ಕಪ್ಪು ಜನರ ವಿಜಯ

ಕಪ್ಪು ಜನರ ವಿಜಯ

ದಕ್ಷಿಣ ಆಫ್ರಿಕಾದ ಕಪ್ಪು ಜನರ ಹಕ್ಕುಗಳಿಗಾಗಿ ನಿರಂತರ ಹೋರಾಟವನ್ನು ಬದುಕಿಸಿಕೊಂಡು ಬೆಳೆದ ನೆಲ್ಸನ್ ಮಂಡೇಲಾ ಅವರು ಈಗ ಆ ದೇಶದ ಮೊಟ್ಟ ಮೊದಲ ಕರಿ ಅಧ್ಯಕ್ಷ. ಕಪ್ಪು ಬಣ್ಣವನ್ನು ಕಳಂಕವೆಂಬಂತೆ ಕಾಣುವ ನಮ್ಮ ದೇಶವನ್ನು ಒಳಗೊಂಡಂತೆ ಜಗತ್ತಿನ ಸ್ವಾತಂತ್ರ್ಯ ಪ್ರಿಯರೆಲ್ಲ ಈ ಕಪ್ಪು ವಿಜಯಕ್ಕೆ ಸಂಭ್ರಮಿಸುತ್ತಿದ್ದಾರೆ. ಬಿಳಿಯರ ಆಳ್ವಿಕೆ ಕೊನೆಗೊಂಡದ್ದಕ್ಕಾಗಿ ಖುಷಿಪಡುತ್ತಿದ್ದಾರೆ. ತಮ್ಮ ಹೋರಾಟದ ಫಲವಾಗಿ ಓಟಿನ ಹಕ್ಕನ್ನು ಪಡೆದು ಹೊಸ ಅನುಭವದ ವಲಯವನ್ನು ಪ್ರವೇಶಿಸಿದ ಕಪ್ಪು ಜನರ ಆತ್ಮಸ್ಥೈರ್ಯ ಅಸಾಧಾರಣವಾದುದು. ಕಪ್ಪು ಬಣ್ಣದಲ್ಲಿ ಸೌಂದರ್ಯವನ್ನು ಕಂಡ ಕವಿ ಮನಸ್ಸಿನ ಸಹಜ ಹೋರಾಟ ಕೇವಲ ರಾಜಕೀಯವಾದುದಲ್ಲ. ಸಾಂಸ್ಕೃತಿಕವಾದುದೂ ಹೌದು, ಬಿಳಿ ಬಣ್ಣದ ಬುದ್ದಿಯಿಂದ ಹುಟ್ಟಿದ ಸಾಂಸ್ಕೃತಿಕ ಚಿಂತನೆಗಳು ಕಪ್ಪು ಬಣ್ಣದ ಕಾಣ್ಕೆಗೂ ಇರುವ ವ್ಯತ್ಯಾಸವನ್ನು ಗುರುತಿಸಿದರೆ ಈ ಹೋರಾಟದ ಸಾಂಸ್ಕೃತಿಕ ಮೌಲ್ಯ ಅರಿವಾಗುತ್ತದೆ. ಕಪ್ಪು ಜನರ ಸಾಹಿತ್ಯಾದಿ ಕಲಾಪ್ರಕಾರಗಳಲ್ಲಿ ಹುಟ್ಟಿದ ಹಾಗೂ ಚಿಂತನೆಯ ಕ್ರಮದಲ್ಲಿ ಕಂಡು ಬಂದ ವಿಶಿಷ್ಟ ನೆಲೆಗಳು ಮೌಲಿಕವಾಗಿವೆ. ಅನುಭವ, ಹೋರಾಟ, ಅರಿವು ಮತ್ತು ಅಭಿವ್ಯಕ್ತಿ ವಿಧಾನಗಳು ಒಂದಾದ ವಿನ್ಯಾಸ ವಿಶಿಷ್ಟವಾಗದೆ ಬೇರೇನು ಆಗಲು ಸಾಧ್ಯ?

ಕಪ್ಪು ಜನರು ಚುನಾವಣಾ ವಿಜಯವನ್ನು ಸಾಧಿಸಿರುವ ಈ ಸಂತೋಷದ ಸಂದರ್ಭದಲ್ಲಿ ಅವರ ಹೋರಾಟದ ಪ್ರಣಾಳಿಕೆಯಲ್ಲಿರುವ ಈ ಮಾತುಗಳು ನೆನಪಿಗೆ ಬರುತ್ತವೆ: “ನಮ್ಮ ದೇಶದ ಆಡಳಿತದಲ್ಲಿ ಭಾಗವಹಿಸುವ ಅಧಿಕಾರ ಎಲ್ಲರಿಗೂ ಬರುತ್ತದೆ. ಕುಲ, ಬಣ್ಣ ಮತ್ತು ಲಿಂಗ ಭೇದಗಳಿಲ್ಲದೆ ಸಮಾನವಾಗಿ ಬದುಕುವ ಹಕ್ಕು ಈ ದೇಶದ ಜನರಿಗೆ ದೊರಕುತ್ತದೆ. ಬಿಳಿಯರ ಆಳ್ವಿಕೆಯ ಎಲ್ಲ ಮಂಡಳಿ, ಪರಿಷತ್ ಮತ್ತು ಪ್ರಾಧಿಕಾರಗಳಲ್ಲಿ ಸ್ವಯಂ ಸರ್ಕಾರದ ಪ್ರಜಾಸತ್ತಾತ್ಮಕ ನೆಲೆಗಳು ಸ್ಥಾನ ಪಡೆಯುತ್ತವೆ. ತಮ್ಮ ಭಾಷೆಗಳನ್ನು ಬಳಸಿಕೊಳ್ಳುವ ಮತ್ತು ಜಾನಪದ ಸಂಸ್ಕೃತಿಯನ್ನು ಅಭಿವೃದ್ಧಿಗೊಳಿಸುವ ಸಮಾನ ಹಕ್ಕನ್ನು ಜನರು ಚಲಾಯಿಸುತ್ತಾರೆ. ಅವರವರ ಜನಾಂಗ ಮತ್ತು ರಾಷ್ಟ್ರೀಯ ಹಿರಿಮೆಗೆ ಧಕ್ಕೆಯಾಗದಂತೆ ರಾಷ್ಟ್ರೀಯ ಪಂಗಡಗಳು ಸಂರಕ್ಷಿತವಾಗುತ್ತವೆ.”

-ಹೀಗೆ ಘೋಷಣೆ ಮಾಡಿದ್ದು ಅನುಷ್ಠಾನಕ್ಕೆ ತರುವ ಅವಕಾಶ ಮತ್ತು ಅಧಿಕಾರ ಈಗ ಲಭ್ಯವಾಗಿದೆ. ಆದ್ದರಿಂದ ಹೊಣೆಗಾರಿಕೆಯೂ ಹೆಚ್ಚಿದೆ. ಅಧ್ಯಕ್ಷ ಪದವಿಗೆ ಬಂದಿರುವ ಹೋರಾಟಗಾರ ನೆಲ್ಸನ್ ಮಂಡೇಲಾ ಅವರು ಸ್ವಭಾವತಃ ಸಮಚಿತ್ತದ ಚಿಂತಕ, ಪ್ರಾರಂಭದಿಂದ ಇಂದಿನವರೆಗೂ ಹೇಳುತ್ತಿರುವ ಮಂಡೇಲಾ ಅವರ ಒಂದು ಮಾತು ಅವರ ಸಮಚಿತ್ತ ಚಿಂತನೆಗೆ ಸಾಕ್ಷಿಯಾಗಿದೆ. ಅವರು ಹೀಗೆ ಹೇಳುತ್ತ ಬಂದಿದ್ದಾರೆ: “ನಾನು ಬಿಳಿಯರ ಪ್ರಾಬಲ್ಯವನ್ನು ವಿರೋಧಿಸಿ ಹೋರಾಡಿದ್ದೇನೆ. ಅಂತೆಯೇ ಕರಿಯರ ಪ್ರಾಬಲ್ಯವನ್ನೂ ವಿರೋಧಿಸಿ ಹೋರಾಡಿದ್ದೇನೆ. ಸಮಾನ ಅವಕಾಶ ಮತ್ತು ಸಾಮರಸ್ಯದಿಂದ ಎಲ್ಲ ಜನರ ಬದುಕುವಂಥ, ಪ್ರಜಾಸತ್ತಾತ್ಮಕ ಸ್ವತಂತ್ರ ಸಮಾಜವನ್ನು ನಾನು ಬಯಸುತ್ತೇನೆ. ಇದು ನಾನು ಸಾಧಿಸಬಯಸುವ ಮತ್ತು ಬದುಕು ಬಯಸುವ ಆದರ್ಶ, ಅಗತ್ಯವಾದರೆ ನಾನು ಈ ಆದರ್ಶಕ್ಕಾಗಿ ಸಾಯಲು ಸಿದ್ಧ.”

ಮಂಡೇಲಾ ಅವರು ಈ ಆದರ್ಶಕ್ಕಾಗಿಯೇ ಇಂದು ಅಗತ್ಯವಾಗಿ ಬದುಕಬೇಕಾಗಿದೆ. ಕಪ್ಪುಜನರ ಕಣ್ಣಿನ ಚಿಮ್ಮುವ ಮಿಂಚಿನ ಬೆಳಕಲ್ಲಿ ಹೊಸ ಹೋರಾಟದ ಹಾದಿಗಳನ್ನು ಹುಡುಕಬೇಕಾಗಿದೆ. ಯಾಕೆಂದರೆ ಅಧಿಕೃತ ಅಧಿಕಾರದ ವಿರುದ್ಧ ಹೋರಾಟದ ಹಕ್ಕನ್ನು ಚಲಾಯಿಸುವುದಕ್ಕೆ ಅಧಿಕಾರ ಮತ್ತು ಹಕ್ಕುಗಳನ್ನು ಒಟ್ಟಿಗೆ ಚಲಾಯಿಸುವುದಕ್ಕೂ ಅಂತರವಿದೆ, ಹೋರಾಟಗಾರನೊಬ್ಬ ಅಧಿಕಾರಕ್ಕೆ ಬಂದಾಗ ಎದುರಾಗುವ ವೈರುಧ್ಯಗಳನ್ನು ಅರಗಿಸಿಕೊಳ್ಳುವ ಮೊದಲ ಮಾನಸಿಕ ಸವಾಲನ್ನು ಮಂಡೇಲಾ ಅವರು ಎದುರಿಸಬೇಕಾಗಿದೆ. ಹೋರಾಟದ ಸಂದರ್ಭದಲ್ಲಿದ್ದ ಹಕ್ಕುಗಳನ್ನು ಅಧಿಕಾರವಾಗಿ ಪರಿವರ್ತಿಸುವ ಪ್ರಕ್ರಿಯೆ ಸಾಧಾರಣವಾದುದಲ್ಲ. ಹೋರಾಟದ ಮನೋಧರ್ಮ ಮುಕ್ಕಾಗದಂತೆ, ಅಧಿಕಾರದ ಹೊಣೆ ಹುಡುಗಾಟವಾಗದಂತೆ ಎಚ್ಚರವಹಿಸುವ ಮನೋಧರ್ಮವೊಂದು ರೂಪುಗೊಳ್ಳಬೇಕಾಗುತ್ತದೆ. ಇದು ಮಂಡೇಲಾ ಅವರು ವ್ಯಕ್ತಿಯಾಗಿ ಎದುರಿಸಬಹುದಾದ ಆಂತರಿಕ ಸಮಸ್ಯೆ. ಇದನ್ನು ಬಾಹ್ಯ ಸಮಸ್ಯೆಗಳು ಬಾಯ್ತೆರೆದು ಬಿಳಿ ನಾಲಿಗೆ ಚಾಚಿ ಬೆಚ್ಚಿ ಬೀಳಿಸುತ್ತೆ. ಸೋವಿಯತ್ ರಷ್ಯಾ ವಿಘಟನೆ ಹೊಂದಿದ ಛಿದ್ರವಾದ ನಂತರ ಅಮೆರಿಕದ ಮೂಲಕ ಬಿಳಿ ಬುದ್ಧಿ ಬಂಡವಾಳ ಶಾಹಿಯಾಗಿ, ಸಾಮ್ರಾಜ್ಯಶಾಹಿಯಾಗಿ ವಿಸ್ತಾರಗೊಳ್ಳುತ್ತಿದೆ. ಏಕ ಪ್ರಭುತ್ವ ಪ್ರಭಾವ ಬೀರುತ್ತಿರುವ ಬಂಡವಾಳಶಾಹಿ ಚಿಂತನೆಗಳ ಹಿಡಿತದಲ್ಲಿ ಅಭಿವೃದ್ಧಿಶೀಲ ದೇಶಗಳು ಹೆಬ್ಬೆಟ್ಟು ಒತ್ತುವ ಮಟ್ಟ ಮುಟ್ಟದಿದ್ದರೆ ಸಾಕಾಗಿದೆ. ಆರ್ಥಿಕ ಹಿಡಿತ ಸಾಧಿಸುತ್ತಾ, ಅಧಿಕಾರ ಮೊಟಕು ಮಾಡಿ ಹೆಬ್ಬೆಟ್ಟಾಗಿಸುವ ‘ಅಂತರ ರಾಷ್ಟ್ರೀಯ ಅನಕ್ಷರತೆ’ಯ ಅಪಾಯವನ್ನು ದಕ್ಷಿಣ ಆಫ್ರಿಕಾಗೆ ಎದುರಿಸಬೇಕಾಗಬಹುದು. ಜೊತೆಗೆ, ಕಪ್ಪು ಜನರಲ್ಲಿ ಇರುವ ಒಡಕು ಸಹ ಸಮಸ್ಯೆಯಾಗಿ ಪರಿಣಮಿಸಬಹುದು ಹೀಗೆ ಆಂತರಿಕ ಮತ್ತು ಬಾಹ್ಯ ನಿಯಂತ್ರಣಗಳಿಂದ ಹೊರಬರುವ ಹೋರಾಟ, ಮಂಡೇಲಾ ಅವರ ಮುಂದಿರುವ ಸವಾಲನ್ನು ಅವರು ಸಮರ್ಥ ರೀತಿಯಲ್ಲಿ ಎದುರಿಸಬಲ್ಲರು. ಅಂಥ ಅಸಾಧಾರಣ ಶಕ್ತಿ ಸಾಮರ್ಥ್ಯಗಳು ಮಂಡೇಲಾ ಅವರಲ್ಲಿವೆ; ಅವರ ಆತ್ಮಸ್ಥೈರ್ಯಕ್ಕೆ ಸರಿಸಾಟಿಯೇ ಇಲ್ಲವೆನ್ನುವಷ್ಟು ದೃಢವಾಗಿದೆ.

ಬಾಲ್ಯದಿಂದಲೇ ಬೆಳೆದ ಆತ್ಮವಿಶ್ವಾಸ ಮತ್ತು ಹೋರಾಟ ಪ್ರಜ್ಞೆಗಳು ಮಂಡೇಲಾ ಅವರ ಮನೋಧರ್ಮವನ್ನು ರೂಪಿಸಿವೆ. ಟ್ರಾನ್ಸ್‌ಕೆಯಿ ಬಂಟುಸ್ತಾನದ ಒಂದು ಗ್ರಾಮದಲ್ಲಿ ೧೯೧೯ ನೇ ಇಸವಿ ಜುಲೈ ೧೮ ರಂದು ಹುಟ್ಟಿದ ಮಂಡೇಲಾ ಸದರಿ ಬಂಟುಸ್ಥಾನದ ರಾಜಮನೆತನಕ್ಕೆ ಸೇರಿದವರು. ಬಂಟು ಸ್ಥಾನವೆಂದರೆ ಬುಡಕಟ್ಟುಗಳ ತಾಯ್ನಾಡುಗಳು ಎಂದು ಅರ್ಥ. ದಕ್ಷಿಣ ಆಫ್ರಿಕಾದಲ್ಲಿ ಹತ್ತು ಪ್ರಮುಖ ಬಂಟು ಸ್ಥಾನಗಳಿದ್ದು ಮಂಡೇಲಾ ಅವರು ಹುಟ್ಟಿದ ಟ್ರಾನ್ಸ್ ಕೆಯಿ ಬಂಟು ಸ್ಥಾನದಲ್ಲಿ ಕ್ಸೋಸಾ ಬುಡಕಟ್ಟಿನವರು ವಾಸ ಮಾಡುತ್ತಾರೆ. ಈ ಬುಡಕಟ್ಟಿನ ರಾಜಮನೆತನಕ್ಕೆ ಸೇರಿದ ಹೆನ್ರಿಗಾಡ್ಲ ಅವರ ಮಗನಾಗಿ ಹುಟ್ಟಿದ ನೆಲ್ಸನ್ ಮಂಡೇಲಾ ದನಕರುಗಳನ್ನು ಕಾದರು; ನೇಗಿಲು ಹೊಡೆದರು; ಬಿಳಿಯರ ದಬ್ಬಾಳಿಕೆ ಕಥೆಗಳನ್ನು ಹಿರಿಯರಿಂದ ಕೇಳಿದರು; ಬೆಳೆಯುತ್ತಾ ಬಂದಂತೆ ಬಿಳಿಯರ ದೌರ್ಜನ್ಯಗಳನ್ನು ಕಣ್ಣಾರೆ ಕಂಡರು; ಹೋರಾಟಕ್ಕೆ ಇಳಿದರು. ೧೯೬೨ ನವೆಂಬರ್ ೭ರಂದು ಜೇಲು ಸೇರಿದರು. ಮತ್ತೆ ಬಿಡುಗಡೆಗೊಂಡಿದ್ದು ೨೭ ವರ್ಷಗಳ ನಂತರ. ಇಪ್ಪತ್ತೇಳು ವರ್ಷಗಳಲ್ಲಿ ಮಂಡೇಲಾ ಅವರು ದೈಹಿಕವಾಗಿ ಅಷ್ಟೇ ಬದಲಾಗಿದ್ದರು; ಮಾನಸಿಕವಾಗಿ ಮತ್ತಷ್ಟು ಮೌಲ್ಯ ನಿಷ್ಠರಾಗಿದ್ದರು. ಸೆರೆಮನೆ ಸೇರುವಾಗ ಇದ್ದ ಸೈದ್ಧಾಂತಿಕ ಸಂಕಲ್ಪಶಕ್ತಿ ಕಿಂಚಿತ್ತೂ ಕುಂಠಿತವಾಗದೆ ಹೊರಬಂದಾಗ ಹೊಳೆದದ್ದು, ಹೋರಾಟವಾದದ್ದು ನಮ್ಮ ಸಂದರ್ಭದ ಒಂದು ಐತಿಹಾಸಿಕ ಘಟನೆಯೆಂದೇ ಹೇಳಬೇಕು. ಹೀಗೆ ಅಚಲ ಬದ್ಧತೆಯಲ್ಲಿ ಬದುಕುತ್ತಿರುವ ಮಂಡೇಲಾ ಅವರು ಸ್ವತಂತ್ರ ಪ್ರಜಾಸತ್ತಾತ್ಮಕ ದಕ್ಷಿಣ ಆಫ್ರಿಕಾದ ಸವಾಲುಗಳಿಗೆ ಸೂಕ್ತ ಉತ್ತರ ಕೊಡಬಲ್ಲ ಶಕ್ತಿ ಪಡೆದಿದ್ದಾರೆ.

ಆದರೂ ದಕ್ಷಿಣ ಆಫ್ರಿಕಾದ ಸಮಸ್ಯೆಗಳನ್ನು ಗೌಣಗೊಳಿಸಬೇಕಾಗಿಲ್ಲ. ಇಲ್ಲೀವರೆಗೆ ಶೇ ೧೮ ರಷ್ಟಿರುವ ಬಿಳಿಯರು ಶೇ ೮೩ ರಷ್ಟು ಭೂಮಿಯನ್ನು ಅನುಭವಿಸುತ್ತಾ ಬಂದಿದ್ದಾರೆ. ಶೇಕಡ ಎಪ್ಪತ್ತರಷ್ಟಿರುವ ಕರಿಯರಿಗೆ ಶೇಕಡ ಹದಿನೇಳರಷ್ಟು ಭೂಮಿ ಮಾತ್ರ ಲಭ್ಯವಾಗಿದೆ. ಇನ್ನೂ ಶೇ ೯.೪೦ ರಷ್ಟು ಮಿಶ್ರವರ್ಣಿಯರೂ ಶೇ ೨.೯೦ ರಷ್ಟು ಏಷ್ಯನ್ನರೂ ಇಲ್ಲಿದ್ದಾರೆ. ಏಷ್ಯನರಲ್ಲಿ ಶೇ ೬೦ ರಷ್ಟು ಜನ ಹಿಂದುಗಳು ಶೇ ೨೦ ರಷ್ಟು ಮುಸ್ಲಿಮರು ಇದ್ದಾರೆ. ಹೀಗೆ ವಿವಿಧ ಜನಾಂಗಗಳನ್ನು ಒಳಗೊಂಡು ದೇಶದ ಸಮಸ್ಯೆಗಳೆಲ್ಲವೂ ಮಂಡೇಲಾ ಅವರಿಗೆ ಎದುರಾಗಲಿವೆ. ಸಮಾನತೆ ಮತ್ತು ಸಾಮರಸ್ಯಗಳನ್ನು ಒಟ್ಟಿಗೇ ನೆಲೆಯೂರಿಸುವ ಕೆಲಸ ಯಾರಿಗೂ ಸುಲಭವಲ್ಲ. ಅದೇ ಸಂದರ್ಭದಲ್ಲಿ ಸಮಸ್ಯೆಗಳನ್ನು ಮುಂದುಮಾಡುತ್ತ ಕಪ್ಪುಜನರ ಕನಸುಗಳಿಗೆ ಕಿಚ್ಚಿಡುವ ಸಿನಿಕತನವೂ ಬೇಕಿಲ್ಲ.

ಬಯಲು ಬಂದೀಖಾನೆಗಳಂತಿರುವ ಬಂಟುಸ್ಥಾನಗಳನ್ನು ಸ್ವತಂತ್ರ ಸ್ಥಾನಗಳನ್ನಾಗಿ ಮಾರ್ಪಡಿಸುವ ಕನಸು ಕಂಡ ಕಪ್ಪು ಜನ ಓಟು ಹಾಕುವ ರೋಮಾಂಚನವನ್ನು ಅನುಭವಿಸಿದ್ದಾರೆ. ಕನಸುಗಳನ್ನು ಕಟ್ಟಿ ಮತಪೆಟ್ಟಿಗೆಗೆ ಹಾಕಿದ್ದಾರೆ. ಮತಪೆಟ್ಟಿಗೆಗಳು ರೆಕ್ಕೆ ಬಿಚ್ಚಿ ಲಯಬದ್ದ ನಾದದಲ್ಲಿ ಹಾರುವ ಅನುಭವ ಉಂಡಿದ್ದಾರೆ. ತಮ್ಮ ಮತಗಳು ಬಹುಮತವಾಗಿ ಭಾವತನ್ಮಯತೆ ತಂದ ಸನ್ನಿವೇಶದಲ್ಲಿ ಮುಂದೆ ಸಂಭವಿಸಬಹುದಾದ ಮತಪೆಟ್ಟಿಗೆ ಪಟ್ಟುಗಳನ್ನು ಸಹಜವಾಗಿ ಮರೆತಿದ್ದಾರೆ. ಬದುಕಿನುದ್ದಕ್ಕೂ ಹಿಂಸೆಯ ವಿವಿಧ ಅನುಭವಕ್ಕೆ ತುತ್ತಾದ ಕಪ್ಪು ಜನ ಮುಂದೆ ಮೈಮರೆಯಲಾರರು ಎಂದು ಬಲವಾಗಿ ನಂಬೋಣ. ಯಾಕೆಂದರೆ ಭಾವ ತನ್ಮಯತೆಯ ಸಹಜ ಸನ್ನಿವೇಶದಿಂದ ವಾಸ್ತವದ ಒಳಗೆ ಉಸಿರಾಡುವ ಅನಿವಾರ್ಯ ಅವರಿಗೆ ಅರ್ಥವಾಗುತ್ತದೆ. ಇದು ಉತ್ಸವದ ಉತ್ಸಾಹದ ಸಂದರ್ಭವಾದ್ದರಿಂದ ವಿಷಾದ ಹಿನ್ನೆಲೆಗೆ ಸರಿದು ಹೊಂಚು ಹಾಕುತ್ತಿದೆ. ವಿಷಾದವೇ ವಿಷವಾಗದಂತೆ ತಡೆಯುವ ಒಳನೋಟಗಳನ್ನು ಪ್ರಜಾಪ್ರಭುತ್ವವು ತಂದುಕೊಡಬೇಕಾಗಿದೆ.

ಕಪ್ಪು ಜನರ ಹೋರಾಟಕ್ಕೆ ಒಂದು ಹಂತದ ಮೌಲಿಕ ಜಯ ಸಿಕ್ಕಿರುವ ಸಂದರ್ಭದಲ್ಲಿ ಅವರೊಂದಿಗೆ ಸಂತೋಷವನ್ನು ಹಂಚಿಕೊಳ್ಳುವುದು ಒಂದು ಹೆಮ್ಮೆಯ ಸಂಗತಿ. ಕರ್ನಾಟಕದ ಸಂವೇದನಾಶೀಲರು ಇಂಥ ವಿಷಯಗಳಲ್ಲಿ ಯಾವಾಗಲೂ ಹಿಂದೆ ಬಿದ್ದಿಲ್ಲ. ನೆಲ್ಸನ್ ಮಂಡೇಲಾ ಬಗ್ಗೆ ಕನ್ನಡದ ಯುವ ಕವಿಗಳು ಬರೆದ ಅನೇಕ ಕವಿತೆಗಳು ಹೋರಾಟದ ವ್ಯಾಪ್ತಿ ಮತ್ತು ಅಂತರ ರಾಷ್ಟ್ರೀಯ ಸಂವೇದನೆಗಳನ್ನು ಒಟ್ಟಿಗೇ ಪ್ರಕಟಿಸುತ್ತವೆ. ದಕ್ಷಿಣ ಆಫ್ರಿಕಾದ ಯುವಕವಿ ಬೆಂಜಮಿನ್ ಮೊಲಾಯಿಸ್ ಹತ್ಯೆಗೊಳಗಾದಾಗ ಕನ್ನಡದಲ್ಲಿ ಹುಟ್ಟಿದ ನೂರಾರು ಕವಿತೆಗಳು ಮೇಲಿನ ಮಾತನ್ನು ಸಮರ್ಥಿಸುತ್ತವೆ. ಸ್ಥಳೀಯತೆ ಮತ್ತು ಅಂತರರಾಷ್ಟ್ರೀಯತೆಗಳ ನೆಲೆಯಲ್ಲಿ ನಿಲುವನ್ನು ತೆಗೆದು ಕೊಳ್ಳುವ ಒತ್ತಾಸೆಗೆ ಕಾರಣವಾದದ್ದು ನಮ್ಮ ಎಡಪಂಥೀಯ ಮನೋಧರ್ಮ. ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆಯುವ ದಮನಶೀಲತೆಯನ್ನು ವಿರೋಧಿಸಿ ಪ್ರಜ್ಞೆಗೆ ಕಾರಣವಾದ ಎಡಪಂಥೀಯತೆ ಇಂದು ಎಡಪಕ್ಷಗಳ ಸೊತ್ತಾಗಿ ಉಳಿದಿಲ್ಲ. ಎಡಪಕ್ಷಗಳಿಗೆ ಅತ್ಯಂತ ಗಾಢವಾಗಿ ಕಾಣಿಸಿಕೊಳ್ಳುವ ಎಡಪಂಥೀಯತೆಯು ಮಧ್ಯಪಂಥೀಯ ಪಕ್ಷಗಳಿಗೂ ಪ್ರವೇಶಿಸಿ ಪ್ರಗತಿ ಪರತೆಯಾಗಿ ಪ್ರಕಟಗೊಳ್ಳುತ್ತಿದೆ. ಪಕ್ಷಾತೀತರಲ್ಲೂ ಇದೇ ಮಾದರಿಯಲ್ಲಿ ಕಾಣಿಸಿಕೊಳ್ಳುತ್ತಿದೆ. ಅಂದರೆ ಎಡಪಂಥೀಯತೆಯು ತನ್ನ ಪೂರ್ಣ ಸ್ವರೂಪದಲ್ಲಿ ಅಲ್ಲದಿದ್ದರೂ ತನ್ನ ಕಾಯಕ್ರಮಗಳ ಕಿಂಚಿತ್ ಕ್ರಿಯಾಶೀಲತೆಯನ್ನು ಎಡಪಕ್ಷೇತರ ವಲಯಗಳಲ್ಲಿ ಕಾಣಿಸುತ್ತಿದೆ. ಈ ಕಾರಣದಿಂದಲೇ ಎಡಪಕ್ಷಗಳನ್ನು ಒಳಗೊಂಡಂತೆ ನಿಮ್ಮ ದೇಶದ ಇತರೆ ವಲಯಗಳು ಒಂದಾಗಿ ದಕ್ಷಿಣ ಆಫ್ರಿಕಾದ ಕಪ್ಪು ಜನರ ವಿಜಯವನ್ನು ಮನದುಂಬಿ ಸ್ವಾಗತಿಸುತ್ತಿವೆ. ಎಡಪಕ್ಷಗಳು ಕೆಂಪು ಬಾವುಟ ಹಾರಿಸಿ ಹೆಚ್ಚು ಸುಸಂಬದ್ಧವಾಗಿ ಸಂಭ್ರಮಿಸುತ್ತಿವೆ.

ಕೆಂಪ್ಪು ಕಪ್ಪಿನ ಜೊತೆ ಗುರುತಿಸಿಕೊಳ್ಳುವ ಕ್ರಿಯೆ ಐತಿಹಾಸಿಕವಾದದ್ದು. ಇದು ಕೇವಲ ಅಂತರಾಷ್ಟ್ರೀಯ ರಾಜಕೀಯಕ್ಕೆ ಸಂಬಂಧಿಸಿದರೆ ಸಾಲದು. ನಮ್ಮ ದೇಶದ ದಲಿತರಿಗೆ ‘ಕಪ್ಪು’ ತಮ್ಮ ಭಾವನೆಗಳ ಪ್ರತೀಕವಾಗಿದೆ. ಎಡಪಕ್ಷಗಳ ಪ್ರತೀಕವಾದ ‘ಕೆಂಪು’ ನಮ್ಮ ದೇಶದ ‘ಕಪ್ಪು’ ಪ್ರತೀಕದೊಂದಿಗೆ ಬೆರೆಯುವ ಪ್ರಕ್ರಿಯೆ ಅತ್ಯಂತ ಜರೂರಿನದು. ಇದು ಏಕ ಮುಖವಾದುದಲ್ಲ. ಪರಸ್ಪರ ನಂಬಿಕೆ ಮತ್ತು ತಿಳುವಳಿಕೆಗಳ ಆಧಾರದಲ್ಲಿ ಕೆಂಪು ಮತ್ತು ಕಪ್ಪುಗಳ ಜಂಟಿ ಕ್ರಿಯಾಶೀಲತೆ ಸಾಧ್ಯವಾದರೆ ಅದೊಂದು ಐತಿಹಾಸಿಕ ಹೆಜ್ಜೆಯೇ ಸರಿ. ಕೆಂಪು ಮತ್ತು ಕಪ್ಪು ಗಳ ಏಕತೆ ಕೇವಲ ಆಕಾಶದ ಆದರ್ಶವಾಗುವುದರಿಂದ ಜಂಟಿ ಕ್ರಿಯಾಶೀಲತೆಯನ್ನು ಮಾತ್ರ ಅಪೇಕ್ಷಿಸೋಣ. ದಕ್ಷಿಣ ಆಫ್ರಿಕಾದ ಕಪ್ಪು ಪ್ರತೀಕ ನಮ್ಮ ದೇಶದ ಕೆಂಪು ಪ್ರತೀಕಕ್ಕೆ ಪ್ರಿಯವಾದಂತೆ ಇಲ್ಲಿಯೂ ಆಗಲಿ, ನಮ್ಮ ದೇಶದ ಕಪ್ಪು ಪ್ರತೀಕಕ್ಕೆ ಕೆಂಪು ಪ್ರಜ್ಞೆಯ ಸ್ಪರ್ಶವೂ ಆಗಲಿ. ಜೊತೆಗೆ ಬಣ್ಣದ ಪ್ರತೀಕವೇ ಇಲ್ಲದ ಹಿಂದುಳಿದ ವರ್ಗಗಳನ್ನು ಮರೆಯದಿರೋಣ.

ಒಟ್ಟಿನಲ್ಲಿ ದಕ್ಷಿಣ ಆಫ್ರಿಕಾದ ಜನತೆಗೆ ಒಳ್ಳೆಯದಾಗಲಿ, ಕಪ್ಪು ಜನರ ತಲೆಯಲ್ಲಿ ಬಿಳಿ ಬುದ್ಧಿಗಳು ಹುಟ್ಟದಿರಲಿ.
*****
೧೫-೫-೧೯೯೪

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕುರಿಗಳು
Next post ಹೊಸ ವರುಷ

ಸಣ್ಣ ಕತೆ

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…