ಶಾಲೆಗೆ ಹೋಗುವ ಚಿಕ್ಕ ಮಕ್ಕಳನ್ನು ಪರಿಚಯವಾದರೆ ನಾನು ಅವರನ್ನು ‘ನಿಮ್ಮ ಮೆಚ್ಚಿನ ಅಧ್ಯಾಪಕರು ಯಾರು?’ ಎಂದು ಕೇಳುವುದಿದೆ. ಅವರು ಕೆಲವು ಸಲ ಹೇಳುತ್ತಾರೆ. ‘ಯಾಕೆ?’ ಎಂದು ಕೇಳುತ್ತೇನೆ. ಅದಕ್ಕೆ ಅವರು ಅಷ್ಟು ಬೇಗನೆ ಉತ್ತರಿಸುವುದಿಲ್ಲ. ಮತ್ತೆ ಮತ್ತೆ ಕೇಳಿದರೆ ಉತ್ತರಿಸಲು ಆರಂಭಿಸುತ್ತಾರೆ. ಅವರು ನೀಡುವ ಉತ್ತರಗಳು ಹೀಗಿರುತ್ತವೆ:
ನನ್ನ ಮೆಚ್ಚಿನ ಅಧ್ಯಾಪಕರು ಹೊಡೆಯುವುದಿಲ್ಲ.
ಬಯ್ಯುವುದಿಲ್ಲ.
ಕೋಪಿಸುವುದಿಲ್ಲ.
ಪಕ್ಷಪಾತ ತೋರಿಸುವುದಿಲ್ಲ.
ನಗು ನಗುತ್ತ ಇರುತ್ತಾರೆ.
ಮಾತಾಡಿಸುತ್ತಾರೆ.
ಚೆನ್ನಾಗಿ ಪಾಠ ಮಾಡುತ್ತಾರೆ.
ಚೆನ್ನಾಗಿ ಬಟ್ಟೆಬರೆ ತೊಟ್ಟಿರುತ್ತಾರೆ.
ಲಕ್ಷಣವಾಗಿ ಕಾಣಿಸುತ್ತಾರೆ.
ಶುಚಿಯಾಗಿರುತ್ತಾರೆ.
ಸ್ಪಷ್ಟವಾಗಿ ಉಚ್ಚರಿಸುತ್ತಾರೆ.
ಅವರ ಹತ್ತಿರ ಯಾವ ಪ್ರಶ್ನೆ ಬೇಕಾದರೂ ಕೇಳಿದರೂ ಉತ್ತರಿಸುತ್ತಾರೆ.
ನನಗೆ ಕಪ್ಪು ಹಲಗೆಯ ಮೇಲೆ ಬರೆಯುವುದಕ್ಕೆ ಅವಕಾಶ ಕೊಡುತ್ತಾರೆ.
ಮಾರ್ಕು ಕೊಡುವುದರಲ್ಲಿ ಅವರು ತಪ್ಪು ಮಾಡಿದರೆ ತಿದ್ದಿಕೊಳ್ಳುತ್ತಾರೆ.
ಹೀಗೆ ಈ ಪಟ್ಟಿ ಮುಂದರಿಯಬಹುದು. ಕೆಲವು ವಿದ್ಯಾರ್ಥಿಗಳು ಕೆಲವೊಂದು ಕಾರಣಗಳನ್ನು ಮಾತ್ರವೇ ಕೊಡಬಹುದು. ವಿದ್ಯಾರ್ಥಿಗಳು ಕಾರಣ ಕೊಡುವುದಕ್ಕೆ ಯಾಕೆ ಹಿಂಜರಿಯುತ್ತಾರೆ ಎಂದರೆ ತಾವು ಮೆಚ್ಚುವ ಅಧ್ಯಾಪಕರನ್ನು ತಾವು ಯಾಕೆ ಮೆಚ್ಚುತ್ತೇವೆ ಎಂದು ಅವರು ಯೋಚಿಸಿಯೇ ಇರುವುದಿಲ್ಲ. ಆದ್ದರಿಂದ ಈ ಪ್ರಶ್ನೆಯೇ ಅವರಿಗೆ ವಿಚಿತ್ರವಾಗಿ ಕಾಣಿಸಬಹುದು. ಹಾಗೂ ಈ ಮೆಚ್ಚುಗೆಯಲ್ಲೂ ಬೇರೆ ಬೇರೆ ಮಜಲುಗಳಿರಬಹುದು. ಕೆಲವು ಅಧ್ಯಾಪಕರನ್ನು ವಿದ್ಯಾರ್ಥಿಗಳು ತುಂಬಾ ಹಚ್ಚಿಕೊಳ್ಳುತ್ತಾರೆ. ತಾವು ಅವರಂತೆಯೇ ಆಗಬೇಕು ಎಂದುಕೊಂಡು ಅವರನ್ನು ಅನುಸರಿಸಲು ಪ್ರಾರಂಭಿಸುತ್ತಾರೆ.
ತಾವು ತುಂಬಾ ಮೆಚ್ಚುವ ಅಧ್ಯಾಪಕರು ಕಲಿಸುವ ವಿಷಯಗಳನ್ನು ವಿದ್ಯಾರ್ಥಿಗಳು ಚೆನ್ನಾಗಿ ಕಲಿತು ಅವುಗಳಲ್ಲಿ ಒಳ್ಳೆಯ ಅಂಕಗಳನ್ನು ಗಳಿಸುವುದು ಸಾಮಾನ್ಯ. ಆದ್ದರಿಂದ ಅಧ್ಯಾಪಕರು ಕಲಿಸುವಾಗ ಈ ಮನೋ ವಿಶ್ಲೇಷಣಾತ್ಮಕ ಸಂಗತಿಯನ್ನು ನೆನಪಿಟ್ಟುಕೊಳ್ಳುವುದು ಅಗತ್ಯ. ತಾನು ಯಾರಿಂದಲೂ, ವಿದ್ಯಾರ್ಥಿಗಳಿಂದ ಸಹಾ, ಮೆಚ್ಚುಗೆಗಳಿಸುವುದಕ್ಕೆ ಪ್ರಯತ್ನಿಸುವುದು ಬೇಕಿಲ್ಲ ಎಂದುಕೊಳ್ಳುವುದರಿಂದ ದೊಡ್ಡ ನಿಷ್ಠುರ ತತ್ವವನ್ನು ಪಾಲಿಸಿದಂತೇನೋ ಆಗಬಹುದು. ಆದರೆ ಅದರಿಂದ ಯಾರಿಗೂ ಉಪಯೋಗವಿಲ್ಲ. ಅಧ್ಯಾಪಕರು ಈ ರೀತಿಯ ಮೆಚ್ಚುಗೆ ಗಳಿಸುವುದು ತಮ್ಮ ವೈಯಕ್ತಿಕ ಅಗತ್ಯವಲ್ಲದಿದ್ದರೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅಗತ್ಯವಾಗುತ್ತದೆ.
ವಿದ್ಯಾರ್ಥಿಗಳು ಮೆಚ್ಚುವ ಅಧ್ಯಾಪಕರಿರುವಂತೆಯೇ ಮೆಚ್ಚದಿರುವ ಅಧ್ಯಾಪಕರೂ ಇರಬಹುದು. ಕೆಲವೊಮ್ಮೆ ಈ ಋಣಾತ್ಮಕ ಧೋರಣೆ ದ್ವೇಷದತ್ತ ಸರಿಯಲೂಬಹುದು. ಚಿಕ್ಕ ಮಕ್ಕಳಿಗೆ ನಾನು ಈ ಪ್ರಶ್ನೆಯನ್ನೂ ಕೇಳುವುದಿದೆ: ‘ನೀವು ಮೆಚ್ಚದ ಅಧ್ಯಾಪಕರು ಯಾರು, ಯಾವ ಕಾರಣಕ್ಕೆ ಎಂಬುದಾಗಿ. ಮೆಚ್ಚದಿರುವ ಕಾರಣಗಳು ಮೆಚ್ಚುವ ಕಾರಣಗಳಿಗೆ ತದ್ವಿರುದ್ಧವಾಗಿರುತ್ತವೆ ಮತ್ತು ಈ ಮೆಚ್ಚದ ಅಧ್ಯಾಪಕರ ಕಾರಣದಿಂದಾಗಿ ಅವರು ಕಲಿಸುವ ವಿಷಯಗಳಲ್ಲಿ ವಿದ್ಯಾರ್ಥಿಗಳು ಆಸಕ್ತಿ ಕಳೆದುಕೊಂಡು ಕೆಲವು ಸಲ ಅನುತ್ತೀರ್ಣರು ಕೂಡಾ ಅಗಬಹುದು. ‘ನನಗೆ ಲೆಕ್ಕ ಎಂದರೆ ಕಂಡರಾಗುವುದಿಲ್ಲ’ ಎಂದು ಮುಂತಾಗಿ ವಿದ್ಯಾರ್ಥಿಗಳು ಹೇಳುವುದರ ಹಿಂದೆ ಅವರು ಹೇಳದಂಥ ಈ ರೀತಿಯ ಸತ್ಯಗಳು ಹುದುಗಿರುತ್ತವೆ.
ಈ ಮೆಚ್ಚುವಿಕೆ ಮತ್ತು ಮೆಚ್ಚದಿರುವಿಕೆ ವಿದ್ಯಾಭ್ಯಾಸದ ಎಲ್ಲ ಹಂತಗಳಲ್ಲೂ ಇರಬಹುದು -ಕೇವಲ ಪ್ರಾಥಮಿಕ ಶಾಲೆಗಳಲ್ಲಿ ಮಾತ್ರವೆಂದೇನೂ ಇಲ್ಲ. ಎಂದರೆ ಯೂನಿವರ್ಸಿಟಿಯ ಸ್ನಾತಕೋತ್ತರ ತರಗತಿಗಳಲ್ಲಿ ಕಲಿಸುವ ಅಧ್ಯಾಪಕರಿಗೆ ಕೂಡಾ ಈ ಮಾತು ಅನ್ವಯಿಸುತ್ತದೆ. ಇದು ಎಲ್ಲರ ಅನುಭವವಾದ್ದರಿಂದ ಈ ಕುರಿತು ಹೆಚ್ಚು ಹೇಳುವ ಅಗತ್ಯವೂ ಇಲ್ಲ.
ಎಲ್ಲ ಅಧ್ಯಾಪಕರೂ ಒಂದು ಕಾಲದಲ್ಲಿ ವಿದ್ಯಾರ್ಥಿಗಳೇ ಆಗಿದ್ದುದರಿಂದ ವಿದ್ಯಾರ್ಥಿಗಳು ಯಾವ ರೀತಿಯ ಅಧ್ಯಾಪಕರನ್ನು ಮೆಚ್ಚುತ್ತಾರೆ, ಯಾವ ರೀತಿಯ ಅಧ್ಯಾಪಕರನ್ನು ಮೆಚ್ಚುವುದಿಲ್ಲ ಎಂದು ತಿಳಿಯುವುದಕ್ಕೆ ಸ್ವಾನುಭವದ ಮೊರೆಹೋದರೆ ಸಾಕು. ವಿದ್ಯಾರ್ಥಿಯಾಗಿ ನನ್ನದೇ ಅನುಭವಗಳನ್ನು ಹೇಳುವುದಾದರೆ, ನಾನು ಓದಿದ ಪ್ರಾಥಮಿಕ ಶಾಲೆಯಲ್ಲಿ ನನಗೆ ಒಳ್ಳೆಯ ಅಧ್ಯಾಪಕರೆಂದು ಯಾರೂ ಅನಿಸಿದ್ದಿಲ್ಲ. ಹಳ್ಳಿಯೊಂದರ ಅಂತರಾಳದಲ್ಲಿದ್ದ ಆ ಶಾಲೆಯಲ್ಲಿ ಒಟ್ಟು ಮೂರೋ ನಾಲ್ಕೋ ಅಧ್ಯಾಪಕರಿದ್ದು ಅವರೆಲ್ಲರೂ ಒಂದಲ್ಲ ಒಂದು ವಿಧದಲ್ಲಿ ಕೆಟ್ಟ ಅಧ್ಯಾಪಕರೇ ಆಗಿದ್ದರು. ಬಡಿಯುತ್ತಿದ್ದರು, ಹೊಡೆಯುತ್ತಿದ್ದರು, ಬಯ್ಯುತ್ತಿದ್ದರು, ಹಂಗಿಸುತ್ತಿದ್ದರು. ಬೆಂಚಿನ ಮೇಲೆ ನಿಲ್ಲಿಸುತ್ತಿದ್ದರು, ಒಬ್ಬ ವಿದ್ಯಾರ್ಥಿಯನ್ನು ಇನ್ನೊಬ್ಬನ ಕಾಲುಗಳೆಡೆಯಲ್ಲಿ ನುಗ್ಗಿಸುತ್ತಿದ್ದರು, ಒಬ್ಬನಿಂದ ಇನ್ನೊಬ್ಬನ ಕಿವಿ ಹಿಂಡಿಸುತ್ತಿದ್ದರು. ಬಡಿಯುವ ಬೆತ್ತ ಆಗಾಗ ಮುರಿಯುತ್ತಿದ್ದುದರಿಂದ ನಮ್ಮಿಂದಲೇ ಅಡರುಗಳನ್ನು ತರಿಸಿ ನಮಗೇ ಪೆಟ್ಟು ಹಾಕುತ್ತಿದ್ದರು. ಇಷ್ಟೊಂದು ಶಿಕ್ಷೆಗೆ ಈ ಅಧ್ಯಾಪಕರಲ್ಲಿ ಮನೆಮಾಡಿದ್ದ ಹಿಂಸಾಪ್ರವೃತ್ತಿಯಲ್ಲದೆ ಬೇರೇನು ಕಾರಣವೂ ಇರಲಿಲ್ಲ. ಈ ಅಧ್ಯಾಪಕರು ಅದೇನೋ ಬರೆಯುವ ಕೆಲಸ ಕೊಟ್ಟು ಕ್ಲಾಸಿನ ಹೊರಗೆ ಚಿಟ್ಟೆಯ ಮೇಲೆ ಕೂತು ಬೀಡಿ ಸೇದುತ್ತಿದ್ದರು, ಹರಟೆ ಹೊಡೆಯುತ್ತಿದ್ದರು. ಅವರು ಶಾಲೆಗೆ ಬರುತ್ತಿದ್ದುದೂ ತಡವಾಗಿ. ಅವರು ಬರದಿದ್ದರೇ ಓಳಿತು ಎನ್ನುವ ಮನೋಭಾವ ನಮ್ಮಲ್ಲಿ ಮನೆಮಾಡಿತ್ತು. ನಾನು ಗಣಿತದಲ್ಲಿ ಆಸಕ್ತಿ ಕಳೆದುಕೊಂಡುದು ಮಾತ್ರವೇ ಅಲ್ಲ, ಗಣಿತದ ಕುರಿತಾಗಿ ಇಡೀ ಜೀವಮಾನ ಭಯಪಡುವಂತಾದ್ದು ಇದೇ ಶಾಲೆಯ ಅಧ್ಯಾಪಕರಿಂದಾಗಿ. ಮಗ್ಗಿ ಹೇಳುವಾಗ ತಪ್ಪಿದರೆ ಅವಮಾನ ಮಾಡುತ್ತಿದ್ದರು. ಖಂಡಭಾಗಹಾರವೆಂದರೆ ನನ್ನ ಮೈ ನಡುಗುತ್ತಿತ್ತು. ಸರಿಯಾಗಿ ಸಾಕಷ್ಟು ಸಲ ವಿವರಿಸದೇ ಲೆಕ್ಕ ಕೊಟ್ಟು ಅದನ್ನು ಪರಿಹರಿಸುವಂತೆ ಹೇಳುತ್ತಿದ್ದರು. ತಪ್ಪಾದರೆ ಮತ್ತೆ ಶಿಕ್ಷೆ. ಈ ಶಾಲೆಯ ಹೆಡ್ಮಾಸ್ಟರ್ ಎಂಬ ವ್ಯಕ್ತಿ ಅದೆಷ್ಟು ಕ್ರೂರಿಯಾಗಿದ್ದರೆಂದರೆ ನಾನು ಬಹುಶಃ ಯಾರನ್ನಾದರೂ ದ್ವೇಷಿಸುವುದಾದರೆ ಆ ವ್ಯಕ್ತಿಯನ್ನು ಮಾತ್ರ.
ಮುಂದೆ ಹೈಸ್ಕೂಲಿಗೆ ಬಂದಾಗ ಎಲ್ಲವೂ ಸರಿಹೋದೀತು ಎಂದು ನಾನಂದುಕೊಂಡಿದ್ದರೆ ಅಲ್ಲೂ ನಾನು ಮೆಚ್ಚದಂಥ ಕೆಲವು ಅಧ್ಯಾಪಕರಿದ್ದರು. ಮುಖ್ಯವಾಗಿ ನಾನು ಆ ಶಾಲೆಯಲ್ಲಿ ಕಂಡುದು ತಾರತಮ್ಯ ಮನೋಭಾವ. ಇಲ್ಲಿನ ಅಧ್ಯಾಪಕರು ಬಡಿಯಿದೆ ಇದ್ದರೂ, ಬಡ ಕುಟುಂಬದಿಂದ ಬಂದಂಥ ನನ್ನಂಥವರನ್ನು ಅವರು ಸ್ವಲ್ಪ ಕಾರಣಕ್ಕೂ ಹಂಗಿಸುತ್ತಿದ್ದರು. ‘ಏನೋ, ಬೆಳಿಗ್ಗೆ ಏನು ತಿಂದು ಬಂದಿದ್ದೀ? ಗಂಜೀನಾ?’ ಎಂದು ಸುರುವಾಗುತ್ತಿತ್ತು ಅವರ ಮಾತು. ಆಗ ಉಳಿದವರು ನಗಾಡುತ್ತಿದ್ದರು. ಕ್ಲಾಸಿನ ಹೊರಗೆ ಬುಲ್ಲಿಗಳಿಗೆ ಇದೇ ಸಾಕು ‘ಹೆಹ್ಹೆಹ್ಹೇ ಗಂಜಿತಿಮ್ಮಯ್ಯ!’ ಎಂದು ಬೆನ್ನುಹತ್ತಿ ಪೀಡಿಸುವುದಕ್ಕೆ. ನಾನು ಮೆಚ್ಚದ ಒಬ್ಬ ಅಧ್ಯಾಪಕರ ಬಗ್ಗೆ ಇಲ್ಲಿ ಹೇಳಬೇಕು. ಅವರು ಆರನೆ ತರಗತಿಯಲ್ಲಿ ನಮಗೆ ಸಾಮಾಜಿಕ ಅಧ್ಯಯನ ಕಲಿಸುತ್ತಿದ್ದರು ಎಂದು ಲೆಕ್ಕ. ಏನು ಕಲಿಸಿದರೂ ಒಂದೇ. ಯಾಕೆಂದರೆ ಅವರು ಕ್ಲಾಸಿಗೆ ಬಂದು ಕುರ್ಚಿಯಲ್ಲಿ ಕೂತುಕೊಂಡರೆ ಆಮೇಲೆ ಏಳುವುದು ಕ್ಲಾಸಿನಿಂದ ಹೊರ ಹೋಗುವಾಗ ಮಾತ್ರ. ಪಾಠ ಪುಸ್ತಕದಿಂದ ನೇರವಾಗಿ ಒಂದೋ ತಾವೇ ಓದುತ್ತಿದ್ದರು, ಇಲ್ಲವೇ ವಿದ್ಯಾರ್ಥಿಗಳಿಂದ ಓದಿಸುತ್ತಿದ್ದರು. ಅವರು ಮಾತಾಡುವಾಗ ಜೊಲ್ಲು ಹರಿಸುವುದಿತ್ತು. ಪಾಠದ ಕುರಿತು ಕೊಡುವ ವಿವರಣೆ ಏನೆಂದೇ ಯಾರಿಗೂ ಅರ್ಥವಾಗುತ್ತಿರಲಿಲ್ಲ. ಹುಡುಗಿಯರನ್ನು ತಾವು ಕುಳಿತಿದ್ದ ಮೇಜಿನ ಸಮೀಪಕ್ಕೆ ಕರೆಸಿ ಅವರ ಮೈಮುಟ್ಟುವುದು ಇವರ ಚಾಳಿ. ಕೆಲವೊಮ್ಮೆ ಈ ಹುಡುಗಿಯರನ್ನು ಚಿವುಟುವ ನೆವದಿಂದ ಅವರ ಲಂಗಕ್ಕೂ ಕೈಹಾಕುತ್ತಿದ್ದರು! ಈ ಅಧ್ಯಾಪಕರು ದಿನವೂ ಮುಖಕ್ಷೌರ ಮಾಡಿಕೊಳ್ಳುತ್ತಿರಲಿಲ್ಲ. ವಾರಗಟ್ಟಲೆ ಗಡ್ಡ ಹಾಗೇ ಇರುತ್ತಿತ್ತು. ತಲೆಗೂದಲನ್ನು ಮೂರು ತಿಂಗಳಿಗೋ ನಾಲ್ಕು ತಿಂಗಳಿಗೋ ಒಮ್ಮೆ ತೆಗೆಸುತ್ತಿದ್ದುದು. ಇವರು ದಿನವೂ ಹಲ್ಲು ಕೂಡ ಉಜ್ಜುತ್ತಿರಲಿಲ್ಲವೆಂದು ತೋರುತ್ತದೆ. ಅಂತೂ ಬಾಯಿ ತೆರೆದರೆ ನೋಡಲಾಗುತ್ತಿರಲಿಲ್ಲ. ಬಟ್ಟೆ ಬರೆಯಂತೂ ತೀರಾ ಕೊಳಕು.
ಆದರೆ ಇದೇ ಶಾಲೆಯಲ್ಲಿ ನಾನ ಬಹುವಾಗಿ ಮೆಚ್ಚಿಕೊಂಡ ಅಧ್ಯಾಪಕರೂ ಸಾಕಷ್ಟು ಇದ್ದರು. ಇವರಲ್ಲಿ ಮುಖ್ಯವಾಗಿ ಸುಬ್ರಾಯಭಟ್ ಎಂಬ ಹೊಸದಾಗಿ ಬಂದ ಹೆಡ್ಮಾಸ್ತರು. ಅವರ ಬಟ್ಟೆ ಬರೆ ಅತ್ಯಂತ ಶುಭ್ರ. ದಿನಾ ಗಡ್ಡ ತೆಗೆದು ನುಣ್ಣಗಿದ್ದ ಮುಖ. ತಲೆಗೆ ಎಣ್ಣೆ ಹಾಕಿ ನೀಟಾಗಿ ಬಾಚಿಕೊಳ್ಳುತ್ತಿದ್ದರು. ಅವರು ಮುಗುಳ್ಳಗುತ್ತ ಅಲ್ಲದೆ ತರಗತಿಗೆ ಬಂದುದೇ ಇಲ್ಲ. ಯಾರನ್ನೂ ಬಯ್ಯುತ್ತಿರಲಿಲ್ಲ. ಹೆಚ್ಚೆಂದರೆ, ಏನು ಎಂದು ಲಘುವಾಗಿ ತಮಾಷೆ ಮಾಡಿಬಿಡುತ್ತಿದ್ದರು, ಅಷ್ಟೆ. ಅವರು ನಮಗೆ ಕಲಿಸುತ್ತಿದ್ದುದು ಇಂಗ್ಲಿಷ್. ನನಗೆ ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತಿ ಮೂಡಿದ್ದು ಅವರ ಪಾಠದಿಂದಾಗಿಯೇ. ಇಡೀ ಶಾಲೆಯ ಹೆಡ್ಮಾಸ್ಟರ್ ಆಗಿದ್ದರೂ ಅವರು ಯಾರಿಗೂ ದೈಹಿಕ ಶಿಕ್ಷೆ ನೀಡಿದುದಿಲ್ಲ. ಯಾರನ್ನೂ ಕೆಟ್ಟುದಾಗಿ ಮಾತಾಡಿಸಿದುದಿಲ್ಲ. ಇದೇ ರೀತಿಯ ಎಸ್. ವಿ. ಎಲ್. ಎನ್. ಶರ್ಮಾ ಎಂಬ ಅಧ್ಯಾಪಕರು ಕೂಡಾ ನಮಗೆಲ್ಲ ಸ್ಫೂರ್ತಿದಾಯಕ ಅಧ್ಯಾಪಕರಾಗಿದ್ದರು. ಇವರು ಶುಭ್ರವಾದ ಬಿಳಿ ಖಾದಿ ಬಟ್ಟೆ ತೊಡುತ್ತಿದ್ದರು. ತಲೆಗೂದಲನ್ನು ಕುವೆಂಪು ಶೈಲಿಯಲ್ಲಿ ಬಾಚುತ್ತಿದ್ದರು. ಪುಟುಪುಟನೆ ಕ್ಲಾಸಿಗೆ ಬರುತ್ತಿದ್ದರು. ಅವರು ಪ್ರವೇಶಿದರೆ ಸಾಕು, ನಮ್ಮಲ್ಲಿ ವಿದ್ಯುತ್ ಸಂಚಾರವಾದಂತೆ. ಕೇವಲ ಪಾಠ ಮಾತ್ರವೇ ಅಲ್ಲ, ಅವರು ತಮಗೆ ಪ್ರಿಯವಾದ ಸಾಹಿತ್ಯ ಕೃತಿಗಳ ಬಗ್ಗೆ ನಮಗೇ ಹೇಳುತ್ತಿದ್ದರು-ಅನಕೃ, ತರಾಸು, ಬೇಂದ್ರೆ, ಕುವೆಂಪು, ಡಿವಿಜಿ ಮುಂತಾಗಿ. ಬೇಂದ್ರೆ, ಕುವೆಂಪು, ಡಿವಿಜಿ ಮೊದಲಾದವರ ಭಾವಗೀತೆಗಳನ್ನು ಅವರು ಸುಶ್ರಾವ್ಯವಾಗಿ ಹಾಡುತ್ತಿದ್ದರು. ಡಿವಿಜಿಯವರ ಮಂಕುತಿಮ್ಮನ ಕಗ್ಗ ಅದೇತಾನೇ ಪ್ರಕಟವಾಗಿತ್ತು. ಆ ಪುಸ್ತಕದಿಂದಲೂ ಅವರು ಕವಿತೆಗಳನ್ನು ಹಾಡಿತೋರಿಸುತ್ತಿದ್ದರು. ಅಂತಃಪುರಗೀತೆಗಳನ್ನಂತೂ ಅತ್ಯಂತ ಸೊಗಸಾಗಿ ಹಾಡುತ್ತಿದ್ದರು. ಜಯಂತಿ, ಜಯಕರ್ನಾಟಕ, ಜೀವನ ಮುಂತಾದ ಪತ್ರಿಕೆಗಳಿವೆ ಎನ್ನುವುದು ನಮಗೆ ಗೊತ್ತಾದ್ದು ಅವರ ಮೂಲಕವೇ. ಅವರು ತರಿಸುತ್ತಿದ್ದ ಜಯಂತಿ ಪತ್ರಿಕೆಯನ್ನು ನಾವು ಅವರಿಂದ ಇಸಿದುಕೊಂಡು ಓದಬಹುದಾಗಿತ್ತು; ಅವರೆಂದೂ ಇಲ್ಲವೆನ್ನುತ್ತಿರಲಿಲ್ಲ. ನನ್ನಂಥ ಹಳ್ಳಿ ಗುಗ್ಗುಗಳಿಗೆ ಆಧುನಿಕ ಕನ್ನಡ ಸಾಹಿತ್ಯದ ಪರಿಚಯ ಮಾಡಿಕೊಟ್ಟವರೇ ಶರ್ಮ ಮಾಸ್ಟ್ರು. ಕುವೆಂಪು ಅವರ ರಾಮಾಯಣ ದರ್ಶನಂ ಕೃತಿ ಕೂಡಾ ಪ್ರಕಟವಾದ್ದು ಆ ಕಾಲದಲ್ಲೇ. ಶರ್ಮರು ಅದನ್ನೂ ತಂದು ಕೆಲವು ಭಾಗಗಳನ್ನು ನಮ್ಮ ಮುಂದೆ ಓದಿಹೇಳಿದರು ಎಂದ ಮೇಲೆ ಅವರೆಷ್ಟು ‘ಅಪ್ ಟು ಡೇಟ್’ ಆಗಿರುತ್ತಿದ್ದರು. ತಮಗೆ ಗೊತ್ತಿರುವುದನ್ನು ತಮ್ಮ ವಿದ್ಯಾರ್ಥಿಗಳಿಗೂ ತಿಳಿಸಬಯಸುತ್ತಿದ್ದರು ಎನ್ನುವುದನ್ನು ಬೇರೆ ವಿವರಿಸಬೇಕಾಗಿಲ್ಲ.
ಸಾಹಿತ್ಯ ಮಾತ್ರವೇ ಅಲ್ಲ, ನಾಟಕ, ಆಟೋಟ ಸ್ಪರ್ಧೆ ಮುಂತಾದ ಪಠ್ಯೇತರ ಚಟುವಟಿಕೆಗಳನ್ನೂ ಅವರು ಅತ್ಯಂತ ಉತ್ಸಾಹದಿಂದ ನಡೆಸಿಕೊಡುತ್ತಿದ್ದರು. ಯಾವಾಗ ಎಲ್ಲಿ ನೋಡಿದರೂ ಅವರ ಮುಗುಳುನಗೆ, ಉತ್ಸಾಹಕ್ಕೆ ಕೊರತೆಯಿರುತ್ತಿರಲಿಲ್ಲ. ಇದೇ ಶಾಲೆಯಲ್ಲಿ ಇಂಥ ಇನ್ನಿತರ ಅದೆಷ್ಟೋ ಮಂದಿ ಅಧ್ಯಾಪಕರೂ ಇದ್ದರು ಎನ್ನುವುದು ಅಲ್ಲಿ ಕಲಿತವರ ಭಾಗ್ಯ.
ಅಧ್ಯಾಪಕರನ್ನು ಕೇವಲ ವಿದ್ಯಾರ್ಥಿಗಳು ಮೆಚ್ಚಿದರೂ ಸಾಲದು, ಜನ ಮೆಚ್ಚಬೇಕು. ಎಷ್ಟೇ ಕಡಿಮೆ ಸಂಬಳವಿರಲಿ, ಎಷ್ಟೇ ಅನಾಕರ್ಷಕ ಕೆಲಸವಾಗಿರಲಿ ಅಧ್ಯಾಪಕರು ಸಮಾಜಕ್ಕೆ ಆದರ್ಶಪ್ರಾಯರಾಗಿರುತ್ತಾರೆ, ಆಗಿರಬೇಕು. ಆದರೆ ಸಟ್ಟಾ, ಜುಗಾರಿ, ಇಸ್ಪೀಟು ಆಟಗಳಲ್ಲಿ ಕಾಲಕಳೆಯುವವರೂ, ಹೆಂಡತಿಗೆ ಹೊಡೆಯುವವರೂ, ಇಂಥ ಇನ್ನಿತರ ಪಾಪಕರ್ಮಗಳನ್ನು ಮಾಡುವವರೂ ಇದ್ದಾರೆ. ಶಾಲೆಯ ಹೊರಗೆ ಈ ರೀತಿ ಇರುವವರು ಕ್ಲಾಸಿನಲ್ಲಿ ಹೇಗಿರಬಹುದು ಎನ್ನುವುದನ್ನು ನಾವು ಊಹಿಸಿಕೊಳ್ಳಬಹುದು. ಅಧ್ಯಾಪಕರಿಗೆ ಇರುವುದು ಎರಡೇ ಆಯ್ಕೆ: ಓಳ್ಳೆಯ ಅಧ್ಯಾಪಕರಾಗುವುದು, ಇಲ್ಲವೇ ಕೆಟ್ಟ ಅಧ್ಯಾಪಕರಾಗಿರುವುದು. ಒಳ್ಳೆಯ ಅಧ್ಯಾಪಕರು ಸಮಾಜವನ್ನು ಕಟ್ಟುತ್ತಾರೆ, ಕೆಟ್ಟವರು ಒಡೆಯುತ್ತಾರೆ. ಶಾಲೆ ಕೇಂದ್ರಿತ ಗ್ರಾಮಾಂತರದಿಂದ ಬಂದ ನನಗೆ ಮತ್ತು ನನ್ನಂಥವರಿಗೆ ಇನ್ನೂ ಶಾಲೆಯೆಂದರೆ ಬಹು ದೊಡ್ಡ ಸಂಸ್ಥೆ; ಉಳಿದವೇನಿದ್ದರೂ ಅವೆಲ್ಲವೂ ಶಾಲೆಯ ಸುತ್ತಲೇ ಬೆಳೆದುಬರಬೇಕು-ಸಂಗೀತ, ಸಾಹಿತ್ಯ, ನಾಟಕ, ನೃತ್ಯ ಇತ್ಯಾದಿ ಎಲ್ಲವೂ. ಇಂದು ನಗರದಲ್ಲಿ ಸ್ಥಳಾಭಾವದಿಂದ ಇಂಥ ಶಾಲೆಗಳೇ ಅಪರೂಪವಾಗಿವೆ. ಸೌಲಭ್ಯಗಳಿರುವ ಶಾಲೆಗಳು ಬಡವರ ಮಕ್ಕಳಿಗೆ ನಿಲುಕದಂಥವು. ಹಳ್ಳಿಗಳಲ್ಲೂ ಶಾಲೆ ತನ್ನ ಮೊದಲಿನ ಸ್ಥಾನ ಇರಿಸಿಕೊಂಡಿಲ್ಲ. ಇದಕ್ಕೆ ಯಾರು ಯಾರನ್ನೋ ದೂರುವ ಬದಲು ಆಯಾ ಪರಿಸರದಲ್ಲಿ ವಾಸಿಸುವವರೇ ಪರಿಹಾರ ಕಂಡುಹುಡುಕಬೇಕು. ಒಳ್ಳೆಯ ಕಟ್ಟಡ, ಆಟದ ಬಯಲು, ಶೌಚಾಲಯ, ಕ್ಯಾಂಟೀನು, ಗ್ರಂಥಾಲಯ, ಸಭಾಗೃಹ, ಟೀವಿ, ಕಂಪ್ಯೂಟರ್, ಇಂಟರ್ನೆಟ್, ವಾಹನ ಸೌಕರ್ಯ ಮುಂತಾದ ಸೌಲಭ್ಯಗಳನು ಒಳಗೊಂಡಂಥ ಶಾಲೆ ಊರಿಗೊಂದು ಇದ್ದರೆ ಸಾಕು. ಜಾತಿ ಮತ ಧರ್ಮ ರಾಜಕೀಯಗಳನ್ನು ಮರೆತು ಊರವರೆಲ್ಲ ಒಂದಾಗಿ ಸೇರಿದರೆ ಇದು ಸಾಧ್ಯ.
*****