ವಿಜಯನಗರದ ಅರಸರ ಪ್ರತಿನಿಧಿಯಾಗಿ ತಿರುಮಲರಾಯನು ಶ್ರೀರಂಗಪಟ್ಟಣದಲ್ಲಿದ್ದುಕೊಂಡು ರಾಜಒಡೆಯರು ಮುಂತಾದ ಒಡೆಯರಿಂದಲೂ ಪಾಳಯಗಾರರಿಂದಲೂ ಪೊಗದಿಯನ್ನು ತೆಗೆದುಕೊಳ್ಳುತಿದ್ದನಷ್ಟೆ. ತಿರುಮಲರಾಯನೂ ಆತನ ಹೆಂಡತಿಯಾದ ಅಲಮೇಲಮ್ಮನೂ ಶ್ರೀರಂಗಪಟ್ಟಣದ ರಂಗನಾಥಸ್ವಾಮಿಯಲ್ಲಿ ಬಹಳ ಭಕ್ತಿಯುಳ್ಳವರಾಗಿದ್ದರು. ದೇವರ ಉತ್ಸವಕಾಲಗಳಲ್ಲಿ ಅಲಮೇಲಮ್ಮನು ತಪ್ಪದೆ ದೇವರಸೇವೆ ಮಾಡುತ್ತಿದ್ದುದಲ್ಲದೆ ದೇವರ ಅಲಂಕಾರಕ್ಕಾಗಿ ತನ್ನ ಸ್ವಂತ ಆಭರಣಗಳನ್ನು ಕೊಡುತ್ತಿದ್ದಳು.

ರಾಜಒಡೆಯರು ದಿನೇ ದಿನೇ ಬಲಿಷ್ಟರಾಗುತ್ತ ಸುತ್ತ ಮುತ್ತಣ ಒಡೆಯರೊಡನೆ ಸ್ಪರ್ಧಿಸಿ ಜಯಶಾಲಿಗಳಾಗುತ್ತಿದ್ದರು. ಅಂತಹ ಕಾಲದಲ್ಲಿಯೇ ತಿರುಮಲರಾಯನಿಗೆ ಬೆನ್ನು ಫಣೆಯು ಪ್ರಾಪ್ತಿಯಾಯಿತು. ಅಲ್ಲದೆ ಚಂದ್ರಗಿರಿಯಲ್ಲಿದ್ದ ವಿಜಯನಗರದ ಅರಸನು ತಿರುಮಲರಾಯನು ಅಯೋಗ್ಯನೆಂದು ತಿರಸ್ಕಾರಮಾಡಿದ್ದನು. ಹೀಗೆ ತಿರುಮಲರಾಯನು ದುರವಸ್ಥೆಗೆ ಸಿಕ್ಕಿದನು. ಆಗ ತಲಕಾಡಿಗೆ ಹೋಗಿ ಅಲ್ಲಿ ದೇವರ ಸೇವೆಮಾಡಿದರೆ ಬೆನ್ನುವ್ರಣವು ವಾಸಿಯಾದೀತೆಂದು ಯಾರೋ ಸೂಚಿಸಿದರು. ತಿರುಮಲರಾಯನು ಶ್ರೀರಂಗಪಟ್ಟಣದ ರಕ್ಷಣೆಯನ್ನು ಸಮರ್ಥರಾಗಿದ್ದ ರಾಜಒಡೆಯರಿಗೊಪ್ಪಿಸಿ ತಲಕಾಡಿಗೆ ಹೊರಟನು. ಅಲಮೇಲಮ್ಮನೂ ಗಂಡನ ಜತೆಯಲ್ಲಿ ಹೊರಟಳು.

ತಿರುಮಲರಾಯನಿಗೆ ವಾಸಿಯಾಗುವ ಸಂಭವದೋರಲಿಲ್ಲ. ಆ ಸಮಯದಲ್ಲಿ ಶ್ರೀರಂಗಪಟ್ಟಣವನ್ನು ತಮ್ಮ ಸ್ವಾಧೀನದಲ್ಲಿಯೇ ಇಟ್ಟುಕೊಂಡು ತಾವೇ ಅರಸುತನವನ್ನು ವಹಿಸುವುದೊಳ್ಳೆಯದೆಂದು ರಾಜ ಒಡೆಯರಿಗೆ ತೋರಿತು. ಆದಕಾರಣ ತಿರುಮಲರಾಯನು ಹೊರಟುಹೋದ ಕೂಡಲೆ ರಾಜಒಡೆದುರು ಶ್ರೀರಂಗಪಟ್ಟಣದಲ್ಲಿ ಸಿಂಹಾಸನವನ್ನೇರಿ ನವರಾತ್ರಿಯ ಮಹೋತ್ಸವದ ಕಟ್ಟಳೆಯನ್ನು ಮಾಡಿ ನೆರೆಹೊರೆಯ ನಾಯಕರೂ ಒಡೆಯರೂ ತಮ್ಮ ವಶವರ್ತಿಗಳಾಗುವಂತೆ ಸನ್ನಾಹಪಟ್ಟರು.

ಸಿಂಹಾಸನವನ್ನೇರಿ ರಾಜ್ಯಭಾರವನ್ನು ವಹಿಸಿದಾಗ ರಂಗನಾಥ ಸ್ವಾಮಿಯ ಅರ್ಚಕನು ಬಂದು ಆ ದೇವರ ಉತ್ಸವಕಾಲದಲ್ಲಿ ಅಲಮೇಲಮ್ಮನವರು ತಮ್ಮ ರತ್ನ ಪಡಿ ನಗಗಳನ್ನು ಕೊಡುತ್ತಿದ್ದರು. ಈಗ ದೇವರ ಉತ್ಸವವನ್ನು ಮಾಡಲು ಆಭರಣಗಳಿರುವುದಿಲ್ಲ, ದೇವರ ವಿಗ್ರಹದ ಅಲಂಕಾರಕ್ಕೆ ತಕ್ಕ ಅಭರಣಗಳಿಗೆ ಅಪ್ಪಣೆಯಾಗಬೇಕು” ಎಂದು ಬಿನ್ನವಿಸಿದನು. ಆಗ ರಾಜಒಡೆಯರು ಅಮಲ್ಯವಾದ ಆಭರಣಗಳು ಕಳೆದುಹೋದುವಲ್ಲಾ ಎಂದು ಚಿಂತಿಸಿ, ಹೇಗಾದರೂ ಅವುಗಳನ್ನು ಹಿಂತಿರುಗಿ ಪಡೆಯಬೇಕೆಂದು ಯೋಚಿಸಿ, ಆಭರಣಗಳನ್ನು ಕೇಳಿ ತೆಗೆದುಕೊಂಡು ಬನ್ನಿರೆಂದು ಕೆಲವು ಭಟರನ್ನು ಮಾಲಂಗಿಗೆ ಕಳುಹಿಸಿದರು. ಮಾಲಂಗಿಯಲ್ಲಿದ್ದ ಅಲಮೇಲಮ್ಮನು ಭಟರ ಹೇಳಿಕೆಯನ್ನು ಕೇಳಿ ಆ ನಗಗಳು ನಮ್ಮ ಸ್ವಂತ. ಅವುಗಳನ್ನು ಕೊಡಲಾಗುವುದಿಲ್ಲ. ಇದನ್ನು ನಿಮ್ಮ ಒಡೆಯರಿಗೆ ತಿಳಿಯ ಹೇಳಿ” ಎಂದು ಹೇಳಿದಳು. ರಾಜಒಡೆಯರು ಇದನ್ನು ಕೇಳಿ ಹೇಗಾದರೂ ಆಭರಣಗಳನ್ನು ತರಬೇಕೆಂದು ಪುನಃ “ಇನ್ನು ಮೇಲೆ ಆಭರಣಗಳಿಂದ ನಿಮಗೇನು ಪ್ರಯೋಜನ ಶಾಂತರಾಗಿ ನೀವು ಕೊಡದಿದ್ದರೆ ಬಲಾತ್ಕಾರದಿಂದ ನಾವು ನಿಮ್ಮ ಆಭರಣಗಳನ್ನು ತೆಗೆದುಕೊಳ್ಳುತ್ತೇವೆ” ಎಂದು ಹೇಳಿ ಕಳುಹಿಸಿದರು.

ತಿರುಮಲರಾಯನಿಗೆ ತಲಕಾಡಿನಲ್ಲಿ ಗುಣತೋರಲಿಲ್ಲ. ದಿನೇ ದಿನೇ ಕೃಶವಾಗಿ ಮರಣೋನ್ಮುಖನಾಗಿದ್ದನು. ಆಗ ಅಲಮೇಲಮ್ಮನು “ಈ ಒಡೆಯರ ಹಟವೆಷ್ಟು! ಹೆಂಗಸರನ್ನು ನಿರ್ಬಂಧಿಸುವಷ್ಟು ಯೋಚನೆಯನ್ನು ಮಾಡಿದನಲ್ಲವೆ! ನನ್ನ ಯಜಮಾನರು ಬದುಕಲಿಲ್ಲ. ನಾನುಳಿದು ಪ್ರಯೋಜನವಿಲ್ಲ. ಅಂತ್ಯಕಾಲದಲ್ಲಿ ಹಿಂಸೆಕೊಟ್ಟನಲ್ಲವೆ ಈ ಒಡೆಯನು ” ಎಂದುಕೊಂಡು, ಬಂದಿದ್ದ ಭಟರ ಕೈಲಿ ಮೂಗುತಿಯೊಂದನ್ನು ಕೊಟ್ಟು “ಇದನ್ನು ದೇವರಿಗೆ ಇಡಿ” ಎಂದು ಹೇಳಿ ಉಳಿದ ಒಡವೆಗಳನ್ನು ಮಡುಲಲ್ಲಿ ಕಟ್ಟಿ ಕೊಂಡು, ಮಾಲಂಗಿ ಮಡುವಿಗೆ ನಡೆದು “ಈ ರಾಜಒಡೆಯರು ನನ್ನನ್ನು ಈ ಪರಿ ಹಿಂಸಿಸಿದನು. ಆದ್ದರಿಂದ ನಾನು ಮಡುವಿನಲ್ಲಿ ಧುಮುಕಿ ಪ್ರಾಣಬಿಡುತ್ತೇನೆ. ಇನ್ನು ಮೇಲೆ ತಲಕಾಡು ಮರಳಾಗಿ, ಮಾಲಂಗಿ ಮಡುವಾಗಿ, ಮೈಸೂರು ದೊರೆಗೆ ಮಕ್ಕಳೇ ಇಲ್ಲವಾಗಲಿ” ಎಂದು ನುಡಿದು ನದಿಯಲ್ಲಿ ಧುಮುಕಿದಳು.

ಈ ಶಾಪವನ್ನು ಕೇಳಿ ರಾಜಒಡೆಯರು ಚಿಂತಾಕ್ರಾಂತರಾದರು. ಶಮನೋಪಾಯವೆಂದು ಅಲಮೇಲಮ್ಮನ ವಿಗ್ರಹವೊಂದನ್ನು ಮಾಡಿಸಿ ನವರಾತ್ರಿಕಾಲದಲ್ಲಿ ಅದಕ್ಕೆ ಪೂಜೆ ನಡೆಯುವಂತೆ ಕಟ್ಟಳೆಮಾಡಿದರು. ಈಗ್ಗೂ ನವರಾತ್ಯುತ್ಸವಕಾಲದಲ್ಲಿ ಆ ವಿಗ್ರಹಕ್ಕೆ ಪೂಜೆ ನಡೆಯುತ್ತದೆ. ಅದನ್ನು ಈಗ ಅಮಲಾದೇವತೆಯ ಪೂಜೆಯೆಂದು ಕರೆಯುತ್ತಾರೆ.
*****
[ವಂಶರತ್ನಾಕರ, ಪುಟ ೩೨-೩೪; ವಂಶಾವಳಿ ಸಂ.೧, ಪುಟ ೩೦-೩೧ ವಿಲ್ಕ್ಸ್‌, ಸಂ. ೧ ಪುಟ ೨೭]