ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ ನೋಡುತ್ತಿರುತ್ತೇನೆ. ನನ್ನ ಲಕ್ಷ್ಯ ಎಷ್ಟೋ ಸಲ ಆ ಕಡೆಗೇ ಇರುತ್ತದೆ. ಆದರೆ ಆ ಮನೆಯ ಬಾಗಿಲು ತೆರೆಯುವುದು ಬಹುಶಃ ನಾನು ಕಂಡಿಯೇ ಇಲ್ಲ!
ಅದು ಮನೆ! ಅಹುದು, ಮನೆಯೆಂದು ನಾವು ಕರೆಯಬೇಕು, ಅಷ್ಟೆ. ಮನೆಯ ಛಪ್ಪರ ಹಳೆಯ ತಗಡುಗಳದು! ಗೋಡೆ ತಟ್ಟಿಯದು! ಬಾಗಿಲು ಬೀಳಾದದ್ದು! ಹಿಂದಕ್ಕೆ ಇದೇ ಮನೆಯಲ್ಲಿ “ದನಗಳು” ಇರುತ್ತಿದ್ದವಂತೆ! ಈಗ “ಜನಗಳು” ಇವೆ! ಅಹುದು ಇರಲೇ ಬೇಕಲ್ಲ. ಮನೆಗಳು ಬಾಡಿಗೆಗೆ ಸಿಗದ ಕಾಲದಲ್ಲಿ, ಎಲ್ಲಿಯಾದರೂ ವಾಸವಾಗಿರಬೇಕಲ್ಲ!
ಇಂಥ ಮನೆಯಲ್ಲಿ ಯಾರು ವಾಸವಾಗಿರಲು ಬಂದಿರುವರೋ ನನಗೇನೂ ತಿಳಿಯದು. ಅವರು ಹೊರಗೆ ಬಂದುದನ್ನು ನೋಡಿಲ್ಲ. ಹೊರಗಿನ ಜನರ ಸಂಗಡ ಸವವಾಸ ಬೆಳೆಸಿದನ್ನು ಕಂಡಿಲ್ಲ. ಒಳಗೆ ಯಾರೂ ಇಲ್ಲದವರಂತೆ ಮನೆ ಇದೆ. ಆದರೂ ಯಾರೋ ಅಲ್ಲಿ ಇರುವರೆಂಬ ಸುದ್ದಿ ಮಾತ್ರ ನಿಜ.
ನಾನೇನೊ ಅಲ್ಲಿ ಘೋಷಾ ಸ್ತ್ರೀಯರು ಬಂದಿರಬಹುದೇನೋ ಎಂದು ಹಲವು ಸಲ ಯೋಚಿಸಿದೆ. ಆದರೆ ಗಂಡಸರೂ ಘೋಷಾದಲ್ಲಿ ಇರುವುದಿಲ್ಲವಷ್ಟೇ? …….. ಮತ್ತೆ ಯಾರಾದರೂ ಕೆಲಸ ಮಾಡುವವರಾಗಲಿ, ವಿದ್ಯಾರ್ಥಿಗಳಾಗಲಿ ಇರಬಹುದೇನೋ ಎಂದೆನಿಸಿತು. ಆದರೆ ರಾತ್ರಿಯಲ್ಲಾದರೂ ಅವರ ಮಾತುಕತೆ ಕೇಳಬೇಡವೇ? ಇಷ್ಟು ಮೌನವಾಗಿ ಇರುವವರು ತಪಸ್ವಿಗಳು, ಆದರೆ ಅವರು ತಪೋವನವನ್ನು ಬಿಟ್ಟು ಇಲ್ಲಿಗೆ ಹೇಗೆ ಬರುವರು!…….. ಹೀಗೆ ಏನೇನೊ ಕಿಡಿಕೆ ಹತ್ತಿರ ಕುಳಿತು ಬಾಗಿಲದ ಕಡೆಗೆ ನೋಡುವ ನನಗೆ ವಿಚಾರಗಳು ಬರುತ್ತವೆ.
ಒಂದು ದಿನ ನನ್ನಾಕೆ ಆ ಮನೆಯಲ್ಲಿ ಯಾರೋ ಒಬ್ಬ ಹೆಂಗಸು ಇರುವಳೆಂಬ ಸುದ್ದಿಯನ್ನು ತಿಳಿದುಕೊಂಡಳು. ಇದರಿಂದ ನನ್ನ ಕುತೂಹಲವು ಮತ್ತಿಷ್ಟು ಕೆರಳಿತು. ಒಬ್ಬಳೇ ಒಬ್ಬಳು ಹಗಲು ರಾತ್ರಿ ಅಲ್ಲಿ ಇರಬೇಕಾದರೆ!! ಆದರೆ ಇದರ ಬಗ್ಗೆ ಹೆಚ್ಚಿಗೆ ವಿಚಾರ ವಿನಿಮಯ ಮಾಡುವ ಹಾಗಿರಲಿಲ್ಲ. ನನ್ನಾಕೆಯ ಸಂಗಡ ಇವರ ಬಗ್ಗೆ ಕೇಳದ ಹಾಗಾಯಿತು. ಹೆಂಗಸರ ಬಗ್ಗೆ ಕೇಳಿದರೆ ಅವಳಾದರೂ ಏನು ತಿಳಿದುಕೊಂಡಾಳು! ಅಂತೆಯೆ ನಾನು ಮೌನವನ್ನು ತಾಳಬೇಕಾಯಿತು.
ನನ್ನ ಕೋಣೆಯಲ್ಲಿ ಕುಳಿತಾಗ, ಅತ್ತ ಕಡೆಗೆ ನನ್ನ ಲಕ್ಷ್ಯ ಹೋಗಹತ್ತಿ ನನ್ನ ಓದುವಿಕೆಗೂ ತೊಂದರೆಯಾಗತೊಡಗಿತು. ಕಣ್ಣುಗಳ ಎದುರಿಗೆ ಪುಸ್ತಕವಿರಬೇಕು; ಚಿತ್ತವೆಲ್ಲ ಬಾಗಿಲದ ಕಡೆಗೆ ಇರಬೇಕು! ಕಿಡಿಕಿಯ ಬಾಗಿಲ ಮುಚ್ಚಿದರೂ ಹಾಗೆಯೇ ಆಗ ತೊಡಗಿತು. ಇನ್ನು ನಾನೇ ಎಲ್ಲಿ ಆ ಮನೆ ಬಿಡಬೇಕಾಗುವದೋ ಎಂದೊಮ್ಮೆ ಎನ್ನಿಸಿತು.
ಇದ್ದಕ್ಕಿದ್ದಂತೆ ಆ ಬಾಗಿಲದ ಎದುರಿಗೆ ಗದ್ದಲ ಕಾಣಿಸಿತು!! ಡಾಕ್ಟರನು ಒಳಗೆ ಹೋದನು. ಅವನ ಹಿಂದೆ ಅವನ ಕಂಪೌಂಡರ ಮತ್ತು ನರ್ಸ ಹೋದರು. ಜೊತೆಗೆ ಸುಮಾರು ಮೂವತ್ತು ವರ್ಷದ ಒಬ್ಬ ಮನುಷ್ಯನು ಬಾಗಿಲು ಮುಂದೆ ಮಾಡಿಕೊಂಡು ಒಳಗೆ ಮಾಯವಾದನು.
ನಾನು ಆ ಕಡೆಗೆ ನೋಡುತ್ತಿದ್ದೆ!
ಹದಿನೈದು ನಿಮಿಷ ಒಳಗೆ ಏನೇನೋ ಗದ್ದಲ ಸಾಗಿತ್ತು ಒಳಗೆ ನಡೆಯುವ ಮಾತುಕತೆಗಳು ಸ್ಪಷ್ಟವಾಗಿ ಏನೂ ಕೇಳುತ್ತಿರಲಿಲ್ಲ. ಆದರೆ ಯಾರಿಗೊ ಬಹಳ ಜಡ್ಡಾಗಿರಬೇಕು! ಎನೋ ಗಂಭೀರ ಸ್ವರೂಪದ್ದಿರಬೇಕು! ಎಂದು ಮಾತ್ರ ಅನಿಸುವಂತಿತ್ತು.
ಡಾಕ್ಟರನು ಹೊರಗೆ ಬಂದನು. ಅವನು ಹಸನ್ಮುಖಿಯಾಗಿಯೇ ಇದ್ದನು. ಅವನ ಹಿಂದೆ ನರ್ಸ ಮತ್ತು ಕಂಪೌಂಡರರು ಓಡಿಬಂದರು. ಆದರೆ ಆ ಮೂವತ್ತು ವರ್ಷದ ಮನುಷ್ಯನ ಮುಖದಲ್ಲಿ ಮಾತ್ರ ಚಿಂತೆ ಒಟ್ಟು ಗೂಡಿತ್ತು. ಕಂಗೆಟ್ಟವನಂತೆ ಹುಚ್ಚು ಕಳೆ ಮುಖದ ಮೇಲೆ ಸುರಿಯುತ್ತಿತ್ತು.
ಆ ಕಡೆಗೆ ದಾರಿಯ ಒಂದು ಬದಿಗೆ “ಕಾರು” ನಿಂತುಕೊಂಡಿತ್ತು. ಡಾಕ್ಟರ ಅದರೊಳಗೆ ಸೇರಿ ಕಾರು ಹೊಡೆಯುವ ತಯಾರಿ ನಡೆಸಿದ, ನರ್ಸ ಮತ್ತು ಕಂಪೌಂಡರ ತಮ್ಮ ಹಿಂದಿನ ಸ್ಥಳಗಳಲ್ಲಿ ಕುಳಿತುಕೊಂಡರು.
ಆ ಮನುಷ್ಯನು ಬಾಗಿ ಅತ್ಯಂತ ದೀನ ಸ್ವರದಿಂದ ಡಾಕ್ಟರಿಗೆ ಕೇಳಿದ “ಏನ್ರಿ ಡಾಕ್ಟರ? ಹೇಗೆ ಮಾಡಬೇಕು?”
ನಾನೇನು ಹೇಳುವುದು? ಕೇಸ ಸೀರಿಯಸ್ ಇದೆ. ಒಂದೊಂದು ಇಂಜಕ್ಷನ್ನಿಗೆ ಸುಮಾರು ಐವತ್ತು ರೂಪಾಯಿ ಬೀಳಬಹುದು. ಆಪರೇಶನ್ ಮಾಡಬೇಕಾಗುತ್ತದೋ ಏನೋ ! “ನೋಡ್ರಿ ಡಾಕ್ಟರ! ಹೇಗಾದರೂ ಮಾಡಿ ಬಿಡಬೇಕು. ಇದೊಂದು ಪುಣ್ಯದ ಕೆಲಸ!” “ಓ ಪುಣ್ಯದ ಕೆಲಸ! ಹೀಗೆ ಎಲ್ಲರೂ ಅಂದರೆ ನಾನು ಈ ಧಂದೆಯನ್ನಾದರೂ ಏಕೆ ಮಾಡಬೇಕು?” “ನೋಡ್ರಿ ಡಾಕ್ಟರ… ಏನೋ ಬಡವ…” “ಛೇ, ನನ್ನಿಂದ ಈ ಕೆಲಸವು ಆಗದು. ಊರಲ್ಲಿ ವೈದ್ಯರಿದ್ದಾರೆ. ಅವರು ಸಹಾಯಮಾಡಬಹುದು. ಅವರಿಗೆ ಎರಡು ರೂಪಾಯಿ ಕೊಟ್ಟರೆ ಸಾಕು.” “ಜೀವದ ಪ್ರಶ್ನೆ. ಅದಕ್ಕಾಗಿಯೇ ಇಲ್ಲಿ ಪಟ್ಟಣಕ್ಕೆ ಬಂದಿದ್ದೇನೆ ಡಾಕ್ಟರ. ನಿಮ್ಮ ಹೆಸರು ಕೇಳಿ ಬಂದಿದ್ದೇವೆ ನಾನು ಹಣ ಕೊಡುತ್ತೇನೆ ಕಂತುಮಾಡಿ ಕೊಡುತ್ತೇನೆ….. ಕೊಡುತ್ತೇನೆ, ಡಾಕ್ಟರ ವಿಶ್ವಾಸವಿಡಿರಿ.” ” ಈಗ ಎಷ್ಟು ಕೊಡುವಿರಿ?” “ಹದಿನೈದು ಕೊಡುತ್ತೇನೆ. ಕೆಲಸ ಆರಂಭಿಸಿ.” “ಹದಿನೈದು!! ನೂರು ರೂಪಾಯಿ ಖರ್ಚು ಬರುವಾಗ ಹದಿನೈದರಿಂದ ಏನಾಗಬೇಕು?” “ಆಯಿತು. ಇಪ್ಪತ್ತು ಕೊಡುತ್ತೇನೆ. ನಿಮ್ಮ ದವಾಖಾನೆಗೆ ಬಂದು ಕೊಟ್ಟು ಹೋಗುತ್ತೇನೆ.” “ಹೂಂ, ಆಗಲಿ. ಟಿಪ್ಪಣೆ ಮಾಡಿಕೊಳ್ಳಿರಿ.” “ಹೆಸರು?” ನೋಟುಬುಕ್ಕು ತೆಗೆಯುತ್ತ ಕಂಪೌಂಡರ ಕೇಳಿದ. “ಚಂದ್ರಕಾಂತ……” “ಅಡ್ಡ ಹೆಸರು ಮತ್ತು ವಯಸ್ಸು?” “ಕಲ್ಲೂರ — ವಯಸ್ಸು, ಮೂವತ್ತು.” “ಅಲ್ಲಾ ಮರೆತೆ. ನಿಮ್ಮ ಮನೆಯವರ ಹೆಸರು?” ಚಂದ್ರಕಾಂತ ಹಿಂದು ಮುಂದು ನೋಡಿದನು. “ಶಾಂತಾ ಎಂದು ಏನೋ ಅಂದಂತಾಯಿತು.” ಚಂದ್ರಕಾಂತ “ಹೌದು…… ಅದೇ ” ಎಂದು ನುಡಿದ. ಕಾರು ಸಪ್ಪಳಮಾಡಿತು. ಚಂದ್ರಕಾಂತ ಹಿಂದೆ ಸರಿದು ಬಂದ. ಚಂದ್ರಕಾಂತ ತಿರುಗಿ ಬರುವಾಗ ಕಾಲಲ್ಲಿ ಶಕ್ತಿಯೆ ಇರಲಿಲ್ಲ. ಅವನು ಬಾಗಿಲು ತೆರೆದು ಒಳಗೆ ಹೋಗಬೇಕೆನ್ನುವಾಗ, ಎದುರಿಗೆ ನನ್ನ ಕಿಡಿಕೆಯ ಕಡೆಗೆ ನೋಡಿದನು. ಅವನು ಹೊರಳಿದ್ದನ್ನು ಕಂಡ ಕೂಡಲೆ ನನ್ನ ಮುಖ ಕೆಳಗೆ ಮಾಡಿದೆ.
ಆ ಬಾಗಿಲು ಮತ್ತೆ ಇಕ್ಕಿಕೊಂಡಿತು! ಮುಚ್ಚಿದ ಬಾಗಿಲು ಮುಚ್ಚಿಯೆ ಇದೆ; ಬಾಗಲದೊಳಗೆ ಏನು ನಡೆದಿದೆಯೊ ಏನೂ ತಿಳಿಯುವಂತಿರಲಿಲ್ಲ. ಆ ಜನರಿಗೆ ಏನಾದರೂ ತೊಂದರೆ ಇರಬೇಕು. ಚಿಂತೆಯಿರಬೇಕು ಎಂದು ಊಹಿಸಿದೆ. ಆದರೆ ಆ ಬಾಗಿಲದ ವರೆಗೆ ಹೋಗಿ ನಾನಾಗಿಯೆ ಮಾತನಾಡಿಸುವ ಧೈರ್ಯ ನನಗಾಗಲಿಲ್ಲ.
… ಒಂದು ತಿಂಗಳ ನಂತರ! ಅವು ಚಂದ್ರೋದಯದ ದಿನಗಳು! ಅದೇಕೋ ಮೋಡಗಳೆಲ್ಲ ಮಾಯವಾಗಿ ಬಾನು ತಿಳಿಯಾಗಿತ್ತು. ತಂಗದಿರ ಮುಗುಳ್ನಗೆಯಿಂದ ಮೂಡಣದಲ್ಲಿ ನಿಂತುಕೊಂಡು ಭೂಮಿಯ ಕಡೆಗೆ ನೋಡುತ್ತಿದ್ದ. ಅವನ ಸ್ಪರ್ಶಮಾತ್ರದಿಂದಲೆ ಇಳೆಯು ಹರ್ಷಪುಲಕಿತವಾಗಿತ್ತು. ಮಳೆಗಾಲದ ದಿನಗಳಲ್ಲಿ ಇಂಥ ಬೆಳುದಿಂಗಳ ಇರುಳುಗಳು ಇರುವುದು ತೀರ ಕಡಿಮೆ.
ಬೆಳುದಿಂಗಳ ಅಪರೂಪ ಅದ್ಭುತವನ್ನು ಸವಿಯುತ್ತ ನಾನು ಕಿಡಿಕೆಯ ಬಳಿ ಕುಳಿತಿದ್ದೆ. ಗೋಪುರದಲ್ಲಿಯ ದೊಡ್ಡ ಗಡಿಯಾರವು ಢಣ ಢಣ ಎಂದು ಹತ್ತುಗಂಟೆ ಬಾರಿಸಿತು. ಸನಿಹದ ಒಂದು ಮನೆಯಲ್ಲಿ ಬಾನುಲಿ ಹಚ್ಚಿದ್ದರು. ತರತರದ ಗಾನಗಳ ಇನಿದನಿ ಇಂಪಾಗಿ ಕೇಳಬರುತ್ತಿತ್ತು. ಈ ಧ್ವನಿಯ ಜೊತೆಗೆ ಕಪ್ಪೆಗಳ ಸ್ಪರ್ಧೆ ಇದ್ದಿತೋ ಏನೋ?! ಅವು ಪೊರ್ರ್ ಪೊರ್ರ್ ಎಂದು ಜೋರಾಗಿಯೆ ಒದರುತ್ತಿದ್ದವು.
ಹೀಗೆ ಬೆಳದಿಂಗಳ ಚೆಲ್ವರಾಣಿ ನನ್ನ ಮನದಲ್ಲಿ ಆಟವಾಡುತ್ತಿರುವಾಗ ಒಮ್ಮೆಲೆ ಬಾಗಿಲು ತೆರೆದ ಸಪ್ಪಳವಾಯಿತು. ಅಹುದು, ಅದು ಅದೇ ಮನೆಯ ಬಾಗಿಲು! ಒಂದು ವ್ಯಕ್ತಿ ಆ ಬಾಗಿಲದೊಳಗಿಂದ ಹೊರಗೆ ಬಂದಿತು. ಸೀರೆಯ ಬಣ್ಣ ಎದ್ದು ಕಾಣುತ್ತಿದ್ದುದರಿಂದ ಅವಳು ಹೆಂಗಸು ಎಂಬುವುದು ಕೂಡಲೆ ಗೊತ್ತಾಯಿತು. ಅವಳು ಚಂದ್ರಕಾಂತನ ಹೆಂಡತಿ ಶಾಂತಾ ಇರಲೇ ಬೇಕೆಂದೂ ಅನಿಸಿತು. ಆ ಮನೆಗೆ ಬಂದು ಇಷ್ಟುದಿನಗಳಾಗಿದ್ದರೂ, ಅವಳು ಹೊರಗೆ ಬಂದಿರುವುದನ್ನು ನಾನು ನೋಡಿಯೆ ಇರಲಿಲ್ಲ.
ಕೂಡಲೆ ನಾನು ನನ್ನ ಕೋಣೆಯೊಳಗಿನ ದೀಪವನ್ನು ಆರಿಸಿದೆ. ಇದರಿಂದ ನನ್ನ ಮುಖ ಹೊರಗೆ ಕಾಣಬಾರದೆಂಬುದೇ ನನ್ನ ಉದ್ದೇಶವಿತ್ತು. ಬಹಳ ದಿನಗಳಿಂದ ನನ್ನ ಕುತೂಹಲವನ್ನು ಕೆರಳಿಸಿದ ಅವಳನ್ನು ನೋಡುತ್ತ ಕುಳಿತೆ.
ಬೆಳದಿಂಗಳು ಬಾಗಿಲದವರೆಗೂ ಪಸರಿಸಿತ್ತು ಆದುದರಿಂದ ಬಾಗಿಲದ ಹೊರಗೆ ನಿಂತ ಅವಳನ್ನು ನೋಡುವುದು ಶಕ್ಯವಿತ್ತು.
ಅವಳು ಚಂದ್ರನ ಕಡೆಗೆ ಮೊಗವೆತ್ತಿ ಅವನನ್ನೆ ನೋಡುತ್ತ ಹಲವು ನಿಮಿಷ ನಿಂತಳು. ಬೆಳದಿಂಗಳಲ್ಲಿ ನಳನಳಿಸುವ ಬಳ್ಳಿ ಅವಳಾಗಿದ್ದಳು.
ಅವಳು ತೆಳುವಾಗಿದ್ದಳು. ಅದೇ ಆಗ ಹಾಸಿಗೆಯಿಂದ ಎದ್ದು ಬಂದವರಂತೆ ಅವಳ ಬಟ್ಟೆಗಳ ಉಡುವಿಕೆ ಇದ್ದಿತು. ಕೂದಲುಗಳೂ ಹರವಿದ್ದವು. ಪಾಪ! ಅವಳಿಗೆ ಯಾರೂ ಆರೈಕೆ ಮಾಡಲಿಲ್ಲವೋ ಏನೋ !
ಪ್ರಶಾಂತವಾದ, ಕಾಂತಿಯುತವಾದ, ಉಲ್ಹಾಸದಾಯವಾದ ಬೆಳುದಿಂಗಳನ್ನು ನೋಡಿ ಅವಳಿಗೆ ಏನನಿಸಿತೋ! ಚಂದ್ರನ ಕಿರಣಗಳನ್ನು ನುಂಗಿಬಿಡಬೇಕು ಅನ್ನುವವರಂತೆ ಒಂದು ಚಣ ಅವನ ಕಡೆ ನೋಡಿದಳು. ಮರುಚಣದಲ್ಲಿಯೆ ನಿಟ್ಟುಸಿರು ಬಿಟ್ಟಳು. ತಲೆಯನ್ನು ತನ್ನ ಎರಡೂ ಕೈಗಳಿಂದ ಒತ್ತಿಕೊಂಡಳು.
ಒಳಗೆ ಯಾವುದೋ ಧ್ವನಿ ಕೇಳಿಸಿತು. ಅದು ಕೂಸಿನ ಧ್ವನಿಯಂತೆ ಇದ್ದಿತು. ಅವಳು ಬಾಗಿಲವಿಕ್ಕಿ ಒಳಗೆ ಹೋಗಬೇಕೆಂದಳು. ಆದರೆ ಅಷ್ಟರಲ್ಲಿ…. ??
ಅಗೋ ಚಂದ್ರಕಾಂತ! ಯಾವಾಗಲೂ ಉಡುವ ಖಾದಿ ಬಟ್ಟೆಗಳನ್ನೇ ಧರಿಸಿದ್ದಾನೆ. ಕೈಯಲ್ಲಿ ಒಂದು ಕೈಚೀಲ. ಕುಲಕುಲನೆ ನಗುತ್ತ ಅಲ್ಲಿಗೆ ಬಂದನು. ಶಾಂತಾ ಅವನನ್ನು ನೋಡಿ ಮುಗುಳ್ನಗೆ ಸೂಸಿದಳು.
ಅವನನ್ನು ನೋಡಿದ ಕೂಡಲೆ ಅವಳು ಕೇಳಿದಳು. “ಏನು? ಏನು ಮಾಡಿದಿರಿ? ಔಷಧ ತಂದಿರಾ? ರೂಪಾಯಿ ತಂದಿರಾ?”
ಚಂದ್ರಕಾಂತ ಇವೆಲ್ಲ ಪ್ರಶ್ನೆಗಳಿಗೆ ಉತ್ತರ ಕೊಡಲಿಲ್ಲ. “ನೋಡು ಇವೊತ್ತು ನಿನಗೆ ಬೇಕಾದ ಮುಖ್ಯ ವಸ್ತುವನ್ನು ತಂದಿದ್ದೇನೆ. ಬಹಳ ಮಹತ್ವದ ವಸ್ತು”
ಅವಳು ಆಶ್ಚರ್ಯದಿಂದ ಕೇಳಿದಳು. “ಏನು? ಏನದು? ನೋಡೋಣ”. ಚಂದ್ರಕಾಂತ ಒಂದು ಪದಾರ್ಥವನ್ನು ತೆರೆದು ಅದನ್ನು ಅವಳ ಕೈಯಲ್ಲಿಡುತ್ತ ಹೇಳಿದ, “ಸಂಪಿಗೆಯ ಹೂವಿನ ಮಾಲೆ. ನಮ್ಮ ಜೀವನ ಹೂವಿನ ಹಾಗೆ ಇರಬೇಕೆಂದು ಅನಿಸುತ್ತದೆ ನನಗೆ.”
“ಛೀ, ಏನು ಹುಚ್ಚುತನ! ಈಗ ಆ ಹಿಂದಿನ ಬೆಳುದಿಂಗಳ ದಿನಗಳು ಇಲ್ಲ. ಮನೆಯಲ್ಲಿಯ ಗೋಳು ಏನು ಹೇಳಲಿ? ಬಾಡಿಗೆಯನ್ನು ಐದಾರು ಸಲ ಕೇಳಿ ಹೋದರು. ಹಾಲು, ಮಸರಿನವರು ನನಗೆ ಗಂಟು ಬಿದ್ದಿದ್ದಾರೆ. ನೀವೇನು ಮನೆಯಲ್ಲಿ ಇರುವದೇ ಇಲ್ಲ. ಎಲ್ಲಾ ಗೋಳು ನನ್ನ ಸುತ್ತ. ಈಗ ಈ ಹೂವನ್ನು ತೆಗೆದುಕೊಂಡು ಏನು ಮಾಡಲಿ?”
ಅವಳು ಒಂದೇಸವನೆ ಹೀಗೆ ಆಡಿದುದನ್ನು ಹೇಳಿ ಅವನು ತೆಪ್ಪಗಾದ!
ಅವಳು ಹೇಳಿದಳು “ನಾನು ಎಲ್ಲವನ್ನೂ ಸಹನೆ ಮಾಡಬಹುದು, ನೀವಾದರೂ ಯಾವಾಗಲೂ ಮನೆಯಲ್ಲಿದ್ದರೆ?”
ಇಬ್ಬರೂ ಕೆಳಮೊಗಮಾಡಿದರು, ಮೌನವಾದರು!
ಒಳಗಿನ ಧ್ವನಿ ಮತ್ತೆ ಕೇಳಿಸಿತು. ಅವರು ಒಳಗೆ ಹೋದರು. ಬಾಗಿಲು ಇಕ್ಕಿತು.
ಮರುದಿನ ಬೆಳಗು. ಆಗ ನಾನು ಚಹ ತೆಗೆದುಕೊಳ್ಳುವ ಹೊತ್ತಾಗಿತ್ತು. ಒಳಗೆ ಸ್ಟೋವಿನ ಸಪ್ಪಳವಿತ್ತು. ಕಪ್ಪುಬಸಿಗಳ ಸಪ್ಪಳವೂ ಆಯಿತು. ಇನ್ನು ಚಹ ಬೇಗ ಬರವುದೆಂದು ದಾರಿಕಾಯುತ್ತ ನನ್ನ ಕೋಣೆಯಲ್ಲಿಯೆ ಕುಳಿತಿದ್ದೆ.
ಬಾಗಿಲದಲ್ಲಿ ಏನೋ ಸದ್ದಾಯಿತು. ಚಹವೇ ಬಂದಿತೆಂದು ನಾನು ಮುಖವನ್ನು ಎತ್ತಿದೆ. ಆದರೆ ಅಲ್ಲಿ ಯಾರು? ಚಂದ್ರಕಾಂತ! ನನಗೆ ಅತ್ಯಂತ ಅಚ್ಚರಿಯಾಯಿತು. ಇಷ್ಟು ದಿನಗಳಾದರೂ ಒಂದು ಸಲವೂ ನನ್ನ ಕಡೆಗೆ ಬಂದಿರಲಿಲ್ಲ. ಅವನ ಆಗಮನವನ್ನು ಕಂಡು ಚಕಿತನಾದೆ.
ಚಂದ್ರಕಾಂತ ದೂರದಲ್ಲಿರುವಾಗ ಏಕವಚನದಿಂದ ಸಂಬೋಧಿಸಿಯೇ ನಾನು ವಿಚಾರಿಸಿದ್ದೆ. ಈಗ ಮನೆಗೆ ಬಂದಾಗ ಬಹುವಚನದಲ್ಲಿ ಸಂಬೋಧಿಸುವದನ್ನು ಆರಂಭಿಸಿದೆ. ‘ಬನ್ನಿ ಬನ್ನಿ’ ಎಂದೆ.
ಅವರು ಸಾವಧಾನವಾಗಿ ಬಂದು ಚಾಪೆಯ ಮೇಲೆ ಕುಳಿತರು. ಏನೋ ಒಮ್ಮೆಲೆ ಹೇಳಬೇಕೆಂದಿದ್ದರು. ಅದರಂತೆ ಅವರ ಮುಖಚರ್ಯೆ ಇದ್ದಿತು. ಆದರೆ? ಮತ್ತೆ ಬೇರೆ ಏನೋ ಮಾತು ತೆರೆಯುತ್ತಿದ್ದರು.
ಇಬ್ಬರೂ ಕೂಡಿ ಚಹ ಕುಡಿದೆವು. ರೇಶನ್, ಕಂಟ್ರೋಲ್ ಕಾಂಗ್ರೆಸ ರಾಜ್ಯ, ಸಂಸ್ಥಾನ ಇವೆಲ್ಲ ಮಾತುಗಳು ಹಲವು ನಿಮಿಷಗಳಲ್ಲಿಯೇ ಬಂದು ಹೋದವು. ಆದರೆ ಮನೆತನದ ಮಾತುಗಳು ವಿಶೇಷವಾಗಿ ಏನೂ ಬರಲಿಲ್ಲ. ನಾನೇ ಕೇಳಿದೆ “ಏನೋ ನಿಮ್ಮ ಮನೆಯಲ್ಲಿ ತ್ರಾಸವಿರಬೇಕು?” “ನಮ್ಮ ತ್ರಾಸ ಹೇಳುವ ಹಾಗಿಲ್ಲ. ಅವಳು ಬದುಕಿದ್ದೇ ಹೆಚ್ಚಿನದು.” “ಏನಾಗಿತ್ತು?” “ಗರ್ಭಿಣಿ ಇದ್ದಳು. ನೂರೆಂಟು ಬೇನೆ….” “ಏನು ಬೇನೆ?” ಚಂದ್ರಕಾಂತ ಮುಖ ಕೆಳಗೆ ಮಾಡಿದರು. ಒಮ್ಮೆಲೆ ನಿಟ್ಟುಸುರು ಬಿಡುತ್ತ ಹೇಳಿದರು. “ಡಾಕ್ಟರರೇ ಬದುಕಿಸಿದರು.” “ಹೊತ್ತು ಚನ್ನಾಗಿತ್ತು ಹಾಗಾದರೆ?” “ಹೂಂ ಆದದ್ದು ಆಗಿಹೋಯಿತು. ಆದರೆ ಈಗ ನೀವು?” ನನ್ನಿಂದ ಏನೋ ಸಹಾಯಯಾಚನೆ ಇದೆಯೆಂಬುದು ಅವರ ಮಾತುಗಳಿಂದ ಅನ್ನಿಸಿತು. “ನಾನು ಏನು ಮಾಡಬೇಕಾಗಿದೆ?” ಎಂದು ಕೇಳಿದೆ. “ನೀವೇನೋ…… ಇದ್ದವರು ಎಂದು ಕೇಳಿದ್ದೇನೆ.” ಈಗ ಚಂದ್ರ ಕಾಂತರು ತಮ್ಮ ಧ್ವನಿಯಲ್ಲಿ ಧೈರ್ಯವನ್ನು ತುಂಬಿಕೊಳ್ಳುತ್ತಿದ್ದರು. ಅವರ ಮಾತಿನ ಅರ್ಥ ನನಗೆ ಸರಿಯಾಗಿ ಆಗಲಿಲ್ಲ; “ಏನು ಸಹಾಯ ಮಾಡಬೇಕೊ ಹೇಳಿ. ನನಗೆ ಶಕ್ಯವಿದ್ದಷ್ಟು ಮಾಡುವೆ” ಎಂದೆ. “ನೂರು ರೂಪಾಯಿ ಸಹಾಯ ಆಗಬಹುದೆ?” ಚಂದ್ರಕಾಂತ ಮೆತ್ತಗಿನ ಧ್ವನಿಯಲ್ಲಿ ನುಡಿದರು. ನಾನು ಸ್ಪಲ್ಪ ಸುಮ್ಮನೇ ಕುಳಿತೆ. ನನ್ನ ಮೌನದ ಅರ್ಥವನ್ನು ಅವರು ಏನುಮಾಡಿಕೊಂಡರೋ ಏನೋ? ಅವರು ಸುತ್ತು ಮುತ್ತು ನೋಡಿದರು ಧೈರ್ಯದಿಂದ ತಮ್ಮ ಕಿಸೆಯೊಳಗಿನ ಒಂದು ಬಿಲವಾರವನ್ನು ತೆಗೆದು, “ನೋಡಿ, ಇದರ ತೂಕ ಒಂದು ತೊಲೆ ಆಗಬಹುದು. ನಿಮ್ಮ ಹತ್ತಿರ ಇದು ಇರಲಿ ನಾನು ಹಣ ನಿಮಗೆ ತಿರುಗಿ ಕೊಟ್ಟ ಮೇಲೆ ಕೊಟ್ಟೀರಂತೆ ಅಂದು” ಅಂದರು.
ಡಾಕ್ಟರನ ಎದುರಿಗೆ ಮಾತನಾಡುನಾಗ ಎಷ್ಟು ದೈನ್ಯದಿಂದ ಮಾತನಾಡುತ್ತಿದ್ದರೋ ಅಷ್ಟೇ ದೈನ್ಯದಿಂದ ನನ್ನೆದುರು ಮಾತನಾಡಿದರು. ನನಗೆ ಬಹಳ ಕನಿಕರವೆನಿಸಿತು. ಹಣವಿಲ್ಲದಿದ್ದರೆ ಮನುಷ್ಯ ಹೇಗೆ ತನ್ನ ಸ್ವಾಭಿಮಾನಕ್ಕೆ ಗೋರಿ ಕಟ್ಟುತ್ತಾನೆ! ಮೃಚ್ಛಕಟಿಕ ನಾಟಕದಲ್ಲಿ ಹಣವಿಲ್ಲಂತೆ ಗೋಳಿಡುವ ಚಾರುದತ್ತನ ಪಾತ್ರವು ಒಂದು ಕ್ಷಣ ನನ್ನ ಕಣ್ಣೆದುರು ಹಾದು ಹೋಯಿತು.
ಎರಡನೆಯವರ ಪದಾರ್ಥಗಳನ್ನು ತೆಗೆದುಕೊಂಡು ವತ್ತಿ ಇಟ್ಟುಕೊಂಡು ಹಣಕೊಡುವ ವ್ಯವಹಾರನ್ನು ನಾನು ಎಂದಿಗೂ ಮಾಡಿದವನಲ್ಲ. ಚಂದ್ರಕಾಂತ ಬಿಲವಾರ ಹೊರಗೆ ತೆಗೆದಕೂಡಲೆ ನನಗೆ ಅತ್ಯಂತ ಕೆಡಕೆನಿಸಿತು. ನಾನು ಅವರಿಗೆ ಸ್ಪಷ್ಟವಾಗಿ “ನಿಮ್ಮ ಬಿಲವಾರ ಬೇಡ. ನಾನು ನಿಮಗೆ ಐವತ್ತು ಕೊಡುತ್ತೇನೆ. ಮತ್ತೆ ನಿಮಗೆ ಅಡಚಣಿ ಎನಿಸಿದರೆ ಕೊಡುತ್ತೇನೆ. ಸದ್ಯ ನನ್ನ ಹತ್ತಿರ ಇಲ್ಲ”.
ನನ್ನ ಮಾತುಗಳನ್ನು ಕೇಳಿ ಅವರಿಗೆ ಆನಂದವಾಗಿರಬೇಕು. ಅಂತೆಯೇ ಮುಖದಲ್ಲಿ ಒಮ್ಮೆಲೆ ಬದಲಾವಣೆ ಕಂಡಿತು. ಮೌನವಾಗಿಯೆ ಕೃತಜ್ಞತೆಯನ್ನು ಅರ್ಪಿಸುವಂತೆ ಅವರ ಮುಖವಾಗಿತ್ತು. ನಾನು ಕಪಾಟಿನಲ್ಲಿರುವ ರೂಪಾಯಿಗಳನ್ನು ತೆರೆದು ಅವರ ಕೈಯಲ್ಲಿ ಇಟ್ಟಾಗ, ಅವರು “ಮೇನಿ ಥ್ಯಾಂಕ್ಸ ನಿಮ್ಮಂಥ ಜನರು ಸಿಗವುದು ದುರ್ಲಭ” ಎಂದು ಉದ್ಗಾರ ತೆಗೆದರು.
ಬಾಗಿಲು ತೆಗೆಯಿತು! ಮತ್ತೆ ಇಕ್ಕಿತು!
ಇಕ್ಕಿದ ಬಾಗಿಲು ಹಾಗಿಯೇ ಇದೆ. ಮೊದಲಿನಂತೆಯೇ ಇದೆ. ಅಲ್ಲಿ ಯಾವ ಸುಳಿವೂ ಇಲ್ಲ.
ಚಂದ್ರಕಾಂತ ನನ್ನ ಕಡೆಗೆ ಹಣದ ಸಲುವಾಗಿ ಹೇಗೆ ಬಂದರೊ, ಅವರ ಮನೆತನದ ಇತಿಹಾಸವೇನೊ, ಅವರ ಸ್ವಭಾವವೇನೋ, ಯಾವುದೂ ಅರಿಯದ ಸಂಗತಿ. ನನ್ನ ಕಡೆಗೆ ಅವರು ಬಂದುದು ಮೊದಲ ಸಲ. ಅಂತೆಯೆ ಅವುಗಳ ಬಗ್ಗೆ ನಾನು ಕೇಳುವುದು ಸಾಧ್ಯವಿರಲಿಲ್ಲ. ಪುನಃ ಕಿಡಿಕೆಯ ಹತ್ತಿರ ಕುಳಿತು ಬಾಗಿಲ ಕಡೆಗೆ ನೋಡುವದೊಂದೆ ನನ್ನ ಕಾರ್ಯವಾಗಿತ್ತು.
ಹೀಗೆ ಹಲವು ದಿನ ಉರುಳಿದವು. ಒಂದು ದಿನ ಒಮ್ಮಿಂದೊಮ್ಮೆ ನಮ್ಮ ಮನೆಯಲ್ಲಿ ಅತಿಥಿದೇವರ ಪ್ರವೇಶವಾಯಿತು. ಬಹಳ ಪರಿಚಿತ ಶಬ್ಧದಲ್ಲಿ ಹೇಳಬೇಕಾದರೆ ಅವರು “ಟೊಣ್ಣ್ಯಾ” ಆಗಿದ್ದರು ತಲೆಯ ಮೇಲೆ ರುಮಾಲವಿತ್ತು. ಕೈಯಲ್ಲಿ ಒಂದು ಹಳೆ ಚತ್ತರಿಗೆಯಿತ್ತು. ನಿರ್ಭಿಡೆಯಿಂದ ಅವರು ಒಳಗೆ ಬಂದು ಕುರ್ಚಿಯ ಮೇಲೆ ಕುಳಿತರು.
ಈ ಅತಿಥಿಗಳನ್ನು ಸತ್ಕರಿಸುವುದು ಒಂದು ಮೋಜೆನಿಸಿತು. ಒಮ್ಮೆ ಗಾಬರಿಯೂ ಆಯಿತು. ನಾನು ಅವರಿಗೆ ಏನೂ ಪ್ರಶ್ನೆ ಕೇಳಬೇಕಾಗಿರಲಿಲ್ಲ. ಅವರು ತಾವಾಗಿಯೆ ತಮ್ಮ ನಿರರ್ಗಳವಾದ ಶೈಲಿಯಲ್ಲಿ ಭಾಷಣ ಪ್ರಾರಂಭಿಸಿದರು.
“ನಿಮ್ಮದೆಲ್ಲಾ ನನಗೆ ಗೊತ್ತಿದೆ. ನೀವೇ ನನ್ನನ್ನು ಗುರುತಿಸಿರಲಿಕ್ಕಿಲ್ಲ, ನಾನು ಚಂದ್ರಕಾಂತನ ಅಣ್ಣ” ಹೀಗೆಂದು ಅವರು ತಮ್ಮ ಧೋತರ ಚುಂಗನ್ನು ಹೊರೆಗೆ ತೆಗೆದು ತಮ್ಮ ಮುಖವನ್ನು ಒರೆಸಿಕೊಂಡರು. “ಸ್ವಲ್ವ ನೀರು ಕೊಡುತ್ತೀರಾ?” ಎಂದು ಕೇಳಿದರು.
“ದಣಿದು ಬಂದಿದ್ದೀರೆಂದು ಕಾಣುತ್ತದೆ. ಬಿಸಿನೀರನ್ನೇ ಕೊಡುತ್ತೇನೆ” ಎಂದೆ.
“ಹೂಂ ಅದೂ ಆಗಬಹುದು. ಈಗ ಸ್ವಲ್ಪ ನೀರು ಕೊಡಿರಿ” ಹಾಗೆಯೆ ಅವರು ಮುಂದುವರಿಸುತ್ತ ಹೇಳಿದರು. “ನೊಡಿರಿ. ನಮ್ಮದು ಭಿಡೆ ಸ್ಟಭಾವನೆ ಅಲ್ಲ. ನಾವು ದಿನಾಲು ಹಳ್ಳಿ ಹಳ್ಳಿ ತಿರುಗುವವರು. ಭಿಡೆ ಮಾಡಿದರೆ ಬದುಕುವುದೇ ಸಾಧ್ಯವಿಲ್ಲ.”
ನಾನು ನೀರು ತರಿಸಿಕೊಟ್ಟೆ. ಒಳಗೆ ಚಹದ ತಯಾರಿಯೂ ಸಾಗಿತು. ಆಸಾಮಿ ಜೋರಾಗಿಯೇ ಕಾಣುತ್ತದೆಂದು ಅವಲಕ್ಕಿಯ ಸಿದ್ಧತೆಯನ್ನೂ ಮಾಡಲು ಹೇಳಿದೆ.
ನಾನು ಒಳಗಿನಿಂದ ಬರುತ್ತಲೇ ಕೇಳಿದೆ, “ನೀವು ಹಳ್ಳಿ ಹಳ್ಳಿ ತಿರುಗುತ್ತೀರೆಂದ ಮೇಲೆ… ನೀವು?”
“ಹೌದು…….. ಹೌದು….. ಅದೇ ಶಾನಭೋಗರ ಕೆಲಸ. ಒಂದು ಹಳ್ಳಿಯಲ್ಲ- ಎರಡು ಮೂರು ಹಳ್ಳಿ ಶ್ಯಾನುಭೋಕಿ ಅವೆ ನಮ್ಮವು. ನೋಡಿರಿ, ನಿಮ್ಮ ಸಂಗಡ ಒಂದು ಮಹತ್ವದ ಸಂಗತಿ ಕೇಳಲಿಕ್ಕೆ ಬಂದಿರುವೆ”
“ಏನದು?” ಎಂದೆ.
“ನಮ್ಮ ಚಂದ್ರಕಾಂತ….. ನಿಮ್ಮಲ್ಲಿ…..?”
“ಬಂದಿದ್ದರು. ಒಂದು ದಿನ ಮಾತ್ರ……”
“ಅದಾಯಿತು. ಆದರೆ ಏನಾದರೂ?”
ಸ್ವಲ್ಪ ಸುತ್ತು ಮುತ್ತು ನೋಡಿದರು. ತರುವಾಯ ಪಿಸುಮಾತು “ಏನಾದರೂ ಒಯ್ದಿದ್ದಾನೆಯೆ?” ಎಂದು ಕೇಳಿದರು.
“ಹೌದು. ಏನೋ ರೂಪಾಯಿ ಐವತ್ತು ತೆಗೆದುಕೊಂಡಿದ್ದಾರೆ.” ಎಂದು ಹೇಳಿದೆ.
“ಅದಕ್ಕೇ ಅಂದೆ. ಲುಚ್ಚ್ಯಾ! ಥೇಟ ಲುಚ್ಚ್ಯಾರಿ ಅವನು” ಎಂದು ಮೇಜಿನ ಮೇಲೆ ತಮ್ಮ ಕೈ ಜೋರಾಗಿ ಬಡಿದು ಅಂದರು. ಅವರ ಧ್ವನಿ ಯಲ್ಲಿಯೂ ಜೋರು ಬಂದಿದ್ದಿತು.
“ಅಲ್ರಿ ರಾಯರ, ಅವರಿಗೆ ಹಾಗೇಕೆ ಅನ್ನಬೇಕು? ಅವರಿಗೇನೋ ತ್ರಾಸವಿದೆಯೆಂದು ಕಾಣುತ್ತದೆ.”
“ತ್ರಾಸ? ಇವರದು ಮುಗಿಯುವ ಹಾಗೇ ಇಲ್ಲ. ಇವನ ಹೆಂಡತಿಗೆ ಮಾಡಿ ಮಾಡಿ ನಮ್ಮ ಅವ್ವ ಬೇಸತ್ತು ಹೋದಳು. ಇವನು ಲಗ್ನಮಾಡಿ ಕೊಂಡ! ಆ ಕಡೆ ಚಳುವಳಿ ಎಂದು ಊರುಬಿಟ್ಟು ಹೋಗಿಬಿಟ್ಟ! ಯಾರು ಮಾಡಬೇಕು? ಇವನ ಹೆಂಡತಿ ನೋಡಲಿಕ್ಕೆ ಕರಪರಗೊಂಬಿ. ಏನೂ ತ್ರಾಣ ಇಲ್ಲ. ನೂರೆಂಟು ಬ್ಯಾನಿ. ತೀರ್ಥ ಕುಡಿದರೆ ನೆಗಡಿ, ಆರತಿ ತೆಗೆದುಕೊಂಡರೆ ಕಾವು.
ನಾನೇನೋ ನಡುವೆ ಪ್ರಶ್ನೆ ಕೇಳಬೇಕೆಂದಿದ್ದೆ. ಆದರೆ ಅವರ ಆವೇಶ ಹೆಚ್ಚುತ್ತಿದ್ದುದರಿಂದ ನಾನು ಮೌನವಾಗಿ ಕೂಡಬೇಕಾಯಿತು.
ಅತಿಥಿದೇವರೇ ಹೇಳಲು ಮುಂದುವರೆದರು. “ನೋಡ್ರಿ, ನಿಜ ಸಂಗತಿ ಹೇಳಬೇಕು ಅಂದರೆ, ಆಣೆ ಮಾಡಿ ಹೇಳಬೇಕು. ಅಂದರೆ ನಮ್ಮ ಮನೆತನ ಎಲ್ಲಾ ಹಾಳುಮಾಡಿಬಿಟ್ಟ ಚಂದ್ರಕಾಂತ! ಅವನು ಜೇಲಿಗೆ ಹೋದದ್ದರಿಂದ ನಮ್ಮ ಆಸ್ತಿ ಜಪ್ತ ಆದವು. ಈಗಿನ ಕಾಂಗ್ರೆಸ ಸರಕಾರದವರು ಏನು ಕೊಟ್ಟರು ಇವನಿಗೆ ಆ ಽ……?”
ಪ್ರಶ್ನೆ ಕೇಳುವ ಹೊತ್ತಿಗೆ ಚಹ ಬಂದಿತು, “ನಿಮಗೇನಾದರೂ ಇದರ ಸಂಗಡ ಬೇಕೆ?” ಎಂದು ಸಹಜವಾಗಿ ಕೇಳಿದೆ.
“ಓಹೋ ಅದರಲ್ಲೇನು? ನಾನು ನಿಮಗೆ ಮೊದಲೇ ಹೇಳಿರುವೆನಲ್ಲ?” ಎಂದು ಹುರುಪಿನಿಂದ ಅಂದರು.
ನಾನು ಎಣಿಸಿದುದು ನಿಜವೇ ಆಯಿತು!
ಅವರು ಮತ್ತೆ ವಾದಸರಣಿಯನ್ನೆ ಎತ್ತಿ ಹೇಳಿದರು. “ನೋಡಿರಿ, ಈಗ ಹಣ ತೊಟ್ಟು, ಮನೆಬಿಟ್ಟು ಹೊರಗೆ ಬಂದಿರುವ ತನಗಾದರೂ ಏನಾದರೂ ನೌಕರಿ ಇದೆಯೇನು? ನಮ್ಮಲ್ಲಿ ಇದ್ದುಕೊಂಡು ಕುಲಕರ್ಣಿಕಿ ಮಾಡು ಅಂದರೆ ಕೇಳಲಿಲ್ಲ. ಹಿರಿಯರ ಮಾತು ಕೇಳುವ ಹಾಗೆಯೆ ಇಲ್ಲ. ಹೀಗೆ ಆದರೆ ಸಂಸಾರ ಸುರಳೀತ ಹೇಗೆ ಸಾಗಬೇಕು, ನೀವೆ ಹೇಳ್ರಿ? ಏನೊ ಹೇಳುವನು. ಹಳ್ಳಿ ಹಳ್ಳಿ ಪಿರಿ ಪಿರಿ ತಿರುಗುವನು. ಏನು ಕೆಲಸವೊ ಏನೊ ಯಾರಿಗೂ ತಿಳಿಯುವ ಹಾಗಿಲ್ಲ. ನನ್ನ ಬಿಟ್ಟು ಬಿಡಿರಿ. ಸ್ವತಃ ಅವ್ವನಿಗಾದರೂ ಹೇಳಬೇಕೊ ಬೇಡವೊ? ಏನೊ ಸುಳ್ಳು ಹೇಳುತ್ತ ತಿರುಗುವನು. ಏನೊ ಸಮಾಜ ಸೇವೆಯ ಹುಚ್ಚು ಅವನಿಗೆ! ರಾಜಕಾರಣದ ಹುಚ್ಚು ಅವನಿಗೆ! ಬೆಕ್ಕು ತಿರುಗಿದ ಹಾಗೆ ತಿರುಗುತ್ತಾನೆ. ಹೆಂಡತಿ ಒಂದು ಕಡೆಗೆ, ತಾನು ಒಂದು ಕಡೆಗೆ! ಏನು ಹೇಳಲಿ ಅವನ ಮಹಿಮಾ! ರಾಮ ರಾಮ! ಸಾಕಾಗಿಹೋಗಿದೆ. ಈಗ ಸಾಲಾ ಮಾಡಿದ್ದಾನೆ. ಅದೊಂದು ಬೇರೆ. ಎಲ್ಲಾ ಬಂಗಾರದ ಸಾಮಾನು ಹೋದವು…. ಓಹೋ ಮರೆತೆ…” ಪಿಸ ಮಾತಿನಲ್ಲಿ ಅವರು ಕೇಳಿದರು, “ಏನಾದರೂ ನಿಮ್ಮಲ್ಲಿ ಒತ್ತಿ ಇಟ್ಟಿದ್ದಾನೆಯೆ?”
“ಏನೂ ಇಲ್ಲ” ಎಂದು ಸರಳವಾಗಿ ಹೇಳಿದೆ.
“ಲುಚ್ಚ್ಯಾ! ಬಿಲವಾರ ಇಟ್ಟಿದ್ದೇನೆ ಅಂತ ಅವ್ವಗೆ ತಿಳಿಸಿದ್ದಾನೆ. ಎಷ್ಟು ಸುಳ್ಳು! ಅವೂ ನನ್ನ ಹೆಂಡತಿ ಬಿಲವಾರ! ಏನೋ ಪಾಪ! ಇವನ ಹೆಂಡತಿ ಕೈಯಲ್ಲಿ ಇರಲಿ ಎಂದು ನಾನು ಪ್ರೀತಿಯಿಂದ ಕೊಡಿಸಿದ್ದೆ. ಥೇಟ ಲುಚ್ಚ್ಯಾ. ಅವುಗಳನ್ನು ಕೊಡಬಾರದೂ ಅಂತ ಈ ಸೋಗು! ನನ್ನ ಹೆಂಡತಿ ಸತ್ತು ಹೋದಳು. ಇನನಿಗೇಕೆ ಬೇಕು? ಎಂದು ತಿಳಿದಿದ್ದಾನೆ ಅವನು!”
“ನಿಮ್ಮ ಮನೆಯವರು ತೀರಿಕೊಂಡಿದ್ದಾರೇನು? ಎಷ್ಟು ದಿವಸವಾದವು?” ಎಂದು ಅವರ ಮಾತುಗಳ ಮಧ್ಯದಲ್ಲಿಯೆ ಕೇಳಿದೆ.
“ಈ ನಮ್ಮ ಚಂದ್ರಕಾಂತ ಲಗ್ನವಾದ ಒಂದು ವರ್ಷದಲ್ಲಿಯೆ. ಯಾವ ಮಹೂರ್ತದಿಂದ ಅವಳು ನಮ್ಮ ಮನೆಯಲ್ಲಿ ಕಾಲಿಟ್ಟಳೋ! ಅತ್ತೆಯ ಮನೆಗೆ ಬಂದವಳು ಒಂದೂ ಕೆಲಸ ಮಾಡಲಿಲ್ಲ. ಗೊಂಬಿಯ ಹಾಗೆ ಕೂತು ಬಿಡುತ್ತಿದ್ದಳು. ಎಲ್ಲಾ ಕೆಲಸಗಳ ಭಾರ ಇವಳ ಮೈಮೇಲೆ. ಕೆಲಸ ಮಾಡಿ ಮಾಡಿ ಜಡ್ಡು ಹಚ್ಚಿಕೊಂಡು
“ಪಾಪ! ಈ ವಯಸ್ಸಿನಲ್ಲಿ ನಿಮಗೆ ತ್ರಾಸವಾಗಿರಬೇಕು! ಅಲ್ಲವೆ?”
“ಈ ತ್ರಾಸ ಹೇಗಾದರೂ ತಡೆದುಕೊಳ್ಳಬಹುದು. ಆದರೆ ಈ ಚಂದ್ರಕಾಂತನದು ಹೇಗೆ ತಡೆದುಕೊಳ್ಳಬೇಕು! ನಮ್ಮ ಅವ್ವ ಇವರ ಸಂಸಾರದ ಸಲುವಾಗಿ ಚಿಂತೆಹಚ್ಚಿಕೊಂಡು ಸಾಯಲಿಕ್ಕೆ ಆಗಿದ್ದಾಳೆ. ಅದಕ್ಕೆ ಬಂದೆ ಈಗ! ಇವನು ಚಳುವಳಿಯಲ್ಲಿರುವಾಗ ಎಲ್ಲವನ್ನೂ ನೋಡಿ ಕೊಂಡು ಹೋಗುತ್ತಿದ್ದೆ. ಎಲ್ಲವೂ ಸುಸೂತ್ರ ಸಾಗಿತ್ತು! ಈಗ ಹೇಗೆ ಆಗಿದೆ. ನೋಡಿರಿ. ನಮಗಂತೂ ಇವನ ಮುಖ ನೋಡಬಾರದು; ಇವನ ಮನೆಯಲ್ಲಿ ಕಾಲಿಡಬಾರದು ಅಂತ ಅನಿಸಿಬಿಟ್ಟಿದೆ. ನೋಡ್ರಿ, ಇದೊಂದೇ ಉದಾಹರಣೆ. ನಮ್ಮ ಮನೆಯಲ್ಲಿ ಬಾಣೆಂತನ ಮಾಡಿಸಲಿಕ್ಕೆ ಬರುತ್ತಿದ್ದಿಲ್ಲವೆ? ನಮ್ಮ ಅವ್ವ ಸತ್ತಿರುವಳೇನು ಇವರ ಪಾಲಿಗೆ? ಲುಚ್ಚ್ಯಾ!”
ಅವರು ಹೊರಡಲು ತಯಾರಾದರು. “ಇನ್ನು ಸ್ವಲ್ಪ ಕುಳಿತು ಹೋಗಬಹುದಲ್ಲ?” ಎಂದು ಬಿನ್ನವಿಸಿದೆ. ಆದರೆ ಅವರು ಕೇಳಲಿಲ್ಲ “ನೀವು ಕೆಲಸದವರು. ನಿಮ್ಮ ಹೊತ್ತು ಏಕೆ ಹಾಳುಮಾಡಬೇಕು? ಬರುತ್ತೇನೆ” ಎಂದು ಹೊರಟೇ ಬಿಟ್ಟರು.
ಅವರು ಹೊರಗೆ ಹೋಗುವುದನ್ನು ನೋಡಿದೆ. ಆದರೆ ಅವರು ಆ ಮನೆಯ ಕಡೆಗೆ ಆಗ ಹೊರಳಿ ಸಹ ನೋಡಲಿಲ್ಲ. ಇಕ್ಕಿದ ಬಾಗಿಲು ಹಾಗೆಯೇ ಇತ್ತು.
ಅವರಿಗೆ ನಾನು ಅತಿಥಿ ದೇವರೆಂದೆ ಕರೆಯುತ್ತಿದ್ದೇನೆ ಏಕೆಂದರೆ ಕೊನೆಯವರೆಗೂ ಅವರ ಹೆಸರು ನನಗೆ ಗೊತ್ತಾಗಲಿಲ್ಲ. ಆ ಅತಿಥಿದೇವರ ಮಾತುಗಳನ್ನು ಕೇಳಿ ನನ್ನಾಕೆ ಎಂದಳು, “ಸುಮ್ಮನೇ ನೀವು ಏನಾದರೂ ಗೊಂದಲದಲ್ಲಿ ಬೀಳುತ್ತೀರಿ” ಎಂದು. ಅವಳ ಮಾತುಗಳು ನಿಜವಾಗಿದ್ದವು. ನನಗೆ ಏನೂ ತಿಳಿಯದಾಯಿತು.
ಮರುದಿನ ಬೆಳಿಗ್ಗೆ ಚಂದ್ರಕಾಂತ ನಮ್ಮ ಮನೆಗೆ ಬಂದರು ಅವರು ಒಳಗೆ ಬಂದವರೆ ನೇರವಾಗಿ ಪ್ರಶ್ನೆ ಕೇಳಿದರು, ‘ನಿನ್ನೆ ನಿಮ್ಮ ಮನೆಗೆ ನಮ್ಮ ಅಣ್ಣ ಬಂದಿದ್ದನೇನು?’ ಎಂದು.
“ಅಹುದು…. …ಏಕೆ?” ಎಂದು ಕೇಳಿದೆ.
“ಅವನು ಭಯಂಕರ ಇದ್ದಾನೆ” ಎಂದು ಚಂದ್ರಕಾಂತ ನುಡಿದರು. “ನಿಮ್ಮ ಮುಂದೆ ಏನು ಹೇಳಿದ?”
ಎಲ್ಲವನ್ನು ಇವರ ಮುಂದೆ ಯಾವ ರೀತಿ ಹೇಳಬೇಕು ? ನಾನು ಸುಮ್ಮನೆ ನಕ್ಕುಬಿಟ್ಟೆ.
ಚಂದ್ರಕಾಂತ ಹೇಳಿದರು “ಇಲ್ಲ, ಏನಾದರೂ ಹೇಳಿರಲೇಬೇಕು. ನನ್ನ ಹಣದ ವಿಷಯ ಕೇಳಿದನಲ್ಲವೆ?”
“ಅಹುದು, ಕೇಳಿದರು.”
“ಆಭರಣ ವಿಷಯ ಕೇಳಿದನೆ?”
“ಹೂಂ, ಅದನ್ನೂ ಕೇಳಿದರು.”
“ನೋಡಿರಿ ಎಷ್ಟು ಭಯಂಕರ ಇರುವನು!” ಚಂದ್ರಕಾಂತರ ಮುಖದಲ್ಲಿ ಉದ್ವಿಗ್ನತೆ ಇತ್ತು.
“ಏನಾಗಿದೆ ಈಗ?” ಎಂದು ಕೇಳಿದೆ.
“ಏನಾಗಬೇಕು? ನನಗೆ ಹಣ ಕೊಡುತ್ತೇನೆಂದು ಹೇಳಿದ. ಬಂಗಾರದ ಆಭರಣ ಕೊಟ್ಟುಬಿಟ್ಟೆ ವಿಶ್ವಾಸದಿಂದ. ಈಗ ಅವೆಲ್ಲವನ್ನು ಮಾಯ ಮಾಡಿ ಬಿಟ್ಟಿದ್ದಾನೆ.”
“ಅಬ್ಬಾ! ಹೀಗೋ??”
“ಹೂಂ! ಅದಲ್ಲದೇ ಇದ್ದುಬಿದ್ದ ಸ್ವಲ್ಪ ಬಂಗಾರವೆಲ್ಲವೂ ತನ್ನದೇ ಅನ್ನುತ್ತಾನೆ.”
“ಬಿಲಾವರ?”
“ಹೂಂ! ಅದೇ ಆ ಬಿಲವಾರ ಅವ್ವ ಕೊಟ್ಟಿದ್ದಾಳಂತೆ ತನ್ನವೆನ್ನುತ್ತಾನೆ.”
“ನಿಜವೇ?”
“ಹೂಂ! ಇಷ್ಟೇ ಅಲ್ಲದೇ….”
“ಏನ್ರಿ, ಚಂದ್ರಕಾಂತ ಏನದು?”
“ನೀವು ಬಹಳ ಒಳ್ಳೆಯವರು. ನಿಮ್ಮ ಮುಂದೆ ಹೇಳಿ ಬಿಡುತ್ತೇನೆ ಯಾರಿಗೂ ಹೇಳಬೇಡಿರಿ. ನನ್ನ ಅಣ್ಣ ಕೆಟ್ಟ ಸ್ಟಭಾವದವ. ನಾನು ಚಳವಳಿಯಲ್ಲಿರುವಾಗ ನನ್ನ ಹೆಂಡತಿ ಒಬ್ಬಳೇ ಇದ್ದಳು. ಆಗ….!”
ಚಂದ್ರಕಾಂತರ ಮಾತಿನ ಅರ್ಥ ಕೂಡಲೇ ಆಯಿತು. “ಅಯ್ಯೋ ಪಾಪ!” ಎಂದು ಮರುಗುವಂತಾಯಿತು.
“ಇವಳು ಗಟ್ಟಿ ಅವನ ಆಟವನ್ನು ಸಾಗಗೊಟ್ಟಿಲ್ಲಾ ಏನು ಹೇಳಲಿ? ಅಣ್ಣನು ನಾನು ಅಲ್ಲಿ ಇರಬೇಕೆಂದು ಮುದ್ದಾಂ ಬಯಸುತ್ತಿದ್ದಾನೆ. ನಾವು ಅವನ ಸಲುವಾಗಿ ಊರುಬಿಟ್ಟು ಬಂದಿದ್ದೇವೆ. ಇನ್ನು ಅಲ್ಲಿಗೆ ಹೋಗುವದೆ ಇಲ್ಲ. ಬೇಕಾದಷ್ಟು ಕಷ್ಟ ಬರಲಿ!…. ಆ ಊರಲ್ಲಿದ್ದರೆ ಇವಳಿಗೆ ಏನೂ ಶಾಂತಿ ಇಲ್ಲ. ಇವಳ ಜೀವನ….”
ಚಂದ್ರಕಾಂತನ ಕಣ್ಣುಗಳಲ್ಲಿ ಕಂಬನಿ ತುಂಬಿದವು. ದೊಡ್ಡ ಹನಿಗಳು ಒಣ ಗಲ್ಲಗಳ ಮೇಲೆ ಉದುರಿದವು.
“ಚಂದ್ರಕಾಂತ, ನೀವು ಅವಳೊಬ್ಬಳನ್ನೇ ಬಿಟ್ಟು ಹೋಗಿಬಿಡುತ್ತೀರಿ. ಅವಳು ಏನು ಮಾಡಬೇಕು ?”
“ನಾನು ಏನು ಮಾಡಬೇಕು? ಹೊಟ್ಟೆಗಾಗಿ ಡುಡಿಯಬೇಕಲ್ಲ? ಮುಲ್ಕೀ ಪರೀಕ್ಷೆಗೆ ನಮ್ಮ ಶಿಕ್ಷಣ ನಿಂತುಬಿಟ್ಟಿದೆ. ನಮಗೆ ಯಾರು ನೌಕರಿ ಕೊಡಬೇಕು ? ಏನೊ ರಾಜಕಾರಣದಲ್ಲಿ ಓಡಾಡಿದ್ದರಿಂದ ಗ್ರಾಮೋದ್ಯೋಗದಲ್ಲಿ ಕೆಲಸ ಸಿಕ್ಕಿದೆ. ಅದರ ಸಲುವಾಗಿ ಹಳ್ಳಿ ಹಳ್ಳಿ ತಿರುಗಬೇಕು. ಇಲ್ಲವಾದರೆ ನಮ್ಮ ಗತಿ? ನೋಡಿರಿ, ಡಾಕ್ಟರ ಬಿಲ್ಲು ಕೊಡಬೇಕು…….. ಅದಿರಲಿ ನನ್ನಲ್ಲಿ ನಿಮ್ಮ ವಿಶ್ವಾಸವಿರಲಿ. ನಿಮ್ಮ ಹಣ ನಾನು ಕೊಟ್ಟೇಕೊಡುವೆ.”
“ಚಂದ್ರಕಾಂತ, ನನ್ನ ಹಣದ ಬಗ್ಗೆ ಚಿಂತಿಸಬೇಡಿ. ಮೊದಲು ಉಳಿದುದು ಸರಿಹೋಗಲಿ.” ಭಾರವಾದ ಹೃದಯದಿಂದ ಚಂದ್ರಕಾಂತ ನಮ್ಮ ಮನೆಯಿಂದ ಎದ್ದು ಹೋದರು!
ಆ ದಿನ ರಾತ್ರಿ ನನ್ನ ಕೋಣೆಯಲ್ಲಿ ಮಲಗಿದಾಗ ಅದೇ ಚಿತ್ರ ನನ್ನ ಮುಂದೆ. ಚಂದ್ರಕಾಂತ, ಅವರ ಅಣ್ಣ, ಶಾಂತಾ!!! ಮೂವರ ರೂಪಗಳೂ ನನ್ನ ಕಣ್ಣೆದುರು ಹಾದುಹೋಗುತ್ತಿದ್ದವು. ಅವರೆಲ್ಲರೂ ನನ್ನೆದುರು ನಿಂತು ಏನೇನೋ ಮಾತನಾಡುತ್ತಿದ್ದರು. ಅಡಕೊತ್ತಿನಲ್ಲಿರುವ ಅಡಕೆಯ ಹಾಗೆ ಶಾಂತಾಳ ಸ್ಥಿತಿ ಇರುವದೆಂದು ಅನಿಸುತ್ತಿತ್ತು…….. ಜೀವನದಲ್ಲಿಯ ದುಃಖದಾಳವನ್ನು ಅಳೆದು ನೋಡುತ್ತಿದ್ದೆ!
ಹೊರಗೆ ಏನೋ ಸಪ್ಪಳವಾಯಿತು. ಯಾರೊ ಗುದ್ದಾಡುವಂತೆ ಧ್ವನಿ ಕೇಳಿಸಿತು. ನನ ಹಾಸಿಗೆಯಲ್ಲಿಯೇ ನಾನು ಹೊರಳಾಡುತ್ತಿದ್ದೆ. ಬಾಗಿಲದ ಹತ್ತರ ಸಪ್ಪಳ ಜೋರಾಗಿ ಉಂಟಾಯಿತು. ಯಾರೋ ಕೆಳಗೆ ಬಿದ್ದಂತೆಯೂ ಕೇಳಿಸಿತು. ಲಗುಬಗೆಯಿಂದ ಎದ್ದು ಕಿಡಿಕಿಯಲ್ಲಿ ನೋಡಿದೆ.
ಅವಳು ಶಾಂತಾ! ಕೈಯಲ್ಲಿ ಮಿಣಿ ಮಿಣಿ ದೀಪ! ಎದೆಯುಬ್ಬಿ ಬರುತ್ತಿದೆ! ಸೀರೆಯ ಸೆರಗು ಹೇಗೋ ಬಿದ್ದಿದೆ! ಕೂದಲು ಅಸ್ತವ್ಯಸ್ತವಾಗಿದೆ! ಒಂದೇ ಸಮನೆ ಉಸಿರುಬಿಡುವ ಧ್ವನಿ ಕೇಳಿಸುತ್ತಿದೆ! ಅವಳು ಶಾಂತಾ!! ಮನಸ್ಸಿನಲ್ಲಿ ಏನೂ ಶಾಂತತೆ ಇರಲಿಲ್ಲ! ಯಾರ ಸಂಗಡವೋ ಜಗಳಾಡಿರಬೇಕು! ಪ್ರಕ್ಷುಬ್ಧ ಸಮುದ್ರದಂತೆ ಮಿಣಿ ಮಿಣಿ ದೀಪದ ಬೆಳಕಿನಲ್ಲಿ ಇವಳ ಮುಖ ಕಾಣಿಸುತ್ತಿದ್ದಿತು!…. ದಾರಿಯಲ್ಲಿ ಯಾವುದೋ ವ್ಯಕ್ತಿಯು ಜೋರಾಗಿ ಹೆಜ್ಜೆಗಳನ್ನು ಅಪ್ಪಳಿಸುವುದು ಕೇಳಿಬರುತ್ತಿದ್ದಿತು !!
ಮಿಣಿ ಮಿಣಿ ದೀಪ ಮಾಯವಾಯಿತು! ಬಾಗಿಲು ಬಂದಾಯಿತು.
ಮರುದಿನ ರಾತ್ರಿ, ಗೋಪುರದ ಗಡಿಯಾರಪು ಢಣ್ ಢಣ್ ಎಂದು ಹತ್ತು ಬಾರಿಸಿತು. ನಾನು ನನ್ನ ಕೋಣೆಯಲ್ಲಿ ಓದುತ್ತ ಕುಳಿತಿದ್ದೆ. ಕಿಡಕಿಯಲ್ಲಿ ಒಮ್ಮೆಲೆ ನನ್ನನ್ನು ಕೂಗಿದ ಧ್ವನಿ ಕೇಳಿಸಿತು.
“ಓಹೋ ಚಂದ್ರಕಾಂತ, ಬನ್ನಿ ಒಳಗೆ” ಎಂದು ಕರೆದೆ. ಅವರು ಒಳಗೆ ಬರಲು ನಿರಾಕರಿಸಿದರು. ಕಿಡಿಕೆಯೊಳಗೆ ತಮ್ಮ ಕೈಯನ್ನು ಮುಂದಕ್ಕೆ ಮಾಡಿ ‘ತಗೊಳ್ಳಿ’ ಎಂದರು.
ಅವರ ಕೈಯಲ್ಲಿ ರೂಪಾಯಿ ನೋಟುಗಳಿದ್ದವು. “ಇಷ್ಟೇನು ಅವಸರವಿತ್ತು?…….. ಇರಲಿ. ಒಳಗಾದರೂ ಬನ್ನಿರಲ್ಲ?” ಎಂದು ಮತ್ತೆ ಬಿನ್ನವಿಸಿದೆ.
ಚಂದ್ರಕಾಂತ ಕಿಡಕಿಯಲ್ಲಿಯೆ ನಿಂತು ನೇರವಾಗಿ ಒಂದು ಪ್ರಶ್ನೆ ಕೇಳಿದ–“ನಿನ್ನೆ ನಮ್ಮ ಅಣ್ಣ ಇಲ್ಲಿ ಇದ್ದರೇನು?”
“ಯಾವಾಗ?”
“ನಿನ್ನೆ ರಾತ್ರಿ” ಚಂದ್ರಕಾಂತ ತುಟಿ ಕಚ್ಚಿದರು. ಪ್ರತಿಸಲದಂತೆ ಅವರ ಮುಖ ಇರಲಿಲ್ಲ. ಯಾವುದೋ ಸಂಶಯ, ಯಾವುದೋ ಚಿಂತೆ ಅವರ ಮನದಲ್ಲಿ ಮನೆಮಾಡಿಕೊಂಡಿತ್ತು.
ನಾನು ಹೇಳಿದೆ, “ನನಗೇನೂ ಗೊತ್ತಿಲ್ಲ. ಆದರೆ….?”
“ನೀವು ಹೇಳಲು ಏನೂ ಅಭ್ಯಂತರವಿಲ್ಲ. ನನ್ನ ಹೃದಯದ ಬಾಗಿಲನ್ನೆ ನಿಮ್ಮೆದುರು ತೆರೆದಿಟ್ಟಿದ್ದೇನೆ. ಏಕೆ ಹೇಳಬಾರದು ?”
“ಹಾಗೇನೂ ಇಲ್ಲ. ಆದರೆ …….. ರಾತ್ರಿ ಏನೋ ಸಪ್ಪಳವಾಯಿತು. ಯಾರೊ? ಬಂದಂತೆ ಕಂಡಿತು. ನಿಮ್ಮ ಅಣ್ಣ ಇದ್ದರೂ ಇರಬಹುದು.”
“ಅಹುದು, ಅವನೇ ಬಂದಿದ್ದನು. ಗೊತ್ತಾಗಿದೆ. ನಾನು ಅವಳ ಮಾತಿಗೆ ಬಲಿ ಬಿದ್ದೆ…… ಹೆಣ್ಣಿನ ಹೃದಯ ತಿಳಿಯುವುದಿಲ್ಲ …… ..”
ಚಂದ್ರಕಾಂತ ಭಾರವಾದ ಮನಸ್ಸಿನಿಂದ ತಮ್ಮ ತಲೆಯನ್ನು ತಗ್ಗಿಸಿ, ಕಿಡಿಕೆಯ ಸಲಾಕಿಗೆ ತಲೆಯನ್ನು ಅನಿಸಿದರು. ಅವರ ಕಣ್ಣುಗಳು ವಿಲಕ್ಷಣ ಭಾವವನ್ನು ವ್ಯಕ್ತಪಡಿಸಿದವು. ಅವರ ಮುಖ ಬೆವರತೊಡಗಿತು.
“ಇಲ್ಲಿಯೂ ಅವನು !!” ಚಂದ್ರಕಾಂತ ಆಶ್ಚರ್ಯವನ್ನು ತೋರಿಸುತ್ತ ಅಂದರು.
“ಒಳಗೆ ಬನ್ನಿ. ಎಲ್ಲವನ್ನು ಮಾತನಾಡೋಣ” ಎಂದೆ.
“ಇಲ್ಲ… ನಾನು ಬಲಿ ಬಿದ್ದೆ…. ಬಿಲವಾರ ಅವನೆ ಕೊಟ್ಟಿರುವನಂತೆ…. ಇವಳೇ ಇಸಕೊಂಡಿರಬೇಕು…. ಛೆ… ಇರಲಿ. ಅವನು ಬರುತ್ತಾನಂತೆ!…. ದಿನಾಲು! … ನಾನು ಬರುತ್ತೇನೆ… ಎಲ್ಲಾ ಮರೆತುಬಿಡಿ… ಏನೋ ನಮ್ಮ ಜೀವನ ……”
ಚಂದ್ರಕಾಂತ ಹೊಯ್ದಾಡುತ್ತ ಕಿಡಕಿಯಿಂದ ಹೋದರು. ಬಾಗಿಲದ ಬಳಿ ಸ್ವಲ್ಪ ನಿಂತರು! ಅತ್ತಿತ್ತ ನೋಡಿದರು: ಮತ್ತೆ ಹೊರಗೆ ಹೋಗಿ ಬಿಟ್ಟರು! ಅವರ ಹೆಜ್ಜೆಗಳ ಸಪ್ಪಳ ಆ ರಾತ್ರಿಯ ಶಾಂತವಾತಾವರಣದಲ್ಲಿ ಕೇಳಬರುತ್ತಿತ್ತು.
ಎರಡು ಮೂರು ದಿನಗಳು ಉರುಳಿದವು. ಮುಚ್ಚಿದ ಬಾಗಿಲ ಹಾಗೆಯೆ ಇದೆ. ಬಾಗಿಲದೊಳಗೆ ನಡೆಯುವ ವ್ಯವಹಾರವೇನೂ ತಿಳಿದು ಬರುತ್ತಿರಲಿಲ್ಲ. ಚಂದ್ರಕಾಂತರ ಸುದ್ಧಿಯೇ ಇಲ್ಲ.
ಒಂದು ದಿನ ಬೆಳಗಿನಲ್ಲಿ ಬಾಗಿಲದ ಎದುರಿಗೆ ಮಾಲಕನ ದರ್ಶನ! ಗೋಣನ್ನು ಬಿಕ್ಕೊಂಡು. ಒಂದು ಬಡಿಗೆಯನ್ನು ಹಿಡಿದುಕೊಂಡು ನಿಂತಿದ್ದನು. “ನೋಡೆವಾ, ನಾಳೆಯೊಳಗಾಗಿ ಬಾಡಿಗೆ ರೂಪಾಯಿ ಕೊಡಲಿಕ್ಕೇ ಬೇಕು. ಎಷ್ಟು ದಿವಸ ಹೀಗೆ ಬಿಡಬೇಕು! ಬಾಕಿ ಚುಕ್ತಾ ಮಾಡಬೇಕು. ಈ ಮನೆಯೊಳಗೆ ಇರಬೇಕು. ಇಲ್ಲಾ ಅಂದರೆ…….. ನಾನು ಏತಕ್ಕೂ ಹೇಸುವವನಲ್ಲ. ನಿನ್ನನ್ನು ಹೊರಗೆ ಹಾಕಿ ಬಿಡುತ್ತೇನೆ. ನಿನ್ನ ಯಜಮಾನರಂತೂ ಊರೊಳಗೆ ಇರುವ ಹಾಗೇ ಇಲ್ಲ. ನಾನು ಯಾರನ್ನು ಕೇಳಬೇಕು? ನನಗೇನು ಕಿಮ್ಮತ್ತು ಇಲ್ಲ? ನೋಡು ನಾಳೆ ಕೊಡಲಿಕ್ಕೇಬೇಕು.”
ಮನೆಯ ಮಾಲಕನು ಧಡಧಡನೆ ಮಾತನಾಡಿ ಸಿಟ್ಟಿನಿಂದ ಕೋಲು ಬೀಸುತ್ತ ಹೋಗಿಬಿಟ್ಟನು!
ಅರ್ಧ ತಾಸಿನ ನಂತರ ಕಂಪೌಂಡರನ ಆಗಮನ! ಬಾಗಿಲು ಬಡೆದನು. ಬಾಗಿಲು ತೆರೆಯಲಿಲ್ಲ. “ನೋಡ್ರಿ, ನಾಳೆಯಾದರೂ ಬೇಕು. ಇಲ್ಲಾ ಅಂದರೆ ನಿಮ್ಮ ಮೇಲೆ ಖಟ್ಲೆ ಹಾಕುತ್ತೇನೆ ಅಂದಾರೆ ಡಾಕ್ಟರು.”
“ಕಂಪೌಂಡರ ಬಿಲ್ಲಿನ ಹಾಳಿ ಮಡಿಚಿಕೊಂಡು ಸಾಯಕಲ್ಲ ಹತ್ತಿ ಕೊಂಡು ಹೋದನು.
ಇಪ್ಪತ್ತು ನಿಮಿಷಗಳ ನಂತರ ಹಾಲಿನವ ಬಂದನು. “ರೊಕ್ಕಾ ಇಲ್ಲಾ ಅಂದರೆ ನಾವು ಏನುಮಾಡಬೇಕು! ನಾವು ಹೇಗೆ ಹಾಲು ಕೊಡಬೇಕು! ಇವೊತ್ತು ನಾನು ಕೊಡುವುದೇ ಇಲ್ಲ”.
ಗವಳಿಯು ಹಾಲನ್ನು ತೆಗೆದುಕೊಂಡು ಹಾಗೆಯೇ ಹೋಗಿಬಿಟ್ಟನು! ಇಷ್ಟು ಜನರು ಬಂದು ಹೋದರೂ ಅವಳು ಬಾಗಿಲನನ್ನೇನೂ ತೆರೆಯಲಿಲ್ಲ. ಒಳಗೆ ಕುಳಿತುಕೊಂಡು ಅವಳು ಮಾತುಗಳನ್ನು ಹೇಗೆ ಸಹನೆ ಮಾಡಿಕೊಳ್ಳುತ್ತಿದ್ದಳೊ!
ಅದೇ ದಿನ ರಾತ್ರಿ ಬಾಗಿಲು ಬಡಿದ ಸಪ್ಪಳವಾಯಿತು. ಒಂದು ವ್ಯಕ್ತಿ ಹೊರಗೆ ನಿಂತು “ಬಾಗಿಲೂ ಬಾಗಿಲೂ” ಎಂದು ಕೂಗಿಕೊಳ್ಳುತ್ತಿದ್ದಿತು. ಮಳೆ ಜಿಟಿ ಜಿಟಿ ಬೀಳುತ್ತಿತ್ತು. ಗಾಳಿ ಸೊಯ್ಯ್ ಎಂದು ಬೀಸುತ್ತಿತ್ತು. ಇಂಥ ವೇಳೆಯಲ್ಲಿ ಆ ಬಾಗಿಲದ ಹತ್ತಿರ ಯಾರು ಇರಬೇಕು? ಧ್ವನಿಯ ಮೇಲಿಂದ ಚಂದ್ರಕಾಂತರ ಅಣ್ಣಂದಿರೆ ಅಲ್ಲಿ ಇರಬಹುದೇನೋ ಎಂದು ಸಂಶಯ ಪಟ್ಟೆ!
ಬೆಳಗಿನ ಮಳೆ ನಿಂತಿದ್ದಿತು. ನಾನು ಕಿಡಿಕೆಯಲ್ಲಿ ಕುಳಿತು ನೋಡುವಾಗ ಒಬ್ಬ ಬಿಕ್ಷುಕ ಆ ಮನೆಯ ಬಾಗಿಲದ ಎದುರು ನಿಂತಿದ್ದನು. ಅವನು ಒಂದು ಏಕತಾರಿಯನ್ನು ಹಿಡಿದಿದ್ದನು. ಅದರ ತಂತಿಗಳನ್ನು ಜೋರಾಗಿ ಮೀಟುತ್ತ ತನ್ನದೇ ಆದ ಸುಂದರವಾದ ಧ್ವನಿಯಿಂದ ಕಿರಿಚಿಕೊಳ್ಳುತ್ತಿದ್ದ “ಬಾಗಿಲ ತೆರೆದು ವರವನು ಕೊಡುವೋ ಹರಿಯೇ….” ಎಂದು.
ನನ್ನಾಕೆ ಆತುರತೆಯಿಂದ ಬಂದು ಹೇಳಿದಳು “ಅವಳಿಗೆ ಬಹಳ ತ್ರಾಸ”.
“ಯಾರಿಗೆ?”
“ಅವಳೇ ಚಂದ್ರಕಾಂತರ ಹೆಂಡತಿ.”
“ಏನಾಗಿದೆಯಂತೆ?”
“ಎಷ್ಟೋ ದಿನವಾಯಿತಂತೆ! ಊಟವೇ ಇಲ್ಲವಂತೆ! ಏನೋ ಹಾಲು ಕುಡಿಯುತ್ತಿದ್ದಳಂತೆ! ನೆನ್ನೆ ಅದೂ ಇಲ್ಲವಂತೆ! ಪಾಪ ಹರುಕು ಸೀರೆ ಉಟ್ಟುಕೊಂಡು ಹಾಗೆಯೆ ಇದ್ದಾಳಂತೆ!”
“ನಿನಗೆ ಇದನ್ನೆಲ್ಲ ಯಾರು ಹೇಳಿದರು?”
“ಅವಳೆ ಆ ಕೆಲಸ ಮಾಡುವ ಹುಡುಗಿ. ಅವಳೇನೋ ನಿನ್ನೆ ಮಧ್ಯಾಹ್ನ ಒಳಗೆ ಹೋಗಿದ್ದಳಂತೆ. ಮನೆಯಲ್ಲಿ ಏನೂ ಇಲ್ಲವಂತೆ! ಪಾಪ!”
“ಚಂದ್ರಕಾಂತ ಎಂದು ಬರುವರಂತೆ?”
“ಏನೂ ತಿಳಿಯದಂತೆ”
“ನಾನೇ ನೋಡಿಕೊಂಡು ಬರುವೆ” ನನಗೆ ಬಹಳ ಚಿಂತೆಯಾಯಿತು. ಲಗುಬಗೆಯಿಂದ ಅಲ್ಲಿಗೆ ಹೋದೆ. ಭಿಕ್ಷುಕ ಇನ್ನೂ ಹಾಡುತ್ತಿದ್ದ. “ಬಾಗಿಲನ ತೆರೆದೂ…” ನಾನು ಅಲ್ಲಿಗೆ ಹೋದ ಕೂಡಲೆ ಅವನು ಆ ತೆರೆದ ಬಾಯನ್ನು ಬಂದುಮಾಡಿದ.
ಬಾಗಿಲು ಬಡೆದೆ. ಒಳಗಿನಿಂದ ಏನೂ ಉತ್ತರ ಬರಲಿಲ್ಲ! ನನ್ನ ಮೇಲೂ ಏನಾದರೂ ಸಂಶಯ ತೆಗೆದಕೊಂಡಿರುವರೋ ಏನೊ, ಎಂದು ನನ್ನ ಹೆಸರು ಹೇಳಿ ಕೂಗಿದೆ. ಆದರೂ ಉತ್ತರ ಬರಲಿಲ್ಲ. ಬಾಗಿಲು ನೂಕಿದೆ! ಬಾಗಿಲು ತೆರೆದಿತ್ತು! ಸಾವಕಾಶ ಒಳಗೆ ಹೋಗಿ ನೋಡಿದೆ. ಒಂದು ಉದ್ದನ್ನ ಕೋಣೆ. ನಡುವೆ ಒಂದು ಅರ್ಧ ಹಾಳು ಗೋಡೆ ಎದ್ದು ನಿಂತಿದೆ. ಈ ಮುಂದಿನ ಅರ್ಧ ಭಾಗದಲ್ಲಿ ಯಾರೂ ಕಾಣಲಿಲ್ಲ. ಧೈರ್ಯಮಾಡಿ ಒಳಗೆ ಹೆಜ್ಜೆ ಇಟ್ಟೆ. ಅಲ್ಲಿಯೂ ಅವಳು ಇರಲಿಲ್ಲ. ನನ್ನೆದೆ ಒಡೆದು ನೀರಾಯಿತು!
ಕೂಸು ಮಾತ್ರ ನೆಲದ ಮೇಲೆ ಇತ್ತು. ನಾನಲ್ಲಿಗೆ ಹೋದಕೂಡಲೇ ಕಣ್ಣ ತೆರೆದು ಒಂದು ಸಲ ನನ್ನನ್ನು ನೋಡಿತು!
ಆ ಕೂಸಿನ ಹತ್ತಿರವೇ ಒಂದು ಚೀಟಿ ಬಿದ್ದಿತ್ತು. ಅದನ್ನು ನನ್ನ ಕೈಯಲ್ಲಿ ತೆಗೆದುಕೊಂಡೆ. ನನ್ನ ಕೈಗಳು ನಡುಗಹತ್ತಿದವು. ‘ಇದನ್ನು ಸಾಕುವ ಧೈರ್ಯವಿದ್ದವರು ಸಾಕಬಹುದು’ ಎಂದು ಅದರಲ್ಲಿ ಬರೆದಿತ್ತು. ನನ್ನ ಕಣ್ಣುಗಳನ್ನೇ ನಾನು ನಂಬದಾದೆ! ನನ್ನ ದೇಹವೆಲ್ಲ ನಡುಗಿತು. ಕಣ್ಣಿಗೆ ಕತ್ತಲು ಕವಿದಂತಾಗಿ ನಾನು ಹೊರಗೆ ಬಂದೆ.
ಬಾಗಿಲು ತೆರೆದಿತ್ತು! ಕಂಪೌಂಡರ, ಮನೆಯ ಮಾಲಕ ಎಲ್ಲರೂ ಒಳಗೇ ಬಂದರು.
‘ಬಾಗಿಲು ತೆರೆದು ವರವನು ಕೊಡುವೊ ಹರಿಯೆ’ ಎಂದು ಭಿಕ್ಷುಕನ ಬೇಡಿಕೆಯ ಧ್ವನಿ ಇನ್ನು ಕೇಳಬರುತ್ತಿತ್ತು.
*****