ಗಂಟೆಗೆರೆಯ ಗುಲಾಮತನ

ಗಂಟೆಗೆರೆಯ ಗುಲಾಮತನ

ರಶಿಯನ್ ಲೇಖಕ ಚೆಕೋವ್‍ನ ಸಣ್ಣಕತೆಯೊಂದಿದೆ: ‘ವಾರ್ಡ್ ನಂಬರ್ ಸಿಕ್ಸ್’ (ಆರನೆಯ ವಾರ್ಡು). ಇದೊಂದು ಹುಚ್ಚಾಸ್ಪತ್ರೆಗೆ ಸಂಬಂಧಿಸಿದ ಕತೆ. ಆರನೆಯ ವಾರ್ಡಿನ ಒಂದು ಕೋಣೆಯಲ್ಲಿ ಒಬ್ಬ ರೋಗಿಯಿರುತ್ತಾನೆ. ಅಲ್ಲಿಗೆ ಹೊಸದಾಗಿ ಒಬ್ಬ ತರುಣ ಡಾಕ್ಟರನ ನೇಮಕವಾಗುತ್ತದೆ. ಈ ಡಾಕ್ಟರ್ ರೋಗಿಯಲ್ಲಿ ವಿಶೇಷ ಆಸಕ್ತಿ ವಹಿಸುತ್ತಾನೆ. ರೋಗಿಯ ಜತೆ ಇತರ ಡಾಕ್ಟರರಿಗಿಂತ ಜಾಸ್ತಿಯೇ ಮಾತಾಡುತ್ತಿರುತ್ತಾನೆ. ಇದು ಇತರ ಡಾಕ್ಟರುಗಳಿಗೆ ಹಿಡಿಸುವುದಿಲ್ಲ. ಒಮ್ಮೆ ರೋಗಿ ಈ ಡಾಕ್ಟರಿಗೆ ಒಂದು ಪ್ರಶ್ನೆ ಕೇಳುತ್ತಾನೆ: ‘ಡಾಕ್ಟರೇ, ನೀವು ನನ್ನನ್ನು ಹುಚ್ಚನ ಮಾಡಿ ಇಲ್ಲಿ ಕೂಡಿಹಾಕಿದ್ದೀರಿ. ವಾಸ್ತವದಲ್ಲಿ ಹೊರಗಿನವರೇ ಹುಚ್ಚರಾಗಿದ್ದು, ನಾನೇ ಬುದ್ಧಿಶಾಲಿಯಿರಬಹುದಲ್ಲವೇ?’ ಈ ಪ್ರಶ್ನೆ ತನ್ನ ಮರ್ಮಕ್ಕೇ ಹೊಡೆದಂತೆನಿಸಿ, ಡಾಕ್ಟರ್ ಕಂಗೆಟ್ಟುಹೋಗುತ್ತಾನೆ. ಅಂದಿನಿಂದ ಡಾಕ್ಟರ್‌ನ ಯೋಚನೆ ಹೆಚ್ಚಾಗುತ್ತದೆ. ಕೊನೆಗೊಂದು ದಿನ ರೋಗಿ ಸತ್ತು ಹೋಗಿ, ಚಾಕರರು ಬಂದು ಹೆಣವನ್ನು ಹೊರಕ್ಕೆ ಸಾಗಿಸುತ್ತಾರೆ. ಕಾಲಾಂತರದಲ್ಲಿ ನಮ್ಮ ಡಾಕ್ಟರ್ ಕೂಡಾ ಒಬ್ಬ ಹುಚ್ಚ ಎಂಬ ತೀರ್ಮಾನಕ್ಕೆ ಆಸತ್ರೆಯ ಇತರ ಡಾಕ್ಬರರು ಬಂದು ಅವನನ್ನು ಇದೇ ಕೋಣೆಯಲ್ಲಿ ಕೂಡಿಹಾಕುತ್ತಾರೆ.

ಇದನ್ನು ನಾನು ಓದಿ ಹಲವಾರು ವರ್ಷಗಳಾಗಿದ್ದು ಕೆಲವೇ ತೋರ ವಿವರಗಳು ಮಾತ್ರ ನೆನೆಪಿನಲ್ಲಿದ್ದರೂ, ಇದೀಗ ಓದಿದಷ್ಟೇ ಈ ಬಗ್ಗೆ ಹೇಳಿದಾಗಲೂ ಅನಿಸುತ್ತದೆ. ಯಾಕೆಂದರೆ, ನನ್ನನ್ನು ಸಾಕಷ್ಟು ತಲ್ಲಣಗೊಳಿಸಿದ ಕತೆ ಇದು. ಇದು ನನ್ನನ್ನೂ ಹುಚ್ಚನ ಮಾಡದೆ ಬಿಡುವುದಿಲ್ಲ ಎಂದುಕೊಂಡಿದ್ದೆ. ಕಾರಣ, ಹುಚ್ಚ, ಹುಚ್ಚಾಸ್ಪತ್ರೆ ಎಂಬ ಕೆಟಗರಿಗಳೇ ಹಾಗೆ. ಬಹಳ ಗಾಢವಾಗಿ ನಮ್ಮನ್ನು ಕಾಡುವಂಥವು. ಚಿಕ್ಕಂದಿನಲ್ಲಿ ನಾನು ಕೆಲವು ವಾಸ್ತವ ಕತೆಗಳನ್ನು ಕೇಳಿದ್ದೆ. ಆಸ್ತಿಯನ್ನು ಒಳಹಾಕುವುದಕ್ಕಾಗಿ ಕುಟುಂಬದಲ್ಲಿ ಸಾಧುವಾದ ಯಾರಾದರೂ ಒಬ್ಬನನ್ನು ಹುಚ್ಚನೆಂದು ಕರೆದು ಅವನನ್ನು ಒಂದು ಕೋಣೆಯೊಳಗೆ ಕೂಡಿಹಾಕುವುದು! ಹೀಗೆ ಕೂಡಿಹಾಕಿದ ವ್ಯಕ್ತಿ ಹುಚ್ಚನಲ್ಲದಿದ್ದರೂ, ಎಲ್ಲರ ಕಣ್ಣಿಗೆ ಹುಚ್ಚನಾಗಿಯೇ ಕಾಣಿಸುತ್ತಾನೆ. ಆತ ಚೀರಾಡುತ್ತಾನೆ, ಬೊಬ್ಬೆ ಹಾಕುತ್ತಾನೆ, ಎಲ್ಲರನ್ನೂ ಯಾಚಿಸುತ್ತಾನೆ ಅಥವಾ ಬಯ್ಯುತ್ತಾನೆ, ಕೊಳಕಾಗುತ್ತಾನೆ, ಅವನಿಗೆ ಕೆಲವು ದೈಹಿಕ ರೋಗಗಳೂ ಅಂಟಿಕೊಳ್ಳುತ್ತವೆ, ಸರಿಯಾಗಿ ಆಹಾರವಿಲ್ಲದೆ ಕ್ಷೀಣಿಸುತ್ತಾನೆ, ಕೊನೆಗೆ ಮೌನಿಯಾಗುತ್ತಾನೆ. ಒಂದು ದಿನ ಸತ್ತೂಹೋಗುತ್ತಾನೆ. ಇಂಥ ಮೈನಡುಗಿಸುವ ಕತೆಗಳನ್ನು ಕೇಳಿ, ಬದುಕಿನ ಅಂಚಿಗೆ ಬಂದು ನಿಂತಂತೆ ನನಗೆ ಅನಿಸಿದ್ದುಂಟು. ಈಗಲೂ ಬಸ್ಸಿಗೆ ಕಾಯುವ ಸ್ಥಳಗಳಲ್ಲಿ ಅಥವಾ ರೈಲು ನಿಲ್ದಾಣಗಳಲ್ಲಿ ಇಂಥ ಕೆಲವು ವ್ಯಕ್ತಿಗಳನ್ನು ಕಂಡಾಗ, ಇವರು ನಿಜಕ್ಕೂ ಹುಚ್ಚರೇ ಅಥವಾ ಪರಿಸ್ಥಿತಿ ಇವರನ್ನು ಹೀಗೆ ಮಾಡಿತೇ ಎಂದು ಸಂದೇಹವಾಗುತ್ತದೆ. ಆದರೆ ನಿಜಕ್ಕೂ ಹುಚ್ಚರು ಅಂದರೇನು?

ಮಿಶೆಲ್ ಫೂಕೋ ಎಂಬ ಫ್ರೆಂಚ್ ವಿದ್ವಾಂಸ ಹುಚ್ಚ, ಹುಚ್ಚಾಸ್ಪತ್ರೆ ಮುಂತಾದ ಈ ಕೆಟಗರಿಗಳ (ವರ್ಗಗಳ) ನಿರ್ಮಾಣದ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸಿದ್ದಾನೆ. ಅವನ ಪ್ರಕಾರ, ಇಂಥ ಕೆಟಗರಿಗಳು ನಿರ್ಮಾಣವಾದ ಮೇಲೆ ಅವುಗಳು ಯಾವತ್ತೂ ಖಾಲಿಯಾಗಿ ಇರುವುದಿಲ್ಲ. ಉದಾಹರಣೆಗೆ, ಹುಚ್ಚಾಸತ್ರೆಯೊಂದಿದ್ದರೆ, ಅದೆಂದಾದರೂ ಖಾಲಿಯಾದ್ದಿದೆಯೇ? ಚೆಕೋವ್‍ನ ಕತೆಯಲ್ಲಿ ನಡೆಯುವುದೂ ಇದೇ. ರೋಗಿ ಸತ್ತ ಮೇಲೆ, ಡಾಕ್ಟರನೇ ರೋಗಿಯಾಗಿ ಅದೇ ಕೋಣೆಯಲ್ಲಿ ಬಂಧಿಸಲ್ಪಡುತ್ತಾನೆ. ಈ ಡಾಕ್ಟರ್‌ನೂ ಒಬ್ಬ ಹುಚ್ಚನೆಂದು ಇತರ ಡಾಕ್ಟರುಗಳಿಗೆ ತೋರಲು ಸುರುವಾದಾಗಲೇ ಅವನ ವಿಧಿಯೂ ತೀರ್‍ಮಾನಿಸಲ್ಪಟ್ಟಿತ್ತು ಎನ್ನುವುದು ಮುಖ್ಯ. ಯಾಕೆಂದರೆ, ಹುಚ್ಚ ಮತ್ತು ಹುಚ್ಚಾಸ್ಚತ್ರೆ ಎರಡೂ ಇರುವುದು ನಮ್ಮ ಮನಸಿನಲ್ಲಿ! ಆದರೆ ವಾಸ್ತವ ಲೋಕಾನುಭವದ ಆಧಾರವಿಲ್ಲದೆ ಇಂಥ ಕೆಟಗರಿಗಳೂ ನಿರ್ಮಾಣವಾಗುವುದಿಲ್ಲವಲ್ಲ. ಉದಾಹರಣೆಗೆ, ತರಕಾರಿಗಳನ್ನು ಕೊಳ್ಳಲು ಹೋಗುವವರು ಸಂತೆ ಸುರುವಾದಾಗಲೇ ಅಲ್ಲಿರುವುದು ಒಳ್ಳೆಯದು; ಯಾಕೆಂದರೆ, ಆಗ ನಿಮಗೆ ಉತ್ತಮ ಮಟ್ಟದ ವಸ್ತುಗಳು ದೊರಕುತ್ತವೆ. ಕೊನೆಗೆ ಹೋದರೆ, ಎಲ್ಲರೂ ಕೊಂಡು ಉಳಿದದ್ದು ಸಿಗುತ್ತವೆ, ಎಂದರೆ ಅಷ್ಟೇನೂ ಉತ್ತಮವಲ್ಲದ್ದು. ಇದು ಸ್ವಲಮಟ್ಟಿಗೆ ನಿಜ. ಆದರೆ ಕೆಲವೊಂದು ಕ್ಷೇತ್ರಗಳಲ್ಲಿ ಪ್ರಭೇದಗಳಿವೆ ಎನ್ನುವ ಕಾರಣಕ್ಕೇ ನಾವು ವಸ್ತುಗಳನ್ನು ವಿಂಗಡಿಸುತ್ತೇವೆ ಎನ್ನುವುದೂ ನಿಜ. ಉದಾಹರಣೆಗೆ, ಪರೀಕ್ಷಾ ಕ್ಷೇತ್ರದಲ್ಲಿ ‘ಬೆಲ್ ಕರ್‍ವ್’ (ಗಂಟೆಗೆರೆ) ಎಂಬ ಒಂದು ಕಲ್ಪನೆಯಿದೆ. ಪರೀಕ್ಷಾಫಲಿತಾಂಶ ಬೆಲ್ ಕರ್ವ್‍ಗೆ ಸರಿಯಾಗಿದ್ದರೆ ಆ ಪರೀಕ್ಷೆಗೆ ವಿಶ್ವಾಸಾರ್ಹತೆ ಇರುತ್ತದೆ; ಇಲ್ಲದಿದ್ದರೆ ಇಲ್ಲ. ಫಲಿತಾಂಶದಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದವರ ಹಾಗೂ ಅತ್ಯಂತ ಕಡಿಮೆ ಅಂಕಗಳನ್ನು ಗಳಿಸಿದವರ ಸಂಖ್ಯೆಗಳು ಕಡಿಮೆಯಿರಬೇಕು. ಇವಕ್ಕಿಂತಲೂ ಇವೆರಡರ ಮಧ್ಯದ ರೇಂಜಿನಲ್ಲಿರುವ ಅಂಕೆಗಳನ್ನು ಗಳಿಸಿದವರ ಸಂಖ್ಯೆಯೇ ಜಾಸ್ತಿಯಿರಬೇಕು. ಹೀಗಿದ್ದರೇ ಅದು ಸರಿಯಾದ ಪರೀಕ್ಷೆ ಎನ್ನುವುದು ತಜ್ಞರ ಅಭಿಮತ. ಇದನ್ನು ಗ್ರಾಫಿನಲ್ಲಿ ಅಳವಡಿಸಿದಾಗ ಒಂದು ಗಂಟೆಯ ಆಕಾರ ಸಿಗುವುದರಿಂದ ಇದಕ್ಕೆ ಬೆಲ್ ಕರ್ವ್ ಎಂಬ ಹೆಸರು. ಲೋಕದಲ್ಲಿ ಬುದ್ಧಿವಂತರು ಮತ್ತು ಅತಿ ದಡ್ಡರು ಅಲ್ಪಪ್ರಮಾಣದಲ್ಲೂ, ಸಾಮಾನ್ಯರು ಹೆಚ್ಚು ಪ್ರಮಾಣದಲ್ಲೂ ಇರುತ್ತಾರೆ ಎನ್ನುವ ನಂಬಿಕೆಯ ಪ್ರತಿಬಿಂಬ ಇದು.

ಯಾವುದೋ ಕಾರಣಕ್ಕೆ ಮನುಷ್ಯರು ಸೃಷ್ಟಿಸಿದ ಕೆಟಗರಿಗಳೇ ಮನುಷ್ಯರ ಮನಸ್ಸನ್ನು ನಿಯಂತ್ರಿಸುವುದು ಒಂದು ವಿಪರ್ಯಾಸವೇ ಸರಿ. ಭಾಷಾವಿಜ್ಞಾನದಲ್ಲಿ ಸಪೀರ್-ವೋರ್ಫ್ ಹೈಪಾತೆಸಿಸ್ ಎಂಬ ಊಹಾಸಿದ್ಧಾಂತ ಇದಕ್ಕೆ ಸಂಬಂಧಿಸಿದುದು. ಇದರ ಪ್ರಕಾರ. ನಾವು ಲೋಕವನ್ನು ನೋಡುವ ಬಗೆಯನ್ನು ನಮ್ಮ ನಮ್ಮ ಭಾಷೆಗಳು ನಿರ್ಧರಿಸುತ್ತವೆ. ಉದಾಹರಣೆಗೆ, ನಮ್ಮ ಭಾಷೆಯಲ್ಲಿದ್ದ ಪದಸಂಪತ್ತಿಗೆ ಅನುಗುಣವಾಗಿ ನಾವು ಬಣ್ಣಗಳನ್ನು ಗುರುತಿಸುತ್ತೇವೆ, ಕುಟುಂಬ ಸಂಬಂಧಗಳನ್ನು ನಿರ್ಧರಿಸುತ್ತೇವೆ, ಘಟನೆಗಳನ್ನು ವಿವರಿಸುತ್ತೇವೆ. ಇವೆಲ್ಲವೂ ಒಂದು ಕಾಲದಲ್ಲಿ ಸಾಮಾಜಿಕ ಅಗತ್ಯಗಳಿಗೆ ಸರಿಯಾಗಿ ಮೂಡಿಬಂದಿರಬಹುದು; ಆದರೆ ಈ ಸನ್ನಿವೇಶಗಳು ಬದಲಾದ ಮೇಲೆಯೂ ನಾವು ಅದೇ ಭಾಷೆಯನ್ನು ಆಡುತ್ತ ಇರುತ್ತೇವೆ. ಎಂದರೆ, ಬದಲಾದ ಸನ್ನಿವೇಶಗಳನ್ನೂ ನಾವು ಹಿಂದಿನ ದೃಷ್ಟಿಯಿಂದಲೇ ನೋಡಿದಂತಾಗುತ್ತದೆ. ಈ ಹೈಪಾತಿಸಿಸನ್ನು ನೂರಕ್ಕೆ ನೂರರಷ್ಟು ಯಾರೂ ನಂಬುವುದಿಲ್ಲ; ಆದರೂ ಸ್ವಲ್ಪ ಮಟ್ಟಿಗೆ ಇದರಲ್ಲಿ ಸತ್ಯವಿರಬಹುದು ಎನ್ನುವುದನ್ನೂ ಅಲ್ಲಗಳೆಯುವಂತಿಲ್ಲ. ಉದಾಹರಣೆಗೆ, ‘ನರ್ಸ್’ ಎಂದೊಡನೆ ನಮಗೆ ಹೆಣ್ಣಿನ ಕಲ್ಪನೆ ಬರುತ್ತದೆಯಲ್ಲದೆ ಗಂಡಿನದಲ್ಲ; ಆದರೆ ಗಂಡು ನರ್ಸುಗಳೂ ಇದ್ದಾರೆ ಎನ್ನುವುದು ಈಗಿನ ವಾಸ್ತವ. ಡಾಕ್ಟರರ ಬಗ್ಗೆಯೂ ಒಂದು ಕಾಲದಲ್ಲಿ ಇದೇ ಲಿಂಗಭೇದ ಇತ್ತು; ಆದರೆ ಈಗ ಬದಲಾಗಿದೆ. ಸಮಾಜ ಬದಲಾಗುವ ತೀವ್ರತೆಯಲ್ಲಿ ಭಾಷೆ ಬದಲಾಗದೆ ಇರುವುದೇ ಭಾಷೆ ಮತ್ತು ವಾಸ್ತವದ ನಡುವಿನ ಈ ಅಸಮಾನತೆಗೆ ಒಂದು ಕಾರಣ. ಆದ್ದರಿಂದ ಭಾಷೆ ಯಾವಾಗಲೂ ‘ಹಿಂದೇಟು ಹಾಕು’ತ್ತಲೂ ಇರುತ್ತದೆ (ಬದಲಾವಣೆಯ ಜತೆ ಹೆಜ್ಜೆ ಹಾಕದಿರುವುದು); ‘ಹಿಂದೇಟು ನೀಡು’ತ್ತಲೂ ಇರುತ್ತದೆ (ನಾವು ಸೃಷ್ಟಿಸಿದ ಕೆಟಗರಿಗಳಿಗೆ ನಮ್ಮನ್ನು ಕಟ್ಟಿಹಾಕುವುದು). ಎರಡಾಗಿ ಕಾಣುವ ಈ ಗುಣಗಳು ಒಂದೇ ನಾಣ್ಯದ ಎರಡು ಮುಖಗಳು.

ತೀರಾ ವಿಭಿನ್ನ ಸಂಸ್ಕೃತಿಯ ಭಾಷೆಗಳಿಂದ ಭಾಷಾಂತರ ಮಾಡುವವರಿಗೆ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಅವುಗಳಲ್ಲಿ ಒಂದು ಶಬ್ದಗಳಿಗೆ ಸಂಬಂಧಿಸಿದುದು. ಉದಾಹರಣೆಗೆ, ಇಂಗ್ಲಿಷ್ನಲ್ಲಿ ‘ಬ್ರದರ್’ ಎಂದರೆ ಅಣ್ಣನೋ ತಮ್ಮನೋ ಎಂದು ಸ್ಪಷ್ಟವಾಗುವುದಿಲ್ಲ. ಕನ್ನಡದಲ್ಲಿ ಇದಕ್ಕೆ ಸರಿಸಮನಾದ ಕನ್ನಡದ್ದೇ ಆದ ಪದವಿಲ್ಲ: ಸೋದರ ಎಂದು ಬಳಸಬಹುದಾದರೂ, ಅದು ಇಂಗ್ಲಿಷ್ನಲ್ಲಿರುವಂತೆ ಕನ್ನಡದಲ್ಲಿ ಬಳಕೆಯಾಗುವಂಥದಲ್ಲ. ಇಂಗ್ಲಿಷ್ನ ‘ಅಂಕ್ಲ್’ ಎಂಬ ಪದವೂ ಹಾಗೇ; ಇದನ್ನು ಮಾವ, ಚಿಕ್ಕಪ್ಪ, ದೊಡ್ಡಪ್ಪ ಎಲ್ಲರಿಗೂ ಉಪಯೋಗಿಸಬಹುದು. ಕನ್ನಡದಲ್ಲಿ ಕುಟುಂಬ ಸಂಬಂಧ ಇನ್ನಷ್ಟು ಸ್ಪಷ್ಟತೆಯನ್ನು ಒಳಗೊಂಡಿದೆ. ನೀವು ಶೇಕ್ಸ್‍ಪಿಯರನ ನಾಟಕಗಳನ್ನೋ ಹಾರ್ಡಿಯ ಕಾದಂಬರಿಗಳನ್ನೋ ಅನುವಾದಿಸುವಾಗ ಇಂಥ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದಲೇ ವಿಜ್ಞಾನ, ತತ್ವಜ್ಞಾನ ಮುಂತಾದ ಉನ್ನತ ಮಟ್ಟದ ಲೇಖನಗಳನ್ನು ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದಿಸುವಾಗ ಕಷ್ಟವಾಗುವುದು. ಆಗ ಕೆಲವೊಮ್ಮೆ ನಾವು ಹೊಸ ಪದಗಳನ್ನು ಸೃಷ್ಟಿಸಬೇಕಾಗುತ್ತದೆ. ಇಲ್ಲವೇ ಯಥಾವತ್ತಾಗಿ ಪದಗಳನ್ನು ಹಾಗೇ ಬಳಸಬೇಕಾಗುತ್ತದೆ. ಏನೇ ಮಾಡಿದರೂ ಈ ಪದಗಳು ರೂಢಿಯಲ್ಲಿ ಬರುವತನಕ ಅರ್ಥಕ್ಲಿಷ್ಟತೆ ಉಂಟುಮಾಡದೆ ಇರುವುದಿಲ್ಲ. ನನ್ನ ಭಾಷೆಯ ಮಿತಿಗಳೇ ನನ್ನ ಲೋಕದ ಮಿತಿಗಳೂ ಎನ್ನುತ್ತಾನೆ ಪ್ರಸಿದ್ಧ ತತ್ವಜ್ಞಾನಿ ವಿಟ್‍ಗೆನ್‍ಸ್ಟೈನ್.

ಇದು ಕೇವಲ ಶಬ್ದಗಳ ಸಮಸ್ಯೆಯೇ ಅಲ್ಲ; ಕೆಟಗರಿಗಳ ಸಮಸ್ಯೆಯೂ ಹೌದು. ಯಾಕೆಂದರೆ ಶಬ್ದಗಳ ಹಿಂದೆ ಕೆಟಗರಿಗಳು ಅಡಗಿ ಕೂತಿರುತ್ತವೆ. ಶಬ್ದಗಳು ಒಮ್ಮೆ ಉಪಯೋಗಿಸಿ ನಂತರ ಬೀಸಾಕುವ ಸಂಗತಿಗಳಲ್ಲ. ಸಂದರ್ಭಕ್ಕೆ ಸರಿಯಾಗಿ ಪದೇ ಪದೇ ಉಪಯೋಗವಾಗುವಂಥವು. ಆದ್ದರಿಂದಲೇ ಹಲವು ಬಾರಿ ನಮ್ಮ ಚರ್ಚಾವಿಷಯಗಳೇನೇ ಇದ್ದರೂ, ಚರ್ಚಾವಸ್ತುಗಳು ನಾವು ಪೂರ್ವಭಾವಿಯಾಗಿ ಒಪ್ಪಿರುವ ಕೆಟಗರಿಗಳಿಗೆ ಹೊಂದುತ್ತವೆಯೇ ಇಲ್ಲವೇ ಎನ್ನುವುದೇ ವಾದ ವಿವಾದಕ್ಕೆ ಕಾರಣವಾಗಿರುತ್ತದೆ. ಉದಾಹರಣೆಗೆ, ಒಬ್ಬಾತ ಯಾರನ್ನೋ ಕೊಂದಿದ್ದಾನೆ ಎಂದಿಟ್ಟುಕೊಳ್ಳೋಣ. ಎಲ್ಲ ಕೊಲೆಯೂ ಶಿಕ್ಷಾರ್ಹವಾಗುವುದಿಲ್ಲ. ಸ್ವರಕ್ಷಣೆಯ ಸಂದರ್ಭದಲ್ಲಿ ಬೇರೆ ದಾರಿಯಿಲ್ಲದೆ ಆಕ್ರಮಣಕಾರಿಯನ್ನು ಕೊಂದುದು ಅಥವಾ ಆಕಸ್ಮಿಕವಾಗಿ ನಡೆದುಹೋದುದು ಕ್ಷಮಾರ್ಹವಾಗುತ್ತದೆ. ಶಿಕ್ಷಾರ್ಹ ಕೊಲೆಯಲ್ಲೂ, ಕೊಲೆಯನ್ನು ತಟ್ಟನೆ ಒಂದು ಕ್ಷಣದ ಕ್ರೋಧದಿಂದ ಎಸಗಿದ್ದೇ ಅಥವಾ ಮೊದಲೇ ತಂತ್ರ ರೂಪಿಸಿ ಎಸಗಿದ್ದೇ ಎನ್ನುವುದು ಪ್ರಧಾನ ಚರ್ಚಾವಿಷಯವಾಗುತ್ತದೆ. ತಟ್ಟನೆ ಭಾವೋದ್ರೇಕದಿಂದ ಎಸಗಿದ ಕೊಲೆ ಪೂರ್ವಭಾವಿಯಾಗಿ ರೂಪಿಸಿದ ಕೊಲೆಗಿಂತ ಕಡಿಮೆ ಶಿಕ್ಷೆಯನ್ನು ಕೋರುತ್ತದೆ. ಕಾನೂನಿನ ಪರಿಭಾಷೆಯಲ್ಲಿ ಇವೆಲ್ಲಕ್ಕೂ ಬೇರೆ ಬೇರೆ ಪದಗಳಿವೆ. ಕಮೂವಿನ ‘ಅನ್ಯ’ ಕಾದಂಬರಿಯ ಎರಡನೆಯ ಭಾಗದಲ್ಲಿ ಇಂಥದೇ ಒಂದು ನ್ಯಾಯಾಲಯದ ದೃಶ್ಯವಿದೆ. ಈ ಕಾದಂಬರಿಯ ನಾಯಕ ಒಬ್ಬ ಅರಬನನ್ನು ಗುಂಡುಹಾಕಿ ಕೊಂದಿರುತ್ತಾನೆ; ಬಿಸಿಲ ತಾಪ ತಡೆಯಲಾದರದೆ ತನ್ನ ಕಕ್ಷಿದಾರ ಈ ಕೃತ್ಯ ಎಸಗಿದ್ದು, ಆದ್ದರಿಂದ ಇದನ್ನು ನಿಜವಾದ ಕೊಲೆಯೆಂದು ತಿಳಿಯಬಾರದು ಎನ್ನುವುದು ಅವನ ವಕೀಲನ ವಾದ. ಆದರೆ, ಹಾಗಲ್ಲ, ಈತ ಬೇಕೆಂದೇ ಯೋಜನೆ ರೂಪಿಸಿ ಕೊಂದುದು ಎನ್ನುವುದು ಸರಕಾರಿ ವಕೀಲನ ವಾದ. ಈ ಇಡೀ ಸಂದರ್ಭದಲ್ಲಿ ಕಥಾನಾಯಕ ಇದು ತನಗೆ ಸಂಬಂಧಿಸಿದ್ದೇ ಅಲ್ಲ ಎನ್ನುವ ರೀತಿಯಲ್ಲಿ ಇರುತ್ತಾನೆ! ಯಾಕೆಂದರೆ ಓಂದರ್ಥದಲ್ಲಿ ನ್ಯಾಯಾಲಯದಲ್ಲಿ ನಡೆಯುತ್ತಿರುವುದೂ ಕೂಡಾ ಈ ನಿರ್ಲಿಪ್ತವಾದ, ‘ವಸ್ತುನಿಷ್ಠ’ವಾದ ವಾದವಿವಾದವೇ. ಅದರ ಒಂದು ಪಾದ ಸಂದರ್ಭದಲ್ಲಿ ಊರಿಕೊಂಡಿದ್ದರೂ, ಇನ್ನೊಂದು ಕಾಲಾತೀತವಾಗಿರುತ್ತದೆ.

ಇದು ಕಾನೂನಿನ ಕ್ಷೇತ್ರಕ್ಕೆ ಮಾತ್ರವೇ ಸಂಬಂಧಿಸಿದ ಸಂಗತಿಯೂ ಅಲ್ಲ; ಎಲ್ಲಾ ಕ್ಷೇತ್ರಗಳಲ್ಲೂ ನಾವು ಪೂರ್ವಭಾವಿ ಕೆಟಗರಿಗಳಿಗೆ ವಸ್ತುಗಳನ್ನು ಮತ್ತು ವ್ಯಕ್ತಿಗಳನ್ನು ವರ್ಗೀಕರಿಸುತ್ತ ಹೋಗುತ್ತೇವೆ. ಕೆಲವೊಮ್ಮೆ ಕೆಟಗರಿಗಳನ್ನು ಮಾರ್ಪಡಿಸುತ್ತೇವೆ, ಅವುಗಳ ವ್ಯಾಪ್ತಿಯನ್ನು ಹಿಗ್ಗಿಸುತ್ತೇವೆ ಅಥವಾ ಕುಗ್ಗಿಸುತ್ತೇವೆ. ಹೊಸ ಕೆಟಗರಿಗಳನ್ನು ನಿರ್ಮಿಸುತ್ತೇವೆ. ಇವೆಲ್ಲ ಬೇರೆ ಬೇರೆ ಪ್ರಮಾಣದಲ್ಲಿ ಕ್ರಾಂತಿಕಾರಿ ಹೆಜ್ಜೆಗಳೆನಿಸುತ್ತವೆ. ಆದರೆ ಸಾಮಾನ್ಯವಾಗಿ, ಪ್ರಚಲಿತವಿರುವ ಕೆಟಗರಿಗಳಿಗೆ ವಸ್ತುಗಳನ್ನು ಹೊಂದಿಸುವುದೇ ಜಾಸ್ತಿ. ಉದಾಹರಣೆಗೆ, ಕನ್ನಡ ಸಾಹಿತ್ಯ ವಿಮರ್ಶೆಯ ಕ್ಷೇತ್ರದಲ್ಲಿ ನವ್ಯ ಎಂಬ ಕೆಟಗರಿ ಕಳೆದ ಶತಮಾನದ ಅರುವತ್ತರ ದಶಕದಲ್ಲಿ ಮೂಡಿಬಂತು. ನವ್ಯ ಎಂದರೆ ಹೊಸತು. ಈ ಹಿಂದಿನ ಸಾಹಿತ್ಯ ರೀತಿಗೆ ಭಿನ್ನವಾಗಿ ಬಂದುದೆಲ್ಲ ಆ ಕಾಲದಲ್ಲಿ ನವ್ಯವೆಂದು ಕರೆಸಿಕೊಂಡಿತು. ಹಾಗೂ ನವ್ಯ ಕವಿ, ಕತೆಗಾರ, ಕಾದಂಬರಿಕಾರ ಎಂದು ಎನಿಸಿಕೊಳ್ಳುವುದು ಹೆಚ್ಚಿನವರಿಗೂ ಒಂದು ಅಭಿಮಾನದ ಸಂಗತಿಯಾಯಿತು. ಆದರೆ ಕ್ರಮೇಣ, ಇದಕ್ಕೆ ಸೇರದ ಒಂದು ರೀತಿ (ಬಹುಶಃ ನವ್ಯ ಹಾಗೂ ನವೋದಯ ಎರಡರ ಕೆಲವು ಗುಣಗಳನ್ನು ಒಳಗೊಂಡಂಥ) ಬೆಳಕಿಗೆ ಬಂದು, ಅದು ಸಮನ್ವಯ ಎನಿಸಿಕೊಂಡಿತು. ಆದರೆ, ಕಟು ನವ್ಯರ ದೃಷ್ಟಿಯಲ್ಲಿ ಈ ಸಮನ್ವಯವೆನ್ನುವುದು ನವ್ಯದಷ್ಟು ಉತ್ತಮವಾಗಿರಲಿಲ್ಲ. ಆದ್ದರಿಂದ ಸಮನ್ವಯ ಕವಿ ಎಂದು ಕರಸಿಕೊಳ್ಳುವುದಕ್ಕೆ ಯಾರಿಗೂ ಇಷ್ಟವಾಗಲಿಲ್ಲ. ಮುಂದೆ ದಲಿತ-ಬಂಡಾಯ ಸಾಹಿತ್ಯ ಚಳುವಳಿಗಳು ಬಂದಾಗ ಇದೇ ಗತಿ ನವ್ಯಕ್ಕೂ ಒದಗಿದ್ದು ಒಂದು ವಿಪರ್ಯಾಸವೇ ಸರಿ. ಎಂದಿನಿಂದ ಒಂದು ಕೆಟಗರಿ ತನ್ನ ಮೊನಚನ್ನು ಕಳೆದುಕೊಳ್ಳುತ್ತದೋ ಅಂದಿನಿಂದ ಯಾರಿಗೂ ಆ ಹೆಸರಿನಿಂದ ಗುರುತಿಸಲ್ಪಡುವುದು ಬೇಕಾಗಿರುವುದಿಲ್ಲ. ಆದರೆ, ಚಳುವಳಿ ಇನ್ನೂ ಕ್ರಾಂತಿಕಾರಿಯಾಗಿದ್ದಾಗ ಹೆಚ್ಚಿನವರೂ ಆ ಹೆಸರನ್ನು ಬಯಸುತ್ತಾರೆ. ಈಗ ‘ನವ್ಯೋತ್ತರ’ ಎಂಬ ವರ್ಗವೊಂದು ಬಂದಿದೆ. ಅದೇ ರೀತಿ ‘ವಸಾಹತೋತ್ತರ,’ ‘ಸ್ತ್ರೀವಾದಿ’, ‘ಪರಿಸರಮುಖಿ’ ಇತ್ಯಾದಿ ವರ್ಗಗಳ ಹೆಸರುಗಳೂ ಕೆಲವು ಸಮಯದಿಂದ ಕೇಳಿಬರುತ್ತಿದೆ. ಈಗಿನ ಹಲವರಿಗೆ ಬಹುಶಃ ತಮ್ಮನ್ನು “ನವ್ಯೋತ್ತರ” ಮುಂತಾಗಿ ವಿಮರ್ಶಕರು ಗುರುತಿಸಿದರೆ ಒಳ್ಳೆಯದು ಎಂಬ ಭಾವನೆಯಿರಲಿಕ್ಕೂ ಸಾಕು. ಆದರೂ, ಕ್ರಮೇಣ ಯಾವ ಬರಹಗಾರನೂ ಒಂದು ಲೇಬಲಿಗೆ ಅಂಟಿಬೀಳಲು ತಯಾರಿರುವುದಿಲ್ಲ. ಆದರೆ ಇದೆಲ್ಲ ಬರಹಗಾರರ ನಿಯಂತ್ರಣದಲ್ಲಿಲ್ಲದ ವಿಚಾರ. ವಿಮರ್ಶೆಯ ಕಷ್ಟವೆಂದರೆ, ಇಂಥ ಯಾವುದೇ ಕೆಟಗರಿಗಳಿಲ್ಲದೆ ಅದು ಕೆಲಸ ಮಾಡದು.

ಕೆಲವು ಕೆಟಗರಿಗಳು ಯುಗಳಗಳಾಗಿದ್ದು ಇವಕ್ಕೆ ಪರಸ್ಪರ ವಿರುದ್ಧವಾದ ನೈತಿಕ ಮೌಲ್ಯಗಳಿರುತ್ತವೆ. ಸತ್ಯ ಮತ್ತು ಸುಳ್ಳು ಇಂಥ ಯುಗಳ. ಇವೆರಡರ ಮಧ್ಯೆ ಒಂದು ಕೆಟಗರಿ ಇರುವುದು ಸಾಧ್ಯವೇ ಇಲ್ಲ ಎಂಬಷ್ಟು ಪ್ರಬಲವಾಗಿ ಇದು ಬೇರೂರಿದೆ. ಆದರೆ ಬುದ್ಧ ಪ್ರತಿಪಾದಿಸಿದ ಮಧ್ಯಮ ಮಾರ್ಗವನ್ನು ಗಮನಿಸಬೇಕು. ಬುದ್ಧ ಇದನ್ನು ವೈರಾಗ್ಯ ಮತ್ತು ವಿಷಯಾಸಕ್ತಿ, ದೇಹದಂಡನೆ ಮತ್ತು ದೇಹವ್ಯಸನ ಮುಂತಾದ ಅತಿಗಳ ನಡುವಿನ ಒಂದು ಮಾರ್ಗವನ್ನಾಗಿ ಪ್ರತಿಪಾದಿಸಿದ. ಯಾವುದೇ ಕ್ಷೇತ್ರವನ್ನು ಕಪ್ಪು ಬಿಳುಪಾಗಿ ನೋಡುವ ದ್ವೈತ ದೃಷ್ಟಿಯನ್ನು ತಿರಸ್ಕರಿಸುವ ಈ ಉದಾರ ಮಾರ್ಗವೇ ನಮ್ಮ ಆಧುನಿಕ ಮನೋಧರ್‍ಮಕ್ಕೆ ಹೆಚ್ಚು ಹತ್ತಿರವಾದ್ದು. ಯಾಕೆಂದರೆ, ಆಧುನಿಕ ಮನೋವಿಜ್ಞಾನದ ಪ್ರಕಾರ, ಹುಚ್ಚರೂ ಕೂಡಾ ಪೂರ್ತಾ ಹುಚ್ಚರಲ್ಲ, ಹಾಗೂ ವಿವೇಕಿಗಳು ಕೂಡಾ ಪೂರ್ತಾ ವಿವೇಕಿಗಳಲ್ಲ; ಹುಚ್ಚಿನ ಎಳೆಗಳು ಪ್ರತಿ ಮನುಷ್ಯನಲ್ಲೂ ಇರುತ್ತವೆ. ಇದೇ ಮಾತು ನೈತಿಕ ವಿಷಯಗಳಿಗೂ ಸಂಬಂಧಿಸುತ್ತದೆ: ಪರಿಪೂರ್ಣನಾದ ಸಂತನಾಗಲಿ, ನೂರಕ್ಕೆ ನೂರು ಪಾಪಿಯಾಗಲಿ ಬಹುಶಃ ಯಾರೂ ಇಲ್ಲ. ಆದ್ದರಿಂದಲೇ ಇತರರ ಮೇಲೆ ಸಾರಾಸಗಟಾಗಿ ತೀರ್ಪು ನೀಡಲು ನಾವು ಹಿಂಜರಿಯುವುದು, ಯಾವ ಮಾತನ್ನೂ ಇದಮಿತ್ಥಂ ಎಂದು ಅನ್ನದೆ ತಡೆದೇ ನಡಿಯುವುದು, ಯಾವುದೇ ವಾದದಲ್ಲಿ ವಿರೋಧಿಗೆ ಅನುಮಾನದ ಅನುಕೂಲವನ್ನು ನೀಡುವುದು, ಹಾಗೂ ಗೆಲುವಿನ ಹಟಕ್ಕಿಂತ ಅರಿವಿನ ಹೆಚ್ಚಳದ ಕಡೆ ಗಮನ ಹರಿಸುವುದು ಅಗತ್ಯವೆನಿಸುತ್ತವೆ. ‘ಒಂದೋ ನೀನು ನಮ್ಮ ಪಕ್ಷ, ಇಲ್ಲಾ ನಮ್ಮ ವಿರೋಧಪಕ್ಷ! ಎನ್ನುವುದು ಮಧ್ಯಕಾಲೀನ ಮನೋಧರ್ಮ. ಹಾಗಿದ್ದಾಗ ನಾವು ಸದಾಕಾಲ ನಮ್ಮ ದತ್ತಕ್ಕೆ ಅರ್ಥಾತ್ ಗಂಟೆಗೆರೆಗೆ ಗುಲಾಮರಾಗಿರುತ್ತೇವೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭೂಮಿ ಮತ್ತು ನೀರು
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೫೪

ಸಣ್ಣ ಕತೆ

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…