ಗುಡುಗುಟ್ಟಿದ ಧರೆ
ಕೆರಳಿತು ಸಾಗರ
ಅಪ್ಪಳಿಸುತ ರಾಕ್ಷಸಾಕಾರದ ಸುನಾಮಿ
ಕೊಚ್ಚಿ ಹೋದವು ಮನೆ ಮಠ
ಜಲಸಮಾಧಿಯಾದವು ಜೀವರಾಶಿ
ಕಂದಮ್ಮಗಳ ಸಾವಿನಲ್ಲಿ
ಮುಗಿಲ ಮುಟ್ಟಿದ ಹೆತ್ತೊಡಲ ಕರುಳಿನ
ನೋವು! ಕೇಳುವವರ್‍ಯಾರು?
ಮಾರಣ ಹೋಮ ನಡೆಯಿತು
ಜೀವರಾಶಿಗಳ ಮೇಲೆ
ನೀರ ರಾಶಿಯ ಎದುರು ಕಣ್ಣೀರ ಕಡಲು
ಎಲ್ಲೆಲ್ಲೂ ಮನ ಕರಗುವಂತೆ
ಸಾವುನೋವಿನ ನಡುವೆ ಉಳಿದವರ
ತೊಳಲಾಟ
ಹೃದಯ ಕರಗುವ ಘೋರ ದುರಂತ
ಸಾಗರ ಗರ್‍ಭದಲ್ಲಿ ಡೋಲು ಬಾರಿಸಿದರೆ
ಎದೆ ನಡುಗಿತು,
ಕಡಲಲೆಗಳ ಅಬ್ಬರದಲ್ಲಿ ತತ್ತರಿಸಿದವು
ನೆಲಜಲಗಳಲಿ ಅವುಗಳ ರಾಶಿರಾಶಿ
ಭೋರ್‍ಗರೆವ ಕಡಲೇ
ಇನ್ನಾದರೂ ಶಾಂತವಾಗು : ಹೇಳು
ನಿನಗಿಷ್ಟವೇ ಕಳಕೊಂಡವರ ಗೋಳು
ಇನ್ನೆಂದೂ ಬಾರದಿರಲಿ ಇಂಥ ಕ್ರೂರದಿನ
ಓ ಪ್ರಕೃತಿಯೇ ನೀನೇ ಸೃಷ್ಟಿಸಿದ
ಜೀವರ ಮೇಲೆ ಕರುಣೆ ಇರಲಿ,
ಕ್ಷಮೆ ಇರಲಿ ಅಸಹಾಯಕರ ಮೇಲೆ
ಶಾಂತವಾಗು ಶಾಂತವಾಗು ಸಾಗರವೇ
ಸಾಕು ಈ ರುದ್ರ ನರ್ತನ.
*****
ಜನವರಿ ೯, ೨೦೦೫ ಸಾಗರದ ಮಣ್ಣಿನವಾಸನೆ ವಾರಪತ್ರಿಕೆ ಪ್ರಕಟ