ಯಿದು ನಿಜದಿ ಕತೀ…

ಯಿದು ನಿಜದಿ ಕತೀ…

ಚಿತ್ರ: ಕಿಶೋರ ಚಂದ್ರ

ಯೀ ಕತೀನ ನಾ… ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ…  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ.

ಯಿದು ನಡೆದಿದ್ದು… ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ…’ ಅಂಬಂಗೆ,  ವುಗಾದಿ ಕಳ್ದೆ ಮೂರ್ನೆ ದಿನ್ದ, ಶನಿವಾರದ ಸರಿ ರಾತ್ರಿ ವತ್ತಿನಾಗೆ, ಕೇರಿ ನಾಯ್ಗಳ ಯಿಂಡ್ನಿ ಜೊತ್ಗೆ… ಮನೆ ನಾಯ್ಗಿಳು… ನಾಲ್ಕು ಕೂಡಾ, ಕಂಡಾಬಟ್ಟೆ ಬೊಗ್ಳುತ್ತಿವೆ.

ಕೇರಿ ಯಜ್ಮಾನ ಸಣ್ಣಯಲ್ಲಪ್ಪ, ಚಿಮ್ನಿಯೆಣ್ಣೆ ದೀಪಾಧ ವುರೀನ… ರವ್ವಾಟು, ಗಡುತ್ರ ಮಾಡಿ, ‘ಜರ್ನಾಲು’ ತೂತಿಂದಾ… ಐದಾರು ಸರ್ತಿ, ಯಿಣಿಣ್ಕಿ ನೋಡ್ದ… ಯೀಗ ನಾಯ್ಗಳು ಬೊಗ್ಳುತಿಲ್ಲ. ವೋಗ್ಲಿ ಮನುಸ್ರಾ ಸಪ್ಳಿಲ್ಲ! ನಾಯ್ಗಿಳ ಕಣ್ಗೆ… ದೆವ್ವ,  ಭೂತ, ಪಿಶಾಚಿ, ಗಾಳಿ ಸೆಡ್ಗು, ಆಗೋಚರಾ ಶಕ್ತಿ ಯೇನಾರೆ ಕಂಡಿರ್ಬೇಕೇನೋ…?!  ಅದ್ಕೆ ಬೊಗ್ಳಿರ್ಬೇಕೆಂದೂ ಅಂದ್ಕೊಂಡು… ಐದಾರು ಸರ್ತಿ… ಕೆಮ್ಮಿ, ಕ್ಯಾಕುರ್ಸಿ… ಧಂದಕ್ಲಿ ಕಡ್ಗೇ ವುಗ್ಳಿ, ಗಂಟ್ಲು ಸರಿಮಾಡ್ಕಿಂಡು, ಟೇಬಲ್ ಬೀಡ್ಗೆ, ವುರೇ ದೀಪಾನ ಯಿಟ್ಟು,  ‘ಬುಸುಽ ಬುಸು ಸೇದ್ಸೇದಿ ವಗೇನ ‘ವುಫ್’ ಅಂತಾ ಬಿಟ್ಟ! ಕೈಗೆ ಬೀಡಿಯ ಬೆಂಕಿ ತಗ್ಲಿದಾಗೇ… ಮೋಟು ಬೀಡೀನಾ ನೆಲ್ಕೆ ಆಕಿ ‘ಗಸ್ಗಾಸಾ’ ತಿಕ್ಕಿ… ಆರ್ಸಿ… ಬೀಸಿ… ಗ್ವಾದ್ಲಿ ಕಡ್ಗೆ ವಗೆದು, ತಲೆಮಟ್ಗೆ, ತಲೆ ಕೊಟ್ಟ!

ಯಾವಾಗ ನಿದುರೆ ವೋದ್ನೋ… ಗೊತ್ತಾಗ್ಲಿಲ್ಲ.

ಮುಂಗೋಳಿ ಕೂಗಿ, ಮೂಡ್ಸು ಕೆಂಪಡ್ರುವ ಮುನ್ನ… ಅಭ್ಯಾಸಬಲದಂತೆ, ಸಣ್ಣಯಲ್ಲಪ್ಪ ಯೆದ್ದು, ಚೆಂಬು ತಕ್ಕೊಂಡು, ‘ಬಯಲ್ದೆಸೆಗೆ’ ಕುಂಟ್ಬೆಯ್ಗೆ… ವಂಟ.  ಮನೆ ತ್ವಲು ಬಾಗಿಲು ಮುಂದೆ, ಕಟ್ಟ್ಯಾಕಿದ್ದ ನಾಲ್ಕು ತೋಳ್ದಾಂಥಾ… ನಾಯ್ಗಿಳು,  ಸತ್ತಂಗೆ… ನಾಲ್ಗೆ ವರ್ಕೆ ಸಾಸಿಗೊಂಡು, ಬಿದ್ಕೊಂಡಿರುವುದಾ ಕಂಡು, ದಂಗು ಬಡ್ದು ನಿಂತ!

ಯಲ ಯಲೇಲೇ… ರಾತ್ರಿ, ಸರ್ವಾತ್ನ್ಯಾಗೆ, ನಾಯ್ಗಿಳು ‘ಬೊವ್‌ಽವ್‌ಽಽ’ ಯೆಂದದ್ದು, ಸಣ್ಣಯಲ್ಲಪ್ಪನ ಗುಮಾನಿಗೆ, ರೆಕ್ಕೆ… ಪುಕ್ಕ… ಬಂದುವು. ಕೈಯಲ್ಲಿಡಿದಿದ್ದ ಚೆಂಬ್ನಿ ತುಂಬಾ ನೀರ್ನ… ನಾಯ್ಗಿಳ್ಮೇಲೆ ಚಿಮ್ಕಿಸಿದ. ನಾಯ್ಗಿಳು ಮೆಲ್ಲ ಮೆಲ್ಗೆ… ಕಾಲ್ಗುಳು  ಬಡುದು, ಕಿವಿಗಳು ಅಲುಗ್ಸಿ… ವದ್ದಾಡಿ… ವದ್ದಾಡಿ ಕಣ್ಬಿಟ್ಟುವು!

ಅಬ್ಬಾ! ವೋದ ಜೀವ… ಮರ್ಳಿ ಸಣ್ಣಿಲ್ಲಪ್ಪನ್ಗೆ… ಬಂದ್ಗಾತು! ಜೀವಕ್ಕೆ ಜೀವ ಕೋಡೋ… ತಾನೇ ಸಾಕಿ ಸಲುಹಿ ಬೆಳ್ಸಿದ… ಮುದ್ದಿನ ಆನೆಯಂಥಾ… ನಾಯ್ಗಿಳು,  ಮಬ್ಬು ಮುಚ್ಚಿಗೊಂಡು, ಬಿದ್ದಿರ್ಬೇಕಾದ್ರೆ ಯಾರ ಕೈವಾಡವಿರಬೇಕು?? ಯೇನು ಸಲುವಾಗಿ ಯಿಂಗೆ, ಮಾಡಿರಬಹುದೆಂದು ಸೋಜಿಗಗೊಂಡು, ಸುತ್ತಮುತ್ತ ಕಣ್ಣಾಡ್ಸಿ… ಆ ಕ್ಷಣ… ನಿಂತಲ್ಲೇ ಕುಸ್ಸಿದು ಕುಂತಾಗ್ಲೆ ದಮ್ಮು, ಕೆಮ್ಮು, ಕಫಾ, ವುಬ್ಸಾ, ಆಯಾಸ, ತಗ್ಗಿ ಸರಿಯ್ದಾಂಗಾಗಿದ್ದು.

ಯೆಣ್ತಿ ದುರ್ಗುಮ್ಮ… ಮಕ್ಳು ಮರಿಯೆಲ್ಲ ಪಡ್ಸಾಲೆಯಿಂದ, ಪೊಲೀಸ್ಸಿನವ್ರು ಬಂದಂಗೇ, ಆಗಾ… ಯೆದ್ದೆದ್ದು ಸಪ್ರಾದಾಕೆ. ಅಂಗ್ಳಾದಾಕೆ… ಮೆಲ್ಗೆ ಕಣ್ಣುಜ್ಜುತ್ತಾ… ವಬ್ಬೊಬ್ರೆ ಅಡ್ಸಾಲ್ಬಡ್ಸಾಲ… ಬಂದ್ಬಾಂದು ನಿಂತ್ರು! ಅಂಡ್ವಾರ್ಣ, ಪುಂಡಿಪಲ್ಲೇನ ಯಲ್ರು… ಕಣ್ಣಾರೆ ಕಂಡ್ರು! ವಮ್ಮಿಂದೊಮ್ಮೆಲೆ ಮೈಕಿಟ್ಟಂತೆ ಗಲ್ಗಾಲಾಂತಾ, ಐದಾರು ಬಾಯ್ಗಿಳು, ಅಳೇ ವತಾರೇ ಸುಪ್ರಭಾತ, ಹಾಡತೊಡಗಿದವು.

‘ಯಾವ್ನಿಗೆ ಬಂದಿತ್ತೊ… ಅವ್ನ ಕೈಕಾಲ್ ಕತ್ರಿಸಾ… ಸತ್ತಲ್ಲಿ ಕತ್ತೆ ವಳ್ಲಿ… ಮಧ್ಯಾನ್ದಾಗೆ… ವರ್ಗಿ ವೋಗ್ಲೀ… ಬಾನ ತೊಡ್ಲಿಲಿ… ಬಕ್ಬಾರ್ಲು ಬೀಳ್ಲೀ… ಅವ್ರಿಗೆ ಬರುಬಾರ್ದು ಬರ್ಲಿ… ವಂಶಾ ನಿರ್ವಂಶವಾಗ್ಲೀ…’ ಯೆಣ್ತಿ ದುರ್ಗುಮ್ಮ, ಮಕ್ಳು ಮರಿಯೆಲ್ಲ… ಲಟ್ಕಿ ಮುರ್ದು… ಕೇರಿಗ್ರ್ನ ಸಿಡಿಸಾಪ್ಸಿದ್ರು… ಯಿಡೀ… ವೂರುಕೇರಿಯೆಲ್ಲ ಬೆಚ್ಚಗಾತು.

ಸಣ್ಣಯಲ್ಲಪ್ಪ, ಐದಾರು… ಸುಣ್ದಗಲ್ಲೆ ಪಡುಗದೊಳ್ಕೆ, ಮೆಲ್ಗೆ… ಅನುಮಾನ್ದ್ಮೇಲೆ ಕೈಯಿಟ್ಲು, ಮೀನು ಜಾಲಾಡ್ಸಿದಂಗೇ… ಜಾಲಾಡ್ಸಿದ. ಗಲ್ಲೆ ಬರಿದಾಗಿದೆ. ಗಲ್ಲೆಯೊಳ್ಗಿಂದಾ… ದೊಡ್ಗೌಡ್ರ ಕ್ವಾಣ್ದ, ಆನೆಯಂತಾ ತ್ವಗ್ಲು ತೆಗ್ದು… ರಾತ್ರೋರಾತ್ರಿ… ಕಳ್ತ್ನ ಮಾಡಿರುವುದರಿಂದ, ಸುಣ್ಣ ಸರಿಯೆಲ್ಲಾ… ಪಟ್ಪಟ್ಟೆ… ಜೋರ್ಳಿದು ಅಂಗ್ಳದಾ… ತುಂಬಾಗಿ ‘ರಾಡ್ರಾಡಿ’…  ಕೇರಿಯಿಂದ ತಿಪ್ಪೇಗುಂಡಿ, ಸೀಮೆಜಾಲಿ ಗಿಡ್ಗುಳ ಕಡ್ಗೆ, ವಳ್ಳಿ… ಗೆರೆ ಆಟ್ದಾಗೆರೆ… ಯಳ್ದಂಗೆ ವುದ್ದೂಕ… ಮುಂದೆ ರಾಂಪುರ್ದ ಕಡ್ಗೇ… ವೋದಂಗೇ ಆಸ್ಗಿತ್ತಿಗೋಗಿ- ಯೀಸ್ಗಿತ್ತಿಗೇ ಬಂದಂಗೇ… ಮತ್ತೇ ತಿಂಮ್ಮಲಾಪುರ್ದ ಕಡ್ಗೆ… ಯೆಜ್ಜೆಗ್ಳ ಮೇಲೆ ಯೆಜ್ಜೆಗ್ಳು…  ಪಟ್ಟೆ ಗೀರ್ಗಾರಾ… ಗುರ್ತುಗಳೂ… ಬಿದ್ದೀರೋದು ನೋಡಿದ್ರೆ… ಸಣ್ಣ ವುಡ್ರು ಯಿದ್ದಾಗ ಪಟ್ಟೆ ಕಟ್ಟೋ ಕುಂಟೆಬಿಲ್ಲೆ… ಕಬಡಿ, ವುಲಿ ಸರ್ಗುಸ್ತಿ… ಆಟಾಡಿದ್ದು ಗಕ್ನೇ… ನೆಪ್ಪು ಮಾಡಿಕೊಂಡ.

ಯೀಗ ತನ್ನೊಂದಿಗೆ ಆಟಾಡಿರ್ವೂ ಪರಿಗೇ ಮೈ ವುರಿದೋಯ್ತು. ಅಬ್ಬಾ!  ಕಳ್ರಿಷ್ಟು ತಲಿವಾನ್ರೇ? ಯಿವೆಲ್ಲ ತಬ್ಬಿಬ್ಬು ಮಾಡ್ವು, ಕಂತ್ರಿ ಕೆಲ್ಸವೆಂದೂ… ವುಗ್ರಾ  ಪ್ರತಾಪಿಯಾದ. ಜಗತ್ತಿನ ಯಲ್ಲ ದಾರಿಗ್ಳು… ಕೇರ್ಗೆ ಬಂದು ತಲುಪುತ್ತವೆಂದು ಬಲ್ಲ  ಸಣ್ಣಯಲ್ಲಪ್ಪ… ತಾನೂ ಕಾಲ್ಮರಿ ಮಾಡಿಕೊಡುತ್ತಿದ್ದ… ಕಾಲುಗಳಿಗೂ, ಯಿಲ್ಲಿನ ಯೆಜ್ಜೆಗುರುತಿಗೂ ತಾಳೆ ನೋಡಿದ! ಯಿವು ಕೇರಿಗ್ರ ಗುರ್ತುಗಳು!

ಮನ್ಗೆ ಯಿಂದಿರುಗಿದ. ಶನಿವಾರದ ವ್ರತ. ನೀರ್ರೆಕ್ಕೊಂಡು, ಪೂಜೆಗೆಂದು ಬಟ್ಲು ತುಂಬಾ… ಮನೆಯ ಯಮ್ಮೆ ತುಪ್ಪಾ, ಅಣ್ಣು, ಕಾಯಿ, ವೂದ್ಗಡ್ಡಿ, ಕರ್ಪೂರ ತಗೊಂಡು… ವೂರು ವರಗಿರುವ ಅನುಮಪ್ಪನ ಗುಡ್ಗೆ ಸೀದಾ… ವಂಟ.

ತನ್ನ ನಾಲ್ಕೂ ನಾಯ್ಗಿಳು ಬೆನ್ನು ಬಿದ್ದವು! ‘ನಾಯ್ಗಿಳೂ ಜೋಲುಮಕದಲ್ಲಿವೆ. ಯೀ ನಾಯ್ಗಿಳಿಗೆ ಯಿದ್ದಷ್ಟು… ನೀತಿ, ನಿಯತ್ತು, ನಮ್ ಮನುಸ್ರುಗೆ ಯಿಲ್ಲ! ಯೀವತ್ತು ರಾಗಿ ಅಂಬ್ಲಿ, ನವಣೆ ಬಾನ, ಮೊಸ್ರು, ಮಜ್ಜಿಗೆ… ಯೇನೂ ಯೀ ನಾಯ್ಗಿಳು… ಮುಟ್ಟಿಲ್ಲ! ಕೃತಜ್ಞತೆ ಯೆಂದ್ರೆ.. ಯಿವುಗ್ಳುದ್ದು ಪ್ರಾಣ್ಗಿಳೇ ಗುಣ್ದಲಿ ಮೇಲು ಕೆಲಜನ್ರು ಕೀಳು…’ ಯೆಂದು ಸಣ್ಣಯಲ್ಲಪ್ಪ, ಯೋಚಿಸುತ್ತಾ ದಾರಿ ಸವೆಸಿದ್ದ.

ಮನಸ್ಸು ಗೊಂದಲದ ಗೂಡಾಗಿತ್ತು. ಜೇಡರ ಬಲೆಯಲ್ಲಿ ಸಿಗಿಬಿದ್ದ ಜೇಡದಂತೆ ಮನಸ್ಸು ಕೇರಿಗ್ರ ಬಗ್ಗೆ ಯೋಚಿಸ್ತಾಯಿತ್ತು. ಯೀ ಮನುಸ್ರು ಬಾಳ ನೀಚ್ರು, ವೂಸ್ರಾವಳ್ಳಿಗಳಂಗೆ, ಯರ್ಡು ತಲೆ ಆವಿನಂಗೆ, ಯಾವಾಗ ಯೇನು, ಯೆತ್ತ, ಅಂತಾ ಯೇಳಕಾಗಲ್ಲ.

ಮೊನ್ನೆ ದಿನ-ಪೋಟಿಯಿಂದ ತಲೆ, ಕಾಲು, ತ್ವಗ್ಲು, ಕೊಂಬುಗಳನ್ನು ಕೇರಿಗ್ರಯೆದುರಿಗೆ, ರೊಕ್ಕ ಕೊಟ್ಟು, ಅಣ್ಣ ತಂಮ್ಮಗಳ ಬಾಬತ್ತು, ಯೆಂಡ ಸಾರಾಯಿ ಕುಡಿ… ತಗೊಂಡು ಸುಣ್ಣದ ಕರೇಗೆ ಯಿಟ್ಟಿದ್ನ ನಂಮ್ ಕೇರಿಯವ್ರಲ್ದೆ ಬೇರೆ ಕೇರಿಯವ್ರು ಬಂದು… ತಾಯಿಗೆ ಲಾಡಿ ಬಿಚ್ಚೋ ಯಿಂತಾ ನೀಚ ಕೆಲ್ಸ ಮಾಡಲು ಸಾಧ್ಯವೇ?

ಕೇರಿಯೆಂದ್ರೆ ಕ್ರಿಯಾಶೀಲ ಸ್ಥಳ.  ಸೂರ್ಯನುದಿಸುವ ಸ್ಥಳ. ಮಾದಿಗರೆಂದ್ರೆ ಮಹಾಧೀರರು. ಧೈರಯವಂತರೆಂದು ಹೆಸ್ರು! ಕಳ್ತ್ನಾ ಮಾಡೋಕೆ ಧೈರ್ಯ ಬೇಕು. ಅದು ಯಿವ್ರಲ್ಲಿದೆ! ದಾರಿಗುಂಟಾ… ಯೀಗೇ ಯೇನೇನೊ… ವುಚ್ಚುಚ್ಚಾಗಿ… ಸಣ್ಣಯಲ್ಲಪ್ಪನ  ಮನಸ್ಸು, ತ್ವಗ್ಲು ಕಳುವಾದ ಬಗೆಗೆ ಗಿರ್ಕಿ ವಡೀತಿತ್ತು.
*   *   *

ಬಟ್ಟಬಯಲಲ್ಲಿ… ಸಿಟ್ಟೇರಾ ಹಳ್ಳದಾ… ಸಾಲಲ್ಲಿ… ಗುಡಿ ತಬ್ಲಿಯಂಗೆ ನಿಂತಿತ್ತು.  ಶನಿವಾರ್ದ ದಿನವೆಂದ್ರೆ… ಜನ್ರು ತೆರ್ಬಿಲ್ದಂಗಿರ್ಬೇಕಾಗಿತ್ತು! ಅಂತಾದು… ಕರಿಕಲ್ಲಿನ ಅನುಮಪ್ಪ… ವೂದ್ಕೊಂಡು… ಗುಂಡುಕಲ್ಲು ನಿಂತಂಗೇ ವಬ್ನೇ ಬ್ರಹ್ಮಾಚಾರಿಯಂಗೇ… ನಿಂತಿದ್ದ!  ಜನ್ರು ದಾರಿ ತಪ್ಪುತ್ತಿರುವರೇನೋ… ಕಳ್ರು, ಸುಳ್ಳ್ರು… ಆಗಿಬಿಟ್ರೇನೋ… ತಪ್ಪು ತಪ್ಪು !  ವೋದುವೋದವ್ನೇ ವುದ್ದೂಕೆ ಅಡ್ಡ ಬಿದ್ದು, ಪಾದಗಟ್ಟ್ಮೇಲೆ ಬಿಳೀ ‘ಅದಾರ್ನ’ ವೂಧ್ರಪುಂಡ್ರವಾಗಿ, ಅಣಿಗೆ ಅಚ್ಚಿಗೊಂಡು ಕರೀ ಮುಗುಳ್ನಿ ನೆಲ್ಕಿಟ್ಟು ಸೆದ್ಲಿಡೀತನ್ಕಾ… ಕುಂತ…

ತನ್ಗೆ ಅರಿವು ಬಂದಾಗಿನಿಂದ, ಪ್ರತಿ ಶನಿವಾರ್ಕೊಮ್ಮೆ ತಪ್ದೆ ತುಪ್ಪಾ… ಪೂಜೆ ಸಲ್ಸಿ, ಕಟ್ಟು ನಿಟ್ಟಿನ ವುಗ್ರ… ವ್ರತಾ ಪಾಲ್ಸಿಗೊಂಡು, ಬಂದಿರುವುದನ್ನು ನೆನೆದ.  ಸಣ್ಣವ್ರತ್ತಿರಾ ದೊಡ್ಡ ಸಾಧನೆಗಳಿರುತ್ತವೆ. ಅಬ್ಬಾ ತಾನೂ ಯಿವತ್ತು ಬೀಡಿ ಸೇದಂಗಿಲ್ಲ.  ಯೆಂಡ, ಸಾರಾಯಿ, ಕಾಫಿ, ಟೀ, ಅಷ್ಟೇಕೇ ನೀಸೀಗೆ ಮೂರು ವತ್ತು ಅರ್ಕೊಳ್ಳಾನು… ತತ್ತಿ… ಯಂಡ್ರಕಾಯಿ… ಸಳ್ಳೆ… ಸಣ್ದೂ, ದೊಡ್ದೂ… ಯಾವುದೂ… ಯೀದಿನಾ… ಮುಟ್ಟಂಗಿಲ್ಲ! ರಾತ್ರಿಕೇ ವೂಟ! ಯಿಂತ್ವಾನ ಯೀ ಅನುವಪ್ಪ, ಯೀ ವತ್ತು ಕೈ ಬಿಟ್ಟಾನೇ??

ಬಾಳೊತ್ತು ತಲ್ಮೆಲೆ ಕೈವತ್ತು, ಕುಂತ್ವನು ಮೇಲೆದ್ದು, ಮನೆ ಕಡೆ, ಬರತೊಡಗಿದವ್ನ,  ನಾಯ್ಗಿಳು ಯಿಂಬಾಲು ಬೇತಾಳ್ದಂಗೆ ಬೆನ್ನು ಬಿದ್ದಿದ್ದವು…. ಮುಂದ್ಮುಂದೆ… ಯಿಂದಿಂದೆ… ಸರ್ಪಗಾವಲು… ಮಾಡುಂಡ್ರೆ ಮಂದಿಕಾಟ! ತಿರ್ದುಂಡ್ರೆ ನಾಯ್ಗಿಳ ಕಾಟ! ಕೇರಿಗ್ರ  ಕೆಟ್ಟು ಕಣ್ಣು, ತನ್ನ ಕಣ್ಣ ಮುಂದೆ, ಮೆರ್ವಣ್ಗೆ ವಂಟಿತು.

ಕಡ್ಲೆಂತಾ ಬಿಳೀ ಜೋಳ್ನ ಹಗೇವಿನಿಂದ ತಗ್ದು, ಗಾಳಿ ಕಾಲ್ದಾಗೆ, ಸುಡೋ ಬಿಸ್ಲಿಗೆ ವಣಿಗಾಕದ್ರೆಷ್ಟು… ಕಣ್ಣು ವುರಿ… ಯೀ ಜನ್ರೀಗೆ? ಬೇಕು ಬೇಕೆಂತಲೇ ತಂತಮ್ಮ ದನ, ಕರು, ಕುರಿ, ಮೇಕೆ, ಕೋಳಿಗಳ್ನ ಯಿಂಡಿಂಡೂ ಬಿಟ್ಟು ತಿನ್ಸಿ… ಕಣ್ಲೀ ನೋಡ್ತಾ  ನಿಲ್ತಾರೆ… ಕೇಳಿದ್ರೆ ಬಾಯಿಲ್ದ ಜಂತುಗಳು ಮೂಕ್ಪ್ರಾಣ್ಗಿಳು… ‘ವುಸ್’ ಅಂದ್ರೆ ವೋಗ್ತಾವಪ್ತಾ… ಅಂತಾ ಮೆತ್ಗೆ, ನರಸತ್ತರಂಗೆ, ರಂಡೆಮುಂಡೆರಂಗೆ…. ಮಾತಾಡ್ತಾರೆ!  ಅದೇ ಕಾಳ್ನ ಸಂಜೆ ಕಡೆ ತೂರ್ದ್ರೆ… ಕಣ್ಗೇ ಧೂಳ್ ಬಂತು..! ಮನ್ಯಾಕೆ ಸುಂಕು ತುಂಬ್ತು! ನಿಮ್ದು ಅಗ್ಲುರಾತ್ರಿ ಯಿಕ್ಕೇತೆ ಅಂತಾ… ಮರಿ… ಬೊಬ್ಬಿಟ್ಟು. ತೆಕ್ಕೆಮುರ್ರುಗೆ ಬರ್ತಾರೆ. ವುಂಡ್ರೆ ವುಬ್ಸು, ಯೇತ್ರೆ ಸಂಕ್ಟಾ ಪಡೋ ಕುದ್ಲಿಗೇಡಿ ಜನ್ರ ನಡ್ವೆ ಬಾಳು ನಿತ್ಯ ಗರಗ್ಸದಂಗೆ, ಸರ್ಸಾರಾ ಸರ್ಸಾರಾ… ಯೆದ್ಕೊಂತಾ ಬಿದ್ಕೊಂತಾ… ಸಾಗ್ದೆ ಯಿನ್ನೇನು??  ತನ್ನಷಕ್ಕೆ ತಾನೆ ಪ್ರಶ್ನಿಸಿಕೊಂಡ. ಅಂಗೆಂತಾ ಬ್ಯಾಸ್ರ ಮಾಡ್ಕೊಂಡು ಯೀ… ಕೇರ್ನಿ ಬಿಡಾಕಾಗುತ್ತೇ? ವಟ್ಗೆ ಬಟ್ಗೆಯಿಲ್ಲವ್ರು ವಟ್ಸೆಂಗ್ಟ ಬಿದ್ಬಿದ್ದೂ ವದ್ದಾಡ್ತಾರೆ. ಕೈಗೆ ಸಿಕ್ಕಾಗೆ ನಿಂಬೆಣ್ಣು ಯಿಜಿಗಿದಂಗೆ ಯಿವ್ರ್ನ ಯಿಜಿಗಿ ಯೆಸೆದ್ಬಿಡ್ಬೇಕು! ಛೇ ತಪ್ಪು ಅವ್ರದ್ಲ! ನಾವು ಭೇಷ್ ಮಾಡುಂಬ್ತಿವಲ್ಲಾ ಅದ್ಕೆ ಹೀಗೇ ತನ್ನಂತೆ ತಾನೇ ಪರ ವಿರೋಧವಾಗಿ ಮಾತಾಡ್ತಾ… ಸಂತೈಸಿಕೊಳ್ತಾ ಸಣ್ಣಯಲ್ಲಪ್ಪ ಸಣ್ಣಗೆ, ಮನೆ ತಲುಪ್ದಿವ್ನೇ… ತ್ವಟುಗೊತ್ತು, ಪಡ್ಸಾಲೆ ಕಂಬಕೆ ಆನಿ ಕುಂತು, ಬಿರ್ರಾನೇ ಬಿಳಿ ರುಮಾಲು ಸುತ್ತಿಗೊಂಡು, ನಾಯ್ಗಳ ಕರ್ಕೊಂಡು ರಾಂಪುರ್ದು ದಾರಿ ಸವ್ಸೆದ. ಅಲ್ಲಿ ತ್ವಗ್ಲು ಸಾಬೀನ ಕಂಡು, ‘ತ್ವಗ್ಲು ಮುಂಡೇಗೆ ಯಿವತ್ತು ನಾಳೆ ಕಳ್ತ್ವಗ್ಲು ಬಂದ್ರೆ ತಿಳ್ಸಿಲು’ ತಿಳ್ಸಿದಾ. ಸೀದಾ ವಳ್ಳಿ ಕೇರೀಗೆ ಬಂದು, ತಡಮಾಡ್ದೆ ಸರೀಕರ ಮನ್ಮೆನೆಗುಂಟಾ ನಡ್ದೆ. ಸುಣ್ದು ಕ್ವಾಣಗರ್ದು ತ್ವಗ್ಲು ವುಡುಕ್ಯಾಂತ ಹನುಮನಂಗೇ… ವಂಟ.

‘ಯೀ ಕೇರಿ… ಮಾದಿಗ್ರ್ನ ಬಿಟ್ಟು ನನ್ ತ್ವಗ್ಲು ಯೆಲ್ಲಿ ವೋಗಾಕೆ ಅದ್ಕೇನು ಕಾಲ್ಗುಳು ಬಂದಿಲ್ಲ! ಯಿಂತಾ ವಳ್ಕೊಯ್ತ ಕೊಯ್ತಾರೆಂತಾ… ನಾ… ಅಂದ್ಕೊಂಡಿರ್ಲಿಲ್ಲ. ಜಾತಿ ಜಾತ್ನಿ ಕಂಡ್ರೆ ಭೀತಿ ಜಾಸ್ತಿ! ತಾಯಿಗೆ ಲಾಡಿಬಿಚ್ಚೋರ್ನ ಕಳ್ರಾನಾ… ಯೀ  ಕೇರ್ಯಾಗೆ ನೋಡಿದ್ದು!! ಯಿಂಗೆ ‘ಗುದ್ರಂಡಿ’ ಕೆಲ್ಸ ಮಾಡ್ಬೇಕಂತಾ… ಯೆಷ್ಟು ದಿನಗಳಿಂದ ಯೀ ಲುಚ್ಛರು… ಮಸ್ಲತ್ತು ಮಾಡಿದ್ರೋ… ಕೈ ಯಿಡಿದು.. ಕೈ ಹಿಡಿದು… ಯೇಲು ತುಳ್ಸಿದ್ರು! ತಾಯಿ ಗಬ್ದಾಗೆ ತ್ವಗ್ಲು… ಯಿರ್ಲಿ ವರ್ಗೆ ತೆಗ್ದೆ ಬಿಡ್ತೀನೇ??’ ಸಣ್ಣಯಲ್ಲಪ್ಪ ಮನ್ಮಥನ ಪಾರ್ಟು ಆಕ್ಕೊಂಡು, ಗದೆ ಯಿಡ್ಕೊಂಡು, ಮೀಸೆ ವುರಿ ಮಾಡ್ಕೊಂಡು, ವಂಟಾಸಿಂಹದಂತೆ! ಅಣ್ಣತಮ್ಮಗ್ಳ ಮನ್ಮೆನೆ ವಕ್ಕಾದು, ವರ್ಬಾರಾದು ಯಿಂಗೇ…  ಮಾಡ್ಕಾಂತಾ ವುಡಾಕ್ಯಾಂತಾ ಬರೋದೊಳ್ಗೆ, ಮಾದಣ್ಣನ ಮನೆಯಲ್ಲಿ ಹಂದಿಗಳಂಗೆ ಗಂಡ್ಸುರು, ಹೆಂಗ್ಸುರು ಗುಂಪ್ಲೀ ಗುಸು ಗುಸು… ಪಿಸಿಪಿಸಾ… ಮಾಡ್ಕೊಂತಾ ಯಿದ್ದವ್ರು ಸಣ್ನಯಲ್ಲಪನಾ… ರುದ್ರಾವತಾರ್ನ ಕಂಡು… ಸವ್ರಾಡಿಕೊಂತಾ ಚದ್ರುಪಿದ್ರು ಆಗಿದ್ದ್ನ ಯೀತ ಕಣ್ಣಾರೆ ನೋಡ್ದು. ಕಿವಿಯಾರೆ ಕೇಳ್ದು. ವಂದೆ ವುಸ್ರಿಗೆ ಮಾದಣ್ಣನ ಅಡುಗೆ ಮನ್ಯಾಕೆ ಸೀದಾ ರೊಯ್ಯನೇ ನುಗ್ಗಿದ. ಖಾಲಿ ಮನೆ. ಅಡ್ಕಿಲ ಸಂಧಿನ್ಯಾಗೆ ಮುಲಮುಲ್ಕ್ಯಾಂತಾ ಮಾದಣ್ಣ… ತುಂಬಾ ಕಂಬ್ಳಿ, ರಗ್ಗು, ಜಮಖಾನೆ, ವದ್ಕೊಂಡು ಕದ್ದು ಮುಚ್ಚಿ, ಮಲುಗ್ಲು, ಶತ ಪ್ರಯತ್ನಿಸಿ, ಸಾಧ್ಯವಾಗ್ದೆ, ಜೋರಾಗಿ ವುಸ್ರು ಬಿಟ್ಟು ಮುಲುಗ್ದಿ.

‘ಯಾರು? ಮಲ್ಗಿರಾದು? ಕತ್ಲಾಗೆ ವುಸ್ರು ಬಿಡ್ರೀ…’ ಸಣ್ಣಯಲ್ಲಪ್ಪ, ನಾಟ್ಕಾದಾಗೆ ಕೇಳಿದಂಗೆ, ಕೇಳಿದ. ಕೋಣನ ಮುಂದೆ, ಕಿನ್ನುರಿ ಬಾರ್ಸಿದಂಗಾತು. ವುಸ್ರು ಮೇಲೆ ಕೆಳ್ಗೆ ಆಗೋದು ನಿಂತೋಯ್ತು!

ಕಲ್ಲು, ಕೋಳಿ, ನಾಯಿ, ಗಿಣಿ, ಯೆನೆಲ್ಲ ಕೂಗ್ತಾವೆ! ಮಾತಾಡ್ತಾವೆ… ಯೀ ಮಾದ್ರಿಗಿದ್ದಷ್ಟು ಯದೆಗರ್ವು ರಾಕ್ಸಸ್ರುಗೂ ಯಿರ್ಲಿಲ್ಲ ಅನ್ಸುತ್ತೇ ಅಂದು, ಬಡ್ಬಾಡಾ ರಗ್ಗು, ಕಂಬ್ಳಿ, ಜಮಖಾನೆ, ಮಕ್ದ್ಮೇಲ್ನೆ ಟುವ್ವಾಲೂ, ಕಿತ್ತು ನೋಡ್ದ. ಯೆಣ್ದಂಗೇ ಮಾದಣ್ಣ! ವುದ್ದೂಕೆ ಕರೆಂಟ್ನಿ ಕಂಬ್ಬಂಗೆ, ಯಮ್ಮಿ ತ್ವಗ್ಲು ವತ್ಕೊಂಡು… ಕೊಪ್ಪೆ ಪಾಸ್ನೆಂಗೆ ಕ್ವಾಣ್ದ ಅಲ್ಲುಗ್ಳು ಬಿಟ್ಕೊಂಡು, ಗಡ್ಗೆ ತಲೆಯಿಟ್ಕೊಂಡು… ಜಲ್ಜಲಾಂತಾ ಬೆಮ್ತು, ಗಡ್ಗಾಡಾಂತಾ… ನಡುಗುತ್ತಿದ್ದಾನೆ!! ಕರಿಮಕ್ಮಕ್ನೇ ಬಿಳ್ಚಿಗೊಂಡು, ಮೂಗ್ನೆಗಿಂದಾ ಆಚ್ನೇ ಗೊಣ್ಣಿ ವರಾಕೆ-ವಳಾಕೆ ಆಟವಾಡ್ತಿದ್ರೆ… ಕಣ್ಣು ಗುಡ್ಡೆಯೊಳಗಿಂದ ಪಿಸ್ರು ಸೋರುತ್ತಿತ್ತು…

‘ಯಿದ್ದಕ್ಕಿದ್ದಂತೆ… ಯೇನ್ ಮಾದಣ್ಣ ಯಿದು? ಯೇನೀ ಅವತಾರ? ಸೋಗು? ಯೇನ್ ಬ್ಯಾನೀದು ನಿನ್ನೆ ರಾತ್ರಿ ಜೊತ್ಗೆ ಯೆಂಡ್ದೆಗೇರ್ಯಾಗೆ ಯೆಂಡ, ಸಾರಾಯಿ, ಕುಡ್ದು, ಕಲ್ಬೇಲೆ ಕಟುಗ್ರು ಪಲ್ಲೆ ತಿಂದು, ಟೇಬಲ್ ಬೀಡಿ ಸೇದೀವಿ. ನೀ ತಿರುಗೆ ಯರ್ಡು ರೂಪಾಯಿ ಕೇಳ್ದೆ… ನಾ ಯಿಲ್ಲ ಅಂದೆ. ಅಷ್ಟಕ್ಕೆ ನೀ ಮುಂಚುಗುಟ್ಟಿಕೊಂಡು ವಳ್ಕೆ ವೋದೆ. ನಾ ಮನೆ ದಾರಿ ಯಿಡ್ದೆ’ ಸಣ್ಣಯಲ್ಲಪ್ಪ, ವಟ್ಟೇಗ್ಳುದು ಬಡ್ಬಾಡಾ… ವರಕಾಕಿದ.

ಮಾದಣ್ಣ… ತೇಲ್ಗುಣ್ಣು ಮೇಲ್ಗುಣ್ಣು ಮಾಡ್ಕೊಂತಾ… ನಿತ್ರಾಣ್ಕೆ ಬಿದ್ದವ್ನಂತೆ… ‘ರಾತ್ರಿ ಮದ್ಲು ಕೋಳಿ ಕೂಗಿದಾಗಿಂದಾ ಛಳಿ, ಜ್ವರಾ, ಸೀತಾ, ನಗ್ಡಿ, ಕೆಮ್ಮು, ದಮ್ಮು, ವುಬ್ಸಾ, ಸುಸ್ತೂ… ಕೈಕಾಲು ಕತ್ರುಸ್ತಾವೆ… ಯಾಕೋ ಯೇನೋ… ಗೊತ್ತಿಲ್ಲ…’ ಯೆಂದು… ನೀಸ್ ಬಚ್ಚು… ಬಾಯ್ನ ಬಿಟ್ಟ!

ಮಾದಣ್ಣನ ಮೈಕೈ ಹಣೇನ ಡಾಕ್ಟ್ರಿಂಗೆ ಮುಟ್ದಿ. ವಳ್ಳೆ ಕಾದ… ಕಬ್ಣಿ ಸುಟ್ಟಂಗಿತ್ತು. ಜಂತೇಗಾ ಸಿಗ್ಸಿದ್ದೂ ಬೇವ್ನಿ ತಪ್ಲುಲಿಂದ ಕಡ್ಡಿ ಮುರ್ಕಂಡು, ಬೆಂಕಿಗಡ್ಡಿಗೀರಿ ಅಂಟ್ಸಿ, ಸುಳ್ಗೆ ಯಡಸಿರ್ದ ನರ್ಕೆ, ಕಾಲ್ನಿ ವುಗ್ರು ಅತ್ತಿರಾ ಮೂರು ‘ಚುಟುಗಿ’ ಯಿಟ್ಟ. ಮಕ,  ಕಣ್ಣು, ಮುಚ್ಕಿಂಡೂ… ತುಂಬಾ ವದ್ಕುಂಡು ಮಲಗಿದ.

‘ತಗೋ ಅತ್ತು ರಾಪಾಯ್ನ! ವೋಗಿ, ಸೂಜಿ ಮಾಡ್ಸಿಗೊಂಡು, ಗುಳ್ಗೆ, ಮಂದೂ ತಗೊಂಡು, ಬರೋಗು…’ ಸಣ್ಣಯಲ್ಲಪ್ಪ ಬಲವಂತಂಗೇ ತಿವಿದು  ತಿವಿದು ಯೆಬ್ಸಿ, ಮಾದಣ್ಣನ ಕೈಲಿ, ಅತ್ತು ರೂಪಾಯ್ನ ತುರ್ಕೋಕೆ ವೋದ. ಜಪ್ಪಯ್ಯ ಅಂದ್ರೂ ಮುಟ್ಲಿಲ್ಲ. ಕಿತ್ತಾಕಿದ್ದನ್ನೆಲ್ಲ ಮತ್ತೇ ತುಂಬಾ ವದ್ದಕೊಂಡು ಮಲಗಿದ.

ನಾಯ್ಗಿಳು ಮಾದಣ್ಣನ ಕೋಲ್ಗೇ… ವೋಗಿ, ಗಬ್ಗ್‌ಬ್ ಮಾಡ್ದಿವು. ನಾಯ್ಗಿಳು ಮಾಡೋ ಆಟಾನೇ ಅವಕ್ಕಾಗಿ ನೋಡ್ತಾ ಸಣ್ಣೆಲ್ಲೆಪ್ಪ… ನಿಂತ. ‘ಕಾರ್ಲಾಯಿಲ್ದೆ ಯಿವಿಂಗೇ ಮಾಡೋವಲ್ಲವಲ್ಲಾ…?!’ ಯೆಂದು… ಕರ್ಕೊಂಡು ಬಲವಂತವಾಗಿ ವರ್ಬಂದ.

ಪಕ್ಕದ್ಮನೆ ಕರಿಯಣ್ಣ, ತಾಯಣ್ಣ ಅವರ ಮನೆಯೊಳ್ಗೆ ಕಂಬ್ಳಿ, ಕರೀ ರಗ್ಗು ತುಂಬಾ ವದ್ಕೊಂಡು, ಗುಂಗಾಡಿ ಕೊರ್ದಂಗೆ, ಮಾತಾಡಾರು ನಾಯ್ಗಿಳ್ನ… ಯೀತ್ನ… ನೋಡಿ ಗಪ್ ಚಿಪ್ ‘ಕಬ್ಡುದಾರ್’ ಆದ್ರು.

‘ನೀ ಅಡ್ಗು ಮನ್ಗೆಲ್ಲ ಬರಾದು ಕರೇ. ಆದ್ರೆ ಯೇಲ್ ತಿಂಬೋ… ಯೀ  ನಾಯ್ಗಿಳು ಬರೋದು ಸರಿನೇ? ಸಾವ್ಕಾರ್ನಿದ್ರೆ ನಿನ್ನ ಮನೆಮಟ್ಟಿಗೇ, ಯೇಳಳ್ಳಿಗೆ ಯಜಮಾನ್ನಿದ್ರೆ ಮುಂಜಾಲೆ ಟೀ ಕುಡೇನು! ನೀ ನುಗ್ಬೇಡಾ’ ಕರಿಯಣ್ಣ, ತಾಯಣ್ಣ ಕಲ್ಬೇಲೆ ಸೇಮು… ನಾಯ್ಗಿಳು ಬೊಗ್ಳುದಂಗೆ, ಬೊಗ್ಳಿ ನಿಜದಿ ನಾಯ್ಗಿಳ ನಾಚ್ಸಿದ್ರು!!

ಸಣ್ಣಯಲ್ಲಪ್ಪನ, ಪಡ್ಸೆಲೆ ಕಟ್ಟೆಯಿಂದ್ಲೆ, ಚಂಡಿಡ್ದು ನೂಕಕೇ ವಂಟಿದ್ದವ್ರ್ನ ‘ನಗ್ಸೆಟ್ಟಿಗೆ’ ಮಾಡ್ತುಲೇ, ಅವಿದ್ದಲ್ಲಿಗೆ ಛಂಗನೆ ಜಿಗ್ದು ವೋಗಿ, ಸಣ್ಣಯಲ್ಲಪ್ಪ ಸಂಧುಗೊಂದ್ದುಗಳ್ನ ಯಿಣ್ಕಿಣ್ಕಿ ನೋಡಿ, ಮೆತ್ಗೆ ವರ್ಬಂದ. ನಾಯ್ಗಿಳು ಅವ್ರಿಬ್ನ ಮೂಸ್ತಾ ನಿಂತಿದ್ದವು!  ಮಾದಣ್ಣನ ಮನೆಯಲ್ಲಿ… ಚಿಲಿಚಿಲಿ ವುಚ್ಛೆ ವಯ್ಕಂಡಂಗೇ ನಾಯ್ಗಿಳು ಯಿಲ್ಲೀ ಕೂಡಾ… ಯಾಕೆ ಮಾಡುತ್ತಿವೆಂದು ಸಣ್ಣಿಲೆಪ್ಪ ಮತ್ತೂ… ತಬ್ಬಿಬ್ಬಾದ!

ಮತ್ತೆ ಮನೆ ವಕ್ಕ. ‘ಯೇ… ಲವಾ, ಕುಸಾ, ರಾಮಾ, ಸೀತಾ… ಬರ್ರೀ ಯಿಲ್ಲಿ…  ವ್ವು..ದಾಽ…’ ಯೆಂದು ನಾಯ್ಗಿಳ್ನ… ಗದ್ರಿಕೊಂಡ. ಅವೂ ವರ ಬಂದುವು. ನೆಲನ್ನೊಮ್ಮೆ… ಮುಗ್ಲಿ ಮಾರಿನ್ನೊಮ್ಮೆ ನೋಡಿ… ನೋಡಿ ರಾಗಾಲಾಪ… ಮಾಡತೊಗಡ್ಗಿದ್ವು.

ಸಣ್ಣಯಲ್ಲಪ್ಪನಿಗೆ ನಿಕ್ಕಿಯಾಯ್ತು! ಯೀವ್ರೇ ಕಳ್ರೆಂದು! ರಕುತ ಕ್ವತಕ್ವತ್ನೇ ಕುದ್ದು, ಲಾವ್ರಾಸ್ದಂತೇ… ಸಿಟ್ಟು, ಅಂಗಾಲಾಗ್ಳಿಂದಾ ಯೆದ್ದು, ನೆತ್ತಿಯೆಲ್ಲ ವುರಿಯತೊಡಗಿತು! ಅಂಗೈ, ಅಂಗಾಲು, ನವೆಯಾಗತೊಡಗಿದ್ದವು. ಬಲಗೈ ಯದ್ದೆದ್ದು ಕುಣಿಯತೊಡಗಿತ್ತು.  ಬುಜಗಳೂ ಯೆಗ್ರಿಗ್ರೀ ಬಿದ್ದು, ಕಣ್ಣು ಕೆಂಪಾಗತೊಡಗಿದವು. ಗಕ್ಕನೆ ತಿರುಗಿ ವೋಗಿ, ಆ ಮೂವ್ರ್ನ ಸದೆಬಡಿದು ಬರ್ಲೇ ಯಂದು ತಿರುತಿರ್ಗಿ… ಯೋಚ್ಸಿದ. ಥೂ! ವುಚ್ಚು  ನಾಯ್ಗಿಳು ಅವ್ರು ಬಣ್ದಕೋಲು ಯಾಕೇ? ಅಂತಾ ದೊಡ್ಡಸ್ಥಿಕೆ ಅವ್ರಿಗೆ ಬೇಡಾ! ಮನೆ ಕಡ್ಗೆ, ವಲ್ಲದ ಮನಸ್ಸಿನಿಂದ, ಯೆಜ್ಜೆ ಆಕಿದ.
*  *  *

ಆಗ್ಲೇ ವಾಟುವಾಲಿತ್ತು. ಮದ್ಲೆ ವುಪಾಸ ಬೇರೆ. ಅದ್ರಾಗೆ ತ್ವಗ್ಲು ಕಳ್ಕೊಂಡಾ ಸಂಕ್ಟಕ್ಕಿಂತಾ, ಸರೀಕರಿಂತಾ… ವಳ್ಕೊಯಿತಾ ಕೊಯ್ದರಲ್ಲಾ?! ಅಂತಾ ಆವೇಶದಲಿ ಮನೆಯಂಗ್ಳದ ಕಟ್ಗೆ ಕುಂತು, ಯೆಣ್ತಿಮಕ್ಳಿಗೆ ತನ್ನ ಗುಮಾನಿ ಯೇಳಿದ್ದೇ ತಡ, ದುರ್ಗುಮ್ಮ, ಶಾಂತಮ್ಮ, ರತ್ನಮ್ಮ, ಮೈಕಿಟ್ಟು ವದ್ರಿದಂಗೆ, ಗಲ್ಗಾಲಾಂತಾ… ಬಾಯಿ  ಮಾಡಿ ‘ರೆಡ್ಡಿ ಯೆಸ್ಲು ಮದ್ಲುತ್ತೀಗಾ’ ಎಂಬಂತೆ, ‘ಅವ್ರೀಗೆ ಕಾರೆ ಮುಳ್ಳು, ಬಾರೆ ಮುಳ್ಳು, ಜಾಲಿ ಮುಳ್ಳು, ವಟ್ಲೀ… ಕೈಯೆನ್ನಾ ಯಂಗೆ ಬಂದ್ವಾಪ್ಪಾ ಅಂತಾ ತ್ವಗ್ಲುನ ವತ್ತೋಯ್ಯಾಕೆ? ಅವ್ರ ನಾಲ್ಗೆ ಸೀಳಾ…’ ಯೆಂದು… ಅತ್ತು, ಬೆಳ್ನ ಲಟ್ಲಾಟಾ ಮುರ್ದೂ… ಮಣ್ಣು ತೂರಿ, ಬುಸುಗುಟ್ಟುತ್ತಾ ‘ರಗ್ಡಿಸ್ಗೊಂಡು’ ನಿಂತ್ರು.

ಆ ಕ್ಷಣ ಯಿಡೀ… ವೂರುಕೇರೀನೇ ಬೆಚ್ಚಗಾಯಿತು.
*   *   *

ನಾಲ್ಕು ಪಡ್ಡೆ… ನಾಯ್ಗಿಳು, ಮನೆ ಯಿಂದ್ಲಾ, ತಿಪ್ಪೇಗುಂಡಿ ಕಡೆ, ಬಿಸ್ರಾಗಿ ಜಿಂಕೆಯಂಗೆ…. ವೋಡಿದ್ವು, ಸಣ್ಣಯಲ್ಲಪ್ಪನ ತಿಪ್ಪೇನಾ ಕಾಲ್ಗುಳಿಂದ, ಕೆದ್ರಿ ಕದ್ರಿ… ಕ್ವಾಣ್ದು ತ್ವಗ್ಲುನ ಬಾಯಿಂದ ಕಚ್ಚಿ ಕಚ್ಚಿ… ಕಿತ್ತೆಳೆದುವು.

ನಾಯೊಂದು ವೋಡಿ ಬಂದು, ಸಣ್ಣಯಲ್ಲಪ್ಪನ ಬಿಳಿಪಂಚೆ ಸೆರ್ಗುನ ಯಿಡ್ದು ಯಳೆದೊಯ್ದು… ತ್ವಗ್ಲುನ ತೋರ್ಸಿತು! ನೋಡಿದ್ರೆ ಕಳುವಿನ ಮಾಲು… ವೂರು ಕೇರಿ ಜನ್ರು ಕಂಡು, ಮೂಗಿನ ಮೇಲೆ, ಬೆರಳಿಟ್ಟುಕೊಂಡ್ರು! ಮನೆತಾಕೆ ತೆಕ್ಬೆಡ್ಪು ತ್ವಗ್ಲುನ ತಂದು, ಅಂಗ್ಳದಾ ತುಂಬಾ ಅರ್ವಿದಾ! ಅಷ್ಟರಲ್ಲಿ ಯೀ ನಾಲ್ಕು ನಾಯ್ಗಿಳು ನಾಗಾಲೋಟವಾಗಿ ಕೇರಿಯೊಳಗಿನ ಮಾದಣ್ಣ, ಕರಿಯಣ್ಣ, ತಾಯಣ್ಣನ ಮನೆ ಮುಂದೆ ವೋಗಿ, ‘ವರ್ಗೆ ಬನ್ರಲೇ… ನಿಮ್ ಕಳ್ತನ ಬಯಲಿಗೆ ಬಿತ್ತು’ ಯೆಂದು… ಗಂಟ್ಲು ಅರ್ಕೊಂಡುವು! ಜನಂಭೋ ಜನ್ರು… ನಾಯ್ಗಿಳು ತೋರಿದ… ಜಾಣ್ಮೆನ ಸ್ಮರ್ಸಿದ್ರು.

ಸಣ್ಣಯಲ್ಲಪ್ಪ ಸೀದಾ, ದೊಡ್ಡಗೌಡರ ಬಳಿ, ನಡೆದ. ಜರುಗಿದ್ದನ್ನು ವಿವರ್ಸಿದ. ತಳವಾರ ನಿಂಗಣ್ಣನ ಕೈಲಿ, ವೂರು ಕೇರಿಗೆಲ್ಲ ಢಂಗೂರ ವೊಡ್ಸಿ ‘ರಾತ್ರಿ ಯಂಟುಗಂಟೆಗೆಲ್ಲ, ವೂರು ಚಾವಡಿ ಮುಂದೆ, ಪಂಚಾಯ್ತಿಗೆ ಬರಬೇಕಪ್ಪೋ… ಬರ್ಬೇಕು…’ ಯೆಂದು ಸಾರ್ಸಿದ.

ಕತ್ಲು ಆಗೋದ್ನೇ ಜನ್ರು ಕಾದ್ರು. ಬೇಗ್ಬೇಗ್ನೇ ವುಂಡು, ತಿಂದು, ಕುಡಿದು, ಬಾಯಿತುಂಬಾ ತ್ವಂಬ್ಲು ಜಗೀತಾ… ಪಂಚಾಯ್ತಿ ಕಟ್ಟೆಗೆ, ಯಲ್ರು ಸೇರಿದ್ರು.

ಸಣ್ಣಯಲ್ಲಪ್ಪ ಯೆದ್ದು ನಿಂತು- ‘ಗೌಡ್ರೇ, ಶಾನುಭೋಗ್ರೇ, ಬಿಟಿಯಸ್ ಕುಲ್ಕರ್ಣಿ…  ಮಹಾಜನ್ರೇ… ನನ್ನ ತ್ವಗ್ಲು ರಾತ್ರಿ ಕಳುವು ಮಾಡಿ, ಅದ್ನ ನನ್ನ ತಿಪ್ಪೇಗುಂಡೀಲಿ ಮಾದಣ್ಣ, ಕರಿಯಣ್ಣ, ತಾಯಣ್ಣ, ವೂತಿಟ್ಟರುವುದನ್ನು ನನ್ನ ನಾಯ್ಗಿಳು… ಪತ್ತೆ ಮಾಡಿವೆ. ನನ್ಗೇ ಅವರ ಮೇಲೆ ಗುಮಾನಿಯೇನು ಗ್ಯಾರಂಟಿಯಿದೆ! ಅವ್ರ್ನ ಕರ್ಸೆ,  ವಿಚಾರ್ಸಿ, ಪರಿಹಾರದ ಜೊತ್ಗೆ, ನ್ಯಾಯ ಕೊಡ್ಸಿರಿ’ ಯೆಂದು, ಕೈ ಮುಗಿದು, ಕುಂತ.

ತಳವಾರ ನಿಂಗಣ್ಣನ ಮೂಲ್ಕ, ಯೀ ಮೂವ್ವಾರಿಗೆ ಕರೆವೋತು. ಆ ಮೂವ್ವಾರು ಗಡ್ಗಾಡಾ ನಡುಗ್ತಾ… ಗೌಡ್ರ ಮುಂದೆ, ಬಂದು… ತಮ್ಮ ತಪ್ಪನ್ನು ವಪ್ಪಿ, ಅಡ್ಡಬಿದ್ರು.

‘ಯದ್ಕು ಕಳ್ತಾನ ಮಾಡಿದ್ರೀ ಬೊಗ್ಳುರೀ ಕಳ್ಸೂಳೇ ಮಕ್ಳೇ…’ ಗೌಡ್ರು ತಮ್ಮ ಗೌಡ್ಕೆನ ವರಗಿಟ್ರು.

‘ಕುಡ್ಯಾಕೆ… ತಿನ್ಯಾಕೆ, ಸಾಲ್ದು ಬಂತು ಬುದ್ಧೀ…’ ಮುವ್ಹಾರು ಬೇ… ಬೆಬ್ಬೇ… ಅಂದ್ರು.

‘ಅವ್ನೆದೇ ಯಾಕೆ ಬೇಕ್ರಲೇ?’ ಗೌಡ್ರು ಯಿನ್ನು ಜೋರಾದ್ರು,

‘ಆತ್ನ ನೋಡಿ ನಿತ್ರಿಸುಲಾರ್ದೆ… ತ್ವಂದ್ರೆ ಕೊಟ್ಟು, ಕಣ್ಲೀ ನೋಡಿ, ನಗ್ಬೇಕೆಂದು ಅಂಗೆ ಮಾಡಿದ್ವಿ ಬುದ್ಧೀ…! ಅಷ್ಟೊತ್ತಿಗೆಲ್ಲ ಬೆಳ್ಕೆರಿತು… ಆತ್ನ ತಿಪ್ಪೇಗೇ… ಬಚ್ಚಿಟ್ವಿ… ಯೀವತ್ತು ರಾತ್ರಿಕಿ ಬಳ್ಳಾರಿಗೋ, ರಾಯದುರ್ಗಕ್ಕೋ ಸಾಗ್ಸಿಸುತ್ತಿದ್ದೆವು ಬುದ್ಧಿ…’ ಯೆಂದು, ಮಾದಣ್ಣ ವಿವರ್ಸಿದ.

‘ಯೀ ಸ್ವಾಧೀನ ತಪ್ಸೋ ಸಬುದ್ಧೀ… ಯೆಲ್ಲಿ ಸಿಕ್ತಿಲಿರೇ… ಥೂ! ಕಳ್ ಸೂಳೇ ಮಕ್ಳೇ… ಯೀವೂರು ಕೇರಿ ಮಂದಿ, ನಿಮ್ದೆ ನೋಡಿ ಕಲ್ತಾರು… ಮೈ ಬಗ್ಸಿ ದುಡ್ಬು ತಿನ್ರಲೇ…’ ಗೌಡ್ರು ತಮ್ ಪಕ್ಕದಾಗ್ನಿ ‘ನಗ್ಸುಸುತ್ತು’ ಬಾರ್ಕೋಲು ತಗೊಂಡು, ಮುವ್ಹಾರ್ಮೇಲೆ ಯೇರೇರಿ ವೋದ್ರು… ಪಂಚಾಯ್ತಿ ಕಟ್ಟೆ ಬಿಸಿಯೆರಿತು.

‘ಯೇನು ಸಣ್‌ಯಲ್ಲುಗಾ… ಯೇನು ತಪ್ಪು ದಂಡಾ… ಆಗ್ಸೇಕು?? ಯೇನು  ಪರಿಹಾರ ಕೇಳೀಯಾ ನಿನ್ಗೆ ಬಿಟ್ಟಿದ್ದು’ ಯೆಂದು ಬಿಟಿಯಸ್ ಕುಲ್ಕರ್ಣಿ… ಶಾನುಭೋಗ್ರು,  ಸಣ್ಣಯಲ್ಲಪ್ಪನ ಬಿಡ್ದೇ… ಕೇಳಿದ್ದು.

‘ಪಂಚಾಯ್ತಿ ತೀರ್ಮಾನಕ್ಕೆ ಬಿಟ್ಟಿದ್ದು! ಯಲ್ರು ಯೇಳಿದ್ಕೆ ನಾ ಬದ್ಧ’ ಯೆಂದು  ಸಣ್ಣಯಲ್ಲಪ್ಪ, ತನ್ನ ಸೌಜನ್ಯ ಮೆರೆದ.

‘ಆಯ್ತು! ಪೊಲೀಸ್ಗೆ ವಪ್ಸಾನ್ರೀ… ಯಿಲ್ಲ ನೂರು ರೂಪಾಯಿ ದಂಡಾಕಟ್ಲಿ, ಯಿಲ್ಲಾ… ಯಲ್ಲುಗ್ನ ಮನೇಲಿ ಕುರಿ, ಮೇಕೆ, ದನ, ಕರುಗಳಿವೆ ವರ್ಷ ಕಾಯ್ಲಿ…’  ಪಂಚಾಯ್ತಿಲಿ ಜನ್ರು, ತಲೆಗೊಂದು ಪಂಚಾಯ್ತಿ, ಯೇಳ್ತಾ ವೋದ್ರು… ಗೌಡ್ರು ತಲೆ ವುಪ್ಪಿಟ್ಟಾಗೊಯ್ತು!

‘ಮಾಲೀನ ಮಾಲೀಕ ಸಣ್ಣಯಲುಗನೇ ಸರಿ! ನಿನ್ಗೆ ಯೇನು ಕಟ್ಟಿಕೊಟ್ರೆ ಕುಸಿ ಯೇಳು?’ ಗೌಡ್ರು… ಸಣ್ಣಯಲ್ಲಪ್ಪನ, ಮೇಲೆ ಬಿಟ್ರು.

‘ಪಂಚಾಯ್ತಿ ಕಟ್ಟೆ… ಅಪ್ಣನೇ ಮೇರ್ಗೆ… ನಾ ಬಯಸುವುದಿಷ್ಟೇ… ಯಿವ್ರು ತಪ್ಪು ತಿದ್ದಿಕೊಂಡು, ಯಿನ್ನೊಮ್ಮೆ ಯಾವ ತಪ್ಪು ಮಾಡ್ದಂಗಿರ್ಲಿ! ಪಶ್ಚಾತ್ತಾಪ ಪಟ್ರೆ ಅದೇ ಶಿಕ್ಷೆ. ಯೀ ಮುವ್ಹಾರು ತಪ್ಪಾತೆಂದು ವಂದು ಯಲೆ, ವಂದು ಅಡಿಕೇನಾ ನಮ್ ಹಟ್ಟಿಗೆಲ್ಲ ಕೊಟ್ರೇ… ಅದೇ ನನ್ಗೆ ಕುಸೀ… ಗೌಡ್ರೇ…’ ಯೆಂದು ಸಣ್ಣಯಲ್ಲಪ್ಪ,  ಕಡ್ಡಿತುಂಡಾಗಂಗೇ ಮಾತಾಡಿದ. ಜನ್ರು ‘ಅವುದ್ಪಾ…’ಯೆಂದು, ತಲೆದೂಗಿದ್ರು.

‘ಅಡ್ಕೆಗೊದ ಮಾನಕ್ಕಿಂತ ಶಿಕ್ಷೆ ಬೇಕೇ? ಅದಪ್ಪಾ ಮಾತೆಂದ್ರೆ… ದಂಡವಿಲ್ಲ,  ಶಿಕ್ಷೆಯಿಲ್ಲ, ವೂರು ಕೇರಿ ಬಹಿಷ್ಕಾರವಿಲ್ಲ, ನೂಕ್ರೀ, ವಡ್ರಿ… ಬಡ್ರಿಯಿಲ್ಲಾ… ಅಪ್ಪುಗುಟ್ಟದ ಮಾತು! ತೀರ್ಮಾನ ಮುಗೀತು!’ ಯೆಂದು ಬಿಟಿಯಸ್ ಕುಲ್ಕರ್ಣಿ…  ಗೌಡ್ರು, ಸಣ್ಣಯಲ್ಲಪ್ಪನ ಕೊಂಡಾಡಿದ್ರು…

ಜನ ಚಿದ್ರುಬದ್ರು ಆದ್ರು.
* * *

‘ತಪ್ಪು ಮಾಡ್ಬಾರಾದು, ಮಾಡಿದ್ದ್ನ ವಪ್ಕೋಬಾರ್ದಿತ್ತು. ಯೀ ವೂರು ಕೇರ್ಯಾಗೆ ನಾವೆಂಗೆ ತಲೆಯೆತ್ತಿ ಬಾಳಾದೇಳ್ರೀ?’ ಮಾದಣ್ಣನ ಮಕ್ಳು ಕರಿಯಣ್ಣ, ಕಲ್ಲಣ್ಣ, ಮರಿಯಣ್ಣ, ದಾರಿಯುದ್ದಕ್ಕೂ ಕುತ್ತಿಗೆ ಮಟ್ಟ, ಯಗ್ರಾಡಿಕೊಂಡೇ ಕೇರಿ ತಲುಪಿದ್ರು.

‘ತಪ್ಪು, ಮನ್ಸುರು ಮಾಡ್ದೇ, ಪ್ರಾಣಿ, ಪಕ್ಷಿಗ್ಳು, ಮಾಡ್ತೆವೇನ್ಲಾ? ತಪ್ಪು ಮಾಡಿ ತಿದ್ದಿಕ್ಕೊಂಡು, ನಡೆಯೋನೇ ದೊಡ್ ವ್ಯಕ್ತಿ ಮಗಾಽ…’ ಮಾದಣ್ಣ- ಮಕ್ಕಳು ಮರೀಗೆ, ಸಮಜಾಯ್ಸಿ ಹೇಳ್ದಿ.

‘ನೀವೇನೇ ಅನ್ರಿ. ನಮ್ ಜೀವಕ್ಕೀಗ ನಿರ್ಮುಳೆನ್ನಿಸಿದೆ. ಸುಣ್ದ ಗಲ್ಲೇಕೆ ಕೈಯಿಟ್ಟು, ಕ್ವಾಣ್ದ ತ್ವಗ್ಲು ತೆಗ್ದು, ತಿಪ್ಪೇಕೆ ವೂಣಿಕ್ಕಿ ಬಂದಾಗ್ಳಿಂದ, ಮೈಕೈ ಕಡಿತ, ತಲೆಸಿಡಿತ, ವಟ್ಟೇಗ ಸಂಗ್ಟ, ಛಳಿ, ಜ್ವರಾ, ಸುಸ್ತು ಮೈಮೈ ತಿರ್ಗುದಂಗಾಗಿ… ನೀರು ಕುಡುದ್ರು, ಯಿಂದೆ ಮುಂದೆ, ಪಿಚಿಕಾರಿಯಂಗೆ, ಅತ್ತಾರು ಸಾರಿ ಮಾಡ್ಮಿಡಿ, ನಿತ್ರಾಣ್ಕಿ ಬಿದ್ದು,  ಜೀವಾನೇ ಬಾಯ್ಗೆ ಬಂದಂಗೆ! ಯಿದೆಲ್ಲ ಯಾರ್ಗೆ ಬೇಕು? ಯಾಕೆ ಬೇಕು?? ಯೀಗ ನೋಡು, ಜೀವ್ಕೆ ಸಮಾಧಾನವಿದೆ. ಹೃದಯ ಹಗುರ, ತೃಪ್ತಿ, ನೆಮ್ಮದಿಯಿದೆ! ಸುಳ್ಳಾಡಿದಾಗ  ನಾಲ್ಗೆ ವಣಗಿ, ಮಕ್ಕು, ಮರಿ, ತಂದೆ, ತಾಯಿ, ದೇವ್ರ ಮೇಲೆ ಆಣೆ, ಭಾಷೆ, ಯಿಟ್ಟು ದುಃಖಾ ಪಡೋಕ್ಕಿಂತ, ನಿಜದಿ ನುಡಿದು, ಮನಸ್ಸು ಹಗುರ ಮಾಡ್ಕೊಂಡು, ಬಾಳಾದ್ರಲ್ಲಿ ಸ್ವರ್ಗಸುಖವಿದೆ! ಬಹಳ ಹಿತವಿದೆ. ಯಾರ್ದೋ ಮಾತಿಗೆ ತಪ್ಪು ಮಾಡಿ, ಕೊರಗಿ, ಕರಗಿ ಸೊರ್ಗಿ… ಸಾಯೋದು ಬೇಡಾ’ ಯೆಂದು ಮಾದಣ್ಣ, ಕರಿಯಣ್ಣ, ತಾಯಣ್ಣ, ಹಿರಿ ಹಿರಿ ಹಿಗ್ಗಿದರು!

ರಾತ್ರಿ ಸುಖವಾಗಿ ಮೂವ್ರು… ಕಣ್ ತುಂಬಾ, ನಿದ್ರಿಸಿದರು.  ಮಾರ್ನೇ ದಿನ ಯೀ ಮುವ್ವಾರು, ಹಟ್ಟಿಯ ಮನೆ, ಮನೆಗಳಿಗೆ, ವೋಗಿ,  ವಂದು ಯಲೆ, ಅಡಿಕೆಯನ್ನು ಕೈಯಲ್ಲಿಟ್ಟು, ನೆಮ್ಮದಿಯ ನಿಟ್ಟೂಸಿರಿಟ್ಟು, ವಸ ಗುಣ ಪಾಠ ನಡತೆ… ಕಲಿತರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಿಕ್ಕಳಿಕೆ
Next post ಬೆಳಗಾಯಿತೇಳು ಉಷೆ

ಸಣ್ಣ ಕತೆ

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…