ಬಿರುಕು

ಬಿರುಕು

ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ ತಿರುಗಿ ನೋಡಿದ. ಅವಳು ಅವನ ಮುಖವನ್ನೇ ನೋಡುತ್ತಾ ನಿಂತಲ್ಲಿಯೇ ನಿಂತಿದ್ದಳು.

“ಲೋಟ ಅಲ್ಲಿಡು” ಎಂದ ಅವಳ ನೋಟ ತಪ್ಪಿಸುತ್ತಾ. ಪ್ರತಿದಿನವೂ ಅವಳ ಕಣ್ಣು ತಪ್ಪಿಸಿ ಓಡಾಡುತ್ತಿದ್ದ ಮೂರ್‍ತಿ ಈ ದಿನ ಒಂಟಿಯಾಗಿ ಸಿಕ್ಕಿ ಹಾಕಿಕೊಂಡಿದ್ದ.

ಮೇಜಿನ ಮೇಲೆ ಲೋಟವಿಟ್ಟ ಚಂಪಾ ನಿಂತೇ ಇದ್ದಳು. “ಅಮ್ಮಾ” ಎಂದು ಏನೋ ಹೇಳಲು ಮೂರ್‍ತಿ ಬಾಯಿ ತೆರೆದ.

“ನೀವು ಇದುವರೆಗೂ ಕರೆಸಿ ಇಟ್ಟುಕೊಂಡಿದ್ದ ನಿಮ್ಮ ಅಮ್ಮ ಈ ದಿನ ಊರಿಗೆ ಹೋದದ್ದು ಮರೆತು ಹೋಯಿತೇನು?”

ಅವನ ಮುಖದಲ್ಲಿ ಬೆವರಿನ ಹನಿಗಳು ಮೂಡಿದವು. ಎದೆ ಅವನಿಗೆ ಕೇಳಿಸುವಷ್ಟು ಜೋರಾಗಿ ಬಡಿದುಕೊಳ್ಳುತ್ತಿತ್ತು.

“ನಾನು ಇಲ್ಲೇ ಮಲಗುತ್ತೇನೆ…”

ಚಂಪಾಳ ಸ್ವರದಲ್ಲಿದ್ದ ಶೀತಲತೆ ಅವನಿಗೆ ಒಂದು ವಿಧದ ನಡುಕ ತಂದಿತು. ಸಾವರಿಸಿಕೊಂಡು ಬಹುಪ್ರಯಾಸದಿಂದ ನುಡಿದ.

“ಇವತ್ತು ತುಂಬಾ ಸುಸ್ತಾಗಿದ್ದೀನಿ ನಂಗೆ ರೆಸ್ಟ್ ಬೇಕು. ದಯವಿಟ್ಟು ಹೊರಟು ಹೋಗು.”

“ನಾನೇನು ತಪ್ಪು ಮಾಡಿದ್ದೇನೇಂತ? ನನ್ನನ್ನು ಯಾಕೆ ಇಷ್ಟು ದೂರ ಇಟ್ಟಿದ್ದೀರಿ?”

“ತಪ್ಪು ನಿನ್ನದೂ ಅಲ್ಲ, ನನ್ನದೂ ಅಲ್ಲ. ತಪ್ಪು” ಮೂರ್‍ತಿ ತಡವರಿಸಿದ ಚಂಪಾಳ ತುಟಿಗಳಲ್ಲಿ ವ್ಯಂಗ್ಯ ನಗೆ ಸುಳಿಯಿತು.

“ಹೇಳಿ ದಯವಿಟ್ಟು ನಿಮ್ಮ ಮನಸ್ಸಿನಲ್ಲೇನಿದೇಂತ ಬಾಯಿ ಬಿಟ್ಟು ಹೇಳಿ, ಎಷ್ಟು ದಿನಾಂತ ಹೀಗೆ ಹಿಂಸಿಸಿ ಕೊಲ್ಲಬೇಕೂಂತ ಮಾಡಿದ್ದೀರಿ? ತಪ್ಪು ನನ್ನದೇ?” ಕೊನೆಯ ನುಡಿಗಳನ್ನು ಹೇಳುವಾಗ ಅವಳ ಸ್ವರ ನಡುಗಿತು. ಮೂರ್‍ತಿ ತಲೆ ಎತ್ತಿ ನೋಡಿದ.

ಅವಳ ದೈನ್ಯ ದುಃಖ ನೋವು ತುಂಬಿದ ಮುಖ ಅವನನ್ನು ಕರಗಿಸಲಿಲ್ಲ. ಬದಲು ಕಹಿನೆನಪಿನ ಅಲೆಗಳನ್ನು ಅಪ್ಪಳಿಸಿ ತಂದಿತು. ಆ ಭೀಕರ ದೃಶ್ಯವನ್ನು ಅಳಿಸಿಹಾಕಲು ಸಾಧ್ಯವೇ? ಎರಡೂ ಕೈಗಳಿಂದ ತಲೆಯನ್ನು ಒತ್ತಿಹಿಡಿದ ಮೂರ್ತಿ.

“ಚಂಪಾ… ಈಗ ನನ್ನನ್ನು ಏನೂ ಕೇಳ್ಬೇಡಾ. ಪ್ಲೀಸ್ ನನ್ನ ಪಾಡಿಗೆ ನನ್ನನ್ನು ಬಿಟ್ಟುಬಿಡು. ಇವತ್ತೊಂದು ದಿನ…”

ಚಂಪಾ ಶಿಲಾಪ್ರತಿಮೆಯಂತೆ ನಿಂತಳು.

ಗಂಡನಿಗೆ ತನ್ನ ಬಗ್ಗೆ ಒಲವೂ, ಆಸಕ್ತಿಯೂ ಬತ್ತಿಹೋಗಿರುವುದು ಅವಳಿಗೆ ತಿಳಿದಿತ್ತು. ಅನಿರೀಕ್ಷಿತವಾಗಿ ನಡೆದ ಆ ಘಟನೆ ವಿಚಿತ್ರ ರೀತಿಯಲ್ಲಿ ನಡೆದ ಅವರ ಪ್ರೇಮದಲ್ಲಿ ಬಿರುಕು ಮೂಡಿಸಿತ್ತು. ಅಂದಿನಿಂದ ಅವನು ಅವಳನ್ನು ಮಾತನಾಡಿಸುವುದಿರಲಿ ನೋಡುವ ಪ್ರಯತ್ನವನ್ನೂ ಮಾಡುತ್ತಿರಲಿಲ್ಲ. ಹಳ್ಳಿಯಿಂದ ಅದೇ ದಿನ ತಾಯಿಯನ್ನು ಕರೆಯಿಸಿಕೊಂಡಿದ್ದ. ಕೆಲಸದ ನೆಪ ಹೇಳಿ ಎಷ್ಟೋ ರಾತ್ರಿಗಳನ್ನು ಹೊರಗೆ ಕಳೆಯತೊಡಗಿದ್ದ ಗಂಡನನ್ನು ಒಲಿಸಿಕೊಳ್ಳುವ ಪ್ರಯತ್ನವನ್ನು ಅವಳು ಮಾಡಿರಲಿಲ್ಲ. ಆಸೆಯೂ ಇರಲಿಲ್ಲ. ಒಮ್ಮೆಯೂ ಪ್ರಯತ್ನಿಸದ ಅವಳು ಯಾವುದೋ ನಿರ್‍ಧಾರದಿಂದ ಬಂದಿದ್ದಳು. ಈ ತೊಳಲಾಟ, ಕೊರಗು, ಸಂಕಟಕ್ಕೆ ವಿರಾಮ ಹಾಕಲೇಬೇಕೆಂದು ನಿಂತಿದ್ದಳು.

ಅವನು ಮಂಜಿನ ಗಡ್ಡೆಯಂತೆ ಕುಳಿತಿದ್ದ. ಅವಳಿಗೆ ಹೇಗೆ ಹೇಳಬೇಕು? ಏನೆಂದು ಸಮಾಧಾನ ಪಡಿಸಬೇಕು? ತನ್ನ ಮನಸ್ಸು ಏಕೆ ಈ ರೀತಿ ಬದಲಾಯಿಸಿತು? ತಾನವಳನ್ನು ಪ್ರೀತಿಸಿರಲಿಲ್ಲವೇ? ಯಾಕೆ ಹೀಗಾಯಿತು? ತನಗಾಗಿ ತನ್ನ ಮನೆಯವರನ್ನೆಲ್ಲಾ ನಿಂತ ಕಾಲಲ್ಲೇ ತೊರೆದು ಬಂದಿದ್ದ ಅವಳನ್ನು ಪ್ರೀತಿಸಿ ಮದುವೆಯಾಗಿರಲಿಲ್ಲವೆ? ತಾನು ಅವಳೊಂದಿಗೆ ಕಳೆದ ಸುಂದರ ಘಳಿಗೆಗಳು. ಆದರೆ ಆ ರಾತ್ರಿ ಅತಿಭಯಾನಕ ತನ್ನ ಜೀವನದಲ್ಲಿ ಬಿರುಗಾಳಿ ಎಬ್ಬಿಸಿ ಬಿರುಕು ತಂದಿಟ್ಟ ಭೀಕರ ರಾತ್ರಿ…

ನೆನಪಿನಿಂದಲೇ ಚಳಿಬಂದವನಂತೆ ನಡುಗಿದ….

ಆ, ರಾತ್ರಿ.

ಚಂದ್ರನ ಮಂದ ಬೆಳಕು ಕಿಟಕಿಯಿಂದ ತೂರಿ ಒಳಗೆಲ್ಲಾ ಹರಡಿತ್ತು. ಅವರಿಬ್ಬರೂ ಮೆಲುವಾಗಿ ಮಾತನಾಡಿಕೊಳ್ಳುತ್ತಿದ್ದರು. ತಮ್ಮ ಮೊದಲ ಭೇಟಿ, ಪ್ರೇಮದ ನಂತರದ ಗಲಾಟೆ ಮದುವೆ ಎಲ್ಲವನ್ನೂ ನೆನಸಿಕೊಳ್ಳುತ್ತಿದ್ದರು. ಅವನ ಬಾಯಿಂದ ಎಷ್ಟು ಭಾರಿ ಬಂದರೂ ಅವಳಿಗೆ ತೃಪ್ತಿ ಇರಲಿಲ್ಲ. ಆದರೂ ಮತ್ತೆ ಮತ್ತೆ ಕೇಳುತ್ತಿದ್ದಳು. ದೃಢಪಡಿಸಿಕೊಳ್ಳುತ್ತಿದ್ದಳು. ತೃಪ್ತಿಪಡುತ್ತಿದ್ದಳು.

“ಮೂರ್ತಿ ನಿಜವಾಗಿಯೂ ನನ್ನನ್ನು ಪ್ರೀತಿಸುತ್ತೀರಾ?”

“ಹೂಂ”

“ಎಷ್ಟು?”

“ತೋರಿಸಬೇಕೇನು?” ಎನ್ನುತ್ತಾ ಅವಳನ್ನು ಹತ್ತಿರಕ್ಕೆ ಎಳೆದು ನವಿರಾಗಿ ಅವನ ಕೂದಲುಗಳ ನಡುವೆ ಬೆರಳಾಡಿಸಿದಳು. ಅವಳ ಹೃದಯ ತುಂಬಿ ಬಂದಿತ್ತು.

“ನಿಮ್ಮನ್ನು ಕಳೆದುಕೊಳ್ಳುವುದಕ್ಕಿಂತ ಸಾಯುವುದೇ ಮೇಲು ಅನ್ನಿಸುತ್ತೆ…” ಅವಳು ಮೃದುವಾಗಿ ಹೇಳಿದಳು. ಅವಳ ಎದೆಗೆ ಒತ್ತಿಕೊಂಡಂತೆ ಮಲಗಿದ್ದ ಅವನಿಗೆ ಅವಳ ಹೃದಯದ ಬಡಿತ ಕೇಳುತ್ತಿತ್ತು.

“ಶ್ಶ್! ಆ ಮಾತೆಲ್ಲಾ ಈಗ ಆಡಬಾರದು. ಎಲ್ಲಾ ಸರಿಯಾಗಿ ಹೋಗಿದೆಯಲ್ಲ. ನೀನಿಲ್ಲದೆ ನಾನು ಇರುತ್ತಿದ್ದೆ ಎಂದುಕೊಂಡಿದ್ದೆಯಾ? “ಊಹುಂ ಖಂಡಿತ ಇಲ್ಲ” ಅವನ ತೋಳುಗಳು ಅವಳನ್ನು ಬಳಸಿ ಇನ್ನೂ ಹತ್ತಿರಕ್ಕೆಳೆದುಕೊಂಡವು.

“ಮೂರ್‍ತಿ, ನನಗೆ ಈ ಗಳಿಗೆ ಸಾವು ಬಂದರೂ ಸರಿಯೇ ಈ ರಾತ್ರಿ.. ಸುಂದರ ನೆನಪುಗಳನ್ನು ಯಾರೂ ದೂರ ಮಾಡಲಾರರು…”

ತಲೆಗೂದಲಲ್ಲಿ ಆಡುತ್ತಿದ್ದ ಅವಳ ಕೈಯನ್ನು ತಟ್ಟನೆ ಹಿಡಿದು ತುಟಿಗಳಿಗೆ ಒತ್ತಿಕೊಂಡ. “ಈ ರಾತ್ರಿ ಒಂದೇ ಸಾಕೆ? ಇನ್ನೂ ಎಷ್ಟೋ ಇದೆ.” ಅವಳು ಮುಂದೆ ಮಾತನಾಡದಂತೆ ತನ್ನ ತುಟಿಗಳಿಂದ ಅವಳ ಬಾಯನ್ನು ಮುಚ್ಚಿದ.

ಹೊರಗಡೆ ಬಾಗಿಲು ತೆರೆದ ಶಬ್ದ ದಢದಢನೆ ನಡೆದು ಬಂದ ಹೆಜ್ಜೆಗಳ ಸಪ್ಪಳ. ಜೊತೆಗೆ ಜೋರಾಗಿ ಕೂಗಿ ಮಾತನಾಡುವ ಜನರ ಗಲಾಟೆಗೆ ಫಕ್ಕನೆ ಎಚ್ಚರಗೊಂಡ. ಮೂರ್‍ತಿಗೆ ತಾನೆಲ್ಲಿದ್ದೇನೆಂದು ಯೋಚಿಸಲು ಎರಡು ಕ್ಷಣ ಬೇಕಾಯಿತು. ಚಂಪಾಳಿಗೂ ಎಚ್ಚರವಾಗಿತ್ತು.

“ಇನ್ನು ಸ್ವಲ್ಪ ದೂರ ನಡೆದು ಹೋಗಿದ್ದರೆ ಒಳ್ಳೆಯ ಹೋಟೆಲಿನಲ್ಲಿರಬಹುದಿತ್ತು. ಹೆಂಡದಂಗಡಿಯ ತರಹ ಗಲಾಟೆ ಮಾಡ್ತಾ ಇದ್ದಾರೆ. ಮೂರ್‍ತಿ ಹೊರಗಡೆಯಾಗುತ್ತಿದ್ದ ಗಲಾಟೆ ಅಸಹನೆಯಿಂದ ಗೊಣಗುಟ್ಟಿದ.

“ಈ ಸರಿರಾತ್ರೀಲಿ ಅಷ್ಟದೂರ ಹೋಗೋಕೆ ಆಗುತ್ತಿತ್ತಾ? ಹೆಂಡದಂಗಡೀನೇ ಇರಲಿ ಬಿಡಿ. ನಮಗೆ ಆಶ್ರಯ ಕೊಟ್ಟಿದ್ದಾರೆ. ಇನ್ನೇನು ಬೆಳಗಾಯಿತಲ್ಲ. ಹೋಗಿಬಿಡೋಣ.”

ಹೊರಗಡೆಯಿಂದ ಕೇಳಿ ಬರುತ್ತಿದ್ದ ಕೇಕೆ, ನಗು, ಗಲಾಟೆ ಅವ್ಯಕ್ತ ಭಯ ತಂದರೂ ಗಂಡನಿಗೆ ಸಮಾಧಾನಪಡಿಸಿದಳು.

“ಸ್!” ಅದೇಟು ಗದ್ಲ ಮಾಡ್ತೀವ್ರಿ ಮಾರಾಯ್ರೆ, ಒಳಡೆ ಮಲ್ಗವ್ರೆ…” ಅಜ್ಜಿಯ ಸ್ವರ.

“ನಿನ್ ಮಗ್ಳು ಬಂದವ್ಳೇನು?” ಗಡಸು ಕಂಠ ಧ್ವನಿ.

“ಅವ್ಳು ಬಂದಿದ್ರೆ ನಿಂಗೆ ಯೇಳೆ ಬಿಡ್ತಿದ್ನಾ?” ಯಾರೋ ಓದ್ದೋವ್ರು ರಾತ್ರಿ ಕಾರು ಕೆಟ್ರು ಬಂದವ್ರೆ ಗಂಡ ಹೆಂಡ್ರು.”

“ಉಡ್ಗಿ ಎಂಗವ್ಳೆ? ನಿನ್ ಮಗ್ಳಂಗೆ ಚಂದಾಗವ್ಳಾ?” ಗೊಗ್ಗರು ಧ್ವನಿಯವನ ಕುತೂಹಲಕ್ಕೆ ಕಡಿವಾಣ ಹಾಕಿದ ಅಜ್ಜಿ.

“ಸುಮ್ಮೆ ಬಂದ್ಕೆಲ್ಸ ಮುಗಿಸ್ಕಂಡು, ಒಂಟೋಗಿ ನಿಮ್ ಕಂತ್ರಿಬುದ್ದಿ ತಿರ್‍ಗಾ ಇಲ್ ತೋರ್‍ಸಬ್ಯಾಡ್ರಿ…” ನವಿರಾಗಿ ಗದರಿದಳು.

“ಅದೆಂಗಾಯ್ತದೆ ಅಜ್ಜಮ್ಮಾ? ಆ ಉಡ್ಗೀನೂ ನಿನ್ ಮಗೈ ಅಂದ್ಕೊಂತೀವಿ ಏನ್ಲಾ ಕರಿಯ?”

ಜೊತೆಗೆ ಅಶ್ಲೀಲದ ಮಾತುಗಳು ಅಟ್ಟಹಾಸದ ನಗು. ಮುದುಕಿಯ ಸ್ವರ ಇವರ ಗಲಾಟೆಯಲ್ಲಿ ಅಡಗಿಹೋಯಿತು.

ಅವರ ಮಾತುಗಳನ್ನು ಆಲಿಸಿದ ಮೂರ್‍ತಿ ಗುಂಡೇಟು ತಿಂದವನಂತೆ ಧಿಗ್ಗನೆ ಎದ್ದು ಕುಳಿತ.

ಮಾತುಗಳೊಂದಿಗೆ ಬಾಗಿಲ ಮೇಲೆ ದಬದಬನೆ ಬಡಿತ ಜೋರಾಯಿತು. ಚಂಪಾ ಗಾಬರಿಯಿಂದ ನಡುಗುತ್ತಾ ಮೂರ್‍ತಿಯನ್ನು ಅಪ್ಪಿಹಿಡಿದಳು. ಶಿಥಿಲಗೊಂಡಿದ್ದ ಬಾಗಿಲು ನಾಲ್ಕಾರು ಬಾರಿ ಹೊಡೆತಗಳಿಗೆ ಮುರಿದುಬಿದ್ದಿತು. ಕೊಳಕು ಬಟ್ಟೆಯ… ಸರೆಯ ಅಮಲಿನಲ್ಲಿ ಸಮತೋಲನ ತಪ್ಪಿ ಜೋತಾಡುತ್ತಿದ್ದವ ಮುಂದೆ ನುಗ್ಗಿದ. ಅವನ ಹಿಂದಿದ್ದ ಧಡೂತಿಯ ಮನುಷ್ಯ ಇಬ್ಬರೂ ಕುಡಿದಿದ್ದರು. ಒಂದು ಕ್ಷಣ ರೂಮಿನಲ್ಲಿ ಘಾಟು ವಾಸನೆ ತುಂಬಿಕೊಂಡಿತು.

“ಎಣ್ಣು ಭೋ ವೈನಾಗೈತೆ ಕಣ್ಲಾ…” ಜೋಲಿ ಹೊಡೆಯುವಂತಾದ ದೇಹದ ಸಮತೋಲನಕ್ಕಾಗಿ ಚಂಪಾಳ ತೋಳು ಹಿಡಿದ. ಅವನ ಬಾಯಿಂದ ಸೆರೆಯ ವಾಸನೆ ನುಗ್ಗಿ ಬಂದಿತು.

“ಆ ಮುದ್ಕಿ ಅದ್ಹೆಂಗೆ ಒದರ್‍ತಾಳಲ್ಲೊ…”

“ಈ ಮನೆಯ ಸುತ್ತಮುತ್ತ ಯಾರೂ ಇಲ್ಲ. ಒದರ್‍ಲಿ ಬಿಡು” ಎಂದ ಅವನು “ಏನ್ ಹೇಳ್ತೀಯ ಚಿನ್ನಾ….” ಎಂದು ಹತ್ತಿರ ಬಂದ. ಚಂಪಾ ಭೀತಿಯಿಂದ ತಲ್ಲಣಿಸಿದಳು.

ಅನಿರೀಕ್ಷಿತ ದಾಳಿ, ರಾಕ್ಷಸರಂತೆ ಮೇಲೇರಿ ಬಂದ ಧಡೂತಿ ದೇಹದ ಕೆಂಪು ಕಣ್ಣುಗಳ ಕ್ರೂರ ಮುಖಗಳು ಮೂರ್‍ತಿಗೆ ಭೀತಿಯಿಂದ ಕಾಲುಗಳು ಕುಸಿಯುವಂತಾದವು.

ಚಂಪಾಳ ಅಸ್ತವ್ಯಸ್ತ ಉಡುಪು. ಜಾರಿಹೋದ ಸೆರಗು ಭಯದಿಂದ ನಡುಗುತ್ತಿದ್ದ ಬಳುಕು ದೇಹ ಅವರಿಗೆ ಮತ್ತಷ್ಟು ಅಮಲೇರಿಸಿದವು.

ಮುಂದೆ ಬಂದ ಅವರಲ್ಲಿ ಒಬ್ಬ “ವ್ಹಾ ಚಿನ್ನಾ…” ಎಂದು ಕರೆಯುತ್ತಾ ಚಂಪಾಳನ್ನು ಹತ್ತಿರಕ್ಕೆಳೆದುಕೊಳ್ಳಲು ಪ್ರಯತ್ನಿಸಿದಾಗ ಚಂಪಾ ಚಿಟ್ಟನೆ ಚೀರಿದಳು.

“ಮೂರ್‍ತಿ ಬಿಡಿಸಿ ಅಯ್ಯೋ ನಾಯಿ ಬಿಡು” ಅವನ ಕೈಗಳನ್ನು ಸಿಕ್ಕ ಕಡೆಯಲ್ಲಿ ಕಚ್ಚಿದಳು. ತನ್ನ ಶಕ್ತಿಮೀರಿ ಹೋರಾಟ ನಡೆಸಿದಳು.

“ಏಯ್ ಒಂದ್ದೆಜ್ಜೆ ಮುಂದಿಟ್ಟರೆ ನೋಡು” ಮೂರ್‍ತಿಗೆ ಕಪ್ಪು ದೇಹದ ಕ್ರೂರ ಕಣ್ಣುಗಳು ಹೆದರಿಸಿದವು. ಹೊರಗಡೆಯಿಂದ ಬರುತ್ತಿದ್ದ ಲಾಟೀನಿನ ಮಂದ ಬೆಳಕಿನಲ್ಲಿ ಚಿಕ್ಕ ಕತ್ತಿ ಮಿಂಚಿತು.

“ಮೂರ್‍ತಿ ಬಿಡಿಸಿಕೊಳ್ಳಿ ಮೂರ್‍ತಿ” ಅವಳ ಆರ್‍ತಸ್ವರ ಅರ್‍ಧದಲ್ಲಿಯೇ ಅಡಗಿಹೋಯಿತು. ಕಲ್ಲಾಗಿ ನಿಂತಿದ್ದ ಮೂರ್‍ತಿಗೆ ಕಂಡದ್ದು ವಿಶಾಲವಾದ ಕಪ್ಪು ಬೆನ್ನು ಮಾತ್ರ

ತನ್ನನ್ನು ಬಿಡಿಸಿಕೊಳ್ಳಲು ಒಂದಿನಿತೂ ಯತ್ನಿಸದೆ ಮೌನಿಯಾಗಿ ನಿಂತಿದ್ದ ಗಂಡನನ್ನು ನೋಡಿ ಕಂಗೆಟ್ಟಳು. ಕೂಗಲು ಪ್ರಯತ್ನಿಸದ ಅವಳ ಸ್ವರ ಗಂಟಲಲ್ಲಿಯೇ ಉಳಿಯಿತು. ಅವಳ ದೇಹ ಅವನ ತೋಳುಗಳಲ್ಲಿ ಕುಸಿಯಿತು. ಕಣ್ಣುಗಳು ಅಗಲವಾಗಿ ಮೂರ್‍ತಿಯನ್ನೇ ದಿಟ್ಟಿಸಿ ನೋಡುತ್ತಿದ್ದವು.

ಬಂದವರು ಪೈಶಾಚಿಕ ತೃಪ್ತಿಯಿಂದ ನಗುತ್ತಾ, ದಾಪುಗಾಲುಹಾಕುತ್ತಾ ಬಾಗಿಲು ದಾಟಿ ಹೋಗುವವರೆಗೂ ಮೂಕನಂತೆ ಕುಳಿತಿದ್ದ ಮೂರ್‍ತಿ ನಿಧಾನವಾಗಿ ಚಂಪಾಳತ್ತ ತಿರುಗಿದ. ಮೈಮೇಲೆ ಒಂದಿಂಚೂ ಬಟ್ಟೆಯಿಲ್ಲದೇ ಚಂಪಾ ಅರೆ ಪ್ರಜ್ಞಾವಸ್ಥೆಯಲ್ಲಿ ನೆಲದ ಮೇಲೆ ಬಿದ್ದಿದ್ದಳು. ಮೂರ್‍ತಿ ಹುಚ್ಚನಂತೆ ಅವಳ ಬಳಿಗೆ ಧಾವಿಸಿದ.

ಆದರೆ, ಅವನ ಪೌರುಷ, ಅವಳ ಶೀಲ ಸೂರೆಯಾಗಿಹೋಗಿದ್ದವು.
* * *

ಭಯಾನಕ ರಾತ್ರಿಯ ನೆನಪಿನಿಂದ ಹೊರಗೆ ಬಂದ ಅವನಿಗೆ ಗೋಡೆಗೊರಗಿಕೊಂಡು ನಿಂತೇ ಇದ್ದ ಚಂಪಾ ಕಣ್ಣಿಗೆ ಬಿದ್ದಳು. ಕ್ರೂರ ದಾಳಿಗೆ ಸಿಕ್ಕು ನರಳಿದ, ಪ್ರೀತಿಯ ಸುಂದರ ಹೆಂಡತಿಯನ್ನು ನೋಡಿ ಅವನ ಮನಸ್ಸು ಕರಗಲಿಲ್ಲ. ದೇಹ ಚಲಿಸಲಿಲ್ಲ.

ತಾನಿನ್ನೂ ಆ ನಾಯಿಗಳು ಕಚ್ಚಾಡಿ ಬಿಸುಟುಹೋದ ಈ ದೇಹದೊಂದಿಗೆ ಅಜೀವಪರ್‍ಯಂತ ಬಾಳಬೇಕು! ಆ ಕಲ್ಪನೆಯಿಂದಲೇ ಮೈಮೇಲೆ ಹಿಮ ಸುರಿದಂತಾಯಿತು.

ಒಂದು ಬಗೆಯ ತಿರಸ್ಕಾರದಿಂದ ಅವಳತ್ತ ನೋಡಿದ. ವಿವಾಹ ವಿಚ್ಛೇಧನ ಪಡೆಯುವುದೇ ಸೂಕ್ತ. ಆದರೆ ಕಾರಣ ಏನೆಂದು ಕೊಡುವುದು? ಮದುವೆಯಾಗಿ ಇನ್ನೂ ಮೂರು ತಿಂಗಳೂ ಕಳೆದಿಲ್ಲ. ಅದು ಎಲ್ಲರಿಗೂ ಗೊತ್ತಿದ್ದ ಪ್ರೇಮ ವಿವಾಹ! ಸಮಾಜ ಏನಂದೀತು ತನ್ನನ್ನು ತನ್ನ ಸ್ಥಾನ-ಮಾನಗಳ ಗತಿಯೇನು? ಇಲ್ಲವಾದರೆ ಇದೇ ರೀತಿ ಹೀಗೆ ಇಡೀ ಜೀವನವನ್ನು ಕಳೆಯುವುದೇ?

ಮೂರ್ತಿ ನಿರ್‍ವಿಣ್ಣನಾದ.

ಸದ್ಯಕ್ಕೆ ಅವಳನ್ನು ಸಮಾಧಾನಪಡಿಸಿ ಕಳುಹಿಸಬೇಕಾಗಿತ್ತು. ಬಲವಂತದಿಂದ ಅವಳ ಬಳಿಗೆ ಬಂದ ಮೂರ್‍ತಿ ಬಾರದ ನಗುವನ್ನು ತುಟಿಗಳಲ್ಲಿ ತಂದುಕೊಂಡು ಹೇಳಿದ.

“ಚಂಪಾ, ನಿನ್ನ ಸಂಕಟ ನನಗೆ ಅರ್ಥವಾಗುತ್ತಿದೆ. ಆದರೆ ನೀನು ಸಂತೋಷವಾಗಿರಬೇಕು…”

“ಅದಕ್ಕೇ?” ಅವನ ಮಾತುಗಳನ್ನು ಅರ್‍ಧದಲ್ಲಿಯೇ ಕಡಿದು ಹೇಳಿದಳು.

“ಈಗ ಹೋಗಿ ಮಲಗು. ಬೆಳಿಗ್ಗೆ ಮಾತನಾಡಿದರಾಯಿತು” ಹತ್ತಿರ ನಿಂತಿದ್ದ ಅವಳ ಮುಖವನ್ನು ಬೊಗಸೆಯಲ್ಲಿ ಹಿಡಿದು ಮೃದುವಾಗಿ ಅವಳ ತುಟಿಗಳನ್ನು ಚುಂಬಿಸಿದ.

ಅವಳ ನೋಟ ಮಾತ್ರದಿಂದಲೇ ಉದ್ರಿಕ್ತನಾಗುತ್ತಿದ್ದ ಮೂರ್ತಿ ಮಂಜಿನಂತೆ ಕೊರೆಯುತ್ತಿದ್ದ ಆ ತುಟಿಗಳ ಸ್ಪರ್ಶದಿಂದ ಬಯಕೆ ಸತ್ತಂತವನಾದ. ಒಂದು ವಿಧವಾದ ಜುಗುಪ್ಪೆಯಿಂದ ಅವನ ದೇಹವೆಲ್ಲ ಬೆವರಿ ಹೋಯಿತು.

ತನ್ನಿಂದ ತಟ್ಟನೆ ಸರಿದು ನಿಂತ ಗಂಡನತ್ತ ನೋಡಿದಳು.

ತನ್ನನ್ನು ತನ್ನ ಮನೆಯಿಂದ ಓಡಿಬರುವಂತೆ ಮಾಡಿದ್ದ ಅವನ ಸುಂದರ ಮುಖವನ್ನು ನೋಡಿಯೇ ನೋಡಿದಳು. ಅವಳ ದೇಹದಲ್ಲಿ ಉಂಟಾದ ಜುಗುಪ್ಸೆ, ನೋವು, ತಿರಸ್ಕಾರ, ದುಃಖ ಅವಳ ಕಣ್ಣುಗಳಲ್ಲಿ ಮಿಂಚಿತು.

ಒಮ್ಮೆ ಗಂಡನತ್ತ ತೀಕ್ಷ್ಣವಾಗಿ ನೋಡಿದ ಅವಳು ಒಂದೂ ಕ್ಷಣವೂ ನಿಲ್ಲದೇ ರೂಮಿನಿಂದ ಹೊರಗೆ ಓಡಿದಳು.

ಇದ್ದಕ್ಕಿದಂತೆಯೇ ಓಡಿದ ಅವಳ ವರ್‍ತನೆಯಿಂದ ಮೂರ್‍ತಿಗೆ ಆಶ್ಚರ್‍ಯವಾದರೂ ಒಂದು ವಿಧದ ಸಮಾಧಾನವಿತ್ತು.

“ಶೀಲವಿಲ್ಲದವಳೊಡನೆ ಬಾಳುವೆ ಎಂತಹುದೋ?” ತಿರಸ್ಕಾರದಿಂದ ಅವನ ತುಟಿಗಳು ತೊದಲಿದವು. ಮುಖ ಹೊದ್ದು ಮಲಗಲು ಯತ್ನಿಸಿದೆ.
* * *

ಬೆಳಿಗ್ಗೆ ಎದ್ದು ಹೊರಗೆ ಬರುತ್ತಿದ್ದ ಹಾಗೆಯೇ ಅವನಿಗೆ ಕಂಡದ್ದು ಮೇಜಿನ ಮೇಲೆ ಜೋಡಿಸಿಟ್ಟ ಮದುವೆಯ ಸೀರೆ, ತಾನು ಕಟ್ಟಿದ್ದ ಚಿನ್ನದ ತಾಳಿ, ಕೈ ಬಳೆಗಳು.

ಆತುರದಿಂದ ಪಕ್ಕದಲ್ಲಿದ್ದ ಕಾಗದ ಬಿಡಿಸಿದ.

“ಪೌರುಷವಿಲ್ಲದ ಗಂಡನೊಂದಿಗೆ ಒಂದು ಕ್ಷಣವೂ ಬಾಳಲಾರೆ.”

ಚಂಪಾಳ ಕಾಗದ ಅವನ ಕೈಯಿಂದ ಜಾರಿ ಬಿತ್ತು. ಅವನ ಮುಖ ಹತ್ತಿಯಂತೆ ಬಿಳಿಚಿಕೊಂಡಿತ್ತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೪೪
Next post ಎತ್ತ ಸಾಗಿದೆಯೊ ಕನ್ನಡ ರಥವು

ಸಣ್ಣ ಕತೆ

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…