ಕನ್ನಡ ಸಾಹಿತ್ಯ ಪರಿಷತ್ತು ವ್ಯವಸ್ಥೆಗೊಳಿಸುವ ‘ಕನ್ನಡ ಸಾಹಿತ್ಯ ಸಮ್ಮೇಳನ’ಗಳ ಬಗ್ಗೆ ಒಂದಲ್ಲ ಒಂದು ವಿವಾದವೇಳುವುದು ಇತ್ತೀಚೆಗೆ ಸಹಜ ಕ್ರಿಯೆಯೆಂಬಂತಾಗಿದೆ. ಕನ್ನಡ ಸಾಹಿತ್ಯ ಪರಿಷತ್ತನ್ನು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯೆಂದು ಬಿಂಬಿಸಿರುವುದೂ ಇದಕ್ಕೆ ಒಂದು ಕಾರಣ. ಸಾಮಾನ್ಯವಾಗಿ ಸರ್ಕಾರ ಮತ್ತು ಸರ್ಕಾರದ ಅಂಗಸಂಸ್ಥೆಗಳ ಬಗ್ಗೆ ವಿವಾದಗಳನ್ನುಂಟುಮಾಡುವ ಪ್ರವೃತ್ತಿ ನಮ್ಮಲ್ಲಿದೆ. ವಿಶೇಷವಾಗಿ ಪ್ರಶಸ್ತಿಗಳು ಮತ್ತು ಅಧ್ಯಕ್ಷರು ಹಾಗೂ ಸದಸ್ಯರ ನೇಮಕಾತಿ ಸಂದರ್ಭಗಳಲ್ಲಿ ಪ್ರಾದೇಶಿಕ ನ್ಯಾಯ, ಸಾಮಾಜಿಕ ನ್ಯಾಯಗಳ ಪ್ರಶ್ನೆಯನ್ನು ಎತ್ತಲಾಗುತ್ತದೆ. ಕೆಲವೊಮ್ಮೆ ಈ ‘ನ್ಯಾಯ’ಗಳ ಬಗ್ಗೆ ಅಷ್ಟೇನೂ ಆದರವಿಲ್ಲದ ‘ಗುಣಮಟ್ಟ’ ‘ಪ್ರತಿಭೆ’ ಮುಂತಾದ ಪ್ರಶ್ನೆಗಳನ್ನೂ ಕೇಳಲಾಗುತ್ತದೆ. ಆದರೆ ಯಾವುದೇ ಖಾಸಗಿ ಸಂಸ್ಥೆಯು ಕೊಡುವ ಪ್ರಶಸ್ತಿ, ಮತ್ತು ಒಳಗೊಳ್ಳುವ ಆಡಳಿತಾತ್ಮಕ ಸ್ವರೂಪದ ಬಗ್ಗೆ ಸಾಮಾಜಿಕ-ಪ್ರಾದೇಶಿಕ ನ್ಯಾಯದ ಪ್ರಶ್ನೆಗಳನ್ನು ಎತ್ತುವುದಿಲ್ಲ. ಖಾಸಗಿ ಸಂಸ್ಥೆಗಳೆಂದರೆ ಗುಣಮಟ್ಟ ಅಥವಾ ಪ್ರತಿಭೆಗಳನ್ನು ತಾನಾಗಿಯೇ ಪರಿಗಣಿಸುತ್ತವೆಯೆಂಬ ನಂಬಿಕೆಯಿಂದಲೋ ಏನೋ ಆ ಪ್ರಶ್ನೆಯನ್ನಂತು ಕೇಳುವುದೇ ಇಲ್ಲ. ಪ್ರಚಾರ ಮಾತ್ರ ಸಾಕಷ್ಟು ಸಿಕ್ಕುತ್ತವೆ. ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರಗಳಿಗೆ ಪ್ರತ್ಯೇಕ ನ್ಯಾಯ ಮತ್ತು ಪ್ರತ್ಯೇಕ ಮಾನದಂಡ ಎಂಬುದು ಆರ್ಥಿಕ ಕ್ಷೇತ್ರಕ್ಕಷ್ಟೇ ಅಲ್ಲ ಸಾಂಸ್ಕೃತಿಕ ಕ್ಷೇತ್ರಕ್ಕೂ ಅನ್ವಯವಾಗುತ್ತ ಬಂದಿರುವುದು ಒಂದು ಒಪ್ಪಿತ ವಿಪರ್ಯಾಸವಾಗಿಬಿಟ್ಟಿದೆ. ಈ ಅಂಶವನ್ನು ಪ್ರಸ್ತಾಪಿಸಲು ಕಾರಣವಿದೆ. ೧೯೧೫ರಲ್ಲಿ ಸ್ಥಾಪಿತವಾದ ಕನ್ನಡ ಸಾಹಿತ್ಯ ಪರಿಷತ್ತನ್ನು ಅಧಿಕೃತವಾಗಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯೆಂದು ಬಿಂಬಿಸಿದ್ದು, ಜನರು ಹಾಗೆಯೇ ಭಾವಿಸಿದ್ದು ಮತ್ತು ಸಾಹಿತ್ಯ ಪರಿಷತ್ತು ಮತ್ತು ಅದರ ಸಮ್ಮೇಳನಗಳು ಸರ್ಕಾರದ ಸಹಾಯವನ್ನು ಅವಲಂಬಿಸಿದ್ದು ಪ್ರಶ್ನೆಗಳನ್ನು ಎತ್ತಲು ಒಂದು ‘ತಾತ್ವಿಕ ತರ್ಕ’ವನ್ನು ಒದಗಿಸಿದೆ. ಬೇರೆ ಕೆಲವು ಸಂಸ್ಥೆಗಳು ನಡೆಸುವ ಸಮ್ಮೇಳನ ಅಥವಾ ಸಮಾವೇಶಗಳ ಬಗ್ಗೆ ಪ್ರಶ್ನೆಗಳು ಪಿಸುಗುಡುವುದೂ ಇಲ್ಲವೆಂಬುದನ್ನು ಇಲ್ಲಿ ಗಮನಿಸಬೇಕು. ಇದರರ್ಥ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ವೈಖರಿ ಮತ್ತು ಸಮ್ಮೇಳನಗಳ ಸ್ವರೂಪದ ಬಗ್ಗೆ ಪ್ರಶ್ನಿಸಬಾರದು ಎಂದಲ್ಲ. ಪ್ರಶ್ನಾರ್ಹವಾದ ಕೆಲಸಗಳನ್ನು ಮಾಡಿದಾಗ ಸಾಹಿತ್ಯ ಪರಿಷತ್ತನ್ನೂ ಒಳಗೊಂಡಂತೆ ಎಲ್ಲ ಸಂಸ್ಥೆಗಳ ಕಾರ್ಯ ವೈಖರಿಯನ್ನು ಪ್ರಶ್ನಿಸುವುದು ಸರಿಯಾದುದು – ಎಂಬ ಅಭಿಪ್ರಾಯ ನನ್ನದು.
ಇರಲಿ; ಈಗ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನಗಳ ಸುತ್ತ ಹಬ್ಬುತ್ತ ಬಂದ ವಿವಾದಗಳನ್ನು ಗಮನಿಸೋಣ. ವಿವಾದಗಳು ಎಲ್ಲ ಸಂದರ್ಭದಲ್ಲೂ ತಾತ್ವಿಕ ನೆಲೆಯನ್ನು ಪಡೆದಿರುತ್ತವೆಯೆಂದು ಭಾವಿಸಬೇಕಾಗಿಲ್ಲ. ಒಂದೊಂದು ಸಾರಿ ಒಂದೊಂದು ಕಾರಣಕ್ಕೆ ವಿವಾದಗಳೆದ್ದಿವೆ. ಕೆಲವೊಮ್ಮೆ ವೈಯಕ್ತಿಕ; ಕೆಲವೊಮ್ಮೆ ತಾತ್ವಿಕ. ಕನ್ನಡ ಸಾಹಿತ್ಯ ಸಮ್ಮೇಳನಗಳ ಬಗ್ಗೆ ಇಲ್ಲೀವರೆಗೆ ಎದ್ದಿರುವ ವಿವಾದಗಳನ್ನು ಸ್ಥೂಲವಾಗಿ ಹೀಗೆ ವಿಂಗಡಿಸಬಹುದು.
(೧) ಸಮ್ಮೇಳನಾಧ್ಯಕ್ಷರ ಆಯ್ಕೆ ಬಗ್ಗೆ
(೨) ವಿಚಾರಗೋಷ್ಠಿಗಳ ಸ್ವರೂಪ ಮತ್ತು ವ್ಯಕ್ತಿಗಳ ಆಯ್ಕೆ ಕುರಿತು
(೩) ತಾತ್ವಿಕ ಭಿನ್ನಾಭಿಪ್ರಾಯಗಳು.
(೧) ಈಗ ಮೊದಲನೆಯ ಅಂಶವನ್ನು ಗಮನಿಸೋಣ. ಸಮ್ಮೇಳನದ ಅಧ್ಯಕ್ಷರ ಆಯ್ಕೆ ಮತ್ತು ಅಸಮಾಧಾನ – ಎರಡೂ ಈಗ ಒಟ್ಟಿಗೇ ಬೆಸೆದುಕೊಂಡಿವೆ. ಸಾಹಿತ್ಯ ಪರಿಷತ್ತು ‘ಸರ್ವಾನುಮತ’ ಅಥವಾ ‘ಬಹುಮತ’ಗಳ ಆಧಾರದಲ್ಲಿ ಅಧ್ಯಕ್ಷರನ್ನು ಆಯ್ಕೆ ಮಾಡುವಾಗ ಅನೇಕ ಅಂಶಗಳು ಪರಿಗಣಿತವಾಗುವುದು ಗುಟ್ಟಿನ ವಿಷಯವೇನೂ ಅಲ್ಲ. ಇಲ್ಲಿವರೆಗೆ ಆಯ್ಕೆಯಾದ ಬಹುಪಾಲು ಅಧ್ಯಕ್ಷರು ಅರ್ಹರಲ್ಲ ಎಂದು ಹೇಳುವಂತಿಲ್ಲವಾದರೂ ಎಷ್ಟು ಜನ ಮಹಿಳೆಯರಿಗೆ, ಅಲ್ಪಸಂಖ್ಯಾತರಿಗೆ, ತುಳಿತಕ್ಕೊಳಗಾದ ಸಾಮಾಜಿಕ ಸ್ತರದಿಂದ ಬಂದವರಿಗೆ, ಅರ್ಹತೆಯ ಆಧಾರವನ್ನು ಪರಿಗಣಿಸಿಯೂ ಅಧ್ಯಕ್ಷರಾಗುವ ಅವಕಾಶ ಲಭ್ಯವಾಗಿದೆ ಎಂಬ ಪ್ರಶ್ನೆ ಜೀವಂತವಾಗಿಯೇ ಇದೆ. ಈ ಪ್ರಶ್ನೆಗೆ ಅವರದೇ ಆದ ತಾತ್ವಿಕ ನೆಲೆಯಿದೆ. ವಿಶೇಷವಾದ ತಾತ್ವಿಕ ನೆಲೆಯಿಲ್ಲದಿದ್ದರೂ ಅಧ್ಯಕ್ಷರ ಆಯ್ಕೆ ವಿವಾದಾಸ್ಪದವಾದ ಸಂದರ್ಭಗಳೂ ನಮ್ಮಲ್ಲಿವೆ. ಈ ಸಂಬಂಧ ಎರಡು ನಿದರ್ಶನಗಳನ್ನು ಕೊಡಬಯಸುತ್ತೇನೆ. ಕನ್ನಡ ಸಾಹಿತ್ಯ ಪರಿಷತ್ತಿನ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ಆಗ ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾಗಿದ್ದ ಡಾ. ದೇ. ಜವರೇಗೌಡರು ಸಮ್ಮೇಳನದ ಅಧ್ಯಕ್ಷರಾದರು. ಆಗ ಜವರೇಗೌಡರು ಕನ್ನಡಪರ ಕೆಚ್ಚಿಗೆ ಹೆಸರಾಗಿದ್ದರು. (ಈಗಲೂ ಆ ಕೆಚ್ಚು ಕಡಿಮೆಯಾಗಿಲ್ಲ. ಆದರೆ ಅವರ ಆದ್ಯತೆಗಳ ಬಗ್ಗೆ ನನ್ನಂಥವರ ಆಕ್ಷೇಪವಿದೆ). ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಶ್ರೀ ಜಿ. ನಾರಾಯಣ ಅವರು ‘ದೇಜಗೌ’ ಅವರ ಆಯ್ಕೆಯ ರೂವಾರಿ ಎಂದೇ ಆಗ ಜನಜನಿತವಾಗಿತ್ತು. ಈ ಸಮ್ಮೇಳನದ ಬಗ್ಗೆ ಎರಡು ವಿವಾದಗಳು ಎದ್ದವು. ಒಂದು – ಸುವರ್ಣ ಮಹೋತ್ಸವ ಸಮ್ಮೇಳನದ ಹೆಸರಿನಲ್ಲಿ ಕಟ್ಟಡ ನಿರ್ಮಾಣದಂಥ ಕೆಲಸದ ಹೊರತಾಗಿ ದುಂದು ವೆಚ್ಚ ಮಾಡಲಾಗುತ್ತಿದೆ – ಎಂಬ ಆಕ್ಷೇಪ. ಸಾಹಿತ್ಯ ಸಮ್ಮೇಳನಕ್ಕೆ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುವ ಮೂಲಕ ಕೆಟ್ಟ ಸಂಪ್ರದಾಯವನ್ನು ಹಾಕಲಾಗುತ್ತಿದೆಯೆಂದು ಪ್ರತಿಪಾದಿಸಿ ದುಂದುವೆಚ್ಚವನ್ನು ವಿರೋಧಿಸಿ ಸಮ್ಮೇಳನದ ದಿನದಂದು ಸಮ್ಮೇಳನದ ಜಾಗದಲ್ಲಿ ಪ್ರತಿಭಟನಾ ಧರಣಿ ನಡೆಯಿತು. ನನ್ನನ್ನೂ ಒಳಗೊಂಡಂತೆ ಅನೇಕ ಪ್ರಗತಿಪರರು ಈ ಧರಣಿಯಲ್ಲಿ ಭಾಗವಹಿಸಿದ್ದರು. ಜಿ. ನಾರಾಯಣ ಅವರು ತಾವು ಮಾಡುತ್ತಿದ್ದ ವೆಚ್ಚಕ್ಕೆ ಸಮರ್ಥನೆ ನೀಡಿದರು. ವಿವಾದ ಮತ್ತು ವಿರೋಧದ ಎರಡನೇ ಅಂಶ ಸಮ್ಮೇಳನಾಧ್ಯಕ್ಷರಿಗೆ ಸಂಬಂಧಿಸಿದ್ದು, ದೇಜಗೌ ಚಿಕ್ಕವಯಸ್ಸಿನಲ್ಲೇ ಅಧ್ಯಕ್ಷರಾಗಿದ್ದಾರೆಂಬ ಗುಸುಗುಸುವಿನ ಜೊತೆಗೆ ಶ್ರೀ ಗೋಪಾಲಕೃಷ್ಣ ಅಡಿಗರು ಬಹಿರಂಗವಾಗಿ ಗುಟುರು ಹಾಕಿದರು. ಕೆಲವು ತಾತ್ವಿಕ ಕಾರಣಗಳನ್ನು ನೀಡಿ ಸಾಹಿತ್ಯ ಪರಿಷತ್ತಿನ ಪ್ರಸ್ತುತತೆಯನ್ನೇ ಪ್ರಶ್ನಿಸಿದರು. ಲೇಖನ ಬರೆದರು. ನವ್ಯಸಾಹಿತಿಗಳಲ್ಲಿ ಕೆಲವರು ಅಡಿಗರ ಬೆಂಬಲಕ್ಕೆ ನಿಂತರು. ಆದರೆ ಅಡಿಗರ ನಿಲುವು ತಾತ್ವಿಕವೆ ವೈಯಕ್ತಿಕವೆ ಎಂಬ ಅನುಮಾನಕ್ಕೆ ಅವಕಾಶವಿದೆ. ಈ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆಗೆ ಮೊದಲು ಒಪ್ಪಿಕೊಂಡು, ದೇಜಗೌ ಅವರು ಅಧ್ಯಕ್ಷರಾಗಿ ಆಯ್ಕೆಯಾದ ನಂತರ ನಿರಾಕರಿಸಿದ್ದಲ್ಲದೆ ಸಾಹಿತ್ಯ ಪರಿಷತ್ತಿನ ಪ್ರಸ್ತುತತೆಯನ್ನೇ ಪ್ರಶ್ನಿಸಿದ್ದನ್ನು ಗಮನಿಸಿದಾಗ, ಪ್ರಸ್ತುತ – ಅಪ್ರಸ್ತುತ ವಿಷಯಕ್ಕೂ ದೇಜಗೌ ಆಯ್ಕೆಗೂ ಸಂಬಂಧವಿರುವುದು ಸ್ಪಷ್ಟವಾಗುತ್ತದೆ. ಮುಂದೆ ೧೯೭೯ರಲ್ಲಿ ಧರ್ಮಸ್ಥಳದಲ್ಲಿ ನಡೆದ ಸಾಹಿತ್ಯ ಸಮ್ಮೇಳನಕ್ಕೆ ಅಡಿಗರು ಅಧ್ಯಕ್ಷರಾದಾಗ ಪ್ರಸ್ತುತತೆಯ ಪ್ರಶ್ನೆ ಅಪ್ರಸ್ತುತವಾದದ್ದು ಈಗ ಇತಿಹಾಸ!
ತುಮಕೂರಿನಲ್ಲಿ ನಡೆದ ೬೯ನೇ ಸಾಹಿತ್ಯ ಸಮ್ಮೇಳನಕ್ಕೆ ಡಾ. ಯು.ಆರ್. ಅನಂತ ಮೂರ್ತಿಯವರು ಅಧ್ಯಕ್ಷರಾಗಿ ಆಯ್ಕೆಯಾದಾಗ ಅಪಸ್ವರದ ಅಬ್ಬರ ಕೇಳಿಸಿತು. ಪತ್ರಿಕಾ ಹೇಳಿಕೆ, ಕರಪತ್ರ, ಇತ್ಯಾದಿ ವಿಧಾನಗಳ ಮೂಲಕ ಅತೃಪ್ತಿ ಅಭಿವ್ಯಕ್ತವಾಯಿತು. ಅನಂತಮೂರ್ತಿ ಯವರ ಕೆಲವು ಅಭಿಪ್ರಾಯ ಹಾಗೂ ನಡವಳಿಕೆಗಳ ಬಗ್ಗೆ ಆಕ್ಷೇಪಗಳಿವೆಯಾದಾದರೂ ಸಮ್ಮೇಳನದ ಅಧ್ಯಕ್ಷರಾಗಲು ಅವರೂ ಅರ್ಹರಲ್ಲಿ ಒಬ್ಬರು ಎಂದು ನನ್ನ ಭಾವನೆ. ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಅನಂತಮೂರ್ತಿಯವರ ಬಗ್ಗೆ ಆಕ್ಷೇಪವೆತ್ತಿದವರು ಮುಂದಿನ ಸಮ್ಮೇಳನಕ್ಕೆ ಪ್ರಧಾನವಾಗಿ ಪತ್ರಕರ್ತರಾದ ಶ್ರೀ ಪಾಟೀಲ ಪುಟ್ಟಪ್ಪನವರು ಆಯ್ಕೆಯಾದ ಬಗ್ಗೆ ವಿವಾದವುಂಟು ಮಾಡಲಿಲ್ಲವೆನ್ನುವುದು ಅನೇಕ ಸಂಗತಿಗಳನ್ನು ಸ್ವಯಂವೇದ್ಯಗೊಳಿಸುತ್ತದೆ. ಹಿರಿಯರಾದ ಪಾಟೀಲ ಪುಟ್ಟಪ್ಪನವರ ಕನ್ನಡಪರ ಬದ್ಧತೆ ಅಷ್ಟೇ ಹಿರಿದಾದುದು. ಆದರೆ ವಿವಾದಗಳು ಏಳುವುದು ಬೀಳುವುದು ಯಾಕೆ ಎಂಬ ಯಕ್ಷಪ್ರಶ್ನೆಗೆ ಒಳ ಉತ್ತರಗಳೂ ಇರುತ್ತದೆಯೆಂಬುದನ್ನು ಇಂತಹ ಕೆಲವು ಪ್ರಸಂಗಗಳು ಮನವರಿಕೆ ಮಾಡಿಕೊಡುತ್ತವೆ.
(೨) ಸಾಹಿತ್ಯ ಸಮ್ಮೇಳನಗಳಲ್ಲಿ ಏರ್ಪಡಿಸುವ ಗೋಷ್ಠಿಗಳ ವಿಷಯ ಮತ್ತು ವ್ಯಕ್ತಿಗಳ ಆಯ್ಕೆ ಕುರಿತ ಅಸಮಾಧಾನ ಯಾವಾಗಲೂ ಇರುತ್ತದೆ. ಅಂತೆಯೇ ಈ ಅಂಶಕ್ಕೆ ಸಂಬಂಧಿಸಿದಂತೆ ಸರ್ವರನ್ನೂ ಸಮಾಧಾನಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ ಮತ್ತು ಅದನ್ನು ನಿರೀಕ್ಷಿಸಲೂಬಾರದು. ಸ್ಥಳೀಯ ವಿಷಯಗಳಿಲ್ಲ, ಸ್ಥಳೀಯರಿಗೆ ಅವಕಾಶವಿಲ್ಲ ಎಂಬ ಆಕ್ಷೇಪವನ್ನೂ ಒಳಗೊಂಡಂತೆ ಇಂತಹ ವಿಷಯದ ಗೋಷ್ಠಿ ಇರಬೇಕಿತ್ತು, ಇಂಥ ವಿಷಯ ಇರಬಾರದಿತ್ತು ಎಂಬ ಟೀಕೆಗಳು ಕೇಳಿಬರುತ್ತಲೇ ಇರುತ್ತವೆ. ಬಹಳಷ್ಟು ಸಾರಿ ಸಾಹಿತ್ಯೇತರ ಮತ್ತು ಸಾಂಸ್ಕೃತಿಕೇತರ ವಿಷಯ ಮತ್ತು ವ್ಯಕ್ತಿಗಳ ಪರವೇ ಒತ್ತಾಯಗಳಿರುತ್ತವೆ. ಒಂದೇ ಸಮ್ಮೇಳನದಲ್ಲಿ ಎಲ್ಲ ವಿಷಯಗಳನ್ನೂ ಒಳಗೊಳ್ಳಲಾಗದು ಎಂಬ ವಾಸ್ತವವನ್ನು ಒಪ್ಪಿಕೊಳ್ಳುತ್ತಲೇ ಸಾಹಿತ್ಯ ಸಮ್ಮೇಳನಗಳ ಗೋಷ್ಠಿಗಳ ಸ್ವರೂಪ ಕುರಿತು ಅರ್ಥಪೂರ್ಣ ಚರ್ಚೆಯನ್ನು ಅಪೇಕ್ಷಿಸುವುದು ತಪ್ಪಲ್ಲ. ಇಷ್ಟು ವರ್ಷಗಳ ಅನುಭವದ ಹಿನ್ನೆಲೆಯಲ್ಲಿ ಈ ಚರ್ಚೆ ನಡೆದು ಸಾರ್ವಜನಿಕ ಮನವರಿಕೆಗೆ ಮುಂದಾಗಬಹುದಾಗಿದೆ.
ಗೋಷ್ಠಿಗಳ ವಿಷಯದಲ್ಲಿ ವಿವಾದವುಂಟಾಗಿ ಅರ್ಥ-ಅನರ್ಥಗಳಿಗೆ ಕಾರಣವಾದ ಎರಡು ಪ್ರಸಂಗಗಳನ್ನು ಇಲ್ಲಿ ಪ್ರಸ್ತಾಪಿಸಬಹುದು. ಒಂದು – ೧೯೭೯ರಲ್ಲಿ ನಡೆದ ಪ್ರಸಂಗ, ಅಡಿಗರ ಅಧ್ಯಕ್ಷತೆಯಲ್ಲಿ ನಡೆದ ಸಮ್ಮೇಳನಕ್ಕೆ ಮುಂಚೆ ಸದರಿ ಸಮ್ಮೇಳನದಲ್ಲಿ ದಲಿತ ಗೋಷ್ಠಿ (ವಿಶೇಷ ವಾಗಿ ಸಾಹಿತ್ಯಕ್ಕೆ ಸಂಬಂಧಿಸಿ) ಇರಬೇಕೆಂದು ಶ್ರೀ ಚೆನ್ನಣ್ಣ ವಾಲೀಕಾರ ಮತ್ತಿತರ ಸ್ನೇಹಿತರು ಒತ್ತಾಯ ಮಾಡಿದರು. ಆಗ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಡಾ. ಹಂಪನಾ ಅವರು ‘ಸಾಹಿತ್ಯದಲ್ಲಿ ದಲಿತ, ಬಲಿತ, ಕಲಿತ ಎಂಬುದಿಲ್ಲ’ ಎಂದು ಪ್ರಾಸಬದ್ಧವಾದ ಲಘು ಪ್ರತಿಕ್ರಿಯೆ ನೀಡಿದರು. ಈ ಲಘು ಪ್ರತಿಕ್ರಿಯೆಯು ಗುರುತರ ಚರ್ಚೆಗೆ ಕಾರಣವಾಯಿತು. ದಲಿತ ಮತ್ತು ಪ್ರಗತಿಪರ ಸಾಹಿತಿಗಳು – ವಿಶೇಷವಾಗಿ ಅಂದಿನ ಯುವ ಸಾಹಿತಿಗಳು – ಪರಿಷತ್ತಿನ ಧೋರಣೆಯನ್ನು ಖಂಡಿಸಿದರು. ಈ ಮೂಲಕ ಪ್ರಗತಿಪರ ಚಿಂತನೆಯ ದಲಿತ ಮತ್ತು ದಲಿತೇತರ ಸಾಹಿತಿಗಳು ಒಂದಾಗಿ ಪ್ರತಿರೋಧ ಒಡ್ಡುವ ಪ್ರಕ್ರಿಯೆಗೆ ಒಂದು ಚಾಲನೆ ಸಿಕ್ಕಿತು. (ಈಗ ಹಂಪನಾ ಅವರೇ ದಲಿತರ ಪರ ಕಾಳಜಿ ಹೊಂದುವಷ್ಟು ಆರೋಗ್ಯಕರವಾಗಿ ಬದಲಾಗಿದ್ದಾರೆ) ಎರಡನೆಯ ಪ್ರಸಂಗ – ಶಿವಮೊಗ್ಗದಲ್ಲಿ ನಡೆದ ಹಿಂದಿನ ವರ್ಷದ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದ್ದು. ಈ ಸಮ್ಮೇಳನದ ಪ್ರಾರಂಭದಲ್ಲೇ ಮುಖ್ಯಮಂತ್ರಿಗಳನ್ನು ಸರಿಯಾಗಿ ಆಹ್ವಾನಿಸಿಲ್ಲ ಎಂಬ ವಿವಾದ ಎದ್ದಿತ್ತು. ಇದನ್ನು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಚಂದ್ರ ಶೇಖರ ಪಾಟೀಲರು ವಿವಾದವಾಗದಂತೆ ಪರಿಹರಿಸಿಕೊಳ್ಳಬಹುದಿತ್ತೆಂಬ ಅಭಿಪ್ರಾಯ ಆಗ ಬಲವಾಗಿತ್ತು. ಈ ಸಣ್ಣ ವಿವಾದವನ್ನು ಮೀರಿಸಿ ಗೋಷ್ಠಿಗೆ ಸಂಬಂಧಿಸಿದ ವಿವಾದ ಭುಗಿಲೆದ್ದಿತು. ಒಂದು ಗೋಷ್ಠಿಗೆ ಗೌರಿ ಲಂಕೇಶ್, ವಿಠಲಹೆಗಡೆ ಮುಂತಾದವರನ್ನು ಆಹ್ವಾನಿಸಲಾಗಿತ್ತು. ಇವರು ನಕ್ಸಲಿಸಂ ಪರವಾದವರೆಂದು ಆರೋಪಿಸಿದ ಸಂಘ ಪರಿವಾರದ ‘ಶ್ರೇಷ್ಠರು’ ವೇದಿಕೆಗೆ ನುಗ್ಗಿ ಗದ್ದಲ ಮಾಡಿದರು. ಪೋಲೀಸರ ಪ್ರವೇಶ ಮತ್ತು ಲಾಠಿ ಚಾರ್ಜ್‌ಗೆ ಕಾರಣವಾದ ಈ ಗೋಷ್ಠಿಯ ಆಯೋಜನೆ ಮತ್ತು ಅತಿಥಿಗಳ ಆಯ್ಕೆಯನ್ನು ಚಂದ್ರಶೇಖರ ಪಾಟೀಲರು ಬಲವಾಗಿ ಸಮರ್ಥಿಸಿಕೊಂಡರು. ಅಂದಿನ ಉಪಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರಾದಿಯಾಗಿ ಅನೇಕ ಮುಖಂಡರು ಸಂಘಪರಿವಾರದ ದಾಂಧಲೆ ಬಗ್ಗೆ ಸಹಾನುಭೂತಿ ಪರವಾಗಿದ್ದರು. ಆದರೂ ಚಂಪಾ ಅವರು ಪ್ರಜಾಸತ್ತಾತ್ಮಕ ಮೌಲ್ಯಕ್ಕೆ ಬದ್ಧವಾಗಿ ನೀಡಿದ ಸಮರ್ಥನೆ ಸರಿಯಾಗಿತ್ತು. ಗೌರಿ ಲಂಕೇಶ್, ವಿಠಲ ಹೆಗಡೆಯವರ ನಿಲುವನ್ನು ಒಪ್ಪದೇ ಇರಬಹುದು. ಆದರೆ ಅವರು ಸಮ್ಮೇಳನದಲ್ಲಿ ಭಾಗವಹಿಸಿ ಮಾತಾಡಲೇಬಾರದು ಎಂಬ ಹಟಮಾರಿ ನಿಲುವು ಅನರ್ಥಕಾರಿಯಾದುದು. ಅರ್ಥಪೂರ್ಣ ವಾಗ್ವಾದಕ್ಕೆ ಪೂರಕವಾಗುವುದು, ಪರಸ್ಪರ ಗೌರವಯುತ ಮುಖಾ ಮುಖಿಗೆ ಮುಂದಾಗುವುದು ತಪ್ಪಲ್ಲ. ಆದರೆ ಇಲ್ಲಿ ಹಾಗಾಗಲಿಲ್ಲ. ಹೀಗೆ, ಇಲ್ಲಿ ಉದಾಹರಿಸಿದ ಎರಡು ಪ್ರಸಂಗಗಳು ಅರ್ಥ-ಅನರ್ಥಗಳ ಸಂಕೇತಗಳೂ ಆಗಬಹುದು.
(೩) ತಾತ್ವಿಕವಾಗಿ ಭಿನ್ನ ನೆಲೆ-ನಿಲುವುಗಳ ಕಾರಣದಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನಗಳಿಗೆ ಪರ್ಯಾಯ ನೆಲೆಗಳು ಹುಟ್ಟಿಕೊಂಡದ್ದು, ಬೆಳೆದದ್ದು ಗಮನಿಸಲೇಬೇಕಾದ ಸಂಗತಿಯಾಗಿದೆ. ತಾತ್ವಿಕ ಭಿನ್ನ ನೆಲೆಗಳ ಕ್ರಿಯೆ ಕೇವಲ ಇತ್ತೀಚಿನದಲ್ಲ. ೧೯೪೩ರಲ್ಲಿ ಶಿವಮೊಗ್ಗ ದಲ್ಲಿ ನಡೆದ ೨೭ನೇ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ (ಡಿಸೆಂಬರ್ ೨೬, ೨೭, ೨೮) ಪ್ರಗತಿಶೀಲ ಲೇಖಕರು ಒಗ್ಗೂಡಿ ಒಂದು ಒಕ್ಕೂಟವನ್ನು ರಚಿಸಿಕೊಂಡರು. ಅದನ್ನು ‘ಪ್ರಗತಿ ಶೀಲ ಲೇಖಕರ ಒಕ್ಕೂಟ’ವೆಂದು ಕರೆಯಲಾಯಿತು. ಸಾಹಿತ್ಯ ಪರಿಷತ್ತಿನ ಸಾಹಿತ್ಯ ಸಮ್ಮೇಳನಕ್ಕೆ ದ.ರಾ. ಬೇಂದ್ರೆಯವರು ಅಧ್ಯಕ್ಷರಾಗಿದ್ದರು. ಬೇಂದ್ರೆಯವರ ಬಗ್ಗೆ ಭಿನ್ನಾಭಿಪ್ರಾಯವಿರಲಿಲ್ಲ. ಭಾರತದಲ್ಲಿ ಪ್ರಗತಿಶೀಲ ಸಾಹಿತ್ಯ ಚಳವಳಿ ರೂಪುಗೊಳ್ಳುತ್ತಿದ್ದ ಕಾಲವದು. ಹಿಂದಿನ ವರ್ಷ ಮುಂಬಯಿಯಲ್ಲಿ ನಡೆದ ಪ್ರಗತಿಶೀಲ ಸಾಹಿತ್ಯ ಸಮ್ಮೇಳನಕ್ಕೆ ಖ್ಯಾತ ನಾಟಕಕಾರ ಶ್ರೀರಂಗರು ಹೋಗಿ ಬಂದಿದ್ದರು. ಸಾಹಿತ್ಯ ಪರಿಷತ್ತಿನ ನೆಲೆ-ನಿಲುವುಗಳಿಗೆ ಭಿನ್ನವಾಗಿ ಪ್ರಗತಿಪರ ಚಿಂತನೆಯ ಲೇಖಕರು ಒಂದಾಗಿ ಕ್ರಿಯಾಶೀಲರಾಗಬೇಕೆಂಬ ಹಂಬಲದಿಂದ ಹುಟ್ಟಿದ ಒಕ್ಕೂಟದಲ್ಲಿ ಶ್ರೀರಂಗ, ಅ.ನ.ಕೃ., ನಿರಂಜನ, ಬಸವರಾಜ ಕಟ್ಟಿಮನಿ, ಕೃಷ್ಣಕುಮಾರ ಕಲ್ಲೂರ, ಇನಾಂದಾರ್ ಮುಂತಾದ ಅನೇಕ ಪ್ರಸಿದ್ದರು ಇದ್ದರು. ಮುಂದೆ ೧೯೫೨ನೇ ಜೂನ್ ೪ ರಿಂದ ೭ರ ವರೆಗೆ ಹಿರಿಯೂರಿನಲ್ಲಿ ಪ್ರಗತಿಶೀಲ ಲೇಖಕರ ಸಮಾವೇಶ ನಡೆಯಿತು. ಆನಂತರದ ದಿನಗಳಲ್ಲಿ ಅ.ನ.ಕೃ. ಮತ್ತು ನಿರಂಜನರ ನಡುವೆ ತಾತ್ವಿಕ ಭಿನ್ನಾಭಿಪ್ರಾಯವುಂಟಾಗಿ ಒಕ್ಕೂಟದ ಒಡಕಿನಲ್ಲಿ ಪರ್‍ಯಾವಸಾನವಾಯಿತು. ಇದು ನಡೆದದ್ದು ೧೯೫೪ರಲ್ಲಿ. ಅ.ನ.ಕೃ. ಅವರು ವೇಶೈಯರನ್ನು ಕುರಿತು ಬರೆದ ನಗ್ನಸತ್ಯ, ಸಂಜೆಗತ್ತಲು ಮತ್ತು ಶನಿಸಂತಾನ – ಎಂಬ ಕಾದಂಬರಿಗಳು ವಿವಾದದ ಕೇಂದ್ರವಾದವು. ಅ.ನ.ಕೃ. ಅವರು ಸಂಪ್ರದಾಯವಾದಿಗಳ ವಿರೋಧದ ಜೊತೆಗೆ ನಿರೂಪಣೆಯ ವಿಧಾನ ಮತ್ತು ವಸ್ತು ನಿರ್ವಹಣೆ ಕುರಿತಂತೆ ನಿರಂಜನರಾದಿಯಾಗಿ ಇನ್ನು ಕೆಲವರಿಂದ ಪ್ರತಿರೋಧ ಎದುರಿಸಿದರು. ತಮ್ಮ ನಿಲುವಿನ ಸಮರ್ಥನೆಗಾಗಿ ‘ಸಾಹಿತ್ಯ ಮತ್ತು ಕಾಮ ಪ್ರಚೋದನೆ’ ಎಂಬ ಕೃತಿಯನ್ನು ಬರೆದರು.
ಮುಂದೆ ೧೯೭೯ರ ಮಾರ್ಚ್ ತಿಂಗಳಲ್ಲಿ ನಡೆದ ಸಾಹಿತ್ಯ ಸಮ್ಮೇಳನವು ವಿವಾದಕ್ಕೆ ಗುರಿಯಾಯಿತು. ಗೋಪಾಲ ಕೃಷ್ಣ ಅಡಿಗರು ಅಧ್ಯಕ್ಷರಾಗಿದ್ದ ಮತ್ತು ಧರ್ಮಸ್ಥಳದಲ್ಲಿ ನಡೆದ ಈ ಸಮ್ಮೇಳನದ ದಿನಗಳಂದೇ ಬೆಂಗಳೂರಲ್ಲಿ ಬಂಡಾಯ ಸಾಹಿತ್ಯ ಸಮ್ಮೇಳನ ನಡೆಯಿತು. ಎಪ್ಪತ್ತರ ದಶಕದಲ್ಲಿ ಕನ್ನಡ ಸಾಹಿತ್ಯದಲ್ಲಿ ಬೆಳೆಯುತ್ತ ಬಂದ ಎಡಪಂಥೀಯ, ಪ್ರಗತಿಪರ, ಪ್ರಜಾಸತ್ತಾತ್ಮಕ ನಿಲುವುಗಳಿಗೆ ಸಂಘಟನೆಯ ನೆಲೆ ಒದಗಿಸಲು ಧರ್ಮಸ್ಥಳದ ಸಮ್ಮೇಳನ ಒಂದು ಸನ್ನಿವೇಶವನ್ನು ಒದಗಿಸಿತು. ಆ ವೇಳೆಗಾಗಲೇ ಅಡಿಗರು ರಾಜಕೀಯವಾಗಿ ಸಂಘ ಪರಿವಾರದವರಾಗಿದ್ದರು. ಹಂಪನಾ ಅವರು ಸಮ್ಮೇಳನವನ್ನು ‘ಧರ್ಮಸ್ಥಳ’ಕ್ಕೆ ಕೊಂಡೊಯ್ದಿದ್ದರು. ಈ ವೇಳೆಗೆ ಕರ್ನಾಟಕದಲ್ಲಿ ದಲಿತ ಸಂಘರ್ಷ ಸಮಿತಿ, ಸಮುದಾಯದಂತಹ ಆಂದೋಲನಾತ್ಮಕ ಸಂಘಟನೆಗಳು ಕ್ರಿಯಾಶೀಲವಾಗಿದ್ದವು. ಸಾಹಿತ್ಯ ಕ್ಷೇತ್ರದಲ್ಲಿ ಇಂತಹ ಆಂದೋಲನಕ್ಕೆ ಅವಕಾಶವಿತ್ತು. ಅದು ಅನಿವಾರ್ಯವೂ ಆಗಿತ್ತು. ಆ ವೇಳೆಗೆ ರಾಷ್ಟ್ರದಲ್ಲಿ ರಾಜಕೀಯವಾಗಿ ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳ ದ್ರುವೀಕರಣ ಆರಂಭವಾಗಿತ್ತು. ಸಾಹಿತ್ಯ ಕ್ಷೇತ್ರದಲ್ಲೂ ಇಂತಹ ಧ್ರುವೀಕರಣದ ಅಗತ್ಯವನ್ನು ಕರ್ನಾಟಕವು ಮೊದಲನೇ ಬಂಡಾಯ ಸಾಹಿತ್ಯ ಸಮ್ಮೇಳನದ ಮೂಲಕ ಕಂಡುಕೊಂಡಿತು. ಮಾರ್ಕ್ಸ್‌ವಾದ, ಗಾಂಧಿವಾದ, ಅಂಬೇಡ್ಕರ್‌ವಾದ, ಲೋಹಿಯಾ ವಾದ – ಇವೇ ಮುಂತಾದ ತಾತ್ವಿಕ ನಂಬಿಕೆಯಿರುವವರು ಮತ್ತು ಒಟ್ಟಾರೆ ಪ್ರಗತಿಪರರು ಬಂಡಾಯ ಸಾಹಿತ್ಯ ಸಂಘಟನೆಯ ವಿಶಾಲ ತಳಹದಿಯ ಮೇಲೆ ಒಂದಾದರು. ಆರಂಭದ ಕೆಲ ವರ್ಷ ತಾತ್ವಿಕ ಗಟ್ಟಿತನವನ್ನು ಬೆಳೆಸಿಕೊಳ್ಳುವ ಕಾರ್ಯತಂತ್ರವಾಗಿ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಲ್ಲಿ ಭಾಗವಹಿಸದಿರಲು ನಿರ್ಧರಿಸಲಾಯಿತು. ಇದು ನಮ್ಮನ್ನು ನಾವು ಗಟ್ಟಿ ಗೊಳಿಸಿಕೊಳ್ಳುವ ಕಾರ್ಯತಂತ್ರವಾಗಿದ್ದರಿಂದ ಆನಂತರ ‘ಯಾವುದೇ ಸಂಸ್ಥೆಗೆ ಹೋದರೂ ನಮ್ಮ ವಿಚಾರಗಳನ್ನು ಪ್ರತಿಪಾದಿಸಬೇಕು’ ಎಂಬ ಬದ್ಧತೆಯಿಂದ ಷರತ್ತನ್ನು ತೆರವುಗೊಳಿಸಲಾಯಿತು. ಒಟ್ಟಾರೆ ಕ್ರಿಯಾಶೀಲತೆಯ ಏರಿಳಿತಗಳಿದ್ದರೂ ಬಂಡಾಯ ಸಾಹಿತ್ಯ ಸಂಘಟನೆ ಈಗಲೂ ಇದೆ. ತನ್ನ ಮೊದಲನೇ ಸಮ್ಮೇಳನದ ಕರಪತ್ರದಲ್ಲೇ ಸ್ಪಷ್ಟಪಡಿಸಿದಂತೆ ‘ಇದು ಕೇವಲ ಒಬ್ಬ ವ್ಯಕ್ತಿ ಅಥವಾ ಒಂದು ಸಂಸ್ಥೆಯ ವಿರುದ್ಧವಲ್ಲ’ ಸಾಂಸ್ಕೃತಿಕವಾಗಿ ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳನ್ನು ಕ್ರೋಢೀಕರಿಸುವ ಚಳವಳಿ.
ತಾತ್ವಿಕ ವಿವಾದದ ಕಾರಣ ಹೇಳಿ ಹುಟ್ಟಿದ ಇನ್ನೊಂದು ಸಮ್ಮೇಳನ (ಸಂಘಟನೆಯಲ್ಲ) ‘ಜಾಗೃತ ಸಾಹಿತ್ಯ ಸಮ್ಮೇಳನ’, ೧೯೯೦ರ ಫೆಬ್ರವರಿಯಲ್ಲಿ ಹುಬ್ಬಳ್ಳಿಯಲ್ಲಿ ನಡೆದ ‘ಕನ್ನಡ ಸಾಹಿತ್ಯ ಸಮ್ಮೇಳನ’ಕ್ಕೆ ಪ್ರತಿಯಾಗಿ ಅಥವಾ ಪರ್ಯಾಯವಾಗಿ ಬೆಂಗಳೂರಿನಲ್ಲಿ ಜಾಗೃತ ಸಾಹಿತ್ಯ ಸಮ್ಮೇಳನ ನಡೆಯಿತು. ೧೯೯೦ರ ೫೯ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಡಾ. ಆರ್.ಸಿ. ಹಿರೇಮಠ ಅವರು ಅಧ್ಯಕ್ಷರಾಗಿ ಆಯ್ಕೆಯಾದಾಗ ವಿವಾದದ ಅಲೆಗಳು ಎದ್ದವು. ಕೆಲವರು ಶ್ರೇಷ್ಠತೆಯ ಪ್ರಶ್ನೆಯನ್ನು ಎತ್ತಿದರು ಮತ್ತು ಶ್ರೇಷ್ಠತೆಯ ವಾದವನ್ನು ಬೆಳೆಸಿದರು. ಸಾಹಿತ್ಯದ ಶ್ರೇಷ್ಠತೆ ಮುಖ್ಯವೆಂದು ಪ್ರತಿಪಾದಿಸಿದ ಈ ಗೆಳೆಯರಲ್ಲಿ ಕೆಲವರಿಗಾದರೂ ಶ್ರೇಷ್ಠತೆಯ ಪ್ರಶ್ನೆ ಜಟಿಲವೆಂಬ ಅರಿವು ಇತ್ತೆಂದು ನಾನು ಭಾವಿಸುತ್ತೇನೆ. ಆದರೆ ಎಲ್ಲರಿಗೂ ಈ ಅರಿವು ಇರಲಿಲ್ಲವಾದ್ದರಿಂದ ನವ್ಯ ಸಾಹಿತ್ಯದ ವ್ಯಕ್ತಿನಿಷ್ಠ ಶ್ರೇಷ್ಠತೆಯ ಹಿನ್ನೆಲೆ ಪಡೆದಿದ್ದವರೇ ಹೆಚ್ಚಾಗಿ ‘ಜಾಗೃತ ಸಾಹಿತ್ಯ ಸಮ್ಮೇಳನ’ದ ಭಾಗವಾಗಿದ್ದರು. ನವ್ಯ ಸಾಹಿತ್ಯದ ಶ್ರೇಷ್ಠತೆಯ ಕಲ್ಪನೆ ಪುನರ್ ನವೀಕರಣಗೊಳ್ಳುವ ಲಕ್ಷಣಗಳು ಕಾಣಿಸಿದ ಈ ಸಮ್ಮೇಳನವು ಚರ್ಚೆ ಮತ್ತು ಭಾಗ ವಹಿಸುವಿಕೆಯ ದೃಷ್ಟಿಯಿಂದ ಯಶಸ್ವಿಯಾಯಿತೆಂದೇ ಹೇಳಬೇಕು. ಆದರೆ ಈ ದೇಶದ ಸಾಮಾಜಿಕ ಸ್ತರಗಳಿಂದುಂಟಾದ ವೈರುಧ್ಯಗಳನ್ನು ಗ್ರಹಿಸದೆ ಕೇವಲ ವ್ಯಕ್ತಿನಿಷ್ಠ ಅನುಭವ ಮತ್ತು ಕೃತಿನಿಷ್ಠ ನೆಲೆಯನ್ನು ಗಮನಿಸಿ ಪ್ರತಿಪಾದಿತವಾಗುವ ಸೀಮಿತ ಶ್ರೇಷ್ಠತೆಯ ಕಲ್ಪನೆಯ ಎದುರು ಅನೇಕ ಪ್ರಶ್ನೆಗಳಿವೆಯೆಂಬುದನ್ನು ಮರೆಯಬಾರದು. ‘ಶ್ರೇಷ್ಠತೆ’ಯು ಪ್ರಗತಿಪರಬದ್ಧ ಲೇಖಕರನ್ನು ಮುಗಿಸುವ ಒಂದು ಅಸ್ತ್ರವಾಗಬಾರದು. ‘ಜಾಗೃತ ಸಾಹಿತ್ಯ ಸಮ್ಮೇಳನ’ದಲ್ಲಿ ಭಾಗವಹಿಸಿದ ಕೆ.ವಿ. ಸುಬ್ಬಣ್ಣನವರು ಬರೆದ ‘ಶ್ರೇಷ್ಠತೆಯ ವ್ಯಸನ’ ಎಂಬ ಲೇಖನವನ್ನು ಇಲ್ಲಿ ನೆನೆಯಬಹುದು.
ಈಗ ೭೪ನೇ ಕನ್ನಡ ಸಾಹಿತ್ಯ ಸಮ್ಮೇಳನವು ಉಡುಪಿಯಲ್ಲಿ ನಡೆಯುವಾಗ ಸಂಘ ಪರಿವಾರದ ಸಂಬಂಧವುಳ್ಳವರೆಂದು ಭಾವಿಸಲಾದ ಪ್ರೊ. ಎಲ್.ಎಸ್. ಶೇಷಗಿರಿರಾಯರು ಅಧ್ಯಕ್ಷರಾಗಿರುವುದು ಮತ್ತು ಸಮ್ಮೇಳನದ ವ್ಯವಸ್ಥೆಯ ಮುಂಚೂಣಿಯಲ್ಲಿ ಸಂಘ ಪರಿವಾರದವರೇ ತುಂಬಿರುವುದು ತಮ್ಮ ತಾತ್ವಿಕ ವಿರೋಧಕ್ಕೆ ಕಾರಣವೆಂದು ಪ್ರತಿಪಾದಿಸಿರುವ ಕೋಮು ಸೌಹಾರ್ದ ವೇದಿಕೆಯ ಗೆಳೆಯರು ಇತರೆ ಪ್ರಗತಿಪರರ ಜೊತೆ ಸೇರಿ ಡಿಸೆಂಬರ್ ೯ ರಂದು ಉಡುಪಿಯಲ್ಲಿ ‘ಸೌಹಾರ್ದ ಸಾಹಿತ್ಯ ಸಮ್ಮೇಳನ’ವನ್ನು ಏರ್ಪಡಿಸಿದ್ದಾರೆ. ಶಿವಮೊಗ್ಗ ಸಾಹಿತ್ಯ ಸಮ್ಮೇಳನದಲ್ಲಿ ಕೋಮು ಸೌಹಾರ್ದ ವೇದಿಕೆಯವರ ಪರವಾಗಿ ನಿಂತ ಚಂದ್ರಶೇಖರ ಪಾಟೀಲರು ಈಗ ಅದೇ ವೇದಿಕೆಯವರ ಪ್ರತಿರೋಧವನ್ನು ಎದುರಿಸಬೇಕಾಗಿಬಂದದ್ದು ಒಂದು ವಿಪರ್ಯಾಸ! ಆದರೆ ಕೋಮುಸೌಹಾರ್ದ ವೇದಿಕೆಯ ಜೊತೆ ಉಡುಪಿಯ ಪ್ರಗತಿಪರರು (ಉದಾ: ಜಿ. ರಾಜಶೇಖರ್ ಮುಂತಾದವರು) ಸೇರಿದ ಮೇಲೆ ಸೌಹಾರ್ದ ಸಮ್ಮೇಳನವು ‘ಪರ್ಯಾಯ ಸಮ್ಮೇಳನವಲ್ಲ’ ಎಂದು ತಿಳಿಸಲಾಗಿದೆ. ಆದರೂ ತಾತ್ವಿಕ ಭಿನ್ನತೆ ಇದ್ದೇ ಇದೆ. ಹೀಗಾಗಿ ಸೌಹಾರ್ದ ಸಾಹಿತ್ಯ ಸಮ್ಮೇಳನವು ಧಾರ್ಮಿಕ ಮೂಲಭೂತವಾದಕ್ಕೆ ಪ್ರತಿರೋಧಿಯಾದ ಸಮ್ಮೇಳನವಾಗಲಿದೆ. ಚಂಪಾ ಅವರು ತಾವೂ ಈ ಸಮ್ಮೇಳನದಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ.
ಈ ತಾತ್ವಿಕ ಭಿನ್ನಮತದ ಘಟನೆಗಳು ಸಾಹಿತ್ಯ ಪರಿಷತ್ತಿನಂತಹ ಸಂಸ್ಥೆಗಳ ಇತಿಮಿತಿಯನ್ನು ತೋರಿಸುತ್ತವೆ. ಸಾಹಿತ್ಯ ಪರಿಷತ್ತಿನ ನೇತೃತ್ವ ವಹಿಸಿದವರು ಒಟ್ಟಾರೆ ಪ್ರಗತಿಪರ ಸ್ವರೂಪವನ್ನು ಪರಿಷತ್ತಿನ ವ್ಯಾಪ್ತಿಯಲ್ಲೇ ನೀಡಲು ಪ್ರಯತ್ನಿಸಬಹುದೆಂಬುದು ನಿಜವಾದರೂ ಅದು ತಾತ್ವಿಕವಾಗಿ ನಿರ್ದಿಷ್ಟ ಸಾಮಾಜಿಕ ರಾಜಕೀಯ ಬದ್ಧತೆ ತೋರುವುದು ಕಷ್ಟವೆಂದು ಇಲ್ಲೀವರೆಗಿನ ಬೆಳವಣಿಗೆಗಳು ತೋರಿಸಿವೆ – ಹೀಗಾಗಿ ತಾತ್ವಿಕ ವಿವಾದಗಳು ಹುಟ್ಟುತ್ತಲೇ ಇರುತ್ತವೆ.
*****
(ಡಿಸೆಂಬರ್ – ೨೦೦೭)