ಮೇಟಗಳ್ಳಿ ಬಸ್ ನಿಲುಗಡೆಯಲ್ಲಿ ನಿಂತ ನಗರ ಸಾರಿಗೆ ವಾಹನವನ್ನು ಏರಿದೆ. ಜನದಟ್ಟಣೆ ಇರದೆ ಪೀಠಗಳು ಬಿಕೋ ಎನ್ನುತ್ತಿದ್ದವು. ಊರಿಗೆ ಪ್ರಯಾಣಿಸಲು ಜಾಗ ಕಾಯ್ದಿರಿಸಲೋಸುಗ ಕೇಂದ್ರ ನಿಲ್ದಾಣಕ್ಕೆ ಹೋಗಬೇಕಾಗಿತ್ತು.
ಚೀಟಿ ಪಡೆದು ಮೂರು ಪೀಠಗಳ ಆಸನದಲ್ಲಿ ಕಿಟಕಿ ಬಳಿ ಕುಳಿತೆ.
‘ಜಾವಾ’ದಲ್ಲಿ ಇಬ್ಬರು ಹೆಂಗಸರು – ತಾಯಿ ಮಗಳಿರಬೇಕು ಹತ್ತಿದರು. ಮುದುಕಿ ಸೀಟು ಅರಸುತ್ತಾ ಬಂದವಳು ಹಿಂದಿನ ಮತ್ತು ಮುಂದಿನ ಮೀಸಲು ಪೀಠಗಳು ಖಾಲಿ ಇದ್ದರೂ ನನ್ನ ಪಕ್ಕದ ಖಾಲಿ ಸೀಟನ್ನು ಮೆತ್ತಗೆ ಆವರಿಸಿಕೊಂಡಳು. ಆಕೆಯ ಮುಖದ ಮೇಲಿನ ಮೈಲಿ ಕಲೆಗಳು ಎದ್ದು ಕಾಣುತಿದ್ದವು. ನೆರಿಗೆ ಗಟ್ಟಿದ ಕಪ್ಪನೆ ಮುಖದಲ್ಲಿ ಬಡತನ ಇಣುಕುತ್ತಿತ್ತು. ಅಜ್ಜಿಯು ಎಡಗೈ ಗಂಟಿನ ಕೆಳಗೆ, ಹಸ್ತ ಬಿಟ್ಟು ಪೂರ್ತಿ ಬ್ಯಾಂಡೇಜು ಹಾಕಿಕೊಂಡಿದ್ದಳು. ಕೈ ಮುರಿದಿರಬೇಕು. ಕೈ ಮಡಿಚಿ ಕುತ್ತಿಗೆಗೆ ಕಟ್ಟಿದ ಬಟ್ಟೆ ಹಗ್ಗಕ್ಕೆ ಜೋತು ಹಿಡಿದಿದ್ದಳು. ನೋಡುತ್ತಾ ನಾನು ಸ್ವಲ್ಪ ಸರಿದು ಕಿಟಕಿಗೆ ಅಂಟಿಕೊಂಡೆ.
ಮಗಳು ತಾಯಿಯ ಪಕ್ಕದಲ್ಲಿ ಖಾಲಿ ಇದ್ದರೂ ಹಿಂದಿನ ಆಸನದಲ್ಲಿ ಕುಳಿತುಕೊಂಡು ಮುಂದೆ ಬಾಗಿ ನಮ್ಮಾಸನದ ಒರಗಿಗೆ ಮುಖವಿಟ್ಟಿದ್ದಳು. ಸಬರ್ಬನ್‌ಗೆ ಎರಡು ಚೀಟಿ ಕೇಳಿ ಪಡೆದುಕೊಂಡಳು.
ಸ್ವಲ್ಪ ದೂರ ಪ್ರಯಾಣಿಸಿದಾಗ ಹಿಂದಿನ ಸೀಟಿನಲ್ಲಿದ್ದ ಯಾರೋ ಒಬ್ಬ ಮುಂದೆ ಬಂದು ಮುದುಕಿಯ ಮಗ್ಗುಲು ಕುಳಿತನು. ಅಜ್ಜಿ ನನ್ನತ್ತ ಸರಿದು ನನ್ನನ್ನು ಅಂಟಿಕೂತಳು. ನಾನು ಮತ್ತಷ್ಟು ಮುರುಟಿ, ಕುಳಿತು, ನನ್ನಷ್ಟಕ್ಕೆ ನನ್ನ ಪ್ರಪಂಚದಲ್ಲಿ ಲೀನವಾಗಿದ್ದೆ.
ಯಾವುದೋ ತಿರುವಿನಲ್ಲಿ ಮುದುಕಿ ಜೋಲಿ ಹೋಗಿ ನನ್ನ ಮೇಲೆ ವಾಲಿದಳು. ನನಗೆ ಆಕೆಯ ಮೈಯಿಂದ ಒಂದು ರೀತಿಯ ವಾಸನೆ ಬಡಿದು ಅಸಹ್ಯವೆನಿಸಿತು.
ಹಿಂದೆಯೇ ಎದೆಯ ಮೇಲೆ ಏನೋ ಹರಿದಾಡಿದಂತೆ ಭಾಸವಾಯಿತು. ಆದರೆ ಹರಿದಾಡಿದ್ದು ಏನೆಂದು ಸ್ಪಷ್ಟವಾಗಲಿಲ್ಲ. ಮುದುಕಿಯ ಕಡೆಗೆ ನಾನು ಸಂಶಯದ ನೋಟ ಬೀರಿದ್ದನ್ನು ಮಗಳು ಲಕ್ಷ್ಯಿಸಿರಬೇಕು. ತಾಯಿಯನ್ನು ಮುಟ್ಟಿ ಸರಿದು ಕೂಡಲು ಸನ್ನೆಯೊಂದಿಗೆ ಆದೇಶಿಸಿದಳು. ಆಕೆಯ ಧ್ವನಿಯೊಳಗಿನ ಸಣ್ಣ ಗದರಿಕೆಗೆ ಛಕ್ಕನೆ ಸರಿದು ಕುಳಿತಿತು ಅಜ್ಜಿ.
ಅಪರಿಚಿತರನ್ನು ಯಾವತ್ತೂ ಶಂಕೆಯಿಂದ ನೋಡುವ ನನಗೆ ಅಂಗಿಯ ಕಿಸೆಗೆ ಏನಾದರೂ ಕೈ ಹಾಕಿರಬಹುದೇ ಎಂಬ ಅನುಮಾನ ಮೂಡಿತು. ಛೇ! ಪಾಪದ ಬಡ ಮುದುಕಿ, ಕೈ ಬೇರೆ ಮುಂದಿದೆ. ಇರಲಿಕ್ಕಿಲ್ಲ ಎಂಬ ಕನಿಕರದಿಂದಲೇ ಓರೆಗಣ್ಣಿನಿಂದ ಬಾಯಿ ಕಿಸಿದುಕೊಂಡ ಕಿಸೆಯೊಳಗೆ ಕಣ್ಣಾಡಿಸಿದೆ. ಒಮ್ಮೆ ಎದೆ ಧಸಕ್ಕೆಂದಿತು. ಎದುರು ಕಿಸೆಯಲ್ಲಿ ನೂರರ ಐದು ನೋಟುಗಳನ್ನು ಟಿಕೀಟು ಕಾಯ್ದಿರಿಸಲು ಇಟ್ಟುಕೊಂಡಿದ್ದೆ. ಅದು ಕಾಣೆಯಾಗಿತ್ತು. ಕೈಯಿಂದ ಮುಟ್ಟಿ ನೋಡಿಕೊಂಡು ದೃಢಪಡಿಸಿಕೊಂಡೆ. ಪ್ರಜ್ಞೆಗೆ ಮೀರಿದ ಮೈಮರೆವಿಗೆ ದೇಹದ ಕ್ಷಮತೆ ಕುಗ್ಗಿ, ಸಣ್ಣ ನಡುಕ ಸೇರಿಕೊಂಡಿತು. ತೀರ ತಡವಾಗಿ ವಾಸ್ತವಕ್ಕೆ ಬಂದಾಗ ಮೈ ಬಿಸಿ ಏರತೊಡಗಿತ್ತು.
ಎಂದೂ ನಾನು ಈ ರೀತಿ ಹಣ ಕಳೆದುಕೊಂಡವನಲ್ಲ. ಅಷ್ಟೂ ಜಾಗ್ರತೆ ಸದಾ ಯಾವುದೇ ವಿಚಾರದಲ್ಲಿ ಮೋಸ ಹೋದದ್ದೇ ಹೌದಾದರೆ ಅಲ್ಲಿಯೇ ಉರಿದೆದ್ದು ಅನ್ಯಾಯದ ವಿರುದ್ಧ ನಿಲ್ಲುವವ ನಾನು.
ಬಸ್ಸು ಹತ್ತುವಾಗ ಖಾಲಿ ಇದ್ದುದರಿಂದ ಯಾರನ್ನೂ ಮುಟ್ಟಿಸಿಕೊಳ್ಳದೇ ಈ ಸೀಟಿಗೆ ಬಂದು ಕುಳಿತಿದ್ದೆ. ಇಲ್ಲಿ ನನ್ನನ್ನು ಮುಟ್ಟಿದ ಏಕೈಕ ವ್ಯಕ್ತಿ ಈ ಮುದುಕಿ.
ನನ್ನ ಸಂದೇಹ ಮುದುಕಿಯಲ್ಲಿ ಕೇಂದ್ರೀಕರಿಸಿದಂತೆಲ್ಲಾ ಅಡಕತ್ತಿನಲ್ಲಿ ಸಿಕ್ಕಿಕೊಂಡಂತಹ ಚಡಪಡಿಕೆ. ಸರಿಯಾದ ಪುರಾವೆ ಇಲ್ಲದೇ ಮೊಳೆತ ಸಂಶಯದ ಮೇಲೆ ಈ ಮುದುಕಿಯನ್ನು ಹೇಗೆ ನಿಭಾಯಿಸಲಿ, ಕೈ ಬೇರೆ ಮುರಿದಿದೆ. ಏನೇ ಆಕ್ಷೇಪಣೆ ಮಾಡಿದರೂ ಮುದುಕಿಯ ಕಡೆಗೆ ನ್ಯಾಯ ತೇಲುವುದು ನಿಶ್ಚಿತ. ಏನು ಮಾಡಲಿ ಎಂಬಲ್ಲಿ ಮನ ಗೊಂದಲದ ಗೂಡಾಯಿತು. ಸಂದರ್ಭ ಅರಿತ ಉಸಿರಾಟವು ನಿರಾಳವಾಗಿರಲು ಶಕ್ಯವಾಗಲಿಲ್ಲ. ಪ್ಯಾಂಟಿನ ಕಿಸೆಯಿಂದ ಕರ್ಚೀಪು ತೆಗೆದುಕೊಂಡು ಮುಖ, ಕುತ್ತಿಗೆ, ಒರಸಿಕೊಂಡೆ.
‘ಆರಸುತ್ತಿದ್ದ ಬಳ್ಳಿ ಕಾಲಿಗೆ ಸುತ್ತಿಕೊಂಡಂತೆ’ ತಟ್ಟನೆ ಸಾಕ್ಷೀ ವಿಚಾರವೊಂದು ಹೊಳೆಯಿತು. ಸ್ವಲ್ಪ ಹಾಯೆನಿಸತೊಡಗಿತು. ಆರಕ್ಷಕ ಮನ ಆಕೆಯನ್ನೇ ಈಡು ಮಾಡಲು ನಿರ್ಧರಿಸಿತು.
ಈಗ ಮುದುಕಿಯಲ್ಲಿರುವುದು ಪತ್ತೆಯಾಗಬೇಕು. ಎಲ್ಲಿ ಬಚ್ಚಿಟ್ಟಿರಬಹುದು. ಮಗಳ ಕೈಗೆ ಇನ್ನೂ ದಾಟಿಸಿರಲಾರಳು. ಸಾಗಿಸದಂತೆ ನೋಡಿಕೊಳ್ಳಬೇಕು. ಈಕೆಯೇ ಕಳ್ಳಿ ಎಂಬ ಗಟ್ಟಿ ಮನಸ್ಸಿನಿಂದ ತಡಮಾಡದೇ ನಾನು ಎದ್ದು ನಿಂತು ‘ಹಣ ಪಿಕ್‌ಪಾಕೆಟ್ ಆಗಿದೆ. ಐದು ನೂರು ರೂಪಾಯಿ’ ಎಂದು ಜೋರಾಗಿ ಕೂಗಿ ಜನರ ಗಮನ ಸೆಳೆದೆ. ತಾಯಿ ಮಗಳು ಮುಖ ಮುಖ ನೋಡಿಕೊಂಡರು. ನಾನೂ ಅವರನ್ನು ದೃಷ್ಟಿಸಿದೆ. ಮುಚ್ಚಿಟ್ಟ ಪುಸ್ತಕವಾಗಿತ್ತು. ಓದಲಾಗಲಿಲ್ಲ.
ಹಿಂದೆ ನಿಂತಿದ್ದ ನಿರ್ವಾಹಕ ಮುಂದೆ ಬಂದ. ‘ನೋಡ್ರೀ ಕಂಡಕ್ಟರ್, ಈ ಕಿಸೆಯಲ್ಲಿ’ ಎಂದು ಕಿಸೆ ಮುಟ್ಟಿ ತೋರಿಸುತ್ತಾ ‘ನೂರರ ಐದು ನೋಟುಗಳನ್ನಿಟ್ಟುಕೊಂಡಿದ್ದೆ. ಅದು ಕಾಣೆಯಾಗಿದೆ’ ಎಂದು ಹೇಳಿ ಏನು ಮಾಡುವುದೀಗ ಎಂದು ಪ್ರಶ್ನಾರ್ಥಕವಾಗಿ ಅವನ ಮುಖ ನೋಡಿದೆ. ಅದು ಬಡಪಾಯಿ, ಏನು ಮಾಡೀತು!
ಈ ನಡುವೆ ಒಮ್ಮೆ ಸೀಟಡಿ ಬಗ್ಗಿ ನೋಡಿದಂತೆ ಮಾಡಿ ಏನೂ ಕಾಣದಾಗಿ ಮತ್ತೆ ಎದ್ದು ನಿಂತ. ಕಂಕುಳು ಬೆವರಿ ನೀರಿಳಿಯುತ್ತಿತ್ತು. ಪತ್ತೇದಾರಿ ಮನ ಒಳಗೇ – ಮಂಥನ ನಡೆಸಿತ್ತು.
ಮುದುಕಿಯನ್ನು ಬಿಟ್ಟರೆ ಬೇರೆಯವರಿಂದ ಸಾಧ್ಯವೇ ಇಲ್ಲ ಎಂದು ಮತ್ತೆ ಮತ್ತೆ ಅನಿಸಿತು. ನನ್ನ ಮೇಲೆ ವಾಲಿದಾಗಲೇ ಹಣದ ಜಾಗ ಬದಲಾಗಿದೆ. ಅಜ್ಜಿಯ ಮುರಿದ ಕೈ ಕೇವಲ ನಾಟಕವಿರಬಾರದೇಕೆ? ಎತ್ತಿ ಹಿಡಿದ ಸುಲಭದಲ್ಲಿ ಕಿಸೆಗೆ ತೂರಿಸುವಂತೆ ಕಟ್ಟಿಕೊಂಡಿದ್ದು ಕನಿಕರ ಮೂಡಬೇಕಾದ ಸನ್ನಿವೇಶದಲ್ಲಿ ಯಾರೂ ಎಳ್ಳಷ್ಟು ಸಂಶಯ ಎತ್ತುವಂತಿರಲಿಲ್ಲ.
ಆಕೆಯ ಮೇಲಿನ ಗುಮಾನಿ ಇನ್ನಷ್ಟು ಬಲವಾಗಿ ಎಲ್ಲರೆದುರು ಕೂಗಿ ‘ಈ ಮುದುಕಿಯೇ ಕದ್ದದ್ದು’ ಎಂದು ಒಮ್ಮೆ ಹೇಳಿಬಿಡಲೇ ಅಂದುಕೊಂಡೆ. ಆಕೆ ಹಣ ದಾಟಿಸಿದ್ದೇ ಆದಲ್ಲಿ ನಿಜಕ್ಕೂ ಪೇಚಾಟಕ್ಕಿಟ್ಟುಕೊಳ್ಳುವುದು. ಸಂದಿಗ್ಧದಲ್ಲಿ ‘ಶಿವಕೊಟ್ಟ ಜೋಳಿಗೆ… ಎಂದು ಕೊಳ್ಳದೇ ನಾನು ಭಂಡನಾದಾಗಲೇ ನಿರ್ವಹಣೆ ಸಾಧ್ಯ ಎಂದುಕೊಂಡು ಮಗಳ ಕಡೆಗೊಮ್ಮೆ ತಿರುಗಿ ನೋಡಿದೆ. ನನ್ನನ್ನೇ ನೋಡುತ್ತಿದ್ದ ಆಕೆ ಕಣ್ಣು ತೇಲಿಸಿ ಅಮಾಯಕಳಂತೆ ಕುಳಿತಳು. ಕೆಲಸ ಆಗಿಬಿಟ್ಟಿದೆ. ಅದು ಸೇರಬೇಕಾದ ಕಡೆ ಸೇರಿಬಿಟ್ಟಿದೆ. ನೀನು ತಲೆಕೆಳಗಾಗಿ ನಿಂತರೂ ಗುರುತಿಸಲಾರೆ ಎನ್ನುವ ಭಾವನೆಗಳು ಅಲ್ಲಿವೆ ಎಂಬ ಭ್ರಮೆ ನನಗಾಯಿತು.
ಬಸ್ಸು ಚಲಿಸುತ್ತಿತ್ತು. ಎಲ್ಲರೂ ನನ್ನತ್ತ ನೋಡುತ್ತಿದ್ದರು. ಕೆಲವರು ಪಾಪ ಅಂದಿರಬೇಕು. ಇನ್ನಾ ಕೆಲವರು ನಾನು ಬಿಂಬಿಸುತ್ತಿದ್ದ ನನ್ನ ಸ್ಥಿತಿವಂತಿಕೆ ಗ್ರಹಿಸಿ, ಹೋದರೇನು ತೊಂದರೆ ಇಲ್ಲ ಬಿಡು ಎಂಬ ಉಡಾಫೆ ಮಾತು ಆಡಿಕೊಂಡಿರಬೇಕು.
ಇನ್ನೂ ಮೀನ-ಮೇಷ ಎಣಿಸಿದರೆ ಅವರು ಮುಂದಿನ ಸ್ಟಾಪಿನಲ್ಲಿ ಇಳಿದು ಬಿಟ್ಟಾರು ಎಂಬ ಭಯ ಕಾಡಿತು. ಅಷ್ಟರಲ್ಲಿ ತಾಯಿ ಮಗಳು ಎದ್ದೇ ಬಿಟ್ಟರು. ‘ಅರೆರೆ’ ಅಂದುಕೊಳ್ಳುತ್ತಲೇ ನನ್ನೆದೆ ಢವಢವ ಹೊಡೆದುಕೊಳ್ಳತೊಡಗಿತು.
ಅಷ್ಟರಲ್ಲಿ ಅನಿರೀಕ್ಷಿತವಾಗಿ ಹಾಕಿದ ಬ್ರೇಕ್‌ಗೆ ಮುದುಕಿ ಜೋಲಿ ಹೋಗಿ ಮುಂದಿನ ಒರಗಿಗೆ ಆತು ಬಿದ್ದಳು. ಹಾಂ, ಹೂಂ ಎನ್ನದೇ ಸಾವರಿಸಿಕೊಳ್ಳುವಷ್ಟರಲ್ಲಿ ಸೆರಗು ಜಾರಿತ್ತು. ಆಕೆಯ ಎಡಗೈ ಮುಂದಿನ ಆಸನಕ್ಕೆ ಊರಿದಂತೆ ಕಂಡಿತು. ಅಜ್ಜಿಯ ಬತ್ತದ ಎದೆಯ ಮೇಲೆ ಕಣ್ಣಾಡಿಸಿದೆ. ರವಿಕೆಯೊಳಗೆ ಗರಿಗರಿಯಾದ ನೋಟುಗಳು ಮುದ್ದೆಯಾಗಿ ಒಳಗಿರುವುದನ್ನು ಎತ್ತಿತೋರಿಸಿದವು. ಹಿಡಿದಿಡಲಾಗದ ಯೌವನದ ಉಬ್ಬು ತಗ್ಗುಗಳನ್ನು ಕಣ್ಣಲ್ಲೇ ತೂಗುವ ಯುವಕನಂತೆ ಗ್ರಹಿಸಿ ಬಿಟ್ಟಿದ್ದ. ಸ್ಪಷ್ಟತೆ ಮೊಳೆತ ಮರುಕ್ಷಣದಲ್ಲಿ ಇನ್ನು ಎದುರಿಸಬಲ್ಲೆ ಅಂದುಕೊಂಡಾಗ ಎಲ್ಲಿಲ್ಲದ ಧೈರ್ಯ ತುಂಬಿಕೊಂಡಿತು. ವಾಸ್ತವವನ್ನು ಬಿಚ್ಚಿಡುವ ಅವಸರದಲ್ಲಿ ಅಧಿಕಾರ ಚಲಾಯಿಸ ಬಯಸಿ ‘ಈ ಮುದುಕಿಯೇ ತೆಗೆದುಕೊಂಡದ್ದು’ ಎಂದು ಕಿರುಚಿದೆ. ಮತ್ತದೇ ಹುಮ್ಮಸ್ಸಿನಲ್ಲಿ ನಾನು, ಸೆರಗು ಸರಿಪಡಿಸಿಕೊಳ್ಳುತ್ತ ಬಸ್ಸಿಳಿಯ ಹೊರಟಿದ್ದ ಮುದುಕಿಯ ಕೈ ಹಿಡಿದುಕೊಂಡು ಬಿಟ್ಟೆ, ಅದನ್ನು ನೋಡಿದ ಮಗಳಿಗೆ ಸಿಟ್ಟು ಏರಿರಬೇಕು. ನನ್ನ ಎಡೆ ಕೆಕ್ಕರಿಸಿ ನೋಡಿ ’ಯಾಽಕ ಸರಿ ಅದೀ ಇಲ್ಲೋ ಯಪ್ಪಾ? ಹೆಂಣು ಹೆಂಗ್ಸ ಕೈ ಹಿಡದೀಯಲ್ಲ ಬಿಡು’ ಎಂದು ಧಾರವಾಡದ ಕನ್ನಡದಲ್ಲಿ ಗದರಿಸಿ, ಮುದುಕಿಯ ಕೈಯಿಂದ ನನ್ನ ಕೈ ನೂಕಲು ಪ್ರಯತ್ನಿಸಿದಳು. ಆಕೆಯಲ್ಲಿರುವುದು ಬಹಳಷ್ಟು ಖಚಿತವಾದ್ದರಿಂದ ಯಾವ ಹೆದರಿಕೆಯೂ ಇರಲಿಲ್ಲ. ನನಗೂ ರೇಗಿ ಹೋಗಿತ್ತು. ಕೈ ಬಿಡಲಿಲ್ಲ. ‘ಬಾರಬೇ ಲಗೂನ ಇಳಿ’ ಎಂದು ಮಗಳು ತಾಯಿಯನ್ನು ಅವಸರಿಸಿದಳು.
ನಾನು ಬಸ್ಸು ನಿಲ್ಲಿಸಲು ಕೇಳಿಕೊಂಡೆ. ಹಾಗೆಯೇ ಮುದುಕಿಯ ರವಿಕೆಯೊಳಗೆ ನೋಟಿದೆ. ಮರ್ಯಾದೆಯಿಂದ ಅವರೇ ತೆಗೆದು ತೋರಿಸಲಿ, ಇಲ್ಲಾಂದ್ರೆ ಪೊಲೀಸ ಕಂಪ್ಲೆಂಟ ಕೊಡಬೇಕಾಗುತ್ತೆ ಎಂದು ದೊಡ್ಡದಾಗಿ ಸಾರುತ್ತ ಹೇಳಿದೆ.
ನನ್ನ ಮಾತಿಗೆ ಅವರು ಸ್ವಲ್ಪ ವಿಚಲಿತರಾದಂತೆ ಕಾಣಿಸಿತು. ನಿರ್ವಾಹಕನಲ್ಲದೇ ಮತ್ತಿಬ್ಬರು ಪ್ರಯಾಣಿಕರು ನನ್ನ ಮಾತಿನ ದೃಢತೆಗೆ ನನ್ನನ್ನು ವಹಿಸಿ ಮತ್ತಷ್ಟು ಹತ್ತಿರ ಬಂದರು. ಅವರಿಗೂ ಆಕೆ ಕಳ್ಳಿ ಇರಬಹುದು ಅನಿಸಿರಬೇಕು. ‘ಎಲ್ಲಮ್ಮಾ ತಾಯೀ, ನಿನ್ನ ಹತ್ರ ಇರೋದನ್ನ ತೆಗೆದು ತೋರಿಸು’ ಎಂದನೊಬ್ಬ ತನ್ನನ್ನು ಮಧ್ಯಸ್ಥಿಕೆಗೆ ಕರೆಸಿದ್ದಾರೆ ಎಂಬ ಗತ್ತಿನಲ್ಲಿ.
ಬಡಪಟ್ಟಿಗೆ ಒಪ್ಪುವವರಾಗಿರಲಿಲ್ಲ. ಅವರು ಏಳು ಕೆರೆ ನೀರು ಕುಡಿದವರಾಗಿದ್ದರು. ನಾನು ಮುದುಕಿಯ ದಾರಿಗೆ ಅಡ್ಡ ನಿಂತಿದ್ದೆ. ಈ ಬಾರಿ ‘ನೀನೇ ತೆಗೀತೀಯಾ, ಇಲ್ಲ ನಾನೇ ಕೈ ಹಾಕಲೇ’ ಎಂದು ಭಂಡತನದಿಂದ ಕೈ ಮೇಲೆತ್ತಿದೆ. ಇದು ನನ್ನಂಥವನ ಬಾಯಿಂದ ಬರುವ ಮಾತಾಗಿರಲಿಲ್ಲ. ನನ್ನೊಳಗೆ ಮುಂಚೂಣಿಯಲ್ಲಿರುವ ಸೊಕ್ಕು ಹೀಗೆ ಹೇಳಿಸಿತ್ತು.
ಬೇರೆಯವರಾಗಿದ್ದರೆ, ಈ ಮಾತಿಗೆ ನನಗೆ ಹೊಡದೇ ಬಿಡುತ್ತಿದ್ದರು. ಇವರಿಗೆ ಒಳಗೇ ಪಾಪಪ್ರಜ್ಞೆ ಕೊರೀತಾ ಇರಬೇಕಾದರೆ ಏನು ಮಾಡಿಯಾರು? ಆದರೂ, ಅಜ್ಜಿ ಬಿಡುವ ಅಸಾಮಿಯಲ್ಲ ಎಂಬಂತೆ ‘ನೋಡಪ್ಪಾ, ನನ್ನ ರೊಕ್ಕ ನಾನು ಇಲ್ಲಿ ಇಟಗಂಡೀನಿ, ನನ್ ಕಡೆ ಇರೂದು ನಿಂದ್ಹ್ಯಾಂಗ ಆಕಽತೀ ಹೇಳು. ಎಲ್ಲಿ ಉದರಸ್ಕಂಡೀಯೋ ಏನೋ!’ ಎಂದು ದೃಢವಾಗಿ, ಅಷ್ಟೇ ಘಾಟಿತನ ಪ್ರದರ್ಶಿಸಿ ಹೇಳಿದಾಗ ಕೆಲವರಾದರೂ ತಲೆದೂಗಿರಬೇಕು.
‘ಎಲ್ಲಿ ತೆಗೆದು ತೋರಿಸಿಬಿಡಮ್ಮಾ, ನಿಂದೇ ಆಗಿದ್ದರೆ ನಾನು ಮುಟ್ಟಲ್ಲ. ನೂರರ ಐದು ನೋಟು ಇದ್ರೆ ಅದು ನಂದೇ’ ಎಂದು ಹೇಳಿದಾಗ ಅಲ್ಲಿದ್ದವರಿಗೆ ನನ್ನ ಮಾತು ಬಾಲಿಶ ಎನಿಸಿರಬೇಕು. ನನ್ನೊಳಗೆ ಹೆಚ್ಚಿನ ಪುರಾವೆ ಇದ್ದುದರಿಂದ ಸಟಕ್ಕನೆ ಆ ಮಾತು ಹೊರ ಬಂದಿರೋದು.
ಬಸ್ಸನ್ನು ರಸ್ತೆ ಪಕ್ಕ ನಿಲ್ಲಿಸಿದ್ದ. ಪ್ರಯಾಣಿಕರಲ್ಲಿ ಕೆಲವರು ಬಸ್ ಯಾಕೆ ನಿಲ್ಲಿಸಿದ್ರಿ ಅವರಿಬ್ಬರನ್ನೂ ಇಳಿಯಲು ಬಿಡಬೇಡಿ, ನಿಲ್ದಾಣದಲ್ಲಿ ಪೊಲೀಸ್ ಸ್ಟೇಷನ್ ಇದೆ. ಅಲ್ಲಿ ಬಗೆಹರಿಸಿಕೊಳ್ಳಲಿ ನಮಗೆ ಲೇಟ ಆಗುತ್ತೆ ಬಿಡಪ್ಪಾ ಗಾಡಿ ಎಂಬ ಮಾತುಗಳು ಕೇಳಿ ಇದೇಕೋ ಪಚೀತಿಗಿಟ್ಟುಕೊಳ್ಳುತ್ತಿದೆ ಅನಿಸಿತು.
ಮುದುಕಿ ‘ನನ್ನ ಹಂತೇಲೂ ನೂರರ ನೋಟಿರೋದು. ನಾವು ಪ್ಯಾಟಿಗೆ ಸೀರೀ ಕೊಳ್ಳಾಕ ಹೊಂಟೀವಿ’ ಎಂದು ಸಹಜ ಹೇಳಿದಳು. ಅವಳು ಬಾಯಿ ಬಿಟ್ಟಿದ್ದೇ ನನಗೆ ಆಧಾರವಾಗಿ ಆಕೆಯ ಬಲಗೈ ಹಿಡಿದು ಹಿಂದಕ್ಕೆ ಮಡಿಚಿ ಒತ್ತಿದೆ. ‘ಯವ್ವಾ ನನಕೈ ಮುರೀತಾನೀತ’ ಎಂದು ನೋವಿನಿಂದ ಹಲಬುತ್ತಾ, ‘ಕೈ ಬಿಡಪಾ, ತಗದು ತೋರಿಸ್ತೀನಿ’ ಎಂದಳು. ಅತಿ ಮೊಂಡು ಅನಿಸಿರಬೇಕು; ಇಲ್ಲ ಸುತ್ತಲೂ ದುರುಗುಟ್ಟುತ್ತಿರುವ ಕಣ್ಣುಗಳಿಗೆ ಹೆದರಿರಬೇಕು. ಇಂಥ ಗಳಿಗೆಯನ್ನೇ ನಿರೀಕ್ಷಿಸುತ್ತಿದ್ದ ನಾನು ಹಣ ಸಿಕ್ಕಷ್ಟು ಸಂತೋಷ ಆಗಿ ಕೈ ಬಿಟ್ಟೆ,
ಇತರೆ ಪ್ರಯಾಣಿಕರು ಮೂಕ ಪ್ರೇಕ್ಷಕರಾಗಿ ನೋಡುತ್ತಿದ್ದಂತೆ ಆಕೆಯು ಬಲಗೈನ ರವಿಕೆಯೊಳಗೆ ತೂರಿಸಿ ಮಡಿಚಿದ ನೋಟುಗಳನ್ನು ಹೊರ ತೆಗೆದಳು. ನೋಟಿನ ಮುದ್ದೆ ಕೈಲಿ ಹಿಡಿದಿರುವಂತೆಯೇ ನಾನು ಗಬಕ್ಕನೆ ಕೊಂಡು ಎಲ್ಲರ ಎದುರಿಗೆ, ‘ನೋಡ್ರಿ, ನನ್ನದೇ ನೋಟುಗಳಿವು’ ಎಂದು ಕುಸ್ತಿಯಲ್ಲಿ ಗೆದ್ದಷ್ಟು ಖುಷಿಯಿಂದ ಹೇಳಿದೆ. ಇಷ್ಟಾಗುವಾಗ ಅವರಿಬ್ಬರ ಕಂಬಿ ಹಿಡಿದ ಕೈಗಳು ಬೆವರಿ, ಒಳಗೆಲ್ಲೋ ಏನೋ ಸಡಲಿಸಿಕೊಂಡಂತಹ ಅನುಭವದಿಂದ ಅವರ ಮುಖ ‘ಇಂಗು ತಿಂದ ಮಂಗ’ನಂತಾಗಿ ಬಿಟ್ಟಿತ್ತು.
ಎದುರು ಸೀಟಿಗಿದ್ದ ಯಜಮಾನರೊಬ್ಬರು ‘ಜಾವಾ’ ಸಂತೃಸ್ತರಿರಬೇಕು. ಆವಾಗಿನಿಂದ ಮಾತಿಗೆ ಸಿಕ್ಕವರೊಂದಿಗೆ ಹರಟುತ್ತಿದ್ದವರು ‘ಅದ್ಹೆಂಗೆ ನಿಮ್ಮದೇ ಎಂದು ಹೇಳ್ತೀರಿ’ ಎಂದು ಸವಾಲೆಸೆದರು. ನನಗೂ ಅಂಥವರು ಮಾತಾಡೋದೇ ಬೇಕಿತ್ತು. ‘ನೋಡ್ರೀ ಸಾರ್, ಈ ನೋಟುಗಳನ್ನು ನಾನಿನ್ನೂ ಬಿಡಿಸಿಲ್ಲ. ಐದೂ ನೋಟುಗಳು ಒಂದೇ ಕ್ರಮ ಸಂಖ್ಯೆಯಲ್ಲಿವೆ’ – ನನಗೆ ಬ್ಯಾಂಕ್ ಉದ್ಯೋಗ ನೀಡಿದ ಸರ್ಕಾರಿ ರಂಗಕ್ಕೆ ಮನದಲ್ಲೆ ಧನ್ಯವಾದ ಅರ್ಪಿಸುತ್ತಾ ನೋಟಿನ ಸಂಖ್ಯೆಗಳು ಕಾಣುವಂತೆ ಬಿಡಿಸಿ ‘ಬೇಕಿದ್ರೆ ನೀವೇ ನೋಡಿ. ಶುರುವಿನ ಸಂಖ್ಯೆ ೫೭’ ಎಂದು ಅವರ ಮುಂದೆ ಹಿಡಿದು ಹಸ್ತಾಂತರಿಸಿದೆ.
ಅನುಕ್ರಮ ಸಂಖ್ಯೆಯಲ್ಲಿವೆ ಎಂಬ ಮಾತಿಗೆ ಅವು ಹಾಗಿರುವುದು ಮಾತ್ರ ಸಾಕ್ಷಿಯಾಗಿರಲಿಲ್ಲ. ಅವುಗಳ ಮುಂದಿನ ಕ್ರಮಾಂಕಗಳನ್ನು ಹೊತ್ತ ಇನ್ನಷ್ಟು ನೋಟುಗಳು ಪ್ಯಾಂಟಿನ ಒಳಕಿಸೆಯಲ್ಲಿದ್ದು ಮುಂದೆ ಬೇಕಾದಲ್ಲಿ ರುಜುವಾತು ಪಡಿಸಲು ಕಾಯುತ್ತಿದ್ದವು.
ಯಜಮಾನರು ಕನ್ನಡಕ ಸರಿಪಡಿಸಿಕೊಂಡು ಒಂದೊಂದನ್ನೇ ಪರೀಕ್ಷಿಸಿ ಸರಿ ಇದ್ದುದನ್ನು ದೃಢಪಡಿಸಿದರು. ನನಗೆ ಹೋದ ಜೀವ ಬಂದಂತಾಯಿತು. ನೋಟುಗಳು ಮತ್ತೆ ನನ್ನ ಕಿಸೆ ಸೇರಿದವು.
ಗಂಡಸಾಗಿದ್ದಿದ್ದರೆ ಇಷ್ಟೊತ್ತಿಗೆ ನಾಲ್ಕು ತದಕಿ ಬಿಡುತ್ತಿದ್ದೆನೇನೋ! ಗೆದ್ದ ಹೆಕ್ಕಳಿಕೆಯಲ್ಲಿ ಇಬ್ಬರ ಕಡೆ ನೋಡಿದೆ. ‘ಮರ್‍ಯಾದೆ ಕಾಸಿಗೆ ಪಂಚೇರು’ ಆಗಿತ್ತು. ಅಂದಹಾಗೆ ಇದವರ ಎಷ್ಟನೇ ಕೇಸೋ, ಯಾರಿಗೆ ಗೊತ್ತು.
ಈಗ ಕೆಲವರು ‘ಪೊಲೀಸರಿಗೆ ಹಿಡಿದು ಕೊಡ್ರಿ’ ಎಂದರೆ ಇನ್ನು ಕೆಲವರಯ ‘ಹೋಗ್ಲಿ ಬಿಡ್ರಿ, ಹಣ ಸಿಕ್ಕಿದೆಯಲ್ಲ. ಹೆಣ್ಣು ಹೆಂಗಸ್ರು ಬಿಟ್ಟು ಬಿಡಿ’ ಎಂಬಂತಹ ಸಲಹೆಗಳನ್ನು ತೂರಿಸಿದರೂ ನನ್ನೊಳಗೆ ಇಳಿಯಲಿಲ್ಲ.
ಅಷ್ಟೊತ್ತಿಗಾಗಲೇ ಬಸ್ ಚಲಿಸಿ ಸಬರ್ಬನ್ ನಿಲ್ದಾಣ ಬಂದಿತ್ತು. ನಾನೂ ಅವಸರದಲ್ಲಿದ್ದುದರಿಂದ ಅಷ್ಟಕ್ಕೆ ಪೂರ್ಣವಿರಾಮ ಇಡುವವನಿದ್ದೆ. ಎಲ್ಲರಂತೆ ತಾಯಿ ಮಗಳೂ ಇಳಿಯುತ್ತಿದ್ದರು. ನಾನೂ ಅವರ ಹಿಂದಿನಿಂದ ಇಳಿಯತೊಡಗಿದ್ದೆ.
ಬಸ್ಸಿನಿಂದ ಇಳಿಯುತ್ತಿದ್ದಂತೆ ಅದೇನನಿಸಿತೋ, ಮುದುಕಿಯ ಕುತ್ತಿಗೆ ಕಟ್ಟಿಕೊಂಡ ಬಟ್ಟೆ ಹಗ್ಗಕ್ಕೆ ಕೈಹಾಕಿ, ಕುತ್ತಿಗೆಯಿಂದ ಬಿಡಿಸಿ, ತೋಳನ್ನು ಹಿಡಿದು ಎಡಗೈ ನೆಟ್ಟಗೆ ಮಾಡಿದೆ. ಇಷ್ಟೆಲ್ಲಾ ಕ್ಷಣದಲ್ಲಿ ನನ್ನಿಂದ ನಡೆದು ಹೋಗಿ, ಅನಂತರದಲ್ಲದು ಒರಟುತನವೆನಿಸಿದರೂ ಇಂದಿಗೂ ಆ ಬಗ್ಗೆ ನನಗೆ ಸಮಾಧಾನವಿದೆ.
ನನ್ನ ಘನ ಕಾರ್ಯಕ್ಕೆ ಮುದುಕಿ ಒಮ್ಮೆಲೆ ‘ಯಪ್ಪೋ ಸತ್ತೇ’ ಎಂದು ಕಿರುಚಿಕೊಂಡು, ನೆಲಕ್ಕೆ ಕುಕ್ಕುರು ಬಡಿಯಿತು. ಮಧ್ಯದಲ್ಲೇ ಒಬ್ಬ ‘ಏನ್ರಿ, ನೀವು ಎಂಥಾ ಮನುಷರು?’ ಎಂದು ಗದರಿಸಿ ಹೇಳಿದ ಮಾತಿನಿಂದ ನನ್ನನ್ನು ತಡೆಯಲಾಗಿರಲಿಲ್ಲ. ಕೋಪ ನೆತ್ತಿಗೇರಿತ್ತು.
‘ಯಾಕೆ ಹೊಯ್ಕಳ್ತೀಯಪ್ಪಾ, ನೋಡು ಈ ಕೈ ಮುರಿದಿಲ್ಲ. ಮುರಿದಂತೆ ನಟಿಸುತ್ತಿದ್ದಾಳೆ. ಮುದುಕಿಯ ಪ್ಲಾಸ್ಟರ ಮಾಡಿದ ಕೈ ಕಿಸೆಗಳ್ಳತನ ಮಾಡಲೋಸುಗ ಹಾಕಿಸಿಕೊಂಡದ್ದು. ಎಡಗೈ ಎತ್ತಿಹಿಡಿದು ಕ್ಷಣಮಾತ್ರದಲ್ಲಿ ಗಂಡಸರ ಕಿಸೆಗೋ, ಹೆಂಗಸರ ಕೊರಳಿಗೂ ಸರಿಯಾಗಿ ಹಿಡಿದು ಮಂಕುಬೂದಿ ಎರಚಿದಂತೆ ಮೈ ಮರೆತು ಕುಳಿತವರ ಹಣ ಒಡವೆ ಎಗರಿಸಿ, ಮುಂದಿನ ನಿಲುಗಡೆಯಲ್ಲಿ ಇಳಿದು ಬಿಡುತ್ತಾರೆ. ಕೈ ಚಳಕದ ಸುಳಿವು ನೀಡದೇ ಇಷ್ಟೊಂದು ಕರಾರುವಕ್ಕಾಗಿ ಯಾಮಾರಿಸಿದ ಅಜ್ಜಿ ನಿಜಕ್ಕೂ ಬುದ್ಧಿವಂತಳು. ಅದವಳಿಗೆ ಕರತಲಾಮಲಕ. ಕಳ್ಳರಿಗಿಂತ ನಾವು ಹೆಚ್ಚು ಜಾಣರಾದರೆ ಮಾತ್ರ ಇಂಥವರನ್ನು ಮಟ್ಟ ಹಾಕಲು ಸಾಧ್ಯ. ನನ್ನಲ್ಲಿ ಕ್ರಮಸಂಖ್ಯೆ ಇದ್ದುದರಿಂದ ನಾನು ಬಚಾವಾದೆ’ ಎಂದು ಒಂದು ರೀತಿಯ ಭಾಷಣ ಮಾಡಿದಾಗ ಮುತ್ತಿದ್ದ ಎಲ್ಲರ ಬೆರಳುಗಳೂ ಅವರವರ ಮೂಗಿನ ಮೇಲೇರಿ ಕೆಳಗಿಳಿದವು.
ಇಷ್ಟೆಲ್ಲಾ ನಡೆಯುತ್ತಿದ್ದರೂ ಸಾಮಾಜಿಕ ಕಾಳಜಿ ಇಟ್ಟು ಚುರುಕಿನಿಂದ ಇರಬೇಕಾದ ಪೊಲೀಸರ ಸುಳಿವೇ ಅಲ್ಲಿರಲಿಲ್ಲ.
ಎಲ್ಲರೂ ನೋಡುತ್ತಿದ್ದಂತೆಯೇ ಸದ್ದಿಲ್ಲದೆ ನಿಲ್ದಾಣದಿಂದ ಸರಿದುಹೋದ ತಾಯಿ ಮಗಳು ರಸ್ತೆ ಮುಟ್ಟುತ್ತಲೇ, ಯಾರೋ ಬೆನ್ನಟ್ಟಿ ಬಂದವರಂತೆ ಓಡುವುದು ಕಂಡಿತು. ಅವರ ನಾಲ್ಕೂ ಕೈಗಳು ವೇಗದಿಂದ ಸಲೀಸಾಗಿ ಬೀಸುತ್ತಾ, ತಿರುವಿನಲ್ಲಿ ಕಾಣೆಯಾದವು. ‘ಕೈಗೆ ಬಂದದ್ದು ಬಾಯಿಗೆ ಬಾರದಾಗಿ’ ಅವರು ನನ್ನನ್ನು ಶಪಿಸುತ್ತಾ ಈಗ ಮತ್ತೊಂದು ಬಸ್ ಏರಿರಬಹುದು.
ನಿಮ್ಮ ಕಿಸೆ ಕತ್ತುಗಳಿಗೂ – ಮುರಿದಂತೆ ಭ್ರಮೆ ಮೂಡಿಸುವ ಇಂಥಾ ಕೈಗಳು ತೂರಿ ತಮ್ಮ ಕೈಚಳಕ ತೋರಿಸಿಯಾವು!
*****