ಬೆಳುದಿಂಗಳಲ್ಲಿ ಸೂರ್ಯಕಾಂತಿಯ ನೆರಳು

ಬೆಳುದಿಂಗಳಲ್ಲಿ ಸೂರ್ಯಕಾಂತಿಯ ನೆರಳು

ಡಿಸೆಂಬರ್ ೧೯. ಊರು, ಚಳ್ಳಕೆರೆಯ ಸಮೀಪದ ದೊಡೇರಿ. ಆಶ್ರಮ. ರಾತ್ರಿ ಹನ್ನೊಂದು ದಾಟಿತ್ತು. ಹೊಸ್ತಿಲು ಹುಣ್ಣಿಮೆ. ಉತ್ತರ ಕರ್ನಾಟಕದಲ್ಲಿ ಒಂದೊಂದು ಹುಣ್ಣಿಮೆಗೂ ಒಂದೊಂದು ಹೆಸರಿದೆ. ಈ ಹೆಸರುಗಳು ಯಾಕೆ ಬಂದವೋ? ತುಮಕೂರಿನ ಬಳಿ ಆಕಾಶದ ಅಂಚಿನಲ್ಲಿ ಕಂಡಿದ್ದ ಚಂದ್ರ ಈಗ ಸುಮಾರಾಗಿ ನೆತ್ತಿಯ ಮೇಲೆ ಬಂದಿದ್ದಾನೆ. ನನ್ನೆದುರಿಗೆ ಮುಳ್ಳು ತಂತಿಯ ಬೇಲಿ, ಅವುಗಳಾಚೆ ನನ್ನ ಕಣ್ಣೆತ್ತರಕ್ಕೆ ಬೆಳೆದು ನಿಂತ ಸಾಲು ಸಾಲು ಸಾಲು ಸೂರ್ಯಕಾಂತಿ ಗಿಡಗಳು. ಒಂದೊಂದು ಗಿಡಕ್ಕೆ ಮುಖದಗಲ ಒಂದೊಂದು ಹೂವು. ಹಗಲಿನಲ್ಲಿ ಕಾಣುವಷ್ಟೇ ಪ್ರಖರವಾದ ಚಿನ್ನಹಳದಿ ಬಣ್ಣ. ಬೆಳುದಿಂಗಳಲ್ಲಿ ಹೂವಿನ ದಳಗಳ ಅಂಚು ಮಾತ್ರ ಹಗಲಿನಲ್ಲಿ ಕಾಣುವುದಕ್ಕಿಂತ ಕೊಂಚ ಹೆಚ್ಚು ಮೃದುವಾಗಿರುವಂತೆ ಅನ್ನಿಸುತ್ತಿದೆ. ಸುರೇ – ಪಾನ, ಸೂರ್ಯನ್ನೆ ಕುಡಿದು ಬೆಳೆದ ಹೂಗಳೋ! ನಡು ನೆತ್ತಿಗೆ ಸಮೀಪ ಬಂದಿರುವ ತಿಂಗಳ ಬೆಳಕಿನಲ್ಲಿ ಪ್ರತಿಯೊಂದು ಗಿಡದ ಬುಡದಲ್ಲೂ ಒಂದೊಂದು ನೆರಳು. ಒಂದೊಂದು ನೆರಳಿಗೆ ಒಂದೊಂದು ಹೂವು.

ಚಪ್ಪಲಿಯನ್ನು ಕಾರಿನಲ್ಲೇ ಬಿಟ್ಟಿದ್ದೆ. ಮರಳು, ಕಲ್ಲು ಹರಳು – ನೆಲ ಅಂಗಾಲ ಚರ್ಮಕ್ಕೆ ಗೊತ್ತಾಗುತ್ತಿತ್ತು. ‘ಮಾಗಿಯ ಹುಲ್ಲಿನ ಎಸಳ ಮೇಲಿನ ಇಬ್ಬನಿ ತಗುಲಿದಾಗ ಆದ ಪುಳಕ’. ವಚನಕಾರನೊಬ್ಬ ತನಗಾದ ಅನುಭವದ ಅಚ್ಚರಿಯನ್ನು ಹೇಳಿಕೊಂಡಿದ್ದ ನೆನಪು ಅಂಗಾಲ ಚರ್ಮದಲ್ಲೂ ಅಡಗಿದ್ದು ತಟ್ಟನೆ ಅರಳಬಹುದಲ್ಲ. ಆ ಮಾತು ಈ ಮಾತು ನೆನಪಿಗೆ ಬರದೆ ಏನೂ ಅನುಭವ ಆಗುವುದೇ ಇಲ್ಲವೇ?

ಚಳಿಯಾಗುತ್ತಿತ್ತು. ಅಲ್ಲಲ್ಲಿ ಪುಟ್ಟ ಪುಟ್ಟ ಉರಿಹಚ್ಚಿಕೊಂಡು, ಮೂರು ಮೂರು, ನಾಲೈದು ಜನ, ಬೆಳುದಿಂಗಳಲ್ಲಿ ಮಬ್ಬಾಗಿ ಕಾಣುವ ಕೊಳೆಯಾದ ಪಂಚೆ ಉಟ್ಟು, ಬೆಡ್ ಶೀಟು, ಟವಲು, ಕಂಬಳಿ ತಲೆ ತುಂಬ ಹೊದ್ದು, ಕುಕ್ಕುರುಗಾಲಲ್ಲಿ ಮುದುರಿ ಕುಳಿತು, ಕೈಗಳನ್ನು ಬೆಂಕಿ ಝಳಕ್ಕೆ ಒಡ್ಡಿಕೊಂಡು, ಇಡೀ ಲೋಕವೆಂದರೆ ಈ ಬೆಂಕಿ ಝಳದ ಹಿತವಾದ ಶಾಖ ಮಾತ್ರ ಎಂಬಂತೆ ಸುಮ್ಮನೆ ಕೂತಿದ್ದರು.

ನಾವು ಹೋದದ್ದು ದೊಡೇರಿಯ ಸಂತನ ಮಗನ ಮದುವೆಗೆಂದು. ಮದುವೆ ಇದ್ದದ್ದು ಮರುದಿನ ಇವತ್ತು ಯಾರು ಯಾರೋ ಸ್ವಾಮಿಗಳು ಬಂದಿದ್ದರು. ರಾತ್ರಿಯೆಲ್ಲ ಭಜನೆ ನಡೆಯುತ್ತಿತ್ತು. ಸಂತನ ಹೆಸರು ಮಲ್ಲಣ್ಣ. ಅವರ ಗುರು ಇಟ್ಟ ಹೆಸರು ಸತ್ ಉಪಾಸಿ. ಜನ ಪ್ರೀತಿಯಿಂದ, ಗೌರವದಿಂದ ಕರೆಯುವ ಹೆಸರು ಅಪ್ಪಾಜಿ. ಅವರ ಹೆಂಡತಿ ಎಲ್ಲರ ಪಾಲಿಗೆ ಅಮ್ಮ, ಈ ಅಪ್ಪಾಜಿ ಅಮ್ಮ ತಮ್ಮ ದೊಡ್ಡ ಮಗಳ ಮದುವೆ ಮಾಡಿದ್ದಾರೆ. ನಾಳೆ ಗಂಡುಮಗನ ಮದುವೆ. ಯಾವ ವಿಶೇಷವೂ ಇಲ್ಲದಿರುವುದೇ ಅಪ್ಪಾಜಿ ಅವರ ವಿಶೇಷ. ಹೊಲದ ಕೆಲಸ, ಗಾರೆಯ ಕೆಲಸ ಮಾಡಿಕೊಂಡಿದ್ದವರು. ತಮಗೆ ಆದ ಸಂಗತಿಗಳನ್ನು, ಅನುಭವಗಳನ್ನು, ಅವಮಾನಗಳನ್ನು, ಏನನ್ನು ಬೇಕಾದರೂ ಯಾವುದೇ ಸಂಕೋಚವಿಲ್ಲದೆ, ಇದೆಲ್ಲ ನನಗೆ ಆದದ್ದು ಎಂಬ ಹೆಮ್ಮೆಯೂ ಇಲ್ಲದೆ, ದಿನ ನಿತ್ಯ ಮಾತಾಡುವಷ್ಟೇ ಸಹಜವಾಗಿ ಮಾತಾಡುವವರು. ಅಥವ ಊಟ ಆಯಿತೆ? ಚೆನ್ನಾಗಿದ್ದೀರಾ ಎಂಬ ಮಾತು ಬಿಟ್ಟರೆ ನಾವಾಗಿ ಏನೂ ಕೇಳದಿದ್ದರೆ ಏನೂ ಆಗಿಲ್ಲವೆಂಬಂತೆ ಸಹಜವಾಗಿ ಸುಮ್ಮನೆ ಇರುವವರು. ಜನ ಅಮ್ಮ ಎಂದು ಕರೆಯುವ ಅವರ ಹೆಂಡತಿಯೂ ಅಷ್ಟೆ. ಅಗಲವಾದ ಗುಂಡು ಮುಖ, ತಲೆಯ ಮೇಲೆ ಹೊದ್ದ ಸೆರಗು. ಫಲವತ್ತಾದ ಎರೆ ನೆಲದ ಬಣ್ಣದ ಅಗಲ ಮುಖದ ಮೇಲೆ ಸದಾ ಇರುವ ಬೆಳುದಿಂಗಳಂಥ ನಗು. ಸುಮ್ಮನೆ ಇರುತ್ತಾರೆ. ಬರೀ ಮಾತಿಲ್ಲದೆ ಸುಮ್ಮನೆ ಇರುವುದಲ್ಲ, ಮನಸ್ಸಿನೊಳಗಿನಿಂದಲೂ ಸುಮ್ಮನೆ ಇದ್ದಾರೆ ಅನ್ನಿಸುವ ಹಾಗೆ ಸುಮ್ಮನೆ ಇರುತ್ತಾರೆ. ಸಂತನೊಬ್ಬ ಹೀಗೆ ಇರಬೇಕೆಂದು ಸಾಮಾನ್ಯವಾಗಿ ಕಲ್ಪಿಸಿಕೊಳ್ಳುತ್ತೇವಲ್ಲ ಹಾಗೆ ಇಲ್ಲವೇ ಇಲ್ಲ ಅವರಿಬ್ಬರೂ. ತಮ್ಮನ್ನು ತಾವು ಸಂತ ಎಂದೂ ಕರೆದುಕೊಳ್ಳುವುದಿಲ್ಲ. ಬಹಳ ಸಹಜವಾಗಿ ಇರುತ್ತಾರೆ. ಅದೇ ಅವರ ಅಸಾಮಾನ್ಯತೆ.

‘ಅಸಹಜಕ್ಕಲ್ಲದೆ ಲೋಕ ಭಜಿಸದು’. ಹೀಗಂದವನು ಅಲ್ಲಮಪ್ರಭು. ಜನಕ್ಕೆ ಸಂತನೊಬ್ಬ ಅತಿ ವಿಶೇಷವಾಗಿರಬೇಕೆಂಬ ಆಸೆ ನಮಗೆ ಇರುತ್ತದೆ. ಬಹುಶಃ ಇರುವುದನ್ನು ಇರುವಂತೆ ಕಾಣುವ ಸಾಮರ್ಥ್ಯ ಸಂತರಿಗೆ ಇರುತ್ತದೆ. ಉದ್ದೇಶರಹಿತರಾಗಿ ಏನೆಲ್ಲ ಮಾಡುತ್ತಾ ಆದರೆ ಏನೂ ಮಾಡದೆ ಸುಮ್ಮನೆ ಇರಬಲ್ಲವರು. ಅಸಾಮಾನ್ಯರಾಗುವ ಆಸೆ ಕೂಡ ಅವರಲ್ಲಿರುವುದಿಲ್ಲವೋ ಏನೋ. ಆದರೆ ನಾವೆಲ್ಲ ಬೇರೆ ಏನೋ ಆಗಬೇಕು, ಬೇರೆ ಥರ ಇರಬೇಕು ಅನ್ನುವ ಆಸೆ ಇಟ್ಟುಕೊಂಡವರು. ನಮ್ಮ ಮನಸ್ಸಿನ ತುಂಬ ಆಸೆಯ ನೆರಳುಗಳು.

ಅದು ನಾನು ಸಾಮಾನ್ಯವಾಗಿ ನೋಡಿರುವಂಥ ಮದುವೆಗಳಂತೆ ಇರಲಿಲ್ಲ. ಅಲ್ಲಿದ್ದ ನೂರಕ್ಕೆ ತೊಂಬತ್ತು ಜನ ಹಳ್ಳಿಯವರು. ಎಲೆ ಅಡಿಕೆ ಅಗಿದ ಬಾಯಿಗಳು, ಕಪ್ಪು ಮುಖ, ಇಷ್ಟೂ ಕೊಬ್ಬಿಲ್ಲದ ಮೀನುಖಂಡಗಳು, ಮೈಗೆ ಒಗ್ಗದೆ ಮುಜುಗುರ ಮಾಡುತ್ತಿರುವ ಅಪರೂಪಕ್ಕೆ ಒಗೆದ, ಅಥವ ಹೊಸತಾದ ಬಟ್ಟೆಗಳು, ಹಿಂದಿನ ರಾತ್ರಿ ಉರಿದು ಬೂದಿಯಾದ ಬೆಂಕಿ ಗುಪ್ಪೆಯಲ್ಲಿ ಬೂದಿ ಕೆದರುತ್ತ ಆಡುತ್ತಿರುವ ಮಕ್ಕಳು, ಸಂತನ ಬಗ್ಗೆ ಅವರಿಗೆಲ್ಲ ಭಕ್ತಿ ಇದೆಯೋ, ಭಯ ಇದೆಯೋ, ಅಥವ ಬದುಕಿನ ಅನೇಕ ವೈಪರೀತ್ಯಗಳನ್ನೆಲ್ಲ ಒಪ್ಪಿಕೊಂಡಂತೆ ಇದೂ ಇನ್ನೊಂದು ಎಂದು ಸುಮ್ಮನೆ ಇದ್ದಾರೋ? ಅವರ ನಡುವೆ ಮೊಳಕಾಲವರೆಗೆ ಟವಲಿನಂಥ ಕಾವಿ ಪಂಚೆ ಉಟ್ಟು, ತುಂಬು ತೋಳಿನ ಹಳೆಯ ಸ್ವೆಟರು ತೊಟ್ಟು, ಚಿಕ್ಕದಾಗಿ ಕತ್ತರಿಸಿದ ಬಿಳಿ ಬಿಳಿ ಕರಿ ಕರಿ ಕೂದಲು ಬಾಚಿಯೂ ಬಾಚದಂತೆ, ಸ್ನಾನ ಮಾಡಿದ್ದರೂ ಮಾಡಿಲ್ಲವೇನೋ ಎಂಬತಿರುವ ಮುಖ ಹೊತ್ತು, ಎರಡೂ ಕಂಕುಳಲ್ಲಿ ಎರಡು ಮಕ್ಕಳನ್ನು ಎತ್ತಿಕೊಂಡು, ‘ಎಲ್ಲಾರ್‍ಗೂ ತಾಂಬೂಲಕೊಟ್ಟು, ಎಲ್ಲಾರ್‍ಗೂ ಅಂದ್ರೆ ಎಲ್ಲಾರ್‍ಗೂ ಕೈ ಮುಗ್ದು ನಮಸ್ಕಾರ ಮಾಡ್ಬೇಕು’ ಅಂತ ಹೆಂಗಸರಿಗೆ ಹೇಳುತ್ತಾ, ಬಸಿದ ಅನ್ನದ ರಾಸಿ ನೋಡುತ್ತಾ, ಕಾಲಿಗೆ ಬಿದ್ದವರ ನಮಸ್ಕಾರವನ್ನು ನಿಶ್ಚಲವಾಗಿ ನಿಂತು ಸ್ವೀಕರಿಸುತ್ತಾ, ಇಲ್ಲ ಸುಮ್ಮನೆ ಹೋಗಿಮೂಲೆಯ ಮೆಟ್ಟಿಲ ಮೇಲೆಕೂರುತ್ತಾ, ಎದ್ದು ಅಡ್ಡಾಡಿ ಹೋಗಿ ಮಂಚದ ಮೇಲೆ ಮಲಗುತ್ತಾ, ಆಗಾಗ ಎಲೆ ಅಡಿಕೆ ಜಗಿಯುತ್ತಾ, ಯಾವಾಗ ಬಂದ್ರಿ, ಚೆನ್ನಾಗದೀರಾ ಅಂತ ಎಲ್ಲರನ್ನೂ ಮಾತಾಡಿಸುತ್ತಾ ಇರುವ ಸಂತ, ಬೆಳಗಿನ ಎಳೆ ಬಿಸಿಲಲ್ಲಿ, ದೊಡ್ಡ ಬಯಲಲ್ಲಿರುವ ಪುಟ್ಟ ದೇವಾಲಯದ ಮೂಲೆಯಲ್ಲಿ ಕುಳಿತು ಕೈಗೆ ಬಳೆ ಇಡಿಸಿಕೊಳ್ಳುತ್ತಿರುವ ಸಂತ ಪತ್ನಿ. ಅದು ಆಶ್ರಮವಾದರೂ ನಾಲ್ಕೇ ಹೆಜ್ಜೆ ಆಚೆ ಬಂದು ನಿರಾಳವಾಗಿ ಬೀಡಿ ಸೇದುತ್ತಿರುವ ಬೊಚ್ಚುಬಾಯಿ ಮುದುಕ. ಸುಮಾರು ಸಾವಿರ ಜನ, ಅವರ ಲಯವೇ ಬೇರೆ. ಅವರ ನಡುವೆ ಗಾಯಕ್ಕೆ ಹಚ್ಚಿದ ಪ್ಲಾಸ್ಟರಿನಂತೆ ಎದ್ದು ಕಾಣುವ ಬೆಂಗಳೂರಿನಿಂದ ಹೋದ ನನ್ನಂಥವರು. ಅಲ್ಲಿ ಸೇರಿದ್ದ ಜನರ ಲೋಕದಲ್ಲಿ ನನ್ನಂಥವರಿಗೆ ಜಾಗವಿದೆಯೋ ಇಲ್ಲವೋ ಗೊತ್ತಿಲ್ಲ. ನನ್ನ ಮನಸ್ಸಿನೊಳಗೆ ಕಟ್ಟಿಕೊಂಡಿರುವ ಲೋಕದಲ್ಲಿ ಈ ಜನದ ಬಗ್ಗೆ ವಿಚಾರ, ಅಭಿಪ್ರಾಯ, ತತ್ವಸಿದ್ಧಾಂತಗಳ ನೆರಳುಗಳಿವೆ. ಅವರಿಗೂ ನನ್ನಂಥವರು ನೆರಳುಗಳಾಗಿಯೇ ಕಾಣುತ್ತಿರಬಹುದು. ಸೂರ್ಯಕಾಂತಿಗೂ, ಬೆಳುದಿಂಗಳಲ್ಲಿ ಕಾಣುತ್ತಿರುವ ಅವುಗಳ ನೆರಳಿಗೂ ನನಗೂ ನಡುವೆ ಮುಳ್ಳುಬೇಲಿ, ಸೂರ್ಯನೇ ಇರಲಿ, ಚಂದ್ರನೇ ಇರಲಿ, ತನ್ನಪಾಡಿಗೆ ತಾನು ಇರುವ ಸೂರ್ಯಕಾಂತಿ. ಸರಿ, ತಪ್ಪು, ಸಮರ್ಥನೆ, ವಿರೋಧ, ಒಳಿತು, ಕೆಡುಕು, ಏನೂ ಇಲ್ಲದೆ ಸುಮ್ಮನೆ ಇರುವ ತೆಂಗು, ಬೆಳುದಿಂಗಳು, ಜೋಳ, ದೂರದಲ್ಲಿ ಗೋಪುರ, ಹತ್ತಿರದಲ್ಲಿ ಕೇಳುತ್ತಿರುವ ಭಜನೆ. ಇನ್ನೂ ಮನಸ್ಸು ತುಂಬಿಕೊಂಡಿರುವ ಸೂರ್ಯಕಾಂತಿಯ ನೆರಳುಗಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿನೇಕೆ ಸ್ವಾರ್ಥಿ
Next post ಹೂವಾಡಗಿತ್ತಿ

ಸಣ್ಣ ಕತೆ

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ದೇವರ ನಾಡಿನಲಿ

    ೧೯೯೮ ಜೂನ್ ತಿಂಗಳ ಮೊದಲ ವಾರದಲ್ಲಿ ನಾ ದೇವರನಾಡಿನಲಿ, ವಿಭಾಗೀಯ ಸಾರಿಗೆ ಅಧಿಕಾರಿ ಎಂದು, ವಿಭಾಗೀಯ ಕಛೇರಿ ಮಂಗಳೂರು ವಿಭಾಗ ಅಂದರೆ.... ದಕ್ಷಿಣ ಕನ್ನಡ ಜಿಲ್ಲೆಯಲ್ಲಿ... ಹರ್ಷದಿ,… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…