ಪುರಾಣ, ಕಾವ್ಯವೊ, ಕಲ್ಪದ್ರುಮವೊ
ಯುಗದ ಪೂರ್ವದ ನಾಕ-ನರಕವೊ
ಜನನ ಮರಣವ ಗೆಲುವ ಸಮರವು
ಸುರಾಸುರರ ಸಮರದ ಪರಿಪಾಠವು |
ನಿತ್ಯ ನಡೆದಿದೆ
ಮಥನ-ಮಂಥನ
ಉಳಿವಳಿವು ಬೆಳೆವೊಳಪಿನ ಸಂಚಿಗೆ
ಶಸ್ತ್ರ-ಶಾಸ್ತ್ರ ಹಿಡಿದ
ಸಮ್ಮೋಹ ಮಾಯೆಯ
ಮುಖವಾಡದೊಳಗಿನ ಸುಖ ಬದುಕಿಗೆ |
ಮಥಿಸಲುದಿಸಿದಮೃತವದೆಲ್ಲವು
ಸುರರ ಕಂಗಳ ಭಾಗ್ಯಕೆ ಹಬ್ಬವು
ಸುರೆಯಮಲಲಿ ಹರಿದ ಬೆವರಿಗೆ
ಸಾವ ಶೂಲ ಪಾಶ ಕಲಹದ ಬೀಜವು |
ಹೆಜ್ಜೆ ಇಡುತಿದೆ,
ಮುಂಡವಿರದ ರುಂಡದ,
ರಾಹುಕೇತುಛಲ ಬಾನೆದೆ ಗೂಡಿಗೆ
ಶಸ್ತ್ರ ಶಾಸ್ತ್ರ ಹಿಡಿದ
ಜಗದೆದೆಯನಲುಗಿಸೋ
ಮುಖವಾಡ ತೆರೆಮರೆ ಸಂಚ ಸಂಚಿಗೆ |
ಯುಗ ಯುಗದ ಸಂಭದವತಾರಿ ದೇವರ
ಛದ್ಮ ವೇಷದ ರಂಗು ರಂಗದ ಸಜ್ಜಿಕೆ
ಮುಗುದ ಕಂಗಳೊಡಲ ವಾಸಿಯವನಿಗೂ
ವೇಷಾಂಬರ ವೇಷದ ಭೂಮಿಕೆ |
ಕಾರಿರುಳಗಣ್ಣಲಿ ಗೆಲುವ ಛಲದಲಿ
ಸಾಗಿದೆ ಪಯಣ ಉನ್ಮತ್ತ ದಿಕ್ಕಿಗೆ
ಗೊತ್ತು-ಗುರಿಯ ಪರಿವೆ-ತೊರೆದ
ಮುಖವಾಡ ಮಸಣದ ಹೊಗೆ ಧಗೆ ನಗೆ |
*****