ಕೂನನ ಮಗಳು ಕೆಂಚಿಯೂ….

ಕೂನನ ಮಗಳು ಕೆಂಚಿಯೂ….

ಚಿತ್ರ: ಸೋಮವರದ

ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ ನೆಪವಾಗಿ ಸತ್ತದ್ದು ದ್ಯಾಮಣ್ಣನಿಗೆ ಹೃದಯಾಘಾತವಾದಂತಾಗಿತ್ತು.

ಮುಂಜಾನೆ ಆಗತಾನೆ ಕತ್ತಲನ್ನು ಹಿಂದೆ ಸರಿಸಿತ್ತು. ಕಟ್ಟೆಮ್ಯಾಲೆ ದ್ಯಾಮಣ್ಣ ಬದುಕೇ ನಿಂತುಹೊದಂತೆ ತಲಿಮ್ಯಾಗ ಕೈಹೊತ್ತು ಕುಳಿತದ್ದನ್ನು ಕಂಡ ಭರಮಪ್ಪ ’ಏ ದ್ಯಾಮಣ್ನ ಏನಾತಾ…. ಅಂಗ್ಯಾಕ ಕುತ್ಗಂಡಿ’ ಎಂದು ಕೇಳಲು ದ್ಯಾಮಣ್ಣನಿಗೆ ಮಾತುಗಳೇ ಹೊರಡದೇ ಕುತ್ತಿಗೆಗೆ ಸುತ್ತಿದ ವಲ್ಲಿಯಿಂದ ಕಣ್ಣೊರೆಸಿಕೊಳ್ಳುತ್ತಾ ಕೈಯತ್ತಿ ಕೊಟ್ಟಿಗೆಯ ಕಡೆಗೆ ತೋರಿದ….

ಕೊಟ್ಟಿಗೆಯೊಳಗೆ ಏನಾಯಿತೆಂದು ನೋಡುವ ರಭಸದಿಂದ ನುಗ್ಗಿದ ಭರಮಣ್ಣ ಕಾಲುಚಾಚಿ ಅಡ್ಡ ಬಿದ್ದಿದ್ದ ’ಚೆನ್ನಿ’ಕಂಡು ಅಯ್ಯೋ ಎಂದು ಮರುಕಪಡುತ್ತಾ ನಿಂತ. ಉಗುಳಿಗೆ ನೊಣ ಮುತ್ತುವಂತೆ ಚೆನ್ನಿಯ ಕಣ್ಣು, ಮೂಗು, ಬಾಯಿ ಸುತ್ತಾ ನೊಣಗಳು ಅಡರಿಕೊಂಡಿದ್ದವು. ಸನಿಹದಲ್ಲಿ ಜಿಂಕೆ ಮರಿಹೋಲುವ ಗಂಡುಕರು ತಾಯಿಯ ಸಾವು ಅರಿಯದೇ ಕಟ್ಟಿದ ಹಗ್ಗವನ್ನೇ ನೆಕ್ಕುತ್ತಿತ್ತು.

ಚೆನ್ನಿ ಸತ್ತ ಸುದ್ದಿ ಅಡಿಗೆ ಮನಿಯಲ್ಲಿ ’ಚಾ’ಮಾಡಲೆಂದು ಒಲೆಯಯೊಳಗೆ ಬೂದಿ ತೆಗೆದು ಪುಳ್ಳಿಯಿಟ್ಟು ಬೆಂಕಿಹೊತ್ತಿಸುತ್ತಿದ್ದ ಸಿದ್ದಲಿಂಗವ್ವನ ಕಿವಿಗೆ ತಲುಪುತ್ತಿದ್ದಂತೆ ಆಕಾಶ ಕವುಚಿ ಬಿದ್ದಂಗೆ ಕೀಚಲಿಟ್ಟು ಎದೆಬಡಿದುಕೊಳ್ಳುತ್ತಾ ಉರುಳಾಡಿದಳು. ತಾಯಿಯ ಈ ವಿಚಿತ್ರ ವರ್ತನೆ ಕಂಡ ಒಂದು ವರ್ಷದ ಮಗ ಬಸಣ್ಣ ತಾನೂ ಅಳಲು ಶುರುವಚ್ಚಿಕೊಂಡ. ಸಿದ್ಧಲಿಂಗಮ್ಮನ ಆರ್ಭಟ ಕೇಳಿ ಸುತ್ತಮುತ್ತಲ ಮನೆಯವರು ಗುಂಪು ನೆರೆದು ಸುದ್ದಿ ತಿಳಿದು, ಆಯ್ಯೋ ಎಂಥಾ ಚೆನ್ನಿ, ನೋಡಿದವರ ಕಣ್ಣು ಕುಕ್ಕುವಂಗ ಇದ್ಲು’ ಎಂದು ಚೆನ್ನಿಯ ಹಾಡಿ ಹೊಗಳಿ ಸಿದ್ಧಲಿಂಗವ್ವನನ್ನು ಸಮಾಧಿನಸಲು ಮುಂದಾದರು.

ಆಯ್ಯೋಯಾರ ಕಣ್ ಬಿತ್ತೆನಮ್ಮ ಚೆನ್ನಿಮ್ಯಾಲೆ, ಮುರ್ಕಂಡ ಹೋದ್ರಲ್ಲೆ ಎನ್ನುತ್ತಾ, ಎದೆ ಬಡಿದುಕೊಳ್ಳುತ್ತಾ ತನಗಾಗದವರನ್ನು ನೆನೆದು ಶಾಪ ಹಾಕಿದ್ಲು. ಸಮಾಧಾನ ಮಾಡುವವರು ಎಷ್ಟು ಹೊತ್ತು ನಿಂತಾರು? ನಾಲ್ಕು ಮಾತೇಳಿ ಹೊರಟರು. ಎಲ್ಲರಿಗೂ ರೊಟ್ಟಿ ಮಾಡಿ ಗಂಡಂದಿರನ್ನು ಹೊಲದ ಕೆಲ್ಸಕ್ಕೆ ಅಟ್ಟುವ ಅವಸರ.

ಇತ್ತ ದಾರಿಯಲ್ಲಿ ಸಗಣಿ ಹೊತ್ತು ತಿಪ್ಪೆಗೆ ಹೊರಟಿದ್ದ ಕೆಂಚ ಮಾದರಕೇರಿಯ ಹತ್ತಿರ ಹಟ್ಟಿ ಹೊರಗೆ ನಿಂತಿದ್ದ ಚೌಡಿಯ ಕಂಡು ’ಚೌಡಿ ನಮ್ಮ ದ್ಯಾಮಣ್ಣನ ವಕ್ಕಲು ದುರ್ಗಗ ಹೇಳು, ದ್ಯಾಮಣ್ಣನ ಮನ್ಯಾಗ ಆಕಳು ಸತ್ತತೈತಿ ಅಂತ’ ಎಂದ. ಹಾಗೆ ಚೌಡಿ ’ಇವತ್ತ ಹತ್ತಿ ಬಿಡಸಾಕ ಬರ್ತಿಯಲ್ಲಾ’ ಎಂದು ಏನೋ ಸೂಚ್ಯವಾಗಿ ಕಣ್ಣು ಮಿಟಿಕಿಸಿ ಸೂಚಿಸಿದ. ಚೌಡಿ ಹೂಂ ಗುಟ್ಟುತ್ತಾ ನಗೆ ಚೆಲ್ಲಿ ದುರುಗನ ಗುಡಿಸಲಕಡೆ ತಿರುಗಿ ಕೂಗು ಹಾಕಿದಳು.

ಸುದ್ದಿ ತಿಳಿದ ದುರ್ಗ ಬರ್ರನೆ ತನ್ನ ಒಡೆಯನ ಮನೆಯ ಮುಂದೆ ಹಾಜರಾಗಿ, ತಾನೇ ಮುಂದಾಗಿ ಕೇಳುಲು ಹೆದರುತ್ತಾ ಸುಮ್ಮನೇ ಕುಳಿತ.

ಒಳಗೆ ಸಿದ್ಧಲಿಂಗವ್ವನ ಅಳುನಿಂತು ನಮ್ಮ ’ಚೆನ್ನಿ’ನ ದುರ್ಗಗ ಕೊಡಬ್ಯಾಡಿ, ಕಣದಾಗ ಹುಗ್ದರಾತು. ಚೆನ್ನಿನ ರೆಂಪಿಗೆಗೆ ಕೊಯ್ಯಾಕ ಕೊಡದ ಬ್ಯಾಡ. ಒಂಜೊತೆ ಕಾಲ್ಮರಿಗಾಗಿ ದ್ಯಾವರಾಂಗ್ಹಯಿದ್ದ ಆಕಿನ ಆ ಮಾದ್ಗ್ಯಾನ ಕೈಗೆ ಒಪ್ಸೋದು ಬ್ಯಾಡ ಎಂದು ಗಂಡನೆದರು ಗೋಗರೆಯುತ್ತಿದ್ದಳು. ದ್ಯಾಮಣ್ಣ ಏನು ಹೇಳಲು ತೋಚದೆ ಹೊರಬಂದ. ದುರ್ಗ ಆಸೆಗಣ್ಣಿನಿಂದ ತನ್ನ ಒಡೆಯನ ಕಡೆಗೆ ಮುಖ ಮಾಡಿ ’ಗೋಡ್ರೆ’ ಎಂಥ ಚೆನ್ನವ್ವ ನಮ್ತಾಯಿ ಹೋಗ್ಬಿಟ್ಳಂತೆ’ ಎನ್ನುತ್ತಾ ಮಾತಿಗಿಳಿದ.

’ಒಂಜೊತೆ ಮೆಟ್ಟು, ಪಟಗಾಣಿ ಎಲ್ಲಾ ಮಾಡ್ಕೊಡ್ತಿನ್ರೀ, ನಾ ಹಂಗಾರೆ ಚೆನ್ನವ್ವನ ಒಯ್ತಿನ್ರಿ ಅಂದ. ದುರ್ಗನ ಮಾತ್ಗೆ ಏನು ವಳ್ಳಿ ಹೇಳದ ದ್ಯಾಮಣ್ಣ ಆಯ್ತು ಅಂದ. ದುರ್ಗನ ಸಂಭ್ರಮ ಹೇಳತೀರದು. ಆದರೆ ಒಡೆಯನ ಎದುರು ವ್ಯಕ್ತಮಾಡುವಂತಿಲ್ಲ. ಮನೆಗೆ ಬಂದವ್ನೆ ತನ್ನ ಹೆಂಡತಿ ಮಾರಿ, ಮಕ್ಕಳಿಗೆ ಸುದ್ದಿ ತಿಳಿಸಿದ ಕೂನ, ಬೀರ, ಅಮಾಸ, ಠೊಣ್ಣಿಯರನ್ನು ಕರೆದುಕೊಂಡು ಉದ್ದನೆಯ ಮರದ ತುಂಡಿನೊಡನೆ ಗೌಡರ ಮನೆಯತ್ತ ಧಾವಿಸಿದ.

ದುರ್ಗನ ನೇತೃತ್ವದ ಗುಂಪು ಕೇರಿ ದಾಟಿರಲಿಲ್ಲ. ಕೇರಿಕಡೆಗೇ ಬರುತ್ತಿದ್ದ ಗೌಡರ ಸಿದ್ಧಪ್ಪನನ್ನು ಕಂಡದ್ದೇ ನಿನ್ನೆ ಕೆಲಸಕ್ಕೆ ’ಕಳ್ಳಬಿದ್ದ’ ಅಳುಕಿನಿಂದ ಅರಗುಬಿದ್ದ ಬೀರ ’ದುರ್ಗಣ್ಣ ನಾ ಬ್ಯಾರೇ ಹಾದಿಲಿ ಬರ್ತಿನ್ರೋ’ ಎನ್ನುತ್ತಾ ಹಿಂಸರಿದ. ಕೂನ ನಗುತ್ತಲೇ’ ನಮಸ್ಕಾರ್ರಿ ಧಣಿ,ಕೆಂಚಿ ಮನೆಗವ್ವುಳೆ, ಎರಡು ರೂಪಾಯಿ ಇದ್ರ ಕೊಡ್ರಿಯೆಂದ. ಲೇ ಕೂನ ಮುಂಜ್ಮುಂಜಾನೆ ಏನ್ಲೆನಿಂದು, ಮೊನ್ನಿನು ಇಸ್ಕಂಡ್ದೆ. ಸಂಜೀಕ ಬಾ’ ಎನ್ನುತ್ತಾ ಲುಂಗಿಯನ್ನು ಬಿಗಿಪಡಿಸುತ್ತಾ ಕೇರಿಯೊಳಗೆ ಹೆಜ್ಜಿಯಿಡುತ್ತಾ ಮಾದರ ಹುಡ್ಗಿಯರ ಕೂಗುತ್ತಾ ನಡೆದ.
ಏ ದ್ಯಾಮಿ, ಈರಿ ಎಲ್ಲೆದಳೆ ದುರ್ಗಿ, ಪಾರಿ ಮಲ್ಲಿ ನಡೀರಿ, ಹೊತ್ತಮ್ಯಾಲೆ ಬಂತು. ಬಿಸಲೇರತೈತಿ. ಅಡ್ಡಕಸಬಿ ಮಳಿ ಹೊಡೀತಂದ್ರ ಹತ್ತಿ ಹೊಲ ಹಾಳಾದೀತು. ನಡ್ರಿ, ನಡ್ರಿ ಎನ್ನುತ್ತಾ , ನಿನ್ನೆ ಬರದವರನ್ನ ಬೈಯುತ್ತಾ ಆಳುಗಳನ್ನ ಹೊರಡಿಸುತ್ತಿದ್ದ ಗೌಡರ ಸಿದ್ಧಿ.

ಬಿಳಿಲುಂಗಿ ಹುಟ್ಟಿದ್ದ ಕೆಂಪಗಿನ ಸಿದ್ಧಿ ನೋಡಿದವರು ತಬ್ಬಿಕೊಳ್ಳುವಂತಿದ್ದ. ಮಾದರಕೇರಿಯಲ್ಲಿ ಅಪರಿಚಿತರು ಕಾಲಿಟ್ಟರೆ ಹುಯ್ಲಿಡುವ ನಾಯಿಗಳು ಸಿದ್ಧನಗೌಡರ ಮೈ ವಾಸನೆ ತಿಳಿದೋ, ಒಗ್ಗಿಕೊಂಡು ಬೊಗಳುವ ಬದ್ಲು ಬಾಲ ಅಲ್ಲಾಡಿಸುತ್ತಿದ್ದವು. ಕೇರಿಯ ಹೆಣ್ಣು-ಗಂಡುಗಳು ಗೌಡ್ರೇ, ಧಣಿರೇ ಎನ್ನುತ್ತಾ ನಡುಬಗ್ಗಿಸಿ ಕೈಮುಗಿದು, ಗೌರವ ಸೂಚಿಸಿ ಹೋಗುತ್ತಿದ್ದರು.

ಸಿದ್ಧಣ್ಣ ಗೌಡ ತನ್ನ ವಾರಿಗೆಯ ದೇವೇಂದ್ರ, ದಿವಾಕರ, ನಿಂಗರಾಜರಿಗೆಲ್ಲಾ ಪ್ರೀತಿಯ ’ಸಿದ್ಧಿ ಯಾಗಿದ್ದ. ಮನೆಯರಿಗೆ ಮುದ್ದಿನ ಸಿದ್ಧುವಾಗಿದ್ದ. ಬೆಳಗಾಂವ ಚಿಕ್ಕಪ್ಪನ ಮನೆಯಲ್ಲಿಯುಳಿದು ಪಿಯುಸಿ ಮೊದಲ ವರ್ಷದಲ್ಲೇ ’ಡುಮ್ಕಿ’ ಹೊಡೆದು ನನ್ ತಲೆಗೆ ವಿದ್ಯೆ ಹತ್ತಲ್ಲ ಅಂತ ಹಳ್ಳಿಗೆ ಮರಳಿದ್ದ. ಹೊಲದ ಕೆಲಸಗಳ ಮೇಲುಸ್ತುವಾರಿ ನೋಡ್ಕೊಂಡು ಹೋಗೋದು, ಮಧ್ಯಾಹ್ನ ’ಎಜ್ಡಿ’ಬೈಕ್ ಹತ್ತಿ ಹೊಲಕ್ಕ ಹೋಗಿ ಬುತ್ತಿಕೊಟ್ಟ ಬರೋದು, ಸಂಜೆ ಹೊತ್ಗೆ ವಾರ್ಗಿಯವರೊಡನೆ ಇಸ್ಪೀಟ್ ಆಡುತ್ತಾ, ರೇಡಿಯೋ, ಪತ್ರಿಕೆಗಳಲ್ಲಿ ಬಂದ ಸುದ್ದಿ ಮಾತಾಡಿ ಕತ್ತಲಾಗುತ್ತಿದ್ದಂತೆ ಯಾವುದಾದರೂ ’ಹಕ್ಕಿ’ ಹುಡ್ಕಿ ಹೊರಡೋದು ಸಿದ್ಧಣ್ಣ ಗೌಡರ ರೂಢಿಯಾಗಿತ್ತು.

ಇಡೀ ಮಾದರಕೇರಿಯಿಂದ ನಾಲ್ವತ್-ಐವತ್ತು ಹೆಣ್ಣಳುಗಳನ್ನು ಎಬ್ಬಿಸಿಕೊಂಡು ಹೊಲದ ದಾರಿಯಿಡಿಸಿ ತಾನು ಮನೆಗೆ ಮರಳಿದ. ಮನೆಗೆ ಬಂದವನೇ ಕಾದ ನೀರ ಮೈಮ್ಯಾಲೆ ಹೊಯ್ದುಕೊಂಡು, ಹುಟ್ಟಿನಿಂದ ರೂಢಿಯಾದ ದೇವರಮನೆ ಕಡೆ ನಡೆದು ಊದುಬತ್ತಿ ಹಚ್ಚಿ, ಕೈಮುಗಿದು, ಅಡುಗೆ ಮನೆಯಲ್ಲಿ ಕಾಲಿಡುತ್ತಿದ್ದಂತೆ ಅಡ್ಡಣಿಗೆ ಮೇಲೆ ತಯಾರಾಗಿದ್ದ ಹುಗಿಯಾಡುವ ಬಿಸಿ ಬಿಸಿ ರೊಟ್ಟಿ, ಮೊಸರು ಉಂಡು ಹೊರ ಬಿದ್ದು ೯ ಗಂಟೆಗೆ ಬಸ್ಸಿಗೆ ಬರುವ ಪೇಪರ್ ಕಾಯುತ್ತಾ ಅರಮನೆಯಂಥ ಮನೆಯ ಹೊರ ಜಗುಲಿ ಮ್ಯಾಲೆ ಇಟ್ಟ ತಲೆದಿಂಬಿಗೆ ಕೈಯಾನಿಸಿ ಕುಳಿತ. ಅವರಪ್ಪನನ್ನ ಇದೇ ಸ್ಟೈಲಿನಿಲ್ಲಿ ಕುಳಿತಿರುತ್ತಿದ್ದುದನ್ನು ಕಂಡಿದ್ದ ಜನ, ನಸುನಗುತ್ತಾ ಸಣ್ಣ ಗೌಡ್ರನೊಮ್ಮೆ ನೋಡಿ ಮುಂದೆ ಸಾಗುತ್ತಿದ್ದುದು ಊರಿನವರ ದಿನಚರಿಯಾಗಿತ್ತು.

ಅಷ್ಟರಲ್ಲಿ ಸಿದ್ಧಣ್ಣನ ಸ್ನೇಹಿತ ದೇವೇಂದ್ರ ಬಂದು ’ಸಿದ್ಧಿ ಇವತ್ತು ಸಂಜೆ ಹರಪನಹಳ್ಳಿಗೆ ಹೋಗಿ ಬರನ ನಡಿ, ಚಂದ್ರಶೇಖರ ಬರ್ತಾನಂತೆ. ’ಪರಿಮಳ’ದಾಗ ’ಗುಂಡು’ ಹಾಕಿ ಬಂದ್ರಾತು’ ಅಂದ.

ಇವತ್ತು ನಂದು ಹೊಲದ ಕಡಿಗೆ ಕೆಲ್ಸಾ ಐತಿ. ನೀನು ಹೋಗು, ಬೇಕಾದ್ರ ’ಗಾಡಿ’ ತಗೊಂಡು ಹೋಗು ಅಂದ ಸಿದ್ಧನಗೌಡ. ನಿರಾಶನಾದ ದೇವೆಂದ್ರ ಸಿದ್ಧಿಯನ್ನು ಒಪ್ಪಿಸಲು ನೋಡಿದ. ’ಏನಾರ ಬ್ಯಾರೆ ಐತೇನು’ ಎಂದು ಕೆದಕಿ ಕೇಳಿದ. ’ಅಂಗೇನ ಇಲ್ಲಲೇ’ ಎಂದು ಸಿದ್ಧಿ ರಾಗ ಎಳೆದಾಗ……

’ಕೂನನ ಮೂರನೇ ಮಗ್ಳು ಭಾರೀ ಹಾರಾಡ್ತತೈತಿ’ ಅಂದದ್ದಕ್ಕ ’ಏಯ್ ಹೊಸ ಹುರುಪು. ಒಡ್ಕಳ್ಳಿ, ನೋಡಿದ್ರಾತು ಎಂದ ಸಿದ್ಧಿ.

ಅತ್ತ ದೇವೇಂದ್ರ ಮರೆಯಾಗುತ್ತಿದ್ದಂತೆ ಸಿದ್ಧಿ ಹೊಲಕ್ಕೆ ನಡೆದ. ಹೊಲದ ಒಂದೆಡೆ ಕೆಂಚಿ, ದುರ್ಗಿ, ಮಲ್ಲಿ ಮುಂತಾಗಿ ಹೆಣ್ಣಾಳುಗಳು ಹತ್ತಿ ಬಿಡಿಸುವುದರಲ್ಲಿ ನಿರತರಾಗಿದ್ದರು.

*********
ಅಮಾಸನ ಅಕ್ಕನ ಮಗಳು ಕೆಂಚಿ ಅವನಿಗಿಂತ ನಾಲ್ಕಾರು ವರ್ಷ ಚಿಕ್ಕವಳು. ಮಾಮ ಕೂನನಿಗೆ ಕೆಂಚಿಯನ್ನು ಅಮಾಸನಿಗೆ ಕೊಡಲು ಮನಸಿಲ್ಲ. ಕೆಂಚಿ ಅವನ ಸಂಪತ್ತು. ಅವಳು ಅವನಿಗೆ ದಿನವೂ ಎರಡು ರೂಪಾಯಿ ನೀಡುವ ದೇವತೆ. ರಾತ್ರಿ ಹೊತ್ತು ಸರಾಯಿ ಕುಡಿಯದಿದ್ದರೆ ಅವನಿಗೆ ನಿದ್ದೆಯೇ ಬೀಳುತ್ತಿರಲಿಲ್ಲ.

’ನಮ್ಮ ಕೆಂಚವ್ವ ಹೆಂಗವ್ಳೆ, ಕೆಂಡ ಸಂಪ್ಗೆ ಅಂಗವ್ಳೆ’ ಎನ್ನುತ್ತಾ ತಿರುಗುತ್ತಿದ್ದ ’ಕೂನ.’ ಮೊದಲೆರಡು ಮಕ್ಕಳಲ್ಲಿ ಒಬ್ಬಳು ಬಸುರಿ. ಇನ್ನೊಬ್ಬಳು ಬಾಣಂತಿ. ಕೂನನ ಕುಟುಂಬವೇ ವಿಚಿತ್ರ. ಉಳಿದ ಸಣ್ಣ ಹೆಣ್ಣು ಮಕ್ಕಳು ಪ್ರಾಯಕ್ಕೆ ಕಾಲಿಡುತ್ತಿದ್ದವು. ಸದ್ಯ ಈಗ ಕೆಂಚಿ ಅವನ ಪ್ರಾಣವಾಗಿದ್ದಳು. ಯಾಕೋ ಅವನ್ಗೆ ಗೌಡರ ಸಿದ್ಧಣ್ಣನ ಖಂಡ್ರೆ ಖುಷಿ. ’ಸಿದ್ಧಣ್ಣ ಗೌಡ್ರೆ ಒಮ್ಮೆ ಮನಸ್ಸ ಮಾಡ್ರಿ’ ಅಂತಿದ್ದ. ಸಿದ್ಧಿಗೂ ಯಾವ ಭಯವೂ ಇರಲಿಲ್ಲ. ಅಣ್ಣನ, ಗಂಡಾಳುಗಳ ಕಣ್ ತಪ್ಪಿಸಿದ್ರೆ ಸಾಕಾಗಿತ್ತು. ಇಷ್ಟೊತ್ತಿಗೆ ಕೆಂಚಿ ವಶವಾಗುತ್ತಿದ್ದಳು.

ಕೆಂಚಿಗೂ ಅಷ್ಟೇ ಸಿದ್ಧಣ್ಣ ಗೌಡ್ರು ಹಾಸ್ಯ ಮಾಡಿದಾಗಲೆಲ್ಲಾ ’ಸುಮ್ಕಿರಿ ಗೌಡ್ರೆ ’ಎಂದೋ ಇಲ್ಲವೇ ಕಿಸಕ್ಕನೆ ನಕ್ಕೂ ತಪ್ಪಿಸಿಕೊಳ್ಳುತ್ತಿದ್ದಳು.

ಇತ್ತ ಅಮಾಸನಿಗೆ ಕೆಂಚಿಯ ಮೇಲೆ ಬಲು ಪಿರುತಿ. ಕೆಂಚಿನ ಮದ್ವೆ ಅಗ್ಬೇಕು. ಕೂನ ಒಪ್ಪದಿದ್ದರೆ ಓಡಿಸಿಕೊಂಡಾದ್ರು ಹೋಗಬೇಕು ಎಂಬ ಸಂಚು ಅವನ ಮನದಲ್ಲಿ ಆಗಾಗ ರೂಪ ಪಡೆದುಕೊಳ್ಳುತ್ತಿತ್ತು. ಕೆಂಚಿ ಅಮಾಸನೊಡನೆ ಮದುವೆ ಬಗ್ಗೆ ಯೋಚಿಸಿದವಳೂ ಅಲ್ಲ. ಅಷ್ಟಾಗಿ ಅಮಾಸನನ್ನು ಹಚ್ಚಿಕೊಂಡವಳೂ ಅಲ್ಲ. ಎಲ್ಲ ವಾರಿಗೆಯ ಹುಡ್ಗುರಂತೆ ಅವನೂ. ಆದರೂ ನಾಲ್ಕು ದಿನದಿಂದ ಅಮಾಸ ಗುಡಿಸಲು ಸುತ್ತ ಸುಳಿಯುತ್ತಿದ್ದುದು ಕಂಡು ಅವಳೆದೆಯಲ್ಲಿ ಅಳುಕು ಉಂಟಾದುದು ಸುಳ್ಳಲ್ಲ. ಅಕ್ಕ ದುರ್ಗಿಯಲ್ಲಿ ಇದನ್ನು ಹೇಳಿದ್ದಳು ಕೂಡಾ. ’ದುಗ್ಗವ್ವ ಈ ಅಮಾಸ ಹಿಂಗ್ಯಾಕ ಸುಳಿತೈತಿ ಅಂತ, ಗೌಡ್ರ ಗದ್ದಿ ಗೇಯದ್ ಬಿಟ್ಟ’ ಅಂದದಕ್ಕೆ ದುಗ್ಗಿ ’ಆಯ್ ನಿಂಗೆ ಮಳ್ಳಾಗಿರ್ಬೇಕು. ನಿನ್ ಕಂಡ್ರ ಇಲ್ಲದ ಪಿರುತಿ ಅಂವ್ಗ’ ದುಗ್ಗಕ್ಕ ’ನಾ ಮದ್ವಿ ಅಂತ ಅದ್ರ ಕೆಂಚಿನ ನೋಡ’ ಅಂತನಾ. ಮಾತನ್ನೇ ಕೇಳುತ್ತಿದ್ದ ಕೆಂಚಿ ’ಏಯ್ ಸುಮ್ಕಿರೇ ಅದ್ರ ಮೂತಿನ ನೋಡ ಎಂದು’ ದಡಕ್ಕನೆ ಎದ್ದು ಮಾತನ್ನೇ ಮುರಿದಿದ್ದಳು.

***

ಸಿದ್ದಿ ಹೊಲದ ಕಡೆ ಸಮೀಪಿಸಿದ. ತನ್ನ ಬೈಕ್ ’ಎಜ್ಡಿ’ ಗಾಡಿನ ದೇವೇಂದ್ರನಿಗೆ ಕೊಟ್ಟಿದ್ದ. ಹೊತ್ತು ನಡುನೆತ್ತಿಗೆ ಬಂದಿತ್ತು. ಕಟ್ಟಿ ಹೊಲದಲ್ಲಿ ಹತ್ತಿ ಬಿಡಿಸುತ್ತಿದ್ದ ನಲ್ವತ್ತು ಹೆಣ್ಣಾಳುಗಳು ಇನ್ನೊಂದೆಡೆ ಕಬ್ಬಿನ ಗದ್ದೆಗೆ ನೀರು ಕಟ್ಟುತ್ತಿದ್ದ ಅಮಾಸ, ದ್ಯಾಮ ಏನೋ ಮಾತಾಡಿಕೊಳ್ಳುತ್ತಿದ್ರು. ಹತ್ತಿರಗೌಡ್ರು ಸಮೀಪಿಸುತ್ತಿದ್ದಂತೆ ಕೆಲಸದಲ್ಲಿ ತೊಡಗಿಕೊಂಡವರಂತೆ ನಟಿಸುತ್ತಾ ನಡುಬಗ್ಗಿಸಿ ಸಲಿಕೆ ಯಿಂದ ನೀರಿಗೆ ದಾರಿ ತೋರ್ಸಿ ಮಡಿಯೊಂದರ ಬಾಯಿಕಟ್ಟಿ, ಮತ್ತೊಂದು ಮಡಿಗೆ ತಿರುಗಿಸಿದ. ’ಏನೋ ಮಾತಾಡ್ತಿರಲೇ ಸುಳೇಮಕ್ಕಳಾ’ ಎಂದ ಸಿದ್ಧಿ ಗೌಡರ ಮಾತಿಗೆ ’ಆಯ್ ಏನು ಇಲ್ಲಪಾ ಗೌಡ’ ಮುಂದಿನಾರ ’ಮದಗಮ್ಮ’ನ ಜಾತ್ರಿ ಅಂತಾ ಮಾತಾಡದ್ವಿ. ಅಂಗ್ಯಾಕ ಸಿಟ್ಟಿಗೇಳ್ತರಿ ಎಂದು ಅಮಾಸ ಮುಖ ಕಿವುಚಿಕೊಂಡ.

’ಬ್ಯಾಗ್, ಬ್ಯಾಗ್ ಮುಗಸ್ರಿ, ಸಂಜಿಕಾ ಕರೆಂಟ ಇರಲ್ಲ. ಮತ್ತೆ ಬರತಂಕ ಕಾಯಣ ಅಕತಿ’ ಅಂದದ್ದಕ ಅಮಾಸ ಏನು ಹೇಳ್ದೆ ಹರಿಯುವ ಕಾಲುವೆಯಲ್ಲಿ ಕಾಲಿಡುತ್ತ ಮುಂದಿನ ಮಡಿಯತ್ತ ನಡೆದ…..

ಗೌಡ ಹತ್ತಿ ಬಿಡಿಸುತ್ತಿದ್ದ ಕೆಂಚಿಯನ್ನು ನಿಂತಲ್ಲಿ ನಿಂದಲೇ ಗುರುತಿಸಿದ. ಹಾಗಿತ್ತು ಅವಳ ಎತ್ತರ, ಮೈಕಟ್ಟು ಮನದಲ್ಲೇ ಅಂದ್ಕೊಂಡ.

’ನಮ್ಮ ಜಾತಿಲಿ ಇವ್ಳು ಹುಟ್ಟಬಾರದಿತ್ತೆ? ಎಂಥಾ ಚೆಲುವಿ! ಏನು ಪೆಡಸು’ ನಡುಬಗ್ಗಿಸಿ ಹತ್ತಿಯ ಗಿಡದಿಂದ ಬೆಣ್ಣೆಯಂಥ ತಿಳಿಯನ್ನ ಉಡಿಗೆ ಕಟ್ಟಿದ ಚೀಲಕ್ಕೆ ತುಂಬುತ್ತಿದ್ದ ಕೈಗಳು…. ಆಗಾಗ ನಡು ಎತ್ತಿ ನಿಂತು ಮತ್ತೆ ಬಾಗುತ್ತಿತ್ತು ಕೆಂಚಿಯ ದೇಹ. ಹೀಗೆ ಸಾಗಿತ್ತು….ಹತ್ತಿ ಬಿಡಿಸುವ ಕ್ರಿಯೆ.

ಸಿದ್ಧಣ್ಣ ಗೌಡ್ರ ಬಂದ್ರಲ್ಲೇ ಕೆಂಚಿ ಅಂದ್ಳು….ಪಕ್ಕದಲ್ಲಿದ್ದ ಈರಿ. ನಾ ಅಗ್ಲೆ ನೋಡಿದ್ದೆ ಎಂದು ಕೆಂಚಿ ಹೇಳಿದಾಗ, ಅದ್ಯಾವಾಗ ನೋಡ್ದಿ ನಂಗೆ ಕಾಣಿಸ್ಲಿಲ್ಲ ಎನ್ನುತ್ತಿದ್ದಂತೆ.

’ಚೌಡಿ ಬಂದಿಲೇನ್ರೆ ಇವತ್ತು’ ಅಂತು ಸಿದ್ಧಣ್ಣ ಗೌಡ್ರ ದನಿ.

’ಇಲ್ಲಾ ಗೌಡ್ರೆ’

’ಚೌಡಿ…..ಇವತ್ತ ಕೆಂಚಣ್ಣರ ಹೊಲಕ್ಕೆ ಹೊಗ್ಯಾಳ’ ಎಂದ್ಳು ಚೌಡಿ ಪಕ್ಕದ ಗುಡಿಸಲ ಕಲ್ಲಿ.

’ಕೆಂಚಣ್ಣನ ಚಲೋ ಇಡ್ಕಂಡಳ, ಆ ಚೌಡಿ ಬರ್ಲಿ’ ಎಂದು ಸಿದ್ಧಣ್ಣ ಗೌಡ್ರ ಮುನಿದುಕೊಂಡದ್ದ ಕೇಳಿದ ಈರಿ ಪಕ್ಕದಲ್ಲಿದ್ದ ಕೆಂಚಿಗೆ ಪಿಸುಗುಟ್ಟುತ್ತಾ ’ಈ ಗೌಡ್ರಿಗೆ ಮನ್ವಾ ಇಲ್ಲ’ ಅಂದ್ಲು. ಕೆಂಚಿ ಕಣ್ಣಲ್ಲೇ ಬಾಯ್ಮುಚ್ಚುವಂತೆ ಗದರಿದಳು.

ಸಿದ್ಧಣ್ಣ ಗೌಡ್ರು ಕೆಂಚಿಯನ್ನು ಪಂಪ್ ಸೆಟ್ ರೂಮ್ ಕಡೆಗೆ ಬರಲು ಹೇಳಿ, ಆ ಕಡೆ ನಡೆದರು. ಕೆಂಚಿಗೆ ಇವತ್ತು ಏನು ಗಾಚಾರ ಕಾದಿದಿಯೋ ಎಂಬ ಆತಂಕ ಹಾಗೂ ಗೌಡ್ರು ಏನಾರ ಹೇಳ್ಬೋದು, ಇಲ್ಲ ಏನಾರ ಕೊಡ್ಬುದು ಎಂಬ ಕಾತುರದಲ್ಲೂ ಅತ್ತ ನಡೆದಳು. ’ಈರಿ’ಗೆ ಒಳಗೊಳಗೆ ಅಸೂಯೆ. ಏನಾಗಬಹುದು ಎಂಬ ಕುತೂಹಲ. ಗೌಡ್ರು ತಿಂಗಳ ಹಿಂದೆ ಹಿಂಗ್ ಕರೆದು ತಬ್ಬಿಕೊಂಡು ಎನೇನೋ

ಮಾಡ ಬಂದಾಗ, ಹತ್ತಿರದಲ್ಲೇ ಗಂಡಾಳು ಅಮಾಸನ ದನಿ ಕೇಳಿ ತಳ್ಳಿಬಿಟ್ಟಿದ್ದರು. ಇವತ್ತು ಹಂಗೆ ಆಗಬಹುದೇ ಎಂದು ಊಹಿಸಿದಳು. ಗೌಡ್ರು ಇವತ್ತು ಕೆಂಚಿನ ಬಿಡ್ಲಿಕ್ಕಿಲ್ಲ.

ಈಗ ವಾರದಿಂದ ಗಂಟುಬಿದ್ದು ರಾತ್ರಿ ಗುಡಿಸಲೊಕ್ಕು ತನ್ನ ಹೀರಿಬಿಡುವ ಬೀರನನ್ನು ನೆನಪಿಸಿಕೊಂಡಳು. ಕೆಂಚಿಯತ್ತ ಏನೋ ಒಂಥರಾ ನೋಡಿದ್ಲು. ಹಂಗೆ ನೋಡುತ್ತಿದುದನ್ನು ಕಂಡ, ಕೆಂಚಿ ’ಅದ್ಯಾಕ ಅಂಗ ನೋಡ್ತಿಯೇ ಈರಿ. ಮ್ಯಾಲಿಂದ ಕೆಳಕಣ, ನಂಗೇನಾಗೈತಿ’ ಎಂಬ ಮಾತಿಗೂ ಈರಿ ಉತ್ತರಿಸಲಿಲ್ಲ. ನೋಡುತ್ತಲೇ ಇದ್ದಳು. ಇವಳ ಹುಚ್ಚುಕಂಡ ಕೆಂಚಿ ಗೊಣಗುಟ್ಟುತ್ತಾ ಪಂಪ್ ಸೆಟ್ ರೂಮ್ ನತ್ತ ನಡೆದಳು….

ಅಮಾಸ ಗದ್ದೆಗೆ ನೀರು ಕಟ್ಟುತ್ತಿದ್ದರೂ ಆಗಾಗ ದೂರದಲ್ಲಿ ಹತ್ತಿ ಬಿಡಿಸುತ್ತಿದ್ದ ಕೆಂಚಿ ಕಡೆಗೆ ನೋಡುತ್ತಲೇ ಇದ್ದ. ಅವಳ ಬಗ್ಗೆ ಕನಸುಗಳು ಗರಿಗೆದರುತ್ತಲೇ ಇದ್ದವು. ಮುಂದಿನ ವರುಷದ ಮದುಗಮ್ಮನ ಜಾತ್ರೆ ಹೊತ್ತಿಗಾದರೂ ಕೆಂಚಿ ತನ್ನವಳಾಗುವಂತೆ ಮನೆದ್ಯಾವತೆ ಮದುಗಮ್ಮನಲ್ಲಿ ಹರಕೆ ಕಟ್ಟಿದ್ದ. ದ್ಯಾಮನಲ್ಲಿ ಕೆಂಚಿಯ ಬಗ್ಗೆ ಹೇಳಿಕೊಂಡಿದ್ದೇ ಕೊಂಡದ್ದು, ’ನಮ್ಮ ಕೂನಮಾವ ಒಬ್ಬ ಅಡ್ಡ ಅಗ್ಯಾವ್ನೆ. ದುಗ್ಗಕ್ಕೆ ನನ್ನ ಕಡಿಗವ್ಳೆ. ಒಂದಿನಾ ಈ ಕೆಂಚಿನ ಒತ್ಕೊಂಡು ಹೋಗಿ ಮದ್ವಿ ಆಗಲಿಲ್ಲಾ ನಮ್ಮಪ್ಪಗುಟ್ಟಿದವ್ನೆ ಅಲ್ಲಾ.’ ನಾನು ಎಂಬ ಅಮಾಸನ ಪ್ರತಿಜ್ಞೆಗೆ ದ್ಯಾಮ ಚಣ ಹೌಹಾರಿದರೂ, ತೆರದ ಬಾಯನ್ನು ಆಡಿಸುತ್ತಾ ’ನೀನು ಗಂಡ್ಮಗನೇ, ನಾನಲ್ಲವಾ, ನೀ ಎಟ್ಟೊತ್ತಿಗಾದರೂ ಕರಿ ಬತ್ತೀನಿ’ ಎನ್ನುತ್ತಿದ್ದವನು ’ಆಯ್ ಅದ್ನೋಡು ಕೆಂಚಿ ಪಂಪ್ ಸೆಟ್ ರೂಮ್ ಕಡೆ ಬರ್ತವ್ಳೆ’ ಎಂದ. ಅಮಾಸನ ತಲೆ ’ಧಿಮ್’ ಎಂದಿತು. ಅದ್ಯಾಕೆ ಒಬ್ಳೆ ಈ ಕಡೆ ಬತ್ತಾಳೆ. ಈಗ ಗೌಡ ಬ್ಯಾರೆ ಬಂದವ್ನೆ. ಇಲ್ಲ ಅಂದ್ರ ಈ ಕೆಂಚಿನಾ ಎಂದು ಹಲ್ಕಡಿದ. ಹೊಟ್ಟಿಗೆ ಬೆಂಕಿ ಬಿದ್ಹಾಗ ಆತು.

ಉರಿವ ಬೆಂಕಿಯ ಒಳಗೆ ನುಂಗಿಕೊಂಡ. ಚಡಪಡಿಸಿದ. ನೀರು ಮಡಿ ತುಂಬಿ ಚೆಲ್ಲುತ್ತಿತ್ತು. ಬೇರೆ ಮಡಿಗೆ ಹರಿವ ನೀರ ಕಾಲುವೆಯಿಂದ ತಿರುಗಿಸಬೇಕಿತ್ತು. ಸಲಿಕೆ ಹಿಡಿದು ಬಿರುಸಿನಿಂದ ಕೊಚ್ಚಿದ. ಆಕ್ರೋಶದಲ್ಲಿ ಸಲಿಕೆ, ಹಸಿ ಮಣ್ಣಿನ ಮೇಲೆ ರೊಪ್ಪೆಂದು ಬಿತ್ತು. ನೀರು ಚಿಲ್ಲನೆ ಚಿಮ್ಮಿತು. ಪಕ್ಕದಲ್ಲಿದ್ದ ದ್ಯಾಮನಿಗೆ ನೀರು ಸಿಡಿದಾಗ ’ಅದ್ಯಾಕ ಅಮಾಸಣ್ಣ ಅಂಗೆ ಅಂದ.’ ಇವ ಮಾತನಾಡಲಿಲ್ಲ. ಇವನು ಮತ್ತೆ ಕೆಣಕುವ ಗೊಡವೆಗೆ ಹೋಗಲಿಲ್ಲ. ಮನಬಂದಂತೆ ಕಾಲುವೆ ಕೊಚ್ಚಿದ….ಕೆಂಚಿ ಕಣ್ಮುಂದೆ ತೇಲಿ ಬಂದ್ಲು.
***

ಸಿದ್ಧಣ್ಣ ಗೌಡ ರೂಂ ನಲ್ಲಿ ಚಡಪಡಿಸುತ್ತ ಮೈಯನ್ನೆಲ್ಲಾ ಬೆಂಕಿಯ ನಾಲಿಗೆ ಮಾಡಿಕೊಂಡಿದ್ದ. ಕೆಂಚಿ ಗೌಡ್ರೆ ಅಂದದ್ದೇ ತಡ ಒಳಗೆಳೆದುಕೊಂಡು ಬಾಗಿಲು ಹಾಕಿದ. ಗೌಡ್ರೆ ಬ್ಯಾಡ, ಎಲ್ಲರೂ ಅವ್ರೇ ಎಂದು ಗೋಗರೆದಳು.

ಏ ಕೆಂಚಿ ಅದ್ಯಾಕ್ ಹೆದರ್ತಿ. ನಿನ್ ಕೇಳರ್ಯಾರು, ಎನ್ನುತ್ತ ತಬ್ಬಿದ. ಹಸಿವು ಕೆಂಚಿಯನ್ನು ನುಂಗಿತ್ತು. ಬೆಂಕಿಯ ದಾಹ ಕೆಂಚಿಯನ್ನು ಸಂಪೂರ್ಣ ಸುಟ್ಟು ಹಾಕಿತು. ಸಿದ್ಧಣ್ಣ ಗೌಡ್ರ ಆಟ ಕಂಡ ಕೆಂಚಿಗೆ ಒಂದೆಡೆ ಇವ್ರು ಹಿಂಗಾಡಿದ್ದ ಕಂಡು ಬೆರಗಾಗಿದ್ದಳು. ಗೌಡನ ಗೋಗರಿಕೆ ಕಂಡು ನಾಚಿದ್ದಳು. ಬಿಚ್ಚಿದ ಸೀರೆ ಸುತ್ತಿದಳು. ಗೌಡ ಹಿಡಿದ ತೆಕ್ಕೆಯ ಸಡಿಲಿಸಲಿಲ್ಲ.

ಕೆಂಚಿ ಕೇಳಿದಳು… ಅವಳು ಈಗ ಗೌಡ್ರೆ ಎಂದು ಕರೆಯುವ ಬದ್ಲು ’ಸಿದ್ಧಪ್ಪ’ ಅದೇನ್ ಸುಖ ಕಾಣ್ತೀರಿ, ಮಾದಿಗರಲ್ಲೀ…?

ನಮ್ಮ ದುಗ್ಗಿನು…. ಆ ಚಂದ್ರಪ್ಪ ಗೌಡರ ಪಿರುತಿ ಬಗ್ಗೆ ಹೇಳ್ತಿದ್ಲು. ಅವರ ಹೆಂಡ್ತಿ ಬಲು ಸೂಕ್ಸುಮ ಅಂತೆ. ಮುಟ್ಟಿದರೆ ಮುರುದು ಬಿದ್ದಾಂಗ ಆಡ್ತಾಳಂತೆ. ನಮ್ಮ ದುಗ್ಗಿಯ ಕೂಸು ಅವ್ರುದೆ ಸಿದ್ಧಣ್ಣ, ಬಲೂ ಚಂದಾಗೈತಿ’ ಅಂದ್ಲು.

’ಹೌದು ಕೆಂಚಿ ಅದೇನ್ ಮೈ ನಿಮ್ಮದು. ಸುಖದ ಮೂಟೆನಾ ಇಟ್ಕೊಂಡಿರಿ ನೀವು’ ಎನ್ನುತ್ತಾ ಅವಳ ಕೈಯಲ್ಲಿ ೧೦ ರೂ. ನೋಟು ತುರುಕಿದ. ಕೆಂಚಿ ಬ್ಯಾಡ ಗೌಡ್ರೆ ಎಂದ್ಲು. ಲೇ ಕೆಂಚಿ ಇಟ್ಕಳೆ. ಜಾತ್ರಿ ಬ್ಯಾರೆ ಬಂತು. ಎನಾರ ತಗೊಳಂತೆ’ ಅಂದ. ಏರಿದ್ದ ಹೊತ್ತು ಇಳಿಯುತ್ತಾ ಬಂದಿತ್ತು. ಪಡುವಲದಲ್ಲಿ ರಕ್ತಸಿಕ್ತವಾದ ಕೆಂಪಿನ ದಿಗಂತದಲ್ಲಿ ಸೂರ್ಯ ಮುಳುಗುತ್ತಿದ್ದ.

ಸಿದ್ಧ ಗೌಡನಲ್ಲಿ ಗೆಲುವಿತ್ತು. ರಾತ್ರಿಗೆ ದೇವೇಂದ್ರ, ಚಂದ್ರಶೇಖರನ ಕರೆದುಕೊಂಡು, ವಿಸ್ಕಿ ತರುವುದಾಗಿ ಹೇಳಿಹೋಗಿದ್ದ. ಸಿದ್ಧಣ್ಣ ಗೌಡ ಅವರ ದಾರಿ ಕಾಯುತ್ತಿದ್ದ. ರಾತ್ರಿಯಾಗಿತ್ತು. ಅಣ್ಣ ಊರಲ್ಲಿ ಇರ್ಲಿಲ್ಲ. ಮನೆಯ ಹೊರ ಜಗುಲಿಗೆ ಕುಳಿತು ಗಂಡಾಳುಗಳಿಗೆ ನಾಳಿನ ಕೆಲ್ಸದ ಬಗ್ಗೆ ಗೌಡ ಆದೇಶ ನೀಡುತ್ತಿದ್ದ. ಆಳುಗಳಲ್ಲಿ ಅಮಾಸ, ದ್ಯಾಮ, ನ್ಯಾಪತ್ತೆ ಯಾದದ್ದು ಕಂಡು ಕೆರಳುತ್ತಾ ಎಲ್ಲಿ ಹೋದ್ರಲೆ ಈ ಮಿಂಡ್ರಿ ಮಕ್ಳು ಎಂದು ಪ್ರಶ್ನಿಸಿದಾಗ ಅಲ್ಲಿದ್ದ ಆಳುಗಳು ಮುಖ ಮುಖ ನೋಡಿಕೊಂಡ್ರು. ಗದ್ರಿಸಿ ಕೇಳ್ದಾಗ ತಮಗೆ ಗೊತ್ತಿಲ್ಲ ಎನ್ನುತ್ತಾ ಗುಸುಗುಸು ಆಡಿಕೊಳ್ಳತೊಡಗಿದ್ರು.

’ಎಜ್ಡಿ’ ಬರುವ ಶಬ್ದ…..ಗೌಡ ಆಕಡೆ ಮುಖ ಮಾಡಿದ. ಬೆಳಕು ಹತ್ತಿರವಾಯ್ತು. ದೇವೇಂದ್ರ, ಚಂದ್ರಶೇಖರನ ಕರೆತಂದಿದ್ದ. ಕೊನೆಗೆ ಅದು-ಇದು ಮಾತ್ನಾಡಿ ಕೋಣೆ ಸೇರಿದರು. ಗುಂಡಿನ ’ಮತ್ತು’ ಏರತೊಡಗಿತ್ತು. ಸಿದ್ಧಣ್ಣ ಕೆಂಚಿಯನ್ನು ವರ್ಣಿಸತೊಡಗಿದ. ದೇವೇಂದ್ರ ಬಿಟ್ಟ ಬಾಯಿ ಬಿಟ್ಟಂತೆ ತೆರೆದು ಕೇಳುತ್ತಾ ಕೊನೆಗೆ ’ಅಂತೂ ಹಕ್ಕಿನ ಹೊಡದಾ ಬಿಟ್ಯಾ, ನೀ ಬರಲ್ಲಾ ಅಂದಾಗ್ಲೆ ನಂಗೆ ಅನುಮಾನ ಇತ್ತು….. ಎಂದು ಒಳಗೊಳಗೆ ಕುದಿದ. ಮೂವರೂ ಕಂಠಪೂರ್ತಿ ಕುಡಿದು ಅವರವರ ಮನೆಗೆ ತೆರಳಿದ್ರು. ಗೌಡ ಹೊರಗಿನ ತಂಗಾಳಿ ಹಿತವೆನಿಸಿ ಕಟ್ಟಿಮ್ಯಾಲೆ ಆಳಿನಿಂದ ’ತಡಿ’ ಹಾಕಿಸಿಕೊಂಡು ಉರುಳಿಕೊಂಡ….
***

ಮುಂಜಾನೆ ಗೌಡರ ಮನೆಯ ಮುಂದೆ ಕಿಕ್ಕಿರಿದು ನೆರೆದ ಗುಂಪು. ಕೀಚಲಿಟ್ಟ ಧ್ವನಿಗಳು. ರಕ್ತಸಿಕ್ತ ಮಡುವಿನಲ್ಲಿ ಸಿದ್ಧಣ್ಣ ಗೌಡರ ಕುತ್ತಿಗೆ ಮುಂಡದಿಂದ ಸ್ವಲ್ಪವೇ ಹಿಡಿದಿದೆ…. ರಕ್ತದ ಮಡು ಹಾಸಿಗೆ ನೆಂದು ಕೆಳಗೆ ಹರಿದಿದೆ…. ಮೇಲೆ ಹಂಚಿಗೂ ಸಿಡಿದಿದೆ. ಕೆಲವರು ಪೋಲೀಸ್ ಠಾಣೆಗೆ ಸುದ್ದಿ ಮುಟ್ಟಿಸಲು ಹೋಗಿದ್ದಾರೆ….. ದುಃಖವೇ ಕವುಚಿಕೊಂಡ ಮುಖದಲ್ಲಿ ಬೆರಗಾಗಿ ದೇವೇಂದ್ರ, ಚಂದ್ರಶೇಖರ ಇತರ ಸ್ನೇಹಿತರ ಗುಂಪಿನೊಡನೆ ನಿಂತಿದ್ದಾರೆ. ಕೆಲವರು ಜನರನ್ನು ದೂರಸರಿಸಿ ಸಮಾಧಾನಸುತ್ತಿದ್ದಾರೆ. ಊರಿಗೆ ಹೋದ ಸಿದ್ಧಣ್ಣ ಗೌಡ್ರ ಹಿರಿಯ ಅಣ್ಣನಿಗೆ ಸುದ್ದಿ ಮುಟ್ಟಿಸಲು ಕೆಲವರು ಓಡಿದ್ದಾರೆ. ಆಳುಗಳು ಕಾಣೆಯಾದ ಅಮಾಸನ ಬಗ್ಗೆ ಕಣ್ಣಲ್ಲೇ ಮಾತಾಡಿಕೊಂಡ್ರೆ, ಗುಡಿಸಲಲ್ಲಿ ಕೆಂಚಿ ಗರಬಡಿದವಳಂತೆ ಕೂತಿದ್ದಾಳೆ.

ನಿನ್ನೆ ರಾತ್ರಿ ಎರಡು ರೂ. ಪಡೆದು ಹೋದ ಕೂನನಿಗೆ ಆಘಾತವಾಗಿದೆ. ಈ ಕೊಲೆ ಅವನ್ಗೆ ಬಿಡಿಸಲಾರದ ಪ್ರಶ್ನೆಯಾಗಿ ದೆವ್ವದಂತೆ ಎದುರು ನಿಂತಿದೆ……..
(ಮಾರ್ಚ್ ೧೯೯೮)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಗಲು – ಹರಿಗೋಲು
Next post ಮಗನಿಗೆ

ಸಣ್ಣ ಕತೆ

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…