ನಿನ್ನ ಹಸಿವ ಹಿಂಗಿಸಲಿಲ್ಲವೆಂದು
ಬಯ್ಯಬೇಡ.
ಈ ಪುಣ್ಯ ಭೂಮಿಯಲಿ,
ಪವಿತ್ರ ನದಿಗಳ
ಸಂಗಮವಿದೆ
ನಿನ್ನ ಹೊಟ್ಟೆ ತಣ್ಣಗಿಡಲು.
ಪದಕಗಳಿಸುವ ವಿದ್ಯೆ
ಕಲಿಸಲಿಲ್ಲವೆಂದು
ಜರಿಯ ಬೇಡ.
ಋಷಿ ಮುನಿಗಳ
ವೇದ ಗ್ರಂಥಗಳಿವೆ
ನೀನು ಸಂಸ್ಕಾರ ಹೊಂದಲು.
ನಡುರಾತ್ರಿಯ ಕತ್ತಲಲಿ
ಕೈ ಬಿಟ್ಟೆನೆಂದು
ಹಲುಬಬೇಡ.
ರಾತ್ರಿಯ ಕತ್ತಲಲಿ
ಮಿನುಗುತ್ತವೆ ನಕ್ಷತ್ರಗಳು
ನಿನಗೆ ಬೆಳಕು ನೀಡಲು.
ನಿನ್ನ ದೇಶ ಪ್ರೇಮದ ಬಗ್ಗೆ
ಶಂಕಿಸಿದರೆಂದು
ಮರುಗಬೇಡ.
ಆತ್ಮಬಲ ಒಂದಿರಲಿ
ನೀಡುವಳು ಭಾರತಾಂಬೆ
ನಿನಗೆ ಶ್ರೀರಕ್ಷೆ.
ಅಪನಂಬಿಕೆಗೆ ಕುಗ್ಗದಿರು
ಇರಲಿ ದೇಶ ಪ್ರೇಮ
ಕೊನೆತನಕ.
ಇರುಳಿನ ಹಿಂದಿದೆ ಹಗಲು
ಎದ್ದೇಳು!
ಬಿಡುತವಕ.
*****