ಆದಿವಾಸಿಗಳು ಅರಣ್ಯದಲ್ಲೇ ಇರಬೇಕೇ?

ಆದಿವಾಸಿಗಳು ಅರಣ್ಯದಲ್ಲೇ ಇರಬೇಕೇ?

ಕಾಡಿನಲ್ಲಿರುವವರು ಕಾಡಿನಲ್ಲೇ ಇರಲಿ, ಪಾಪ, ಅವರು ಆ ಪರಿಸರಕ್ಕೆ ಓಗ್ಗಿದ್ದಾರೆ. ಅವರಿಗೆ ಅಲ್ಲಿಗೇ ಮೂಲಭೂತ ಅಗತ್ಯಗಳನ್ನು ಒದಗಿಸಿದರೆ ಸಾಕು.. ಮೂಲಭೂತ ಅಗತ್ಯಗಳೆಂದರೆ? ಮನೆ, ನೀರು, ವಿದ್ಯುತ್, ಟೆಲಿಫೋನು, ಟೀವಿ, ಆಸ್ತತ್ರೆ, ಶಾಲೆ, ಅಂಗಡಿಗಳು, ಪತ್ರಿಕೆಗಳು, ರಸ್ತೆ, ಸಾರಿಗೆ ….

ಇದೆಷ್ಟು ತಾರ್ಕಿಕವಾದ ಹಾಗೂ ಅರಣ್ಯವಾಸಿ ಮತ್ತು ಗಿರಿಜನರ ಅರ್ಥಾತ್ ಆದಿವಾಸಿ ಜನರ ಕುರಿತಾದ ಕಳಕಳಿಯ ಮಾತಿನಂತೆ ಕೇಳಿಸುತ್ತದೆ, ಅಲ್ಲವೇ? ಆದರೆ, ಇಂಥ ಮಾತಿನ ಹಿಂದಿರುವ ಅನ್ಯಾಯದ ಕುರಿತು ತುಸು ಯೋಚಿಸಿ ನೋಡಿ. ಸಾವಿರಾರು ವರ್ಷಗಳ ಕಾಲ ಹಿಂದುಳಿದವರನ್ನು ಹೀಗೇ ಇನ್ನೂ ಇರಗೊಳಿಸುವ ಪ್ರವೃತ್ತಿಯಲ್ಲದೆ ಇದು ಮತ್ತಿನ್ನೇನು? ಯಾಕೆಂದರೆ, ಮನುಷ್ಯನ ‘ಮೂಲಭೂತ’ ಅಗತ್ಯಗಳು ಎಂಬ ಕಲ್ಪನೆಯೇ ಇಂದಿನ ಯುಗದಲ್ಲಿ ಸಮಸ್ಯಾತ್ಮಕವಾದುದು. ಯಾವುದು ಮೂಲಭೂತ, ಯಾವುದು ಅಲ್ಲ ಎಂದು ಕೇಳಿದರೆ. ತಮ್ಮ ತಮ್ಮ ಅರಿವಿಗೆ ಮತ್ತು ಆಕಾಂಕ್ಷೆಗೆ ತಕ್ಕಂತೆ ಜನರಿಂದ ಉತ್ತರಗಳು ಸಿಗಬಹುದು. ಕೆಲವು ವರ್ಷಗಳ ಹಿಂದೆ ಟೆಲಿಫೋನು ಮೂಲಭೂತ ಅಗತ್ಯ ಆಗಿರಲಿಲ್ಲ. ಆದರೆ ಈಗ? ಕಂಪ್ಯೂಟರಿನಲ್ಲಿ ಈ ಲೇಖನ ಬರೆಯುವ ನನಗೆ ಕಂಪ್ಯೂಟರ್, ಇಂಟರ್‌ರ್ನೆಟ್ ಮುಂತಾದುವು ಇಂದು ಮೂಲಭೂತ ಅಗತ್ಯಗಳು. ನಿಜ, ಆದಿವಾಸಿಗಳನ್ನು ಕೇಳಿದರೆ ಅವರು ಕಂಪ್ಯೂಟರನ್ನಾಗಲಿ ಇಂಟರ್‌ನೆಟ್ಟನ್ನಾಗಲಿ ತಮ್ಮ ಮೂಲಭೂತ ಪಟ್ಟಿಯಲ್ಲಿ ಸೇರಿಸಲಾರರು. ಯಾಕೆಂದರೆ ಅವರಿಗೆ ಇಂಥ ಸೌಲಭ್ಯಗಳು ಇವೆಯೆಂಬುದೇ ಗೊತ್ತಿರುವುದಿಲ್ಲ, ಗೊತ್ತಿದ್ದರೂ ಅವುಗಳ ಉಪಯೋಗ ಅವರ ಜನಜೀವನದಲ್ಲಿ ಗೋಚರಿಸಲಾರದು. ಆದರೆ ಇಂದಿನ ಮನುಷ್ಯನಿಗೆ ಕೇವಲ ಮನೆ, ನೀರು ಮಾತ್ರವೇ ಮೂಲಭೂತ ಅವಶ್ಯಕತೆಯಲ್ಲ; ಉನ್ನತ ವಿದ್ಯಾಭ್ಯಾಸ, ಕಲೆ, ವಿಜ್ಞಾನ, ಉದ್ಯೋಗ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅವಕಾಶಗಳೂ ಅಷ್ಟೇ ಅಗತ್ಯವಾದುವು. ನನ್ನನ್ನು ಕೇಳಿದರೆ, ಪ್ರತಿಯೊಬ್ಬನಿಗೂ ವಿದ್ಯಾಭ್ಯಾಸ, ಉದ್ಯೋಗಾವಕಾಶ, ಕಂಪ್ಯೂಟರ್ ಮತ್ತು ಇಂಟರ್ನೆಟ್ ತಂತ್ರಜ್ಞಾನ ಅಗತ್ಯ. ನನಗೆ ಮುಖ್ಯವೆನಿಸುವುದು ಇನ್ನೊಬ್ಬನಿಗೂ ಮುಖ್ಯ ಹಾಗೂ ಕನಿಷ್ಠ ನನಗೆ ದೊರಕಿದಂಥ ಅವಕಾಶಗಳು ಇತರರಿಗೂ ದೊರಕಬೇಕು, ನನಗೆ ಸಿಕ್ಕಿದಂಥ ಸೌಲಭ್ಯಗಳು ಇತರರಿಗೂ ಸಿಗಬೇಕು. ಇದಕ್ಕಿಂತ ಬೇರೆ ರೀತಿಯಲ್ಲಿ ಚಿಂತಿಸುವುದು ನನ್ನಿಂದ ಸಾಧ್ಯವೇ ಇಲ್ಲ.

ಇದರ ಅರ್ಥ ಪ್ರತಿಯೊಬ್ಬನೂ ನನ್ನಂತೆ ಅಧ್ಯಾಪಕ, ಲೇಖಕ ಆಗಬೇಕಂದಲ್ಲ. ಆದರೆ ಅಂಥ ಆಯ್ಕೆಗಳು ಎಲ್ಲರದೂ ಆಗಬೇಕು ಎಂದು. ಅಧ್ಯಾಪಕ, ಲೇಖಕ ಮಾತ್ರವೇ ಅಲ್ಲ, ಕೃಷಿಕ, ಉದ್ಯಮಿ, ಕಲಾವಿದ, ವೈದ್ಯ, ವಕೀಲ, ಎಂಜಿನಿಯರ್, ವಿಜ್ಞಾನಿ, ತತ್ವಜ್ಞಾನಿ, ಸಮಾಜಸೇವಕ, ಬುದ್ಧಿಜೀವಿ ಆಗುವ ಅವಕಾಶಗಳು ಈ ಮೂಲನಿವಾಸಿಗಳೂ ಸೇರಿದಂತೆ ಪ್ರತಿಯೊಬ್ಬನಿಗೂ ದೊರಕಬೇಕು. ಆಯ್ಕೆಯೆಂದರೆ ಅವಕಾಶ. ಇಂಥ ಆಯ್ಕೆಗಳೇ ಇಲ್ಲದೆ ಜೀವನ ಸಾಗಿಸುವುದು ಒಂದು ತರದಲ್ಲಿ ಜೀತವೇ ಸರಿ. ನಿಜ, ಆದಿವಾಸಿಗಳನ್ನೋ ಗ್ರಾಮಸ್ಥರನ್ನೋ ಕೇಳಿದರೆ ನಾವು ಈಗ ಇದ್ದಲ್ಲೇ ಸುಖವಾಗಿದ್ದೇವೆ ಎಂದು ಹೇಳಬಹುದು; ಹೆಚ್ಚೆಂದರೆ, ಕೆಲವೊಂದು ಅನುಕೂಲತೆಗಳನ್ನು ದೊರಕಿಸಿಕೊಡಿ ಎಂದು ಕೇಳಬಹುದು. ತಮ್ಮ ಮಕ್ಕಳ ಕುರಿತಾಗಿಯೂ ಅವರ ಆಕಾಂಕ್ಷೆಗಳಿಗೆ ಮಿತಿಯಿರುತ್ತದೆ. ಯಾಕೆಂದರೆ, ಪ್ರತಿಯೊಬ್ಬರೂ ತಂತಮ್ಮ ಅರಿವಿನ ಗಡಿಯೊಳಗೆ ಮಾತ್ರವೇ ಯೋಚಿಸಬಲ್ಲರಷ್ಟೆ. ಮಾಹಿತಿ ತಂತ್ರಜ್ಞಾನದ ಅರಿವೇ ಇಲ್ಲದ ಒಬ್ಬಾತ ತನ್ನ ಮಗನೋ ಮಗಳೋ ಕಂಪ್ಯೂಟರ್ ಎಂಜಿನೀಯರ್ ಆಗಬೇಕೆಂಬ ಆಕಾಂಕ್ಷೆ ಹೇಗೆ ಇಟ್ಟುಕೊಳ್ಳುವುದು ಸಾಧ್ಯ? ಆದಿವಾಸಿಗಳಿಗಂತೂ ಹೊರಜಗತ್ತಿನ ಅರಿವೇ ಇಲ್ಲ. ಇದ್ದರೆ ಅದು ಶೋಷಣೆಯ ಭೀತಿ ಮಾತ್ರ. ಇನ್ನು ತಮ್ಮ ಮಕ್ಕಳ ಕುರಿತಾದ ಅವರ ಆಸೆಗಳು ಹೇಗಿರಬಹುದು?

ಆದರೆ ನಮ್ಮ ಗ್ರಾಮಾಂತರ ಪ್ರದೇಶಗಳಲ್ಲಿ ಬದಲಾವಣೆಗಳಾಗುತ್ತಿವೆ. ಹಳ್ಳಿಯ ಅನುಕೂಲಸ್ಥ ಕೃಷಿಕರ ಮಕ್ಕಳಾದರೂ ಉನ್ನತ ವಿದ್ಯಾಭ್ಯಾಸ ಗಳಿಸಿ ನಾಗರಿಕ ಉದ್ಯೋಗಗಳನ್ನು ಪಡೆಯುತ್ತಿದ್ದಾರೆ. ಕೆಲವೆಡೆ ಈ ವಿದ್ಯಮಾನ ಎಷ್ಟು ತೀವ್ರತರವಾಗಿದೆಯೆಂದರೆ, ಇನ್ನು ಎರಡು ಮೂರು ದಶಕಗಳಲ್ಲಿ ನಮ್ಮ ಹಳ್ಳಿಗಳಲ್ಲಿ ಕೃಷಿಕರೇ ಅಪರೂಪವಾಗುವ ಸಾಧ್ಯತೆಯಿದೆ. ಇದೊಂದು ಅಹಿತಕರ ವಿದ್ಯಮಾನವೆಂದು ಚಿತ್ರಿಸುವವರಿದ್ದಾರೆ. ಆದರೆ ನನಗೆ ಹಾಗನಿಸುವುದಿಲ್ಲ. ಉತ್ತಮ ಅವಕಾಶಗಳನ್ನು ಹುಡುಕಿಕೊಂಡು ಹೋಗುವುದು ಜಂಗಮರಾದ ಮನುಷ್ಯರ ಸ್ವಭಾವ. ಇದರಿಂದ ಕುಟುಂಬಗಳು ಒಡೆಯುತ್ತವೆ, ನೆನಪುಗಳು ಮಾಯವಾಗುತ್ತವೆ. ನಿಷ್ಠೆಗಳು ಕಡಿಮೆಯಾಗುತ್ತವೆ ಎಲ್ಲವೂ ನಿಜವೇ. ಆದರೆ ಇದನ್ನು ತಡೆಯುವುದು ಸಾಧ್ಯವಿಲ್ಲ, ಅದು ಸಾಧುವೂ ಅಲ್ಲ. ನಮ್ಮ ಹಳ್ಳಿಗಳಲ್ಲಿ ಕೃಷಿ ಉಳಿಯಬೇಕಾದರೆ, ಅದನ್ನು ಒಂದು ದೊಡ್ಡ ಉದ್ಯಮದ ರೀತಿಯಲ್ಲಿ ನಡೆಸಿಕೊಂಡು ಬರದೆ ಬೇರೆ ದಾರಿಯಿಲ್ಲ. ಯುರೋಪ್ ಮತ್ತು ಅಮೇರಿಕದಂಥ ದೇಶಗಳಲ್ಲಿ ಇದು ಈಗಾಗಲೇ ಆಗಿರುವ ಸಂಗತಿ. ಕೃಷಿ ಉದ್ಯಮೀಕರಣಗೊಳ್ಳುವುದು ಇಂದಿನ ಅಂತರರಾಷ್ಟ್ರ್‍ಈಯ ಆರ್ಥಿಕ ಶಕ್ತಿಯ ಅನಿವಾರ್ಯತೆ. ಪೇಟೆಗಳಲ್ಲಿ ಸಣ್ಣ ಅಂಗಡಿಗಳು ಮಾಯವಾಗುವಂತೆ, ಹಳ್ಳಿಗಳಲ್ಲಿ ಸಣ್ಣ ಹಿಡುವಳಿದಾರರೂ ಇರುವುದು ಬೇರೆ ಬೇರೆ ಕಾರಣಗಳಿಗಾಗಿ ಅಸಾಧ್ಯವಾಗುತ್ತದೆ. ಮುಖ್ಯವಾಗಿ ಈಗ ಹಳ್ಳಿಗಳಲ್ಲಿರುವುದು ಯುವಜನತೆಗೆ ಬೇಡವಾಗಿದೆ. ಯಾಕೆಂದರೆ ವ್ಯಕ್ತಿ ವಿಕಸನಕ್ಕೆ ಅಲ್ಲಿ ಅವಕಾಶಗಳು ಕಡಿಮೆ.

ಅವಕಾಶಗಳೆಂದರೆ ಏನೆಂದೇ ಗೊತ್ತಿರದ ಆದಿವಾಸಿಗಳ ಮಕ್ಕಳಲ್ಲಿ ‘ಮುಂದೆ ನೀವೇನಾಗಬೇಕು ಎಂದಿದ್ದೀರಿ?’ ಎಂದು ಕೇಳಿದರೆ ಅವರೇನು ತಾನೇ ಹೇಳಬಲ್ಲರು? ತಾನೊಬ್ಬ ನಟ, ನರ್ತಕ, ಸಾಹಿತಿ, ಕಲಾವಿದ, ವಿಜ್ಞಾನಿ, ಡಾಕ್ಟರ್, ಎಂಜಿನೀಯರ್ ಆಗಬೇಕು ಎಂದು ಅವರು ಹೇಳುತ್ತಾರೆಯೇ? ಹಳ್ಳಿಯಲ್ಲಿ ಚಿಕ್ಕ ಮಕ್ಕಳ ಮಹತ್ವಾಕಾಂಕ್ಷೆ ತಾವು ಬಸ್ ಕಂಡಕ್ಟರ್ ಅಥವಾ ಎಂಜಿನ್ ಡ್ರೈವರ್ ಆಗಬೇಕು ಎಂದು ಮಾತ್ರ ಇರುತ್ತದೆ! ಇದು ಸಹಜವೇ. ಯಾಕೆಂದರೆ ಈ ಮಕ್ಕಳಿಗೆ ಇವರೆಲ್ಲ ಆಕರ್ಷಕರಾಗಿ ಕಾಣಿಸುತ್ತಾರೆ. ಮುಂದೆ ಅವರ ಆಕಾಂಕ್ಷೆಗಳು ಹೆಚ್ಚುವುದು ಹೆಚ್ಚೆಚ್ಚು ವಿದ್ಯಾಭ್ಯಾಸ ಗಳಿಸುತ್ತಿರುವಾಗಲೇ. ಈ ವಿದ್ಯಾಭ್ಯಾಸದ ಅವಕಾಶವೇ ಇಲ್ಲದಾಗ ಅವರಿಗೆ ಹೆಚ್ಚಿನ ಆಕಾಂಕ್ಷೆಗಳೂ ಇರಲಾರವು.

ಮನುಷ್ಯಚರಿತ್ರೆಯ ಎಂಟುಸಾವಿರ ವರ್ಷಗಳ ಹಿಂದೆ ಹಂಟರ್-ಗ್ಯಾದರರ್ (Hunter-Gatherer ‘ಬೇಟೆಗಾರ-ಸಂಗ್ರಹಕಾರ’) ಎಂಬ ಯುಗವೊಂದು ಇತ್ತು. ಆಗ ಯಾರೂ ಏನನ್ನೂ ಉತ್ಪಾದನೆ ಮಾಡುತ್ತಿರಲಿಲ್ಲ; ಕೇವಲ ಪ್ರಾಣಿಗಳನ್ನು ಬೇಟೆಯಾಡಿ ಮತ್ತು ಕಾಡುತ್ತತ್ತಿಯನ್ನು ಸಂಗ್ರಹಿಸಿ ಜನರು ಆಹಾರ ಸಂಪಾದಿಸುತ್ತಿದ್ದರು. ಅವರ ಜೀವನ ಅರಣ್ಯಗಳಲ್ಲಿ ಸಾಗುತ್ತಿತ್ತು. ಯಾಕೆಂದರೆ, ಬೇಟೆಗೆ ಪ್ರಾಣಿಗಳಿರುವುದೂ ಕೊಯ್ಯಲು ಹಣ್ಣುಗಳು ಮತ್ತು ಅಗೆಯಲು ಗಡ್ಡೆಗಳಿರುವುದೂ ಕಾಡುಗಳಲ್ಲಿ. ನಂತರ ನಿಧಾನವಾಗಿ ಹೆಂಗಸರಿಂದ ಅಲ್ಲಲ್ಲಿ ಬೇಸಾಯ ಆರಂಭವಾಯಿತು, ಬೇಸಾಯಕ್ಕೆ ನೀರಾವರಿ ಹಾಗೂ ಉಪಕರಣಗಳು ಅಗತ್ಯವಾದುವು. ನೀರಿರುವ ಕಡೆ ಗುಡಿಸಲು ಕಟ್ಟಿ ಒಂದೆಡೆ ತಳವೂರುವುದು ಅಗತ್ಯವಾಯಿತು. ಜನ ಕಾಡುಗಳಿಂದ ನಾಡಿಗೆ ಬಂದರು. ಮನುಷ್ಯ ನಾಗರಿಕತೆ ಈ ರೀತಿ ಆರಂಭವಾಗುತ್ತದೆ. ಹೀಗಿದ್ದರೂ, ಕೆಲವು ಪಂಗಡಗಳು ಕಾಡುಗಳಲ್ಲೇ ಉಳಿದುವು. ಅಂಥ ಉಳಿಕೆಗಳನ್ನು ಈಗಲೂ ಹಲವೆಡೆ ಕಾಣುತ್ತಿದ್ದೇವೆ. ನಾಡಿಗೆ ಬಂದ ಜನಕ್ಕೂ ಕಾಡಿನಲ್ಲಿ ಉಳಿದಿರುವ ಪಂಗಡಗಳಿಗೂ ಮಧ್ಯೆ ಅಗಾಧವಾದ ಬಿರುಕು ಮೂಡಿರುವುದಕ್ಕೆ ಶತಮಾನಗಳ ಈ ಪತ್ಯೇಕತೆ ಒಂದು ಮುಖ್ಯ ಕಾರಣ. ಆದಿವಾಸಿಗಳು ತಮ್ಮ ಖುಷಿಯಿಂದ ಗುಡ್ಡಗಾಡುಗಳಲ್ಲಿ ಇದ್ದಾರೆ ಎಂದುಕೊಳ್ಳುವುದು ಅರ್ಥಹೀನವಾದ ಮಾತು. ಇತಿಹಾಸದ ಪುರೋಗತಿಯಲ್ಲಿ ನಿಂತಲ್ಲೇ ನಿಂತುಬಿಟ್ಟವರು ಅವರು.

ನನ್ನದೇ ಅನುಭವವಲಯಕ್ಕೆ ಸಂಬಂಧಿಸಿ ಹೇಳುವುದಾದರೆ, ಕಾಸರಗೋಡು ಸೇರಿದಂತೆ, ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ಕೊರಗ ಎಂಬ ಹೆಸರಿನ ಆದಿವಾಸಿ ಜನಾಂಗವಿದೆ. ಇವರು ಮೂಲತಃ ಅರಣ್ಯವಾಸಿಗಳು. ಬಹುಶಃ ತುಳುನಾಡಿನ ಮೂಲನಿವಾಸಿಗಳೂ ಆಗಿರಬಹುದು; ಯಾಕೆಂದರೆ ಕೊರಗರ ಮಾತೃಭಾಷೆ ತುಳು. ಬುಟ್ಟಿಗಳನ್ನು ಹೆಣೆದು ಮಾರಿ ಹೊಟ್ಟೆ ಹೊರೆಯುತ್ತಾರೆ. ಇವರು ಸವರ್ಣೀಯರ ಭೋಜನ ಸಮಾರಂಭ ಸಂದರ್ಭದಲ್ಲಿ ಬಂದು ಎಂಜಲೆಲೆಗಾಗಿ ಕಾಯುತ್ತಿದ್ದ ಘೋರ ದೃಶ್ಯವನ್ನು ನಾನು ಚಿಕ್ಕಂದಿನಲ್ಲಿ ನೋಡಿದ್ದೇನೆ. ಇವರು ಸವರ್ಣೀಯ ಜನರಿಂದ ಬಹಳ ದೂರದಲ್ಲೇ ಇರುತ್ತಿದ್ದುದು. ಈಗ ಇವರ ಸ್ಥಿತಿ ತುಸು ಬದಲಾಯಿಸಿರಬಹುದೇನೋ ನಿಜ; ಸರಕಾರಗಳು ಇವರಿಗೆ ದರ್ಖಾಸ್ತು ಜಾಗಗಳನ್ನು ನೀಡಿದ್ದಿದೆ. ಆದರೂ ಸವರ್ಣೀಯರು ಸಮಾಜದ ಮುಖ್ಯಧಾರೆಗೆ ಬರಲು ಬಿಡದ ಕಾರಣ ಇವರ ಸಾಮಾಜಿಕ ಸ್ಥಿತಿಯಲ್ಲಿ ಹೆಚ್ಚಿನ ಬದಲಾವಣೆಯೇನೂ ಆಗಿಲ್ಲ. ಭಾರತ ಸಂವಿಧಾನದ ಪ್ರಕಾರ ಇವರು ಪರಿಶಿಷ್ಪ ವರ್ಗಕ್ಕೆ ಸೇರಿದವರು: ವಿದ್ಯಾಭ್ಯಾಸ ಹಾಗೂ ಉದ್ಯೋಗಾವಕಾಶಗಳಲ್ಲಿ ಇವರಿಗೆ ಮೀಸಲಾತಿಯಿದೆ. ಆದರೂ, ಭಾರತಕ್ಕೆ ಸ್ವಾತಂತ್ರ್ಯ ದೊರೆತು ಎರಡು ತಲೆಮಾರುಗಳು ಕಳೆದಿದ್ದರೂ ಈ ಕೊರಗ ವರ್ಗದಿಂದ ಒಬ್ಬ ಕವಿಯೋ, ಡಾಕ್ಟರರೋ, ಪ್ರಾಧ್ಯಾಪಕರೋ, ರಾಜಕೀಯ ನೇತಾರರೋ, ಕನಿಷ್ಠ ಮೊದಲ ತಲೆಮಾರಿನ ಸ್ನಾತಕರೋ ಬಂದುದಾಗಿ ನನಗೆ ತಿಳಿದಿಲ್ಲ. ಇಂಥ ದೀನಾತಿದೀನ ವರ್ಗದ ಜನರನ್ನು ಇನ್ನೂ ಅರಣ್ಯದೊಳಗೇ ಇರಿಸಬೇಕೆಂದು ವಾದಿಸುವುದು ಅನೈತಿಕವಾಗುತ್ತದೆ.

ಅವಕಾಶವಂಚಿತರ ಸಮೀಪನದಲ್ಲಿ ಸಮಾಜಶಾಸ್ತ್ರಜ್ಞರು ನಾಲ್ಕು ಬಗೆಯ ಮಾದರಿಗಳನ್ನು ಗುರುತಿಸುತ್ತಾರೆ: ನೈತಿಕ (ethical), ಅನುಕಂಪನ (empathy), ವಕಾಲತು(advocacy), ಹಾಗೂ ಸಬಲೀಕರಣ (empowerment). ಈ ಹೆಸರುಗಳೇ ಸೂಚಿಸುವಂತೆ, ನಾವು ನೈತಿಕವಾಗಿ ‘ಕರೆಕ್ಟ್’ ಆಗಿದ್ದರೆ ಸಾಕು ಎನ್ನುವುದು ಮೊದಲ ಮಾದರಿ; ಅನುಕಂಪ ತೋರಿಸಬೇಕು ಎನ್ನುವುದು ಎರಡನೆಯದು; ಅವರ ಪರವಾಗಿ ವಾದಿಸಬೇಕು ಎನ್ನುವುದು ಮೂರನೆಯದು. ಈ ಮೂರೂ ಮಾದರಿಗಳಿಗೂ ಮಿತಿಗಳಿವೆ. ನಾಲ್ಕನೆಯದಾದ ಸಬಲೀಕರಣವೇ ಎಲ್ಲಕ್ಕಿಂತ ಮಿಗಿಲಾದುದು ಮತ್ತು ಇದಕ್ಕಿಂತ ಒಳ್ಳೆಯ ಮಾದರಿಯೇ ಇಲ್ಲ. ನಾವು ಅವಕಾಶವಂಚಿತರ ಕುರಿತು ಸರಿಯಾಗಿದ್ದರೆ ಸಾಲದು, ಅನುಕಂಪನವಿರಿಸಿದರೆ ಸಾಲದು, ವಕಾಲತು ವಹಿಸಿದರೂ ಸಾಲದು. ಇವು ಯಾವುದರಿಂದಲೂ ಶೋಷಿತರು ತಮಗೋಸ್ಕರ ತಾವೇ ಮಾತಾಡಿದಂತೆ ಆಗುವುದಿಲ್ಲ. ಸಬಲೀಕರಣಗೊಂಡಾಗಲೇ ಅವರಿಗೆ ನಿಜವಾದ ನ್ಯಾಯ ದೊರಕುವುದು.

ಸಬಲೀಕರಣವೆಂದರೆ ಇವರ ಕೈಗೆ ಬಂದೂಕುಗಳನ್ನು ಕೊಡುವುದಲ್ಲ. ಸಬಲೀಕರಣ ಸಾಧ್ಯವಾಗುವುದು ವಿದ್ಯಾಭ್ಯಾಸದಿಂದ ಮಾತ್ರವೇ. ಕೇವಲ ದರ್ಖಾಸ್ತು ಭೂಮಿಯನ್ನು ವಿತರಿಸುವುದರಿಂದಾಗಲಿ, ಸಣ್ಣಪುಟ್ಟ ಮನೆಗಳನ್ನು ಕಟ್ಟಸಿಕೊಡುವುದರಿಂದಾಗಲಿ, ಆದಿವಾಸಿಗಳ ಪ್ರತ್ಯೇಕತೆಯನ್ನು ನಿವಾರಿಸಿದಂತೆ ಆಗುವುದಿಲ್ಲ. ಆದಿವಾಸಿಗಳಿಗೋಸ್ಕರ ಅವರಿರುವ ಅರಣ್ಯಸ್ಥಳಗಳಲ್ಲೇ ನಾಗರಿಕ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎಂಬುದು ಕೂಡ ಸಮಸ್ಯೆಗೆ ಪರಿಹಾರವಲ್ಲ. ಯಾಕೆಂದರೆ ಕಾಡುಗಳಲ್ಲಿ ಶಾಲೆ ಕಾಲೇಜು, ಆಸ್ಪತ್ರೆಗಳನ್ನು ಸ್ಥಾಪಿಸುವುದು ಪ್ರಾಯೋಗಿಕ ಕಾರ್ಯವೆನಿಸದು. ಮಾತ್ರವಲ್ಲ, ಇದರಿಂದ ಅರಣ್ಯನಾಶ ಅಗುತ್ತದೆಯಲ್ಲದೆ ಈ ಪರಿಶಿಷ್ಟ ವರ್ಗದ ಜನ ಎಂದೂ ಮುಖ್ಯವಾಹಿನಿಗೆ ಪ್ರವೇಶಿಸುವುದೇ ಇಲ್ಲ. ಇವು ಅಮೇರಿಕದ ಕೆಂಪು ಇಂಡಿಯನ್‌ರ ಕಾದಿರಿಸಿದ ಕಾಲೊನಿಗಳ ಹಾಗೆ ಎಂದೆಂದಿಗೂ ಪ್ರತ್ಯೇಕವಾಗಿಯೇ ಉಳಿಯುತ್ತವೆ. ಅರಣ್ಯವಾಸಿಗಳನ್ನೆಲ್ಲ ಏಕಾ‌ಏಕಿ ಬಲವಂತವಾಗಿ ಎಬ್ಬಿಸಿ ಊರುಗಳಲ್ಲಿ ನೆಲಸುವಂತೆ ಮಾಡಬೇಕು ಎನ್ನುವುದೂ ಸರಿಯಾಗಲಾರದು. ಆದರೆ ಅವರ ಮಕ್ಕಳಿಗಾದರೂ ನಗರ ಪ್ರದೇಶಗಳಲ್ಲಿ ವಿದ್ಯಾಭ್ಯಾಸದ ಅನುಕೂಲತೆ ಕಲ್ಪಿಸಿಕೊಡುವುದು ಅಗತ್ಯವಾಗಿದೆ. ಅದು ಪ್ರತ್ಯೇಕ ‘ಗಿರಿಜನ’ ಶಾಲೆಗಳನ್ನು ಸ್ಥಾಪಿಸುವುದರಿಂದ ಅಲ್ಲ; ಆದಿವಾಸಿಗಳ ಮಕ್ಕಳು ಇತರ ವರ್ಗದ ಮಕ್ಕಳೊಂದಿಗೇ ವಿದ್ಯಾಭ್ಯಾಸ ಪಡೆಯುವಂತಾಗಬೇಕು. ಸರಕಾರವಾಗಲಿ, ಸ್ವಯಂಸೇವಾಸಕ್ತ ಸಂಘಟಕರಾಗಲಿ ಆದಿವಾಸಿಗಳ ನಿಜವಾದ ಸಬಲೀಕರಣದತ್ತ ಹೆಜ್ಜೆಯಿಟ್ಟಿರುವಂತೆ ಕಾಣಿಸುವುದಿಲ್ಲ.

ಕರ್ನಾಟಕದ ಮಲೆನಾಡಿನಲ್ಲಾಗಲಿ, ಆಂಧ್ರದ ನಲ್ಲಮಲ ಕಾಡುಗಳಲ್ಲಾಗಲಿ, ಜಾರ್ಖಂಡದ ಬೆಟ್ಟಗಳಲ್ಲಾಗಲಿ, ಆದಿವಾಸಿಗಳ ಸಮಸ್ಯೆ ಕ್ಲಿಷ್ಟವಾಗಿರುವುದಕ್ಕೆ ಬೇರೆ ಬೇರೆ ತರದ ಪ್ರಾದೇಶಿಕ ಕಾರಣಗಳಿವೆ. ಮುಖ್ಯವಾಗಿ ಕೆಲವು ಪಂಗಡಗಳು ಆದಿವಾಸಿಗಳನ್ನು ಮುಂದಿರಿಸಿಕೊಂಡು ತಮ್ಮ ಸ್ವಾರ್ಥ ಸಾಧಿಸುತ್ತಿರುವುದು. ಇಲ್ಲೆಲ್ಲ ಅರಣ್ಯಗಳಲ್ಲಿ ವಾಸಿಸುವವರಲ್ಲಿ ಎಲ್ಲರೂ ಗಿರಿಜನರೂ ಅಲ್ಲ, ಪರಿಶಿಷ್ಟವರ್ಗದವರೂ ಅಲ್ಲ. ಈ ವರ್ಗದ ಹೆಸರಿನಲ್ಲಿ ಅರಣ್ಯ ಒತ್ತುವರಿ ಮಾಡಿಕೊಂಡು ಭೂಕಬಳಿಕೆಯಲ್ಲಿ ಆಸಕ್ತರಾಗಿರುವ ಮೇಲ್ವರ್ಗದ ಹಲವರು ಇದ್ದಾರೆ. ಕೆಲವೆಡೆ ಅಫೀಮಿನಂಥ ಮಾದಕ ವಸ್ತುಗಳ ಬೆಳೆಗಳನ್ನೂ ಬೆಳೆಯಲಾಗುತ್ತಿದೆ. ಕಳ್ಳಸಾಗಾಣಿಕೆದಾರರಿಗೂ ಮರಗಳ್ಳರಿಗೂ ಅರಣ್ಯಗಳು ಸುರಕ್ಷಿತ ಅಡಗುದಾಣಗಳೂ ಕಾರ್ಯಕ್ಷೇತ್ರಗಳ ಆಗಿವೆ. ಇನ್ನು ಮಾವೋರಾಜ್ಯ ಸ್ಥಾಪಿಸಬಯಸುವ ನಕ್ಸಲೀಯರಿಗಂತೂ ಇವು ಅಗತ್ಯವಾದ ನೆಲೆಗಳು. ಕರ್ನಾಟಕದ ಮಲೆನಾಡಿನಲ್ಲಿ ಕಾರ್ಯಪವೃತ್ತರಾಗಿರುವುದು ಸಾಕಷ್ಟು ಪ್ರಬಲವಾದ ‘ಕುಲಕ್’(kulak) ಅರ್ಥಾತ್ ಸಣ್ಣ ಜಮೀನ್ದಾರರ ಲಾಬಿ. ಇವರೀಗ ನಕ್ಸಲೀಯರ ಜತೆ ಕೈಜೋಡಿಸಿದ್ದಾರೆ. ಇವರೆಲ್ಲರೂ ಅರಣ್ಯವನ್ನು ಪೊಲೀಸರು ಪ್ರವೇಶಿಸಬಾರದು ಎನ್ನುವುದರಲ್ಲಿ ಆಶ್ಚರ್ಯವೇನಿಲ್ಲ; ಯಾಕೆಂದರೆ ಕಾನೂನು ಇವರ ಚಟುವಟಿಕೆಗಳಿಗೆ ತೊಂದರೆಯಾಗಿದೆ. ಆದ್ದರಿಂದ ಆದಿವಾಸಿಗಳನ್ನು, ಗಿರಿಜನರನ್ನು, ಬಡವರನ್ನು, ಕೆಳವರ್ಗದವರನ್ನು ಒಂದು ತಡೆಗೋಡೆಯನ್ನಾಗಿ ಮಾಡಿಕೊಂಡಿರುವರು. ಇಂಥವರ ಕೈಯಲ್ಲಿ ಸಿಕ್ಕು ತಾವು ಬಲಿಪಶುಗಳಾಗುತ್ತಿದ್ದೇವೆ ಎನ್ನುವುದರ ಅರಿವು ಈ ವರ್ಗದ ಜನರಲ್ಲಿ ಇಲ್ಲ. ಇದು ಹೀಗೇ ಮುಂದುವರಿದರೆ ಇವರೂ ಇವರ ಪೀಳಿಗೆಯವರೂ ‘ಹಂಟರ್-ಗ್ಯಾದರರ್” ಅವಸ್ಥೆಯಲ್ಲೇ ಇರುತ್ತಾರೆ. ಹೆಚ್ಚೆಂದರೆ, ಸಣ್ಣಪುಟ್ಟ ಹೊಲಗಳನ್ನು ಮಾಡಿಕೊಂಡು, ದೊಡ್ಡ ಭೂಮಾಲೀಕರಿಗೆ ಅಗ್ಗದ ದುಡಿಮೆ ಒದಗಿಸುತ್ತ ಇದ್ದಾರು. ಅವರು ಕತ್ತಲೆಯಿಂದ ಬೆಳಕಿನ ಕಡೆ ಬರುವುದು ಯಾವಾಗ? ನಮಗೆ ಬೇಕಾದ ಅವಕಾಶಗಳು ಮತ್ತು ಅವಶ್ಯಕತೆಗಳು ಅವರಿಗೆ ಬೇಡವೆಂದು ನಿರ್ಣಯಿಸಿದವರು ಯಾರು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾ ಗೆಳತಿ ಕಾದಿರುವೆ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೩೨

ಸಣ್ಣ ಕತೆ

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…