ಇನ್ನೊಮ್ಮೆ ಅಡಿಗರು

ಇನ್ನೊಮ್ಮೆ ಅಡಿಗರು

ಕವಿ ಗೋಪಾಲ ಕೃಷ್ಣ ಅಡಿಗರ ಕಾವ್ಯದ ಕುರಿತಾಗಿ ಹೊಸತಾದ ವಿಮರ್ಶಾಲೇಖನಗಳ ಸಂಗ್ರಹವೊಂದನ್ನು ತರುವ ದೃಷ್ಪಿಯಿಂದ ಯುವ ವಿಮರ್ಶಕ ಎಸ್. ಆರ್. ವಿಜಯಶಂಕರ ಅವರು ನನ್ನಿಂದ ಲೇಖನವೊಂದನ್ನು ಅಪೇಕ್ಷಿಸಿದ್ದಾರೆ. ನಾನಾದರೆ ೧೯೭೪ರಷ್ಟು ಹಿಂದೆಯೇ ಕನ್ನಡ ಕಾವ್ಯಕ್ಕೆ ಅಡಿಗರ ಕೊಡುಗೆ ಎಂಬ ವಿಷಯವಾಗಿ ಇಂಗ್ಲಿಷ್ನಲ್ಲಿ ಲೇಖನ ಬರೆದಿದ್ದು, ಅದರ ಕನ್ನಡ ಭಾಷಾಂತರ (ಜಿ. ಎನ್. ರಂಗನಾಥ ರಾವ್) ಹಲವೆಡೆ ಲಭ್ಯವೂ ಇದೆ. ಆದರೂ ಇದಾಗಿ ಈಗ ಸುಮಾರು ಮೂರು ದಶಕಗಳು ಕಳೆದಿವೆ. ಮನುಷ್ಯ ಬದಲಾಗುತ್ತಾನೆ, ಧೋರಣೆಗಳೂ ಬದಲಾಗುತ್ತವೆ. ಆಯಾ ಕಾಲ ತನ್ನ ನಿಲುವುಗಳನ್ನು ಮತ್ತೆ ಮತ್ತೆ ಕಂಡುಕೊಳ್ಳಬೇಕಾಗುತ್ತದೆ. ಈ ದೃಷ್ಪಿಯಿಂದ ಅಡಿಗರ ಕಾವ್ಯದ ಕುರಿತಾಗಿ ನಾನೀ ಸಂದರ್ಭದಲ್ಲಿ ಹೊಸತಾಗಿ ಹೇಳುವುದೇನಿದೆ ಎಂದು ಕೇಳಿಕೊಳ್ಳುತ್ತೇನೆ.

ಅಡಿಗ ಮತ್ತು ರಾಮಾನುಜನ್ ಆಧುನಿಕ ಕನ್ನಡ ಕಾವ್ಯವನ್ನು ರೂಪಿಸಿದ ಎರಡು ಮಹಾನ್ ಶಕ್ತಿಗಳು. ಆದರೆ ಇಬ್ಬರೂ ಎರಡು ಧ್ರುವಗಳಂತೆ ತಮ್ಮ ವಸ್ತು ಮತ್ತು ಶೈಲಿಗಳಲ್ಲಿ ವಿಭಿನ್ನರೂ ಕೂಡ. ಅಡಿಗರು ದೊಡ್ಡ ದೊಡ್ಡ ವಸ್ತು ಹಾಗೂ ಆರ್ಭಟದ ಶೈಲಿಗಳನ್ನು ಬಳಸಿಕೊಂಡರೆ, ರಾಮಾನುಜನ್ ಸಣ್ಣ ಸಣ್ಣ ವಸ್ತುಗಳನ್ನೂ ಮೆತ್ತಗಿನ ಶೈಲಿಯನ್ನೂ ಬಹುಶಃ ಕನ್ನಡದಲ್ಲಿ ಮೊತ್ತ ಮೊದಲಿಗೆ ಎಂಬಂತೆ ಬಳಕೆಗೆ ತಂದರು; ಅಡಿಗರಿಗೆ ಶಬ್ದಗಳ ಉಪಯೋಗದಲ್ಲಿ ಧಾರಾಳತನ ತೋರಿದರೆ, ರಾಮಾನುಜನ್ ಈ ಮಟ್ಟಿಗೆ ತುಂಬಾ ಜಿಪುಣರು; ಅಡಿಗರು ದಾಪುಗಾಲಿನಲ್ಲಿ ಕ್ರಮಿಸುವವರಾದರೆ, ರಾಮಾನುಜನ್ ಸಣ್ಣ ಸಣ್ಣ ಹೆಜ್ಜೆಗಳನ್ನು ಹಾಕುವವರು; ಅಡಿಗರು ದೊಡ್ಡ ಕೋಟೆ ಕಟ್ಟುವವರಂತೆ ಕವಿತೆ ಕಟ್ಪುವವರಾದರೆ, ರಾಮಾನುಜನ್ ಕುಸುರು ಕೆಲಸದ ಕುಶಲ ಕರ್ಮಿ. ಇದೆಲ್ಲವೂ ವಿಮರ್ಶಕರು ಈಗಾಗಲೇ ಗುರುತಿಸಿರುವ ವಿಷಯಗಳೇ. ಆದರೆ ವಿಮರ್ಶಕರು ಈ ಪಟ್ಟಿಗೆ ಸೇರಿಸಬಹುದಾದ ಇನ್ನೊಂದು ವಿಷಯವೆಂದರೆ ಅಡಿಗರು ಹೊಸೆಯುವ ಸಮಾಸ ಪದಗಳು; ರಾಮಾನುಜನರಲ್ಲಿ ಇದು ವಿರಳ. ಅಡಿಗರ ಕಾವ್ಯ ಶಬ್ದಗಳ ಮಟ್ಟದಲ್ಲಿ (ಸದ್ದು ಮತ್ತು ಪದ ಎಂಬ ಎರಡೂ ಅರ್ಥಗಳಲ್ಲಿ) ನಮ್ಮನ್ನು ತಲುಪಿದರೆ, ರಾಮಾನುಜನ್‍ರದ್ದು ವಾಕ್ಯಗಳ ಮಟ್ಟದಲ್ಲಿ ತಲಪುವಂಥದು. ಇಬ್ಬರೂ ಟಿ. ಎಸ್. ಎಲಿಯಟ್ ಹೇಳುವ ಅಸಂಗತ ಸಂಗತಿಗಳನ್ನು ಬಲವಂತವಾಗಿ ಒಂದೇ ನೊಗಕ್ಕೆ ಕಟ್ಟುತ್ತಾರಾದರೂ, ಅಡಿಗರು ಹಾಗೆ ಮಾಡುವುದರಲ್ಲಿನ ‘ಹಿಂಸೆ’ ಢಾಳಾಗಿ ನಮಗೆ ಕಾಣಿಸುತ್ತದೆ; ರಾಮಾನಜನ್‌ರದ್ದು ಹಾಗೆ ಕಾಣಿಸುವುದಿಲ್ಲ. ಅಡಿಗರ ನಂತರದ ಕನ್ನಡ ಕಾವ್ಯ ಈ ಎರಡು ಧ್ರವಗಳ ಮಧ್ಯೆ ಆಚೀಚೆ ಸರಿದಿರುವ ಹಾಗೆ ತೋರಿದರೆ ಆಶ್ಚರ್ಯವಿಲ್ಲ. ಅಡಿಗರ ಕಾವ್ಯದ ನಿರೂಪಕರಾದ ಅನಂತಮೂರ್ತಿಯವರ ಕಾವ್ಯವನ್ನೇ ತೆಗೆದುಕೊಂಡರೆ ಅದು ಅಡಿಗರ ಬದಿಯಿಂದ ಸುರುವಾಗಿ ರಾಮಾನುಜನ್ ಪಕ್ಕದತ್ತ ಸರಿಯುವುದು ಕಂಡುಬರುತ್ತದೆ.

ಆದರೆ ಕಾವ್ಯ ಕೇವಲ ಸ್ವರೂಪ ಮಾತ್ರವೇ ಅಲ್ಲ, ಅದೊಂದು ಅರ್ಥಪೂರ್ಣ ರಚನೆಯೂ ಹೌದು; ಭಾಷೆಯಾಗಿ ಅದು ಓದುಗರಲ್ಲಿ ವಿಚಾರಗಳನ್ನು ಉಂಟುಮಾಡುತ್ತದೆ. ಈ ನಿಟ್ಟಿನಿಂದ ನೋಡಿದರೆ, ಅಡಿಗರ ಕಾವ್ಯ ಆಧುನಿಕವಾಗಿದ್ದೂ ಶುದ್ಧ ಪರಂಪರೆಯೊಂದಕ್ಕೆ ಮುಖಮಾಡಿರುವುದು ಕಂಡುಬರುತ್ತದೆ. ಅರ್ಥಾತ್ ಅಡಿಗರಿಗೆ ‘ಸ್ವರ್ಣಯುಗ’ವೊಂದರಲ್ಲಿ ನಂಬಿಕೆಯಿರುವಂತಿದೆ; ಈ ಯುಗವನ್ನು ಬೇಕಾದರೆ ನಾವು ರಾಮರಾಜ್ಯವೆಂದು ಕರೆಯಬಹುದು, ಪುರಾತನ ಪುನರುತ್ಥಾನವೆಂದು ಕರೆಯಬಹುದು. ಆದರೆ ಇದೆಲ್ಲಾ ಒಂದು ರೂಪಕವೆ೦ದು ತಿಳಿಯಬೇಕು; ಯಾಕೆಂದರೆ, ಅಂಥದೊಂದು ಆದರ್ಶಯುಗ ಈ ಮೊದಲು ಎಂದಾದರೂ ಅಸ್ತಿತ್ವದಲ್ಲಿ ಇತ್ತೆಂಬ ನಂಬಿಕೆಯನ್ನು ಅಡಿಗರಂಥ ವಿಚಾರವಂತರಿಗೆ ಆರೋಪಿಸುವುದು ತಪ್ಪಾಗುತ್ತದೆ. ಆದರೂ ಅವರು ಈ ಆದರ್ಶವನ್ನು ಆರ್ಷೇಯ ಸಂಜ್ಞೆಗಳಿಗೆ ತಳಕು ಹಾಕಿದ್ದರು ಎನ್ನುವುದನ್ನು ಅಲ್ಲಗಳೆಯಲಾಗುವುದಿಲ್ಲ: ಅವರ ಕಾವ್ಯಕ್ಕೆ ರೂಪಕಶಕ್ತಿ ಬರುವುದು ಆರ್ಷೇಯ ಮತ್ತು ವೈದಿಕ ಪ್ರತೀಕಗಳಿಂದಲೇ. ಅಪ್ಪಟ ಪುತ್ಥಳಿ ಚಿನ್ನ, ಶುದ್ಧವಾದ ಹವೆ ಮತ್ತು ನೀರು, ಪೂರ್ಣಾವತಾರ, ಬೃಂದಾವನ, ಗುಡಿಗೋಪುರಗಳ ಬಂಗಾರ ಶಿಖರ ಇವೆಲ್ಲ ಈ ಆದರ್ಶದ ರೂಪಗಳಾದರೆ, ಅಸಲು ಕಸುಬು, ಅಪರಂಜಿ ವಿದ್ಯೆಗಳು ಹಾಗೂ ಪಠಣ ಮಂತ್ರಗಳು ಇವನ್ನು ಸಾಧಿಸುವುದಕ್ಕೆ ಅಗತ್ಯವಾದ ವಿಧಾನಗಳಾಗುತ್ತವೆ. ಆದರೂ ಅಡಿಗರದು ಋಷಿ ವಿಧಾನವಲ್ಲ, ಕವಿ ವಿಧಾನ. ‘ಶರದ್ಗೀತ’ದಲ್ಲಿ ಅವರೆನ್ನುವುದು:

ನಿಮಗೆ ಕಾಣದ್ದು ಯಾವುದೋ ಅದನ್ನೇ ಕುರಿತು
ಹೇಳುವುದು ಋಷಿ ಕೆಲಸ. ತನಗೆ ಕಾಣದ್ದು ಯಾವುದೋ ಅದನ್ನೇ ಕುರಿತು
ಹಾಡುವುದು ಕವಿ ಕೆಲಸ. ಕಾಣ್ಕೆ ಕಣ್ಕಟ್ಟುಗಳ
ನಡುವೆ ಗೆರೆ ಬಲು ತೆಳುವು.
ಆ ಗೆರೆಯ ಮೇಲೆ ನಿಂತೇನೆ ಲೊಚಗುಟ್ಟಿದರು
ಮಂಕುಬೂದಿಯನೆರಚಿದಂತೆ.

ತಾನು ಆ ತೆಳು ಗೆರೆಯ ಮೇಲೆ ನಿ೦ತಿದ್ದೇನೆಂಬ ಅರಿವಿರುವ ಕವಿಗೆ ಮಾತ್ರವೇ ಬಹುಶಃ ‘ಮಂಕುಬೂದಿ’ಯೆರಚುವ ಆಪಾದನೆಯಿಂದ ಪಾರಾಗುವುದು ಸಾಧ್ಯ. ಈ ಪ್ರಾಮಾಣಿಕತೆಯೇ ಅಡಿಗರ ಕವಿತೆಗಳನ್ನು ನಿಜಕ್ಕೂ ಕಾಪಾಡುವುದು. ಎಂದರೆ ಅಡಿಗರು ಕಲ್ಪಿಸುವ ಆದರ್ಶ ರಾಜ್ಯ ಯಾವುದೇ ಭ್ರಮಾಧೀನತೆಯ ಮೇಲೆ ನಿ೦ತುದಲ್ಲ.

ಟಿ. ಎಸ್. ಎಲಿಯಟ್ ಮತ್ತು ಅಡಿಗರ ನಡುವಣ ಸಾದೃಶ್ಯವನ್ನು ಹೆಚ್ಜಿನವರೂ ಗುರುತಿಸಿದ್ದಾರೆ. ಈ ಸಾದೃಶ್ಯ ಕೇವಲ ಶೈಲಿಗೆ ಮಾತ್ರವೇ ಸೀಮಿತವಾದುದಲ್ಲ. ‘ವೇಸ್ಟ್ ಲ್ಯಾಂಡ್”, ’ಹಾಲೋಮೆನ್’, ‘ಫೋರ್ ಕ್ವಾರ್ಟೆಟ್ಸ್” ಮುಂತಾದ ತನ್ನ ಮುಖ್ಯ ಕವಿತೆಗಳ ಮೂಲಕ ಇಡೀ ಯುರೋಪಿನ ಸಮಕಾಲೀನ ಸಂಸ್ಕೃತಿಯ ಮೇಲೆ ಭಾಷ್ಯ ಬರೆದವನು ಎಲಿಯಟ್; ಅಡಿಗರಾದರೆ ‘ನಡೆದುಬಂದ ದಾರಿ’ ಸಂಕಲನದಿಂದ ಹೆಚ್ಚಿನ ತೀವ್ರತನದಲ್ಲಿ ಸಮಕಾಲೀನ ಭಾರತೀಯ ಸಂಸ್ಕೃತಿ ಹಾಗೂ ರಾಜಕೀಯಕ್ಕೆ ಸ್ಪಂದಿಸಿದವರು. ಕಾವ್ಯಭಾಷೆಯಲ್ಲಿ ಕ್ರಾಂತಿ ತಂದ ಎಲಿಯೆಟ್ ಸಾಂಸ್ಕೃತಿಕವಾಗಿ ಮತ್ತು ರಾಜಕೀಯವಾಗಿ ಕನ್ಸರ್ವೇಟಿಸಂ ತೋರಿದ ಕವಿಯಾಗಿದ್ದ ಎನ್ನುವುದು ಗಮನಾರ್ಹ. ಅಂತೆಯೇ ಅಡಿಗರು ‘ನಡೆದು ಬಂದ ದಾರಿಕಡೆಗೆ ತಿರುಗಿಸಬೇಡ-ಕಣ್ಣ-ಹೊರಳಿಸಬೇಡ’ ಎಂದರೂ, ಕೃಷ್ಣ ಬುದ್ದ ಅಲ್ಲಮರನ್ನು ತಮ್ಮ ಕನಸಿನ ಹಾದಿಯ ಮುಂದಕ್ಕೆ ಹಾಕುವುದರ ಮೂಲಕ, ಈ ಮಾತಿನ ಅಕ್ಷರಶವಾದ ಅರ್ಥವನ್ನು ನಿರಾಕರಿಸುತ್ತಾರೆ.

ಆದರೆ ಎಲಿಯಟ್‍ನಷ್ಟೇ ಅಡಿಗರಿಗೆ ಸಾಮ್ಯವಿರುವ ಇನ್ನೊಬ್ಬ (ಐರಿಷ್) ಇಂಗ್ಲಿಷ್ ಕವಿಯಿದ್ದಾನೆ: ಈತ ಅನಂತಮೂರ್ತಿಯವರು ಆ ಕಾಲಕ್ಕೆ ಕೊಂಡಾಡುತ್ತಿದ್ದ, ಐರಿಷ್ ಲೋಕ ಸಂಸ್ಕೃತಿಯ ಪುನರುತ್ಥಾನ ಪ್ರೀತಿಯ ಯೇಟ್ಸ್ ಅಲ್ಲ, ಯೇಟ್ಸ್‌ಗಿಂತಲೂ ಮೂರು ಶತಮಾನಗಳಷ್ಟು ಹಿಂದಣ, ಕ್ರಿಶ್ಚಿಯನ್ ಅಭಿಜಾತ ಸಂಸ್ಕೃತಿಯ ಹರಿಕಾರ ಜಾನ್ ಮಿಲ್ಟನ್! ಕ್ಯಾಥೊಲಿಕ್ ಪಂಥಕ್ಕೆ ಮರಳಿದ ಎಲಿಯೆಟ್ ಮತ್ತು ಪ್ರಾಟೆಸ್ಟೆಂಟ್ ಪಂಥಕ್ಕೆ ಬದ್ಧನಾದ ಮಿಲ್ಟನ್ ಇಬ್ಬರ ಜತೆಯೂ ಅಡಿಗರಿಗೆ ಇರುವ ಸಾಮ್ಯ ಒಂದು ವಿರೋಧಾಭಾಸದಂತೆ ಕಂಡರೂ, ವಾಸ್ತವದಲ್ಲಿ ಇಬ್ಬರಿಗೂ ಈ ಪಂಥಗಳನ್ನು ಮೀರಿದ ಮೂಲಧರ್ಮದಲ್ಲಿ ವಿಶ್ವಾಸವಿತ್ತೆಂದು ತಿಳಿದರೆ ಇದು ಅರ್ಥವಾಗುತ್ತದೆ. ಮಧ್ಯಯುಗದ ನೆನಪುಗಳನ್ನು ಹೊತ್ತ ಹದಿನೇಳನೆಯ ಶತಮಾನದ ಮಿಲ್ಟನ್ ಆಧುನಿಕತೆಯ ಸ್ವಾತಂತ್ರ್ಯ ಹರಡಿದ ಇಪ್ಪತ್ತನೆಯ ಶತಮಾನದ ಎಲಿಯೆಟ್‌ಗಿ೦ತಲೂ ಹೆಚ್ಚು ತೀವ್ರವಾದಿಯಾಗಿದ್ದವನು; ಹಾಗೂ ವ್ಯಕ್ತಿಸ್ವಾತಂತ್ರ್ಯ, ಅಭಿಪ್ರಾಯ ಸ್ವಾತಂತ್ರ್ಯ, ವಿವಾಹ ವಿಚ್ಛೇದನ ಮುಂತಾದ ವಿಷಯಗಳ ಕುರಿತು ವಾದಿಸಿ ಅರಸೊತ್ತಿಗೆಯನ್ನು ಎದುರಿಗೆ ಹಾಕಿಕೊಂಡವನು ಕೂಡಾ. ಇಂಗ್ಲಿಷ್‌ನ ಮೊತ್ತ ಮೊದಲ ಲ್ಯಾಟಿನ್‌ಮಯ ಶೈಲಿಯ ಅಭಿಜಾತ ಮಹಾಕಾವ್ಯ ‘ಪ್ಯಾರಡೈಸ್ ಲಾಸ್ಟ್’ ಬರೆದವನೂ ಅವನೇ “ದೇವರ ದಾರಿಗಳನ್ನು ಜನರಿಗೆ ವಿವರಿಸುವುದಕ್ಕೆ”. ಅಡಿಗರು ಅಂಥ ಮಹಾಕಾವ್ಯವನ್ನೇನೂ ಬರೆಯಲಿಲ್ಲವಾದರೂ ಅವರ ಎಲ್ಲ ಕವಿತೆಗಳೂ ನಮ್ಮನ್ನು ಅಂಥದೊಂದು ದಿಕ್ಕಿಗೆ ಅಭಿಮುಖವಾಗಿಸಿದ್ದು ಮಾತ್ರ ನಿಜ. ಮಧ್ಯಯುಗದ ಕತ್ತಲೂ ಆಧುನಿಕತೆಯ ಬೆಳಕೂ ಒಟ್ಟೊಟ್ಚಿಗೇ ರೂಪಿಸಿದ ಭಾರತದ ಕವಿಯೊಬ್ಬರು ಈ ರೀತಿ ಮಿಲ್ಟನ್ ಮತ್ತು ಎಲಿಯೆಟ್‍ನ್ನ ತಮ್ಮ ಕವಿತೆಗೆ ಅನುಸಂಧಿಸಿದ್ದರಲ್ಲಿ ಆಶ್ಚರ್ಯವಿಲ್ಲ.

ಮಿಲ್ಟನ್‍ನ ಜತೆಗಿನ ಅಡಿಗರ ಸಾದೃಶ್ಶವನ್ನು ನೋಡುವುದಕ್ಕೆ ನಾವು ಪ್ಯಾರಡೈಸ್ ಲಾಸ್ಟ್‌ನ ತನಕ ಹೋಗಬೇಕಾದ್ದಿಲ್ಲ; ತನ್ನ ಕೇಂಬ್ರಿಜ್ ವಿದ್ಯಾಭ್ಯಾಸದ ದಿನಗಳಲ್ಲಿ ಮಿಲ್ಟನ್ ಬರೆದಿದ್ದ ‘ಲಿಸಿಡಸ್’ ಎಂಬ ಶೋಕಗೀತೆಯೊಂದೇ ಸಾಕು. ಎಡ್ವರ್ಡ್ ಕಿಂಗ್ ಎಂಬ ಸಹಪಾಠಿ ಮಿತ್ರನೊಬ್ಬನ ಅಕಾಲ ಮರಣಕ್ಕೆ ಕವಿ ಶೋಕಿಸುವ ಪುರಾತನ ಗ್ರೀಕ್ ‘ಹುಲ್ಲಗಾವಲು’ ಸಂಪ್ರದಾಯದ ಕವಿತೆ ಇದು. ಕವಿಯಾಗುವ ಎಲ್ಲ ಲಕ್ಷಣಗಳನ್ನೂ ಆರಂಭದಿಂದಲೇ ತೋರಿದ ಕಿಂಗ್ ಮುಂದೆ ಕ್ರಿಶ್ಚಿಯನ್ ಧರ್ಮದರ್ಶಿಯಾಗುವ ಸಾಧ್ಯತೆಯೂ ಇತ್ತು. ಮಿಲ್ಟನ್ ತನ್ನ ಕವಿತೆಯಲ್ಲಿ ಈತನನ್ನು ಲಿಸಿಡಸ್ ಎಂದು ಕರೆಯುತ್ತಾನೆ. ಲಿಸಿಡಸ್ ಒಬ್ಬ ನಿಷ್ಠಾವಂತ ಕುರಿಗಾಹಿ. ತನ್ನ ಕುರಿಗಳನ್ನು ಚೆನ್ನಾಗಿ ನೋಡಿಕೊಳ್ಳುವುದಲ್ಲದೆ, ಆತ ಕೊಳಲಿನಲ್ಲಿ ಹಾಡುಗಳನ್ನೂ ಹಾಡುತ್ತಿರುತ್ತಾನೆ. ಆತ ಅಕಾಲಿಕವಾಗಿ ಸಾವನ್ನಪ್ಪಿದ ಪರಿಣಾಮವನ್ನು ಮಿಲ್ಟನ್ ಕವಿತೆಯಲ್ಲಿ ವಿವರಿಸುತ್ತಾನೆ. ಈ ವಿವರಣೆಗಳು ಕವಿ ಸಮಕಾಲೀನ ಧಾರ್ಮಿಕ ಮತ್ತು ಸಾಮಾಜಿಕ ಸ್ಥಿತಿಯ ಮೇಲೆ ಮಾಡುವ ಟೀಕಾಪ್ರಹಾರಗಳೂ ಆಗುತ್ತವೆ. ಕ್ರಿಶ್ಚಿಯನ್ ಚರ್ಚಿನ ಬುನಾದಿಯೆನಿಸಿದ ಸೈಂಟ್ ಪೀಟರ್ ಬಂದು ಲಿಸಿಡಸ್‍ನ ಕಾರ್ಯನಿಷ್ಠೆಯನ್ನು (ಅರ್ಥಾತ್ ಧರ್ಮನಿಷ್ಠೆಯನ್ನು) ಪ್ರಶಂಸಿಸುತ್ತಲೇ, ಇತರ ಕುರಿಗಾಹಿಗಳ (ಧರ್ಮದರ್ಶಿಗಳ) ಭ್ರಷ್ಠತನವನ್ನು ದೂಷಿಸುತ್ತಾನೆ.

The hungry sheep look up, and are not fed,
But, swolln with wind, and the rank mist they draw,
Rot inwardly, and foul cantagion spread;
Besides what the grim wolf with privy paw
Daily devours apace, and nothing said.

ಹಸಿದ ಕುರಿಗಳು ಮೇಲೆ ನೋಡುತ್ತವೆ, ತಿನಿಸಿಲ್ಲ,
ಆದರೆ, ಬರಿಗಾಳಿಗೆ ಉಬ್ಬರಿಸಿ, ಅವರೆಳೆಯುವ ಕೆಟ್ಟ ಮಂಜು
ಒಳಗೊಳಗೇ ಕೊಳೆಯುವುದು, ಅಂಟುರೋಗ ಹರಡುವುದು;
ಹಾಗೂ ಪಂಜ ಬಚ್ಚಿಟ್ಟ ಬಿರುಮುಖದ ತೋಳ
ಪ್ರತಿದಿನ ನಂಗುತ್ತ ಬರುತ್ತಿದೆ, ಮತ್ತು ಯಾರೂ ಮಾತಾಡುವುದಿಲ್ಲ.

ಕುರಿಗಾಹಿಯೆ೦ಬ ಕಲ್ಪನೆ ಧರ್ಮಕ್ಕೆ ಸೇರಿದ ಒಂದು ಮೂಲಭೂತ ಪ್ರತಿಮೆಯೆಂದು ನೆನಪಿಗೆ ತಂದುಕೊಂಡರೆ ಇಲ್ಲಿ ಕವಿ ಉಪಯೋಗಿಸುವ ರೂಪಕ ಅರ್ಥವಾಗುತ್ತದೆ. ಅಡಿಗರ ‘ಭೂತ’ದಲ್ಲೂ ಈ ಕೆಟ್ಟ ಹವೆಯ, ಕೊಳೆತದ ಪ್ರತಿಮೆ ಬರುತ್ತದೆ. ಇಲ್ಲಿ ‘ಹುಗಿದ ಹಳೆಭಾವಿಯೊಳ ಕತ್ತಲ ಹಳಸು ಗಾಳಿ ಅಂಬೆಗಾಲಿಟ್ಟು ತಲೆಕೆಳಗು’ ತೆವಳುತ್ತ ಏರುತ್ತದೆ. ಅಂತರಾಳಗಳಲ್ಲಿ ನಿಂತ ನೀರಿದೆ. ಇದರೊಳಗಿನ ಭೂತಕಾಲದ ಭ್ರೂಣಗಳು ಪಿತೃಪಿತಾಮಹರ ಪ್ರೇತಾತ್ಮಗಳು. ‘ಉಚ್ಚಾಟಣೆಯ, ತರ್ಪಣದ ತಂತ್ರ ಬಲ್ಲೆ, ಆದರು ಮಂತ್ರ ಮರೆತೆ.’ ಮಿಲ್ಟನ್ ಮತ್ತು ಅಡಿಗ ಇಬ್ಬರೂ ರಾಜಕೀಯ ಮತ್ತು ಧಾರ್ಮಿಕ ಆದರ್ಶ ರಾಜ್ಯದ ಕನಸು ಕಾಣುವವರು, ಇಬ್ಬರೂ ತಂತಮ್ಮ ವಿಶ್ವಾಸದಲ್ಲಿ ಕವಿತೆಯನ್ನು ಖಡ್ಗದಂತೆ ಝಳಪಿಸುವವರು.

ಮಹಾತ್ಮಾ ಗಾಂಧಿಯವರ ಮೇಲೆ ಪ್ರಭಾವ ಬೀರಿದ ಹತ್ತೊಂಬತ್ತನೆಯ ಶತಮಾನದ ಬ್ರಿಟಿಷ್ ಲೇಖಕ ಜಾನ್ ರಸ್ಕಿನ್ ತನ್ನ ‘ಸೇಸಮೆ ಏಂಡ್ ಲಿಲೀಸ್’ ಎಂಬ ಭಾಷಣಸಂಕಲನದಲ್ಲಿ ‘ಲಿಸಿಡಸ್’ ಮತ್ತು ‘ಪ್ಯಾರಡೈಸ್ ಲಾಸ್ಟ್’ಗಳ ಕುರಿತು ವಿಶ್ಲೇಷಣೆ ಮಾಡುತ್ತಾ ಪ್ರಾಸ್ತಾವಿಕವಾಗಿ ಒಂದು ಮಾತು ಹೇಳುತ್ತಾನೆ: ಮಿಲ್ಟನ್ ಯಾಕೆ ಶೇಕ್ಸ್‌ಪಿಯರಿನಷ್ಟು ದೊಡ್ಡ ಕವಿ ಅಲ್ಲ ಎಂಬುದರ ಬಗ್ಗೆ. ಯಾಕೆಂದರೆ, ಮಿಲ್ಟನ್‍ನ ಧೋರಣೆ ನಮಗೆ ಗೊತ್ತಾಗುತ್ತದೆ. ಆದರೆ ಶೇಕ್‍ಸ್ಪಿಯರನದು ಗೊತ್ತಾಗುವುದಿಲ್ಲ. ಶೇಕ್ಸಪಿಯರ್ ಯಾವುದನ್ನೂ ಪ್ರತಿನಿಧಿಸುವುದಿಲ್ಲ, ಯಾರೊಬ್ಬನ ಪಕ್ಷವನ್ನೂ ವಹಿಸುವುದಿಲ್ಲ. ಅವನು ಇಡೀ ಲೋಕಕ್ಕೇ ಸೇರಿದವನಂತೆ ಇದ್ದಾನೆ. ಕನ್ನಡದ ಅಡಿಗರ ಬಗ್ಗೆ ಈ ಮಾತನ್ನು ಹೇಳುವಂತಿಲ್ಲ. ಅವರದು ಪಕ್ಷವಹಿಸುವ ಪ್ರತಿವಾದಿ ಕವಿತೆ. ರಾಮಾನುಜನ್ ಇದಕ್ಕೆ ಹೊರತು ಎನ್ನಬಹುದು; ಆದರೆ ರಾಮಾನುಜನ್ ಭಾಷೆ ಎಷ್ಟೊಂದು ಲಘುವಾಗಿದೆಯೆಂದರೆ, ಅವರ ಪಕ್ಷಾತೀತತೆ ಒಂದು ಆಯ್ಕೆಯೆನಿಸುವುದಿಲ್ಲ. ನ್ಯೂನತೆಯೆನಿಸುತ್ತದೆ. ಕೀಟ್ಸ್ ಶೇಕ್ಸ್‌ಪಿಯರನಲ್ಲಿ ಕಾಣುವ ಹಾಗೂ ಸಾರ್ವತ್ರಿಕವಾಗಿ ಪ್ರತಿಪಾದಿಸುವ “ನೆಗೆಟಿವ್ ಕೇಪೆಬಿಲಿಟಿ” (ಋಣಾತ್ಮಕ ಸಾಧ್ಯತೆ) ಅಡಿಗರಿಗೆ ಸಾಧ್ಯವಾಗುತ್ತಿದ್ದರೆ ಅವರು ಇದಕ್ಕಿಂತ ದೊಡ್ಡ ಕವಿಯಾಗುತ್ತಿದ್ದರು. ಆದರೆ ಯಾವ ಅಡಿಗತ್ವ ಅವರನ್ನು ಕವಿಯಾಗಿ ಮಾಡಿತೋ ಅದೇ ಅವರ ಮೇಲೆ ಮಿತಿಯನ್ನೂ ಹೇರಿತು. ಶೇಕ್ಸ್‌ಪಿಯರಿನಂತೆ ವ್ಯಕ್ತಿತ್ವದ ಅನಾಮಿಕತೆಗೆ ಒಳಗಾಗುವುದು ಬಹುಶಃ ಇಂದಿನವರಿಗೆ ಸಾಧ್ಯವಿಲ್ಲ.

ಟಿಪ್ರಣಿ: ಈ ಲೇಖನ ಮೊದಲು ವಿಜಯ ಕರ್ನಾಟಕದ ‘ಆಳ ನಿರಾಳ’ ಅಂಕಣದಲ್ಲಿ ಪ್ರಕಟವಾಯಿತು. ನ೦ತರ ವಿಜಯ ಶಂಕರ್ ಅವರು ಸಂಪಾದಿಸಿದ ‘ಪ್ರತಿಮಾಲೋಕ: ಗೋಪಾಲಕೃಷ್ಣ – ಮರು ಓದು’ ಎಂಬ ಪುಸ್ತಕದಲ್ಲಿ. ಅಂಕಣದ ಲೇಖನ ಪ್ರಕಟವಾದಾಗ ಒಂದಿಬ್ಬರು ನನ್ನ ಕೆಲವು ಮಾತಿಗೆ ಅಸಮಾಧಾನ ವ್ಯಕ್ತಪಡಿಸಿದರು. ಬಹುಶಃ ಅಡಿಗರು ಪಕ್ಷ ಹಿಡಿಯುವ ಕವಿ ಎ೦ದು ನಾನಂದುದು ಅವರಿಗೆ ಸರಿ ಬರಲಿಲ್ಲವೋ ಏನೋ. ಆದರೆ ನಾನು ಅಡಿಗರನ್ನು ವಿಶ್ವದ ಸರ್ವಶ್ರೇಷ್ಠ ಕವಿಗಳಾದ ಶೇಕ್ಸ್‌ಪಿಯರ್ ಮತ್ತು ಮಿಲ್ಟನ್ ಜತೆ ಹೋಲಿಸಿ ಈ ಮಾತನ್ನು ಹೇಳಿದ್ದೇನೆ. ಅಡಿಗರು ತಮ್ಮ ರಾಜಕೀಯ ಒಲವು-ತಿರಸ್ಕಾರಗಳನ್ನು ಹಲವು ಕವಿತೆಗಳಲ್ಲಿ ಸಾಕಷ್ಟು ವ್ಯಕ್ತವಾಗಿಯೆ ತೋರಿಸಿಕೊಂಡಿದ್ದಾರೆ: ಉದಾಹರಣೆಗೆ, ‘ನೆಹರೂ ನಿವೃತ್ತರಾಗುವುದಿಲ್ಲ’ ಮತ್ತು ‘ಎಡ-ಬಲ.’ ಅಡಿಗರು ತೋರಿಸುವ ದ್ವೇಷ ಕೆಲವು ಸಲ ತೀರಾ ವೈಯಕ್ತಿತ ಎನಿಸುತ್ತದೆ. ‘ಗಜೇಂದ್ರ ಮೋಕ್ಷ’ದಲ್ಲಿನ ಈ ಸಾಲುಗಳನ್ನು ನೋಡಿ:

ಡಾಂಗೆ ಮಾಸ್ಕೋಗೆಂತೊ ಅಂತೆ ನಮ್ಮಿನ್ನೊಬ್ಬ
ಮುತ್ಸದ್ದಿಯನ್ನು ಪರಮಾತ್ಮನೆಡೆಗೆ
ಕಳಿಸುವುದಗತ್ಯ.

ಈ ಮುತ್ಸದ್ದಿ ನೆಹರೂ ಇರಬಹುದೇ ಎಂಬ ಸಂದೇಹ ಏಳುತ್ತದೆ. ಇಂಥ ದ್ವೇಷ ಇಲ್ಲದೆ ಇರುತ್ತಿದ್ದರೆ ಅಡಿಗರು ಇನ್ನಷ್ಟು ದೊಡ್ಡ ಕವಿಯಾಗುತ್ತಿದ್ದರು ಎನ್ನುವುದು ನನ್ನ ಅಭಿಪ್ರಾಯ. ಆದರೂ ಸಿಟ್ಟು, ದ್ವೇಷ, ಅವುಗಳ ಹಿಂದಿನ ಆದರ್ಶ ಕಲ್ಪನೆ ಇಲ್ಲದ ಅಡಿಗರನ್ನು ಊಹಿಸಲೂ ಆಗುತ್ತಿಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೂರು
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೦

ಸಣ್ಣ ಕತೆ

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…