಯಾವುದಾದರೊಂದು ಕೆಲಸ ಮಾಡಿಸಿ ಕೊಡಲು ಕೇಳಿಕೊಂಡಿದ್ದೆ. ‘ಫೋನ್ ಯಾರದು’ ನನ್ನ ಹೆಂಡತಿ ಬೆಡ್ ಟೀ ಹಿಡಿದುಕೊಂಡು ಬಂದು ಪ್ರಶ್ನಿಸಿದಳು.

‘ಅಣ್ಣ ಫೋನ್ ಮಾಡಿದ. ಮಂಗಳೂರಿನಿಂದ ಎನ್. ಹೆಚ್. ೧೭ ರ ರಸ್ತೆಯಲ್ಲಿ ಕೇರಳ ರಾಜ್ಯದ ಗಡಿ ಜಂಕ್ಷನ್ ತಲುಪಿದಾಗ ಎಡಕ್ಕೆ ಒಂದು ಮಣ್ಣಿನ ರಸ್ತೆಯಿದೆ. ಆ ರಸ್ತೆಯಲ್ಲಿ ಸುಮಾರು ಹತ್ತು ಕಿ. ಮೀ. ದೂರದಲ್ಲಿ ಒಂದು ಯತೀಂಖಾನಾ ಇದೆಯಂತೆ. ಅಲ್ಲಿ ಒಬ್ಬ ಮ್ಯಾನೇಜರ್ ಅಗತ್ಯವಿದೆ. ನೀನು ಹೋಗುವುದಾದರೆ ನಾನು ಫೋನ್ ಮಾಡಿ ತಿಳಿಸುತ್ತೇನೆ ಎಂದ. ಯಾವುದಕ್ಕೂ ನಾನು ತಿರುಗಿ ನಿನಗೆ ಫೋನ್ ಮಾಡುತ್ತೇನೆ ಎಂದೆ’.

ಅವಳಿಗೆ ತುಂಬಾ ಸಂತೊಷವಾಯಿತು. ಸಂಬಳದ ದೃಷ್ಟಿಯಿಂದ ದುಡಿಯುವ ಅಗತ್ಯವಿಲ್ಲವಾದರೂ ಆರೋಗ್ಯದ ದೃಷ್ಟಿಯಿಂದ ನಾನು ಉದ್ಯೋಗ ಮಾಡಬೇಕು ಎಂಬುದು ಅವಳ ಅಸೆ. ನಲ್ವತ್ತು ವರ್ಷ ಸರಕಾರಿ ಸೇವೆಯಲ್ಲಿ ತೊಡಗಿಸಿಕೊಂಡ ನನಗೆ ಯಾವಾಗಲೂ ಪುರುಸೊತ್ತು ಎಂಬುದೇ ಇರಲಿಲ್ಲ. ಮದುವೆ, ಮುಂಜಿ ಹಾಗೂ ಇನ್ನಿತರ ಕಾರ್ಯಗಳಿಗೆ ಹೆಂಡತಿಯನ್ನೇ ಕಳುಹಿಸಿ, ತೆಪ್ಪಗೆ ಸರಕಾರಿ ಕೆಲಸದಲ್ಲಿ ಮಗ್ನನಾಗುತ್ತಿದ್ದೆ. ಇಂತಹ ವೃಕ್ತಿ ಸುಮ್ಮನೆ ಬಿದ್ದುಕೊಳ್ಳಲಾಗದೆ ಖಂಡಿತವಾಗಿ ಮಾನಸಿಕ ಅಸ್ವಸ್ಥನಾಗುತ್ತಾನೆಯೇ ಎಂಬ ಭಯ ನನ್ನ ಹೆಂಡತಿಗೆ.

‘ಏನೇ ಆಗಲಿ, ಕೆಲವು ತಿಂಗಳು ಕೆಲಸ ಮಾಡಿ ಬನ್ನಿ. ಹೊಸ ಉದ್ಯೋಗ. ಯತೀಂಖಾನಾದ ಕೆಲಸ ಎಂದರೆ ಅದೊಂದು ಪುಣ್ಯ ಕಾರ್ಯವೇ. ತಂದೆ ಇಲ್ಲದ ಅನಾಥ ತಬ್ಬಲಿ ಮಕ್ಕಳ ಆಶ್ರಮ. ಅವರ ಕಷ್ಟ ಸುಖದಲ್ಲಿ ಭಾಗಿಯಾಗುವುದು ಒಂದು ಪುಣ್ಯದ ಕೆಲಸ. ಈ ಮಕ್ಕಳ ಮೇಲ್ವಿಚಾರಣೆ ಕೆಲಸ ಇರಬಹುದು ನಿಮಗೆ. ಗಟ್ಟಿ ಮನಸ್ಸು ಮಾಡಿ ಹೊರಟು ಬಿಡಿ ಎಂದಳು’.

ನನಗೂ ಹೌದೆನಿಸಿತು. ತಂದೆ ಇಲ್ಲದ ಯತೀಂಖಾನಾದ ಮಕ್ಕಳು. ಇವರ ಮಧ್ಯೆ ನನಗೂ ಒಂದು ಹೊಸ ಅನುಭವ ಆ ತಂದೆ ಇಲ್ಲದ ಮಕ್ಕಳ ಮನಸ್ಸಿನ ನೋವು ನಲಿವನ್ನು ಅರಿಯುವ ಅವಕಾಶ. ಇದೊಂದು ತರಹದ ಹೊಸ ಜೀವನ. ಫೋನ್ ಮಾಡಿ ಅಣ್ಣನಿಗೆ ನಾನು ಹೋಗುವ ದಿನಾಂಕ ಹೇಳಿದೆ.

ಒಂದು ದಿನ ನನ್ನ ಲಗ್ಗೇಜು ರೆಡಿಯಾಯಿತು. ಬೆಳಿಗ್ಗೆ ಎಂದಿನಂತೆ ಎಲ್ಲಾ ಕಾರ್ಯಕ್ರಮ ಮುಗಿಸಿ, ಹೆಂಡತಿಗೆ ಜಾಗ್ರತೆಯಾಗಿರಲು ಹೇಳಿ, ನಾನು ಪ್ರಯಾಣ ಹೊರಟೆ. ಮಂಗಳೂರು ಕೇರಳ ಬಾರ್ಡರಿನಲ್ಲಿರುವ ಆ ಯತೀಂಖಾನಕ್ಕೆ ಕಡಿಮೆ ಪಕ್ಷ ೫೩ ಕಿ. ಮೀ. ಪ್ರಯಾಣ ಇದೆ. ಎರಡು ಬಸ್ಸು ಬದಲಾಯಿಸಬೇಕು. ತಲಪಾಡಿ ಬೀರಿ ದಾಟಿ ಸುಮಾರು ೧೨ ಕಿ. ಮೀ. ಸಾಗಬೇಕು. ತಲಪಾಡಿ ಬೀರಿನವರೆಗೆ ಮದುವೆ ಕಾರ್ಯಗಳಿಗೆ ಹೋದ ನೆನಪಿದೆ. ಅದರ ನಂತರದ ಊರು ಒಂದು ಕುಗ್ರಾಮ. ಬಸ್ಸು ಡಾಮರು ಜಾಗೆಯನ್ನು ಬಿಟ್ಟು ಮಣ್ಣಿನ ಮಾರ್ಗದಲ್ಲಿ ಹೋಗತೊಡಗಿತು. ರಸ್ತೆಯ ಇಕ್ಕೆಲಗಳಲ್ಲೂ ಸಾಲು ಮರಗಳು. ಅಲ್ಲಲ್ಲಿ ಪರ್ಲಾಂಗಿಗೆ ಒಂದರಂತೆ, ಹಳೆಯ ಹಂಚಿನ ಮನೆಗಳು. ಒಂದು ಐದು ನಿಮಿಷ ದಾಟಿದ ಮೇಲೆ ಬಸ್ಸು, ಬೆಟ್ಟ ಹತ್ತ ತೊಡಗಿತು. ನನಗೊಂದು ತರಹದ ಭಯ. ಬಹಳ ನಿಧಾನವಾಗಿ ಬಸ್ಸು ಬೆಟ್ಟ ಏರತೊಡಗಿತು. ಅದರ ಸ್ವರವು ಒಂದು, ತರಹ ಬದಲಾಗಿ ಅಸ್ತಮ ರೋಗಿಯ ಶ್ವಾಸದ ದಮ್ಮಿನಂತಿತ್ತು. ಬಸ್ಸಿನ ಹೊರಗೆ ನೋಡತೋಡಗಿದೆ. ಸುಮಾರು ೨೦೦ ಅಡಿ ಕೆಳಗೆ ನಾನು ಬಂದ ರಾಜ ರಸ್ತೆ ಕಾಣುತ್ತಿತ್ತು. ಅಲ್ಲಿಯ ವಾಹನಗಳೆಲ್ಲ ಸಣ್ಣ ಸಣ್ಣ ಮಕ್ಕಳ ಆಟದ ಸಾಮಾಗ್ರಿಗಳಂತೆ ಕಾಣುತ್ತಿತ್ತು. ರಸ್ತೆಯನ್ನು ಬಿಟ್ಟರೆ ಸುತ್ತಲೂ ತೆಂಗು ಕಂಗು ಹಾಗೂ ಭತ್ತದ ಬೆಳೆಗಳು. ಅಲಲ್ಲಿ ನೀರಿನ ತೊರೆ. ಬಸ್ಸು ಏನಾದರೂ ಬ್ರೇಕ್ ತಪ್ಪಿ ಪಲ್ಟಿ ಹೊಡೆದರೆ ಹೆಣ ಸಿಗುವುದು ಖಂಡಿತಾ ಅಸಾಧ್ಯ. ಪಕ್ಕದಲ್ಲಿ ತೂಕಾಡಿಸುತ್ತಿದ್ದ ವೃಕ್ತಿಯನ್ನು ಎಬ್ಬಿಸಿದೆ.

‘ಸ್ವಾಮಿ, ಯತೀಂಖಾನಕ್ಕೆ ಇನ್ನೆಷ್ಟು ದೂರವಿದೆ’? ನಿದ್ರಾಭಂಗವಾದ ಅಸಮಾಧಾನ ಅವನ ಮುಖದಲ್ಲಿತ್ತು. ನಾನು ಜೀವ ಕೈಯಲ್ಲಿ ಹಿಡಿದು ಕುಳಿತಿದ್ದರೆ, ಅವನು ಲೋಕದ ಪರಿವೇ ಇಲ್ಲದೆ ಆರಾಮವಾಗಿದ್ದ. ಬಹುಶಃ ನಿತ್ಯ ಪ್ರಯಾಣಿಕನಿರಬೇಕು.

‘ಮುಂದಿನ ನಿಲ್ದಾಣವೇ ಯತೀಂಖಾನ. ಅಲ್ಲಿ ಬೋರ್ಡು ಹಾಕಿರುತ್ತಾರೆ. ಅಲ್ಲಿಂದ ಬಸ್ಸು ಮುಂದೆ ಹೋಗುವುದಿಲ್ಲ. ಅದು ಕೊನೆ ಸ್ಟಾಪ್ ಅರ್ಧ ಗಂಟೆಯ ನಂತರ ಅದು ತಿರುಗಿ ಮಂಗಳೂರಿಗೆ ಹೋಗುತ್ತದೆ’. ಕೆಂಪು ಹಳದಿ ಮಿಶ್ರಿತ ಅವನ ಹಲ್ಲುಗಳು, ಬೀಡಿ ಎಳೆದ ಜರ್ದಾ ತಿಂದ ವಾಸನೆ ತುಂಬಿದ ಬಾಯಿ. ನನಗೆ ಒಂದು ತರಹ ವಾಕರಿಕೆ ಬಂದ ಹಾಗಾಯಿತು, ತಡಕೊಂಡೆ. ಅವನು ತಲೆಯ ಬಿಳಿಯ ಮುಂಡಾಸನ್ನು ಬಿಚ್ಚಿ ಒಮ್ಮೆ ಕೊಡವಿ ಹೆಗಲಿಗೆ ಹಾಕಿಕೊಂಡ. ಗಮ್ಮಂತ ಸೆಂಟಿನ ವಾಸನೆ ನನ್ನ ಮೂಗು ಸೇರಿತು. ಕಿಸೆಯಿಂದ ಬೀಡಿ ಕಟ್ಟು ತೆಗೆದು, ಒಂದು ಬೀಡಿಯನ್ನು ಬಾಯಿಗಿಟ್ಟು ಕಡ್ಡಿ ಗೀರಿ, ದೀರ್ಘ ದಮ್ಮು ಎಳೆದು ಹೊಗೆಯನ್ನು ಬಿಡತೊಡಗಿದ. ನಾನು ಡ್ರೈವರ್ನ ಹಿಂಬದಿಯ ‘ನೋ ಸ್ಮೋಕಿಂಗ್’ ಬೋರ್ಡು ನೋಡಿದೆ. ಇನ್ನೊಂದು ದಮ್ಮನ್ನು ಎಳೆದು, ಹೊಗೆಯನ್ನು ಸುರುಳಿ ಸುರುಳಿಯಾಗಿ ಹೊರಗೆ ಬಿಟ್ಟ. ‘ಬಹುಶಃ ಧೂಮ ಕಲಾವಿದ’ ಇರಬೇಕು. ತಡೆಯಲಾರದೆ ಹೊಗೆಯ ವಾಸನೆಯನ್ನು ಸಹಿಸಿಕೊಂಡೆ. ಕೊನೆಯ ಧಂ ಎಳೆದು ಬೀಡಿ ಕುತ್ತಿಯನ್ನು ಬಸ್ಸಿನ ಹೊರಗೆ ಬಿಸಾಡಿದ. ಬಸ್ಸು ಕೊನೆಯ ಸ್ಟಾಪಿಗೆ ಬಂದು ನಿಂತಿತು. ಅದೊಂದು ವಿಶಾಲವಾದ ಮೈದಾನ. ಬೆಟ್ಟದ ತುದಿಯಲ್ಲಿ ಇಷ್ಟೊಂದು ವಿಶಾಲವಾದ ಸಮತಟ್ಟು ಜಾಗ ಕಂಡು ನನಗೆ ಅಶ್ಚರ್ಯವಾಯಿತು. ಎಲ್ಲರಿಗೂ ಇಳಿಯುವ ತವಕ. ಸೀಟಿಗಾಗಿ ಕೆಲವು ಪ್ರಯಾಣಿಕರು ಬಸ್ಸು ಏರಲು ಹೋರಾಡುತ್ತಿದ್ದರೆ ಇಳಿಯುವರು ಇಳಿಯಲಾರದೆ ತಿಣಕಾಡುತ್ತಿದ್ದರು. ನಾನು ಸೀಟಿನಿಂದ ಎದ್ದು ನಿಂತು ಎಲ್ಲವನ್ನು ನೋಡುತ್ತಿದ್ದೆ. ಹಿಂದಿನ ಬಾಗಿಲಿನಿಂದ ಇಳಿಯಲು ಪ್ರಯತ್ನಿಸಿದೆ. ಮೂರು ನಾಲ್ಕು ಹಸಿ ಮೀನು ತುಂಬಿದ ಬುಟ್ಟಿಗಳನ್ನು ಮೆಟ್ಟಿಲ ಹತ್ತಿರ ಇಟ್ಟಿದ್ದರು. ಬುಟ್ಟಿಯ ಅಡಿಯಿಂದ ಮೀನಿನ ಕೆಂಪು ನೀರು ಮೆಟ್ಟಿಲಿಂದ ಹರಿದು ನೆಲಕ್ಕೆ ಬೀಳುತ್ತಿತ್ತು. ನನ್ನ ಪ್ಯಾಂಟಮ್ನ ಆರು ಇಂಚು ಮೇಲಕ್ಕೆ ಎತ್ತಿ ಕೊಂಡೆ. ಬಹಳ ತ್ರಾಸದಿಂದ ಬಸ್ಸಿನಿಂದ ಇಳಿದೆ. ಅದರೂ ಪ್ಯಾಂಟಿಗೆ ಮೀನಿನ ಬುಟ್ಟಿ ತಾಗದೆ ಇರಲಿಲ್ಲ.

ಇದೊಂದು ಚಿಕ್ಕ ಪಟ್ಟಣ. ಐದು, ಆರು ಗೂಡಂಗಡಿಗಳು. ಒಂದು ಕೋಲ್ಡ್‌ ಡ್ರಿಂಕ್ಸ್ ಅಂಗಡಿ. ಒಂದು ಚಾ ಕಾಫಿ ಹೋಟೆಲು. ಎಲ್ಲವೂ ತಟ್ಟಿ ಮಹಲುಗಳು. ಸೋಗೆ ತಗಡು ಶೀಟುಗಳೇ ಗೋಡೆಗಳು. ಸ್ವಲ್ಪ ದೂರದಲ್ಲಿ ಒಂದು ಹಂಚಿನ ದಿನಸಿನ ಅಂಗಡಿ ಕಂಡು ಬಂತು. ಅದರ ಪಕ್ಕದಲ್ಲಿ ಎರಡು ರಿಕ್ಷಾಗಳು. ಅಲ್ಲಿಯೇ ಹಸಿರು ಪ್ಲಾಸ್ಟಿಕ್ ಶೀಟು ಹರಡಿ ಮಾರಲಿಟ್ಟ ಹಸಿ ಮೀನುಗಳ ರಾಶಿ. ಮತ್ತೊಂದು ಕಡೆ ಸೋಗೆಯಿಂದ ಅಲಂಕೃತಗೊಂಡ ಕುರಿ ಕಡಿಯುವ ಕಸಾಯಿ ಖಾನೆ. ಅದರ ಪಕ್ಕದಲ್ಲಿ ಒಂದು ಮಣ್ಣಿನ ರಸ್ತೆ. ರಸ್ತೆ ಬದಿಯಲ್ಲಿ ಒಂದು ದೊಡ್ಡ ಸಿಮೆಂಟು ಬೋರ್ಡು. ‘ಯತೀಂಖಾನಕ್ಕೆ ಹೋಗುವ ದಾರಿ’. ಎರಡು ಫರ್ಲಾಂಗು ನಡೆದೇ ಹೋಗಲು ತೀರ್ಮಾನಿಸಿದೆ. ಹೊಸ ಊರು ನೋಡಿದ ಹಾಗಾಯಿತು. ಅಲ್ಲದೆ ಇನ್ನು ಮುಂದೆ ನನ್ನ ಊರು ತಾನೇ. ಲಗ್ಗೇಜು ಹಿಡಿದು ಮುಂದೆ ನಡೆದೆ. ಗಿರಾಕಿ ಕಳಕೊಂಡ ರಿಕ್ಷಾ ಡ್ರೈವರ್ಗಳು ನನ್ನನ್ನೇ ನೋಡುತ್ತಿದ್ದರು.

ಸುಮಾರು ೨೦ ಅಗಲದ ಮಣ್ಣಿನ ರಸ್ತೆ. ಬೆಟ್ಟ ಪ್ರದೇಶದ ಕಲ್ಲು ಮಣ್ಣಿನ ರಸ್ತೆಯಾಗಿದ್ದು ಗಟ್ಟಿ ನೆಲವಾದುದರಿಂದ ಗುಳಿ ಗುಂಪು ಇಲ್ಲದೆ ಸಮತಟ್ಟಾಗಿತ್ತು. ರಸ್ತೆಯ ಇಕ್ಕೆಲಗಳಲ್ಲೂ ಸಾಲು ಸಾಲು ಹಂಚಿನ ಮನೆಗಳು. ಸರಕಾರದ ‘ಆಶ್ರಯ’ ಯೋಜನೆಯ ಮನೆಗಳಿರಬೇಕು. ಕಂಪೌಂಡುಗಳಿಲ್ಲ, ಸುಣ್ಣ ಬಣ್ಣಗಳಿಲ್ಲ. ಬಹುಶಃ ಒಂದು ಅಡುಗೆ ಕೋಣೆ ಹಾಗೂ ಒಂದು ಹಾಲ್ ಮಾತ್ರ ಇರಬೇಕು. ಎದುರಿಗೆ ಒಂದು ಸಪೂರದ ಬಾಗಿಲು ಹಾಗೂ ಬದಿಯ ಗೋಡೆಗೆ ಒಂದು ಕನಕನ ಕಿಂಡಿ. ವಿದ್ಯುತ್ ವೈವಸ್ಥೆ ಇನ್ನು ಆಗಬೇಕು ಎಂದು ಕಾಣುತ್ತದೆ. ಸುಮಾರು ಹತ್ತು ಗಂಟೆಯ ಸಮಯವಾದುದರಿಂದ ಗಂಡಸರು ಕೆಲಸಕ್ಕೆ ಹೋಗಿರಬೇಕು. ಹೆಂಗಸರು ಮನೆಯ ಎದುರೇ ಬಟ್ಟೆ ಒಗೆಯುತ್ತಿದ್ದರು. ಬಚ್ಚಲು ನೀರು, ಅಡುಗೆ ಕೋಣೆಯ ಪಾತ್ರೆ ತೊಳೆದ ನೀರು, ಬಟ್ಟೆ ಬರೆ ಒಗೆದ ನೀರು ಎಲ್ಲಾ ಅಲ್ಲಿಯೇ ಹರಿದು ಹೋಗುತ್ತಿತ್ತು. ಪ್ರತೀ ಮನೆಯಲ್ಲೂ ಐದಾರು ಮಕ್ಕಳು. ಕೆಲವು ಮಕ್ಕಳು ಅಂಗಳದಲ್ಲಿಯೇ ಬರ್ಹಿದೆಸಗೆ ಕುಳಿತಿದ್ದರೆ ಇನ್ನು ಕೆಲವು ರಸ್ತೆಯ ಬದಿಯಲ್ಲಿ ಸಾಲಾಗಿ ಕುಳಿತಿದ್ದು ನಾನು ನಡೆದುಹೋಗುವುದನ್ನೇ ಎವೆಯಿಕ್ಕದೆ ನೋಡುತ್ತಿದ್ದವು. ಕೆಲವು ಹೆಣ್ಣು ಮಕ್ಕಳು ಬಟ್ಟೆ ಒಗೆಯುವುದನ್ನು ನಿಲ್ಲಿಸಿ ನನ್ನತ್ತ ನೋಡುತ್ತಾ ತಮ್ಮ ತಮ್ಮಲ್ಲೇ ಮುಸಿ ಮುಸಿ ನಗುತ್ತಿದ್ದರು. ಈ ಕೊಂಪೆಯಲ್ಲಿ ಹೇಗಪ್ಪಾ ಜೀವನ ಸಾಗಿಸುವುದು ಎಂದು ಆಲೋಚಿಸಿದೆ. ಇರಲಿ, ಇದನ್ನೂ ಒಂದು ಛಾಲೆಂಜಾಗಿ ತೆಗೆದುಕೊಂಡರಾಯಿತು ಎಂದು ನಿರ್ಣಯಕ್ಕೆ ಬಂದೆ.

ಸುಮಾರು ೨ ಫರ್ಲಾಂಗು ನಡೆದ ಮೇಲೆ ಎದುರಿಗೆ ಎತ್ತರದಲ್ಲಿ ಕಮಾನು ಆಕಾರದ ಬೋರ್ಡು. ಇಕ್ಕೆಲಗಳಲ್ಲಿ ಕೆಂಪು ಕಲ್ಲಿನ ಬೃಹತ್ ಕಂಬ ಹಾಗೂ ಗೇಟು. ನಾಮಫಲಕ ಓದಿಕೊಂಡೆ. ಕನ್ನಡ ಹಾಗೂ ಇಂಗ್ಲೀಷ್‌ನಲ್ಲಿ ಬರೆದಿತ್ತು. ಬೃಹದಾಕಾರದ ಗೇಟು ತೆರೆದು ಕಂಪೌಂಡಿನ ಒಳಹೊಕ್ಕಿದಾಗ ನನ್ನ ಕಣ್ಣನ್ನು ನಾನೇ ನಂಬದಾದೆ. ಅದೊಂದು ವಿಶಾಲವಾದ ಸಮತಟ್ಟಾದ ಸುಮಾರು ಹತ್ತು ಎಕರೆ ಜಾಗ ಇರಬೇಕು. ಪೂರ್ತಿ ಜಾಗಕ್ಕೆ ಕಲ್ಲಿನ ಕಂಪೌಂಡು. ಕಂಪೌಂಡಿಗೆ ಸಿಮೆಂಟಿನ ಸಾರ್ಣೆ ಮಾಡಿ ಬಣ್ಣ ಬಳಿದಿದ್ದು ಇಡೀ ಪ್ರದೇಶಕ್ಕೆ ಒಂದು ಮೆರಗು ಎದ್ದು ಕಾಣುತ್ತಿತ್ತು. ಹೊಕ್ಕಿದ ಕೂಡಲೇ ಎದುರಿಗೆ ಸಿಗುವುದೇ ಒಂದು ದೊಡ್ಡ ಮಸೀದಿ. ಬಹಳ ಅತ್ಯಾಧುನಿಕ ರೀತಿಯಲ್ಲಿ ಕಟ್ಟಿದ ಮಸೀದಿ. ಯಾರಿಗಾದರೂ ಒಮ್ಮೆ ನಿಂತು ನೋಡುವ ಎಂದೆಣಿಸದೆ ಇರದು. ನೆಲಕ್ಕೆ ಹಾಸಿದ ಪಿಂಕ್ ಕಲರ್‌ನ ಮಾರ್ಬಲ್, ಅಮೃತ ಶಿಲೆಯ ಕಂಬಗಳು, ಮಸೀದಿಯ ಹೊರಗಿನ ಹಾಗೂ ಒಳಗಿನ ವಿಶಾಲವಾದ ಹಾಲ್‌ಗಳು. ಪುನಃ ಮೇಲೆ ಒಂದು ಅಂತಸ್ತು. ಬೆಟ್ಟದ ಸೌಂದರ್ಯವನ್ನು ಮಸೀದಿಯ ಒಳಗಿಂದಲೇ ನೋಡುವಂತೆ ಸುತ್ತೆಲೂ ತೆರೆದುಕೊಂಡ ವಿಶಾಲವಾದ ಕಿಟಕಿಗಳು. ಅತ್ಯಾಧುನಿಕ ರೀತಿಯಲ್ಲಿ ನಿರ್ಮಿಸಿದ ಟಾಯ್ಲೆಟ್, ಬಾತ್ ರೂಂ ಹಾಗೂ ನಮಾಜು ಮಾಡಲು ನೀರಿನ ವ್ಯವಸ್ಥೆ. ಎಲ್ಲಾ ಅಚ್ಚುಕಟ್ಟು ಹಾಗೂ ಅಷ್ಟೇ ನಿರ್ಮಲತೆ. ಇಂತಹ ಕುಗ್ರಾಮದಲ್ಲಿ ಎಂತಹ ಮಸೀದಿಯ ನಿರ್ಮಾಣವಾಗಿದೆ ಎಂದು ನೆನೆದರೆ ಅಶ್ಚರ್ಯವಾಗತೊಡಗಿತು. ಈ ಒಂದು ಸಂತೋಷದಿಂದ ನಾನು ಸ್ವಲ್ಪ ಮುಂದೆ ನಡೆದೆ. ಎದುರಿಗೆ ಬೃಹದಾಕಾರದ ಒಂದು ಕಟ್ಟಡ ಕಾಣುತ್ತಿತ್ತು. ಇದು ಕೂಡ ಎರಡು ಅಂತಸ್ತಿನ ಬೃಹತ್ ಕಟ್ಟಡ. ಸಕಲ ಸೌಕರ್ಯದೊಂದಿಗೆ ನಿರ್ಮಿಸಿದ ಮದುವೆಯ ಹಾಲ್. ಮಂಗಳೂರು ಪಟ್ಟಣದ ಯಾವುದೇ ಮದುವೆ ಹಾಲ್‌ಗಿಂತ ಕಡಿಮೆ ಇಲ್ಲ ಎಂದೆಣಿಸಿತು. ಇಲ್ಲಿಂದ ಸ್ವಲ್ಪ ಎಡಕ್ಕೆ ತಿರುಗಿ ಸ್ವಲ್ಪ ಮುಂದೆ ನಡೆದು ಹೋದೆ. ಎದುರಿಗೆ ಬೃಹತ್ ನಾಮಫಲಕ. ಅದು ಯತೀಂಖಾನಾ. ಬಹುಶ ನನ್ನ ಸರಹದ್ದು ಇಲ್ಲಿಯೇ ಎಂದು ತಿಳಿಯಿತು. ಇಂತಹ ಒಂದು ಕುಗ್ರಾಮದಲ್ಲಿ ಇಷ್ಟೊಂದು ವ್ಯವಸ್ಥಿತ ಯೋಜಿತ ಪ್ಲಾನ್ ಹಾಕಿಕೊಂಡು ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಜನಕಾರ್ಯ ಮಾಡಬೇಕಾದರೆ ಇದರ ಹಿಂದಿನ ರೂವಾರಿ ಯಾರಿರಬೇಕು ಎಂದು ತಿಳಿದುಕೊಳ್ಳುವ ತವಕ ಉಂಟಾಯಿತು. ನಿಜವಾಗಿಯೂ ಆ ವ್ಯಕ್ತಿ ಶ್ರೇಷ್ಠ. ಅವರ ಸಾಧನೆ ನಿಜವಾಗಿಯೂ ಸ್ತುತ್ಯಾರ್ಹ. ಅವರನ್ನು ಭೇಟಿಯಾಗಿ ಮಾತಾಡಿಸಲು ನನ್ನ ಮನಸ್ಸು ಮಿಡಿಯಿತು. ನಿಧಾನವಾಗಿ ಯತೀಂಖಾನದ ಕಟ್ಟಡದ ಒಳಗೆ ಪ್ರವೇಶಿಸಿದೆ.

ಮೊದಲಿಗೆ ಸಿಗುವುದೇ ಒಂದು ಸಣ್ಣ ಬೋರ್ಡು. ‘ಪಾದರಕ್ಷೆ ಇಲ್ಲಿ ಕಳಚಿಡಿ’. ನನಗೆ ಬಹಳ ಸಂತೋಷವಾಯಿತು. ನಾನು ಶುಚಿತ್ವಕ್ಕೆ ಮೊದಲ ಪ್ರಾಶಸ್ತ್ಯ ನೀಡುವವನು. ಅಲ್ಲಿ ಹಲವಾರು ಪಾದರಕ್ಷೆಗಳಿದ್ದವು. ನಾನು ಕೂಡ ನನ್ನ ಶೂ ಕಳಚಿ ಅಲ್ಲಿಟ್ಟೆ. ಬ್ಯಾಗನ್ನು ಹತ್ತಿರದಲ್ಲೇ ಇಟ್ಟೆ. ಎದುರಿಗೆ ಒಂದು ಬೃಹತ್ ಕೋಣೆ. ಅಲ್ಲಿ ಮೇಜಿನ ಹಿಂದುಗಡೆ ಕುರ್ಚಿಯ ಮೇಲೆ ಒಬ್ಬ ವ್ಯಕ್ತಿ ಕುಳಿತು ಬರೆಯುತ್ತಿದ್ದರು. ಬಹುಶಃ ಗುಮಾಸ್ತ ಇರಬೇಕು. ಆದರೂ ನನ್ನ ಬರವನ್ನೇ ಗಮನಿಸುತ್ತಿದ್ದರು. ನಾನು ಸಲಾಂ ಹೇಳಿ ಅವರಿಗೆ ನನ್ನ ಪರಿಚಯ ಹೇಳಿದೆ. ಅವರಿಗೆ ಈ ಮೊದಲೇ ನನ್ನ ಅಣ್ಣನಿಂದ ಫೋನು ಬಂದಿತ್ತು. ಆದರೆ ಅವರು ನನ್ನ ಬಗ್ಗೆ ವಿಶೇಷ ಕಾಳಜಿ ತೋರಲಿಲ್ಲ. “ನಮ್ಮ ಅಧ್ಯಕ್ಷರು ಊರಲಿಲ್ಲ. ಅವರು ಬರದೆ ಏನೂ ತೀರ್ಮಾನ ಮಾಡುವ ಹಾಗಿಲ್ಲ. ಇನ್ನು ಎರಡು ದಿನದಲ್ಲಿ ಬರಬಹುದು. ಅಲ್ಲಿಯವರೆಗೆ ನೀವು ಇದ್ದುಕೊಂಡು ಇಲ್ಲಿಯ ಕೆಲಸದ ಬಗ್ಗೆ ಗಮನ ಹರಿಸಬಹುದು.” ಅವನು ಮಾಮೂಲಿ ರೀತಿಯಲ್ಲಿ ಮಾತಾಡಿದ. ನನ್ನ ಉಲ್ಲಾಸ ಜರ್ರನೆ ಜಾರಿತು. ಅಧ್ಯಕ್ಷರೆಂದರೆ ಯಾರು ನಾನು ಕೇಳಿದೆ. “ಈ ಸಂಸ್ಥೆಯ ಅಧ್ಯಕ್ಷರು, ಸಂಸ್ಥಾಪಕರು, ಕರೆಸ್ಪಾಂಡೆಂಟ್ ಎಲ್ಲಾ ಒಬ್ಬರೆ. ಅಬೂಬಕ್ಕರ್ ತಂಞಳ್‌ರವರು’ ಈಗಾಗಲೇ ಗಲ್ಫ್‌ ಪ್ರಯಾಣ ಮುಗಿಸಿ ಮನೆಗೆ ಬಂದಿದ್ದಾರೆ. ಕೇರಳದಲ್ಲಿದ್ದಾರೆ. ಇನ್ನೆರಡು ದಿನದಲ್ಲಿ ಬರಬಹುದು.

ಇವನೊಡನೆ ಮಾತಾಡಿ ಪ್ರಯೋಜನವಿಲ್ಲವೆಂದು ಗೊತ್ತಾಯಿತು. ಹೇಗೂ ಬಂದಾಯಿತು. ಕೆಲಸ ಅಗದಿದ್ದರೂ ತೊಂದರೆ ಇಲ್ಲ. ಇಂತಹ ಸಂಸ್ಥೆಯ ಸ್ಥಾಪಕರನ್ನು ಸಮಾಜ ಸೇವಕರನ್ನು ಮಾತಾಡಿಸಿ ಹೋಗುವುದು ನಿಜವಾದ ಭಾಗ್ಯ ಎಂದು ತೀರ್ಮಾನಿಸಿದೆ. ಮಸೀದಿಯಿಂದ ಮಧ್ಯಾಹ್ನದ ಬಾಂಗ್ ಶಬ್ಧ ಕೇಳಿಸಿತು. ನಮಾಜ್ ಮುಗಿಸಿ ಕ್ಯಾಂಪಸ್‌ಗೆ ಒಂದು ಸುತ್ತು ಹೊಡೆದ. ಅನತಿ ದೂರದಲ್ಲಿ ಇನ್ನೊಂದು ಕಟ್ಟಡ ಕಂಡು ಬಂತು. ಅಲ್ಲೊಂದು ನಾಮಫಲಕ. ಅದು ಕನ್ನಡ ಮೀಡಿಯಂ ಶಾಲೆ. ನನಗೆ ಬಹಳ ಸಂತೋಷವಾಯಿತು. ಸಂಸ್ಥಾಪಕರ ಬುದ್ದಿವಂತಿಕೆಗೆ ತಲೆದೂಗಿದೆ. ಈ ಅನಾಥ ಮಕ್ಕಳಿಗೆ ಧಾರ್ಮಿಕ ಶಿಕ್ಷಣದೊಂದಿಗೆ ಲೌಕಿಕ ಶಿಕ್ಷಣಕ್ಕೂ ಒತ್ತು ಕೊಡುತ್ತಿದ್ದಾರೆ ಎಂದು ತಿಳಿದು ಸಂತೋಷವಾಯಿತು. ಬೇಸಿಗೆ ರಜೆಯಾದುದರಿಂದ ಶಾಲೆಯಲ್ಲಿ ಮಕ್ಕಳಿರಲಿಲ್ಲ. ಒಬ್ಬರು ಅಧ್ಯಾಪಿಕೆ ಮಾತಾಡಲು ಸಿಕ್ಕಿದರು. ಈ ಸಂಸ್ಥೆಯ ಅನಾಥ ಮಕ್ಕಳಲ್ಲದೆ ಹತ್ತಿರದ ಆಸುಪಾಸಿನ ಕೆಲವು ಮಕ್ಕಳು ಶಾಲೆಗೆ ಬರುತ್ತಿದ್ದರು. ಈಗ ಏಳನೇ ತರಗತಿವರೆಗೆ ಶಾಲೆ ನಡೆಯುತ್ತಿದ್ದು, ಮುಂದೆ ಹೈಸ್ಕೂಲು ಮಾಡುವ ಇರಾದೆ ಇದೆಯಂತೆ. ಮಕ್ಕಳ ಪ್ರಗತಿ ಬಗ್ಗೆ ವಿಚಾರಿಸಿದೆ. ಅವರು ನಕ್ಕರು. ಏನೂ ಹೇಳಲಿಲ್ಲ. ಮತ್ತೂ ಒತ್ತಾಯದಿಂದ ಕೇಳಿದೆ. ನಗುತ್ತಾ ಒಂದೇ ವಾಕ್ಕ ಹೇಳಿದರು. ‘ಯಥಾ ರಾಜ ತಥಾ ಪ್ರಜಾ’ ನಾನು ಸಂದಿಗ್ಧತೆಯಲ್ಲಿ ಸಿಲುಕಿದೆ. ಯಾವುದೂ ಸ್ಪಷ್ಟವಾಗಿ ಅರ್ಥವಾಗದೆ ಮನಸ್ಸು ಡೋಲಾಯಾಮಾನವಾಗ ತೊಡಗಿತು. ಆ ಅಧ್ಯಾಪಿಕೆಗೆ ವಿದಾಯ ಹೇಳಿ ಯತೀಂಖಾನಕ್ಕೆ ಬಂದೆ. ಗುಮಾಸ್ತ ನನ್ನ ನಿರೀಕ್ಷೆಯಲ್ಲಿದ್ದ. ಹೊಟ್ಟೆ ಚುರುಗುಟ್ವುತ್ತಿತ್ತು. ಇಲ್ಲಿ ಹತ್ತಿರದ ಊಟದ ಹೋಟೆಲಿನ ಬಗ್ಗೆ ವಿಚಾರಿಸಿದೆ. ಅವನು ನಕ್ಕ. ಹತ್ತಿರದಲ್ಲಿ ಎಲ್ಲೂ ಊಟದ ಹೋಟೆಲಿಲ್ಲ. ಯತೀಂ ಮಕ್ಕಳಿಗೆ ಊಟ ಹಾಕುವಾಗ ಅಲ್ಲಿಗೆ ಹೋದರೆ ಒಂದಿಷ್ಟು ಊಟ ಸಿಬ್ಬಂದಿಗಳಿಗೂ ಹಾಕುತ್ತಾರಂತೆ. ನಾನು ಸಂತೋಷಪಟ್ಟೆ. ಆ ಅನಾಥ ಮಕ್ಕಳೊಂದಿಗೆ ಕುಳಿತು ಊಟ ಮಾಡುವ ಒಂದು ಸದಾವಕಾಶ. ಅದೊಂದು ದೊಡ್ಡ ಊಟದ ಹಾಲ್. ಮೇಜು ಹಾಗೂ ಬೆಂಚುಗಳು. ಗಂಟೆ ಹೊಡೆದೊಡನೆ ಮಕ್ಕಳು ಓಡಿ ಬರುವುದು ಕಂಡು ಬಂತು. ತಾ ಮುಂದು ತಾ ಮುಂದು ಎಂದು ನುಗ್ಗಿ ಕೊಂಡು ಊಟದ ಬಟ್ಟಲು ಹಿಡಿದು ಬೆಂಚಿನ ಮೇಲೆ ಕುಳಿತರು. ನಾವು ಕೂಡ ಸ್ಥಳ ಮಾಡಿಕೊಂಡು ಮಕ್ಕಳ ಪಂಕ್ತಿ ಯಲ್ಲಿ ಸೇರಿದವು. ಮೊದಲು ಒಂದಿಷ್ಟು ಕುಚ್ಚಿಲನ್ನ ನಂತರ ಅಲಸಂದೆ ಬೀಜದ ಸಾಂಬರು. ಅದರಲ್ಲಿ ಸಾಂಬಾರಿನ ಯಾವುದೇ ಲಕ್ಷಣ ಇರಲಿಲ್ಲ. ಬಿಸಿ ನೀರಿಗೆ ಸ್ವಲ್ಪ ಮೆಣಸಿನ ಹುಡಿ ಹಾಕಿ ಅಲಸಂದೆ ಬೀಜ ಬೇಯಿಸಿದ್ದರು. ಅನ್ನಕ್ಕೆ ಸುರಿದೊಡನೆ ಮೇಲೆ ಅಲಸಂದೆ ಬೀಜ ಮಾತ್ರ ಕಾಣುತ್ತಿತ್ತು. ಅನ್ನದಡಿಯಲ್ಲಿ ಒಂದಿಷ್ಟು ಕೆಂಪು ನೀರು. ಮಕ್ಕಳು ಗಬಗಬ ತಿನ್ನುತ್ತಿದ್ದರು. ಎರಡು ನಿಮಿಷದಲ್ಲಿ ಊಟ ಮುಗಿಸಿ ಪಾತ್ರೆ ತೊಳೆದಿಟ್ಟು ಮಕ್ಕಳು ಓಡಿ ಹೋದರು. ನನಗೆ ಎರಡು ಮುಷ್ಟಿ ಉಣ್ಣಲಾಗಲಿಲ್ಲ. ಪ್ರತಿ ಮುಷ್ಟಿ ಅನ್ನದಲ್ಲೂ ಕಲ್ಲು. ಊಟದ ಶಾಸ್ತ್ರ ಮುಗಿಸಿ ಎದ್ದು ಬಿಟ್ಟೆ. ಅದೇ ಅನ್ನಸಾರು ರಾತ್ರಿಗೆ. ತಡೆಯಲಾರದೆ ಅ ಗುಮಾಸ್ತನನ್ನು ಮೈದಾನದ ಬದಿಗೆ ಕರೆದುಕೊಂಡು ಹೋದೆ. ‘ಇಂತಹ ಅನ್ನವನ್ನು ಈ ಮಕ್ಕಳು ಒಂದೇ ಸವನೆ ಮುಕ್ಕುತ್ತಿದ್ದಾರಲ್ಲ ಕಾರಣವೇನು?’ ನನ್ನ ಪ್ರಶ್ನೆಗೆ ಅವನು ನಕ್ಕ. ಮಕ್ಕಳಿಗೆ ಬೆಳಿಗ್ಗೆ ಒಂದಿಷ್ಟು ಉಪ್ಪಿಟ್ಟು ಚಹಾ ಕೊಟ್ಟ ಮೇಲೆ ಮತ್ತೆ ಮಧ್ಯಾಹ್ನದ ಊಟವೇ ಗತಿ. ಬೆಳೆಯುವ ಮಕ್ಕಳಿಗೆ ಇದು ಎಲ್ಲಿ ಸಾಕು. ಅದೂ ಹೊಟ್ಟೆ ತುಂಬಾ ಅನ್ನ ಕೊಡುವುದಿಲ್ಲ. ಮತ್ತೆ ರಾತ್ರಿ ಅದೇ ಅನ್ನ. ಹಸಿದಾಗ ಹಲಸಿದ ಅನ್ನವೂ ರುಚಿಯಾಗುತ್ತೆದೆ’. ‘ಇದನ್ನು ನಿಮ್ಮ ಸಂಸ್ಥಾಪಕರು ನೋಡುವುದಿಲ್ಲವೇನು’. ನಾನು ಕೇಳಿದೆ. ಎಲ್ಲವು ಅವರ ಅಜ್ಞೆಯಂತೆ ನಡೆಯುತ್ತದೆ. ನಾನು ಇನ್ನು ಹೆಚ್ಚಿನ ಮಾಹಿತಿಗಾಗಿ ಅವನನ್ನು ಪುಸಲಾಯಿಸಿದೆ. ಅವನಿಗೂ ತನ್ನ ಮನದಲ್ಲಿದ್ದುದನ್ನು ಕಕ್ಕಲು ಒಂದು ಅವಕಾಶ ಬೇಕಿತ್ತು. ‘ನಾನು ಇಲ್ಲಿಗೆ ಬಂದು ಸುಮಾರು ಒಂದು ವರ್ಷವಾಯಿತು. ನನ್ನ ಹೆಂಡತಿ ಮಕ್ಕಳು ಕೇರಳದಲ್ಲಿದ್ದಾರೆ. ಇಲ್ಲಿ ವಾರದ ರಜೆಯಿಲ್ಲ. ಹೆಂಡತಿ ಮಕ್ಕಳ ನೆನಪಾದರೆ ಎರಡು ಮೂರು ತಿಂಗಳಿಗೊಮ್ಮೆ ಕೇರಳಕ್ಕೆ ಹೋಗಿ ಬರುತ್ತೇನೆ. ಒಂದಿಷ್ಟು ಹಣ ಅಲ್ಲಿ ಖರ್ಚಿಗೆ ಕೊಟ್ಟು ಬಂದರೆ ಸಾಕು. ಅವರು ಜೀವನ ನಡೆಸುತ್ತಾರೆ. ಇಲ್ಲಿಯ ಎಲ್ಲಾ ಸಿಬ್ಬಂದಿಗಳು ಅದನ್ನೇ ಮಾಡುವುದು”. “ಅಂದರೆ ನಾನೂ ಕೂಡ ವಾರಕ್ಕೊಮ್ಮೆ ಊರಿಗೆ ಹೋಗುವ ಹಾಗಿಲ್ಲ ಅಲ್ಲವೇ?’” ‘ಹೌದು’, ಅವನಂದ. ಮತ್ತೆ ಇಲ್ಲಿ ಏನು ಕೆಲಸ ನಾನು ಕೇಳಿದೆ. “ಇಲ್ಲಿಯ ಎಲ್ಲಾ ಲೆಕ್ಕಪತ್ರವನ್ನು ನಾನೇ ನೋಡಿಕೊಳ್ಳುತ್ತಿದ್ದೇನೆ. ಕನ್ನಡ ಶಾಲೆಯ ಲೆಕ್ಕಪತ್ರಕ್ಕೆ ಬೇರೆ ಒಬ್ಬ ಗುಮಾಸ್ತನಿದ್ದಾನೆ. ನನಗೆ ಯತೀಂ ಶಾಲೆಯ ಮಸೀದಿಯ ಹಾಗೂ ಮದುವೆ ಹಾಲ್‌ನ ಲೆಕ್ಕಪತ್ರ ನೋಡಲಿಕ್ಕಿದೆ. ಇಲ್ಲಿ ಎಲ್ಲವೂ. ಎರಡೆರಡು ಲೆಕ್ಕಪತ್ರ’ ಅವನಂದ. ನನಗೆ ಅರ್ಥವಾಗಲಿಲ್ಲ. ಪ್ರಶ್ನಾರ್ಥಕವಾಗಿ ಅವನ ಮುಖ ನೋಡಿದೆ. ‘ನೋಡಿ, ಬಹುಶಃ ನಿಮಗೆ ನನ್ನೊಟ್ಟಿಗೆ ಟ್ರೈನಿಂಗ್ ಕೊಡ್ತಾ ರಂತೆ ಕಾಣುತ್ತದೆ. ಇದು ಬಹಳ ವಿಶ್ವಾಸ ಹಾಗೂ ಅಷ್ಟೇ ರಹಸ್ಯದ ಕೆಲಸ. ಈ ಊರು ಬರೇ ಕುಗ್ರಾಮ. ಇಲ್ಲಿಯ ಹೆಚ್ಚಿನ ಗಂಡಸರು, ಹೆಂಗಸರು ಅನಕ್ಷರಸ್ಥರು ಮತ್ತು ಬಡವರು. ಮೂಢನಂಬಿಕೆಯನ್ನು ಬಲವಾಗಿ ನಂಬಿಕೊಂಡು ಬಂದವರು. ಮನೆಯಲ್ಲಿ ಕಾಯಿಲೆ, ವ್ಯಾಪಾರದಲ್ಲಿ ನಷ್ಟ ಇತ್ಯಾದಿ ಉಂಟಾದರೆ ಅನಾಥ ಮಕ್ಕಳ ಹೆಸರಲ್ಲಿ ಹರಕೆ ಹೇಳುತ್ತಾರೆ. ಗುಣವಾದ ಮೇಲೆ ಹರಕೆಯಾಗಿ ಕೋಳಿ, ಕುರಿ, ಆಡು, ತೆಂಗಿನಕಾಯಿ, ಬಾಳೆಗೊನೆ, ಅಕ್ಕಿಮುಡಿ ಇತ್ಯಾದಿಗಳನ್ನು ಅನಾಥ ಮಕ್ಕಳಿಗೆ ಸಹಾಯವಾಗಿ ಕಳುಹಿಸಿ ಕೂಡುತ್ತಾರೆ. ಅವುಗಳನ್ನು ಏಲಂ ಮಾಡಿ ಆ ಹಣವನ್ನು ಲೆಕ್ಕಪತ್ರಕ್ಕೆ ಜಮಾ ಮಾಡಿಕೊಳ್ಳುತ್ತೇವೆ….’ ಅವನಂದ.

‘ಇದರಲ್ಲಿ ತಪ್ಬೇನು’? ನಾನು ಕೇಳಿದೆ.

‘ಇಲ್ಲೇ ಇರುವುದು ಕಥೆ. ವರಿಜಿನಲ್ ಲೆಕ್ಕಪತ್ರವನ್ನು ಬೇರೆಯೇ ತೆಗೆದಿಟ್ಟು ಮತ್ತೆ ನಕಲಿ ಲೆಕ್ಕಪತ್ರವನ್ನು ಹೊರಗಿಡುತ್ತಾರೆ. ಅಂದರೆ ಮದುವೆ ಹಾಲ್ ಬಾಡಿಗೆ ಹಾಗೂ ಏಲಂ ಹಣದ ಲೆಕ್ಕ ಎಲ್ಲಾ ಶೇಕಡಾ ೫೦ ಖೋತಾ ತೋರಿಸುತ್ತಾರೆ. ಇದಲ್ಲದೆ ಅನಾಥ ಮಕ್ಕಳಿಗೆ ಗಲ್ಫ್ ದೇಶದಲ್ಲಿ ಶ್ರೀಮಂತ ಅರಬರಿಂದ ಹಣ ಸಂಗ್ರಹಿಸುತ್ತಾರೆ. ಸೌದಿ ಅರೇಬಿಯಾ, ದುಬೈ, ಅಬುದಾಬಿ, ಶಾರ್ಜ, ಮಸ್ಕತ್ ಮೊದಲಾದ ಗಲ್ಫ್ ದೇಶಗಳಿಗೆ ವರ್ಷವಿಡೀ ಪ್ರಯಾಣ ಬೆಳೆಸುತ್ತಾರೆ. ಇಲ್ಲಿ ಸಂಗ್ರಹವಾದ ಲಕ್ಷಾನುಗಟ್ಟಲೆ ಹಣದಲ್ಲಿ ಶೇಕಡಾ ೬೦ ಮಾತ್ರ ಅನಾಥ ಆಶ್ರಮಕ್ಕೆ ಸೇರುತ್ತದೆ. ಉಳಿದ ಶೇ.೪೦ ಸಂಸ್ಥಾಪಕರಿಗೆ. ಇಲ್ಲಿಯೂ ಎರಡೆರಡು ಲೆಕ್ಕಪತ್ರ. ಅವನು ಒಂದೇ ಸವನೆ ಹೇಳುತ್ತಿದ್ದ.

‘ಮತ್ತೆ ಈ ಸಂಸ್ಥಾಪಕರು ಎಲ್ಲಿಯವರು?’ ನಾನಂದೆ.

“ಅವರು ಕೇರಳದವರು. ಅಲ್ಲಿ ಅವರಿಗೆ ಮನೆ, ತೋಟ, ಅಸ್ತಿ ಇದೆ. ಅದೇ ರೀತಿ ಮಡಿಕೇರಿಯಲ್ಲಿಯೂ ಬಂಗ್ಲೆ, ತೋಟ ಅಸ್ತಿಯಿದೆ. ಎರಡು ಹೆಂಡತಿ ಬೇರೆ” ಅವನು ಮುಂದುವರಿಸಿದ.

ಮನೆಯಲ್ಲಿ ಎರಡೆರಡು ಎ. ಸಿ. ಕಾರುಗಳಿವೆ. ಮನೆಗಳಿಗೂ ಎ. ಸಿ. ಅಳವಡಿಸಿದ್ದಾರೆ. ಈಗ ಅನಾಥ ಆಶ್ರಮದ ಲೆಕ್ಕದಲ್ಲೂ ತಿರುಗಾಡಲೂ ಎ. ಸಿ. ಕಾರಿದೆ. ನಾನು ದಂಗಾದೆ. ಒಂದೇ ರಾತ್ರಿಯಲ್ಲಿ ಎಷ್ಟೊಂದು ಆಘಾತಕಾರಿ ಸುದ್ದಿಗಳು. ಇನ್ನು ಏನು ಸುದ್ದಿಗಳಿವೆಯೋ. ಇನ್ನು ಕೇಳುವ ತವಕ ನನಗೆ.

‘ಇನ್ನು ಇಲ್ಲಿಯ ಸಿಬ್ಬಂದಿಗಳು ಊಟಕ್ಕೆ ಏನು ಮಾಡುತ್ತಾರೆ’. ನನಗೆ ಆ ಮಕ್ಕಳ ಊಟದ ಮೇಲೆಯೇ ಅಸಮಾಧಾನ. ಇಷ್ಟೆಲ್ಲ ಅದಾಯವಿದ್ದು ಈ ಅನಾಥ ಮಕ್ಕಳಿಗೆ ಅದೆಂಥಾ ನರಕದ ಊಟ ಬಡಿಸುತ್ತಾರೆ? ಗುಮಾಸ್ತ ಮಾತು ಮುಂದುವರಿಸಿದ.

‘ಕನ್ನಡ ಶಾಲೆಯ ಸಿಬ್ಬಂದಿಗಳು ಇಲ್ಲಿಯ ಸ್ಠಳೀಯರು. ಅವರು ಊಟ ಮನೆಯಿಂದ ಬೆಳಿಗ್ಗೆ ಬರುವಾಗ ತರುತ್ತಾರೆ. ಅಪ್ಪಿ ತಪ್ಪಿಯೂ ಈ ಅನಾಥ ಮಕ್ಕಳ ಊಟ ಮಾಡುವುದಿಲ್ಲ. ಮತ್ತು ಇನ್ನು ಉಳಿದ ಮದ್ರಸ ಕಲಿಸುವ ಉಸ್ತಾದರಿಗೆ ಮಸೀದಿಯ ಖತೀಬ್ ಹಾಗೂ ಮುಕ್ರಿಯವರಿಗೆ ಊರಿನ ಜಮಾತಿನಿಂದ ಊಟ ಬರುತ್ತದೆ. ಪ್ರತೀ ದಿನವು ಒಂದೊಂದು ಮನೆಯಿಂದ ಊಟ. ಅದು ಮೃಷ್ಟಾನ ಭೋಜನ. ಒಮ್ಮೊಮ್ಮೆ ಏನಾದರೂ ಜಮಾತಿನ ಮನೆಯಲ್ಲಿ ಸ್ಪೆಶಲ್ ಕಾರ್ಯಕ್ರಮವಿದ್ದರೆ ಕಾರಿನಲ್ಲಿ ಹೋಗಿ ಊಟ ಮಾಡಿ ಬರುತ್ತಾರೆ’.

ನನಗೆ ದಿಗಿಲಾಯಿತು. ನಾನು ಎರಡು ಹೊತ್ತು ಈ ಮಕ್ಕಳ ಹಲಸಿದ ಅನ್ನ ತಿನ್ನಬೇಕಲ್ಲ ಎಂಬ ಚಿಂತೆ ಶುರುವಾಯಿತು. ನಾನಂದೆ ‘ಹಾಗಾದರೆ ನಮ್ಮ ಊಟದ ಗತಿಯೇನು?’

‘ಈ ವಿಷಯದಲ್ಲಿ ನಾವು ಅಸಹಾಯಕರು. ಮೊದ ಮೊದಲು ನನಗೂ ಕಷ್ಟವಾಯಿತು. ಕ್ರಮೇಣ ಎಲ್ಲವೂ ಒಗ್ಗಿ ಹೋಗುತ್ತದೆ’ ಅವನಂದ.

ಅಂದು ರಾತ್ರಿ ನನಗೆ ನಿದ್ದೆ ಬರಲಿಲ್ಲ. ಯತೀಂಖಾನದ ಹಾಲಿನ ಮೂಲೆಯಲ್ಲಿ ನನಗೆ ಹಾಸಿಗೆ ಕೊಟ್ಟಿದ್ದರು. ಆ ಹಾಸಿಗೆ ಮುಳ್ಳಿನ ಹಾಸಿಗೆಯಂತೆ ಬೆಳಿಗ್ಗೆಯಾಗುವವರೆಗೂ ಚುಚ್ಚುತ್ತಿತ್ತು. ಈ ಗುಮಾಸ್ತ ಹೇಳುತ್ತಿರುವುದು ನಿಜವಿರಬಹುದೇ ಅಥವಾ ಸುಳ್ಳೇ ಎಂಬ ಅನುಮಾನ ಬರುತ್ತಿತ್ತು. ಬಹುಶಃ ಸಂಬಳ ಕಡಿಮೆ ಇದ್ದುದಕ್ಕೆ ಈ ರೀತಿ ಹೇಳುತ್ತಿರಬಹುದೇ? ಎಲ್ಲಾ ಸಂಶಯಗಳು ನನ್ನನ್ನು ಬೆಳಗ್ಗಿನವರೆಗೂ ಕಾಡುತ್ತಿದ್ದುವು.

ಬೆಳಗಾಯಿತು. ಇಂದು ಶುಕ್ರವಾರ ಮದ್ರಸಕ್ಕೆ ರಜೆ. ಈ ದಿನ ಮಕ್ಕಳು ತಮ್ಮ ತಮ್ಮ ಉಡುಪುಗಳನ್ನು ತೊಳೆದು ಸ್ವಚ್ಛ ಮಾಡಿಡಬೇಕು. ಮಕ್ಕಳು ಬಟ್ಟೆ ತೊಳೆಯುವ ಸ್ಥಳಕ್ಕೆ ಹೋದೆ. ಯತೀಂಖಾನದ ಹಿಂಬದಿಯ ಸ್ಥಳದಲ್ಲಿ ಒಂದು ದೊಡ್ಡ ನೀರಿನ ಟಾಂಕಿಯಿದೆ. ಅದರ ಸಮೀಪವೇ ಬಟ್ಟೆ ಒಗೆಯುವ ಹಲವಾರು ಕಲ್ಲುಗಳು. ಮಕ್ಕಳು ಬಟ್ಟೆ ಒಗೆಯುವ ಕಾರ್ಯದಲ್ಲಿ ನಿರತರಾಗಿದ್ದುರು. ೧೦-೧೫ ಮಕ್ಕಳು ಬಟ್ಟೆ ಒಗೆಯುತ್ತಿದ್ದರು. ಇನ್ನು ಕೆಲವು ಮಕ್ಕಳು ನೀರಿನ ಟ್ಯಾಂಕಿನ ಬಳಿ ನಿಂತು ಸ್ನಾನ ಮಾಡುತ್ತಿದ್ದರು. ಎಲ್ಲವೂ ಯಾಂತ್ರಿಕ ರೀತಿಯಲ್ಲಿ ಕೆಲಸ ನಡೆಯುತ್ತಿತ್ತು. ಒಂದು ನಗುವಿಲ್ಲ, ಜೀವ ಕಳೆಯಿಲ್ಲ, ಏನೋ ಕಳಕೊಂಡ ರೀತಿಯ ಮುಖ ಭಾವ. ಹೆಚ್ಚಿನ ಮಕ್ಕಳು ೧೦-೧೪ ವಯಸ್ಸಿನೊಳಗಿನವರು. ಬಟ್ಟೆ ಒಗೆಯುವ ಮಕ್ಕಳನ್ನು ಸೂಕ್ಷ್ಮವಾಗಿ ನೋಡಿದೆ. ಸೋಪು ಹಚ್ಚಿದ ಒದ್ದೆ ಪ್ಯಾಂಟನ್ನು ಎತ್ತಿ ಬಡಿಯಲು ಅವರಿಂದ ಅಸಾಧ್ಯವಾಗುತ್ತಿತ್ತು. ಅದನ್ನೇ ಮುದ್ದೆ ಮಾಡಿ, ಎರಡು ಸಾರಿ ನೀರಿಗೆ ಮುಳುಗಿಸಿಕೊಂಡು ಹೋಗಿ ಕಂಪೌಂಡಿನ ಗೋಡೆ ಮೇಲೆ ಬಿಡಿಸಿ ಹಾಕುತ್ತಿದ್ದರು. ಸಾಬೂನಿನ ನೊರೆ ಹಾಗೆಯೇ ಉಳಿಯುತ್ತಿತ್ತು. ಮತ್ತೆ ಈ ಕೆಲಸ ಬೇಗ ಬೇಗ ಮುಗಿಯಬೇಕು. ಯಾಕೆಂದರೆ ತಡವಾದರೆ ಬಿಸಿಲು ಬರುತ್ತದೆ ಮತ್ತು ಉಳಿದ ಮಕ್ಕಳಿಗೆ ಒಗೆಯುವ ಕಲ್ಲನ್ನು ಬಿಟ್ಟು, ಕೊಡಬೇಕಾಗುತ್ತದೆ.

ಕೆಲವು ಹುಡುಗರನ್ನು ವಿಚಾರಿಸಿದ. ಅವರು ಮಾತಾಡಲು ಹೆದರುತ್ತಿದ್ದರು. ಸತ್ಯವನ್ನು ಮರೆ ಮಾಚುತ್ತಿದ್ದರು. ಬಿಸಿಲಿರಲಿ, ಚಳಿಯಿರಲಿ, ಮಳೆಯಿರಲಿ, ದಿನನಿತ್ಯವೂ ತಣ್ಣೀರ ಸ್ನಾನವೇ. ನಂತರ ಯತೀಂಖಾನದಿಂದ ಊಟದ ಹಾಲ್ಗೆ ಮತ್ತು ಕನ್ನಡ ಶಾಲೆಗೆ. ಅದು ಬಿಟ್ಟು, ಬೇರೆಲ್ಲೂ ತಿರುಗಲು ಬಿಡುತ್ತಿರಲಿಲ್ಲ. ಬಾಂಗ್ ಆದ ಸಮಯದಲ್ಲಿ ಮಸೀದಿಗೆ. ಅದೂ ಲೈನಿನಲ್ಲಿ ಹೋಗಿ ಬರಬೇಕು. ಮದುವೆ ಹಾಲ್ ಕಡೆ ತಿರುಗಿಯೂ ನೋಡುತ್ತಿರಲಿಲ್ಲ. ಯಾರಾದರೂ ಕಣ್ಣು ತಪ್ಪಿಸಿ, ಮದುವೆ ಹಾಲ್ಗೆ ಬಂದು ನಿಂತರೆ ಚಡಿ ಏಟು ಬೀಳುತ್ತಿತ್ತು. ಆ ಮಕ್ಕಳು ಮದುವೆ ನೋಡಲು ತವಕಿಸುವುದು ಅವರ ಮಾತಿನಿಂದ ಅರ್ಥವಾಗುತ್ತಿತ್ತು . ಊರಿಗೆ ಹೋಗುವ ಬಗ್ಗೆ ವಿಚಾರಿಸಿದೆ. ಕನ್ನಡ ಶಾಲೆಗೆ ರಜೆ ಇದ್ದಾಗ, ಮದರಸದಲ್ಲಿ ಸ್ಪೆಶಲ್ ಪಾಠ ಇರುತ್ತಿತ್ತು. ಹೆಚ್ಚೆಂದರೆ ಒಂದು ವಾರ ರಜೆ. ಊರಿಗೆ ಹೋಗಲು ಸಿಗುತ್ತಿತ್ತು. ಕೆಲವು ಮಕ್ಕಳು ಹೋದವರು ತಿರುಗಿ ಶಾಲೆಗೆ ಬರಲು ಇಷ್ಟಪಡುತ್ತಿರಲಿಲ್ಲ. ಆದರೆ ಮನೆಯಲ್ಲಿ ತಾಪತ್ರಯವಾದುದರಿಂದ ಒತ್ತಾಯ ಪೂರ್ವಕವಾಗಲೀ, ಸಂಬಂಧಿಕರಾಗಲೀ ತಂದು ಮುಟ್ಟಿಸುತ್ತಿದ್ದರು. ಸ್ವಲ್ಪ ಬಲಿತ ಮಕ್ಕಳು ರಜೆಯಲ್ಲಿ ಊರಿಗೆ ಹೋದವರು ಅಲ್ಲಿಂದ ಮುಂಬಯಿಗೆ ಓಡಿದ್ದೂ ಉಂಟು. ರೋಗ – ರುಜಿನ ಬಂದರೆ ಅಲ್ಲಿಯೇ ಇದ್ದ ಪಂಡಿತರ ಮದ್ದು ಸಿಗುತ್ತಿತ್ತು.

ಒಬ್ಬೊಬ್ಬರೇ ಹುಡುಗರನ್ನು ವಿಚಾರಿಸುತ್ತಾ ಹೋದೆ. ಅವರು ಹೆದರಿಕೆ ಬಿಟ್ಟು ಸ್ವಲ್ಪ ಸಲೀಸಾಗಿ ಮಾತಾಡ ತೊಡಗಿದರು. ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಕೆಲವರಿಗೆ ೩-೪ ತಮ್ಮ ತಂಗಿಯರು. ತಾಯಿ ಬೀಡಿಕಟ್ಟಿ ಅವರನ್ನು ಸಾಕಬೇಕು. ಆದುದರಿಂದ ಮನೆಯಲ್ಲೂ ನಿಲ್ಲಲಾರದ ಇಲ್ಲೂ ಮನಸ್ಸಿಲ್ಲದೆ ಒಂದು ರೀತಿಯ ಸೆರೆಮನೆ ವಾಸ ಅನುಭವಿಸುತ್ತಿದ್ದರು. ತಂದೆ-ತಾಯಿಯ ತೆಕ್ಕೆಯಲ್ಲಿರಬೇಕಾದ ಕಂದಮ್ಮಗಳು. ತಮ್ಮ ತಂಗಿಯರೊಂದಿಗೆ ಅಡಿಕೊಂಡು ಬೆಳೆಯ ಬೇಕಾದ ಮಕ್ಕಳು! ಇಲ್ಲಿ ಒಂದು ರೀತಿಯ ಗೃಹಬಂಧನದಲ್ಲಿದ್ದಂತೆ ಕಂಡುಬಂತು. ಆಟ ಇಲ್ಲ, ನಗುವ ಹಾಗಿಲ್ಲ, ಬೇಕೆಂದಲ್ಲಿಗೆ ತಿರುಗುವ ಹಾಗಿಲ್ಲ. ರಜಾದಿನಗಳಲ್ಲಿ ಬೇರೆ ಮಕ್ಕಳು ತಮ್ಮ ಅಜ್ಜ ಅಜ್ಜಿಯ ಮನೆಗೆ, ಸಂಬಂಧಿಕರ ಮನೆಗೆ ಹೋಗುತ್ತಿದ್ದರೆ, ಈ ಮಕ್ಕಳು ಈ ಗುಡ್ಡದ ಮೇಲೆ ನಾಲ್ಕು ಗೋಡೆಯ ಮಧ್ಯೆ ಭವಿಷ್ಯದ ಕನಸು ಕಾಣುತ್ತಾ ಬಿದ್ದಿರಬೇಕಾದ ಪರಿಸ್ಥಿತಿ! ಈ ಮಕ್ಕಳನ್ನು ವಿಚಾರಿಸುವಾಗ ಮದರಸದ ವಸ್ತಾದರು ಬಂದರೆ ಆ ಮಕ್ಕಳು ತಮ್ಮ ಕೆಲಸದ ಕಡೆಗೆ ಓಡುತ್ತಿದ್ದರು. ವಸ್ತಾದ್ ಹೋದ ಮೇಲೆ ಮತ್ತೆ ತಿರುಗಿ ಬರುತ್ತಿದ್ದರು. ಭಯದ ನೆರಳಿನಲ್ಲಿ ಈ ಮಕ್ಕಳ ಬದುಕು ಸಾಗುತ್ತಿತ್ತು.

ಸಂಜೆ ಹೊತ್ತು ಕೂಡಾ ಆ ಮಕ್ಕಳೊಂದಿಗೆ ಸಮಯ ಕಳೆದೆ. ಒಂದೊಂದು ಮಕ್ಕಳದು ಒಂದೊಂಡು ಕತೆ. ಕಿತ್ತು ತಿನ್ನುವ ಬಡತನ. ಆದಾಯ ತರುವ ತಂದೆಯೇ ಇಲ್ಲವಾದಾಗ ಆ ಸಂಸಾರ ಸಾಗುದೆಂತು? ಹೀಗೆ ಮಕ್ಕಳನ್ನು ವಿಚಾರಿಸುತ್ತಿರುವಾಗ ಒಬ್ಬ ಹುಡುಗ ನನ್ನನ್ನೇ ನೋಡುತ್ತಿದ್ದ. ತುಂಬಾ ಮುಗ್ಧ ಹುಡುಗ. ನೋಡಲು ತುಂಬಾ ಚೆಂದ. ಅವನನ್ನು ನೋಡುವಾಗ ನನಗೆ ನನ್ನ ಮಗ ಸಣ್ಣದಾಗಿರುವಾಗಿನ ನೆನಪಾಯಿತು. ಅವನದೇ ತದ್ರೂಪ. ಒಂದು ಮುಗುಳ್ನಗೆ ನೀಡಿ ಕೈ ಸನ್ನೆ ಮಾಡಿ ಅವನನ್ನು ಹತ್ತಿರ ಕರೆದೆ. ನಾಚುತ್ತಾ ಹತ್ತಿರ ಬಂದ. ಅಲ್ಲಿಯೇ ಕಲ್ಲಿನ ಮೇಲೆ ನಾನು ಕೂತು ಹತ್ತಿರ ಅವನನ್ನು ಕೂತುಕೊಳ್ಳಿಸಿದೆ. ಎಲ್ಲಾ ವಿಚಾರಿಸಿದೆ. ಅವನ ತಂದೆ ಅವನು ಚಿಕ್ಕವನಿರುವಾಗಲೇ ತೀರಿ ಹೋಗಿದ್ದು ತಾಯಿ ಮರುಮದುವೆಯಾಗಿದ್ದರು. ಸಾಕು ತಂದೆಗೆ ಇವನ ಸಾನಿಧ್ಯ ಇಷ್ಟವಿಲ್ಲವಾದುದರಿಂದ ಈ ಯತೀಂಖಾನಕ್ಕೆ ಬಂದಿದ್ದ. ಸುಮಾರು ೧೦-೧೨ ವರ್ಷ ವಯಸ್ಸು ಇರಬಹುದು. ಮಾತಾಡಿಸುತ್ತಿದ್ದಂತೆ ಅವನು ತುಂಬಾ ಹತ್ತಿರವಾಗತೊಡಗಿದ. ತುಂಬಾ ಹೆದರುತ್ತಾ ಹೆದರುತ್ತಾ ಒಂದು ಪ್ರಶ್ನೆ ಕೇಳಿದ.

‘ಕಾಕ, ನಾನು ನಿಮ್ಮೊಂದಿಗೆ ಬರಲಾ?’

ನನಗೆ ಆಶ್ಚರ್ಯವಾಯಿತು. ಅವನ ಮುಖ ನೋಡಿದೆ.

‘ನನ್ನೊಂದಿಗೆ ಬಂದು ಏನು ಮಾಡ್ತೀಯಾ? ನಿನಗೆ ನಿನ್ನ ತಾಯಿ ಬೇಡವೇ?

ನನ್ನ ಮರುಪ್ರಶ್ನೆಯಿಂದ ಅವನ ಕಣ್ಣಾಲಿ ತುಂಬಿ ಬಂತು.

‘ತಾಯಿ ಬೇಕು ಕಾಕ. ಆದರೆ ಚಿಕ್ಕ ತಂದೆಯನ್ನು ನೋಡುವಾಗ ಭಯವಾಗುತ್ತದೆ. ಅವರು ಹೊಡೆಯುತ್ತಾರೆ’. ಹುಡುಗ ಅಳತೊಡಗಿದ.

ನನಗೆ ತುಂಬಾ ದುಃಖವಾಯಿತು. ಅವನನ್ನು ತಬ್ಬಿಕೊಂಡೆ.

‘ನಾನಿಲ್ಲಿರಲಾರೆ. ನಿಮ್ಮ ಮನೆ ಕೆಲಸ ಮಾಡಿಕೊಂಡು ಇರುತ್ತೇನೆ- ಇಲ್ಲಿ ಬೇಡ, ಇಲ್ಲಿ ಹಿಂಸೆಯಾಗುತ್ತಿದೆ’. ಅವನು ಏನೋ ಹೇಳಲು ಇಷ್ಟಪಡುತ್ತಿದ್ದ.

‘ನಿಜ ಹೇಳು, ಇಲ್ಲಿ ಏನು ತೊಂದರೆ…..?’ ನಾನು ಸಮಾಧಾನಿಸುತ್ತಾ ಕೇಳಿದೆ. ಹುಡುಗ ಬಿಕ್ಕಳಿಸುತ್ತಾ ಹೇಳಿದ.

‘ನನಗೆ ರಾತ್ರಿ ಮಲಗಲು ಬಿಡುವುದಿಲ್ಲ. ತೊಂದರೆ ಕೊಡುತ್ತಾರೆ. ಮೈ ಕೈ ಎಲ್ಲಾ ನೋವು ಕಾಕ’. ಹುಡುಗ ಒಂದೇ ಸವನೆ ಅಳತೊಡಗಿದ.

ನನಗೆ ಗಾಬರಿಯಾಯಿತು.

‘ನಿನಗೆ ಯಾರು ತೊಂದರೆ ಕೊಡುತ್ತಾರೆ?’

“ಅಡುಗೆ ಕೆಲಸದವರು. ಅವರು ನಮ್ಮ ಹತ್ತಿರವೇ ಮಲಗುತ್ತಾರೆ. ಹುಡುಗ ತನ್ನ ಕುಂಡೆ ಕಡೆ ಕೈ ತೋರಿಸುತ್ತಾ ಹೇಳಿದ ‘ಇಲ್ಲೆಲ್ಲಾ ನೋವು’ ನನ್ನ ಬಾಯಿಂದ ಮಾತೇ ಹೊರಡಲಿಲ್ಲ. ಎಂತಹ ಪಾಶವೀ ಕೃತ್ಯಗಳು. ಹೌದು ೩-೪ ತಿಂಗಳು ಹೆಂಡತಿ ಸಂಪರ್ಕ ಇಲ್ಲದಿದ್ದರೆ ಈ ರೀತಿ ಆಗುವುದು ಸಹಜ ತಾನೆ? ಹುಡುಗ ತಲೆ ಸವರುತ್ತಾ ನಾನಂದೆ.

‘ಹೆದರಬೇಡ ನೋಡುವಾ, ನಾನಿದ್ದೇನೆ’.

ಅಂದು ರಾತ್ರಿ ಕೂಡಾ ನನಗೆ ನಿದ್ದೆ ಬರಲಿಲ್ಲ. ಆಗಾಗ್ಗೆ ಎಚ್ಚರ. ಎಚ್ಚರ ವಾದಗಲೆಲ್ಲಾ ಆ ಹುಡುಗನ ಮುಖ ಕಾಣುತ್ತಿತ್ತು. ಆ ಮುಖದಲ್ಲಿ ‘ನನ್ನನ್ನು ರಕ್ಷಿಸು’ ಎಂಬ ಬೇಡಿಕೆಯಿತ್ತು. ಅಲೋಚಿಸುತ್ತಲೇ ಬೆಳಗು ಮಾಡಿದೆ.

ಮರುದಿನ ಮಕ್ಕಳು ಮದರಸದಲ್ಲಿ ಓದುತ್ತಿದ್ದರು. ಬಹಳ ದೊಡ್ಡ ಹಾಲ್. ಆದರೊಳೆಗೆ ೩-೪ ಕಂಪಾರ್ಟ್‌ಮೆಂಟ್. ಅಂದರೆ ಮಕ್ಕಳು ಬೇರೆ ಬೇರೆ ದರ್ಜೆಯಲ್ಲಿ ಓದುತ್ತಿದ್ದರು. ನಾನು ಮಕ್ಕಳ ಚಲನ ವಲನವನ್ನು ನೋಡುತ್ತಿದ್ದೆ. ಮಕ್ಕಳಿಗೆ ಕುಳಿತು ಓದಲು ಬೆಂಚು ಮಾತ್ರ ಇದೆ. ಆದರೆ ಮೇಜು ಇರಲಿಲ್ಲ. ಒಂದಿಬ್ಬರು ವಸ್ತಾದರು ಕಿಟಕಿ ಹತ್ತಿರ ನಿಂತುಕೊಂಡು ಮಾತಾಡುತ್ತಿದ್ದರು. ಮತ್ತೊಬ್ಬರು ಪಾಠವನ್ನು ಮಕ್ಕಳಿಗೆ ಹೇಳಿಕೊಡುತ್ತಾ ಬಾಯಿಪಾಠ ಮಾಡಿಸುತ್ತಿದ್ದರು. ಮತ್ತೊಬ್ಬರು ಕುರ್ಚಿಯಲ್ಲಿ ಕುಳಿತು ತೂಕಡಿಸುತ್ತಿದ್ದರು. ಕೆಲವು ಹಿಂದಿನ ಬೆಂಚಿನ ಮಕ್ಕಳು ತಮ್ಮ ತಮ್ಮೊಳಗೆ ಮಾತಾಡುತ್ತಾ ಜೋಕ್ಸ್ ಕಟ್ಟು ಮಾಡುತ್ತಿದ್ದರು. ನನಗೆ ನನ್ನ ಬಾಲ್ಯದ ನೆನಪಾಯಿತು.

ಸುಮಾರು ೩೦-೩೫ ವರ್ಷದ ಹಿಂದೆ ನಾವು ಕೂಡ ಕೆಲ ಹುಡುಗರು ಇದೇ ರೀತಿ ಮದರಸದ ಹಿಂದಿನ ಬೆಂಚಿನಲ್ಲಿ ಕುಳಿತು ತಮಾಷೆ ಮಾತು ಆಡುತ್ತಿದ್ದೆವು. ಅಬ್ಬು, ಕಾದ್ರಿ, ಉಸ್ಮಾನ್, ರಜ್ಜು, ಅದ್ದು ನಾವೆಲ್ಲ ಒಂದೇ ವಯಸ್ಸಿನವರು. ಎಲ್ಲರೂ ಈಗ ಬೆಳೆದು ದೊಡ್ಡವರಾಗಿ, ಮದುವೆಯಾಗಿ ಮುದುಕರಾಗಿದ್ದೇವೆ. ಕಾದ್ರಿ ಊರಿನಲ್ಲಿ ಒಂದು ಸಣ್ಣ ಗೂಡಂಗಡಿ ಇಟ್ಟುಕೊಂಡಿದ್ದಾನಂತೆ. ಉಸ್ಮಾನ್, ರಜ್ಜು ಬಂದರಿನಲ್ಲಿ ಹಸಿ ಮೀನು ಲೋಡು ಮಾಡಲು ಹೋಗುತ್ತಿದ್ದರು. ಅದ್ದು ಸೀರೆ ಕಟ್ಟನ್ನು ತಲೆಯಲ್ಲಿ ಹೊತ್ತು ಕೊಂಡು ಜೀವನ ಸಾಗಿಸುತ್ತಿದ್ದ. ಅಬ್ಬು ಮಾತ್ರ ಮದರಸದಲ್ಲಿ ಓದು ಮುಂದುವರಿಸಿ ಕೇರಳದಲ್ಲಿ ಹೆಚ್ಚಿನ ಧಾರ್ಮಿಕ ವಿದ್ಯಾಭ್ಯಾಸವನ್ನು ಮುಗಿಸಿ ಎಲ್ಲಿಯೋ ಮಸೀದಿಯ ಖತೀಬನಾಗಿ ಕೆಲಸ ನಿರ್ವಹಿಸುತ್ತಿದ್ದಾನೆಂದು ಸುದ್ದಿ. ಅರಬಿಕ್ ಓದುದರಲ್ಲಿ ಅಬ್ಬು ತುಂಬಾ ಬುದ್ದಿವಂತ. ಮೇಲಾಗಿ ನನ್ನೊಂದಿಗೆ ತುಂಬಾ ಗೆಳೆತನ. ಶುಕ್ರವಾರ ರಜಾದಿನವಾದುದರಿಂದ ನಾವು ಕೆರೆಗೆ ಈಜಾಡಲು ಹೋಗುವುದಲ್ಲದೆ ದೋಣಿ ವಿಹಾರ ಕೂಡ ಮಾಡುತ್ತಿದ್ದೆವು. ಮಸೀದಿಯ ಹಿತ್ತೆಲಿನಲ್ಲಿರುವ ಕಸಿ ಮಾವಿನ ಮರದ, ಗೇರು ಮರದ ಹಾಗೂ ಚಿಕ್ಕು ಮರದ ಉಸ್ತುವಾರಿ ನಮಗೆ. ನಾನು ಡಿಗ್ರಿ ಮುಗಿಸಿ ಕೆಲಸಕ್ಕೆ ಸೇರಿದೆ. ಅವನು ಯಾವುದೇ ಲೌಖಿಕ ವಿದ್ಯಾಭ್ಯಾಸ ಮಾಡದ ಅರಬಿಕ್ ಕಾಲೇಜಿನಲ್ಲಿ ಸೇರಿಕೊಂಡು ಮೌಲವಿಯಾದ ಎಂದು ಯಾರೋ ಹೇಳುತ್ತಿದ್ದರು. ಡಿಗ್ರಿ ಮುಗಿಸಿ ಕೆಲಸ ಸಿಕ್ಕಿದ ಸಮಯದಲ್ಲಿ ಅವನನ್ನು ಕೊನೆಯದಾಗಿ ಎಲ್ಲೋ ಭೇಟಿಯಾಗಿದ್ದೆ. ಅಗ ಅವನು ನನ್ನನ್ನು ತಬ್ಬಿಕೊಂಡು ಅಂದಿದ್ದ . ‘ಸಲೀಲ, ನೀನು ದೊಡ್ಡ ಅಧಿಕಾರಿಯಾಗುತ್ತೀಯ. ದೊಡ್ಡ ಬಂಗಲೆಯಲ್ಲಿ ವಾಸಿಸುತ್ತಿ. ಕಾರು ವಿಮಾನದಲ್ಲಿ ತಿರುಗುತ್ತಿ. ಈ ಬಡವನನ್ನು ಮರೀ ಬೇಡಪ್ಪಾ’ ಎಂದು ಅತ್ತಿದ್ದ. ಅವನು ನಮ್ಮ ನೆನಪಿಗಾಗಿ ಅವನ ತಂದ ಅವನಿಗೆ ಕೊಟ್ಟಿದ್ದ ಪಚ್ಚೆ ಕಲ್ಲಿನ ಬೆಳ್ಳಿ ಉಂಗುರವನ್ನು ನನ್ನ ಕೈಗೆ ತುರುಕಿದ್ದ. ಈಗ ಅವನೆಲ್ಲೋ? ಯಾರಿಗೆ ಗೊತ್ತು. ಕಾಲ ನಿಲ್ಲುವುದಿಲ್ಲ. ಈ ಮದ್ರಸ ನನ್ನ ೩೦-೩೫ ವರ್ಷದ ಹಿಂದಿನ ಘಟನೆಗೆ ಪುನರ್ಜೀವ ಕೊಡುತ್ತದೆ. ಈಗ ಈ ಹುಡುಗರು ತಮ್ಮ ಭವಿಷ್ಯದ ಅರಿವಿಲ್ಲದೆ ಈ ನಾಲ್ಕು ಗೋಡೆಯೊಳಗೆ ಬಂಧಿಯಾಗಿ ಜೀವ ತೇಯುತ್ತಿದ್ದಾರೆ! ಗೊತ್ತು ಗುರಿಯಿಲ್ಲದ ಜೀವನ. ಮುಂದೆ ಸಮಾಜದಲ್ಲಿ ಈ ಹುಡುಗರು ಏನಾಗಬಹುದು ಎಂದು ನೆನಪಿಸಿಕೊಂಡೆ. ಮೈ ಲಘುವಾಗಿ ಕಂಪಿಸಿತೊಡಗಿತು. ನಾನು ಅಲ್ಲಿಂದ ಕಾಲುಕಿತ್ತು ಮಸೀದಿಗೆ ಹೋಗಿ ಕುಳಿತುಕೊಂಡೆ. ಮಧ್ಯಾಹ್ನದ ನಮಾಜು ಮುಗಿಸಿ ನಾನು ಅಲ್ಲಿಯೇ ಹೊರಗಿನ ವರಾಂಡದಲ್ಲಿ ಸ್ವಲ್ಪ ಮಲಗಿದೆ. ಬೆಟ್ಟದ ಮೇಲಿನ ಸ್ಥಳವಾದುದರಿಂದ ಮತ್ತು ಸಮುದ್ರಕ್ಕೆ ತೀರಾ ಹತ್ತಿರವಾದುದರಿಂದ ತಂಪಾದ ಗಾಳಿ ಬಹಳ ರಭಸದಿಂದ ಬೀಸುತ್ತಿತ್ತು. ಕಣ್ಣು ನಿದ್ರೆಗೆ ಜಾರುತ್ತಿದ್ದರೂ ತಲೆ ತುಂಬಾ ಪರಿಹಾರ ಕಾಣದ ಪ್ರಶ್ನೆಗಳು! ಸಂಶಯಗಳು! ಎರಡು ರಾತ್ರಿ -ಮೂರು ಹಗಲು ಈ ಪರಿಸರದಲ್ಲಿದ್ದ ನನಗೆ ನಾನೇ ಅನಾಥನಾಗತೊಡಗಿದ. ಆ ಅನಾಥ ಮಕ್ಕಳು ತಿನ್ನುವ ಊಟ, ಬಟ್ಟೆ ಬರೆ ಒಗೆಯುವ ಕಷ್ಟ, ತಣ್ಣೀರು ಸ್ನಾನ, ಭಯದಿಂದ ಜೀವಿಸುವ ಪರಿಶ್ರಮ, ಜೀವಕಳೆ ಇಲ್ಲದ ಆ ಮುಗ್ಧ ಅಸಹಾಯಕ ಮುಖಗಳು. ರಾತ್ರಿ ನಡೆಯುವ ದೈಹಿಕ ದೌರ್ಜನ್ಯಗಳು! ಆಲೋಚಿಸುತ್ತಾ ಕಣ್ಣಿಗೆ ಸ್ವಲ್ಪ ಜೊಂಪು ಬಂದ ಹಾಗಾಯಿತು. ಆಗೊಂದು ಸಣ್ಣ ಕನಸು.

ನಾನು ಆ ದೊಡ್ಡ ಮೈದಾನದಲ್ಲಿ ತಿರುಗುತ್ತಿದ್ದೆ. ಮೈದಾನ ತುಂಬಾ ಜನರು. ಹೆಂಗಸರು, ಗಂಡಸರು, ಮಕ್ಕಳು, ವೃದ್ಧರು, ಯುವಕರು ತುಂಬಿ ಹೋಗಿದ್ದರು. ಎಲ್ಲರಿಗೂ ಸರ್ಕಸ್ ನೋಡುವ ತವಕ. ಟಕೇಟಿಗಾಗಿ ನೂಕು ನುಗ್ಗಲು. ನಾನು ಕೂಡಾ ಆ ನುಗ್ಗಲಿನಲ್ಲಿ ಟಕೆಟ್ ಪಡೆದು ದೊಡ್ಡ ಗೇಟಿನಿಂದ ಒಳನುಗ್ಗಿ ಸರ್ಕಸ್ ಕ್ಯಾಂಪಸ್‌ನ ಒಳಗೆ ಬಂದೆ. ವಿಶಾಲವಾದ ಗೋಡೆಯ ಒಂದು ಬದಿಗೆ ಸಾಲಾಗಿ ಇಟ್ಟಿರುವ ಮೃಗಗಳ ಪಂಜರ. ಎಲ್ಲರಿಗೂ ಸರ್ಕಸ್ ಡೇರೆಯೊಳಗೆ ಹೊಕ್ಕು ಸೀಟಿಗಾಗಿ ಪರದಾಡುವ ತವಕವಿದ್ದರೆ ನಾನು ಮಾತ್ರ ಆ ಪಂಜರಗಳ ಹತ್ತಿರ ನಿಂತಿದ್ದೆ. ಪಂಜರದೊಳಗೆ ಹುಲಿ, ಚಿರತೆ, ಸಿಂಹ, ಕರಡಿ, ಆನೆ, ಮಂಗಗಳು, ತಮ್ಮ ಪ್ರದರ್ಶನಕ್ಕೆ ತಯಾರಾಗಿ ನಿಂತಿರಬಹುದೆಂದು ಭಾವಿಸಿ ಮೊದಲ ಪಂಜರದೊಳಗೆ ಇಣುಕಿ ನೋಡಿದೆ. ಬರೇ ಮಕ್ಕಳು. ಅರೆಬೆತ್ತಲೆ ಮಕ್ಕಳು! ಎದೆ ಅಸ್ಥಿ ಪಂಜರದಂತಿದ್ದು ಕಣ್ಣುಗಳು ಗುಳಿಬಿದ್ದು ತಲೆಯ ಬುರುಡೆ ಕಾಣುತ್ತಿತ್ತು. ಆಕ್ರಂದನ ಮಾಡಲೂ ಶಕ್ತಿಯಿಲ್ಲದ ಬಿದ್ದುಕೊಂಡಿದ್ದುವು. ನಾನು ಭಯ ಭೀತಿಗೊಂಡೆ. ಹೆದರುತ್ತಾ ಎರಡನೇ ಪಂಜರದ ಹತ್ತಿರ ಬಂದೆ. ಅಲ್ಲಿಯೂ ಅದೇ ದೃಶ್ಕ. ಮೂರು… ನಾಲ್ಕು….. ಐದು.. ಆರು….. ಎಲ್ಲಾ ಪಂಜರದಲ್ಲೂ ಅರೆಬೆತ್ತಲೆಯ ನಿಸ್ತೇಜ ಮಕ್ಕಳು! ನಾನು ಏದುಸಿರು ಬಿಡುತ್ತಾ ಕೊನೆಯ ಪಂಜರಕ್ಕೆ ಬಂದೆ. ಅಲ್ಲಿ ಆ ಚಂದದ ಹುಡುಗ ನನ್ನೊಡನೆ ಸಹಾಯ ಬೇಡಿದ ಮತ್ತು ನನ್ನೊಂದಿಗೆ ಬರಲು ಇಚ್ಚಿಸಿದ ಹುಡುಗ ಒಂದೇ ಸಮನೆ ಆಳುತ್ತಿದ್ದ. ನನ್ನ ಕಂಡೊಡನೆ ತನ್ನ ಕೈಗಳನ್ನು ಪಂಜರದ ಹೊರ ಚಾಚಿ ಸಹಾಯಕ್ಕಾಗಿ ಕೂಗಿದ! ನಾನು ಹೆದರಿ ಜೋರಾಗಿ ಕೂಗಿ ಎದ್ದುಬಿಟ್ಟೆ! ಮಸೀದಿಯಿಂದ ಸಂಜೆಯ ಬಾಂಗ್ ಕೇಳುತ್ತಿತ್ತು.

ನಮಾಜು ಮುಗಿಸಿ, ನಾನು ಆ ಬೆಟ್ಟದ ಮೂಲೆಯಲ್ಲಿರುವ ಒಂದು ಕಲ್ಲಿನ ಮೇಲೆ ಕುಳಿತು ಆಲೋಚಿಸುತ್ತಿದೆ. ನನ್ನ ಕನಸಿನ ನೆನಪಾಯಿತು. ನನ್ನ ಕನಸಿಗೂ ಈ ಬೆಟ್ಟದ ಮೇಲಿನ ಚರಿತ್ರೆಗೂ ತಾಳೆಯಿದೆ. ಸರ್ಕಸಿನ ಸಾಹುಕಾರ ತನ್ನ ಹೊಟ್ಟೆ ಹೊರೆಯಲು ಕೆಲವು ಪ್ರಾಣಿಗಳನ್ನು ಪಂಜರದಲ್ಲಿಟ್ಟು ಒಂದಿಷ್ಟು ಅನ್ನ ನೀಡಿ ಅವುಗಳಿಂದ ಹಣ ಸಂಪಾದಿಸುತ್ತಾನೆ. ಇಲ್ಲಿಯೂ ಅಷ್ಟೇ. ಕೆಲವು ಅನಾಥ ಮಕ್ಕಳನ್ನು ತಮ್ಮ ಟ್ರಂಪ್ ಕಾರ್ಡಾಗಿ ಬಳಸಿಕೊಂಡು ಪಂಜರದೊಳಗಿನ ಮೃಗಗಳಂತೆ ಸಾಕಿ ಅವರ ಹೆಸರಿನಲ್ಲಿ ತಮ್ಮ ಐಶಾರಾಮ ಜೀವನ ಸಾಗಿಸುತ್ತಾರೆ. ಇಲ್ಲಿ ಎರಡು ಲಾಭ. ಒಂದು ಸಮಾಜ ಸೇವಕ ಎಂಬ ಬಿರುದು. ಸಮಾಜದಲ್ಲಿ ಉನ್ನತ ಸ್ಥಾನ ಮಾನ. ಇನ್ನೊಂದು ಐಶಾರಾಮ ಜೀವನ. ಇದನ್ನು ಮೆಟ್ಟಿ ನಿಂತು ಹೋರಾಡಿದರೆ ನನಗೆ “ಸೈತಾನ” ಎಂಬ ಹಣೆಪಟ್ಟಿ ಖಂಡಿತ. ಯಾಕೆಂದರೆ ಇವರು ಹೇಳಿದ ‘ಚಕ್ರವ್ಯೂಹ’ ವನ್ನು ಒಮ್ಮೆಲೆ ಭೇದಿಸಲು ಕಷ್ಟ ಸಾಧ್ಯ. ಎಲ್ಲಿಯವರೆಗೆ ಜನ ವಿದ್ಯಾವಂತರಾಗುವುದಿಲ್ಲವೋ ಅಲ್ಲಿಯವರೆಗೆ ಇಂತಹ ಸಮಾಜ ಘಾತುಕರು ಮೆರೆದೇ ಮರೆಯುತ್ತಾರೆ. ನಾನು ಮನೆಗೆ ಹಿಂತಿರುಗಲು ಆಲೋಚಿಸಿದೆ. ಆಗ ಗುಮಾಸ್ತ ಒಂದು ಸುದ್ದಿ ತಂದ. ತಂಞಳ್ ಬಂದಿದ್ದಾರೆ. ವಿಶ್ರಾಂತಿ ಪಡೆಯುತ್ತಿದ್ದಾರೆ. ರಾತ್ರಿ ನೀವು ಅವರನ್ನು ಕಾಣಲು ತಿಳಿಸಿದ್ದಾರೆ.

ನನಗೂ ಸರಿಯನಿಸಿತು. ಹೇಗೂ ಎರಡು ರಾತ್ರಿ ಕಳೆಯಿತು. ಇನ್ನೊಂದು ರಾತ್ರಿ ಕಳೆಯುವ. ಅಲ್ಲದೆ ಇಂತಹ ಸಂಸ್ಥೆಯನ್ನು ಹುಟ್ಟು, ಹಾಕಿದ ಆ ಮಹಾನುಭಾವರನ್ನು ಕಂಡು ಇನ್ನಷ್ಟು ಮಾಹಿತಿ ಪಡೆದು ಹೋಗುವ ಎಂದು ನಿರ್ಣಯಿಸಿದೆ. ರಾತ್ರಿ ಅನಾಥ ಮಕ್ಕಳೊಂದಿಗೆ ಊಟ ಮುಗಿಸಿದ ಮೇಲೆ ತಂಞಳ್‌ರವರಿಂದ ಬುಲಾವ್ ಬಂತು. ನಾನು ಅವರ ವಿಶ್ರಾಂತಿ ಗೃಹದತ್ತ ನಡೆದೆ.

ಅದೊಂದು ಬಹಳ ಅಚ್ಚುಕಟ್ಟಾಗಿ ನಿರ್ಮಿಸಿದ ವಸತಿಗೃಹ. ಪ್ರತ್ಯೇಕ ಕಂಪೌಂಡು. ನೆಲಕ್ಕೆಲ್ಲಾ ಲಾನ್ಸ್ ಶೃಂಗಾರ. ಸುತ್ತಲೂ ತರ ತರಹದ ಹೂ ಗಿಡಗಳು. ಕ್ರಾಟನ್‌ಗಳು. ಸಣ್ಣ ಮಟ್ಟಿನ ಬೃಂದಾವನ. ವಸತಿಗೃಹದ ಎದುರಿಗೆ ಕಾರು ಪಾರ್ಕು. ಒಂದು ದೊಡ್ಡ ವಿದೇಶಿ ಕಾರು. ಆ ವಸತಿಗೃಹದ ಶೋಭೆಯನ್ನು ಇಮ್ಮಡಿಗೊಳಿಸುತ್ತಿತ್ತು. ವರಾಂಡಕ್ಕೆ ಕಾಲಿಡುತ್ತಿದ್ದಂತೆ. ತಂಪಗಿನ ಮಾರ್ಬಲ್ ಶಿಲೆಗಳು ಕಾಲಿಗೆ ಕಚಗುಳಿ ಇಟ್ಟವು. ತಂಞಳ್ ಕುಳಿತ ರೂಮು ಪ್ರವೇಶಿಸುತ್ತಿದ್ದಂತೆ ವಿದೇಶಿ ಸೆಂಟಿನೊಂದಿಗೆ ಎ. ಸಿ. ಗಾಳಿ ಮೈಯನ್ನು ಮೆತ್ತಿಕೊಂಡವು. ‘ಸಲಾಂ’ ಹೇಳಿ-ತಂಞಳ್ ಎದುರು ಕುಳಿತ. ಒಂದು ರೀತಿಯ ಮುಜುಗರವಾದರೂ, ಮುಖದಲ್ಲಿ ಅದನ್ನು ವ್ಯಕ್ತಪಡಿಸಲಿಲ್ಲ. ತಂಞಳ್ ನಕ್ಕರು. ಅವರ ನೀಳ ಬಿಳಿದಾಡಿ, ಅರಬಿಗಳು ಹಾಕುವ ಉದ್ದನೆಯ ಬಿಳಿ ಕುರ್ತಾ, ತಲೆಯಲ್ಲಿ ಬಿಳಿ ಮುಂಡಾಸು, ಅದರ ಮೇಲೆ ಕೆಂಪು ಚುಕ್ಕೆಗಳ ಒಂದು ತೆಳ್ಳಗಿನ ಶಾಲು. ಹೆಗಲಿನ ಮೇಲೆ ಇಳಿಬಿಟ್ಟ ಇನ್ನೊಂದು ಹಚ್ಚ ಹಸಿರು ಶಾಲು. ಅಜಾನುಬಾಹು! ಸುಮಾರು ನನ್ನದೇ ಪ್ರಾಯ! ಅವರೇ ಮಾತಿಗಾರಂಭಿಸಿದರು.

‘ನಿಮ್ಮ ಬಗ್ಗೆ ಎಲ್ಲಾ ತಿಳಿದುಕೊಂಡಿದ್ದೇನೆ. ೪೦ ವರ್ಷ ಸರಕಾರಿ ಸೇವೆ ಮಾಡಿದ ನಿಮಗೆ ಈ ಕೆಲಸ ಕಷ್ಟವಾಗಲಿಕ್ಕಿಲ್ಲ,” ನಮಗೆ ಎಲ್ಲಕ್ಕಿಂತ ಮುಖ್ಯವಾಗಿ ನಂಬಿಗಸ್ಥರು ಬೇಕು. ಇಲ್ಲಿಯ ಯಾವುದೇ ವ್ಯವಹಾರಗಳು ಹೊರಗೆ ತಿಳಿಯತಕ್ಕದ್ದಲ್ಲ. ಕೆಲಸದ ಬಗ್ಗೆ ನಮ್ಮ ಗುಮಾಸ್ತ ನಿಮಗೆ ತಿಳಿಸಿರಬಹುದು.

‘ಹೌದು’, ನಾನು ತಲೆ ಅಲ್ಲಾಡಿಸಿದೆ.

‘ಅಂದ ಹಾಗೇ ನಿಮ್ಮ ಹುಟ್ಟೂರು ಯಾವುದು?’ ಮೊದಲು ಕೇಳಬೇಕಾಗಿದ್ದ ಪ್ರಶ್ನೆಯನ್ನು ಅವರು ಕೊನೆಗೆ ಕೇಳಿದರು.

ನಾನು ನನ್ನ ಊರಿನ ಹೆಸರು ಹೇಳಿದ. ತಂಞಳ್ ಒಮ್ಮೆ ಅವಕ್ಕಾಗಿ, ನನ್ನನ್ನು ಒಮ್ಮೆ ಸೂಕ್ಷ್ಮವಾಗಿ ನೋಡಿದರು. ಅವರ ಮುಖದಲ್ಲಿ ಒಂದು ನಗು ಚಿಮ್ಮಿತು.

‘ನೀನು ಸಲೀಂ ಅಲ್ವಾ?’ ಕಾಕನ ಮಗ ಅಲ್ವಾ, ನಾನು ಅಬ್ಬು. ಅ ಅಬ್ಬು ನಿನ್ನ ಮದರಸದ ದೋಸ್ತಿ. ಖತೀಬರ ಮಗ ಆಬ್ಬು! ಅಬ್ಬು ತಂಞಳ್! ಕುಳಿತಲ್ಲಿಂದ ನನ್ನ ಬಳಿ ಬಂದರು. ನನಗೂ ಪರಿಚಯವಾಯಿತು. ನಾನು ಎದ್ದು ನಿಂತೆ. ಅಬ್ಬು ನನ್ನನ್ನು ಬಲವಾಗಿ ಆಲಂಗಿಸಿಕೊಂಡ. ಅವನ ಸಂತೋಷಕ್ಕೆ ಪಾರವೇ ಇಲ್ಲ. ಅಲ್ಲಿ ನಿಂತವರ ಹತ್ತಿರ ಎರಡು ಕೋಲ್ಡ್‌ಗೆ ಆರ್ಡರ್ ಮಾಡಿಸಿದ. ನಂತರ ನನ್ನ ಕೈ ಹಿಡಿದು ಅವನ ಹತ್ತಿರ ಕೂರಿಸಿದ. ನನಗೆ ಆಶ್ಚರ್ಯ. ಅಬ್ಬು ಹೇಗೆ ಬದಲಾಗಿದ್ದಾನೆ… ನಾನು ಕೇಳಿದೆ.

‘ಅಬ್ಬು… ಏನಿದು ಮಾರಾಯ? ಹೇಗೆ ಬದಲಾದಿ ನೀನು? ಹೇಗೆ ಇದೆಲ್ಲಾ ಸಾಧ್ಯವಾಯಿತು?’

ಅಬ್ಬು ಒಂದೊಂದೇ ಕತೆ ಬಿಚ್ಚಿದ.

ಕೇರಳದ ಅರಬಿಕ್ ಕಾಲೇಜಿನಲ್ಲಿ ಮೌಲವಿಯಾದದ್ದು ತದನಂತರ ಯಾವುದೋ ಮಸೀದಿಯ ಖತೀಬನಾದದ್ದು ನಂತರ ಗಲ್ಫ್‌ನ ಅರಬಿಯೊಬ್ಬರ ಪರಿಚಯವಾದದ್ದು, ಯತೀಂಖಾನ ನಿರ್ಮಿಸಿದ್ದು, ಸಹಾಯಧನಕ್ಕಾಗಿ ಗಲ್ಫ್ ರಾಷ್ಟ್ರ ಸುತ್ತಿದ್ದು ಇತ್ಯಾದಿ… ಇತ್ಯಾದಿ….

ಸುಮಾರು ರಾತ್ರಿಯವರೆಗೂ ನಾವು ಮಾತಾಡುತ್ತಿದ್ದೆವು ಅಬ್ಬು ಅವನ ರೂಮಿನಲ್ಲೆ ಅವನ ಬೆಡ್ನಲ್ಲೇ ಒಟ್ಟಿಗೆ ಮಲಗಲು ಹೇಳಿದ. ಅವನ ಕತೆ ಕೇಳಿ ನಾನು ದಂಗಾದೆ. ಕೊನೆಗೆ ಅಬ್ಬು ಅಂದ. “ಸಲೀಲ, ನೀನು ಇಲ್ಲಿ ಸಂಬಳಕ್ಕೆ ನಿಲ್ಲಬೇಡ. ನನ್ನ ಪಾರ್ಟ್ನರ್ ಆಗು. ಲಾಭ ನಷ್ಟ ಸರಿಸಮಾನವಾಗಿ ಹಂಚೋಣ. ಇಲ್ಲಿಯ ಸಂಪೂರ್ಣ ಮೇಲ್ವಿಚಾರಣೆ ನೀನು ನೋಡಿಕೋ. ನಾನು ಗಲ್ಫ್ ದೇಶದಿಂದ ದೇಣಿಗೆ ತಂದು ಸುರಿಯುತ್ತೇನೆ. ೬೦-೪೦ ರೇಶಿಯೋ. ನಿನಗೆ ಈಗಾಗಲೇ ನಮ್ಮ ಗುಮಾಸ್ತ ಎಲ್ಲಾ ವಿಷಯ ತಿಳಿಸಿರಬಹುದು. ನೀನು ಬಂದದ್ದು ನನಗೆ ರೆಕ್ಕೆ ಬಂದ ಹಾಗಾಗಿದೆ. ಒಬ್ಬ ನಂಬಿಗಸ್ಥ ಸಿಕ್ಕಿದ. ಕೆಲವೇ ವರ್ಷದಲ್ಲಿ ನಿನಗೆ ಎ. ಸಿ. ಬಂಗ್ಲೆ ಕಟ್ಟಬಹುದು. ತಿಂಗಳಿಗೊಮ್ಮ ಗಲ್ಫ್ ಪ್ರಯಾಣ ಮಾಡಬಹುದು’ ಅಬ್ಬು ಹೇಳುತ್ತಾ ಇದ್ದ. ನಾನು ತಲೆ ಅಲ್ಲಾಡಿಸುತ್ತಾ ಇದ್ದೆ.

‘ನೀನು ಏನೂ ಉತ್ತರಿಸಲ್ಲ ಸಲೀಲ’ ಅಬ್ಬು ನನ್ನ ಮುಖ ನೋಡಿದ.

‘ಸ್ವಲ್ಪ ಸಮಯ ಕೊಡು. ಅಲೋಚಿಸಿ ಬೆಳಗ್ಗೆ ಹೇಳುತ್ತೇನೆ ಎಂದೆ. ಅಬ್ಬು ಸಂತೋಷದಿಂದ ನನ್ನ ಅಪ್ಪಿಕೊಂಡು ಮಲಗಿದ. ನನಗೆ ಮಾತ್ರ ಸುಮಾರು ರಾತ್ರಿವರೆಗೆ ನಿದ್ರೆ ಬರಲಿಲ್ಲ.

ಬೆಳಗ್ಗಿನ ಜಾವ. ಕಣ್ಣುಗಳು ಸುಸ್ತಾಗಿ ನಿದ್ರೆಗೆ ಜಾರಿದುವು. ಎಚ್ಚರವಾದಾಗ ಅಬ್ಬು ಇರಲಿಲ್ಲ. ಬಹುಶಃ ಸ್ನಾನಕ್ಕೆ ಹೋಗಿರಬೇಕು. ಬಾಗಿಲು ತೆರೆದು ಹೊರೆಗೆ ಬಂದೆ. ಹೊರಗೆ ವರಾಂಡದಲ್ಲಿ ತುಂಬಾ ಜನರು ಜಮಾಯಿಸಿದ್ದರು. ಹೆಂಗಸರು, ಮುದುಕರು, ಮಕ್ಕಳು, ರೋಗಿಗಳು. ಬೆಳಗ್ಗಿನ ಬಾಂಗ್‌ಗೆ ಮೊದಲು ಇಷ್ಟು, ಜನ ಹಳ್ಳಿಯವರು ಯಾಕೆ ಜಮಾಯಿಸಿದರು ಎಂದು ನನಗೆ ಆಶ್ಚರ್ಯವಾಗಿ ವಿಚಾರಿಸಿದೆ. ಉತ್ತರ ಕೇಳಿ ನನಗೆ ದಿಗಿಲಾಯಿತು.

‘ತಂಞಳ್ ತಿಂಗಳಿಗೊಮ್ಮೆ ಸಿಗುವುದಿಲ್ಲ. ಅವರು ಬಂದ ಸುದ್ದಿ ಕೇಳಿ ಜನರು ಹಳ್ಳಿಯಿಂದ ಮೈಲು ಗಟ್ಟಲೆ ನಡೆದು ಬಂದಿದ್ದಾರೆ. ತಂಞಳ್‌ರವರು ಮಂತ್ರಿಸಿದ ನೀರು, ನೂಲು, ತಾಯಿತ ಕೊಂಡು ಹೋಗಲು. ಅವರ ಕೈ ಗುಣ ತುಂಬಾ ಒಳ್ಳೆಯದು. ಎಂತಹ ರೋಗವೂ ಗುಣವಾಗುತ್ತದೆ’.

ನಾನು ರೂಮಿನೊಳಗೆ ಬಂದೆ. ಅಬ್ಬು ಇನ್ನೂ ಸ್ನಾನ ಮಾಡಿ ಬಂದಿಲ್ಲ. ಅಲ್ಲಿಯೇ ಇದ್ದ ಬಿಳಿ ಹಾಳೆ ತೆಗೆದು ಬರೆದೆ. ‘ಕ್ಪಮಿಸು ಅಬ್ಬು, ಅನಾಥ ಮಕ್ಕಳ ಹಣತಿಂದು ನನ್ನ ಮಕ್ಕಳು ಅನಾಥರಾಗುವುದನ್ನು ನಾನು ಇಷ್ಟ ಪಡುವುದಿಲ್ಲ’. ಕಾಗದದ ಮೇಲೆ ಹಿಂದೆ ಅಬ್ಬು ಕೊಟ್ಟ ಬೆಳ್ಳಿ ಉಂಗುರವನ್ನು ಇಟ್ಟು ಮನೆಯ ಕಡೆ ಹಿಂತಿರುಗಿದೆ.

ಬೆಳಿಗ್ಗೆ ನಮಾಜಿಗೆ ಯತೀಂಖಾನದ ಬಳಿ ಮಕ್ಕಳು ಸಾಲಾಗಿ ನಡೆದು ಹೋಗುತ್ತಿದ್ದರು. ಕೊನೆಯದಾಗಿ ಮಕ್ಕಳನ್ನು ನೋಡುತ್ತಾ ಬಂದೆ. ಆ ಚಂದದ ಹುಡುಗ ನನ್ನ ನೋಡಿ ಕೈ ಬೀಸಿದ. ಭಾರವಾದ ಹೃದಯದಿಂದ ನಾನೂ ಕೈ ಬೀಸಿದೆ ಅಸಹಾಯಕನಾಗಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕನ್ನಡ ರಕ್ಷಿಸ ಬನ್ನಿರೋ
Next post ಆ ಕಾಲ ಅಳಿದಿಹುದು

ಸಣ್ಣ ಕತೆ

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…