ಸೂರ್ಯ ಕಂತಿದ್ದಾನೆ ಅವಳು
ದಿನದ ದಗದ ಮುಗಿಸಿ ಹೊರಳುತ್ತಿದ್ದಾಳೆ
ಧೂಳು ಕಾಲುದಾರಿಯಲ್ಲಿ
ಉಸುಕಿನಲ್ಲಿ ಅವಳ ಹೆಜ್ಜೆಗಳು
ಮೂಡುವದಿಲ್ಲ, ಬರೀ ನಿಟ್ಟುಸಿರು ಕೇಳುತ್ತದೆ.
ಮಗಳು ಈ ದಿನ ಯಾಕೋ
ಮಂಕಾಗಿದ್ದಳು ಹಾರಿ ಬರುವ
ಹಗಲ ಬಿಸಿಲಿಗೆ ಹೆದರಿದ್ದಾಳೆ,
ಅಪ್ಪನ ಕಣ್ಣಲ್ಲಿ ನಿಗಿ ನಿಗಿ ಸೂರ್ಯ!
ಉತ್ತರ ಸಿಗದ ಪ್ರಶ್ನೆ ಪತ್ರಿಕೆಗಳು
ಭ್ರಮೆಯಲಿ ನಡುಗೆಯ ಕನಸು
ತೊಯ್ದ ಒರೆಯಲಿ ಗಂಜೀ
ಬೇಯಿಸುವ ಪರಿಪಾಠ, ಮುಳ್ಳು
ತುಂಬಿದ ಕಳ್ಳೀಕಂಠಿ ಓಣಿ
ನದಿಯೊಳಗೆ ಅತ್ತ ಇತ್ತ ತೇಲುವ ದೋಣಿ.
ತಲೆಯಿರುವ ಜಾಗದಲಿ ಹಣ್ಣಾದ
ಕೂದಲು ಗಂಟು, ಮಾಸಿದ ಚಿಕ್ಕೀ ಬಳೆಗಳು
ಹಚ್ಚಾಗಿವೆ ಎದೆಯ ಭಾರ ಪುಟ್ಟೀ
ಒಂಟಿಯಾಗಿ ನಡೆದಿದ್ದಾಳೆ ಕುಂತೀ
ಎಲ್ಲಾ ಸರಿಯುವ ಜಗದ ಪಾಡು.
ಮಕ್ಕಳು ಕಾಲು ತುಂಬ ಬಿಗಿದ ಸರಪಳಿ
ಹಾಲು ಉಣಿಸಿದ ತಟ್ಟೆಯಲಿ ವಿಷ
ಮನೆತುಂಬ ಹರಡಿದ ಹಗೆ ಹೊಗೆ
ಬೀದಿಗೆ ಬಂದು ಹೊರಳಾಡಿದ ಕವಿತೆ
ಕತ್ತಲು ಆಕಾಶದ ಅಂಬರದಲಿ ಚಿಕ್ಕಿಗಳಿಲ್ಲ.
ಒಂಟಿ ಮನೆಯಲಿ ಹೊರಳಾಡಿದ
ಕುಂತಿ ತಾಯಿ ಮನಸ್ಸು ಮರುಗಿತು
ಬೆನ್ನಿಗಂಟಿದ ಯುದ್ಧ ವಾಸನೆ ತಿಳಿ
ಗೇಡಿನ ಕೇಡಿನ ಆಟದಲಿ ಮೈಮರೆತವರು
ಕೇಳಲಿಲ್ಲ ಅವಳ ಹೃದಯದ ಕೂಗು.
*****