ಒಂದೇ ದೋಣಿಯ ಪ್ರಯಾಣಿಕರು

ಒಂದೇ ದೋಣಿಯ ಪ್ರಯಾಣಿಕರು

ಜೀವನದಲ್ಲಿ ನಾವು ಎದುರಿಸುವ, ಅನುಭವಿಸುವ ಕಷ್ಟ ನಷ್ಟಗಳೇನೇ ಇರಲಿ ನಮ್ಮ ಪಾಲಿಗೆ ಬಂದುದನ್ನು ಸ್ವೀಕರಿಸಿ ಜೀವಿಸುವ ರೀತಿ ನಮ್ಮ ಆಯ್ಕೆಯದ್ದಾಗಿರುತ್ತದೆ. ಈ ಆಯ್ಕೆ ಮಾಡುವಾಗ ನಮ್ಮ ಸಹಾಯಕ್ಕೆ ಬರುವುದು ನಮ್ಮ ಸಂಸ್ಕಾರ, ನಮ್ಮ ಮನಸ್ಸು, ನಮ್ಮ ಆತ್ಮವಿಶ್ವಾಸ, ಮತ್ತು ನಾವು ಕಂಡುಕೊಂಡ ಜೀವನಾದರ್ಶನವಲ್ಲದೆ ಬೇರೇನೂ ಅಲ್ಲ.

ಶಿವರಾಂ ಮತ್ತು ಕಲ್ಯಾಣಿಯವರಿಗೆ ಆರತಿಗೊಬ್ಬಳು ಕೀರ್ತಿಗೊಬ್ಬ ಎನ್ನುವಂತೆ ಇಬ್ಬರು ಮಕ್ಕಳು. ಅವರಿಬ್ಬರೂ ಅವರವರ ಜೀವನದಲ್ಲಿ ತೃಪ್ತರು. ಶಿವರಾಂರವರಿಗೆ ಹೇಳಿಕೊಳ್ಳುವಂಥಹ ತಲೆಬಿಸಿಗಳೇನೂ ಇರಲಿಲ್ಲ. ಅಮೇರಿಕಾದಲ್ಲಿದ್ದ ಮಗ ಅಲ್ಲಿಗೆ ಬಂದಿರಲು ಒತ್ತಾಯಿಸುತ್ತಿದ್ದ. ಆದರೆ ಅಮೇರಿಕಾದ ಮನುಷ್ಯ ಮನುಷ್ಯರಿಗೆ ಆತ್ಮೀಯತೆಯಿಲ್ಲದ ವ್ಯವಸ್ಥೆ ಅವರಿಗೆ ಉಸಿರು ಕಟ್ಟಿಸುತ್ತಿತ್ತು. ಮಗ ಸೊಸೆ ಇಬ್ಬರೂ ದುಡಿಯುವವರು. ಮೊಮ್ಮಕ್ಕಳಂತೂ ಅಲ್ಲೇ ಹುಟ್ಟಿ ಬೆಳೆದವರು. ಅಲ್ಲಿಯ ಸಂಸ್ಕೃತಿಯನ್ನೇ ಮೈಗೂಡಿಸಿಕೊಂಡವರು. ಅಲ್ಲಿಗೆ ಎರಡು ಬಾರಿ ಹೋದಾಗಲೂ ಒಂದು ರೀತಿಯ ಪರಕೀಯತೆ ಅವರನ್ನು ಕಾಡಿಸಿತ್ತು. ಮಗಳು ಆಸ್ಟ್ರೇಲಿಯಾಕ್ಕೆ ಬರಲು ಪುಸಲಾಯಿಸುತ್ತಿದ್ದಳು. ಮೊಮ್ಮಕ್ಕಳ ವ್ಯಾಮೋಹ ಸೆಳೆಯುತ್ತಿದ್ದರೂ ಯಂತ್ರದಂತೆ ದುಡಿಯುತ್ತಿದ್ದ ಅಳಿಯನ ಹತ್ತಿರ ಇರಲು ಕಲ್ಯಾಣಿಗೆ ಸಂಕೋಚ. ಮನಸ್ಸು ಬಿಚ್ಚಿ ಮಾತಾಡದ ಅಳಿಯ, ಕಲ್ಲನ್ನಾದರೂ ಮಾತಾಡಿಸುವ ಪತಿ ಸರಿಯಾದ ಜತೆ ಅಲ್ಲವೆಂದು ಅವರಿಗನಿಸಿತ್ತು. ಅಳಿಯ ಒಳ್ಳೆಯವನೇ. ಆದರೆ ಯಾರೊಡನೆಯೂ ಸಲುಗೆಯಿಲ್ಲ. ಅವನಾಯಿತು ಅವನ ಕೆಲಸವಾಯಿತು ಎನ್ನುವ ಜಾತಿಗೆ ಸೇರಿದವನು. ಅದೂ ಒಂದು ರೀತಿಯಲ್ಲಿ ಉಸಿರುಗಟ್ಟಿಸುವ ವಾತಾವರಣವೇ. ಅಲ್ಲಿಗೆಲ್ಲ ಹೋಗಿ ಅಲ್ಲಿಯ ಪರಿಸರಕ್ಕೆ ಒಗ್ಗಿಕೊಳ್ಳಲಾಗದೆ ಒದ್ದಾಡುವುದು ಬೇಡವೆಂದು ಅವರು ಊರಲ್ಲೇ ಇದ್ದರು. ಶಿವರಾಂಗೆ ಸಿಗುತ್ತಿದ್ದ ಪಿಂಚಣಿಯಲ್ಲಿ ಜೀವನದ ನಿರ್‍ವಹಣೆಗೆ ತೊಂದರೆ ಇರಲಿಲ್ಲ. ಮಗ ಆಗಾಗ ಹಣ ಕಳುಹಿಸಿಕೊಡುತ್ತಿದ್ದ. ಆದರೆ ಮಕ್ಕಳ, ಮೊಮ್ಮಕ್ಕಳ ಸಾಮಿಪ್ಯ ಬಯಸುತ್ತಿದ್ದ ಅವರಿಗೆ ಕೆಲವೊಮ್ಮೆ ಬದುಕು ಬಹಳ ಬರಡೆನಿಸುತ್ತಿತ್ತು ಒಂಟಿತನ ಅವರನ್ನು ಆವರಿಸುತ್ತಿತ್ತು.
ನಿಜ ಸಂಗತಿಯೆಂದರೆ ಸೀನಿಯರ್ ಸಿಟಿಜನ್ ಎಂದು ನಾವು ಯಾರನ್ನು ಕರೆಯುತ್ತೇವೆಯೋ ಅವರನ್ನೆಲ್ಲ ಕಲೆಹಾಕಿ ಅವರ ಬಾಯಿಯಿಂದ ಅವರವರ ಜೀವನದ ಕತೆ ಕೇಳಿದರೆ ಒಬ್ಬೊಬ್ಬರದ್ದು ಒಂದೊಂದು ಕತೆಯಾದರೂ ಕತೆಯೊಳಗಿರುವ ವ್ಯಥೆ ಮಾತ್ರ ಒಂದೇ ಆಗಿರುತ್ತದೆ.

ಶಿವರಾಂ ಅವರಿಗೆ ವಾಮನರಾಯರ ಪರಿಚಯವಾದದ್ದೂ ಆಕಸ್ಮಿಕ. ಒಮ್ಮೆ ಡಾಕ್ಟರ್ ಅವಿನಾಶ್‌ರವರ ಕ್ಲಿನಿಕ್‌ಗೆ ಹೋಗಿದ್ದಾಗ ಅಲ್ಲಿ ಅವರ ಭೇಟಿಯಾಗಿತ್ತು. ಅಲ್ಲಿ ಆದ ಪರಿಚಯ ಗೆಳೆತನಕ್ಕೆ ತಿರುಗಿತ್ತು. ಮನೆಗಳೂ ಹತ್ತಿರ ಹತ್ತಿರದಲ್ಲಿ ಇದ್ದುದರಿಂದ ಆಗಾಗ ಭೇಟಿಯಾಗುವುದು ಸಾಧ್ಯವಾಗಿ ಗೆಳೆತನ ಗಟ್ಟಿಯಾಗಿತ್ತು.

ವಾಮನರಾಯರು ಮತ್ತು ವಸಂತಲಕ್ಷ್ಮಿಯವರಿಗೆ ಮಕ್ಕಳಿರಲಿಲ್ಲ. ತಾವು ದುಡಿಯಲು ಸಾಧ್ಯವಾಗುವ ತನಕ ಹಳ್ಳಿಗಳಲ್ಲಿ ದುಡಿದು ಇನ್ನು ತಮ್ಮ ಕೈಯಿಂದ ಸಾಧ್ಯವಿಲ್ಲವೆಂದು ಅನಿಸಿದಾಗ, ಹಳ್ಳಿಯ ಆಸ್ತಿಯನ್ನು ಮಾರಿ ಪಟ್ಟಣ ಸೇರಿದ್ದರು. ಒಂದು ಮನೆಕಟ್ಟಿಸಿ ಮೇಲೆ ಬಾಡಿಗೆಗೆ ಕೊಟ್ಟು ಕೆಳಗಿನ ಮನೆಯಲ್ಲಿ ವಾಸಿಸುತ್ತಿದ್ದರು. ಮನೆ ಕೆಲಸಕ್ಕೆ ಒಬ್ಬ ಹುಡುಗನನ್ನು ಇಟ್ಟುಕೊಂಡಿದ್ದರು. ಜೀವನವಿಡೀ ಮಕ್ಕಳಿಲ್ಲವೆನ್ನುವ ಕೊರಗಿನಲ್ಲಿ ಬದುಕಿದ್ದ ಇವರಿಗೆ ತಮ್ಮ ಕೊನೆಯ ಕಾಲ ಹೇಗೋ ಎನ್ನುವ ಹೆದರಿಕೆ. ಇದನ್ನು ಶಿವರಾಂರೊಡನೆ ಹಂಚಿಕೊಂಡಾಗ ಅವರು ನಕ್ಕು, “ಇಲ್ಲೇ ಜೀವನದ ವೈಪರೀತ್ಯ ಅಡಗಿರುವುದು ನೋಡಿ. ನಿಮಗೆ ಮಕ್ಕಳಿಲ್ಲ, ನಿಮ್ಮ ಹತ್ತಿರ ಯಾರೂ ಇಲ್ಲ. ಇದು ನೀವು ಒಪ್ಪಿಕೊಂಡು ಬಂದ ಸತ್ಯ. ನನಗೆ ಇಬ್ಬರು ಮಕ್ಕಳು ನಾಲ್ವರು ಮೊಮ್ಮಕ್ಕಳು ಎಲ್ಲಾ ಇದ್ದಾರೆ. ಅವರ ಸಾಮಿಪ್ಯ ಸುಖವನ್ನು ನಾವು ಅನುಭವಿಸಿದ್ದೇವೆ. ಈಗ ಅವರ ಸಾಮಿಪ್ಯ ನಮಗೆ ಬೇಕೆನಿಸುವಾಗ ಅವರೆಲ್ಲೋ ನಾವೆಲ್ಲೋ? ನಮ್ಮನ್ನ ಕಾಡುವ ಒಂಟಿತನ ನಿಮಗಿಂತ ಗಾಢವಾದದ್ದು. ನಿಮಗೆ ಇಲ್ಲ ಎನ್ನುವ ಒಂದೇ ನೋವು. ನಮಗೆ ಇದ್ದೂ ಇಲ್ಲ ಎನ್ನುವ ನೋವು.”

ಶಿವರಾಂ ದಿಲ್ದಾರ್ ಮನುಷ್ಯ. ಅವರ ಮನೆಯಲ್ಲಿ ಯಾವಾಗ ನೋಡಿದರು ನೆಂಟರು, ಗೆಳೆಯರು ಇರುತ್ತಿದ್ದರು. ವಾಮನರಾಯರು ಇದಕ್ಕೆ ವ್ಯತಿರಿಕ್ತ ಪತಿ ಪತ್ನಿ ಇಬ್ಬರದ್ದೂ ಕೈ ಸ್ವಲ್ಪ ಗಿಡ್ಡ. ಹಣ ಇದ್ದರೂ ಖರ್ಚು ಮಾಡುವುದೆಂದರೆ ಇಬ್ಬರಿಗೂ ಬೇಸರ, ನಾಳೆ ಏನಾದರೂ ಕೈಕಾಲು ಬಿದ್ದರೆ ನೋಡಿಕೊಳ್ಳಲು ಮಕ್ಕಳೂ ಇಲ್ಲ. ಕೈಯಲ್ಲಿ ಹಣವಿದ್ದರೆ ಯಾರಾದರೂ ಅದರ ಆಸೆಗಾದರೂ ನೋಡಿಕೊಂಡಾರು ಎನ್ನುವ ಭ್ರಮೆ. ಹಾಗಾಗಿ ಜಿಪುಣತನದಿಂದ ಖರ್ಚುಮಾಡುತ್ತಿದ್ದರು. ಇದರಿಂದ ವಾಮನರಾಯರ ತಮ್ಮನ ಮಕ್ಕಳು. ವಸಂತಲಕ್ಷ್ಮಿಯ ಅಕ್ಕ ತಂಗಿಯರ ಮಕ್ಕಳು ಯಾರೂ ಅಲ್ಲಿ ಒಂದು ದಿನಕ್ಕಿಂತ ಹೆಚ್ಚಿಗೆ ನಿಲ್ಲಲು ಇಷ್ಟಪಡುತ್ತಿರಲಿಲ್ಲ. ಸ್ವಲ್ಪವಾದರೂ ಅವರನ್ನು ಹಚ್ಚಿಕೊಂಡಿದ್ದವಳೆಂದರೆ ವಾಮನರಾಯರ ತಂಗಿಯ ಮಗಳು ಕೀರ್ತಿ. ಅವಳಿಗೆ ಅತ್ತೆ ಮಾವನ ಮೇಲೆ ವಿಪರೀತ ಅಕ್ಕರೆ, ಅವಳು ಚಿಕ್ಕವಳಿರುವಾಗ ವಸಂತಲಕ್ಷ್ಮಿಗೆ ಅವಳನ್ನು ದತ್ತಕ್ಕೆ ತೆಗೆದುಕೊಳ್ಳಲು ಬಹಳ ಮನಸ್ಸಿತ್ತು. ಆದರೆ ಅವಳ ತಂದೆ ಒಪ್ಪದೆ ಅದು ಸಾಧ್ಯವಾಗಿರಲಿಲ್ಲ. ವಸಂತಲಕ್ಷ್ಮಿಗೆ ಅವಳ ಮೇಲೆ ಯಾವಾಗಲೂ ಹೆಚ್ಚಿನ ಪ್ರೀತಿ, ಯಾರಿಗಾದರೂ ಏನಾದರೂ ಕೈಯೆತ್ತಿಕೊಡುತ್ತಿದ್ದರೆ ಅದು ಕೀರ್ತಿಗೆ ಮಾತ್ರ.

ಕೀರ್ತಿಗೆ ಅವರು ಈ ಪ್ರಾಯದಲ್ಲಿ ಆ ಕೆಲಸದವನೊಡನೆ ಏಗಾಡುವುದನ್ನು ನೋಡಿ ಬೇಸರ. ಆ ಕೆಲಸದ ಹುಡುಗ ಅವರನ್ನು ಬಹಳ ಗೋಳಾಡಿಸುತ್ತಿದ್ದ. ಅವರಿಗೆ ಬೇಕಾದ ಹಾಗೆ ಅಡುಗೆ ಮಾಡಿ ಹಾಕದೇ ಅವನು ಮಾಡಿ ಹಾಕಿದ್ದನ್ನು ಅವರು ಬಾಯಿ ಮುಚ್ಚಿ ತಿನ್ನಬೇಕಿತ್ತು. ಇಬ್ಬರೂ ಅವನಿಗೆ ಹೆದರಿ ಅವನೇನು ಮಾಡಿದರೂ ಬಾಯಿಮುಚ್ಚಿ ಸಹಿಸುತ್ತಿದ್ದರು. ಈ ಹುಡುಗನೋ ಒಂದು ದಿನ ಹಣಕ್ಕಾಗಿ ಈ ಮುದುಕರನ್ನು ಕೊಂದರೂ ಕೊಂದನೇ, ಕೇಳುವವರಿಲ್ಲ. ತಿಂಗಳಿಗೆ ಬರುವ ಬಾಡಿಗೆ ಮತ್ತು ಬಡ್ಡಿ ಹಣದಲ್ಲಿ ಆರಾಮ ಜೀವನ ನಡೆಸುವುದು ಸಾಧ್ಯ ಇರುವಾಗ ಇವನು ಹಾಕಿದ್ದನ್ನು ಹಾಕಿದ ಹೊತ್ತಿಗೆ ಅವನ ಮರ್ಜಿಗೆ ತಕ್ಕಂತೆ ತಿಂದುಕೊಂಡು ಬದುಕುವುದು ಯಾಕೆ? ಇದ್ದೂ ಇಲ್ಲದ ಹಾಗೆ ಬದುಕುವ ಅವರ ಅವಸ್ಥೆ ಅವಳಿಗೆ ಬೇಸರ ತರಿಸುತ್ತಿತ್ತು. ಯಾರಿಗಾಗಿ ಇವರು ಹಣ ಉಳಿಸಬೇಕು? ಇದ್ದದ್ದನ್ನು ಖರ್ಚುಮಾಡಿಕೊಂಡು ಸುಖವಾಗಿರಬಾರದೇ? ಎಂದು ಯೋಚಿಸುತ್ತಿದ್ದಳು.

ಕೀರ್ತಿ ಈ ವಿಚಾರದಲ್ಲಿ ಅತ್ತೆ ಮಾವನೊಡನೆ ಮಾತಾಡಿದಾಗ ಅವರಿಂದ ಬಂದ ಉತ್ತರ – “ಇದ್ದ ಹಣ ಖರ್ಚು ಮಾಡಿದರೆ ಮತ್ತೆ ನಮಗೇನಾದರೂ ಆದರೆ ನೋಡಿಕೊಳ್ಳುವವರು ಯಾರು?”

“ಹಣದ ಆಸೆಗೆ ನಿಮ್ಮನ್ನ ನೋಡುವವರು ಎಷ್ಟು ಚೆನ್ನಾಗಿ ನೋಡಿಕೊಂಡಾರು? ಅವರು ನಿಮ್ಮ ಹಣವನ್ನು ಖರ್ಚು ಮಾಡಲಿಕ್ಕೇ ಬಿಡಲಿಕ್ಕಿಲ್ಲ ನಿಮಗೆ ಬೇಕಾದುದಕ್ಕೆ ಖರ್ಚುಮಾಡಿಕೊಂಡು ಸುಖವಾಗಿರಬಾರದೇ?”

ಎಷ್ಟು ಹೇಳಿದರೂ ಅರ್ಥಮಾಡಿಕೊಳ್ಳದ ಅತ್ತೆ ಮಾವನಲ್ಲಿ ಕೀರ್ತಿಗೆ ಸಿಟ್ಟೂ ಬರುತ್ತಿತ್ತು. ತಾನೇ ಏನಾದರೂ ಉಪಾಯಮಾಡಬೇಕೆಂದು ಕೀರ್ತಿ ಯೋಚಿಸುತ್ತಿದ್ದಳು. ಹೇಗಾದರೂ ಇವರನ್ನು ಒಪ್ಪಿಸಿ ಚೆನ್ನಾಗಿರುವ ವೃದ್ಧಾಶ್ರಮಕ್ಕೆ ಸೇರಿಸಬೇಕು ಎಂದವಳ ಯೋಚನೆಯಾಗಿತ್ತು.

ಶಿವರಾಂರವರ ಗೆಳೆತನವಾದ ಮೇಲೆ ಎರಡೂ ಮನೆಗಳ ಮಧ್ಯೆ ಓಡಾಟ ಶುರುವಾಗಿ ಎರಡೂ ಕುಟುಂಬಗಳ ಒಂಟಿತನಕ್ಕೆ ಸ್ವಲ್ಪ ಪರಿಹಾರ ಸಿಕ್ಕಿದಂತಾಗಿತ್ತು. ವಾಮನರಾಯರ ಮತ್ತು ವಸಂತಲಕ್ಷ್ಮಿಯವರ ಮಾನಸಿಕ ಒದ್ದಾಟ ನೋಡಿದಾಗಲೆಲ್ಲ ಶಿವರಾಂರವರು, “ನೀವಿಬ್ಬರೂ ಒಮ್ಮೆ ನನ್ನಕ್ಕನನ್ನು ಭೇಟಿಯಾಗಬೇಕು. ಅವರ ಜೀವನದ ಎದುರು ನಮ್ಮದೆಲ್ಲ ಏನೂ ಅಲ್ಲ. ಅವರೊಡನೆ ಮಾತಾಡಿದರೆ ಜೀವನದ ನಿಲುವುಗಳೇ ಬದಲಾಗುತ್ತವೆ. ನನಗೆ ಬೇಸರವಾದಾಗಲೆಲ್ಲ ನಾನು ಕಲ್ಯಾಣಿ ಸೀದಾ ಎದ್ದು ನನ್ನಕ್ಕನಲ್ಲಿ ಹೋಗಿ ಬರುತ್ತೇವೆ. ಅವರನ್ನು ನೋಡಿದರೆ ಸಾಕು ಜೀವಿಸುವ ಎದೆಗಾರಿಕೆ ಹೆಚ್ಚುತ್ತದೆ.”

“ಹಾಗಾದರೆ ಇನ್ನೊಮ್ಮೆ ನಮ್ಮನ್ನು ಕರೆದುಕೊಂಡು ಹೋಗಿ, ಆ ಕೀರ್ತಿ ನೋಡಿದರೆ ನಿಮಗೆ ವೃದ್ಧಾಶ್ರಮಕ್ಕೆ ಸೇರಿದರೆ ಏನು ಎಂದು ಕಿರಿಕಿರಿ ಮಾಡುತ್ತಿದ್ದಾಳೆ ನಮಗೆ ಏನು ಮಾಡುವುದೆಂದೂ ತಿಳಿಯೋದಿಲ್ಲ. ನಿಮ್ಮಕ್ಕನ ಹತ್ತಿರ ಮಾತಾಡಿದರೆ ನಮ್ಮ ಸಮಸ್ಯೆಗಳಿಗೆ ಉತ್ತರ ಸಿಗುವುದೋ ನೋಡೋಣ.”

“ನಮಗೆಲ್ಲ ನಮ್ಮ ಸಮಸ್ಯೆಗಳಿಗೆ ಉತ್ತರ ಇದೆ. ಆದರೆ ನಮ್ಮ ಅಕ್ಕ ಎದುರಿಸುವ ಸಮಸ್ಯೆಗಳಿಗೆ ಉತ್ತರವೇ ಇಲ್ಲ. ಆದರೂ ಅವರು ಹೇಗೆ ಸಮಸ್ಯೆಗಳನ್ನು ಎದುರಿಸಿ ಸಾಮಾನ್ಯವೆನ್ನುವಂತೆ ಜೀವಿಸುತ್ತಿದ್ದಾರೆಂದು ನೀವು ನೋಡಬೇಕು.”

“ಹಾಗಾದರೆ ಯಾವಾಗ ಭೇಟಿ ಮಾಡಿಸುತ್ತೀರಿ? ಹೇಳಿ.”

“ಸದ್ಯದಲ್ಲೇ, ಅವರು ಅವರ ಕಾಲಿನ ಆಪರೇಷನ್‌ಗೆ ಬರ್‍ತಿದ್ದಾರೆ. ಅವರನ್ನು ನೋಡಿದರೆ ನಮ್ಮ ಜೀವನ ಸಂಘರ್ಷಗಳು ಏನೂ ಅಲ್ಲವೆಂದು ಅನಿಸುತ್ತದೆ. ಅವರು ಬದುಕುತ್ತಿರುವುದೂ ತನ್ನ ಜವಾಬ್ದಾರಿ ಕಳಚಿ ಸಾಯುವುದು ಸಾಧ್ಯವಿಲ್ಲ ಎನ್ನುವ ಅನಿವಾರ್ಯತೆಯಿಂದ. ಅವರ ಮಾನಸಿಕ ಸ್ಥೈರ್ಯ, ಜೀವಿಸಲೇ ಬೇಕೆನ್ನುವ ಹಟ ಅವರನ್ನು ಜೀವಂತವಾಗಿಸಿದೆಯಲ್ಲದೆ ಬೇರೇನೂ ಅಲ್ಲ.” ಶಿವರಾಂ ಬಾವುಕರಂತೆ ನುಡಿಯುವಾಗ ವಾಮನರಾಯರು.

“ಅವರಿಗೆಷ್ಟು ಪ್ರಾಯವಾಗಿದೆ?”
“ಎಪ್ಪತ್ತು.”
“ಮತ್ತೇಕೆ ಜೀವಿಸಬೇಕೆನ್ನುವ ಹಟ?”

“ಜೀವಿಸುವುದು ಅವರ ಮಟ್ಟಿಗೆ ಅನಿವಾರ್ಯತೆ.”

“ಹಾಗೆಂದರೆ?”

“ಮೊದಲು ಅವರನ್ನು ನೋಡಿ, ಆಮೇಲೆ ಅವರ ಕತೆ ಹೇಳುತ್ತೇನೆ.”

ಶಿವರಾಂ ಹೇಳಿದಂತೆ ಅವರಕ್ಕ ರುಕ್ಕಿಣಿ ಬಂದಿದ್ದರು. ವಾಮನರಾಯರಿಗೆ, ವಸಂತಲಕ್ಷ್ಮಿಗೆ ಅವರ ಪರಿಚಯವೂ ಆಗಿತ್ತು. ಕಲ್ಯಾಣಿ ಅವರ ಶುಶ್ರೂಷೆ ಮಾಡಲು ತುದಿಗಾಲಲ್ಲಿ ನಿಂತಿದ್ದರು. ಅತ್ತಿಗೆ ಬಂದರೆ ಇಡೀ ಮನೆಗೆ ಜೀವಕಳೆ ಬಂದಂತೆ ಎಂದು ವಸಂತಲಕ್ಷ್ಮಿಯವರೊಡನೆ ಹೇಳುವಾಗ ಕಲ್ಯಾಣಿಯವರಲ್ಲಿ ಯಾವಾಗಲೂ ಕಂಡು ಬರುತ್ತಿದ್ದ ಒಂಟಿತನದ ಭಾವ ಕಿಂಚಿತ್ತೂ ಗೋಚರಿಸುತ್ತಿರಲಿಲ್ಲ.

ಎಪ್ಪತ್ತರ ಹರೆಯದ ರುಕ್ಕಿಣಿ ಜೀವಂತಿಕೆಯ ಮೂರ್ತಿ, ಕಾಲು ನೋವಿನ ಕಾರಣದಿಂದ ಹೆಚ್ಚು ಓಡಾಡುತ್ತಿರಲಿಲ್ಲ. ಆದರೆ ಕುಳಿತಲ್ಲಿಯೇ ಎಲ್ಲರೊಡನೆ ಮಾತಾಡುತ್ತಿದ್ದ ರೀತಿ, ಮಾತು ಮಾತಿಗೆ ಎಬ್ಬಿಸುತ್ತಿದ್ದ ನಗೆ ಹೊನಲು ಎಲ್ಲರನ್ನೂ ಅವರೆಡೆಗೆ ಸೆಳೆಯುತ್ತಿತ್ತು. ಅವರ ಹಸನ್ಮುಖ ಅವರ ಮುಖಕ್ಕೆ ಒಂದು ವಿಶಿಷ್ಟ ಶೋಭೆ ತಂದಿತ್ತು. ಅವರ ವಯಸ್ಸು ಮತ್ತು ಅವರಿಗಿದ್ದ ಸಕ್ಕರೆ ಕಾಯಿಲೆಯಿಂದ ಅವರಿಗೆ ಆಪರೇಷನ್ ಮಾಡಿಸಲು ಯಾರಿಗೂ ಮನಸ್ಸಿರಲಿಲ್ಲ. ಆದರೆ ಅವರಿಗೆ ಆಚೆ ಈಚೆ ಓಡಾಡದ ಜೀವನ ಬೇಸರ ತರಿಸಿತ್ತು. ತಾನೇನೂ ಈಗಲೇ ಸಾಯುವುದಿಲ್ಲ. ನನ್ನ ಕರ್ಮ ಇನ್ನೂ ಮುಗಿದಿಲ್ಲ. ಬದುಕಿದ್ದಷ್ಟು ದಿನ ಓಡಾಡುವುದು ಆಗಲೇ ಬೇಕಲ್ಲ. ಓಡಾಡಬೇಕಿದ್ದರೆ ಇನ್ನೊಂದು ಅಪರೇಷನ್ ಆಗಲೇಬೇಕು ಎನ್ನುವ ಹಟದಲ್ಲಿ ಇದ್ದರು. ಅವರ ಹಟಕ್ಕೆ ತಲೆದೂಗಿದ್ದವರು ತಮ್ಮ ಶಿವರಾಂ ಮಾತ್ರ. ಡಾಕ್ಟರು ಒಂದು ಲಕ್ಷ ಹಣ ಬೇಕಾದೀತು ಎಂದಿದ್ದರು. ಖರ್ಚು ಎಷ್ಟಾದರೂ ಚಿಂತಿಲ್ಲ ಅಕ್ಕ ನಡೆದಾಡುವಂತಾದರೆ ಸಾಕು ಎಂದು ಅವರಿಗನಿಸಿತ್ತು. ಅದರಿಂದಾಗಿ ಅರ್ಧ ಖರ್ಚು ಅವರೇ ಕೊಡಲು ಮುಂದಾಗಿದ್ದರು. ರುಕ್ಕಿಣಿಯವರ ಮೇಲಿನ ಪ್ರೀತಿಯಿಂದ ಕುಟುಂಬದವರೆಲ್ಲರೂ ಅವರ ಆಪರೇಷನ್‌ಗೆ ತಮ್ಮಿಂದಾದಷ್ಟು ಧನ ಸಹಾಯ ಮಾಡಲು ಮುಂದೆ ಬಂದಿದ್ದರು.

ರುಕ್ಮಿಣಿಯವರು ಬಂದ ಮೂರನೇ ದಿನಕ್ಕೆ ಅವರ ಆಪರೇಷನ್ ಆಗಿತ್ತು. ಶಿವರಾಂ ಆಸ್ಪತ್ರೆಯಲ್ಲಿ ಅಕ್ಕನ ಹತ್ತಿರವೇ ಇದ್ದುದರಿಂದ ವಾಮನರಾಯರಿಗೆ ನಾಲ್ಕು ದಿನ ಅವರ ಭೇಟಿ ಆಗಿರಲಿಲ್ಲ. ಆಪರೇಷನ್ ಆದ ಮರು ದಿನ ವಾಮನರಾಯರೂ ಹೆಂಡತಿಯೊಡಗೂಡಿ ಆಸ್ಪತ್ರೆಗೆ ಹೋಗಿ ನೋಡಿ ಬಂದಿದ್ದರು.

ನಾಲ್ಕನೇ ದಿನ ಗೆಳೆಯನನ್ನು ಹುಡುಕಿಕೊಂಡು ಬಂದ ಶಿವರಾಂ, “ಅಂತೂ ಸಾವಿನೊಡನೆ ಸೆಣಸಾಡಿ ಈ ಬಾರಿಯೂ ಅಕ್ಕ ಗೆದ್ದರು. ವಿಪರೀತ ಭ್ಲೀಡಿಂಗ್ ಆಗಿ ಅವರ ಪಲ್ಸ್ ರೇಟ್ ಇಳಿದಿತ್ತು. ಅವರ ಮಕ್ಕಳ ಪುಣ್ಯ ಬಹಳ ದೊಡ್ಡದು.”

ವಾಮನರಾಯರು ಕೇಳಲೋ ಬೇಡವೋ ಎನ್ನುವ ಸಂಶಯದಲ್ಲಿಯೇ, “ನಾನು ಹೀಗನ್ನುತ್ತೇನೆಂದು ಬೇಸರಿಸಬೇಡಿ. ಈ ಪ್ರಾಯದಲ್ಲಿ ಅಷ್ಟು ಮೇಜರ್‌ ಆಪರೇಷನ್‌ಗೆ ಅವರು ಒಪ್ಪಿದ್ದೇ ಆಶ್ಚರ್ಯ. ಇನ್ನೂ ಅವರಿಗೆ ಸಾವನ್ನು ಜಯಿಸುವ ಹಟ ಏಕೆ?”

ಶಿವರಾಂ ಗೆಳೆಯನ ಮುಖವನ್ನೇ ನೋಡುತ್ತಾ “ನಾನು ಅವತ್ತೇ ಹೇಳಿದ್ದೇನೆ. ಇದು ಸಾವನ್ನು ಜಯಿಸಬೇಕೆನ್ನುವ ಹಟವಲ್ಲ. ಅವರು ಸಾಯುವ ಹಾಗಿಲ್ಲ. ಅವರ ಮೇಲಿರುವ ಜವಾಬ್ದಾರಿ ಅಂಥಾದ್ದು. ಬದುಕು ಬೇಡವೆಂದರೂ ಅವರು ಬದುಕಲೇಬೇಕು. ಬದುಕು ಅವರಿಗೆ ಅನಿವಾರ್ಯ. ಅವರುಂಡ ಕಷ್ಟಕ್ಕೆ ಬೇರೆಯಾರಾದರೂ ಆಗಿದ್ದರೆ ಯಾವಾಗಲೋ ಪ್ರಾಣ ಕಳೆದುಕೊಳ್ಳುತ್ತಿದ್ದರು.”

“ಏನು ಕಷ್ಟ? ಅವರನ್ನು ನೋಡುವಾಗ ಅವರು ಸುಖದಿಂದ ತಮ್ಮ ಜೀವನ ಕಳೆದಿರಬೇಕೆಂದು ಅನಿಸುವುದಿಲ್ಲ?”

“ಅದಕ್ಕೇ ಹೇಳುವುದು ಅದು ಅವರು ಮೈಗೂಡಿಸಿಕೊಂಡಿರುವ ಸಂಸ್ಕಾರವೆಂದು. ನನ್ನಕ್ಕ ಜೀವನದ ಕಷ್ಟಗಳಿಗೆ ಹೆದರಿ ಓಡಿದವರಲ್ಲ. ಕಷ್ಟಗಳನ್ನು ಎದುರಿಸಿ ಹೋರಾಡಿದವರು. ಅದಕ್ಕೆ ಅವರ ನಡೆಯಲ್ಲಿ, ನುಡಿಯಲ್ಲಿ, ಮನದಲ್ಲಿ, ಹೃದಯದಲ್ಲಿ ಇನ್ನೂ ಜೀವಂತಿಕೆ ತುಂಬಿದೆ. ನಾವೆಲ್ಲ ಮಕ್ಕಳು ಹತ್ತಿರ ಇಲ್ಲವೆಂದು ಅಳುವವರು. ಅವರು ಮಕ್ಕಳನ್ನು ಹತ್ತಿರ ಇಟ್ಟುಕೊಂಡರೂ ಸುಖವಿಲ್ಲದವರು. ಹೂವನ್ನು ಕಳಕೊಂಡು ಬರೇ ಮುಳ್ಳಿನ ಗಿಡವನ್ನು ಹಿಡಿದುಕೊಂಡು ಜೀವಿಸುವವರು. ಮಕ್ಕಳಿಲ್ಲ ಎನ್ನುವ ನಿಮ್ಮ ನೋವಾಗಲೀ, ಮಕ್ಕಳಿದ್ದೂ ಹತ್ತಿರದಲ್ಲಿಲ್ಲ ಎನ್ನುವ ನನ್ನ ನೋವಾಗಲೀ ಅವರ ನೋವುಗಳ ಎದುರು ಏನೂ ಅಲ್ಲ. ಹೋರಾಟದಲ್ಲಿ ನನ್ನಕ್ಕ ಯಾವ ಹಿಟ್ಲರ್‌ಗೂ ಕಮ್ಮಿಯಿಲ್ಲ. ವಿಧಿಯೊಡ್ಡಿದ ಹಲವು ಸವಾಲುಗಳ ಎದುರು ಅವರದ್ದು ವನ್ ಮ್ಯಾನ್ ಆರ್ಮಿ.”

“ನನಗೆ ಸ್ವಲ್ಪ ಬಿಚ್ಚಿ ಹೇಳಿ, ಹೀಗೆ ಹೊಗಳುತ್ತಾ ಕುಳಿತರೆ ನನಗೇನು ತಿಳಿಯುತ್ತೆ? ಅಕ್ಕನ ಸುದ್ದಿ ಬಂದರೆ ದೊಡ್ಡ ಹೊಗಳು ಭಟ್ಟನೇ ಆಗುತ್ತೀರಿ.”

“ನಿಮಗೆ ನನ್ನ ಅಕ್ಕನಂಥ ಅಕ್ಕನಿಲ್ಲ ಬಿಡಿ. ನಿಮಗೆ ಹೇಗೆ ತಿಳಿಯುತ್ತೆ ನನ್ನ ಫೀಲಿಂಗ್ಸ್? ಕತ್ತೆ ಬಲ್ಲುದೆ ಕಸ್ತೂರಿಯ ಪರಿಮಳವ?”

“ಇಷ್ಟೆಲ್ಲ ಹೇಳುವ ಬದಲು ಅಕ್ಕನ ಜೀವನ ಚರಿತ್ರೆ ಹೇಳಿಬಿಡಿ. ನಾನು ಕೇಳುತ್ತೇನೆ.”

“ಹಾಗೆ ನಿಮಗೆ ಮಾತ್ರ ಹೇಳಿದರೆ ಸಾಕಾಗೋದಿಲ್ಲ ನಿಮ್ಮ ಹೆಂಡತಿಯೂ ಒಟ್ಟಿಗಿರಬೇಕು. ಅಕ್ಕ ಸ್ವಲ್ಪ ಹುಶಾರಾಗಲಿ, ಮತ್ತೆ ಹೇಳೋಣ.”

“ಇಲ್ಲ, ಇಷ್ಟು ಹೊತ್ತು ನನ್ನ ಕುತೂಹಲ ಕೆರಳಿಸಿ ಇನ್ನು ಕಾಯಬೇಕೆಂದರೆ ಕಷ್ಟ”

“ಈಗ ನಾನು ಆಸ್ಪತ್ರೆಗೆ ಹೋಗಬೇಕು. ಇಲ್ಲಿ ಕಥೆ ಹೇಳ್ತಾ ಕುಳಿತರೆ ಕಲ್ಯಾಣಿ ನನ್ನ ಕಥೆ ಮುಗಿಸುತ್ತಾಳೆ. ಆದರೂ ಒಂದು ಉದಾಹರಣೆ ಬೇಕಾ? ಅವರ ಜತೆಗೆ ಮಗಳಿದ್ದಳಲ್ಲ? ಅವಳನ್ನು ಸರಿಯಾಗಿ ನೋಡಿದ್ದೀರಾ?”

“ಇಲ್ಲ ಯಾಕೆ?”

“ಅವಳು ಮದುವೆಯಾಗಿ ಎರಡು ಮಕ್ಕಳ ತಾಯಿಯಾದ ಮೇಲೆ ಗಂಡನನ್ನು ಬಿಟ್ಟು ಬಂದವಳು. ನನ್ನಕ್ಕನೇ ಅವಳನ್ನು ಗಂಡನನ್ನು ಬಿಟ್ಟು ಬರಲು ಹೇಳಿದ್ದು. ಅವರಿಗೆ ಮಗಳ ಜೀವನ ಮುಖ್ಯವಾಗಿತ್ತು. ಅವಳನ್ನು ಅಲ್ಲೇ ಬಿಟ್ಟಿದ್ದರೆ ಅವಳು ಮಕ್ಕಳ ಜತೆಗೆ ಪ್ರಾಣ ಕಳಕೊಳ್ಳುತ್ತಿದ್ದಳು. ಅವಳು ಅನುಭವಿಸಿದ್ದ ಕಷ್ಟ ಅಂಥಾದ್ದು. ನಮ್ಮಕ್ಕ ಮಗಳಿಗೆ ಬೇಗ ಮದುವೆ ಮಾಡಿದ್ದರು. ಅವಳು ಹೆಚ್ಚು ಕಲಿತಿರಲಿಲ್ಲ. ಒಂದು ನೆಂಟಸ್ತಿಕೆ ಬಂದ ಕೂಡಲೇ ಹಿಂದೆ ಮುಂದೆ ನೋಡದೇ ಕೊಟ್ಟು ಬಿಟ್ಟಿದ್ದರು. ಮತ್ತೆ ನೋಡಿದರೆ ಅವನು ಮಹಾ ಡೋಂಗಿ, ಬೊಂಬಾಯಿಯಲ್ಲಿ ಮೊದಲೇ ಒಂದು ಮದುವೆಯಾಗಿ ಅವನಿಗೆ ಇಬ್ಬರು ಮಕ್ಕಳೂ ಇದ್ದರು. ಇವಳಿಗೂ ಇಬ್ಬರು ಮಕ್ಕಳು. ಹೆತ್ತವರಿಗೆ ನೋವಾಗುವುದೆಂದು ಪಾಪ ಆ ಹುಡುಗಿ ಸ್ವಲ್ಪ ಸಮಯ ಸುಮ್ಮನಿದ್ದಳು. ಕೊನೆಗೊಂದು ದಿನ ತಿಳಿದಾಗ ಭಾವ ಕಂಗೆಟ್ಟರು. ಆದರೆ ಅಕ್ಕ ಕಂಗೆಡಲಿಲ್ಲ. ಹೃದಯ ಕಲ್ಲು ಮಾಡಿಕೊಂಡು ಮಗಳನ್ನು ಮಕ್ಕಳನ್ನು ತಂದು ಜತೆಗಿಟ್ಟುಕೊಂಡರು. ಮಗಳನ್ನು ಎಸ್. ಎಸ್. ಎಲ್. ಸಿ. ಪರೀಕ್ಷೆಗೆ ಕುಳ್ಳಿರಿಸಿದರು. ಜತೆಗೆ ಟೈಪಿಂಗ್ ಕಲಿಸಿ ಅವರೇ ಬ್ಯಾಂಕಿನ ಚೇರ್‌ಮ್ಯಾನ್ ಹತ್ತಿರ ಮಾತಾಡಿ ಬ್ಯಾಂಕಿನಲ್ಲಿ ಕೆಲಸ ತೆಗೆಸಿಕೊಟ್ಟರು. ಅವಳನ್ನು ತನ್ನ ಕಾಲಲ್ಲಿ ನಿಲ್ಲುವಂತೆ ಮಾಡಿದರು. ಮಕ್ಕಳನ್ನು ತಾವೇ ಸಾಕಿದರು. ಈಗ ಒಬ್ಬಳು ಇಂಜಿನಿಯರ್ ಆಗಿ ಮದುವೆಯಾಗಿದ್ದಾಳೆ. ಇನ್ನೊಬ್ಬಳೂ ಕಂಪ್ಯೂಟರ್ ಕೋರ್ಸು ಮಾಡುತ್ತಿದ್ದಾಳೆ. ಅವರ ಪ್ರಯತ್ನದಲ್ಲಿ ಅವರ ಮಗಳು ಗಂಡನನ್ನು ಮರೆತು ಬದುಕುವುದು ಸಾಧ್ಯವಾಗಿದೆ. ಮೊಮ್ಮಕ್ಕಳು ಸೆಟಲ್ ಆದರು ಮಗಳಿಗೆ ಜತೆಯಾಗಿ ಇರುವುದು ತಾಯಿ ಮಾತ್ರ”

ಅವರಿಗೆ ಒಟ್ಟು ನಾಲ್ಕು ಮಕ್ಕಳು. ಇದರ ಮಧ್ಯೆ ಎರಡನೆಯವಳಿಗೆ ಮದುವೆಯಾಯಿತು. ಅವಳು ಅವಳಷ್ಟಕ್ಕೆ ಚೆನ್ನಾಗಿದ್ದಾಳೆ. ಆದರೆ ಮೊದಲ ಮಗಳ ಜೀವನದ ಸೋಲು ಅಕ್ಕ ಭಾವ ಇಬ್ಬರನ್ನೂ ಬಹಳ ಘಾಸಿ ಮಾಡಿತ್ತು. ಅವಳ ಜೀವನವನ್ನು ಒಂದು ನೆಲೆಗೆ ತಂದ ನಮ್ಮಕ್ಕನ ಸಹನೆಯನ್ನು ಪರೀಕ್ಷಿಸಲೋ ಎನ್ನುವಂತೆ ಅವರ ಸಂಸಾರಕ್ಕೆ ಇನ್ನೊಂದು ಬರಸಿಡಿಲು ಬಡಿಯಿತು. ಆ ದಾರುಣ ಘಟನೆಯನ್ನು ಎಣಿಸಿದರೇ ಹೃದಯ ಒಡೆದಂತಾಗುತ್ತದೆ. ಮೂರನೆಯ ಮಗಳು ಡಿಗ್ರಿ ಮುಗಿಸಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಲು ತಾಯಿಯ ಜತೆಗೆ ಮಂಗಳೂರಿಗೆ ಹೋದಾಗ ಅವರು ಕುಳಿತ್ತಿದ್ದ ರಿಕ್ಷಾಕ್ಕೆ ಬಸ್ಸು ಹೊಡೆದು ಮಗಳು ಅಲ್ಲೇ ಅಸು ನೀಗಿದಳು. ನಮ್ಮಕ್ಕನಿಗೆ ತಲೆಗೆ ಪೆಟ್ಟಾಗಿ, ಕಾಲು ಫಾಕ್ಟರ್ ಆಗಿತ್ತು. ಅವರಿಗೆ ನಾಲ್ಕು ದಿನದ ನಂತರ ಸ್ಮೃತಿ ಬರುವಾಗ ಆಕ್ಸಿಡೆಂಟ್ ಆದದ್ದೇ ಮರೆತು ಹೋಗಿತ್ತು. ಅವರಿಗೆ ನೆನಪು ಹುಟ್ಟಿಸುವ ಹಾಗೂ ಇರಲಿಲ್ಲ. ತಲೆಗೆ ಪೆಟ್ಟಾಗಿದ್ದುದರಿಂದ ಯಾವುದೇ ಶಾಕಿಂಗ್ ಸುದ್ದಿ ಹೇಳುವ ಹಾಗಿರಲಿಲ್ಲ. ಭಾವನ ಅವಸ್ಥೆ ಹೇಳಿ ಪ್ರಯೋಜನವಿಲ್ಲ. ಒಂದು ತಿಂಗಳ ನಂತರ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವಾಗ ಅವರಿಗೆ ಮಗಳ ಸಾವಿನ ಸುದ್ದಿ ತಿಳಿದದ್ದು. ಆ ಮಗಳು ಎಲ್ಲ ರೀತಿಯಲ್ಲೂ ದಿ ಬೆಸ್ಟ್ ಹುಡುಗಿ, ದೇವರಿಗೆ ಬೇಕಾಗುವುದೂ ಎಲ್ಲಕ್ಕಿಂತ ಒಳ್ಳೆಯ ವಸ್ತುವೇ. ಎದುರಿಗೆ ಯಾರಿಗೂ ಬೇಡವಾದ ಒಂದು ವಸ್ತುವನ್ನು ಇಟ್ಟುಕೊಂಡು ಎಲ್ಲರಿಗೂ ಬೇಕಾಗಿದ್ದ ಆ ಹುಡುಗಿಯನ್ನು ಕಳಕೊಂಡಾಗ ಅಕ್ಕ ಭಾವ ಇಬ್ಬರೂ ಜೀವಿಸುವ ಇಚ್ಛೆಯನ್ನೇ ಕಳಕೊಂಡರು. ಅದರಲ್ಲೂ ನಮ್ಮ ಭಾವ ದೇವತಾ ಮನುಷ್ಯ ಯಾರಿಗೂ ಯಾವತ್ತೂ ನೋವುಂಟುಮಾಡಿದವರೇ ಅಲ್ಲ. ವೈದ್ಯನಾಗಿ ಅವರು ದುಡ್ಡು ಮಾಡಿದ್ದಕ್ಕಿಂತಲೂ ಬಡವರಿಗೆ ಸಹಾಯ ಮಾಡಿದ್ದೇ ಜಾಸ್ತಿ. ಅವರಿಗೆ ಇಂಥಹ ಕಷ್ಟಗಳನ್ನು ಕೊಟ್ಟ ದೇವರ ಮೇಲಿನ ನಂಬುಗೆಯೇ ನಮಗೆಲ್ಲ ಹೊರಟುಹೋಯಿತು….”

ಶಿವರಾಂರವರ ದನಿ ಗದ್ಗದಿತವಾಗಿತ್ತು. ವಾಮನರಾಯರ ಹೃದಯವೂ ಭಾರವಾಗಿತ್ತು. ಹೇಗೂ ಕತೆ ಶುರುಮಾಡಿದ್ದಾಗಿದೆ ಪೂರ್ತಿ ಕೇಳೇ ಬಿಡೋಣವೆಂದು ವಾಮನರಾಯರು, “ಬೇಡವಾದುದ್ದನ್ನು ಇಟ್ಟುಕೊಂಡು ಬೇಕಾದುದನ್ನು ಕಳಕೊಂಡರು ಎಂದಿರಲ್ಲ? ಅದೇನು?”

ಶಿವರಾಂ ಈ ಲೋಕದಲ್ಲಿ ಇದ್ದ ಹಾಗಿರಲಿಲ್ಲ. ಇವರ ಪ್ರಶ್ನೆಗೆ ಉತ್ತರಿಸದೆ, “ಈ ನೋವನ್ನು ಇಬ್ಬರಿಗೂ ಸಹಿಸುವುದು ಸಾಧ್ಯವಾಗದಿದ್ದರೂ ಅಕ್ಕ ತನ್ನ ಮುಂದಿರುವ ಇನ್ನೊಂದು ಜವಾಬ್ದಾರಿಯಿಂದ ಸಾವನ್ನು ಸ್ವಾಗತಿಸಲಿಲ್ಲ. ಆದರೆ ಭಾವನಿಗೆ ಈ ನೋವು ಸಹಿಸಲಾಗಲಿಲ್ಲ. ಮಗಳು ಸತ್ತ ಆರೇ ತಿಂಗಳಲ್ಲಿ ಹೃದಯಾಘಾತದಿಂದ ಮೃತರಾದರು. ನೀವೇ ಯೋಚಿಸಿ ಅಕ್ಕನ ಪರಿಸ್ಥಿತಿ ಹೇಗಾಗಿರಬೇಡ? ನಮ್ಮಕ್ಕ ಕಷ್ಟದಲ್ಲಿ ಒಂಟಿಯಾದರು. ಆದರೆ ಅವರಿಗೆ ಅದರ ನಂತರ ಕಷ್ಟ ಸುಖ ಎಲ್ಲಾ ಒಂದೇ ಆಯಿತು. ಅವರು ಇನ್ನೂ ಸಾಯುವ ಹಾಗಿರಲಿಲ್ಲ. ಬದುಕಲೇ ಬೇಕಿತ್ತು. ಹಾಗೆ ಇಷ್ಟು ವರುಷ ಬದುಕಿದರು. ಇನ್ನೂ ಎಷ್ಟು ವರುಷ ಅವರು ಈ ಕಷ್ಟ ಅನುಭವಿಸಬೇಕೋ? ಅವರ ಮೇಲಿರುವ ಜವಾಬ್ದಾರಿ ಅಂಥಾದ್ದು.”

“ಇನ್ನೆಂತಹ ಜವಾಬ್ದಾರಿ? ಸಾವು, ವಿಧಿ ಅವರ ಜೀವನದೊಡನೆ ಆಟವಾಡಿ ಅವರದ್ದೆಲ್ಲವನ್ನೂ ಕಸಿದುಕೊಂಡ ಮೇಲೆ ಅವರು ಬದುಕುಳಿಯಬೇಕಾದದ್ದು ಯಾಕೆ?”

“ನಿಮಗೆ ಅವರಿಗೆ ನಾಲ್ಕು ಮಕ್ಕಳೆಂದು ಹೇಳಿದ್ದು ಮರೆತು ಹೋಯಿತೇನೋ? ಬದುಕು ಅವರಿಗೇನೂ ಕೊಡಲಿಲ್ಲ. ಆದರೆ ಅವರಿಂದ ಎಲ್ಲವನ್ನೂ ಅಪೇಕ್ಷಿಸಿತು. ಅವರು ಕಳಕೊಂಡದ್ದರ ಮುಂದೆ ನಮ್ಮದು ಏನೂ ಇಲ್ಲ. ಅವರಿಗೆ ಮೂರು ಹೆಣ್ಣು ಮಕ್ಕಳ ನಂತರ ಒಬ್ಬ ಮಗ ಹುಟ್ಟಿದ್ದ. ಹುಟ್ಟುವಾಗ ಸಂತಸದ ಮಹಾಪೂರವನ್ನೇ ತಂದಿದ್ದರೂ ಬೆಳೆಯುತ್ತಾ ಕಷ್ಟದ ಜಲಪಾತವನ್ನೇ ಸೃಷ್ಟಿಸಿದ್ದ. ಗಂಡು ಮಗನೆಂದು ಹೆಸರಿಗೆ ಮಾತ್ರ. ಅವನು ಹುಟ್ಟುತ್ತಲೇ ಮೆಂಟಲೀ ರಿಟಾರ್ಡೆಡ್ ಮಗುವಾಗಿದ್ದ. ಅವನಿಗೀಗ ನಲ್ವತ್ತರ ಪ್ರಾಯ. ಕಷ್ಟದ ಹಿಮಾಲಯ ಪರ್ವತವನ್ನೇ ಎದುರಿಗಿಟ್ಟುಕೊಂಡು ಬದುಕುತ್ತಿದ್ದ ಅವರಿಗೆ ಒಂದರ ಹಿಂದೆ ಒಂದರಂತೆ ಸಾಲಾಗಿ ಹೃದಯ ಕಿತ್ತು ತೆಗೆಯುವಂತಹ ನೋವುಗಳೇ ಸಿಕ್ಕಿದ್ದು. ಮಗನನ್ನು ಮುಂದಿಟ್ಟುಕೊಂಡು ನಮ್ಮಕ್ಕ ಸಾಯುವುದು ಹೇಗೆ ಹೇಳಿ? ಅವನ ಜವಾಬ್ದಾರಿ ಯಾರು ತೆಗೆದುಕೊಳ್ಳುತ್ತಾರೆ? ಅವರೊಡನೆ ಇರುವ ಮಗಳು ಮೊದಲೇ ನೊಂದವಳು. ಅಲ್ಲದೆ ಒಬ್ಬಂಟಿ. ಅವಳನ್ನು ಬಿಟ್ಟು ತಾಯಿ ಹೇಗೆ ಸಾಯುವುದು? ನನಗೆ ಮಕ್ಕಳ ಜತೆ ಇಲ್ಲವೆಂದು ನೋವು ನಿಮಗೆ ಮಕ್ಕಳೇ ಇಲ್ಲವೆಂದು ನೋವು. ಅವರಿಗೆ ಇದ್ದೂ ಇಲ್ಲದಂತಹ ನೋವು, ಅವರ ಮುಂದೆ ನಮ್ಮದು ಏನೂ ಅಲ್ಲ.”

ಶಿವರಾಂ ಕಣ್ಣುಮುಚ್ಚಿ ಹೇಳಿ ಮುಗಿಸಿ ಕಣ್ಣು ಬಿಡುವಾಗ ವಾಮನರಾಯರು ಕಣ್ಣು ಮುಚ್ಚಿಕುಳಿತಿದ್ದರು. ಅವರ ಕಣ್ಣಿನಿಂದ ಒಂದೊಂದೇ ತೊಟ್ಟು ನೀರು ಕೆಳಗಿಳಿಯುತ್ತಿತ್ತು.

ಶಿವರಾಂ ಹತ್ತಿರ ಹೋಗಿ ಗೆಳೆಯನ ಭುಜ ಹಿಡಿದಲುಗಿಸಿದಾಗ ಮೆಲ್ಲನೆ ಕಣ್ಣು ಬಿಟ್ಟ ವಾಮನರಾಯರು. “ನಮ್ಮಂತೆ ಮಕ್ಕಳಿಲ್ಲದವರಿಗೆ ಒಂದೇ ಚಿಂತೆ. ಮಕ್ಕಳಿದ್ದವರಿಗೆ ಸಾವಿರ ಚಿಂತೆ. ಮಕ್ಕಳು ಹತ್ತಿರವಿದ್ದರೂ ಚಿಂತೆ, ದೂರದಲ್ಲಿದ್ದರೂ ಚಿಂತೆ. ನನಗದು ತಿಳಿದಿರಲಿಲ್ಲ. ನನಗೆ ಯಾವ ಬಂಧನಗಳೂ ಇಲ್ಲ. ನಾಳೆ ಬೇಕಾದರೆ ಕೀರ್ತಿ ಹೇಳಿದಂತೆ ಯಾವುದಾದರೂ ವೃದ್ಧಾಶ್ರಮಕ್ಕೆ ಸೇರಬಹುದು. ಅಕ್ಕನಂತೆ ಸಾಯಲಾಗದೆ ಜೀವಿಸಬೇಕಿಲ್ಲ. ಸಾವು ಬಂದಾಗ ಯಾವ ಯೋಚನೆಯೂ ಇಲ್ಲದೆ ಕಣ್ಣು ಮುಚ್ಚಬಹುದು.”

“ಇಲ್ಲಿ ಅದಲ್ಲ ಸಂಗತಿ. ಇಷ್ಟು ಅನುಭವಿಸಿಯೂ ಯಾರನ್ನೂ ದೂರದೆ, ದೇವರನ್ನು ಅಷ್ಟೇ ಶ್ರದ್ಧೆಯಿಂದ ಪೂಜಿಸಿಕೊಂಡು, ನಗುವಿನ ಮುಖವಾಡ ಹಾಕಿಕೊಂಡು ಜೀವನದೊಡನೆ ರಾಜಿ ಮಾಡಿಕೊಂಡು, ತಮ್ಮ ನೋವು ಯಾರಿಗೂ ಅರಿವಾಗದಂತೆ ಜೀವಿಸುತ್ತಿದ್ದಾರಲ್ಲ ಅದು ದೊಡ್ಡ ಸಂಗತಿ.”

“ಇವತ್ತು ಹೇಳುವುದಿಲ್ಲ ಎಂದುಕೊಂಡೇ ಎಲ್ಲ ಕತೆ ಹೇಳಿದ್ದಕ್ಕೆ ನಿಮಗೆ ನಾನು ಅಭಾರಿ. ಜೀವನದ ಸತ್ಯವನ್ನು ನಿಮ್ಮಕ್ಕನ ಜೀವನ ತೋರಿಸಿಕೊಟ್ಟಿತು. ನಾನವರನ್ನು ನೋಡಿ ಅವರ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡಬೇಕೆಂದು ಅನಿಸುತ್ತಿದೆ.”

“ಅವರ ಜೀವನ ಒಂದು ಹೋಮದ ಅಗ್ನಿಕುಂಡ, ಎಲ್ಲ ಸುಖಗಳನ್ನು ಎರೆಸಿಕೊಂಡು ಅದನ್ನೆಲ್ಲಾ ಸುಟ್ಟು ಬರೇ ಕಷ್ಟಗಳ ಕೆಂಡದ ರಾಶಿಯನ್ನು ಅವರಿಗೆ ಬಿಟ್ಟುಕೊಟ್ಟ ಹೋಮದ ಕುಂಡ, ಆದರೆ ಅವರು ಬೆಂಕಿಯೊಳಗಿಂದ ಅರಳಿದ ಹೂವಿನಂತೆ ಎಲ್ಲ ನೋವುಗಳನ್ನು ಮೆಟ್ಟಿ ನಗುತ್ತಿದ್ದಾರೆ. ಅದು ಅವರನ್ನು ಬದುಕಿಸಿದೆ. ಜೀವಂತವಾಗಿಸಿದೆ. ಸುಖ ದುಃಖ ಎರಡನ್ನೂ ಮೀರಿ ಬರೇ ಕರ್ತವ್ಯಕ್ಕಾಗಿ ಅವರು ಉಸಿರಾಡುತ್ತಿದ್ದಾರೆ. ನಾನು ಹೊತ್ತೆಲ್ಲ ಇಲ್ಲೇ ಕಳೆದೆ. ಅಲ್ಲಿ ಕಲ್ಯಾಣಿ ಎಷ್ಟು ಗಲಾಟೆ ಮಾಡುತ್ತಿದ್ದಾಳೋ? ನಾನಿನ್ನು ಬರ್‍ತೇನೆ.”

ಶಿವರಾಂ ಓಡು ನಡಿಗೆಯಲ್ಲಿ ಮನೆ ಸೇರಿದ್ದರು. ಎರಡು ದಿನ ಅಕ್ಕನ ಜೀವನವನ್ನು ಮೆಲುಕು ಹಾಕಿ ಹೃದಯ ಭಾರವಾಗಿತ್ತು. ಗೆಳೆಯನೊಡನೆ ಹಂಚಿಕೊಂಡ ಮೇಲೆ ಹಗುರವಾಗಿತ್ತು. ನಾವು ಎಲ್ಲವನ್ನೂ ಹಂಚಿಕೊಳ್ಳುತ್ತೇವೆ. ಅಕ್ಕ ಯಾವತ್ತೂ ನೋವನ್ನು ಹಂಚಿಕೊಂಡುದೇ ಇಲ್ಲ. ಆದರೂ ಎಷ್ಟು ನಿರಾಳವಾಗಿರುತ್ತಾರೆ. ಮನೆ ತಲುಪುವಾಗ ಕಲ್ಯಾಣಿ ಮನೆಯ ಮುಂದೇನೆ ಕಾಯುತ್ತಿದ್ದಳು. ಇವರನ್ನು ನೋಡಿದವಳೇ, “ನೀವು ಎಲ್ಲಿ ಮಾಯವಾದದ್ದು? ಅತ್ತಿಗೆಯ ಊರಿಂದ ಫೋನಿತ್ತು. ಅವರ ಮಗ ಎರಡು ದಿನದಿಂದ ನಾಪತ್ತೆಯಂತೆ. ಯಾರಿಗೂ ಗೊತ್ತಿಲ್ಲ. ಎಲ್ಲಿ ಹೋಗಿದ್ದಾನೆಂದು, ಅತ್ತಿಗೆಗೆ ಈಗ ಹೇಳುವುದು ಸಾಧ್ಯವಿಲ್ಲ. ಏನು ಮಾಡುತ್ತೀರಿ?”

ಇದನ್ನು ಕೇಳುತ್ತಲೇ ಶಿವರಾಂ ಕುಸಿದಿದ್ದರು. ಊರಿಡೀ ಸುತ್ತುತ್ತಾನೆ. ಕೆರೆಯ ಬಳಿ ಕೂರುತ್ತಾನೆ. ಏನಾಗಿರಬಹುದು? ಅವನಿಗಾಗಿ ಜೀವ ಹಿಡಿದಿರುವ ಅಕ್ಕನಿಗೆ ಇದು ತಿಳಿದರೆ ಏನಾಗಬಹುದು.? ಮಕ್ಕಳಿಂದ ಎಷ್ಟು ಕಷ್ಟ ಅನುಭವಿಸಿದಳು? ಈಗೇನು ಮಾಡಲಿ?

ಶಿವರಾಂ ಊರಿಗೆ ಫೋನು ಮಾಡಿದಾಗ ಅಲ್ಲಿಂದ ಯಾರದೋ ಸ್ವರ ಕೇಳಿಸಿತ್ತು. “ಏನಾಯಿತು? ಹುಡುಗ ಸಿಕ್ಕಿದನೇ?”

“ಸಿಕ್ಕಿಲ್ಲ. ಅವನು ಯಾವಾಗಲೂ ಹೋಗುತ್ತಿದ್ದ ಕೆರೆಯಲ್ಲಿ ಅವನ ದೇಹ ಹುಡುಕುತ್ತಿದ್ದಾರೆ. ಈಗೇನು ಮಾಡಲಿ?”

“ನಾನು ಪುನಹಾ ಫೋನಿಸುತ್ತೇನೆ.” ಶಿವರಾಂ ಫೋನಿಟ್ಟುಗೆಳೆಯನ ನಂಬರ್ ತಿರುಗಿಸಿದ್ದರು. ವಾಮನರಾಯರ ಸ್ವರ ಕೇಳುತ್ತಲೇ ಎಲ್ಲಾ ಮುಗಿಯಿತು. ಅಲ್ಲಿ ಮಗ ನೀರುಪಾಲಾಗಿದ್ದಾನೆ. ಅವನಿಗೇನಾದರೂ ಆದರೆ ಅಕ್ಕ ಬದುಕುವುದಿಲ್ಲ. ನೀವು ಕೂಡಲೇ ಆಸ್ಪತ್ರೆಗೆ ಬನ್ನಿ, ಅಲ್ಲಿಯ ಪರಿಸ್ಥಿತಿ ನೋಡಿ ನಾನು ಕೂಡಲೇ ಊರಿಗೆ ಹೋಗಬೇಕು.”

ಶಿವರಾಂ ಆಸ್ಪತ್ರೆಗೆ ಬರುವಾಗ ಇಬ್ಬರೂ ಮಕ್ಕಳು ಬಹಳ ಚಿಕ್ಕದು ಮುಖ ಮಾಡಿ ಕುಳಿತಿದ್ದರು. ಅಕ್ಕನನ್ನು ಎಮರ್‌ಜೆನ್ಸಿ ವಾರ್ಡ್‌ಗೆ ತೆಗೆದುಕೊಂಡು ಹೋಗಿದ್ದರು.

“ಅಮ್ಮನಿಗೆ ಸಡನ್ ಆಗಿ ಬಿ.ಪಿ. ಕೆಳಗಿಳಿಯಿತು. ಈಗ ಐ.ಸಿ.ಯು.ನಲ್ಲಿದ್ದಾರೆ.” ಶಿವರಾಂ ಡಾಕ್ಟರನ್ನು ನೋಡಲು ಓಡಿದ್ದರು. ಆದರೆ ಅಷ್ಟು ಹೊತ್ತಿಗೆ ಅವರ ಕತೆ ಮುಗಿದಿತ್ತು. ತಾಯಿ ಹೃದಯಕ್ಕೆ ಮಗನ ಸಾವಿನ ಸುಳಿವು ಸಿಕ್ಕಿ ತನ್ನ ಕರ್ತವ್ಯ ಮುಗಿಯಿತೆಂದು ಅವರೂ ತನ್ನ ಜೀವನವನ್ನು ಸುಲಭವಾಗಿ ಕಳಚಿಕೊಂಡಿರಬೇಕು.

ಶಿವರಾಂಗೆ ಅಕ್ಕನ ಅಗಲಿಕೆಯಿಂದ ತಮ್ಮ ಜೀವನದಲ್ಲಿ ಒಂದು ಶೂನ್ಯತೆ ಉಂಟಾದಂತೆ ಅನಿಸಿದರೂ ನೋವಾಗಲಿಲ್ಲ. ಈಗಲಾದರೂ ಅವರ ಜೀವನದ ಅಗ್ನಿಕುಂಡ ತಣ್ಣಗಾಯಿತಲ್ಲ ಎಂದು ಅನಿಸಿತ್ತು. ಅವರ ಹೆಣವನ್ನು ತೆಗೆದುಕೊಂಡು ಊರಿಗೆ ಪ್ರಯಾಣಿಸುವಾಗ ಮಗುವಿನಂತೆ ಬಿಕ್ಕಿ ಬಿಕ್ಕಿ ಅಳುತ್ತಿದ್ದ ದೊಡ್ಡ ಮಗಳನ್ನು ನೋಡಿ ವಾಮನರಾಯರು “ಮಗೂ, ನೀನು ಅಮ್ಮನಿಲ್ಲವೆಂದು ಬೇಸರಿಸಬೇಡ. ಇಲ್ಲಿಗೆ ಟ್ರಾನ್ಸ್‌ಫರ್ ತೆಗೆದುಕೊಂಡು ಬಾ. ನಮ್ಮ ಜತೆಗಿರು. ನಮಗೂ ಯಾರೂ ಇಲ್ಲ. ನಿನಗೂ ಇಲ್ಲ. ನಾವು ಜತೆಯಾಗಿರೋಣ. ನಾವೆಲ್ಲ ಒಂದೇ ದೋಣಿಯ ಪ್ರಯಾಣಿಕರು. ಪ್ರಯಾಣವೂ ಒಂದೇ ಕಡೆಗೆ, ನಾನೇ ಒಂದು ವೃದ್ಧಾಶ್ರಮ ಶುರು ಮಾಡುತ್ತೇನೆ. ನಮ್ಮ ಮನೆಯಲ್ಲೇ ಶುರು ಮಾಡೋಣ. ರುಕ್ಕಿಣಿಯಕ್ಕನ ಹೆಸರೇ ಅದಕ್ಕಿಡೋಣ. ನಾವೆಲ್ಲ ಅಲ್ಲೇ ಇರೋಣ ಒಬ್ಬರಿಗೊಬ್ಬರು ಸಹಾಯ ಮಾಡಿಕೊಂಡು, ನಿನ್ನಮ್ಮನ ಹಾಗೇ ಒಬ್ಬೊಬ್ಬರೇ ಕಷ್ಟ ಅನುಭವಿಸುವುದು ಬೇಡ.”

ವಾಮನರಾಯರಿಗೆ ಅರಿವಾಗದಂತೆ ಅವರ ಜೀವನದ ದಾರಿ ಗೋಚರಿಸಿತ್ತು.

ಗೆಳೆಯನ ಮಾತು ಕೇಳಿದ ಶಿವರಾಂ, “ನಿಮ್ಮ ಆಶ್ರಮದಲ್ಲೇ ನನಗೂ ಒಂದು ರೂಂ ಕೊಟ್ಟುಬಿಡಿ. ನನ್ನೊಡನಿರುವ ಹಣವೂ ಆ ವೃದ್ಧಾಶ್ರಮಕ್ಕೇ ಸಲ್ಲುತ್ತೆ.” ಬದುಕು ಜಟಕಾ ಬಂಡಿ ವಿಧಿಯದರ ಸಾಹೇಬ ನಮ್ಮದೇನಿದೆ ಅಲ್ಲಿ? ನಾವು ಬರೇ ಪ್ರಯಾಣಿಕರು.
*****
(೧೯೯೭)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸ್ವಾತಂತ್ರ್ಯ ಕೈ ಬಿಟ್ಟಿತ್ತ
Next post ಏನಾಗುತ್ತೆ?

ಸಣ್ಣ ಕತೆ

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…