ನೀವೊಂದು ಪುಸ್ತಕದಂಗಡಿ ನಡೆಸುತ್ತಿದ್ದೀರಿ ಎಂದಿಟ್ಟುಕೊಳ್ಳೋಣ. ಅಲ್ಲಿ ಅಟ್ಟಳಿಕೆಗಳಲ್ಲಿ ಪುಸ್ತಕಗಳನ್ನು ಕ್ರಮಪ್ರಕಾರವಾಗಿ ಜೋಡಿಸಿಟ್ಟಿದ್ದೀರಿ-ಕತೆ, ಕಾದಂಬರಿ, ಕಾವ್ಯ, ವಿಮರ್ಶೆ, ಸಮಾಜ ವಿಜ್ಞಾನ ಇತ್ಯಾದಿಯಾಗಿ, ಒಂದೊಂದು ವಿಭಾಗದಲ್ಲೂ ಅಕ್ಷರಾನುಕ್ರಮಣಿಕೆಗೆ ಸರಿಯಾಗಿ. ಇದರಿಂದ ಗಿರಾಕಿಗಳು ಬಂದು ಯಾವ ಯಾವ ಪುಸ್ತಕಗಳಿವೆ ಎಂದು ನೋಡಿ ತಾವೇ ಪುಸ್ತಕಗಳನ್ನು ಹೊರತೆಗೆದು ಕಾಗದ ತಿರುವಿ ಹಾಕಿ, ತಾವು ಕೊಂಡಕೊಳ್ಳಬೇಕೇ ಬೇಡವೇ ಎಂದು ಸುಲಭವಾಗಿ ನಿರ್ಧರಿಸಲು ಸಹಾಯವಾಗುತ್ತದೆ. ನೀವು ಬಯಸುವುದೂ ಇದನ್ನೇ. ಆದರೆ ಇಲ್ಲಿಗೆ ಆಗಾಗ್ಗೆ ಬರುವವರಲ್ಲಿ ಕೆಲವು ಮಂದಿ ಕೇವಲ ಪುಸ್ತಕ ತಿರುವಿ ಹಾಕುವುದರಲ್ಲೇ ತೃಪ್ತರು. ಅವರು ಪುಸ್ತಕ ಖರೀದಿಸುವುದಿಲ್ಲ. ಚಿಕ್ಕ ಪುಸ್ತಕವಾಗಿದ್ದರೆ ಕೆಲವರು ನಿಮ್ಮ ಅಂಗಡಿಯಲ್ಲೇ ಅದನ್ನು ಓದಿಮುಗಿಸಿ ತೆರಳಲೂಬಹುದು. ಆಗ ನಿಮಗೆ ಏನೆನಿಸುತ್ತದೆ? ಇದೇನು ಇವರು ಬಿಟ್ಟಿಯಾಗಿ ಓದಿ ಹೊರಟು ಹೋಗುತ್ತಾರೆ, ಇದೇನು ಪುಸ್ತಕದಂಗಡಿಯೋ, ಸಾರ್ವಜನಿಕ ಗ್ರಂಥಾಲಯವೋ ಎಂದು ಸಿಟ್ಟು ಬರಬಹುದು. ಇದನ್ನು ನೀವು ವಿವಿಧ ರೀತಿಯಲ್ಲಿ ತೋರಿಸಲೂಬಹುದು. ಈ ವ್ಯಕ್ತಿಗಳ ಕಡೆ ಬಂದು, ‘ನಿಮಗೆ ಯಾವ ಪುಸ್ತಕ ಬೇಕು?’ ಎಂದು ಸ್ವಲ್ಪ ಅಸಮಾಧಾನದಿಂದಲೇ ಕೇಳಬಹುದು. ’ಸ್ವಾಮಿ, ನೀವು ಆಗಿನಿಂದಲೂ ಪುಸ್ತಕ ಓದುತ್ತ ಇದ್ದೀರಿ. ಇಲ್ಲಿ ಇರುವ ಪುಸ್ತಕಗಳು ವಿಕ್ರಯಕ್ಕೇ ಹೊರತು, ಇಲ್ಲಿ ಓದುವುದಕ್ಕಲ್ಲ. ಕೊಂಡುಕೊಂಡ ಮೇಲೆ ದಯವಿಟ್ಟು ಧಾರಾಳವಾಗಿ ಓದಿ. ನೀವು ಕೊಂಡು ಓದುವುದಕ್ಕೆಂದೇ ಅಂಗಡಿ ಇರುವುದು, ಎಂದು ಮುಂತಾಗಿ ಹೇಳುತ್ತೀರಿ. ಅವರು ಎದ್ದು ಸ್ಥಳ ಖಾಲಿ ಮಾಡುತ್ತಾರೆ. ಬಹುಶಃ ಮುಂದೆಂದೂ ನಿಮ್ಮ ಅಂಗಡಿ ಕಡೆ ಬರುವುದೇ ಇಲ್ಲ. ಯಾಕೆಂದರೆ ನೀವು ಸತ್ಯವನ್ನೇ ಹೇಳಿದರೂ, ಅವರು ಅದನ್ನು ಅವಮಾನಕರವಾಗಿ ತೆಗೆದುಕೊಳ್ಳುತ್ತಾರೆ.
ಇದಕ್ಕೆ ಬದಲಾಗಿ, ಜನ ಬಂದು ಓದಿ, ಪುಸ್ತಕ ಕೊಳ್ಳದೆ ಹೋದರೂ ನೀವೇನೂ ಅನ್ನುವುದಿಲ್ಲ ಎಂದಿಟ್ಟುಕೊಳ್ಳೋಣ. ನಿಜಕ್ಕೂ ನಿಮ್ಮ ಅಂಗಡಿಯ ಈ ಗುಣ ಖ್ಯಾತವಾಗುತ್ತದೆ. ಹೆಚ್ಚೆಚ್ಚು ಜನ ಬರುತ್ತಾರೆ. ಓದುತ್ತಾರೆ. ಆಗಲೂ ನೀವು ಗದರಿಸದೆ, ಅಸಮಾಧಾನಗೊಳ್ಳದೆ ಇರುತ್ತೀರಿ. ಈ ಎರಡು ಧೋರಣೆಗಳಲ್ಲಿ ಯಾವುದು ನಿಮಗೆ ಹೆಚ್ಚು ಅನುಕೂಲಕರವೆಂದು ನಿಮ್ಮ ಯೋಚನೆ? ಖಂಡಿತವಾಗಿ ಎರಡನೆಯದೇ. ಯಾಕೆಂದರೆ, ಈ ಎರಡನೆಯದರಲ್ಲಿ ನೀವು ನಷ್ಟ ಹೊಂದುವುದು ಯಾವುದೂ ಇಲ್ಲ. ಆದರೆ ಮೊದಲನೆಯ ಧೋರಣೆಯಿಂದ ಖಂಡಿತವಾಗಿ ನಷ್ಪಹೊಂದುತ್ತೀರಿ. ಮಾತ್ರವೇ ಅಲ್ಲ, ಓದುವ ಆಸಕ್ತಿಯಿರುವಾತನೇ ಮುಂದೆಂದಾದರೂ ಕೊಂಡುಕೊಳ್ಳುತ್ತಾನೆ ಕೂಡಾ. ನಿಜ, ಜನ ನಿಮ್ಮ ಅಂಗಡಿಯನ್ನು ಗ್ರಂಥಾಲಯದಂತೆ ದುರುಪಯೋಗ ಪಡಿಸುತ್ತಿರಬಹುದು. ಆದರೂ ಅವರಿಗೆ ಗೊತ್ತಿದೆ ನೀವು ಮಾರಲೆಂದೇ ಪುಸ್ತಕಗಳನ್ನು ಅಲ್ಲಿ ಇಟ್ಟರುವುದು ಎನ್ನುವುದು. ಯಾವ ಯಾವ ಕಾರಣಕ್ಕೋ ಅವರಿಗೆ ಕೊಳ್ಳುವುದಕ್ಕೆ ಆಗುವುದಿಲ್ಲ. ಬಹುಶಃ ಪುಸ್ತಕದ ಬೆಲೆ ಹೆಚ್ಚಾಯಿತೆಂದು ಅವರು ತಿಳಿದುಕೊಂಡಿರಬಹುದು. ತತ್ಕಾಲಕ್ಕೆ ಅವರಲ್ಲಿ ಹಣ ಇಲ್ಲದೆ ಇರಬಹುದು. ಅಥವಾ ನೋಡೋಣ ಸ್ವಲ್ಪ ಓದಿ, ಎಂದು ಓದುತ್ತ ಇರಬಹುದು. ಕೆಲವರು ನಿಮ್ಮ ಉದಾರತೆಯ ಲಾಭ ಪಡೆದುಕೊಳ್ಳುತ್ತಲೂ ಇದ್ದಾರು. ಅದೇನೇ ಇದ್ದರೂ, ಇದರಿಂದಾಗಿ ನಿಮ್ಮ ಅಂಗಡಿಗೆ ಬರುವ ಜನ ಹೆಚ್ಚಾಗುತ್ತಾರೆ, ಕ್ರಮೇಣ ನೀವು ಹೆಚ್ಚೆಚ್ಚು ಪುಸ್ತಕಾಸಕ್ತರನ್ನು ಹುಟ್ಟುಹಾಕುತ್ತೀರಿ, ನಿಮಗೆ ವ್ಯಾಪಾರವೂ ವರ್ಧಿಸುತ್ತದೆ ಎನ್ನುವುದೇ ಹೆಚ್ಚು ಸಂಭವನೀಯ. ಬದಲಿಗೆ ನೀವು ಕೊಳ್ಳದೆ ಓದುವುದರಿಂದ ಜನರನ್ನು ನಿರುತ್ಸಾಹಗೊಳಿಸಿದರೆ ಓದುಗರ ಸಂಖ್ಯೆ ಕಡಿಮೆಯಾಗುತ್ತದೆ. ಇದರಿಂದ ನಿಮಗೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಪುಸ್ತಕದಂಗಡಿ ಇಟ್ಟಿರುವ ನಿಮ್ಮ ಜವಾಬ್ದಾರಿ ಕಾಲ ಕಾಲಕ್ಕೆ ಪುಸ್ತಕಗಳನ್ನು ತರಿಸಿ ವಿಕ್ರಯ ಮಾಡುವುದರಲ್ಲಿ ಮುಗಿಯುವುದಿಲ್ಲ. ಒಬ್ಬ ಓದಿನ ಪ್ರೋತ್ಸಾಹಕನ ಕೆಲಸವನ್ನೂ ನೀವು ಮಾಡಬೇಕಾಗುತ್ತದೆ.
ಗಿರಾಕಿಗಳು ಇಷ್ಟಪಡದ ಇನ್ನೊಂದು ಬಗೆಯ ವ್ಯಾಪಾರಿಗಳಿದ್ದಾರೆ: ಅವರೆಂದರೆ ಗಿರಾಕಿಗಳ ಹಿಂದೆ ಬಿದ್ದು, ಪುಸ್ತಕ ಕೊಳ್ಳಲು ಓತ್ತಾಯಿಸುವವರು! ಗಿರಾಕಿಗಳಿಗೆ ಮಾಹಿತಿ ಒದಗಿಸಬಹುದು. ಸಹಾಯ ಬೇಕೇ ಎಂದು ವಿಚಾರಿಸಬಹುದು, ಆದರೆ ಮುಖ್ಯವೆಂದರೆ ಅಂಗಡಿಗಳಲ್ಲಿ ಗಿರಾಕಿಗಳನ್ನು ಮುಕ್ತವಾಗಿ ಬಿಡಬೇಕು. ಕೊಳ್ಳುವುದು, ಕೊಳ್ಳದಿರುವುದು ಅವರ ಆಯ್ಕೆಯಾಗಿರಬೇಕು. ತನ್ನ ಮೇಲೆ ಕೊಳ್ಳುವ ಒತ್ತಾಯವಿದೆಯೆಂಬ ಸಂದೇಹ ಗಿರಾಕಿಗೆ ಬಂದರೆ ಆತ ಮತ್ತೆ ಆ ಅಂಗಡಿಗೆ ಬರುವುದಿಲ್ಲ.
ಓದುವ ಗಿರಾಕಿಗಳಿಗೆ ಅನುಕೂಲವಾಗಲೆಂದೇ ಕೆಲವು ಪುಸ್ತಕದಂಗಡಿಗಳಲ್ಲಿ ಅಲ್ಲಲ್ಲಿ ಕುರ್ಚಿಗಳನ್ನು ಇಟ್ಟಿರುತ್ತಾರೆ. ಒಂದು ಬದಿಗೆ ಕಾಫಿ, ಚಾ ಕುಡಿಯುತ್ತ ಕೂಡುವ ವ್ಯವಸ್ಥೆಯೂ ಇರುತ್ತದೆ. ಇಲ್ಲಿಗೂ ಓದುಗ-ಗಿರಾಕಿಗಳು ಪುಸ್ತಕಗಳನ್ನು ಅಟ್ಟಳಿಕೆಯಿಂದ ತೆಗೆದು ಕೊಂಡೊಯ್ದು ಕುಳಿತು ಓದಬಹುದು. ಅಮೇರಿಕದ ಪುಸ್ತಕದಂಗಡಿಗಳು ಹೀಗೆಯೇ ಇರುವುದು. ಅಲ್ಲಿಯ ಮಾರಾಟ ವ್ಯವಸ್ಥೆಯಲ್ಲಿ ಗಿರಾಕಿಗಳಿಗೆ ಇನ್ನೊಂದು ಅನನುಕೂಲತೆಯೂ ಇದೆ. ಗಿರಾಕಿಗಳು -ಕೆಡುವ ಕೆಲವೊಂದು ವಸ್ತುಗಳನ್ನು ಬಿಟ್ಟು-ತಾವು ಕೊಂಡ ಯಾವುದೇ ಸಾಮಾನನ್ನೂ ಒಂದು ನಿರ್ದಿಷ್ಟ ಗಡುವಿನೊಳಗೆ ಬಿಲ್ಲು ಸಮೇತ ಯಾವ ವಿವರಣೆಯೂ ಇಲ್ಲದೆ ವಾಪಸು ಮಾಡಿ ತೆತ್ತ ಹಣವನ್ನು ಹಿಂದಕ್ಕೆ ಪಡೆದುಕೊಳ್ಳಬಹುದು. ಈ ಮಾತು ಪುಸ್ತಕದಂಗಡಿಗಳಿಗೂ ಸಲ್ಲುತ್ತದೆ. ಪುಸ್ತಕ ಕೊಂಡು ಈ ರೀತಿ ವಾಪಸು ಮಾಡುವವರೂ ಇಲ್ಲದಿಲ್ಲ. ಪುಸ್ತಕದಂಗಡಿಯ ಮಾಲಿಕರು ಇದಕ್ಕೆಲ್ಲ ಯಾವ ರಗಳೆಯನ್ನೂ ಮಾಡುವುದಿಲ್ಲ. ಇದೆಲ್ಲ ಅಮೇರಿಕದಲ್ಲಿ ನಡೆಯುತ್ತದೆ, ಇಂಡಿಯಾದಲ್ಲಿ ಕಷ್ಟ ಎಂದು ಈ ವಿಷಯವನ್ನು ತಳ್ಳಿಹಾಕಬಹುದು. ಆದರೂ ಪುರೋಗಾಮಿ ಮನೋಭಾವದರು ಇದನ್ನು ಅಳವಡಿಸಿಕೊಳ್ಳಲು ಯತ್ನಿಸುತ್ತಿದ್ದಾರೆ.
ಪುಸ್ತಕದಂಗಡಿಯೆಂದರೆ ಅದೊಂದು ವ್ಯಾಪಾರದ ಸ್ಥಳ, ಗಂಥಾಲಯವಲ್ಲ ಎನ್ನುವುದೇನೋ ಸರಿ. ಆದರೂ ಈ ಭಿನ್ನತೆಯನ್ನು ಕಡಿಮೆ ಮಾಡುವುದು ಸಾಧ್ಯ. ಪುಸ್ತಕದಂಗಡಿಯಲ್ಲಿ ಲೇಖಕರಿಂದ ಓದಿಸುವ ಕಾರ್ಯಕ್ರಮ ಇರಿಸಬಹುದು. ಇದಕ್ಕೆ ಮೊದಲೇ ಸಾಕಷ್ಟು ಪ್ರಚಾರ ನೀಡಿದರೆ ಜನ ಬಂದು ಕೇಳಿ ಹೋಗುತ್ತಾರೆ. ನಿಜ, ಅಮೇರಿಕದಂಥ ಕಡೆ ಇದಕ್ಕೆ ಟೀಕೇಟು ಇಟ್ಟು ಮಾಡುವುದೂ ಇದೆ. ಭಾರತದಲ್ಲಿ ಈ ರೀತಿ ಟಿಕೇಟಿಟ್ಟರೆ ಜನ ಬರುತ್ತಾರೋ ಇಲ್ಲವೋ ತಿಳಿಯದು. ಬಹುಶಃ ಬರಲಾರದು. ನಾವು ಯಾರನ್ನೂ ಒತ್ತಾಯಿಸುವಂತೆಯೂ ಇಲ್ಲ. ಆದ್ದರಿಂದ ಇಂಥ ಕಾರ್ಯಕಮಗಳು ಜನಪ್ರಿಯವಾಗುವತನಕವಾದರೂ ಇವನ್ನು ಟಿಕೇಟಿಲ್ಲದ್ದೆ ನಡೆಸುವುದೇ ಒಳ್ಳೆಯದು. ವೈಯಕ್ತಿಕವಾಗಿ ನಾನು ಇಂಥ ಕಾರ್ಯಕ್ರಮಗಳಿಗೆ ಟಿಕೇಟಿರಿಸುವುದನ್ನು ಇಷ್ಪಡುವುದಿಲ್ಲವಾದರೂ, ಇದರ ಕೆಲವೊಂದು ವಾಸ್ತವತೆಗಳ ಅರಿವಿರುವುದು ಒಳ್ಳೆಯದು. ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಲೇಖಕರು ಬರೇ ಬರವಣಿಗೆಯಿಂದ ಬದುಕುವವರಾಗಿರಬಹುದು. ಅಥವಾ ಇವರನ್ನು ಕರೆಸುವುದಕ್ಕೆ ಅಂಗಡಿಯವರು ಹಣ ಖರ್ಚು ಮಾಡಿರಬಹುದು. ಇದೆಲ್ಲ ಏನೇ ಇದ್ದರೂ ಇಂಥ ಕಾರ್ಯಕ್ರಮಗಳನ್ನು ಗ್ರಂಥಾಲಯಗಳಂತೆ ಪುಸ್ತಕದಂಗಡಿಗಳೂ ಆಗಾಗ ಹಾಕಿಕೊಂಡರೆ ಚೆನ್ನಾಗಿರುತ್ತದೆ. ಇದರಿಂದ ಜನರಿಗೆ ಪುಸ್ತಕದಂಗಡಿಗಳ ಕುರಿತಾಗಿ ಇರುವ ಕೇವಲ ಲಾಭ ನಷ್ಟಗಳ ವ್ಯಾಪಾರೀ ಮನೋಭಾವ ಕಡಿಮೆಯಾಗಿ ಸಮಾನ ಆಸಕ್ತಿಯ ಸಂಬಂಧ ಉಂಟಾಗುವುದು ಸಾಧ್ಯ. ಒಬ್ಬ ಪುಸ್ತಕದಂಗಡಿಯಾತ ಗ್ರಂಥಪಾಲಕರಂತೆಯೇ ಓದುಗಮಿತ್ರನೂ ಆಗಿ ಕಂಡರೆ ಅದು ಚೆನ್ನಾಗಿರುತ್ತದೆ. ಅಯೋವಾದಲ್ಲಿ ನಾನು ಹೆಚ್ಚಾಗಿ ಹೋಗುತ್ತಿದ್ದ ಪುಸ್ತಕದಂಗಡಿಗಳು ಕೆಲವಿದ್ದುವು. ಕೆಲವು ಸಲ ನಾನು ಪುಸ್ತಕಗಳನ್ನು ತಿರುವಿ ಹಾಕಿ ಕೊಂಡುಕೊಳ್ಳದೆ ಬರುತ್ತಿದ್ದೆ. ಕೆಲವು ಸಲ ಕೊಂಡುಕೊಳ್ಳುತ್ತಿದ್ದೆ. ಒಂದೆರಡು ಪುಸ್ತಕಗಳನ್ನು ಮೊದಲೇ ಹೇಳಿ ತರಿಸಿಕೊಂಡದ್ದೂ ಇದೆ. ನನ್ನ ಟೆಲಿಫೋನ್ ನಂಬರು, ಈ-ಮೇಲ್ ವಿಳಾಸಗಳನ್ನು ತೆಗೆದಿರಿಸಿಕೊಂಡು ಪುಸ್ತಕ ಬಂದಾಗ ಅವರು ನನಗೆ ತಿಳಿಸುತ್ತಿದ್ದರು. ಪ್ರೆಯರಿ ಲೈಟ್ಸ್ ಎಂಬ ಅಂಗಡಿಯಲ್ಲಿ ಪ್ರತಿ ಗುರುವಾರವೋ ಶನಿವಾರವೋ ಏನಾದರೊಂದು ಸಾಹಿತ್ಯಿಕ ಸಮಾರಂಭ ಇರುತ್ತಿತ್ತು. ಅದಕ್ಕೆ ಎಲ್ಲರಿಗೂ ಮುಕ್ತಪ್ರವೇಶವಿತ್ತು. ಕೂತುಕೊಳ್ಳಲು ಕುರ್ಚಿ ಸಿಗದಿದ್ದವರು ನಿಂತೋ ನೆಲದಲ್ಲಿ ಕುಳಿತೋ ಕಾರ್ಯಕ್ರಮ ವೀಕ್ಷಿಸುತ್ತಿದ್ದರು. ಇದೆಲ್ಲ ಪುಸ್ತಕದಂಗಡಿಯೊಳಗೇ ನಡೆದರೂ ಪುಸ್ತಕ ಕಳವಾದ ಪ್ರಸಂಗವಿಲ್ಲ. ಅಮೇರಿಕದಲ್ಲಿ ಪುಸ್ತಕದಂಗಡಿಗಳೆಂದರೆ ಸಾಂಸ್ಕೃತಿಕ ಕೇಂದ್ರಗಳೆಂದೇ ಲೆಕ್ಕ.
ಒಂದು ಸಮಾಜ ಓದುವ ಸಮಾಜವೋ ಅಲ್ಲವೋ ಎನ್ನುವುದಕ್ಕೆ ಅಲ್ಲಿನ ಗಂಥಾಲಯಗಳಂತೆಯೇ ಪುಸ್ತಕದಂಗಡಿಗಳ ಸಂಖ್ಯೆ ಸವಲತ್ತುಗಳೂ ತೋರುಬೆರಳು. ಪುಸ್ತಕ ಕೊಂಡು ಓದುವ ಕಡೆ ಹಳೆ (ಸೆಕೆಂಡ್ ಹ್ಯಾಂಡ್) ಪುಸ್ತಕಗಳ ಅಂಗಡಿಗಳೂ ಸಾಕಷ್ಟಿರುತ್ತವೆ. ಯಾಕೆಂದರೆ, ಕೊಂಡ ಎಲ್ಲ ಪುಸ್ತಕಗಳನ್ನೂ ಇರಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಆಗ ಅವನ್ನು ರದ್ದಿಗೆ ಹಾಕುವುದಕ್ಕೆ ಮನಸ್ಸಾಗುವುದಿಲ್ಲ. ಹಳೆ ಪುಸ್ತಕದಂಗಡಿಗಳಿಗೆ ಮಾರಾಟವಾಗುತ್ತವೆ. ಅದೇ ರೀತಿ ಕೆಲವು ಸಲ ಗ್ರಂಥಾಲಯಗಳು ತಮ್ಮಲ್ಲಿ ಜಾಗ ಸಾಕಾಗದಿರುವಾಗ ಬಹುಪ್ರತಿಯ ಗ್ರಂಥಗಳಲ್ಲಿ ಕೆಲವನ್ನು ಕಡಿಮೆ ಬೆಲೆಗೆ ಮಾರುವುದಿದೆ. ಇನ್ನು ಕೆಲವು ಸಲ ಹೊಸ ಪುಸ್ತಕಗಳಿಗೆ ಅಂಗಡಿಗಳು ದೊರಕದಿದ್ದಾಗ ಪ್ರಕಾಶಕರು ಹಳೆ ಪುಸ್ತಕದಂಗಡಿಗಳಿಗೆ ಕೊಟ್ಟುಬಿಡುತ್ತಾರೆ. ಇವೆಲ್ಲವೂ ಇಂಥ ಅಂಗಡಿಗಳಿಗೆ ಮೂಲಗಳು. ಇಲ್ಲಿ ಪುಸ್ತಕಗಳು ಕಡಿಮೆ ಬೆಲೆಗೆ ಸಿಗುವುದರಿಂದ ಗಿರಾಕಿಗಳು ಇಲ್ಲಿಗೂ ಬರುತ್ತಾರೆ. ಹೀಗೆ ನೋಡಿದರೆ ನಮ್ಮ ದೇಶದ ಜಿಲ್ಲಾ, ತಾಲೂಕ ಮಟ್ಟಗಳಲ್ಲಿ ಹಳೆಪುಸ್ತಕದಂಗಡಿಗಳು ಇಲ್ಲವೆಂದೇ ಹೇಳಬೇಕು. ಇದು ನಿಜಕ್ಕೂ ನಮ್ಮ ಪುಸ್ತಕಾಸಕ್ತಿ ಎಷ್ಟು ಕಮ್ಮಿ ಎಂಬುದನ್ನು ಸೂಚಿಸುತ್ತದೆ. ಪುನಃ ಅಯೋವಾದ ಉದಾಹರಣೆಯನ್ನು ಕೊಡುವುದಾದರೆ ಇಲ್ಲಿ ಹೊಸ ಪುಸ್ತಕದಂಗಡಿಗಳಿರುವಷ್ಟೇ ಪ್ರಮಾಣದಲ್ಲಿ ಹಳೆಪುಸ್ತಕದಂಗಡಿಗಳೂ ಇವೆ. ಕೆಲವು ದೊಡ್ಡವು, ಕೆಲವು ಸಣ್ಣವು. ಇಲ್ಲೂ ಪುಸ್ತಕಗಳನ್ನು ಒಪ್ಪ ಓರಣವಾಗಿ ಇರಿಸಿರುತ್ತಾರೆ. ಇಂಥ ಅಂಗಡಿಗಳಲ್ಲಿ ನೋಡಿಕೊಳ್ಳುವುದಕ್ಕೆ ಒಬ್ಬರೋ ಇಬ್ಬರೋ ಮಾತ್ರ ಇರುವುದು. ಇಲ್ಲೂ ಕೆಲವು ಸಲ ಲೇಖಕರಿಂದ ಕೃತಿಗಳನ್ನೋದಿಸುವಂಥ ಕಾರ್ಯಕ್ರಮಗಳು ನಡೆಯುವುದಿದೆ. ಸಿಗದ ಹಳೆಪುಸ್ತಕಗಳನ್ನು ತರಿಸಿಕೊಡುವ ವ್ಯವಸ್ಥೆಯಿದೆ. ಹೊಸ ಪುಸ್ತಕದಂಗಡಿ ಹಾಗೂ ಹಳೆಪುಸ್ತಕದಂಗಡಿ ಈ ಎರಡೂ ಕಡೆ ನನಗೆ ಕೆಲವೊಮ್ಮೆ ಉಡುಗೊರೆ ಚೀಟಿಗಳು ದೊರಕಿವೆ-ಅರ್ಥಾತ್ ಇಂತಿಷ್ಟು ರೊಕ್ಕದ ಪುಸ್ತಕಗಳನ್ನು ನಾನು ಮುಫತ್ತಾಗಿಯೋ ಅರ್ಧಬೆಲೆಗೋ ಅಲ್ಲಿಂದ ಒಯ್ಯಬಹುದೆಂಬ ಪುಸ್ತಕದಾನ!
ಈಗಂತೂ ಅಮೆಜಾನ್, ಈಬೇ ಮುಂತಾದ ಅಂತರ್‍ಜಾಲದ ಅಂಗಡಿಗಳು ಬಂದಿರುವುದರಿಂದ ಬೇಕಾದ ಹಳೆ/ಹೊಸ ಪುಸ್ತಕಗಳನ್ನು ತರಿಸಿಕೊಳ್ಳುವುದು ಸಾಧ್ಯ. ಭಾರತದಲ್ಲಿ ಈ ಆಕಾಶದಂಗಡಿಗಳು ಇನ್ನೂ ಆದಿಮ ಹಂತದಲ್ಲಿವೆಯಾದರೂ ಮುಂದೆ ಈ ಪದ್ಧತಿ ಪ್ರಚಾರಕ್ಕೆ ಬಂದೇ ಬರುತ್ತದೆ. ಇದರಲ್ಲಿ ಮಾತ್ರ, ರವಾನೆಯ ಖರ್ಚನ್ನು ಪುಸ್ತಕದ ಬೆಲೆಯ ಜತೆ ಸೇರಿಸಿ ಕೊಡಬೇಕಾಗುತ್ತದೆ. ಆದರೆ ಪುಸ್ತಕದಂಗಡಿಗಳಿಗೆ ಹೋಗಿ ಬರುವ ಖರ್ಚಿಲ್ಲ. ಇಂಥ ಸಂದರ್ಭದಲ್ಲಿ ಭವಿಷ್ಯದ ಪುಸ್ತಕದಂಗಡಿಗಳು ತಮ್ಮ ಭವಿಷ್ಯದ ಬಗ್ಗೆಯೂ ಯೋಚಿಸಬೇಕಾಗಿದೆ.
*****