ಕಾರುಣ್ಯದಾ ಬೆಳಕೆ ಬಾ ಬೇಗ ಬಾ
ನನ್ನೆದೆಯ ಬಾಂದಳವ ಬೆಳಗಿಸಲು ಬಾ
ನಿನ್ನಲ್ಲಿ ಆನಿಂದು ಬೇಡಿಕೊಳ್ಳುವೆ ನಿನ್ನು
ಕೃಪೆಯಿಟ್ಟು ಆಲಿಸೆನ್ನೀ ಮೊರೆಯನ್ನು
ಮುಗಿಲಗಲ ಜಗಕೆಲ್ಲ
ರಸವೃಷ್ಟಿ ಸುರಿಸು,
ರವಿ ಶಶಿ ತಾರಾಹೊಳಪನ್ನು
ನಮ್ಮ ಕಣ್ಣುಗಳೊಳಗಿರಿಸು,
ಮೇದಿನಿಯ ಕಣ ಕಣದಲ್ಲೂ
ಫಲ ಫಲದೆನೆಯ ನಿರಿಸು,
ಜೀವ, ಜೀವ ಸಂಕುಲಕೆಲ್ಲ
ಉಲ್ಲಸದ ನೆಮ್ಮದಿಯ ಹರಸು,
ನದಿ ನದದ ಜುಳ ಜುಳದ
ಸಿರಿ ಬತ್ತದಂತಿರಿಸು,
ಅಂಬುಧಿಯ ಸಡಗರವ
ಜೀವಿತದಿ ಬೆರೆಸು,
ಪ್ರಾಣ ವಾಯುವಿನಲೆಯಲ್ಲಿ
ಸಂಜೀವಿನಿಯನಿರಿಸು
ಸುಮಸುಮದ ನಂದನದ
ಚೆಲ್ವ ಬಾಳ್ವೆಯಲಿ ಬೆರೆಸು
ಹಾರೋಹಕ್ಕಿಯ ಪಂಜರದ
ಪಾರತಂತ್ರ್‍ಯ ಧಿಕ್ಕರಿಸು
ಜಗದ ಜನಮನಕೆಲ್ಲ ಮುದದ
ಸ್ವಾತಂತ್ರ್‍ಯ ಕೊಡಿಸು
ಕ್ರೂರ ಕ್ರೌರ್ಯ ಮೃಗದ ರಣ
ದ್ವೇಷವನು ದಹಿಸು,
ಪ್ರೀತಿ ವಾತ್ಸಲ್ಯ ನೇಹ ಸಗ್ಗವನು
ಬಿತ್ತಿ ಬೆಳೆಸುತಾ ಬೆಸೆಸು.
ದುರಾಸೆಯಾಸೆಗಳಗ್ಗಳದ
ಕುತಂತ್ರವನೆ ಕೆಡಿಸು,
ಶ್ರಮದ ಅನ್ನವ ಸಮದಿ
ಉಣ್ಣುವುದ ತಿಳಿಸು.
ಶಸ್ತ್ರ ಶಾಸ್ತ್ರದ ಭಯದ
ಭೀತಿಯನು ಬಿಡಿಸು,
ವರ್ಣ ವರ್ಣದ ವರ್ಗ
ಕ್ಷುದ್ರತೆಯ ನಳಿಸು
ರಂಗು ರಂಗಿನರಂಗು
ಬೆಳ್ಮುಗಿಲ ರಂಗಿನ ಸೊಗಸು
ಭಿನ್ನ ಭಿನ್ನದ ಜನದ
ದೇಹ-ಗೇಹ ಒಂದೆಂದು ತಿಳಿಸು
ಆ ಧರ್ಮ ಈ ಧರ್ಮ ಕರ್ಮ
ಮೌಢ್ಯ ನಿಯತಿಗಳನಳಿಸು
ಈ ವಿಶ್ವ ವೀದೇಶ ನಾಡು ನುಡಿ
ನಿಜ ಧರ್ಮ ಸಾರ ತಿಳಿಸು
ಮತ ಪಥದ ಕುಲ ಕುಲದ
ಹುಚ್ಚು ಸಹವಾಸ ಬಿಡಿಸು
ಮಾನವತೆಯರಿವರಿವು
ನೆಚ್ಚಿ ಬದುಕಲೋಲೈಸು
ಗುಡಿ ಚರ್ಚು ಮಸೀದಿ ಬಸದಿಗಳ
ಕಟ್ಟುವುದ ಬಿಡಿಸು
ನಮ್ಮ ನಿಮ್ಮಯ ನಿಜ ತಿಳಿವು
ದೇವರಿರವೆಂದು ಕಲಿಸು.
*****