“ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?”
“ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?”
“ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ ಈ ಪ್ರಪಂಚವೇ ವಾಸಿ, ನನ್ನನ್ನು ನೋಡಿ ತಿರಸ್ಕರಿಸುವವರು ಇಲ್ಲಿಲ್ಲ.”
“ನಿನ್ನನ್ನು ತಿರಸ್ಕರಿಸುವರೇ, ಮಗು? ಇಷ್ಟು ಚೆನ್ನಾಗಿ ಚಿತ್ರ ಬರೆಯುವೆ. ಈಗಾಗಲೇ ನಿನ್ನ ಹೆಸರು ಎಲ್ಲೆಲ್ಲ ಕೇಳುತ್ತಿದೆ. ಉತ್ತಮ ಕಲಾವಿದನೆಂದು ಜನ ನಿನ್ನನ್ನು ಹೊಗಳುತ್ತಿದಾರೆ. ಪತ್ರಿಕೆಗಳಲ್ಲಿ ನಿನ್ನನ್ನು ಹೊಗಳಿ ಬರೆದುದನ್ನು ನೀನೇ ನನಗೆ ತೋರಿಸಿದೆ. ಮತ್ತೆ, ತಿರಸ್ಕಾರ ವೆಲ್ಲಿಯದು, ಮಗು?”
“ಅಮ್ಮ, ನೀನು ನನ್ನನ್ನು ನೋಡುತ್ತಿರುವುದು ನಿನ್ನ ದೃಷ್ಟಿ ಯಿಂದ ಪ್ರಪಂಚದ ಕಣ್ಣಿನಿಂದಲ್ಲ. ತಾಯಿಯ ಕಣ್ಣಿಗೆ ಮಗ ಹೇಗಿದ್ದರೂ ಚೆನ್ನೇ! ಆದರೆ ಪ್ರಪಂಚದ ಕಣ್ಣಿಗೆ ನಾನು ಬೀದಿಯಲ್ಲಿ ಹೋಗುತ್ತಿದ್ದರೆ ನನ್ನನ್ನು ನೋಡಿ ನಗುವವರೆಷ್ಟು ಮಂದಿ ಗೊತ್ತೇ? ಎದೆ ಕಿವಿಚಿ ಹೋಗುತ್ತದಮ್ಮ, ಅವರ ನಗು ಕೇಳಿ, ಮಕ್ಕಳು ದೂರದಿಂದ ನನ್ನನ್ನು ಕಂಡೇ ಕಿರಿಚಿ ಓಡಿಹೋಗುತ್ತವೆ. ಹೂವನ್ನು ಮುಟ್ಟಿದರೆ ಹೂವು ಕೂಡ ಸೆಟೆದುಕೊಂಡು ಮುಳ್ಳಾಗುವುದೋ ಏನೋ! ಅಮ್ಮ-”
“ಇಲ್ಲ, ಮಗು, ನೀನು ಹಾಗೆಲ್ಲ ಅನ್ನಬಾರದು. ನಿನಗೆ ಇಷ್ಟಾಗಿ ಏನಾಗಿರುವುದು-?”
“ಅಮ್ಮ, ಈ ಸುಟ್ಟ ಮುಖವನ್ನು ಹೇಗೆ ತೋರಿಸಲಮ್ಮ? ಯಾರಿಗೂ ತೋರಿಸಲು ನಾಚಿಕೆಯಾಗುವುದಮ್ಮ, ನೀನು ಹೆತ್ತತಾಯಿ. ನಿನ್ನ ಮುಂದೆ ಬರಲೂ ಒಂದೊಂದು ಬಾರಿ ಮನಸ್ಸು ಅಳುಕುತ್ತದೆ. ನಾನೇಕೆ ಹೀಗೆ ಹುಟ್ಟಿದೆನೋ ಎನಿಸುತ್ತದೆ.”
“ಹಾಗನ್ನ ಬೇಡ. ಮಗು-”
“ಅಮ್ಮ, ನಾನು ಸತ್ತರೇ ವಾಸಿಯಲ್ಲವೇನಮ್ಮ?”
“ಛೇ! ಕೆಟ್ಟ ಮಾತಾಡಬೇಡ”
ತಾಯಿ ಕಣ್ಣೊರೆಸಿಕೊಂಡರು. ಎದುರಿಗೆ ಮಗ, ವಿಖ್ಯಾತ ಕಲಾವಿದ. ಚಿಕ್ಕತನದಲ್ಲಿಯೇ ಚಿತ್ರ ತೆಗೆಯುವುದರಲ್ಲಿ ಹೆಸರು ಪಡೆದವನು. ಎಲ್ಲರ ಬಾಯಲ್ಲೂ ಅವನ ಹೆಸರೇ, ಸಾವಿರ ಮಂದಿ ಅವನಿಂದ ಚಿತ್ರ ಬರೆಯಿಸಿಕೊಳ್ಳಲು ಇಚ್ಛೆಪಡುವರು. ಆದರೆ ಅವನಿಗೆ ಮನಸ್ಸಿನಲ್ಲಿ ಶಾಂತಿಯಿಲ್ಲ. ಹೃದಯದಲ್ಲಿ ಬೆಂಕಿ-ಜ್ವಾಲಾಮುಖಿ ಹುದುಗಿದೆ. ಇಷ್ಟೆಲ್ಲ ಕಾರಣ, ಅವನ ಮುಖ, ಆಳೇನೂ ಸಣ್ಣವನಲ್ಲ. ಹೃಷ್ಟ ಪುಷ್ಟವಾಗಿಯೇ ಬೆಳೆದವನು. ಕಟ್ಟು ಮಸ್ತಾದ ದೇಹ, ಹಿಂಭಾಗದಿಂದ ನೋಡಿದರೆ ಸುಂದರನಾಗಿಯೇ ತೋರುವನು. ಒಂದೊಂದು ಅಂಗವೂ ಅಚ್ಚಿಗೆ ಹಾಕಿ, ಮಾಡಿ, ಕೂಡಿಸಿದಂತಿತ್ತು. ಸಮರೂಪ. ಆದರೆ ಮುಖ ಮಾತ್ರ ವಿಕಾರ, ಅಗಲವಾಗಿ ಕಾಂತಿಯುತವಾದ ಕಣ್ಣುಗಳು ತೀಕ್ಷ್ಣತೆಯಿಂದ ಹೊಳೆಯುತಿದ್ದುವು. ಆದರೆ ಹಣೆಯಮೇಲೆ-ಕೆನ್ನೆಯಮೇಲೆ, ನೋಡಲಾಗದಂತೆ ವಿಕಾರ ಗೆರೆಗಳು, ಸುಕ್ಕು ಸುಕ್ಕು, ಚರ್ಮವನ್ನು ಕಿತ್ತು ದಿಣ್ಣೆ ಕಟ್ಟಿ ನಡುವೆ ಕೆತ್ತಿದಂತೆ, ಉತ್ತಂತೆ, ತೋರುತ್ತಿತ್ತು. ಈ ಮುಖದ ಬಗೆಯಿಂದಲೇ ಅವನಿಗೆ ಚಿಕ್ಕಂದಿನಿಂದಲೂ ದುಃಖ, ಎಳತನದಿಂದಲೂ ಸರಿ ಯವರಿಂದ ಬೈಗಳು, ಕುಹಕ, ವ್ಯಂಗ್ಯ ಹಾಸ್ಯ. ಅದು ಇಂದಿನವರೆಗೂ ನಿಂತಿರಲಿಲ್ಲ. ಒಮ್ಮೆಯೇನಾದರೂ ಅಪ್ಪಿ ತಪ್ಪಿ ಹೊರಗೆ ಹೊರಟನೆಂದರೆ ಸರಿ, ಎಲ್ಲರ ಕಣ್ಣೂ ಅವನ ಮೇಲೆಯೇ! ಎಲ್ಲರೂ ತನ್ನನ್ನೇ ನೋಡುತ್ತಿರುವರು. ತನ್ನನ್ನು ತಿರಸ್ಕಾರದಿಂದ ನೋಡುವರೆನ್ನುವ ವಿಚಾರ ಅವನ ಸೂಕ್ಷ್ಮ ಹೃದಯಕ್ಕೆ ನಾಟಿತ್ತು. ಅದರಿಂದ ಮುಳ್ಳು ಹತ್ತಿದ ಕೈ ಹಿಂದಕ್ಕೆಳೆದುಕೊಳ್ಳುವಂತೆ ಮತ್ತೆ ಮನೆಗೆ ಓಡಿಬರುತ್ತಿದ್ದ. ಮತ್ತೆ ತನ್ನ ಕೋಣೆ ಯಾಯಿತು. ಚಿತ್ರದ ರಚನೆಯಾಯಿತು. ಯಾರನ್ನೂ ಕರೆಯುತ್ತಿರಲಿಲ್ಲ ಯಾರ ಮನೆಗೂ ಹೋಗುತ್ತಿರಲಿಲ್ಲ. ದೂರದ ಹಳೆಯ ಸ್ನೇಹಿತನೊಬ್ಬ ಮನೆಗೆ ಬಂದು ಚಿತ್ರಗಳನ್ನು ತೆಗೆದುಕೊಂಡು ಹೋಗಿ ಮಾರುತ್ತಿದ್ದ. ಬಂದ ಹಣದಲ್ಲಿ ಜೀವನ ಹೇಗೋ ಹಾಗೆ ಸಾಗುತ್ತಿತ್ತು. ಅವನಿಗೆ ಮನಸ್ಸು ಸಮಾಧಾನವಿಲ್ಲ. ತಾಯಿಗೂ ಸಮಾಧಾನವಿಲ್ಲ. ಅವನಿಗೆ ತನ್ನ ವಿರೂಪದಿಂದ ಕುಗ್ಗಿದ ಹೃದಯ. ತಾಯಿಗೆ ಅವನ ನೋವಿನಿಂದಾದ ನೋವು. ಜತೆಗೆ ಅವನನ್ನು ಸುಖಗೊಳಿಸಲು ಸೊಸೆ ತರುವ ಆಸೆಯ ಹೃದಯ!
“ಹಾಗನ್ನ ಬಾರದು, ಮಗು. ಆಗಲೇ ಅವರಿಗೆ ಹೇಳಿ ಕಳಿಸಿದೆ. ನಾಳೆ ಬರುವರು.”
“ಯಾರು? ಅಯ್ಯೋ! ಬೇಡಮ್ಮ, ಅವರೂ ನನ್ನ ಮುಖ ಕಂಡು ಉಗಿಯಲಿ ಎಂದೇನಮ್ಮ?”
“ಇಲ್ಲ, ಮಗು, ಅವರು ಅಂತಹವರಲ್ಲ. ಹುಡುಗಿಯನ್ನು ನೀನು ನೋಡು, ಒಪ್ಪಿದರೆ-”
“ಅಮ್ಮ-ನಾನು-ಹುಡುಗಿಯ ಮುಂದೆ ಬಂದು-ಇಲ್ಲ! ಇಲ್ಲ! ಸಾಧ್ಯವಿಲ್ಲ!”
“ಬೇಡ, ಮಗು. ನೀನು ನಿನ್ನ ಕೋಣೆಯೊಳಗಿಂದಲೇ ನೋಡು.”
“ಕಳ್ಳತನದಲ್ಲಿ ನೋಡುವುದು ಬೇಡಮ್ಮ. ಇಷ್ಟಾಗಿ ಹುಡುಗಿಯನ್ನು ನಾನು ಒಪ್ಪಿದರೂ ಹುಡುಗಿಗೆ ನಾನೊಪ್ಪಿಗೆಯಾಗಬೇಡವೇ? ನೀನೇ ಹೇಳಮ್ಮ -ಈ ಮುಖ ಕಂಡು ಯಾವ ಹುಡುಗಿಯಾದರೂ ಒಪ್ಪುವಳೇ? ನಿಜ. ನನಗೇನೋ ಬೇಕಾಗಿದೆ. ನನ್ನ ಹೃದಯಕ್ಕೆ ಶಾಂತಿ ನೀಡುವ ಹೃದಯ ಬೇಕಾಗಿದೆ. ಸುಖದ ಅಮೃತದ ಹೊಳೆಯನ್ನು ನನ್ನ ಜೀವನದಲ್ಲಿ ಹರಿಸುವವರೂ ಬೇಕಾಗಿದೆ. ನನ್ನ ಕತ್ತಲೆಯಲ್ಲಿ ಬೆಳಕು ನೀಡುವವರೂ ಬೇಕಾಗಿದೆ. ಆದರೆ ಅಮೃತ ಕೊಟ್ಟು ವಿಷ ಕುಡಿಯುವವರು ಯಾರಿದಾರಮ್ಮ?”
ಮೋಹನ ತಾಯಿಯಿಂದ ಆ ಕಡೆಗೆ ಸರಿದು ನಿಂತ ತಾನೇ ಚಿತ್ರಿಸಿದ ಪರಶಿವನ ಮೂರ್ತಿ, ಉಳಿದೆಲ್ಲ ಚಿತ್ರಗಳ ಶಿವನಲ್ಲ ಆ ಚಿತ್ರದ ಶಿವ. ಮುಖದಲ್ಲಿ ಭಾವನೆಯೇ ಕಾಣದ ಶಿವನಲ್ಲ. ಬರಿಯ ಜೂಟಾಜೂಟ ಧಾರಿಯಲ್ಲ. ಇದು ಪರಮಮಾನವ ಶಿವನ ಮೂರ್ತಿ. ಮುಖದಲ್ಲಿ ತ್ಯಾಗದ ಮುಗುಳು ನಗೆ, ಕಣ್ಣಿನಲ್ಲಿ ಪ್ರೇಮದ ಕಾಂತಿ, ಬಲಗೈಯಲ್ಲಿ ವಿಷ ಹಾಲಾಹಲ, ಆ ಕೈ ಬಾಯಿಯ ಕಡೆಗೆ ಕೊಂಚ ಓಲಿದೆ. ಎಡಗೈಯಲ್ಲಿ ಅಮೃತದ ಬಟ್ಟಲು, ಆ ಕೈ ಮುಂದೆ ನೀಡಿದೆ ದಾನ ಕೊಡುವಂತೆ ಸಾವಿಗೆ ಸಿದ್ಧನಾದ ಪರಮತ್ಯಾಗಿ ಶಿವ ಸಂತೋಷದಿಂದ ಹಾಲಾಹಲ ಧರಿಸಲು ಹೊರಟಿದಾನೆ.
“ಹಾಲಾಹಲ ಕುಡಿಯುವ ಸಾಹಸ, ತ್ಯಾಗ, ಆ ಪರಶಿವನೊಬ್ಬನಿಗೆ ಮಾತ್ರ!” ಎಂದುಕೊಂಡ ಮೋಹನ.
“ಹಾಗನ್ನ ಬೇಡ ಮಗು. ಹೆಂಗಸಿಗೆ ರೂಪ ಬೇಕಿಲ್ಲ. ಗುಣ ಬೇಕು. ಒಪ್ಪಬೇಕಾದುದು ನಿನ್ನ ಮುಖವನ್ನಲ್ಲ. ನಿನ್ನ ಕಲೆಯನ್ನು”
“ಕಲೆ! ಕಲೆ ಯಾರಿಗೆ ಬೇಕು? ಹೆಣ್ಣಿಗೆ ಕಲೆಯಲ್ಲಿ ಆಸಕ್ತಿಯಿಲ್ಲ; ಕಲಾವಿದನಲ್ಲಿ, ತಾನೊಬ್ಬ ಕಲಾವಿದನ ಹೆಂಡತಿಯಾಗುವೆನೆನ್ನುವ ಹೆಮ್ಮೆ ಇರುವುದೇ ಹೊರತು, ಆ ಕಲೆಯ ಹಿರಿಮೆಯಲ್ಲಿ ವಿಶ್ವಾಸವಿರುವುದಿಲ್ಲ. ರೂಪ ಯಾರಿಗೆ ತಾನೇ ಬೇಡ ಹೇಳಮ್ಮ?-ನೀನೂ ರೂಪವತಿಯಾದ ಸೊಸೆಯನ್ನೇ ಬಯಸುವುದಿಲ್ಲವೇ?”
“ಹೂಂ -”
“ಆಗೆ ರೂಪವತಿಯಾದ ಸೊಸೆಯ ಬಯಕೆ. ಹೆಣ್ಣಿಗೆ ರೂಪವಂತ ಗಂಡನ ಬಯಕೆ. ಗಂಡಿಗೆ ರೂಪವತಿಯಾದ ಹೆಣ್ಣಿನ ಬಯಕೆ. ಅದು ಸಹಜ. ನನ್ನನ್ನು ಒಪ್ಪುವವರು ಯಾರಮ್ಮ?”
ಮೋಹನನ ಕಣ್ಣಿನ ತುಂಬ ನೀರು ತುಂಬಿಕೊಂಡಿತು. ಮಾತು ಕಂಠದಲ್ಲೇ ಮುಕ್ಕಾಯಿತು. ಹೃದಯದ ನೂರು ಆಸೆ ಹೊಗೆಯಾಡುತಿದ್ದುದು ಎಚ್ಚೆತ್ತು ಉರಿಯುತ್ತಿತ್ತು. ಅವನಿಗೇನೂ ಆಸೆಯಿಲ್ಲದಿಲ್ಲ. ಅವನು ಕಲಾವಿದ, ಸೌಂದರ್ಯ ಪ್ರೇಮಿ, ಸೌಂದರ್ಯವನ್ನು ಎಲ್ಲಿ ಕಂಡರೂ ಸವಿಯುವ ರಸಿಕ ಮನಸ್ಸಿನವನು. ಆದರೆ ತನ್ನ ವಿಕಾರತೆಯಿಂದ ಅವನ ಮನಸ್ಸು ಕುಗ್ಗಿ ಹೋಗಿತ್ತು. ಹೃದಯ ಬಹಳ ಸೂಕ್ಷ್ಮವಾಗಿ ಹೋಗಿತ್ತು. ಆಸೆಗಳು, ಆಕಾಂಕ್ಷೆಗಳನ್ನೆಲ್ಲಾ ಹೃದಯದಲ್ಲಿ ಗೋರಿಮಾಡಿಡಲು ಯತ್ನಿಸಿದ್ದ. ಆದರೆ ಅಷ್ಟು ಸುಲಭವಾಗಿ ಅದು ಸಾಧ್ಯವಾಗುವಂತಿದ್ದರೆ ಇನ್ನೇನು?
ಈ ಹಿಂದೆ ಒಂದು ಬಾರಿ ಅವನ ಕಾಲೇಜಿನಲ್ಲಿ ಓದುತ್ತಿದ್ದಾಗ ಅವನು ಚರಿತ್ರೆಯ ಸಂಘಕ್ಕೆ ಒಂದು ತೈಲಚಿತ್ರ ಬರೆದು ಕೊಟ್ಟಿದ್ದ. ಸಂಘದ ಉತ್ಸವದಂದು ಚಿತ್ರದ ಅನಾವರಣೋತ್ಸವವಿತ್ತು, ಅವನು ಚಿತ್ರ ಬರೆಯುವನೆಂದು ಯಾರಿಗೂ ಗೊತ್ತಿರಲಿಲ್ಲ. ಕಾಲೇಜಿನ ಬಳಿ ಕಾಲಿಟ್ಟರೆ ಎಲ್ಲರೂ ಅವನ ಕಡೆಗೆ ನೋಡಿ ಕಣ್ಣು ಹೊರಳಿಸುವವರೇ ಇಲ್ಲ ನಗುವವರೇ! ಅವನ ಮನಸ್ಸಿನ ಕುದಿ ಯಾರಿಗೂ ತಿಳಿಯದು. ಆ ದಿನ ಸಂಜೆ ಚಿತ್ರ ಅನಾವರಣವಾದಮೇಲೆ ಚಿತ್ರ ಬರೆದವರು ಇವರೇ ಎಂದು ಅಧ್ಯಕ್ಷರು ಅವನನ್ನು ವೇದಿಕೆಯ ಮೇಲಕ್ಕೆ ಕೂಗಿದರು. ಆಗ ಕೆಳಗಿನಿಂದ ತೀವ್ರ ಬೆಳಕು ಅವನ ಮೇಲೆ ಬೀಳುತ್ತಿರುವಾಗ, ವೇದಿಕೆಯ ಮೇಲೆ ಬಂದು ನಿಂತಿದ್ದ. ಹೊಗಳಿಕೆ, ಮೆಚ್ಚುಗೆ ಪಡೆದ ಹಿಗ್ಗಿನಲ್ಲಿ ಒಂದು ಅರೆನಿಮಿಷ ತನ್ನನ್ನು ತಾನೇ ಮರೆತ. ಬಣ್ಣದ ಪ್ರಪಂಚದಲ್ಲಿ ತೇಲಿದ. ಆದರೆ ಮರುನಿಮಿಷವೇ ನಗೆಯೊಂದು ಕಿವಿ ಹೊಕ್ಕು ಎದೆ ಕುದಿತ ಹೆಚ್ಚಿತು. ನನ್ನ ವಿಕಾರತೆಯನ್ನು ನೋಡಲು ಈ ವೇದಿಕೆ, ಈ ಬೆಳಕು, ಎಂದು ಹೃದಯ ಅಂದಿತು. ಮನಸ್ಸು ಹೂಂಗುಟ್ಟಿತು. ಸರಿ, ಮೊದಲಿನ ದ್ವೇಷ ಉಕ್ಕಿತು. ಅಲ್ಲಿಂದ ಒಂದೇ ಹಾರಿಗೆ ಹಾರಿದ ಪಕ್ಕದಲ್ಲಿದ್ದ ಕೋಣೆಗೆ-ಅಲ್ಲಿಂದ ಮನೆಗೆ ಓಡಿದ. ಆದರೆ ವೇದಿಕೆ ಬಿಡುವ ಮೊದಲು ಒಂದು ಸುಂದರ ಮುಖ-ಹೆಣ್ಣಿನ ಮುಖ ಕಂಡಿದ್ದ. ಮುಂದಿನಸಾಲಿ ನಲ್ಲಿ ಕುಳಿತಿದ್ದ ಹೆಣ್ಣು ಮಕ್ಕಳಲ್ಲೊಬ್ಬಳ ಮುಖ ಮುದ್ದಾಗಿತ್ತು. ಸುಂದರವಾಗಿತ್ತು. ಅವನು ಬಣ್ಣದ ಜಗತ್ತಿನಲ್ಲಿ ಯಾವುದನ್ನು ಆರಾಧಿಸುತಿದ್ದನೋ ಆ ಮೂರ್ತಿಗೆ ಜೀವಕಳೆ ಕೊಟ್ಟಂತಿದ್ದಳು ಆಕೆ. ಆ ಹುಡುಗಿ ಯಾರೆಂಬುದು ಅವನಿಗೆ ತಿಳಿಯದು. ಆಕೆಯ ಹೆಸರೇನೆಂಬುದೂ ತಿಳಿಯದು. ತಿಳಿದುದಿಷ್ಟೇ-ಅವಳ ಮುಖದ ಸೌಂದರ್ಯ, ಆ ಸೌಂದರ್ಯ ಅವನ ಮನಸ್ಸನ್ನು ಆಕ್ರಮಿಸಿಬಿಟ್ಟಿತು. ಏನೇ ಮಾಡಿದರೂ ಆ ಸೌಂದರ್ಯವನ್ನು, ಆ ಮುಖವನ್ನು ಮರೆಯಲಾಗಲಿಲ್ಲ. ಹೂವಿನ ಸುಗಂಧದ ನೆನಪಿನಂತೆ ಒಂದೇ ಸಮನಾಗಿ ಅವನ ಮನಸ್ಸಿನ ಹಿನ್ನೆಲೆಯಲ್ಲಿ ಹಿಂಸೆ ಪಡಿಸುತ್ತಿತ್ತು. ಕೊನೆಗೊಮ್ಮೆ ಆ ಮೂಖದ ಚಿತ್ರ ಬರೆದ-ಅದೂ ಹದಿನೈದು ದಿನಗಳ ತಾಕಲಾಟದ ಅನಂತರ, ಭಂಗಾರದ ನೂಲಿನಿಂದ ನೇದ ಒಂದು ಜೇಡನ ಬಲೆ, ಜೇಡನ ಬಲೆಯ ಭಂಗಾರದ ಎಳೆಗಳ ಮಧ್ಯದಲ್ಲಿ, ನಡುಮಧ್ಯದಲ್ಲಿ, ಆಕೆಯ ಮುಖ, ಕೆಂಪು ನೀಲಿಮೆಗಳು, ಬೆಳ್ಳಿ ಬಿಳುಪುಗಳಿಂದ ರಚಿಸಿದ ಆ ಮುಖ ಭಂಗಾರದ ಹಿನ್ನೆಲೆಗೆ ಹೊಳೆಯುತ್ತಿತ್ತು. ಆದರೆ ಆ ಮುಖದಲ್ಲಿ ಶಾಂತಿಯಿರಲಿಲ್ಲ. ಕಾತರವೂ ಇರಲಿಲ್ಲ. ಗೆಲುವೂ ಇಲ್ಲ. ಮುಖದಲ್ಲಿ ಸೌಂದರ್ಯವೇ ಇರಲಿಲ್ಲ. ರೂಪವೆಲ್ಲಾ ಹೊರಗಿನ ಆಕರ್ಷಕ ರೂಪ. ಆದರೆ ಏನೋ ಕೊರತೆ ಚಿತ್ರದಲ್ಲಿ, ಅದು ಅವನ ಮನಸ್ಸಿನ ಕೊರತೆ, ಆ ಸೌಂದರ್ಯ ತನಗೆ ಬೇಕೆನ್ನುವ ಆಸೆ. ಆದರೆ ಅದು ಅಸಾಧ್ಯವೆನ್ನುವ ನಿರಾಸೆ. ಹೀಗಾಗಿ ಸೌಂದರ್ಯದ ಒಳ ಆತ್ಮ ಕೈ ಮೀರಿ ಹೋಗಿತ್ತು. ಅಂದಿನಿಂದಲೂ ಆ ಮುಖಕ್ಕಾಗಿ, ಆ ಸೌಂದರ್ಯಕ್ಕಾಗಿ ಕಾತರಿಸುತ್ತಿದ್ದ. ಬಯಸುತ್ತಿದ್ದ. ಆದರೆ, ಅವನನ್ನು ಅವನ ಸುಟ್ಟ ಮೋರೆಯನ್ನು ಕಂಡು ಮೆಚ್ಚುವವರಾದರೂ ಯಾರು? ಈ ಕೊರತೆಯಿಂದ ಅವನ ಚಿತ್ರಕ್ಕೂ ಒಂದು ಕೊರತೆ ಬಂದಿತ್ತು.
ಆ ಚಿತ್ರದ ನೆನಪಾಗಿ ಮೋಹನ ತಾಯಿ ನಿಂತಿದ್ದ ಕಡೆಗೆ ತಿರುಗಿದ. ಅಲ್ಲಿಯೇ ಎದುರಿಗೇ ಆ ಚಿತ್ರ. ಇನ್ನೂ ಮೊದಲಿನಂತೆಯೇ ಉಳಿದಿತ್ತು. ಆ ಚಿತ್ರದ ಕುಂದು ಕಲಾವಿದನ ಕಣ್ಣಿಗೆ ಚೆನ್ನಾಗಿ ಕಾಣುತಿತ್ತು. ಮಾಂಸದ ಮುದ್ದೆ ಯೊಂದರ ಮುಖ ಇದು. ಇದರಲ್ಲಿ ಜೀವಕಳೆಯಿಲ್ಲ ಎಂದು ಅವನ ಹೃದಯ ಹೇಳಿತು. ಹೌದು, ಕಲಾವಿದನಲ್ಲಿ ಕೊರತೆ ಯಿರಬೇಕಾದರೆ ಕಲೆ ತಾನೆ ಹೇಗೆ ಪೂರ್ಣವಾದೀತು ಎಂದುಕೊಂಡ ಮತ್ತೆ ಆ ಮಾತು-ಆ ದಿನದ ಮಾತು ನೆನಪಾಯಿತು. ಚಿತ್ರ ಬರೆಯತಿರುವಾಗ ಒಂದು ದಿನ ಕಾಲೇಜಿನ ಕಡೆಗೆ ಹೋಗುತ್ತಿದ್ದ. ಅಂದು ಎಂದಿನಂತೆ ತಲೆತಗ್ಗಿಸಿ, ಕರವಸ್ತ್ರದಿಂದ ಮುಖ ಮುಚ್ಚಿಕೊಂಡು ತಲೆ ತಗ್ಗಿಸಿ ಕೊಂಡು ಹೋಗುತ್ತಿದ್ದಾಗ ಹಲವಾರು ಕಂಠಗಳು ಕೇಳಿದುವು. ಅವನ ಹೃದಯ ಅಳುಕು ಹೃದಯ, ತನ್ನ ವಿಚಾರವಾಗಿ ಏನಾದರೂ ಮಾತಾಡಿಕೊಳ್ಳುತ್ತಿರುವರೋ ಏನೋ ಎಂದು ಸಂದೇಹ, ಏನೆನ್ನುವರೋ ಎಂಬ ಕಾತರ. ಗೊತ್ತೇ ಇದೆ, ನನ್ನನ್ನು ತಿರಸ್ಕರಿಸುವರೆನ್ನುವ ಕಳವಳ ಇಲ್ಲ, ಹಾಗಿರಲಾರದು, ಅವರು ಬಯ್ಯಲಾರರು, ಎನ್ನುವ ಭ್ರಮೆ; ಆಸೆ ಅದರಲ್ಲಿ ಅವನಿಗೇ ಸಾಕಷ್ಟು ನಂಬಿಕೆಯಿರಲಿಲ್ಲ. ಹೀಗಾಗಿ ಮನಸ್ಸು ಕುದಿಯುತ್ತಿತ್ತು. ಮೈಯೆಲ್ಲಾ ಕಿವಿಯಾಗಿ ಕೇಳಿದ ಮಾತು ಅರ್ಧ ಅರ್ಧ ಕೇಳಿಸಿತು.
“ಅಯ್ಯೋ-ಹೆಸರು ಹೇಗಿದ್ದರೇನೆ?”
“ಸರಿ, ಸರಿ, ಕಣಿಗಲೆಗೆ ಗುಲಾಬಿ ಎಂದು ಹೆಸರಿಟ್ಟರಾಯಿತೇನೆ?”
ಮೋಹನನ ಎದೆ ಕಿವಿಚಿದಂತಾಯಿತು. ಗುಲಾಬಿ-ಕಣಿಗಲೆ-ತಾನು!
“ಮುಳ್ಳುಮುಳ್ಳು ಮುಖದ ಆ ಮೆಳ್ಳೆಗಣ್ಣಿ ಇಲ್ಲವೇ-ಅವಳ ಹೆಸರು ಮಾನಾಕ್ಷಿ!”
“ಅದಕ್ಕೇನು ಮಾಡಲಾಗುತ್ತೆ, ಕೊಕ್ಕರೆ ಕೊರಳಿನವರೂ ಹಂಸ ಆಗುವುದಿಲ್ಲವೇ?”
ಮೋಹನನ ಎದೆ ಹೊಡೆದುಕೊಳ್ಳುತ್ತಿತ್ತು. ಮನಸ್ಸು ವಿಹ್ವಲವಾಯಿತು. ಸಾಗರದ ಮಹಾ ಅಲೆಗಳ ನಡುವೆ ಸಿಕ್ಕಿಕೊಂಡು ಹೆಣಗಾಡುವ ಮರದ ತುಣುಕಿನಂತೆ ಒದ್ದಾಡುತ್ತಿತ್ತು. ತನ್ನ ರೂಪ! ತನ್ನ ಹೆಸರು! ಎಂತಹ ಕೂಡಿಕೆ! ಎರಡು ಧ್ರುವಗಳ ಕೂಡಿಕೆ ಅದು! ಆ ಹೆಸರನ್ನು ಯಾರಿಟ್ಟರೋ ತನ್ನ ವಿಕಾರಾಕೃತಿಗೆ ಎಂದು ಮರಮರ ಮಿಡುಕಿದ. ಕಣ್ಣಿನಲ್ಲಿ ನೀರು ಬಂತು. ಉಕ್ಕಿ ಹರಿಯಿತು. ಅಂದು ಮತ್ತೆ ಕಾಲೇಜಿಗೆ ಹೋಗುವ ಮನಸ್ಸಾಗಲಿಲ್ಲ. ನೇರವಾಗಿ ಮನೆಗೆ ಹಿಂತಿರುಗಿದ. ಮನೆಗೆ ಎಂದು ಒಂದೇ ಸಮನೆ ಮಿಸುಕಾಡಿದ, ಪರೆ ಬಿಡುವ ಹಾವಿನಂತೆ ಒದ್ದಾಡಿದ. ಅಯ್ಯೋ ಹಾಳು ಮುಖ! ಹಾಳು ಹೆಸರು! ನಾನೇಕೆ ಹುಟ್ಟಿದೆನೋ ಎಂದು ತನ್ನನ್ನು ತಾನೇ ಹಳಿದುಕೊಂಡ. ತನಗೆ ಜೀವ ಕೊಟ್ಟ ತಾಯಿಯನ್ನು ಶಪಿಸಿದ. ಆತ್ಮಹತ್ಯೆ ಮಾಡಿಕೊಂಡುಬಿಡಲೇ ಎಂದು ಎದ್ದು ನಿಂತ. ಎದುರಿಗೇ ಕಲೆಯ ಅಧಿದೇವತೆ ತಾನೇ ಚಿತ್ರಿಸಿದ ಮಹಾಶಕ್ತಿ-ಸರಸ್ವತಿ ಶಾರದೆ. ಅವನು ಚಿತ್ರಿಸಿದ ಶಾರದೆ ಎಂದಿನ ವೀಣಾಪಾಣಿ ಶಾರದೆಯಲ್ಲ. ಬಿಳಿಯ ದುಕೂಲದ ಚಂದ್ರಮುಖಿಯಲ್ಲ. ನೆಳಲು ಬೆಳಕಿನ ಕಲೆಯ ದೇವತೆ ಶಾರದೆ. ಎರಡು ಪಕ್ಕಕ್ಕೂ ಮೋಡಗಳು. ಬಿಳಿಯದೊಂದು, ಕರಿಯ ದೊಂದು. ಅವುಗಳ ತೆಳು ಪರದೆಯೊಳಗಿನಿಂದ ಒಳಗಿನಮನೋಮೂರ್ತಿ ಕಾಣುತ್ತಿತ್ತು, ಮುಖದ ಒಂದು ಪಕ್ಕಕ್ಕೆ ಹೆಚ್ಚು ನೆಳಲು ಬಿದ್ದು ಕೊಂಚ ಕಪ್ಪುಛಾಯೆ ಮೂಡಿತ್ತು. ಅದರಿಂದ ಕಲೆಯ ಅಧಿದೇವತೆಯ ಕಣ್ಣಿನ ಆಲಿ ಹೊಳೆಯುತ್ತಿತ್ತು. ಆದರೆ ಕಣ್ಣೀರಿನ ಮೂಲಕ ಮತ್ತೊಂದು ಪಕ್ಕ ಪೂರ್ಣ ಬೆಳಕಿನಲ್ಲಿ ಶುಭ್ರವಾಗಿತ್ತು. ಕಣ್ಣು ನಗೆಯ ಕಾಂತಿ ಸೂಸುತಿತ್ತು. ಶಾರದೆಯ ಎರಡು ಕೈಗಳಲ್ಲಿ ಒಂದರಲ್ಲಿ ಒಂದು ಅರಳುತ್ತಿರುವ ಹೂಮೊಗ್ಗು, ಮತ್ತೊಂದರಲ್ಲಿ ಮುಳ್ಳಿನ ಮಾಲೆ! ತನ್ನ ಕಲಾದೇವಿಯ ಚಿತ್ರ ಕಂಡು, ಎದ್ದು ನಿಂತವನು ಮತ್ತೆ ಕುಳಿತ. ತಲೆ ತಗ್ಗಿಸಿದ ತಾಯೆ! ನನಗೇಕೆ ಈ ಕಲೆಯನ್ನು ಕೊಟ್ಟೆ? ಸೌಂದರ್ಯದ ಸವಿಯನ್ನೇಕೆ ತೋರಿಸಿದೆ. ನನ್ನನ್ನು ಸಾಮಾನ್ಯನಾಗಿಸಬಾರದಾಗಿತ್ತೇ? ಕಲ್ಪನೆಯ ಬಿಸಿ ಮುಳ್ಳಿನ ಮಾಲೆಯೇ ನನ್ನ ಹಣೆಗೆ! ಹೂವಿಲ್ಲವೇ ? ಎಂದೆಂದಿಗೂ ಹೀಗೆಯೇ ನಾನು ದುಃಖ ಅನುಭವಿಸಬೇಕೇ ? ಸೌಂದರ್ಯ ಕಾಣುವ ಬಯಕೆ ಕೊಟ್ಟೆ, ಶಕ್ತಿ ಕೊಟ್ಟೆ. ಆದರೆ ಅದನ್ನು ಪಡೆಯುವ ಶಕ್ತಿ ಕೊಡಲಿಲ್ಲ. ಈ ಕಲೆ, ಈ ಶಕ್ತಿ, ಈ ಯಶಸ್ಸು, ಈ ಕಲ್ಪನೆ ಯಾರಿಗೆ ಬೇಕು ! ಮನಸ್ಸಿಗೆ ಶಾಂತಿ ಕೊಡಲಾರೆಯಾ? ಎಂದು ಮೂಕ ವೇದನೆಯಿಂದ ಶಾರದೆಯ ಚಿತ್ರದ ಮುಂದೆ ಬೇಡಿಕೊಂಡ. ಪಕ್ಕದಲ್ಲೇ ವಸಂತಋತುವಿನ ಆಗಮನದ ಚಿತ್ರ ಮೂಕರಿಗೂ ಬಾಯಿ ಬರುವಂತೆ ಹೂಬಿರಿಯುವ ಮತ್ತು ಋತು ವಸಂತದ ಚಿತ್ರ. ಬಳುಕುವ ಬಿಳಿ ಮೋಡದ ಮೇಲೆ ನಾಚಿಕೆಯ ಕೆಂಪು ರಂಗು ಚೆಲ್ಲುವ ವಸಂತರಾಜನ ಆಗಮನ ಚಿತ್ರ. ಅದನ್ನು ಹರಿದು ಚೂರು ಚೂರು ಮಾಡಿಬಿಡಲೇ ಎನುವಷ್ಟು ಕೋಪ ಬಂದಿತು ಮೋಹನನಿಗೆ ಆದರೆ ಅದೇಕೋ ಏನೋ ಆ ದಿನ ಕೈ ತಡೆದಿತ್ತು, ತಲೆ ಹಾಗೆಯೇ ಎಷ್ಟೋ ಹೊತ್ತು ಚಿತ್ರದ ಮುಂದೆ ಬಾಗಿತ್ತು. ಅಂದು ರಾತ್ರಿ ಬಹಳ ಹೊತ್ತಿನವರೆಗೂ ಕುಂಚ ಹಿಡಿದು ಯಾವುದೋ ಚಿತ್ರ ಬಿಡಿಸಿದ್ದ. ಅದು ತನ್ನ ಚಿತ್ರ-ತನ್ನೆಲ್ಲ, ಆಸೆ ಆಕಾಂಕ್ಷೆಗಳನ್ನು ಹುದುಗಿಸಿದ್ದ ಮುಖದ ಚಿತ್ರ! ಅದನ್ನು ಚಿತ್ರಿಸುವಷ್ಟು ದಿನ ಮನಸ್ಸಿನ ನೋವಿನಲ್ಲೂ ಒಂದು ಸುಖ. ಅದನ್ನು ಮುಗಿಸಿದ ಮೇಲಿನ ಸಮಾಧಾನದಲ್ಲೂ ಒಂದು ಅಶಾಂತಿ!
ಇದೆಲ್ಲಾ ನೆನಪಾಯಿತು ಮೋಹನನಿಗೆ. ಕಣ್ಣೆವೆ ಮಳೆಯಿಂದ ತೊಯ್ದ ಹೂವಿನೆಸಳಿನಂತೆ ತೇವವಾಗಿತ್ತು, ಮುಳ್ಳಿನ ತುದಿಯ ಮಂಜಿನ ಹನಿಯಂತೆ. ಕೆನ್ನೆಯ ಚರ್ಮದ ದಿಣ್ಣೆಯ ಮೇಲೆ ಒಂದು ಹನಿ ನೀರು ನಿಂತು ಕೆಳಗಿಣಕುತ್ತಿತ್ತು.
ತಾಯಿ ಅವನನ್ನು ಅಷ್ಟಕ್ಕೇ ಬಿಡಲಿಲ್ಲ. ಒಂದೇ ಸಮನಾಗಿ ಒತ್ತಾಯಮಾಡಲಾರಂಭಿಸಿದರು.
“ಮೊದಲು ನೀನು ನೋಡು, ನಿನಗೊಪ್ಪಿಗೆಯಾದರೆ ಸರಿ. ಆಮೇಲೆ ಮುಂದಿನ ಮಾತು. ಸುಮ್ಮನೆ ಯಾಕೆ ಒದ್ದಾಡುತ್ತೀ? ನೀನೇ ನನಗೆ ನೂರು ಸಾರಿ ಹೇಳಿಲ್ಲವೇ ? ಒಳಗಿನ ಸೌಂದರ್ಯವೇ ನಿಜವಾದ ಸೌಂದರ್ಯವೆಂದು ಸಾರಿಸಾರಿಗೂ ಹೇಳುತ್ತಿರುವೆಯಲ್ಲಾ!” ಎಂದರು.
ಮೋಹನ ಮಾತಾಡಲಿಲ್ಲ. ಹೃದಯದಲ್ಲಿ ದ್ವೇಷ, ದುಃಖಗಳು ತುಂಬಿ ಬರುತ್ತಿದ್ದುವು.
“ನಾಳೆಯದಿನ ಮಧ್ಯಾಹ್ನ ಮನೆಯಲ್ಲೇ ಇರು. ನಾನು ಏನು ಹೇಳಿದೇನೆ ನೋಡುತ್ತಿರು. ಹುಡುಗಿ ನಿನ್ನ ಕಲೆಯನ್ನು ಮೆಚ್ಚುತ್ತಾಳೆ. ಖಂಡಿತ ನಿನ್ನನ್ನು ಮದುವೆಯಾಗಲು ಒಪ್ಪುತ್ತಾಳೆ”
ತಾಯಿ ಹೊರಟುಹೋದರು. ಮೋಹನ ಹಾಗೆಯೇ ನಿಂತಿದ್ದ. ಮನಸ್ಸಿನಲ್ಲಿನ್ನೂ ಬಿರುಗಾಳಿ. ಹೀಗೋ ಹಾಗೋ ತಿಳಿಯದೆ ಒದ್ದಾಡುತ್ತಿದ್ದ. ನೂರು ಬಗೆಯ ಮಿಣುಕು ಚಿಂತೆಗಳು ಮಿಂಚಿ ಮಾಯವಾಗುತ್ತಿದ್ದುವು. ಒಂದು ನಿಮಿಷ ಆಸೆ ಸುಖದ ಕನಸು. ವಸಂತದ ಮಧುವಿನಲ್ಲಿ ಮಿಂದು ತಾನೂ ತನ್ನ ಗೆಳತಿಯೂ ಬಣ್ಣ ಬಣ್ಣದ ಜಗತ್ತನ್ನು ಕಟ್ಟಿ ಅಲ್ಲಿ ಕುಣಿದಂತೆ ಮೋಡಗಳ ಮರೆಯಿಂದ ಇಣುಕುವ ಬಣ್ಣಕ್ಕೆ ಮಾರುವೋದಂತೆ. ಆದರೆ ಮರುನಿಮಿಷವೇ ಏಕಾಕಿತನದ ಭೀಕರ ದುಸ್ವಪ್ನ! ಮತ್ತೆ ಕುದುರುವ ಆಸೆ. ಹುಡುಗಿಗೆ ನಿಜವಾಗಿಯೂ ಕಲೆಯಲ್ಲಿ ಆಸಕ್ತಿಯಿದ್ದರೆ ಖಂಡಿತವಾಗಿ ತನ್ನ ಕಲೆಗಾಗಿಯಾದರೂ ತನ್ನವಳಾಗುವಳು ಎಂಬುವ ಆಸೆ ನಿರಾಸೆಯ ಮಡಿಲಿನಿಂದ ಇಣುಕುತ್ತಿತ್ತು. ಮನಸ್ಸಿಗೆ ಅದೂ ಒಗ್ಗದು. ಎಲ್ಲಿ, ಹೇಗೆ ಸಾಧ್ಯ ಅದು? ಹೆಣ್ಣು ಅಷ್ಟು ಸುಲಭವಾಗಿ ಹೊರ ರೂಪದ ಆಸೆಯನ್ನು ಬಿಟ್ಟು ಬಿಡುವಳೇ ಎಂದು ಹೃದಯ ಆಸೆಯ ಕನ್ನಡಿಯನ್ನು ಒಡೆಯುತ್ತಿತ್ತು. ಮೋಹನ ಮೆಲ್ಲನೆ ಶಾರದೆಯ ಚಿತ್ರದ ಬಳಿ ಬಂದು ಮತ್ತೆ ತಲೆ ತಗ್ಗಿಸಿದ. ತಾಯಿ, ಕಲೆಯನ್ನು ಕೊಟ್ಟೆ, ಸೌಂದರ್ಯ ತಿಳಿಯುವ ಶಕ್ತಿ ಕೊಟ್ಟೆ. ಈಗ ಮನಸ್ಸಿನ ಶಕ್ತಿ ಕೊಡು. ಮನಸ್ಸಿನ ಸ್ಥೈರ್ಯ ನೀಡು, ಕಾಪಾಡು ಎಂದು ಕಣ್ಣಿನಿಂದ ಮೊರೆಯಿಟ್ಟ.
ಮಾರನೆಯ ದಿನ ತಾಯಿಗೆಷ್ಟೋ ಹೇಳಿದ. ನನ್ನ ಮದುವೆಯ ಯೋಚನೆ ಬಿಟ್ಟುಬಿಡು, ಬೇಡ. ಎಂದೆಷ್ಟೋ ಕೇಳಿಕೊಂಡ. ಆದರೆ ತಾಯಿಯನ್ನು ಒಪ್ಪಿಸಲಾಗಲಿಲ್ಲ. ರಾತ್ರಿಯೆಲ್ಲಾ ಇಬ್ಬರೂ ನಿದ್ರೆಯಿಲ್ಲದೆ ಕಳೆದಿದ್ದರು. ಮೋಹನ ತನ್ನ ಚಿತ್ರಗಳ ಮುಂದೆ. ಹೃದಯದ ಯಾವುದೋ ಮೂಲೆಯಲ್ಲಿ ಎದ್ದ ಕೊರಗನ್ನು, ನೋವನ್ನು ತಣಿಸುವ ಶಕ್ತಿ ಬೇಡುತ್ತ
ಶಾರದೆಯ ಚಿತ್ರದ ಮುಂದೆ. ಬೃಂದಾವನವಿಹಾರಿ, ಗೀತಾಚಾರ್ಯ, ಶಾಂತಿಪ್ರಿಯ, ಮೋಹನಕೃಷ್ಣನ ಮುಂದೆ. ಕೊನೆಯದಾಗಿ ಜಗತ್ತನ್ನು ಬಿಟ್ಟು ಹೊರಟು, ಬುದ್ಧನಾಗುವ ನಿಶ್ಚಿತ ಮನಸ್ಸಿನ ಯುವಕ ಗೌತಮನ ಚಿತ್ರದ ಮುಂದೆ ಆದರೆ ಯಾವುದರಿಂದಲೂ ಮನಸ್ಸಿಗೆ ಸಮಾಧಾನ ಸಿಕ್ಕಿರಲಿಲ್ಲ. ಮನಸ್ಸು ಮತ್ತೆ ಮತ್ತೆ ವಸಂತಾಗಮನದ ಚಿತ್ರಕ್ಕೆ ಸುಯ್ಯುತ್ತಿತ್ತು. ಅದರ ಎದುರಿಗಿದ್ದ ಜೇಡನ ಬಲೆಯ ಹೆಣ್ಣಿನ ಮುಖದ ಕಡೆಗೆ ಕಣ್ಣು ಓಡುತ್ತಿತ್ತು.
ತಾಯಿ ರಾತ್ರಿಯೆಲ್ಲ ದೇವರನ್ನು ಬೇಡಿಕೊಳ್ಳುತ್ತಿದ್ದರು. ಈ ಅಗ್ನಿ ಪರೀಕ್ಷೆಯನ್ನು ಪಾರುಗೊಳಿಸಿಬಿಡೆಂದು ಶ್ರೀರಾಮನನ್ನು ಬೇಡಿಕೊಂಡರು. ಹೇಗಾದರೂ ಸರಿ, ಮನೆಗೆ ರೂಪವತಿಯಾದ ಸೊಸೆಯೊಬ್ಬಳು ಬಂದರೆ ಸಾಕು ಎಂದು ಮೊರೆಯಿಡುತ್ತಿದ್ದರು. ದೇವರ ಮುಂದೆ ನೂರು ಹರಕೆ ಹೊತ್ತರು. ಹುಡುಗಿಯನ್ನು ಹೇಗಾದರೂ ಮೋಹನ ಒಪ್ಪುವಂತೆ ಮಾಡಿರೆಂದು ಕೇಳಿಕೊಂಡರು. ಮೋಹನ ನನ್ನ ಮಗು. ಅವನ ಮನಸ್ಸೇ ವಿಚಿತ್ರ. ಯಾವಾಗ ನೋಡಿದರೂ ತನ್ನನ್ನು ತಾನೇ ಹಳಿದುಕೊಳ್ಳುತ್ತಾನೆ. ಮದುವೆಯ ಮಾತೆತ್ತಿದರೇ ನೊಂದುಕೊಳ್ಳುತ್ತಾನೆ. ಈಗಲಾದರೂ ಹೇಗಾದರೂ ಅವನು ಮದುವೆಗೆ ಒಪ್ಪುವಂತಾಗಲಿ ದೇವರೇ ಎಂದು ಹಂಬಲಿಸುತ್ತಿದ್ದರು. ಆದರೆ ಅವರ ಮನಸ್ಸಿನ ವಿಚಾರ ಮೋಹನನ ವಿಚಾರದ ರೀತಿಗೆ ಹರಿಯಲೇ ಇಲ್ಲ. ಹುಡುಗಿ ತನ್ನನೊಪ್ಪುವುದಿಲ್ಲವೆಂದು ಮೋಹನನ ಯೋಚನೆಯಾದರೆ ಹುಡುಗಿಯನ್ನು ಮೋಹನನೊಪ್ಪುವುದಿಲ್ಲವೆಂದು ಅವರ ಕಳವಳ, ಆದರೆ ಇಬ್ಬರೂ ಯೋಚಿಸುತ್ತಿದ್ದುದು ಒಂದೇ ವಿಷಯ!
ಮಧ್ಯಾಹ್ನದ ಹೊತ್ತಿಗೆ ಚಿಂತೆಯಿಂದ ಮೋಹನನ ಮನಸ್ಸು ದಿಕ್ಕುಗಾಣದಾಗಿತ್ತು. ಮೀನು ಸಿಕ್ಕಿಕೊಂಡ ಗಾಳದ ದಾರದಂತೆ ಒಂದೇ ಸಮನಾಗಿ ಕುಣಿದಾಡುತ್ತಿತ್ತು. ಹೊರಗೆ ಯಾವ ಸಮಯಕ್ಕೆ ಆ ಹುಡುಗಿ ಬಂದು ಬಿಡುವಳೋ, ಹೇಗಿರುವಳೋ, ತನ್ನನೆಲ್ಲಿ ನೋಡಿ ಬಿಡುವಳೋ ಎಂಬ ಹೆದರಿಕೆ ಕಾತರ. ಜತೆಗೆ ಅವಳನ್ನು ನೋಡಿಬಿಡಬೇಕೆನ್ನುವ ಆಸೆ ಮನಸ್ಸಿನಲ್ಲಿ. ಈ ಆಸೆ ರಾತ್ರಿಯೆಲ್ಲಾ ಬೇರೂರಿ ಬೆಳೆದಿತ್ತು, ಭವಿಷ್ಯವನ್ನು ಸುಖಮಯವನ್ನಾಗಿಸುವ ಆಸೆ ಯಾರಿಗೆ ತಾನೇ ಇರುವುದಿಲ್ಲ? ಮೋಹನ ಸಾಧ್ಯವಾದಷ್ಟೂ ಚೆನ್ನಾಗಿ ಬಟ್ಟೆ ಹಾಕಿಕೊಂಡ, ತಲೆ ಬಾಚಿಕೊಳ್ಳಲು ಕನ್ನಡಿಯ ಮುಂದೆ ನಿಲ್ಲುವವರಿಗೆ ಅರೆ ಭರವಸೆ. ಆದರೆ ಕನ್ನಡಿಯಲ್ಲಿ ತನ್ನ ಮುಖ ಕಂಡೊಡನೆಯೇ ಹೃದಯಕ್ಕೆ ಈಟಿ ಇಟ್ಟಂತಾಯಿತು. ಎಷ್ಟೇ ಕಷ್ಟಪಟ್ಟರೂ ಅಷ್ಟೇ ತನ್ನ ಬಾಳು ಎನಿಸಿತು. ಆದರೂ ತಾಯಿಯ ಮಾತಿನಿಂದ ಒಂದು ಬಗೆಯ ಆಶ್ವಾಸನೆ, ಸರಿಹೋದರೂ ಹೋಗಬಹುದು. ಆ ಹುಡುಗಿ ಒಪ್ಪಿದರೂ ಒಪ್ಪಬಹುದು. ತನ್ನನ್ನು ತನಗಾಗಿಯಲ್ಲದಿದ್ದರೂ, ತನ್ನ ಕಲೆಗಾಗಿ ಒಪ್ಪಬಹುದು. ಕೊಂಚ ಆದರ್ಶವಾದವಿದ್ದರೆ ಖಂಡಿತವಾಗಿಯೂ ಒಪ್ಪಬಹುದು ಎಂದು ಮನಸ್ಸಿಗೆ ಸಮಾಧಾನ ಹೇಳಿಕೊಳ್ಳಲಾರಂಭಿಸಿದ. ಮನಸ್ಸಿನ ಸಂದೇಹ, ತಾಕಲಾಟಗಳ ಬಾಯಿಗೆ ಬಟ್ಟೆ ತುರುಕಿ, ತನ್ನ ಈ ಅಭಿಪ್ರಾಯವನ್ನು ಮನಸ್ಸಿನ ಮೇಲೆ ಒತ್ತಿ ಒತ್ತಿ ಮನಸ್ಸು ಅದನ್ನು ನಂಬುವಂತೆ ಮಾಡಿದ. ಹೀಗಾಗಿ ಹುಡುಗಿ ಅವನ ಮನೆಯ ನಡುಕೋಣೆಯಲ್ಲಿ ಮೋಹನನ ತಾಯಿಯೊಂದಿಗೆ ಕುಳಿತುಕೊಂಡು ಮಾತಾಡಲು ಆರಂಭಿಸುವ ವೇಳೆಗೆ ಮೋಹನನ ಮನದಲ್ಲಿ ಒಂದು ಬಗೆಯ ನಂಬುಗೆ, ಭರವಸೆ ಮೂಡಿತ್ತು.
ಹುಡುಗಿ ನಿಜವಾಗಿಯೂ ರೂಪವತಿ. ಮೋಹನ ಚಿತ್ರಿಸಿದ್ದ ಕಲಾಧಿದೇವತೆಯ ಪ್ರತಿರೂಪ ಆ ಹುಡುಗಿ ಎನುವಂತಿತ್ತು. ಆ ನೆಳಲು ಬೆಳಕಿನ ವೈಖರಿಯಿಲ್ಲದಿದ್ದರೂ ತುಸು ಕಂದುಬಿಳುಪು ಮುಖದಲ್ಲಿ ಅಗಲವಾದ ಕಣ್ಣುಗಳು, ಅಗಲವಾದ ಹಣೆಯಲ್ಲಿ ಹೊಳೆಯುವ ಚಮಕಿಯಿಟ್ಟ ಕುಂಕುಮದ ಬೊಟ್ಟು, ಎಡಕ್ಕೆ ತೆಗೆದ ಬೈತಲೆ, ಬೈತಲೆಯ ಮೇಲೆ ಬಂಗಾಲಿ ಹೆಣ್ಣು ಮಕ್ಕಳಂತೆ ಒಂದು ಕೊಂಚ ಚಂದ್ರ ಸೋಕಿಸಿದ್ದಳು. ಮುಖಕ್ಕೊಪ್ಪುವ ಮೂಗು, ಮೂಗಿಗೊಪ್ಪುವಂತಹ ನತ್ತು, ಕಿವಿಗಳೆರಡಕ್ಕೂ ವಜ್ರದ ಓಲೆಗಳು. ತೂಗುಬಿಟ್ಟ ಎರಡು ಬಿಲ್ಲಿನಾಕಾರದ ಲೋಲಕ್ಕುಗಳು, ಬೈತಲೆಯ ಹಿಡಿಯಿಂದ ಕಿತ್ತು ಬಂದ ಒಂದೆರಡು ಎಳೆ ಕೂದಲು ಕಿವಿಯ ಮೇಲುಭಾಗದ ಮೇಲೆ ಹಾದಿದ್ದುವು. ಸಮರೂಪ, ಸಮಸೃಷ್ಟಿಯ ಕಲೆ ಆ ಹುಡುಗಿಯ ಮುಖದಲ್ಲಿತ್ತು. ಮೋಹನ ತನ್ನ ಕೋಣೆಯಿಂದ ಕದ್ದು ನೋಡಿದ. ಎದೆ ಡವಗುಟ್ಟುತ್ತಿತ್ತು ನೋಡಲು ಆರಂಭಿಸಿದಾಗ, ಆದರೆ ಎಷ್ಟು ಹೊತ್ತಾದರೂ ಅಲ್ಲಿಂದ ಕಣ್ತರೆಯಲಾಗಲೇ ಇಲ್ಲ. ಕಲಾವಿದನ ದೃಷ್ಟಿ ಕಲೆಯ ಸುಂದರ ಮೂರ್ತಿಯಲ್ಲಿ ಐಕ್ಯವಾಗಿ ಹೋಗಿತ್ತು. ಮದುವೆಗಾಗಿ ಬಂದಿರುವಳು ಈ ಹುಡುಗಿ, ತಾನು ಆ ಹುಡುಗಿಯನ್ನು ನೋಡಿ ಒಪ್ಪಬೇಕು. ತಾಯಿ ಆ ಹುಡುಗಿಯನ್ನು ಮಾತಾಡಿಸಲು ಯತ್ನಿ ಸುತ್ತಿದಾಳೆ, ಆ ಹುಡುಗಿ ತನ್ನನ್ನೊಪ್ಪಬೇಕು. ತನ್ನ ಕಲೆಯನ್ನೊಪ್ಪಿ ತನ್ನ ವಳಾಗಲೊಪ್ಪಬೇಕು. ಅದು ಸಾಧ್ಯವೋ ಇಲ್ಲವೋ, ಈ ಯೋಚನೆಗಳೊಂದೂ ಅವನ ಮನಸ್ಸಿನಲ್ಲಿ ಸುಳಿಯಲಿಲ್ಲ. ತಾನಿದುವರೆಗೂ ಯಾವ ಆದರ್ಶವನ್ನು ಚಿತ್ರಿಸಲು ಯತ್ನಿಸಿದ್ದನೋ ಆ ಚಿತ್ರಕ್ಕೆ ಈ ಹುಡುಗಿ ಸ್ಫೂರ್ತಿಯಾಗಿರುವಳೆಂದು ಮಾತ್ರ ಅವನಿಗೆ ಗೊತ್ತು. ಅವಳು ಹುಡುಗಿಯೆನ್ನುವಷ್ಟೂ ಮೈಯರಿವಿರಲಿಲ್ಲ. ಅದೊಂದು ಮುಖ ಮಾತ್ರ. ಆ ಮುಖದ ಸೌಂದರ್ಯ ಮಾತ್ರ ಅವನಿಗೆ ಗೊತ್ತು, ಶಾಂತಿ ಬಂದಿತ್ತು. ಸಮಾಧಾನ ನೀಡಿತ್ತು.
ಈ ರಸಸೃಷ್ಟಿಯ ಕಲ್ಪಿತ ಪ್ರಪಂಚದ ಮೈಮರೆಸಿನಿಂದ ಮೋಹನನ ಮನಸ್ಸು ಎಚ್ಚರಗೊಂಡು ಮತ್ತೆ ಭೂಮಿಗಿಳಿದಾಗ, ಮತ್ತೊಮ್ಮೆ ಅವರು ಕುಳಿತ ಕಡೆ ನೋಡಿದ. ಅಲ್ಲಿ ಅವರಾರೂ ಇರಲಿಲ್ಲ. ತಕ್ಷಣವೇ ಮೊದಲಿನ ಅಸಮಾಧಾನ, ಅಶಾಂತಿ, ಕಳವಳ, ಕಾತರಗಳು ನೂರುಮಡಿಯಾಗಿ ಹಿಂತಿರುಗಿದುವು. ತನ್ನ ತಾಯಿ ಆ ಹುಡುಗಿಯನ್ನು ತನ್ನ ಕಲೆಯ, ತನ್ನ ಚಿತ್ರಗಳ ಪರೀಕ್ಷೆಗೆ ಕರೆದೊಯ್ದಿದಾರೆ. ತನ್ನ ಸತ್ವ ಪರೀಕ್ಷೆ ಯಾಗುತ್ತಿದೆಯೆಂದು ತಕ್ಷಣ ಮನವರಿಕೆಯಾಯಿತು. ಮನಸ್ಸು ಚಿತ್ರ ಶಾಲೆಗೆ ಓಡಿತು. ಕಾಲು ಅವನಿಗರಿವಿಲ್ಲದೆಯೇ ಒಂದರೆನಿಮಿಷದಲ್ಲಿ ಅವನನ್ನು ಚಿತ್ರಶಾಲೆಯ ಪಕ್ಕದ ಕೋಣೆಗೆ ಒಯ್ದಿತು.
ಅಲ್ಲಿಂದ ಅವನಿಗೆ ಅವರು ಕಾಣುತ್ತಿರಲಿಲ್ಲ. ಅವರಿಗೆ ಅವನಲ್ಲಿರುವುದೂ ಕಾಣುತ್ತಿರಲಿಲ್ಲ. ಆದರೆ ಅವನ ಮೈಯೆಲ್ಲಾ ಒಂದು ಬಗೆಯ ಉತ್ಸುಕತೆಯಿಂದ ಪುಲಕಗೊಂಡಿತ್ತು. ಅವರ ಮಾತೆಲ್ಲಾ ಅವನಿಗೆ ಕೇಳಿಸುತ್ತಿತ್ತು. ತನ್ನ ನಾಳಿನ ಸೊಸೆಯಾಗುವ ಹುಡುಗಿಗೆ ತಾಯಿ ತನ್ನ ಮಗನ ಚಿತ್ರಗಳನ್ನು ಒಂದೊಂದನ್ನಾಗಿ ತೋರಿಸುತ್ತಿರುವರೆಂದು ಗೊತ್ತಾಯಿತು. ಒಂದೊಂದು ಚಿತ್ರದ ಹತ್ತಿರ ಬಂದು ತಾಯಿ ನಿಂತು ತೋರುವುದನ್ನು ಮನಸ್ಸಿನಲ್ಲೇ ಚಿತ್ರಿಸಿಕೊಳ್ಳುತ್ತಿದ್ದ.
“ನೋಡಮ್ಮ, ಇದು ಸಂಜೆಯ ದೃಶ್ಯ.” ಎಂದು ತಾಯಿ ಹೇಳಿದುದು ಕೇಳಿತು. ತಾನು ಚಿತ್ರಿಸಿದ ಸಂಜೆಯ ಚಿತ್ರ ಅವನ ಮುಂದೆ ಬಂದು ನಿಂತಿತು. ದೂರದಲ್ಲಿ ತೆಳುನೀಲಿಯಾಗಿ ಬೆಟ್ಟದ ಹಿನ್ನೆಲೆ ಅದರಿಂದೀಚೆಗೆ ವಿಶಾಲವಾದ ಬಯಲು, ಬಯಲಿನ ನಡುವೆ ಒಂದು ಸಣ್ಣ ಕಾಲು ಹಾದಿ, ಆ ಸಣ್ಣ ಕಾಲು ಹಾದಿಯಲ್ಲಿ ಒಬ್ಬ ಕಾವಿಧಾರಿ ಹೋಗುತ್ತಿದ್ದಾನೆ. ಆಕಾಶದ ವಿಶಾಲವಾದ ನೀಲಿಮೆಯಲ್ಲಿ ಕಾಣದಾಗಲು, ಐಕ್ಯವಾಗಲು ಹೋಗುತ್ತಿದ್ದಾನೆ. ಅವನ ಮೂರ್ತಿಯಷ್ಟೇ ನೆರಳಿನಂತ ಕಾಣುತ್ತದೆ. ಆ ಪಕ್ಕಕ್ಕೆ ಕರಿಯೆಳ್ಳಿನಂತಹ ಮೋಡದ ಮರೆಯಿಂದ ಕೊಂಚ ಬಣ್ಣ ಕಾಣಿಸಿಕೊಳ್ಳುತ್ತಿದೆ. ಹುಂ! ಆ ಚಿತ್ರ ಅವನು ಬಹಳ ಮೊದಲು ಬರೆದುದು. ಅದು ಚಿತ್ರಕಲೆಯನ್ನಾರಂಭಿಸಿದ ಮೊದಲಿನಲ್ಲಿ ಬರೆದುದು, ಅವನಿಗೇ ಅದು ಅಷ್ಟೊಂದು ಚೆನ್ನಾಗಿ ಒಪ್ಪಿರಲಿಲ್ಲ. ಆ ಹುಡುಗಿ ಏನೆಂದುಕೊಳ್ಳುವಳೋ ಎಂದುಕೊಂಡ.
“ಬಹಳ ಸೊಗಸಾಗಿದೆ” ಎಂದು ಒಂದು ಮಧುರ ದನಿ ಕೊಟ್ಟ ಉತ್ತರ ಕೇಳಿಸಿತು. ಮೋಹನನ ಮೈಯೆಲ್ಲಾ ಶ್ರತಿಯಿಟ್ಟ ವೀಣೆಯ ತಂತಿಯಂತಾಯಿತು!
“ಇದೋ, ಈ ಕಡೆ ನೋಡಮ್ಮ -ಇದು ಒಬ್ಬ ಮುದುಕ ಕೂಲಿಗಾರನ ಚಿತ್ರ” ಎಂದರು ತಾಯಿ. ಮೋಹನನಿಗೆ ತಾನು ಆ ಚಿತ್ರಕ್ಕೆ ಎರಕ ಹುಯ್ದ ಭಾವನಾ ಪರಂಪರೆಯೆಲ್ಲ ನೆನಪಾಯಿತು. ಆ ಮುದುಕ ಕೂಲಿಗಾರನಲ್ಲಿ ತೋರಿಸಬೇಕಾದ ದೇಹಶಕ್ತಿ, ಮನಸ್ಸಿನ ಶಕ್ತಿಯ ಜತೆಗೆ ಬಾಳನ್ನು ಎದುರಿಸುವ ಕೆಚ್ಚು, ಅನುಭವದ ಸಹನೆಗಳನ್ನೆಲ್ಲ ಕುಸುರು ಕುಸುರಾಗಿ ಬಿಡಿಸು ತಾನು ಪಟ್ಟ ಕಷ್ಟವೆಲ್ಲ ನೆನಪಾಯಿತು. ಅವನ ಮನಸ್ಸಿನ ನೋವನ್ನು ಅವನು ಊರೆಗೋಲಿನ ಆಸರೆಯಲ್ಲಿ ನಿಂತ ನಿಲುವಿನಲ್ಲಿ ಚಿತ್ರಿಸಿದ್ದ. ಇಷ್ಟಾದರೂ ಅವನಿಗೇ ಅದು ಸಮಾಧಾನಕರವಾಗಿರಲಿಲ್ಲ. ಆ ಚಿತ್ರದಲ್ಲಿ ಕಣ್ಣಿನಲ್ಲಿ ತೋರಿಸಬೇಕಾಗಿದ್ದ ಹಸಿವು ಕಂಡಿರಲಿಲ್ಲ. ಅದು ತನ್ನ ಅನುಭವಕ್ಕೆ ಬಂದಿರಲಿಲ್ಲ. ತಾನು ಚಿತ್ರಿಸಲಾಗಿರಲಿಲ್ಲ.
“ಇದು”
ಹೀಗೆಯೇ ತಾಯಿ ಒಂದಾದ ಮೇಲೊಂದು ಚಿತ್ರ ತೋರಿಸಿ ಕೊಂಡು ನಡೆದಂತೆ ಮೋಹನನ ಮನಸ್ಸಿನಲ್ಲೂ ಆ ಚಿತ್ರಗಳು ಸುಳಿದುವು. ಅಷ್ಟರಲ್ಲಿ ಹೊರಗೆ ಯಾರೋ ಕೂಗಿದ ದನಿಯಾದಿತು.
“ಯಾರೋ ಕೂಗುತ್ತಿದಾರೆ, ನೋಡಿಬರುತ್ತೇನೆ. ಒಂದೇ ಕ್ಷಣ” ಎನ್ನುತ್ತಾ ತಾಯಿ ಹೊರಟುಹೋದರು. ಮೋಹನನ ಹೃದಯದ ಆ ವೇಗ ಹೆಚ್ಚಾಯಿತು. ಎಲ್ಲಿ ತಾನಿರುವುದು ಅವರಿಗೆ ಗೊತ್ತಾಗಿ ಹೋಗುವುದೋ ಎಂದು ಒದ್ದಾಡಿದ. ಆದರೆ ಆ ಜಾಗ ಬಿಟ್ಟು ಕದಲಲೂ ಇಷ್ಟವಿಲ್ಲ. ಅಲ್ಲಿ ಆ ಹುಡುಗಿ, ಅವಳ ಜತೆಗೆ ಬಂದಿದ್ದ ಅವಳ ಅಕ್ಕ ಇಬ್ಬರೂ ಮಾತನಾಡುವುದು ಅವನಿಗೆ ಕೇಳಿಸುತ್ತಿತ್ತು.
“ಅಕ್ಕ ಈ ಚಿತ್ರ ನೋಡು ಎಷ್ಟು ಚೆನ್ನಾಗಿದೆ. ಆ ಭಂಗಾರದ ಚಿಟ್ಟೆ ಬಂದು ಹೂವನ್ನು ಮುತ್ತಿಡಲು ಹೋಗುತ್ತಿದೆ. ಹೂವು ತೊಟ್ಟು ಕಳಚಿ ಬೀಳುತ್ತಿದೆ. ಆ ಚಿಟ್ಟೆಯ ರೆಕ್ಕೆಗಳು ನೋಡು, ಎಷ್ಟು ಚೆನ್ನಾಗಿ ಬಣ್ಣವಾಗಿ, ವೈಖರಿಯಿಂದಿವೆ” ಎಂದಳು ಹುಡುಗಿ.
“ಆ ಚಿತ್ರಕ್ಕೇನೋ ಹೆಸರು ಬರೆದಂತಿದೆ ನೋಡು”
“ಪ್ರೇಮದ ಬಗೆ ಅಂತ. ಚಿಟ್ಟೆ ಕೊನೆಗೆ ಬಂದಿದೆ, ಹೂವು ತೊಟ್ಟು ಕಳಚಿ ಬೀಳುವ ವೇಳೆಗೆ! ಎಷ್ಟು ಚೆನ್ನಾಗಿದೆ. ಅಕ್ಕ”
“ನಿಜವಾಗಿಯೂ ಇಂತಹ ಕಲಾವಿದನ ಕೈಹಿಡಿಯಲು ಪುಣ್ಯ ಮಾಡಿರಬೇಕು, ಕಣೆ”
“ಇಷ್ಟೊಂದು ಸುಂದರವಾಗಿ ಚಿತ್ರ ಬರೆಯುವರಲ್ಲ, ಅವರು ಇನ್ನೆಷ್ಟು-”
ಮೋಹನನ ಎದೆ ಹೊಡೆತ ಒಮ್ಮೆಗೇ ನಿಂತು ಹೋದಂತಾಯಿತು. ಆ ಹುಡುಗಿಯ ಮಾತನ್ನು ಪೂರ್ತಿ ಕೇಳಲೂ ಇಲ್ಲ. ಕೊನೆಗೆ ಅಲ್ಲಿಗೇ ಬಂತೆ? ತಾನೆಣಿಸಿದಂತೆಯೇ! ಕಲೆಯ ಸೌಂದರ್ಯವಲ್ಲ. ಕಲಾವಿದನ ಸೌಂದರ್ಯದ ಬಯಕೆ!
“ಆಗಲೇ ಅವರ ಯೋಚನೆ ಬಂದು ಬಿಟ್ಟಿತೇನೇ?” ಎಂದು ಅಕ್ಕ ಹಾಸ್ಯ ಮಾಡಿದುದೂ ಕೇಳಿತು.
ಅಕ್ಕ-ತಂಗಿಯರ ಕಿಲಕಿಲ ನಗು ಕೇಳಿತು ಮೋಹನನಿಗೆ. ಆದರೆ ಅವನ ಕಿವಿಗೆ ಅದರ ಮಾಧುರ್ಯ ಮಾಧುರ್ಯವಾಗಿರಲಿಲ್ಲ. ಅದು ತನ್ನನ್ನು ಹಾಸ್ಯ ಮಾಡಲು ಅವರು ಹೂಡಿದ ಸಂಚು ಎಂದು ಅವನ ಮನಸ್ಸು ಚುಚ್ಚುತ್ತಿತ್ತು. ಅವರು ಬರದಿದ್ದರೇ ಎಷ್ಟೋ ಚೆನ್ನಾಗಿತ್ತು, ಅವರಿಗೆ ನನ್ನ ಚಿತ್ರಗಳನ್ನು ತೋರಿಸದಿದ್ದರೇ ಚೆನ್ನಾಗಿತ್ತು ಎಂದು ಕೊಂಡ. ಆದರೆ ಆಗಲೇ ಕೆಲಸ ಮಿಂಚಿಹೋಗಿತ್ತು. ಅಲ್ಲಿಂದಲೇ ತನ್ನ ಕಲಾಧಿದೇವತೆ ಶಾರದೆಯನ್ನು ಮನಸ್ಸಿನ ಶಕ್ತಿಗಾಗಿ ಬೇಡಿಕೊಂಡ. ಕಣ್ಣಿನಲ್ಲಿ ಮತ್ತೊಮ್ಮೆ ದ್ವೇಷದ ಕೆಂಪು ಕಾಣಿಸಿಕೊಂಡಿತು.
“ಅಬ್ಬಾ ಈ ಚಿತ್ರ ನೋಡಿದರೇ ಹೆದರಿಕೆಯಾಗುತ್ತೆ” ಎಂದು ಹುಡುಗಿ ಹೆದರಿದ ದನಿಯಲ್ಲಂದುದು ಕೇಳಿಸಿತು.
“ಎಷ್ಟು ಭೀಕರವಾಗಿದೆ ಆ ಮುಖ-ರಾಹುವನ್ನು ಕತ್ತಲಿನ ಭೂತ ಮಾಡಿರುವರಲ್ಲವೇ?” ಎಂದಳು ಅಕ್ಕ.
ಅದು ರಾಹು ಚಂದ್ರನನ್ನು ನುಂಗುವ ಚಿತ್ರ, ರಾಹು ವಿಕಾರ ಭೂತ ಹುಂ! ಹೇಗಿದ್ದರೇನು ಎಂದುಕೊಂಡ ಮೋಹನ.
“ಈ ಚಿತ್ರ ನೋಡಿದೆಯೇನಮ್ಮ” ಎಂದು ತಾಯಿ ಅಂದುದು ಕೇಳಿಸಿತು.
ಯಾಕೆ ನೋಡಬೇಕು ಆ ಹುಡುಗಿ? ಯಾವ ಚಿತ್ರವನ್ನಾದರೂ ಯಾಕೆ ನೋಡಬೇಕು. ಮೊದಲು ಇಲ್ಲಿಂದ ಅವರನ್ನು ಓಡಿಸಬೇಕು ಎಂದು ಉದ್ರೇಕದಿಂದ ಬಾಗಿಲಿಗೆ ಕೈಯಿಕ್ಕಿದ. ಮರುನಿಮಿಷವೇ ಅನ್ನಿಸಿತು. ನಾನು ಹೋಗಬಾರದು. ನಾನು ಹೋದರೂ ಏನೂ ಉಪಯೋಗವಿಲ್ಲ. ಎರಡು ಕ್ಷಣ ನೋಡುವರು. ಹೊರಟುಹೋಗುವರು ಎಂದು ಸಮಾಧಾನ ತಂದುಕೊಂಡ. ಆ ಕ್ಷಣದಲ್ಲಿ ಮನಸ್ಸಿನ ಆಸೆ ಮತ್ತೆ ಎಲೆಯೊಡೆಯುತ್ತಿತ್ತು. ಹೇಗೋ ಆದರೂ ಆಗಬಹುದೆಂಬ ಮಿಣುಕು ಆಸೆ ಹೃದಯದಲ್ಲಿ ಇನ್ನೂ ಆಗಾಗ ಬೆಳಕುಗೊಳ್ಳುತ್ತಿತ್ತು.
“ಈ ಚಿತ್ರದ ಹೆಸರು ಕಲೆಯ ಕಣ್ಣು ಎಂದು” ಎಂದರು ತಾಯಿ.
ಮೋಹನನಿಗೆ ತಕ್ಷಣ ನೆನಪಾಯಿತು. ಅದೇ ಅವನ ಚಿತ್ರ. ಅವನ ವಿಕಾರಾಕೃತಿಯ ಚಿತ್ರ, ಮುಂದೆ ತೆಳುವಾಗಿ ಸಿಡಿಮಿಡಿಗೊಂಡ ಮುಖದ ನೀಲಿಮೆಯ ಚಿತ್ರ, ಅಲ್ಲಿಯೇ ಕಿಡಿ ಕಾರುವ ಕಣ್ಣು, ಅದರಲ್ಲಿ ಸೇರಿಕೊಂಡಂತೆ ಒಂದು ಬಂಗಾರದ ಬಣ್ಣದ ಹೃದಯ. ಆ ಹೃದಯದ ಮೂಲೆಯಲ್ಲಿ ಒಂದು ಕಡೆ ಹೂಗೊಂಚಲು, ಅಡಿಯಲ್ಲಿ ಹೆಡೆಯೆತ್ತಿದ ಹಾವು, ಮತ್ತೊಂದು ಮೂಲೆಯಲ್ಲಿ ಮುಳ್ಳಿನ ಮಾಲೆಯ ನಡುವೆ ಒಂಡು ಹೊಳೆಯುವ ಮಣಿ, ಅದು ಅವನ ಆದರ್ಶದ ಚಿತ್ರ, ತನ್ನ ಎಲ್ಲ ನೋವನ್ನೂ ಎರಕ ಹೊಯ್ದ ಚಿತ್ರ.
“ನೋಡು ಮಗು. ಕಲೆಯ ಕಣ್ಣು ಎಲ್ಲವನ್ನೂ ಕಾಣುತ್ತದೆ. ಹಾವು, ಹೂವು ಮುಳ್ಳು, ಮಣಿ ಎಲ್ಲವನ್ನು ಒಂದೇ ಸಮನಾಗಿ ನೋಡುತ್ತದೆ ಕಲೆಯ ಕಣ್ಣು. ಮೇಲಿನ ಆಕೃತಿ ಚೆನ್ನಾಗಿಲ್ಲದಿರಬಹುದು ಆದರೆ ಹೃದಯ ಭಂಗಾರದ್ದಾಗಿರಬಹುದು” ಎಂದರು ತಾಯಿ ಮೆಲ್ಲನೆ. ಅವರ ದನಿಯಲ್ಲಿ ಕೊಂಚ ಅಳುಕಿದ್ದುದು ಮೋಹನನಿಗೆ ಗೊತ್ತಾಯಿತು.
ಸರಿ, ತಾಯಿಯೇನೋ ತಾನು ಆ ಚಿತ್ರದ ವಿಚಾರ ಹೇಳಿದುದನ್ನು ತಪ್ಪದೆ ಸರಿಯಾಗಿ ಹೇಳುತ್ತಿದಾರೆ. ಆ ಹುಡುಗಿ ಏನುತ್ತರಕೊಡುವಳೋ ಎಂದು ಕಳವಳದಿಂದ ಕಾತರಿಸಿದ ಮೋಹನ.
“ಹೌದು, ಹೂವಿನಂತಹ ಮುಖವಿದ್ದರೂ ಹಾವಿನಂತಹ ಹೃದಯ ವಿರಬಹುದು. ಹೃದಯ ಚೆನ್ನಾಗಿರಬೇಕು. ಗುಣ ಒಳ್ಳೆಯದಾಗಿರಬೇಕು” ಎಂದಳು ಹುಡುಗಿಯ ಅಕ್ಕ,
“ತಾಯಿಯ ಕಣ್ಣಿಗೆ ಮಕ್ಕಳು ಕಾಣುವಂತೆ ಪ್ರಪಂಚವೆಲ್ಲವನ್ನೂ ನೋಡಬೇಕು. ಮಮತೆಯಿಂದ, ವಿಶ್ವಾಸದಿಂದ ನೋಡಿದರೆ ಒಳಗೆ ಮರೆಯಾಗಿರುವ ಗುಣ ಕಾಣುವುದೇ ಹೊರತು ಹೊರಗಿನ ಹುಳುಕಲ್ಲ” ಎಂದರು ತಾಯಿ ಕೊಂಚ ಗಂಭೀರವಾದ ದನಿಯಲ್ಲಿ.
“ನಿಜ. ಒಂದು ಬಾರಿ ನಿಜವಾದ ವಿಶ್ವಾಸವನ್ನಿಟ್ಟರೆ ತಪ್ಪುಗಳು, ವಿಕಾರಗಳು, ಎಲ್ಲಾ ಮರೆತು ಹೋಗುತ್ತವೆ. ಬರಿಯ ಗುಣಗಳು ಮಾತ್ರವೇ ಕಾಣುತ್ತವೆ. ಅದೇ ನಿಜವಾದ ವಿಶ್ವಾಸ. ಮನುಷ್ಯನಿಗೆ ಬೇಕಾದುದೂ ಅದೇ ಅಂತ ನಮ್ಮ ಪುಸ್ತಕದಲ್ಲಿ ಓದಿದೇನೆ” ಎಂದಳು ಹುಡುಗಿ.
ಒಳಗೆ ನಿಂತು ಕೇಳುತ್ತಿದ್ದ ಮೋಹನನ ಹೃದಯದ ಆಸೆಯ ಬಳ್ಳಿ ಹೂವಿಟ್ಟಿತು. ಇನ್ನು ಪರವಾಗಿಲ್ಲ. ಆ ಹುಡುಗಿಯೂ ಕಲಿತವಳು. ಆದರ್ಶವನ್ನೇ ನಂಬುವವಳು. ಹೊರರೂಪಕ್ಕೆ ಮರುಳಾಗುವವಳಲ್ಲ. ತಾನು ಹೇಗಿದ್ದರೂ ಸರಿ, ತನ್ನನ್ನು ಒಲಿಯುವಳು. ತನ್ನ ಕಲೆಗಾಗಿ ತನ್ನನ್ನೊಪುವಳೆಂದುಕೊಂಡು ಸಮಾಧಾನ ಮಾಡಿಕೊಂಡ. ಆ ಹುಡುಗಿಯ ಮಾತುಗಳು ಬರಿಯ ಪುಸ್ತಕದಲ್ಲಿ ಕಲಿತ ಆದರ್ಶದ ಮಾತುಗಳಿರಬಹುದೆಂಬ ಸಂದೇಹ ಇಣಕಲು ಅದನ್ನು ಅಲ್ಲಿಗೇ ಮೊಟಕುಮಾಡಿದ.
“ಇಂತಹ ಸುಂದರ ಚಿತ್ರ ರಚಿಸಿದವರ ಕೈ ಹಿಡಿಯಲು ನನ್ನ ತಂಗಿ ಪುಣ್ಯ ಮಾಡಿದ್ದಳು” ಎಂದಳು ಅಕ್ಕ. ಆ ಚಿತ್ರಗಳಂತೆಯೇ ಕಲಾವಿದನೂ ಸುಂದರನೆನ್ನುವ ಅವರ ಭ್ರಮೆ ಮೋಹನನಿಗೆ ತಿಳಿಯಲಿಲ್ಲ. ಅವನಿಗೆ ಕೇಳಿಸಿದಷ್ಟು ಮಾತಿನಿಂದ ಹೃದಯದ ಹೂವು ಅರಳಿತು.
“ಹಾಗಾದರೆ ನನ್ನ ಸೊಸೆಯಾಗಲು ಒಪ್ಪಿಗೆಯೇನಮ್ಮ?” ಎಂದರು ತಾಯಿ ಬಹಳ ಮೃದುವಾಗಿ.
ಮೋಹನನ ಹೃದಯ ಕುಣಿಯುತ್ತಿತ್ತು. ಕಲೆಯ ದೇವತೆ ಸೌಂದರ್ಯದ ರೂಪದಲ್ಲಿ ತನಗೆ ಸಾಕ್ಷಾತ್ಕಾರಳಾಗಿಬಿಟ್ಟಳೆಂದು ಹಿಗ್ಗಿದ. ತನಗಿನ್ನೇನು ಕಲೆಯ ಸ್ವರ್ಗ ಸಿಕ್ಕಿತೆಂದು ಆನಂದಪಟ್ಟ.
“ನಿನ್ನ ಅತ್ತೆಗೆ ನಮಸ್ಕಾರ ಮಾಡು, ಆಶೀರ್ವಾದ ಮಾಡಿ” ಎಂದಳು ಹುಡುಗಿಯ ಅಕ್ಕ.
“ನೂರುಕಾಲ ದೀರ್ಘ ಸುಮಂಗಲಿಯಾಗಿ ಮೋಹನನೊಂದಿಗೆ ಬಾಳು, ಮಗು” ಎಂದು ತಾಯಿ ಮಮತೆಯಿಂದ ಹರಸಿದರು.
ಮೋಹನನಿಗೆ ಸಂತೋಷ ತಡೆಯಲಾಗಲಿಲ್ಲ. ತನ್ನನ್ನು ತಾನು ಸಂಪೂರ್ಣವಾಗಿ ಮರೆತುಬಿಟ್ಟ. ಆಗಲೇ ಆ ಹುಡುಗಿ ತನ್ನ ಹೆಂಡತಿಯಾಗಿ ಹೋದಳೆನ್ನುವಷ್ಟು ಹಿಗ್ಗು, ಈ ಅಪಾರ ಸುಖದಲ್ಲಿ, ಆನಂದದಲ್ಲಿ ಎಚ್ಚರವೇ ಇಲ್ಲದಂತಾಗಿತ್ತು. ಅವನಿಗರಿವಿಲ್ಲದೆಯೇ ಬಾಗಿಲು ತೆರೆದು ಚಿತ್ರಶಾಲೆಗೆ ಬಂದುಬಿಟ್ಟ. ಅವನು ಬಂದು ನಿಲ್ಲುವ ವೇಳೆಗೂ ಹುಡುಗಿ ನಮಸ್ಕಾರ ಮಾಡಿ ಏಳುವ ವೇಳೆಗೆ ಸರಿಹೋಯಿತು. ಹುಡುಗಿಯ ಕಣ್ಣು ಬಿದ್ದುದು ಮೊದಲು ಅವನ ಮೇಲೆಯೇ, ಹುಡುಗಿ ಗಾಬರಿಯಿಂದ ಚೀರಿ ಅಕ್ಕನ ಕಡೆಗೆ ಹಿಮ್ಮೆಟ್ಟಿದಳು. ಮೋಹನನ ಬಣ್ಣದ ಸ್ವಪ್ನ ಚುಕ್ಕು ಚೂರಾಯಿತು. ಹೃದಯ ನುಚ್ಚುನೂರಾಯಿತು. ಕಣ್ಣು ಕಗ್ಗತ್ತಲಾಯಿತು. ಹಾಗೆಯೇ ಕೆಳಕ್ಕೆ ಕುಸಿದ. ಒಂದರೆನಿಮಿಷದಲ್ಲೇ ಮೈಯರಿತು ನೋಡಿದ. ಚಿತ್ರಶಾಲೆ ಬರಿದಾಗಿತ್ತು, ಎದುರಿಗೇ ಹಾಲಾ ಹಲವನ್ನು ಬಾಯಿಗೆ ತೆಗೆದುಕೊಳ್ಳಲು ಸಿದ್ಧನಾದ ಪರಶಿವನ ಚಿತ್ರ, ತಲೆ ತಗ್ಗಿಸಿ ಮೌನವಾಗಿಯೇ ಕಣ್ಣೀರು ಸುರಿಸಿದ ಮೋಹನ, ಆ ಕಣ್ಣೀರಿನ ಅರ್ಥ ಅವನಿಗೇ ತಿಳಿಯದು. ತಿಳಿದಿದ್ದರೆ ಆ ಪರಶಿವನೊಬ್ಬನಿಗೇ!
*****