ಗೃಹವ್ಯವಸ್ಥೆ

ಗೃಹವ್ಯವಸ್ಥೆ

ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ ಮಗಳಾದ ಲಲಿತಾ ಗೌರಿಯು ಹಿಂದಿನ ಸ್ಟೇಶನದಾರಭ್ಯ ಇಳಿಯುವದಕ್ಕಾಗಿ ವ್ಯವಸ್ಥೆ ಮಾಡಿಟ್ಟು ಕೊಂಡವರು ಬಂಡಿಯು ನಿಂತಕೂಡಲೆ ಲಗುಬಗೆಯಿಂದ ಕೆಳಗಿಳಿದರು. ತಮ್ಮನ್ನು ಊರಲ್ಲಿ ಕರಕೊಂಡು ಹೋಗಲಿಕ್ಕೆ ಯಾರಾದರೂ ಬಂದಿರುವರೋ ಎಂದು ಅವರು ತುಸು ಹೊತ್ತು ಅತ್ತಿತ್ತ ನೋಡಿದರು. ಯಾರೂ ಬಂದಿದ್ದಿಲ್ಲ.

“ಕೇಶವಭಟ್ಟರೆ, (ಗತವಯಸ್ಕನಾದ ಬ್ರಾಹ್ಮಣನು ನಿರ್ಮಲಾಬಾಯಿಯವರ ಮನೆಯ ಆಶ್ರಿತನು) ಪದ್ಮನಾಭನಾಗಲಿ, ಅವನ ಮನೆಯ ಸೇವಕನೊಬ್ಬನಾಗಲಿ, ಯಾರೂ ಬಂದಂತೆ ಕಾಣಿಸುವದಿಲ್ಲ. ಒಂದು ಬಾಡಿಗೆಯ ಗಾಡಿಯನ್ನು ಮಾಡಿಕೊಂಡು ಹೋಗೋಣ; ಇನ್ನೆಷ್ಟು ಹಾದೀ ನೋಡೋಣ?”

“ಪದ್ಮನಾಭರಾಯರಿಗೆ ಇನ್ನೂ ಸೂರ್ಯೋದಯವಾಗಿರಲಿಕ್ಕಿಲ್ಲ ! ಮೇಲೆ ಇಂಥ ಮಳೆ ! ಅವರು ನಮಗಾಗಿ ವ್ಯವಸ್ಥೆಯನ್ನಿಡುವರೆಂದು ತಿಳುಕೊಳ್ಳುವದೇ ದಡ್ಡತನ” ಎಂದು ಕೇಶವಭಟ್ಟರು ತಮ್ಮ ಅಭಿಪ್ರಾಯವನ್ನು ಹೇಳಿದರು.

“ಅಂದರೇನು ಭಟ್ಟರೆ? ಹುಡುಗನ ಮೈಯಲ್ಲಿ ಹೇಗಿದೆಯೋ ಏನೋ ಎಂದು ಬಾಯಿಯಲ್ಲಿ ಅಕ್ಕಿ ಕಾಳು ಹಾಕಿಕೊಂಡು ನಾವು ಧಾವಿಸಿ ಬಂದಿರಲು, ನಮ್ಮ ಜೀವಕ್ಕೆ ಸಮಾಧಾನವಾಗುವಂಥ ವರ್ತಮಾನವನ್ನು ಹೇಳಿ, ನಮ್ಮನ್ನು ಕರಕೊಂಡು ಹೋಗಲಿಕ್ಕೆ ಬಾರದಿರಲು ಪದ್ಮನಾಭನು ಕಿವಿಯಲ್ಲಿ ತುತ್ತು ಹಾಕಿಕೊಳ್ಳುತ್ತಾನೆನ್ನ ಬೇಕೆ? ಇರಲಿ. ಬೇಗನೆ ಗಾಡೀ ಮಾಡಿಕೊಂಡು ಬನ್ನಿರಿ” ಎಂದು ನಿರ್ಮಲಾಬಾಯಿಯು ಚಿಂತಾಕುಲಳಾಗಿ ಹೇಳಿದಳು.

ಪದ್ಮನಾಭರಾಯನು ಕಿಂಚಿತ್‌ ಸೋಮಾರಿಯಾಗಿದ್ದರೂ ಒಳ್ಳೆ ಬುದ್ಧಿವಂತನಾದ ವಕೀಲನು. ತಿಂಗಳಾ ಇನ್ನೂರು ಇನ್ನೂರೈವತ್ತು ರೂಪಾಯಿಗಳು ಅವನಿಗೆ ಅವಿಚ್ಛಿನ್ನವಾಗಿ ಸಿಕ್ಕುತ್ತಿದ್ದವು. ಅವನಿಗಿಂತ ಕಡಿಮೆ ಬುದ್ಧಿವಂತರಾದವರು ಪದ್ಮನಾಭನಿಗಿಮ್ಮಡಿಯಾದ ಪ್ರಾಪ್ತಿವಂತರಾಗಿದ್ದರೂ ಅವನಿಗೆ ಸಲ್ಲುತ್ತಿರುವ ಮರ್ಯಾದೆಯು ಸ್ಪೃಹಣೀಯವಾಗಿತ್ತು. ಪದ್ಮನಾಭರಾಯನು ಸ್ವಭಾವತಃ ಉದಾರನೂ, ಆಪ್ತರಿಷ್ಟರಿಗೆ ಪ್ರಿಯನೂ, ಬಡವರಿಗೆ ದಯಾಲುವೂ ಆಗಿರುವದರಿಂದ ಅವನ ಮನೆಯ ವೆಚ್ಚಕ್ಕಿಂತಲೂ ಪ್ರಾಪ್ತಿಯು ಅಧಿಕವಾಗಿದ್ದಿಲ್ಲ. ಊರಲ್ಲಿ ಪ್ರಮಿತರಾದ ಜನರಿರತಕ್ಕ ಭಾಗದಲ್ಲಿಯೇ ನೋಡಲು ಪ್ರಶಸ್ತವಾದ ಮನೆಯನ್ನು ಅವನು ಕಟ್ಟಿಕೊಂಡಿದ್ದನು.

ನಿರ್ಮಲಾಬಾಯಿಯ ಗಾಡಿಯು ಪದ್ಮನಾಭರಾಯರ ಮನೆಯ ಮುಂದೆ ಬಂದು ನಿಂತಿತು. ಮಗುವಿನ ಪ್ರಕೃತಿಯು ಇದ್ದಕ್ಕಿದ್ದಂತೆಯೇ ಇರುವದೆಂದು ಕೇಳಿ ಅವಳು ಬದುಕೆಲೆ ಜೀವವೇ ಎಂದು ಸಮಾಧಾನದ ಉಸುರ್ಗರೆದು ಗಾಡಿಯಿಂದಿಳಿದು ಒಳಗೆ ಬಂದಳು. ಅತ್ತಿಗೆಯವರು ಬಂದದ್ದು ಕಂಡು ಪದ್ಮನಾಭರಾಯರ ಪತ್ನಿಯಾದ ಯಮುನಾಬಾಯಿಯು ಸಂತೋಷವನ್ನು ತಾಳಿ ‘ಬನ್ನಿರಿ’ ಎಂದು ಸ್ವಾಗತವನ್ನಿಕ್ಕಿದಳು.

ಮತ್ತೊಂದು ಮಾತಾಡದೆ “ರಂಗನ ಪ್ರಕೃತಿ ಹೇಗಿದೆ?” ಎಂದು ನಿರ್ಮಲಾಬಾಯಿಯು ಆತುರಳಾಗಿ ಕೇಳಿದಳು.

“ಹಾಂಽಽಽಗೆ ಮಲಗಿ ಕೊಂಡಿದ್ದಾನೆ! ತಿಂಗಳ ದಿವಸ ಹಾಸಿದ ಹಾಸಿಗೆ ತೆಗೆದೇ ಇಲ್ಲ!” ಎಂದು ಯಮುನಾಬಾಯಿಯು ಹೇಳಿದ್ದು ಅಕ್ಷರಶಃ ನಿಜವಾಗಿತ್ತು. ಕತ್ತಲೆಮಯವಾದ ಕೋಣೆಯಲ್ಲಿ ರಂಗನು ನೆರಳುತ್ತೆ ಮಲಗಿದ್ದನು. ಮಗುವಿನ ಸ್ಥಿತಿಯನ್ನು ಚನ್ನಾಗಿ ನೋಡಬೇಕೆಂದು ಕಿಟಿಕೆಗಳನ್ನು ತೆಗೆಸಿದರು. ಗಜ್ಜರೆಯ ತುಂಬಿನಂತೆ ಪುಷ್ಟಾಂಗನಾಗಿರುವ ರಂಗಣ್ಣನು ಅಸ್ಥಿ ಪಂಜರನಾಗಿದ್ದನು. ತೇಜಸ್ಸಿನಿಂದ ಉಕ್ಕುತ್ತಿರುವ ಅವನ ಮುಖವು ಗಂಜಿಯನ್ನು ಹೂಸಿದಂತೆ ಬೆಳ್ಳಗಾಗಿ ಹೋಗಿತ್ತು.

“ಅತ್ಯಾ ಬಂದಿರುವಳಲ್ಲ!” ಎಂದು ರಂಗನು ಒಣಗಿ ಸಂಡಿಗೆಯಾಗಿದ್ದ ತನ್ನ ಮುಖದಲ್ಲಿ ಕಿಂಚಿತ್ ನಗೆತಾಳಿ ಕೇಳಿಸಿತೋ ಇಲ್ಲವೋ ಎಂಬಷ್ಟು ಸಣ್ಣ ಧ್ವನಿಯಿಂದ ನುಡಿದನು.

“ಹೇಗಿದೆ ಅಪ್ಪಾ ರಂಗಣ್ಣಾ?” ಎಂದು ರಂಗನ ಸೋದರತ್ತೆಯಾದ ನಿರ್ಮಲಾಬಾಯಿಯವರು ಆ ಬಾಲಕನ ಮೈಮೇಲೆ ಕೈ ಆಡಿಸಿ ಪ್ರೇಮದಿಂದ ಕೇಳಿದಳು.

“ಚಳಿಜ್ವರ ಬರುತ್ತವೆ. ತಿಂಗಳಾಯಿತು ನಿಂತಿಲ್ಲ. ಡಾಕ್ಟರನ ಔಷಧ ಕುಡಿದು ಕುಡಿದು ವಾಕರಿಕೆ ಬಂದು ಹೋಗಿದೆ!” ಎಂದು ರಂಗನಂದನು.

ನಡುಮನೆಯಲ್ಲಿರುವ ಬೇರೊಂದು ಪ್ರಶಸ್ತವಾದ ಕೋಣೆಯನ್ನು ತೆರವು ಮಾಡಿ ನಿರ್‍ಮಲಾಬಾಯಿಯು ಚನ್ನಾಗಿ ಉಡುಗಿ ಲೋಬಾನ ಗುಗ್ಗುಳಗಳ ಧೂಪವನ್ನು ಹಾಕಿ, ಅಲ್ಲಿ ಸ್ವಚ್ಛವಾದ ಹಾಸಿಗೆ ಹಾಸಿ ರಂಗನ ಕೈ ಹಿಡಿದು ಕರೆತಂದು ಅಲ್ಲಿ ಮಲಗಿಸಿದಳು. ಅವನ ಮೈಮೇಲಿದ್ದ ಹೊಲಸಾದ ಬಟ್ಟೆಗಳನ್ನು ತೆಗೆದು ಒಗೆದ ಬಟ್ಟೆಗಳನ್ನು ತೊಡಿಸಿದಳು. “ಅತ್ಯಾ, ಇಲ್ಲಿ ಬಹಳ ಚನ್ನಾಗಿದೆ ನೋಡು!” ಎಂದು ರಂಗನು ತನ್ನ ಹೊಸ ಸ್ಥಳವನ್ನು ಕಂಡು ಸಂತುಷ್ಟನಾಗಿ ನುಡಿದನು.

ಪದ್ಮನಾಭರಾಯನು ಹತ್ತು ಗಂಟೆಯ ಸಮಯಕ್ಕೆ ಹೊರಗಿಂದ ಬಂದನು. ನೋಡುತ್ತಾನೆ, ಮನೆಯಲ್ಲಿ ವಿಪರೀತವಾಗಿ ಸ್ವಚ್ಛವಾಗಿತ್ತು. ಡಾಕ್ಟರನ ಕಡೆಯಿಂದ ಅವನು ಮಗನಿಗಾಗಿ ಔಷಧ ಬಾಟಲಿ (ಕುಪ್ಪೆ) ಯನ್ನು ತಂದಿದ್ದು ಅದನ್ನು ತೆಗೆದುಕೊಂಡು ರಂಗನ ಕೋಣೆಗೆ ಹೋದನು. ಅವನು ಅಲ್ಲಿದ್ದಿಲ್ಲ. ಬೇರೊಂದು ಕೋಣೆಯಲ್ಲಿ ಅವನು ವ್ಯವಸ್ಥಿತನಾಗಿ ಮಲಗಿದ್ದು ಕಂಡು ಬಹು ಸಂತುಷ್ಟನಾಗಿ “ಇದನ್ನೆಲ್ಲ ಯಾರು ಮಾಡಿದರು ರಂಗಾ?” ಎಂದು ಅವನು ಕೇಳಿದನು.

“ನಿರಮಕ್ಕ ಅತ್ಯಾ ಬಂದಿರುವಳಲ್ಲ! ಅವಳೇ ಮಾಡಿದಳು.”

“ಎಲ್ಲಿ ಇದ್ದಾಳೆ?” ಎಂದವನೇ ಪದ್ಮನಾಭನು ಅಕ್ಕನನ್ನು ಕಾಣುವದಕ್ಕಾಗಿ ಒಳಗೆ ಹೋದನು. ನಿರಮಕ್ಕನು ಅಡಕಲ ಕೋಣೆಯಲ್ಲಿ ಬಗೆಬಗೆಯ ಧಾನ್ಯಗಳು ಒಂದಕ್ಕೊಂದು ಕೂಡಿ ನೆಲದಮೇಲೆಲ್ಲ ಬಿದ್ದು ಕೆಟ್ಟು ಹೋಗುತ್ತಿದ್ದವನ್ನು ಬಳಿಬಳಿದು ಬುಟ್ಟಿಗಳಲ್ಲಿ ತುಂಬಿಡುತ್ತಿದ್ದಳು.

“ನಿರಮಕ್ಕಾ, ಯಾವಾಗ ಬಂದೆ? ಬರುವದಾದರೆ ಪತ್ರವನ್ನಾದರೂ ಹಾಕಿ ಬರಬೇಕಾಗಿತ್ತು.”

“ಈಗ ಬಂದಿರುವೆನಲ್ಲ!” ಎಂದು ನಿರಮಕ್ಕನು ತಮ್ಮನ ಮುಖವನ್ನು ನೋಡಿ ಸಂತೋಷದಿಂದ ನಕ್ಕಳು.

“ಇದೇನು ಕಿತ್ತಿ ಕಿತ್ತಿ ಹಾಕುತ್ತಿರುವಿ? ಪ್ರವಾಸದಿಂದ ದಣಿದು ಬಂದಾಕೆ ಸುಮ್ಮನೆ ಕೂತುಕೊಳ್ಳಬಾರದೆ ?”

“ಪದ್ಮನಾಭ, ಮನೆಯನ್ನುವದು ನೋಡುವ ಹಾಗಿತ್ತೆ? ತಿಪ್ಪೆ! ಇಂಥ ತಿಪ್ಪೆಯಂಥ ಸ್ಥಳದಲ್ಲಿ ನನ್ನಿಂದ ಸರ್ವಥಾ ಕೂಡುವದಾಗದು”

“ಅಹುದು ನೋಡು ನಿರಮಕ್ಕಾ, ಹೊರಗಿಂದ ಬಂದಕೂಡಲೆ ನಡುಮನೆ ಪಡಸಾಲೆಗಳ ಸ್ವಚ್ಛತೆಯನ್ನೂ ಅಲ್ಲಿ ವ್ಯವಸ್ಥೆಯಿಂದ ಇರಿಸಿದ ವಸ್ತುಗಳನ್ನೂ ನೋಡಿದ ಕೂಡಲೆ ಮತ್ತೊಬ್ಬರಾರದೋ ಮನೆಗೆ ಬಂದಂತೆ ನನಗೆ ಭಾಸವಾಯಿತು. ಮಲ್ಲ….. ಮಗನಿಗೇನು ಬೇನೆ? ನೀನು ಇಂದು ಉಡುಗಿ ಸ್ವಚ್ಚ ಮಾಡಿದಂತೆ ಮಾಡಬಾರದೇಕೆ ? ನಾಳಿಗೆ ಅವನ ಟೊಂಕವನ್ನೇ ಮುರಿಯುತ್ತೇನೆ” ಎಂದು ಪದ್ಮನಾಭನಂದನು.

“ಆಳುಮಗನ ಕಡೆಗೇನು ಇದೆ ? ನಿಂತು ಕೆಲಸ ಮಾಡಿಸಿಕೊಳ್ಳಬೇಕು, ಬಂಡಿಯನ್ನು ಹೊಡೆಯುವವನು ತೂಕಡಿಸಿದರೆ ಎತ್ತುಗಳು ಅಲ್ಲಿಯೇ ನಿಲ್ಲುವವು.”

ಸ್ನಾನವಾದ ಬಳಿಕ ಪದ್ಮನಾಭರಾಯನು ಊಟಕ್ಕೆ ಕುಳಿತನು, ಬೇಳೆ ಚನ್ನಾಗಿ ಬೇಯದೆ ಇದ್ದುದರಿಂದ ಸಾರು ತವ್ವಿಗಳು ಕೂಡಿಯೇ ಕೆಟ್ಟು ಹೋಗಿದ್ದವು. ಹಿಟ್ಟು ಸಾಣಿಸಿದ್ದಿಲ್ಲವಾದ್ದರಿಂದ ರೊಟ್ಟಿಯಾದರೂ ಚನ್ನಾಗಿ ಆಗಿದ್ದಿಲ್ಲ.

“ಬಾಳವ್ವಾ, ಏನು ಅಡಿಗೆ ಮಾಡಿರುವೆ! ಒಂದಾದರೂ ಪದಾರ್ಥವು ಬಾಯಿಯಲ್ಲಿ ಹಾಕಿಕೊಳ್ಳುವಂತೆ ಇದೆಯೇ?” ಎಂದು ವಕೀಲರು ಕೇಳಿದರು.

“ಬಂದಹಾಗೆ ಮಾಡುತ್ತೇನೆ, ಮಂದೀಮನೆಯಲ್ಲಿ ಯಾರೇನು ಬೊಟ್ಟು ಮುರಿದುಹಾಕಿ ರುಚಿಕರವಾದ ಅಡಿಗೆ ಮಾಡುತ್ತಾರೆಯೇ? ದಿನಾಲು ಹೀಗೆ ಅನ್ನಿಸಿಕೊಂಡು ನಾನು ನಿಮ್ಮ ಮನೆಯಲ್ಲಿ ಹೇಗೆ ಇರಬೇಕು ಹೇಳಿರಿ.”

ಪದ್ಮನಾಭರಾಯನಿಗೆ ಅಡಿಗೆಯವಳ ಮಾತು ಕೇಳಿ ಒಳಿತಾಗಿ ಕೋಪ ಬಂದಿತು. ಆದರೆ ನಿರ್ಮಲಾಬಾಯಿಯು “ಅಹುದು ಬಾಳವ್ವಾ, ನಿನ್ನ ಕಡೆಗೆ ಏನಿದೆ? ಬಂದಹಾಗೆಯೇ ಅಡಿಗೆ ಮಾಡುವದು ಸರಿ, ಇಲ್ಲದ ಜಾಣತನವನ್ನು ಎಲ್ಲಿಂದ ತರಬೇಕು? ಪದ್ಮನಾಭ, ನಾಳಿನಿಂದ ನಾನೂ ಅಡಿಗೆಗೆ ನೆರವಾಗುವೆನು” ಎಂದು ಮಾತಾಡಿ ಆಗಿನ ಪ್ರಸಂಗವನ್ನು ನೀಗಿಸಿ ಕೊಂಡುಹೋದಳು.

ಯಮುನಾಬಾಯಿಯು ಒಂದು ತಾಟು ತಂದು ರಂಗನ ಪಥ್ಯಕ್ಕಾಗಿ ಬಾಳವ್ವಗೆ ಬಡಿಸಹೇಳಿದಳು. ನಿರ್ಮಲಾ ಬಾಯಿಯು ಅವರ ಉದ್ಯೋಗವನ್ನು ತಡೆದು, “ಯಮುನಾಬಾಯಿ, ರಂಗನಿಗೆ ಈಗಲೇ ಪಥ್ಯ ಬೇಡ. ಹುಡುಗನ ಹೊಟ್ಟೆ ತುಸು ಹಸಿಯಲಿ. ಹಿಂದಿನಿಂದ ನಾನೇ ಅವನಿಗೆ ಬೇರೆ ಪಥ್ಯವನ್ನು ಮಾಡಿ ಹಾಕುವೆನು” ಎಂದು ಹೇಳಿದಳು.

ಸಣ್ಣಕ್ಕಿಯನ್ನು ಗಿಳಿಲಿನಲ್ಲಿ ಹಣ್ಣಾಗಿ ಬೇಯಿಸಿ ರುಚಿಕರವಾದ ಮೆಣಸಿನ ಸಾರು ಮಾಡಿ, ನಿರ್ಮಲಾಬಾಯಿಯು ರಂಗನನ್ನು ಎಬ್ಬಿಸಿ ಅವನ ಬಾಯಿಯನ್ನು ಸ್ವಚ್ಛವಾಗಿ ತೊಳೆದು ಪಥ್ಯಕ್ಕೆ ಕೂಡಿಸಿದಳು. ಆ ಸಾರು ಅನ್ನವನ್ನು ಅಲ್ಲದ ಚಟ್ಟಣಿಯನ್ನು ಬಾಡಿಸಿಕೊಳ್ಳುತ್ತೆ ರಂಗನು ಸಂತೋಷದಿಂದ ಕುಳಿತು ಹೋದಷ್ಟು ತಿಂದನು. “ಆತ್ಯಾ, ಜ್ವರ ಹೇಗೇ ಇರಲಿ, ಇಂದಿನ ದಿವಸ ನನ್ನ ಜೀವಕ್ಕೆ ಎಷ್ಟೋ ಸೊಗಸಾಗಿದೆ. ಆ ಕತ್ತಲೆಯ ಕೋಣೆ, ಅಲ್ಲಿಯ ಕಸ, ಬಾಳವ್ವನ ಅನ್ನ ಮುಂತಾದವುಗಳಿಗಾಗಿ ಮನಸ್ಸಿಗೆ ಹೇಸಿಕೆ ಬರುತ್ತಿತ್ತು. ಇನ್ನು ದಿನಾ ನೀನೇ ಪಥ್ಯ ಮಾಡಿ ಹಾಕಬಾರದೆ?” ಎಂದು ರಂಗನು ಕೇಳಿದನು.

“ಯಾರು ಬೇಡೆನ್ನುವರು ? ನಾನು ಬಂದದ್ದೇ ನಿನ್ನ ಸಲುವಾಗಿ,” ಎಂದು ನಿರ್ಮಲಾ ಬಾಯಿಯು ಪ್ರೇಮದಿಂದ ನುಡಿದು “ಲಲಿತಾ, ಆ ಪಂಚೆಯನ್ನು ತಂದುಕೊಡು, ರಂಗಣ್ಣನು ಕೈ ಒರಿಸಿಕೊಳ್ಳಲಿ” ಎಂದು ಆಜ್ಞಾಪಿಸಿದಳು. ಲಲಿತಾಗೌರಿಯು ಉಣ್ಣೆಯ ಎಳೆಯಿಂದ ಕಾಲುಚೀಲವನ್ನು ಹೆಣೆಯುತ್ತೆ ಕುಳಿತವಳು ಚಟ್ಟನೆ ಎದ್ದು ರಂಗನಿಗೆ ಪಂಚೆಯನ್ನು ತಂದುಕೊಟ್ಟಳು.

“ಎಷ್ಟೆತ್ತರವಾಗಿದ್ದಾಳೆ ಲಲಿತಾ!” ಎಂದು ರಂಗನು ಕೈ ಒರಸಿಕೊಂಡು ದಿಂಬಕ್ಕೆ ಆತುಕೊಂಡು ಕುಳಿತು ಉದ್ಗಾರ ತೆಗೆದನು.

“ಅವಳಿಗೆ ವರ್ಷಗಳೇನು ಕಡಿಮೆಯಾಗಿವೆಯೇ ? ಹನ್ನೆರಡು ವರ್ಷ ಮೊನ್ನಿನ ವೈಶಾಖಕ್ಕೆ ತುಂಬಿದವು, ಎತ್ತರವಾಗದೇನು ಮಾಡುವಳು?” ಎಂದು ನಿರ್ಮಲಾಬಾಯಿಯು ಮಗಳ ಸುಂದರವಾದ ಮುಖವನ್ನು ನೋಡಿ ಸಂತೋಷದಿಂದ ನಕ್ಕು ನುಡಿದಳು.

ಲಲಿತೆಯು ಈ ಮಾತು ಕೇಳಿ ತುಸು ಮಂದಹಾಸಗೈದರೂ ಲಜ್ಜೆಯಿಂದ ಅವಳ ಗೌರವರ್ಣದ ಮುಖವು ಕೆಂಪಗಾಯಿತು. ಅಂಥ ಚಿಕ್ಕ ಬಾಲಿಕೆಗೆ ನಾಚಿಕೆಯೇತರದು? ಸ್ತ್ರೀಜಾತಿ! ಮತ್ತಿನ್ನೇನು?

“ಸಾಲೆಗೆ ಹೋಗುತ್ತಾಳೆನು ಈಕೆ, ಅತ್ಯಾ?” ಎಂದು ರಂಗನು ಮಾತಾಡಲು ತ್ರಾಣಬಂದವನಾಗಿ ಕೇಳಿದನು.

“ಹೋಗುತ್ತಾಳೆ. ಮೊನ್ನೆ ನಾಲ್ಕನೆಯ ಇಯತ್ತೆಯಲ್ಲಿ ಪಾಸಾಗಿರುವಳು.”

“ಲಲಿತಾ, ನಿಮ್ಮ ಸಾಲೆಯಲ್ಲಿ ಹಾಡು ಕಲಿಸುತ್ತಾರೇನು?” ಎಂದು ರಂಗನು ನಗಲಿಕ್ಕೆ ಬಂದಷ್ಟು ನಕ್ಕು ಕೇಳಿದನು.

“ಸಾಲೆಯಲ್ಲಿ ಕಲಿಸುವದು ಕವಿತೆಯೇ, ಮನೆಯಲ್ಲಿ ನಮ್ಮ ಅತ್ತಿಗೆ – ರಮಾಭಾಯಿಯ ಕೈಯಿಂದ ಕೆಲವು ಹಾಡು ಹೇಳಿಸಿಕೊಂಡಿದ್ದೇನೆ.”

“ರಂಗಾ, ಇವಳು ಸ್ಥಾಲೀಪಾಕದ ಜಾಡು ಚನ್ನಾಗಿ ಹಾಡುತ್ತಾಳೆ. ಅನ್ನು ಲಲಿತಕ್ಕಾ.” ಎಂದು ಲಲಿತೆಯ ತಾಯಿಯು ಹೇಳಿದಳು.

“ಲಲಿತಾಗೌರಿಯು ಅತ್ತಿತ್ತ ತುಸು ನಾಚಿದ ಹಾಗೆ ಮಾಡಿ, ಕಡೆಗೆ ತಾಯಿಯ ಆಗ್ರಹಕ್ಕಾಗಿ ಹಾಡಿದಳು. ಹೆಣ್ಣು ಮಕ್ಕಳ ಸ್ವರವೇ ಸ್ವಭಾವತಃ ಮಧುರವಾದದ್ದು. ಅದರಲ್ಲಿ ಲಲಿತೆಯು ಕೊಂಚ ಪರಿಶ್ರಮಮಾಡಿ ಕಲಿತಿದ್ದಳಾದ್ದರಿಂದ ಅವಳು ಹಾಡಿದಳೆನ್ನುವದಕ್ಕಿಂತ ಗಾನ ಮಾಡಿದಳೇ ಎಂದು ಹೇಳಬಹುದಾಗಿತ್ತು. ರಂಗನು ತನ್ನ ಬೇನೆಯನ್ನು ಮರೆತು ಉತ್ಸುಕನಾಗಿ ಕೇಳುತ್ತಿದ್ದನು. ಅವನು ಮಧ್ಯದಲ್ಲಿಯೇ ಲಲಿತೆಯನ್ನು ತಡೆದು “ಕೇಳವ್ವಾ ಅತ್ಯಾ! ದ್ರೋಪತಿಯು ಅಂತೆ!” ಎಂದು ನುಡಿದು ನಕ್ಕನು.

“ಮತ್ತಿನ್ನು ಹೇಗೆ ಅನ್ನಬೇಕು?” ಎಂದು ಲಲಿತೆಯು ತನ್ನ ಸುಲಲಿತವಾದ ಮುಖದಲ್ಲಿ ಎಳೆನಗೆಯನ್ನು ತಳೆದು ಕೇಳಿದಳು.

“ದೌಪದಿಯು” ಎಂದು ಹಾಡಿದಂತೆ ಮಾಡಿ ರಂಗನು ಹೇಳಿದನು.

ಮರುದಿವಸ ಮುಂಜಾನೆ ಆರು ಗಂಟೆಯ ಸಮಯಕ್ಕೆ ನಿರ್ಮಲಾ ಬಾಯಿಯ ಪದ್ಮನಾಭರಾಯನನ್ನು ಮಲಗಿದವನನ್ನು ಎಬ್ಬಿಸಿದಳು. “ಅಕ್ಕಾ, ಸಕ್ಕರೆಯ ನಿದ್ದೆಯ ಹೊತ್ತಿನಲ್ಲಿ ನಿನ್ನ ದೇನು ಕಾಟ ಮತ್ತೆ!” ಎಂದು ತಮ್ಮನು, ಮುಸುಕಿನಲ್ಲಿ ಕೂಗಿ ನುಡಿದನು. “ಏಳಬಾರದೆ! ರಾತ್ರಿಯಲ್ಲಿ ನೀನು ಜಾಗರಣೆಯನ್ನು ಬೇರೆ ಮಾಡಿಲ್ಲವಷ್ಟೆ?” ಎಂದು ಅಕ್ಕನು ಸಿಟ್ಟು ಮಾಡಿದ್ದಕ್ಕೆ ವಕೀಲರು ಅನಿರ್ವಾಹಕ್ಕಾಗಿ ಎದ್ದು ಹೊರಗೆ ಬಂದರು.

ಪದ್ಮನಾಭರಾಯನು ಎದ್ದು ನೋಡುತ್ತಾನೆ, ಮನೆ ಉದುಗಿ ಕನ್ನಡಿಯಾಗಿದೆ. ರಂದೆಯು ಎಲ್ಲೆಲ್ಲಿಯೂ ಇಲ್ಲ, ಅದನ್ನು ನೋಡಿ ರಾಯರ ಮನಸ್ಸಿಗೆ ಉತ್ಸಾಹ ಬಂದಂತಾಗಿ ನಿದ್ದೆಯ ಜಾಡ್ಯವೆಲ್ಲ ಹೊರಟುಹೋಯಿತು. ಬಹಿರ್ದಿಶಕ್ಕೆ ಹೋಗಿಬರುವಾಗ ನೋಡುತ್ತಾರೆ, ಮನೆಯ ಸುತ್ತಲಿರುವ ಹೂದೋಟದ ಭಾಗವೆಲ್ಲ ಸ್ವಚ್ಛವಾಗಿ ಹೋಗಿತ್ತು. ಪದ್ಮನಾಭರಾಯನು ಮುಖ ತೊಳೆದುಕೊಳ್ಳಲಿಕ್ಕೆ ಬಚ್ಚಲಕ್ಕೆ ಬರಲು ಅಲ್ಲಿ ಸ್ನಾನದ ಸಿದ್ದತೆಯೇ ಆಗಿತ್ತು. ಬಚ್ಚಲಮನೆಯು ಕೂಡ ಲಕಲಕನೆ ಹೊಳೆಯುತ್ತಿತ್ತು. ನಿತ್ಯದಂತೆ ಅಲ್ಲಿ ಮುಸುರೆಯ ಪಾತ್ರೆಗಳನ್ನು ತೊಳೆಯಲು ಇಟ್ಟಿದ್ದಿಲ್ಲ. ರಾತ್ರಿಯಲ್ಲಿ ಉಂಡು ಕೈದೊಳೆದ ಅಗಳುಗಳಿದ್ದಿಲ್ಲ. ನೀರು ತೋಡಿದ ಗಂಗಾಳವು ಬಂಗಾರದಂತೆ ಹೊಳೆಯುತ್ತಿತ್ತು. ಎಣ್ಣೆಯ ಬಟ್ಟಲು ಸಾಬೂನುಗಳು ಅಲ್ಲಿಯೇ ಸಿದ್ದ. ಸ್ನಾನ ಮಾಡುತ್ತೆ ಪದ್ಮನಾಭನು “ಅಕ್ಕಾ, ನಮ್ಮ ಬಚ್ಚಲಮೋರಿಯ ಹೊರಗಿರುವ ಕುಣಿಯಲ್ಲಿ ಶಾವಿಪಲ್ಲೆ ಇತ್ತು, ಅದನ್ಯಾರು ಕಿತ್ತುಹಾಕಿದರು?” ಎಂದು ಕೇಳಿದನು.

“ಬುದ್ದಿವಂತನಿರುವಿ, ಮನೆಯ ಸಮೀಪದಲ್ಲಿಯೇ ಕೊಳಚೆ ನೀರಿನ ಕುಂಡವಿರಬೇಕೆ? ಮೂರು ಕಾಸಿನ ಪಲ್ಲೆಯಾಗಲಿಕ್ಕಿಲ್ಲ, ಅದಕ್ಕಾಗಿ ಮನೆ ತುಂಬ ಕುದುರೇಮೋತಿಯ ಹುಳಗಳ ಉಪದ್ರವವೆಷ್ಟು? ನಿನ್ನೆ ಮಧ್ಯಾಹ್ನದಿಂದ ಎರಡು ಆಳು ಹಚ್ಚಿ ನೀರಿನ ಕುಣಿಗಳನ್ನೂ, ಕಸದ ರಾಶಿಗಳನ್ನೂ ಹಾರಾಡುತ್ತಿರುವ ಎಂಜಲೆಲೆಗಳನ್ನೂ ತೆಗೆಸಿ ಹಾಕಿ ಉಡುಗಿಸಿಬಿಟ್ಟಿರುವೆನು” ಎಂದು ನಿರ್ಮಲಾಬಾಯಿಯು ನುಡಿದಳು.

“ನಮ್ಮ ಯಜಮಾನರ (ಹೆಂಡತಿಯ) ಕೆಲಸವಿದು! ಹೇಳಿ ಹೇಳಿ ಬೇಸತ್ತು ಹೋದೆನು!”

“ಅಶಕ್ತಳವಳು, ಏನು ಮಾಡಬಲ್ಲಳು? ನಿನಗೇಕೆ ತಿಳಿಯಬಾರದು? ಎಂದು ಆಕ್ಕನು ಯಮುನಾಬಾಯಿಯ ಪಕ್ಷ ಪಾತವನ್ನು ಕಟ್ಟಿ ಮಾತಾಡಿದಳು.

“ಕೇಳಿರಿ, ಅತ್ತಿಗೆಯವರೆ, ಹೊಲೆಯರಂತೆ ನಾನಿನ್ನು ತಿಪ್ಪೇ ಉಡುಗುವದೊಂದು ಮಾತ್ರ ಉಳಿದಿದೆ!” ಎಂದು ಯಮುನಾಬಾಯಿಯು ಎರಡು ದಿನ ಹಣಿಗೆ ಮುಟ್ಟದಿರುವ ತನ್ನ ತಲೆಯನ್ನು ಉಗುರಿಸಿಕೊಳ್ಳುತ್ತೆ ಗಂಡನ ಮೇಲೆ ಸಿಟ್ಟಾಗಿ ನುಡಿದಳು.

ಪದ್ಮನಾಭದಾಯನು ಸ್ಥಾ ನ ತೀರಿಸಿಕೊಂಡು ನಾಮ ಮುದ್ರೆಗಳನ್ನು ಧರಿಸಿ ಅರ್ಘ್ಯ ಪ್ರದಾನವನ್ನು ಮಾಡಿ ನಡುಮನೆಗೆ ಬಂದನು. ಅಲ್ಲಿ ಲಲಿತೆಯು ತನ್ನ ಸೋದರಮಾವನಿಗಾಗಿ ಒಂದು ಮಣೆ ಹಾಕಿಟ್ಟು ಎಲೆಯಲ್ಲಿ ಬಿಸಿಬಿಸಿಯಾದ ಸಜ್ಜಿಗೆಯನ್ನು ಬಡಿಸಿದಳು. ವರ್ತುಲಾಕಾರವಾಗಿದ್ದ ಚಿತ್ರಮಯವಾದ ರಂಗವಲ್ಲಿಯ ಮಧ್ಯದಲ್ಲಿ ಚಹ ತುಂಬಿದ ಚೀನೀ ಪಾತ್ರೆಯು ಮೆರೆಯುತ್ತಿತ್ತು. ಎಲ್ಲಿಯೋ ಮೂಲೆಗೆ ಬಿದ್ದು ಹೋಗಿರುವ ಎರಡು ಚೀನೀ ಹೂಜಿಗಳನ್ನು ಬೆಳಗಿ ಅವುಗಳಲ್ಲಿ ಹೂವಿನ ಟೊಂಗೆಗಳನ್ನೂ ಪಲ್ಲವಗಳನ್ನೂ ಇರಿಸಿ ಆ ಹೂಜಿಗಳೆರಡನ್ನೂ ರಂಗವಲ್ಲಿಯ ವರ್ತುಲದ ಎರಡು ಪಾರ್ಶ್ವಗಳಲ್ಲಿ ಒಳ್ಳೆ ಚಿತ್ತವೇಧಕವಾಗಿ ಕಾಣುವಂತೆ ಲಲಿತೆಯು ಇರಿಸಿದ್ದಳು.

“ಅಬ್ಬಬಬ! ಇದೇನಾ ಸಾಹೇಬರ ಮನೆಯಾಯಿತು ಬಿಡು ಲಲಿತಾ!” ಎಂದು ಪದ್ಮನಾಭರಾಯನು ಸಂತೋಷಭರಿತನಾಗಿ ಉಪಹಾರಕ್ಕೆ ಕುಳಿತನು. ಇದೆಲ್ಲ ಸಮಾರಂಭವನ್ನು ರಂಗನು ತನ್ನ ಕೋಣೆಯಲ್ಲಿ ಹಾಸಿಗೆಯ ಮೇಲೆ ಕುಳಿತು ನೋಡುತ್ತಿದ್ದನು. ಅವನಿಗೂ ಉತ್ಸಾಹ ಬಂದಂತಾಗಿ “ಅಪ್ಪಾ, ನಾನೂ ಹೊರಗೆ ಬಂದು ಚಹ ತಕ್ಕೊಳ್ಳಲೇನು?” ಎಂದು ತಂದೆಯನ್ನು ಕೇಳಿದನು.

“ಅವಶ್ಯ ಬಾ. ಅಕ್ಕಾ, ನೀನೂ ಲಲಿತೆಯೂ ಕೂಡಿ ಅವನನ್ನು ಕೈ ಹಿಡಿದು ಕರಕೊಂಡು ಬನ್ನಿರಿ.” ಎಂದು ಪದ್ಮನಾಭರಾಯನು ಹೇಳಿದನು.

ಏಳು ಬಡಿಯುವದರೊಳಗಾಗಿಯೇ ಪದ್ಮನಾಭರಾಯನು ತನ್ನ ಕಚೇರಿಯ ಕೋಣೆಗೆ ಬಂದನು. (ನಿತ್ಯದಲ್ಲಿ ಅವನು ಆ ಕೋಣೆಗೆ ಒಂಬತ್ತು ಗಂಟೆಗೆ ಬರುತ್ತಿದ್ದನು.) ಕಾಳಪ್ಪ ಕಾರಕೂನನು ಆ ದಿವಸ ನಡೆಯುವ ಮುಕದ್ದಮೆಯ [ಪ್ರಕರಣಗಳ] ಕಾಗದಗಳನ್ನು ಒಂದು ಪುಷ್ಟಿಪತ್ರದಲ್ಲಿ ನಿನ್ನೆಯೇ ಹಾಕಿಟ್ಟು ಹೋಗಿದ್ದನು. ರಾಯರು ಆ ಪ್ರಕರಣಗಳನ್ನೋದಿ ಮನನ ಮಾಡಿಕೊಂಡು ಸಮಾಧಾನವಾದ ಮನಸ್ಸುಳ್ಳವರಾದರು. ಪಕ್ಷಕಾರರು ತಮ್ಮ ಬರುವ ಸಮಯಕ್ಕೆ ಬಂದು ವಕೀಲರು ಎದ್ದಿರುವದನ್ನು ಕಂಡು “ಇಂದೇನು ನಮ್ಮ ಅದೃಷ್ಟವು ಚನ್ನಾಗಿಯೇ ಇರುವದೆನ್ನಬೇಕು. ವಕೀಲರು ಎದ್ದು ಸಿದ್ದರಾಗಿ ಕುಳಿತಿದ್ದಾರೆ” ಎಂದು ಸಂತೋಷದಿಂದ ಅವರಿಗೆ ಪ್ರಣಾಮಮಾಡಿ ಕುಳಿತುಕೊಂಡರು. ಅಂದರೆ! ಇನಾಮು ಪತ್ರ ಬರಿಸಿಕೊಂಡ ಬಳಿಕ ಮಲಗಿಕೊಂಡರೆ ಹೇಗಾದೀತು? ಇನ್ನೂರು ರುಪಾಯಿ ಸಿದ್ಧ ಮಾಡಿರುವಿರಾ? ಇಂದು ತೀರ್ಪು ನಿಮ್ಮಂತೆಯೇ ಆಗುವದು” ಎಂದು ವಕೀಲರು ಪ್ರಸನ್ನ ಮನಸ್ಸಿನವರಾಗಿ ಹೇಳಿದರು.

ಅಂದು ಮಧ್ಯಾಹ್ನದ ಭೋಜನವು ಸರಿಯಾಗಿ ಹತ್ತು ಘಂಟೆಗೆ ಸಿದ್ದವಾಗಿತ್ತು. ವ್ಯವಸ್ಥೆಯಲ್ಲಿ ಎಲ್ಲೆಲ್ಲಿಯೂ ಬಿಟ್ಟಿ ಬೇಸರಿಕೆ ಕಾಣಲಿಲ್ಲ. ನಿರ್ಮಲವಾಗಿ ಉಡುಗಿದ ಭೋಜನ ಶಾಲೆ, ಕನ್ನಡಿಯಂತೆ ಹೊಳೆಯುತ್ತಿರುವ ಹರಿವಾಣ ಬಟ್ಟಲುಗಳು; ಓರಣವಾಗಿ ಬಡಿಸಿದ ಪಲ್ಲೆ ಚಟ್ಟಣಿ ಉಪ್ಪಿನಕಾಯಿಗಳು; ಘಮಘಮಿಸುವ ಶುಭ್ರವಾದ ಅನ್ನದ ಮೇಲೆ ಸುವರ್ಣ ರಸದಂತೆ ಆಲ್ಹಾದಕರವಾದ ತವ್ವಿಯು ! ಈ ಪರಿಷ್ಕಾರವನ್ನೆಲ್ಲ ಕಂಡು ಪದ್ಮನಾಭರಾಯನ ಮನಸ್ಸಿಗೆ ಒಂದು ಪ್ರಕಾರದ ಉತ್ಸಾಹ ಬಂದಂತಾಗಿ ಅವನೊಳ್ಳೇ ಹುರುಪಿನಿಂದ ಭೋಜನಕ್ಕೆ ಪ್ರಾರಂಭಮಾಡಿದನು. ಅಡಿಗೆಯವಳು ಮಾಡತಕ್ಕ ಕೆಲಸದ ಅರ್ಧವನ್ನು ನಿರ್ಮಲಾಬಾಯಿಯೇ ಮಾಡಿದ್ದರಿಂದ ಸಿಡಿ ಪಿಡಿ ಮಾಡಲಿಕ್ಕೆ ಅವಳಿಗೆ ಆಸ್ಪದವಿಲ್ಲದ್ದಕ್ಕಾಗಿ ಅವಳು ವಿನೀತಳಾಗಿ ಮನಮುಟ್ಟಿ ಕೆಲಸ ಮಾಡುತ್ತಿದ್ದಳು.

ಎಲ್ಲಿಯ ನೀರಿದು ಅಕ್ಕಾ?” ಎಂದು ಪದ್ಮನಾಭರಾಯನು ಸ್ವಚ್ಛವಾಗಿರುವ ಬೆಳ್ಳಿಯ ಪಂಚಪಾತ್ರದಲ್ಲಿಯ ನಿರ್ಮಲವಾಗಿರುವ ನೀರು ಕುಡಿದು ಕೇಳಿದನು.

“ಅಪ್ಪಾ ಸಾಹೇಬರ ತೋಟದ ಬಾವಿಯ ನೀರು ಬಹು ಪಾಚಕವಾಗಿರುವವೆಂದು ಎಲ್ಲರೂ ಹೊಗಳುತ್ತಿರುವದರಿಂದ ನಾನೇ ಒಂದು ಕೊಡ ತುಂಬಿಕೊಂಡು ಬಂದೆನು” ಎಂದು ನಿರ್ಮಲಾಬಾಯಿಯು ಹೇಳಿದಳು.

“ಯಾಕೆ ಆಕ್ಕಾ, ನಿನಗೆ ದುಡಿಯುವ ಉಬ್ಬು ಹೆಚ್ಚಾಗಿರುವದೇನು? ನಮ್ಮ ಬಾವಿಯ ನೀರಿಗಾದರೂ ಏನಾಗಿದೆ?”

“ನಿನ್ನ ಪುಷ್ಪ ಕರಂಡಕ ಜೀರ್ಣೋದ್ಯಾನದಲ್ಲಿಯ ಕೂಪದಲ್ಲಿ ತೊಪ್ಪಲಗಳ ಗೇಣುದಪ್ಪ ತೆಪ್ಪವು ತೇಲಾಡುತ್ತದೆ. ಸುತ್ತಲಿನ ಗೋಡೆಯಲ್ಲಿ ಬಿದ್ದು ಹೋಗಿದ್ದರಿಂದ ಹೊರಗಿನ ನೀರೆಲ್ಲ ಬಳಿದು ಬಾವಿಗೇ ಬರುತ್ತದೆ. ಸಮೀಪದಲ್ಲಿಯೇ ಇದ್ದ ತೆಗ್ಗಿನಲ್ಲಿ ನಿಂತ ಮಲೆತ ನೀರು ಇಂಗಿ ಬಾವಿಯಲ್ಲಿ ಸೇರಿಕೊಳ್ಳುತ್ತದೆ. ಅಂಥ ಕೆಟ್ಟ ನೀರು ಕುಡಿದೇ ನಮ್ಮ ರಂಗನು ಬೇನೆಯನ್ನು ಕರಕೊಂಡನು.”

“ವೈದ್ಯಕ ಪಾಠಶಾಲೆಯಲ್ಲಿ ನೀವು ವ್ಯಾಸಂಗ ಮಾಡಿರುವಿರೇನು ಡಾಕ್ಟರ ಅಕ್ಕಾಸಾಹೇಬ?” ಎಂದು ತಮ್ಮನು ನಗೆಯಾಡುತ್ತೆ ಕೇಳಿದನು.

“ಮೂಢರಿಗೆ ಕೂಡ ತಿಳಿಯುವಂಥ ಸರ್ವಸಾಧಾರಣವಾದ ಮಾತಿಗೆ ಡಾಕ್ಟರನೇಕೆ ಬೇಕು ಪದ್ಮನಾಭ? ಮೈಯಲ್ಲಿ ಆಲಸ್ಯವು ಛೇದಿಸಿತೆಂದರೆ ಮನುಷ್ಯನು ಮುಗ್ಗಲಗೇಡಿಯಾಗಿ ಅವನಿಗೆ ಸ್ವಚ್ಛತೆಯು ತಿಳಿಯದಂತಾಗುತ್ತದೆ.”

ಪದ್ಮನಾಭನು ಸಾರು ಸುರಿದು “ಕ್ಯಾಬತ್ ಹೈ! ಬಾಳವ್ವಾ ಸಾರು ಚನ್ನಾಗಿ ಮಾಡಿರುವಿ” ಎಂದು ಅಡಿಗೆಯವಳ ಸ್ತುತಿಮಾಡಿದನು.

“ನಾನೇನು ಮಾಡಿದ್ದೇನೆ? ಚಂದಕ್ಕೆ ಒಲೆಯ ಮುಂದೆ ಕುಳಿತದ್ದು ಮಾತ್ರ ಸರಿ, ಮಾಡಿದವರು ನಿರ್ಮಲಾ ಬಾಯಿಯವರು” ಎಂದು ಬಾಳವ್ವನು ಹೇಳಿದಳು.

“ಅಕ್ಕಾ, ಎಲ್ಲ ಕೆಲಸಗಳಲ್ಲಿ ನಿನ್ನದೇ ಕೈಯಾಗಿದ್ದರೆ ನಿನಗೆ ಕೈಗಳಾದರೂ ಎಷ್ಟಿರುವವು? ನೀನು ಸಹಸ್ರಭುಜಾದೇವಿಯೆಂದು ತಿಳಿದರೂ ಇಷ್ಟೆಲ್ಲ ಮಾಡಲಿಕ್ಕೆ ಸಮಯವಾದರೂ ದೊರೆತದ್ದು ಹೇಗೆ?” ಎಂದು ಅಕ್ಕನ ಕಾರ್ಯದಕ್ಷತೆ ಎದ್ದು ಕಂಡು ಬೆರಗಾಗಿ ಪದ್ಮನಾಭರಾಯನು ಕೇಳಿದನು.

“ಹಾಗೆಯೇ ನೋಡುತ್ತ ಕುಳಿತರೆ ಕೆಲಸವು ಎದೆಯಮೇಲಿರಿಸಿದ ಗುಡ್ಡದಂತೆ ಕಾಣುವದು ಸರಿ. ಆದರೆ ಜಾಣ್ಮೆಯಿಂದ ಮಾಡುವವರಿಗೆ ಅದರ ಭಾರವೆಷ್ಟು ಮಾತ್ರವೂ ತೋರದು, ನೀನೇ ಹೇಳು : ಇಪ್ಪತ್ತು ಮೂವತ್ತು ಹಾಳಿ ಕಾಗದ ತುಂಬ ವಿಶ್ರಾಂತಿಯಿಲ್ಲದೆ ಹೇಗೆ ಬರೆಯುವಿ? ಅಕ್ಷರಗಳನ್ನೆಣಿಸುತ್ತೆ ಬರೆದರೆ ಕೆಲಸವಾಗುವದೇ?”

ಈ ಮಾತುಗಳನ್ನು ಯಮುನಾಬಾಯೂ, ಲಲಿತಾಗೌರಿಯೂ, ಅಡಿಗೆಯವಳೂ ಏಕಚಿತ್ತರಾಗಿ ಬೆರಗಾಗಿ ಕೇಳಿ ನಿರ್ಮಲಾಬಾಯಿಯನ್ನು ಮನಸ್ಸಿನಲ್ಲಿಯೇ ಕೊಂಡಾಡಿದರು. ಆಲಸ್ಯತನವನ್ನೂ ಮೈಗಳ್ಳತನವನ್ನೂ ತುಳಿದುಹಾಕಬೇಕೆಂದು ಅವರು ತಮ್ಮ ತಮ್ಮೊಳಗೆ ನಿಶ್ಚಯಿಸಿಕೊಂಡರು.

ಕಡೆಯ ಅನ್ನವು ಬಡಿಸಿತು, ಯಮುನಾಬಾಯಿಯು ಬೆಳಗಿದ ಪಾತ್ರೆಯಲ್ಲಿರುವ ಕೆನೆಮೊಸರನ್ನು ಲಕಲಕನೆ ಹೊಳೆಯುವ ಸೌಟಿನಲ್ಲಿ ತೆಗೆದುಕೊಂಡು ಗಂಡನಿಗೆ ಬಡಿಸಿದಳು, ಕೆಲಸ ಕಡಿಮೆಯಾಗಿದ್ದರಿಂದ ಅವಳ ಅಶಕ್ತವಾದ ಪ್ರಕೃತಿಯು ಎರಡೇ ದಿವಸಗಳಲ್ಲಿ ಗುಣವನ್ನು ಹೊಂದುತ್ತೆ ಬಂದಿತ್ತು. ಮನೆಯಲ್ಲಿ ಎತ್ತ ನೋಡಿದತ್ತ ಓರಣ, ಎತ್ತ ನೋಡಿದತ್ತ ಸುವ್ಯವಸ್ಥೆಗಳು ಮೆರೆಯುತ್ತಿರುವದನ್ನು ಕಂಡು ಅವಳ ಮನಸ್ಸಿಗೂ ಉಲ್ಲಾಸವಾಗಿತ್ತು. ಅವಳು ತೀಡಿ ಉಟ್ಟಿರುವ ಒಗೆದ ಸೀರೆಯು ಝಗ ಝಗಿಸುತ್ತಿತ್ತು. ಚೌರಿ ರಾಗಟಿ ಹೂತುಲಸಿಗಳಿಂದ ಅಲಂಕೃತವಾದ ಅವಳ ಕೇಶಕಲಾಪವು ನುಣುಪಾಗಿ ಹೊಳೆಯುತ್ತಿತ್ತು, ಹರಡಿ ಕಂಕಣಯುಕ್ತವಾದ ಕೈಗಳಿಂದ ಮೊಸರು ಬಡಿಸಲು ಬಂದಿರುವ ಹೆಂಡತಿಯ ಸೊಬಗನ್ನು ಕಂಡು ಪದ್ಮನಾಭರಾಯನು ವಿನೋದದಿಂದ “ಓಹೋ! ರಾಣಿ ಸರಕಾರ, ಇಂದು ನೀವು ಸ್ವರ್ಗಲೋಕದಿಂದ ಇಳಿದುಬಂದಂತೆ ಕಾಣುತ್ತಿರಲ್ಲ!” ಎಂದು ನುಡಿದು ನಕ್ಕನು. ಈ ಗೌರವದ ಸತ್ಕಾರವು ಯಮುನಾಬಾಯಿಗೂ ರುಚಿಸಿ ಮಂದಹಾಸವನ್ನು ತಳೆದು ಅಂದದ್ದು:

“ಮುದುಕರಾದ ಹಾಗೆ ಹುಚ್ಚು ಹೆಚ್ಚಾಯಿತು!”

“ಮನಕ್ಕೆ ಉತ್ಸಾಹವಿಲ್ಲದವರು ಬೇಕಾದರೆ ಮುದುಕರಾಗಲಿ! ನಾನೇಕೆ ಮುದುಕನು? ಒಯ್ಯಾರದಿಂದ ನಿಂತವಳಾದ ನೀನಾದರೂ ಮುದುಕೆಯಲ್ಲ ಕಂಡಿಯಾ!” ಎಂದು ಪದ್ಮನಾಭರಾಯನು ಉಲ್ಲಾಸದಿಂದ ನಕ್ಕನು.

“ಪದ್ಮನಾಭ, ನೀನೂ ಮುದುಕನಲ್ಲ ಈಕೆಯ ಮುದುಕೆಯಲ್ಲ. ಯಾವ ದೊಡ್ಡ ದಿವಸಗಳಾಗಿವೆಯೆಂದು ನೀವು ಮುದುಕರಾದಿರಿ?” ಎಂದು ನಿರ್ಮಲಾಬಾಯಿಯು ಸಂತೋಷದಿಂದ ನುಡಿದಳು.

ಪದ್ಮನಾಭರಾಯನು ಆ ದಿವಸ ವೇಳೆಗೆ ಸರಿಯಾಗಿ ಕಚೇರಿಗೆ ಹೋದನು. ಅವನ ಪಕ್ಷಕಾರನ ಮುಕದ್ದಮೆಯ ಕೆಲಸವು ಒಳ್ಳೇ ವ್ಯವಸ್ಥಿತವಾಗಿ ನಡೆಯಿತು. ವಕೀಲರ ಚಿತ್ತ ವೃತ್ತಿಯು ಆನಂದವುಳ್ಳದ್ದಾಗಿಯೂ ಉತ್ಸಾಹಪೂರಿತವಾಗಿಯೂ ಇದ್ದದರಿಂದ ಅವರು ವಿರುದ್ದ ಪಕ್ಷದ ಸಾಕ್ಷಿಗಳನ್ನು ಚಲ್ಲಾಪಿಲ್ಲಿಯಾಗಿ ಮಾಡಿದರು. ತಮ್ಮ ವಾದದ ನಿರೂಪಣವನ್ನು ಅಸ್ಖಲಿತವಾದ ವಾಣಿಯಿಂದ ಸಪ್ರಮಾಣವಾಗಿಯೂ ಹೃದಯಂಗಮವಾಗಿಯೂ ಮಾಡುತ್ತಿರುವದನ್ನು ನ್ಯಾಯಾಧೀಶರೂ ವಕೀಲ ವರ್ಗದವರೂ ತಲ್ಲೀನರಾಗಿ ಕುಳಿತು ಕೇಳಿ “ಸಾಧು ಸಾಧು!” ಎಂದು ಉದಾರ ತೆಗೆದರು. ತೀರ್ಪು ಪದ್ಮನಾಭರಾಯನಂತೆ ಆದ್ದರಿಂದ ಆ ದಿವಸ ಊರಲ್ಲೆಲ್ಲ ಅವರ ಖ್ಯಾತಿಯಾಯಿತು.

ತನ್ನ ಸೋದರತ್ತೆಯ ಅಂತಃಕರಣದ ಆರೈಕೆ ಉಪಚಾರಗಳಿಂದಲೂ, ಲಲಿತಾಗೌರಿಯು ಸುಲಲಿತವಾದ ಪದಪದ್ಯ ಹಾಸ್ಯ ವಿನೋದಗಳಿಂದಲೂ ರಂಗನ ಪ್ರಕೃತಿಯು ದಿನಕ್ಕೊಂದು ಚಂದವಾಗಿ ಸ್ವಸ್ಥವಾಗುತ್ತೆ ಬಂದಿತು. ಎಂಟು ದಿವಸಗಳಲ್ಲಿ ಅವನು ತನ್ನ ಹಾಸಿಗೆಯನ್ನು ಬಿಟ್ಟಿದ್ದು ಬೇಕಾದಹಾಗೆ ತಿರುಗಾಡಲಾರಂಭಿಸಿದನು. ಒಂದು ದಿವಸ ಅವನು ಮನೆಯ ಸುತ್ತಲಿರುವ ತೋಟದಲ್ಲಿ ಹೋಗಿ ಅನೇಕ ಪ್ರಕಾರದ ಹೂಗಳನ್ನು ತೆಗೆದುಕೊಂಡು ಬಂದು ಅತ್ತೆಯ ಮುಂದೆ ಸುರಿದು “ಅತ್ಯಾ, ಇಕೋ, ಎಷ್ಟು ಹೂಗಳನ್ನು ತಂದಿರುವೆನು ನೋಡು! ಲಲಿತಾಗೌರಿಗೆ ಇಂದು ಹೂವಿನ ಹೆರಳು ಹಾಕಬಾರದೆ?” ಎಂದು ಹೇಳಿದನು.

ಆ ಹೂಗಳ ಶೋಭೆಯನ್ನು ನೋಡಿ ಲಲಿತಾಗೌರಿಗೆ ಹೆರಳುಹಾಕಿಕೊಳ್ಳುವ ಅಪೇಕ್ಷೆಯಾದರೂ ನಾಚಿಕೆಯಿಂದ ಅವಳು ತಲೆಬಾಗಿಸಿ ಮೆಲ್ಲನೆ ನಕ್ಕಳು. ಹೆಣ್ಣು ಮಕ್ಕಳು ಉತ್ಸವಪ್ರಿಯರೆಂಬಂತೆ ರಂಗನ ತಾಯಿಯೂ ಅತ್ತೆಯೂ ಕೂಡಿ ಉಬ್ಬಿನಿಂದೆ ಲಲಿತಾಗೌರಿಗೆ ಹೂವಿನ ಹೆರಳು ಹಾಕತೊಡಗಿದರು.

ಅವರ ಬಳಿಯಲ್ಲಿಯೇ ಕುಳಿತು ಲಲಿತೆಯ ವೇಣೀಗ್ರಥನ ಸಮಾರಂಭವನ್ನು ಕೌತುಕದಿಂದ ನೋಡುತ್ತ ಕುಳಿತವನಾದ ರಂಗನು ನಿರ್ಮಲಾಬಾಯಿಯನ್ನು ಕುರಿತು “ಅತ್ಯಾ, ನಿನ್ನಲ್ಲಿ ಮಂತ್ರಗಿಂತ್ರವೇನಾದರೂ ಇರುವದೇನು?” ಎಂದು ಕೇಳಿದನು.

“ಅಯ್ಯೆ! ಅದೇಕೊ ನನ್ನ ಅಪ್ಪಯ್ಯಾ?” ಎಂದು ಅತ್ತೆಯು ಅಕ್ಕರತೆಯಿಂದ ಕೇಳಿದಳು.

“ನೋಡಿದಿಯಾ : ನಾನು ಬೇನೆಯಿಂದ ಏಳುವದರೊಳಗಾಗಿಯೇ, ಸುರಸ ಕಥೆಗಳಲ್ಲಿಯ ಚಮತ್ಕಾರವಾದ ಸಂಗತಿಗಳಂತೆ, ಅಡವಿಯಾಗಿರುವ ನಮ್ಮ ತೋಟವು ಪ್ರಫುಲ್ಲಿತವಾದ ಉಪವನವಾಗಿದೆ. ಜೊಮಜೊಮ ಸುರಿಯುತ್ತಿರುವ ನಮ್ಮೀ ಮನೆಯು ಕನ್ನಡಿಯ ಪೆಟ್ಟಿಗೆಯಂತೆ ಮನೋಹರವಾಗಿ ಕಾಣುತ್ತದೆ. ನಮ್ಮೀ ಅವ್ವನನ್ನೇ ನೋಡು. ಬೇನೆಹತ್ತಿ ಎಲ್ಲಿ ಸಾಯುತ್ತಾಳೋ ಎಂದು ಮಾಡಿದ್ದೆನು; ಈಗ ನೋಡು ಹೇಗಾಗಿದ್ದಾಳೆ? ಅತ್ಯಾ, ನೀನು ಹೋದಿಯಂದರೆ ಮಾತ್ರ ಮುಂಚಿನ ಅವ್ಯವಸ್ಥೆಯು ಮತ್ತೆಲ್ಲಿ ಮರುಕಳಿಸಿ ಬರುವದೋ ಏನೋ.”

“ರಂಗಯ್ಯಾ, ಚಿಂತೆಮಾಡಬೇಡ. ನನ್ನ ಮಂತ್ರ ತಂತ್ರಗಳನ್ನೆಲ್ಲ ನಿನ್ನ ಅವ್ವ ಆಪ್ಪಂದಿರಿಗೂ, ಆಳುಹೋಳುಗಳಿಗೂ, ಕೂಡಿಯೇ ಕಲಿಸಿದ್ದೇನೆ” ಎಂದು ನಿರ್ಮಲಾಬಾಯಿಯು, ಹೊಸ ರಕ್ತದಿಂದ ಕಂಗೊಳಿಸುತ್ತಿರುವ ರಂಗನ ಸುಂದರವಾದ ಮುಖವನ್ನು ನೋಡಿ ನುಡಿದಳು.

ನಿರ್ಮಲಾಬಾಯಿಯು ಆಯಾಸ ಬೇಸರಿಕೆಗಳನ್ನು ಲೆಕ್ಕಿಸದೆ ಎಡೆ ಬಿಡದೆ ಕೆಲಸಗಳಲ್ಲಿ ತೊಡಗಿರುವದನ್ನು ಕಂಡು ಅಡಿಗೆಯವಳೂ ಒಕ್ಕಲಗಿತ್ತಿಯೂ ಮಲ್ಲನೂ ತೋಟಿಗನೂ ನಾಚಿಕೊಂಡು ತಮತಮಗೆ ಹೊಂದಿದ ಕೆಲಸಗಳನ್ನೂ ಹೊಂದದೆ ಇದ್ದ ಕೆಲಸಗಳನ್ನೂ ಕೂಡಿಯೇ ಮೇಲುಮೇಲಾಡಿ ಮಾಡಲಾರಂಭಿಸಿದರು. ಕೆಲಸಗಳಲ್ಲಿ ಮೈನುರಿತದ್ದರಿಂದ ಅವರೆಲ್ಲರಿಗೂ ತಮಗೆ ಸಾಕಾಗುವಷ್ಟು ಕೆಲಸವೇ ಇಲ್ಲವೆಂದು ಹೇಳುತ್ತಿದ್ದರು.

ಪದ್ಮನಾಭರಾಯನಲ್ಲಿ ಚಟುವಟಿಕೆ ಹೆಚ್ಚಾಯಿತು. ವಿಲಕ್ಷಣ ಬುದ್ದಿಶಾಲಿಯಾದ ಆ ವಕೀಲನು ಅನಲಸನಾದದ್ದರಿಂದ ಅವನ ಪ್ರಾಪ್ತಿಯು ಹೆಚ್ಚಾಯಿತು. ಪ್ರಾಪ್ತಿಯು ಹೆಚ್ಚಾದಹಾಗೆ ಅವನ ಉತ್ಸಾಹವೂ ಹೆಚ್ಚಾದ್ದರಿಂದ ಕೆಲಸಕ್ಕೆ ಬೇಸರವಿಲ್ಲದಂತಾಯಿತು. ಮನೆಯಲ್ಲಿಯು ಸುವ್ಯವಸ್ಥೆಗಾಗಿಯೂ ಅಭಿವೃದ್ಧಿಯನ್ನು ಹೊಂದುತ್ತಿರುವ ಪ್ರಾಪ್ತಿಗಾಗಿ ಅವನ ಸಾಂಪತ್ತಿಕಸ್ಥಿತಿಯು ಕಲ್ಪನಾತೀತವಾಗಿ ಬೆಳೆಯಿತು. ಸಂತತಿ ಸಂಪತ್ತು ಆರೋಗ್ಯ ಸೌಕರ್ಯಗಳ ಹೆಚ್ಚಳಗಳ ಮೂಲಕ ಪದ್ಮನಾಭರಾಯನು ಇಹಲೋಕದಲ್ಲಿ ತಾನೋರ್ವನೇ ಸುಖಿಯೆಂದು ತಿಳಿದು ಆನಂದಿತನಾದನು.

ಎರಡೇ ತಿಂಗಳಗಳಾಚೆಗೆ ಪದ್ಮನಾಭನ ಸಂಸಾರವೆಂದರೆ ಹರಿದದ್ದೇ ಹಳ್ಳ ನಿಂತಿದ್ದೇ ತೀರ್ಥವೆಂಬವಾಗಿತ್ತು. ಅವನ ಜೀವಕ್ಕೆ ಸೌಖ್ಯವಿದ್ದಿಲ್ಲ. ಹೆಂಡತಿಯ ಜೀವಕ್ಕೂ ಸೌಖ್ಯ ವಿದ್ದಿಲ್ಲ. ಸಂಸಾರವೆಂಬದು ತಲೆಯ ಮೇಲೆ ಹೊತ್ತಿರುವ ಭಾರವಾದ ಬಂಡೆಯೆಂದು ತಿಳಿದು ಇವನು ಉದಾಸೀನನಾಗಿದ್ದನು. ಅದೆಲ್ಲ ಹೋಗಿ ಈಗ ಆನಂದಮಯವಾದ ಪರಿಸ್ಥಿತಿಯುಂಟಾಗಲಿಕ್ಕೆ ಕಾರಣವೇನು ? ಭಗವತ್‌ಕೃಪೆ ಇದ್ದರೂ ಇರಬಹುದು, ಆದರೆ ದೃಶ್ಯವಾದ ಕಾರಣವು ಸುಕರವಾಗಿಯೂ ಸುಸಾಧ್ಯವಾಗಿಯೂ ಇರುವದೆಂಬದನ್ನು ನಿರ್ಮಲಾ ಬಾಯಿಯ ಉದಾಹರಣದಿಂದ ಕಲಿತುಕೊಳ್ಳಬಹುದಲ್ಲವೆ ?

ತಾನು ಬಂದ ಉದ್ದೇಶವು ಸಫಲವಾಯಿತೆಂದು ಕಂಡು ನಿರ್ಮಲಾಬಾಯಿಯು ಕೃತಾರ್ಥಳಾಗಿ ತನ್ನ ಊರಿಗೆ ಹೊರಟಳು. ಪದ್ಮನಾಭರಾಯನು ಅಕ್ಕನ ಈ ಉಪಕಾರಗಳನ್ನು ನೆನೆನೆನೆದು ಕೊಂಡಾಡಿ ಅವಳ ಕಾಲ್ಗೆರಗಿ “ಅಕ್ಕಾ, ಹೋಗಿ ಬಾ, ನಾನೇನು ಕೊಟ್ಟರೂ ನಿನ್ನ ಉಪಕಾರ ತೀರದು” ಎಂದು ಕಣ್ಣಿಗೆ ನೀರು ತಂದು ಹೇಳಿದನು.

“ಪದ್ಮನಾಭ, ಇದರಲ್ಲೇತರ ಉಪಕಾರ? ನನ್ನ ಕರಳಿಗಾಗಿ ನಾನು ಮಾಡಿದೆನು. ಉಪಕಾರ ತೀರಿಸುವದೇ ನಿನ್ನ ಮನಸ್ಸಿನಲ್ಲಿದ್ದರೆ ಲಲಿತಾಗೌರಿಯನ್ನು ರಂಗನಿಗೆ ತೆಗೆದುಕೊಂಡರೆ ನನ್ನ ಮೇಲೆಯೇ ನೀನು ಉಪಕಾರವನ್ನು ಹೊರಿಸಿದಂತಾಗುವದು” ಎಂದು ನಿರ್ಮಲಾಬಾಯಿಯು ಸ್ಮಿತವದನೆಯಾಗಿ ಮಾತಾಡಿದಳು.

ಅಕ್ಕನ ಮನೋಗತವು ಪದ್ಮನಾಭನಿಗಾದರೂ ರುಚಿಸಿತು. ಲಲಿತಾಗೌರಿಯಂಥ ಚಲುವೆಯೂ ಜಾಣೆಯೂ ಕೆಲಸಕ್ಕೆ ಬೇಸರಿಯದವಳೂ ಆದ ಸೊಸೆಯು ಯಾರಿಗೆ ಬೇಡ?

“ಅಕ್ಕಾ, ನಿನ್ನ ಮಾತಿಗೆ ನನ್ನ ಒಪ್ಪಿಗೆಯೇ ಇರುವದು, ಆದರೆ ಲಗ್ನ ಮಾಡಿಕೊಳ್ಳುವವನ ಮನಸ್ಸು!” ಎಂದು ಪದ್ಮನಾಭರಾಯನು ಮಗನ ಮುಖವನ್ನು ನೋಡಿ ವಿನೋದದಿಂದ ನುಡಿದನು.

“ಇದರಲ್ಲಿ ಯಾರನ್ನು ಕೇಳುವದೇನು ಉಳಿದಿದೆ? ಲಲಿತೆಯೂ ರಂಗನೂ ಈಗಾಗಲೇ ಮನಸಾ ಮನಸಾ ಗಂಡಹೆಂಡರೇ ಆಗಿರುವರು. ಅವನು ಇವಳಿಗೆ ಹೂವಿನ ಹೆರಳು ಹಾಕಿಸುತ್ತಾನೆ, ಇವಳು ಅವನಿಗೆ ಹೂಮಾಲೆಯನ್ನು ಕಟ್ಟಿ ಅರ್ಪಿಸುತ್ತಾಳೆ. ಇಬ್ಬರೂ ಕೂಡಿ ಹಾಡುತ್ತಾರೆ; ಇಬ್ಬರೂ ಕೂಡಿ ಹಾರುಮನಿ (ಹಾರ್ಮೋನಿಯಮ್) ಬಾರಿಸುತ್ತಾರೆ. ಈಗಿನ ಹುಡುಗರ ನಡತೆಯೇ ಚಮತ್ಕಾರವಾದದ್ದು!” ಎಂದು ಯಮುನಾಬಾಯಿಯಾದರೂ ಪರ್ಯಾಮದಿಂದ ತನ್ನ ಒಪ್ಪಿಗೆಯನ್ನಾದರೂ ಸೂಚಿಸಿದಳು.

ಲಲಿತೆಯು ಬಲವತ್ತರವಾದ ನಾಚಿಕೆಯಿಂದ ತಾಯಿಯ ಬೆನ್ನು ಮರೆಯಾಗಿ ನಿಂತುಕೊಂಡು ಮೆಲ್ಲನೆ ರಂಗನ ಮುಖವನ್ನು ನೋಡುತ್ತಿದ್ದಳು. ಯಾಕೆ ನೋಡಿದಳೆಂಬದು ಅವಳಿಗೂ ಚೆನ್ನಾಗಿ ತಿಳಿದಿದ್ದಿಲ್ಲ.

“ಯಮುನಾಬಾಯಿ, ಎಳೆಮಕ್ಕಳಿವರು, ಇವರಿಗೇನು ತಿಳಿಯುತ್ತದೆ? ಸಲಿಗೆಯಿಂದ ಕೂಡಿ ಮಾತಾಡಿದರೆ ನೀನು ಇವರ ಮೇಲೆ ಹಾಡುಕಟ್ಟಿ ಹಾಡ ಬರಬೇಡ!”

“ಏನಾಯಿತೀಗ? ಅವರು ತಿಳುವಳಿಕೆಯಿಂದಲೇ ಪರಸ್ಪರರೊಡನೆ ಪ್ರೇಮದಿಂದ ನಡಕೊಂಡಿದ್ದರೂ ನಮಗೆ ಸಂತೋಷವೇ!” ಎಂದು ಪದ್ಮನಾಭರಾಯನು ನುಡಿದು ಅಕ್ಕನನ್ನೂ ಲಲಿತೆಯನ್ನು ರಥದಲ್ಲಿ ಕುಳ್ಳಿರಿಸಿ ಸ್ಟೇಶನಕ್ಕೆ ಕರಕೊಂಡು ಹೋದನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಂಧನ
Next post ನೀ ನುಡಿದರೆ….

ಸಣ್ಣ ಕತೆ

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…