(ಒಂದು ಐತಿಹಾಸಿಕ ಕತೆ)
ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!!
ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋರಿಸುತ್ತಿರುವ ನಾನಾಬಗೆಯ ಅಲಂಕಾರಗಳಿಂದ, ವೈಭವದಿಂದ ಕೂಡಿ ಬೆಡಗಿನಿಂದ ಮೆರೆಯುತ್ತಿರುವ ಸುಪ್ರಸಿದ್ದ ಸೋಮನಾಥನ ಮಂದಿರ. ಚಂದ್ರನಿಂದ ತಪಶ್ಚರ್ಯ ಮಾಡಿ ಸಾಕ್ಷಾತ್ ಭಗವಾನ ಶಂಕರನನ್ನು ರಾಷ್ಟ್ರದ ಮಂಗಲಮೂರ್ತಿ ‘ಶಿವ’ ನನ್ನು ಮೆಚ್ಚಿಸಿಕೊಂಡು, ಸೂರ್ಯ-ಚಂದ್ರರಿರುವವರೆಗೂ ತನ್ನ ಹೆಸರಿನಿಂದ ಮೆರೆಯುವಂತೆ ಮಾಡಿದ ಆ ಸೋಮನಾಥನ ಮಂದಿರವಿಂದು ನಾಶವಾಗಹತ್ತಿದೆ. ಅಸಂಖ್ಯಾತ ಪೂಜಾರಿಗಳು, ಅರ್ಚಕರು, ವೇದ ಮಂತ್ರ ಸ್ತ್ರೋತ್ರಗಳಲ್ಲಿ ನಿಪುಣರಾದ ಬ್ರಾಹ್ಮಣರ ತಂಡ ತಂಡವಾಗಿ ನಿಂತಿದ್ದಾರೆ. ಭಗ್ನ ವಾಗುತ್ತಿರುವ ಮೂರ್ತಿಯನ್ನು ನೋಡಲು ಹೊರಗಿನಿಂದಲೂ ಎಷ್ಟೋ ಜನಸಮುದಾಯ ಇರುವೆಯ ಸಾಲಿನಂತೆ ಕಿಕ್ಕಿರಿದು ನಿಂತಿದೆ. ಸೋಮನಾಥನ ಭಕ್ತ ಜನರು ಮಾತ್ರ ಮಹಮೂದನ ಕಾಲುಗಳನ್ನು ಹಿಡಿದು ನನ್ನ ಆರಾಧ್ಯ ಮೂರ್ತಿಯನ್ನು ನಾಶಗೊಳಿಸಬೇಡಪ್ಪಾ. ಇದರ ಬದಲಾಗಿ ನೀನು ಬೇಡಿದಷ್ಟು ಬೆಳ್ಳಿ, ಬಂಗಾರಗಳನ್ನು ಕೊಡುತ್ತೇವೆ. ನಿನ್ನ ಗಝನಿಯ ಪಟ್ಟಣವನ್ನು ನಾನಾ ಬಗೆಯ ವೈಭವಗಳಿಂದ ತುಂಬಿಸಿ ಬಿಡುತ್ತೇವೆ. ಆದರೆ ಮೂರ್ತಿಗೆ ಕೈ ಹಚ್ಚ ಬೇಡ?” ಎಂದು ಅಂಗಲಾಚಿ ಬೇಡಿಕೊಳ್ಳುತ್ತಿದ್ದಾರೆ. ಎಷ್ಟೋ ಜನರು ತಮ್ಮ ತಮ್ಮ ಮನಸ್ಸಿನಲ್ಲಿಯೇ “ಎಂಥ ದೇವನಿವನು? ತನ್ನ ಮಂದಿರದಲ್ಲಿ ತನ್ನನ್ನು ಕೊಲ್ಲಲು ಒಬ್ಬ ಪರಕೀಯನು ಹವಣಿಸುತ್ತಿದ್ದಾನೆ. ಅದಕ್ಕಾಗಿ ತನ್ನ ರಕ್ಷಣೆಯನ್ನು ಕೂಡ ಮಾಡಿಕೊಳ್ಳಲು ಅಸಾಧ್ಯವೇ? ಮೇಲೆ ಎರಡನೆಯವರ ರಕ್ಷಣೆ ಮಾಡತಕ್ಕ ‘ಭಕ್ತ ಪಾಲಕ’ ನೆಂಬ ಬಿರುದನ್ನು ಪಡೆದಿದ್ದಾನೆ” ಎಂದು ತಿರಸ್ಕಾರ ಪಡುತ್ತಿದ್ದಾರೆ. ಇಂಥ ಜನರ ಅಹಂಭಾವನೆ, ಹೇಡಿತನದ ಲಕ್ಷಣಗಳನ್ನು ಕಂಡು, ಆ ಮಹಮೂದನಿಗೆ ನಗು ಬರುತ್ತಿದೆ. ತನ್ನ ಸೈನ್ಯ ನೋಡಿದರೆ, ಬೆರಳಿನ ಮೇಲೆ ಎಣಿಸುವಷ್ಟು ಚಿಕ್ಕದು. ಜನಸಮುದಾಯ ನೋಡಿದರೋ ಸಾಗರದಂತಿದೆ. ಆದರೆ ಜನರಲ್ಲಿರುವ ಅನೈಕ್ಯತೆ, ಕ್ಷುದ್ರಭಾವನೆ ಇವುಗಳನ್ನು ಕಂಡು ಅವನಿಗೆ ಹಿಡಿಸಲಾರದ ಆನಂದವುಂಟಾಗಿದೆ. ಕೇವಲ ಮಂದಿರಗಳ ನಾಮಶೇಷವಷ್ಟೇ ಅಲ್ಲ, ಸಮಗ್ರ ಭರತಖಂಡವನ್ನೇ ಗೆಲ್ಲಲೂ ಕೂಡ ಸಾಧ್ಯವಿದೆಂಬದನ್ನು ಅವನೀಗ ಮನಗಂಡಿದ್ದಾನೆ.
“ಸೇಂಬೂಡ ಖಾನ, ಆಗೇ ಬಢ” ತನ್ನ ಸೇನಾಪತಿಗೆ ಆಜ್ಞೆಯನ್ನಿತ್ತ. ಅವನ ಹೃದಯವಾದರೂ ಆನಂದದಿಂದ ತುಂಬಿ ಹೋಗಿತ್ತು. ಮನಸ್ಸು ಅಪರಿಮಿತ ಉತ್ಸಾಹಗೊಂಡಿತ್ತು, ಪ್ರತ್ಯಕ್ಷ ಸ್ವರ್ಗವೇ ಅವರಿಗೆ ಭೂಮಿಯ ಮೇಲೆ ಬಂದಿಳಿದಂತಿತ್ತು. ಆ ಮಂದಿರದಲ್ಲಿ ಆಗ ಅವರ ಕೈ ಹಿಡಿಯುವವರೇ ಯಾರೂ ಇದ್ದಿದ್ದಿಲ್ಲ. ಇದರ ಮೂಲಕವಾಗಿ ಬಾದಷಹನ ಆಜ್ಞೆಯಾಗುವದೇ ತಡ, ಸೇಂಬೂಡಖಾನನು ಮುಂದೆ ನಡೆಯಲು ಹೆಜ್ಜೆ ಇಟ್ಟನು. ಆದರೆ ಅದೇನಾಶ್ಚರ್ಯ! ಕುರಿಗಳ ಗುಂಪಿನ ಮಧ್ಯದಲ್ಲಿಯೂ ಒಂದು ಸಿಂಹವು ಇರಲೇ ಬೇಕಲ್ಲವೆ? ಸಿಂಹವು ಕುರಿಯಾಗಿ ಬೆಳೆದರೇನು, ಅದು ಎಂದಾದರೂ ತನ್ನ ಸ್ಥಿತಿಯನ್ನು ಬಿಡಬಹುದೇ? ಸಾಧ್ಯವಿಲ್ಲ. ಅಂದಮೇಲೆ ಅದಕ್ಕೆ ಯಾರೂ ಪಟ್ಟಗಟ್ಟದಿದ್ದರೆ ವನರಾಜ ನೆನ್ನದೆ ಬಿಡುವರೇ?” ನಾಽಭಿಷೇಕೊ ನ ಸಂಸ್ಕಾರಃ ಸಿಂಹಸ್ಯ ಕ್ರಿಯ ತೇ ವನೇ| ವಿಕ್ರಮಾರ್ಜಿತ ಸತ್ವಸ್ಯ ಸ್ವಯಮೇವ ಮೃಗೇಂದ್ರಿತಾ||” ಎಂಬ ಪರಾಕ್ರಮದಿಂದ ಮೆರೆಯುವ ಸಿಂಹವು ಇಲಿಯಾಗಿ ಎಂದೂ ಕೂಡ್ರಲು ಶಕ್ಯವಿಲ್ಲ.
“ಏಕ ಕದಮ ಆಗೇ ಬಢ ಜಾಯ ತೋ ಜಾನ ಖತರೇ ಮೇ ಪಡ ಜಾಯೇಗಿ ಖಾನ” ಒ೦ದು ಸಿಂಹವು ಹಿಂದಿನಿಂದ ಬಂದು ಗರ್ಜಿಸಿತು. ಎಲ್ಲರೂ ಬೆಪ್ಪಾಗಿ ಅವನ ಮುಖವನ್ನು ಪಕ ಪಕ ನೋಡಹತ್ತಿದರು, ಸುಂದರವಾದ ಮುಖ. ನಿಡಿದಾದ ಮೂಗು, ವಿಶಾಲವಾದ ಬಾಹುಗಳು, ಧಷ್ಟ ಪುಷ್ಟವಾದವಿದೆ, ಹರಕಾದ ವಸ್ತ್ರಗಳಿದ್ದರೂ ರಾಜಠೀವಿಯಿಂದ ಮೆರೆಯುತ್ತಿದ್ದಾನೆ. ನಡುವಿನಲ್ಲಿ ಲಕಲಕನೆ ಹೊಳೆಯುತ್ತಿರುವ, ನಿಜವಾದ ವೀರರಿಗೆ ಶೋಭಿಸುವ ಖಡ್ಗವು ಶೋಭಿಸುತ್ತಿದೆ. ನೋಡುತ್ತಿದ್ದ ಎಲ್ಲ ಪ್ರೇಕ್ಷಕರಿಗೂ ಸಾಕ್ಷಾತ ಹರನೇ ಉದ್ಭವಿಸಿ ಬಂದನೇನೋ ಅನ್ನುವಂತೆ ತೋರುತ್ತಿತ್ತು. ಎಲ್ಲರ ಮುಖಗಳಲ್ಲಿಯೂ ಉದಾಸೀನದ ಬದಲಾಗಿ ಆನಂದದ ಛಾಯೆಯು ಕಾಣಬರಹತ್ತಿತು. ಆದರೆ ಇವನೊಬ್ಬನೇ ಏನು ಮಾಡತಕ್ಕವನು?” ಎಂಬ ಪ್ರಶ್ನೆ ಉದ್ಭವಿಸಿದ ಕೂಡಲೇ ಆ ಕಳೆಯು ಬಹಳ ಹೊತ್ತಿನವರೆಗೆ ಉಳಿಯಲಿಲ್ಲ. ಆದರೆ ಖಾನನಿಗೆ ಮಾತ್ರ ಎದೆಯೊಡೆದು ನೀರಾಯಿತು. ಮಹಮೂದನಂತೂ ನಿಂತಲ್ಲಿಯೇ ನಿಂತುಬಿಟ್ಟನು. ಯವನ ಸೈನಿಕರ ಎದೆಯು ಡವಡವನೆ ಹೊಡೆದುಕೊಳ್ಳಲಾರಂಭಿಸಿತು. ಆದರೂ ಮಹಮೂದನಿಗೆ ಸ್ವಲ್ಪ ಧೈರ್ಯ ಬಂದಿತು. ಇಷ್ಟು ಜನರು ಏನೂ ಮಾಡದೆ ಪಿಟ್ಟೆನ್ನದೆ ನಿಂತಿರಲು ಇವನೊಬ್ಬ ಪೋರನು ಏನು ಮಾಡಬಹುದೆಂಬ ಭೀತಿಯು ಅವನಿಗೆ ಇಲ್ಲದಾಯಿತು. ಆದರೆ ಅಗ್ನಿ ಕಿಡಿಯು ಚಿಕ್ಕದಿದ್ದರೂ ಕಾಲನ್ನು ಸುಡಬಹುದೆಂಬ ವಿಚಾರ ಅವನಿಗೆ ಹೊಳೆಯಲಿಲ್ಲ.
“ಓಹೋ, ಈಗ ನೀನೊಬ್ಬ ಹೊಸ ಪೋರನು ಬಂದೆಯೋ ನನ್ನನ್ನೆದುರಿಸಲು?” ಮಹಮೂದನು ಒಳ್ಳೇ ಬೆಡಗಿನಿಂದ ಪ್ರಶ್ನಿಸಿದ. ಸ್ವಲ್ಪು ಕಣ್ಣುಗಳನ್ನು ಕೆಂಪಗೆ ಮಾಡಿದರೆ, ಹಲ್ಲುಗಳನ್ನು ಕಚ್ಚಿದರೆ, ಮುಷ್ಟಿಗಳನ್ನು ಬಿಗಿ ಹಿಡಿದು ಖಡ್ಗವನ್ನು ಒರೆಯಿಂದ ಹೊರತೆಗೆದು ಕೊಲ್ಲಹೋದವರಂತೆ ನಟಿಸ ಹೋದರೆ ಅಂಜಿ ಹಿಂಜರಿಯಬಹುದೆಂದು ಅವನು ವರ್ತಿಸಹತ್ತಿದ. ನೋಡುತ್ತಿರುವ ಜನರಿಗೆ ವೈಭವದಾಶೆಯಿಂದ ಇವನಿಗೆ ಹುಚ್ಚನ್ನಾದರೂ ಹಿಡಿದಿರಲಿಕ್ಕಿಲ್ಲವಷ್ಟೆ ಎನ್ನಿಸಿತು. ಆತನ ಸೈನಿಕರೂ, ಸೇನಾಪತಿ ಸೇಂಬಡಖಾನನೂ ಎವೆಯಿಕ್ಕದೆ ಒಮ್ಮೆ ತನ್ನ ಬಾದಷಹನೆಡೆಗೆ ಮತ್ತೊಮ್ಮೆ ಅವನ ಸಮ್ಮುಖ ನಿಂತಿರುವ, ಪ್ರತೀಕಾರ ಮಾಡುತ್ತಿರುವ ವೀರನ ಕಡೆಗೆ ನೋಡುತ್ತ ನಿಂತರು. ಆದರೆ ಈ ವರ್ತನೆಯಿಂದ ಆ ವೀರನು ಅಂಜುವದರ ಬದಲಾಗಿ, ಇದರಲ್ಲಿ ಎನೂ ಹುರುಳಿಲ್ಲವೆಂಬುದನ್ನು ಮಾತ್ರ ಕಂಡನು. ನಾನೊಬ್ಬನೇ ಈ ಯವನ ಸೈನ್ಯಕ್ಕೆ ಬೇಕಾದ ಹಾಗೆ ಸೋಲಿಸಬಹುದೆಂಬ ವಿಶ್ವಾಸವು ಅವನಲ್ಲಿ ಒಡಮೂಡಿತು. ಮಹಮೂದನಿಗೂ ಅವನ ಧೈರ್ಯ, ಉತ್ಸಾಹ ಕಂಡು ನಿರಾಶೆಯಾಯಿತು. ಈತನನ್ನು ಏನಾದರೊಂದು ಯುಕ್ತಿಯಿಂದ ಹಿಡಿದು ಕೆಲಸವನ್ನು ಸಾಧಿಸಬೇಕೆಂಬ ಹವಣಿಕೆಯನ್ನು ಹಾಕತೊಡಗಿದನು. ಆದರೆ ವಿಶಾಲವಾದ ಈ ಜನಸಮುದಾಯವು ನಂತರ ತಡೆಯಬಹುದೇ? ರೊಚ್ಚಿಗೆದ್ದು ಹಿಡಿಮಣ್ಣಿನಷ್ಟಿರುವ ತಮ್ಮನ್ನು ನುಚ್ಚು ನೂರನ್ನಾಗಿ ಮಾಡಿಬಿಟ್ಟರೆ! ಎಂಬ ಕುಶಂಕೆಯ ಅವನಿಗೆ ಬಂದಿತು. ಆಗ ಕಡೆಗೆ ನಮ್ರದಿಂದ ಅವನನ್ನು ಒಲಿಸಿಕೊಳ್ಳಬೇಕೆಂದು ಯೋಚಿಸಿದನು. ಕಡೆಗೆ ಸೇನಾಪತಿ ಸೇಬೂ೦ಡಖಾನನ ಬಳಿಗೆ ಹೋಗಿ ಅವನ ಕಿವಿಯಲ್ಲಿ ಏನೋ ಉಸುರಿ ಆ ವೀರನ ಬಳಿ ಸಾರಿ, ಹೆಗಲಮೇಲೆ ಕೈಯಿಟ್ಟು “ಪ್ರಿಯ ದೋಸ್ತ, ನಿರಾಕಾರ್‍ಣವಾಗಿ ನಿಮ್ಮ ಮುಂದಿರಗಳನ್ನು ಒಡೆದು ನಾನು ಬಹಳೇ ಪೀಡೆ ಕೊಟ್ಟಿದ್ದೇನೆ. ಇದರಲ್ಲಿ ನನ್ನ ವೈಭವದ ಆಶೆಯೂ ಇರಬಹುದು. ಆದರೆ ನನ್ನ ಪರಾಕ್ರಮಕ್ಕೆ ಅಳುಕದ ನಿನ್ನನ್ನು ನಾನಿಂದು ಕಂಡು ಒಳ್ಳೇ ಬೆರಗಾಗಿದ್ದೇನೆ, ಹೇಳು. ಬೇಕಾದದ್ದನ್ನು ಬೇಡು. ನಾನು ಲೂಟಿಮಾಡಿದ ಎಲ್ಲ ಧನವನ್ನೂ, ಬೆಳ್ಳಿ, ಬಂಗಾರಗಳನ್ನು ನಿನಗೆ ಅರ್ಪಿಸುತ್ತೇನೆ. `ಇಸ್ಲಾಮಿಗಳು ಶಾಂತಿ ಪ್ರಿಯರು.’ ಎಂಬುದನ್ನು ಜಗತ್ತಿಗೆ ತೋರಿಸಿಕೊಡುತ್ತೇನೆ,” ಎನ್ನಲು ಆ ವೀರನು ಇವನ ಮಾತುಗಳನ್ನು ನಂಬಿ “ಖಾನ ಸಾಹೇಬ ಯಾವಾಗ ತಾವು ನನ್ನ ಭುಜದ ಮೇಲೆ ಕೈ ಯನ್ನಿಟ್ಟರೋ, ಆಗ ನೀವು ನನ್ನ ಮಿತ್ರಸಮಾನರು, ಮಿತ್ರ ದ್ರೋಹವನ್ನೆಸಗುವದು ಹಿಂದೂ ಧರ್ಮದ ನೀತಿಯಲ್ಲ. ಅದಕ್ಕಾಗಿ ತಾವು ಈ ಮಂದಿರವನ್ನು ಪೂಜಾರಿಗಳಿಗೆ ಬಿಟ್ಟು ಕೊಟ್ಟು ಇಲ್ಲಿಂದ ದೂರಾಗಬೇಕೆಂದು ಇಚ್ಛಿಸುತ್ತೇನೆ” ಎಂದು ನುಡಿಯಲು ಎಲ್ಲ ಪೂಜಾರಿಗಳ, ಬ್ರಾಹ್ಮಣರ ಮುಖಕಮಲವು ಅರಳಿತು. ತಮ್ಮ ಮೇಲಿನ ಪೀಡೆಯು ನಾಶವಾದದ್ದಕ್ಕೆ ಎಲ್ಲರೂ ಆ ವೀರನನ್ನು ಮನದಲ್ಲಿಯೇ ಧನ್ಯವಾದಗಳನ್ನರ್ಪಿಸಿದರು. ಆದರೆ ಸೋಮನಾಥದ ವೈಭವವನ್ನು ಕಣ್ಣಾರೆ ಕಂಡ ಆ ಮಹಮೂದನು ಯಾವ ಆಟದಿಂದ ಅವನನ್ನು ನಾಶ ಗೊಳಿಸಬಹುದೆಂಬದನ್ನು ಅವರೇನು ಅರಿಯಬಲ್ಲರು?
“ಆಗಲಿ, ಆದರೆ ನನ್ನದೊಂದು ವಿಚಾರಕ್ಕಾದರೂ ಅನುಮತಿ ಕೊಡುವಿಯಾ?” ಎಂದು ಪ್ರಶ್ನಿಸಿದ ಗಝನಿ ಮಹಮೂದ.
“ಮತ್ತೇನು ಪೀಡೆ” ಎಂದು ಅವನು ಮನದಲ್ಲಿಯೆ ವಿಚಾರಿಸಿ ‘ಆಗಲಿ’ ಎಂದು ಉತ್ತರ ಕೊಟ್ಟ.
“ಮತ್ತೇನೂ ಇಲ್ಲ” ಮಹಮೂದನು ಸ್ವಲ್ಪ ಶಂಕೆಯಿಂದಲೇ ಹೇಳ ಹತ್ತಿದೆ. ಇಲ್ಲಿ ನಡೆಯುತ್ತಿರುವ ನಿಮ್ಮ ಪೂಜೆಯನ್ನು ನಾನು ಕಣ್ಣಾರೆ ಕಾಣಬೇಕೆಂದಿದ್ದೇನೆ, ಅದಕ್ಕಾಗಿ ಅನುಜ್ಞೆಯನ್ನು ಕೊಡುವಿಯಾ?” ಎ೦ದು ಒಳ್ಳೇ ಭಕ್ತಿಭಾವದಿಂದ ಕೇಳಿದ. ಆಗ ಆ ವೀರನ ಮನಸ್ಸು ಸ್ವಲ್ಪ ದಯದಿಂದ ಉತ್ಪನ್ನವಾಯಿತು. “ಇಷ್ಟು ದಿನಗಳವರೆಗೆ ಅವನು ಬೇಕಾದಷ್ಟು ನಮ್ಮ ಜನರ ಮೇಲೆ ಅನ್ಯಾಯ ಮಾಡಿರಬಹುದು. ಸ್ತ್ರೀಯರನ್ನು ಬಲಾತ್ಕಾರದಿಂದ ಅಪಹರಿಸಿರಬಹುದು. ಪತಿವೃತೆಯರ ಮಾನಭಂಗ ಮಾಡಿರಬಹುದು. ದೇವಾಲಯಗಳನ್ನು ನಷ್ಟಗೊಳಿಸಿ ಮೂರ್ತಿಗಳ ವೈಭವವನ್ನು ಸೂರೆಗೊಳಿಸಿರಬಹುದು. ಆದರೆ ಇಂದವನ ಮನಸ್ಸು ಭಕ್ತಿಯಲ್ಲಿ ವಿಲೀನವಾಗಿದೆ. ಭಗವಂತನ ಪೂಜೆಯನ್ನು ಕಣ್ಣಾರೆ ಕಂಡು ಪಾಪ ಮುಕ್ತನಾಗಿ ಸೋಮನಾಥನ ಚರಣಗಳಿಗೆರಗಬಯಸುತ್ತಾನೆ’ ಈ ಪ್ರಕಾರ ಆ ವೀರನು ದೀರ್ಘ ವಿಚಾರ ಮಾಡಿ ಕಡೆಗೆ ‘ಬಂಧೂ’ ಎಂದು ಹೇಳಲಾರಂಭಿಸಿದನು. ‘ಬಂಧೂ’ ಎಂಬ ಶಬ್ದಕ್ಕೆ ಮಹಮೂದನ ಮನಸೂ ಕರಗಿತು. “ಹಿಂದೂಗಳು ಇಷ್ಟು ದಯಾವಂತರಿದ್ದರೂ ಅವರ ಮೇಲೆ ನಾನು ಮಾಡುತ್ತಿರುವದು ಅಪರಾಧ, ಮಹಾಪರಾಧ, ಅಕ್ಷಮ್ಯ ಅಪರಾಧ!” ಕೆಲವೊಂದು ಹೊತ್ತು ಇಬ್ಬರೂ ಸ್ತಬ್ದರಾದರು. ಇಬ್ಬರ ಮನಸ್ಸುಗಳಲ್ಲಿಯೂ ಯಾವದೋ ಒಂದು ವಿಚಾರದ ಗೊಂದಲವು ನಡೆದಿದ್ದಿತು. ಒಬ್ಬನ ಕಣ್ಣಿಗೆ ಭಾರತ ದೇಶವನ್ನು ಪರಕೀಯರ ದಾಳಿಗಳಿಂದ ಮುಕ್ತಗೊಳಿಸಿ ಪೂರ್ವಕ್ಕಿಂತಲೂ ಹೆಚ್ಚಿನ ವೈಭವವನ್ನು, ಶಕ್ತಿಶಾಲಿಯನ್ನಾಗಿ ಮಾಡುವ ವಿಚಾರ; ಮತ್ತೊಬ್ಬನಿಗೆ ಈ ವೈಭವಮಯ ಭಾರತವನ್ನು ಸುಲಿದು ಹೇಗೆ ಪಾದಾಕ್ರಾಂತ ಗೊಳಿಸಬೇಕೆಂಬ ವಿಚಾರ. ಅವರು ವಿಚಾರ ಮಾಡುತ್ತಿರುವ ದೃಶ್ಯ ಅವರ ಕಣ್ಣೆದುರಿಗೆ ಕಟ್ಟಿ ನಿಂತುಬಿಟ್ಟಿತ್ತು. ಹಿಂದೂಗಳೂ ಮುಸಲ್ಮಾನರೂ ಇನ್ನು ಮುಂದೆ ಯಾವ ದೃಶ್ಯ ಸುರುವಾಗಬಹುದೆಂಬದನ್ನು ಒಳ್ಳೆ ಉತ್ಸಾಹದಿಂದ ಕಾದು ನಿಂತಿದ್ದರು. ಆದರೆ ಇಲಿಗಳಿಗಾಗಿ ಬೆಕ್ಕು ಜಪ್ಪಿಸಿ ಕುಳಿತಂತೆ ಸೋಮನಾಥನ ವೈಭವದ ಹರಣಮಾಡಲು ಮಹಮೂದನು ಹೇಗೆ ಕುಳಿತಿರುವನೆಂಬವನ್ನು ನಿಷ್ಕಪಟಿಗಳಾದ ಆ ಹಿಂದೂಗಳಿಗೇನು ಗೊತ್ತು! ಈ ಮಹಮೂದನು ಕಡೆಗೆ ಅವನನ್ನು ಜಾಗೃತಗೊಳಿಸಲು “ಏನಂದೆ? ಪರದೇಶದಿಂದ ಬಂದು ಹಿಂದುಸ್ಥಾನವನ್ನು ಸೂರೆಗೊಳಿಸುತ್ತಿರುವವನಿಗೆ ‘ಬಂಧು’ ಎಂಬ ಶಬ್ದದಿಂದ ಚೇಷ್ಟೆಯನ್ನಾದರೂ ಮಾಡುತ್ತಿರಲಿಕ್ಕಿಲ್ಲವಷ್ಟೇ!” ಎಂದನು. ಆಗ ಆ ವೀರನು, ಇಲ್ಲ ಯಾವಾಗ ನನ್ನ ಸ್ವಾಮಿಯ ಚರಣಗಳಲ್ಲಿ ನಿನ್ನ ಹೃದಯವು ಲೀನವಾಗಿದೆಯೋ ಆಗ ನೀನು ನನ್ನ ಬಂಧು. ಖಾನಸಾಹೇಬ, ಹಿಂದೂ ಧರ್ಮದಲ್ಲಿ ಸ್ವಕೀಯ ಪರಕೀಯ ಎಂಬ ಭೇದ ಭಾವನೆ ಇಲ್ಲ. ‘ಕೃಣ್ವಂತೋ ವಿಶ್ಚಮಾರ್ಯಮ್” ಎಂದು ಜಗತ್ತನ್ನೇ ತನ್ನದನ್ನಾಗಿಮಾಡಿಕೊಳ್ಳಲು ಹವಣಿಸುತ್ತದೆ. ಇಂದಿಗೆ ನನ್ನ ಧರ್ಮವು, ನಿನ್ನ ಧರ್‍ಮವು ಬೇರೆಯಾಗಿದ್ದರೂ ದೇವಾಧಿದೇವನಾದ ಪರಮೇಶ್ವರನೊಬ್ಬನೇ. ನದಿಗಳು ಬೇರೆ ಬೇರೆ ಮಾರ್ಗದಿಂದ ಹರಿದು ಹೋದರೂ ಕಡೆಗೆ ಸಾಗರನಾಥನನ್ನೆ ಅಪ್ಪಿಕೊಳ್ಳುತ್ತವೆ,” ಎಂದು ಹೇಳುತ್ತ ಹೋದಂತೆ ಅವನ ಕಣ್ಣುಗಳಲ್ಲಿ ಅಶ್ರುಗಳು ತುಂಬಿ ತುಳಕಹತ್ತಿದವು. ಸೋಮನಾಥನ ಚರಣಗಳನ್ನು ನಿಮಿಷ ನಿಮಿಷವೂ ತೊಳೆದು ಅವನ ಸೇವೆ ಮಾಡುತ್ತಲಿದ್ದ ಸಮುದ್ರದ ಕಡೆಗೆ ಹೊರಳಿ “ಖಾನಸಾಹೇಬ, ಇಕೋ ನೋಡು, ಈ ಸಮುದ್ರದಲ್ಲಿ ಎನೋ ನದಿಗಳ ಪಾವನ ತೀರ್ಥವು ಕೂಡಿ ಒಬ್ಬನೇ ದೇವನ ಸೇವೆಯನ್ನು ಏಕನಿಷ್ಠೆಯಿಂದ ಮಾಡುತ್ತಿವೆ. ಹಗಲು ರಾತ್ರಿಗಳ ಪರಿವೆಯಿಲ್ಲ. ಹಸಿವೆ ನೀರಡಿಕೆಗಳ ಭಯವಿಲ್ಲ. ದೇವೇಶನ ಸೇವೆಯನ್ನು ಮಾಡುವದೊಂದೇ ಅವಕ್ಕೆ ಗೊತ್ತು. ಅದರಂತೆ ಆತನ ಮಕ್ಕಳಾದ ನಾವು, ನನ್ನ ಧರ್ಮ ಶ್ರೇಷ್ಟ ನಿನ್ನ ಧರ್‍ಮ ಶ್ರೇಷ್ಠವೆಂದು ಬಡಿದಾಡುವದು ಏಕೆ?” ಎಂದು ಮಾತಾಡಲು, ಎಲ್ಲರೂ ‘ಧನ್ಯ! ಧನ್ಯ!’ ಎ೦ಬ ಉದ್ಗಾರವನ್ನು ತೆಗೆದರು.
ಮಹಮೂದಖಾನನೂ ಅವನ ವಾಕ್ಪ್ರಭೆಯಿಂದ ಬೆರಗಾಗಿ, “ಧನ್ಯ ವೀರಾ! ನಿನ್ನನ್ನು ಹಡೆದ ಆ ಮಾತೆಯೇ ಧನ್ಯ!” ಎಂಬ ಉದ್ಗಾರವನ್ನು ತೆಗೆದನು. ಆಗ ಆ ವೀರನು “ಇದು ನನ್ನ ಪಾಂಡಿತ್ಯವಲ್ಲ, ಖಾನ ಸಾಹೇಬ ‘ಏಕಂ ಸತ್ ವಿಪ್ರಾಃ ಬಹುಧಾವದಂತೆ’ ಎಂಬ ಉಚ್ಚ ಘೋಷಣೆಯನ್ನು ಮಾಡುತ್ತಿರುವ ಆ ಆರ್ಯ ಧರ್ಮವೇ ಧನ್ಯ!” ಎಂದುಸುರಲು ಖಾನನಿಗೆ ಸ್ವಲ್ಪ ದಿಗ್ಭ್ರಮೆಯಾದಂತಾಯಿತು. ತಾನು ಬಂದ ಕಾರ್ಯವೇನು, ಹಾಗೂ ನಡೆಯುತ್ತಿರುವ ಪ್ರಸಂಗವೇನೆಂಬುದನ್ನೆ ಅವನಿಗೆ ತಿಳಿಯದಾಯಿತು. ಅವನ ಮಾತುಗಳಿಗೆ ಮರುಳಾಗಿ ಹಾಗೆಯೇ ಹಿಂದಿರುಗಬೇಕೋ, ಅಥವಾ ಪರಾಕ್ರಮದಿಂದ ರಕ್ತ ಕ್ರಾಂತಿಯನ್ನಾದರೂ ಮಾಡಿ ಆಸೆಯನ್ನು ಪೂರೈಸಿಕೊಳ್ಳಬೇಕೋ ಅವನಿಗೆ ತಿಳಿಯದಾಯಿತು. ಆದರೆ ಅವನ ಪ್ರತಿಯೊಂದು ಮಾತಿನ ಅಕ್ಷರಗಳೂ ಅವನ ತಲೆಯಲ್ಲಿ ಹೊಕ್ಕು ವಿಚಾರಯುದ್ಧವನ್ನು ಮಾಡುತ್ತಿದ್ದವು. ಆದರೂ ತನ್ನಷ್ಟಕ್ಕೆ ತನಗೇ ತಿಳಿಯದ ಹಾಗೆ “ಧನ್ಯ ಆ ಆರ್ಯ ಧರ್ಮವೇ ಧನ್ಯ” ಎಂಬ ಉದ್ಗಾರವು ಹೊರಟಿತು. ಅವನ ಆ ಮಾತಿನಿಂದ ಮುಸಲ್ಮಾನರಿಗೂ, ಸೇನಾಪತಿ ಸೇಂ ಬೂಡಖಾನನಿಗೂ ಒಳ್ಳೆ ಆಶ್ಚರ್ಯವನ್ನುಂಟು ಮಾಡಿದವು. ಇನ್ನು ತಮ್ಮ ಖಾನಸಾಹೇಬರು ಅರ್ಥಾತ್ ಫರವರದಿಗಾರರು, ಆ ವೀರನ ಮಾತುಗಳಿಗೆ ಮನಸೋತು, ಎಲ್ಲಿ ಹಿಂದೂ ಧರ್ಮವನ್ನೇ ಸ್ವೀಕರಿಸಿ ಬಿಡುವರೋ ಎಂಬ ಅಂಜಿಕೆಯು ಅವರಿಗುಂಟಾಯಿತು. ಹೆಣ್ಣಿನ ಕಾಮವಿಲಾಸಕ್ಕೆ ಮರುಳಾದ ಸೇಂಬೂಡಖಾನನಂತೂ ತಾನು ಮಾಡಿದ್ದು ಎಲ್ಲವೂ ವ್ಯರ್ಥವೆಂದು ತಿಳಿಯಹತ್ತಿದನು. ವಿನಾಕಾರಣವಾಗಿ ಇವನ ಕೂಡ ಒದ್ದಾಡಿ ಇಷ್ಟು ತ್ರಾಸ ಪಡೆದುಕೊಂಡು ಶ್ರಮಪಟ್ಟೆವಲ್ಲ ಎಂಬ ಚಿಂತಾಕ್ರಾಂತನಾದನು. ಇನ್ನು ಅವನನ್ನೆಬ್ಬಿಸಿ ಜಾಗೃತಗೊಳಿಸದ ಹೊರ್ತು ಯಾವ ತರಣೋಪಾಯವೇ ಇಲ್ಲವೆಂದು ಬಗೆದು, “ಜಹಾಪನಾ, ಸರ್ವವೂ ಸಿದ್ಧವಾಗಿದೆ” ಎ೦ದು ಮೆಲ್ಲನೆ ಸೂಚನೆಯನ್ನಿತ್ತನು. ಆಗ ಗಝನಿ ಮಹಮೂದಖಾನನು ಎಚ್ಚತ್ತು ತಾನು ಮಾಡಲಿಕ್ಕೆ ಬಂದಿರುವ ಕಾರ್ಯವನ್ನು ಅರಿತುಕೊಂಡನು. ಎಷ್ಟಾದರೂ ರಕ್ತಸಂಬಂಧವಲ್ಲವೇ ಅದು! ತೋರಿಕೆಯ ಮಾತುಗಳಿಂದ ಎಷ್ಟು ಮೋಹಗೊಂಡರೇನು ಪ್ರಯೋಜನ? ಕಾರ್ಯವನ್ನು ಸಾಧಿಸಿಕೊಳ್ಳಲಿಕ್ಕೆ ಅಣ್ಣ ತಮ್ಮಂದಿರಂತೆ ಭುಜಕ್ಕೆ ಭುಜ ಅ೦ಟಿಸಿದರೆ, ಮನಸ್ಸು ಒಂದಾಗಬಹುದೇ? ಹೃದಯಗಳು ಮಿಲನವಾಗಬಹುದೆ? ಯಾವಾಗ ಎರಡು ಹೃದಯಗಳ ಅಂತಃಕರಣವು ಒಂದಾಗುವದೋ, ಆಗಲೇ ಜಗತ್ತಿನಲ್ಲಿ ಒಂದು ಧರ್ಮ, ಒಬ್ಬನೇ ದೇವ, ಒ೦ದೇ ಮಾನವ ಜಾತಿಯಾಗಿ ವಿಶ್ವ ಸುಧಾರಿಸಬಲ್ಲದು. ಪರ್ಸಿಯನ್‌ದಲ್ಲಿ “ಎರಡು ಹೃದಯಗಳು ಒ೦ದಾದರೆ ಬೆಟ್ಟವನ್ನೂ ಕೂಡ ಒಡೆಯಬಲ್ಲುದು” ಎಂಬ ಒಂದು ಗಾದೆಯುಂಟು. ಆದರೆ ಸುವರ್ಣ ಭೂಮಿಯ ವೈಭವದಾಸೆಗೆ ಮರುಳಾದ ಆ ಮಹಮೂದಖಾನನ ಮನಸ್ಸು ಹಿಂದಿರುಗಲು ಒಪ್ಪುವದೆಂತು? ಆನೆಯ ಅಂಬಾರಿಗೆ ಮರುಳಾದ ನಾಯಿಯು, ಅದರ ಕೂಡ ಗೆಳೆತನ ಬೆಳೆಯಿಸಿ ಸಂಧಿ ಸಾಧಿಸಿಕೊಂಡು, ಅದರ ಮೇಲಿರುವ ಛತ್ರವನ್ನು ಕಸಿದುಕೊಳ್ಳಲು ಹವಣಿಸುತ್ತಿದ್ದಂತೆ ಈಗ ಸೇನಾಪತಿ ಸೇಂಬೂಡಖಾನನ ಪ್ರೇರಣೆಯಿಂದ ಆ ವೀರನನ್ನು ನಾಶಗೊಳಿಸಿ, ದೇವಾಲಯವನ್ನು ಭಗ್ನ ಮಾಡುವ ಸಿದ್ಧತೆ ಮಾಡತೊಡಗಿದನು. ಆದರೆ ಉಪಾಯವೇ ಹೊಳೆಯದಾಯಿತು. ಅವನನ್ನು ಮರೆ ಮೋಸದಿಂದ ಸೆರೆ ಹಿಡಿಯಬೇಕೆಂದರೆ ಅದಕ್ಕೂ ಮನಸ್ಸು ಒಪ್ಪದಾಯಿತು. ಕಡೆಗೆ ಮೋಸದಿಂದ ತೋಳವು ಕುರಿಮರಿಯನ್ನು ಬಂಧಿಸುವಂತೆ, ಅವನನ್ನು ಮಾತಿನಿಂದಲೇ ಬಂಧಿಸಬೇಕೆಂದು ತಿಳಿದು “ಹಾಗಾದರೆ ಬ೦ಧು, ತಮ್ಮ ಸ್ವಾಮಿಯ ಪೂಜೆ ನೋಡುವ ಸೌಭಾಗ್ಯ ನನಗೆ ದೊರೆತಂತಾಯಿತು. ಇದೇ ನನ್ನ ಸೌಭಾಗ್ಯ, ಭಾರತೀಯರ ದಯಾದೃಷ್ಟಿಯಿಂದ ನಾನಿಂದು ಪಾವನನಾದೆ” ಎನ್ನುತ್ತಿರಲು, ಎಲ್ಲರೂ ಸೋಮನಾಥನ ಜಯಘೋಷಣೆ ಮಾಡುತ್ತ ಪತ್ರಿ, ಪುಷ್ಟಗಳನ್ನರ್ಪಿಸಹತ್ತಿದರು. ಅರ್ಚಕರ ಘಂಟಾನಾದ, ಪೂಜಾರಿಗಳ ಧೂಪವಾಸನೆ, ಬ್ರಾಹ್ಮಣರ ಮಂತ್ರ ಘೋಷಗಳಿಂದ ಸೋಮನಾಥನ ದೇವಾಲಯವು ಶೋಭಿಸಹತ್ತಿತು. ಮಹಮೂದನು ಇದೆಲ್ಲವೂ ಹುಚ್ಚು ಹುಡುಗಾಟಿಕೆಯೆಂದು ಮನದಲ್ಲಿಯೇ ನಗಹತ್ತಿದನು. ವೀರಾತ್ಮನು ತನ್ನೊಬ್ಬ ಪರಕೀಯನನ್ನು ತನ್ನವನನ್ನಾಗಿ ಮಾಡಿಕೊಂಡನೆಂಬ ಅಹಂಕಾರದಿಂದ ಗರ್ವಿತವಾದನು. ಆ ಅಹಂಕಾರವೇ ಅವನಿಗೆ ಮುಳುವಾಯಿತೆಂಬುದರ ಸಂಶಯವಿಲ್ಲ.
“ನಮ್ಮಲ್ಲಿ ಐದು ಸಲ ನಮಾಜು ಮಾಡುವ ಪದ್ಧತಿಯಿದೆ. ಇದು ನನಗೆ ಚಿಕ್ಕ ಮಕ್ಕಳ ಆಟವೆಂದೆನಿಸುತ್ತದೆ” ಗಝನಿ ಮಹಮೂದನು ನುಡಿದ. ಇದರಿಂದ ಆ ವೀರನಿಗೆ ಸ್ವಲ್ಪ ಪೆಟ್ಟು ಹತ್ತಿತು. ಇನ್ನೂ ತನ್ನ ಸೊಕ್ಕು ತೀರಿಲ್ಲವೆಂದು ಆತನು ನಿಶ್ಚಯಿಸಿದೆ. ಆದ್ದರಿಂದ ಸ್ವಲ್ಪ ಸಿಡುಕಿನಿಂದಲೇ “ಖಾನ ಸಾಹೇಬ, ಇವು ನಿಮ್ಮ ಕುರಾಣದ ವಾಕ್ಯಗಳಲ್ಲ. ವೇದಗಳ ಪವಿತ್ರ ಮಂತ್ರಗಳು.” ‘ಕುರಾಣ’ ಎಂಬ ಶಬ್ದ ಕಿವಿಗೆ ಬಿದ್ದ ಕೂಡಲೇ ಅವನಿಗೆ ಅವಮಾನದಂತಾಗಿ ತೀಕ್ಷ್ಣ ದೃಷ್ಟಿಯಿಂದ ಅವನನ್ನು ನೋಡಹತ್ತಿದನು. ಇವನನ್ನು ಸದೆಬಡಿಯದ ಹೂರ್ತು ಗಝನಿಗೆ ಮರಳಿ ಹೋಗಲಿಕ್ಕಿಲೆಂದು ಪ್ರತಿಜ್ಞೆ ಸ್ವೀಕರಿಸಿದನು.
ಅಷ್ಟರಲ್ಲಿ ಪೂಜೆ ಸುರುವಿದ್ದಂತೆಯೇ ದೇವ-ದಾಸಿಯರ ನೃತ್ಯವೂ ಆರಂಭವಾಯಿತು. “ಓಹೋ, ಇವರ ಪೂಜೆ ಪುನಸ್ಕಾರಗಳಲ್ಲಿ ಹೆಂಗಸರ ನೃತ್ಯ ಕೂಡ ಇದೆಯೋ” ಮನದಲ್ಲಿದಯೇ ವಿಚಾರಿಸಹತ್ತಿದ ಮಹಮೂದ “ನಿಜವಾಗಿಯೂ ಅಲ್ಲಾನ ಕೃಪೆ ನಮ್ಮ ಮೇಲಿದ್ದ೦ತಿದೆ. ಅಂತೆಯೇ ನನ್ನ ಎಣಿಕೆಯ ಪ್ರಕಾರ ಕಾರ್ಯವು ಕೈಗೂಡಹತ್ತಿದೆ,” ಎಂದು ವಿಚಾರಿಸಿ ಸೇನಾಪತಿ ಸೇಂಬೂಡಖಾನನಿಗೆ ಏನೋ ಕಣ್ಸನ್ನೆ ಮಾಡಿದನು. ತತ್ ಕ್ಷಣವೇ ಮದಿರೆಯ ಒ೦ದು ಹೂಜಿಯ ಹಾಗೂ ಎರಡು ಬಟ್ಟಲಗಳೂ ಅವರೆದುರಿಗೆ ಸಿದ್ದವಾದವು. ಆ ವೀರನಿಗೆ ಅದನ್ನು ಕಂಡು ಆಶ್ಚರ್ಯವಯಿತು. ಎವೆಯಿಕ್ಕದೆ ಒಂದೇ ಸವನೆ ಅದನ್ನು ನೋಡಹತ್ತಿದ. ಇತ್ತ ಯವನ ಸೈನಿಕರೂ, ಸೇಂಬೂಡಖಾನನೂ ಕುಡಿಯಲುಪಕ್ರಮಿಸಿದ್ದರು. ವೀರನ ಈ ಬೆರಗಾದ ನೋಟವನ್ನು ಕಂಡು ಮುಗುಳ್ನಗೆ ನಗುತ್ತ ಮಹ ಮೂದಖಾನನು “ಹೂಂ, ತಾವೂ ಒಂದು ಬಟ್ಟಲನ್ನು ತೆಗೆದುಕೊಳ್ಳಿರಿ” ಎಂದು ವಿನಂತಿಸಿದ. `ತೆಗೆದುಕೊಳ್ಳ ಬೇಕೋ, ಬೇಡವೋ’ ಎಂದು ಮನಸ್ಸು ಪ್ರಶ್ನಿಸಲಾರಂಭಿಸಿತು. ಆ ವಿಚಾರದ ತಾಕಲಾಟದಲ್ಲಿಯೇ ಅವನಿಗೆ ಯಾವದೂ ತಿಳಿಯದಾಯಿತು. ಈ ತರದ ಗೊಂದಲದಲ್ಲಿ ಬಿದ್ದಿರುವ ಆ ವೀರನನ್ನು ನೋಡಿ ಮಹಮೂದನು “ಇದು ನಮ್ಮ ದೇಶದಲ್ಲಿಯ ಒಂದು ಉತ್ಕೃಷ್ಟವಾದ ಪಾನೀಯ’ ಎಂದು ಹೇಳಿ ಒಂದು ಬಟ್ಟಲಲ್ಲಿ ಸುರುವಿ ಅವನ ಕೈಯಲ್ಲಿ “ಇದು ಬಂಧು ಭಾವದಿಂದ ಕೊಡತಕ್ಕ ಪ್ರೇಮದ ಕಾಣಿಕೆ” ಎಂದು ಒಳ್ಳೆ ಪ್ರೇಮದಿಂದ ಕೊಟ್ಟನು. ಆಯಿತು. ಖಾನನ ಇಚ್ಛೆಯು ಸಂಪೂರ್ಣ ಸಿದ್ಧಿಸಿತು. ಆ ವೀರನಾದರೂ ಅನುಮಾನಿಸದೆ, ಹೆಂಗಸರ ಪ್ರೇಮಕಟಾಕ್ಷದಿಂದ ಗಂಡಸರು ಮರುಳಾದಂತೆ, ಅವನ ಮಾತುಗಳಿಗೆ ಈತನೇ ಮರುಳಾಗಿ, ಕುಡಿಯಲಾರಂಭಿಸಿದನು. ತನ್ನೆಲ್ಲ ಸೈನಿಕರೂ, ಆ ವೀರನೂ ಕುಡಿಯಲಾರಂಭಿಸಿದರೆ, ಆ ಖಾನನು ಮಾತ್ರ ಸ್ವಲ್ಪವೂ ಬಾಯಿಗೆ ಹಚ್ಚಲಿಲ್ಲ.
ಕೂಡಲೇ ಆ ವೀರನಿಗೆ ಮದವೇರಲಾರಂಭಿಸಿತ್ತು. ಬಾಯಿಗೆ ಬಂದಂತೆ ಬಡಬಡಿಸಲಾರಂಭಿಸಿದನು. ಸೋಮನಾಥನಿಗಾಗಿ ಪ್ರಾಣವನ್ನೆರಚಲು ಬಂದ ಆ ವೀರನೀಗ ಮದಿರಾಪಾನದಿಂದ ಕರ್ತವ್ಯಚ್ಯುತನಾಗಿ, ಪಥಭ್ರಷ್ಟನಾದನು. ಸ್ವರ್ಗದಂತಿದ್ದ ಆ ಮಂದಿರವೀಗ ನರಕಸಮಾನವಾಯಿತು. ಆಕಾಶದಲ್ಲಿ ಕಂಗೊಳಿಸುತ್ತಿದ್ದ ಭಾರತದ ಭಾಗ್ಯಲಕ್ಷ್ಮಿಯ ವಿಜಯ ಧ್ವಜವು ಕೆಳಕ್ಕಿಳಿಯಲಾರಂಭಿಸಿತು.
“ಬಂದ ಕರೋ ಅಬಯೇ ನಾಚಗಾನಾ” ಗರ್ಜಿಸಿದ ಮಹಮೂದಖಾನ, ಅವನ ಕಣ್ಣುಗಳು ಹಸಿದ ಹುಲಿಯಂತೆ ಕೆಂಪಗಾಗಿದ್ದವು. ಸಾಕ್ಷಾತ್ ಯಮನಂತೆ ಅವನೀಗ ತೋರುತ್ತಿದ್ದನು. ಆಕಾಶವನ್ನು ಗಡ ಚಿಕ್ಕುತ್ತಿದ್ದ ಘಂಟಾನಾದವು ಸ್ತಬ್ದವಾಯಿತು. ದೀಪಗಳು ನೊಂದಿದವು; ಬ್ರಾಹ್ಮಣರ ವೇದಘೋಷವು ಮಾಯವಾಯಿತು; ನರ್ತಕಿಯರ ನರ್ತನವು ಅಡಗಿತು. ಧರ್ಮಪ್ರಿಯ ವೀರನೀಗ ಮದಿರಾಪ್ರಿಯನಾಗಿದ್ದನು. ಶಿವಪೂಜೆಯನ್ನು ಮಾಡುವ ರಾವಣನು ಸೀತಾಹರಣ ಮಾಡಿದ್ದಂತೆ ಅವನ ಸ್ಥಿತಿಯು ಈಗ ಆಯಿತು.
“ಹೂಂ ಮೇಲೆ ಜೋತಾಡತ್ತಿರುವ ಆ ಘ೦ಟೆಯ ಸರಪಳಿಯನ್ನು ಕೆಳಗಿಳಿಸಿರಿ?” ಆಜ್ಞಾಪಿಸಿದ. ಕೂಡಲೇ ನಾಲ್ವರು ಮುಂದಾದರು. ಲಕಲಕನೆ ಹೊಳೆಯುತ್ತಿದ್ದ ಘ೦ಟೆಗಳು ಕೆಳಗಿಳಿದವು. ಅವನ ಆನಂದಕ್ಕೆ ಮೇರೆಯೇ ಇಲ್ಲದಂತಾಯಿತು. ಇದೂ ಅಲ್ಲದೆ ಇನ್ನು ಮೇಲೆ ಅವನನ್ನೆದುರಿಸುವವರೇ ಇಲ್ಲದಾಗಿದ್ದರು. “ಹೂ೦ ಆ ಮೂರ್ತಿಯನ್ನು ಬಿಟ್ಟು ಈಗ ಅಗಳಾಡಿರಿ.” ಸಿಂಹ ಗರ್ಜನೆಯಾಯಿತು. ”ಬೇಡ ಖಾನ ಸಾಹೇಬ. ಈ ದೇವಮೂರ್ತಿಯನ್ನಷ್ಟು ಬಿಟ್ಟು ಸರ್ವವನ್ನೂ ತೆಗೆದುಕೊಳ್ಳಿರಿ. ಆದರೆ ಮೂರ್ತಿಗೆ ಕೈ ಹಚ್ಚ ಬೇಡಿರಿ” ಎಲ್ಲರೂ ಅಂಗಲಾಚಿ ಬೇಡಿಕೊಳ್ಳಹತ್ತಿದರು. ಅವರ ಆ ಶರಣು ಬರುವಿಕೆಗೆ ಖಾನನು ಆ ವೀರನತ್ತ ಹೊರಳಿ “ಅಕೋ ನಿಮ್ಮ ಸ್ಥಿತಿಯಾದರೂ ಅವನಂತೆಯಾದೀತು. ಸುಮ್ಮನೆ ಹೊರಗಾಗಿರಿ?” ಎಂದು ನಗಲಾರಂಭಿಸಿದನು. ಆಗ ಒಬ್ಬ ಪೂಜಾರಿಯು ಅವನ ಕಾಲುಗಳ ಮೇಲೆ ಬಿದ್ದು “ಜಹಾಂಪನಾಹ, ನಿಮ್ಮ ಕಾಲುಗಳ ಮೇಲೆ ಬಿಳುತ್ತೇನೆ. ಆದರೆ ದಯವಿಟ್ಟು ಮೂರ್ತಿಗೆ ಕೈ ಹಚ್ಚಬೇಡಿರಿ?” ಎಂದು ವಿನಯಿಸಹತ್ತಿದನು. ಆದರೆ ಇಂತಹ ಪ್ರಾರ್ಥನೆಗೆ ಆ ದುಷ್ಟನು ಮರುಳಾಗತಕ್ಕವನೇ? ತನ್ನ ಎಡಗಾಲಿನಿಂದ ಅವನನ್ನು ಒದ್ದು, ಆ ಮೂರ್ತಿಯ ಎದುರಿಗೆ ಹೋಗಿ ನಿಂತುಕೊಂಡನು. ಎಲ್ಲರ ಕೈ ಕಾಲುಗಳು ನಡುಗಲಾರಂಭಿಸಿದವು. ಮಹಮೂದನು ಸೇಂಬೂಡೆಖಾನನಿಗೆ ಒಡೆಯಲು ಆಜ್ಞಾಪಿಸಿದನು. ‘ಜೀ’ ಎ೦ದವನೇ ಸೇನಾಪತಿ ಸೇ೦ಬೂಡಖಾನನೂ ಹತೋಡೆಯನ್ನೆತ್ತಿದನು. ಎಲ್ಲರ ಕಣ್ಣುಗಳಲ್ಲಿಯೂ ಗಳಗಳನೆ ನೀರು ಹರಿಯುಲಾರಂಭಿಸಿದವು. ಆದರೆ ದುರ್ದೈವಿ ಹಿಂದೂಗಳು! ವಿಶಾಲ ಮಹಾಸಾಗರದಂತೆ ಮುತ್ತಿದ್ದ ಜನರಲ್ಲಿ ಒಬ್ಬನಾದರೂ ನಿಜವಾದ ಭಾರತಾಂಬೆಯ ಪುತ್ರನಿರಬಾರದಾಗಿತ್ತೇ?
“ಖಾನಸಾಹೇಬ ಇನ್ನಾದರೂ ತಡೆ, ಆ ಮೂರ್ತಿಯ ಕಿಮ್ಮತ್ತನ್ನೆ ನಿನಗೆ ಕೊಡುವೆ?” ಯಾವನೋ ಒಬ್ಬನು ಮಾತಾಡಿದ, “ನಾನು ಮೂರ್‍ತಿಗಳನ್ನು ಮಾರುವವನಲ್ಲ. ಒಡೆಯುವವನು” ಉತ್ತರವಿತ್ತ. ಕೂಡಲೇ ಸೇಂಬೂಡಖಾನನ ಹತೋಡೆಯು ಬಿದ್ದಿತು. ಮೂರ್ತಿಯು ಒಡೆದು ಪುಡಿಪುಡಿಯಾಯಿತು. ಮುತ್ತು ರತ್ನಗಳು ರಾಸಿ ರಾಸಿಯಾಗಿ ಹೊರ ಬಿದ್ದವು. ಅಕ್ಷಯ ಪಾತ್ರೆಯಂತೆ ಮೂರ್ತಿಯ ಹೊಟ್ಟೆಯೊಳಗಿಂದ ವೈಭವದ ರಾಸಿಯು ಹೊರಬಿದ್ದಿತು. “ನಿಜವಾಗಿಯೂ ನನ್ನ ಜನ್ಮ ಸಾರ್ಥಕವಾಯಿತು. ಇಷ್ಟು ಅಪಾರ ಸಂಪತ್ತನ್ನು ಪಡೆದುಕೊಂಡ ನಾನೇ ಧನ್ಯ” ಎಂದು ದಾಡಿಯ ಮೇಲೆ ಕೈಯಾಡಿಸುತ್ತ ಒಳ್ಳೆ ಆವೇಶ ಪೂರ್ಣ ಉದ್ಗಾರ ತೆಗೆದನು. ಅಷ್ಟೆಲ್ಲ ಧನರಾಶಿಯನ್ನು ತನ್ನ ಆನೆ, ಕುದುರೆ, ಹೇಸರಗತ್ತೆಗಳ ಮೇಲೂ ಕೂಡ ಹೊರಿಸಿಕೊಂಡು ಮಹಮೂದನು ಗಝುನಿಯ ದಾರಿಯನ್ನು ಹಿಡಿದನು. ಆಯಿತು. ಭಾರತದ ಭಾಗ್ಯಸೂರ್ಯಕ್ಕೆ ಅಂದಿನಿಂದ ರಾಹುವಿನ ಗ್ರಹಣವು ಹಿಡಿದದ್ದು ಇನ್ನೂವರೆಗೆ ಬಿಟ್ಟಿಲ್ಲ.”
***
“ಸಚಮಚ, ಖಾನಸಾಹೇಬ, ಮುಝೆ ಹಿಂದೂಧರ್ಮ ಬಹುತ ಪ್ಯಾರಾ ಹೈ” ಬಡಬಡಿಸುತ್ತಿದ್ದ ಆ ವೀರ, ಅಷ್ಟರಲ್ಲಿ ಎಲ್ಲಿಂದಲೋ ತಿರಸ್ಕಾರದ ನಗೆ ಬರಲಾರಂಭಿಸಿತು. “ಹಿಂದೂ ಧರ್ಮ! ಇನ್ನೆಲ್ಲಿದೆ ಹಿಂದೂ ಧರ್ಮ?” ಪ್ರಶ್ನಿಸಿತು ಆ ಸ್ವರ. ಈಗ ಸ್ವಲ್ಪ ಮದದಿಂದ ಇಳಿಯುತ್ತಿದ್ದ ಆ ವೀರನಿಗೆ ಆ ಸ್ವರವು ಸ್ಪಷ್ಟ ಕೇಳಬರುತ್ತಿದ್ದಿತು. “ಯಾ….ರ…..ವರು? ಬಾ ಇಲ್ಲಿ!!” ಹಾಗೆಯೇ ತೊದಲಿಸುತ್ತ ಮಾತಾಡುತ್ತಿದ್ದ. ಸುತ್ತಮುತ್ತಲಿನ ಜ್ಞಾನದ ಪರಿವೆಯೇ ಅವನಿಗಿದ್ದಿದ್ದಿಲ್ಲ. “ನನ್ನ ಹ…..ತ್ತಿ……ರ ಬಂ………ದರೆ ತೋ….ರಿಸ್ತೀ ….ನಿ.” ವ್ಯಕ್ತಿಯು ಅವನ ಹತ್ತಿರ ಬಂದಳು. ಸ್ವಲ್ಪ ದೃಷ್ಟಿಯಿಟ್ಟು ನೋಡಿದರೆ ಅವಳೊಬ್ಬಳು ದೇವಿ ಕಾಣಬರುವಂತಿತ್ತು. “ಹಿಂದೂಧರ್ಮದ ಅಭಿಮಾನವುಳ್ಳ ಹೇಡಿಯೇ ನಿನಗಿನ್ನೂ ಜ್ಞಾನವುದಯಿಸಿಲ್ಲವೇ?” ಅವನ ಮೇಲೆ ಕೈ ಮಾಡಿ ಅದೃಶ್ಯಳಾದಳು ಆ ತೇಜಸ್ವಿನಿ. ಆದರೆ ಅದೇನು ವಿಚಿತ್ರ! ಅಜ್ಞಾನಂಧಕಾರದಲ್ಲಿ ಮುಳುಗುತ್ತಿದ್ದ ಆ ವೀರನಿಗೆ ನವಚೇತನವುಂಟಾಯಿತು. ಸುತ್ತಮುತ್ತಲೂ ನೋಡಿದ. ಆ ದೇವಾಲಯ ಹಾಳು ಬಿದ್ದಿದೆ. ಸಮುದ್ರನಾಥನೂ ದೂರ, ಬಹುದೂರ, ಕಣ್ಣಿಗೆ ಕಾಣಿಸದಷ್ಟು ದೂರ ಸರಿದು ಬಿಟ್ಟಿದ್ದಾನೆ. ಅಹುದು. ದಿನಂಪ್ರತಿ ಸೇವೆ ಮಾಡುತ್ತಿರುವ ಆ ನಾಥನೇ ಇಲ್ಲದಾದನಂತರ ಅಲ್ಲಿ ಯಾರಿಗಾಗಿ ನಿಲ್ಲಬೇಕು? ಆಗ ಆ ವೀರನ ಪ್ರಜ್ಞೆ ಮತ್ತೆ ತಪ್ಪಿತು. ಆದರೆ ಅಜ್ಞಾತದಿಂದಲೇ ಯಾರೋ ಮತ್ತೆ ಚೇತರಿಸಿದರು. ಮತ್ತೆ ಎದ್ದು ಕುಳಿತು ತಾನು ಮಾಡಿದ ಅಪರಾಧಕ್ಕಾಗಿ ದುಃಖಿಸಹತ್ತಿದ; ಪಶ್ಚಾತ್ತಾಪ ಪಡಹತ್ತಿದ; ರೋದನಗೈಯಲಾರಂಭಿಸಿದ. ‘ತಾನು ಎಂಥ ನೀಚ ಕೃತ್ಯ ಮಾಡಿದೆನಲ್ಲಾ’ ಎ೦ಬ ಹಳಹಳಿಯಾಗಹತ್ತಿತು. “ತನ್ನ ನೀಚ ಕೃತ್ಯದಿಂದಲೇ ಭಾರತದ ಭಾಗ್ಯ ವಿಧಾತನು ಮರೆಯಾದನು.” ಎಂಬ ವಿಚಾರದಿಂದ ಅವನ ಹೃದಯವು ಕಂಪಿಸಹತ್ತಿತು. ಸಾವಿರಾರು ಚೇಳುಗಳು ಕಡಿದರೂ ನೋವಾಗದಷ್ಟು ವ್ಯಥೆಯು ಆಗ ಆ ವೀರನಿಗೆ ಆಗಹತ್ತಿತು. ಇದರ ಪ್ರತೀಕಾರವನ್ನು ಹೇಗೆ ಮಾಡಬೇಕೆಂದು ಯೋಚಿಸಹತ್ತಿದ. ಅಷ್ಟರಲ್ಲಿಯೇ ಮತ್ತೆ. “ಏಳು! ಎಚ್ಚರಾಗು! ಗುರಿಯನ್ನು ಮುಟ್ಟುವವರೆಗೆ ತಡೆಯಬೇಡ!” ಎಂಬ ಅಜ್ಞಾತ ವಾಣಿಯುಂಟಾಯಿತು. ಆ ವಾಣಿಯಿಂದ ಸ್ಫೂರ್ತಿಗೊಂಡ ಆ ನರವೀರನು ಅಲ್ಲಿಂದೆದ್ದು ಎಲ್ಲ ಸಮಾಚಾರವನ್ನು ತಿಳಕೊಂಡು ಕುದುರೆಯನ್ನು ಹತ್ತಿದವನೇ ವೇಷ ಬದಲಾಯಿಸಿ ನಡೆದನು. * * *
“ಖಾನ ಸಾಹೇಬ, ಇಷ್ಟು ಅಪಾರ ಸಂಪತ್ತಿಯನ್ನು ಕಟ್ಟಿಕೊಂಡು ತಾವು ಎತ್ತ ಹೊರಟಿರುವಿರಿ?” ಒಬ್ಬ ಕುದುರೆಯ ಸವಾರನು ಪ್ರಶ್ನಿಸಿದ.
“ಗಝನಿಗೆ” ಒಳ್ಳೆ ಠೀವಿಯಿಂದ ಮಹಮೂದನು ಹೇಳಿದ.
“ಓಹೋ” ಎಂದು ಜೋರನೆ ನಗಲಾರಂಭಿಸಿದ ಆ ಕುದುರೆ ಸವಾರ. “ಹಾಗಾದರೆ ತಾವು ಈ ದಾರಿಯಿ೦ದ ಸಾಗಿ, ತಮ್ಮ ವೈರಿಗಳಾದ ಹಿಂದೂ ರಾಜರ ಕಡೆಗೆ ಈ ಧನವನ್ನರ್ಪಿಸಿ ಬರಿಗೈಯಿಂದ ಹೋಗುವಿರೇನೋ?” ಕೇಳಿದ.
ಆಗ ಮಾತ್ರ ಗಝನಿ ಮಹಮೂದನ ಹೃದಯ ಕಂಪಿಸಿತು. ಆ ಕುದುರೆಸವಾರನು ಹೇಳಿದುದು ನಿಜವೆಂದೆಣಿಸಿತು. “ಒಂದು ವೇಳೆ ಯಾರಾದರೂ ನನ್ನನ್ನಡ್ಡಗಟ್ಟಿದರೆ ಇಷ್ಟೆಲ್ಲ ರಾಶಿಯನ್ನು ಕಟ್ಟಿಕೊಂಡು ಯುದ್ಧ ಮಾಡುವದಾದರೂ ಹೇಗೆ?” ಎಂದು ಯೋಚಿಸಿ “ಹಾಗಾದರೆ ಗೆಳೆಯಾ, ನಿನಗಿದರರ್ಧ ಧನವನ್ನು ಕೊಡುವೆ. ನನಗೆ ಮತ್ತಾವ ದಾರಿಯನ್ನಾದರೂ ತೋರಿಸಿ ಕೊಡಬಾರದೇ?” ಎಂದು ಒಳ್ಳೆ ವಿನೀತನಾಗಿ ಕೇಳಿದ. ಆ ಕುದುರೆ ಸವಾರನಿಗೂ ಇಂಥದೇ ಒಂದು ಸಂಧಿ ಬೇಕಾಗಿತ್ತು. ಅದಕ್ಕವನು ಓಹೋ, ಆಗಲಿ ಜೀಯಾ ಇದಕ್ಕೇನು? ಪಥಿಕರಿಗೆ ಹಾದಿಯನ್ನು ತೋರಿಸುವದು ಪಾವನವಾದ ಕೆಲಸ” ಎಂದು ಅವರನ್ನು ಹೊರಳಿಸಿಕೊಂಡು ಮಾರ್ಗಕ್ರಮಣ ಮಾಡಹತ್ತಿದನು.
ಅದೊಂದು ನಿರ್ಜನವಾದ ಅರಣ್ಯ. ಎಲ್ಲ ಕಡೆಗೂ ಗಿಡ ಮರ ಬಳ್ಳಿಗಳು ಹಬ್ಬಿಬಿಟ್ಟಿವೆ. ಮಧ್ಯಾನ್ಹದ ಬಿಸಿಲು ಹೊತ್ತಿನಲ್ಲಿಯೂ ಅಂಧಕಾರವನ್ನೆಸಗಿ ಅಂಜಿಕೆಯನ್ನು ಹುಟ್ಟಿಸುತ್ತಿತ್ತು. ಅ೦ಥ ಅರಣ್ಯದಿಂದ ಎಲ್ಲರೂ ಮಾರ್ಗವನ್ನನುಸರಿಸುತ್ತಿದ್ದರು. ಮಹಮೂದನ೦ತೂ ಅ೦ಜಿ ಬೆಪ್ಪಾಗಿದ್ದ. ಯಾರಾದರೂ ನಮ್ಮನ್ನು ಅಡ್ಡಗಟ್ಟಲಿಕ್ಕಿಲ್ಲವಷ್ಟೇ? ಈ ಸವಾರನಾದರೂ ನಮ್ಮನ್ನು ಮೋಸಗೊಳಿಸುತ್ತಿರಲಿಕ್ಕಿಲ್ಲವಷ್ಟೆ?” ಎಂಬ ಮನದ ದುಗುಡವೂ ಅವನಿಗೆ ಹತ್ತಿತು. ಯಾರೂ ಮಾತನಾಡುತ್ತಿದ್ದಿಲ್ಲ. ಪಕ್ಷಿಗಳು ಮಾತ್ರ ಕಿಲಿಬಿಲಿಗುಟ್ಟಿದ್ದವು. ಅವರೀಗ ಆ ಅರಣ್ಯವನ್ನು ಪ್ರವೇಶಿಸಿ ದೂರ, ಬಹುದೂರ, ಮಧ್ಯದಲ್ಲಿ ಬಂದಿದ್ದರು. ಆಗ ಆ ಕುದುರೆಯ ಸವಾರನೇ ಮೊದಲು ಮಾತನಾಡಿದ “ಖಾನಸಾಹೇಬ, ನನ್ನ ಗುರ್ತು ತಮಗಾಯಿತೇ?” ಮಹಮೂದನು ತಿಕ್ಷ್ಣ ದೃಷ್ಟಿಯಿಂದ ನೋಡಿದ. ಮದ್ಯಪಾನ ಮಾಡಿದ ಆ ವೀರನೇ ಇವನಿರಲಿಕ್ಕಿಲ್ಲವೇ ಎನ್ನಿಸಿತು. “ಇಲ್ಲ” ವೆಂದು ಹೇಳಿದ. ಆಗ ಆ ಸವಾರನು ತನ್ನ ಮೈ ಮೇಲಿರುವ ವೇಷಭೂಷವನ್ನು ತೆಗೆದೊಗೆದು “ಈಗಾದರೂ ಪರಿಚಯವಾಯಿತೇ?” ಎಂದು ಪ್ರಶ್ನಿಸಿದನು. ಆಗ ಮಾತ್ರ ಮಹಮೂದನ, ಸೇನಾಪತಿ ಸೇಂಬೂಡಖಾನನ ಹೃದಯವು ಧಸ್ಸೆಂದಿತು. ಆದರೂ ಸ್ವಲ್ಪ ಧೈರ್ಯದಿಂದ ಮಹಮೂದನು “ನೀನೊಬ್ಬನೇ ಇಲ್ಲಿ ನನಗೆ ಮಾಡುವೆ?” ಎಂದು ಕೇಳಿದನು. ಆಗ ಅವನು ತಿರಸ್ಕಾರದಿಂದ ನಗಲಾರಂಭಿಸಿದನು. ‘ಪ್ರಥಮಸಲ ಹಿಂದೂಗಳ ಹೇಡಿತನಕ್ಕೆ ನಕ್ಕ ತಾನು, ಈಗ ನನ್ನ ಹೇಡಿತನಕ್ಕಾದರೂ ಇವನು ನಗುತ್ತಿರಲಿಕ್ಕಿಲ್ಲವಷ್ಟೆ? ಎಂದವನಿಗೆ ಅನಿಸಿತು. ಹಣೆಯ ಮೇಲೆ ಬೆವರಿನ ಹನಿಗಳು ಮೂಡಲಾರಂಭಿಸಿದವು. “ನಿಜವಾಗಿಯೂ ಈತನು ನನ್ನನ್ನು ಸಂಪೂರ್ಣ ಮೋಸಗೊಳಿಸಿದನು” ಎಂಬ ಉಚ್ಚಾರವು ತನಗೆ ತಿಳಿಯದ ಹಾಗೆ ಮಹಮೂದನ ಬಾಯಿಂದ ಹೊರಟಿತು. ಮೋಸ!” ಒಮ್ಮೆಲೇ ಗರ್ಜಿಸಿದ ಆ ವೀರ ತರುಣ, “ಬಂಧುಭಾವದಿಂದ ಆದರ ಸತ್ಕಾರ ಮಾಡಿದರೆ, ಸಾಕಿದವನಿಗೆ ಹಾವು ಕಚ್ಚುವಂತೆ ನನ್ನನ್ನು ಮೋಸಗೊಳಿಸಿದೆ. ಇನ್ನು ಮೇಲೆ ಇದೇ ನಿನಗೆ ತಕ್ಕ ಪ್ರತಿಫಲ” ವೆಂದು ಒಳ್ಳೆ ಸಿಟ್ಟಿನ ಭರದಲ್ಲಿ ಮಾತಾಡಲು, ಮಹಮೂದನು ಒಮ್ಮೆಲೇ ಬಂಧಿಸಲು ಆಜ್ಞೆಯನ್ನಿತ್ತನು. ಆವೇಶದಲ್ಲಿದ್ದ ಆ ವೀರ ಪುಂಗವನಿಗೆ ಅವನ ಕಣ್ಸನ್ನೆಯ ಅರ್ಥವೇನೂ ಆಗಲಿಲ್ಲ. ಆದ್ದರಿಂದ ಸೇನಾಪತಿ ಸೇ೦ಬೂಡಖಾನನು ಹಿಂದಿನಿಂದ ಸಂಗಡ ನಾಲ್ಕು ಜನರನ್ನು ಕರೆದು ಅವನನ್ನು ಬಂಧಿಸಿದನು. ಆದರೂ ಆತ ಅ೦ಜಲಿಲ್ಲ. ಆಗ ಮಹಮ್ಮದನು ಒರೆಯಲ್ಲಿರುವ ಕತ್ತಿಯನ್ನು ಹೊರದೆಗೆದು ಅವನ ಎದೆಗೆ ಹಿಡಿದು “ಇಗೋ, ನೀನು ನಮ್ಮ ಪವಿತ್ರ ಇಸ್ಲಾಮ ಧರ್ಮವನ್ನು ಸ್ವೀಕರಿಸಿ, ನಮ್ಮ ಗಝನಿಯ ದಾರಿಯನ್ನು ಚೆನ್ನಾಗಿ ತೋರಿಸುವದಾದರೆ ಬಿಡುವೆ” ಎಂದು ಹೇಳಿದನು. ಮುಂದೇನು ಮಾಡುವನೋ ಎ೦ದು ಕೇಳುವದಕ್ಕಾಗಿ “ಇಲ್ಲವಾದರೆ?” ಎಂದು ಪ್ರಶ್ನಿಸಿದನು “ಇಲ್ಲವಾದರೆ!” ಮಹಮೂದನು ಒಳ್ಳೆ ಸಿಂಹದ ಆವೇಶದಲ್ಲಿ ಗರ್ಜಿಸಿದ, ಆದರೂ ಧ್ವನಿ ನಡುಗುತ್ತಿತ್ತು. ಪ್ರಾಣದ ಹಂಗನ್ನು ತೊರೆದು ಎಲ್ಲಿ ಮೈ ಮೇಲೆ ಹರಿಹಾಯುವನೋ ಎಂಬ ಅಂಜಿಕೆಯಿಂದ ಮಾತುಗಳು ಸ್ವಲ್ಪ ಸ್ವಲ್ಪ ತೊದಲಿಸುತ್ತಿದ್ದವು. ಆದರೂ ಹೇಳಿದ “ಇಲ್ಲವಾದರೆ ಇದೇ ಕತ್ತಿಯಿಂದ ನಿನ್ನ ದೇಹ ಎರಡು ಹೋಳಾಗುವದು.” ಈ ಮಾತಿನಿಂದ ಆ ವೀರನಿಗೆ ತಿರಸ್ಕಾರದ ನಗು ಬಂದಿತು. ನಗೆಯಲ್ಲಿಯೇ “ದೇಶ ಪ್ರೇಮ, ಧರ್ಮ ಪ್ರೇಮಗಳಿಂದ ಹರಿಯುತ್ತಿರುವ ರಕ್ತವನ್ನ, ಖಾನಸಾಹೇಬಾ, ನಿನ್ನಯ ತುಕ್ಕು ಹಿಡಿದ ಈ ಖಡ್ಗದಿಂದ ಹೊರ ಚೆಲ್ಲುವದು ಸಾಧ್ಯವಿಲ್ಲ. ಆಗ ಮಾತ್ರ ಮಹಮೂದನ ಸಂಪೂರ್ಣ ನೀರು ಇಳಿಯಿತು. ವಿಷದ ಹಲ್ಲನ್ನು ಮುರಿದ ಹಾವಿನಂತಾದನು. ಆಗ ನಮ್ರನಾಗಿ – ನನ್ನ ಅಪರಾಧವನ್ನು ಕ್ಷಮಿಸು, ಇಕೊ ಈ ಸಂಪೂರ್ಣ ಧನವನ್ನು ತೆಗೆದುಕೋ ಆದರೆ ನನಗೆ ನನ್ನ ದೇಶದ ದಾರಿಯನ್ನು ತೋರಿಸಿಕೊಡು” ಎಂದು ಬೇಡಿಕೊಳ್ಳಹತ್ತಿದನು. ಆದರೆ ಈ ಸಲ ಮಾತ್ರ ಆ ವೀರನ ಮನಸ್ಸು ಕರಗಲಿಲ್ಲ. ಅವನು ಧನದಾಸೆಯ ಹುಚ್ಚನ್ನು ಹಿಡಿಯಲಿಲ್ಲ. ದೇವರ ಪ್ರತಿಷ್ಠೆಯನ್ನು ಹರಣ ಮಾಡಿ ಹಿಂದೂಕುಲಕ್ಕೆ ಹಚ್ಚಿದ ಕಲಂಕವನ್ನು ಅವನಿಗೆ ತೊಳೆಯಬೇಕಾಗಿತ್ತು. ಆದ್ದರಿಂದ ಹೇಳಿದ. “ಖಾನ ಸಾಹೇಬ, ನೀನು ವೈಭವದ ಮೂರ್ತಿ ಹರಣಗೊಳಿಸಿದೆ. ಆದರೆ ನಿಜವಾದ ದೇವ ನನ್ನ ಹೃದಯ ಸಿಂಹಾಸನವನ್ನೇರಿದ್ದಾನೆ. ಅವನು ಇಲ್ಲಿ ಶಾಶ್ವತನಿದ್ದಾನೆ. ಆದ್ದರಿಂದ ನನಗೆ ಧನದಾಸೆಯಿಲ್ಲ. ಆದರೆ ಇನ್ನು ನಿನ್ನ ಗತಿ ಕಾಣು. ಈ ಸ್ಥಳ ನಿನ್ನ ದೇಶದಿಂದ ಬಹುದೂರ. ಇಲ್ಲಿ ತಿನ್ನಲು ಹಣ್ಣು-ಹಂಪಲಗಳಿಲ್ಲ; ಕುಡಿಯಲು ನೀರಿಲ್ಲ.” ಎಲ್ಲ ಸೈನಿಕರು “ತೋಬಾ, ತೊಬಾ” ಎನ್ನ ಹತ್ತಿದರು. ಸೇನಾಪತಿಯ ಕಾಲುಗಳಂತೂ ತಣ್ಣಗಾಗಿಯೇ ಬಿಟ್ಟವು. ಆಗ ಮಹಮೂದನು “ದುಷ್ಟಾ, ಇಗೋ ಹಾಗಾದರೆ ಪಡೆ ಇದಕ್ಕೆ ತಕ್ಕ ಪ್ರತಿಫಲವನ್ನು!” ಎಂದು ಒಳ್ಳೆ ಸಿಟ್ಟಿನಿಂದ ನಿಃಶಸ್ತ್ರನಾದ, ಬಂಧಿತನಾದ ಕುದುರೆಯ ಸವಾರನಾದ ಆ ನರವೀರ ಪುಂಗವನನ್ನು ಇರಿದು “ಯಾ ಅಲ್ಲಾ ಪರವರದಿಗಾರ” ಎಂದು ಬಂದ ದಾರಿಯಿಂದ ಸಾಗಿದನು. ಇತ್ತ ಆ ವೀರನೂ ಭಾರತಾಂಬೆಯ ಸ್ತೋತ್ರ ಮಾಡುತ್ತ ಅಮರನಾದನು.
ಪ್ರಿಯ ವಾಚಕ ಬಂಧುಗಳೇ! ಇಲ್ಲಿಗೆ ನಿಜವಾದ ಕಥೆಯು ಸಮಾಪ್ತಿಯಾಯಿತು. ಮುಂದೆ ಗಝನಿ ಮಹಮೂದನಾದರೂ ಪಶ್ಚಾತ್ತಾಪ ಪಡುತ್ತ, ಹಾದಿಯಲ್ಲಿ ಇದಿರಾದವರಲ್ಲಿ ಕೆಲವರನ್ನು ಪರಾಕ್ರಮದಿಂದ, ಹಣದಾಸೆಯಿಂದ ಗೆಲ್ಲುತ್ತ ಹಾಗೂ ಹೀಗೂ ತನ್ನ ದೇಶವನ್ನು ತಲ್ಪಿದನು. ಆದರೆ ಸೋಮನಾಥನ ವೈಭವದ ಹರಣ ಮಾಡಿದುದ ಸೇಡಿಗಾಗಿ ತನ್ನ ದೇಹವನ್ನೆ ಅರ್ಪಿಸಿದ ಆ ‘ವೀರ’ನ ಇತಿಹಾಸವನ್ನು ಯಾವ ಇತಿಹಾಸಕಾರನೂ ಬರೆದಿಲ್ಲ. ಇದೂ ಅಲ್ಲದೆ ‘ಅವನ’ ಹೆಸರನ್ನು ಕೂಡ ಪ್ರಸಿದ್ಧಿಸಿಲ್ಲ. ಆದ್ದರಿಂದ ಓ ಎನ್ನ ಭಾರತೀಯರೇ! ಆ ‘ನರವೀರಪುಂಗವ’ನ ಹೆಸರನ್ನು ಶೋಧಿಸಲು ಯಾರಾದರೂ ಪ್ರಯತ್ನ ಮಾಡುವಿರಾ?
*****