ಪಟ್ಟಿದ್ದೆಲ್ಲ ಕಾಮಕ್ಕೆ, ಪ್ರೀತಿಗಲ್ಲ – ಭಜನೆ
ಕುಟ್ಟಿದ್ದೆಲ್ಲ ಮೋಜಿಗೆ ಭಕ್ತಿಗಲ್ಲ;
ಮೋರಿಯಲ್ಲಿಳಿದ ಜಲ ಪಾತ್ರದಲ್ಲಿದ್ದರೂ
ಕೊಚ್ಚಿ ಹೋಗಲು ಮಾತ್ರ, ಕುಡಿಯಲಲ್ಲ
ಅರ್ಥಸಾಧಕ ಗುರಿಯೆ ಬಿಟ್ಟು ಪಡುತಿರುವ ಸುಖ
ತೀಟೆಗಳ ಪೂರೈಕೆ, ಭೋಗವಲ್ಲ
ನೆರೆ ಹೊರೆಯ ಮೆಟ್ಟಿ ಗಿಟ್ಟಿದ ಅರ್ಥಕಾಮಗಳು
ಪುರುಷಾರ್ಥವೆನ್ನಿಸಲು ತಕ್ಕವಲ್ಲ
ಲಕ್ಷ ವೃಕ್ಷಗಳು ಮೈಲುದ್ದ ನಿಂತಿದ್ದರೂ
ಗುಂಪಾಗಿ ನೆರೆಯದೆ ಅರಣ್ಯವೆಲ್ಲಿ ?
ಗುಂಪಿದ್ದರೂ ಬಂತೆ ತಮತಮಗೆ ಬಂದ ಜನ
ಉದ್ದೇಶ ಸ್ವಂತದ್ದು ಸಂತೆಯಲ್ಲಿ.
ಪಾತ್ರ ಕಥೆ ವಸ್ತು ಸಂವಾದ ಎಲ್ಲಾ ಇದ್ದೂ
ಅರ್ಥವಿದೆ ಕೃತಿಯ ವಿನ್ಯಾಸದಲ್ಲಿ
ಸೂತ್ರ ಕಡಿದರೆ ಮಣಿಯ ಮಾಲೆ ಚೆಲ್ಲಾಪಿಲ್ಲಿ
ವಿನ್ಯಾಸವಿಲ್ಲದೆ ಅರ್ಥವೆಲ್ಲಿ ?
ರಾಮಗಿರಿಯಿಂದ ಹೈಮಾಚಲದ ನೆತ್ತಿಗೆ
ಗಡಿಯ ರಚಿಸಿದ್ದು ಉಜ್ಜಯಿನಿ ಪ್ರತಿಭೆ
ನಾಲ್ಕು ದಿಕ್ಕುಗಳಲ್ಲು ಉಪನಿಷೋದ್ದೇಶಕ್ಕೆ
ದುಡಿದ ತೇಜಕ್ಕೆ ಕೇರಳದ ಮಿತಿಯೆ ?
ಬ್ರಹ್ಮಗಿರಿಯಲ್ಲಿ ಅಶೋಕಚಕ್ರಿಯ ಮಾತು
ಬೋಧಿವೃಕ್ಷದ ನೆರಳು ದಕ್ಷಿಣದಲಿ
ದಕ್ಷಿಣೇಶ್ವರ ಕಾಳಿದೇವಾಲಯದ ಗಂಟೆ
ಮೊಳಗಿತ್ತು ಇಡಿ ಭರತಖಂಡದಲ್ಲಿ
ಕರಿಹಸಿರು ಕೆಂಪುಗಳ ಪಗಡೆಯಾಟದ ಹಾಸು
ಹತ್ತಾರು ದಾನ್ಯ ಬಿತ್ತಿರುವ ಗದ್ದೆ
ಎಲ್ಲ ಕಾಯಿಗೆ ಒಂದೇ ಹಾಸು, ದಾಳದ ಜೋಡಿ
ನೂರು ರುಚಿ ಒಟ್ಟಾಗಿ ಊಟನಿದ್ದೆ
ವ್ಯಕ್ತಿ ಕೇಂದ್ರಕ್ಕೆ ಹತ್ತು ವೃತ್ತಗಳ ಸುತ್ತುವರಿ
ದಾಟಿ ತಾಗಲಿ ದೃಷ್ಟಿ ಕಡೆಯ ಪರಿಧಿ
ಕೋಟಿ ಬಗೆ ಡೊಂಕು ಸಂಕೀರ್ಣ ನರವ್ಯೂಹದಲಿ
ರಕ್ತ ಪರಿಚಲನೆ ಕ್ಷಣ ತಪ್ಪದಿರಲಿ.
*****