ಭುವಿಯ ಚೇತನಾಗ್ನಿಯಲ್ಲಿ
ಸೂರ್‍ಯ ಬಲಿಯು ನೀಡುವ;
ಅಮೃತಗರ್ಭನಾದ ಸೋಮ
ಸೋಮರಸವನೂಡುವ.
ಅಗಣಿತ ಗ್ರಹ-ತಾರಕಾಳಿ
ಮಧುಹೋಮವ ನಡೆಸಿವೆ;
ಮೋಡ- ಗುಡುಗು, ಮಿಂಚು-ಸಿಡಿಲು
ಉದಧಿಗರ್ಘ್ಯ ಕೊಡುತಿವೆ!
೫
ಸಾಗರ ಹೋತಾರನಾಗಿ
ಸೂರ್ಯಗೆ ಬಲಿ ನೀಡುವ;
ಸೂರ್ಯನು ದಾತಾರನಾಗಿ
ಮೇಘಕೆ ಹನಿ ಹಾಕುವ.
ಮೇಘ ಯಾಗಕರ್ತೃವಾಗಿ
ಮಳೆಗೆ ನೀರ ಬೇಳ್ವುದು.
ಮಳೆಯು ಯಾಜಮಾನ್ಯ ವಹಿಸಿ
ಇಳೆಗೆ ಬಾಳನೆರೆವುದು.
೬
ಪಾತಾಳದ ಶಕ್ತಿಮೂರ್ತಿ
ಭೂತಳದೀ ಭೂತಗಣಕೆ
ಸಾತ್ತ್ವಾಹುತಿ ಕೊಡುತಿದೆ;
ಸತ್ತ್ವಹವನ ಮಹಾಫಲವೆ
ಸಸ್ಯಗಳಲಿ ರೂಪುಗೊಂಡು,
ಜೀವಕೆ ಕೂಳಿಡುತಿದೆ.
ಜೀವ ಕೂಳನುಣುತಿವೆ;
ಜೀವನ ಬಲ ಕೊಳುತಿವೆ;
ಊಟ ಆಟ ಅರಿತಿವೆ-
ಅದರೊಳೆ ಮೈ ಮರೆತಿವೆ
೭
‘ಪ್ರತಿಜೀವವು ಪಡೆಯಬೇಕು
ಯಾಜಮಾನ್ಯ ದೀಕ್ಷೆ!’
ಎಂದಿರುವುದು ಯಜ್ಞಪ್ರಿಯ-
ಸೃಷ್ಟಿಯ ಸದಪೇಕ್ಷೆ!
ಒಂದು ಜೀವಿಗೊಂದು ಜೀವ
ವಹ್ನಿಯು ಯಜಮಾನ-
ಆಗಬೇಕು; ಆದರೆಯೇ
ಶಾಂತಿ, ಸಮಾಧಾನ!
೮
ಯಜ್ಞಸೂತ್ರದಲಿಯೆ ಕೋದು
ಲೋಕ-ಲೋಕ ನಿಂತಿವೆ ;
ಎಂದೆಂದಿಗು ಚ್ಯುತಿಯು ಇರದ
ಸಮಗತಿಗಳನಾಂತಿವೆ
ಅದೋ ಅಲ್ಲಿ, ಇದೋ ಇಲ್ಲಿ
ಎಲ್ಲೆಲ್ಲಿಯು ಯಜ್ಞ !
ಯಜ್ಞವ್ಯಾಪ್ತಿಯೆಂತಹದಿದು !
ಅರಿತವನೇ ಪ್ರಾಜ್ಞ!
*****