ಪ್ರಾತಃ ಸ್ಮರಣೀಯ ಬಸವಣ್ಣನವರು

ಪ್ರಾತಃ ಸ್ಮರಣೀಯ ಬಸವಣ್ಣನವರು

ಮಹಾ ಮಾನವತಾವಾದಿ ಬಸವಣ್ಣನವರ ಕರ್ಮಭೂಮಿ ಈ ಬೀದರ ಜಿಲ್ಲೆಯ ಕಲ್ಯಾಣ ನಾಡು ಎಂದಾಗ ನಮ್ಮ ಎದೆ ತುಂಬಿ ಬರುತ್ತದೆ. ಈ ಬೀದರ ಜಿಲ್ಲೆ ಶರಣರ, ಸಂತರ, ಪುಣ್ಯ ಭೂಮಿ. ಈ ನಾಡಿನಲ್ಲಿ ಬಾಳಿ ಬದುಕಿದ ಈ ನಾಡಿಗೆ ಸಂದೇಶವನ್ನು ನೀಡಿ ಈ ನಾಡಿನಭೂಮಿ ಪಾವನಗೊಳಿಸಿದ ಅವರೆಲ್ಲರಿಗೂ ಒಂದು ಸಲ ನಮೋ ನಮಃ ಎಂದಾದರೂ ನಮ್ಮ ಮನಸ್ಸನ್ನು ಹಗುರ ಮಾಡಿಕೊಳ್ಳಬೇಕಿದೆ.

ಶ್ರೀ ಮಹಾತ್ಮ ಬಸವಣ್ಣನವರು ಬಾಗೇವಾಡಿಯಿಂದ ಸಂಗಮಕ್ಕೆ ಮತ್ತೆ ಸಂಗಮದಿಂದ ಕಲ್ಯಾಣಕ್ಕೆ ಆಗಮಿಸಿ ರಾಜ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ ಅನುಭವ ಮಂಟಪದ ಸಂಸ್ಥಾಪಕರಾಗಿ ಈ ನಾಡಿನಲ್ಲಿ ಕನ್ನಡ ಮತ್ತು ಧರ್ಮದ ಬಹು ದೊಡ್ಡ ಕ್ರಾಂತಿಯನ್ನೆ ಮಾಡಿದ ಅವರ ಮಹತ್ಕಾರ್ಯವನ್ನು ಮರೆಯುವಂತಿಲ್ಲ.

ಬಸವಣ್ಣನವರ ಜನನವೇ ಸಮಾಜ ಮುಖಿಯಾಗಿತ್ತು. ಅವರು ಈ ನಾಡಿನಲ್ಲಿ ಕನ್ನಡದ ಕಂದಮ್ಮನಾಗಿ ಜನಿಸಿ ಲೋಕೋದ್ಧಾರಕ್ಕೆ ಮುಡಿಪಾದ ಮಹಾನ್ ಶರಣರು. ಬಾಲ್ಯದಲ್ಲಿಯೇ ಯಜ್ಞೋಪವಿತ ಕಿತ್ತೆಸೆದು ಕಂದಾಚಾರ, ಜಾತಿ-ಮತಗಳ ಖಂಡಿಸಿ ಮಾನವೀಯ ಮೌಲ್ಯಗಳನ್ನೇ ಧರಿಸಿ ಮೂಢನಂಬಿಕೆ ವಿರುದ್ಧ ಸ್ತ್ರೀ ಸಮಾನತೆ, ದಲಿತೋದ್ಧಾರಕ್ಕಾಗಿ ಸಮಾಜದ ಓರೆ-ಕೋರೆಗಳನ್ನು ದಿಟವಾಗಿ ಖಂಡಿಸಿ ಇಡೀ ಲೋಕದ ದೃಷ್ಟಿ ತನ್ನತ್ತ ಸೆಳೆದುಕೊಂಡ ಈ ಯುಗದ ಮಹತ್ತರ ಕ್ರಾಂತಿ ಪುರುಷ.

ಅಂಥ ಪವಿತ್ರ ಶರಣರ ನಡೆ-ನುಡಿ, ಕರ್ಮ ನೋಟ ಎಲ್ಲವೂ ಶಿವಮಯ. ಪವಾಡ ಸದೃಶ್ಯ, ಅವರ ಬದುಕೆ ಸಂದೇಶ, ಅವರ ವಚನಗಳೆ ವೇದ, ಅವರ ನುಡಿಗಳೆ ಇಹಪರಕ್ಕೆ ಏಣಿ. ಅಂಥವರ ವಚನಗಳಲ್ಲಿ ಕಲ್ಯಾಣ ಅಡಗಿದೆ. ಲೋಕದ ಚಿಂತನೆಯಿದೆ. ಬಡವರ ಬಗ್ಗೆ ಅನುಕಂಪ, ದೀನ-ದಲಿತರ ಬಗ್ಗೆ ಪ್ರೀತಿ, ಮೂಢ ನಂಬಿಕೆಗಳ ಖಂಡನೆ, ದೇವರ ಅಸ್ತಿತ್ವದ ಬಗ್ಗೆ ನಿಶ್ಚಲವಾದ ಗುರಿ. ಸಾರ್ಥಕ ಜೀವನದ ಅಂಶಗಳೆಲ್ಲವೂ ಅಡಗಿವೆ.

ವಚನ ಸಾಗರವೆಂಬುದು ಅಮೃತ ವಾರಿಧಿ. ಯಾರು ಈ ವಚನಮೃತದಲ್ಲಿ ಮಿಂದು ಅನುಭವದಾಳಕ್ಕೆ ತುಂಬಿಕೊಳ್ಳುವರೋ ಅಂಥವರ ಬದುಕು ಧನ್ಯವಾಗುತ್ತದೆ. ಅಂಥವರ ನಡೆ-ನುಡಿ ಪವಿತ್ರವಾಗುತ್ತದೆ. ಜೀವನ ಸಾಫಲ್ಯವಾಗುತ್ತದೆ. ಅಂಥ ವಚನಗಳ ರೂವಾರಿ ಶರಣ ಬಸವಣ್ಣನವರ ವಚನಗಳಲ್ಲಿ ಜೀವನ ಸಂದೇಶವನ್ನು ತುಸು ಅವಲೋಕಿಸೋಣ.

ಬಸವಣ್ಣನವರು ಮನವನ್ನು ಕುರಿತು ಅನೇಕ ವಚನಗಳನ್ನು ಬರೆದಿದ್ದಾರೆ. ಹಾಗೆ ನೋಡಿದರೆ ಮನವು ಮಾನವರಿಗೆ ಕಾಡಿದಷ್ಟು ಮತ್ಯಾವುದು ಕಾಡಿಲ್ಲ. ಶರಣರಿಗೂ ಸಂತರಿಗು, ಋಷಿ ಮುನಿಗಳಿಗೂ ಕಾಡಿದೆ. ಅಂತಲೇ ಇಲ್ಲಿ ಬಸವಣ್ಣನವರು ಮನಸ್ಸಿನ ಭಾವವನ್ನು ಈ ಕೆಳಗಿನ ವಚನಗಳಲ್ಲಿ ಬಹು ಸುಂದರವಾಗಿ ವಿಶ್ಲೇಷಿಸಿದ್ದಾರೆ.

ಅಂದಣವನ್ನೇರಿದ ಸೊಣಗನಂತೆ ಕಂಡೊಡೆ ಬಿಡದ
ಮುನ್ನಿನ ಸ್ವಭಾವವನ!
ಸುಡು ಸುಡು ಮನವಿದು ವಿಷಯಕ್ಕೆ ಹರಿವುದು!
ಮೃಢ ನಿಮ್ಮನನುದಿನ ನೆನೆಯಲಿಯದು!
ಎನ್ನೊಡೆಯ ಕೂಡಲ ಸಂಗಮದೇವಾ!
ನಿಮ್ಮ ಚರಣ ನೆನೆವಂತೆ ಕರುಣಿಸು
ಸೆರಗೊಡ್ಡಿ ಬೇಡುವೆ ನಿಮ್ಮ ಧರ್ಮ

ಹೀಗೆ ಅಂದಣ ಅಥವಾ ಎತ್ತರದ ಪಲ್ಲಕಿಯನ್ನು ಏರಿದರೂ ಸೊಣಗವು ತನ್ನ ಮುನ್ನಿನ ಸ್ವಭಾವವು ಬಿಡದ ಹಾಗೆ ಮನಸ್ಸು ಎಷ್ಟು ಎತ್ತರಕ್ಕೇರಿದರೂ ಎಷ್ಟೇ ವಿಚಾರ ಶೀಲತೆಯಿಂದ ತುಂಬಿದರೂ ತುಸು ವಿಷಯಕ್ಕೆ ಬಂದರಾಯಿತು. ಮುನ್ನಿನಂತೆ ಪ್ರಪಂಚದತ್ತ ಜಾರುವುದು. ರಾಮಕೃಷ್ಣ ಪರಮಹಂಸರು ಹೇಳುವಂತೆ ಹದ್ದು ಎಷ್ಟೇ ಮೇಲೆ ಹಾರಿದರೂ ಅದರ ದೃಷ್ಟಿ ಭೂಮಿಯ ಮೇಲೆ ಇರುವ ಹಾಗೆ ಇಂಥ ಮನಸ್ಸು ಅವನತಿಯಿಂದ ಉನ್ನತಿಯತ್ತ ಕೊಂಡೊಯುವ ಒಂದೇ ಮಾರ್ಗವೆಂದರೆ ಕೂಡಲ ಸಂಗಮ ದೇವನ ಚರಣಗಳಿಗೆ ನೆನೆಯುವಂತೆ ಮಾಡಲು ದೇವರಲ್ಲಿ ಮೊರೆಯಿಡುತ್ತಾರೆ. ಸಾಮಾನ್ಯ ಜನರು ಸಹ ತಮ್ಮ ಮನಸ್ಸಿನ ಭಾವನೆಗಳನ್ನು ಬಗ್ಗು ಬಡಿಯಲು ದೇವರ ನಾಮ ಚಿಂತನೆ ಮಾಡುವುದು ಈ ವಚನದಿಂದ ವೇದ್ಯವಾಗುತ್ತದೆ.

ಮಾನವನು ತನ್ನ ವ್ಯಕ್ತಿತ್ವ ರೂಪಿಸಿಕೊಳ್ಳಬೇಕಾದರೆ ತನ್ನ ವಾಣಿಯಲ್ಲಿ ಮೃದುವತೆ ತುಂಬಿಕೊಳ್ಳಬೇಕು. ನಮ್ಮ ನಡುವೆ ಇನ್ನೋರ್ವರ ಮಧ್ಯದಲ್ಲಿ ವಾಣಿಯೇ ಮಾಧ್ಯಮವಾಗಿದೆ. ನಮ್ಮ ವಾಣಿಯು ಸುಂದರವಾಗಿರಬೇಕು. ನಮ್ಮ ಮಾತು ಮೃದುವತೆ ರಸಾತ್ಮಕವಾಗಿ ತುಂಬಬೇಕು. ನಮ್ಮ ಮಾತು, ಗೌರವ ಪೂರ್ವಕ ಉತ್ತಮವಾಗಿದ್ದರೆ ನಮ್ಮ ವ್ಯಕ್ತಿತ್ವಕ್ಕೆ ಬೆಲೆ ಬರುತ್ತದೆ. ಮತ್ತು ನಮ್ಮಿ ವಾಣಿಯಿಂದ ನಮ್ಮ ಮನದಲ್ಲೂ ಪವಿತ್ರತೆ ಬರುತ್ತದೆ. ಅಂತಲೇ ಬಸವಣ್ಣನವರು

ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು
ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು
ನುಡಿಯೊಳಗಾಗಿ ನಡೆಯದಿದ್ದರೆ
ಕೂಡಲ ಸಂಗಮ ದೇವನೆಂತೊಲಿಯವನಯ್ಯ

ಎಂದು ಬಸವಣ್ಣನವರು ಮಾತು ಮುತ್ತಿನ ಹಾರದಂತಿರಬೇಕೆಂದರು. ಇಂಥ ಮಾತನಾಡಿದರೆ ಜಗ ಮೆಚ್ಚಿ ಅಹುದೆನ್ನುತ್ತದೆ, ಎಂಬುವಲ್ಲಿ ಬಹು ಮಾರ್ಮಿಕವಾಗಿದೆ. ಅಯ್ಯಾ ಎಂದರೆ ಸ್ವರ್ಗ ಎಂದರು. ಎಲವೋ ಎಂದರೆ ನರಕ ಎಂದರು. ಹೀಗೆ ಬಸವಣ್ಣನವರು ಮಾತಿನ ಮೌಲ್ಯವನ್ನು ಎತ್ತಿ ಹಿಡಿದಿದ್ದಾರೆ. ಮಾತು ಬಲ್ಲವ ಮಾಣಿಕ್ಯ ತಂದ ಮಾತು ಬಲ್ಲದವ ಜಗಳ ತಂದ ಎಂಬ ಗಾದೆ ಮಾತಿನಂತೆ ಈ ಮಾತು ಉತ್ತಮವಾಗಿದ್ದರೆ ನಮ್ಮ ವ್ಯಕ್ತಿತ್ವ ರೂಪಿಸಲು ಕಾರಣವಾಗುತ್ತದೆ ಎಂಬುದು ಅಕ್ಷರಶಃ ಸತ್ಯ.

ಬಸವಣ್ಣನವರ ಒಂದೊಂದು ವಚನದಲ್ಲೂ ಸಂದೇಶವಿದೆ. ಮಾನವೀಯ ಪ್ರೀತಿ ಇದೆ. ಲೋಕೋದ್ಧಾರದ ಹಿತ ನುಡಿ ಇದೆ. ಹೊಸ ಬದುಕಿಗೆ ನೆಲೆಯಾಗುವುದಿದೆ. ಜೀವನವನ್ನು ರೂಪಿಸಲು ದಯೆ, ಸತ್ಯ, ಅಹಿಂಸೆ, ಧರ್ಮಗಳೆ ಮೂಲ ದ್ರವ್ಯಗಳೆಂಬಂತೆ ಇವರ ವಚನಗಳಲ್ಲೂ ಅಂಥ ವಿಶೇಷತೆ ಕಾಣುತ್ತೇವೆ.

ದಯವಿಲ್ಲದ ಧರ್ಮದೇವುದಯ್ಯಾ
ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ
ದಯವೇ ಧರ್ಮದ ಮೂಲವಯ್ಯ
ಕೂಡಲ ಸಂಗಯ್ಯನಂತದೊಲ್ಲನಯ್ಯ

ಎಂಬುವಲ್ಲಿ ಸಕಲ ಜೀವಾತ್ಮರಲ್ಲಿ ದಯೆ ಬಯಸು. ಎಲ್ಲ ಧರ್ಮಗಳು ದಯವೇ ಮೂಲ ದ್ರವ್ಯ ಬಳಸಿಕೊಂಡಿವೆ. ಯಾವ ಧರ್ಮದಲ್ಲಿ ದಯವಿಲ್ಲವೋ ಅದು ಧರ್ಮವೆ ಅಲ್ಲ ಎಂಬುವ ಶರಣರ ಒಳ ಇಂಗಿತ ಗಟ್ಟಿ ನಿರ್ಧಾರ, ಲೋಕಕ್ಕೆ ಬಹು ದೊಡ್ಡ ಸಂದೇಶ. ಸಕಲ ಪ್ರಾಣಿ-ಪಕ್ಷಿಗಳಲ್ಲಿ ದಯೆ ತೋರಿಸುವುದು ನಮ್ಮ ಆದ್ಯ ಕರ್ತವ್ಯ ಆಗಬೇಕು.

ಇತಿಹಾಸದ ಪುಟಗಳಲ್ಲಿ ಇಣುಕಿದರೆ ಎಲ್ಲೆಲ್ಲೂ ದಯೆ ಮೆರೆದಾಡುತ್ತಿದೆ. ನಮ್ಮ ಸಂತರ, ಶರಣರ, ಮಹಾಪುರುಷರು ಇಂಥ ದಯೆ ಮೂಲಕ್ಕೆ ಪ್ರಾಥಮಿಕತೆ ನೀಡಿದರು. ಏಕನಾಥರು, ತುಕಾರಾಮರು, ಗಾಂಧೀಜಿಯವರು, ದಯವನ್ನು ಎತ್ತಿ ಹಿಡಿದಿದ್ದಾರೆ. ಆದರೆ ಹಲವು ಶತಮಾನಗಳ ಪೂರ್ವದಲ್ಲಿಯೇ ಬಸವಣ್ಣನವರು ದಯವೇ ಧರ್ಮದ ಮೂಲವೆಂದಿದ್ದು ಚಿನ್ನದ ಅಕ್ಷರಗಳಿಂದ ಬರೆದಿಡಬೇಕಾಗಿದ್ದು ಸತ್ಯ.

ಅಸ್ಪ್ರಶ್ಯರು ಎಂದು ಕಡೆಗಣಿಸಿದ ಅಂದಿನ ದಿನಗಳಲ್ಲಿ ಅವರನ್ನು ಎತ್ತಿ ಹಿಡಿದು ಸಮಾಜದಲ್ಲಿ ಅದಕ್ಕೆ ವಿರೋಧವಾಗಿದ್ದವರು ಎಂದರೆ ಪ್ರಪ್ರಥಮವಾಗಿ ಅಣ್ಣ ಬಸವಣ್ಣನವರು.

ಕೊಲ್ಲುವವನೆ ಮಾದಿಗ ಹೊಲಸು ತಿಂಬುವನೆ ಹೊಲೆಯ
ಕುಲವೇನೋ ಅವಂದಿರ ಕುಲವೇನೋ
ಸಕಲ ಜೀವಾತ್ಮರಿಗೆ ಲೇಸನ್ನೆ ಬಯಸುವ
ನಮ್ಮ ಕೂಡಲ ಸಂಗನ ಶರಣರ ಕುಲಜರು

ಎಂದು ಹೀನ ಕುಲ, ಉಚ್ಛ ಜಾತಿಗಳಿಲ್ಲ. ಹೊಲಸು ತಿಂಬುವರೆ ಹೊಲೆಯರು ಎಂಬ ಅವರ ಮಾತುಗಳಲ್ಲಿ ಎಷ್ಟೊಂದು ಖಡಾಖಂಡಿತವಿದೆ. ಎಲ್ಲರೂ ಮಾನವರು ಅವರನ್ನ ಗೌರವದಿಂದ ನೋಡುವುದು ನಮ್ಮ ಆದ್ಯ ಕರ್ತವ್ಯವಾಗಬೇಕು ಎಂದರು.

ಬಸವಣ್ಣನವರು ಅನುಭವ ತುಂಬಿದ ಕೊಡದಂತಿದ್ದು, ಅವರ ಮಾತು ಅಷ್ಟೇ ನಿಖರ, ನಿರ್ಧಾರ ಗೆರೆ ಎಳೆಯದಂತೆ ಇದೆ. ಶೀಲ ಚಾರಿತ್ರ್ಯ ಕುರಿತಂತೆ ಬಹಳ ಸುಂದರವಾಗಿ ತಮ್ಮ ವಚನದಲ್ಲಿ ಹೀಗೆ ಬಿಡಿಸಿದ್ದಾರೆ.

ಹರಿವ ಹಾವಿಗಂಜೆ ಉರಿವ ನಾಲಿಗಂಜೆ
ಸುರಗಿಯ ಮನೆಗಂಜೆ
ಒಂದಕ್ಕಂಜುವೆ ಒಂದಕ್ಕಳುಕುವೆ
ಪರಸ್ತಿ ಪರಧನವೆಂಬಿ ಜುಬಿಗಂಜವೆ
ಮುನ್ನಂಜದ ರಾವಣನ ವಿಧಿಯಾದ
ಅಂಜುವೆನಯ್ಯ ಕೂಡಲ ಸಂಗಮದೇವಾ.

ಎನ್ನುವಲ್ಲಿ ಹೆಡೆ ಬಿಚ್ಚಿದ ಹಾವಿಗಂಜಲಾರೆ ಬೆಂಕಿಯ ಜ್ವಾಲೆಗಂಜಲಾರೆ ಸುರಗಿಯ ಅರ್ಥತ್ ಕಿರುಗತ್ತಿಯ ಮೊನೆಗು ಅಂಜಲಾರೆ. ಆದರೆ ಪರಸ್ತ್ರಿ, ಪರ ಧನಗಳೆಂಬ ಮಹಾ ವಸ್ತುಗಳಿಗೆ ಅಂಜುವೆನೆಂಬ ಮಾತು ಜಗಕ್ಕೆ ಸಂದೇಶವಿದೆ. ಲೋಕದಲ್ಲಿ ಏನಾದರೂ ಕೆಟ್ಟದಿದೆ ಎಂದರೆ ಅದು ಪರಸ್ತ್ರಿ ಪರ ಧನ ಇವೆರಡನ್ನು ಆಶ್ರಯಿಸಿದವನಿವಗೆ ಉಳಿಗಾಲವಿಲ್ಲ. ಅವನ ವ್ಯಕ್ತಿತ್ವ ಹಾಳಾಗುತ್ತದೆ. ಚರಿತ್ರೆ ಭ್ರಷ್ಟವಾಗುತ್ತದೆ. ಆ ವ್ಯಕ್ತಿ ಇದ್ದು ಸತ್ತಂತೆ ಎಂಬ ಈ ವಚನದಿಂದ ನಾವು ಕಲಿಯುವುದು ಬಹಳವಿದೆ. ಇಂಥ ಆದರ್ಶ ನಮ್ಮ ಬಾಳಿನಲ್ಲಿ ಪಾಲಿಸಿದುದ್ದಾದರೆ ನಮ್ಮ ಬದುಕು ಧನ್ಯವಾಗುತ್ತದೆ.

ಶರಣರ ವಚನಗಳೆಲ್ಲ ಅಮೃತದಂತಹ ಹನಿಗಳು. ಆ ಹನಿಗಳು ನಮ್ಮ ಕರ್ಣ ಪಟಲ ಸೇರಿ ಹೃದಯಕ್ಕೆ ಇಳಿದರೆ ನಮ್ಮ ಬಾಳಿಗೆ ಹೊಸ ಚೈತನ್ಯ ಬರುತ್ತದೆ. ನಮ್ಮ ಹಿರಿಯರು ಕೈ ಬಾಯಿ ಕಚ್ಚೆಗಳು ಹಿಡಿತದಲ್ಲಿರಬೇಕು ಎಂದರು. ಸರ್ವಜ್ಞನು ಇದನ್ನೇ ಹೇಳಿದನು. ಬಸವಣ್ಣನವರು ವಚನದಲ್ಲೂ

ತಮ್ಮನ್ನುದ್ದೇಶಿಸಿ ಹೇಳಿಕೊಂಡಿದ್ದಾರೆ.

ಅತ್ತಲಿತ್ತಲೂ ಹೋಗದಂತೆ ಹೇಳವನ ಮಾಡಯ್ಯ ತಂದೆ
ಸುತ್ತಿ ಸುಳಿದು ನೋಡದಂತೆ ಅಂಧಕನ ಮಾಡಯ್ಯ ತಂದೆ
ಮತ್ತೊಂದು ಕೇಳದಂತೆ ಕಿವುಡನ ಮಾಡಯ್ಯ ತಂದೆ
ನಿಮ್ಮ ಶರಣರ ಪಾದವಲ್ಲದೆ
ಅನ್ಯ ವಿಷಯ ಕೇಳಿಸದಂತೆ ಇರಿಸು ಕೂಡಲ ಸಂಗಮ ದೇವಾ.

ಎಂಬಂತೆ ನನ್ನ ಕಾಲು, ಕಂಗಳು, ಕರ್ಣಗಳೆಲ್ಲವೂ ಪ್ರಪಂಚದ ವ್ಯಾಮೋಹಗಳಿಗೆ ಬಲಿಯಾಗದೆ ನಿಮ್ಮ ಸ್ಮರಣೆಯಲ್ಲಿರುವಂತೆ ಮಾಡು ಎಂಬ ಅವರ ವಚನಗಳೆಲ್ಲವೂ ನಮ್ಮ ಬಾಳ ದಾರಿ ದೀಪವೆಂಬುದಕ್ಕೆ ಎರಡು ಮಾತಿಲ್ಲ. ಇಂಥ ಶರಣರ ವಚನಗಳು ಪ್ರತಿನಿತ್ಯ ನಾವು ಓದಬೇಕು. ಬಾಳಿನಲ್ಲಿ ನಾವು ಅಳವಡಿಸಬೇಕು. ಜೀವನ ಸಾರ್ಥಕತೆಗೆ ಮುಂದಾಗಬೇಕು. ಆಗ ಮಾತ್ರ ಬಸವಣ್ಣನವರ ವಚನಗಳಿಂದ ನಮ್ಮ ಬದುಕು ಧನ್ಯವಾಗಲು ಸಾಧ್ಯ.

ಇಂಥ ಯುಗ ಪುರುಷ ಈ ನಾಡಿನಲ್ಲಿ ಜನಿಸಿ ಲೋಕಪ್ರಸಿದ್ಧಿಯಾದ ಇವರು ಪ್ರಾತಃ ಸ್ಮರಣಿಯರು. ಜೀವನ ಸಾರ್ಥಕ ನೆಲೆಗಟ್ಟಿಗೆ ಇವರ ವಚನ ಪುಷ್ಟಪಗಳೆಲ್ಲ ಆಧಾರ ಸ್ತಂಭಗಳು. ಇಂಥವರಿಂದ ಈ ನಾಡು ಪವಿತ್ರಗೊಂಡಿದ್ದು ಯುಗ ಯುಗಕ್ಕೆ ಸಾಕ್ಷಿಯಾಗಿ ನಿಂತಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಈ ಮೋಸ ದೋಸವಲ್ಲ
Next post ಅವಿರತ ಯಜ್ಞ

ಸಣ್ಣ ಕತೆ

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…