ಮುರುಕು ಮಂಟಪದಲ್ಲಿ ಅಳಿದುಳಿದ ಎಡೆಯಲ್ಲಿ
ನಿನ್ನ ರೂಪವು ಬಂದು, ಕಳೆದ ಕಾಲದ ನನಸ
ಕೂಡ ಆಡುತಲಿಹುದು ಕಣ್ಣ ಮುಚ್ಚಾಲೆ!
ಬೇಡ ಬೇಡೆಂದರೂ, ಕೇಳದೆಯೆ, ತಾಳದೆಯೆ,
ಓಡುತಿದೆ ನಿನ್ನೆಡೆಗೆ ಮನಸು, ಕನಸಿನ ನನಸು,
ಮರೆಯಾದ ನಿನಗಾಗಿ ತವಕಪಡುತೆ!
ಅಂದೊಮ್ಮೆ, ಹಿಂದೆ, ನನ್ನೆದೆಯು ಒಲವಿನರವದಿ
ನಿನ್ನೆದೆಗೆ ಪಿಸುಮಾತ ಕಳುಹಿಸಿತು, ನೀ ಕೇಳಿ
ನನ್ನೆದೆಗೆ ಸುಳಿವೆಯೆಂದೆನುವ ಹಿಗ್ಗಿನಲಿ.
ಆ ಮಾತು, ನನ್ನ ಉಷೆ, ನಿನ್ನೆದೆಯ ಒಳಸಾರೆ
ನೀ ಬಂದೆ! ಅನಿತರಲೆ ಕಾರಿರುಳು ಇಳಿದಿಳಿರು
ನಿನ್ನನಾವರಿಸಿತ್ತು! ಉಳಿದುದೇನು?
ಒಲವಿನರಮನೆ ಮುರಿದು
ಮುರುಕು ಮಂಟಪವಾಯ್ತು,
ಒಳಗೆಲ್ಲ ಬರಿ ಬರಿದು-
ನೋವಿಗದೆ ಆಟಕಾಯ್ತು!
*****