ವಸಂತ ಬಾ ಹಸಿರೆಲ್ಲವೂ
ಒಂದಾಗಿ ಜೀವದ ಫಲ ಆರಿಸುತಲಿದೆ
ನಿನ್ನ ಮಾಂತ್ರಿಕ ಸ್ಪರ್ಶ ಛಂದದ ಪರಾಕ್ರಮ
ಹುಟ್ಟುತ್ತಲಿವೆ ಹೊಸ ಹೊಸ ಚಿಗುರುಗಳು
ಹೊಸ ಜಾತ್ರೆ ಹೊಸ ತೇರುಗಳು
ಬೇಸಿಗೆ ಹರಡಿ ಬಿರು ಬಿಸಿಲು ಅರಳಿವೆ|
ಒಂದಾಗುವ ಪಿಂಡ ಮರು ಹುಟ್ಟು
ಪಡೆದ ಗಳಿಗೆ ಯುಗಾದಿ ಹೊಸವರ್ಷ
ನೆನಪಿನ ಕೋಗಿಲೆಯ ಕೊರಳು ಹೊರಳಾಡುವ
ಇರುಳು ನೇಯುವ ಕಂಬಳಿಗಳ ಸುತ್ತ
ಸತ್ವ ಸಂಸ್ಕೃತಿ ಪೊಟರೆಯಲಿ ಚಿಲಿಪಿಲಿ ಗಾನ
ಎದೆಯ ಆಳಕೆ ನೀ ಬರೆದ ಕವಿತೆ|
ಬಾ ವಸಂತ ನದಿಯ ದಡಕೆ
ಕೈ ಮುಗಿವೆ ನೆನೆದ ಮನದಲಿ
ಎರಡರ ನಡುವೆ ಒಂದು ಒಲವ ಹರಡಿ
ಉಸಿರೇ ಹಸಿರಾಗುವ ಗುಹೇಶ್ವರನ ಬಯಲು
ಎಲ್ಲಿಯೂ ನಿಲ್ಲದ ಜೀವಭಾವ
ವಿದಾಯವಿಲ್ಲದ ಬೆಳಕು ನಡಿಗೆ|
ಹೇಳು ವಸಂತ ಚಿಗುರಿಗೆ ಕೆಂಬಣ್ಣ
ಸೂಸಿ ಹುಟ್ಟುವ ಸೂರ್ಯನ ಜೊತೆ ಸರಸ
ದೋಣಿ ತೇಲಿದ ನದಿಯ ಅಲೆಗುಂಟ
ಗಾಳಿ ಗಂಧ ಹೂವು ಚಿಟ್ಟೆ ಚಿಲಿಪಿಲಿ
ಜಗದ ಗಂತವ್ಯ ಮುಗಿಲ ಮುಟ್ಟುವ ಹಂತ
ಮೋಡಗಳಾಗಲು ಕಾತರಿಸಿದ ಹಸಿಗಳು|
ಎಲ್ಲೆಲ್ಲೂ ಮುರಳಿಯ ನಾದಲೋಕ
ಜಗದ ವಿಸ್ಮಯಗಳ ಸಂಕೇತಗಳು
ನೀ ಬಂದರೆ ಹಾದಿ ಬೀದಿಯ ತುಂಬ
ಬೆಳಕು ಬೆಳದಿಂಗಳು ಪಸರಿಸಿ ಹಾಯಿ
ಎದೆಯ ಭಾವಕೆ ಹಾಡಾದ ಗೀತೆಗಳು
ಮತ್ತೆ ಎಲ್ಲವೂ ನೆನಪಾದ ಲಹರಿಯ ಪಾಡು.
*****